[ರಾತ್ರಿ ಸೆರೆಮನೆಯ ಮುಂದೆ ಕಾವಲುಗಾರ ಸಿಂಗಣ್ಣ ತಿರುಗುತ್ತಿದ್ದಾನೆ.]

ಸಿಂಗಣ್ಣ(ಆಕಳಿಸುವನು.) ಒಳಗಿರುವುದಕಿಂತಲೂ ಹೊರಿಗುರುವದೇ ದೊಡ್ಡ ಸೆರೆ! ಅವರಿಗಿಂತಲೂ ನಾನೇ ದೊಡ್ಡ ಕೈದಿ! ಹಗಲು ಹೊಟ್ಟೆತುಂಬಾ ಊಟಮಾಡುತ್ತಾರೆ; ಇರುಳು ಕಣ್ಣುತುಂಬ ನಿದ್ದೆಮಾಡುತ್ತಾರೆ. ನಾನೋ ನಿದ್ದೆಯಿಲ್ಲದೆ ಹಿಂದೆ ಮುಂದೆ ತಿರುಗಿ ತಿರುಗಿ ಸಾಯಬೇಕು. ಹಾಳು ಕಾವಲುಗಾರಿಕೆ! ಕಾವಲುಗಾರನಿಗೆ ಇರುವ ಶಿಕ್ಷೆ ಕೈದಿಗಳಿಗಿಲ್ಲ! (ತಿರುಗಾಡುವನು; ಸೀನುವನು) ಏನು ಮಂದಿಯೋ ಏನೋ! ಬಂದೇ ಬರುತ್ತಾರೆ ಬಂದೇ ಬರುತ್ತಾರೆ! ಮಂದೆ ಮಂದೆಯಾಗಿ ಬರುತ್ತಾರೆ, ಅಳಿಯಂದಿರು ಬಂದುಹಾಗೆ! ಇದೇನು ಮಾವನ ಮನೆ ಕೆಟ್ಟು ಹೋಯ್ತೆ? ಸತ್ರ! ಕಳ್ಳರಿಗೆಲ್ಲ ಇದೊಂದು ಸತ್ರ! ಅದೂ ಸುಳ್ಳೆ! ನಿಜವಾದ ಕಳ್ಳರು ಸೆರೆಮನೆಗೆ ಬರುತ್ತಾರೆಯೆ! ಕದ್ದು ಸಿಕ್ಕಿಕೊಂಡು ಬೀಳುವರು ಕಳ್ಳರೇ ಅವರು? ಶುದ್ಧ ಮೈಗಳ್ಳರು! – ರಾಜರ ಅತಿಧಿಗಳು! ಹೆಸರಿಗೆ ಮಾತ್ರ ಸೆರೆಮನೆ! ಸೊಗಸು ನೋಡಿದರೆ ಅರಮನೆಗಿಂತಲೂ ಅರಮನೆ! – ನಾನು ಏನಾದರೂ ಮಾಡಿ ಒಳಗೆ ಹೋಗುವುದೇ ಲೇಸು! (ಸಿನುವನು) ಥೂ! ಇದೇನು ಸೀನುಗಳೋ ನಾನು ಬೇರೆ ಕಾಣೆ! (ಕೂತುಕೊಂಡು ಎಲೆಯಡಕೆ ಚೀಲವನ್ನು ಹೊರಗೆ ತೆಗೆದು) ಈ ಯುಗವೆಲ್ಲ ಬೆಳಗಾಗುವುದಿಲ್ಲವೋ ಏನೋ ಈ ಹಾಳು ರಾತ್ರಿ! (ಎಲೆಯಡಕೆ ಹಾಕಿಕೊಳ್ಳುತ್ತಾ) ಒಂದಿಷ್ಟು ಒರಗೋಣ ಎಂದರೆ ಅವರು ಬೇರೆ ಬರುತ್ತಾರಂತೆ; – ಅಲ್ಲ! ಆಮ್! ಏನು ಬಂತು ಕಲಿ ಕಾಲ! ನಿನ್ನೆ ಅರಸುಮಕ್ಕಳಾಗಿದ್ದವರು ಆ ಬಸವಯ್ಯ ಇವತ್ತು ಕೈದಿ! ಪಾಪ, ಆ ಲಿಂಗಣ್ಣ ಮಂತ್ರಿಗಳಿಗೇನು ಬಂತು! ದೇವರಂತಹ ಮುದುಕರು! – ಎಲ್ಲಿಗೋ ಕರೆದುಕೊಂಡು ಹೋಗುತ್ತಾರಂತೆ ಇಬ್ಬರನ್ನೂ! ಎಲ್ಲಿಗೋ ಈ ರಾತ್ರಿ? – ಮತ್ತೆಲ್ಲಿಗೆ ಯಮಲೋಕಕ್ಕಿರಬೇಕು. (ಆಕಳಿಸುವನು) ಸ್ವಲ್ಪ ಮೊದಲೇ ಬರಬಾರದೇ? ನನ್ನನ್ನೇಕೆ ಕಾಯಿಸಿ ಕಾಯಿಸಿ ಗೋಳುಹುಯ್ಯುವರೋ ನಾ ಕಾಣೆ. ಅಲ್ಲ, ಸಾಯುವವರಿಗೆ ಒಂದು ಗಂಟೆ ಮೊದಲಾದರೇನು? ಒಂದು ಗಂಟೆ ತಡವಾದರೇನು? – ಒಂದು ಗಂಟೆ ಮೊದಲೇ ಹೋದರೆ ಪುಣ್ಯ ಕಟ್ಟಿಕೊಂಡು ಸ್ವರ್ಗಕ್ಕೆ ಹೋಗುತ್ತಾರೆ! ಅದೇನೊ ನಿಶ್ಚಯ: ಒಂದು ಗಂಟೆಯ ಹೊತ್ತೇ ಸಾಕು ಮನುಷ್ಯನಿಗೆ ನರಕ ಸಂಪಾದನೆಮಾಡುವುದಕ್ಕೆ! (ಸೀನುವನು) ಥೂ! ಹಾಳು ಸೀನು! ಮೈಯೆಲ್ಲಾ ಎಂಜಲು (ಎದ್ದು ತಿರುಗಾಡುವನು. ದೂರದಲ್ಲಿ ಯಾರನ್ನೋ ಕಂಡಂತೆ ನೋಡಿ ಗಟ್ಟಿಯಾಗಿ) ಯಾರಲ್ಲಿ? ಮಾತೇ ಇಲ್ಲ! ಇದೇನು ದೆವ್ವವೋ ಮನುಷ್ಯನೋ? ಈ ಹಾಳುರಾಜ್ಯ ದೆವ್ವಗಳಿಗೇ ತಿರುಗುವ ಬಯಲಾಗುವುದೋ ಏನೋ? (ಮತ್ತೂ ಗಟ್ಟಿಯಾಗಿ) ಯಾರಲ್ಲಿ?

ಸನ್ಯಾಸಿ – ನಾನು, ಸಿಂಗಣ್ಣಾ.

ಸಿಂಗಣ್ಣ(ಗುರುತಿಸಿ) ಓಹೋ, ನೀವೇ? ಕೈಮುಗಿದೆ. (ಕೈಮುಗಿದು) ಇದೇನು ಇಷ್ಟು ಹೊತ್ತಿನಲ್ಲಿ ಸಂಚಾರ? ಎಲ್ಲಿಗೆ ದಯಮಾಡಿಸಿದ್ದಿರಿ?

ಸನ್ಯಾಸಿ – ಸರ್ವಭೂತಗಳಿಗೂ ಯಾವುದು ನಿಶೆಯೋ ಸಂಯಮಿಯಾದ ಯೋಗಿಗೆ ಅದೇ ಹಗಲಲ್ಲವೇ? ರಾತ್ರಿ; ಬೆಳ್ದಿಂಗಳು; ನಿರ್ಜನವಾಗಿದೆ; ನಿಶ್ಯಬ್ದವಾಗಿದೆ! ಧ್ಯಾನಕ್ಕೆ ಹೋಗಿದ್ದೆ;

ಸಿಂಗಣ್ಣ – ಎಲ್ಲಿಗೆ!

ಸನ್ಯಾಸಿ – ಶ್ಮಶಾನಕ್ಕೆ!

ಸಿಂಗಣ್ಣ – ಅಯ್ಯೋ ಶ್ಮಶಾನಕ್ಕೆ ಯಾಕೆ, ಸ್ವಾಮೀ?

ಸನ್ಯಾಸಿ – ಧ್ಯಾನಕ್ಕೆ ಬಹಳ ಯೋಗ್ಯವಾದ ಸ್ಥಳವದು, ಸಿಂಗಣ್ಣ.

ಸಿಂಗಣ್ಣ – ಇರಲಿ. ಬನ್ನಿ ಸ್ವಾಮಿ, ಕೂತುಕೊಳ್ಳಿ. ನನಗೂ ಒಬ್ಬನಿಗೇ ಬೇಸರಾಗಿತ್ತು. ತಾವು ಬಂದದ್ದು ದೇವರೇ ಬಂದಹಾಗಯ್ತು.

ಸನ್ಯಾಸಿ(ಮೇಲೆ ನೋಡಿ) ಬಹಳ ಹೊತ್ತಾಗಿದೆ, ಸಿಂಗಣ್ಣ. ನಾನು ಹೋಗುತ್ತೇನೆ.

ಸಿಂಗಣ್ಣ – ಹೋಗಬಹುದಂತೆ, ಸ್ವಾಮೀ. ಸ್ವಲ್ಪ ವಿಶ್ರಮಿಸಿಕೊಂಡು ಹೋಗಿ.

ಸನ್ಯಾಸಿ – ಆಗಲಯ್ಯ ನಿನ್ನಿಷ್ಟ! ಶಿವ! ಶಿವ! (ಎನ್ನುತ್ತ ಕೂತುಕೊಳ್ಳುವನು. ಸಿಂಗಣ್ಣನೂ ಎದುರಾಗಿ ಕೂರುವನು)

ಸಿಂಗಣ್ಣ – ದೇವರೂ, ನಿಮಗೆ ಶಿವ ಪ್ರತ್ಯಕ್ಷವಾಗಿದ್ದಾನಂತೆ, ಹೌದೆ?

ಸನ್ಯಾಸಿ – ಅದೆಲ್ಲ ನಿನಗೇಕಪ್ಪಾ? ಹಾಗೆಲ್ಲ ಹೇಳತಕ್ಕಂತಹ ವಿಷಯವಲ್ಲ ಅದು. ಕೇಳುವುದಕ್ಕೂ ಅಧಿಕಾರ ಬೇಕು.

ಸಿಂಗಣ್ಣ – ನನಗೇನು ಅಧಿಕಾರವಿಲ್ಲವೇ? ಸೆರೆಮನೆ ಕಾವಲುಗಾರ ನಾನು! ನೋಡಿ ಬೀಗದ ಕೈ!

ಸನ್ಯಾಸಿ – ಇರಬಹುದಯ್ಯಾ! ಆದರೆ ಇಂಥಾ ಅಧಿಕಾರವಲ್ಲ ನಾನು ಹೇಳಿದ್ದು. ಅದಕ್ಕೆ ಶಮದ ಮಾದಿ ಷಟ್‌ಸಂಪತ್ತಿರಬೇಕು. ಶ್ರವಣ, ಮನನ, ನಿಧಿಧ್ಯಾಸನ, ಧ್ಯಾನ, ಸಮಾಧಿಗಳಿರಬೇಕು. ಗುರೂಪದೇಶ ಬೇಕು. ಈಶ್ವರ ಕೃಪೆ ಬೇಕು.

ಸಿಂಗಣ್ಣ – ಹಾಗಾದರೆ ಅದು ನಮ್ಮಂತಹವರಿಗೆ ಲಭ್ಯವಲ್ಲ.

ಸನ್ಯಾಸಿ – ಧ್ಯಾನಮಾಡಿದರೆ ನಿನಗೂ ಲಭಿಸಬಹುದು.
(ಸನ್ಯಾಸಿ ಜೋಳಿಗೆಯಿಂದ ಗುಳಿಗೆಯನ್ನು ತೆಗೆಯುವನು)

ಸಿಂಗಣ್ಣ – ಅದೇನು ಗುರುಗಳೆ?

ಸನ್ಯಾಸಿ(ತೋರಿಸುತ್ತ) ಇದು ಬ್ರಹ್ಮಜ್ಞಾನಾಮೃತ ಮಾತ್ರೆ. ನಮ್ಮ ಗುರುಗಳು ದಯಪಾಲಿಸಿದ್ದು. ಇದರ ಮಹಿಮೆಯಿಂದಲೇ ನಾನೂ ಧ್ಯಾನ ಮಾಡಿ ಈಶ್ವರ ಸಾಕ್ಷಾತ್ಕಾರ ಮಾಡಿಕೊಂಡಿದ್ದೇನೆ. ಇತರರಿಗೂ ಮಾಡಿಸಿದ್ದೇನೆ.

ಸಿಂಗಣ್ಣ – ನನಗೂ ಕೃಪೆಮಾಡಬಾರದೇ, ದೇವರೂ?

ಸನ್ಯಾಸಿ – ನಿನಗೆ ನಿಜವಾಗಿಯೂ ಶಿವದರ್ಶನವಾಗಬೇಕೆಂದು ಮನಸ್ಸಿದೆಯೇ?

ಸಿಂಗಣ್ಣ – ಅಯ್ಯೋ, ಸ್ವಾಮಿ, ಶಿವನನ್ನು ನೋಡಲು ಯಾರಿಗೆ ಮನಸ್ಸಿಲ್ಲ!

ಸನ್ಯಾಸಿ – ಹಾಗಾದರೆ ಇದನ್ನು ನುಂಗಿ ಪದ್ಮಾಸನ ಹಾಕಿಕೊಂಡು ಮೂಗಿನ ತುದಿಯನ್ನೇ ನೋಡುತ್ತ ಧ್ಯಾನಮಾಡಬೇಕು.

ಸಿಂಗಣ್ಣ – ನನ್ನ ಪುಣ್ಯವೆಂದೇ ಹೇಳಬೇಕು! (ಕೈ ನೀಡಲು)

ಸನ್ಯಾಸಿ – ಆತುರಪಡಬಾರದು. ತಿಂದರೆ ಏನಾಗುವುದೆಂದು ಹೇಳುತ್ತೇನೆ, ಕೇಳು. ಮೊದಲು ಜಗತ್ತೆಲ್ಲವೂ ಮಂಕು ಕವಿದಂತಾಗವುದು. ಎಲ್ಲವೂ ಕನಸಿನಂತೆ ಕಾಣುವುದು. ಆಗ ಇದೆಲ್ಲ ಮಾಯಾ ಪ್ರಪಂಚ ಎಂಬುದು ಚೆನ್ನಾಗಿ ಗೊತ್ತಾಗುವುದು. ತರುವಾಯ ನಿದ್ದೆ ಬಂದಂತಾಗುವುದು. ಆಮೇಲೆ ಜ್ಯೋತಿರ್ದರ್ಶನವಾಗುವುದು. ಆ ಜ್ಯೋತಿಯ ನಡುವೆ ಕೈಲಾಸ ಕಾಣಿಸುತ್ತದೆ. ಅದನ್ನು ವರ್ಣಿಸಿ ಹೇಳಲು ನನ್ನಿಂದ ಅಸಾಧ್ಯ! ಸಾವಿರ ನಾಲಗೆಯ ಆದಿಶೇಷನಿಗೂ ಅಸಾಧ್ಯ! ಆದ್ದರಿಂದ ನೀನೆ ನೋಡಿ ತಿಳಿದುಕೋ. ತರುವಾಯ ಆ ರಜತಗಿರಿಯ ಶಿಖರವನ್ನು ಸರ್ವದಾ ಆಲಿಂಗಿಸಿ ಅಲಂಕರಿಸುವ ಶೈಲೋಪಮ ಸುನೀಲ ಜಲಧರಗಲ ಮಧ್ಯೆ ವಿದ್ಯುಲ್ಲತೆಗಳಿಂದ ಶೋಭಿತವಾದ ವಿವಿಧ ವೈಚಿತ್ರ್ಯಮಯ ರತ್ನಖಚಿತ ಸುವರ್ಣ ಸಿಂಹಾಸನದಲ್ಲಿ ಪಾರ್ವತೀ ಸಮೇತನಾಗಿ ತುಷಾರ ಮೂರ್ತಿಯಂತೆ ಶುಭ್ರಕಾಯನಾದ ಪರಶಿವನು ಪ್ರತ್ಯಕ್ಷನಾಗುತ್ತಾನೆ. (ಸಿಂಗಣ್ಣನಿಗೆ ಅರ್ಥವಾಗದೆ ಬೆಪ್ಪಮುಖ ಹಾಕಿಕೊಂಡಿರುವನು) ಏನಿದು? ನೀನು ಈಗಲೇ ಭಯಪಟ್ಟಂತೆ ತೋರುತ್ತದೆ!

ಸಿಂಗಣ್ಣ – ಇಲ್ಲ, ಸ್ವಾಮೀ!

ಸನ್ಯಾಸಿ – ಮತ್ತೇಕೆ ಪೆಚ್ಚಾಗಿದ್ದೀಯೆ!

ಸಿಂಗಣ್ಣ – ನನಗೇನೂ ಅರ್ಥವಾಗಲಿಲ್ಲ!

ಸನ್ಯಾಸಿ – ಅರ್ಥವಾದರೇನು? ಆಗದಿದ್ದರೇನು? ಎಂತಿದ್ದರೂ ನೀನೆ ನೋಡುತ್ತೀಯಲ್ಲವೆ? ಅದು ಬರಿಯ ವರ್ಣನೆ!

ಸಿಂಗಣ್ಣ – ನಾನೂ ಶಿವನೊಡನೆ ಮಾತಾಡಬಹುದೇ?

ಸನ್ಯಾಸಿ – ಓಹೋ ಅದಕ್ಕೇನು ಸಂದೇಹ? ಬೇಕಾದ ಹಾಗೆ ಮಾತಾಡಬಹುದು. ಎಷ್ಟು ವರಗಳನ್ನು ಬೇಕಾದರೂ ಕೇಳಬಹುದು!

ಸಿಂಗಣ್ಣ – ಮುನಿದುಕೊಂಡರೆ?

ಸನ್ಯಾಸಿ – ಅವನಿರುವುದೇಕಯ್ಯ? ವರಗಳನ್ನು ದಯಪಾಲಿಸಲಲ್ಲವೇ? ಅದನ್ನು ಬಿಟ್ಟರೆ ಬೇರೆ ಕೆಲಸವಿದೆಯೇ ಅವನಿಗೆ?

ಸಿಂಗಣ್ಣ – ಹಾಗಾದರೆ ಕೊಡಿ ಸ್ವಾಮಿ; ನೋಡಿಯೇ ಬಿಡುತ್ತೇನೆ!

ಸನ್ಯಾಸಿ – ಹೆದರಬೇಡ ಶಿವನನ್ನು ಕಂಡು. ಧೈರ್ಯವಾಗಿ ಮಾತಾಡು. ಎಷ್ಟೋ ಜನರು ಮಾತಾಡದೆಯೇ ಬಂದುಬಿಟ್ಟಿದ್ದಾರೆ. ನೀನೇನಾದರೂ ಹಾಗೆ ಮಾಡಿದರೆ ಆಮೇಲೆ ದರಿದ್ರ ತಪ್ಪದು!

ಸಿಂಗಣ್ಣ – ಹಾಗೆಂದರೇನು, ಗುರುಗಳೆ! ಮಹಾರಾಜರ ಹತ್ತಿರವೇ ಎಷ್ಟೋ ಸಾರಿ ಮುಲಾಜಿಲ್ಲದೆ ಮಾತಾಡಿಬಿಟ್ಟಿದ್ದೇನೆ. ಶಿವನೊಡನೆ ಮಾತಾಡಲಾರನೆ?

ಸನ್ಯಾಸಿ – ಹಾಗಾದರೆ ಪದ್ಮಾಸನ ಹಾಕು. (ಸಿಂಗಣ್ಣ ಹಾಕುವನು) ಕತ್ತಿ ಬೀಗದ ಕೈ ಮೊದಲಾದ ಕಬ್ಬಿಣದ ಸಾಮಾನುಗಳನ್ನು ದೂರವಿಡು. (ಸಿಂಗಣ್ಣ ಸನ್ಯಾಸಿಯ ಕಡೆ ನೋಡಲು) ಬೆಳ್ಳಿಬೆಟ್ಟಕ್ಕೆ ಹೋಗುವಾಗ ಕಬ್ಬಿಣದ ಸಾಮಾನಿರಬಾರದು. (ಹೇಳಿದಂತೆ ಮಾಡುವನು.) ಈಗ ಮೂಗಿನ ತುದಿಯನ್ನೇ ನೋಡು. (ಸಿಂಗಣ್ಣ ಸನ್ಯಾಸಿಯ ಮೂಗಿನ ಕಡೆ ನೋಡಲ) ನನ್ನ ಮೂಗಿನ ತುದಿಯಲ್ಲ; ನಿನ್ನ ಮೂಗಿನ ತುದಿ! (ಹಾಗೆಯೇ ಮಾಡುವನು) ಅಭ್ಯಾಸವಿದ್ದವರೂ ಕೂಡ ಹೀಗೆ ಮಾಡಲಾರರು! ಭಲಾ! ಬಾಯಿ ತೆರೆ! (ತೆರೆಯಲು ಬಾಯಿಗೆ ಗುಳಿಗೆ ಹಾಕಿ) ನುಂಗು! ನುಂಗು! ಅಗಿದುಬಿಟ್ಟರೆ ನರಕ ದರ್ಶನವಾದೀತು! ಹಾಗೆ! ಹಾಗೇ! ಈಗ ಧ್ಯಾನಮಾಡು! ಶಿವ! ಶಿವ! ಶಿವ! ಶಿವ! (ಕೈಯನ್ನು ಅವನ ಮೊಗದೆದುರು ಆಡಿಸುತ್ತಾ ಚಿಟಿಗೆ ಹಾಕುವನು) ಎಲ್ಲ ಮಂಕಾಗುತ್ತಿದೆಯಲ್ಲವೇ? (ಸಿಂಗಣ್ಣನು ಹೌದೆಂದು ತಲೆದೂಗುವನು.) ಈಗ ಮಾಯಾಪ್ರಪಂಚ ಎಂಬುದು ಚೆನ್ನಾಗಿ ಗೊತ್ತಾಗುತ್ತಿದೆಯಲ್ಲವೇ? (ಸಿಂಗಣ್ಣ ತಲೆದೂಗುವನು) ಈಗ ನೋಡು, ನಿದ್ದೆ ಬಂದಂತಾಗುತ್ತಿದೆ! (ಸಿಂಗಣ್ಣ ತಲೆ ತೂಗುತ್ತ ಉರುಳುವನು.) ಬಿದ್ದಿರು ಬೆಳಗಾಗುವವರೆಗೆ! (ಸಿಳ್ಳು ಹಾಕುವನು.)
(ಶಿವಯ್ಯ ಹೊನ್ನಯ್ಯ ಪ್ರವೇಶಿಸುವರು.)
ತಡಮಾಡಬೇಡಿ : ಇದೋ ಬೀಗದ ಕೈ! (ಎತ್ತಿಕೊಟ್ಟು) ನಾನಲ್ಲಿಯೆ ದೂರದಲ್ಲಿ ನಿಂತು ಕಾಯುತ್ತಿರುತ್ತೇನೆ. ಯಾರಾದರೂ ಬಂದರೆ ಸಿಳ್ಳು ಹಾಕುತ್ತೇನೆ. ಎಚ್ಚರಿಕೆ! ಬೇಗ ಬರಬೇಕು! ಹೊತ್ತಾದರೆ ಅವರೂ ಬಂದುಬಿಟ್ಟಾರು!
(
ಹೋಗುವನು)

ಹೊನ್ನಯ್ಯ – ಬೀಗ ತೆಗೆ! ಬೇಗ, ಶಿವಯ್ಯ!
(ಬೀಗ ತೆಗೆದು ಇಬ್ಬರೂ ಒಳಗೆ ಹೋಗುವರು.)

[ಪರದೆ ಬೀಳುವುದು]