ಹಿಂದು ಧರ್ಮದಲ್ಲಿ ಜನ್ಮ ತಳೆದು, ಅನಂತರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು, ವೃತ್ತಿಯಲ್ಲಿ ಅತ್ಯಂತ ನಿಷ್ಠಾವಂತ ಮಿಶನರಿಯಾಗಿ, ಪ್ರವೃತ್ತಿಯಲ್ಲಿ ಪತ್ರಕರ್ತ-ಕಾದಂಬರಿಕಾರರಾಗಿ, ಸದಾ ದೀನದಲಿತರ ಸೇವೆಯಲ್ಲಿ ತಮ್ಮ ಬದುಕನ್ನು ಕಳೆದವರು ಲಾಲ್ ಬಿಹಾರಿ ಡೇ. ಭಾರತೀಯರಿಂದ ಇಂಗ್ಲೀಷ್‌ನಲ್ಲಿ ಬರೆಯಲ್ಪಟ್ಟ ಕಾದಂಬರಿಗಳಲ್ಲಿ ಇವರ ಗೋವಿಂದ ಸಾಮಂತ ಕೃತಿಗೆ ಎತ್ತರದ ಸ್ಥಾನವಿದೆ.

ಬಂಗಾಳದ ಸೊನಪಲಾಸಿ ಎಂಬ ಗ್ರಾಮದಲ್ಲಿ ಡಿಸೆಂಬರ್ ೧೮, ೧೮೨೪ರಲ್ಲಿ ಜನಿಸಿದ ಡೇ ಬಡ ‘ಬಣಕರ್’ ಜಾತಿಯವರಾಗಿದ್ದರು. ತಮ್ಮ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಂತರ ಅವರು ಕಲ್ಕತ್ತಾದ ಇಂದು ಸ್ಕಾಟಿಷ್ ಚರ್ಚ್‌ ಕಾಲೇಜ್ ಎಂದು ಕರೆಯಲ್ಪಡುತ್ತಿರುವ ವಿದ್ಯಾ ಸಂಸ್ಥೆಯಲ್ಲಿ ೧೮೩೪ ರಿಂದ ೧೮೪೪ರ ವರೆಗೆ ಉಚ್ಚ ಶಿಕ್ಷಣವನ್ನು ಪಡೆದರು. ತಮ್ಮ ನಿಶಿತ ಮತಿ ಮತ್ತು ಪಾಂಡಿತ್ಯಗಳಿಂದಾಗಿ ಎಲ್ಲಾ ತರಗತಿಗಳಲ್ಲಿಯೂ ಚಿನ್ನದ ಪದಕಗಳನ್ನು ಗಳಿಸಿದರು. ಇದೇ ಸಂದರ್ಭದಲ್ಲಿಯೇ (೧೮೪೩ ರಲ್ಲಿ) ಆ ಕಾಲೇಜಿನ ಪ್ರಾಂಶುಪಾಲರಾಗಿದ್ದರೆ ಡಫ್ ಅವರ ಪ್ರಭಾವದಿಂದಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು.

೧೮೫೫ ರಿಂದ ೧೮೬೭ ರವರೆಗೆ ಮಿಶನರಿಯಾಗಿ ಕಾರ್ಯನಿರ್ವಹಿಸಿದ ಡೇ ಅನಂತರ ಇಪ್ಪತ್ತು ವರ್ಷಗಳ ಕಾಲ ಬರ್ಹಾಮ್‌ಪುರ್‌, ಹೂಗ್ಲಿ, ಮುಂತಾದೆಡೆಗಳಲ್ಲಿದ್ದ ಸರಕಾರಿ ಕಾಲೇಜುಗಳಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಅಪಾರ ಕೀರ್ತಿಯನ್ನು ಗಳಿಸಿದರು. ನಿಷ್ಠಾವಂತ ಕ್ರಿಶ್ಚಿಯನ್ ಆಗಿದ್ದರೂ ಮತ್ತು ಒಟ್ಟಾರೆಯಾಗಿ ಭಾರತದ ಬ್ರಿಟಿಷ್ ಆಧಿಪತ್ಯವನ್ನು ಸಮರ್ಥಿಸುವವರಾಗಿದ್ದರೂ ಬ್ರಿಟಿಷ್ ಅಧಿಕಾರ ವರ್ಗ ಭಾರತೀಯರ ಬಗ್ಗೆ ಬೆಳೆಸಿಕೊಂಡಿದ್ದ ಪೂರ್ವಾಗ್ರಹಗಳನ್ನು ಮತ್ತು ಭಾರತೀಯರ ವಿರುದ್ಧ ಮಾಡುತ್ತಿದ್ದ ಪಕ್ಷಪಾತವನ್ನು ಸದಾ ಉಗ್ರವಾಗಿ ಖಂಡಿಸುತ್ತಿದ್ದರು. ಕಲಕತ್ತಾ ವಿಶ್ವವಿದ್ಯಾನಿಲಯ ೧೮೭೭ ರಲ್ಲಿ ಡೇ ಅವರನ್ನು ‘ಫೆಲೋ’ ಆಗಿ ಗೌರವಿಸಿತು. ಅವರ ಮರಣ ೧೮೯೨ ರಲ್ಲಿ ಆಯಿತು.

ಅನೇಕ ಪತ್ರಿಕೆಗಳ ಸಂಪಾದಕರಾಗಿ ಬೆಂಗಾಳಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ವಿಪುಲ ವೈಚಾರಿಕ ಲೇಖನಗಳನ್ನು ರಚಿಸಿದ ಡೇ ಅವರ ಎರಡು ಪ್ರಸಿದ್ಧ ಕೃತಿಗಳೆಂದರೆ ಗೋವಿಂದ ಸಾಮಂತ (೧೮೭೪) ಮತ್ತು ಫೋಕ್ ಟೇಲ್ಸ್ಆಫ್ ಬೆಂಗಾಲ್ (೧೮೮೩).[1]

ಮೊದಲ ಕೃತಿ ಎಷ್ಟು ಖ್ಯಾತಿಯನ್ನು ಪಡೆದಿತ್ತೆಂದರೆ ಅದನ್ನು ಓದಿದ ನಂತರ ಪ್ರಖ್ಯಾತ ವಿಜ್ಞಾನಿ ಚಾರಲ್ಸ್ ಡಾರ್ವಿನ್ ಡೇ ಅವರಿಗೆ ಒಂದು ಪ್ರಶಂಸಾ ಪತ್ರವನ್ನು ಬರೆದಿದ್ದರಂತೆ.

* * *

ಗೋವಿಂದ ಸಾಮಂತ ಎಂಬ ಇಂಗ್ಲೀಷ್ ಕಾದಂಬರಿ ಒಂದು ಸ್ಪರ್ಧೆಗಾಗಿ ಬರೆದ ಕೃತಿ. ಅದು ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಹಾಗೂ ೫೦೦ ರೂಪಾಯಿಗಳ ಬಹುಮಾನವನ್ನೂ ಗಳಿಸಿತು. ಅದರ ಅಪಾರ ಖ್ಯಾತಿ-ಜನಪ್ರಿಯತೆಗಳಿಂದಾಗಿ, ಹೆಚ್ಚಿನ ಮೂರು ಅಧ್ಯಾಯಗಳೊಡನೆ ಅದರ ವಿಸ್ತೃತ ಆವೃತ್ತಿ ಬೆಂಗಾಲ್ ಪೆಸನ್ಟ್ ಲೈಫ್ ಎಂಬ ಹೆಸರಿನಲ್ಲಿ ಪ್ರಕಟವಾಯಿತು; ಲಂಡನ್ನಿನ ಮ್ಯಾಕ್ಮಿಲನ್ ಸಂಸ್ಥೆ ೧೯೧೩ರಲ್ಲಿ ಅದನ್ನು ಪುನರ್ಮುದ್ರಿಸಿತು.

ಕಾದಂಬರಿಯ ಹೆಸರೇ ಸೂಚಿಸುವಂತೆ, ಕಾದಂಬರಿಯ ವಸ್ತು ೧೯ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಬೆಂಗಾಳೀ ಭೂಹೀನ ರೈತರ ಬದುಕು. ಕೃತಿಯುದ್ಧಕ್ಕೂ ಬ್ರಿಟಿಷ್ ಮಾಲೀಕರು ಮತ್ತು ಸ್ಥಳೀಯ ಜಮೀಂದಾರರ ಬಗೆಬಗೆಯ ಶೋಷಣೆಯ ಚಿತ್ರಣವಿದೆಯಲ್ಲದೆ, ಆ ರೈತಾಪಿ ವರ್ಗದ ಪರಂಪರಾಗತ ನಂಬಿಕೆ-ಆಚರಣೆಗಳ ಅತ್ಯಂತ ನೈಜ ಹಾಗೂ ದೀರ್ಘ ವಿವರಗಳಿವೆ. ಈ ಕಾದಂಬರಿಯ ಮುಖ್ಯ ಕಥಾಂಶವನ್ನು ಹೀಗೆ ಸಂಗ್ರಹಿಸಬಹುದು.

ಬಂಗಾಳದ ಕಾಂಚನ್‌ಪುರ ಎಂಬ ಹಳ್ಳಿಯಲ್ಲಿ ‘ಅಗೂರಿ’ ಎಂಬ ‘ಕೆಳ’ ಜಾತಿಗೆ ಸೇರಿದ ಮಾಣಿಕ್ ಸಾಮಂತ ಎಂಬ ಭೂಹೀನ ರೈತನ ಕುಟುಂಬದ ಸುತ್ತಾ ರಚಿಸಲ್ಪಟ್ಟಿರುವ ಈ ಕಾದಂಬರಿ ಮಾಣಿಕ್ ಸಾಮಂತನಿಗೆ ಗೋವಿಂದ ಸಾಮಂತ ಎಂಬ ಮಗನು ಜನ್ಮಿಸುವ ಘಟನೆಯಿಂದ ಕಾದಂಬರಿ ಪ್ರಾರಂಭವಾಗುತ್ತದೆ. ಮಗನು ಬೆಳೆಯುತ್ತಿದ್ದಂತೆ ತಾನು ಬಡವನಾಗಿದ್ದರೂ ಮಗನಿಗೆ ಶಿಕ್ಷಣ ಕೊಡಿಸುವ ಉದ್ದೇಶದಿಂದ ತಂದೆ ಗೋವಿಂದನನ್ನು ಪಾಠಶಾಲೆಗೆ ಸೇರಿಸುತ್ತಾನೆ. ಆದರೆ, ದುರದೃಷ್ಟವಶಾತ್ ಮಾಣಿಕ್‌ನ ಸಹೋದರ ಹಾವು ಕಡಿದು ಅಕಾಲ ಮರಣಕ್ಕೆ ತುತ್ತಾಗುವುದರಿಂದ, ತಂದೆಗೆ ಸಹಾಯ ಮಾಡಲು ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟು ಗೋವಿಂದನು ಮನೆಗೆ ಬರುತ್ತಾನೆ; ಕೆಲ ವರ್ಷಗಳ ನಂತರ ಅವನಿಗೆ ಪಾರಂಪರಿಕ ರೀತಿಯಲ್ಲಿ ಮದುವೆಯಾಗುತ್ತದೆ.

ಅಂದಿನ ಕಾಲದಲ್ಲಿ ಗೇಣಿದಾರರ ಸ್ಥಿತಿ ದಾರುಣವಾಗಿತ್ತು. ಅದಕ್ಕೆ ಕಾರಣ ಅಂದಿನ ‘ಕುಂಪಣಿ ಸರಕಾರ’ವು ಹೊರಡಿಸಿದ್ದ ೧೭೯೯ ಮತ್ತು ೧೮೧೨ರ ಕಾನೂನುಗಳು. ಇವುಗಳು ಜಮೀಂದಾರರಿಗೆ ತಮ್ಮ ರೈತರ ಮೇಲೆ ಅಪಾರ ಅಧಿಕಾರವನ್ನು ಕೊಟ್ಟಿದ್ದುವು; ತಮ್ಮ ಮನಸ್ಸಿಗೆ ಬಂದಂತೆ ಅವರು ಗೇಣಿದಾರರನ್ನು ತಮ್ಮ ಭೂಮಿಯಿಂದ ಓಡಿಸಬಹುದಾಗಿತ್ತು; ಅವರ ಮೇಲೆ ಸುಳ್ಳು ಆಪಾದನೆ ಮಾಡಿ ಕಾರಾಗೃಹಕ್ಕೆ ತಳ್ಳಬಹುದಾಗಿತ್ತು. ಇಷ್ಟೇ ಅಲ್ಲದೆ, ತಮ್ಮ ಒಡೆಯರ ಮನೆಯಲ್ಲಿ ನಡೆಯುವ ಪೂಜೆ, ವಿವಾಹ, ಇತ್ಯಾದಿ ಎಲ್ಲಾ ಸಂದರ್ಭಗಳಲ್ಲಿಯೂ ಗೇಣಿದಾರರು ಹೆಚ್ಚಿನ ಕರವನ್ನು ಅವರಿಗೆ ಕೊಡಬೇಕಾಗಿತ್ತು. (ಇವನ್ನು ‘ಹಪ್ತಂ’ ಮತ್ತು ‘ಪಂಚಂ’ ಎಂದು ಕರೆಯುತ್ತಿದ್ದರು. ಈ ಕರಗಳನ್ನು ಮತ್ತು ವಿನಾಕಾರಣ ಮಾಡಲ್ಪಡುತ್ತಿದ್ದ ಗೇಣಿ ರದ್ದತಿಯನ್ನು ಅನೂರ್ಜಿತಗೊಳಿಸಿದ ೧೮೫೯ರ ಕಾನೂನನ್ನು ‘ರೈತಾಪಿ ವರ್ಗದ ಮ್ಯಾಗ್ನಾಕಾರ್ಟ’ ಎಂದು ಇತಿಹಾಸಕಾರರು ಕರೆಯುತ್ತಾರೆ.)

ಒಂದು ವರ್ಷ, ಕ್ಷಾಮದ ಕಾರಣದಿಂದ ಎಲ್ಲಾ ಬೆಳೆಯೂ ನಷ್ಟವಾದಾಗ, ‘ಹಪ್ತಂ’ ಮತ್ತು ‘ಪಂಚಂ’ ಕರಗಳನ್ನು ಕೊಡಲು ಗೋವಿಂದ ಸಾಮಂತ ನಿರಾಕರಿಸುತ್ತಾನೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅವನ ಮನೆಗೆ ಬೆಂಕಿ ಬೀಳುತ್ತದೆ ಮತ್ತು ಸುಳ್ಳು ಆಪಾದನೆಯ ಮೇಲೆ ಪೋಲೀಸರು ಬಂದು ಅವನ ಜಮೀನಿನಿಂದಲೂ ಅವನನ್ನು ಓಡಿಸುತ್ತಾರೆ. ಬದುಕುವುದಕ್ಕೆ ಬೇರೇನೂ ದಾರಿ ಕಾಣದೆ, ತನ್ನ ಹೆಂಡತಿ-ಮಕ್ಕಳೊಡನೆ ಗೋವಿಂದ ಸಾಮಂತ ನಗರಕ್ಕೆ ಬಂದು ಅಲ್ಲಿ ಕೂಲಿ ಕಾರ್ಯವನ್ನು ಕೈಗೊಳ್ಳುತ್ತಾನೆ ಮತ್ತು ಸ್ವಲ್ಪ ಕಾಲದಲ್ಲಿಯೇ ಮರಣವನ್ನಪುತ್ತಾನೆ.

ಈ ಕಾದಂಬರಿಯ ಒಂದು ಪ್ರಮುಖ ಆಯಾಮವೆಂದರೆ ಅದು ವಿವರವಾಗಿ ದಾಖಲಿಸುವ ಭಾರತೀಯರ ಪರಂಪರಾಗತ ನಂಬಿಕೆ-ಆಚರಣೆಗಳು – ಉದಾಹರಣೆಗೆ: ಮನೆಯಲ್ಲಿ ಸಾರಿಸಲು ಉಪಯೋಗಿಸುವ ಸಗಣಿ ಮತ್ತು ಗೋಮೂತ್ರ; ಮಗು ಹುಟ್ಟಿದ ಆರನೆಯ ದಿನ ವಿಧಾತನು ಯಾರಿಗೂ ಕಾಣದಂತೆ ರಾತ್ರಿ ಬಂದು ಮಗುವಿನ ಹಣೆಯಬರಹವನ್ನು ಬರೆಯುತ್ತಾನೆಂಬ ನಂಬಿಕೆಗನುಸಾರವಾಗಿ ಆಚರಿಸಲ್ಪಡುವ ‘ಷಷ್ಠೀ’ ವ್ರತ; ಏಳನೆಯ ತಿಂಗಳಿನಲ್ಲಾಗುವ ಅನ್ನಪ್ರಾಶನ ಸಮಾರಂಭ; ‘ಪುಂಚೋ’ ಎಂಬ ದೆವ್ವಗಳ ಪೀಡನೆಯಿಂದ ಪಾರಾಗಲು ಮಾಡುವ ಪೂಜೆ; ಜ್ಯೋತಿಷಿಗಳಿಂದ ಜಾತಕವನ್ನು ಬರೆಸಿ ಓದಿಸುವುದು; ಪ್ರತಿಯೊಂದಕ್ಕೂ ‘ಶುಭ’ ಲಗ್ನವನ್ನು ನೋಡುವ ಪದ್ಧತಿ; ಮದುವೆಯಲ್ಲಾಗುವ ಅಗಣಿತ ಸಂಪ್ರದಾಯಗಳು; ಯಾತ್ರಾಸ್ಥಳಗಳಿಗೆ ಪ್ರಯಾಣ ಮಾಡುವಾಗ ಯಾತ್ರಿಕರು ಠಕ್ಕರಿಂದ ಎದುರಿಸುವ ಅಪಾಯ-ತೊಂದರೆಗಳು; ಪ್ಲೇಗ್ ಸೇರಿದಂತೆ ಸಾಂಕ್ರಾಮಿಕ ರೋಗಗಳಿಂದ ಹಳ್ಳಿಗೆ ಹಳ್ಳಿಯೇ ನಾಶವಾಗುವುದು;- ಇತ್ಯಾದಿ ಅನೇಕಾನೇಕ ಖಚಿತ ವಿವರಗಳು ಕೃತಿಯಲ್ಲಿ ಬರುತ್ತವೆ. ಈ ನೆಲೆಯಲ್ಲಿಯೇ ಬರುವ ಸ್ತ್ರೀಯೊಬ್ಬಳು ‘ಸತಿ’ಯಾಗುವ ಘೋರ ಘಟನೆ ಅತ್ಯಂತ ಕರುಣಾಪೂರಿತ ಶೈಲಿಯಲ್ಲಿ ನಿರೂಪಿಸಲ್ಪಟ್ಟಿದೆ: “ಅವಳು ತಪ್ಪಿಸಿಕೊಳ್ಳಲು ವಿಫಲ ಪ್ರಯತ್ನಗಳನ್ನು ಮಾಡುತ್ತಾಳೆ. ಇಲ್ಲಿಯವರೆಗೆ ಯಾವುದೋ ಮೂಢ ನಂಬಿಕೆಯ ಮತ್ತಿನಲ್ಲಿದ್ದ ಆ ಸ್ತ್ರೀ ಈಗ ಮಾನವ ಸಹಜ ಭೀತಿಗೆ ಒಳಗಾಗುತ್ತಾಳೆ… ಆದರೆ ಎಲ್ಲವೂ ವ್ಯರ್ಥ. ಕೊನೆಗೆ ಮೂಢ ನಂಬಿಕೆ ಮತ್ತೊಂದು ಬಲಿಯನ್ನು ತೆಗೆದುಕೊಂಡಿತು… “(ಪು.೧೨೧-೧೨೨). ಇಂತಹ ಸಾಚಾ ಹಾಗೂ ದಟ್ಟ ವಿವರಗಳಿಂದ ತುಂಬಿರುವ ಈ ಕಾದಂಬರಿಯನ್ನು ಒಂದು ಕಾಲಘಟ್ಟದ ವಿಶ್ವಾಸಾರ್ಹ ‘ಸಾಮಾಜಿಕ-ಸಾಂಸ್ಕೃತಿಕ ಚರಿತ್ರೆ’ಯೆಂದೇ ನೋಡಬಹುದು. ೧೯ನೆಯ ಶತಮಾನದ ಕೊನೆಯ ಭಾಗದಲ್ಲಿ ಸೊರಗಿ ಹೋಗಿದ್ದ ಗ್ರಾಮೀಣ ಭಾರತದ ನರಳುವಿಕೆ ಕೃತಿಯುದ್ದಕ್ಕೂ ಅನುರಣಿಸುತ್ತದೆ.

ಇಂದಿಗೂ ಪ್ರಸ್ತುತವಾಗಿರುವ ಈ ಕಾದಂಬರಿಯ ಮತ್ತೊಂದು ಪ್ರಮುಖ ಅಂಶವೆಂದರೆ ಅದು ಬಯಲು ಮಾಡುವ ರೈತಾಪಿ ವರ್ಗದ ಶೋಷಣೆಗೆ ಕಾರಣ-ಆಳುವ ಅಧಿಕಾರಿ ವರ್ಗ, ಭೂಮಾಲೀಕ ವರ್ಗ ಮತ್ತು ಮಧ್ಯವರ್ತಿ- ವ್ಯಾಪಾರಿ ವರ್ಗ ಈ ಮೂರೂ ವರ್ಗಗಳು ಒಟ್ಟಾಗಿ ರೈತರ ಶೋಷಣೆಗೆ ಕೈಜೋಡಿಸುವುದು. ಈ ಕಾಲಘಟ್ಟದಲ್ಲಿ ಶೋಷಣೆಯ ಕೇಂದ್ರ ಇಂಗ್ಲೆಂಡ್‌ನಲ್ಲಿ ಬಹು ಬೇಡಿಕೆಯಲ್ಲಿದ್ದ ‘ನೀಲಿ ಬೆಳೆ’ (Indigo Cultivation). ಕಾದಂಬರಿಯಲ್ಲಿ ಬರುವ ಬ್ರಿಟಿಷ್‌ ಪ್ರಜೆ ಮರೆ ಈ ಬಗೆಯ ಮಧ್ಯವರ್ತಿ; ಇವನು ಮೊದಲು ಬಲಾತ್ಕಾರದಿಂದ (ಮತ್ತು ಭೂಮಾಲೀಕರ ಮೌನ ಸಮ್ಮತಿಯೊಡನೆ) ರೈತರಿಗೆ ಮುಂಗಡ ಹಣಕೊಟ್ಟು ಅವರು ಆಹಾರಧ್ಯಾನಗಳಿಗೆ ಬದಲು ನೀಲಿ ಬೆಳೆಯನ್ನು ಬೆಳೆಯುವಂತೆ ಬಲಾತ್ಕರಿಸುತ್ತಾನೆ. ಬೇರೆ ದಾರಿಯಿಲ್ಲದೆ ರೈತರು ನೀಲಿ ಬೆಳೆದನಂತರ ಅವನೊಬ್ಬನೇ ಕೊಳ್ಳುವವನಾದ್ದರಿಂದ ಅವನು ನಿಗದಿ ಪಡಿಸಿದ ಬೆಲೆಗೆ ರೈತರು ಆ ಬೆಳೆಯನ್ನು ಮಾರಬೇಕು. ಇಂತಹ ಚಕ್ರವ್ಯೂಹದಲ್ಲಿ ಒಂದು ಸಲ ಸಿಕ್ಕಿಹಾಕಿಕೊಂಡ ರೈತರಿಗೆ ಎಂದಿಗೂ ಅದರಿಂದ ಬಿಡುಗಡೆ ಸಾಧ್ಯವೇ ಇರಲಿಲ್ಲ ಎಂಬ ಕ್ರೂರ ಸತ್ಯವನ್ನು ಕಾದಂಬರಿ ಹೃದಯಸ್ಪರ್ಶಿಯಾಗಿ ಚಿತ್ರಿಸುತ್ತದೆ. ಒಂದು ಸಂದರ್ಭದಲ್ಲಿ ಗೋವಿಂದ ಸಾಮಂತನಂತಹ ರೈತರು “ನಾವು ನೀಲಿ ಬೆಳೆದರೆ ತಿನ್ನುವುದೇನನ್ನು?” ಎಂದು ಅಸಹಾಯಕರಾಗಿ ಪ್ರಶ್ನಿಸುತ್ತಾರೆ. ಆದರೆ ಅವರ ಕೂಗನ್ನು ಕೇಳುವವರಾರು? (ಇಂದು ನೀಲಿ ಬೆಳೆಯ ಜಾಗದಲ್ಲಿ ವನಿಲ್ಲಾ ಅಥವಾ ಶುಂಠಿ ಅಥವಾ ತಂಬಾಕು ಇರಬಹುದು; ಮರೆಯಂತೆ ಬ್ರಿಟಿಷ್ ಮಧ್ಯವರ್ತಿಗಳ ಬದಲಿಗೆ ಬ್ಯಾಂಕುಗಳಿರಬಹುದು; ಆದರೆ, ಅಂದಿನಂತೆ ಇಂದೂ ಸಾಲದ ಸುಳಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಾಲಿನಲ್ಲಿ ಗೋವಿಂದ ಸಾಮಂತ ಮೊದಲಿಗನಾಗುತ್ತಾನೆ.)

ಖಚಿತ ವಿವರಗಳಿಂದ ಒಂದು ಕಾಲಘಟ್ಟದ ಸಾಮಾಜಿಕ-ಸಾಂಸ್ಕೃತಿಕ ಚರಿತ್ರೆಯನ್ನು ಅನ್ಯಾದೃಶವಾಗಿ ಕಟ್ಟಿಕೊಡುವ ಈ ಕಾದಂಬರಿ ಅನೇಕ ದಶಕಗಳ ನಂತರ ಭಾರತೀಯ ಭಾಷೆಗಳಲ್ಲಿ ಹೊರಬಂದ ಪ್ರೇಮ್‌ಚಂದರ ಗೋದಾನ್, ಶಿವರಾಮ ಕಾರಂತರ ಚೋಮನ ದುಡಿ, ತಗಳಿಯವರ ತೋಟಿಯುಡೆ ಮಗನ್, ಇತ್ಯಾದಿ ಕಾದಂಬರಿಗಳ ಮೂಲ ಮಾದರಿಯಂತೆ ಕಾಣುತ್ತದೆ.[2]

ಭಾರತೀಯ ಇಂಗ್ಲೀಷ್ ಸಾಹಿತ್ಯದ ಇತಿಹಾಸಕಾರರು ಮಂಡಿಸುವಂತೆ, ಡೇ ಅವರ ಗೋವಿಂದ ಸಾಮಂತ ಭಾರತೀಯರಿಂದ ಬರೆಯಲ್ಪಟ್ಟ ಎರಡನೆಯ ಇಂಗ್ಲೀಷ್ ಕಾದಂಬರಿ. ಮೊದಲನೆಯ ಇಂಗ್ಲೀಷ್ ಕಾದಂಬರಿಯೆಂದರೆ ಬಂಕಿಂಚಂದ್ರ ಚಟರ್ಜಿಯವರ ರಾಜ್ಮೋಹನ್ಸ್ವೈಫ್ (೧೮೬೪). ಇದೇ ಕಾಲಘಟ್ಟದಲ್ಲಿ ಬಂದ ಇತರ ಭಾರತೀಯ ಇಂಗ್ಲೀಷ್ ಕಾದಂಬರಿಗಳೆಂದರೆ: ಕೆ. ಕೆ. ಸಿನ್ಹಾ, ಸ್ಟಾರ್ ಆಫ್ ಸಿಕ್ರಿ: ನಾವೆಲ್ ಬೈ ಹಿಂದೂ (೧೮೯೩), ಶೇವಂತಿಬಾಯಿ ನಿಕಾಂಬೆ, ರತನ್ ಬಾಯಿ: ಸ್ಕೆಚ್ ಆಫ್ ಬಾಂಬೆ ಹೈಕಾಸ್ಟ್ ಹಿಂದೂ ಯಂಗ್ ವೈಫ್ (೧೮೯೫), ಟಿ. ರಾಮಕೃಷ್ಣ ಪಿಳ್ಳೆ, ಪದ್ಮಿನಿ: ಅನ್ ಇಂಡಿಯನ್ ರೊಮಾನ್ಸ್ (೧೯೦೩), ತಾಜ್, ಜ಼ೋರಾ: ಟೇಲ್ ಆಫ್ ಜ಼ೆನಾನ್ ಲೈಫ್ (೧೯೧೨), ಇತ್ಯಾದಿ.[3]

ಇದೇ ಕಾಲಘಟ್ಟದಲ್ಲಿ, ಭಾರತೀಯ ಭಾಷೆಗಳಲ್ಲಿಯೂ ಕಾದಂಬರಿ ಪ್ರಭೇದ ಜನ್ಮ ತಾಳಿತು. ಪ್ರಾತಿನಿಧಿಕವಾಗಿ, ಕನ್ನಡ ಕಾದಂಬರಿಗಳನ್ನು ಪರಿಗಣಿಸಿದರೆ, ಮೊದಲ ಘಟ್ಟದ ಕೆಲವು ಕನ್ನಡ ಕಾದಂಬರಿಗಳು ಹೀಗಿವೆ: ಗುಬ್ಬಿ ಮುರುಗಾರಾಧ್ಯ, ಶೃಂಗಾರ ಚಾತುರ್ಯೋಲ್ಲಾಸಿನಿ (೧೮೯೬), ಗುಲ್ವಾಡಿ ವೆಂಕಟರಾವ್, ಇಂದಿರಾಬಾಯಿ (೧೮೯೯), ವ್ಯಾಸರಾವ್ ರೊದ್ದ, ಚಂದ್ರಮುಖಿಯ ಘಾತವು (೧೯೦೦), ಬೋಳಾರ ಬಾಬುರಾವ್, ವಾಗ್ದೇವಿ (೧೯೦೫), ಕೆರೂರ್ ವಾಸುದೇವಾಚಾರ್, ಇಂದಿರಾ (೧೯೦೮), ಇತ್ಯಾದಿ.[4]

ಭಾರತೀಯರಿಂದ ಬರೆಯಲ್ಪಟ್ಟ ಮೊದಲ ಘಟ್ಟದ ಇಂಗ್ಲೀಷ್ ಕಾದಂಬರಿಗಳು ಮತ್ತು ಭಾರತೀಯ ಭಾಷೆಗಳಲ್ಲಿ ಬಂದ ಮೊದಲ ಘಟ್ಟದ ಕಾದಂಬರಿಗಳು ಇವುಗಳನ್ನು ತೌಲನಿಕವಾಗಿ ನೋಡಿದಾಗ, ಮೊಟ್ಟ ಮೊದಲಿಗೆ ನಮಗೆ ಎದ್ದು ಕಾಣುವ ಸಮಾನ ಅಂಶಗಳು, ಸಮಾನ ಕಾಳಜಿಗಳು ಮತ್ತು ಗೃಹೀತಗಳು ನಮ್ಮನ್ನು ಆಶ್ಚರ್ಯಗೊಳಿಸುತ್ತವೆ; ಭಾಷೆಧರ್ಮಗಳನ್ನು ಮೀರಿದ ಭಾರತೀಯ ಸಂವೇದನೆ ಎಂಬುದೊಂದಿದೆ ಎಂಬ ಸಾಂಸ್ಕೃತಿಕ ಸತ್ಯವನ್ನು ನಮಗೆ ದರ್ಶಿಸುತ್ತವೆ. ಈ ಕಾದಂಬರಿಗಳು ಒಳಗೊಂಡಿರುವ ಕೆಲವು ಪ್ರಮುಖ ಸಮಾನ ಕಾಳಜಿಗಳನ್ನು ಹಾಗೂ ಗೃಹೀತಗಳನ್ನು ಹೀಗೆ ಗುರುತಿಸಬಹುದು.

ಇಂಗ್ಲೀಷ್ ಭಾಷೆಯಲ್ಲಾಗಲಿ ಇತರ ಭಾರತೀಯ ಭಾಷೆಗಳಲ್ಲಾಗಲಿ, ವಸಾಹತುಶಾಹಿಯ ಪ್ರಭಾವದಿಂದ ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಜನ್ಮತಾಳಿದ ಕಾದಂಬರಿ ಪ್ರಭೇದ ಪ್ರಾರಂಭದಿಂದಲೂ ನಾನಾ ಬಗೆಯ ದ್ವಂದ್ವಗಳಿಂದಲೇ ರೂಪಿಸಲ್ಪಟ್ಟಿತು; ಮತ್ತು ಈ ದ್ವಂದ್ವ ಕಾದಂಬರಿಗಳ ವೈಚಾರಿಕ ನೆಲೆಯಲ್ಲಿ ಮಾತ್ರವಲ್ಲದೆ ಅವುಗಳ ಆಕೃತಿಯಲ್ಲಿಯೂ ಕಂಡುಬರುತ್ತಿತ್ತು. ಈ ಬಗೆಯ ಭಿನ್ನ ಭಿನ್ನ ಸ್ವರೂಪದ ಕೇಂದ್ರದಲ್ಲಿ ಭಾರತೀಯರು ಎದುರಿಸಬೇಕಾಗಿದ್ದ ‘ಇಬ್ಬಗೆಯ ಯಜಮಾನ್ಯ’ವಿತ್ತು: ಇನ್ನೂರು ವರ್ಷಗಳ ಇತಿಹಾಸವಿದ್ದ ಬ್ರಿಟಿಷ್ (ರಾಜಕೀಯ – ಸಾಂಸ್ಕೃತಿಕ) ಯಾಜಮಾನ್ಯ ಮತ್ತು ಎರಡು ಸಾವಿರವರ್ಷಗಳ ಇತಿಹಾಸವಿದ್ದ ಜಾತಿ – ವರ್ಗ – ಜನಾಂಗಗಳನ್ನಾಧರಿಸಿದ ಭಾರತೀಯ ಸಾಮಾಜಿಕ ವ್ಯವಸ್ಥೆಯ ಯಾಜಮಾನ್ಯ.

ಪರಿಣಾಮತಃ, ಅಂದು (೧೯ನೆಯ ಶತಮಾನದಲ್ಲಿ) ಭಾರತೀಯ ಲೇಖಕರ-ಚಿಂತಕರ ಎದುರಿದ್ದುದು ‘ಅಹುದು/ಅಲ್ಲ’ ಎಂಬಂತಹ ನೇರ ಪ್ರತಿಕ್ರಿಯೆ ಸಾಧ್ಯವಿದ್ದ ಸಮಸ್ಯೆಗಳಲ್ಲ; ಬದಲಾಗಿ, ಪ್ರತಿಯೊಂದು ನೆಲೆಯಲ್ಲಿಯೂ ಅವರು ‘ಅಹುದು ಮತ್ತು ಅಲ್ಲ’ ಎಂಬಂತಹ ದ್ವಂದ್ವಾತ್ಮಕ ಪ್ರತಿಕ್ರಿಯೆಯನ್ನು ಮಾತ್ರ ನೀಡಬಹುದಾದ ಪರಿಸ್ಥಿತಿ ಒಂದು ಕಡೆ (ತನ್ನದೇ ಆದ ರಾಜಕೀಯ ಕಾರಣಕ್ಕಾಗಿ) ವಸಾಹತುಶಾಹಿಯು ಭಾರತೀಯರ ಮುಂದಿಡುತ್ತಿದ್ದ ಪ್ರಜಾಪ್ರಭುತ್ವ-ಸರ್ವ ಸಮಾನ ನ್ಯಾಯಾಂಗ ವ್ಯವಸ್ಥೆ ಇತ್ಯಾದಿಗಳು ರೂಪಿಸಿದ ಮಾದರಿ ಮತ್ತು ‘ಇಂಗ್ಲೀಷ್ ಶಿಕ್ಷಣ = ಆಧುನಿಕತೆ = ಪ್ರಗತಿ’ ಎಂಬ ವೈಚಾರಿಕತೆ ಭಾರತೀಯ ಸಮಾಜದ ಸ್ತ್ರೀಯರನ್ನು ಮತ್ತು ದುರ್ಬಲ ವರ್ಗಗಳನ್ನು ಕುರಿತಂತೆ ಸತ್ಯವಾಗಿತ್ತು. ಈ ಕಾರಣದಿಂದಾಗಿಯೇ ಧಾರ್ಮಿಕ-ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ಭಾರತೀಯ ಸಮಾಜವನ್ನು ಸುಧಾರಿಸುವ, ‘ಆಧುನಿಕ’ವಾಗಿಸುವ ಪ್ರಯತ್ನಗಳು ಭಾರತದುದ್ದಕ್ಕೂ ವ್ಯಾಪಕವಾಗಿ ನಡೆದುವು. ಆದರೆ, ಇನ್ನೊಂದೆಡೆ, ಸಾವಿರಾರು ವರ್ಷಗಳ ಸಾಂಸ್ಕೃತಿಕ-ಸಾಹಿತ್ಯಕ ಇತಿಹಾಸವಿದ್ದ ಭಾರತ ವಸಾಹತುಶಾಹಿಯ ಸಾಂಸ್ಕೃತಿಕ ಯಾಜಮಾನ್ಯವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದೂ ಅಸಾಧ್ಯವಾಗಿತ್ತು; ಹಾಗೇ ಒಪ್ಪಿಕೊಳ್ಳುವುದು ಸಾಂಸ್ಕೃತಿಕ ಆತ್ಮಹತ್ಯೆಗೆ ಸಮಾನವಾಗುತ್ತಿತ್ತು. ಆದ್ದರಿಂದ, ಒಂದು ಕಡೆ ಆಧುನಿಕತೆಯ ವಸಾಹತುಶಾಹಿ ವ್ಯಾಖ್ಯಾನವನ್ನು ಒಪ್ಪಿಕೊಂಡು ಭಾರತೀಯ ಸಮಾಜವನ್ನು ಆಮೂಲಾಗ್ರ ಸುಧಾರಣೆಗೊಳಪಡಿಸುವುದು, ಮತ್ತೊಂದು ಕಡೆ ಅವೇ ಭಾರತೀಯ ಧಾರ್ಮಿಕ-ಸಾಮಾಜಿಕ ಆಚರಣೆಗಳನ್ನು ಸಮರ್ಥಿಸುತ್ತಾ ತನ್ನ ಸಾಂಸ್ಕೃತಿಕ ಅಸ್ಮಿತೆಯನ್ನು ಕಾಪಾಡಿಕೊಳ್ಳುವುದು-ಈ ಬಗೆಯ ಸ್ವವಿರೋಧಾತ್ಮಕ ಕ್ರಿಯೆ ಹಾಗೂ ವರ್ತನೆ ಅಂದಿನ (ಪ್ರಾಯಃ ಇಂದಿನ ಕೂಡಾ) ಭಾರತೀಯರಿಗೆ ಅನಿವಾರ್ಯವಾಗಿತ್ತು. ತನ್ನ ಅನನ್ಯತೆಯನ್ನು ಉಳಿಸಿಕೊಳ್ಳುವ ಅಗಾಧ ಒತ್ತಡ ಮತ್ತು ಪರಂಪರಾಗತ ಸಮಾಜವನ್ನು ಆಧುನೀಕರಣಗೊಳಿಸುವ ಅಪಾರ ಅಗತ್ಯ ಈ ಬಗೆಯ ರೋಚಕ ಹಾಗೂ ಐತಿಹಾಸಿಕ ಕರ್ಷಣದಿಂದಲೇ (ಇಂಗ್ಲೀಷ್ ಮತ್ತು ಇತರ ಭಾಷೆಗಳಲ್ಲಿ) ಭಾರತೀಯ ಕಾದಂಬರಿಯ ಉಗಮವಾಯಿತು. ಈ ಸಂದರ್ಭದಲ್ಲಿ ರೋನಲ್ಡ್ ಪಾಲ್‌ಸನ್ ಎಂಬ ವಿಮರ್ಶಕನು ಹೇಳುವ ಮಾತು ಅರ್ಥಪೂರ್ಣವಾಗಿದೆ : “ನೈತಿಕ ಸಮರ್ಥನೆಯ ಅವಶ್ಯಕತೆ ಇನ್ನೂ ಇರುವ, ಮತ್ತು ಉದ್ದೇಶರಹಿತ ದೈನಂದಿನ ಬದುಕಿನ ಚಿತ್ರಣವನ್ನು ಕ್ಷುದ್ರವೆಂದು ಕಾಣುವ ಯುಗದಲ್ಲಿಯೇ ಕಾದಂಬರಿಯ ಉಗಮವಾಯಿತು.”[5]

ಸಹಜವಾಗಿಯೇ ಇಂತಹ ಪರಿಸ್ಥಿತಿಯಲ್ಲಿ ಜನ್ಮಿಸಿದ ಭಾರತೀಯ ಕಾದಂಬರಿ ಅನೇಕ ಬಗೆಯ ಸಂಕೀರ್ಣ ದ್ವಂದ್ವಗಳನ್ನು ಹಾಗೂ ಸ್ವವಿರೋಧಗಳನ್ನು ಎಲ್ಲಾ ನೆಲೆಗಳಲ್ಲಿಯೂ ದರ್ಶಿಸುತ್ತದೆ. ಅವುಗಳಲ್ಲಿ ಮುಖ್ಯವಾದವುಗಳನ್ನು ಹೀಗೆ ಗುರುತಿಸಬಹುದು:

() ಆಕೃತಿಯ ನೆಲೆಯಲ್ಲಿ : ಹಿಂದೂ ಮರ್ಯಾದೆಇಂಗ್ಲೀಷ್ ಪದ್ಧತಿ:

ಅಂದು, ೧೯ನೆಯ ಶತಮಾನದ ಉತ್ತರಾರ್ಧದಲ್ಲಿ, ಶಿಕ್ಷಿತ ಭಾರತೀಯರ ಮುಂದಿದ್ದ ಬ್ರಿಟಿಷ್ ಮಾದರಿಗಳೆಂದರೆ ಡೀಫ಼ೋ, ಫೀಲ್ಡಿಂಗ್‌, ಮುಂತಾದವರಿಂದ ರಚಿಸಲ್ಪಟ್ಟ ೧೮ನೆಯ ಶತಮಾನದ ಸಾಮಾಜಿಕ ಕಾದಂಬರಿಗಳು ಮತ್ತು ೧೯ನೆಯ ಶತಮಾನದ ಆದಿಭಾಗದಲ್ಲಿ ರಚಿಸಲ್ಪಟ್ಟ ವಾಲ್ಟರ್ ಸ್ಕಾಟ್‌ನ ಐತಿಹಾಸಿಕ ಕಾದಂಬರಿಗಳು. ಈ ಮಾದರಿಗಳಲ್ಲಿ, ಕೆಲವು ಭಾರತೀಯ ಲೇಖಕರನ್ನು ಸ್ಕಾಟ್ ಪ್ರಭಾವಿಸಿದರೆ ಮತ್ತೆ ಕೆಲವರನ್ನು ಡೀಫ಼ೋ-ಫೀಲ್ಡಿಂಗ್ ಮುಂತಾದವರು. ಇವರಲ್ಲಿ ಬಂಕಿಂಚಂದ್ರರು ಸ್ಕಾಟನನ್ನು ಮಾದರಿಯಾಗಿ ಒಪ್ಪಿಕೊಂಡರೆ ಡೇ ಫೀಲ್ಡಿಂಗ್‌ನನ್ನು ಅನುಸರಿಸುತ್ತಾರೆ.

ಫೀಲ್ಡಿಂಗ್‌ನ ಎರಡೂ ಕಾದಂಬರಿಗಳು (ಜೋಸೆಫ್ ಆಂಡ್ರ್ಯೂಜ಼್ ಮತ್ತು ಟಾಮ್ಜೋನ್ಸ್) ಸಮಕಾಲೀನ ಸಮಾಜದ ‘ವಾಸ್ತವ’ ಚಿತ್ರಣಕ್ಕೇ ಅಲ್ಲದೆ ಪ್ರಖರ ಸ್ವಾಭಿಮುಖತೆಗೂ ಪ್ರಸಿದ್ಧವಾಗಿವೆ. ತನ್ನ ಎರಡೂ ಕಾದಂಬರಿಗಳಲ್ಲಿ, ಪ್ರತಿ ಭಾಗದ ಮೊದಲ ಅಧ್ಯಾಯದಲ್ಲಿ ಫೀಲ್ಡಿಂಗ್‌ ತಾನು ‘ಹೊಸದಾಗಿ’ ರೂಪಿಸುತ್ತಿರುವ ಕಾದಂಬರಿ ಪ್ರಭೇದದ ಬಗ್ಗೆ, ಅದರ ಸ್ವರೂಪ ಹಾಗೂ ಉದ್ದೇಶದ ಬಗ್ಗೆ, ದೀರ್ಘವಾಗಿ ಚರ್ಚಿಸುತ್ತಾನೆ. ಅವನ ಪ್ರಸಿದ್ಧ ತೀರ್ಮಾನವೆಂದರೆ ಆಧುನಿಕ ಯುಗದ ಕಾದಂಬರಿ (ಅಥವಾ ‘ನಾವೆಲ್’) ಪ್ರಾಚೀನ ಮಹಾಕಾವ್ಯದ (ಅಥವಾ ‘ಎಪಿಕ್‌’ನ) ಮತ್ತೊಂದು ರೂಪ; ಕಾದಂಬರಿಯನ್ನು ಅವನು ‘ಕಾಮಿಕ್ ಎಪಿಕ್ ಪೊಯಮ್ ಇನ್ ಪ್ರೊಸ್’ ಎಂದು ಕರೆಯುತ್ತಾನೆ.

ಇದೇ ಬಗೆಯ ಸ್ವಾಭಿಮುಖತೆಯನ್ನು, ತಾವು ರಚಿಸುತ್ತಿರುವುದು ಒಂದು ನೂತನ ಸಾಹಿತ್ಯ ಪ್ರಭೇದ ಎಂಬ ಪ್ರಜ್ಞೆಯನ್ನು, ಡೇ ಮತ್ತು ಇತರ ಭಾರತೀಯ ಕಾದಂಬರಿಕಾರರೂ ದರ್ಶಿಸುತ್ತಾರೆ. ಗೋವಿಂದ ಸಾಮಂತ ಕಾದಂಬರಿಯ ‘ಭಿಲ್ ಆಫ್ ಫ಼ೇರ್’ (ಈ ಹೆಸರೂ ಫೀಲ್ಡಿಂಗ್‌ನದು) ಎಂಬ ಅಧ್ಯಾಯದಲ್ಲಿ ಡೇ ದೀರ್ಘವಾಗಿ ಓದುಗರನ್ನುದ್ದೇಶಿಸಿ ಹೀಗೆ ಹೇಳುತ್ತಾರೆ:

“ಈ ಕಿರು ಗ್ರಂಥದಲ್ಲಿ ನೀವು ಯಾವುದೇ ಬಗೆಯ ಅದ್ಭುತ ಅಥವಾ ರಮ್ಯ ಸಂಗತಿಗಳನ್ನು ನಿರೀಕ್ಷಿಸುವಂತಿಲ್ಲ. (ನನ್ನ ಪೂರ್ವ ಸೂರಿಗಳು) ಹತ್ತು ತಲೆ-ಇಪ್ಪತ್ತು ಕೈಗಳ ರಾಜರು, ಸೂರ್ಯನನ್ನು ತನ್ನ ತೋಳಡಿಯಲ್ಲಿ ಬಂಧಿಸಬಲ್ಲ ವಾನರ, ಪರ್ವತವನ್ನೇ ಕಡೆಗೋಲು ಮಾಡಿಕೊಂಡು ಒಂದು ವಿಶ್ವಾತ್ಮಕ ಸಮುದ್ರವನ್ನು ಮಥಿಸುವ ದಾನವರು, ಮನುಷ್ಯನ ಮುಖ ಮತ್ತು ಮೀನಿನ ದೇಹ ಅಥವಾ ಆನೆಯ ತಲೆ ಮತ್ತು ಮಾನವ ದೇಹ ಇವುಗಳನ್ನುಳ್ಳ ಮುನಿಗಳು, ಇಡೀ ಸಾಗರದ ನೀರನ್ನೆಲ್ಲಾ ಕುಡಿಯಬಲ್ಲವರು – ಮುಂತಾದವರನ್ನು ಚಿತ್ರಿಸಿದ್ದಾರೆ” (ಪು.೨).

ಆದರೆ ತನ್ನದು ಆ ಬಗೆಯ ಚಿತ್ರಣವಲ್ಲ ಎಂದು ವಾದಿಸುತ್ತಾ, ಕೊನೆಗೆ ತನ್ನದು “ಸರಳ ಹಾಗೂ ಅನಲಂಕೃತ” ಕಥೆಯೆಂದು ಮತ್ತು ಓದುಗರು ಇದರಲ್ಲಿ ಕೇವಲ “ಈ ಬಂಗಾಳ ಪ್ರಾಂತ್ಯದಲ್ಲಿ ವಾಸಿಸುವ ಸಾಮಾನ್ಯ ರೈತರನ್ನು” ಮಾತ್ರ ನೋಡಬಹುದೆಂದು ಹೇಳುತ್ತಾನೆ. ಅರ್ಥಾತ್‌, ‘ರೊಮಾನ್ಸ್’ ಎಂದು ಕರೆಯಲ್ಪಡುತ್ತಿದ್ದ ರಮ್ಯ-ಸಾಹಸ ಕಥೆಗಳನ್ನು ತಿರಸ್ಕರಿಸಿ, ವಾಸ್ತವವಾದಿ ಕಥನವನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳುತ್ತಾನೆ.

ಇದೇ ಬಗೆಯ ಸ್ವಾಭಿಮುಖತೆಯನ್ನು, ಪ್ರಜ್ಞಾಪೂರ್ವಕ ಆಯ್ಕೆಯನ್ನು, ನಾವು ಅಂದಿನ ಇತರ ಲೇಖಕರಲ್ಲಿಯೂ ಕಾಣುತ್ತೇವೆ. ಪ್ರಸಿದ್ಧ ಅನುವಾದಕರಾದ ಬಿ. ವೆಂಕಟಾಚಾರ್ಯರು ಬಂಕಿಮರ ದುರ್ಗೇಶನಂದಿನಿಯ ಕನ್ನಡ ಅನುವಾದದ ಪೀಠಿಕೆಯಲ್ಲಿ ಹೀಗೆ ಹೇಳುತ್ತಾರೆ:

“A novel in the sense in which it is understood in English is not familiar to the kanarese-speaking public. I was therefore induced to undertake the translation of the present work, which is a novel by the well-known Bengali novelist of the day – Babu Bankimchandra Chaterjee.” (ಮೂಲದಲ್ಲಿಯೇ ಇಂಗ್ಲೀಷಿನಲ್ಲಿರುವ ಈ ವಾಕ್ಯಗಳ ಅನುವಾದ ಹೀಗಿದೆ: ‘ಇಂಗ್ಲೀಷ್ ಭಾಷೆಯಲ್ಲಿ ಪ್ರಚಲಿತವಿರುವ ‘ನಾವೆಲ್’ ಎಂಬ ಪ್ರಭೇದ ಕನ್ನಡ ಭಾಷಿಕರಿಗೆ ಅಪರಿಚಿತವಾದುದು. ಆದುದರಿಂದ, ಇಂದಿನ ಕಾಲದಲ್ಲಿ ಪ್ರಸಿದ್ಧ ಬಂಗಾಳಿ ಕಾದಂಬರಿಕಾರರಾದ ಬಾಬು ಬಂಕಿಂಚಂದ್ರ ಚಟರ್ಜಿಯವರ ಈ ನಾವೆಲ್‌ಅನ್ನು ಕನ್ನಡಕ್ಕೆ ಭಾಷಾಂತರಿಸಲು ಉದ್ದೇಶಿಸಿದ್ದೇನೆ.’)[6]

ಗುಬ್ಬಿ ಮುರುಗಾರಾಧ್ಯರು ಇನ್ನೂ ಮುಂದೆ ಹೋಗಿ, ತಮ್ಮ ಕೃತಿಯ ಸ್ವರೂಪವನ್ನು ಹೀಗೆ ವಿವರಿಸುತ್ತಾರೆ:

“ಇಂಗ್ಲೀಷಿನಲ್ಲಿರುವ ಯಾವುದಾದರೂ ಒಂದು ‘ನಾವೆಲ್‌’ ಅನ್ನು ಕನ್ನಡದಲ್ಲಿ ಭಾಷಾಂತರ ಮಾಡಿ ಬರೆಯಬೇಕೆಂಬ ಆಲೋಚನೆಯು ನನ್ನ ಮನಸ್ಸಿನಲ್ಲಿ ಮೊದಲು ಜನಿಸಿತು. ಆದರೆ, ಅಂತಹ ಒಂದೆರಡು ಇಂಗ್ಲೀಷ್ ಕಾವ್ಯಗಳನ್ನು ಚೆನ್ನಾಗಿ ವಿಚಾರ ಮಾಡುತ್ತಾ ನೋಡುವಲ್ಲಿ, ಕೆಲವು ವಿಷಯಗಳು ನಮ್ಮ ಹಿಂದೂ ಮರ್ಯಾದೆಗಳಿಗನುಸಾರವಾಗಿ ಕಂಡು ಬರಲಿಲ್ಲವಾದುದರಿಂದ ಆ ಮಾರ್ಗವನ್ನು ಬಿಡಲೇ ಬೇಕಾಯಿತು. ನಂತರ, ನಮ್ಮಲ್ಲಿಯೇ ಪುರಾಣ ಪ್ರಸಿದ್ಧವಾಗಿ ಪದ್ಯರೂಪವಾಗಿರುವ ಯಾವುದಾದರೊಂದು ಇತಿಹಾಸವನ್ನು ಗದ್ಯರೂಪವಾಗಿ ಮಾಡಬೇಕೆಂದು ಆಲೋಚಿಸುವಲ್ಲಿ ಇಂಗ್ಲೀಷ್ ‘ನಾವೆಲ್’ಗಳ ಮರ್ಯಾದೆಯನ್ನು ಬಿಡಬೇಕಾಗಿ ಬಂದುದರಿಂದ ಅದೂ ನನ್ನ ಮನಸ್ಸಿಗೆ ಅಭಿರುಚಿಸಲಿಲ್ಲ. ಆದಕಾರಣ, ವಿಷಯದಲ್ಲಿ ಹಿಂದೂ ಮರ್ಯಾದೆಯನ್ನೇ ಇಟ್ಟುಕೊಂಡು, ಇಂಗ್ಲೀಷ್ ‘ನಾವೆಲ್’ ಪದ್ಧತಿಯನ್ನೇ ಅನುಸರಿಸಿ ಬರೆಯಲು ಅನುಕೂಲವಾಗುವಂತೆ, ಹೊಸದಾಗಿ ಒಂದು ಕಥೆಯನ್ನು ಕಲ್ಪನೆ ಮಾಡಿಕೊಂಡೆನು” (‘ಲೇಖಕರ ವಿಜ್ಞಾಪನೆ,’ ೧೮೯೬). ‘ಹಿಂದೂ ಮರ್ಯಾದೆ ಮತ್ತು ಇಂಗ್ಲೀಷ್ ಪದ್ಧತಿ’ – ಈ ಸೂತ್ರವನ್ನು ಸರಿಸುಮಾರು ಅಂದಿನ ಎಲ್ಲಾ ಲೇಖಕರೂ ಒಪ್ಪಿಕೊಂಡಂತೆ ಕಾಣುತ್ತದೆ.

ಆದರೆ, ವೆಂಕಟಾಚಾರ್ಯರು ಅನುವಾದಿಸಿದ ‘ದುರ್ಗೇಶನಂದಿನಿ ಮತ್ತು ಗುಬ್ಬಿ ಮುರುಗಾರಾಧ್ಯರು ಕಲ್ಪಿಸಿಕೊಂಡ ಶೃಂಗಾರಚಾತುರ್ಯೋಲ್ಲಾಸಿನಿ ಇವೆರಡೂ ರೊಮಾನ್ಸ್ ಅಥವಾ ರಮ್ಯ-ಸಾಹಸ ಕೃತಿಗಳು. ಲಾಲ್ ಬಿಹಾರಿ ಡೇ ಅವರಂತೆ ಸಂಪೂರ್ಣ ವಾಸ್ತವಮಾರ್ಗವನ್ನು ಆಯ್ಕೆ ಮಾಡಿಕೊಂಡವರು ಗುಲ್ವಾಡಿ ವೆಂಕಟರಾಯರು; ಮತ್ತು ಅವರ ಕಾದಂಬರಿ ಇಂದಿರಾಬಾಯಿ ೧೮೯೯ ರಲ್ಲಿ ಪ್ರಕಟವಾಯಿತು. ಇಂಗ್ಲೀಷ್ ಶಿಕ್ಷಣ, ವಿಧವಾ ವಿವಾಹ, ಇತ್ಯಾದಿಗಳನ್ನು ಸಮರ್ಥಿಸುವ ಈ ಕಾದಂಬರಿಯ ಉಪ ಶೀರ್ಷಿಕೆ “ಸದ್ಧರ್ಮ ವಿಜಯ” ಮತ್ತು ಈ ಪ್ರಥಮ ಸಾಮಾಜಿಕ ಕಾದಂಬರಿಯೂ ಅತ್ಯಂತ ಪರಂಪರಾಗತ ರೀತಿಯಲ್ಲಿ ಪ್ರಾರಂಭವಾಗುತ್ತದೆ (“ವಿಂಧ್ಯಾಚಲದ ದಕ್ಷಿಣ ಪ್ರಾಂತ್ಯದಲ್ಲಿ ರೋಹಿಣೀ ನದೀ ತೀರದಲ್ಲಿ ಕಮಲಪುರವೆಂಬೊಂದು ವಿಸ್ತಾರವಾದ ನಗರವಿರುವುದು…”). ವಿಧವಾ ವಿವಹಾವೇ ಕೇಂದ್ರದಲ್ಲಿರುವ ಈ ಕೃತಿಯ ನಾಯಕಿ ಇಂದಿರಾಬಾಯಿ ಅ’ಕ್ಷತ ಕನ್ಯೆ’; ಮತ್ತು ಅನೇಕ ಆಚರಣೆಗಳನ್ನು ‘ನಾವು ಶಾಸ್ತ್ರಸಮ್ಮತವಲ್ಲ’ ಎಂದು ಕೃತಿಕಾರರು ಒತ್ತಿ ಹೇಳುತ್ತಾರೆ.

ಎಂದರೆ, ಡೇ, ಗುಲ್ವಾಡಿ, ಚಂದೂ ಮೆನನ್, ಮುಂತಾದ ಲೇಖಕರು ‘ಹಿಂದೂ ಮರ್ಯಾದೆ- ಇಂಗ್ಲೀಷ್ ಪದ್ಧತಿ’ ಎಂಬ ಸೂತ್ರವನ್ನು ಸದಾ ಆಧರಿಸುತ್ತಾರೆ; ಇಂಗ್ಲೀಷ್ ‘ನಾವೆಲ್’ ಅನ್ನು ‘ಕಾದಂಬರಿ’ಯಾಗಿ ಪರಿವರ್ತಿಸುತ್ತಾರೆ; ಇಂಗ್ಲೀಷ್ ಕಾದಂಬರಿಗಳ ‘ರಿಯಲಿಸಂ’ ಅನ್ನು ‘ಸುಧಾರಣಾವಾದ’ವನ್ನಾಗಿ ಪರಿವರ್ತಿಸಿಕೊಳ್ಳುತ್ತಾರೆ; ಯೂರೋಪಿಯನ್ ರಿಯಲಿಸಂನಲ್ಲಿರುವ ‘ನಿಯತಿವಾದ’ವನ್ನು (‘Determinism’) ತಿರಸ್ಕರಿಸಿ, ಸಮಾಜ ಸುಧಾರಣೆಯನ್ನು ಸಾಧ್ಯಗೊಳಿಸುವ ಸುಶಿಕ್ಷಿತ ಭಾರತೀಯನನ್ನು ‘ಬದಲಾವಣೆಯ ಕರ್ತೃ’ವಾಗಿ (‘Agent’) ಚಿತ್ರಿಸುತ್ತಾರೆ.

ಆಕೃತಿಯ ನೆಲೆಯಲ್ಲಿ, ಮತ್ತೂ ಒಂದು ಅಂಶವನ್ನು ನಾವು ಗಮನಿಸಬೇಕು. ನನಗೆ ತಿಳಿದಂತೆ, ಪ್ರಾಥಮಿಕ ಘಟ್ಟದ ಇಂಗ್ಲೀಷ್ ಅಥವಾ ಬೆಂಗಾಲಿ ಕಾದಂಬರಿಗಳ ಆಕೃತಿ ಒಂದೇ ಕಥೆಯ ಸುತ್ತಾ ಕಟ್ಟಲ್ಪಟ್ಟಿರುತ್ತದೆ – ಪ್ರಾಯಃ, ೧೯ನೆಯ ಶತಮಾನದ ಇಂಗ್ಲೀಷ್ ಕಾದಂಬರಿಗಳನ್ನು ಮಾದಿರಗಳನ್ನಾಗಿ ಸ್ವೀಕರಿಸಿದುದರಿಂದ. ಆದರೆ, ಕನ್ನಡದ ಮೊದಲ ಘಟ್ಟದ ಕಾದಂಬರಿಕಾರರು ೧೯ನೆಯ ಶತಮಾನದ ಇಂಗ್ಲೀಷ್ ಕಾದಂಬರಿಗಳನ್ನು ಆಧರಿಸಿದುದಾಗಿ ತೋರುತ್ತದೆ; ಆದ್ದರಿಂದಲೇ, ಫೀಲ್ಡಿಂಗ್, ಗೋಲ್ಡ್‌ಸ್ಮಿತ್‌, ಜಾನ್‌ಸನ್ ಮುಂತಾದವರ ಕಾದಂಬರಿಗಳಂತೆ, ಕನ್ನಡದ ಸರಿ ಸುಮಾರು ಎಲ್ಲಾ ಕಾದಂಬರಿಗಳಲ್ಲಿಯೂ ‘ಉಪಕಥೆ’ಗಳು (‘Inset Stories) ಕಂಡು ಬರುತ್ತವೆ: ಅವರಿಲ್ಲದೂಟದಲ್ಲಿ ‘ಧೀರಾಜಿ-ನಾಗು’ ಕಥೆ; ಭಾಗೀರಥಿಯಲ್ಲಿ ‘ತೋಳಂಭಟ್ಟನ ಕಥೆ,’ ವೀರ ಬಂಕೆಯ ಕಾದಂಬರಿಯಲ್ಲಿ ‘ಅಂಧಂತಮಸ ರಾಜನ ಕಥೆ’, ಮತ್ತು ‘ತಂತಿ ಕಡಿದ ಕಥೆ’, ಮಾಡಿದ್ದುಣ್ಣೋ ಮಹರಾಯ ಕಾದಂಬರಿಯಲ್ಲಿ ಅಮಾಸೆಯ ಕಥೆ, ಇತ್ಯಾದಿ.[7] ಆದರೆ, ಈ ಹೇಳಿಕೆಗೆ ಒಂದು ಟಿಪ್ಪಣಿಯ ಅವಶ್ಯಕತೆಯಿದೆ: ಭಾರತದ ಕಥನ ಸಂಪ್ರದಾಯದ್ದು (ಪಂಚತಂತ್ರ, ದಶಕುಮಾರ ಚರಿತ್ರೆ, …). ಆದ್ದರಿಂದ ಕನ್ನಡದ ಮೊದಲ ಕಾದಂಬರಿಗಳು ಈ ‘ಉಪಕಥೆ’ ಅಥವಾ ‘ಕಥೆಯೊಳಗೊಂದು ಕಥೆ’ಯ ತಂತ್ರವನ್ನು ಯಾವ ಮೂಲದಿಂದ ಪಡೆದುವು ಎಂದು ಹೇಳುವುದು ಕಷ್ಟ.

() ಆಶಯಗಳ ನೆಲೆಯಲ್ಲಿ:

) ಸುಸಂಸ್ಕೃತಿಸಭ್ಯತೆಯ ಸೂಚಕವಾಗಿ ಇಂಗ್ಲೀಷ್ ಶಿಕ್ಷಣ:

ಮೊದಲ ಘಟ್ಟದ ಭಾರತೀಯ ಇಂಗ್ಲೀಷ್ ಕಾದಂಬರಿಗಳಲ್ಲೆಲ್ಲಾ ಕಂಡುಬರುವ ಒಂದು ಸಮಾನ ಅಂಶವೆಂದರೆ ಇಂಗ್ಲೀಷ್ ಶಿಕ್ಷಣವನ್ನು ಕುರಿತಿರುವ ಸಕಾರಾತ್ಮಕ ನಿಲುವು. ಈ ನಿಲುವನ್ನು ಪರಸ್ಪರ ವಿರುದ್ಧ ಪಾತ್ರಗಳ ಮೂಲಕ ಲೇಖಕರು ಸ್ಪಷ್ಟಪಡಿಸುತ್ತಾರೆ.

ಗೋವಿಂದ ಸಾಮಂತ ಕಾದಂಬರಿಯಲ್ಲಿ ಎರಡು ಪೀಳಿಗೆಗಳಿಗೆ ಸೇರಿದ ಜಮೀಂದಾರರನ್ನು ನಾವು ನೋಡುತ್ತೇವೆ: ವೃದ್ಧ ಜಯಚಂದ್ರ ಮತ್ತು ಅವನ ಮಗ ನವ ಕೃಷ್ಣ ಬ್ಯಾನರ್ಜಿ. ಅಶಿಕ್ಷಿತ ಜಯಚಂದ್ರ ಸ್ವಾರ್ಥಿ, ಕ್ರೂರಿ ಹಾಗೂ ಪ್ರತಿಗಾಮಿ; ಅಧಿಕಾರಿಗಳ ಜೊತೆ ಶಾಮೀಲಾಗಿ ಅವನು ತನ್ನ ಗೇಣೀದಾರರನ್ನು ಇನ್ನಿಲ್ಲದಂತೆ ಸುಲಿಯುತ್ತಾನೆ. ಇದಕ್ಕೆ ವಿರುದ್ಧವಾಗಿ, ಹಿಂದು ಕಾಲೇಜಿನಲ್ಲಿ ಉತ್ತಮ ಇಂಗ್ಲೀಷ್ ಶಿಕ್ಷಣ ಪಡೆದಿರುವ ನವ ಕೃಷ್ಣ ದೂರ ದೃಷ್ಟಿಯುಳ್ಳವ, ಉದಾರಿ, ಮತ್ತು ಇತರರ ಬಗ್ಗೆ ಅನುಕಂಪದಿಂದ ವರ್ತಿಸುವವನು; ತನ್ನ ಕೈಗೆ ಅಧಿಕಾರ ಬಂದ ಕೂಡಲೇ ತನ್ನ ಗೇಣಿದಾರರ ಸಲವನ್ನು ಮನ್ನಾ ಮಾಡುತ್ತಾನೆ; ಶೋಷಕ ಮರೆಯನ್ನು (ಅವನು ಬ್ರಿಟಿಷ್ ಪ್ರಜೆಯಾಗಿದ್ದರೂ) ತನ್ನ ರೈತರೊಡನೆ ಎದುರಿಸುತ್ತಾನೆ; ಸದಾ ಬಡವರ ಒಳಿತಿಗೆ ದುಡಿಯುತ್ತಾನೆ.

ಇದೇ ಬಗೆಯ ಪಾತ್ರಚಿತ್ರಣವನ್ನು ನಾವು ಇತರ ಸಮಕಾಲೀನ ಕಾದಂಬರಿಗಳಲ್ಲಿಯೂ ಕಾಣುತ್ತೇವೆ. ಮೊದಲ ಇಂಗ್ಲೀಷ್ ಕಾದಂಬರಿಯಾದ ರಾಮ್ಮೋಹನ್ಸ್ ವೈಫ್ ಕೃತಿಯಲ್ಲಿ ರಾಮ್ ಮೋಹನ್ ಮತ್ತು ಮಾಧವ ವಿರುದ್ಧ ಪಾತ್ರಗಳು. ಶಿಕ್ಷಣದ ಗಂಧವೂ ಇಲ್ಲದ ರಾಮ್ ಮೋಹನ್ ಒರಟ, ಅಸಭ್ಯ, ಮತ್ತು ಗುಟ್ಟಿನಲ್ಲಿ ಠಕ್ಕರೊಡನೆ ಸೇರಿರುವವ; ತನ್ನ ಪತ್ನಿ ಮಾತಂಗಿನಿಯನ್ನು ದಾಸಿಗಿಂತ ಕಡೆಯಾಗಿ ಕಾಣುತ್ತಾನೆ. ಆದರೆ ಮಾಧವ ಇಂಗ್ಲೀಷ್ ಶಿಕ್ಷಣವನ್ನು ಪಡೆದಿರುವ ಸುಶಿಕ್ಷಿತ ಹಾಗೂ ಸಭ್ಯ. ಹಾಗೆಯೇ ಇದೇ ಕೃತಿಯಲ್ಲಿ ಬರುವ ಮಾತಂಗಿನಿ ಮತ್ತು ತಾರಾ ಎಂಬ ಸ್ತ್ರೀಪಾತ್ರಗಳು: ಬಡವಳಾದರೂ ಮಾತಂಗಿನಿ ವಿದ್ಯಾವಂತೆ, ಆದ್ದರಿಂದ ಅವಳಿಗೆ ಧೈರ್ಯ-ನೈತಿಕ ಬಲಗಳು ಸಹಜವಾಗಿ ಬರುತ್ತವೆ; ಆದರೆ, ತಾರಾ ಶ್ರೀಮಂತಳಾದರೂ ಅಶಿಕ್ಷಿತೆ, ಆದ್ದರಿಂದ ಕಠಿಣ ಪರಿಸ್ಥಿತಿಯಲ್ಲಿ ಏನು ಮಾಡಲೂ ತೋಚದೆ ಅಸಹಾಯಕಳಾಗುತ್ತಾಳೆ. ಹಾಗೆಯೇ, ಸ್ಟಾರ್ಆಫ್ ಸಿಕ್ರಿ ಕಾದಂಬರಿಯ ರಜನಿ, ರತನ್ಬಾಯಿ ಕಾದಂಬರಿಯ ರತನ್‌ಬಾಯಿ, ಜೋರಾ ಕಾದಂಬರಿಯ ಜ಼ೋರಾ (ಮತ್ತು ಲೇಖಕಿಯರಾಗಿ ಹಾಗೂ ಸಮಾಜ ಸುಧಾರಕಿಯರಾಗಿ ಪ್ರಸಿದ್ಧರಾದ ಪಂಡಿತಾ ರಮಾಬಾಯಿ, ಶೇವಂತಿಬಾಯಿ ನಿಕಾಂಬೆ, ರಮಾಬಾಯಿ ರ‍್ಯಾನಡೆ) – ಇವರೆಲ್ಲರೂ ಉಚ್ಚ ಇಂಗ್ಲೀಷ್ ಶಿಕ್ಷಣ ಪಡೆದವರು ಮತ್ತು ಕಾರಣದಿಂದಲೇ ಸಾಮಾಜಿಕ ಜಾಗೃತಿಗೆ ನೆರವಾದವರು ಎಂಬ ಗ್ರಹಿಕೆ ಕ್ರಿಯಾಶೀಲವಾಗಿದೆ.

ಕನ್ನಡದ ಮೊದಲ ಘಟ್ಟದ ಕಾದಂಬರಿಗಳಲ್ಲೂ ನಾವು ಇಂಗ್ಲೀಷ್ ಶಿಕ್ಷಣದ ಬಗ್ಗೆ ಇದೇ ಬಗೆಯ ನಿಲುವನ್ನು ಕಾಣುತ್ತೇವೆ. ಈ ದಿಕ್ಕಿನಲ್ಲಿ ಗುಲ್ವಾಡಿಯವರ ಇಂದಿರಾಬಾಯಿಯ ಭಾಸ್ಕರರಾಯ ಮೂಲ ಮಾದರಿಯಾಗುತ್ತಾನೆ. (ನೂತನ ಶಿಕ್ಷಣವನ್ನು ಪಡೆದು ಸಮಾಜದ ನವ ಜಾಗೃತಿಗೆ ಕಾರಣರಾಗುವ ಪಾತ್ರಗಳ ಹೆಸರುಗಳೂ ಅರ್ಥಪೂರ್ಣವಾಗಿವೆ: ನವಕೃಷ್ಣ ಬ್ಯಾನರ್ಜಿ, ಭಾಸ್ಕರರಾಯ, ಇತ್ಯಾದಿ.) ಬಡತನದಲ್ಲಿ ಹುಟ್ಟಿ ಬೆಳೆಯುವ ಭಾಸ್ಕರರಾಯ ತನ್ನ ಪರಿಶ್ರಮದಿಂದ ಉತ್ತಮ ಶಿಕ್ಷಣವನ್ನು ಪಡೆದು, ಇಂಗ್ಲಂಡಿಗೂ ಹೋಗಿ ಉಚ್ಚ ಶಿಕ್ಷಣವನ್ನು ಗಳಿಸಿ, ಅಸಿಸ್ಟಂಟ್ ಕಲೆಕ್ಟರ್ ಆಗಿ ತನ್ನ ಊರಿಗೇ ಹಿಂತಿರುಗುತ್ತಾನೆ; ಮತ್ತು ತನ್ನ ನಡವಳಿಕೆಯಿಂದ ಹಾಗೂ ಅಧಿಕಾರದಿಂದ ಸಮಾಜ ಸುಧಾರಣೆಯ ಕಾರ್ಯದಲ್ಲಿ ಯಶಸ್ವಿಯಾಗುತ್ತಾನೆ. ಈ ರೀತಿಯಲ್ಲಿ, ‘ಒಳಗಿನವನು’ ಇಂಗ್ಲೀಷ್ ಶಿಕ್ಷಣ ಪಡೆದು ‘ಹೊರಗಿನವನಾಗಿ,’ ಮತ್ತೆ ತನ್ನ ಸಮಾಜಕ್ಕೆ ಹಿಂತಿರುಗಿ ಸಮಾಜ ಪರಿವರ್ತನೆಗೆ ತೊಡಗುವ ಆಶಯ ಕಳೆದ ಶತಮಾನದುದ್ದಕ್ಕೂ ಕನ್ನಡ ಕಾದಂಬರಿಗಳಲ್ಲಿ ಹಾಸುಹೊಕ್ಕಾಗಿದೆ: ಕಾನೂರು ಹೆಗ್ಗಡಿತಿ ಹೂವಯ್ಯ, ಮರಳಿ ಮಣ್ಣಿಗೆಯ ರಾಮ, ಭಾರತೀಪುರದ ಜಗನ್ನಾಥ, ಕೊಟ್ಟದ ಮಲ್ಲಯ್ಯ, ಇವರೆಲ್ಲರೂ ಭಾಸ್ಕರರಾಯನ ಭಿನ್ನ ರೂಪಾಂತರಗಳೇ.

) ಪಾರಂಪರಿಕ ಸಂಪ್ರದಾಯಆಚರಣೆಗಳ ಖಂಡನೆಸಮರ್ಥನೆ:

ಗೋವಿಂದ ಸಾಮಂತ, ರತನ್ಬಾಯಿ, ಜೋರಾ, ಇತ್ಯಾದಿ ಕಾದಂಬರಿಗಳೆಲ್ಲವೂ, ಸ್ಥೂಲವಾಗಿ, ಬ್ರಹ್ಮೋಸಮಾಜ – ಆರ್ಯ ಸಮಾಜಗಳ ಆದರ್ಶಗಳನ್ನು ಒಪ್ಪಿಕೊಂಡು ಭಾರತೀಯ ಸಮಾಜದ ಆಮೂಲಾಗ್ರ ಪರಿವರ್ತನೆಗೆ ಆಧ್ಯತೆಯನ್ನು ನೀಡುತ್ತವೆ; ಸತಿ-ಬಾಲ್ಯವಿವಾಹ-ವಿಧವೆಯರ ಕೇಶಮುಂಡನ-ಜಾತಿ ಪದ್ಧತಿ, ಮಠಾಧಿಪತಿಗಳ ಸ್ವಾರ್ಥ ಮತ್ತು ದುರ್ನಡತೆ, ಇತ್ಯಾದಿಗಳನ್ನು ಪ್ರಬಲವಾಗಿ ವಿರೋಧಿಸುತ್ತವೆ; ವಿಧವಾ ವಿವಾಹ, ಸ್ತ್ರೀ ಶಿಕ್ಷಣ, ವೈಜ್ಞಾನಿಕ ದೃಷ್ಟಿಕೋನ, ಇತ್ಯಾದಿಗಳನ್ನು ಎತ್ತಿ ಹಿಡಿಯುತ್ತವೆ. ಮುಖ್ಯವಾಗಿ ಸ್ತ್ರೀಯ ಉದ್ಧಾರವಾಗದೆ, ಎಂದರೆ ಸ್ತ್ರೀಗೆ ಆರ್ಥಿಕ-ಶೈಕ್ಷಣಿಕ ಸ್ವಾತಂತ್ರ್ಯವಿಲ್ಲದೆ, ಸಮಾಜದ ಪರಿವರ್ತನೆ ಸಾಧ್ಯವಿಲ್ಲ ಎಂಬ ಗೃಹೀತ ಈ ಕಾದಂಬರಿಗಳ ಆಳದಲ್ಲಿದೆ. ಈ ಹೇಳಿಕೆ ಸಂಪೂರ್ಣವಾಗಿ ಮೊದಲ ಘಟ್ಟದ ಕನ್ನಡ-ತೆಲುಗು-ತಮಿಳು-ಮರಾಠಿ… ಕಾದಂಬರಿಗಳಿಗೂ ಅನ್ವಯಿಸುತ್ತದೆ.

ಆದರೆ, ಈ ಸಂದರ್ಭದಲ್ಲಿ ಕಂಡುಬರುವ ಮೋಜಿನ ಸಂಗತಿಯೆಂದರೆ ‘ಭಾರತೀಯ ಸ್ತ್ರೀ ದಮನಕ್ಕೆ ಒಳಪಟ್ಟಿದ್ದಾಳೆ’ ಎಂಬ ಗೃಹೀತದಿಂದ ಹೊರಡುವ ಲೇಖಕರೇ ಇನ್ನೊಂದು ಸಂದರ್ಭದಲ್ಲಿ ಭಾರತೀಯ ಸಮಾಜದಲ್ಲಿ ಸ್ತ್ರೀಯರಿಗಿರುವ ಆದರ-ಸನ್ಮಾನಗಳನ್ನೂ ದಾಖಲಿಸುತ್ತಾರೆ.

ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತನೆಗೊಂಡ ಲಾಲ್ ಬಿಹಾರಿ ಡೇ ಅವರು ಸತಿ ಪದ್ಧತಿಯನ್ನು ಹೊರತುಪಡಿಸಿ ಇತರ ಯಾವ ಸಾಂಪ್ರದಾಯಿಕ ಆಚರಣೆಗಳನ್ನೂ, ನಂಬಿಕೆಗಳನ್ನೂ ತಿರಸ್ಕರಿಸುವುದಿಲ್ಲ. ಬದಲಾಗಿ, ಅವುಗಳನ್ನು (ಜಾತಕ ಬರೆಸುವುದು, ಕಾಣದ ದೇವದೇವತೆಗಳನ್ನು ಪೂಜಿಸುವುದು, ಇತ್ಯಾದಿ) ಹೀಗೆ ತಾತ್ವಿಕ ನೆಲೆಯಲ್ಲಿ ಸಮರ್ಥಿಸುತ್ತಾರೆ:

“Though the rites are superstitious, they are not meaningless; they indicate the existence of an essentially noble super-sensual sentiment; … they are an acknowledgement that human happiness is dependent on the smiles of an Unseen Power, and that all prosperity flows from the bountifull author of all good” (ಪು.೩೫೦). (‘ಈ ಆಚರಣೆಗಳು ಮೂಢ ನಂಬಿಕೆಯಿಂದ ಕೂಡಿದ್ದರೂ ಅವುಗಳು ಅರ್ಥಹೀನವೇನಲ್ಲ. ಮುಖ್ಯವಾಗಿ ಅಂತಹ ಆಚರಣೆಗಳು ಇಂದ್ರಿಯಾತೀತ ಭಾವನೆಗಳ ಅಸ್ತಿತ್ವವನ್ನು ಸೂಚಿಸುತ್ತವೆ;… ಮಾನವನ ಸುಖ-ಸಂತೋಷಗಳು ಒಂದು ಅದೃಶ್ಯ ಶಕ್ತಿಯ ಅನುಗ್ರಹವನ್ನು ಆಧರಿಸಿವೆ, ಮತ್ತು ಎಲ್ಲಾ ಬಗೆಯ ಸಂಪತ್ತೂ ದಯಾಮಯ ಹಾಗೂ ಮಂಗಳಕಾರಕನಾದ ಸೃಷ್ಟಿಕರ್ತನಿಂದ ಮಾತ್ರ ದೊರಕುತ್ತವೆ ಎಂಬುದನ್ನು ಈ ನಂಬಿಕೆ-ಆಚರಣೆಗಳು ಋಜುವಾತು ಪಡಿಸುತ್ತವೆ.’)

ಬ್ರಿಟಿಷ್ ಸಮಾಜದ ವರ್ಗಾಧಾರಿತ ಶ್ರೇಣೀಕರಣದ ಹೋಲಿಕೆಯಲ್ಲಿ ಜಾತಿ ಪದ್ಧತಿ ಅಷ್ಟೇನೂ ಕ್ರೂರವಲ್ಲವೆಂದೂ ಅವರು ಭಾರತೀಯ ಸಾಮಾಜಿಕ ವ್ಯವಸ್ಥೆಯನ್ನು ಸಮರ್ಥಿಸುತ್ತಾರೆ. ಅಂದಿನ ಕಾಲದ ಬಹುತೇಕ ಚಿಂತಕರು ಉಗ್ರವಾಗಿ ಖಂಡಿಸುತ್ತಿದ್ದ ವಿಧವಾಜೀವನವನ್ನೂ ಈ ಮಾತುಗಳಲ್ಲಿ ಸಮರ್ಥಿಸುತ್ತಾರೆ:

“It is not that she is presecuted and tormented by her relations and friends- that is a fiction of foreign writers…. Hindu widows are not only not ill- treated, but they meet with a vast deal of sympathty” (ಪು. ೧೩೨-೧೩೩) (‘ವಿಧವೆಯನ್ನು ಅವಳ ಸಂಬಂಧಿಗಳು ಹಾಗೂ ಸ್ನೇಹಿತರು ಹಿಂಸಿಸುತ್ತಾರೆ ಎಂಬುದು ನಿಜವಲ್ಲ – ಅದೊಂದು ವಿದೇಶಿ ಲೇಖಕರು ಸೃಷ್ಟಿಸಿರುವ ಕಟ್ಟುಕಥೆ… ಹಿಂದೂ ವಿಧವೆಯರನ್ನು ಇತರರು ಕೆಟ್ಟದಾಗಿ ನಡೆಸಿಕೊಳ್ಳುವುದಿಲ್ಲ ಅಷ್ಟೇ ಅಲ್ಲದೆ ಅವಳ ಬಗ್ಗೆ ಇತರರಿಗೆ ತುಂಬಾ ಕರುಣೆ-ಅನುಕಂಪಗಳೂ ಇರುತ್ತವೆ’). ಜೋರಾ ಕಾದಂಬರಿಯಲ್ಲಿ ಶಾಸ್ತ್ರಕೋವಿದನಾದ ಮೌಲ್ವಿಯೊಬ್ಬನು ಇಸ್ಲಾಮ್‌ಧರ್ಮದ ಶ್ರೇಷ್ಠತೆಯನ್ನು ೪೦ ಪುಟಗಳಲ್ಲಿ ವರ್ಣಿಸುತ್ತಾನೆ.

ಪಾರಂಪರಿಕ ಆಚರಣೆಗಳ ಇಂತಹ ಸಮರ್ಥನೆ ಎಷ್ಟು ಅಸಹ್ಯಕರ ಅತಿರೇಕಕ್ಕೆ ಹೋಗಬಹುದೆಂಬುದನ್ನು ಪದ್ಮಿನಿ ಕಾದಂಬರಿಯಲ್ಲಿ ನೋಡಬಹುದು. ಈ ಕೃತಿಯ ಲೇಖಕರು (ಟಿ. ರಾಮಕೃಷ್ಣ ಪಿಳ್ಳೆ) ಒಂದು ಸಂದರ್ಭದಲ್ಲಿ ಸತಿ ಪದ್ಧತಿಯನ್ನು ಹೀಗೆ ಸಮರ್ಥಿಸುತ್ತಾರೆ: ‘ಈ ಸತಿ ಆಚರಣೆಯ ಮೂಲಕ ಪುರುಷನು ತಾನು ಸ್ತ್ರೀಗಿಂತ ಕೀಳು ಎಂಬುದನ್ನು ಒಪ್ಪಿಕೊಂಡಿದ್ದಾನೆ. ಪುರುಷನು ಸತ್ತರೆ ಸ್ತ್ರೀ ಅವನ ಮೃತ ದೇಹದೊಡನೆ ತಾನೂ ಚಿತೆಯನ್ನು ಪ್ರವೇಶಿಸುತ್ತಾಳೆ; ಆದರೆ ಪತ್ನಿಯು ಸತ್ತರೆ ಪುರುಷನು ತಾನು ಹಿಂದುಳಿದು ವಿಧುರ ಬದುಕನ್ನು ಒಪ್ಪಿಕೊಳ್ಳುತ್ತಾನೆ. ಎಂದರೆ, ಸ್ತ್ರೀಗಿರುವಷ್ಟು ದಾಂಪತ್ಯ ನಿಷ್ಠೆ ಹಾಗೂ ಧೈರ್ಯ ತನಗಿಲ್ಲವಾದುದರಿಂದ ತಾನು ಸ್ತ್ರೀಗಿಂತ ಕೀಳೆಂದು, ಮಾನವ ಜಾತಿಯಲ್ಲಿ ಎರಡನೆಯ ದರ್ಜೆಗೆ ಸೇರಿದವನೆಂದು ಅವನು ಒಪ್ಪಿಕೊಂಡ ಹಾಗಾಯಿತು’ (ಪು.೪೭). ಅಸ್ಮಿತೆಯ ಒತ್ತಡಗಳು ಎಂತೆಂತಹ ಅತಾರ್ಕಿಕ ಹಾಗೂ ವಿಚಿತ್ರ ತೀರ್ಮಾನಗಳಿಗೆ ಜನ್ಮ ಕೊಡುತ್ತವೆಂಬ ಅಂಶ ವಿಸ್ಮಯಕಾರಕ.

ಇದೇ ಬಗೆಯ ಖಂಡನೆ-ಸಮರ್ಥನೆಗಳನ್ನು ನಾವು ಮೊದಲ ಘಟ್ಟದ ಕನ್ನಡದ ಸುಧಾರಣಾವಾದಿ ಕಾದಂಬರಿಗಳಲ್ಲಿಯೂ ಕಾಣುತ್ತೇವೆ. ಕ್ರೂರ ಆಚರಣೆಗಳ, ಮೂಢ ನಂಬಿಕೆಗಳ, ಮತ್ತು ಹೃದಯಹೀನ ಸಾಮಾಜಿಕ ವ್ಯವಸ್ಥೆಯ ಖಂಡನೆಯ ಪ್ರಾತಿನಿಧಿಕ ದಾಖಲೆಯೆಂದು ರೊದ್ದ ವ್ಯಾಸರಾಯರ ಈ ಮಾತುಗಳನ್ನು ಪರಿಗಣಿಸಬಹುದು:

“Whether it is practicable or not to revivify the rotten tissues of the sects of VallaBachayra, Sri Madhwacharya and Ramanujacharya, still remains to be seen… But does not Lord Curzon know that there are certain things which are not only the wonder but the scorn of the world to be thoroughly regenerated and make a brave stand against the ravages of time” (‘ವಲ್ಲಭಾಚಾರ್ಯ, ಶ್ರೀ ಮಧ್ವಾಚಾರ್ಯ, ಮತ್ತು ರಾಮಾನುಜಾಚಾರ್ಯರ ಕೊಳೆತು ನಾರುತ್ತಿರುವ ಪಂಥಗಳನ್ನು ಮತ್ತೆ ಪುನರುಜ್ಜೀವನ ಗೊಳಿಸುವುದು ಸಾಧ್ಯವೆ ಎಂಬುದನ್ನು ಕಾದು ನೋಡಬೇಕು… ಆದರೆ, ಭಾರತೀಯ ಸ್ಮಾರಕಗಳು ವಿಶ್ವದ ಆಶ್ಚರ್ಯಕ್ಕೆ ಅಲ್ಲದೆ ತಿರಸ್ಕಾರಕ್ಕೂ ಗುರಿಯಾಗುವಂತಹವುಗಳು ಎಂಬುದು ಲಾರ್ಡ್ ಕಜ಼ನ್‌ಗೆ ಗೊತ್ತಿಲ್ಲವೆ? ಕಾಲದ ಕೊಳ್ಳೆಯ ವಿರುದ್ಧ ಸೆಟೆದು ನಿಂತು ಭಾರತವನ್ನು ಆಮೂಲಾಗ್ರವಾಗಿ ಪುನಃಚೇತನಗೊಳಿಸಲು ಈ ಬಗೆಯ ಎಲ್ಲಾ ಪಳೆಯುಳಿಕೆಗಳನ್ನೂ ದೂರ ಎಸೆಯಬೇಕು,’ ತಮ್ಮ ಕೃತಿಯ ಮುನ್ನುಡಿಯಲ್ಲಿ).

ಈ ಬಗೆಯ ತೀವ್ರ ಖಂಡನೆಯೊಡನೆಯೇ ವ್ಯಾಸರಾಯರು ಹೇಳುವ ‘ಪಳೆಯುಳಿಕೆ’ಗಳ ಸಮರ್ಥನೆಯೂ ಅಷ್ಟೇ ತೀವ್ರವಾಗಿರುತ್ತಿತ್ತು. ತಮ್ಮ ಸೀಮಂತಿನೀ ಕಾದಂಬರಿಗೆ ಬರೆದ ದೀರ್ಘ ಮುನ್ನುಡಿಯಲ್ಲಿ ತೀವ್ರವಾಗಿ ಸಮಾಜ ಸುಧಾರಣೆಗಾಗಿ ದುಡಿದ ಗುಲ್ವಾಡಿಯವರೇ ನಮ್ಮ ಪ್ರಾಚೀನ ಶ್ರುತಿ-ಸ್ಮೃತಿಗಳಲ್ಲಿ ಸ್ತ್ರೀಯರಿಗಿರುವ ಪೂಜ್ಯ ಸ್ಥಾನದ ಬಗ್ಗೆ ವಿಪುಲ ಉದ್ಧರಣಗಳನ್ನು ಕೊಡುತ್ತಾ, ಪ್ರಾಚೀನ ಭಾರತದಲ್ಲಿದ್ದ ಅತಿ ಗೌರವಾನ್ವಿತ ಮೈತ್ರೇಯಿ, ಗಾರ್ಗಿ, ಸುಲಭಾ, ಇತ್ಯಾದಿ ೫೦ ಮಹಿಳೆಯರ ಹೆಸರುಗಳನ್ನು ಪಟ್ಟಿ ಮಾಡುತ್ತಾರೆ. ಅವರೇ ತಮ್ಮ ಮೊದಲ ಕಾದಂಬರಿ ಇಂದಿರಾಬಾಯಿಯಲ್ಲಿ ಹೊಸದಾಗಿ ಬಿ.ಎ.-ಎಫ್‌.ಎ. ಮಾಡಿದ ಯುವಕರನ್ನು ‘ಕುಲಕಂಟಕ’ರೆಂದು ಕರೆಯುತ್ತಾ, ಅವರ ಅರ್ಧ ಇಂಗ್ಲೀಷ್-ಅರ್ಧ ಕನ್ನಡ ಸಂಭಾಷಣೆಯನ್ನು ಗೇಲಿ ಮಾಡುತ್ತಾರೆ. ಕೆರೂರು ವಾಸುದೇವಾಚಾರ್ಯರು ತಮ್ಮ ಇಂದಿರಾ ಕಾದಂಬರಿಯಲ್ಲಿ ವಿಧವಾ ವಿವಾಹವನ್ನು ವ್ಯಭಿಚಾರವೆಂದೂ, ಆರ್ಯಸಮಾಜ-ಬ್ರಹ್ಮೋಸಮಾಜಗಳನ್ನು ನಾಸ್ತಿಕರ ಹಾಗೂ ಸೋಮಾರಿಗಳ ಕೂಟವೆಂದೂ ಗೇಲಿ ಮಾಡುತ್ತಾರೆ. ಕಳೆದ ಶತಮಾನದುದ್ದಕ್ಕೂ ಇದೇಬಗೆಯ ಪರಂಪರೆಯನ್ನು ಕುರಿತ ಆಕರ್ಷಣೆ-ವಿಕರ್ಷಣೆಗಳನ್ನು ನಾವು ಕನ್ನಡ ಸಾಹಿತ್ಯದಲ್ಲಿ ಕಾಣುತ್ತೇವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ವಸಾಹತುಶಾಹಿ ವೈಚಾರಿಕ-ಸಾಹಿತ್ಯಕ ಮಾದರಿಗಳು ಭಾರತೀಯ ಲೇಖಕರನ್ನು ಸುಮಾರು ಒಂದು ಶತಮಾನದುದ್ದಕ್ಕೂ ಆಕರ್ಷಣೆ-ವಿಕರ್ಷಣೆಗಳ ಮೂಲಕ ಉತ್ತೇಜಿಸಿವೆ, ಪ್ರೇರೇಪಿಸಿವೆ, ಮಣಿಸಿವೆ, ತೀವ್ರ ಸಂದಿಗ್ಧಗಳಿಗೆ ಗುರಿಮಾಡಿವೆ ಎಂಬ ರೋಚಕ ಸಂಗತಿಯನ್ನು ಭಾರತೀಯರಿಂದ ಬರೆಯಲ್ಪಟ್ಟ ಇಂಗ್ಲೀಷ್ ಮತ್ತು ಕನ್ನಡ/ತಮಿಳು…. ಭಾಷೆಗಳ ಮೊದಲ ಘಟ್ಟದ ಕಾದಂಬರಿಗಳು ಅನ್ಯಾದೃಶವಾಗಿ ದಾಖಲಿಸುತ್ತವೆ.

(ಹೈದರಾಬಾದ್ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ೨೦೦೩ ರಲ್ಲಿ ಮಾಡಿದ ಭಾಷಣಗಳ ವಿಸ್ತೃತಲಿಖಿತ ರೂಪ)

* * *

[1] Lal Behari Dey, Govinda Samanta or Bengal Peasant Life (1874; London; Macmillan and Company Ltd., 1913) ಈ ಕೃತಿಯ ಉದ್ಧರಣಗಳೆಲ್ಲವೂ ೧೯೧೩ರ ಆವೃತ್ತಿಗೆ ಸಂಬಂಧಿಸಿವೆ. ಈ ದುರ್ಲಭ ಕೃತಿಯನ್ನು ನನ್ನ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಪದವಿಗಾಗಿ ಸಂಶೋಧನೆ ನಡೆಸುತ್ತಿದ್ದ ಡಾ. ಬೃಂದಾ ವೀರಪ್ಪ ಅವರು ಕಲಕತ್ತಾ ಲೈಬ್ರರಿಯಿಂದ ಶೋಧಿಸಿ ಬೆಳಕಿಗೆ ತಂದರು; ಅವರಿಗೆ ನಾನು ಕೃತಜ್ಞನಾಗಿದ್ದೇನೆ.

[2] ಈ ಕೃತಿಗಳ ದೀರ್ಘ ಚರ್ಚೆಗಾಗಿ ನೋಡಿ: eds. C.N.Ramachandran & N. T. Bhat, Colonial Discourse And The Indian Novel (Udupi: RGpai Samshodhana Kendra, 2003)

[3] Bankimchandra Chatterjee, Rajmohan’s Wife (1864; rpt. Delhi: Ravidayal, 1996); K. K. Sinha, The Star of Sikri: A Novel by a Hindu (Dinapore: G. F. Waltings Press, 1893); Shevantibai Nikambe, Ratanbai : A Sketch of A Bombay Hing Caste Hindu Young Wife (1895; reprinted as “Ratanbai: A High-Caste Child-wife,” New Delhi: Oxford univ. Press, 2004); T. Ramakrishna Pillai, Padmini: An Indian Romance (Edinburgh: The Riverside Press, 1903); Taj, Zorah: A Tale of Zenana Life (London: Methuen, 1912).

[4] ಗುಬ್ಬಿ ಎಸ್. ಮುರುಗಾರಾಧ್ಯ, ಶೃಂಗಾರಚಾತುರ್ಯೋಲ್ಲಾಸಿನಿ (೧೮೯೬; ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್, ೧೯೯೬); ಲೇಖಕನ ಮುನ್ನುಡಿ: ಗುಲ್ವಾಡಿ ವೆಂಕಟರಾವ್‌, ಇಂದಿರಾಬಾಯಿ (೧೮೯೯; ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ೧೯೮೫); ಸೀಮಂತಿನಿ ೧೯೦೭, ಇದನ್ನು ಮೊದಲಿಗೆ ಬೆಳಕಿಗೆ ತಂದವರು ಡಾ. ಸತ್ಯನಾರಾಯಣ ಮಲ್ಲಿಪಟ್ಣ; ರೊದ್ದ ವ್ಯಾಸರಾಯ, ಚಂದ್ರಮುಖಿಯ ಘಾತವು (೧೯೦೦), ಇದು ೧೮೯೯ ರಲ್ಲಿ “ಐಸ ಕೈಸ ಹುವ” ಎಂಬ ಹೆಸರಿನಲ್ಲಿ The Indian Social Reformer ಎಂಬ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು; ಇದನ್ನು ಡಿ.ಎ. ಶಂಕರ್ ಬೆಳಕಿಗೆ ತಂದರು (ಧಾರವಾಡ : ಮನೋಹರ ಗ್ರಂಥಮಾಲೆ, ೧೯೯೮); ಬೋಳಾರ ಬಾಬುರಾವ್, ವಾಗ್ದೇವಿ (೧೯೦೫: ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ೧೯೮೫); ಕೆರೂರ್ ವಾಸುದೇವಾಚಾರ್, ಇಂದಿರಾ (೧೯೦೮; ಮೈಸೂರು: ಉಷಾ ಸಾಹಿತ್ಯಮಾಲೆ, ೧೯೬೭).

[5] Ronald Paulson, Satire And the Novel in Eighteenth Century Fiction (New Haven: 1967), as quoted by Clive T. Probyn, English Fiction of the Eighteenth Century, 1700-1789 (Londnon & New York: Longman, 1987).

[6] ಬಿ. ವೆಂಕಟಾಚಾರ್ಯ, ದುರ್ಗೇಶನಂದಿನಿ (೪ನೆಯ ಸಂಸ್ಕ್ರಮಣ, ಬೆಂಗಳೂರು ಸಿತಿ: ಬೆಂಗಳೂರು ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಕಂಪನಿ, ೧೯೩೦). ಇಂಗ್ಲೀಷ್ ಪೀಠಿಕೆ; ಲೇಖಕರು ಕನ್ನಡದ ‘ವಿಜ್ಞಾಪನೆ’ಯಲ್ಲಿ ಇಂಗ್ಲೀಷ್ ನಾವೆಲ್‌ಗಳ ಸ್ವರೂಪವನ್ನು ದೀರ್ಘವಾಗಿ ಚರ್ಚಿಸುತ್ತಾರೆ.

[7] ಎಮ್‌.ಎಸ್. ಪುಟ್ಟಣ್ಣ, ಅವರಿಲ್ಲದೂಟ (ಮರು ಮುದ್ರಣ: ಮೈಸೂರು: ಕಾವ್ಯಾಲಯ ೧೯೫೯); ಮಾಡಿದ್ದುಣ್ಣೋ ಮಹರಾಯ (೧೯೧೫; ಮೈಸೂರು: ಕಾವ್ಯಾಲಯ, ೧೯೬೭); ಗುಲ್ವಾಡಿ ವೆಂಕಟರಾವ್, ಭಾಗೀರಥಿ ೧೯೦೦ ಇತರ ವಿವರಗಳು ಇಲ್ಲ; ಮುಳಿಯ ತಿಮ್ಮಪ್ಪಯ್ಯ, ವೀರ ಬಂಕೆಯ (೧೯೪೮).