ಕಾಡುತ್ತಿವೆ ಭೂತಕಾಲದ ಭ್ರೂಣ ಗೂಢಗಳು |
ಹುಗಿದ ಹಳೆಬಾವಿಯೊಳ ಕತ್ತಲೆ ಹಳಸು ಗಾಳಿ ||
ತೊಟ್ಟು ಕಳಚಿದ ಹೊಕ್ಕುಳಿನ ಬಳ್ಳಿ ದಡದಲ್ಲಿ |
ಕತ್ತರಿಸಿದಿಲಿಬಾಲ ಮಿಡುಕುತ್ತಿದೆ ||

ಭೂತ-ವರ್ತಮಾನಗಳ ನಡುವೆ ನಡೆಯುತ್ತಿರುವ ಸದಾ ನಡೆಯುವ ಸಂಘರ್ಷ; ಆ ಸಂಘರ್ಷ ಹುಟ್ಟಿಸುವ ತಲ್ಲಣ-ಸಂಕಟಗಳು; ಆ ಸಂಘರ್ಷದ ಗರ್ಭದಿಂದಲೇ ಮೂಡಿಬರುವ ಚಿನ್ನದ ಗೆರೆ; ಇವೆಲ್ಲವನ್ನೂ ಅದ್ಭುತವಾಗಿ ದಾಖಲಿಸುವ ಅಡಿಗರ ಈ ಸಾಲುಗಳು (ಕವನ : ‘ಭೂತ’) ವೈಯಕ್ತಿಕ ನೆಲೆಯಲ್ಲಿ ನೈಪಾಲ್‌ಗೂ ವ್ಯಾಪಕ ನೆಲೆಯಲ್ಲಿ ಅವರು ವಿಶ್ಲೇಷಿಸಿರುವ ಸಮಾಜಗಳಿಗೂ ಸಮಾನವಾಗಿಯೇ ಅನ್ವಯವಾಗುತ್ತವೆ. ತನ್ನ ಅಜ್ಜ- ಮುತ್ತಜ್ಜರ ಭಾರತ ಮತ್ತು ಹಿಂದೂ ಧರ್ಮ-ಸಂಸ್ಕೃತಿಗಳನ್ನು ಒಪ್ಪಲಾಗದೆ, ಅವನ್ನು ತಿರಸ್ಕರಿಸಲೂ ಆಗದೆ, ಒಂದಲ್ಲ ಎರಡು ಬರಿ ಸಾಂಸ್ಕೃತಿಕ ಪಲ್ಲಟವನ್ನು ಅನುಭವಿಸಿ, ಆ ಅನುಭವದ ನೋವು – ಸಂಕಟ – ಸಂಭ್ರಮಗಳಿಂದಲೇ ಅರ್ಥಪೂರ್ಣ ವಾಙ್ಮಯವನ್ನು ಸೃಷ್ಟಿಸಿದವರು ನೈಪಾಲ್. ಆದ್ದರಿಂದಲೇ ವಿಶೇಷವಾಗ ಭಾರತೀಯರಿಗೆ ನೈಪಾಲ್ ಹೆಚ್ಚು ಪ್ರಸ್ತುತವಾಗುತ್ತಾರೆ.

ಈ ವರ್ಷದ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿರುವ ವಿದ್ಯಾಧರ ಸೂರಜ್ ಪ್ರಸಾದ್ ನೈಪಾಲ್ ಟ್ರೆನಿಡಾಡ್ ಚಾಗ್ವಾನಾಸ್ ಎಂಬ ಪಟ್ಟಣದಲ್ಲಿ ೧೯೩೨ರಲ್ಲಿ ಜನಿಸಿದರು. ಇವರ ಹಿಂದೂ ಪೂರ್ವಜರು ಭಾರತದ ಉತ್ತರ ಪ್ರದೇಶದಿಂದ ಗಯಾನಾ ಮತ್ತು ಟ್ರಿನಿಡಾಡ್‌ಗಳ ಕಬ್ಬಿನ ಪ್ಲಾಂಟೇಶನ್‌ಗಳಲ್ಲಿ ಕೆಲಸ ಮಾಡಲು ಅಲ್ಲಿಗೆ ವಲಸೆಹೋಗಿದ್ದರು. ಪ್ರಾಥರ್ಮಿಕ-ಪ್ರೌಢ ಶಿಕ್ಷಣವನ್ನು ಟ್ರಿನಿಡಾಡ್ ನಲ್ಲಿಯೇ ಮುಗಿಸಿದ ನೈಪಾಲ್ ಉಚ್ಚ ಶಿಕ್ಷಣಕ್ಕಾಗಿ ಸ್ಕಾಲರ್‌ಶಿಪ್ ಪಡೆದು ೧೯೫೦ ರಲ್ಲಿ ಇಂಗ್ಲೆಂಡ್‌ಗೆ ಹೋದರು. ಅಲ್ಲಿ ಆಕ್ಸ್‌ಫರ್ಡ್‌‌ನ ಪ್ರಸಿದ್ಧ ‘ಯೂನಿವರ್ಸಿಟಿ ಕಾಲೇಜ್‌’ನಲ್ಲಿ ನಾಲ್ಕು ವರ್ಷಗಳ ಕಾಲ ವ್ಯಾಸಂಗ ಮಾಡಿ ಬಿ.ಎ. ಪದವಿ ಪಡೆದು ಅನಂತರ ಬ್ರಿಟಿಷ್ ಪ್ರಜೆಯಾಗಿ ಅಲ್ಲಿಯೇ ನೆಲೆಸಿದರು. ಸದ್ಯ, ಅವರು ಇಂಗ್ಲೆಂಡ್‌ನ ವಿಲ್ಟ್‌ಶೈರ್‌ನಲ್ಲಿ ವಾಸ ಮಾಡುತ್ತಿದ್ದರೆ.

ಪ್ರಾರಂಭದಿಂದಲೂ ಲೇಖಕನಾಗುವ ಕನಸು ಕಾಣುತ್ತಿದ್ದ ಮತ್ತು ಉಚ್ಚ ಶಿಕ್ಷಣದ ನಂತರ ಅನೇಕ ವೃತ್ತಿಯನ್ನು ಹೊರತುಪಡಿಸಿ ಬೇರಾವ ವೃತ್ತಿಯನ್ನೂ ಕೈಗೊಳ್ಳದ ನೈಪಾಲ್ ಅವರ ಮೊದಲ ಕಾದಂಬರಿ ಮಿಸ್ಟಿಕ್ ಮ್ಯಾಸೂರ್ (“ಅನುಭಾವೀ ಸಂವಾಹಕ”) ೧೯೫೭ ರಲ್ಲಿ ಪ್ರಕಟವಾಗಿ ವಿಮರ್ಶಕರ ಗಮನವನ್ನು ಸಾಕಷ್ಟು ಸೆಳೆಯಿತು. ಆದರೆ, ಇವರಿಗೆ ಅಪಾರ ಕೀರ್ತಿಯನ್ನು ಮತ್ತು ಜನಪ್ರಿಯತೆಯನ್ನು ತಂದುಕೊಟ್ಟ ಕೃತಿಯೆಂದರೆ ೧೯೬೧ ರಲ್ಲಿ ಪ್ರಕಟವಾದ ಇವರ ನಾಲ್ಕನೆಯ ಕಾದಂಬರಿ ಹೌಸ್ ಫಾರ್ ಮಿ ಬಿಶ್ವಾಸ್ (‘ಬಿಶ್ವಾಸ್‌ಗೆ ಒಂದು ಮನೆ’) ಕಳೆದ ೪೫ ವರ್ಷಗಳ ಅವಧಿಯಲ್ಲಿ ಒಟ್ಟು ೧೧ ಕಾದಂಬರಿಗಳನ್ನು ಪ್ರವಾಸ ಕಥನ, ವೈಚಾರಿಕ ಪ್ರಬಂಧ ಇತ್ಯಾದಿ ಎಂಟು ಸೃಜನೇತರ ಕೃತಿಗಳನ್ನು; ಮತ್ತು ಫೈಂಡಿಂಗ್ ಸೆಂಟರ್ (‘ಕೇಂದ್ರಕ್ಕಾಗಿ ಶೋಧ’, ೧೯೮೪) ಎಂಬ ಆತ್ಮಕಥನಾತ್ಮಕ ಕೃತಿಯನ್ನೂ ಇವರು ರಚಿಸಿದ್ದಾರೆ.

ಅಸಾಧಾರಣ ಪ್ರತಿಭೆ, ನಿಖರ ಹಾಗೂ ನಿರ್ಭೀತ ವೈಚಾರಿಕತೆ, ಗಾಢ ಚಾರಿತ್ರಿಕ ಜ್ಞಾನ ಮತ್ತು ಮಾನವೀಯ ಕಳಕಳಿ… ಈ ಗುಣಗಳಿಂದಾಗಿ ಪ್ರಾರಂಭದಿಂದಲೂ ನೈಪಾಲ್ ಅವರ ಸೃಜನಶೀಲ ಹಾಗೂ ಸೃಜನೇತರ ಕೃತಿಗಳು ಓದುಗರ/ವಿಮರ್ಶಕರ ಮನ್ನಣೆ ಗಳಿಸಿವೆ; ಮತ್ತು ‘ಅಮಂಗ್ ಬಿಲೀವರ್ಸ್(‘ಶ್ರದ್ಧಾಳುಗಳ ನಡುವೆ’). “ನ್ ಏರಿಯಾ ಆಫ್ಡಾರ್ಕ್‌‌ನೆಸ್(ಕತ್ತಲೆಯ ಸ್ಥಳ) ಇತ್ಯಾದಿ ಅನೇಕ ಕೃತಿಗಳು ಅಪಾರ ಟೀಕೆ – ಟಿಪ್ಪಣಿಗಳಿಗೂ ಒಳಗಾಗಿವೆ. ಇವರನ್ನು ಆರಿಸಿಕೊಂಡು ಬಂದ ಪ್ರಶಸ್ತಿ – ಪುರಸ್ಕಾರಗಳು ಅನೇಕ : ಸಮರ್‌ಸೆಟ್ ಮಾಮ್ ಪ್ರಶಸ್ತಿ (೧೯೬೩), ಡಬ್ಲ್ಯು.ಎಚ್.ಸ್ಮಿತ್ ಪ್ರಶಸ್ತಿ (೧೯೬೮), ಬುಕರ್‌ಪ್ರಶಸ್ತಿ (೧೯೭೧) ಮತ್ತು ಇಂಗ್ಲೆಂಡ್‌ನ ರಾಣಿಯಿಂದ ‘ನೈಟ್‌ಹುಡ್’ ಪ್ರದಾನ (೧೯೯೦). ಇವೆಲ್ಲಕ್ಕೂ ಕಳಸವಿಟ್ಟಂತೆ ಈಗ ಸಾಹಿತ್ಯಕ್ಷೇತ್ರದ ನೋಬೆಲ್ ಪ್ರಶಸ್ತಿ ಇವರದಾಗಿದೆ.

* * *

ವಸಾಹತೋತ್ತರ ವಾಙ್ಮಯದ ಒಂದು ಪ್ರಮುಖ ಕಾಳಜಿಯೆಂದರೆ ಪರಂಪರೆಯೊಡನೆ ವರ್ತಮಾನಕ್ಕಿರುವ ಸಂಬಂಧದ ಸ್ವರೂಪ. ವಸಾಹತುಶಾಹಿ ತನ್ನ ಭಾಷೆ, ಸಾಹಿತ್ಯ ಮತ್ತು ವೈಚಾರಿಕತೆಗಳ ಮೂಲಕ ವಿಶ್ವದ ಹೆಚ್ಚಿನ ರಾಷ್ಟ್ರಗಳಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣವಾಗಿ, ಆ ರಾಷ್ಟ್ರಗಳು ಹಿಂದೆಂದೂ ಅನುಭವಿಸದಿದ್ದಂತಹ ತಲ್ಲಣ ಹಾಗೂ ಆತಂಕಗಳನ್ನು ಸೃಷ್ಟಿಸಿತು. ವಸಾಹತೋತ್ತರ ಅನುಭವವೇ ತಮ್ಮ ಕೃತಿಗಳ ಮೂಲದ್ರವ್ಯವಾಗಿರುವ ನೈಪಾಲ್‌ರನ್ನು ಪರಂಪರೆಯ ಪ್ರಶ್ನೆ ಕಾಡಿದೆ, ಆಕರ್ಷಿಸಿದೆ, ವಿಕರ್ಷಿಸಿದೆ. ಈ ಕಾರಣದಿಂದ ‘ಸಾತತ್ಯ’ ಮತ್ತು ‘ವಿಚ್ಚಿನ್ನತೆ’ಗಳ ಬಗೆಬಗೆಯ ರೂಪಗಳನ್ನು ಮತ್ತು ಪರಿಣಾಮಗಳನ್ನು ಭಿನ್ನ ಸಮಾಜಗಳಲ್ಲಿ ನೈಪಾಲ್ ನಿಷ್ಠುರ ಸಮಾಜ ವಿಜ್ಞಾನಿಯಂತೆ ನಿರ್ಭಾವುಕ ಶಸ್ತ್ರಚಿಕಿತ್ಸಕನಂತೆ, ತಮ್ಮ ವಿವಿಧ ವಾಙ್ಮಯ ಪ್ರಕಾರಗಳಲ್ಲಿ ವಿಶ್ಲೇಷಿಸಿದ್ದಾರೆ. ವ್ಯಾಖ್ಯಾನಿಸಿದ್ದಾರೆ. ಪರಂಪರೆಯನ್ನು ಕುರಿತ ಇಂತಹ ಆಕರ್ಷಣೆ – ವಿಕರ್ಷಣೆಗಳ ವಿವಿಧ ವಿನ್ಯಾಸಗಳನ್ನು ನೈಪಾಲ್‌ರ ಕೆಲವು ಪ್ರಮುಖ ಕೃತಿಗಳಲ್ಲಿ ಗುರುತಿಸುವ ಪ್ರಯತ್ನ ಈ ಭಾಗದಲ್ಲಿದೆ.

ನೈಪಾಲ್‌ರ ಪ್ರಥಮ ಮುಖ್ಯ ಕೃತಿ ಹೌಸ್ ಫಾರ್ ಮಿ. ಬಿಶ್ವಾಸ್ ಕಾದಂಬರಿಯಲ್ಲಿ ಪರಂಪರೆಯ ವಿಕರ್ಷಣೆಗೇ ಮತ್ತು ಅದರಿಂದ ಪಡೆಯಬೇಕಾದ ವಿಮೋಚನೆಗೇ ಒತ್ತ ಬೀಳುತ್ತದೆ. ಈ ಕಾದಂಬರಿಯ ಕೆಂದ್ರ ಪಾತ್ರ ಬಿಶ್ವಾಸ್ ನೈಪಾಲ್‌ರ ತಂದೆಯವರ ನಿಜ ಜೀವನವನ್ನು ಆಧರಿಸಿದೆ; ಮತ್ತು ಅವರ ಮಗ ಆನಂದನ ಪಾತ್ರದಲ್ಲಿ ನೈಪಾಲ್ ಸ್ವತಃ ಕಾಣಿಸಿಕೊಳ್ಳುತ್ತಾರೆ. ಕಿಶೋರಾವಸ್ಥೆಯ ಆನಂದನ ಪ್ರಜ್ಞೆಯ ಮೂಲಕ ಕಾದಂಬರಿ ನಿರೂಪಿಸಲ್ಪಟ್ಟಿದೆ.

ಕಾಂಬರಿಯ ಶೀರ್ಷಿಕೆಯಲ್ಲಿರುವ ‘ಮನೆ’ ಅನನ್ಯತೆಯ, ಸ್ವಂತಿಕೆಯ ಪ್ರತೀಕ; ಇಡೀ ಕಾದಂಬರಿ ಪರಂಪರಾಗತ ಹಾಗೂ ಯಾಂತ್ರಿಕ ಆಚರಣೆಗಳ, ನಂಬಿಕೆಗಳ, ಮೌಲ್ಯಗಳ ಕತ್ತಲೆ ತುಂಬಿದ ‘ಹನುಮಾನ್ ಹೌಸ್‌’ನಿಂದ ಬಿಶ್ವಾಸ್ ಬಿಡುಗಡೆ ಪಡೆದು, ತನ್ನದೇ ಆದ ಮನೆಗಾಗಿ ಮಾಡುವ ಬಗೆಬಗೆಯ ವಿಫಲ ಪ್ರಯತ್ನಗಳನ್ನು ನಿಖರ ವಿವರಗಳೊಡನೆ ದಾಖಲಿಸುತ್ತದೆ. (‘ಹನುಮಾನ್ ಹೌಸ್’ ಎಂಬ ಹೆಸರು ಕನ್ನಡದಲ್ಲಿ ಹೆಚ್ಚಿನ ಧ್ವನಿಸಾಧ್ಯತೆಗಳನ್ನು ಪಡೆದುಕೊಳ್ಳುತ್ತದೆ; ಪರಂಪರಾಗತ ಹಿಂದೂ ಅವಿಭಕ್ತ ಕುಟುಂಬದ ‘ಕಪಿಮುಷ್ಠಿ’ಯ ಹಿಡಿತವನ್ನು ಈ ಹೆಸರು ಸೂಚಿಸುತ್ತದೆ) ತಮ್ಮ ಒಂದು ಲೇಖನದಲ್ಲಿ ನೈಪಾಲ್ ತಮ್ಮ ಅಜ್ಜನಂತಹ ಭಾರತೀಯ ವಲಸೆಗಾರರ ಬಗ್ಗೆ ಹೀಗೆ ಹೇಳುತ್ತಾರೆ: “ಅವರ ಎಲ್ಲವನ್ನೂ – ಹಾಸಿಗೆಗಳು, ಹಿತ್ತಾಳೆಯ ಪಾತ್ರೆಗಳು, ಸಂಗೀತ ವಾದ್ಯಗಳು, ದೇವರ ವಿಗ್ರಹಗಳು, ಧಾರ್ಮಿಕ ಗ್ರಂಥಗಳು, ಅಗರ್‌ಬತ್ತಿಗಳು, ಪಂಚಾಂಗಗಳು – ಇವೆಲ್ಲವನ್ನೂ ತಮ್ಮೊಡನೆ ಒಯ್ದರು. ಆದ್ದರಿಂದ ಅಂತಹ ವಲಸೆ ಮೇಲುನೋಟಕ್ಕೆ ಕಾಣುವಷ್ಟು ಪಲ್ಲಟಕ್ಕೆ ಕಾರಣವಾಗುತ್ತಿರಲಿಲ್ಲ. ಏಕೆಂದರೆ ಅವರು ತಮ್ಮೊಡನೆ ಇಡೀ ಭಾರತವನ್ನೇ ಒಯ್ಯುತ್ತಿದ್ದರು” (೧೯೮೧). ಈ ಕಾರಣದಿಂದ, ಟ್ರಿನಿಡಾಡ್‌ನಲ್ಲಿದ್ದರೂ ‘ಹನುಮಾನ್ ಹೌಸ್’ ಭಾರತದ ಒಂದು ಭಾಗವೇ ಆಗಿದ್ದಿತು. ಟ್ರಿನಿಡಾಡ್‌ನ ಸಮಾಜದಲ್ಲಿ ಬರೆಯಲೆಂದೂ ಇಚ್ಛಿಸದ, ಒಂದು ಭದ್ರಕೋಟೆಯಂತಿದ್ದ, ಆ ಮನೆಯಿಂದ ಮುಕ್ತಿ ಬಿಶ್ವಾಸ್‌ಗೆ ಕೊನೆಯವರೆಗೂ ದೊರಕುವುದಿಲ್ಲ. ಆದರೆ ಅವನ ಮಗ ಆನಂದನಿಗೆ ಅಂತಹ ವಿಮೋಚನೆ ಸಾಧ್ಯವಾಗುತ್ತದೆ – ಸ್ಕಾಲರ್‌ಷಿಪ್ ಪಡೆದು ಇಂಗ್ಲೆಂಡ್‌ಗೆ ಹೋಗುವ ಅವಕಾಶ ದೊರೆತಾಗ. ನೈಪಾಲ್‌ರ ಮೊದಲ ನಾಲ್ಕು ಕಾದಂಬರಿಗಳು ‘ಪರಂಪರೆ-ಸ್ವಂತಿಕೆ’ ಮತ್ತು ‘ಬಂಧನ-ವಿಮೋಚನೆ’ ಈ ಬಗೆಯ ವೈಚಾರಿಕ ವಿನ್ಯಾಸಗಳಿಂದ ರೂಪುಗೊಂಡಿವೆ.

ವಿಮೋಚನೆಯ ನೆಲೆಯಲ್ಲಿ ಹೌಸ್ ಫಾರ್ ಮಿ. ಬಿಶ್ವಾಸ್ ಕಾದಂಬರಿಗೆ ಮತ್ತೂ ಒಂದು ಆಯಾಮವಿದೆ. ‘ಕಲಾವಿದ ಕಾದಂಬರಿ’ಯ (ಕುನ್‌ಸ್ಟ್ಲರ್‌ ರೋಮಾನ್) ಆಯಾಮ ಎಂದರೆ, ಜೇಮ್ಸ್‌ಜಾಯ್ಸ್‌ನ ವಿಖ್ಯಾತ ಕಾದಂಬರಿ ಪೋರ್ಟ್ರಿಟ್ ನಂತೆ ಈ ಕಾದಂಬರಿಯೂ ಲೇಖಕನೊಬ್ಬನ ಬಾಲ್ಯದಿಂದ ಪ್ರಾರಂಭವಾಗಿ, ಅವನು ಲೇಖಕನಾಗಿ ತನ್ನನ್ನು ಗುರುತಿಸಿಕೊಳ್ಳುವಲ್ಲಿಗೆ ಮುಗಿಯುತ್ತದೆ. ಬಾಲ್ಯದಿಂದಲೂ ತನ್ನ ತಂದೆ-ಅಕ್ಕ-ಅಜ್ಜಿಯರಿಂದ ಕೇಳಿದ್ದ ರಾಮಾಯಣ – ಮಹಾಭಾರತಗಳು, ಅದ್ಭುತ ಕಿನ್ನರ ಕಥೆಗಳು. ಇವುಗಳಿಂದ ಪ್ರಭಾವಿತನಾಗಿದ್ದ ಆನಂದ್ ತಾನೊಬ್ಬ ಲೇಖಕನಾಗುವ ಕನಸು ಕಾಣುತ್ತಲೇ ಬೆಳೆಯುತ್ತಾನೆ. ಮತ್ತು ಕಾದಂಬರಿಯ ಕೊನೆಯಲ್ಲಿ ತನ್ನ ಪ್ರಕಟಿತ ಕಥೆಯನ್ನು ಕೈಯಲ್ಲಿ ಹಿಡಿದು ಮಹತ್ತರ ಸಾಧನೆಯ ಸಂಭ್ರಮದೊಂದಿಗೆ ತನ್ನ ತಂದೆಯ ಬಳಿಗೆ ಓಡುತ್ತಾನೆ. ಈ ಸಂದರ್ಭದಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಆನಂದನಿಗೆ (ಮತ್ತು ನೈಪಾಲ್‌ಗೆ) ಲೇಖನವೃತ್ತಿ ವಾಸ್ತವವಾಗಿ (ಇಂಗ್ಲೆಂಡ್‌ಗೆ ಹೋಗುವ ದಾರಿಯಾಗಿ) ಮತ್ತು ಮಾನಸಿಕ ನೆಲೆಯಲ್ಲಿ ‘ವಿಮೋಚನೆ’ಯ ಮಾರ್ಗವಾಗುತ್ತದೆ ಎಂಬ ಅಂಶ. ನೈಪಾಲ್‌ರ ದ ಮಿಮಿಕ್‌ಮೆನ್‌ (‘ನಕಲಿ ಮನುಷ್ಯರು’ ೧೯೬೭) ಕಾದಂಬರಿಯ ಲೇಖಕ – ಪಾತ್ರ ರಾಲ್ಫ್‌ಸಿಂಗ್ ಹೇಳುವಂತೆ “ಪ್ರಾರಂಭದಲ್ಲಿ ಎಷ್ಟೇ ವಿರೂಪಗೊಳಿಸಿದರೂ, ಅಂತಿಮವಾಗಿ ಬರವಣಿಗೆ ಎಲ್ಲವನ್ನೂ ಸ್ಪಷ್ಟಗೊಳಿಸುತ್ತದೆ; ಮತ್ತು ಅದು ಬದುಕುವ ಬಗೆಯೂ ಆಗುತ್ತದೆ”. (ಯಾವ ಸಂಸ್ಕೃತಿಗೂ ತಮ್ಮನ್ನು ಕಟ್ಟಿಹಾಕಿಕೊಳ್ಳುವ ನೈಪಾಲ್ ತಮ್ಮ ಪ್ರತಿರೂಪವಾದ ಪಾತ್ರಕ್ಕೆ ಉದ್ದೇಶಪೂರ್ವಕವಾಗಿ ‘ರಾಲ್ಫ್‌ಸಿಂಗ್’ ಎಂಬ ಬ್ರಿಟಿಷ್ – ಭಾರತೀಯ ಹೆಸರನ್ನು ಕೊಡುತ್ತಾರೆ.)

ತಮ್ಮ “ಭೂತಕಾಲದ ಭ್ರೂಣ ಗೂಢಗಳು” ತುಂಬಿರುವ ಭಾರತದ ಬಗ್ಗೆ ನೈಪಾಲ್‌ರಿಗೆ ‘ಪ್ರೀತಿ-ದ್ವೇಷ’ಗಳ ಸಂಬಂಧವಿದೆ ಎಂದರೆ ಏನೂ ಹೇಳಿದಂತಾಗುವುದಿಲ್ಲ. ಸರಳೀಕೃತ ಪ್ರೇಮ-ದ್ವೇಷಗಳಾಚೆ, ಭಾರತ ನೈಪಾಲ್‌ರಿಗೆ ಒಂದು ರಹಸ್ಯದಂತೆ, ಒಂದು ನಿರ್ಜೀವ ಸಮಾಜದಂತೆ, ಅಗಾಧ ಸಾಧ್ಯತೆಗಳ ಒಂದು ಆಗರದಂತೆ ಬೇರೆ ಬೇರೆ ಸಂದರ್ಭಗಳಲ್ಲಿ ಕಂಡುಬಂದಿದೆ. ಭಾರತದ ಬಗ್ಗೆ ತಮಗಿರುವ ಸಂಬಂಧವನ್ನು ಅವರೇ ನೇರವಾಗಿ ಹೀಗೆ ವ್ಯಾಖ್ಯಾನಿಸುತ್ತಾರೆ. “ಅದು ನನ್ನ ದೇಶವಲ್ಲ; ನನ್ನ ದೇಶವಾಗಲೂ ಸಾಧ್ಯವೂ ಇಲ್ಲ. ಆದರೆ, ನಾನು ಅದನ್ನು ತಿರಸ್ಕರಿಸಲೂ ಸಾಧ್ಯವಿಲ್ಲ. ಅಲಕ್ಷಿಸಲೂ ಸಾಧ್ಯವಿಲ್ಲ” (೧೯೭೭, ಮುನ್ನುಡಿ). ಇಂತಹ ಸಂಕೀರ್ಣ ಪ್ರತಿಕ್ರಿಯೆಯನ್ನು ಭಾರತದ ಬಗ್ಗೆ ಅವರು ಬರೆದಿರುವ ಮೂರು ಕೃತಿಗಳು ದಾಖಲಿಸುತ್ತವೆ.

ಇವುಗಳಲ್ಲಿ ಮೊದಲನೆಯದಾದ ಅನ್ಏರಿಯಾ ಆಫ್ಡಾರ್ಕ್‌‌ನೆಸ್(ಕತ್ತಲೆಯ ಪ್ರದೇಶ, ೧೯೬೪) ಭಾರತವನ್ನು ಸಂಪೂರ್ಣವಾಗಿ ಪಾಶ್ಚಿಮಾತ್ಯ ದೃಷ್ಟಿಕೋನದಿಂದ ನೋಡುವುದರಿಂದ ಅದು ಮಿಸ್ ಮೇಯೋ, ಬೆವರ್ಲಿ ನಿಕಲ್ಸ್‌ ಮುಂತಾದವರು ಬರೆದಿರುವ ವಿಡಂಬನೆಗಳಿಂದ ಭಿನ್ನವಾಗುವುದಿಲ್ಲ. ಮುಂಬಯಿ ವಿಮಾನ ನಿಲ್ದಾಣದಲ್ಲಿ ಸುಂಕದ ಅಧಿಕಾರಿಗಳ ಅನಾಗರಿಕ ವರ್ತನೆಯ ವಿವರಣೆಯಿಂದ ಪ್ರಾರಂಭವಾಗುವ ಕೃತಿ, ಮುಂದುವರೆದಂತೆಲ್ಲಾ ಬೀದಿಗಳಲ್ಲಿ / ಮನೆಗಳಲ್ಲಿ ತುಂಬಿರುವ ಕೊಳಕು, ರೈಲ್ವೆ ಹಳಿಗಳ ಬಳಿ ಸಾಲಾಗಿ ಮಲವಿಸರ್ಜನೆಗೆ ಕುಳಿತಿರುವ ಜನರು, ಅಧಿಕಾರಿಗಳ ಲಂಚಕೋರತನ, ಜೋಪಡಿಪಟ್ಟಿಗಳಲ್ಲಿ ವಾಸಿಸುವವರ ಕಿತ್ತು ತಿನ್ನುವ ಬಡತನ, ಅಂಧ ವಿಶ್ವಾಸ, ಮತ್ತು ಢೋಂಗೀ ಧರ್ಮಗುರುಗಳು – ಇವೆಲ್ಲವನ್ನೂ ನಿಷ್ಠುರವಾಗಿ ದಾಖಲಿಸುತ್ತದೆ. ಭಾರತದಲ್ಲಿ ಎಲ್ಲವೂ – ನೆಹರೂ ಆಧುನಿಕತೆ, ಬಹುಮಹಡಿ ಕಟ್ಟಡಗಳು, ಭಾರತೀಯ ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆ ಎಲ್ಲವೂ – ಪಶ್ಚಿಮದ ಶುಷ್ಕ ಅನುಕರಣೆಯಂತೆ (ಮಿಮಿಕ್ರಿ) ಕಾಣಿಸುತ್ತದೆ.

೧೯೭೭ರಲ್ಲಿ ಎಮರ್ಜೆನ್ಸಿಯ ಕಾಲಘಟ್ಟದಲ್ಲಿ ಬಂದ ಎರಡನೆಯ ಕೃತಿ ವೂಂಡಿಡ್ ಸಿವಿಲೈಜೇಶನ್ (ಗಾಯಗೊಂಡ ನಾಗರೀಕತೆ) ಭಾರತವನ್ನು ಸ್ವಲ್ಪ ಭಿನ್ನವಾಗಿ ನೋಡಲು ಪ್ರಯತ್ನಿಸುತ್ತದೆ. ಶೀರ್ಷಿಕೆಯ ಅರ್ಥ “ಸಾವಿರ ವರ್ಷಗಳಿಂದ ನಡೆದಿರುವ ಪರಕೀಯ ಧಾಳಿಯಿಂದ ಭಾರತ ಗಾಯಗೊಂಡಿದೆ” ಎಂದು. ಇಲ್ಲಿಯೂ ನೈಪಾಲ್‌ರ ಮುಖ್ಯ ವಾದವೇನೆಂದರೆ, ಅನೇಕ ಶತಮಾನಗಳಿಂದ ಧಾಳಿಗಳಿಗೆ ಸಿಕ್ಕಿ ಶಕ್ತಿಹೀನವಾಗಿರುವ ಭಾರತ ಆಧುನಿಕತೆಯ ಸವಾಲುಗಳನ್ನು ಎದುರಿಸುವಲ್ಲಿ ಸೋತಿದೆ. “ಭಾರತದ ಸಂದಿಗ್ಧ ಅಥವಾ ಬಿಕ್ಕಟ್ಟು ರಾಜಕೀಯ ಅಥವಾ ಆರ್ಥಿಕ ಸ್ವರೂಪದ್ದಲ್ಲ. ಗಾಯಗೊಂಡ ಒಂದು ನಾಗರೀಕತೆ ಬಹುಕಾಲದ ನಂತರ ತನ್ನ ದೌರ್ಬಲ್ಯಗಳನ್ನು ಅರ್ಥಮಾಡಿ ಕೊಳ್ಳುತ್ತದೆ; ಆದರೆ, ಈ ದೌರ್ಬಲ್ಯಗಳನ್ನು ಮೀರಿ ಮುಂದುವರಿಯಲು ಅಗತ್ಯವಾದ ಬೌದ್ಧಿಕತೆ ಅದಕ್ಕಿಲ್ಲವಾಗಿದೆ. (ಅನುಷಂಗಿಕವಾಗಿ : ಈ ಕೃತಿಯಲ್ಲಿ ಅನಂತಮೂರ್ತಿಯವರ ಸಂಸ್ಕಾರದ ದೀರ್ಘ ಹಾಗೂ ಸ್ವಾರಸ್ಯಕರ ಚರ್ಚೆಯಿದೆ.)

೧೯೯೦ರಲ್ಲಿ ಬಂದ ಇಂಡಿಯಾ : ಮಿಲಿಯನ್ ಮ್ಯೂಟಿನೀಜ್ (ಭಾರತ: ಅಸಂಖ್ಯಾತ ದಂಗೆಗಳು) ಎಂಬ ೫೨೦ ಪುಟಗಳ ದೀರ್ಘ ಕೃತಿ ಭಾರತವನ್ನು ಸಮಗ್ರವಾಗಿ ‘ಒಳಗಿನವನ’ ನೆಲೆಯಿಂದ ಅರ್ಥೈಸಲು ಮತ್ತು ಆಧುನಿಕ ಭಾರತದ ಚಲನಶೀಲ ಗತಿಯನ್ನು ಗ್ರಹಿಸಲು ಪ್ರಯತ್ನಿಸುತ್ತದೆ. ಈ ಕೃತಿಯಲ್ಲಿ ಒಟ್ಟಾರೆಯಾಗಿ ನೈಪಾಲ್ ಮಂಡಿಸುವುದೇನೆಂದರೆ, ಇಂದಿನ ಭಾರತದಲ್ಲಿ ಪರಂಪರಾಗತ ವ್ಯವಸ್ಥೆಯ ವಿರುದ್ಧ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರತಿರೋಧ ಕ್ರಿಯಾಶೀಲವಾಗಿ ಮೂಡಿಬರುತ್ತಿದೆ; ಮತ್ತು ಈ ಪ್ರತಿರೋಧವೇ ಒಂದು ನೂತನ ಹಾಗೂ ಶಕ್ತಿಶಾಲಿ ರಾಷ್ಟ್ರವನ್ನು ನಿರ್ಮಿಸುತ್ತದೆ.

ಕಳೆದ ಶತಮಾನದಲ್ಲಿ ಮೂಡಿಬಂದ ದ್ರಾವಿಡ/ಶೂದ್ರ/ದಲಿತ ಚಳುವಳಿಗಳು, ರೈತ ಸಂಘಟನೆಗಳು, ಅಯ್ಯಪ್ಪ ಮುಂತಾದ ನೂತನ ಧಾರ್ಮಿಕ ಪಂಥಗಳು, ಖಲಿಸ್ತಾನ್/ನಕ್ಸಲೈಟ್‌ ಚಳುವಳಿಗಳು, ನೂತನ ಉದ್ಯೋಗಗಳು – ಇತ್ಯಾದಿಗಳನ್ನು ನೈಪಾಲ್ ಕ್ರಿಯಾಶೀಲ ಪ್ರತಿರೋಧದ ಮುಖಗಳೆಂದು ಗುರುತಿಸುತ್ತಾರೆ. (ಇವುಗಳೇ ಕೃತಿಯ ಶೀರ್ಷಿಕೆಯಾದ ‘ಅಸಂಖ್ಯ ದಂಗೆಗಳು’).

ಕೃತಿಯ ಕೊನೆಯಲ್ಲಿ ನೈಪಾಲ್ ಆಧುನಿಕ ಭಾರತದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಹೀಗೆ ಗುರುತಿಸುತ್ತಾರೆ; “ಎಷ್ಟರಮಟ್ಟಿಗೆ ಈ ದೇಶವು ಬದಲಾಗಿದೆ ಮತ್ತು ಪುನಃ ನಿರ್ಮಾಣಗೊಳ್ಳುತ್ತಿದೆ ಎಂಬುದನ್ನು ಗ್ರಹಿಸಲು ನಾನು ೧೯೬೨ ರಲ್ಲಿ (“ಕತ್ತಲೆಯ ಪ್ರದೇಶ” ಬರೆದಾಗ) ಅಸಮರ್ಥನಾಗಿದ್ದೆ. ‘ಸಿಪಾಯಿ ದಂಗೆ’ಯ ನಂತರದ ನೂರ ಮೂವತ್ತು ವರ್ಷಗಳಲ್ಲಿ… ಸ್ವಾತಂತ್ರ್ಯದ ಅರಿವು ಭಾರತದ ಮೂಲೆಮೂಲೆಗಳಿಗೂ ಪಸರಿಸಿದೆ. ಈಗ ತಾವು ಯಾರು ಮತ್ತು ತಮ್ಮ ಹಕ್ಕುಬಾಧ್ಯತೆಗಳೇನು ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಇನ್ನೂರು ವರ್ಷಗಳ ಹಿಂದೆ ಕಾಣದಿದ್ದ ಸಂಗತಿಯೊಂದು ಇಂದು ಭಾರತದಲ್ಲಿ ಕಂಡುಬರುತ್ತಿದೆ. – ಕೇಂದ್ರ ಪ್ರಜ್ಞೆ ಕೇಂದ್ರೀಕೃತ ಬೌದ್ಧಿಕತೆ, ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆ. ಈಗ ಕಂಡುಬರುತ್ತಿರುವ ‘ದಂಗೆ’ಗಳು ಭಾರತೀಯ ಬೌದ್ಧಿಕತೆಯ ಸಾಮರ್ಥ್ಯವನ್ನೂ ಮತ್ತು ಇಂದು ಭಾರತೀಯರೆಲ್ಲರೂ ಒಪ್ಪಿಕೊಂಡಿರುವ ಮಾನವೀಯ ಮೌಲ್ಯಗಳನ್ನೂ ಸೂಚಿಸುತ್ತವೆ. ಈ ‘ದಂಗೆ’ಗಳು ಕೊನೆಗೊಳ್ಳಬೇಕೆಂದು ನಾವು ಆಶಿಸಬೇಕಿಲ್ಲ; ಏಕೆಂದರೆ, ಇವು ಭಾರತದ ಬೆಳವಣಿಗೆಯ ಒಂದು ಅನಿವಾರ್ಯ ಭಾಗ; ಲಕ್ಷಾಂತರ ಜನರ ನೂತನ ಜೀವನ ಕ್ರಮದ ಪ್ರಾರಂಭ.”

ಒಟ್ಟಾರೆಯಾಗಿ ಹೇಳಬೇಕಾದರೆ, ವಿದ್ಯಾಧರ ಸೂರಜ್‌ಪ್ರಸಾದ್ ನೈಪಾಲ್‌ ಅವರಿಗೆ ಆಧುನಿಕತೆಯ ಎಲ್ಲಾ ಗೃಹೀತಗಳಲ್ಲಿಯೂ ಅಪಾರ ವಿಶ್ವಾಸವಿದೆ. ಪಾಶ್ಚಿಮಾತ್ಯ ಬೌದ್ಧಿಕ ಪರಂಪರೆ, ತರ್ಕಪಾರಮ್ಯ ವಾದ, ಚಾರಿತ್ರಿಕ ವಿಶ್ಲೇಷಣೆ ಮತ್ತು ಸಾಮಾಜಿಕ ಸಂಸ್ಥೆಗಳ ಅನ್ವೇಷಣೆ – ಇವೆಲ್ಲವುಗಳನ್ನೂ ಅವರು ಮನಸಾರೆ ಒಪ್ಪುತ್ತಾರೆ. ಸಹಜ ಪ್ರವೃತ್ತಿಗಳನ್ನಾಧರಿಸಿದ ಬದುಕು, ಆಚರಣಾತ್ಮಕ ಮತ್ತು ಪುರಾಣಗರ್ಭಿತ ಧಾರ್ಮಿಕ ವ್ಯವಸ್ಥೆಗಳು ಅವರ ತಿರಸ್ಕಾರಕ್ಕೆ ಗುರಿಯಾಗುತ್ತವೆ. ಈ ನೆಲೆಯಲ್ಲಿ ನೈಪಾಲ್ ಮತ್ತು ಶಿವರಾಮ ಕಾರಂತರ ನಡುವೆ ಅನೇಕ ಸಾಮ್ಯಗಳಿವೆ : ಇಬ್ಬರೂ ಹುಟ್ಟಾ ಬಂಡು ಕೋರರು ಮತ್ತು ಘೋಷಿತ ವಿಚಾರವಾದಿಗಳು : ನೈಪಾಲ್‌ರಂತೆ ಕಾರಂತರೂ ಸಂಚಾರಪ್ರಿಯರು; ಇಬ್ಬರೂ ಎಲ್ಲಾ ಬಗೆಯ ಸಾಂಸ್ಥೀಕೃತ ಧರ್ಮಗಳನ್ನು ಹಾಗೂ ನಂಬಿಕೆಗಳನ್ನು ತಿರಸ್ಕರಿಸಿದವರು; ಮತ್ತು ಯಾವುದೇ ಕ್ಷೇತ್ರದಲ್ಲಿಯೂ ಢೋಂಗೀತನವಿದ್ದರೆ ಅದನ್ನು ನಿರ್ದಯೆಯಿಂದ ಬಯಲು ಮಾಡುವವರು. ನೊಬೆಲ್ ಪ್ರಶಸ್ತಿ ಪತ್ರದಲ್ಲಿ “ಇವರು ಸಾಹಿತ್ಯಕ ವಿಶ್ವಪರ್ಯಟಕರು; ಮತ್ತು ಇವರ ಮುಖ್ಯ ಕಾಳಜಿಯೆಂದರೆ ಹುದುಗಿಸಲ್ಪಟ್ಟ ಚರಿತ್ರೆಗಳ ಅಸ್ತಿತ್ವವನ್ನು ನೋಡಲು ವಿಶ್ವವನ್ನು ನಿರ್ಬಂಧಿಸುವುದು” ಎಂದು ನೈಪಾಲ್‌ರ ಬಗ್ಗೆ ಹೇಳಿರುವ ಮಾತುಗಳು ಕಾರಂತರಿಗೂ ಅನ್ವಯಿಸುತ್ತವೆ.

ಆಧುನಿಕ ಜಗತ್ತಿನಲ್ಲಿ ಉಗ್ರ ರಾಷ್ಟ್ರೀಯತೆಯ ಮತ್ತು ಧಾರ್ಮಿಕ ಮೂಲಭೂತವಾದದ ಕಾರಣದಿಂದ ನಿರ್ಮಾಣವಾಗಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಲೇಖಕನೊಬ್ಬನ ಕರ್ತವ್ಯವೇನು ಎಂದು ವಿಚಾರ ಮಾಡುತ್ತಾ ಎಡ್ವರ್ಡ್ ಸೈದ್ ಹೀಗೆ ಹೇಳುತ್ತಾನೆ : (ಇಂದಿನ ಪರಿಸ್ಥಿತಿಯಲ್ಲಿ) ಇತರರನ್ನು ಆಳಲು ಇಚ್ಛಿಸದೆ, ಇತರರನ್ನು ವರ್ಗೀಕರಿಸಿ, ಭಿನ್ನ ಭಿನ್ನ ಶ್ರೇಣಿಗಳಲ್ಲಿ ಅವರನ್ನು ಗುರುತಿಸಲು ಅಪೇಕ್ಷಿಸದೆ, ಮುಖ್ಯವಾಗಿ, ‘ನಮ್ಮ ಸಂಸ್ಕೃತಿಯ’, ‘ನಮ್ಮ ರಾಷ್ಟ್ರದ’ ಹಿರಿಮೆಯ (ಅಥವಾ ಅದು ಇಲ್ಲದಿರುವ) ಬಗ್ಗೆ ಸದಾ ಕೀರ್ತಿಸಲು ಇಚ್ಛಿಸದೆ ಇರುವುದು ‘ಪರಕೀಯ’ ಹಾಗೂ ‘ನಿರಪೇಕ್ಷ’ ಸಾಹಿತಿಗೆ ಮಾತ್ರ ಸಾಧ್ಯ”. (ಸಂಸ್ಕೃತಿ ಮತ್ತು ಸಾಮ್ರಾಜ್ಯಶಾಹಿ, ೧೯೯೪) ಸೈದ್ ವಿವರಿಸುವ ಇಂತಹ ‘ಪರಕೀಯ ಪ್ರಜ್ಞೆ’ಯ (ಎಕ್ಸಿಲಿಕ್ ಕಂಡೀಶನ್) ಜೀವಂತ ನಿದರ್ಶನ ವಿ.ಎಸ್. ನೈಪಾಲ್.

(ಪರಂಪರೆಪ್ರತಿರೋಧ, ೨೦೦೩)

* * *