[ಸೆರೆಮನೆಗೆ ತುಸು ದೂರದಲ್ಲಿ ಮರಗಳ ಗುಂಪಿನ ಮರೆಯಲ್ಲಿ ಹೊನ್ನಯ್ಯ ಲಿಂಗಣ್ಣಮಂತ್ರಿ ಮತ್ತು ಸನ್ಯಾಸಿ ಮೂವರೂ ಕಾಯುತ್ತಿರುವರು.]

ಸನ್ಯಾಸಿ – ಹೊನ್ನಯ್ಯ, ಇದೇನು ಇಷ್ಟು ಹೊತ್ತಾದರೂ ಬರಲೇ ಇಲ್ಲ?

ಹೊನ್ನಯ್ಯ – ಅವನು ಬಸವಯ್ಯನಿದ್ದ ಕೋಣೆಗೆ ಹೋದಮೇಲೆಯೆ ನಾನು ಮಂತ್ರಿಗಳಿದ್ದ ಕೋಣೆಗೆ ಹೋದದ್ದು. ಅವರು ನಮಗಿಂತಲೂ ಮೊದಲೆ ಬಂದಿರಬಹುದು ಎಂದುಕೊಂಡಿದ್ದೆ.

ಲಿಂಗಣ್ಣ – ಏನಾದರೂ ಪ್ರಮಾದ ಸಂಭವಿಸಿತೋ ಏನೋ?

ಸನ್ಯಾಸಿ – ಇಲ್ಲ; ಅವರಾರೂ ಇನ್ನೂ ಬಂದಿಲ್ಲ; ಬಂದರೂ ತಡಮಾಡಿ ಬರುತ್ತಾರೆ. ನಾನು ಮೊದಲೇ ಸಂಚುಮಾಡಿದ್ದೇನೆ; ಅವರೂ ಬಂದರೂ ಕೆಮ್ಮು ಕೇಳಿಸುವುದು.

ಹೊನ್ನಯ್ಯ – ನಾನು ಹೋಗಿ ನೋಡಿಕೊಂಡು ಬರಲೇನು?

ಸನ್ಯಾಸಿ – ಅದೇನೂ ಬೇಡ. ನಾನು ನೋಡಿಕೊಳ್ಳುತ್ತೇನೆ. ನೀವೀಗ ಒಂದು ಕೆಲಸಮಾಡಿದರೆ ಒಳ್ಳೆಯದು.

ಹೊನ್ನಯ್ಯ – ಏನು?

ಸನ್ಯಾಸಿ – ನೀವಿಬ್ಬರೂ ಈಗಲೆ ಹೊರಡುವುದು ಲೇಸು.

ಹೊನ್ನಯ್ಯ – ಬಸವಯ್ಯ?

ಸನ್ಯಾಸಿ – ಅವರಿಬ್ಬರೂ ಬಂದೊಡನೆಯೆ ಹಿಂದೆಯೆ ಕಳುಹಿಸುತ್ತೇನೆ. ಲಿಂಗಣ್ಣ ಮಂತ್ರಿಗಳು ಮುದುಕರು. ಬೇಗ ಕುದುರೆ ಸವಾರಿ ಮಾಡಲಾರರು. ಎಂತಿದ್ದರೂ ನಿಮ್ಮನ್ನವರು ಸಂಧಿಸುವರು.

ಹೊನ್ನಯ್ಯ – ಎಲ್ಲಿಯಾದರೂ ಅವರು ದಾರಿ ತಪ್ಪಿದರೆ?

ಸನ್ಯಾಸಿ – ನೀವು ಕುಂಸಿಯ ಮಾರ್ಗವಾಗಿಯೆ ಹೋಗಿ. ಅವರು ದಾರಿ ತಪ್ಪದಂತೆ ನಾನು ನೋಡಿಕೊಳ್ಳುತ್ತೇನೆ – ಹೊತ್ತಾಯ್ತು, ಹೊರಡಿ.

ಹೊನ್ನಯ್ಯ – ನಮ್ಮ ಕುದುರೆಗಳೆಲ್ಲಿ?

ಸನ್ಯಾಸಿ(ಪಕ್ಕಕ್ಕೆ ಕೈತೋರಿ)  ಅಲ್ಲಿವೆ. ಹತ್ತಿ ಹೊರಡಿ. (ಲಿಂಗಣ್ಣ ಹೊನ್ನಯ್ಯ ಹೊರಡುವರು.) ಇದೇಕೆ ಇನ್ನೂ ಬರಲಿಲ್ಲ? ಆ ಕೊಂಕು ನಡತೆಯ ಶಿವಯ್ಯನನು ನಂಬುವುದು ಸುಲಭವಲ್ಲ! – ಇರಲಿ, ಸಿಳ್ಳು ಹಾಕಿ ನೋಡುತ್ತೇನೆ.
(ಸಿಳ್ಳುಹಾಕುವನು. ಕಾಯುವನು.) ಓಹೊ ಅಲ್ಲಿಯೆ ಬರುತ್ತಿದ್ದಾರೆ.
(ಶಿವಯ್ಯ ಬಸವಯ್ಯ ಬರುವರು)
ಇದೇನು ಶಿವಯ್ಯ, ಇಷ್ಟು ಹೊತ್ತಾಯಿತೇಕೆ?

ಶಿವಯ್ಯ – ಬಸವಯ್ಯ ಬೇಗ ಏಳಲೆ ಇಲ್ಲ. ಸೆರೆಮನೆಯೊ? ಅರಮನೆಯೊ? ಅವನಿಗೆರಡೂ ಒಂದೇ!

ಬಸವಯ್ಯ – ಗುರುವರ್ಯರಿಗೆ ನಮಸ್ಕಾರ!

ಸನ್ಯಾಸಿ – ರಾಜಕುಮಾರನಿಗೆ ಈಶ್ವರನ ಆಶೀರ್ವಾದವಿರಲಿ!

ಬಸವಯ್ಯ – ಅವರೆಲ್ಲಿ?

ಸನ್ಯಾಸಿ – ಇದುವರೆಗೂ ಕಾದಿದ್ದರು ನಿಮಗಾಗಿ. ನಾನೆ ಅವರನ್ನು ಮುಂದೆ ಹೋಗುವಂತೆ ಹೇಳಿದೆ. ತಡಮಾಡಿದರಾಗದು. ನೀವೂ ಹೊರಡಿ.

ಶಿವಯ್ಯ – ಕುದುರೆಗಳೆಲ್ಲಿ?

ಸನ್ಯಾಸಿ(ಪಕ್ಕಕ್ಕೆ ತೋರುತ್ತ) ಅಲ್ಲಿವೆ. (ಅವರಿಬ್ಬರೂ ಎರಡು ಹೆಜ್ಜೆಯಿಟ್ಟು ಹೋಗುವುದರಲ್ಲಿಯೆಸ್ವಲ್ಪ ನಿಲ್ಲಿ –

ಶಿವಯ್ಯ (ನಿಂತು) ಏಕೆ?

ಸನ್ಯಾಸಿ – ಬಸವಯ್ಯನೊಡನೆ ಮಾತನಾಡುವುದಿದೆ.

ಬಸವಯ್ಯ – ಏನದು ಸಿದ್ಧನಿದ್ದೇನೆ. (ಮುಂದೆ ಬರುವನು.)

ಸನ್ಯಾಸಿ – ಹೈದರಾಲಿಯವರು ಇಷ್ಟರಲ್ಲಿಯೆ ಶಿವಮೊಗ್ಗೆಗೆ ಬಂದಿರಬಹುದು. ನಾನು ಕೊಡುವೀ ಪತ್ರವನು ತೆಗೆದುಕೊಂಡು ಹೋಗಿ ನೀನೇ ಅವರನ್ನು ಕಾಣಬೇಕು. ಇದರಲ್ಲಿ ಅನೇಕ ವಿಚಾರಗಳಿವೆ. ನಿನಗಾತನು ನೆರವಾಗುವನು (ಪತ್ರ ಕೊಡುತ್ತಾನೆ.)

ಬಸವಯ್ಯ(ತೆಗೆದುಕೊಳ್ಳುತ್ತ) ಎಲ್ಲ ಶುಭವಾಗುವುದು, ನಿಮ್ಮ ಕೃಪೆಯಿರಲಿ!

ಸನ್ಯಾಸಿ – ಈಶ್ವರ ಕೃಪೆ! – ತಡಮಾಡಬೇಡಿ, ನಡೆಯಿರಿ.

ಶಿವಯ್ಯ – ಬಾ, ಬಸವಯ್ಯ.

ಸನ್ಯಾಸಿ – ಅವರಿಬ್ಬರೂ ಏಟೂರಿನ ಕಾಡುದಾರಿಯಲ್ಲಿ ಕುಂಸಿಯ ಮಾರ್ಗವಾಗಿ ಹೋಗುತ್ತಾರೆ. ನೀವೂ ಅದೇ ಮಾರ್ಗದಲ್ಲಿಯೆ ಹೋಗಿ.
(ಕೆಮ್ಮಿನ ಸದ್ದು ಕೇಳುವುದು)

ಬಸವಯ್ಯ – ಅದೇನು ಸದ್ದು?

ಸನ್ಯಾಸಿ – ನಡೆಯಿರಿ! ನಡೆಯಿರಿ! – ಅವರೇ ಕೊಲೆಗಾರರು! ಸೆರೆಮನೆಗೆ ಹೊರಟಿದ್ದಾರೆ! – ನಿಮ್ಮನ್ನು ಕತ್ತರಿಸಲು!
(ಶಿವಯ್ಯ ಬಸವಯ್ಯ ಹೋಗುವರು.)
ಎಂತಹ ದಿವ್ಯ ಶೀಲವದು ನಿನ್ನದು, ಓ ವಸವಯ. ನಿನಗೆ ನಿಜವಾದ ನೆಲೆ ಎಲೆವನೆ, ಆರಮನೆಯಲ್ಲ. ಕೈತಪ್ಪಿ ಬಿದಿ ನಿನ್ನನಿಲ್ಲಿಗೆ ಕಳುಹಿಸಿದೆ. ಬಿದನೂರನೆಲ್ಲ ಅರಸಿದರೂ ನಿನ್ನಂತಹ ಸುಸಂಸ್ಕೃತ ಸುಕೃತಾತ್ಮರೊಬ್ಬರಿಲ್ಲ. ನಿನಗೆ ಸರಿಸಮನಾಗಿ ನಿಲ್ಲುವನೆಂದರೆ ಆ ಹೊನ್ನಯ್ಯನೊಬ್ಬನೆ! ಆದರಾತನಲಿ ನಿನ್ನೊಳಿರುವನಿತು ರಾಜಗಾಂಭೀರ್ಯವಿಲ್ಲ! ನನ್ನಲ್ಲಿರುವ ಶಕ್ತಿಸಾಹಸಗಳೆಲ್ಲವನೂ ನಿನಗಾಗಿ ನಿವೇದಿಸುತ್ತೇನೆ. ಆದರೇನೀ ಕೆಮ್ಮುಗಳು! (ಮುಗುಳು ನಗುವನು. ಕೆಮ್ಮಿನ ಸದ್ದು ಹೆಚ್ಚುವುದು.) ಅವರೇ ಬರುತ್ತಿದ್ದಾರೆ. ನಾನೀಗ ಮರೆಯಾಗುವೆನು.
(ಕೆಮ್ಮಿನ ಸದ್ದು ಹೆಚ್ಚಾಗುವುದು. ಸನ್ಯಾಸಿ ಹೋಗುವನು.)

[ಪರದೆ ಬೀಳುವುದು]