ಮೊದಲಿಗೆ ಈ ಸಂಕಲನದ ಹೆಸರಿನ ಬಗ್ಗೆ: ಈ ಸಂಕಲನದಲ್ಲಿರುವ ಎಲ್ಲಾ ಲೇಖನಗಳ ಆಳದಲ್ಲಿರುವ ಒಂದು ಸಮಾನ ಗೃಹೀತವೆಂದರೆ ಲೇಖಕನ ‘ರಕ್ತಿ’ ಅವನು ತನ್ನ ಕೃತಿಗಳಲ್ಲಿ ಭಾಷೆಯ ಮೂಲಕ ಮಾಡುವ (ಸಮಾಜದ/ವ್ಯಕ್ತಿಗಳ/ವಿಶ್ವದ) ‘ರೂಪಣೆ’ಯನ್ನು ಪ್ರಭಾವಿಸುತ್ತದೆ. ಪರಿಣಾಮತಃ, ಲೇಖಕರ ವಿಶಿಷ್ಟ ಸಾಮಾಜಿಕ-ಸಾಂಸ್ಕೃತಿಕ-ವೈಚಾರಿಕ ಸಂಗತಿಗಳು ಭಿನ್ನವಾದಂತೆ ಅವುಗಳಿಂದ ಜನ್ಮಿಸಿದ ಅವರ ರಕ್ತಿಯೂ ಭಿನ್ನ ರೂಪಣೆಗಳಿಗೆ ಕಾರಣವಾಗುತ್ತದೆ. ಎರಡನೆಯದಾಗಿ, ಈ ಸಂಕಲನದ ಅನೇಕ ಲೇಖನಗಳು ನಾನು ಆಗಾಗ್ಗೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಮತ್ತು ಈಗಾಗಲೇ ಇತರ ಗ್ರಂಥಗಳಲ್ಲಿ/ಸಾಹಿತ್ಯಕ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಇಂಗ್ಲಿಷ್ ಲೇಖನಗಳ ಅನುವಾದಗಳು. ಕೊನೆಯದಾಗಿ, ಸಂಕಲನದ ಪ್ರಾರಂಭದಲ್ಲಿ “ತೌಲನಿಕ ಸಾಹಿತ್ಯ” ಎಂಬ ತಾತ್ವಿಕ ಲೇಖನವಿದ್ದರೂ, ಎಲ್ಲಾ ಲೇಖನಗಳಲ್ಲಿಯೂ ಈ ತೌಲನಿಕ ಆಯಾಮ ಒಂದೇ ಪ್ರಮಾಣದಲ್ಲಿಲ್ಲ; ಕೆಲವು ಲೇಖನಗಳಲ್ಲಿ ಈ ಆಯಾಮ ಪ್ರಮುಖವಾಗಿದ್ದರೆ ಮತ್ತೆ ಕೆಲವು ಲೇಖನಗಳಲ್ಲಿ ಸಾಂದರ್ಭಿಕವಾಗಿದೆ.

ಈ ಸಂಕಲನ ಹೊರಬರಲು ಕಾರಣವಾದವರು ಮೊದಲಿಗೆ ಕುಲಪತಿಗಳಾದ ಪ್ರೊ.ಬಿ.ಎ. ವಿವೇಕ ರೈ ಮತ್ತು ನಂತರ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ. ಇವರಿಬ್ಬರ ಪ್ರೀತಿ-ಆಗ್ರಹ- ಪ್ರೋತ್ಸಾಹಗಳಿಲ್ಲದಿದ್ದರೆ ಈ ಸಂಕಲನ ಬೆಳಕು ಕಾಣುತ್ತಿರಲಿಲ್ಲ. ಇವರಿಬ್ಬರಿಗೂ ನಾನು ಅತ್ಯಂತ ಆಭಾರಿಯಾಗಿದ್ದೇನೆ. ‘ಸುವರ್ಣ ಕರ್ನಾಟಕ ಯೋಜನೆ’ಯಡಿ ನನ್ನದೊಂದು ಕೃತಿ ಈ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಪ್ರಕಟವಾಗುತ್ತಿರುವುದು ನನಗೆ ತುಂಬಾ ಅಭಿಮಾನದ ಸಂಗತಿ.

ಓದುಗರು ಈ ಸಂಕಲನದ ಬಗ್ಗೆ/ಬಿಡಿ ಲೇಖನಗಳ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನನಗೆ ತಿಳಿಸುವ ಉಪಕಾರ ಮಾಡಿದರೆ ನಾನು ಪಟ್ಟಿರುವ ಶ್ರಮ ಸಾರ್ಥಕವಾಗುತ್ತದೆ.

ಬೆಂಗಳೂರು
ಸಿ.ಎನ್. ರಾಮಚಂದ್ರನ್