೧೯೫೪: ತರಗತಿಯೊಂದರಲ್ಲಿ ಅಂದು ಕಲಿಸಬೇಕಿದ್ದ ರಾಬರ್ಟ್‌ ಬ್ರಿಜಸ್ ಎಂಬ ಬ್ರಿಟಿಷ್‌ ಕವಿಯ (ಆ ಕಾಲದಲ್ಲಿ ‘ಮಹಾಕೃತಿ’ಯೆಂದು ಪರಿಗಣಿಸಲ್ಪಟ್ಟಿದ್ದ) ಟೆಸ್ಟಮೆಂಟ್ಆಫ್ ಬ್ಯೂಟಿ ಎಂಬ ಕೃತಿಯ ನಾಲ್ಕು ಸಾಲುಗಳನ್ನು ಓದಿ, “ಏನ್ರೀ-ಇದನ್ನೂ ಕಾವ್ಯ ಅಂತಾರಲ್ರೀ- ಛೇ!” ಎಂದು ಉದ್ಗರಿಸಿ, ಧೊಪ್ಪನೆ ಆ ಕೃತಿಯನ್ನು ನೆಲಕ್ಕೆಸೆದು, ವಿಷಾದದಿಂದ ಬಾಗಿಲ ಬಳಿ ನಡೆದು ಅಲ್ಲಿ ನಿಂತುದು.

೧೯೫೭ : ತರಗತಿಯಲ್ಲಿ, ಹಾಪ್‌ಕಿನ್ಸ್ ಕವಿಯ “I Caught this monring, morning’s minion… dapple-dawn-drawn Falcon” ಎಂಬ ಸಾಲುಗಳನ್ನು ಭಾವಪೂರಿತವಾಗಿ ಓದುತ್ತಾ, ಬೆರಳೆತ್ತಿ ಆಕಾಶದಲ್ಲಿ ಬಹುವರ್ಣದ ಅರುಣೋದಯವನ್ನು ತನ್ನ ಹಿಂದೆಯೇ ಒಯ್ಯುತ್ತಿದ್ದ ಹಕ್ಕಿಯನ್ನು ‘ಅಗೋ, ಅಲ್ಲಿ’ ಎಂದು ನಮಗೆ ತೋರಿಸಿದುದು…

೨೦೦೧: ಧ್ವನ್ಯಾಲೋಕದಲ್ಲಿ ನಡೆಯುತ್ತಿದ್ದ ಒಂದು ವಿಚಾರ ಸಂಕಿರಣದ ಕೊನೆಯ ದಿನ ತಮ್ಮ ಶ್ರೀಮತಿಯರೊಡನೆ ಮಾತನಾಡುತ್ತಾ, “ಮಧ್ಯಾಹ್ನಕ್ಕೆ ಒಬ್ಬಟ್ಟು ಮಾಡಿಸಿ ಬಿಡು; ಮಕ್ಕಳು ಸಿಹಿ ಊಟ ಮಾಡಿ ಮನೆಗೆ ಹೋಗಲಿ” ಎಂದು ಕಕ್ಕುಲಾತಿಯಿಂದ ಹೇಳುತ್ತಿದ್ದುದು (ಆ ‘ಮಕ್ಕಳಲ್ಲಿ’ ೨೫ ರಿಂದ ೬೦ ವರ್ಷದವರೂ ಇದ್ದರು ಎಂಬುದು ಬೇರೆ ಮತು)… ಇಂತಹ ಹತ್ತಾರು ನೆನಪುಗಳು ಅವರ ನೂರಾರು ಶಿಷ್ಯರಿಗೆ. ನೆನಪುಗಳಿಗೆ ಸಾವಿಲ್ಲ.

* * *

ಪ್ರೊಫೆಸರ್ ಸಿ.ಡಿ. ನರಸಿಂಹಯ್ಯನವರ ಬದುಕೆಂದರೆ ಅನೇಕ ಶತಮಾನಗಳ ನಂತರ ಮೈಮುರಿದೆದ್ದ ಸ್ವತಂತ್ರ ಭಾರತದ ಅಗಾಧ ಸಾಧ್ಯತೆಗಳ ಜೀವಂತ ದಾಖಲೆ. (ಇಂದಿನ ರಾಮನಗರವಾದ) ಅಂದಿನ ಕ್ಲೋಸ್‌ಪೇಟೆಯಲ್ಲಿ ೧೯೨೧ರ ಮೇ ತಿಂಗಳಿನಲ್ಲಿ ಒಂದು ಬಡ ಹಾಗೂ ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದವರು ನರಸಿಂಹಯ್ಯನವರು. N For Nobody ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ಅವರೇ ವಿವರಿಸುವಂತೆ, ಬಾಲ್ಯದಲ್ಲಿ ಅವರು ಪಕ್ಕದ ಹಳ್ಳಿಯಲ್ಲಿದ್ದ ಶಾಲೆಗೆ ಹೋಗಲು ಎರಡು ಮೈಲಿ ನಡೆಯಬೇಕಾಗುತ್ತಿತ್ತು; ವಿದ್ಯುಚ್ಛಕ್ತಿ ಇಲ್ಲದ ಕಾರಣ ಕಂದೀಲಿನ ಬೆಳಕಿನಲ್ಲಿ ಓದಲು ಅವರನ್ನು ಅವರ ತಂದೆ ಬೆಳಿಗ್ಗೆ ಬೇಗ ಏಳಿಸುತ್ತಿದ್ದರು; ಶಾಲೆಯಲ್ಲಿ ‘ನಿನಗೇಕೆ ಸಂಸ್ಕೃತ? ಕನ್ನಡ ಕಲಿ’ ಎಂದು ಅವರ ಶಾಲಾ ಉಪಾಧ್ಯಾಯರ ಹೀಯಾಳಿಕೆ (ವಿಧಿವತ್ತಾಗಿ ಸಂಸ್ಕೃತ ಕಲಿಯಲು ಸಾಧ್ಯವಾಗದುದಕ್ಕಾಗಿ ಸಿಡಿಎನ್ ಅವರಿಗೆ ಕೊನೆಯವರೆಗೂ ಕೊರಗಿತ್ತು) – ಈ ರೀತಿ, ಹಳ್ಳಿಯ ಹುಡುಗನೊಬ್ಬ ಅಪಾರ ಎಡರು-ತೊಡರುಗಳನ್ನೆದುರಿಸುತ್ತಾ, ತನ್ನ ಶಿಕ್ಷಣವನ್ನು ಛಲದಿಂದ ಮುಂದುವರೆಸಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಪಡೆದು, ಅನಂತರ ಪ್ರಸಿದ್ಧ ಕೇಂಬ್ರಿಜ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದು, ಮೈಸೂರು ವಿ.ವಿ.ಯ ಇಂಗ್ಲೀಷ್ ವಿಭಾಗದಲ್ಲಿ ಪ್ರಾಧ್ಯಾಪಕ-ಮುಖ್ಯಸ್ಥರಾಗಿ (೧೬೫೦-೭೯), ಮಹಾರಾಜಾಸ್ ಕಾಲೇಜಿನ ಪ್ರಾಂಶುಪಾಲರಾಗಿ (೧೯೫೭-೬೨), ನಿವೃತ್ತಿಯ ನಂತರ ‘ಧ್ವನ್ಯಾಲೋಕ’ದಂತಹ ಮಾದರಿ ಸಂಶೋಧನಾ ಕೇಂದ್ರವನ್ನು ಕಟ್ಟಿ, ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದುದು ಒಂದು ದಂತಕಥೆಯೇ ಸರಿ.

ಕೇಂಬ್ರಿಜ್‌ನಲ್ಲಿ ಖ್ಯಾತ ವಿಮರ್ಶಕ ಎಫ್‌.ಆರ್. ಲೀವಿಸ್‌ನ ಪಟ್ಟ ಶಿಷ್ಯರಾಗಿದ್ದ ಸಿಡಿಎನ್ ಮೈಸೂರು ವಿ. ವಿ. ಯ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕರಾದನಂತರ ಪಠ್ಯಾವಳಿ, ಬೋಧನಕ್ರಮ, ಪರೀಕ್ಷಾ ಪದ್ಧತಿ, ಇವೆಲ್ಲವುಗಳಲ್ಲಿಯೂ ಮಹತ್ತರ ಬದಲಾವಣೆಗಳನ್ನು ಮಾಡಿ, ಮೈಸೂರು ವಿ.ವಿ. ಯ ಇಂಗ್ಲೀಷ್ ವಿಭಾಗ ಇಡೀ ಭಾರತದಲ್ಲಿಯೇ ಪ್ರಸಿದ್ಧವಾಗುವಂತೆ ಮಾಡಿದರು. (ಆ ಕಾಲಘಟ್ಟದಲ್ಲಿ, ೧೯೫೪-೫೮ರ ಅವಧಿಯಲ್ಲಿ, ನಾನು ಆ ವಿಭಾಗದ ವಿದ್ಯಾರ್ಥಿಯಾಗಿದ್ದುದು ನನ್ನ ಅದೃಷ್ಟ.) ಮುಖ್ಯವಾಗಿ, ಅಂದಿದ್ದ ಆನರ್ಸ್‌ ಎಂ.ಎ. ಪದವಿಗಳ ಪಠ್ಯಗಳನ್ನು ಬದಲಾಯಿಸಿ, ಹಾಪ್‌ಕಿನ್ಸ್, ಎಲಿಯಟ್, ಯೇಟ್ಸ್, ಮುಂತಾದವರ ‘ಆಧುನಿಕ ಕಾವ್ಯ’ಕ್ಕೆ, ಹಾಗೂ ರಿಚರ್ಡ್ಸ್‌, ಎಲಿಯಟ್, ಲೀವಿಸ್ ಮುಂತಾದವರ ನವ್ಯ ವಿಮರ್ಶೆಗೆ ಆದ್ಯತೆ ಕೊಟ್ಟರು. ಪ್ರತಿ ಬುಧವಾರವೂ ಸೇರುತ್ತಿದ್ದ ‘ಲಿಟರರಿ ಕ್ಲಬ್‌’ ಸಭೆಗಳಲ್ಲಿ ನಡೆಯುತ್ತಿದ್ದ ಗಂಭೀರ ವಿಚಾರ-ಚರ್ಚೆಗಳಲ್ಲಿ ವಿದ್ಯಾರ್ಥಿಗಳೂ ನೇರವಾಗಿ (ಮತ್ತು ಕಡ್ಡಾಯವಾಗಿ) ಭಾಗವಹಿಸುವಂತೆ ಮಾಡಿದರು. ತರಗತಿಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿಯೊಂದು ಪಠ್ಯದ ಬಗ್ಗೆ ವಿಮರ್ಶಾ ಪ್ರಬಂಧವನ್ನು ಬರೆದು, ತರಗತಿಯಲ್ಲಿ ಅದನ್ನು ಮಂಡಿಸಿದ ನಂತರ ಅದರ ಚರ್ಚೆಯಾಗುವಂತೆ ಮಾಡಿದರು. ಒಟ್ಟಿನಲ್ಲಿ, ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆಗಳನ್ನು ಪ್ರತಿಯೊಬ್ಬರೂ ಗಂಭೀರವಾಗಿ, ಜವಾಬ್ದಾರಿಯುತವಾಗಿ ಪರಿಗಣಿಸುವಂತಹ ವಾತಾವರಣವನ್ನು ನಿರ್ಮಿಸಿದರು. ಕನ್ನಡದ ನವ್ಯ ಸಾಹಿತ್ಯದ ಚಳುವಳಿಯ ಮುಂಚೂಣಿಯಲ್ಲಿದ್ದ ಬಹುತೇಕ ಲೇಖಕರು (ಭೋಗಿಶಯನ, ಎಂಜಿಕೆ, ಅನಂತಮೂರ್ತಿ, ಶ್ರೀನಿವಾಸ ರಾವ್, ಮಿರ್ಲೆ ವಿಶ್ವನಾಥ, ಡಿ.ಎ. ಶಂಕರ್, ಇತ್ಯಾದಿ) ಆ ಕಾಲಘಟ್ಟದಲ್ಲಿ ಸಿಡಿಎನ್ ಅವರ ಪ್ರಿಯ ಶಿಷ್ಯರಾಗಿದ್ದುದು ಆಕಸ್ಮಿಕವೇನಲ್ಲ. ಕನ್ನಡ ನವ್ಯ ಚಳುವಳಿಗೆ ಸಿಡಿಎನ್ ಅವರ ಪರೋಕ್ಷ ಪ್ರಭಾವ-ಪ್ರೇರಣೆಗಳು ಗಮನೀಯ.

ಹಾಗೆಯೇ, ಅಖಿಲ ಭಾರತ ನೆಲೆಯಲ್ಲಿ ‘ಇಂಗ್ಲೀಷ್ ಅಧ್ಯಯನ’ದ ವ್ಯಾಪ್ತಿಯನ್ನು ಪರಿಣಾಮಕಾರಿಯಾಗಿ ಬದಲಾಯಿಸಿದವರೂ ಸಿಡಿಎನ್ ಅವರೇ. ಕೇವಲ ‘ಬ್ರಿಟಿಷ್ ಸಾಹಿತ್ಯ’ದ ಅಧ್ಯಯನ ಕೇಂದ್ರಗಳಾಗಿದ್ದ ಇಂಗ್ಲೀಷ್ ವಿಭಾಗಗಳಲ್ಲಿ ಮೊಟ್ಟ ಮೊದಲು ಭಾರತೀಯರಿಂದ ಇಂಗ್ಲೀಷ್ ಭಾಷೆಯಲ್ಲಿ ರಚಿಸಲ್ಪಟ್ಟ ಸಾಹಿತ್ಯವನ್ನು (‘Indian Writing in English’) ಪಠ್ಯಾವಳಿಯಲ್ಲಿ ಸೇರಿಸಿದರು. ಅನಂತರ, ೬೦ರ ದಶಕದಲ್ಲಿ ಅಮೆರಿಕನ್ ಸಾಹಿತ್ಯ, ಆಸ್ಟ್ರೇಲಿಯನ್ ಸಾಹಿತ್ಯ, ಕಾಮನ್‌ವೆಲ್ತ್ ಸಾಹಿತ್ಯ, ಇತ್ಯಾದಿಗಳನ್ನೂ ಇಂಗ್ಲೀಷ್ ವಿಭಾಗಕ್ಕೆ ತಂದರು. ಅರ್ಥಾತ್‌, ‘ಇಂಗ್ಲೀಷ್ ಸಾಹಿತ್ಯವನ್ನು ‘ಇಂಗ್ಲೀಷ್ನಲ್ಲಿ ಬರೆಯಲ್ಪಟ್ಟ ಸಾಹಿತ್ಯಎಂಬಂತೆ ಬದಲಾಯಿಸಿ, ಇಂಗ್ಲೀಷ್ ಅಧ್ಯಯನಕ್ಕೆ ನೂತನ ಆಯಾಮಗಳನ್ನು ದೊರಕಿಸಿಕೊಟ್ಟರು.

ಬದುಕಿನುದ್ದಕ್ಕೂ ಅವಿಶ್ರಾಂತವಾಗಿ ಬೋಧನೆ-ಬರವಣಿಗೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಿಡಿಎನ್ ಸ್ವತಃ ರಚಿಸಿದ ಮತ್ತು ಸಂಪಾದಿಸಿದ ಕೃತಿಗಳ ಸಂಖ್ಯೆ ನಲವತ್ತನ್ನೂ ಮೀರುತ್ತದೆ. ಇವುಗಳಲ್ಲಿ ಮುಖ್ಯವಾದವುಗಳೆಂದರೆ: ನೆಹರು ಅವರ ಕೃತಿ-ಲೇಖನ-ಭಾಷಣಗಳ ಬಗ್ಗೆ ಬರೆದಿರುವ ನಾಲ್ಕು ಗ್ರಂಥಗಳು: ರಾಜಾರವ್, ಕಾಮನ್‌ವೆಲ್ತ್ ಸಾಹಿತ್ಯ, ಇಂದಿನ ಭಾರತೀಯ ಸಂದರ್ಭದಲ್ಲಿ ವಿಮರ್ಶೆಯ ಕಾರ್ಯ, ಇತ್ಯಾದಿ ಕೃತಿಗಳು ಮತ್ತು ವಿಮರ್ಶಾ ಸಂಕಲನಗಳು; ಮತ್ತು, N For Nobody: Autobiography of an English Teacher ಎಂಬ ಆತ್ಮಚರಿತ್ರೆ. ಇವುಗಳಷ್ಟೇ ಮುಖ್ಯವಾದ ಅವರ ಮತ್ತೊಂದು ಸಾಧನೆಯೆಂದರೆ, The Literary Criterion ಎಂಬ ಪ್ರಭಾವಿ ನಿಯತಕಾಲಿಕೆಯನ್ನು ೧೯೫೨ರಿಂದ ಇಂದಿನವರೆಗೂ, ಯಾವುದೇ ಸಂಸ್ಥೆಯ/ಸರಕಾರದ ನೆರವೂ ಇಲ್ಲದೆ ನಡೆಸಿಕೊಂಡು ಬಂದುದು. (ಒಂದು ಸಂದರ್ಭದಲ್ಲಿ ಕೊಡಲು ಮುಂದೆ ಬಂದ ಫ಼ೋರ್ಡ್‌ ಫ಼ೌಂಡೇಶನ್ ಸಂಸ್ಥೆಯ ಅನುದಾನವನ್ನೂ ವಿನಯಪೂರ್ವಕ ಅವರು ನಿರಾಕರಿಸಿದರು.)

ಸಿಡಿಎನ್ ಅವರ ಸಾಧನೆಗಳಿಗಾಗಿ ಅವರನ್ನು ತಾವಾಗಿಯೇ ಅರಸಿಕೊಂಡು ಬಂದ ಪದವಿ-ಪ್ರಶಸ್ತಿಗಳು ಅನೇಕ. ಖ್ಯಾತ ರಾಷ್ಟ್ರೀಯ – ಅಂತಾರಾಷ್ಟ್ರೀಯ ವಿ.ವಿ. ಗಳಲ್ಲಿ ಸಂದರ್ಶನ ಪ್ರಾಧ್ಯಾಪಕರಾಗುವ ಗೌರವ; ಅನೇಕ ಪ್ರತಿಷ್ಠಿತ ದತ್ತಿ ಉಪನ್ಯಾಸಗಳನ್ನು ಕೊಡಲು ಆಹ್ವಾನ; ಕರ್ನಾಟಕ ಸರ್ಕಾರದಿಂದ ‘ರಾಜ್ಯೋತ್ಸವ ಪ್ರಶಸ್ತಿ’; ಮೈಸೂರು-ಬೆಂಗಳೂರು ವಿ.ವಿ. ಗಳಿಂದ ‘ಗೌರವ ಡಾಕ್ಟರೇಟ್ ಪ್ರದಾನ’; ಇತ್ಯಾದಿ. ಇವೆಲ್ಲವುಗಳಿಗೂ ಕಳಶವಿಟ್ಟಂತೆ, ೧೯೯೦ ರಲ್ಲಿ ಭಾರತ ಸರಕಾರವು ಅವರನ್ನು ‘ಪದ್ಮಭೂಷಣ’ ಪ್ರಶಸ್ತಿಯಿಂದ ಗೌರವಿಸಿತು.

ಶ್ರೇಷ್ಠ ಶಿಕ್ಷಕರಾಗಿ, ಉಚ್ಚ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾಗಿ, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾಗಿ, ಉದಾರ ಮಾನವತಾವಾದಿ ಚಿಂತಕರಾಗಿ, ಅನೇಕ ನೆಲೆಗಳಲ್ಲಿ ಸಿಡಿಎನ್ ಸೇವೆ ಸಲ್ಲಿಸಿದ್ದಾರೆ. ಅದರೆ ಅವರ ಅಮೂಲ್ಯ ಕೊಡುಗೆಯಿರುವುದು ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ. ಸಾಹಿತ್ಯವನ್ನು ಒಂದು ಸಮಾಜದ ಶ್ರೇಷ್ಠ ಮೌಲ್ಯಗಳ ಆಗರವೆಂಬಂತೆ ಪರಿಗಣಿಸಿ, ಸಾಹಿತ್ಯವು ಆ ಮೌಲ್ಯಗಳಿಂದ ದೂರ ಸರಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ವಿಮರ್ಶೆಯದು ಎಂದು ಅವರು ನಂಬಿದ್ದರು. ಸಾಹಿತ್ಯ ವಿಮರ್ಶೆ ಎಂಬ ಬೌದ್ಧಿಕ- ಸಾಂಸ್ಕೃತಿಕ ಕಾರ್ಯ ವೈಯಕ್ತಿಕ ಅನಿಸಿಕೆಗಳ ಅಥವಾ ಅಮೂರ್ತ ಹೇಳಿಕೆಗಳ ಮೊತ್ತವಾಗದಂತೆ, ಮತ್ತು ಒಂದು ಕೃತಿಯ ಸುತ್ತಾ ಕಟ್ಟಿದ ಅಂಕಿ-ಅಂಸಗಳ ಹಾಗೂ ಊಹಾಪೋಹಗಳ ಕೋಟೆಯಾಗದಂತೆ ಅವರು ಸದಾ ಎಚ್ಚರದಿಂದಿದ್ದರು; ಮತ್ತು ಆ ಬಗೆಯ ವಿಮರ್ಶಾತ್ಮಕ ಎಚ್ಚರವನ್ನು ತಮ್ಮ ವಿದ್ಯಾರ್ಥಿಗಳಿಗೂ ಅವರು ಕಲಿಸಿಕೊಟ್ಟರು.

ಈ ಸಂದರ್ಭದಲ್ಲಿ ಸಿಡಿಎನ್ ಬಗ್ಗೆ ಒಂದು ಮುಖ್ಯ ಸಂಗತಿಯನ್ನು ಗಮನಿಸಬೇಕು. ಅವರ ಅನೇಕಾನೇಕ ಲೇಖನಗಳಲ್ಲಿ ಮತ್ತು ಅವರೇ ತಮ್ಮ ಧ್ವನ್ಯಾಲೋಕದಲ್ಲಿ ನಡೆಸುತ್ತಿದ್ದ ವಿಚಾರ ಸಂಕಿರಣಗಳಲ್ಲಿ ಎದ್ದು ಕಾಣುತ್ತಿದ್ದ ಒಂದು ಅಂಶವೆಂದರೆ ವಿಮರ್ಶನ ಸಿದ್ಧಾಂತಗಳ ಬಗ್ಗೆ ಅವರಿಗಿದ್ದ ತೀವ್ರ ಅಸಹನೆ, ಅಪಾರ ತಿರಸ್ಕಾರ, ಎಲಿಯಟ್-ಲೀವಿಸ್ ನಂತರ ಬಂದ ಯಾವುದೇ ವಿಮರ್ಶನ ಸಿದ್ಧಾಂತವಾಗಲಿ, ಅದನ್ನು ಪರಿಗಣಿಸಲೂ ಅವರು ಸಿದ್ಧರಿರಲಿಲ್ಲ. ಈ ಗುಣವನ್ನು ಹೇಗೆ ಗ್ರಹಿಸಬೇಕು?

ಈ ಗುಣವು ಲೀವಿಸ್ ಅವರಿಂದ ಸಿಡಿಎನ್ ಕಲಿತುದು; ಮತ್ತು ಅವರು ತಮ್ಮ ಆ ನಿಲುವಿನಿಂದ ಎಂದೂ ಬದಲಾಗಲಿಲ್ಲ, ಹೊಸ ವಿಚಾರಗಳಿಗೆ ತಮ್ಮನ್ನು ತೆರೆದುಕೊಳ್ಳಲಿಲ್ಲ- ಎಂದು ಸುಲಭವಾಗಿ ಹೇಳಬಹುದು; ಮತ್ತು ಆ ಬಗೆಯ ಹೇಳಿಕೆ ಸಂಪೂರ್ಣ ಸತ್ಯದೂರವಾಗಿರುವುದೂ ಇಲ್ಲ. ತಮ್ಮ ಕೃತಿಗಳಲ್ಲಿ ಸಿಡಿಎನ್ ಉಪಯೋಗಿಸುವ ಪರಿಕಲ್ಪನೆಗಳು, ಪ್ರಾಯೋಗಿಕ ವಿಮರ್ಶೆಗೆ ಅವರು ಕೊಡುತ್ತಿದ್ದ ಮಹತ್ವ, ವಿಮರ್ಶೆಗೆ ಸಮಾಜದಲ್ಲಿ ತುಂಬಾ ಜವಾಬ್ದಾರಿಯುತ ಕಾರ್ಯವಿದೆಯೆಂಬ ಅವರ ನಂಬಿಕೆ, ‘ಇದು ಶ್ರೇಷ್ಠ, ಇದು ಶ್ರೇಷ್ಠತರ’ ಎಂದು ಅವರು ಮಾಡುತ್ತಿದ್ದ ಸಾಹಿತ್ಯಕೃತಿಗಳ ಶ್ರೇಣೀಕರಣ- ಇವೆಲ್ಲವೂ ಅವರು ಲೀವಿಸ್‌ನಿಂದ ಕಲಿತುದು. ಆದರೆ, ಇಷ್ಟೇ ಹೇಳಿದರೆ ಒಂದು ಅತ್ಯಂತ ಸಂಕೀರ್ಣ ಸಾಂಸ್ಕೃತಿಕ ಸಂಗತಿಯನ್ನು ಸರಳೀಕರಣ ಗೊಳಿಸಿದಂತಾಗುತ್ತದೆ.

ರಸ-ಧ್ವನಿ ಸಿದ್ಧಾಂತವಾಗಲಿ ನವ್ಯ-ನವ್ಯೋತ್ತರ ವಿಮರ್ಶೆಯಾಗಲಿ, ಒಂದು ವಿಮರ್ಶನ ಪ್ರಸ್ಥಾನವೆಂದರೆ ಅರ್ಥೈಸುವಿಕೆಗೆ ಅನಿವಾರ್ಯವಾಗುವ ಒಂದು ಚೌಕಟ್ಟು. ಭಾಷೆ ಅಮೂರ್ತ ಸಂಕೇತಗಳ ಒಂದು ಸಂಕೀರ್ಣ ವ್ಯವಸ್ಥೆಯಾದುದರಿಂದ ಮತ್ತು ಅಂತಹ ಭಾಷೆಯನ್ನವಲಂಬಿಸಿದ ಕೃತಿಯೂ ಕೇವಲ ಸಂಕೇತಗಳ ವ್ಯವಸ್ಥೆಯಾಗಲೇ ಬೇಕಾದುದರಿಂದ, ಯಾವ ಒಂದು ಕೃತಿಯನ್ನು / ಚಿತ್ರವನ್ನು / ಶಿಲ್ಪವನ್ನು / ಸಂಭಾಷಣೆಯನ್ನು ‘ಅರ್ಥಮಾಡಿಕೊಳ್ಳಲು’ ಒಂದಲ್ಲಾ ಒಂದು ಬಗೆಯ ಚೌಕಟ್ಟು ಅಥವಾ ಪರಿಪ್ರೇಕ್ಷ್ಯ ಅನಿವಾರ್ಯ. ಒಂದು ಕಾಲಘಟ್ಟದಲ್ಲಿ ಒಂದು ಭಾಷಿಕ ಸಮುದಾಯ ಕೃತಿ-ಓದುಗ-ಸಮಾಜಗಳ ಸಂಬಂಧಗಳ ಬಗ್ಗೆ ಒಪ್ಪಿಕೊಂಡಿರುವ ಗೃಹೀತಗಳ ಮೊತ್ತವೇ ಈ ಚೌಕಟ್ಟು. ಇಂತಹ ಗೃಹೀತಗಳ ಮೊತ್ತವನ್ನು ಅಮೆರಿಕನ್ ಲಾಕ್ಷಣಿಕ ಎಹ್ನಿಜರ್‌’ವಾರಂಟ್’ ಎಂದು ಕರೆಯುತ್ತಾನೆ.[1]

ವಿಜ್ಞಾನಗಳ ಕ್ಷೇತ್ರದಲ್ಲಿ ಉಪಯೋಗಿಸುವ ‘ಪರ‍್ಯಾರಡೈಮ್’ ಎಂಬ ಪರಿಕಲ್ಪನೆಯನ್ನು ‘ವಾರಂಟ್’ ಹೋಲುತ್ತದೆ; ಮತ್ತು ಪ್ಯಾರಡೈಮ್‌ಗಳಂತೆ ವಾರಮಟ್‌ಗಳೂ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತವೆ.

ಅರ್ಥಜಿಜ್ಞಾಸೆಯ ಈ ಪ್ರಾಥಮಿಕ ಪಾಠ ಸಿಡಿಎನ್ ಅವರಿಗೆ ಗೊತ್ತಿರಲಿಲ್ಲವೆಂದು ಭಾವಿಸುವುದು ಬಾಲಿಶವಾಗುತ್ತದೆ. ತಮ್ಮ “ಇಂದಿನ ಭಾರತದಲ್ಲಿ ವಿಮರ್ಶೆಯ ಕಾರ್ಯ” ಎಂಬ ಪ್ರಮುಖ ಲೇಖನದಲ್ಲಿ ಅವರು ಹೀಗೆ ಹೇಳುತ್ತಾರೆ:

“(ಒಂದು ಕೃತಿಯ ಬಗ್ಗೆ) ನೀವು ನಿಮ್ಮ ಅಭಿಪ್ರಾಯಗಳನ್ನು ಸಹ ಓದುಗರೊಡನೆ ಹಂಚಿಕೊಳ್ಳುವುದು, ಮತ್ತು ಯಾವ ಕಾರಣಗಳಿಗಾಗಿ ನೀವು ಹಾಗೆ ಹೇಳುತ್ತೀರಿ ಎಂಬುದನ್ನು ವಿವರಿಸುವುದು ನಿಮ್ಮ ಕರ್ತವ್ಯ. ಹಾಗೆ ಮಾಡಿದಾಗ ಇತರರು ನಿಮ್ಮೊಡನೆ ಅವರಿಗಿರುವ ಸಂಬಂಧವನ್ನು ಪರಾಮರ್ಶೆಗೆ ಒಳಪಡಿಸುವುದು ಸಾಧ್ಯವಾಗುತ್ತದೆ.”[2]

ಯಾವ ಕಾರಣಗಳಿಗಾಗಿ ಹಾಗೆ ಹೇಳುತ್ತೀರಿ ಎಂಬುದರ ವಿವರಣೆಯೇ ವಿಮರ್ಶನ ಪ್ರಸ್ಥಾನ ಅಥವಾ ಅರ್ಥೈಸುವಿಕೆಯ ಚೌಕಟ್ಟು.

ಹಾಗೆಯೇ, ಅದೇ ಲೇಖನದಲ್ಲಿ ಸಿಡಿಎನ್ ತಮಗೂ ಲೀವಿಸ್ ಅವರಿಗೂ ಇರುವ ದೂರವನ್ನು ಹೀಗೆ ವಿವರಿಸುತ್ತಾರೆ:

“ನಿರ್ಭೀತ, ಸತ್ವಯುತ ಹಾಗೂ ನಿಶಿತ ವಿಶ್ಲೇಷಣೆ-ವ್ಯಾಖ್ಯಾನಗಳ ಮಹತ್ವವೇನೆಂದು ಲೀವಿಸ್ ನಮಗೆ ತೋರಿಸಿಕೊಟ್ಟಿದ್ದಾರೆ; ಆದರೆ, ಮಾನವ-ಸಮಾಜ-ನಾಗರೀಕತೆಗಳ ಬಗ್ಗೆ ಲೀವಿಸ್ ಅವರಿಗಿದ್ದ ಮಾನದಂಡಗಳೇ ಬೇರೆ. ಅವು ನನ್ನ ಮಾನದಂಡಗಳು ಆಗಲಾರವು; ಏಕೆಂದರೆ ನನ್ನ ‘ಸಮಾಜ’ ಮೂರು ಲೋಕಗಳನ್ನೂ ಒಳಗೊಳ್ಳುತ್ತದೆ.”[3]

ಸಿಡಿಎನ್ ಅವರು ಲೀವಿಸ್‌ನ ಕುರುಡು ಅನುಯಾಯಿ ಅಲ್ಲ ಎಂಬುದಕ್ಕೆ ಇನ್ನೂ ಹೆಚ್ಚಿನ ಸಾಕ್ಷ್ಯ ಬೇಕೆಂದರೆ ಅವರು ತಮ್ಮ ವಿಮರ್ಶೆಯಲ್ಲಿ ಮತ್ತೆ ಮತ್ತೆ ಉಪಯೋಗಿಸುವ ಭಾರತೀಯ ಪರಿಕಲ್ಪನೆಗಳನ್ನು ನೋಡಬಹುದು: ‘ಸಹೃದಯ’, ‘ಸಾಧಾರಣೀಕರಣ,’ ‘ಹೃದಯ ಸಂವಾದ’, ಇತ್ಯಾದಿ. ಎಂದರೆ, ಲೀವಿಸ್ ತೋರಿದ ಬೆಳಕಿನಲ್ಲಿ ಸಿಡಿಎನ್‌ತಮ್ಮದೇ ಆದ, ಭಾರತೀಯವೆನ್ನಬಹುದಾದ, ಮಾರ್ಗವನ್ನು ಶೋಧಿಸಿ ಕಂಡುಕೊಂಡರು ಎಂಬುದು ಸ್ಪಷ್ಟ.

ಹಾಗಾದರೆ, ಸಿಡಿಎನ್ ಅವರಿಗೆ ವಿಮರ್ಶನ ಸಿದ್ಧಾಂತಗಳ ಬಗ್ಗೆ ಇದ್ದ ಅಸಹನೆಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಅವರು ಎಲ್ಲಾ ವಿಮರ್ಶನ ಪಂಥಗಳನ್ನೂ ತಿರಸ್ಕರಿಸುತ್ತಿರಲಿಲ್ಲ, ಅವರ ಅತೃಪ್ತಿಯಿದ್ದುದು ರಾಚನಿಕೋತ್ತರವೆಂದು ಕರೆಯಲ್ಪಡುವ ಸಿದ್ಧಾಂತಳ ಬಗ್ಗೆ ಮಾತ್ರ ಎಂಬುದನ್ನು ಗಮನಿಸಿದರೆ, ಪ್ರಾಯಃ, ಆ ಪ್ರಶ್ನೆಗೆ ಒಂದು ಸಾಧ್ಯ ಉತ್ತರ ದೊರಕುತ್ತದೆ; ಮತ್ತು ಈ ಉತ್ತರ ಸಿಡಿಎನ್ ಅವರ ಇಷ್ಟಾನಿಷ್ಟಗಳನ್ನೂ ಮೀರಿ ಒಂದು ಗಂಭೀರ ಸಮಸ್ಯೆಯ ಬಗ್ಗೆ ನಮ್ಮ ಲಕ್ಷ್ಯವನ್ನು ಸೆಳೆಯುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಪಶ್ಚಿಮದಲ್ಲಿ ಅರಿಸ್ಟಾಟಲ್‌ನಿಂದ ಲೀವಿಸ್ ವರೆಗೆ ಕಾಲಕಾಲಕ್ಕೆ ಮೂಡಿ ಬಂದ ಎಲ್ಲಾ ವಿಮರ್ಶಾ ಪ್ರಸ್ಥಾನಗಳು ಒಂದಲ್ಲಾ ಒಂದು ಬಗೆಯಲ್ಲಿ ಸಾಹಿತ್ಯಕೃತಿಯೊಂದರ ಪರಿಮಾಣಗಳಾದ ‘ಲೇಖಕ=ಕೃತಿಯ/ಪ್ರದರ್ಶನ, ಓದುಗ/ಸಭಿಕರ ಮತ್ತು ಸಮಾಜ’ ಈ ನಾಲ್ಕನ್ನೂ (ಒತ್ತು ಕಾಲಕಾಲಕ್ಕೆ ಬೇರೆಯಾದರೂ) ಪರಿಗಣಿಸುತ್ತಿದ್ದುವು; ಮತ್ತು, ಮುಖ್ಯವಾಗಿ, ಇವೆಲ್ಲವುಗಳ ವಿಶ್ಲೇಷಣೆ- ವ್ಯಾಖ್ಯಾನಗಳ ಕೇಂದ್ರದಲ್ಲಿ ‘ಕೃತಿ’ ಇರುತ್ತಿತ್ತು. ಹಾಗೆಯೇ, ಓದುಗನು/ವಿಮರ್ಶಕನು ಪ್ರಬುದ್ಧನಾಗಿದ್ದರೆ ಮತ್ತು ಅವನಿಗೆ ಸಾಹಿತ್ಯಾನುಭವ ಸಾಕಷ್ಟಿದ್ದರೆ, ಕೃತಿಯ ‘ಅರ್ಥ’ ಎಂದಿಗೂ ಸಮಸ್ಯಾತ್ಕವಾಗಿರಲಿಲ್ಲ; ಪ್ರತಿಯೊಂದು ಕೃತಿಯ ‘ಅರ್ಥ’ವೂ ಸ್ಪಷ್ಟವಾಗಿರುತ್ತಿತ್ತು ಮತ್ತು ಸಹೃದಯ ವಿಮರ್ಶಕರೆಲ್ಲರಿಗೂ ಒಂದೇ ಆಗಿರುತ್ತಿತ್ತು. ಆದರೆ, ಕಳೆದ ಶತಮಾನದ ಉತ್ತರಾರ್ಧದಲ್ಲಿ ಬಂದ ಸ್ತ್ರೀವಾದಿಗಳು, ಸಂಸ್ಕೃತಿ ಚಿಂತಕರು, ನಿರಚನ ವಾದಿಗಳು, ವಸಾಹತೋತ್ತರ ಚಿಂತಕರು, ವಾಚಕ – ಸ್ಪಂದನ ಸಿದ್ಧಾಂತಿಗಳು, ಇತ್ಯಾದಿ ‘ರಾಚನಿಕೋತ್ತರ ಚಿಂತಕರು’ ಮಾಡಿದ ಮೊಟ್ಟ ಮೊದಲ ಕಾರ್ಯವೆಂದರೆ ‘ಪಠ್ಯ’ವನ್ನು (ಕೃತಿಯನ್ನು /ವೈಚಾರಿಕ ಸಂಹಿತೆಯನ್ನು…) ಕೇಂದ್ರದಿಂದ ಅಂಚಿಗೆ ತಳ್ಳಿದುದು ಮತ್ತು ಅದರ ಅಸ್ತಿತ್ವವನ್ನೇ ಸಂದೇಹಿಸಿದುದು. ಈ ‘ಪಠ್ಯದ ಅವಕೇಂದ್ರೀಕರಣ’ವೇ ಸಿಡಿಎನ್ ಅವರನ್ನೂ ಒಳಗೊಂಡಂತೆ ಅನೇಕರ ದಿಗ್ಭ್ರಮೆಗೆ ಹಾಗೂ ಅತೃಪ್ತಿಗೆ ಕಾರಣ.

‘ಪಠ್ಯದ ಅವಕೇಂದ್ರೀಕರಣ’ದ ಜೊತೆಗೆ, ರಾಚನಿಕೋತ್ತರವಾದಿಗಳು ಚರಿತ್ರೆ, ದರ್ಶನ, ಇತ್ಯಾದಿ ಯಾವ ಯಾವ ಸಂಗತಿಗಳನ್ನು ವಿಮರ್ಶೆಯಿಂದ ಹೊರಗಿಡಲು ರಿಚರ್ಡ್ಸ್‌ಎಲಿಯಟ್-ಲೀವಿಸ್ ಮುಂತಾದವರು ಹೋರಾಡಿದ್ದರೋ ಅವೇ ಸಂಗತಿಗಳನ್ನು ಅತ್ಯಂತ ಉತ್ಸಾಹದಿಂದ ಮತ್ತೆ ವಿಮರ್ಶೆಯ ಕಕ್ಷೆಗೆ ತಂದರು. ‘ಕೃತಿಯೆಂಬುದಕ್ಕೆ ಯಾವ ಬಗೆಯ ಸ್ವಯಂಸಿದ್ಧ ಅಸ್ತಿತ್ವವೂ ಇಲ್ಲ, ಕೃತಿಯ ‘ಅರ್ಥ’ ಸಾಪೇಕ್ಷ ಹಾಗೂ ಅಸ್ಥಿರ’; ‘ಕೃತಿಗೆ ಎಲ್ಲರೂ ಒಪುವಂತಹ ಒಂದು ಅರ್ಥವಿಲ್ಲ; ಬಹ್ವರ್ಥ ಸಾಧ್ಯತೆಯೇ ಕೃತಿಯ ಸ್ವರೂಪ’; ‘ಸಾಹಿತ್ಯ ಎಂಬ ವರ್ಗಕ್ಕೆ ತನ್ನದೇ ಆದ ಯಾವ ವೈಶಿಷ್ಟ್ಯವೂ ಇಲ್ಲ; ಸಾಹಿತ್ಯ, ತತ್ವಶಾಸ್ತ್ರ, ಇತಿಹಾಸ- ಇವೆಲ್ಲವೂ ಸಮಾನ, ಇವೆಲ್ಲವೂ ‘ಬರವಣಿಗೆಗಳು’ (Writings’), ಅಷ್ಟೇ’- ಇವೇ ಮುಂತಾದ ಸೈದ್ಧಾಂತಿಕ ನಿಲುವುಗಳು ಆರ್ಷೇಯ ಭಾರತೀಯ ಚಿಂತನೆಯ ಅಡಿಗಲ್ಲನ್ನೇ ಬಲವಾಗಿ ಅಲ್ಲಾಡಿಸಿದುವು.

ಭಾರತೀಯ ಕಾವ್ಯಮೀಮಾಂಸೆ, ತಾತ್ವಿಕ ಚಿಂತನೆ, ಶಾಸ್ತ್ರೀಯ ಗ್ರಹಿಕೆ ಇವೆಲ್ಲವನ್ನೂ ಕೇಂದ್ರಾಧರಿತ ‘ಪಠ್ಯಕೇಂದ್ರಿತ ಚಿಂತನೆ’ ಎಂದು ಕರೆಯಬಹುದು. ಸ್ವೀಕಾರ- ನಿರಾಕರಣೆಗಳೆರಡಕ್ಕೂ ‘ಪಠ್ಯ’ವೇ ಆಧಾರ; ಪಠ್ಯದ ಮಹತ್ವವನ್ನು ಅಲ್ಲಗಳೆಯುವ ಯಾವ ಪ್ರಯತ್ನವೂ ಭಾರತದಲ್ಲಿ ಯಶಸ್ವಿಯಾಗಿಲ್ಲ. ಬುದ್ಧನು ಈ ದಿಕ್ಕಿನಲ್ಲಿ ಸ್ವಲ್ಪ ಪ್ರಯತ್ನಿಸಿದರೂ ಅವನ ನಂತರ ಬುದ್ಧನನ್ನೇ ಅವನ ಶಿಷ್ಯರು ಒಂದು ‘ಪಠ್ಯ’ವನ್ನಾಗಿ ಕಂಡರು. ವಿಶ್ವದ ನೆಲೆಯಲ್ಲಿ ದೇವರು, ರಾಜ್ಯದ ನೆಲೆಯಲ್ಲಿ ರಾಜ, ಗ್ರಾಮದ ನೆಲೆಯಲ್ಲಿ ಯಜಮಾನ, ಕುಟುಂಬದ ನೆಲೆಯಲ್ಲಿ ಪಿತೃ, ಇತ್ಯಾದಿ ‘ಕೇಂದ್ರದ ಅಸ್ತಿತ್ವ’ವನ್ನು ಹಾಗೂ ಪರಮಾತ್ಮ/ಜೀವಾತ್ಮ, ಸ್ವರ್ಗ/ನರಕ, ಪುಣ್ಯ/ಪಾಪ, ಪುರುಷ/ಸ್ತ್ರೀ – ಇತ್ಯಾದಿ ಶ್ರೇಣೀಕೃತ ದ್ವಂದ್ವಗಳನ್ನು ಎಂದಿನಿಂದಲೂ ಭಾರತೀಯ ಚಿಂತನೆ ಮಾನ್ಯಮಾಡಿದೆ. ಪ್ರಾಚೀನ ಕಾಲದಲ್ಲಿ ಆಸ್ತಿಕರ ಮತ್ತು ನಾಸ್ತಿಕರ ನಡುವೆ ನಡೆಯುತ್ತಿದ್ದ ದೀರ್ಘ ಚರ್ಚೆ-ವಾದಗಳು ವೇದಪ್ರಾಮಾಣ್ಯವನ್ನು ಕುರಿತಾಗಿರುತ್ತಿದ್ದುವೇ ಹೊರತು ದೇವರ ಅಸ್ತಿತ್ವವನ್ನು ಕುರಿತಲ್ಲ. ಇಂತಹ ಕೇಂದ್ರಸ್ಥಿತ ಪ್ರಜ್ಞೆಯಲ್ಲಿ ‘ಪಠ್ಯ’ಕ್ಕೆ ಎಷ್ಟು ಮಹತ್ವವಿತ್ತೆಂದರೆ, ಸಾವಿರಾರು ವರ್ಷಗಳ ಪರ್ಯಂತ ಒಂದು ಸ್ವರವೂ ತಪ್ಪಾಗದಂತೆ ವೇದಗಳನ್ನು ಕಾಪಾಡಿಕೊಂಡು ಬರಲು ‘ಘನ’, ‘ಜಟೆ’ ಇತ್ಯಾದಿ ಅತ್ಯಂತ ಕೌಶಲ್ಯಪೂರ್ಣ ತಂತ್ರಗಳನ್ನು ಋಷಿ-ಮುನಿಗಳು ಯೋಜಿಸಿದ್ದರು. ಈ ಎಲ್ಲ ಕಾರಣಗಳಿಂದಾಗಿ, ಭಾರತದಲ್ಲಿ ೧೫೦೦ ವರ್ಷಗಳ ಅವಧಿಯಲ್ಲಿ ಬೆಳೆದುಬಂದ ಕಾವ್ಯಮೀಮಾಂಸೆಯೂ ಕಾಲಕಾಲಕ್ಕೆ ಅಲಂಕಾರ-ರಸ-ಧ್ವನಿ-ವಕ್ರೋಕ್ತಿ-ಔಚಿತ್ಯ ಇತ್ಯಾದಿ ಭಿನ್ನ ಭಿನ್ನ ಪ್ರಸ್ಥಾನಗಳಿಗೆ ಆಸ್ಪದವಿತ್ತರೂ ಎಲ್ಲಾ ಪ್ರಸ್ಥಾನಗಳ ಕೇಂದ್ರದಲ್ಲಿ ‘ಪಠ್ಯ’/ ‘ಕೃತಿ’ ಇರುತ್ತಿತ್ತು.

ಇಂತಹ ಶ್ರೇಣೀಕೃತ ದ್ವಂದ್ವಗಳನ್ನು ಆಧರಿಸಿದ ‘ಕೇಂದ್ರಾಧರಿತ’ ಭಾರತೀಯ ಪರಂಪರೆಯನ್ನು ಸಿಡಿಎನ್ ಕಾಯಾವಾಚಾಮನಸಾ ಒಪ್ಪಿಕೊಂಡಿದ್ದರು; ಅಥವಾ ಹೀಗೆ ಹೇಳಬಹುದೇನೋ – ಇಂತಹ ಕೇಂದ್ರಾಧರಿತ ಭಾರತೀಯ ಪರಂಪರೆಯೇ ಸಿಡಿಎನ್ ಅವರ ವ್ಯಕ್ತಿತ್ವವನ್ನು ರೂಪಿಸಿತ್ತು. ಪರಿಣಾಮತಃ, ಕೇಂದ್ರವನ್ನೇ ಪಲ್ಲಟಗೊಳಿಸುವ, ಎಲ್ಲವನ್ನೂ ಅವಕೇಂದ್ರೀಕರಣಕ್ಕೆ ಒಳಪಡಿಸುವ ರಾಚನಿಕೋತ್ತರ ಚಿಂತನೆಯನ್ನು, ವಿಮರ್ಶಾ ಮಾರ್ಗಗಳನ್ನು ಸಿಡಿಎನ್ ಒಪುವುದಿರಲಿ, ವಾದಕ್ಕಾಗಿ ಪರಿಗಣಿಸುವುದೂ ಸಾಧ್ಯವಿರಲಿಲ್ಲ. ಇಲ್ಲಿ, ಒತ್ತಿ ಹೇಳಬೇಕಾದ ಮಾತೆಂದರೆ, ಈ ಬಗೆಯ ಸವಾಲನ್ನು ಇಂದು (ಎಂದರೆ ವಸಾಹತೋತ್ತರ ಯುಗದಲ್ಲಿ) ಪ್ರತಿಯೊಬ್ಬ ಭಾರತೀಯನು (ಮತ್ತು ಪ್ರತಿಯೊಂದು ‘ತೃತೀಯ ರಾಷ್ಟ್ರವೂ’) ಎದುರಿಸಲೇ ಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

ಈ ಕಾರಣದಿಂದಲೇ, ಭಾರತೀಯ ಸಾಹಿತ್ಯವನ್ನು ಕುರಿತ ತಮ್ಮ ಎಲ್ಲಾ ವಿಮರ್ಶನ ಕಾರ್ಯಗಳಲ್ಲಿಯೂ ಸಿಡಿಎನ್ ಮೊದಲಿಗೆ ಎತ್ತುತ್ತಿದ್ದ ಪ್ರಶ್ನೆಯೆಂದರೆ ‘ಈ ಕೃತಿಯಲ್ಲಿ/ವಿಮರ್ಶೆಯಲ್ಲಿ/ ಜಿಜ್ಞಾಸೆಯಲ್ಲಿ ಭಾರತೀಯ ಸಂವೇದನೆ (Indian sensibility) ಇದೆಯೆ? ಎಂಬುದು. ಅನೇಕ ಸಂದರ್ಭಗಳಲ್ಲಿ ಅವರು ವಿವರಿಸುತ್ತಿದ್ದಂತೆ, ‘ಭಾರತೀಯ ಸಾಹಿತ್ಯ’ವೆಂದರೆ ‘ಭಾರತೀಯರಿಂದ ಬರೆಯಲ್ಪಟ್ಟ ಸಾಹಿತ್ಯ’ ಅಥವಾ ‘ಭಾರತೀಯ ಭಾಷೆಯಲ್ಲಿ ಬರೆಯಲ್ಪಟ್ಟ ಸಾಹಿತ್ಯ’ ಎಂದಲ್ಲ; ಸಾಹಿತ್ಯ / ವಿಮರ್ಶೆ / ಚಿಂತನೆ ‘ಭಾರತೀಯ’ವಾಗಬೇಕಾದರೆ ಅದರಲ್ಲಿ ‘ಭಾರತೀಯ ಸಂವೇದನೆ’ ಇರಬೇಕು.

ಅಸ್ಪಷ್ಟ ಹಾಗೂ ಅಮೂರ್ತವೆಂದು ನಮಗೆ ತೋರುವ ‘ಭಾರತೀಯ ಸಂವೇದನೆ’ ಎಂಬ ಪರಿಕಲ್ಪನೆಯನ್ನು ವಿವರಿಸಲು, ಒಂದು ಸಂದರ್ಭದಲ್ಲಿ ಸಿಡಿಎನ್ ಅರಬಿಂದೊ ಅವರ ಮಾತುಗಳನ್ನು ಉದ್ಧರಿಸುತ್ತಾರೆ (ಅವರ ದೃಷ್ಟಿಯಲ್ಲಿ ಅರಬಿಂದೊ ಒಬ್ಬರೇ ನಿಜವಾದ ಹಾಗೂ ಏಕಮಾತ್ರ ‘ಭಾರತೀಯ’ ವಿಮರ್ಶಕ-ಚಿಂತಕ):

“ಕಾವ್ಯವು ಕವಿಯೊಬ್ಬನ ವೈಯಕ್ತಿಕ ಸಾಮರ್ಥ್ಯ ಅಥವಾ ದರ್ಶನ ಇವುಗಳನ್ನು ಆಧರಿಸುವುದಿಲ್ಲ. ಅದು ಆಧರಿಸುವುದು ಆ ಕವಿಯ ಯುಗ ಮತ್ತು ದೇಶವನ್ನು, ಅದರ ಅನುಭವದ ಹಾಗೂ ವಿಚಾರದ ಮಟ್ಟವನ್ನು, ಅದು ಬೆಳೆಸಿಕೊಂಡಿರುವ ಸಂಕೇತಗಳ ಸಾಮರ್ಥ್ಯವನ್ನು, ಮತ್ತು ಅದರ ಆಧ್ಯಾತ್ಮಿಕ ಸಾಧನೆಯನ್ನು.”[4]

ಇನ್ನೊಂದು ಸಂದರ್ಭದಲ್ಲಿ ಸಿಡಿಎನ್ ಅತ್ಯಂತ ಕಾವ್ಯಾತ್ಮಕವಾಗಿ ಭಾರತೀಯ ಸಂವೇದನೆಯನ್ನು ಹೀಗೆ ವಿವರಿಸುತ್ತಾರೆ:

“ನೆಹರು ಮೇಲೆ ಹತ್ತಿ, ಮೊಹೆಂಜೊದಾರೋ ಗುಡ್ಡದ ಮೇಲೆ ನಿಂತು, ಆ ಗತವನ್ನು ತಮ್ಮ ಎಲುಬು-ಮೂಳೆಗಳಲ್ಲಿ ಅನುಭವಿಸಿದರು; ಬುದ್ಧನ ‘ಅಗ್ನಿ ಪ್ರವಚನ’ದ ಮಾರ್ದನಿಗಳನ್ನು ಕೇಳಲು ಅವರು ಸಾರನಾಥ್‌ಗೆ ಬಂದರು; ಚಕ್ರವತಿಯೊಬ್ಬನು ಧರ್ಮದ ಚರ್ಚೆ ಮಾಡಲು ಎಲ್ಲಾ ಮತ-ಧರ್ಮಗಳ ಪಂಡಿತರನ್ನೂ ಆಹ್ವಾನಿಸಿದುದಲ್ಲದೆ ತಾನೂ ಆ ಚರ್ಚೆಯಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದುದನ್ನು ಅರಿತುಕೊಳ್ಳಲು ಅವರು ಫತೇಪುರ್ ಸಿಕ್ರಿಗೆ ಹೋದರು;… ದೇವದೇವತೆಗಳನ್ನು ಉದ್ದೇಶಿಸಿ ಮಾಡಿದ ಋಗ್ವೇದದ ಪ್ರಾರ್ಥನೆಗಳನ್ನು ಓದಿದರು; ಸಂಭಾಷಣೆಗಳ ಮತ್ತು ಚರ್ಚೆಗಳ ರೂಪದಲ್ಲಿ ನಡೆದ ಅತ್ಯಂತ ಮಸ್ತಿಷ್ಕವಾದ ವೈಚಾರಿಕತೆಯನ್ನು ಅರಿಯಲು ಉಪನಿಷತ್ತುಗಳನ್ನು ಅಧ್ಯಯನ ಮಾಡಿದರು;… ಮತ್ತು ಇಡೀ ಭಾರತ ಅವರ ರಕ್ತನಾಳಗಳಲ್ಲಿ ಪ್ರವಹಿಸಲು ಪ್ರಾರಂಭಿಸಿತು.”[5]

ಈ ಬಗೆಯ ಪ್ರಜ್ಞೆ-ಎಂದರೆ, ಕಳೆದ ಎರಡು-ಮೂರು ಸಹಸ್ರಮಾನಗಳಿಂದ ಅವ್ಯಾಹತವಾಗಿ, ನಿರಂತರವಾಗಿ ಹರಿದು ಬಂದಿರುವ ಭಾರತೀಯ ಪರಂಪರೆ, ಇತಿಹಾಸ, ಸಾಹಿತ್ಯ, ತಾತ್ವಿಕ ಚಿಂತನೆ, ಇತ್ಯಾದಿಗಳು ಒಟ್ಟಿಗೇ ರೂಪಿಸುವ ಪ್ರಜ್ಞೆ ‘ಭಾರತೀಯ ಪ್ರಜ್ಞೆ’, ಈ ಪ್ರಜ್ಞೆ ರೂಪಿಸುವ ಸಾಹಿತ್ಯವೇ ಶ್ರೇಷ್ಠ ಭಾರತೀಯ ಸಾಹಿತ್ಯ ಎಂದು ಸಿಡಿಎನ್ ಬಲವಾಗಿ ನಂಬಿದರು, ಸಭೆ-ಸಂಕಿರಣಗಳಲ್ಲಿ ವಾದಿಸಿದರು, ತಮ್ಮ ವಿದ್ಯಾರ್ಥಿಗಳಿಗೆ ಬೋಧಿಸಿದರು. ಈ ಬಗೆಯ ‘ಭಾರತೀಯ ಸಂವೇದನೆ’ ಇಲ್ಲವೆಂದು ಪ್ರಸಿದ್ಧ ಲೇಖಕರಾದ ನಿಸಿಮ್ ಎಜ಼ಕೀಲ್, ನೈಪಾಲ್, ಅರುಂಧತಿ ರಾಯ್, ಮುಂತಾದವರನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಿದ್ದರು.

ಸಿಡಿಎನ್ ಅವರ ಟೀಕಾಕಾರರಿಗೆ (ಅಂತಹವರ ಸಂಖ್ಯೆಯೇನೂ ಕಮ್ಮಿಯಿಲ್ಲ) ಸಿಡಿಎನ್ ಅವರ ‘ಭಾರತೀಯ ಪರಂಪರೆ/ಸಂವೇದನೆ’ ಎಂಬುದು ಎಲಿಯಟ್‌ನ ‘ಅಖಂಡ ಯೂರೋಪಿಯನ್ ಪರಂಪರೆ/ಸಂವೇದನೆ’ ಎಂಬ ಪರಿಕಲ್ಪನೆಯ ಭಾರತೀಯ ಛಾಯೆ ಎಂದು ತೋರುವುದು ಆಶ್ಚರ್ಯವೇನಲ್ಲ; ಮತ್ತು ಅಂತಹ ಟೀಕಾಕಾರರು, ಎಲಿಯಟ್ ಡಿ. ಎಚ್. ಲಾರೆನ್ಸ್, ಜಾಯ್ಸ್, ಇತ್ಯಾದಿ ತನಗಾಗದ ಲೇಖಕರನ್ನು ತಿರಸ್ಕರಿಸಲು ‘ಅವರಿಗೆ ಅಖಂಡ ಯೂರೋಪಿಯನ್ ಪರಂಪರೆಯ ಅರಿವಿಲ್ಲ’ ಎಂಬ ವಾದವನ್ನು ಹೂಡುತ್ತಿದ್ದಂತೆ ಸಿಡಿಎನ್ ಅವರು ತಾವು ಒಪ್ಪದ ಲೇಖಕರನ್ನು ದೂರವಿಡಲು ಭಾರತೀಯ ಸಂವೇದನೆ ಎಂಬ ನಿಕಶವನ್ನು ಉಪಯೋಗಿಸುತ್ತಾರೆ ಎಂದು ಕಾಣಬಹುದು. ಎಲಿಯಟ್ ಕಟ್ಟಿದ ಯೂರೋಪಿಯನ್ ಪರಂಪರೆಯಿರಲಿ ಅಥವಾ ಸಿಡಿಎನ್ ಕಟ್ಟುವ ಭಾರತೀಯ ಪರಂಪರೆಯಿರಲಿ, ಎರಡೂ ಪ್ರಶ್ನಾರ್ಹವೆ; ಇವೆರಡರ ಬಗ್ಗೆಯೂ ‘ಯೂರೋಪಿಯನ್ ಪರಂಪರೆ ಅಥವಾ ಭಾರತೀಯ ಪರಂಪರೆ’ ಎಂಬ ಒಂದು ಪರಂಪರೆಯಿಲ್ಲ, ಅನೇಕ ಯೂರೋಪಿಯನ್/ಭಾರತೀಯ ಪರಂಪರೆಗಳಿವೆ ಎಂದು ಸುಲಭವಾಗಿ ವಾದಿಸಬಹುದು; ಮತ್ತು ಈ ವಾದ, ಪ್ರಾಯಃ, ಸತ್ಯಕ್ಕೆ ಹೆಚ್ಚು ಹತ್ತಿರವಾದದ್ದು. ಆದರೆ, ಅಂತಹ ಒಂದು ಪರಂಪರೆ ಇದೆಯೆಂದು ಸಿಡಿಎನ್ / ಎಲಿಯಟ್ ಪ್ರಾಮಾಣಿಕವಾಗಿ ನಂಬಿದ್ದರು ಎಂಬುದು ಮುಖ್ಯ.

‘ಭಾರತೀಯತೆ’ ಬಗ್ಗೆ ಸಿಡಿಎನ್ ಅವರಿಗಿದ್ದ ತೀವ್ರ ಕಾಳಜಿಯನ್ನು ದಾಖಲಿಸುವ ಈ ಕೆಳಗಿನ ವಾಕ್ಯಗಳೊಂದಿಗೆ ಈ ಲೇಖನವನ್ನು ಮುಗಿಸುವುದು ಉಚಿತವೆಂದು ತೋರುತ್ತದೆ:

“ಇತ್ತೀಚಿನ ದಿನಗಳಲ್ಲಿ ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಎಷ್ಟರಮಟ್ಟಿನ ಸ್ವಾವಲಂಬನೆಯನ್ನು ಸಾಧಿಸಿದ್ದೇವೆಂದರೆ ಇಂದು ‘ಭಾರತೀಯ ವಿಜ್ಞಾನ’ ಎಂದೇ ಮಾತನಾಡಬಹುದು. ಆದರೆ, ಒಂದು ಕಲಾಕೃತಿಗೆ ಸ್ಪಂದಿಸುವಂತಹ ಅತ್ಯಂತ ಆಪ್ತ ವಿಷಯದ ಬಗ್ಗೆ ನಾವು ಮಾಡುವ ತೀರ್ಮಾನಗಳು ನಮ್ಮದಾಗಿರುವುದಿಲ್ಲ; ಅವೆಲ್ಲವೂ ಎಲಿಯಟ್‌ನದೋ, ಲೀವಿಸ್‌ನದೋ… (ಮತ್ತಾರದೋ) ಆಗಿರುತ್ತವೆ. ಈ ಸಂದರ್ಭದಲ್ಲಿ ನಾವು ಮರೆಯಬಾರದ ಸರ್ವಮಾನ್ಯ ಸತ್ಯವೆಂದರೆ ನಮಗೆ ಬೇಕಾದ ಊಟ, ಪ್ರೀತಿ ಇವುಗಳನ್ನು ನಾವೇ ಮಾಡಬೇಕು; ಇವೆರಡನ್ನೂ ಬೇರಾರೂ ನಮ್ಮ ಪರವಾಗಿ ಮಾಡಲು ಸಾಧ್ಯವಿಲ್ಲ.”[6]

(“Prof. CDN And Theory: A Note” ಎಂಬ ಇಂಗ್ಲೀಷ್ ಲೇಖನದ ಪರಿಷ್ಕೃತ ಹಾಗೂ ವಿಸ್ತೃತ ಅನುವಾದ)

* * *

[1] Douglas Egninger, Influence, Belief, and Argument (1974). ಈ ಲೇಕನದಲ್ಲಿ ಎಹ್ನಿಂಜರ್ ‘ಡೇಟಾ/ಎವಿಡೆನ್ಸ್, ವಾರಂಟ್, ಕನ್‌ಕ್ಲೂಷನ್’ ಎಂಬ ಎಲ್ಲಾ ವಾದಗಳ ಮೂರು ಆಯಾಮಗಳನ್ನು ಗುರುತಿಸುತ್ತಾನೆ.

[2] C. D. Narasimhaiah, The Function of Criticism in India: Essays in ೩. Indian Response to Literature (Mysore: C.I.I.L., 1986), p.1.

[3] The Function, p.37.

[4] C.D. Narasimhaiah, The Swan And The Eagle, 2nd edn. (Simla: IIAS, 1987), p. 30.

[5] The Function, pp.9-10

[6] Ed. C.D. Narasimhaiah, East West Poetics At Work (New Delhi: Sahitya Akademi, 1994), p5.