ಇಂದು ಸಾಧಾರಣವಾಗಿ ಎಲ್ಲಾ ಭಾರತೀಯ ವಿ.ವಿ.ಗಳ ಭಾಷಾ ವಿಭಾಗಗಳಲ್ಲಿ ‘ತೌಲನಿಕ ಸಾಹಿತ್ಯ’ವನ್ನು ಕುರಿತ ಒಂದೋ ಎರಡೋ ಪೇಪರ್‌ಗಳು ಇರುತ್ತವೆ. ‘ತೌಲನಿಕ ನಾಟಕ’, ‘ತೌಲನಿಕ ಕಾವ್ಯ ಮೀಮಾಂಸೆ’, ಇತ್ಯಾದಿ. ಆದರೆ, ಇಂಗ್ಲಿಷ್ ಮತ್ತು ಇತರ ಪಾಶ್ಚಿಮಾತ್ಯ ಭಾಷೆಗಳಲ್ಲಿ ಈ ಪರಿಕಲ್ಪನೆಯನ್ನು ಕುರಿತು ಅನೇಕಾನೇಕ ಗ್ರಂಥಗಳು ಹಾಗೂ ಲೇಖನಗಳಿದ್ದರೂ ಕನ್ನಡದಲ್ಲಿ (ನನಗೆ ತಿಳಿದಂತೆ) ಒಂದು ಗಂಭೀರ ಲೇಖನವೂ ಬಂದಿಲ್ಲ. ‘ತೌಲನಿಕ ವಿಮರ್ಶೆ’ಗೂ ‘ತೌಲನಿಕ ಸಾಹಿತ್ಯಕ್ಕೂ/ಅಧ್ಯಯನಕ್ಕೂ’ ಏನು ವ್ಯತ್ಯಾಸ? ಇದು ಇಂದು ಸಾಮಾನ್ಯವಾಗಿ ಎಲ್ಲರೂ ಕೇಳುವ ಪ್ರಶ್ನೆ; ‘ಏನೂ ವ್ಯತ್ಯಾಸವಿಲ್ಲ’ ಎಂದೇ ವಿದ್ವಾಂಸರೂ ಸೇರಿದಂತೆ ಅನೇಕರು ಭಾವಿಸುತ್ತಾರೆ. ಆದ್ದರಿಂದ ಈ ವಿಷಯವನ್ನು ಕುರಿತು ಸಾಕಷ್ಟು ದೀರ್ಘವಾದ ಚರ್ಚೆಯನ್ನು ಮಾಡಲು ಈ ಲೇಖನದಲ್ಲಿ ಪ್ರಯತ್ನಿಸಿದ್ದೇನೆ.

ತೌಲನಿಕ ವಿಮರ್ಶೆ (Comparative Criticism) ಇಂದು ನೆನ್ನೆಯದೇನೂ ಅಲ್ಲ. ಎಲ್ಲಾ ಭಾಷೆಗಳಲ್ಲಿಯೂ ಸಾಹಿತ್ಯ ವಿಮರ್ಶೆಯ ಉಗಮದೊಡನೆಯೇ ತುಲನಾತ್ಮಕ ವಿಮರ್ಶೆಯೂ, ಎಂದರೆ ಎರಡು ಕೃತಿಗಳನ್ನು ಅಥವಾ ಇಬ್ಬರು ಸಮಾನ ಲೇಖಕರನ್ನು ಒಂದೆಡೆ ತಂದು, ಅವುಗಳ/ಅವರ ನಡುವಿನ ಸಾಮ್ಯ-ವೈಶಮ್ಯಗಳನ್ನು ಗುರುತಿಸುವ ಕಾರ್ಯ ಜನ್ಮ ತಾಳುತ್ತದೆ. ಈ ಪ್ರವೃತ್ತಿಯನ್ನು ನಾವು ಅರಿಸ್ಟಾಟಲ್, ಲಾಂಜೈನಸ್ ಇತ್ಯಾದಿ ಪಾಶ್ಚಾತ್ಯ ವಿಮರ್ಶಕರಲ್ಲಿಯೂ ಕಾಣುತ್ತೇವೆ. ಏಕೆಂದರೆ, ಯಾವುದೇ ವ್ಯಕ್ತಿಯನ್ನು/ಕೃತಿಯನ್ನು/ವಿಚಾರವನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು ಹೋಲಿಕೆಯ ಮೂಲಕ ಮಾತ್ರ. ‘ತುಲನೆ ಮತ್ತು ವಿಶ್ಲೇಷಣೆ ಇವೆರಡೂ ವಿಮರ್ಶೆಯ ಮುಖ್ಯ ಸಾಧನಗಳು’ ಎಂಬ ಎಲಿಯಟ್‌ನ ಹೇಳಿಕೆ ಸುಪ್ರಸಿದ್ಧ.

ಆದರೆ, ತೌಲನಿಕ ಸಾಹಿತ್ಯವೆಂದರೆ ತೌಲನಿಕ ವಿಮರ್ಶೆಯಲ್ಲ. ತೌಲನಿಕ ವಿಮರ್ಶೆ ಒಂದು ಸಾಧನ, ಒಂದು ಅಧ್ಯಯನ ವಿಧಾನ, ತೌಲನಿಕ ಸಾಹಿತ್ಯ ಒಂದು ಪರಿಕಲ್ಪನೆ, ಒಂದು ಅಧ್ಯಯನಕ್ಷೇತ್ರ. ತೌಲನಿಕ ವಿಮರ್ಶೆ ಪ್ರಾಚೀನ, ತೌಲನಿಕ ಸಾಹಿತ್ಯ ಅರ್ವಾಚೀನ. ಕೇವಲ ಒಂದು ಒಂದೂವರೆ ಶತಮಾನಗಳ ಇತಿಹಾಸ ಇದಕ್ಕಿದೆ.

‘ತೌಲನಿಕ ಸಾಹಿತ್ಯ’ (Comparative Literature) ಎಂಬ ಪರಿಕಲ್ಪನೆಯನ್ನು ಮೊಟ್ಟ ಮೊದಲಿಗೆ, ಪ್ರಾಯಃ ಮ್ಯಾಥ್ಯೂ ಆರ್ನಲ್ಡ್ ತನ್ನ ಒಂದು ಪತ್ರದಲ್ಲಿ ಬಳಸಿದನೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಇದೇ ಸಮಯದಲ್ಲಿ, ಎಂದರೆ ಹತ್ತೊಂಭತ್ತನೆಯ ಶತಮಾನದ ಎರಡನೆಯ ಭಾಗದಲ್ಲಿ ಇತರ ಯೂರೋಪಿಯನ್ ಭಾಷೆಗಳಲ್ಲಿಯೂ ಈ ಪರಿಕಲ್ಪನೆ ಕಾಣಿಸಿಕೊಂಡಿತು. ಎ.ಎಫ್.ವಿಲ್‌ಮನ್ (Abel Francois Villeman) ಎಂಬ ವಿದ್ವಾಂಸನು ಇದನ್ನು ಫ್ರಾನ್ಸ್‌ನಲ್ಲಿ ‘Litterature Comparee’ ಎಂಬ ಹೆಸರಿನಲ್ಲಿ ವ್ಯಾಪಕವಾಗಿ ಪ್ರಚಾರಕ್ಕೆ ತಂದನಲ್ಲದೇ ಈ ಪರಿಕಲ್ಪನೆಯನ್ನಾಧರಿಸಿದ ಒಂದು ಪಠ್ಯ ಕ್ರಮವನ್ನು ಮೊತ್ತಮೊದಲು ಬಾರಿಗೆ ಪ್ಯಾರಿಸ್‌ನ ಸಾರ್‌ಬಾನ್ (Sorbonne) ವಿ.ವಿ.ಯಲ್ಲಿ ಜಾರಿಗೆ ತಂದನು. ೧೮೫೪ ರಲ್ಲಿ ಜರ್ಮನ್ ವಿದ್ವಾಂಸ ಮಾಂಜ್ ಕಾರಿಯೇರ್ (Monz Carriare) ಈ ಪರಿಕಲ್ಪನೆಯನ್ನು ಜರ್ಮನಿಯಲ್ಲಿ ವ್ಯಾಪಕವಾಗಿ ಪ್ರಚಾರಕ್ಕೆ ತಂದನು. ಕಳೆದ ಶತಮಾನದಲ್ಲಿ ಮುಖ್ಯವಾಗಿ ನಾಲ್ಕನೆಯ ದಶಕದಿಂದೀಚೆಗೆ ತೌಲನಿಕ ಸಾಹಿತ್ಯದ ಅಧ್ಯಯನ ವ್ಯಾಪಕವಾಗಿ ಅಮೆರಿಕಾ ಮತ್ತು ಇತರ ಯೂರೋಪಿಯನ್ ವಿ.ವಿ.ಗಳಲ್ಲಿ ವ್ಯಾಪಕವಾಗಿ ಬೆಳೆದಿದೆ, ಬೆಳೆಯುತ್ತಿದೆ. ಇಂತಹ ಅಧ್ಯಯನಕ್ಕೆ ಒಂದು ವ್ಯವಸ್ಥಿತ ಹಾಗೂ ಸಾಂಸ್ಥಿಕ ಸ್ವರೂಪ ದೊರಕಿದ್ದು ೧೯೫೭ ರಲ್ಲಿ ಸ್ಥಾಪನೆಗೊಂಡ ಅಂತಾರಾಷ್ಟ್ರೀಯ ತೌಲನಿಕ ಸಾಹಿತ್ಯ ಸಂಘದಿಂದ (International Comparative iterature Association, ICLA). ಈ ಸಂಘದ ಕವಲುಗಳು ಭಾರತವೂ ಸೇರಿದಂತೆ ಹೆಚ್ಚು ಕಮ್ಮಿ ಎಲ್ಲಾ ರಾಷ್ಟ್ರಗಳಲ್ಲಿಯೂ ಇವೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಸಂಘದ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ಸುಮಾರು ೫೦೦೦ ದಷ್ಟು ವಿವಿಧ ದೇಶಗಳ ವಿದ್ವಾಂಸರು ಸೇರಿ ಒಂದು ವಾರ ಕಾಲ ವಿವಿಧ ಸಂಕಿರಣಗಳನ್ನು ನಡೆಸುತ್ತಾರೆ.

ಭಾರತದಲ್ಲಿ ತೌಲನಿಕ ಸಾಹಿತ್ಯದ ಅಧ್ಯಯನದ ಪ್ರಾರಂಭ ೧೯೦೬ ರಲ್ಲಿ ರವೀಂದ್ರನಾಥ ಟಾಗೋರ್ ಅವರ ‘ಶಕುಂತಲಾ, ಮಿರಾಂಡಾ ಏವಂ ಡೆಸ್ಡಿಮೋನಾ” (ಬಿಭಧ ಪ್ರಬಂಧ್) ಸುಪ್ರಸಿದ್ಧ ಭಾಷಣದಿಂದ ಎಂದು ಹೇಳಬಹುದು. ಟಾಗೋರ್ ಇಂತಹ ಚಿಂತನೆಯನ್ನು ‘ವಿಶ್ವ ಸಾಹಿತ್ಯ’ ಎಂದು ಕರೆದರು. ಕನ್ನಡದ ನವೋದಯ ಲೇಖಕರಿಗೆಲ್ಲಾ ತೌಲನಿಕ ಸಾಹಿತ್ಯ ಒಂದು ಅಪಾರ ಆಸಕ್ತಿಯ ಕ್ಷೇತ್ರವಾಗಿದ್ದಿತು. ಕುವೆಂಪು ಅವರ “ಸರೋವರದ ಸಿರಿಗನ್ನಡಿಯಲ್ಲಿ”, ಶಂಬಾ ಜೋಷಿಯವರ “ಕರ್ಣನ ಮೂರು ಚಿತ್ರಗಳು”, ಎಸ್.ವಿ. ರಂಗಣ್ಣನವರ ‘ಹೊನ್ನ ಶೂಲ’ ಇತ್ಯಾದಿಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. (ಈ ಹೇಳಿಕೆಗೂ ಒಂದು ತಿದ್ದುಪಡಿ ಬೇಕಾಗುತ್ತದೆ. ಅದನ್ನು ಮುಂದೆ ಸ್ಪಷ್ಟಪಡಿಸಬಹುದು.) ಆದರೆ ಇಂದಿನವರೆಗೂ ಕನ್ನಡದಲ್ಲಿ ತೌಲನಿಕ ಸಾಹಿತ್ಯ ಒಂದು ಶಿಸ್ತಾಗಿ, ಒಂದು ಗಂಭೀರ ತಾತ್ವಿಕ ನೆಲೆಗಟ್ಟುಳ್ಳ ಅಧ್ಯಯನ ಕ್ಷೇತ್ರವಾಗಿ ಬೆಳೆದಿಲ್ಲವೆಂದೇ ಹೇಳಬೇಕು.

‘ತೌಲನಿಕ ಸಾಹಿತ್ಯ’ ಎಂದರೇನು? ಈ ಪ್ರಶ್ನೆಗೆ ನಾವು ಕೊಡಬಹುದಾದ ಒಂದು ಸಂಕ್ಷಿಪ್ತ ಉತ್ತರ ಎಂದರೆ ವಿವಿಧ ಸಾಹಿತ್ಯಗಳ ತುಲನಾತ್ಮಕ ಅಧ್ಯಯನ ಎಂದು. ಆದರೆ ಈ ಪರಿಕಲ್ಪನೆಯ ಆಳದಲ್ಲಿ ಅನೇಕ ಗೃಹೀತಗಳಿವೆ, ಅವನ್ನು ಅರ್ಥ ಮಾಡಿಕೊಳ್ಳದ ಹೊರತು ಈ ಪರಿಕಲ್ಪನೆಯ ಸಾಹಿತ್ಯಕ/ಸಾಂಸ್ಕೃತಿಕ ಮಹತ್ವ ನಮ್ಮ ಅರಿವಿಗೆ ಬರುವುದಿಲ್ಲ.

‘ತೌಲನಿಕ ಸಾಹಿತ್ಯ’ ಎಂಬಲ್ಲಿ ‘ಸಾಹಿತ್ಯ’ ಎಂಬ ಪದಕ್ಕೆ ಒಂದು ರಾಷ್ಟ್ರದ ಪರಿಕಲ್ಪನೆಯ ಆಯಾಮವಿದೆ, ಮತ್ತು ಈ ಆಯಾಮವೂ ಪಾಶ್ಚಿಮಾತ್ಯ ಜಗತ್ತಿನಲ್ಲಿ ೧೯ನೇಯ ಶತಮಾನದಲ್ಲಿ ಬೆಳೆದದ್ದು. ಈ ಚಿಂತನೆಯನ್ನು ಹೀಗೆ ಗುರುತಿಸಬಹುದು. ಒಂದು ರಾಷ್ಟ್ರದ ಸಾಹಿತ್ಯಕ್ಕೆ ತನ್ನದೇ ಆದ ಅನನ್ಯತೆಯಿರುತ್ತದೆ. ಸ್ಥೂಲವಾಗಿ ಮೇಲೆ ಕಾಣುವ ಭಿನ್ನತೆಗಳ ಹೊರತಾಗಿಯೂ ಒಂದು ರಾಷ್ಟ್ರದ ಸಾಹಿತ್ಯ ಆದಿಯಿಂದ ಇಂದಿನವರೆಗೂ ಆಳದಲ್ಲಿ ಕೆಲವು ಸಮಾನ ರಾಷ್ಟ್ರೀಯ ಅಂಶಗಳನ್ನು ಹೊಂದಿರುತ್ತದೆ. ಈ ಅಂಶಗಳು ರಾಜಕೀಯ – ಸಾಮಾಜಿಕ – ಸಾಂಸ್ಕೃತಿಕ ಮೌಲ್ಯ ವ್ಯವಸ್ಥೆಗಳಿಂದ ರೂಪುಗೊಂಡಿರುತ್ತವೆ. ಆದ್ದರಿಂದಲೇ, ಒಂದು ರಾಷ್ಟ್ರಕ್ಕೆ ಒಂದು ಸಾಹಿತ್ಯವಿರುತ್ತದೆ, ಮತ್ತು ಇದನ್ನು ‘ರಾಷ್ಟ್ರೀಯ ಸಾಹಿತ್ಯ’ (National Literature) ಎಂದು ಗುರುತಿಸಬಹುದು. ಸಾಹಿತ್ಯ ಚರಿತ್ರೆಗಳ ಉಗಮ ಇಂತಹ ಚಿಂತನೆಯಲ್ಲಿದೆ.

ಇಂತಹ ಸಾಹಿತ್ಯ ಚಿಂತನೆಗೂ ೧೯ನೆಯ ಶತಮಾನದಲ್ಲಿ ಯೂರೋಪಿನ ಎಲ್ಲಾ ದೇಶಗಳಲ್ಲಿಯೂ ತೀವ್ರವಾಗಿ ಬೆಳೆದ ‘ರಾಷ್ಟ್ರ’ (Nation) ಪರಿಕಲ್ಪನೆಗೂ ನಂಟಿದೆ. ಒಂದು ಮತ್ತೊಂದರ ಪರಿಣಾಮ. ಇದು ಮೂಲತಃ ರಾಜಕೀಯ ಅನನ್ಯತೆಯ (National Identity) ಶೋಧ, ಸಾಹಿತ್ಯವನ್ನು ಇಂತಹ ಅನನ್ಯತೆಯ ದಾಖಲೆಯೆಂದು ನೋಡಲಾಯಿತು.

‘ರಾಷ್ಟ್ರ’ದ ಹಾಗೂ ‘ರಾಷ್ಟ್ರೀಯ ಸಾಹಿತ್ಯ’ದ ಪರಿಕಲ್ಪನೆಯ ಒಂದು ಪರಿಣಾಮವೆಂದರೆ ಪ್ರತಿಯೊಂದು ಭಾಷೆಯ, ದೇಶದ ಸಾಹಿತ್ಯವೂ ಅನನ್ಯ. ಅತ್ಯಂತ ಶ್ರೇಷ್ಠ, ಲೋಕೋತ್ತರ ಇತ್ಯಾದಿ ಅವಿಮರ್ಶಾತ್ಮಕ ದುರಭಿಮಾನವು ಎಲ್ಲಾ ದೇಶಗಳಲ್ಲಿಯೂ ಬೇರೂರಿದ್ದು. ರಾಜಕೀಯ ನೆಲೆಯಲ್ಲಿ ಇಂತಹ ಉಗ್ರ ರಾಷ್ಟ್ರೀಯತೆಯ ಪರಿಣಾಮವಾಗಿ ನಡೆದ ಎರಡು ವಿಶ್ವ ಸಂಗ್ರಾಮಗಳು, ಅವುಗಳಿಂದಾದ ಅಪಾರ ಸಾವು ನೋವುಗಳು ಇವುಗಳು ಎಲ್ಲರಿಗೂ ಇಂದು ಸ್ಪಷ್ಟವಾಗಿರುವ ವಿಷಯಗಳೇ.

ತೌಲನಿಕ ಸಾಹಿತ್ಯದ ಒಂದು ಗಂಭೀರ ಉದ್ದೇಶವೆಂದರೆ ಉಗ್ರ ರಾಷ್ಟ್ರೀಯತೆಯನ್ನು ಸಾಹಿತ್ಯಕ ನೆಲೆಯಲ್ಲಿ ಪ್ರತಿಭಟಿಸುವುದು ಮತ್ತು ರಾಷ್ಟ್ರೀಯತೆಯ ತಾತ್ವಿಕ ನೆಲೆಯಾದ ಸಾಹಿತ್ಯಿಕ-ಸಾಂಸ್ಕೃತಿಕ ಅನ್ಯನತೆಯನ್ನೇ ಅಲ್ಲಗಳೆಯುವುದು. ಎಂದರೆ ತೌಲನಿಕ ಸಾಹಿತ್ಯದ ಪರಿಕಲ್ಪನೆಗೆ ಒಂದು ಅಂತಾರಾಷ್ಟ್ರೀಯ ಆಯಾಮವಿದೆ. ಭಾಷೆ-ಕುಲ-ಸಂಸ್ಕೃತಿ-ಧರ್ಮ ಇವುಗಳಿಂದಾಗಿ ಒಡೆದು ಹೋಗಿರುವ ಮಾನವ ಜಾತಿಯ ಏಕತೆಯನ್ನು ಪ್ರತಿಷ್ಠಾಪಿಸುವುದು. ಯಾವ ಕಾಲದಲ್ಲಿ ಯಾವ ಭೌಗೋಳಿಕ ಪ್ರದೇಶದಲ್ಲಿಯೇ ಆಗಲಿ ಯಾವ ಭಾಷೆಯಲ್ಲಿಯೇ ಅಭಿವ್ಯಕ್ತಗೊಂಡಿರಲಿ, ಮಾನವನ ಮೂಲಭೂತ ಅನುಭವಗಳು ಸಮಸ್ಯೆಗಳು, ತೊಡಕುಗಳು, ಆಸೆ ಆಕಾಂಕ್ಷೆಗಳು ಒಂದೇ ಆಗಿಲ್ಲದಿದ್ದರೂ ಸಮಾನವಾಗಿರುತ್ತವೆ; ಮತ್ತು ಇಂತಹ ಸಮಾನತೆಯನ್ನು ನಾವು ಸಾಹಿತ್ಯಗಳ ತೌಲನಿಕ ಅಧ್ಯಯನದಿಂದ ಗುರುತಿಸಬಹುದು. ಇದು ತೌಲನಿಕ ಸಾಹಿತ್ಯದ ಮುಖ್ಯ ಗೃಹೀತ. ‘ಬಿಡಿಬಿಡಿಯಾಗಿ ಕಾಣುವ ವಿವಿಧ ಯುಗಗಳ ಹಾಗೂ ಸಂಸ್ಕೃತಿಗಳ ಆಳದಲ್ಲಿ ಸ್ಪಷ್ಟವಾಗಿ ಕಂಡುಬರುವ ಏಕತೆಯನ್ನು ಗುರುತಿಸುವುದು ತೌಲನಿಕ ಸಾಹಿತ್ಯದ ಒಂದು ಮುಖ್ಯ ಗುರಿ’ ಎಂದು ಅವರ್‌ಬಾಕ್ (Aurebach) ಹೇಳುತ್ತಾನೆ. ‘ತೌಲನಿಕ ಸಾಹಿತ್ಯದ ಅಧ್ಯಯನವೆಂದರೆ ಎಲ್ಲಾ ಸಾಹಿತ್ಯಿಕ ಸೃಷ್ಟಿಯೂ ಮತ್ತು ಸಾಹಿತ್ಯಾನುಭವವೂ ಸಮಾನವಾಗಿರುತ್ತದೆ ಎಂಬ ಅರಿವಿನಿಂದ ಮೂಡುವ ಅಧ್ಯಯನ’ ಎಂದು ರೆನೆವೆಲೆಕ್ (Rene Wellek) ಘೋಷಿಸುತ್ತಾನೆ. ವೈಯಕ್ತಿಕ ಹಾಗೂ ರಾಷ್ಟ್ರೀಯ ಸೃಷ್ಟಿಯೆಂದು ಭಾವಿಸಲಾಗುವ ಸಾಹಿತ್ಯಕ್ಕೆ ತೌಲನಿಕ ಸಾಹಿತ್ಯ ಒಂದು ಅಂತಾರಾಷ್ಟ್ರೀಯ ಆಯಾಮವನ್ನು ಕಲ್ಪಿಸುತ್ತದೆ ಎಂದು ಹೆನ್ರಿ ರೆಮಾಕ್ (Henry Remark) ಅಭಿಪ್ರಾಯ ಪಡುತ್ತಾನೆ.

ತೌಲನಿಕ ಸಾಹಿತ್ಯದ ಎರಡನೆಯ ಪ್ರಮುಖ ಗೃಹೀತವೆಂದರೆ ಒಂದು ಸಾಹಿತ್ಯ ಕಾಲ ದೇಶಗಳಿಂದ ನಿರ್ಬಂಧಿತವಾಗಿರುವಂತೆಯೇ ಕಾಲದೇಶಾತೀತವೂ ಆಗಿರುತ್ತದೆ ಎಂಬುದು. ಈ ಕಾರಣದಿಂದಲೇ ಒಂದು ವರ್ಗದ ಎಡಪಂಥೀಯ ಚಿಂತಕರು ತೌಲನಿಕ ಸಾಹಿತ್ಯದ ಪರಿಕಲ್ಪನೆಯನ್ನೇ ವಿರೋಧಿಸುತ್ತಾರೆ. ಅವರ ದೃಷ್ಟಿಯಲ್ಲಿ ಒಂದು ಕೃತಿ ಅದು ಸಾಹಿತ್ಯಕವಾಗಿರಬಹುದು ಅಥವಾ ಧಾರ್ಮಿಕ, ರಾಜಕೀಯವಾಗಿರಬಹುದು. ಅದು ನಿರ್ಮಾಣಗೊಂಡ ವಿಶಿಷ್ಟ ಸಾಮಾಜಿಕ ಸಾಂಸ್ಕೃತಿಕ ಅಂಶಗಳಿಂದ ರೂಪಿಸಲ್ಪಡುತ್ತದೆ. ಆದ್ದರಿಂದ ಅದನ್ನು ರೂಪಿಸಿದ ವಿಶಿಷ್ಟ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭದಿಂದ ಆ ಕೃತಿಯನ್ನು ಹೊರತಾಗಿಸಿ ಅದನ್ನು ಕಾಲದೇಶಾತೀತವೆಂಬಂತೆ ನೋಡಲು ಸಾಧ್ಯವೇ ಇಲ್ಲ. ಮಾನವ ಸಹಜ ಮೂಲಭೂತ ಅನುಭವವೆಂಬುದೇ ಒಂದು ಭ್ರಮೆ.

ಈ ಆಕ್ಷೇಪಕ್ಕೆ ತೌಲನಿಕ ಚಿಂತಕರು ಹೀಗೆ ಉತ್ತರಿಸುತ್ತಾರೆ : ನಿಜ, ಒಂದು ಕೃತಿ ಒಂದು ವಿಶಿಷ್ಟ ಸಂದರ್ಭದಲ್ಲಿಯೇ ನಿರ್ಮಿಸಲ್ಪಡುತ್ತದೆ. ಆದರೆ, ಅದೊಂದು ಉತ್ತಮ ಕೃತಿಯಾಗಿದ್ದರೆ ತನ್ನ ಸಾಂದರ್ಭಿಕ ವಿಶಿಷ್ಟತೆಯನ್ನು ಮತ್ತು ತಾತ್ಕಾಲೀನತೆಯನ್ನು ಮೀರುತ್ತದೆ. ಹಾಗಿಲ್ಲದಿದ್ದರೆ, ಅದೊಂದು ದಾಖಲೆ ಮಾತ್ರವಾಗುತ್ತಿತ್ತು ಮತ್ತು ದಾಖಲೆಗಳನ್ನು ಇತಿಹಾಸಜ್ಞರು ಅಧ್ಯಯನ ಮಾಡುತ್ತಾರೆ. ನಾವೂ ಅದೇ ಕೆಲಸವನ್ನು ಮಾಡಬೇಕಿಲ್ಲ. ಸಮಕಾಲೀನತೆ ಮತ್ತು ಸಾರ್ವಕಾಲಿಕತೆ ಇವೆರಡೂ ಒಂದು ಶ್ರೇಷ್ಠ ಸಾಹಿತ್ಯಕ ಕೃತಿಯಲ್ಲಿ ಅವಿನಾಭಾವದಿಂದ ಮೇಳೈಸಿಕೊಂಡಿರುತ್ತವೆ.

ಅಲ್ಲದೆ, ತೌಲನಿಕ ಸಾಹಿತ್ಯದ ಅಂತಿಮ ಗುರಿಯೂ ಒಂದು ಕೃತಿಯನ್ನು/ಒಂದು ಸಾಹಿತ್ಯವನ್ನು ರೂಪಿಸಿದ ವಿಶಿಷ್ಟ ಸಾಮಾಜಿಕ ಸಂದರ್ಭದ ಅಧ್ಯಯನವೇ. ಎಂದರೆ ತೌಲನಿಕ ಸಾಹಿತ್ಯ ಕೇವಲ ಪರಸ್ಪರ ಸಮಾನ/ಭಿನ್ನ ಗುಣಗಳನ್ನು ಗುರುತಿಸಿ ಪಟ್ಟಿ ಮಾಡುವುದಷ್ಟೇ ಅಲ್ಲ. ಇದು ಪ್ರಾಥಮಿಕ ಹಂತ. ಮುಂದುವರಿದು, ಅಂತಹ ತೌಲನಿಕ ಅಧ್ಯಯನ ಆ ಕೃತಿಗಳನ್ನು/ಸಾಹಿತ್ಯಗಳನ್ನೂ ರೂಪಿಸಿದ ವಿಶಿಷ್ಟ ಸಾಮಾಜಿಕ ಸಾಂಸ್ಕೃತಿಕ ಸಂದರ್ಭದ ಅಧ್ಯಯನವೂ ಆಗುತ್ತದೆ. ರಾಮಾಯಣ ಹಾಗೂ ಇಲಿಯಡ್ ಮಹಾ ಕಾವ್ಯಗಳ ತೌಲನಿಕ ಚಿಂತನೆ ಕೊನೆಗೆ ಎತ್ತುವ ಅಥವಾ ಎತ್ತಬೇಕಾದ ಪ್ರಶ್ನೆಯೆಂದರೆ ಸ್ತ್ರೀಯನ್ನು ಪ್ರಾಚೀನ ಗ್ರೀಕ್ ಹಾಗೂ ಭಾರತೀಯ ಸಮಾಜಗಳು ಹೇಗೆ ಕಂಡುವು? ಮತ್ತು ಇಂತಹ ದೃಷ್ಟಿಕೋನದ ತಾತ್ವಿಕ ನೆಲೆಗಳಾವುವು? ಎಂಬುದೇ. ಅರ್ಥಾತ್, ತೌಲನಿಕ ಸಾಹಿತ್ಯವೆಂದರೆ ಕೇವಲ ಪರಸ್ಪರ ಸಮಾನ ಅಂಶಗಳ ಯಾದಿಯಲ್ಲ. ಸಮಾನ ವಸ್ತುಗಳ, ಆಶಯಗಳ, ಅಭಿವ್ಯಕ್ತಿಗಳ ಆಳದಲ್ಲಿರುವ ಭಿನ್ನತೆಗಳನ್ನು ಹಾಗೂ ಭಿನ್ನ ವಸ್ತುಗಳ, ಆಶಯಗಳ, ಅಭಿವ್ಯಕ್ತಿಗಳ ಆಳದಲ್ಲಿರುವ ಸಮಾನತೆಗಳನ್ನು ಗುರುತಿಸುವುದು; ಮತ್ತು ಅನಂತರ ಇಂತಹ ಸಮಾನ/ಭಿನ್ನ ಅಂಶಗಳನ್ನು ಸಾಂಸ್ಕೃತಿಕ/ವೈಚಾರಿಕ ನೆಲೆಯಲ್ಲಿ ಅರ್ಥೈಸುವುದು.

ತೌಲನಿಕ ಸಾಹಿತ್ಯದ ಮತ್ತೊಂದು ಪ್ರಮುಖ ಗೃಹೀತವೆಂದರೆ ಒಂದು ಶ್ರೇಷ್ಠ ಕೃತಿ ಭಾಷೆಯ ನಿರ್ಣಾಯಕತೆಯನ್ನೂ ಮೀರುತ್ತದೆ ಎಂಬುದು. ಎಂದರೆ ಭಾಷಿಕ ಅಂಶಗಳಿಂದ ಹೊರತಾದ ಒಂದು ‘ಮೂಲಸತ್ವ’ (Essence) ಶ್ರೇಷ್ಠ ಕೃತಿಗಳಿರುತ್ತದೆ ಮತ್ತು ಈ ಮೂಲಸತ್ವ ಅನುವಾದಗಳಲ್ಲಿಯೂ ಉಳಿದುಬರುತ್ತದೆ. ಈ ಗೃಹೀತದ ನೆಲೆಯಲ್ಲಿಯೇ ತೌಲನಿಕ ಸಾಹಿತ್ಯದ ಅಧ್ಯಯನದಲ್ಲಿ ವಿವಿಧ ಭಾಷೆಗಳ ಅನುವಾದಗಳನ್ನು ಒಂದೆಡೆ ತಂದು, ಅವುಗಳು ಅನುವಾದಗಳೆಂಬ ಅಂಶವನ್ನು ನಿರ್ಲಕ್ಷಿಸಿ, ಅವುಗಳನ್ನು ಕುರಿತ ಚಿಂತನೆ ನಡೆಯುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ತೌಲನಿಕ ಸಾಹಿತ್ಯದ ಮುಖ್ಯ ಗುರಿ ಸಾಹಿತ್ಯಾಧ್ಯಯನದಲ್ಲಿ ಪ್ರತ್ಯೇಕತೆಯನ್ನು ವಿರೋಧಿಸುತ್ತಾ ಅನನ್ಯತೆಗೆ ಬದಲಾಗಿ ಸಾಧಾರಣತೆಯನ್ನು ಗುರುತಿಸಿ, ಆ ಮೂಲಕ ನಮ್ಮ ಅರಿವಿನ ಎಲ್ಲೆಗಳನ್ನು ವಿಸ್ತರಿಸುವುದು. ಈ ದಿಕ್ಕಿನಲ್ಲಿ ಟಾಗೋರ್ ಈ ಶತಮಾನದ ಆದಿಯಲ್ಲಿ ಹೇಳಿದ ಮಾತುಗಳು ಇಂದಿಗೂ-ಹೆಚ್ಚಾಗಿ ಇಂದಿನ ವಿಶ್ವದ ಹಾಗೂ ಭಾರತದ ಸಂದರ್ಭದಲ್ಲಿ – ಪ್ರಸ್ತುತವೆನಿಸುತ್ತವೆ. “ಸಾಹಿತ್ಯವೆಂದರೆ ಭಿನ್ನ ಭಿನ್ನ ಕೃತಿಗಳ ಒಂದು ಮೊತ್ತವಲ್ಲ… ಸೀಮಿತ ದೇಶೀಯತೆಯ ಚೌಕಟ್ಟಿನಿಂದ ನಾವು ಹೊರಬಂದು, ಪ್ರತಿಯೊಬ್ಬ ಲೇಖಕನ ಕೃತಿಯನ್ನು ಅಖಂಡತೆಯ ಒಂದು ಭಾಗವೆಂದೂ, ಆ ಅಖಂಡತೆಯನ್ನು ಮಾನವನ ವಿಶ್ವವ್ಯಾಪಿ ಸೃಜನಶೀಲತೆಯ ಒಂದು ರೂಪವೆಂದೂ, ಮತ್ತು ವಿಶ್ವ ಶಕ್ತಿಯು ವಿಶ್ವ ಸಾಹಿತ್ಯದ ಮೂಲಕ ಪ್ರಕಟವಾಗುತ್ತದೆಂದೂ ಗ್ರಹಿಸಲು ನಾವು ಸದಾ ಪ್ರಯತ್ನಿಸಬೇಕು.”

ವಿಶೇಷತಃ ಪೂರ್ವ ವಸಾಹತುಗಳಾಗಿದ್ದ ಭಾರತದಂತಹ ರಾಷ್ಟ್ರಗಳಲ್ಲಿ ತೌಲನಿಕ ಸಾಹಿತ್ಯದ ಅಧ್ಯಯನವು ಹೆಚ್ಚು ಪ್ರಸ್ತುತವೆಂದೂ, ಅದೊಂದು ಗಂಭೀರ ಸಾಂಸ್ಕೃತಿಕ ಜವಾಬ್ದಾರಿಯೆಂದೂ ಭಾರತೀಯ ವಿದ್ವಾಂಸರಾದ ಆಮಿಯಾ ದೇವ್, ಹರಭಜನ್ ಸಿಂಗ್ ಮುಂತಾದವರು ವಾದಿಸುತ್ತಾರೆ. ವಸಾಹತುಶಾಹಿಯ ಅತ್ಯಂತ ಘೋರ ಕಾರ್ಯವೆಂದರೆ ಅದು ಅಧೀನ ರಾಷ್ಟ್ರದಲ್ಲಿ ತನ್ನ ಪ್ರಾಚೀನ ಸಾಹಿತ್ಯ-ಸಂಸ್ಕೃತಿಗಳ ಬಗ್ಗೆ ತಿರಸ್ಕಾರವನ್ನುಂಟುಮಾಡಿ, ಎಲ್ಲದ್ದಕ್ಕೂ ಆಳುವ ಸಾಹಿತ್ಯ-ಸಂಸ್ಕೃತಿಗಳ ಕಡೆಗೆ ಮುಖ ಮಾಡಿ, ಒಂದು ವಿಧದ ಸಾಂಸ್ಕೃತಿಕ ಕೀಳರಿಮೆಯಿಂದ ನರಳುವಂತೆ ಮಾಡುವುದು. ಇಂತಹ ಸಂದರ್ಭದಲ್ಲಿ, ಪರಾಧೀನ ಸಂಸ್ಕೃತಿ ಹಾಗೂ ವಸಾಹತುಶಾಹಿ ಸಂಸ್ಕೃತಿ ಇವುಗಳ ನಡುವಿನ ಸಮಾನ ಅಂಶಗಳನ್ನು ಗುರುತಿಸುವುದೂ ಕೂಡಾ. ರಂಗಭೂಮಿಯ ಬಗ್ಗೆ ಅರಿಸ್ಟಾಟಲ್‌ನಷ್ಟೇ ಗಂಭೀರವಾಗಿ, ಆಳವಾಗಿ ಭರತನೂ ಚಿಂತಿಸಿದ್ದಾನೆ ಎಂದು ಅರಿಯುವುದು ಕೂಡಾ ಸಾಂಸ್ಕೃತಿಕ ದಾಸ್ಯದಿಂದ ಹೊರ ಬಂದು ಆತ್ಮ ವಿಶ್ವಾಸವನ್ನು ಗಳಿಸುವ ಒಂದು ಪ್ರಮುಖ ಸಾಧನವಾಗುತ್ತದೆ. ಇಂತಹ ಅರಿವು ತೌಲನಿಕ ಸಾಹಿತ್ಯದಿಂದ ಮಾತ್ರ ಸಾಧ್ಯ.

ತೌಲನಿಕ ಸಾಹಿತ್ಯದ ಮುಖ್ಯ ಪ್ರಕಾರಗಳನ್ನು ಹೀಗೆ ಗುರುತಿಸಬಹುದು.

೧. ವಸ್ತು ಸಮಾನತೆಯನ್ನಾಧರಿಸಿದ ಅಧ್ಯಯನ, (Thematic Studies ಅಥವಾ Thematics)
೨. ಪ್ರಭೇದ ಅಧ್ಯಯನ (Genre Study ಅಥವಾ Genology)
೩. ಪ್ರಭಾವ ಅಧ್ಯಯನ (Influence Studies)
೪. ತೌಲನಿಕ ಕಾವ್ಯ ಮೀಮಾಂಸೆ (Comparative Poetics)
೫. ಭಾಷಾಂತರ ಅಧ್ಯಯನ (Translation Studies)

. ವಸ್ತು ಸಮಾನತೆಯನ್ನಾಧರಿಸಿದ ಅಧ್ಯಯನ

ತೌಲನಿಕ ಸಾಹಿತ್ಯದ ಅತ್ಯಂತ ವ್ಯಾಪಕ ಹಾಗೂ ಜನಪ್ರಿಯ ಪ್ರಕಾರ ಇದು. ಇಂತಹ ಅಧ್ಯಯನದಲ್ಲಿ ಯಾವುದೋ ಒಂದು ಸಮಾನ ವಸ್ತು ಅಥವಾ ವಿಷಯ ಅಥವಾ ಅಂತರ್ಭಾವವನ್ನು (Motif) ಆಧರಿಸಿ, ವಿವಿಧ ಭಾಷೆಗಳಲ್ಲಿ ಮತ್ತು ವಿವಿಧ ಕಾಲಘಟ್ಟಗಳಲ್ಲಿ ರಚಿಸಲ್ಪಟ್ಟಿರುವ ಅನೇಕ ಕೃತಿಗಳನ್ನು ಒಂದೆಡೆ ತಂದು, ಅವುಗಳನ್ನು ವಿಶ್ಲೇಷಿಸಿ, ಅವುಗಳು ಆ ವಸ್ತುವನ್ನು/ವಿಷಯವನ್ನು ಅಂತರ್ಭಾವವನ್ನು ಬೆಳೆಸಿರುವ ಬಗೆಯಲ್ಲಿರುವ ಸಾಮ್ಯ ವೈಷಮ್ಯಗಳನ್ನು ಗುರುತಿಸಿ, ಅವುಗಳ ಆಧಾರದ ಮೇಲೆ ಆ ಕೃತಿಗಳು ಸೃಜಿಸಲ್ಪಟ್ಟ ಸಮಾಜ-ಸಂಸ್ಕೃತಿಗಳ ಬಗ್ಗೆ ವ್ಯಾಪಕ ಚಿಂತನೆ ನಡೆಸಲು ಅವಕಾಶವಿರುತ್ತದೆ.

ಉದಾಹರಣೆಗೆ, ವಿವಾಹ, ಬಾಲ್ಯ, ಮುಪು, ಅಧಿಕಾರ ಮುಂತಾದ ಯಾವುದಾದರೂ ಒಂದು ವಸ್ತುವನ್ನಾಧರಿಸಿ ಅದೇ ವಸ್ತುವನ್ನು ಕೇಂದ್ರವಾಗುಳ್ಳ ವಿವಿಧ ಕೃತಿಗಳನ್ನು ಒಂದೆಡೆ ತರಬಹುದು. ಅಥವಾ ಕಾವ್ಯದಲ್ಲಿ ಪ್ರಕೃತಿಯ ಸ್ಥಾನ, ಮಹಾ ಕಾವ್ಯಗಳಲ್ಲಿ ದೈವತ್ವದ ಪರಿಕಲ್ಪನೆ, ಭೂಮಿ ಮತ್ತು ಒಡೆತನದ ಪ್ರಶ್ನೆ ಇತ್ಯಾದಿ ಒಂದು ವಿಷಯವನ್ನು ಕೇಂದ್ರವಾಗುಳ್ಳ ವಿವಿಧ ಭಾಷೆಗಳ ಕಾವ್ಯಗಳನ್ನು/ಕಾದಂಬರಿಗಳನ್ನು/ನಾಟಕಗಳನ್ನು ಒಂದೆಡೆ ತಂದು ಅವುಗಳನ್ನು ತುಲನಾತ್ಮಕವಾಗಿ ಅಭ್ಯಸಿಸಬಹುದು, ಅಥವಾ ವಿವಿಧ ಕಥಾನಕಗಳಲ್ಲಿ ಪರಿಭ್ರಮಣೆಯ ಪರಿಕಲ್ಪನೆ, ಮಹಾಕಾವ್ಯಗಳಲ್ಲಿ/ನಾಟಕಗಳಲ್ಲಿ ಛದ್ಮವೇಷದ ಸ್ವರೂಪ (Motif of Disguise), ಸಾಮಾಜಿಕ ಸಂಸ್ಥೆಗಳಲ್ಲಿ, ಸ್ತ್ರೀ-ಪುರುಷ ಸಂಬಂಧಗಳಲ್ಲಿ ವಿಪರ್ಯಯ (Motif of Inversion) ಇತ್ಯಾದಿ ಸಮಾನ ಅಂತರ್ಭಾವವನ್ನಾಧರಿಸಿ ಅನೇಕ ಕೃತಿಗಳನ್ನು ತುಲನಾತ್ಮಕವಾಗಿ ಅಭ್ಯಸಿಸಬಹುದು.

ಇಂತಹ ವಸ್ತು/ವಿಷಯ/ಅಂತರ್ಭಾವ ಸಮಾನತೆಯನ್ನಾಧರಿಸಿದ್ದ ತೌಲನಿಕ ಅಧ್ಯಯನದಿಂದ ಎರಡು ನೆಲೆಗಳಲ್ಲಿ ನಮಗೆ ಪ್ರಯೋಜನವಾಗುತ್ತದೆ. ಒಂದು ಸಮಾನ ವಸ್ತುವನ್ನು ವಿವಿಧ ಸಮಾಜಗಳು ನೋಡುವ ಕೋನಗಳು ಬೇರೆ ಬೇರೆಯಾಗಿರುವುದರಿಂದ, ಆ ವಸ್ತುವಿನ ಸಂಪೂರ್ಣ ಅಥವಾ ಬಹುಮುಖೀ ಅರಿವು ನಮಗೂ ಉಂಟಾಗುತ್ತದೆ. ಹಾಗೆಯೇ ಸಮಾನ ವಸ್ತುವನ್ನು ಭಿನ್ನಭಿನ್ನ ನೆಲೆಗಳಲ್ಲಿ ಭಿನ್ನ ಸಮಾಜಗಳು ವಿಶ್ಲೇಷಿಸಿರುವುದರಿಂದ, ಹಾಗೂ ಚಿತ್ರಿಸಿರುವುದರಿಂದ, ಆಯಾಯ ಸಮಾಜಗಳ ಪ್ರಮುಖ ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕಾಳಜಿಗಳೂ ನಮ್ಮ ಅರಿವಿಗೆ ಬರುತ್ತದೆ.

ತೌಲನಿಕ ಸಾಹಿತ್ಯಾಧ್ಯಯನ ಎಷ್ಟು ರೋಚಕವಾಗಿರಬಲ್ಲದು, ಎಂಬುದಕ್ಕೆ ನಿದರ್ಶನವಾಗಿ ಕೆಲವು ಸಾಧ್ಯತೆಗಳನ್ನು ಸ್ಥೂಲವಾಗಿ ನೋಡೋಣ. ಗ್ರೀಕ್ ಮಹಾ ಕಾವ್ಯಗಳಾದ ‘ಇಲಿಯಡ್’ ಹಾಗೂ ‘ಒಡಿಸ್ಸಿ’ ಮತ್ತು ಭಾರತೀಯ ಮಹಾಕಾವ್ಯಗಳಾದ ‘ರಾಮಾಯಣ’ ಹಾಗೂ ‘ಮಹಾಭಾರತ’ ಇವುಗಳನ್ನು ಅನೇಕ ನೆಲೆಗಳಲ್ಲಿ ವಿದ್ವಾಂಸರು ತುಲನಾತ್ಮಕವಾಗಿ ಅಭ್ಯಸಿಸಿದ್ದಾರೆ. ಇಂತಹ ಸಾಧ್ಯ ಅಧ್ಯಯನಗಳಲ್ಲಿ ಒಂದು ಈ ಕಾವ್ಯಗಳಲ್ಲಿ ಪ್ರಮುಖ ಸ್ತ್ರೀ ಪಾತ್ರದ ಚಿತ್ರಣ. ಇಲಿಯಡ್ ಮತ್ತು ರಾಮಾಯಣ ಇವೆರಡು ಮಹಾಕಾವ್ಯಗಳಲ್ಲಿಯೂ ಸ್ತ್ರೀಯ ಕಾರಣದಿಂದಾಗಿ, ಸ್ತ್ರೀ ವ್ಯಾಮೋಹದಿಂದಾಗಿ ಎರಡು ರಾಜ್ಯಗಳ ನಡುವೆ ಯುದ್ಧ ಏರ್ಪಟ್ಟು ಒಂದು ರಾಜ್ಯ ನಿರ್ಣಾಯಕವಾಗಿ ಸೋಲುತ್ತದೆ. ಗ್ರೀಕ್ ಮಹಾಕಾವ್ಯದಲ್ಲಿ ಟ್ರಾಯ್ ರಾಜ್ಯ, ಭಾರತೀಯ ಮಹಾ ಕಾವ್ಯದಲ್ಲಿ ಶ್ರೀಲಂಕೆ.

ಆದರೆ ಈ ಸಮಾನ ವಸ್ತುವನ್ನು ಎರಡು ಕೃತಿಗಳು ಭಿನ್ನ ರೀತಿಯಲ್ಲಿ ಭಿನ್ನ ತಾತ್ವಿಕ ಧ್ವನಿಗಳೊಡನೆ ಬೆಳೆಸುತ್ತವೆ. (ತೌಲನಿಕ ಸಾಹಿತ್ಯಾಧ್ಯಯನದಲ್ಲಿ ಸ್ಥೂಲವಾಗಿ ಸಮಾನವಾಗಿರುವ ವಸ್ತುಗಳ/ವಿಷಯಗಳ ಚಿತ್ರಣದಲ್ಲಿ ಕಂಡು ಬರುವ ‘ಭಿನ್ನತೆ’ಗಳೇ ತುಂಬಾ ಮುಖ್ಯ ಹಾಗೂ ಅರ್ಥಪೂರ್ಣ.) ತಾನು ವಿವಾಹಿತಳಾಗಿ ಒಂದು ರಾಜ್ಯದ ರಾಣಿಯಾಗಿದ್ದರೂ ಹೆಲನ್ ಮತ್ತೊಂದು ರಾಜ್ಯದ (ಟ್ರಾಯ್ ನಗರದ) ರಾಜಕುಮಾರ ಪ್ಯಾರಿಸ್‌ನನ್ನು ಪ್ರೀತಿಸಿ, ಅವನೊಡನೆ ಓಡಿ ಹೋಗಿ ಹತ್ತು ವರ್ಷಗಳ ಕಾಲ ನಡೆದು ಕೊನೆಗೆ ಇಡೀ ಟ್ರಾಯ್ ರಾಜ್ಯದ ಪತನಕ್ಕೆ ಕಾರಣವಾದ ಯುದ್ಧಕ್ಕೆ ಮೂಲಕಾರಣವಾಗುತ್ತಾಳೆ. (ಇದು ಕಾವ್ಯದಲ್ಲಿ : ವಾಸ್ತವಿಕವಾಗಿ ಗ್ರೀಕ್ ರಾಷ್ಟ್ರಗಳಿಗೂ ಟ್ರಾಯ್ ರಾಷ್ಟ್ರಕ್ಕೂ ದೇಶ ದೇಶಗಳೊಡನಾಗುವ ಸಮುದ್ರ ಯಾನವನ್ನಾಧರಿಸಿದ ವ್ಯಾಪಾರ ವಾಣಿಜ್ಯ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ ಇದ್ದಿತು. ಹೆಲನ್ ಪ್ರಕರಣ ಒಂದು ಸುಲಭ ನೆಪವಾಯಿತು) ಇಲ್ಲಿ ಗಮನಿಸಬೇಕಾದ ಸೋಜಿಗದ ಸಂಗತಿಯೆಂದರೆ, ತನ್ನ ವೈಯಕ್ತಿಕ ಲಾಲಸೆಯಿಂದ ಸಾವಿರಾರು ಜನರ ಪ್ರಾಣಹಾನಿಗೆ ಕಾರಣಳಾದ ಹೆಲನ್ ಮಾತ್ರ ಟ್ರಾಯ್ ನಗರದ ಪತನದ ನಂತರ ಏನೂ ನಡೆದಿರದ ಹಾಗೆ ಮರಳಿ ತನ್ನ ಪತಿ ಮೆನಲಸ್‌ನೊಡನೆ ತನ್ನ ರಾಜ್ಯಕ್ಕೆ ಹಿಂತಿರುಗಿ ಜೀವನ ನಡೆಸುತ್ತಾಳೆ.

ಆದರೆ, ಸೀತೆ? ಸೀತೆ ಅಪಹರಿಸಲ್ಪಟ್ಟವಳು ಮತ್ತು ಎಂತಹ ವಿಷಮ ಪರಿಸ್ಥಿತಿಯಲ್ಲಿಯೂ ರಾವಣನಿಗೆ ಮನಸೋಲದೇ ಸದಾ ರಾಮನನ್ನು ಧ್ಯಾನಿಸುತ್ತಿರುವವಳು. ಅಂತಹ ಸೀತೆ ಲಂಕಾಯುದ್ಧದ ನಂತರ ತನ್ನ ಪಾವಿತ್ರ್ಯವನ್ನು ದೃಢಪಡಿಸಲು ಅಗ್ನಿಪ್ರವೇಶ ಮಾಡಬೇಕಾಗುತ್ತದೆ. ಅಷ್ಟಾಗಿಯೂ ಅನಂತರ ಕಾರಣ ಏನೇ ಇರಲಿ ತನ್ನ ಪತಿಯಿಂದ ತ್ಯಜಿಸಲ್ಪಡುತ್ತಾಳೆ. ಮಹಾರಾಣಿಯಾಗಿದ್ದರೂ ಅನಾಥೆಯಂತೆ ಕಾಡಿನಲ್ಲಿ ಮಕ್ಕಳಿಗೆ ಜನ್ಮ ಕೊಡುತ್ತಳೆ.

ಸ್ತ್ರೀಯ ಈ ಎರಡು ಚಿತ್ರಗಳು ಸಮಾಜ ಹಾಗೂ ಸಂಸ್ಕೃತಿಗಳ ಬಗ್ಗೆ ಯಾವ ಒಳನೋಟಗಳನ್ನು ಕೊಡಬಹುದು? ಅರ್ಷೇಯ ಭಾರತೀಯ ಸಮಾಜದಲ್ಲಿ ಗ್ರೀಕ್ ಸಮಾಜಕ್ಕಿಂತ ಹೆಚ್ಚಾಗಿ ಪುರುಷ ಕೇಂದ್ರಿತ ಮೌಲ್ಯಗಳು ವ್ಯಾಪಕವಾಗಿದ್ದುವು ಎಂದು ಹೇಳಬಹುದೆ? ಅಥವಾ ವಿವಾಹವೆಂಬ ಸಾಮಾಜಿಕ ಸಂಸ್ಥೆಗೆ ಗ್ರೀಕ್ ಸಮಾಜದ ಹೋಲಿಕೆಯಲ್ಲಿ ಭಾರತೀಯ ಸಮಾಜ ಹೆಚ್ಚು ಮಹತ್ವ ಕೊಟ್ಟಿತೆಂದು ತೀರ್ಮಾನಿಸಬಹುದೆ? ಗ್ರೀಕ್ ಸಮಾಜದಲ್ಲಿ ಅಂದು (ಕ್ರಿ.ಪೂ. ೭-೮ನೆಯ ಶತಮಾನಗಳ ಕಾಲದಲ್ಲಿ) ಸಮಷ್ಟಿಗಿಂತ ವ್ಯಕ್ತಿಗೆ ಹೆಚ್ಚು ಸ್ವಾತಂತ್ರ್ಯವಿದ್ದಿತೆ? ಉತ್ತರಗಳಿಗಾಗಿ ಈ ಪ್ರಶ್ನೆಗಳು ನಮ್ಮನ್ನು ಇತಿಹಾಸ, ಸಮಾಜ ಶಾಸ್ತ್ರಗಳಂತಹ ಇತರ ಮಾನವಿಕ ಕ್ಷೇತ್ರಗಳಿಗೆ ಒಯ್ಯುತ್ತವೆ. ಎಂದರೆ, ತೌಲನಿಕ ಸಾಹಿತ್ಯಾಭ್ಯಾಸ, ಸಂಶೋಧಕನ ಸಾಮರ್ಥ್ಯ ಹಾಗೂ ಅಭಿರುಚಿ ಇವುಗಳನ್ನವಲಂಬಿಸಿ, ವ್ಯಾಪಕ ಅಂತಃಶಾಸ್ತ್ರೀಯ ಅಧ್ಯಯನವಾಗುವ ಸಾಧ್ಯತೆಗಳು ಅಪಾರ.

‘ರಾಮಾಯಣ’ದ ವಿಶ್ಲೇಷಣೆ ಭಾರತೀಯ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಮತ್ತೊಂದು ಅರ್ಥಪೂರ್ಣ ಒಳನೋಟವನ್ನು ಕೊಡುತ್ತದೆ. ಇಲ್ಲಿ ತಂದೆ ದಶರಥ ಮಗ ರಾಮನ ಸುಖಕ್ಕೆ, ಅಧಿಕಾರಕ್ಕೆ ಅಡ್ಡಿ ಬರುತ್ತಾನೆ. ಎಂದರೆ, ತಂದೆ-ಮಗ ಈ ಎರಡು ಪೀಳಿಗೆಗಳಲ್ಲಿ ಸಾಧಾರಣವಾಗಿ ಭಾರತೀಯ ಪುರಾಣ ಸಾಹಿತ್ಯಗಳಲ್ಲಿ ತಂದೆ ಮಗನನ್ನು ಕೊಲ್ಲುತ್ತಾನೆ. ಯಯಾತಿಗಾಗಿ ಪುರು ತನ್ನ ಯೌವನವನ್ನು ಕಳೆದುಕೊಳ್ಳುತ್ತಾನೆ. ತಂದೆಯ ಸಮಾನನಾದ ಅಣ್ಣನಿಂದಾಗಿ ಭೀಮಾರ್ಜುನರಾದಿಯಾಗಿ ತಮ್ಮಂದಿರು ತಮ್ಮ ರಾಜ್ಯವನ್ನು ಕಳೆದುಕೊಳ್ಳುತ್ತಾರೆ.

ಇಂತಹ ಭಾರತೀಯ ಯಯಾತಿ ಪ್ರತೀಕಕ್ಕೆ (ಯಯಾತಿ ಆರ್ಕಿರ್ಟೈಪ್) ವಿರುದ್ಧವಾಗಿ ಗ್ರೀಕ್ ಪುರಾಣಗಳು ಹಾಗೂ ಸಾಹಿತ್ಯದಲ್ಲಿ ‘ಈಡಿಪಸ್’ ಪ್ರತೀಕ ವ್ಯಾಪಕವಾಗಿ ಕಂಡುಬರುತ್ತದೆ. ಈಡಿಪಸ್ ತನ್ನ ತಂದೆಯನ್ನು ಕೊಲ್ಲುತ್ತಾನೆ. (ಅಜ್ಞಾನದಲ್ಲಿ ಎಂಬುದು ನಿಜ ಆದರೆ ಈ ಸಂದರ್ಭದಲ್ಲಿ ಅದು ಮುಖ್ಯವಲ್ಲ.) ಹಾಗೆಯೇ ಒರಿಸ್ಟಿಸ್ ತನ್ನ ತಾಯಿ ಕ್ಲೈಟಮ್ನೆಸ್ಟ್ರಾಳನ್ನು ಕೊಲ್ಲುತ್ತಾನೆ. ಎಂದರೆ, ಹಳೆಯ ಹೊಸ ಪೀಳಿಗೆಗಳ ಸಂದರ್ಭದಲ್ಲಿ, ಸಾಧಾರಣವಾಗಿ, ಪಾಶ್ಚಾತ್ಯ ಸಮಾಜದಲ್ಲಿ ಹೊಸ ಪೀಳಿಗೆಗೆ ಜಯವಾದರೆ, ಭಾರತೀಯ ಮತ್ತಿತರ ಪೌರ್ವಾತ್ಯ ಸಮಾಜಗಳಲ್ಲಿ (ಈ ಸಂದರ್ಭದಲ್ಲಿ ಪರ್ಶಿಯನ್ ಮಹಾ ಕಾವ್ಯದ ಒಂದು ಭಾಗದಲ್ಲಿ ರುಸ್ತುಂ ತನ್ನ ಮಗ ಸೊಹ್ರಾಭ್‌ನನ್ನು ಕೊಲ್ಲುವುದನ್ನು ಗಮನಿಸಬಹುದು) ಹಳೆಯ ಪೀಳಿಗೆಗೆ ಜಯವಾಗುತ್ತದೆ. ಈ ಅಂಶವನ್ನು ಮೊದಲಿಗೆ ದೀರ್ಘವಾಗಿ ಚರ್ಚಿಸಿದವರು ಎ.ಕೆ. ರಾಮಾನುಜನ್. ಈ ಕಾರಣದಿಂದಲೇ, ಎಂದರೆ ಹಳೆಯ ಪೀಳಿಗೆಗೆ, ವಯಸ್ಸಿಗೆ ಕೊಡುವ ಅತಿ ಹೆಚ್ಚು ಗೌರವದ ಕಾರಣದಿಂದಲೇ ಪಾಶ್ಚಾತ್ಯ ರಾಷ್ಟ್ರಗಳ ಹೋಲಿಕೆಯಲ್ಲಿ ಪೌರ್ವಾತ್ಯ ರಾಷ್ಟ್ರಗಳು ಹೆಚ್ಚು ಸಂಪ್ರದಾಯ ಶೀಲವಾಗಿವೆಯೆಂದು ಹೇಳಬಹುದೆ? ಅನಂತಮೂರ್ತಿಯವರು ‘ಪ್ರಶ್ನೆ’ “ಕ್ಲಿಪ್ ಜಾಯಿಂಟ್” “ಘಟಶ್ರಾದ್ಧ” ಮುಂತಾದ ಅನೇಕ ಯಶಸ್ವೀ ಕಥೆಗಳ ಆಳದಲ್ಲಿ ಈ ಯಯಾತಿ ಪ್ರತೀಕವು ಕಾರ್ಯ ಮಾಡುವುದನ್ನು ನಾವು ಗಮನಿಸಬಹುದು.

ಹಾಗೆಯೇ ಮತ್ತೊಂದು ವಿನ್ಯಾಸವನ್ನು ನೋಡೋಣ. ‘ಛದ್ಮವೇಷ’ (Disguise) ೧೬ನೆಯ ಶತಮಾನದ ಎಲ್ಲಾ ಯೂರೋಪಿಯನ್ ನಾಟಕಗಳಲ್ಲಿಯೂ ಸಾಮಾನ್ಯವಾಗಿ ಕಂಡುಬರುವ ಒಂದು ಕಥಾ ವಿನ್ಯಾಸ, ಒಂದು ನಾಟಕ ತಂತ್ರ. ಈ ಅಂಶಕ್ಕೆ ಹೆಚ್ಚು ಸಮರ್ಥನೆ ಬೇಕಾಗಿಲ್ಲ. ಗಂಡಸಿನ ವೇಷ ಧರಿಸಿ ಬರುವ ಪೋರ್ಶಿಯಾ, ರೊಸಲಿಂಡ್, ವಯೋಲಾ ಮುಂತಾದ ಶೇಕ್ಸ್‌ಪಿಯರ್‌ನ ನಾಯಕಿಯರು ಸುಪ್ರಸಿದ್ಧ. ಆದರೆ, ಇದೇ ವಿನ್ಯಾಸವನ್ನು ನಾವು ಸಂಸ್ಕೃತ ನಾಟಕಗಳಲ್ಲಿಯೂ ಕಾಣಬಹುದು. ‘ಪ್ರಿಯದರ್ಶಿನಿಯಲ್ಲಿ’ ವತ್ಸರಾಜ ನಾಟಕದ ‘ವತ್ಸರಾಜ’ನಾಗಿ ಒಂದು ಮುಖ್ಯ; ನಾಟಕೀಯ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಾನೆ. ಹಾಗೆಯೇ, ‘ವಿಧಸಾಲ ಭಂಜಿಕಾ’ ನಾಟಕದಲ್ಲಿ ಸ್ತ್ರೀಯೊಬ್ಬಳು ಮೊದಲು ಪುರುಷ ವೇಷಧರಿಸಿ, ಅನಂತರ ಮತ್ತೆ ಸ್ತ್ರೀಯಂತೆ ‘ನಟಿಸುವ’ ಸಂದರ್ಭ ಬರುತ್ತದೆ. ಈ ಅಂಶ ನಮ್ಮ ಗಮನಕ್ಕೆ ಬಂದಾಗ, ‘ಛದ್ಮವೇಷ ಅಥವಾ ವೇಷಾಂತರ’ವೆಂಬುದು ಕೇವಲ ಶೇಕ್ಸ್ ಪಿಯರ್‌ನ ನಾಟಕಗಳ ಅಥವಾ ಇಟಾಲಿಯನ್ ನಾಟಕಗಳ ವೈಶಿಷ್ಟವಲ್ಲ, ಇದು ನಾಟಕ ಪ್ರಭೇದದಲ್ಲಿಯೇ ಹಾಸು ಹೊಕ್ಕಾಗಿರುವ ಅಂಶ ಎಂಬುದು ನಮಗೆ ಗೊತ್ತಾಗುತ್ತದೆ. ಅನಂತರ, ಈ ಅಂಶವನ್ನೇ ಮುಂದುವರಿಸುತ್ತಾ, ತನ್ನ ಸ್ವರೂಪದಲ್ಲಿಯೇ ಭ್ರಮೆಯನ್ನಾಧರಿಸಿರುವ ನಾಟಕ ಪ್ರಭೇದ ಮತ್ತೆ ಮತ್ತೆ ಭ್ರಮೆಗಳ ಜಾಲಗಳನ್ನು ನೇಯುವುದರ ತಾತ್ವಿಕ-ವೈಚಾರಿಕ ಧ್ವನಿಸಾಧ್ಯತೆಗಳೇನು? ಎಂದು ನಾವು ಚಿಂತಿಸಲು ಅನುವಾಗುತ್ತದೆ.

. ಪ್ರಭೇದ ಅಧ್ಯಯನ

ಈ ವರ್ಗದಲ್ಲಿ ಒಂದೇ ಸಾಹಿತ್ಯ ಪ್ರಭೇದಕ್ಕೆ ಸೇರುವ (ಅಥವಾ ಹೋಲಿಕೆಯಿರುವ) ವಿವಿಧ ಭಾಷೆಗಳ ಕೃತಿಗಳನ್ನು (ಮಹಾ ಕಾವ್ಯಗಳು/ನಾಟಕಗಳು/ಕಾದಂಬರಿಗಳು ಇತ್ಯಾದಿ, ಇವುಗಳಲ್ಲಿಯೂ ಉಪ ಪ್ರಭೇದಗಳನ್ನು ಪರಿಗಣಿಸಬಹುದು) ಒಂದೆಡೆ ತಂದು ಅವುಗಳನ್ನು ತುಲನಾತ್ಮಕವಾಗಿ ಅಭ್ಯಸಿಸಲಾಗುತ್ತದೆ. ಇಂತಹ ಪ್ರಭೇದದ ಅಧ್ಯಯನದಲ್ಲಿ ಒತ್ತು ಪ್ರಭೇದದ ಕಾಲಾನುಕ್ರಮ ಬೆಳವಣಿಗೆಯ ಮೇಲೆ ಮತ್ತು ಪ್ರಭೇಧ ಲಕ್ಷಣಗಳು ಭಿನ್ನತೆಗಳ ಮೇಲೆ ಬೀಳುತ್ತದೆ.

ಪ್ರಭೇದ ಅಧ್ಯಯನದಲ್ಲಿಯೂ ಇಲ್ಲಿಯವರೆಗೆ ಸಾಹಿತ್ಯಕ ವಿಮರ್ಶಾ ಕ್ಷೇತ್ರಗಳಲ್ಲಿ ಬೇರೂರಿದ ಪಶ್ಚಿಮ ಕೇಂದ್ರಿತ ನಿಲುವನ್ನು ಬದಲಾಯಿಸಬಲ್ಲ, ಸೂಕ್ತ ತಿದ್ದುಪಡಿ ಮಾಡಬಲ್ಲ ಸಾಧ್ಯತೆಗಳು ಅಪಾರ. ಉದಾಹರಣೆಗೆ ಮಹಾಕಾವ್ಯವೆಂಬ ಸಾಹಿತ್ಯ ಪ್ರಭೇದವನ್ನು ತೆಗೆದುಕೊಳ್ಳೋಣ, ಇತ್ತೀಚಿನವರೆಗೆ ಮಹಾಕಾವ್ಯ (Epic) ವೆಂದರೆ ಒಂದು ದೀರ್ಘ ಕಥಾನಕ, ಇದರಲ್ಲಿ ಬರುವ ಘಟನೆಗಳೆಲ್ಲವುಗಳ ಕೇಂದ್ರದಲ್ಲಿ ಒಬ್ಬ ನಾಯಕನಿರುತ್ತಾನೆ. ಮತ್ತು ಮಹಾಕಾವ್ಯವನ್ನು ಮುಖ್ಯವಾಗಿ ರಾಷ್ಟ್ರೀಯತೆಯ ಪರಿಕಲ್ಪನೆ ರೂಪಿಸುತ್ತದೆ ಎಂಬ ವ್ಯಾಖ್ಯಾನ ಪ್ರಚಲಿತವಾಗಿತ್ತು. ಈ ವ್ಯಾಖ್ಯಾನವು ಕೇವಲ ಪಾಶ್ಚಿಮಾತ್ಯ ಮಹಾಕಾವ್ಯಗಳಾದ ‘ಇಲಿಯಡ್’, ‘ಒಡಿಸ್ಸಿ’, ‘ಈನಿಯಡ್’, ‘ಜರುಸಲೆಮ್ಮಾ ಲಿಬರೇಟಾ’, ಮುಂತಾದವುಗಳನ್ನು ಆಧರಿಸಿದೆ. (ಅದರಲ್ಲೂ ಮುಖ್ಯವಾಗಿ ಲ್ಯಾಟಿನ್ ಮಹಾಕವಿ ವರ್ಜಿಲ್ ರಚಿತ ‘ಈನಿಯಡ್’ ಮಹಾಕಾವ್ಯವನ್ನು ಈ ವ್ಯಾಖ್ಯಾನ ಆಧರಿಸಿದೆ.) (ಪಾಶ್ಚಿಮಾತ್ಯ ಮಹಾಕಾವ್ಯ ಸಂಪ್ರದಾಯಕ್ಕೆ ಹೊರತಾದ ಮಿಲ್ಟನ್‌ನ “ಪ್ಯಾರಡೈಸ್ ಲಾಸ್ಟ್” ಈ ಹೇಳಿಕೆಗೆ ಅಪವಾದವಾಗಬಹುದು.) ಆದರೆ ನಾವು ಈ ಮಹಾಕಾವ್ಯಗಳೊಡನೆ ಭಾರತೀಯ, ಪರ್ಶಿಯನ್, ಚೀನೀ ಇತ್ಯಾದಿ ಮಹಾಕಾವ್ಯಗಳನ್ನು ತುಲನಾತ್ಮಕವಾಗಿ ಅಭ್ಯಸಿಸಿದರೆ ಈ ವ್ಯಾಖ್ಯಾನ ಅಪೂರ್ಣವೆಂದು ಸ್ಪಷ್ಟವಾಗುತ್ತದೆ.

ಮಹಾಭಾರತದಲ್ಲಿ ಏಕನಾಯಕನಿಲ್ಲ. ಸಾವಯವ ಶಿಲ್ಪವಿಲ್ಲ. ರಾಷ್ಟ್ರದ ಪರಿ ಕಲ್ಪನೆಯಂತೂ ಇಲ್ಲವೇ ಇಲ್ಲ. ಇವುಗಳಿಗೆ ಬದಲಾಗಿ ಸಮಾನ ಧರ್ಮಗಳ, ಕೃತ್ಯಾಕೃತ್ಯಗಳ ಅತ್ಯಂತ ಸೂಕ್ಷ್ಮ, ಸಂಕೀರ್ಣ ವಿಶ್ಲೇಷಣೆಯನ್ನು ಕಾಣುತ್ತೇವೆ, ವಿವಿಧ ಗುಣಗಳ ಅಸಂಖ್ಯಾತ ಪಾತ್ರಗಳನ್ನು ಕಾಣುತ್ತೇವೆ. ಅರ್ಥಾತ್, ಮಹಾಭಾರತ ಗಿಲ್ಗಮೇಶ್ ಮುಂತಾದ ಕೃತಿಗಳನ್ನು ಪ್ರಭೇದ ಅಧ್ಯಯನ ಮಾರ್ಗದಲ್ಲಿ ಪಾಶ್ಚಿಮಾತ್ಯ ಕೃತಿಗಳೊಡನೆ ಹೋಲಿಸಿದಾಗ, ನಮ್ಮ ರೂಢಿಗತ ಮಹಾಕಾವ್ಯ ಪ್ರಭೇದದ ಕಲ್ಪನೆ ಹಾಗೂ ವ್ಯಾಖ್ಯಾನಗಳು ತುಂಬಾ ಬದಲಾಗಬಹುದು, ಅರ್ಥಪೂರ್ಣವಾಗಿ ವಿಶಾಲವಾಗಬಹುದು.

ಇಂತಹ ಅಧ್ಯಯನದ ಮತ್ತೊಂದು ಸಾಧ್ಯತೆಯನ್ನು ನೋಡೋಣ. ಸಂಸ್ಕೃತ ಗ್ರೀಕ್, ಇಂಗ್ಲಿಷ್ ನಾಟಕಗಳನ್ನು ನಾವು ಒಟ್ಟಿಗೇ ಗಮನಿಸಿದರೆ, ಮೊಟ್ಟ ಮೊದಲು ನಮಗೆ ಸ್ಪಷ್ಟವಾಗುವ ಸಂಗತಿಯೆಂದರೆ ಭಾರತೀಯ ನಾಟಕ ಸಾಹಿತ್ಯದಲ್ಲಿ ಊರು ಭಂಗವನ್ನು ಬಿಟ್ಟರೆ ಬೇರೆ ಯಾವ ‘ರುದ್ರನಾಟಕ’ವು (Tragedy) ನಮಗೆ ಕಂಡು ಬರುವುದಿಲ್ಲ. ಇದು ದುಃಖದ ಅಥವಾ ವಿಷಾದದ ಸಂಗತಿಯಾಗಬೇಕಾಗಿಲ್ಲ. (ತೌಲನಿಕ ಸಾಹಿತ್ಯದ ಸ್ವರೂಪ ವಿಶ್ಲೇಷಣಾತ್ಮಕವೇ ಹೊರತು ಮೌಲ್ಯಾತ್ಮಕವಲ್ಲ, ಇಂತಹ ಅಧ್ಯಯನ ಇದು ಶ್ರೇಷ್ಠ ಇದು ಕನಿಷ್ಠ ಎಂಬಂತಹ ನಿರ್ಣಯಗಳಿಂದ ದೂರವಿರಲು ಪ್ರಯತ್ನಿಸುತ್ತದೆ.) ಭರತನು ವರ್ಣಿಸುವ ದಶರೂಪಕಗಳಲ್ಲಾಗಲೀ ಧನಂಜಯನ ಉಪರೂಪಕಗಳಲ್ಲಾಗಲೀ ಒಂದೂ ರುದ್ರನಾಟಕವಿಲ್ಲ. ಈಗ ಏಳುವ ಪ್ರಶ್ನೆ ಭಾರತೀಯ ನಾಟಕ ಸಾಹಿತ್ಯದಲ್ಲಿ ರುದ್ರನಾಟಕ ಪ್ರಭೇದವೇಕಿಲ್ಲ? ಎಂಬುದು. ಉತ್ತರಿಸುವ ಪ್ರಯತ್ನದಲ್ಲಿ ನಾವು ರುದ್ರನಾಟಕ ಪ್ರಭೇದವು ಜನ್ಮ ತಾಳುವ ಸಮಾಜದ ರಚನೆ, ವೈಚಾರಿಕತೆ, ಆ ಸಮಾಜವನ್ನು ಸಾಮೂಹಿಕವಾಗಿ ಪ್ರಭಾವಿಸಿರಬಹುದಾದ ತಾತ್ವಿಕ, ಚಿಂತನೆ ಇವೆಲ್ಲವನ್ನೂ ಗಮನಿಸುತ್ತೇವೆ. ಕೊನೆಗೆ ನಾವು ತಳೆಯುವ ನಿರ್ಧಾರ/ ನಿರ್ಧಾರಗಳು ವಿಧಿವಾದವು- Fatalism – ಪ್ರಬಲವಾಗಿರುವ ಸಮಾಜದಲ್ಲಿ ಮಾತ್ರ ರುದ್ರನಾಟಕಗಳು ಮೂಡಿ ಬರುತ್ತವೆ. ಪುನರ್ಜನ್ಮ ಹಾಗೂ ಕರ್ಮ ಸಿದ್ಧಾಂತಗಳನ್ನು ಒಪುವ ಭಾರತೀಯ ಸಮಾಜದಲ್ಲಿ ರುದ್ರನಾಟಕದ ಕಲ್ಪನೆಯೇ ಅಸಾಧ್ಯ, ಇತ್ಯಾದಿ- ಸರಿಯಿರಬಹುದು, ಇಲ್ಲದಿರಬಹುದು, ಆದರೆ ಈ ದಿಕ್ಕಿನಲ್ಲಾಗುವ ಚಿಂತನೆ ಪಾಶ್ಚಿಮಾತ್ಯ ರುದ್ರ ನಾಟಕಗಳು ಮತ್ತು ಸಂಸ್ಕೃತ ನಾಟಕಗಳು ಇವೆರಡರ ಬಗೆಯೂ ನಮ್ಮ ಅರಿವನ್ನು ಹೆಚ್ಚಿಸಿರುತ್ತದೆ.

. ಪ್ರಭಾವ ಅಧ್ಯಯನ (Influence Studies)

ತೌಲನಿಕ ಸಾಹಿತ್ಯದ ಅತ್ಯಂತ ವಿವಾದಾಸ್ಪದ ಪ್ರಕಾರವೆಂದರೆ ‘ಪ್ರಭಾವ ಅಧ್ಯಯನ’. ಒಂದು ಸಾಹಿತ್ಯದ/ಸಂಸ್ಕೃತಿಯ/ಲೇಖನನ/ಪ್ರಭಾವ ಇನ್ನೊಂದು ಸಾಹಿತ್ಯದ ಸಂಸ್ಕೃತಿಯ/ಲೇಖನದ ಮೇಲೆ ಎಷ್ಟು ಮತ್ತು ಹೇಗೆ ಆಗಿದೆಯೆಂಬುದನ್ನು ಮತ್ತು ಆ ಪ್ರಭಾವದ ಪರಿಣಾಮಗಳನ್ನು ಗುರುತಿಸುವುದು ಈ ಪ್ರಕಾರದಲ್ಲಿ ಮುಖ್ಯವಾಗುತ್ತದೆ. ಸಾಹಿತ್ಯಿಕ/ಸಾಂಸ್ಕೃತಿಕ/ವೈಚಾರಿಕ ಕೊಡುಕೊಳ್ಳುವಿಕೆ ಅನೇಕ ನೆಲೆಗಳಲ್ಲಿ ಹಾಗೂ ಹೆಚ್ಚಾಗಿ ಅಪ್ರಜ್ಞಾಪೂರ್ವಕವಾಗಿ ಆಗುವ ಸಾಧ್ಯತೆಯಿರುವುದರಿಂದ, ಇದೊಂದು ಅತ್ಯಂತ ಸೂಕ್ಷ್ಮ ಹಾಗೂ ಖಚಿತವಾಗಿ ಗುರುತಿಸಲು ಅಸಾಧ್ಯವಾದ ಪ್ರಕ್ರಿಯೆ. ಇಂತಹ ವಿಶ್ಲೇಷಣೆ ಅನೇಕ ದುಡುಕಿನ ಮತ್ತು ತೇಲುಮಟ್ಟದ ತೀರ್ಮಾನುಗಳಿಗೆ ದಾರಿಮಾಡಿಕೊಡುವ ಅಪಾಯವಿರುವುದರಿಂದ, ರೆನೆವೆಲೆಕ್ ಮುಂತಾದ ವಿದ್ವಾಂಸರು ಪ್ರಭಾವ- ಅಧ್ಯಯನವನ್ನು ಸಂಶಯದಿಂದಲೇ ನೋಡುತ್ತಾರೆ. ಅವರ ವಾದವೇನೆಂದರೆ “ಸಾಹಿತ್ಯಿಕ ಅಧ್ಯಯನದಲ್ಲಿ ‘ಕಾರಣ’ ಮತ್ತು ‘ಪರಿಣಾಮ’ದ ಪರಿಕಲ್ಪನೆಯೇ ಅವಿಮರ್ಶಾತ್ಮಕ ಹಾಗೂ ಅಸಾಧು.’

ಆದರೆ, ಯಾವ ಲೇಖಕನೂ ಒಂದು ಶೂನ್ಯ, ನಿರ್ವಾತ ಸಂದರ್ಭದಲ್ಲಿ ಬರೆಯುವುದಿಲ್ಲ. ತಾನೂ ಎಂದೋ ಓದಿ ಮೆಚ್ಚಿದ ಕೃತಿ, ತಾನು ಅಥವಾ ತನ್ನ ಸಮಕಾಲೀನ ಸಂಸ್ಕೃತಿ ಮಾನ್ಯ ಮಾಡಿದ ವೈಚಾರಿಕತೆ, ತನ್ನದಕ್ಕಿಂತ ಬೇರೆಯಾದುದನ್ನು ಒಳಗೊಂಡ ಸಂಸ್ಕೃತಿ – ಇವುಗಳು ಅವನನ್ನು ಮತ್ತು ಅವನಿಂದ ರಚಿಸಲ್ಪಟ್ಟ ಕೃತಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವಿಸಿಯೇ ಇರುತ್ತವೆ. ಇಂತಹ ಪ್ರಭಾವವನ್ನು, ಅದಕ್ಕಿಂತ ಮುಖ್ಯವಾಗಿ ಇಂತಹ ಪ್ರಭಾವದ ತಾತ್ಕಾಲಿಕ ಒತ್ತಡಗಳನ್ನು ಗುರುತಿಸಲು ಸಾಧ್ಯವಾದರೆ, ಒಂದು ಕಾಲಘಟ್ಟದ ಸಾಹಿತ್ಯದ/ಸಂಸ್ಕೃತಿಯ/ಸಮಾಜದ ಒಲವುಗಳನ್ನು ಆಸೆ-ಆಕಾಂಕ್ಷೆಗಳನ್ನು ಆಳವಾಗಿ ಅರಿಯಲು ಸಾಧ್ಯವಾಗುತ್ತದೆ. ಆದ್ದರಿಂದಲೇ “ತೌಲನಿಕ ಸಾಹಿತ್ಯ ಅಧ್ಯಯನವೆಂದರೆ, ಮುಖ್ಯವಾಗಿ, ಭಿನ್ನ ಭಿನ್ನ ಲೇಖಕರ ಹಾಗೂ ಸಾಹಿತಿಗಳ ನಡುವೆ ಆಗಿರುವ ಪರಸ್ಪರ ಪ್ರಭಾವದ ಅಧ್ಯಯನ, ಮತ್ತು ಆ ಪ್ರಭಾವದ ಪ್ರಸರಣದ ಅಧ್ಯಯನ” ಎಂದು ಸೈಮನ್ ಜೂನ್ ವಾದಿಸುತ್ತಾನೆ.

ಪ್ರಭಾವ ಅಧ್ಯಯನ ಅತ್ಯಂತ ವಿವಾದಾಸ್ಪದವೇಕೆಂದರೆ ವ್ಯಾವಹಾರಿಕ ಕ್ಷೇತ್ರದಲ್ಲಿ ಸಾಧ್ಯವಿರುವ ಹಾಗೆ ಸಾಹಿತ್ಯಿಕ/ಸಾಂಸ್ಕೃತಿಕ ಕ್ಷೇತ್ರದಲ್ಲಿ ನೇರ ಹಾಗೂ ಸಂಪೂರ್ಣ ‘ಕೊಡು-ಕೊಳ್ಳೂವಿಕೆ’ ಸಾಧ್ಯವಿಲ್ಲ. ಒಂದು ಸಮಾಜ/ಸಂಸ್ಕೃತಿ ತಾನು ಯಾವ ಪ್ರಭಾವವನ್ನು ಸ್ವೀಕರಿಸಲು ಸಿದ್ಧವಿದೆಯೋ (ಎಂದರೆ ಯಾವುದಕ್ಕೆ ತಮ್ಮಲ್ಲೇ ಇರುವ ಒಂದು ಪರಂಪರೆಯ ತುಡಿತವಿದೆಯೋ) ಅದನ್ನು ಮಾತ್ರ ಸ್ವೀಕರಿಸುತ್ತದೆ. ಮತ್ತೆ ನಿರ್ದಿಷ್ಟವಾಗಿ ಯಾವುದೊಂದನ್ನು ಇನ್ನೊಂದು ಸಾಹಿತ್ಯದಿಂದ/ಸಂಸ್ಕೃತಿಯಿಂದ ಸ್ವೀಕರಿಸುವಾಗಲೂ ಅದನ್ನು ತನ್ನ ಒತ್ತಡಗಳಿಗೆ ಬೇಕಾದಂತೆ ಮಾರ್ಪಡಿಸಿ, ಎಂದರೆ ‘ತನ್ನದಾಗಿಸಿಕೊಂಡು’ ಸ್ವೀಕರಿಸುತ್ತದೆ. ಈ ಅಂಶಗಳನ್ನು ಸ್ಪಷ್ಟಪಡಿಸಲು ಒಂದೆರಡು ನಿದರ್ಶನಗಳನ್ನು ನೋಡಣ.

ವಸಾಹತುಶಾಹಿಯ ಪರಿಣಾಮವಾಗಿ, ಭಾರತದಲ್ಲಿ ಇಂಗ್ಲಿಷ್ ಸಾಹಿತ್ಯ/ಸಂಸ್ಕೃತಿ/ ವೈಚಾರಿಕೆ ಇವುಗಳು ಭಾರತೀಯ ಸಮಾಜವನ್ನು ಗಾಢವಾಗಿ ಪ್ರಭಾವಿಸಿದುವು. ಆ ಪ್ರಭಾವದ ಕಾರಣದಿಂದ ಭಾರತೀಯ ವೈಚಾರಿಕತೆಯಲ್ಲಿ ಹೇಗೋ ಹಾಗೆ ಭಾರತೀಯ ಸಾಹಿತ್ಯದಲ್ಲಿಯೂ ಬಗೆ ಬಗೆಯ ನೂತನ ಆಯಾಮಗಳು ಕಂಡುಬಂದುವು. ವೈಚಾರಿಕತೆಯ ನೆಲೆಯಲ್ಲಿ, ಹತ್ತೊಂಭತ್ತನೆಯ ಶತಮಾನದ ಎರಡನೆಯ ಭಾಗದಲ್ಲಿ ‘ಕರ್ಮಕಾಂಡ’ದ ತಿರಸ್ಕಾರ, ‘ಏಕದೇವತೋಪಾಸನೆ’ ಹಾಗೂ ‘ಜಾತಿ ವ್ಯವಸ್ಥೆ’ಯ ನಿರಾಕರಣೆ ಇವುಗಳನ್ನು ಕೇಂದ್ರವಾಗಿರಿಸಿಕೊಂಡು ಬ್ರಹ್ಮೋ ಸಮಾಜ, ಆರ್ಯ ಸಮಾಜ ಮುಂತಾದ ನೂತನ ಧಾರ್ಮಿಕ ಪಂಥಗಳು ಜನ್ಮ ತಾಳಿದುವು. ಇವುಗಳ ನೆಲೆಯನ್ನು, ಕಾಳಜಿಗಳನ್ನು ಇಂದು ವಿಶ್ಲೇಷಿಸುವಾಗ, ಇವುಗಳ ಮೇಲೆ ಲೂಥರ್, ಕ್ಯಾಲ್ವಿನ್ ಮುಂತಾದ ಪ್ರಾಟಿಸ್ಟೆಂಟ್ ಕ್ರಿಶ್ಚಿಯನ್ ಚಿಂತಕರ ಪ್ರಭಾವವೆಷ್ಟು? ಬುದ್ಧ-ಕಬೀರ್-ನಾನಕ್-ಸುಧಾರಣಾ ಪರಂಪರೆಯ ಪ್ರಭಾವವೆಷ್ಟು? ಎಂದು ಖಚಿತವಾಗಿ ಗುರುತಿಸಲು ಸಾಧ್ಯವೇ ಇಲ್ಲ. ‘ನನ್ನ ಹಾಗೂ ದೇವರ ನಡುವೆ ಮಧ್ಯವರ್ತಿಯ ಅವಶ್ಯಕತೆಯಿಲ್ಲ’- ಎಂದು ದಯಾನಂದ ಸರಸ್ವತಿಯವರು ಘೋಷಿಸುವಾಗ ಆ ಘೋಷಣೆಯ ಹಿನ್ನೆಲೆಯಲ್ಲಿ ಲೂಥರ್ ಇರುವಂತೆಯೇ ಬುದ್ಧನೂ ಇರಬಹುದು. ಎಂದರೆ, ಒಂದು ನೆಲೆಯಲ್ಲಿ, ಆಂಗ್ಲ ಧಾರ್ಮಿಕ ಚಿಂತನೆ ಹಿಂದೂ ಸಮಾಜದಲ್ಲಿಯೇ ಎಂದಿನಿಂದಲೂ ಇರುವ ಚಿಂತನಾ ಪರಂಪರೆಗೆ ಒಂದು ಚಾಲನೆಯನ್ನು, ಒಂದು ತಿರುವನ್ನು ಮಾತ್ರ ಒದಗಿಸಿರಬಹುದು. “ಮೂಲಕ್ಕೆ ಮರಳಿ” (ಎಂದರೆ ಕ್ಯಾಥೋಲಿಕ್ ಚರ್ಚಿನ ವ್ಯವಸ್ಥೆ – ಪರಂಪರೆಯನ್ನು ಮರೆತು ಮೂಲ ಬೈಬಲ್ ಅನ್ನು ಮಾತ್ರ ಆಧಾರವಾಗಿ ತೆಗೆದುಕೊಳ್ಳಿ) ಎಂಬ ಲೂಥರ್‌ನ ಸಂದೇಶ ಆರ್ಯ ಸಮಾಜದವರು ಹಿಂದೂ ಧರ್ಮದ ಮೂಲವನ್ನು ವೇದೋಪನಿಷತ್ತುಗಳಲ್ಲಿ (ಪುರಾಣಗಳು, ಸ್ಮೃತಿಗಳು ಮುಂತಾದವುಗಳನ್ನು ತಿರಸ್ಕರಿಸಿ) ಕಾಣುವಂತೆ ಪ್ರೇರೇಪಿಸಿತೇ ಹೊರತು ಕ್ರಿಶ್ಚಿಯನ್ ಧರ್ಮವನ್ನು ಅಂಗೀಕರಿಸುವಂತೆ ಅಲ್ಲ.

ಸಾಹಿತ್ಯಿಕ ಪ್ರಭಾವಗಳ ವಿಶ್ಲೇಷಣತೆಯೂ ಇಷ್ಟೇ ಜಟಿಲವಾಗಿರುತ್ತದೆ. ಉದಾಹರಣೆಗೆ ಒಂದು ತೇಲು ಮಟ್ಟದಲ್ಲಿ, ಭಾರತೀಯ ಭಾಷೆಗಳಲ್ಲಿ ‘ಕಾದಂಬರಿ ಪ್ರಭೇದ’ ಇಂಗ್ಲೀಷ್ ‘ನಾವೆಲ್’ ಪ್ರಭಾವದಿಂದಾಗಿ ಜನ್ಮತಾಳಿತು ಎಂದು ಹೇಳುವುದು ಸರಿ. ಆದರೆ, ಕೂಡಲೇ ಈ ಹೇಳಿಕೆ ಅನೇಕ ತಿದ್ದುಪಡಿಗಳು ಬೇಕಾಗುವೆ. ಅಖಿಲ ಭಾರತದ ವ್ಯಾಪ್ತಿಯಲ್ಲಿ ಹೇಳುವುದಾದರೆ, ಹತ್ತೊಂಭತ್ತನೆಯ ಶತಮಾನದಲ್ಲಿ ಜನಸಾಮಾನ್ಯರಿಗೂ ದೊರಕಲು ಪ್ರಾರಂಭವಾಗಿದ್ದ ಶಿಕ್ಷಣಾವಕಾಶಗಳು, ರಾಷ್ಟ್ರೀಯತೆಯ ಒತ್ತಡ, ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಶ್ರೀಮಂತವಾಗಿ ಬೆಳೆದು ಬಂದಿದ್ದ ಕಥನ ಪರಂಪರೆ – ಇವೆಲ್ಲವೂ ಭಾರತೀಯ ಕಾದಂಬರಿಯ ಉಗಮದ ಹಿನ್ನೆಲೆಯಲ್ಲಿವೆ. ಕನ್ನಡ ಕಾದಂಬರಿಯ ವಿಷಯವಂತೂ ಇನ್ನೂ ಜಟಿಲವಾಗಿದೆ. ಕನ್ನಡ ಕಾದಂಬರಿಯ ಹಿಂದೆ ಮೇಲೆ ಹೇಳಿದ ಕಾರಣಗಳಲ್ಲದೆ ಮತ್ತೊಂದು ಮುಖ್ಯ ಅಂಶವೂ ಇದೆ – ಮುನ್ನೂರು ವರ್ಷಗಳ ಇತಿಹಾಸವುಳ್ಳ ಯಕ್ಷಗಾನ ಪರಂಪರೆಯ ಪ್ರಭಾವದ ಅಂಶ. ಕನ್ನಡದ ಮೊದಲ ಕಾದಂಬರಿಗಳೆಲ್ಲವೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೊರ ಬಂದುವು ಮತ್ತು ಇವೆಲ್ಲವುಗಳ ಆಳದಲ್ಲಿ ನಾವು ಯಕ್ಷಗಾನದ ಪ್ರಭಾವವನ್ನು ಗುರುತಿಸಬಹುದು. ಆದ್ದರಿಂದ ‘ಇಂಗ್ಲೀಷ್ ಸಾಹಿತ್ಯದ ಪ್ರಭಾವದಿಂದ ಕನ್ನಡ ಕಾದಂಬರಿ ಜನ್ಮ ತಾಳಿತು’ ಎಂಬಂತಹ ದುಂಡು ಹೇಳಿಕೆ ನೀಡಿ, ಇಂಗ್ಲಿಷ್ – ಅಮೇರಿಕನ್ ವಿಮರ್ಶಕರ ಪರಿಕಲ್ಪನೆಗಳನ್ನು ಕನ್ನಡ ಕಾದಂಬರಿ ಪ್ರಭೇದದ ಮೇಲೆ ಹೇರುವುದು ದುಡುಕಿನ ಕಾರ್ಯವಾಗುತ್ತದೆ. ರೆನೆ ವೆಲೆಕ್ ಹೇಳುವಂತೆ ಸಾಹಿತ್ಯಕ – ಘಟನೆಗಳಲ್ಲಿ ನೇರವಾದ ‘ಕಾರ್ಯ-ಕಾರಣ’ (Cause-Effect) ಸಂಬಂಧ ಎಂದು ಇರುವುದಿಲ್ಲ. ಒಂದು ಘಟನೆಯ ಹಿಂದೆ ಪ್ರಭಾವಗಳಿರುತ್ತವೆ-ಪ್ರಭಾವವಲ್ಲ; ಮತ್ತು ಭಿನ್ನ ಭಿನ್ನ ಪ್ರಭಾವಗಳು ಒಂದರೊಳಗೊಂದಾಗಿ, ಒಂದನ್ನೊಂದು ನಿಯಂತ್ರಿಸಿ, ಗುರುತಿಸಲಾಗದಷ್ಟು ತಮ್ಮ ಸ್ವರೂಪದಲ್ಲಿ ಬದಲಾಗಿರುತ್ತವೆ.

ಇಷ್ಟೆಲ್ಲಾ ಸಂದಿಗ್ಧಗಳಿದ್ದರೂ ‘ಪ್ರಭಾವ ಅಧ್ಯಯನ’ ಅವಶ್ಯಕ ಏಕೆಂದರೆ ಇಂತಹ ಅಧ್ಯಯನದ ಮೂಲಕವೇ ನಾವು ಒಂದು ಸಾಹಿತ್ಯದ/ಸಂಸ್ಕೃತಿಯ ಅನನ್ಯತೆಯನ್ನು ಗುರುತಿಸಬಹುದು. ಇಂತಹ ಅಧ್ಯಯನ ಕಾರ್ಯ-ಕಾರಣ ಸಂಬಂಧವನ್ನು ಗುರುತಿಸುವ ಮೂಲಕ ಪ್ರಾರಂಭವಾದರೂ (ಅದು ಅಷ್ಟು ಮುಖ್ಯವಲ್ಲ) ಅನಂತರ ಒಂದು ಸಂಸ್ಕೃತಿ/ಸಾಹಿತ್ಯ ಏನನ್ನು ನಿರಾಕರಿಸಿತು, ಮತ್ತು ಯಾವ ಕಾರಣಗಳಿಗಾಗಿ ಎಂಬುದು ಮುಖ್ಯವಾಗುತ್ತದೆ. ಅರ್ಥಾತ್ ಸಾಂಸ್ಕೃತಿಕ ಅಧ್ಯಯನಗಳಿಗೆ ಅರ್ಥಪೂರ್ಣ ಕೊಡುಗೆ ಸಾಧ್ಯವಾಗುತ್ತದೆ. (ಕನ್ನಡದಲ್ಲಿ ‘ಅಸಂಗತ’ ನಾಟಕಗಳು ಏಕೆ ಬೇರು ಬಿಡಲಿಲ್ಲ? ಕನ್ನಡ ನವ್ಯ ಕಾದಂಬರಿಗಳ ವೈಚಾರಿಕತೆಗೂ ಕಮೂ ಮುಂತಾದ ಯುರೋಪಿಯನ್ ಅಸ್ತಿತ್ವವಾದೀ ಕಾದಂಬರಿಗಳಿಗೂ ಇರುವ ಭಿನ್ನತೆಗಳೇನು? ಮತ್ತು ಈ ಭಿನ್ನತೆಗಳ ಕಾರಣಗಳೇನು? ಅಸಂಗತ ನಾಟಕ ಪ್ರಭೇದದ ಒಂದು ಕವಲು ಗಿರೀಶ್ ಕಾರ್ನಾಡರಲ್ಲಿ ಅತಿ ಯಶಸ್ವಿಯಾಗಿ ಬೆಳೆಯುವುದಕ್ಕೆ ಅವರ ನಾಟಕಗಳು ಸಂಸ್ಕೃತ ನಾಟಕಗಳಂತೆ ಸಂವಿಧಾನಕ್ಕೆ ಕೊಡುವ ಪ್ರಾಧಾನ್ಯತೆ ಕಾರಣವೆ? ಇಡಿ ಸಂಸ್ಕೃತ- ಕನ್ನಡ ಸಾಹಿತ್ಯಗಳಲ್ಲಿ ಯುರೋಪಿಯನ್ ಭಾಷೆಗಳಲ್ಲಿ ಸಾಧ್ಯವಾದಂತೆ ವಿಡಂಬನೆ ಒಂದು ಪ್ರಮುಖ ಸಾಹಿತ್ಯ ಪ್ರಭೇದವಾಗಿ ಏಕೆ ಬೆಳೆಯಲಿಲ್ಲ?- ಇತ್ಯಾದಿ ಸಾಹಿತ್ಯಕ-ಸಾಂಸ್ಕೃತಿಕ ಪ್ರಶ್ನೆಗಳನ್ನೆತ್ತುವುದಕ್ಕೆ ಈ ಕ್ಷೇತ್ರ ಅನುವು ಮಾಡಿ ಕೊಡುತ್ತದೆ).

. ಭಾಷಾಂತರ ಅಧ್ಯಯನ (Translation Studies)

ಪಾಶ್ಚಿಮಾತ್ಯರಲ್ಲಿಯೂ ಭಾಷಾಂತರ ಅಧ್ಯಯನ ಇತ್ತೀಚಿನ, ಎಂದರೆ ಕೇವಲ ೨೦ನೆಯ ಶತಮಾನದ, ಬೆಳವಣಿಗೆ. ಭಾಷಾಂತರವೂ ವಾಖ್ಯಾನ ಪ್ರಕ್ರಿಯೆಯ ಒಂದು ರೂಪವಾದುದರಿಂದ, ಭಾಷಾಂತರ ಅಧ್ಯಯನ ಒಂದು ಭಾಷೆ ಪ್ರತಿನಿಧಿಸುವ ಸಾಂಸ್ಕೃತಿಕ ಒತ್ತಡಗಳು, ಸಾಮಾಜಿಕ ವಿಧಿ-ನಿಷೇಧಗಳು, ಮತ್ತು ಪ್ರತಿಯೊಂದು ಭಾಷೆಗೂ ಇರುವ ಅನನ್ಯ ವ್ಯವಸ್ಥೆ – ಇವೆಲ್ಲವುಗಳ ಬಗ್ಗೆ ಗಂಭೀರ ಒಳ ನೋಟಗಳನ್ನು ಕೊಡಬಲ್ಲದು.

ಭಾಷಾಂತರ ಅಧ್ಯಯನ ಎರಡು ದಿಕ್ಕುಗಳಲ್ಲಿ ನಡೆಯಬಹುದು. ಮೊದಲನೆಯದಾಗಿ ತಾತ್ವಿಕ ನೆಲೆಯಲ್ಲಿ, ಭಾಷಾಂತರ ಪ್ರಕ್ರಿಯೆಯ ಬಗ್ಗೆಯೇ ಖಚಿತ ನಿದರ್ಶನಗಳ ಆಧಾರದ ಏಲೆ, ವಿಶ್ಲೇಷಣೆ ನಡೆಯಬಹುದು. ಎಂದರೆ, ಭಾಷಾಂತರಗಳ ಪ್ರಕಾರಗಳು ಮತ್ತು ಅವುಗಳ ಹಿಂದಿರುವ ಸಿದ್ಧಾಂತಗಳು, ‘ಅನುವಾದ-ಅಸಾಧ್ಯತೆಯ ಎಲ್ಲೆಗಳು’ (Limits of untranslatability) ಅನುವಾದ ಪ್ರಕ್ರಿಯೆಯಲ್ಲಿ ಅಪರಿಚಿತ ಅಂಶಗಳನ್ನು ಪರಿಚಿತವಾಗಿಸುವ ಸಾಂಸ್ಕೃತಿಕ ವೈಚಾರಿಕ ಒತ್ತಡಗಳು – ಇವುಗಳ ವಿಶ್ಲೇಷಣೆ. ಎರಡನೆಯ ಪ್ರಕಾರವೆಂದರೆ, ಒಬ್ಬ ಲೇಖಕನ (ಭಿನ್ನ ಭಾಷೆಗಳಲ್ಲಿ ಆಗಿರುವ) ವಿವಿಧ ಭಾಷಾಂತರಗಳ, ಅಥವಾ ಒಂದೇ ಭಾಷೆಯಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಒಬ್ಬನೇ ಲೇಖಕನ ಒಂದೇ ಕೃತಿಯ ಭಾಷಾಂತರಗಳ ಅಧ್ಯಯನ. ಇಲ್ಲಿಯೂ ಕೂಡ (ಇಡೀ ತೌಲನಿಕ ಸಾಹಿತ್ಯದಲ್ಲಿ ಕಂಡುಬರುವ ಹಾಗೆ) ಒತ್ತು ಬೀಳುವುದು ಸಮಾನತೆಗಳಿಗಿಂತ ಭಿನ್ನತೆಗಳ ಮೇಲೆ; ಮತ್ತು ಇಂತಹ ಭಿನ್ನತೆಗಳು ಸೂಚಿಸುವ ಸಾಂಸ್ಕೃತಿಕ ಅಂಶಗಳ ಮೇಲೆ.

ಉದಾಹರಣೆಗಾಗಿ: ಕಾಳಿದಾಸನ “ಶಾಕುಂತಲಾ” ನಾಟಕದ ಅನೇಕ ಅನುವಾದಗಳು ಕನ್ನಡದಲ್ಲಿ, ಇಂಗ್ಲೀಷ್‌ನಲ್ಲಿ, ಇತರ ಭಾಷೆಗಳಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಬಂದಿವೆ. ಆದರೆ ಯಾವು ಒಂದು ಭಾಷಾಂತರವೂ ಮೂಲ ಒಂದೇ ಆದರೂ ಸಂಪೂರ್ಣವಾಗಿ ಸಮಾನವಾಗಿಲ್ಲ. ಪ್ರತಿಯೊಂದು ಭಾಷಾಂತರವೂ ಮತ್ತೊಂದರಿಂದ ಭಿನ್ನವಾಗಿದೆ ಉಪಯೋಗಿಸಿದ ಭಾಷಾಸ್ತರದಲ್ಲಿ, ಸಂಗ್ರಹ-ವಿಸ್ತಾರ ಕಾರ್ಯಗಳಲ್ಲಿ, ಇತ್ಯಾದಿ. ಇಂತಹ ಭಿನ್ನತೆಗಳನ್ನು ಗುರುತಿಸಿ, ಅವುಗಳ ಆಧಾರದ ಮೇಲೆ ನಾವು ಅನೇಕ ಸಾಹಿತ್ಯಿಕ-ಸಾಂಸ್ಕೃತಿಕ ಒಳನೋಟಗಳನ್ನು ಪಡೆಯುವ ಸಾಧ್ಯತೆಯಿದೆ.

. ತೌಲನಿಕ ಕಾವ್ಯ ಮೀಮಾಂಸೆ (Comparative Poetics)

ವಿವಿಧ ದೇಶಗಳಲ್ಲಿ, ವಿವಿಧ ಕಾಲಘಟ್ಟಗಳಲ್ಲಿ, ಸಮಾನ ಅಂಶಗಳನ್ನುಳ್ಳ ಕಾವ್ಯ ಮೀಮಾಂಸೆಯ ಪರಿಕಲ್ಪನೆಗಳು ಹಾಗೂ ವಿಮರ್ಶಾ ಪಂಥಗಳು ಬೆಳೆದು ಬರುವುದು ಸಹಜ. (ಭಾರತೀಯ ರಸ ಸಿದ್ಧಾಂತ ಮತ್ತು ಗ್ರೀಕ್ ‘ಕಥಾರ್ಸಿಸ್‌’ ಪರಿಕಲ್ಪನೆ, ಔಚಿತ್ಯ ಮತ್ತು ‘ಡೆಕರಮ್’ ಪರಿಕಲ್ಪನೆಗಳು, ಧ್ವನಿ ಪ್ರಸ್ಥಾನ ಮತ್ತು ಪಾಶ್ಚಾತ್ಯ ರೂಪ ನಿಷ್ಠ (Formalist) ಪ್ರಸ್ಥಾನ… ಇತ್ಯಾದಿ). ಸಮಾನವೆಂದು ಕಾಣುವ ಇಂತಹ ಪ್ರಸ್ಥಾನಗಳ ಭಿನ್ನತೆಗಳನ್ನು ಗುರುತಿಸಿ, ಆ ಸಮಾನತೆ-ಭಿನ್ನತೆಗಳ ಸಾಂಸ್ಕೃತಿಕ ಗೃಹೀತಗಳನ್ನು ಹಾಗೂ ಪ್ರೇರಣೆಗಳನ್ನು ಅಧ್ಯಯನ ಮಾಡಿದರೆ ಆ ಮೂಲಕ ಆ ಎರಡೂ ಸಾಹಿತ್ಯಗಳ/ ಸಂಸ್ಕೃತಿಗಳ ಅರಿವು ಹೆಚ್ಚು ಗಾಢವಾಗುತ್ತದೆ. ಅಲ್ಲದೆ, ಈ ಮೊದಲೇ ಸೂಚಿಸಿದಂತೆ, ಇಂತಹ ಅರಿವು ಒಂದು ದೇಶದ ಹೀನ ಪ್ರಜ್ಞೆಯನ್ನು ನಿವಾರಿಸಿ, ಸಾಂಸ್ಕೃತಿಕ ಪ್ರತಿಷ್ಠೆಗೆ ಎಡೆ ಮಾಡಿಕೊಡುತ್ತದೆ. ಅತ್ಯಾಧುನಿಕವೆಂದು ತೋರುವ ಡೆರಿಡಾನ ನಿರಚನ (Deconstruction) ಚಿಂತನೆಗೂ ಭಾರತದಲ್ಲಿ ಎರಡು ಸಾವಿರ ವರ್ಷಗಳ ಹಿಂದೆ ಪ್ರಚಲಿತವಿದ್ದ ಬೌದ್ಧ ಚಿಂತಕರ ‘ಅಪೋಹ’ವಾದಕ್ಕೂ ಸಾಮ್ಯತೆಯಿದೆ ಎಂಬ ಅರಿವೂ ಕೂಡ ಭಾರತೀಯರ ಸಾಂಸ್ಕೃತಿಕ ಆತ್ಮಾಭಿಮಾನಕ್ಕೆ ಮುಖ್ಯವಾಗುತ್ತದೆ.

ಆದರೆ, ಇಲ್ಲಿ ಮತ್ತೊಮ್ಮೆ ಒತ್ತಿ ಹೇಳಬೇಕಾದ ಅಂಶವೆಂದರೆ, ತೌಲನಿಕ ಕಾವ್ಯ ಮೀಮಾಂಸೆಯ ಗುರಿ ಎರಡು ವಿಮರ್ಶಾ ಮಾರ್ಗಗಳ/ಪರಿಕಲ್ಪನೆಗಳ ಸಮಾನ ಅಂಶಗಳನ್ನು ಯಾಂತ್ರಿಕವಾಗಿ ಪಟ್ಟಿ ಮಾಡುವುದಿಲ್ಲ. ಅಥವಾ ತುಲನೆಯಲ್ಲಿ ‘ತರ-ತಮ’ ಮೌಲ್ಯಾತ್ಮಕ ನಿರ್ಣಯಗಳನ್ನು ಕೊಡುವುದಿಲ್ಲ. ಬದಲಾಗಿ, ಸಮಾನ ವಿಮರ್ಶಾ ಮಾರ್ಗಗಳು ಹಾಗೂ ಚಿಂತನೆ ಬೆಳೆದುಬರುವುದಕ್ಕೆ ಕಾರಣವಾದ ಸಾಮಾಜಿಕ-ಸಾಂಸ್ಕೃತಿಕ ರಚನೆಗಳನ್ನು (Structures) ಗುರುತಿಸಿ, ಅವುಗಳ ವಿಶ್ಲೇಷಣೆ ಮಾಡುವುದು. (ಒಂದರೆಡು ಅಪವಾದಗಳನ್ನು ಬಿಟ್ಟರೆ, ಸಾಧಾರಣವಾಗಿ ಎಲ್ಲಾ ಭಾರತೀಯ ವಿಮರ್ಶಾ ಪ್ರಸ್ಥಾನಗಳೂ ರೂಪನಿಷ್ಠವಾಗಿದ್ದು, ಕೃತಿಕೇಂದ್ರಿತವಾಗಿವೆ. ಈ ಅಂಶ ಭಾರತೀಯ ಹಿಂದೂ ಸಮಾಜದ ಬಗ್ಗೆ ಯಾವ ಒಳನೋಟಗಳನ್ನು ಕೊಡುತ್ತದೆ? ಇಂದು ನಾವು ಸಮಾಜಕೇಂದ್ರಿತ ವಿಮರ್ಶಾ ಮಾರ್ಗಗಳೆಂದು ಕರೆಯುವ ಯಾವ ಚಿಂತನೆಯೂ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಎಂದೂ ಯಾಕೆ ಕಾಣಿಸಿಕೊಳ್ಳಲಿಲ್ಲ?- ಇತ್ಯಾದಿ.)

(ತೌಲನಿಕ ಸಾಹಿತ್ಯ ಮತ್ತು ಇತರ ಲೇಖನಗಳು, ೧೯೯೮)

ಗ್ರಂಥಋಣ

  1. Chandra, Mohan, ed. Aspects of Comparative Literature. New Delhi: India Publishers, 1989.
  2. Das, S.K. and Amiya Dev. eds. Comparative Literature : Theory And Practice. Simla : Indian Institute of Advanced Study, 1989.
  3. Dhawan, R.K. Comparative Literature : New Delhi, Bahri Publication, 1987.
  4. Lefevere. A Essays in Comparative Literature : Calcutta : Papyrus. 1988.
  5. Miner, Earl, Comparative Poetics : New Jersey : Princetion University Press. 1990.
  6. Wellek, Rene. Discriminations. New Haven : Yale University Press. 1970