[ಲಿಂಗಣ್ಣ ಮಂತ್ರಿಯ ಮನೆಯಲ್ಲಿ. ರುದ್ರಾಂಬೆ, ಶಿವಯ್ಯ ಮಾತಾಡುತ್ತಿರುವರು.]

ರುದ್ರಾಂಬೆ – ಶಿವಯ್ಯ, ಪಾಪಿಗಳು ಮೋಸದಿಂದರಸನನು
ಕೊಂದೀಗ ದೊರೆಯ ಮಗನನು, ಮಂತ್ರಿಯನು ಹಿಡಿದು
ಸೆರೆಯಲಿಡಲೆಂದೀ ಹೂಟವನು ಹೂಡಿದರು.

ಶಿವಯ್ಯ – ನಾನದನು ಕೇಳಿಯೇ  ನಿನ್ನ ನೋಡಲು ಬಂದೆ.
ದಾರಿಯಲಿ ಸಿಕ್ಕ ಹೊನ್ನಯ್ಯನೆನಗೆಲ್ಲವನು
ಹೇಳಿದನು.

ರುದ್ರಾಂಬೆ – ಆತನೇಕಿನ್ನೂ ಬರಲಿಲ್ಲ?

ಶಿವಯ್ಯ – ಸೆರೆಮನೆಯ ಬಳಿಗೆ ಹೋದನೋ ಏನೊ?

ರುದ್ರಾಂಬೆ – ಏಕೆ?

ಶಿವಯ್ಯ – ಸೆರೆಹಿಡಿದರೆಂಬ ಸುದ್ದಿಯ ಕೇಳಿ ಸಿಡಿಲೆರಗಿ
ದಂತಾಯ್ತು ನನಗೆ! ಸೆರೆಗೊಯ್ದರೆಂದು
ಕೇಳ್ದಾಗಳೆನ್ನ ನೆತ್ತರು ಕುದಿದು ಹೋಯಿತು.
ನಿನ್ನ ನೋವನು ನೆನೆದು ಸಂತವಿಡಲೆಂದು. . .

ರುದ್ರಾಂಬೆ – ಏನೆಂದೆ? ಸೆರೆಗೊಯ್ದರೇ?

ಶಿವಯ್ಯ – ಹೌದು; ನಿನಗದು
ತಿಳಿದಿರುವುದೆಂದಿದ್ದೆ!

ರುದ್ರಾಂಬೆ (ದುಃಖ ಧ್ವನಿಯಿಂದ) ಅಯ್ಯೋ ತಂದೆಯೇ,
ಗಂಡಾಗಿ ಸಂಭವಿಸಬಾರದಾಗಿತ್ತೆ ನಾನು!

ಶಿವಯ್ಯ – ರೋದಿಸಿದರೇನಹುದು, ರುದ್ರಾಂಬೆ? ನೀನಿಗ
ಹೆಣ್ಣಾದರೇನಂತೆ? ಕೈಲಾಗದವಳೇನು?
ನಿನಗೆ ಬೆಂಬಲವಿಲ್ಲವೇ?

ರುದ್ರಾಂಬೆ – ನಾನು ಗಂಡಾಗಿದ್ದರೆ
ನನ್ನ ತಂದೆಯನಿಂತು ಸೆರೆಗೆ ಕೊಂಡೊಯ್ವರೇ?

ಶಿವಯ್ಯ – ಹಾಗೆನ್ನದಿರು. ನೀನು ಪುರುಷನಾಗಿದ್ದರೆ
ನೀನೊಬ್ಬಳೆಯೆ ನಿಂತು ಕಾದಾಡಬೇಕಿತ್ತು.
ಪುರುಷನಿಗೆ ತನ್ನ ಶಕ್ತಿಯೆಶಕ್ತಿ ಸ್ತ್ರೀಗೆ
ಪುರುಷರೆಲ್ಲರ ಶಕ್ತಿ. ಸೌಂದರ್ಯದೆದುರಿನಲಿ
ನೂರಾರು ವೀರ ಕರವಾಲಗಳು ಮಣಿಯುವುವು!
ಸೇವೆಮಾಡಲು ಜೀವವನೆ ಧಾರೆಯೆರೆಯುವುವು!
ಸೌಂದರ್ಯಕನಿಬರೂ ಕಿಂಕರರು! ಕೂರಸಿಗೆ
ಸೊಬಗೆಂಬುದೆಯೆ ಸಾಣೆ! ನೀನಿಗ ಬೆಸಸಿದರೆ
ಪುರುಷನಾದವನು ಹಿಂಜರಿದು ನಿಲ್ಲುವನು ಹೇಳು!
ನೀನಳುಕಿದರೆ ಕೇಡು: ಸೆರೆಯಾಳ್ಗಳನು ಕೊಲಲು
ಯತ್ನಿಸುವರೆಂಬುದನೂ ನಾ ಬಲ್ಲೆ!

ರುದ್ರಾಂಬೆ (ಕಾತರತೆಯಿಂದ)  ಏನೆಂದೆ?

ಶಿವಯ್ಯ – ರುದ್ರಾಂಬೆ, ಚೆಲುವಾಂಬೆ ನಿಂಬಯ್ಯರೆಂದರೆ
ಮಾನವರು ಎಂದರಿಯಬೇಡ; ಯಮನಾಳುಗಳು!
ಜನಮಾನ್ಯ ಲಿಂಗಣ್ಣರಿಗೆ ಮುದಿತನದೊಳಿಂತು
ಕಳ್ಳರಂದದಿ ಸಾವ ಕಾಲವೈತಹುದೆಂದು
ತಿಳಿದಿದ್ದರಾರು? ಹಾ ವಿಧಿ!

ರುದ್ರಾಂಬೆ – ಅಯ್ಯೋ
ತಂದೆಯೇ, ನೀವಿಂತು ದುರ್ಮರಣಕೀಡಾದಿರಾ!
ಅರಸಕುವರಾ, ಇದಕಾಗಿ ನೀನೆನ್ನನೊಲಿದೆಯಾ!
(ಉದ್ವೇಗದಿಂದ ಸೋಲುವಳು. ಶಿವಯ್ಯ ಹತ್ತಿರ ಹೋಗಿ)

ಶಿವಯ್ಯ – ಬಸವಯ್ಯನಿಂದಲೇ ನಿನ್ನ ತಂದೆಗೆ ಇಂಥ
ದುರವಸ್ಥೆ ಬಂದಿದೆ!

ರುದ್ರಾಂಬೆ – ಬೇಡ, ಹಾಗೆನ್ನದಿರು!

ಶಿವಯ್ಯ – ಸಿಡಿಲ ಸದ್ದನು ಕೇಳಲಳುಕಿ, ಮಿಂಚನು ನೋಡ-
ಲಳುಕಿ ತಲೆಯನು ಮಳಲಿನಲಿ ಮುಚ್ಚುವಾ ಒಂಟೆ-
ಹಕ್ಕಿಯೊಲು ನೀನಿಂತು ದಿಟದ ರೌದ್ರತೆಗೆ
ಬೆದರಿ ಸಟೆಯನು ಮುಸುಗುಹಾಕಿಕೊಳ್ಳುತ್ತಿರುವೆ,
ರುದ್ರಾಂಬೆ! ಬಸವಯ್ಯನೇ ಇದಕೆ ಕಾರಣನು.
ನಿನ್ನ ಮೇಲಿರುವಾತನೊಲ್ಮೆಯೇ ಲಿಂಗಣ್ಣ
ಮಂತ್ರಿಯನು ಸೆರೆಗೆ ಕೊಂಡೊಯ್ದಿಹುದು. ಆದರೂ
ನಿನ ಕೈಲಿದೆ ಅವನನುಳುಹುವುದು.

ರುದ್ರಾಂಬೆ (ನೆಚ್ಚು ಮೂಡಿ) ಏನು?

ಶಿವಯ್ಯ – ನಿನ್ನ ಕೈಲಿದೆ ಅವನನುಳುಹುವುದು!

ರುದ್ರಾಂಬೆ –  ನನ್ನ ಜೀವವನಾದರೂ ತೆತ್ತು ಸಲಹುವೆನು.

ಶಿವಯ್ಯ – ನಿನ್ನ ಜೀವಕ್ಕಿಂತಲೂ ನಿನಗೆ ಹತ್ತುಮಡಿ
ಪ್ರಿಯವಾದುದನು ತೆತ್ತು ಸಲಹಬಲ್ಲೆಯಾ ಹೇಳು?

ರುದ್ರಾಂಬೆ – ಏನದು? ಹೇಳು!

ಶಿವಯ್ಯ – ನೀನೊಪ್ಪುವೆಯೊ ಇಲ್ಲವೋ ನಾನರಿಯೆ.

ರುದ್ರಾಂಬೆ – ಹೇಳು! ಹೇಳು! ಹೇಳು, ಶಿವಯ್ಯ!
ನಾನೊಪ್ಪಿಯೇ ಒಪ್ಪುವೆನು, ಹೇಳು!

ಶಿವಯ್ಯ – ನಿನ್ನ ಪ್ರೇಮದ ಮುಖವ ತಿರುಗಿಸುವೆಯಾ?
(ರುದ್ರಾಂಬೆ ಬೆಚ್ಚಿ ನೋಡುವಳು.)
ಬಸವಯ್ಯನನು ತೊರೆದು ನೀನೆನ್ನನೊಲಿದರೆ
ನನ್ನ ಕೇಡನು ಗಣಿಸದೆಯೆ ಅವರನೆಂತಾದರೂ
ಬಿಡಿಸುವೆನು.

ರುದ್ರಾಂಬೆ – ಅಣ್ಣನನು ಒಲಿಯುವಂತೊಲಿದಿಹೆನು.
ನಾ ನಿನ್ನ ತಂಗಿ; ನೀನೆನ್ನ ಸೋದರನು.

ಶಿವಯ್ಯ – ಬಸವಯ್ಯನನು ನೀನೆಂತು ಒಲಿದಿರುವೆಯೋ
ಅಂತೆನ್ನನೊಲಿದಿರುವೆಯಾ, ಹೇಳು?

ರುದ್ರಾಂಬೆ – ಶಿವಯ್ಯ,
ಅದನೊಂದನುಳಿದು ಇನ್ನೇನನಾದರೂ ಕೇಳು.

ಶಿವಯ್ಯ – ಅದಾಗದು, ರುದ್ರಾಂಬೆ. ನಿನ್ನ ನಾನೆಂತು
ಪ್ರೀತಿಸುವೆನೆಂಬುದನು ನೀನರಿಯೆ.

ರುದ್ರಾಂಬೆ – ನಾ ಬಲ್ಲೆ.
ಆದರೂ ಒಮ್ಮೆಯೊಂದೆಡೆ ಮಂಡಿಸಿದ ಒಲ್ಮೆ
ಎಂತು ಮತೊಂದೆಡೆಗೆ ನೆಲಸುವುದು?

ಶಿವಯ್ಯ – ರುದ್ರಾಂಬೆ,
ದುಂಬಿ ಹಲವು ಹೂಗಳ ನೋಡಿ ತುದಿಯಲಿ
ತನಗೆ ಬೇಕಾದುದನು ಒಲಿಯುವುದು. ಅಂತೆಯೆ
ಹಲವೆಡೆಗಳಲ್ಲಿ ಸಂಚರಿಸುವಾ ಪ್ರೇಮಕ್ಕೆ
ದೋಷವೆಂಬುದಿಲ್ಲ. – ಅದಂತಿರಲಿ,
ನಿನ್ನ ತಂದೆಯ ಜೀವವುಳಿಯಬೇಕಾದರೆ
ನನ್ನನೊಲಿಯಲು ಒಪ್ಪು, ಇಲ್ಲದಿರೆ ಇಂದೊ
ನಾಳೆಯೊ ಅವರಿಬ್ಬರೂ ನಿನಗೆ ಎಂದಿಗೂ
ದೊರೆಯದಂತಾಗುವರು!

ರುದ್ರಾಂಬೆ (ಸ್ವಗತ) ಈ ಪಾಪಿ ಇದಕಾಗಿಯೆ
ಇಲ್ಲಿಗೈತಂದಿಹನು. ಇವನ ದೌರಾತ್ಮ್ಯಕ್ಕೆ
ತಕ್ಕುದನೆ ಮಾಡುವೆನು. ಬಾಂಧವರ ಜೀವವನು
ಉಳಿಸಿಕೊಳ್ಳುವ ಸುಳ್ಳು ಪಾಪವಾಗದು. ಇರಲಿ.
(ಬಹಿರಂಗಶಿವಯ್ಯ, ಬಸವಯ್ಯನ ಅಕುಟಿಲ ಪ್ರೇಮಕ್ಕೆ
ಅಪರಾಧವೆಸಗಿದಂತಾಗುವುದು!

ಶಿವಯ್ಯ – ನನ್ನದೂ
ಅಕುಟಿಲ ಪ್ರೇಮವೇ, ರುದ್ರಾಂಬೆ. ಅಲ್ಲದೆಯೆ
ತನ್ನನೇ ತಾನು ಹೊರೆದುಕೊಳಲಾರದಿಹ
ಆತನಿಗೆ ನೀನೇಕೆ? ನಿನ್ನ ಒಲವೇಕೆ?
ನೀನವನನೊಲಿದೆಯಾದರೆ ನಿನಗೆ ಆತನೂ
ದೊರಕದೆಯೆ ಮಡಿಯುವನು; ಅವನ ದೆಸೆಯಿಂದೆ
ಮುದುಕನಾಗಿಹ ನಿನ್ನ ಪಿತನ ಶಿರವೂ ಕೊಲೆಗೆ
ಬೀಳುವುದು. ನೀನೆನ್ನನೊಲಿದೆಯಾದರೆ ನಿನ್ನ
ಅಳ್ಕರೆಯ ತಂದೆಯೂ ಬದುಕುವನು; ಅದರಿಂದೆ
ಆ ಬಡವು ಬಸವಯ್ಯನೂ ಉಳಿಯುವಂತಹುದು.
ನಾ ನಿನ್ನನೊಲಿದಂತೆ ಬಸವಯ್ಯನೊಲಿದಿಲ್ಲ.
ನಿನಗಾಗಿ ಏನು ಸಾಹಸವ ಬೇಕಾದರೂ
ಮಾಡಿ ಬಾಳನೆ ಬೇಳಲಾನೆಂದೂ ಸಿದ್ಧನಿಹೆ.
ನನ್ನೊಲ್ಮೆಯಲಿ ನಿನಗೆ ಲಾಭವಿದೆ; ಕ್ಷೇಮವಿದೆ;
ಪ್ರೇಮವಿದೆ. ನೆರೆ ವಿಚಾರಿಸಿ ನೋಡು.

ರುದ್ರಾಂಬೆ (ಚಿಂತಿಸುವಳಂತೆ ಮಾಡಿ) ಆಗಲಿ;
ನಿನ್ನಾಸೆಯಂತೆಯೆ ನಡೆಯುವೆನು. ಸೆರೆಯಿಂದೆ
ಎಂತಾದರೂ ಅವರಿನಿಬ್ಬರನು ಹೊರಗೆಡಹು.

ಶಿವಯ್ಯ (ಹಿಗ್ಗಿ)  ಹಾಗಾದರಿಂದಿನಿರುಳೇ ಅವರನುಳಿಸುವೆನು.
ನನಗಿಂದು ನನ್ನ ಬಾಳಿನ ಸಾರ್ಥಕತೆಯಾಯ್ತು!
ಓ ನನ್ನ ರುದ್ರಾಂಬೆ, ನೀನಿಂದು ಶಿವಯ್ಯನನು
ಅಮರನನ್ನಾಗಿ ಮಾಡಿರುವೆ. ಇಂದು ನನ್ನೆದೆಯಲ್ಲಿ
ಎಂದಿಗೂ ತವಿಯದಿಹ ಸಾಹಸವು ಮೂಡಿಹುದು.
ನಿನಗಾಗಿ ನಾನಿಂದು ಯಮನ ಕೆಣಕುತಿಹೆನೆಂದು
ನಾ ಬಲ್ಲೆ. ಆದರೂ, ಈ ಯತ್ನದಲಿ ನಾನು
ಮಡಿದರೂ, ನಿನ್ನನೆಂದಾದರೂ ಒಂದು ದಿನ
ಪಡೆವೆನೆಂಬುವ ತೃಪ್ತಿಯೇ ನನಗೆ ನೀನಿಂದೆ
ಕೈಗೂಡಿದಂತೆಯೇ ಅಗಿಹುದು. ನಿನ್ನೊಲ್ಮೆ
ದೊರಕಿದುದೆ ನನ್ನೆಲ್ಲ ಸಾಧನೆಗೆ ಸಿದ್ಧಿಯಾಯ್ತು!
ನೂರಾರು ಜನ್ಮಗಳನೆತ್ತುವೆನು ನಿನಗಾಗಿ;
ನೂರಾರು ನರಕಗಳನಾದರೂ ಈಜುವೆನು
ನಿನಗಾಗಿ. ನಿನೊಲ್ಮೆಯೆದುರಿನಲಿ ಈ ನನ್ನ
ಕಾಯಕವೂ ತೃಣಕೆ ಎಣೆ! (ಬಾಗಿಲಲಿ ಸದ್ದು)

ರುದ್ರಾಂಬೆ – ಯಾರದು?
(ಬಾಗಿಲು ತೆರೆದು ಹೊನ್ನಯ್ಯ ಬರಲು)
ಹೊನ್ನಯ್ಯ, ಸುದ್ದಿಯೇನು?

ಶಿವಯ್ಯ – ಬಾ, ಹೊನ್ನಯ್ಯ, ಏನಾಯ್ತು?

ಹೊನ್ನಯ್ಯ – ಸರ್ವನಾಶ! ಇಬ್ಬರನೂ ಸೆರೆಗೊಯ್ದರು. ಅವರು ಕೊಲೆಯಾಗುವರೆಂಬ ಸುದ್ದಿ ಊರೊಳಗೆಲ್ಲ ಹಬ್ಬಿದೆ! ಮುಂದೇನು ಗತಿ!

ಶಿವಯ್ಯ – ಚಿಂತೆಯಿಲ್ಲ, ಹೊನ್ನಯ್ಯ. ನೀನು ನನಗೆ ನೆರವಾಗಲೊಪ್ಪಿದರೆ ಈ ರಾತ್ರಿಯೆ ಅವರನಲ್ಲಿಂದ ಸಾಗಿಸಬಹುದು.

ರುದ್ರಾಂಬೆ (ಹೊನ್ನಯ್ಯಗೆ) ನನ್ನಲ್ಲಿ ಕರುಣೆಯಿಡು! ಶಿವಯ್ಯನಿಗೆ ನೆರವಾಗು!

ಹೊನ್ನಯ್ಯ – ತಂಗಿ, ಈ ಕಷ್ಟ ನಿನದಲ್ಲ, ನನ್ನದು ನನ್ನ ಜೀವವನೆ ತೆತ್ತು ಪ್ರಯತ್ನ ಮಾಡುತ್ತೇನೆ.
(ಶಿವಯ್ಯನಿಗೆ) ನಾನು ಸಿದ್ಧನಿದ್ದೇನೆ. ಉಪಾಯವೇನು. ಹೇಳು?

ಶಿವಯ್ಯ – ಈ ಊರಿನಲ್ಲಿ ಸನ್ಯಾಸಿಯೊಬ್ಬನಿದ್ದಾನೆ.

ಹೊನ್ನಯ್ಯ – ಹೌದು.

ಶಿವಯ್ಯ – ಆತನಿಗೆ ಅರಮನೆಯ ಸೇವಕರು, ಕಾವಲುಗಾರರು, ಎಲ್ಲರೂ ಪರಿಚಯ.

ಹೊನ್ನಯ್ಯ – ಆದರೆ?

ಶಿವಯ್ಯ – ಸೆರೆಮನೆಯ ಕಾವಲುಗಾರ ಸಿಂಗಣ್ಣನಿಗೆ ಅವನಲ್ಲಿ ಬಹಳ ಭಕ್ತಿ. – ಇರಲಿ, ಅದೆಲ್ಲ ನಿನಗೇಕೆ? ನೀನು ನಡುರಾತ್ರಿಯ ಹೊತ್ತಿಗೆ ಸೆರೆಮನೆಯ ಬಳಿಗೆ ಬಾ. ನಾನಷ್ಟರಲ್ಲಿಯೆ ಎಲ್ಲವನೂ ಸಿದ್ಧಮಾಡುತ್ತೇನೆ.(ರುದ್ರಾಂಬೆಗೆ) ನಾವು ಅವರನು ಸಾಗಿಸಿದ ತರುವಾಯ ನಿನಗೇನಾದರೂ ಕೇಡಾಗಬಹುದು. ಮೈಮರಸಿಕೊಳ್ಳಲು ಸಿದ್ಧಳಾಗಿರಬೇಕು.

ರುದ್ರಾಂಬೆ – ನನ್ನ ಕ್ಷೇಮದ ಚಿಂತೆ ನಿಮಗೆ ಬೇಡ. ಹೇಗಾದರೂ ಅವರನಲ್ಲಿಂದ ಬಿಡಿಸಿ.

ಶಿವಯ್ಯ – ಹೊನ್ನಯ್ಯ, ಈಗ ನನ್ನ ಜೊತೆ ಬಾ. ಮಾಡಬೇಕಾದ ಸನ್ನಾಹಗಳಿವೆ. ತಡಮಾಡಬಾರದು. (ರುದ್ರಾಂಬೆಗೆ) ಹೋಗಿಬರುತ್ತೇನೆ, ರುದ್ರಾಂಬೆ.

ಹೊನ್ನಯ್ಯ – ಧೈರ್ಯದಿಂದಿರು, ತಂಗಿ. ಈಶ್ವರನ ದಯೆಯಿರಲು
ಎಲ್ಲ ಮಂಗಳವಹುದು. ಈ ದುಃಖಮಾಲೆಗಳು
ಸುಖಕೆ ಸೋಪಾನಗಳು. ಜಗದೀಶ್ವರನ ಕೃಪೆಗೆ
ನೂರು ಮಾರ್ಗಗಳಿಹವು; ನೂರು ವೇಷಗಳಿಹವು.
ಸುಖವೆಂಬುದಾತನೊಲ್ಮೆಗೆ ಚಿಹ್ನೆಯಾಗುವೊಡೆ
ದುಃಖವೂ ಅಂತೆಯೇ ಎಂದರಿಯುವುದು ,ತಂಗಿ!
ಅದರಿಂದೆ ಕಾರುಣಿಕ ಈಶ್ವರನ ಕಾರ್ಯದಲಿ
ಶ್ರೇಯಸ್ಸೆ ತುದಿಯ ಗುರಿ ಎಂಬುದನು ನಂಬಿ
ನೆಚ್ಚಿಗೆಡದಿರು. ಎಲ್ಲ ಮಂಗಳವಾಗುವುದು!

ರುದ್ರಾಂಬೆ – ಈಶ್ವರನು ನಮಗೆಲ್ಲ ನೆರವಾಗಲಿ!
(ಶಿವಯ್ಯ ಹೊನ್ನಯ್ಯ ಹೋಗುವರು. ರುದ್ರಾಂಬೆ ಅವರನ್ನೆ ನೋಡುತ್ತ ನಿಲ್ಲುತ್ತಾಳೆ.)

[ಪರದೆ ಬೀಳುವುದು]