[ಸೆರೆಮನೆಯಲ್ಲಿ ಒಂದು ಕೋಣೆ. ಬಸವಯ್ಯನು ಮಲಗಿದ್ದಾನೆ. ಅವನ ಮುಖದ ಮೇಲೆ ಬೆಳ್ದಿಂಗಳು ಬಿದ್ದಿವೆ. ಸ್ಥಳವು ಅರ್ಧ ಮಾತ್ರ ಪ್ರದೀಪ್ತವಾಗಿದೆ. ಶಿವಯ್ಯನು ಅವಸರದಿಂದ ಪ್ರವೇಶಿಸಿ ಸುತ್ತಲೂ ಹುಡುಕುನೋಟವನ್ನು ಬೀರಿ ಬಸವಯ್ಯನನ್ನು ಕಂಡು ಸ್ವಲ್ಪ ಬಳಿಸಾರಿ ನೋಡುತ್ತ ನಿಲ್ಲುತ್ತಾನೆ.]

ಶಿವಯ್ಯ – ಸೆರೆಮೆನಯೊಳಿದ್ದರೂ ಎನಿತು ಶಾಂತಿಯ ತಳೆದು
ನಿದ್ದೆಗೈಯುತ್ತಿಹನು! ಅಕುಟಿಲ ಮನಸ್ಕರಿಗೆ
ಪ್ರಕೃತಿಯೀಯುವ ಸೊಗದ ಕಾಣ್ಕೆಯಿದು. –
ಕತ್ತಲಲಿ ಸೆರೆಸಿಕ್ಕಿ ತನ್ನ ಸುಂದರವದನ –
ರಂಗದಲಿ ನಲಿವ ಈ ರಜನೀ ಸುಶೋಭಿತಾ
ಜ್ಯೋತ್ಸ್ನಯೊಲೆ ಈತನೂ ಬಂದಿಯಾಗಿಹನಿಲ್ಲಿ!
ತುಳಿವಿದರೆ ಪ್ರಮಾದ! ಹೊನ್ನಯ್ಯನಾಗಲೆ
ಲಿಂಗಣ್ಣ ಮಂತ್ರಿಯನು ಕೂಡಿ ಹೋಗಿರಬಹುದು.
ಆಗಲಿ, ಎಚ್ಚರಿಸುವೆನು. (ಹತ್ತಿರ ಹೋಗಿ ಬಗ್ಗಿ ಮತ್ತೆ ಎದ್ದು)
ಆದರೆ – (ನಿಟ್ಟುಸಿರು ಬಿಡುವನು.)
ಅಯ್ಯೋ ಈಗೇನು ಮಾಡಲಿ? (ಯೋಚಿಸುವನು.)
ಚಿಃ ದುರಾಲೋಚನೆಯೆ, ತೊಲಗು ದೂರ!
ಶಿವಯ್ಯ, ಇದೇನಿದು ನಿನ್ನ ವಿಪರೀತ? (ನಿಲ್ಲುವನು.)
ಇಲ್ಲ. ನನಗಿದುವೆ ಸುಸಮಯ!
ಬಸವಯ್ಯ, ನೀನುಳಿದರೆನೆಗೆ ಸುಖವಿಲ್ಲ.
ನೀನು ಮಹಾನುಭಾವ! ನಾನು ನೀಚ!
ಇರಬಹುದು! ನಾ ಬಲ್ಲೆ! – ಆದರೆ –
ರುದ್ರಾಂಬೆಗೋಸುಗವೆ ನಿನ್ನ ನಾನೀ ರೀತಿ
ಸೆರೆಯಿಂದ ಬಿಡಿಸಲೈತಂದೆ! –  ಆದರೆ
ನೀನಿಳೆಯೊಳಿರವನ್ನೆವರಮೆನಗೆ ರುದ್ರಾಂಬೆ
ದೊರಕಲಾರಳು! ದೊರಕಲಾರಳು!
ಕಮಲವಿರೆ ಬೊಬ್ಬುಳಿಯನೆಂತೊಲಿಯುವುದು ತುಂಬಿ?
ಅದರಿಂದ – ಅದರಿಂದ – ಅದರಿಂದ
(ಹೇಳುತ್ತಾ ಕಠಾರಿಯನ್ನು ಹೊರಗೆಳೆಯುವನು.)
ಚಿಃ ಶಿವಯ್ಯ, ಮರೆತುಬಿಡು! ಮರೆತುಬಿಡು!
(ಮೇಲೆ ನೋಡಿ ಚಿಂತೆಯನ್ನು ಬದಲಾಯಿಸುವನು.)
ಶಿವಯ್ಯ, ನೋಡಿಲ್ಲಿ!
ಬೆಳ್ದಿಂಗಳೆನಿತು ಚೆಲುವಾಗಿಹುದು!
ನೋಡಲ್ಲಿ ಅಲ್ಲಿ ನೋಡು!
ಬೆಳ್ಮುಗಿಲು ತಿಳಿಬಾನಿನಲಿ ಹೇಗೆ ತೇಲುತಿದೆ!
ಎನಿತು ಶಾಂತಿಯೊಳದ್ದಿ ಪವಡಿಸಿಹುದೀ ರಾತ್ರಿ! –
ಹೊನ್ನಯ್ಯ ಲಿಂಗಣ್ಣ ಮಂತ್ರಿಗಳು ನಿಮಗಾಗಿ
ಕಾಯುತಿಲ್ಲವೆ ಅಲ್ಲಿ, ದೂರ ಮರದಡಿಯಲ್ಲಿ
ಸನ್ಯಾಸಿಯೊಡನೆ? –
ಎದೆಯ ಕಿಲುಬನು ಬಿಸುಡು!
ಗೆಳೆಯ ಬಸವಯ್ಯನನು ಎಚ್ಚರಿಸು! –
ನಿನ್ನವಳೆ ಆಗಿಲ್ಲವೇ ಈಗ ರುದ್ರಾಂಬೆ?
ನಿನಗೀತನೆಳೆತನದ ಕೆಳೆಯಲ್ಲವೇ?
ನೋಡೆನಿತು ಅಕುಟಿಲತೆ ಮೆರೆದಿಹುದು
ಈತನೀ ಸೌಮ್ಯತಮ ವದನದಲ್ಲಿ! (ಸುಯ್ಯುವನು.)
ಆದರೆ!! – (ಖಿನ್ನನಾಗಿ ಕಠಾರಿಯನು ಒರೆಗೆ ಮೆಲ್ಲಗೆ ಸೇರಿಸಿ)
ಇಲ್ಲ! ಇಲ್ಲ! ನನಗಿದೇ ಸುಸಮಯ!
ಈತನಿರೆ ಹೇಗೆನ್ನನೊಲಿದಾಳು ರುದ್ರಾಂಬೆ?
ಬಸವಯ್ಯಾ, ನಿನ್ನ ಸೌಂದರ್ಯವೇ ನಿನಗಿಂದು
ಸರ್ಪಚುಂಬನದಂತೆ ಮೃತ್ಯುವಾಗಿಹುದು!
ಅದರಿಂದ – ಅದರಿಂದ! –
(ಕಠಾರಿಯನು ಸರ್ರನೆ ಹೊರಗೆಳೆದು ಬಸವಯ್ಯನನು ತಿವಿಯಲು ಹೋಗಿ ಬೆಚ್ಚಿ)
ನೀನೇಕೆ ಇಲ್ಲಿಗೈತಂದೆ, ರುದ್ರಾಂಬೆ? (ಕಣ್ಮುಚ್ಚಿ)
ಇದೇನಿದು ಮಾಯೆ? –
ರುದ್ರಾಂಬೆಯನು ಕಂಡೆನಲ್ಲವೆ?
(ಎವೆಯಿಕ್ಕದೆ ಆಲೋಚಿಸಿ ಏನನೋ ನಿರ್ಣಯಿಸಿದವನಂತೆ ಎಚ್ಚತ್ತು)
ಥೂ! ನಿನಗಿದೇನಿದು ಹೀನಬುದ್ಧಿ, ಶಿವಯ್ಯ!
(ಕಠಾರಿಯನು ಬಲವಾಗಿ ಕೆಳಗೆ ಬಿಸಾಡುವನು. ಸದ್ದಾಗಿ ಬಸವಯ್ಯನಿಗೆ ಎಚ್ಚರವಾಗುತ್ತದೆ.)

ಬಸವಯ್ಯ – ಯಾರದು?

ಶಿವಯ್ಯ – ನಾನು, ಬಸವಯ್ಯ! ಏಳು, ನನ್ನೊಡನೆ ಬಾ!

ಬಸವಯ್ಯ(ಫಕ್ಕನೆ ಎದ್ದುನಿಂತು)  ಶಿವಯ್ಯ, ಏನಿದು? ಎಲ್ಲಿಗೆ?

ಶಿವಯ್ಯ – ಹೇಳಲು ಹೊತ್ತಿಲ್ಲ. ಬೇಗ ಬಾ ನನ್ನೊಡನೆ?

ಬಸವಯ್ಯ (ದೀರ್ಘವಾಗಿ) – ಕಡೆಗೂ ನೀನೆ ಬಂದೆಯೇನು ಕೊಲೆಮಾಡುವುದಕ್ಕೆ?

ಶಿವಯ್ಯ – ಅಲ್ಲ; ನಿನ್ನನ್ನು ಕೊಲೆಯಿಂದ ಬಿಡಿಸಲೆಂದೈತಂದೆ. ಹೊನ್ನಯ್ಯನು ಲಿಂಗಣ್ಣ ಮಂತ್ರಿಗಳನು ಕರೆದೊಯ್ದು ನಮಗಾಗಿ ಹೊರಗೆ ಕಾಯುತ್ತಿದ್ದಾನೆ. ಹೊತ್ತು ಮಾಡಿದರೆ ಪ್ರಮಾದವಾದೀತು! ಬಾ, ಬೇಗ ಬಾ!
(ಬಸವಯ್ಯನು ವೇಗವಾಗಿ ಶಿವಯ್ಯನ ಹಿಂದೆ ಹೋಗುವನು.)

[ಪರದೆ ಬೀಳುವುದು]