ಕುತೂಹಲದ ಸಂಗತಿಯೆಂದರೆ, ಆಧುನಿಕ ಯುಗದ ಹೆಚ್ಚಿನ ಸ್ವೋಪಜ್ಞ ತತ್ವಶಾಸ್ತ್ರಜ್ಞರೆಲ್ಲರೂ ಯಾವುದನ್ನೂ ನಂಬದ ಮತ್ತು ಎಲ್ಲವನ್ನೂ ಪ್ರಶ್ನಿಸುವ ಸಂದೇಹ ವಾದಿಗಳು – ಫ್ರೆಡರಿಕ್ ನೀಚೆ, ಮಾರ್ಟಿನ್ ಹೈಡೆಗರ್, ಜ಼.ಪ. ಸಾರ್ತ್ರ್, ಜೆ. ಕೃಷ್ಣಮೂರ್ತಿ, ಇತ್ಯಾದಿ. ಇಂತಹವರ ಸಾಲಿನಲ್ಲಿ ಎದ್ದು ಕಾಣುವ ತತ್ವಶಾಸ್ತ್ರಜ್ಞನೆಂದರೆ ಇತ್ತೀಚೆಗೆ (೨೨೦೪) ನಿಧನ ಹೊಂದಿದ ಹೆರಿಡ.

ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ಅತ್ಯಂತ ಪ್ರಭಾವಿ ತತ್ವಶಾಸ್ತ್ರಜ್ಞನೆಂದು ಪ್ರಸಿದ್ಧನಾಗಿದ್ದ, ಯಹೂದಿ ಮೂಲದ ಜೇಕ್ಸ್ ಡೆರಿಡ (Jaques Derrida) ಆಲ್ಜೀರಿಯಾದ ‘ಎಲ್‌ ಬಿಯರ್’ ಎಂಬ ಊರಿನಲ್ಲಿ ಜುಲೈ ೧೫, ೧೯೩೦ರಲ್ಲಿ ಜನಿಸಿದನು. ಪ್ರಾಥಮಿಕ ಶಿಕ್ಷಣವನ್ನು ತನ್ನೂರಿನಲ್ಲಿಯೇ ಮುಗಿಸಿ, ನಂತರ ಉಚ್ಚ ಶಿಕ್ಷಣಕ್ಕಾಗಿ ೧೯೪೯ ರಲ್ಲಿ ಪ್ಯಾರಿಸ್ ಪಟ್ಟಣಕ್ಕೆ ಹೋದವನು ಅನಂತರ ಅಲ್ಲಿಯೇ ನೆಲೆಸಿ, ಸ್ವಲ್ಪ ಕಾಲದ ನಂತರ ಫ್ರೆಂಚ್ ಪೌರತ್ವವನ್ನು ಸ್ವೀಕರಿಸಿದನು. ಇವನ ಬರವಣಿಗೆಯೆಲ್ಲವೂ ಫ್ರೆಂಚ್ ಭಾಷೆಯಲ್ಲಿ. ಪ್ಯಾರಿಸ್ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ್ರ ಮತ್ತು ಸಾಹಿತ್ಯ ಇವುಗಳಲ್ಲಿ ೧೯೫೩ ರಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮುಂದೆ ೧೯೬೭ ರಲ್ಲಿ ತತ್ವಶಾಸ್ತ್ರದಲ್ಲಿ ಮತ್ತು ೧೯೮೦ ರಲ್ಲಿ ಸಾಹಿತ್ಯದಲ್ಲಿ ಪಿಎಚ್.ಡಿ. ಪದವಿಗಳನ್ನು ಪಡೆದನು. ಕಾಲಕ್ರಮದಲ್ಲಿ, ಇಂಗ್ಲೆಂಡ್‌ನ ಕೇಂಬ್ರಿಜ್ ವಿಶ್ವವಿದ್ಯಾನಿಲಯ, ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯ, ಇತ್ಯಾದಿ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಇವನಿಗೆ ಗೌರವ ಡಾಕ್ಟರೇಟ್ ನೀಡಿ, ಇವನನ್ನು ಸನ್ಮಾನಿಸಿದುವು.

ಪ್ರವಾಸಗಳಲ್ಲಿಯೇ ತನ್ನ ಬದುಕಿನ ಬಹುಪಾಲನ್ನು ಕಳೆದ ಡೆರಿಡ ವಿದ್ವತ್ಪೂರ್ಣ ಉಪನ್ಯಾಸಗಳನ್ನು ಕೊಡಲು ಮತ್ತು ಪ್ರತಿಷ್ಠಿತ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ಯೂರೋಪಿನ ಹಾಗೂ ಅಮೆರಿಕಾದ ಸರಿ ಸುಮಾರು ಎಲ್ಲಾ ಶಿಕ್ಷಣ – ಸಂಶೋಧನಾ ಸಂಸ್ಥೆಗಳಿಗೂ ಭೇಟಿ ನೀಡಿದ್ದನು. ೧೯೬೬ ರಲ್ಲಿ ಮೊಟ್ಟ ಮೊದಲು ಅಮೆರಿಕಾಕ್ಕೆ ಕಾಲಿಟ್ಟ ಡೆರಿಡ ಅನಂತರ ಅಲ್ಲಿಯ ಜಾನ್ಸ್‌ಹಾಪ್ಕಿನ್ಸ್‌, ಯೇಲ್, ಕ್ಯಾಲಿಫ಼ೋರ್ನಿಯ, ಕಾರ್ನೆಲ್, ಇವೇ ಮುಂತಾದ ಖ್ಯಾತ ವಿ.ವಿ.ಗಳಲ್ಲಿ ಸಂದರ್ಶನ ಪ್ರಾಧ್ಯಾಪಕನಾಗಿದ್ದನು; ಮತ್ತು ಮರಣ ಹೊಂದುವವರೆಗೂ ಪ್ಯಾರಿಸ್ಸಿನ ಗೌರವಾನ್ವಿತ ‘ಮಾನವಶಾಶ್ತ್ರ ಅಧ್ಯಯನ ಕೇಂದ್ರ’ದ ನಿರ್ದೇಶಕನಾಗಿದ್ದನು.

ಬರವಣಿಗೆ-ಉಪನ್ಯಾಸಗಳಲ್ಲಿ ತನ್ನನ್ನು ಅವಿರತವಾಗಿ ತೊಡಗಿಸಿಕೊಂಡಿದ್ದ ಡೆರಿಡಾನ ಅಪಾರ ಗ್ರಂಥಗಳ ಮತ್ತು ಲೇಖನ – ಸಂದರ್ಶನಗಳ ಸಮಗ್ರ ಮಾಹಿತಿಯನ್ನು ಕೊಡುವ ಒಂದು ‘ಗ್ರಂಥಸೂಚಿ’ ಇದುವರೆಗೂ ಸಾಧ್ಯವಾಗಿಲ್ಲ. ಅವರ ಪಾಂಡಿತ್ಯಪೂರ್ಣ ಗ್ರಂಥಗಳಲ್ಲಿ ಮುಖ್ಯವಾದವುಗಳೆಂದರೆ; ಬರಹ ಮತ್ತು ಭಿನ್ನತೆ (Writing And Difference), ವ್ಯಾಕರಣಶಾಸ್ತ್ರವನ್ನು ಕುರಿತು (Of Grammatology), ತತ್ವಶಾಸ್ತ್ರದ ಸೀಮೆಗಳು (Margins of Philosophy), ಇತ್ಯಾದಿ. (ಮೊಟ್ಟ ಮೊದಲಿಗೆ ಇವನ “ಆಫ್‌ಗ್ರಮಟಾಲಜಿ” ಗ್ರಂಥವನ್ನು ಇಂಗ್ಲೀಷ್‌ಗೆ ಅನುವಾದಿಸಿದವರು ಭಾರತೀಯ ಮೂಲದ ಗಾಯತ್ರಿ ಸ್ಪಿವಕ್/ಚಕ್ರವರ್ತಿ.) ಡೆರಿಡಾನ ಸಂದರ್ಶನಗಳ ಸಂಕಲನ ನಿಲುವುಗಳು (Positions) ಎಂಬ ಹೆಸರಿನಲ್ಲಿ ಪ್ರಕಟವಾಗಿವೆ; ಇವನ ಬದುಕು ಹಾಗೂ ವೈಚಾರಿಕತೆಗಳ ಬಗ್ಗೆ ಒಂದು ಸಾಕ್ಷ್ಯಚಿತ್ರವೂ ೨೦೦೨ ರಲ್ಲಿ ನಿರ್ಮಿಸಲ್ಪಟ್ಟಿತು. ಜಾನ್‌ರಾಲಿಂಗ್ಸ್ ಎಂಬ ಡೆರಿಡ- ವಿಶೇಷಜ್ಞಾನ ಪ್ರಕಾರ, ಡೆರಿಡಾನ ಬಗ್ಗೆ ೪೦೦ ಕ್ಕೂ ಹೆಚ್ಚು ಸ್ವತಂತ್ರ ಕೃತಿಗಳು ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟವಾಗಿವೆ; ಮತ್ತು ಇವರ ‘ನಿರಚನವಾದ’ವನ್ನು ಕುರಿತು ೫೦೦ ಕ್ಕೂ ಹೆಚ್ಚು ಎಂ.ಫಿಲ್./ಪಿಎಚ್.ಡಿ. ಸಂಶೋಧನೆಗಳು ಕೇವಲ ಅಮೆರಿಕನ್/ಕೆನಡಾ ವಿ.ವಿ.ಗಳಲ್ಲಿ ನಡೆದಿವೆ. ಡೆರಿಡಾನ ಅಗಾಧ ಬೌದ್ಧಿಕ ಪ್ರಭಾವದ ಬಗ್ಗೆ ಬೇರೇನೂ ಸಾಕ್ಷ್ಯ ಬೇಕಿಲ್ಲ.

ಕೂಡಲೇ ಇಲ್ಲಿ ದಾಖಲಿಸಬೇಕಾದ ಸಂಗತಿಯೆಂದರೆ, ಡೆರಿಡ ಪ್ರಸಿದ್ಧ ‘ದಂತ ಗೋಪುರದ ಬುದ್ಧಿಜೀವಿ’ ಯಷ್ಟೇ ಆಗಿರಲಿಲ್ಲ. ಎಡ್ವರ್ಡ್‌ಸೈದ್, ನೋಮ್ ಚೋಮ್‌ಸ್ಕ್ರಿ, ಇತ್ಯಾದಿ ಆಧುನಿಕೋತ್ತರ ಬುದ್ಧಿಜೀವಿಗಳಂತೆ ಡೆರಿಡ ಕೂಡಾ ನನ್ನ ಬದುಕಿನುದ್ದಕ್ಕೂ ವ್ಯವಸ್ಥೆಯ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧದ ಹೋರಾಟಗಳಲ್ಲಿ ತನ್ನನ್ನು ಗುರುತಿಸಿಕೊಂಡಿದ್ದನು. ಅವನ ಅನೇಕ ಪ್ರಮುಖ ಲೇಖನಗಳು ‘ಟೆಲ್ ಕೆಲ್’ (Tel Quel) ಎಂಬ ಎಡಪಂಥೀಯ ಧೋರಣೆಯ ನಿಯತಕಾಲಿಕೆಯಲ್ಲಿ ಪ್ರಕಟಗೊಂಡುವು. ಫ್ರಾನ್ಸ್ ದೇಶಕ್ಕೆ ಬರಲಿಚ್ಛಿಸುವ ವಲಸೆಗಾರರು ಮತ್ತು ಚೆಕ್ ಗಣರಾಜ್ಯದ ೭೭ ಬಂಡುಕೋರರು-ಇವರುಗಳ ಪರವಾಗಿ, ಮತ್ತು ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ಹಾಗೂ ಅಮೆರಿಕಾದ ವಿಯೆಟ್ನಾಮ್ ಯುದ್ಧ ಇವುಗಳ ವಿರುದ್ಧವಾಗಿ ಅನೇಕ ಚಳುವಳಿಗಳಲ್ಲಿ ಡೆರಿಡ ಸಕ್ರಿಯವಾಗಿ ಭಾಗವಹಿಸಿದ್ದನು. ೨೦೦೩ರಲ್ಲಾದ ಅಮೆರಿಕಾದ ಇರಾನ್ ಆಕ್ರಮಣವನ್ನು ಸಾರ್ವಜನಿಕವಾಗಿ ಡೆರಿಡ ಖಂಡಿಸಿದ್ದನು. ಪ್ರಾಯಃ, ಡೆರಿಡಾನ ಈ ಬಗೆಯ ಬಂಡುಕೋರತನದ ರಾಜಕೀಯ ನಿಲುವಿನಿಂದಾಗಿಯೇ ಕೇಂಬ್ರಿಜ್ ವಿ.ವಿ.ಯು ಇವನಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲು ನಿರ್ಧರಿಸಿದಾಗ, ಆ ವಿ.ವಿ.ಯ ಇತಿಹಾಸದಲ್ಲೇ ಮೊದಲ ಬಾರಿಗೆ ಈ ವಿಷಯ ದೀರ್ಘ ಚರ್ಚೆಗೆ ಒಳಗಾಗಿ, ಅನಂತ ಮತದಾನವಾಗಿ, ೩೩೧-೨೦೪ ಮತಗಳಿಂದ ವಿ.ವಿ. ಯ ನಿರ್ಧಾರಕ್ಕೆ ಅನುಮೋದನೆ ದೊರಕಿತ್ತು.

* * *

ಪ್ರಮುಖ ರಾಚನಿಕೋತ್ತರ ಚಿಂತಕರಲ್ಲಿ ಒಬ್ಬನೆಂದು, ವಿಶೇಷವಾಗಿ ‘ನಿರಚನ ಚಿಂತಕ’ನೆಂದು ಪ್ರಸಿದ್ಧನಾಗಿರುವ ಡೆರಿಡಾನ ವೈಚಾರಿಕತೆಯನ್ನು ಗ್ರಹಿಸುವುದು ಮತ್ತು ವಿವರಿಸುವುದು ಕಷ್ಟ. ಕಾರಣವೇನೆಂದರೆ, ಸಂವಹನದಲ್ಲಿ ಸರಳತೆಯನ್ನು ತಾತ್ವಿಕ ನೆಲೆಯಲ್ಲಿ ವಿರೋಧಿಸುತ್ತಿದ್ದ ಡೆರಿಡಾನ ಭಾಷೆ ಕ್ಲಿಷ್ಟ; ಅವನ ತರ್ಕ ಕ್ಲಿಷ್ಟತರ. ತನ್ನ ಸಮಗ್ರ ವೈಚಾರಿಕತೆಯ ಕೇಂದ್ರದಲ್ಲಿರುವ ‘ನಿರಚನ’ ಅಥವಾ ‘ಡಿಕನ್ಸ್‌ಟ್ರಕ್ಷನ್’ ಪರಿಕಲ್ಪನೆಯನ್ನು ವ್ಯಾಖ್ಯಾನಿಸಲು ಡೆರಿಡಾ ಸದಾ ನಿರಾಕರಿಸುತ್ತಿದ್ದ. ಡಿನೀಶಿಯಾ ಸ್ಮಿತ್ ಎಂಬ ವಿದುಷಿಯೊಬ್ಬಳು ಒಂದು ಸಂದರ್ಭದಲ್ಲಿ ಡೆರಿಡಾನನ್ನು ‘ನಿರಚನ’ ಪರಿಕಲ್ಪನೆಯನ್ನು ವಿವರಿಸಲು ಒತ್ತಾಯಿಸಿದಾಗ, ಅವನು ಹೀಗೆ ಪ್ರತಿಕ್ರಿಯಿಸಿದನು:

“ಯಾವ ರೀತಿಯಲ್ಲಾದರೂ ‘ಘಟಿಸುವಒಂದು ಸಂಗತಿಯಂತೆ ನಾನು ‘ನಿರಚನ’ವನ್ನು ಪರಿಗಣಿಸುತ್ತೇನೆ. ಇದು ಕೇವಲ ಗ್ರಂಥಗಳ ಹಾಗೂ ಪಠ್ಯಗಳನ್ನೊಳಗೊಳ್ಳುವ ಭಾಷಿಕ ಕ್ರಿಯೆ ಮಾತ್ರವಲ್ಲ. ದೈಹಿಕ ಸಂಜ್ಞೆಗಳು, ನೃತ್ಯಸಂಯೋಜನೆ, ಇವೇ ಮುಂತಾದ ಯಾವುದನ್ನೂ ನಿರಚನಗೊಳಿಸಬಹುದು. ಈ ಕಾರಣಕ್ಕಾಗಿಯೇ ನಾನು ‘ಪಠ್ಯ’ದ (’Text’) ವ್ಯಾಪ್ತಿಯನ್ನು ವಿಸ್ತರಿಸಿದೆ… ಎಲ್ಲವೂ ‘ಪಠ್ಯ’ಗಳೇ – ಈ ಉಪಹಾರಗೃಹದಲ್ಲಿ ಈಗ ಊಟಮಾಡುತ್ತಿರುವವರೂ ಪಠ್ಯಗಳೇ.”[1]

ಈ ವಿವರಣೆಯಿಂದ ನಿರಚನ ಚಿಂತನೆಯ ಬಗ್ಗೆ ಡಿನೀಶಿಯಾಳ ಗ್ರಹಿಕೆ ಹೆಚ್ಚೇನೂ ಆಗಲಿಲ್ಲವೆಂದು ತೋರುತ್ತದೆ.

ಡೆರಿಡಾನ ವೈಚಾರಿಕತೆಯನ್ನು ಗಾಢವಾಗಿ ಪ್ರಭಾವಿಸಿದವರಲ್ಲಿ ಆಧುನಿಕ ಅಸ್ತಿತ್ವವಾದಿ ದಾರ್ಶನಿಕ ಮಾರ್ಟಿನ್ ಹೈಡೆಗರ್ ಮತ್ತು ಕ್ರಾಂತಿಕಾರಿ ಮನೋವಿಜ್ಞಾನಿ ಸಿಗ್ಮಂಡ ಫ್ರಾಯ್ಡ್ ಪ್ರಮುಖರು. ತನ್ನ ಮಿತ್ರನೊಬ್ಬನಿಗೆ ಬರೆದ ಪತ್ರವೊಂದರಲ್ಲಿ ಸ್ವತಃ ಡೆರಿಡಾ ಒಪ್ಪಿಕೊಳ್ಳುವಂತೆ, ಅವನ ‘ನಿರಚನ’ ಪರಿಕಲ್ಪನೆ ಹೈಡೆಗರ್‌ನ ‘ಡಿಸ್‌ಟ್ರಕ್ಷನ್’ (‘Destruktion’) ಪರಿಕಲ್ಪನೆಯನ್ನು ಆಧರಿಸಿದೆ. ಹೈಡೆಗರ್ ‘ಡಿಸ್ಟ್ರಕ್ಟ್‌’ ಪದವನ್ನು ‘ಬೇರ್ಪಡಿಸುವುದು’ ಅಥವಾ ‘ಒಡೆಯುವುದು’ ಎಂಬ ಅರ್ಥದಲ್ಲಿ ಉಪಯೋಗಿಸುತ್ತಾ, ತನ್ನ ಇರುವಿಕೆ ಮತ್ತು ಕಾಲ (Being And Time) ಎಂಬ ಮಹತ್ವಪೂರ್ಣ ಗ್ರಂಥದಲ್ಲಿ ಹೀಗೆ ಹೇಳುತ್ತಾನೆ: “ಚಿಂತನೆಯ ಆಚೆಗಿರುವ ಅಚಿಂತ್ಯ ‘ಇರುವಿಕೆ’ಯ ಬಗ್ಗೆ ಜಿಜ್ಞಾಸೆಯನ್ನು ಕೈಗೊಳ್ಳಲು (ಈಗಿರುವಂತಹ, ಅನೇಕ ಸಂಗತಿಗಳನ್ನು ಪ್ರಮಾಣವೆಂದು ಮಾನ್ಯಮಾಡುವ) ತತ್ವಶಾಸ್ತ್ರವನ್ನು ಒಡೆಯಬೇಕು.” ಸರಿ ಸುಮಾರು ಇದೇ ಅರ್ಥದಲ್ಲಿ ಡೆರಿಡಾ ತನ್ನ ನಿರಚನ ಪರಿಕಲ್ಪನೆಯನ್ನು ಬೆಳೆಸುತ್ತಾನೆ.

ನಿರಚನ ಚಿಂತನೆಯ ಅಡಿಗಲ್ಲೆಂದರೆ ಭಾಷೆಯ ಸ್ವರೂಪ ಮತ್ತು ಕಾರ್ಯಗಳನ್ನು ಕುರಿತು ಡೆರಿಡಾಗೆ ಇರುವ ತೀವ್ರ ಅವಿಶ್ವಾಸ. ರಾಚನಿಕ ಭಾಷಾಶಾಸ್ತ್ರಜ್ಞ ಸೋಸ್ಯೋನ ವಿಚಾರಗಳನ್ನೇ ಅವುಗಳ ತಾರ್ಕಿಕ ತುದಿಗೆ ಒಯ್ಯುವ ಡೆರಿಡ ‘ಭಾಷೆಗೆ ವಾಸ್ತವ ಸತ್ಯದ ಸಮಗ್ರ ದರ್ಶನವನ್ನು ಕೊಡಲು ಸಾಧ್ಯವೇ ಇಲ್ಲ’ ಎಂದು ವಾದಿಸುತ್ತಾನೆ. ಕಾರಣವೇನೆಂದರೆ, ಭಾಷೆಯ ಶಬ್ದ, ಪದ, ಕ್ರಮ ಮತ್ತು ಅರ್ಥ ಇತ್ಯಾದಿ ಎಲ್ಲಾ ಘಟಕಗಳೂ ಅಸ್ತಿತ್ವಕ್ಕೆ ಬರುತ್ತವೆ ಭೇದಾತ್ಮಕ ನೆಲೆಯಲ್ಲಿ ಮಾತ್ರ (ಎಂದರೆ, ‘ಅ’ ಎಂಬ ಶಬ್ದ ಅದು ‘ಉ’ ಅಲ್ಲ. ‘ಎ’ ಅಲ್ಲ… ಆದ್ದರಿಂದ ಅದು ‘ಅ’). ಅರ್ಥದ ನೆಲೆಯಲ್ಲಿಯೂ ನಾವು ‘ಭಿನ್ನತೆ’ಯಲ್ಲಿ ಮಾತ ಒಂದು ಪದದ ‘ಅರ್ಥ’ವನ್ನು ಗ್ರಹಿಸಲು ಸಾಧ್ಯ. ಉದಾಹರಣೆಗೆ: ‘ಗೃಹ’ ಎಂದರೇನು? – ಮನೆ; ‘ಮನೆ’ ಎಂದರೇನು? – ವಾಸಸ್ಥಳ’ ‘ವಾಸಸ್ಥಳ’ ಎಂದರೇನು?… ಹೀಗೆ ಒಂದು ಸೂಚಕದ (ಪದದ) ಅರ್ಥ ಮತ್ತೊಂದು ಸೂಚಕವಾಗುತ್ತದೆಯೇ ಹೊರತು ಸತ್ಯವಲ್ಲ. ಅಂತಿಮ ಸತ್ಯವನ್ನು ನಿರ್ದೇಶಿಸುವ ಸೂಚಕವೂ ಇಲ್ಲ, ಸೂಚಿತವೂ (ಅರ್ಥ) ಇಲ್ಲ; ಇರುವುದು ಕೇವಲ ಸೂಚನಾ ಪ್ರಕ್ರಿಯೆಯ ಅನಂತ ಲಾಸ್ಯ. ಈ ಬಗೆಯ ಪದ-ಅರ್ಥಗಳ ನಡುವೆ ಇರುವ, ಸದಾ ಭಿನ್ನವಾಗುವ ಮತ್ತು ಮುಂದೂಡಲ್ಪಡುವ ಸಂಬಂಧವನ್ನು ಸೂಚಿಸಲು ಡೆರಿಡ ಸ್ವಯಂ ಕಲ್ಪಿತ ‘ಡಿಫ಼ರನ್ಸ್’ (‘Difference’) ಎಂಬ ಪಾರಿಭಾಷಿಕ ಪದವನ್ನು ಉಪಯೋಗಿಸುತ್ತಾನೆ.

ಅರ್ಥವೂ ಸೇರಿದಂತೆ ಭಾಷೆಯ ಎಲ್ಲಾ ಘಟಕಗಳೂ ಮೇಲೆ ವಿವರಿಸಿದಂತೆ ಅಸ್ಥಿರ ಹಾಗೂ ಸಾಪೇಕ್ಷವಾದುದರಿಂದ, ಭಾಷೆಯನ್ನುಪಯೋಗಿಸುವ ಮಾತು, ಬರವಣಿಗೆ ಇತ್ಯಾದಿ ಎಲ್ಲಾ ಕಾರ್ಯಗಳೂ ಅನೇಕಾರ್ಥಗಳಿಗೆ ಎಡೆ ಮಾಡಿಕೊಡುತ್ತವೆ ಮತ್ತು ಅವೆಲ್ಲವೂ ಸ್ವವಿರೋಧಗಳಿಂದ ಕೂಡಿರುತ್ತವೆ. ಭಾಷೆಯ ಮೂಲಕ ಆಗುವ ಪ್ರತಿಯೊಂದು ಕಾರ್ಯವೂ ತಾನು ಒಂದು ಕಡೆ ಮಂಡಿಸುವುದನ್ನು ಮತ್ತೊಂದು ಕಡೆ ಅಲ್ಲಗಳೆಯುತ್ತಿರುತ್ತದೆ. ಈ ಬಗೆಯ ಆಂತರಿಕ ಸ್ವವಿರೋಧಗಳಿಂದ ಮುಕ್ತವಾಗಲು ಸಾಹಿತ್ಯ, ತತ್ವಶಾಸ್ತ್ರ, ಸಮಾಜಶಾಸ್ತ್ರ, ಇವೇ ಮುಂತಾದ ಯಾವ ಕ್ಷೇತ್ರಕ್ಕೆ ಸೇರಿದ ಪಠ್ಯಕ್ಕೂ ಸಾಧ್ಯವಿಲ್ಲ. ಈ ನೆಲೆಯಲ್ಲಿ ಡೆರಿಡ ಮಂಡಿಸುವ ಅತ್ಯಂತ ಮಹತ್ವದ ತೀರ್ಮಾನವೆಂದರೆ ಪ್ರತಿಯೊಂದು ಪಠ್ಯವೂ ಸದಾ ತನ್ನನ್ನು ತಾನೇ ನಿರಚನಗೊಳಿಸಿಕೊಳ್ಳುತ್ತಿರುತ್ತದೆ.

ಭಾಷೆ ಮತ್ತು ಭಾಷೆಯನ್ನಾಧರಿಸಿದ ‘ಪಠ್ಯ’ಗಳನ್ನು ಕುರಿತ ಈ ಬಗೆಯ ಗ್ರಹಿಕೆಯ ನೆಲೆಯಿಂದ ಹೊರಡುವ ನಿರಚನ ಚಿಂತನೆ ಒಂದು ‘ರಚನೆ’ಯ (’Structure’) ಒಳಹೊಕ್ಕು, ಆ ರಚನೆಯ ಒಂದೊಂದೇ ಘಟಕಗಳನ್ನು ಹಾಗೂ ಅವುಗಳ ಸಂಬಂಧಗಳನ್ನು ಪರೀಕ್ಷಿಸುತ್ತಾ, ಹೇಗೆ ‘ಎಲ್ಲಾ ರಚನೆಗಳು ಸ್ವಯಂ ಪೂರ್ಣ’ ಎಂಬ ರಾಚನಿಕ ಚಿಂತಕರ ಗ್ರಹಿಕೆ ಕೇವಲ ಭ್ರಮೆ; ಮತ್ತು ಹೇಗೆ ಸುವ್ಯವಸ್ಥಿತವೆಂದು ನಮಗೆ ಕಾಣುವ ಎಲ್ಲಾ ರಚನೆಗಳ ಆಳದಲ್ಲಿ ಸಂಯೋಜನೆಗೆ ಒಳಪಡದ, ಪರಸ್ಪರ ವಿರೋಧಿಯಾದ ಅಂಶಗಳಿರುತ್ತವೆ ಎಂಬುದನ್ನು ಸಾದ್ಯಂತವಾಗಿ ದಾಖಲಿಸುತ್ತದೆ. (ಈ ಸಂದರ್ಭದಲ್ಲಿ ನಾವು ನೆನಪಿಡಬೇಕಾದ ಸಂಗತಿಯೆಂದರೆ, ಡೆರಿಡ ಭಾಷೆ, ಸಿದ್ಧಾಂತ, ಸಂಸ್ಥೆ, ಮುಂತಾದವುಗಳನ್ನೆಲ್ಲಾ ‘ರಚನೆ’ಗಳೆಂದು ಕರೆಯುತ್ತಾನೆ.)

ಈ ಸಂದರ್ಭದಲ್ಲಿ ಡೆರಿಡ ಉಪಯೋಗಿಸುವ ಮತ್ತೊಂದು ಪ್ರಮುಖ ಪಾರಿಭಾಷಿಕ ಪದವೆಂದರೆ ‘ಅಪೋರಿಯ’ (‘Aporia’). ಗ್ರೀಕ್ ಮೂಲದ ‘ಅಪೊರಿಯ’ ಪದದ ಅರ್ಥ ‘ಮುಂದೆ ದಾರಿಯಿಲ್ಲದ’, ‘ಇಕ್ಕಟ್ಟು’ ಎಂದಾಗುತ್ತದೆ. ಈ ಪರಿಕಲ್ಪನೆಯನ್ನು ಆಧರಿಸಿ ಡೆರಿಡ ಮಾಡುವ ವಾದವೇನೆಂದರೆ, ಪ್ರತಿಯೊಂದು ವೈಚಾರಿಕ ಕ್ರಮವೂ ಕೊನೆಯಲ್ಲಿ ಒಂದು ಇಕ್ಕಟ್ಟಿಗೆ, ಒಂದು ಕುರುಡು ದಾರಿಗೆ ಬಂದು ನಿಲ್ಲುತ್ತದೆ. ಅರ್ಥಾತ್, ನಿರ್ದಿಷ್ಟ ಹಾಗೂ ಖಚಿತ ಎಂದು ತೋರುವ ಎಲ್ಲಾ ಸಿದ್ಧಾಂತಗಳಲ್ಲಿಯೂ/ ವ್ಯಾಖ್ಯಾನಗಳಲ್ಲಿಯೂ / ರೂಪಣೆಗಳಲ್ಲಿಯೂ ಅನಿರ್ದಿಷ್ಟ ಮತ್ತು ಸ್ವವಿರೋಧಿ ಅಂಶಗಳು ಅನಿವಾರ್ಯವಾಗಿರುತ್ತವೆ. ಈ ದಿಕ್ಕಿನಲ್ಲಿ ಮುಂದುವರೆಯುತ್ತಾ, ಡೆರಿಡ ಪ್ರತಿಯೊಂದು ವೈಚಾರಿಕ ಸಂಹಿತೆಯೂ ನಿರ್ಮಿಸುವ ವಾಕ್-ಲೇಖನ, ಪುರುಷ-ಸ್ತ್ರೀ, ವಾಸ್ತವ-ಕಲ್ಪನೆ, ಕೇಂದ್ರ – ಅಂಚು, ಇತ್ಯಾದಿ ಎಲ್ಲಾ ಶ್ರೇಣೀಕೃತ ದ್ವಂದ್ವಗಳನ್ನು ಒಡೆದು, ಅವನ್ನು ಬುಡಮೇಲು ಮಾಡಿ, ಹೇಗೆ ಈ ಶ್ರೇಣಿಗಳೆಲ್ಲವೂ ಸಾಪೇಕ್ಷ ಹಾಗೂ ಸ್ವಾರ್ಥಪೂರಿತ ಸೃಷ್ಟಿಗಳು ಎಂಬುದನ್ನು ಸಾಬೀತು ಮಾಡುತ್ತಾನೆ. ಈ ಪ್ರಕ್ರಿಯೆಯನ್ನು ‘ಅವಕೇಂದ್ರೀಕರಣ’ (‘decentering’) ಎಂದು ಅವನ ವ್ಯಾಖ್ಯಾನಕಾರರು ಗುರುತಿಸುತ್ತಾರೆ.

ಇದು ಮೂಲತಃ ಬಂಡುಕೋರರ ನೆಲೆ. ಆದ್ದರಿಂದಲೇ, ಆರ್ಥಿಕ ಅಸಮಾನತೆಯನ್ನಾಧರಿಸಿದ ವರ್ಗಭೇದವನ್ನು ಎದುರಿಸುವ ಮಾರ್ಕ್ಸಿಸ್ಟ್ ಚಿಂತಕರು, ಪುರುಷಕೇಂದ್ರಿತ ವ್ಯವಸ್ಥೆಯನ್ನು ವಿರೋಧಿಸುವ ಸ್ತ್ರಿವಾದಿಗಳು, ಶ್ವೇತವರ್ಣೀಯರಿಂದ ಶೋಷಣೆಗೊಳಗಾದ ಅಶ್ವೇತವರ್ಣೀಯರು, ಇವರೆಲ್ಲರೂ ನಿರಚನ ಚಿಂತನೆಯ ಒಂದಲ್ಲಾ ಒಂದು ಆಯಾಮವನ್ನು ತಮ್ಮ ವಾದ-ಹೋರಾಟಗಳಲ್ಲಿ ಅವಳಡಿಸಿ ಕೊಳ್ಳುತ್ತಾರೆ.

ಆದರೆ, ನಿರಚನ ಚಿಂತನೆಯ ಅತ್ಯಧಿಕ ಪ್ರಭಾವವಾದುದು ವಿಮರ್ಶಾ ಕ್ಷೇತ್ರದ ಮೇಲೆ. ಅಮೆರಿಕಾದ ಜಾನ್ಸ್‌ಹಾಪ್ಕಿನ್ಸ್ ವಿಶ್ವವಿದ್ಯಾನಿಲಯವು ೧೯೬೬ ರಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಡೆರಿಡ ಮಂಡಿಸಿದ “ಮಾನವಶಾಸ್ತ್ರಗಳ ಸಂಕಥನದಲ್ಲಿ ರಚನೆ, ಸಂಜ್ಞೆ ಮತ್ತು ಕಾರ್ಯ” (“Structure, Sign and Play in the Discourse of Human Sciences”) ಎಂಬ ಪ್ರಬಂಧ ನಿರಚನ ಚಿಂತನೆಯನ್ನು ಅಮೆರಿಕಾದ ವಿದ್ವತ್ಸಮೂಹಕ್ಕೆ ಪರಿಚಯಿಸಿತು. ಈ ಪ್ರಬಂಧ ಎಷ್ಟು ಪ್ರಭಾವಿಆಗಿತ್ತೆಂದರೆ, ಅದನ್ನು ಅನಂತರ ‘ನಿರಚನ ಚಿಂತನೆಯ ಘೋಷಣಾ ಪತ್ರ’ ಎಂದೇ ಗುರಿತಿಸಲಾಯಿತು. ಅಂದಿನಿಂದ ಎರಡು ದಶಕಗಳ ಕಾಲ ನಿರಚ ವಿಮರ್ಶೆ ಫ್ರಾನ್ಸ್‌ಅಮೆರಿಕಾ, ಕೆನಡ, ಇತ್ಯಾದಿ ದೇಶಗಳಲ್ಲಿ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟಿತು; ಅದು ತನ್ನದೇ ಆದ ಪ್ರಭಾವಳಿಗಳನ್ನು ಬೆಳೆಸಿಕೊಂಡಿತು. ಯೇಲ್ ವಿಶ್ವವಿದ್ಯಾನಿಲಯವನ್ನೂ ನಿರಚನ ವಿಮರ್ಶೆಯ ಕೇಂದ್ರವಾಯಿತು. ಅಂದಿನ ನಿರಚನ ವಿಮರ್ಶಕರಲ್ಲಿ ಪ್ರಮುಖರಾದವರೆಂದರೆ ಪಾಲ್ ದ ಮಾನ್, ಜೆ.ಹಿಲಿಸ್ ಮಿಲರ್, ಜಿ. ಹಾರ್ಟ್‌‌ಮನ್, ಗಾಯತ್ರಿ ಸ್ಪಿವಕ್, ಮುಂತಾದವರು. ನವ್ಯ ಹಾಗೂ ರಾಚನಿಕ ವಿಮರ್ಶಾ ಪ್ರಸ್ಥಾನಗಳನ್ನು, ಮಾರ್ಗಗಳನ್ನು, ಮತ್ತು ಗೃಹೀತಗಳನ್ನು ತಿರಸ್ಕರಿಸಿದ ಈ ವಿಮರ್ಶಕರು ತಮ್ಮ ಅಪಾರ ಭಾಷಿಕ ಪಾಂಡಿತ್ಯ, ನಿಶಿತ ತರ್ಕ, ಮತ್ತು ಖಚಿತ ತಾತ್ವಿಕತೆ ಇವುಗಳನ್ನು ಆಧರಿಸಿ, ಅಲ್ಲಿಯವರೆಗಿನ ಯೂರೋಪಿಯನ್-ಅಮೆರಿಕನ್ ಸಾಹಿತ್ಯಗಳನ್ನು (ಮುಖ್ಯವಾಗಿ ರಮ್ಯ ಸಾಹಿತ್ಯಗಳನ್ನು) ಮರು ಒದಿಗೆ ಗುರಿಪಡಿಸಿ, ಮರು ವ್ಯಾಖ್ಯಾನವನ್ನು ನೀಡಿದರು; ಭಾಷೆ-ಸಾಹಿತ್ಯ-ಸಮಾಜಗಳ ನಡುವಿನ ಸಂಕೀರ್ಣ ಸಂಬಂಧಗಳ ಬಗ್ಗೆ ನೂತನ ಹಾಗೂ ಮೌಲಿಕ ಒಳಓಟಗಳನ್ನು ಕೊಟ್ಟರು.

ಪ್ರಾರಂಭದಿಂದಲೂ ಡೆರಿಡಾನ ನಿರಚನ ಚಿಂತನೆಗೆ ಪ್ರತಿರೋಧವಿತ್ತೇ ಇತ್ತು; ಕಳೆದ ಶತಮಾನದ ಕೊನೆಯಲ್ಲಿ ಈ ಪ್ರತಿರೋಧ ತೀವ್ರವಾಯಿತು. ಎಲ್ಲವನ್ನೂ ಪ್ರಶ್ನಿಸುವ, ಎಲ್ಲರನ್ನೂ ಸಂದೇಹಿಸುವ, ಈ ವೈಚಾರಿಕತೆಯ ಕೊನೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಶೂನ್ಯವಾದವಲ್ಲವೆ? ಸಾಹಿತ್ಯ, ತತ್ವಶಾಸ್ತ್ರ, ಮನೋವಿಜ್ಞಾನ ಇತ್ಯಾದಿ ಜ್ಞಾನಮಾರ್ಗಗಳೆಲ್ಲವೂ ‘ಬರವಣಿಗೆ’ಗಳು ಮತ್ತು ಇವುಗಳಲ್ಲಿ ಯಾವುದಕ್ಕೂ ತನ್ನದೇ ಆದ ವಿಶಿಷ್ಟ ಗುಣವಿಲ್ಲ ಎಂದಾಗ, ಇವೆಲ್ಲಾ ಜ್ಞಾನಮಾರ್ಗಗಳ ಬದಲು ಯಾವುದೋ ಒಂದು ಜ್ಞಾನಮಾರ್ಗ ನಮಗೆ ಸಾಕಲ್ಲವೆ? ಅಂತಿಮವಾಗಿ, ಎಲ್ಲಾ ‘ರಚನೆ’ಗಳನ್ನೂ ನಿರಚನಗೊಳಿಸುವ ‘ನಿರಚನ’ವನ್ನೇ ನಿರಚನಗೊಳಿಸಬಹುದಲ್ಲವೆ? – ಇತ್ಯಾದಿ ಗಂಭೀರ ಪ್ರಶ್ನೆಗಳು ಮತ್ತು ಸಂದೇಹಗಳು ಕೇಳಿಬರಲಾರಂಭಿಸಿದುವು.

ಇಂದು ನಿರಚನ ಚಿಂತನೆ ಹಿನ್ನೆಲೆಗೆ ಸರಿದಿದ್ದರೂ, ಅದು ಎಂದೂ ಸಂಪೂರ್ಣವಾಗಿ ಅಪ್ರಸ್ತುತವಾಗುವುದಿಲ್ಲ. ಏಕೆಂದರೆ, ವಿವಿಧ ಕಾಲಘಟ್ಟಗಳಲ್ಲಿ ಬೇರೂರಿರುವ ಶ್ರೇಣೀಕೃತ ದ್ವಂದ್ವಗಳನ್ನು ಬುಡಮೇಲು ಮಾಡುವ ನಿರಚನ ಚಿಂತನೆ ಮಾನವಕಾರ್ಯಗಳೆಲ್ಲವನ್ನೂ ನಿಯಂತ್ರಿಸುವ ಧಾರ್ಮಿಕ-ರಾಜಕೀಯ-ಸಾಂಸ್ಕೃತಿ ‘ಸಂಸ್ಥೆ’ಗಳನ್ನು (‘ರಚನೆಗಳನ್ನು’) ನಿರಚನಗೊಳಿಸಿ, ಅವುಗಳ ಆಳದಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳನ್ನು ಈ ಬಗೆಯ ಚಿಂತನೆ ಬಯಲು ಮಾಡುತ್ತದೆ. ಪರಿಣಾಮತಃ, ರೂಢಿಗತ ಗೃಹೀತಗಳನ್ನು, ನಂಬಿಕೆಗಳನ್ನು ಮತ್ತು ಆಚರಣೆಗಳನ್ನು ಸಂದೇಹಿಸುವ, ಪ್ರಶ್ನಿಸುವ, ನೂತನ ಜಿಜ್ಞಾಸು ದೃಷ್ಟಿಕೋನವನ್ನು ನಿರಚನ ಚಿಂತನೆ ನಮಗೆ ಕೊಡುತ್ತದೆ.

ಒಂದು ನೆಲೆಯಲ್ಲಿ, ನಿರಚನ ಚಿಂತನೆಗೂ ಭಾರತಕ್ಕೂ ತುಂಬಾ ಹತ್ತಿರದ ನಂಟಿದೆ. ಆಶ್ಚರ್ಯವೆನಿಸುವಷ್ಟು, ನಿರಚನ ಪ್ರಸ್ಥಾನ ಮತ್ತು ೧೫೦೦ ವರ್ಷಗಳ ಹಿಂದೆ ಅತ್ಯಂತ ಶ್ರೀಮಂತವಾಗಿ ಬೆಳೆದಿದ್ದ ಬೌದ್ಧರ ‘ಅಪೋಹ ಪ್ರಸ್ಥಾನ’ ಇವುಗಳ ನಡುವೆ ಸಮಾನ ಗೃಹೀತಗಳಿವೆ, ಸಮಾನ ತೀರ್ಮಾನಗಳಿವೆ. ಹಾಗೆ ನೋಡಿದರೆ, ಈ ಸಮಾನತೆ ಅಷ್ಟೇನೂ ಆಶ್ಚರ್ಯಕರವಾಗಬೇಕಿಲ್ಲ; ೧೯೭೧ ರಷ್ಟು ಹಿಂದೆಯೇ ಡೆರಿಡ ತಾನು ವಾರಸುದಾರನಾಗಿರುವ ತತ್ವಶಾಸ್ತ್ರೀಯ ಪರಂಪರೆಯನ್ನು ‘ಇಂಡೋ-ಯೂರೋಪಿಯನ್’ ಎಂದು ಗುರುತಿಸಿದ್ದನು. ಮುಂದಿನ ಭಾಗದಲ್ಲಿ ಈ ಎರಡು ಪ್ರಸ್ಥಾನಗಳ ನಡುವೆ ಇರುವ ಕೆಲವು ಸಮಾನ ಅಂಶಗಳನ್ನು ಚರ್ಚಿಸಬಹುದು.

ಸಾವಿರಾರು ವರ್ಷಗಳ ಉಜ್ವಲ ಇತಿಹಾಸವಿರುವ ಭಾರತೀಯ ಸಾಹಿತ್ಯ, ಸಂಸ್ಕೃತಿ, ದರ್ಶನ, ಇವುಗಳ ಒಂದು ಮಿತಿಯೆಂದರೆ ಇವೆಲ್ಲವೂ ‘ವೈದಿಕ’ ಅಥವಾ ‘ಆತ್ಮವಾದಿ’ ಪರಂಪರೆಗೆ ಸೇರಿದವುಗಳು. ಬೌದ್ಧ, ಚಾರ್ವಾಕ, ಮುಂತಾದ ಅವೈದಿಕ ಪರಂಪರೆಗಳು ಭಾರತೀಯ ವಾಙ್ಮಯದ ಪ್ರಧಾನ ಧಾರೆಯಲ್ಲಿ ಎಂದೂ ಸೇರಲಿಲ್ಲ; ಉದ್ದಕ್ಕೂ ವ್ಯವಸ್ಥೆಯ ಅಂಚಿನಲ್ಲಿಯೇ ಉಳಿದುವು. (ಹೇಗೆ ‘ಸಂಸ್ಥೆಗಳು’ ಆಯ್ಕೆ ಮತ್ತು ಪ್ರತ್ಯೇಕತೆ ಇವುಗಳ ಪ್ರಕ್ರಿಯೆಯ ಮೂಲಕ ಒಂದು ವೈಚಾರಿಕ ಆಕೃತಿಯನ್ನೇ ಸಮುದಾಯದ ಆಕೃತಿ ಎಂದು ಸ್ಥಾಪಿಸುತ್ತವೆ ಎಂದು ವಾದಿಸುವ ಮಿಶೆಲ್ ಫ಼ೂಕೇನ ‘ಡಿಸ್‌ಕೋರ್ಸ್‌’ ಅಥವಾ ‘ಸಂಕಥನ’ದ ಪರಿಕಲ್ಪನೆ ಈ ಸಂದರ್ಭದಲ್ಲಿ ಪ್ರಸ್ತುತವಾಗುತ್ತದೆ.) ಪರಿಣಾಮತಃ, ‘ಭಾರತೀಯ’ ಲಾಕ್ಷಣಿಕರು / ಭಾಷಾಶಾಸ್ತ್ರಜ್ಞರೆಂದರೆ ಭರತ-ಭಾಮಹ-ಪತಂಜಲಿ-ಭರ್ತೃಹರಿ ಮುಂತಾದವರು ಗುರುತಿಸಲ್ಪಡುತ್ತಾರೆಯೇ ಹೊರತು ನಾಗಾರ್ಜುನ-ದಿಙ್ನಾಗ – ಧರ್ಮಕೀರ್ತಿ ಮುಂತಾದವರಲ್ಲ. ಪ್ರಾಯಃ, ಈ ಸಂಗತಿಯನ್ನು ಹೀಗೆ ವಿವರಿಸಬಹುದೆಂದು ತೋರುತ್ತದೆ: ಆರ್ಷೇಯ ಕಾಲದಿಂದಲೂ ಭಾರತದಲ್ಲಿ ‘ಆತ್ಮವಾದಿ’ ಚಿಂತನಾಮಾರ್ಗಗಳಿಗೆ ದೊರಕಿದ ಗೌರವ-ಪ್ರತಿಷ್ಠೆಗಳು ಅನಾತ್ಮವಾದಿ ಚಿಂತನಾಮಾರ್ಗಗಳಿಗೆ ಎಂದೂ ದೊರೆಯಲಿಲ್ಲ; ಮತ್ತು ಅವು ಇತಿಹಾಸದುದ್ದಕ್ಕೂ ಕೇಂದ್ರದಿಂದ ದೂರವಾಗಿಯೇ ಉಳಿದುವು.

‘ಅಪೋಹ’ ಎನ್ನುವುದು ಅಂತಹ ಒಂದು ಅನಾತ್ಮವಾದಿ ಪರಿಕಲ್ಪನೆ; ಭಾಷೆಯ ಸ್ವರೂಪ ಮತ್ತು ಕಾರ್ಯಗಳನ್ನು ಕುರಿತಾದ ಒಂದು ಅತ್ಯಂತ ‘ಆಧುನಿಕ’ ಪರಿಕಲ್ಪನೆ. ಈ ಪರಿಕಲ್ಪನೆಯನ್ನು ಮುಖ್ಯವಾಗಿ ದಿಙ್ನಾಗ, ಧರ್ಮಕೀರ್ತಿ, ಶಾಂತರಕ್ಷಿತ, ರತ್ನಕೀರ್ತಿ ಇತ್ಯಾದಿ ಬೌದ್ಧ ಚಿಂತಕರು ಕ್ರಿಸ್ತಶಕೆಯ ಆರಂಭಿಕ ಶತಮಾನಗಳಲ್ಲಿ ರೂಪಿಸಿದರು. ಇವರುಗಳಲ್ಲೇ ಪರಸ್ಪರ ಸೂಕ್ಷ್ಮ ವ್ಯತ್ಯಾಸಗಳಿದ್ದರೂ ಪ್ರಮುಖ ಗೃಹೀತಗಳಲ್ಲಿ ಸಮಾನತೆಯಿದೆ.

ಪ್ರಮುಖ ಬೌದ್ಧ ಚಿಂತಕರೆಲ್ಲರೂ ಭಾಷೆಯನ್ನು ಕುರಿತು ‘ಆತ್ಮವಾದಿ’ ವ್ಯಾಖ್ಯಾನವನ್ನು ತಿರಸ್ಕರಿಸುತ್ತಾರಾದ್ದರಿಂದ, ಅಪೋಹ ಸಿದ್ಧಾಂತಕ್ಕೆ ಹಿನ್ನೆಲೆಯಾಗಿ ಪತಂಜಲಿ, ಭತೃಹರಿ, ಮುಂತಾದವರ ವಿಚಾರಗಳ ಸಂಕ್ಷಿಪ್ತ ವಿವರಣೆ ಇಲ್ಲಿ ಅಗತ್ಯ.

ಪತಂಜಲಿ, ಭರ್ತೃಹರಿ, ಇತ್ಯಾದಿ ಆತ್ಮವಾದಿ ವೈಯಾಕರಣಿಗಳು ವೇದ ಪ್ರಾಮಾಣ್ಯವನ್ನು ಒಪುತ್ತಾರೆ; ಮತ್ತು ಅದ್ವೈತ ದರ್ಶನದ ಹಿನ್ನೆಲೆಯಲ್ಲಿ ಭಾಷೆಯನ್ನು ವಿಶ್ಲೇಷಿಸುತ್ತಾರೆ. ವೇದಾಂತಿಗಳ ಪರಬ್ರಹ್ಮ ತತ್ವ ಮತ್ತು ಈ ವೈಯಾಕರಣಿಗಳ ಶಬ್ದಬ್ರಹ್ಮ ತತ್ವ ಇವೆರಡೂ ಒಂದರೊಳಗೊಂದು ಐಕ್ಯವಾಗುತ್ತವೆ. ವಾಕ್ಯಪದೀಯದ ‘ಬ್ರಹ್ಮಕಾಂಡ’ದ ಪ್ರಥಮ ಕಾರಿಕೆ ಈ ಬಗೆಯ ಪರಬ್ರಹ್ಮ-ಶಬ್ದಬ್ರಹ್ಮ ಏಕತೆಯನ್ನು ಹೀಗೆ ದಾಖಲಿಸುತ್ತದೆ:

“ಅನಾದಿ ನಿಧನಂ ಬ್ರಹ್ಮ ಶಬ್ದತತ್ವಂ ಯದಕ್ಷರಂ/ವಿಮರ್ತೇರ್ಥಭಾವೇನ ಪ್ರಕ್ರಿಯಾ ಜಗತೋ ಯತಃ”

(ಉತ್ಪತ್ತಿ-ವಿನಾಶಗಳಿಲ್ಲದ ಶಾಶ್ವತವಾಗಿರುವ ಶಬ್ದ ಮೂಲ ಸ್ವರೂಪವೇ ಬ್ರಹ್ಮವೆನಿಸುತ್ತದೆ. ಇದು ಘಟ, ಪಟ, ಮುಂತಾದ ಪದಾರ್ಥ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಶಬ್ದತತ್ವದಿಂದ ಜಗತ್ತಿನ ಸೃಷ್ಟಿಯಾಗಿದೆ.)[2]

ಅದ್ವೈತಿಗಳು ಆತ್ಮ-ಪರಮಾತ್ಮ ಭಿನ್ನತೆ ಕೃತಕವೆಂದು ವಾದಿಸುವಂತೆ ‘ವೈದಿಕ’ ವೈಯಾಕರಣಿಗಳು ಕರ್ತೃ, ಕ್ರಿಯೆ, ಧಾತು, ಪ್ರತ್ಯಯ, ಇತ್ಯಾದಿ ಭಿನ್ನತೆಗಳು ಕೇವಲ ವಿವರ್ತಗಳೆಂದೂ, ಮೂಲದಲ್ಲಿ ಇವೆಲ್ಲವೂ ಒಂದೇ ಎಂದೂ ಮಂಡಿಸುತ್ತಾರೆ. ವೇದಗಳು ಶಬ್ದಬ್ರಹ್ಮವನ್ನು ‘ವಾಕ್’ ಎಂದು ಪ್ರತಿಷ್ಠಾಪಿಸುತ್ತವೆ.

‘ವಾಕ್’ ಅಥವಾ ‘ಶಬ್ದಬ್ರಹ್ಮ’ದ ಸ್ವರೂಪ ನಾಲ್ಕು ಬಗೆ: ಪರಾ, ಪಶ್ಯಂತಿ, ಮಧ್ಯಮಾ, ವೈಖರಿ. (ಭರ್ತೃಹರಿ ಪರಾ ಮತ್ತು ಪಶ್ಯಂತಿ ಇವುಗಳನ್ನು ಒಂದೇ ಎಂದು ಬಗೆಯುತ್ತಾನೆ.) ಇವುಗಳಲ್ಲಿ ಪರಾ ಮತ್ತು ಪಶ್ಯಂತಿ ಅವಸ್ಥೆಗಳಿಗೆ ರೂಪವಿಲ್ಲ; ಇವು ಅಗೋಚರ, ಅಖಂಡ, ಮತ್ತು ಆದ್ಯಂತಗಳು ಇಲ್ಲದವು. ಜ್ಞಾನಿಗಳು ಮಾತ್ರ ತಪಸ್ಸಿನ ಮೂಲಕ ಇವನ್ನು ಗ್ರಹಿಸಬಹುದು. ಮಧ್ಯಮಾ ಅವಸ್ಥೆಯೂ ಕೂಡಾ ಶಬ್ದರೂಪವನ್ನು ಪಡೆದಿರುವುದಿಲ್ಲ; ಇದು ಶ್ರೋತೃವಿನ/ವಾಚಕನ ಮನಸ್ಸಿನಲ್ಲಿ ಅವನ ಜ್ಞಾನ, ಅನುಭವ, ವಿಚಾರ ಇವುಗಳನ್ನವಲಂಬಿಸಿ ಮೂಡುವ ರೂಪ. ವೈಖರಿ ಎನ್ನುವುದ ಮಧ್ಯಮಾ ವಾಸ್ತವದಲ್ಲಿ ಶಬ್ದರೂಪ ಪಡೆಯುವ ಅವಸ್ಥೆ; ಇದು ವಾಗಿಂದ್ರಿಯಗಳಿಂದ ಜನ್ಯ ಮತ್ತು ಶ್ರವಣೇಂದ್ರಿಯ ಗಮ್ಯ.

ಈ ಸಂದರ್ಭದಲ್ಲಿ ಏಳುವ ಪ್ರಶ್ನೆಯೆಂದರೆ ಯಾವ ಅವಸ್ಥೆಯಲ್ಲಿ ‘ಅರ್ಥ’ವೆನ್ನುವುದು ಜನಿಸುತ್ತದೆ? ಮತ್ತು ಪದ-ವಾಕ್ಯಗಳಿಗೂ ಅರ್ಥಕ್ಕೂ ಇರುವ ಸಂಬಂಧವೆಂತಹುದು? ಅರ್ಥವು ಜನಿಸುವ ಪ್ರಕ್ರಿಯೆಯನ್ನು: ‘ಸ್ಫೋಟ’ ಎಂದು ಈ ಪರಂಪರೆಯ ವೈಯಾಕರಣಿಗಳು ಕರೆದರು. “ಸ್ಫುಟತಿ ಅರ್ಥಃ ಅನೇನ ಇತಿ ಸ್ಫೋಟಃ ಎಂದು ಶಬ್ದ ವ್ಯುತ್ಪತ್ತಿ. ಯಾವುದರಿಂದ ಅರ್ಥವು ಸ್ಫುಟವಾಗಿ ಅರಿವಿಗೆ ಬರುತ್ತದೆಯೋ ಅದು ಸ್ಫೋಟ… ಸ್ಫೋಟವು ವೈಖರಿ ಶಬ್ದಕ್ಕೆ ನಿಮಿತ್ತ.”[3] ಎಂದರೆ, ಅರ್ಥವೆಂಬುದು ಲಿಪಿಯಲ್ಲಿಲ್ಲ, ಉಚ್ಚರಿಸಲ್ಪಡುವ ವರ್ಣಗಳಲ್ಲಿಯೂ ಇಲ್ಲ. ಏಕೆಂದರೆ, ಪದದ ಕೊನೆಯ ವರ್ಣವನ್ನುಚ್ಚರಿಸುವ ಹೊತ್ತಿಗೆ ಮೊದಲನೆಯ ವರ್ಣವು ಲುಪ್ತವಾಗಿರುತ್ತದೆ. ಆದರೆ, ಕೊನೆಯ ವರ್ಣವನ್ನುಚ್ಚರಿಸುವಾಗ, ಅದರ ಹಿಂದಿನ ಎಲ್ಲಾ ವರ್ಣಗಳ (ಪದಗಳ/ವಾಕ್ಯಗಳ) ಅಂಶಗಳು (traces) ಕೇಳುಗನ ಮನಸ್ಸಿನಲ್ಲಿರುತ್ತವೆ. ಇವೆಲ್ಲವೂ ಕೊನೆಯ ವರ್ಣದ ಉಚ್ಚಾರವಾದ ಕೂಡಲೇ ಒಟ್ಟಾರೆಯಾಗಿ ಅರ್ಥವನ್ನು ಸ್ಫುಟಿಸುತ್ತವೆ. ಇದೇ ಸ್ಫೋಟ ಮತ್ತು ಇದು ಅಕ್ಷರ ಹಾಗೂ ವರ್ಣಗಳಿಂದ ಬೇರೆಯೇ ಆದ ಸ್ವತಂತ್ರ ಶಕ್ತಿ ಅಥವಾ ಸಂಗತಿ. ಅರ್ಥಬೋಧಕವಾದ ಸ್ಫೋಟವು ಅರನಿಯಲ್ಲಡಗಿರುವ ಅಗ್ನಿಯಂತೆ ನಿತ್ಯ, ಅಖಂಡ, ಮತ್ತು ಕ್ರಮರಹಿತ; ಆದರೆ, ಅದು ಸಕ್ರಮವಾದ ನಾದದಿಂದ (ಧ್ವನಿಯಿಂದ) ಅಭಿವ್ಯಕ್ತಿ ಪಡೆಯುವ ಕಾರಣ ಅದೂ ಕ್ರಮಬದ್ಧವಾಗಿರುವಂತೆ ಮತ್ತು ಭೇದಗಳನ್ನೊಳಗೊಂಡಂತೆ ಗೋಚರಿಸುತ್ತದೆ.

ಸಂಕ್ಷಿಪ್ತವಾಗಿ ಹೇಳಬೇಕಾದರೆ, ಪತಂಜಲಿ, ಭರ್ತೃಹರಿ ಮುಂತಾದವರಿಗೆ ‘ವಾಕ್’ ಅನಾದಿ-ಅನಂತ-ಅಖಂಡ ಬ್ರಹ್ಮತತ್ವಕ್ಕೆ ಸಮಾನ; ಮತ್ತು ವೈಖರೀ ಸ್ಥಿತಿಯಲ್ಲಿಯೂ ಶಬ್ದವು ನಿತ್ಯ. ಆದ್ದರಿಂದಲೇ ಭಾಷೆಯನ್ನು ಕುರಿತ ಈ ನಿಲುವು ‘ಸಗುಣ’, ‘ಆತ್ಮವಾದಿ’, ‘ಶ್ರೌತ’, ಎಂಬುದಾಗಿ ಗುರುತಿಸಲ್ಪಡುತ್ತದೆ.

ಭಾಷೆಯನ್ನು ಕುರಿತ ಇವೆಲ್ಲಾ ಗೃಹೀತಗಳನ್ನು ಬೌದ್ಧ ಚಿಂತಕರು ತಿರಸ್ಕರಿಸುತ್ತಾರೆ. ನಾಗಾರ್ಜುನ, ದಿಙ್ನಾಗ, ಕಮಲಶಿಲ, ಇತ್ಯಾದಿ ಬೌದ್ಧ ಚಿಂತಕರ ಒಟ್ಟಾರೆ ಗೃಹೀತಗಳನ್ನು ಹೀಗೆ ಸಂಗ್ರಹಿಸಬಹುದು:

(೧) ಭಾಷೆಯಲ್ಲಿ ಶಬ್ದಕ್ಕೂ ಅದರ ‘ಅರ್ಥ’ಕ್ಕೂ ಯಾವುದೇ ವಿಧದ ನಿಜ ಸಂಬಂಧವಿಲ್ಲ.

(೨) ಶಬ್ದವು ಒಂದು ವಸ್ತುವಿನ/ವಿಚಾರದ ಅಮೂರ್ತ ಮಾನಸಿಕ ರಚನೆಯನ್ನು (mental construct) ಮಾತ್ರ ನಿರ್ದೇಶಿಸುತ್ತದೆ – ನಿಜ ವಸ್ತು ಅಥವಾ ವಿಚಾರವನ್ನಲ್ಲ.

(೩) ಶಬ್ದದ/ ಭಾಷೆಯ ಸ್ವರೂಪ ಭೇದಾತ್ಮಕ (differential); ಎಂದರೆ, ಅದು ಒಂದು ನಿಜ ವಸ್ತುವನ್ನು/ ವಿಚಾರವನ್ನು ನಿರ್ದೇಶಿಸದೆ, ಆ ವಸ್ತುವಿಗೂ ಮತ್ತು ಇತರ ವಸ್ತುಗಳಿಗೂ ಇರುವ ಭೇದವನ್ನು ಹಾಗೂ ಭೇದಾತ್ಮಕ ಸಂಬಂಧವನ್ನು ನಿರ್ದೇಶಿಸುತ್ತದೆ.

(೪) ವಿಕಲ್ಪಗಳು ಸಂಪೂರ್ಣವಾಗಿ ಸಾಪೇಕ್ಷ ಮತ್ತು ವ್ಯಕ್ತಿನಿಷ್ಠ.[4]

ಭಾಷೆಯ ಸ್ವರೂಪ ಮತ್ತು ಅರ್ಥನಿಷ್ಪತ್ತಿ ಇವುಗಳ ಬಗ್ಗೆ ಬೌದ್ಧ ಚಿಂತಕರು ಮಂಡಿಸಿರುವ ಅನೇಕ ಸಿದ್ಧಾಂತಗಳಲ್ಲಿ ‘ಅಪೋಹ’ ಸಿದ್ಧಾಂತ ಅತ್ಯಂತ ಮಹತ್ವದ್ದು. ಕುಂಜುನ್ನಿ ರಾಜಾ ಇತ್ಯಾದಿ ವಿದ್ವಾಂಸರು ‘ಅಪೋಹ’ ಸಿದ್ಧಾಂತದ ಬೇರುಗಳನ್ನು ಪಾಣಿನಿ ಪೂರ್ವ ವೈಯಾಕರಣಿಗಳಲ್ಲಿ, ಮುಖ್ಯವಾಗಿ ವ್ಯಾಡಿಯಲ್ಲಿ, ಗುರುತಿಸುತ್ತಾರೆ.[5] ಈ ಸಿದ್ಧಾಂತವು ಇಷ್ಟು ಪ್ರಾಚೀನವಾಗಿದ್ದರೂ ಇದನ್ನು ವ್ಯವಸ್ಥಿತವಾಗಿ ಹಾಗೂ ತರ್ಕಬದ್ಧವಾಗಿ ಮಂಡಿಸಿದವರು ದಿಙ್ನಾಗ ಮತ್ತು ಧರ್ಮಕೀರ್ತಿ. ಈ ವಿದ್ವಾಂಸರ ಈ ಕೆಳಗಿನ ಎರಡು ಕಾರಿಕೆಗಳನ್ನು ಅಪೋಹ ಸಿದ್ಧಾಂತರ ಪ್ರಮುಖ ಲಕ್ಷಣ ನಿರೂಪಣೆಯೆಂದು ಪರಿಗಣಿಸಬಹುದು:

ವಿಕಾಲ್ಪಾಯೋನಯಃ ಶಬ್ದಾಃ ವಿಕಲ್ಪಾಃ ಶಬ್ದೋನಯಃ/
ಕಾರ್ಯ ಕಾರಣತಾ ತೇಷಾಮರ್ಥಾಮ್ಶಬ್ದಾಃ ಸ್ಪೃಶ್ಯಂತ್ಯಪಿ
(
ದಿಙ್ನಾಗ, ಪ್ರಮಾಣ ಸಮುಚ್ಚಯ)
ತಸ್ಯಾಂಯದ್ರೂಪಮವಿಭತಿ ಬಾಹ್ಯಮೇಕ ಮಿವಾನ್ಯತಃ
ವ್ಯಾವೃತ್ತಿಮಿವ ನಿಸ್ತತ್ವಂ ಪರೀಕ್ಷಾಭಂಗಭವತಃ[6]
(ಧರ್ಮಕೀರ್ತಿ, ಪ್ರಮಾಣವಾರ್ತಿಕಾ)

‘ಊಹ್‌’ ಧಾತುವಿನಿಂದ ಬಂದಿರುವ ‘ಅಪೋಹ’ ಪದದ ಅರ್ಥ ‘ಹೊರಹಾಕು’, ‘ಪ್ರತ್ಯೇಕಿಸು’, ಎಂದಾಗುತ್ತದೆ. ಏನನ್ನು ಮತ್ತು ಯಾವುದರಿಂದ ಪ್ರತ್ಯೇಕಿಸುವುದು? ‘ಬೆಟ್ಟದಲ್ಲಿ ಬೆಂಕಿಯಿದೆ’ – ಈ ವಾಕ್ಯವನ್ನು ನಾವು ಅರ್ಥ ಮಾಡಿಕೊಳ್ಳುವುದು ಹೇಗೆಂದರೆ ‘ಅಲ್ಲಿ ಬೆಂಕಿಯಿಲ್ಲದಿರುವುದು ಇಲ್ಲ’ ಎಂದು. ಒಂದು ವಸ್ತುವಿನ ಅರ್ಥ ‘ಅದು ಬೇರಾವುದೂ ವಸ್ತುವಲ್ಲ’ ಎಂದು. ಅರ್ಥಾತ್‌, ಆ ವಸ್ತು ಇತರ ವಸ್ತುಗಳೊಂದಿಗೆ ಹೊಂದಿರುವ ಭಿನ್ನತೆಯಿಂದ ಅಸ್ತಿತ್ವಕ್ಕೆ ಬರುತ್ತದೆ. ಪದಗಳು ಭಿನ್ನತೆಯನ್ನು ಸೂಚಿಸಬಲ್ಲವೆ ಹೊರತು (ಉದಾ. ‘ಪಶು ಎಂದರೆ ‘ಪಶುವಲ್ಲದ್ದು ಅಲ್ಲ’) ವಸ್ತು ಸತ್ಯವನ್ನಲ್ಲ. ಭಾಷೆಯ ಮೂಲಕ ಆಗುವ ಸಂವಹನೆಯಲ್ಲಿ ಭಿನ್ನತೆಯನ್ನಾಧರಿಸಿದ ಶಬ್ದ-ಪದ-ವಾಕ್ಯ ರಪಸ್ಪರ ಸಂಬಂಧವೇ ಅತಿ ಮುಖ್ಯ

‘ಅರ್ಥ’ ಎನ್ನುವುದು ಸಂಪೂರ್ಣವಾಗಿ ವ್ಯಕ್ತಿನಿಷ್ಠ ಮತ್ತು ಇದೊಂದು ಮಾನಸಿಕ ರಚನೆ. ಈ ಮಾನಸಿಕ ರಚನೆಗೂ ನಿಜ ಪ್ರಪಂಚದ ವಸ್ತು-ವಿಚಾರಗಳಿಗೂ ಸಂಬಂಧವಿಲ್ಲ. ವಸ್ತು-ವಿಚಾರಗಳ ಬಗ್ಗೆ ತನಗಿರುವ ವೈಯಕ್ತಿಕ ಮಾನಸಿಕ ರಚನೆಗಳನ್ನು ಭಾಷೆಯ ಮೂಲಕ ವಕ್ತೃ ವ್ಯಕ್ತಪಡಿಸುತ್ತಾನೆ; ಶ್ರೋತೃವೂ ವಕ್ತೃವಿನ ಶಬ್ದಗಳ ಮುಖಾಂತರ ತನ್ನದೇ ಆದ ಮಾನಸಿಕ ರಚನೆಗಳನ್ನು ನಿರ್ಮಿಸಿಕೊಳ್ಳುತ್ತಾನೆ. ಪದ ಮತ್ತು ಅರ್ಥ ಇವುಗಳ ನಡುವೆ ಇರುವ ಯಾದೃಚ್ಛಿಕಸಂಬಂಧವನ್ನಾಧರಿಸಿದ ಇಂತಹ ರಚನೆಗಳನ್ನು ‘ವಿಕಲ್ಪ’ಗಳೆಂದು ಅಪೋಹ ಚಿಂತಕರು ನಿರ್ದೇಶಿಸುತ್ತಾರೆ.

ಶಬ್ದದ/ಪದದ ಸ್ವರೂಪ ಭೇದಾತ್ಮಕ – ಶಬ್ದಕ್ಕೂ/ ಪದಕ್ಕೂ ಮತ್ತು ಅರ್ಥಕ್ಕೂ ನಡುವೆ ಇರುವ ಸಂಬಂಧ ಯಾದೃಚ್ಛಿ- ಶಬ್ದ-ಪದಗಳು ವಸ್ತುವೊಂದರ ಅಮೂರ್ತ ಮಾನಸಿಕ ರಚನೆಯನ್ನು ಮಾತ್ರ ನಿರ್ದೇಶಿಸುತ್ತವೆ, ನಿಜ ವಸ್ತುವನ್ನಲ್ಲ… ಭಾಷೆಯ ಬಗ್ಗೆ ಈ ಬಗೆಯ ತೀರ್ಮಾನಗಳನ್ನು ಪಟ್ಟೀ ಮಾಡುವಾಗ ಇವುಗಳು ಕ್ರಿ.ಶ. ನಾಲ್ಕು-ಐದನೆಯ ಶತಮಾನಗಳ ಬೌದ್ಧರ ವಿಚಾರಗಳೇ ಅಥವಾ ಇಪ್ಪತ್ತನೆಯ ಶತಮಾನದ ಸ್ವಿಸ್ ಭಾಷಾವಿಜ್ಞಾನಿ ಫ಼ರ್ಡಿನಂಡ್‌ದ ಸೋಸ್ಯೋನ ವಿಚಾರಗಳೇ ಎಂಬ ಸಂದೇಹಗಳೇಳುತ್ತವೆ. ಅಷ್ಟರ ಮಟ್ಟಿಗೆ ಬೌದ್ಧ ಚಿಂತಕರ ಮತ್ತು ಭಾಷೆಯನ್ನು ಕುರಿತ ಸೋಸ್ಯೋನ ವಿಚಾರಗಳ ನಡುವೆ ಸಾಮ್ಯವಿದೆ. ಇಂತಹ ಸಾಮ್ಯ ಎಷ್ಟು ನಿಚ್ಚಳವಾಗಿದೆಯೆಂದರೆ ಅನೇಕ ವಿದ್ವಾಂಸರು ‘ಸೋಸ್ಯೋ ಬೌದ್ಧ ಚಿಂತಕರಿಂದ ಪ್ರಭಾವಿತನಾಗಿದ್ದಿರಬಹುದು’ ಎಂದು ಊಹಿಸುತ್ತಾರೆ. ಕಾರಣ, ಸೋಸ್ಯೋಗೆ ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯವಿತ್ತು; ಅವನ ಪಿ.ಎಚ್.ಡಿ. ಸಂಪ್ರಬಂಧದ ವಿಷಯ ‘ಸಂಸ್ಕೃತ ಭಾಷೆಯಲ್ಲಿ ಷಷ್ಠೀ ವಿಭಕ್ತಿಯ ಉಪಯೋಗ’ (‘On the Use of Genetive Case in Sanskrit’). ಆದ್ದರಿಂದಲೇ ಜೆ.ಆರ್. ಫರ್ತ್‌ಎಂಬ ವಿದ್ವಾಂಸ ‘ಭಾರತೀಯ ತತ್ವಶಾಸ್ತ್ರದಿಂದ ಅವನು (ಸೋಸ್ಯೋ) ಸಾಕಷ್ಟು ಕಲಿತಿರುವ ಸಾಧ್ಯತೆಯಿದೆ” ಎಂದು ಅಭಿಪ್ರಾಯ ಪಡುತ್ತಾನೆ.

ಅಪೋಹ ಸಿದ್ಧಾಂತ ಮತ್ತು ನಿರಚನ ಚಿಂತನೆ ಇವೆರಡರ ನಡುವೆ ಇರುವ ಸಮಾನ ಗೃಹೀತಗಳು ಹಾಗೂ ತಾತ್ವಿಕ ನೆಲೆಗಳು ಇದುವರೆಗಿನ ಚರ್ಚೆಯಿಂದ ಸ್ಪಷ್ಟವಾಗಿರಬಹುದಾದರೂ ಕೆಲವಂಶಗಳನ್ನು ಮತ್ತೆ ಪ್ರಸ್ತಾಪಿಸುವುದು ಅವಶ್ಯಕ. ಎರಡೂ ಚಿಂತನಾಕ್ರಮಗಳು ಒಂದು ಸಂಸ್ಕೃತಿಯ ಪ್ರಧಾನ ಹಾಗೂ ಪ್ರತಿಷ್ಠಿತ ಚಿಂತನಾಕ್ರಮಗಳ ಪ್ರತಿರೋಧದ ರೂಪದಲ್ಲಿ ಬರುತ್ತವೆ ಎಂಬುದು ನಾವು ಮೊದಲು ಗಮನಿಸಬೇಕಾದ ಸಂಗತಿ. ವೇದಗಳಲ್ಲಿ ಬೇರೂರಿಸುವ ಮತ್ತು ಪಾಣಿನಿ – ಪತಂಜಲಿ – ಭರ್ತೃಹರಿ ಇತ್ಯಾದಿ ಅದ್ವಿತೀಯ ಭಾಷಾಶಾಸ್ತ್ರಜ್ಞರು ಬೆಳೆಸಿದ ಆತ್ಮವಾದಿ ಚಿಂತನೆಯ ನಿರಾಕರಣೆಯಾಗಿ ಅಪೋಹ ಸಿದ್ಧಾಂತವು ಜನ್ಮಿಸಿದರೆ, ಪ್ಲೇಟೋ-ಕಾಂಟ್-ವಿಟ್‌ಗೆನ್‌ಸ್ಟೈನ್ ಪರಂಪರೆ ಬೆಳೆಸಿದ ಪಾಶ್ಚಿಮಾತ್ಯ ಅಭಿಜಾತ ಚಿಂತನೆಯ ನಿರಾಕರಣೆಯಾಗಿ ನಿರಚನ ಚಿಂತನೆ ಜನ್ಮ ತಾಳುತ್ತದೆ. ಅಪೋಹ ಮತ್ತು ನಿರಚನ ಇವೆರಡೂ ಅಜ್ಞೇಯತಾವಾದಗಳು ಅಥವಾ ಶೂನ್ಯವಾದಗಳು (Sceptic/ Nihilistic).

ಬೌದ್ಧರ ‘ವಿಕಲ್ಪ’ ಪರಿಕಲ್ಪನೆಯನ್ನು ಡೆರಿಡಾನ ’ಡಿಫ಼ರನ್ಸ್‌’ (Differance) ಪರಿಕಲ್ಪನೆಗೆ ಸಮಾನವೆಂದು ಪರಿಗಣಿಸಬಹುದು. ಮೋನಿಯೇರ್ ವಿಲಿಯಮ್ಸ್ ತನ್ನ ಸಂಸ್ಕೃತ-ಇಂಗ್ಲೀಷ್‌ನಿಘಂಟುವಿನಲ್ಲಿ ‘ವಿಕಲ್ಪ’ ಶಬ್ದಕ್ಕೆ ಈ ಅರ್ಥಗಳನ್ನು ಕೊಡುತ್ತಾನೆ: ’alternative, option, variation, difference of perception, ad-mission of an option or alternative’ (ಪು ೯೫೫). ಈ ’optionalityಯನ್ನೇ, ಎಂದರೆ ಸಾಪೇಕ್ಷವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುವ ಸೂಚಿತದ ಲಕ್ಷಣವನ್ನೇ ಡೆರಿಡಾ ಉಪಯೋಗಿಸುವ ‘ಡಿಫರನ್ಸ್‌’ ನಿರ್ದೇಶಿಸುತ್ತದೆ ಎಂದು ತೋರುತ್ತದೆ.

ಪದ ಮತ್ತು ಅರ್ಥ ಇವುಗಳ, ಎಂದರೆ ಸೂಚಕ-ಸೂಚಿತಗಳ ನಡುವಿನ ಸಂಬಂಧವನ್ನು ವಿಶ್ಲೇಷಿಸುತ್ತ, ಪದಗಳು ಭಿನ್ನತೆ ಅಥವಾ ಭೇದವನ್ನು ಮಾತ್ರ ಅಭಿವ್ಯಕ್ತಿಗೊಳಿಸಬಲ್ಲವು ಎಂದು ಧರ್ಮಕೀರ್ತಿ ವಾದಿಸುತ್ತಾನೆ. ಈ ಸಂದರ್ಭದಲ್ಲಿ ಅವನು ನಮ್ಮ ಗಮನಕ್ಕೆ ಒಂದು ವಸ್ತುವನ್ನು ಗ್ರಹಿಸುವಾಗ ‘ಮರವಲ್ಲದ್ದು ಯಾವುದು’ ಎಂಬುದನ್ನೂ ಮತ್ತು ಅದರ ಅಭಾವವನ್ನೂ ಗ್ರಹಿಸುತ್ತೇವೆ. ಎಂದರೆ, ಒಂದು ವಸ್ತುವಿಗೆ ತನ್ನತನ ಅಥವಾ ಅನನ್ಯತೆಗೆ ಎರಡು ಆಯಾಮಗಳಿರುತ್ತವೆ: ಧನಾತ್ಮಕ ಮತ್ತು ನಿಶೇಧಾತ್ಮಕ – “ಅವೃಕ್ಷಾವ್ಯತಿರೇಕೇಣ ವೃಕ್ಷಾರ್ಥ ಗ್ರಹಣೆ ದ್ವಯಂ/ ಅನ್ಯೋನ್ಯಾಶ್ರಯಾಮಿತ್ಯೇಕ ಗ್ರಹಭಾವೆ ದ್ವಯಗ್ರಹ” ಎಂದು ಧರ್ಮಕೀರ್ತಿ ಪ್ರಮಾಣವಾರ್ತಿಕಾದಲ್ಲಿ ಹೇಳುತ್ತಾನೆ.[7] ಸರಿಸುಮಾರು ಇದೇ ನೆಲೆಯಲ್ಲಿ ಡೆರಿಡಾ ತನ್ನ ‘ಡಿಫ಼ರನ್ಸ್‌’ ಪರಿಕಲ್ಪನೆಯನ್ನು ವ್ಯಾಖ್ಯಾನಿಸುತ್ತಾ, ‘ಅರ್ಥ’ವೆನ್ನುವುದು “ಇರುವಿಕೆ ಮತ್ತು ಅಭಾವ ಇವೆರಡರ ಅವಿರತ ಮಿಣುಕಾಟ” (“It is a kind of constant flickering of presence and absence togerther”) ಎಂದು ಹೇಳುತ್ತಾನೆ.

ನಿರಚನ ವಿಮರ್ಶಕರಲ್ಲಿ ಪ್ರಖ್ಯಾತನಾದ ಪಾಲ್ ದ ಮಾನ್ ತನ್ನ “ಓದುವಿಕೆಯ ರೂಪಕಗಳು” (Allegories of Reading, 1979) ಎಂಬ ಗ್ರಂಥದಲ್ಲಿ ಅರ್ಥಜಿಜ್ಞಾಸೆಯನ್ನು ಹೀಗೆ ಮುಂದುವರೆಸುತ್ತಾನೆ: “ಭಾಷೆಯ ಎಲ್ಲಾ ಸ್ತರಗಳೂ ಅಲಂಕಾರಿಕವೆ (Figurative). ದೈನಂದಿನ ವ್ಯವಹಾರಕ್ಕೆ ಸಂವಹನ ಮಾಧ್ಯಮವಾಗುವ ಭಾಷೆ ಅಥವಾ ಭಾಷೆಯ ಒಂದು ಸ್ತರ ಅಲಂಕಾರಿಕವಲ್ಲವೆಂದು, ಕೇವಲ ಸಂದೇಶವಾಹಕವೆಂದು ನಮಗೇಕೆ ಭಾಸವಾಗುತ್ತದೆಂದರೆ ರೂಢಿಯಿಂದಾಗಿ ನಾವು ಅದರ ಅಲಂಕಾರಿಕತೆಯನ್ನು ಮರೆತಿರುತ್ತೇವೆ. ಅಲಂಕಾರಿಕತೆಯು ಭಾಷೆಯ ಸರಳ ಹಾಗೂ ಅನ್ವಯಾತ್ಮಕ (referential) ಶಕ್ತಿಯನ್ನು ಕ್ಷೀಣಗೊಳಿಸುತ್ತದೆ. ಪರಿಣಾಮತಃ, ಓದುಗನ ಮತ್ತು ಕರತಿಯ ನಡುವೆ ಕಂದರವುಂಟಾಗಿ ಎಲ್ಲಾ ಓದು ತಪು ಓದು ಆಗುತ್ತದೆ(“All reading is misreading”).

ಇದೇ ಬಗೆಯ ವಾದವನ್ನು ನಾವು ಅಪೋಹ ಚಿಂತಕರಲ್ಲಿಯೂ ಕಾಣುತ್ತೇವೆ. ಶಬ್ದ-ಪದ-ವಾಕ್ಯಗಳು ವಸ್ತುಸತ್ಯವನ್ನಲ್ಲದೆ ವಸ್ತುವಿನ ಬಗ್ಗೆ ಇರುವ ಮಾನಸಿಕ ರಚನೆಯನ್ನು (ಎಂದರೆ ವಿಕಲ್ಪವನ್ನು) ಸೂಚಿಸುತ್ತವೆ ಎಂಬ ಶಾಂತರಕ್ಷಿತನ ವಾದವನ್ನು ಅವನ ವ್ಯಾಖ್ಯಾನಕಾರನಾದ ಕಮಲಶೀಲ ಹೀಗೆ ಅರ್ಥೈಸುತ್ತಾನೆ: “ಶಬ್ದ-ಪದಗಳು ಅಭಿವ್ಯಕ್ತಿಗೊಳಿಸುವ ಯಾವುದೂ ಸತ್ಯವಲ್ಲ. ಎಲ್ಲಾ ಬಗೆಯ ಭಾಷಿಕ ಗ್ರಹಿಕೆಯೂ ತಪು ಗ್ರಹಿಕೆಯೇ. ಏಕೆಂದರೆ ವಾಸ್ತವದಲ್ಲಿ ಭಿನ್ನವಾಗಿರುವ ವಸ್ತುಗಳನ್ನು ಅಭಿನ್ನವೆಂಬಂತೆ, ಸಮಾನವೆಂಬಂತೆ ಭಾಷೆಯು ರೂಪಿಸುತ್ತದೆ.”[8] ಅರ್ಥಜಿಜ್ಞಾಸೆಯ ನೆಲೆಯಲ್ಲಿ ಪಾಲ್ ದ ಮಾನ್ ಮತ್ತು ಶಾಂತರಕ್ಷಿತ ಇವರ ನಡುವೆ ಅಷ್ಟೇನೂ ಅಂತರವಿಲ್ಲವೆಂದು ಕಾಣುತ್ತದೆ.

ಅಪೋಹ ಮತ್ತು ನಿರಚನ ಚಿಂತನಾ ಮಾರ್ಗಗಳಲ್ಲಿ ಸಮಾನವಿರುವ ಒಂದು ಅತಿ ಮುಖ್ಯ ಅಂಶವೆಂದರೆ ಅವೆರಡರಲ್ಲಿಯೂ ಕ್ರಿಯಾಶೀಲವಾಗಿರುವ ಅವಕೇಂದ್ರೀಕರಣದ ಕಾಳಜಿ. ಕೇಂದ್ರಾಧಾರಿತ ಪಾಶ್ಚಿಮಾತ್ಯ ಮತ್ತು ಪೌರ್ವಾತ್ಯ ಎರಡೂ ಚಿಂತನಾಕ್ರಮಗಳನ್ನು ಅಪೋಹ ಮತ್ತು ನಿರಚನ ಪ್ರಸ್ಥಾನಗಳು ತಿರಸ್ಕರಿಸುತ್ತವೆ. ಈ ಬಗೆಯ ಅವಕೇಂದ್ರೀಕರಣವನ್ನು ನಾವು ನೀಶೆ, ಹೈಡೆಗರ್, ಡೆರಿಡಾ ಮುಂತಾದ ಪಾಶ್ಚಾತ್ಯ ಚಿಂತಕರಲ್ಲಿ, ಮತ್ತು ನಾಗಾರ್ಜುನ, ದಿಙ್ನಾಗ, ಧರ್ಮಕೀರ್ತಿ, ಮುಂತಾದ ಭಾರತೀಯ ಚಿಂತಕರಲ್ಲಿ ಕಾಣುತ್ತೇವೆ. ನಾಗಾರ್ಜುನನ ಒಂದು ಪ್ರಸಿದ್ಧ ಹೇಳಿಕೆಯಿಂದಲೇ ಈ ಲೇಖನವನ್ನು ಮುಗಿಸಬಹುದು: “ಯಾವುದನ್ನು ಸಿದ್ಧಗೊಳಿಸಬೇಕು ಎಂದು ನಾವು ಹೊರಡುತ್ತೇವೆಯೋ ಅದರ ಪ್ರಮಾಣವನ್ನು ಮೊದಲು ಸಿದ್ಧಮಾಡಬೇಕಾಗುತ್ತದೆ. ಪ್ರಮಾಣಗಳ ಪ್ರಮಾಣ, ಆ ಪ್ರಮಾಣಗಳ ಪ್ರಮಾಣ – ಹೀಗೆ ಯಾವುದಕ್ಕೂ ಪ್ರಾರಂಭವೇ ಇರುವುದಿಲ್ಲ. ಪ್ರಾರಂಭವೇ ಇರದೆ ಮಧ್ಯ ಇಲ್ಲಿ, ಅಂತ್ಯವೆಲ್ಲಿ?…”[9]

(‘ಅಪೋಹ ಸಿದ್ಧಾಂತ ಮತ್ತು ನಿರಜನ ಚಿಂತನೆಲೇಖನದ ವಿಸ್ತೃತರೂಪ)

* * *

[1] as quoted by : John Rawlings, “Jacques Derrida,” Stanford Presidential Lectures, 1999. ಡೆರಿಡಾನ ಬದುಕಿನ ಅನೇಕ ವಿವರಗಳಿಗೆ ನಾನು ಈ ಲೇಖನಕ್ಕೆ ಋಣಿಯಾಗಿದ್ದೇನೆ.

[2] ಎಸ್. ರಂಗನಾಥ ಶರ್ಮ, ವಾಕ್ಯಪದೀಯ. ಅಕ್ಷರ ಚಿಂತನ ಮಾಲೆ, ೧೯೯೩; ಪು. ೨೩.

[3] ರಂ. ಶರ್ಮ, ಪು. ೪೯-೫೦.

[4] Rajnish Kumar Mishra, Buddhist Theory of Meaning and Literary Analysis. New Delhi: D.K. Printworld, 1998; pp. 87-88. ಅಪೋಹ ಸಿದ್ಧಾಂತದ ಮೂಲಕಾರಿಕೆಗಳಿಗೆ ನಾನು ಈ ವಿದ್ವತ್ಪೂರ್ಣ ಗ್ರಂಥಕ್ಕೆ ಋಣಿಯಾಗಿದ್ದೇನೆ.

[5] ಮಿಶ್ರಾ. ಪು. ೧೩೬.

[6] ಮಿಶ್ರಾ. ಪು. ೧೩೪.

[7] ಮಿಶ್ರಾ. ಪು. ೧೧೩; ನೋಟ್ ೬೬.

[8] ಮಿಶ್ರಾ. ಪು. ೧೧೪.

[9] ಡಿ.ಆರ್. ನಾಗರಾಜ್, ನಾಗಾರ್ಜುನ: ಕೃತಿ ಮತ್ತು ಚಿಂತನೆ. ಅಕ್ಷರ ಚಿಂತನ ಮಾಲೆ, ೧೯೯೩; ಪು. ೪೫.