ಆಂಗ್ಲ ಸಾಹಿತ್ಯ ಕ್ಷೇತ್ರದಲ್ಲಿ ಈ ಶತಮಾನದಲ್ಲಾಗಿರುವ ಅರ್ಥಪೂರ್ಣ ಬದಲಾವಣೆ ಎಂದರೆ ಆ ಸಾಹಿತ್ಯದ ವ್ಯಾಖ್ಯಾನವೇ ಬದಲಾಗಿರುವುದು. ಇಂದು ‘ಇಂಗ್ಲಿಷ್ ಸಾಹಿತ್ಯ’ವೆಂದರೆ ‘ಬ್ರಿಟಿಷ್ ಸಾಹಿತ್ಯ’ ಎಂದಲ್ಲದೆ ‘ಇಂಗ್ಲಿಷ್‌ನಲ್ಲಿ ಬರೆಯಲ್ಪಟ್ಟಿರುವ ಸಾಹಿತ್ಯ’ ಎಂಬ ವ್ಯಾಖ್ಯಾನವು ವಿದ್ವಾಂಸರ ಮನ್ನಣೆ ಪಡೆಯುತ್ತಿದೆ. ಇಂತಹ ಅಭೂತಪೂರ್ವ ಬದಲಾವಣೆಗೆ ಕಾರಣರಾದವರು ಮುಖ್ಯವಾಗಿ ಭಾರತೀಯ ಹಾಗೂ ಆಫ್ರಿಕನ್ ಲೇಖಕರು-ಮುಲ್ಕ್ ರಾಜ್ ಆನಂದ್, ಆರ್.ಕೆ. ನಾರಾಯಣ್, ರಾಜಾರಾವ್ ಮತ್ತು ಇತ್ತೀಚಿನ ಸಲ್ಮಾನ್‌ರಶ್ದಿ, ಭಾರತೀ ಮುಖರ್ಜಿ, ವಿಕ್ರಮ್ ಸೇಠ್ ಮುಂತಾದ ಭಾರತೀಯರು ಹಾಗೂ ಚಿನುವಾ ಅಚಿಬಿ, ಶೋಂಯೆಕಾ, ಎನ್‌ಗೂಗಿ ಮುಂತಾದ ಆಫ್ರಿಕನ್‌ ಸಾಹಿತಿಗಳು. ಇವರುಗಳು ಪರಂಪರಾಗತ ಸಾಹಿತ್ಯ ಪ್ರಭೇದಗಳಿಗೆ ಮುಖ್ಯವಾಗಿ ಕಾದಂಬರಿ ಪ್ರಭೇದಕ್ಕೆ ತಮ್ಮ ವಿಶಿಷ್ಟ ತಂತ್ರಗಳ ಹಾಗೂ ಕಾಳಜಿಗಳ ಮೂಲಕ ನೂತನ ಆಯಾಮಗಳನ್ನು ಕೊಡುತ್ತಿದ್ದಾರೆ. ಸಾಧಾರಣತಃ ಇವರೆಲ್ಲರೂ ಉದ್ದೇಶಪೂರ್ವಕವಾಗಿ ವಾಸ್ತವಮಾರ್ಗವನ್ನು ತ್ಯಜಿಸಿ ಕಾದಂಬರಿಗೆ ಫ್ಯಾಂಟಿಸಿಯ, ರೂಪಕಕಥೆಯ ಆಯಾಮಗಳನ್ನು ಕಲ್ಪಿಸುತ್ತಿದ್ದಾರೆ. ಈ ವರ್ಗಕ್ಕೆ ಸೇರುವ ಇತ್ತೀಚೆಗಿನ ಒಂದು ಮುಖ್ಯ ಕೃತಿ ಎಂದರೆ ಗೀತಾ ಮಹೆತಾ ಅವರ ‘ನದೀ ಸೂತ್ರ’ (A River Sutra, 1993).

“ನದೀ ಸೂತ್ರ” ಗೀತಾ ಮೆಹತಾ ಅವರ ಮೂರನೇ ಕೃತಿ. ಇವರ ಉಳಿದೆರಡು ಕೃತಿಗಳೆಂದರೆ ಕರ್ಮ ಕೋಲಾ ಮತ್ತು ರಾಜ್ಕರ್ಮ ಕೋಲಾ ಒಂದು ವ್ಯಂಗ್ಯಾತ್ಮಕ ಕಾದಂಬರಿ. ಅರವತ್ತರ ದಶಕದಲ್ಲಿ ತಮ್ಮ ಯಾಂತ್ರಿಕ ನಾಗರೀಕತೆಯಿಂದ ಬೇಸತ್ತು ಭಾರತದ ಸಂಸ್ಕೃತಿ-ಧರ್ಮ-ಯೋಗ. ಇವುಗಳಲ್ಲಿ ತಮ್ಮ ಬದುಕಿಗೆ ಒಂದು ಅರ್ಥವನ್ನು ಕೊಡಲು ಭಾರತಕ್ಕೆ ಹಿಂಡು ಹಿಂಡಾಗಿ ಬರುತ್ತಿದ್ದ ಪಾಶ್ಚಿಮಾತ್ಯ ‘ಯಾತ್ರಿಕರ’, ಅವರ ಹಾಗೂ ಅವರ ಆಧ್ಯಾತ್ಮಿಕ ಗುರುಗಳ, ಆಳದಲ್ಲಿ ಎರಡು ವಿರುದ್ಧ ಸಂಸ್ಕೃತಿಗಳ ತಕಲಾಟದ, ಮೊನಚಾದ ಆದರೆ ಸಹಾನುಭೂತಿಯಿಂದ ಕೂಡಿದ ಚಿತ್ರಣವಿದೆ. ರಾಜ್ ಕಾದಂಬರಿಯ ಹರಹು ಹೆಚ್ಚು ವಿಸ್ತಾರವಾಗಿದೆ. ಒಂದು ರಾಜಮನೆತನವನ್ನು ಕೇಂದ್ರದಲ್ಲಿಟ್ಟುಕೊಂಡು ಸ್ವಾತಂತ್ರ್ಯ ಪೂರ್ವ ಭಾರತದ ಇತಿಹಾಸದ ಹಾಗೂ ಗತಿಶೀಲ ಇತಿಹಾಸ ಅನಿವಾರ್ಯವಾಗಿ ತಂದೊಡ್ಡುವ ಪರಂಪರೆ ಮತ್ತು ಆಧುನಿಕತೆಗಳ ನಡುವಿನ ಘರ್ಷಣೆಯ, ಸ್ವಾತಂತ್ರ್ಯ ಚಳುವಳಿಯ ವಿವಿಧ ಮುಖಗಳ, ಅತ್ಯಂತ ಪರಿಣಾಮಕಾರಿ ಚಿತ್ರಣವನ್ನು ರಾಜ್ ಕಾದಂಬರಿಯಲ್ಲಿ ಗೀತಾ ಮೆಹತಾ ಕೊಡುತ್ತಾರೆ.

ಆದರೆ ‘ನದೀ ಸೂತ್ರ’ ಕೃತಿ ಇವೆರಡಕ್ಕಿಂತಲೂ ಸಂಪೂರ್ಣ ಭಿನ್ನವಾಗಿದೆ. ಈ ಕೃತಿಯನ್ನು ಕಾದಂಬರಿಯೆಂದು ಪರಿಗಣಿಸಬೇಕೇ ಅಥವಾ ‘ದಶಕುಮಾರ ಚರಿತೆ’, ‘ಡೆಕಮರನ್ಮುಂತಾದ ಆವೃತ ಕಥಾನಕಗಳಂತೆ ನೋಡಬೇಕೇ ಎಂಬುದೇ ಓದುಗರ/ವಿಮರ್ಶಕರ ಮೊದಲನೆಯ ಸಮಸ್ಯೆ. ಎಂದರೆ, ಈ ಕಾದಂಬರಿ, ಇದನ್ನು ಕಾದಂಬರಿಯೆಂದು ಪರಿಗಣಿಸಿದರೆ, ಕಾದಂಬರಿ – ಪ್ರಭೇದಕ್ಕೇ ಒಂದು ಹೊಸ ವ್ಯಾಖ್ಯಾನವನ್ನು ನೀಡುತ್ತದೆ. ನಿರೂಪಣಾ ತಂತ್ರದ ನೆಲೆಯಲ್ಲಿ ಪ್ರಥಮ ಯುರೋಪಿಯನ್ ಕಾದಂಬರಿ ಡಾನ್ ಕ್ವಿಕ್ಸಟ್ ಮತ್ತು ೧೮ನೇ ಶತಮಾನದ ಇಂಗ್ಲಿಷ್ ಕಾದಂಬರಿಗಳು – ಇವುಗಳನ್ನು ನೆನಪಿಗೆ ತರುತ್ತದೆ.

‘ನದೀ ಸೂತ್ರ’ದಲ್ಲಿ ಒಟ್ಟು ಏಳು ಕಥೆಗಳಿವೆ. ಇವೆಲ್ಲವನ್ನೂ ಒಂದೆಡೆ ತಂದು ಅವುಗಳಿಗೊಂಡು ಅರ್ಥವನ್ನು ಕೊಡುವ ‘ಆವರಣ’ ಕಥನವೆಂದರೆ ಒಬ್ಬ ನಿವೃತ್ತ ಐ.ಎ.ಎಸ್. ಅಧಿಕಾರಿಯ ಕಥೆ. ತನ್ನ ಕಥೆಯನ್ನು ತಾನೇ ನಿರೂಪಿಸುವ ಈ ನಿವೃತ್ತ ಅಧಿಕಾರಿ ಸ್ವ ಇಚ್ಛೆಯಿಂದ ವಾನಪ್ರಸ್ತಾಶ್ರಮವನ್ನು ಸ್ವೀಕರಿಸಿ ನರ್ಮದಾ ನದಿಯ ದಂಡೆಯ ಮೇಲಿರುವ ಒಂದು ಸರಕಾರೀ ವಿಶ್ರಾಂತಿ ಗೃಹದ ‘ಕೇರ್‌ಟೇಕರ್‌’ ಆಗುತ್ತಾನೆ. ಈ ವಿಶ್ರಾಂತಿ ಧಾಮಕ್ಕೆ ಹತ್ತಿರದಲ್ಲಿಯೇ ಪ್ರಸಿದ್ಧ ಮಹದೇವನ ದೇವಸ್ಥಾನವಿದೆ; ಮತ್ತು ಅಲ್ಲಿಗೆ ಯಾವಾಗಲೂ ನಾನಾ ವಿಧದ ಯಾತ್ರಿಕರು ಇಡೀ ವರ್ಷ ಬರುತ್ತಿರುತ್ತಾರೆ. ನಿವೃತ್ತ ಅಧಿಕಾರಿ ಸಂಧಿಸುವ ಕೆಲವು ಯಾತ್ರಿಕರ ಕಥೆಗಳು ‘ಆವೃತ’ ಕಥೆಗಳಂತೆ ಕಾದಂಬರಿಯಲ್ಲಿ ಬರುತ್ತವೆ.

ಮೊದಲನೆಯ ಕಥೆ ಒಬ್ಬ ಜೈನ ಸನ್ಯಾಸಿಯ ಕಥೆ. (The Monk’s Story) ಅತಿ ಶ್ರೀಮಂತ ವಜ್ರವ್ಯಾಪಾರಿಯೊಬ್ಬನ ಮಗನಾದ ಇವನು ಪಾಶ್ಚಿಮಾತ್ಯ ಶಿಕ್ಷಣವನ್ನು ಪಡೆದು, ತನ್ನ ತಾರುಣ್ಯದಲ್ಲಿಯೇ ಒಂದು ದಿನ ಪ್ರಾಪಂಚಿಕ ವ್ಯವಹಾರದಲ್ಲಿ ಜಿಗುಪ್ಸೆ ಹೊಂದಿ ಸನ್ಯಾಸಿಯಾಗಲು ನಿರ್ಧರಿಸುತ್ತಾನೆ. ಕಥೆಯ ಹೆಚ್ಚು ಭಾಗ ಇವನ ‘ದೀಕ್ಷಾ ಸಂದರ್ಭ’ದ, ಆ ಸಂದರ್ಭದಲ್ಲಿ ಇವನ ತಂದೆ ನಡೆಸಿದ ವೈಭವೋಪೇತ ಸಮಾರಂಭದ ವರ್ಣನೆಯನ್ನೊಳಗೊಂಡಿದೆ. ತೀರ್ಥಂಕರ ಮಹಾವೀರರ ಕಥೆಯನ್ನು ಹೋಲುವ ಈ ಜೈನ ಸನ್ಯಾಸಿಯ ಕಥೆ ಬದುಕಿನ ರಹಸ್ಯ ಸಂಬಂಧಗಳನ್ನು ಕುರಿತಾದ ಒಂದು ಮೊನಚಾದ ಮಾತಿನಿಂದ ಮುಗಿಯುತ್ತದೆ: “ಬೆಳೆಯಾ, ನನ್ನನ್ನು ತಡೆಯಬೇಡ, ನನ್ನ ಗುಂಪಿನ ಇತರ ಪರಿವ್ರಾಜಕರು ನನಗಾಗಿ ಕಾಯುತ್ತಿದ್ದಾರೆ. ಈ ಪ್ರಪಂಚವನ್ನು ಎರಡನೇ ಬಾರಿ ತ್ಯಜಿಸುವಷ್ಟು ಶಕ್ತಿ ನನಗಿಲ್ಲ.”

ಮುಂದೆ ಬರುವ ‘ಗುರುವಿನ ಕಥೆ’ ಒಂದು ಭೀಭತ್ಸ ಕಥೆ. ತನ್ನ ವ್ಯಕ್ತಿಯಲ್ಲಿ ಸೋಲನ್ನು ಕಂಡ ಒಬ್ಬ ಗಾಯಕ ಕುರುಡ. ಅನಾಥ ಬಾಲಕನೊಬ್ಬನನ್ನು ಮನೆಯಲ್ಲಿಟ್ಟು ಕೊಂಡು ಅವನಿಗೆ ಸಂಗೀತ ಶಿಕ್ಷಣವನ್ನು ಕೊಡುತ್ತಾನೆ. ಈ ಬಾಲಕನ ಸ್ವರ ಶುದ್ಧತೆ ಮತ್ತು ದೈವೀ ಕಂಠ ಅಪೂರ್ವವಾದದ್ದು, ಕೇಳುಗರಿಗೆ ಅನನ್ಯ ಅನುಭವವನ್ನು ಆನಂದವನ್ನು ಕೊಡುವಂಥದ್ದು. ಈ ಬಾಲಕನ ಹಾಡಿನ ರೆಕಾರ್ಡ್‌ಹೊರಬಂದಾಗ ಇವನ ಕೀರ್ತಿ ಎಲ್ಲೆಡೆ ಹರಡುತ್ತದೆ. ಇದನ್ನು ಸಹಿಸಲಾಗದ ಶ್ರೀಮಂತನೊಬ್ಬ, ಹಾಡಲು ಈ ಬಾಲಕನನ್ನು ತನ್ನ ಮನೆಗೆ ಆಹ್ವಾನಿಸಿ, ಅವನು ಹಾಡುತ್ತಿರುವಾಗಲೇ ಅವನ ಗಂಟಲನ್ನು ಸೀಳಿ ಅವನನ್ನು ವಧಿಸುತ್ತಾನೆ. ಪ್ರಾಯಶಃ ಈ ಕತೆ ರೂಪಕಾತ್ಮಕವಾಗಿ ಹೇಗೆ ಧನಿಕರಿಂದ ಕಲೆ ಕೊಲೆಯಾಗುತ್ತದೆ ಎಂಬುದನ್ನು ಚಿತ್ರಿಸುತ್ತದೆ.

ಮೂರನೆಯ ಅಧಿಕಾರಿಯ ಕತೆ (Executive’s Story) ಕಾಮದ ಒಂದು ಮುಖವಾದ ಮೋಹವನ್ನು ರೂಪಕಾತ್ಮಕವಾಗಿ ಅರ್ಥೈಸುತ್ತದೆ. ಒಂದು ಪ್ರತಿಷ್ಠಿತ ಟೀ ಕಂಪನಿಯ ಅಧಿಕಾರಿ, ನಿತಿನ್ ಬೋಸ್, ಬಹಳ ಕಾಲ ಮದ್ಯ – ಮಾನಿನೀ ವ್ಯಸನಗಳಿಂದ ದೂರವಾಗಿ ಅತ್ಯಂತ ಋಜು ಜೀವನವನ್ನು ನಡೆಸುತ್ತಿರುತ್ತಾನೆ. ಆದರೆ ಒಂದು ಸಲ ಆಯಾಚಿತವಾಗಿ ಒದಗಿ ಬರುವ ಬಡಕೂಲಿಯೊಬ್ಬನ ಹೆಂಡತಿ ರೀಮಾಳ ದೈಹಿಕ ಸಂಬಂಧವನ್ನು ಒಪ್ಪಿಕೊಳ್ಳುತ್ತಾನೆ. ಮುಂದೆ, ಒಂದೆರಡು ವರ್ಷಗಳ ನಂತರ ಈ ಸಂಬಂಧವನ್ನು ಬಿಡಲು ಅವನು ಪ್ರಯತ್ನಿಸಿದಾಗ ಅದು ಸಾಧ್ಯವಾಗುವುದಿಲ್ಲ. ಬುಡಕಟ್ಟು ಜನಾಂಗಕ್ಕೆ ಸರಿದ ರೀಮಾ ನಿತಿನ್‌ನನ್ನು ಮಾಟಕ್ಕೆ ಗುರಿಪಡಿಸುತ್ತಾಳೆ. (ಅಥವಾ ಹಾಗೆ ನಿತಿನ್ ಭ್ರಮಿಸುತ್ತಾನೆ) ಭ್ರಮಾಧೀನವಾಗಿ ತನ್ನ ವ್ಯಕ್ತಿತ್ವವನ್ನೇ ಮರೆತು ತಾನೇ ರೀಮಾ ಎಂದು ಭಾವಿಸುತ್ತಾ ಹುಚ್ಚನಂತೆ ಅಲೆದಾಡುತ್ತಾನೆ. ಕೊನೆಗೆ ನರ್ಮದಾ ನದಿಯ ದಂಡೆಯಲ್ಲಿರುವ ಒಂದು ಗುಡ್ಡಗಾಡು ಜನಾಂಗದ ಧಾರ್ಮಿಕ ಕ್ರಿಯೆಗಳಲ್ಲಿ ಭಾಗವಹಿಸಿದ ನಂತರ ಅವನ ‘ಶಾಪ ನಿವೃತ್ತಿ’ ಆಗುತ್ತದೆ.

ಇನ್ನುಳಿದ ಕಥೆಗಳೆಲ್ಲವೂ ಹೀಗೆಯೇ ಭಾರತೀಯರಿಗೆ ಚಿರಪರಿಚಿತವಾದ ವಸ್ತುಗಳನ್ನೊಳಗೊಂಡಿವೆ. ನಾಲ್ಕನೆಯ ‘ವೇಶ್ಯೆಯ ಕಥೆ’ (The Courtesans’s Story) ಅತ್ಯಂತ ಸುಂದರಿಯಾದ ವೇಶ್ಯೆಯೊಬ್ಬಳನ್ನು ಪೇಮಿಸುವ ದರೋಡೆಕೋರ ರಾಹುಲ್ ಸಿಂಗ್‌ನ ಕಥೆಯನ್ನು ಹೇಳುತ್ತದೆ. ತನ್ನ ಹಿಂದಿನ ಜನ್ಮಗಳಲ್ಲಿ ಈ ವೇಶ್ಯೆಯೇ ತನ್ನ ಪ್ರೇಮಿಯಾಗಿದ್ದಳೆಂದು ನಂಬುವ ರಾಹುಲ್ ಸಿಂಗ್ ಇವಳನ್ನು ಅಪಹರಿಸಿ, ಅನೇಕ ದಿನಗಳ ನಂತರ ಅವಳ ಹೃದಯವನ್ನು ಗೆಲ್ಲುತ್ತಾನೆ. ಕೊನೆಯಲ್ಲಿ ಅವನು ಪೋಲಿಸರ ಕೈಯಲ್ಲಿ ಹತನಾದಾಗ ಈ ವೇಶ್ಯೆಯು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮುಂದಿನ ‘ಗಾಯಕಿಯ ಕಥೆ’ (The Musician’s Story) ಕುರೂಪಿಯಾದ ಗಾಯಕಿಯೊಬ್ಬಳ ವಿಫಲ ಪ್ರೇಮವನ್ನು ಚಿತ್ರಿಸುತ್ತದೆ. ಆರನೆಯ ‘ಚಾರಣ’ನ ಕಥೆ (The Ministrel’s Story) ಒಬ್ಬ ನಾಗ ತಪಸ್ವಿ ತಬ್ಬಲಿ ಹುಡುಗಿಯೊಬ್ಬಳನ್ನು ವೇಶ್ಯಾವಾಟಿಕೆಯಿಂದ ರಕ್ಷಿಸಿ, ಅವಳನ್ನು ‘ನರ್ಮದಾ ನದಿಯ ಗಾಯಕಿಯ’ಯಂತೆ ರೂಪಿಸುವುದನ್ನು ನಿರೂಪಿಸುತ್ತದೆ. ಕೊನೆಯದು ‘ನರ್ಮದಾ ಕಣಿವೆಯ ಉತ್ಖನನದ ಕಥೆ’: ಇದರಲ್ಲಿ ಪುರಾತತ್ವ ಶಾಸ್ತ್ರಜ್ಞ ಪ್ರೊ. ಶಂಕರ್ ತನ್ನ ವಿದ್ಯಾರ್ಥಿಗಳೊಡನೆ ನರ್ಮದಾ ತೀರದಲ್ಲಿ ಉತ್ಖನನ ಕಾರ್ಯವನ್ನು ಕೈಗೊಂಡು ಅಪೂರ್ವ ಸಮಶೋಧನೆಗಳನ್ನು ಮಾಡುವ ವೃತ್ತಾಂತವಿದೆ. ಈ ಕಥೆಯ ಕೊನೆಯಲ್ಲಿ ಅನಿರೀಕ್ಷಿತವಾಗಿ, ಪ್ರೊ. ಶಂಕರ್ ಅವರೇ ಹಿಂದಿನ ಕಥೆಯ ನಾಗಾಬಾಬಾ ಎಂದು ಗೊತ್ತಾಗುತ್ತದೆ; ಮತ್ತು ನಾಗಾಬಾಬಾನ ಶಿಷ್ಯೆ ಉಮಾ ಶಂಕರಾಚಾರ‍್ಯ ವಿರಚಿತ ನರ್ಮದಾ ಸ್ತೋತ್ರವನ್ನು ಸುಶ್ರಾವ್ಯವಾಗಿ ಹಾಡುವುದರೊಂದಿಗೆ ಕಾದಂಬರಿ ಕೊನೆಗೊಳ್ಳುತ್ತದೆ.

ಪಾಶ್ಚಿಮಾತ್ಯ ಕಾದಂಬರಿಯ ಮುಖ್ಯ ಧಾರೆಯಾದ ‘ವಾಸ್ತವತಾ’ ಮಾರ್ಗವನ್ನು (Realistic Mode) ಸಂಪೂರ್ಣವಾಗಿ ನಿರಾಕರಿಸುವ ಆದರೆ ಭಾರತೀಯ ಕಥನ ಪರಂಪರೆಗೆ ಬಹು ಸಮೀಪ ಬರುವ ‘ನದೀ ಸೂತ್ರ’ ಅನೇಕ ನೆಲೆಗಳಲ್ಲಿ ಅರ್ಥವನ್ನು ಧ್ವನಿಸುವ, ಸರಳ ನಿರೂಪಣೆಯ ಆಳದಲ್ಲಿ ಅನೇಕ ಸಂಕೀರ್ಣ ಅನುಭವಗಳನ್ನು ಶೋಧಿಸುವ ಒಂದು ಮಹತ್ವಾಕಾಂಕ್ಷೆಯ ಕೃತಿ. ಒಂದೆಡೆ ಸರ್ವಾಂಟಿಸ್‌ನ ಡಾನ್‌ಕ್ವಿಕ್ಸಟ್, ೧೮ನೇ ಶತಮಾನದ ಇಂಗ್ಲೀಷ್ ಕಾದಂಬರಿಗಳು. ಹರ್ಮನ್ ಹೆಸೆಯ ಸಿದ್ಧಾರ್ಥ, ಇವೇ ಮುಂತಾದ ಕೃತಿಗಳನ್ನು ನೆನಪಿಗೆ ತರುವ, ಆದರೆ ಮತ್ತೊಂದಡೆ ಇವೆಲ್ಲವನ್ನೂ ಮೀರಿ ನಿಲ್ಲುವ ‘ನದೀ ಸೂತ್ರ’ ಒಂದು ವಿಶಿಷ್ಟ ಕೃತಿ.

‘ಆವರಣ ಕಥಾನಕ’ಗಳನ್ನು ಕುರಿತು ನಾವು ಎತ್ತಬೇಕಾದ ಮೊದಲನೇ ಪ್ರಶ್ನೆಯೆಂದರೆ, ‘ಆವೃತ ಕಥೆಗಳ’ ಬಂಧದ ಸ್ವರೂಪವೇನು ಮತ್ತು ಆ ಬಂಧ ಧ್ವನಿಸುವ ಅರ್ಥವೇನು ಎಂಬುದು. ‘ನದೀ ಸೂತ್ರ’ದ ಕಥೆಗಳನ್ನು ನಾವು ಪ್ರಾಯಶಃ ಭಾರತೀಯ ರಸ ಸಿದ್ಧಾಂತದ ಆಧಾರದಲ್ಲಿ ಹೆಚ್ಚು ಅರ್ಥೈಸಬಹುದೆಂದು ತೋರುತ್ತದೆ. (ಕಾದಂಬರಿಯಲ್ಲಿ ಅಲ್ಲಲ್ಲಿ ‘ರಸ’ದ ಪರಿಕಲ್ಪನೆಯನ್ನು ಕುರಿತು ಚರ್ಚೆ ನಡೆಯುತ್ತದೆ). ಪ್ರತಿಯೊಂದು ಕಥೆಯ ಸ್ಥಾಯೀ ಭಾವವು ಶೃಂಗಾರ-ವೀರ-ಕರುಣ ಮುಂತಾದ ಒಂದು ಮುಖ್ಯ ರಸ. ಉದಾಹರಣೆಗೆ: ‘ಪರಿವ್ರಾಜಕನ ಕಥೆ’ಯಲ್ಲಿ ವೈರಾಗ್ಯಭಾವ ಮುಖ್ಯವಾಗಿದ್ದು ‘ಶಾಂತ’ ರಸ ಸ್ಥಾಯಿಯಾಗಿದ್ದರೆ (ಸಂಸ್ಕೃತ ನಾಟಕ ‘ನಾಗನಂದ’ದಂತೆ), ‘ಗುರುವಿನ ಕಥೆ’ಯಲ್ಲಿ ಲೋಭ ಹಾಗೂ ಅಸೂಯೆಗಳು ಪ್ರಮುಖವಾಗಿ ಭೀಭತ್ಸ ಹಾಗೂ ಕರುಣಾರಸಗಳು ಪ್ರಧಾನವಾಗುತ್ತವೆ. ಶೃಂಗಾರ – ವೀರ ರಸಗಳ ಸಮಾವೇಶವನ್ನು ನಾವು ‘ವೇಶ್ಯೆಯ ಕಥೆ’ಯಲ್ಲಿ ಕಂಡರೆ ‘ಅಧಿಕಾರಯ ಕಥೆ’ಯಲ್ಲಿ ಕಾಮ ಹಾಗೂ ಮೋಹಗಳು ಪ್ರಧಾನವಾಗಿದ್ದು ಕರುಣಾರಸವನ್ನು ಸೃಜಿಸುತ್ತವೆ. ‘ಗಾಯಕನ ಕಥೆ’ಯಲ್ಲಿ ವಿಪ್ರಲಂಭ ಶೃಂಗಾರ ಸಂಚಾರಿಯಾಗಿದ್ದು ಕರುಣೆ ಸ್ಥಾಯಿಯಾಗಿದೆ. ಹೀಗೆಯೇ “ಚಾರಣನ ಕಥೆ”ಯಲ್ಲಿ ಅದ್ಭುತ ಹಾಗೂ ಭಯಾನಕ ರಸಗಳ ಸಂಯೋಜನೆ ಇದೆ. ಎಂದರೆ, ರಸಸಿದ್ಧಾಂತದ ನೆಲೆಯಲ್ಲಿ, ಭಾರತೀಯ ಕಥಾ ಸಾಹಿತ್ಯದ ಪರಂಪರೆಯಲ್ಲಿ ‘ನದೀ ಸೂತ್ರ’ವನ್ನು ವಿಶ್ಲೇಷಿಸುವುದು ಹೆಚ್ಚು ಸುಲಭ ಹಾಗೂ ಅರ್ಥಪೂರ್ಣ ಎಂದು ಕಾಣುತ್ತದೆ. (ಆದರೆ, ಕೂಡಲೇ ಇಲ್ಲಿ ದಾಖಲಿಸಬೇಕಾದ ವಿಷಯವೆಂದರೆ ಮೇಲಿನ ಪ್ರತಿಯೊಂದು ಹೇಳಿಕೆಯೂ ಕೇವಲ ಅರ್ಧ ಸತ್ಯ-ಪ್ರತಿಯೊಂದು ಹೇಳಿಕೆಗೂ ಅನೇಕ ತಿದ್ದುಪಡಿಗಳ ಅಗತ್ಯವಿದೆ.)

ಆದರೆ ಕಾದಂಬರಿಯ ಆವೃತ ಕಥೆಗಳ ಒಟ್ಟಾರೆಯಾದ ಬಂಧದ ಧ್ವನ್ಯರ್ಥ ಮಾತ್ರ ಪಾರಂಪರಿಕ ಭಾರತೀಯ ಮೌಲ್ಯವ್ಯವಸ್ಥೆಯನ್ನು ಧಿಕ್ಕರಿಸುತ್ತದೆ. ಭಾರತೀಯ ಪರಂಪರೆ ‘ತ್ಯಾಗ’, ‘ಸನ್ಯಾಸ’ (ಅಥವಾ ಸಂಸಾರನಿವೃತ್ತಿ), ‘ತಪಸ್ಸು’ ಇಂತಹ ಮೌಲ್ಯಗಳನ್ನು ಎತ್ತಿ ಹಿಡಿದರೆ ‘ನದೀ ಸೂತ್ರ’ ಇವುಗಳಿಗೆ ವಿರುದ್ಧವಾಗಿ ಈ ನಶ್ವರ ಬದುಕನ್ನು, ಕ್ಷಣಭಂಗುರವಾದರೂ ಈ ಬದುಕಿನ ಅನುಭವಗಳನ್ನು, ನಿವೃತ್ತಿಗೆ ವಿರುದ್ಧವಾದ ‘ಪ್ರವೃತ್ತಿ’ಯನ್ನು ಎತ್ತಿ ಹಿಡಿಯುತ್ತದೆ. ಪ್ರಾರಂಭದ ‘ಪರಿವ್ರಾಜಕನ ಕಥೆ’ಯಲ್ಲಿ ನಾವು ಸಾಂಸಾರಿಕ ಬಂಧನಗಳಿಂದ ದೂರ ಹೋದಷ್ಟು ಬೇರೆ ವಿಧದ ಬಂಧನಗಳಲ್ಲಿ ಹೇಗೆ ಸಿಕ್ಕಿ ಹಾಕಿಕೊಳ್ಳುತ್ತೇವೆ, ಹೇಗೆ ಬದುಕಿರುವಷ್ಟು ಕಾಲವೂ ಒಂದಲ್ಲ ಒಂದು ರೀತಿಯಲ್ಲಿ ಬದುಕಿನ ಅಂಚು ನಮ್ಮನ್ನು ಬಂಧಿಸಿರುತ್ತದೆ ಎಂಬುದನ್ನು ಅರಿಯುತ್ತೇವೆ. ಹೀಗೆ ಮೊದಲನೆಯ ಕಥೆಯಲ್ಲಿ ಪ್ರವೃತ್ತಿಗೆ ಒತ್ತುಬಿದ್ದರೆ ಕೊನೆಯ ಕಥೆಯಲ್ಲಿ ನಿವೃತ್ತಿಯಿಂದ ಮತ್ತೆ ಸಾಂಸಾರಿಕ ಜೀವನಕ್ಕೆ ಮರಳುವ, ತಪಸ್ಸಿಗಿಂತಲೂ ಸಂಶೋಧನೆಯ ಜ್ಞಾನವನ್ನು ಶ್ರೇಷ್ಠವೆಂದು ಪರಿಗಣಿಸುವ – ನಾಗಬಾಬಾ ಅಥವಾ ಪ್ರೊ. ಶಂಕರ್‌ನ ಚಿಂತನೆಯನ್ನು ಕಾಣುತ್ತೇವೆ. ಆವೃತ ಕಥೆಗಳ ಜೋಡಣೆ ಅಥವಾ ಬಂಧ ‘ಈಸಬೇಕು ಇದ್ದು ಜೈಸಬೇಕು’ ಎಂಬ ದಾಸವಾಣಿಯನ್ನು ಧ್ವನಿಸುತ್ತದೆ.

ಮತ್ತೊಂದು ನೆಲೆಯಲ್ಲಿ ಕಾದಂಬರಿ ‘ಪ್ರೇಮದ’ ವಿವಿಧ ನೆಲೆಗಳನ್ನು ಪರೀಕ್ಷಿಸುತ್ತದೆ. ಪ್ರೇಮದ ನಿರಾಕರಣೆಯ ಪ್ರಯತ್ನದಿಂದ ಪ್ರಾರಂಭವಾಗುವ ಕೃತಿ ಪ್ರೇಮದ ವಿವಿಧ ರೂಪಗಳಾದ ಕಾಮ, ಮೋಹ, ಮದ, ಮಾತ್ಸರ್ಯಗಳನ್ನು ಶೋಧಿಸಿ, ಕೊನೆಗೆ ‘ಜೀವನ ಪ್ರೇಮ’ವನ್ನು ಬದುಕಿನ ಪ್ರೀತಿಯನ್ನು ಒಂದು ಮುಖ್ಯ ಮೌಲ್ಯವೆಂಬಂತೆ ದಾಖಲಿಸುತ್ತದೆ. ಈ ಸಂದರ್ಭದಲ್ಲಿ ಕೃತಿಯ ಕೊನೆಗೆ ಬರುವ ಕೆಳಗಿನ ಸಂಭಾಷಣೆಯ ಅರ್ಥಪೂರ್ಣವಾಗಿದೆ. ನಾಗಾಬಾಬಾ ಹಾಗೂ ಪ್ರೊ. ಶಂಕರ್ ಇಬ್ಬರೂ ಒಂದೇ ವ್ಯಕ್ತಿಯೆಂದು ನಿರೂಪಕನಿಗೆ ಗೊತ್ತಾದಾಗ ಅವನಿಗೆ ದಿಗ್ಭ್ರಮೆಯಾಗುತ್ತದೆ. ಇದೆಲ್ಲದರ ಅರ್ಥವೇನೆಂದು ನಾಗಾಬಾಬಾನನ್ನು ಕೇಳುತ್ತಾನೆ:

“ಏನನ್ನು ತಿಳಿಯಬೇಕೆಂದು, ಅಪೇಕ್ಷಿಸುತ್ತೀಯೆ?”, ಕೊನೆಗೆ ಅವನು ಹೇಳಿದನು.

“ನೀನು ಏಕೆ ತಪಸ್ವಿಯಾದೆ – ಏಕೆ ನಿನ್ನ ತಪಸ್ಸನ್ನು ಬಿಟ್ಟೆ- ಇವೆಲ್ಲ ಕಾರ‍್ಯಗಳ ಅರ್ಥವೇನು – ಎಂದು”

ಅವನು ನಿರ್ಧಾನವಾಗಿ ತಾಳ್ಮೆಯಿಂದ ಹೇಳಿದನು;

“ನಿನ್ನೊಡನೆ ಹಂಚಿಕೊಳ್ಳಲು ನನ್ನ ಬಳಿ ಯಾವ ಮಹತ್ಸತ್ಯವೂ ಇಲ್ಲ ಗೆಳೆಯಾ; ನಾನು ನಿನಗೆ ಹೇಳಿದಂತೆ, ನಾನೊಬ್ಬ ಮನುಷ್ಯ, ಕೇವಲ ಮನುಷ್ಯ”

ಕಾದಂಬರಿಯಲ್ಲಿ ನಾನಾ ವರ್ಗಗಳಿಗೆ, ನಾನಾ ಜಾತಿಗಳಿಗೆ ಸೇರಿದ ಅನೇಕಾನೇಕ ಪಾತ್ರಗಳು ಬಂದರೂ ಕಾದಂಬರಿಯ ಮುಖ್ಯಪಾತ್ರ ಅದರ ಕೇಂದ್ರ ಪಾತ್ರ ನರ್ಮದಾ ನದಿ. ಅನೇಕ ಕೋನಗಳಿಂದ, ಅನೇಕ ವರ್ಣಗಳಿಂದ ಚಿತ್ರಿಸಲ್ಪಟ್ಟಿರುವ ನರ್ಮದಾ ನದಿ ಕಾದಂಬರಿಯಲ್ಲಿ ‘ಜೀವನದಿ’ಯ ಸಂಕೇತವಾಗಿ, ನಿರಂತರವಾಗಿ, ಒಮ್ಮೆ ಮೋಹಕವಾಗಿ ಮತ್ತೊಮ್ಮೆ ರಹಸ್ಯಪೂರ್ಣವಾಗಿ, ಒಮ್ಮೆ ತನ್ನ ಮುಗ್ಧ ಸೌಂದರ್ಯಕ್ಕೆ ತಾನೇ ನಾಚುವ ಕಿಶೋರಿಯಂತೆ, ಮತ್ತೊಮ್ಮೆ ಪ್ರೌಢ, ಚತುರ ವೇಶ್ಯೆಯಂತೆ, ಕಂಡು ಕಾಣದಂತೆ, ಇದ್ದೂ ಇಲ್ಲದಂತೆ, ಕಾಡುವ, ಕೆಣಕುವ, ಸಂತೈಸುವ, ‘ಈ ಬದುಕಿನ’ ಸಂಕೇತವಾಗಿ ಬರುತ್ತದೆ.

ವಿಂಧ್ಯಪರ್ವತದಲ್ಲಿ ಜನ್ಮ ತಳೆದು, ಪಶ್ಚಿಮಾಭಿಮುಖವಾಗಿ ಪ್ರವಹಿಸುತ್ತಾ ‘ನದಿಗಳೊಡೆಯ’ ಸಾಗರವನ್ನು ಸೇರುವ ನರ್ಮದಾ ನದಿಯ ಸಾಂಕೇತಿಕತೆಯನ್ನು ಅಲ್ಲಲ್ಲಿ ಅರ್ಥಪೂರ್ಣವಾಗಿ ಬರುವ ಆಶಯಗಳು (Motifs) ಶ್ರೀಮಂತಗೊಳಿಸುತ್ತವೆ. ಕೃತಿಯುದ್ದಕ್ಕೂ ಶಿವಪಾರ್ವತಿಯರ ಕಥೆ (ಕಾಮವಧೆ, ಪಾರ್ವತಿಯ ತಪಸ್ಸು, ಶಿವಪಾರ್ವತಿ ಸಂಗಮ ಇತ್ಯಾದಿ) ಒಂದು ಮೂಲಾಶಯದಂತೆ ಬಂದರೆ, ಶಂಕರಾಚಾರ‍್ಯರ (?) ನರ್ಮದಾಸ್ತವನ ಆ ಆಶಯದ ಅರ್ಥವಂತಿಕೆಯನ್ನು ಮತ್ತಷ್ಟು ವೃದ್ಧಿಸುತ್ತದೆ. ವೀಣೆಯ ಬಗ್ಗೆ, ರಾಗ – ರಾಗಿಣಿಯರ ಬಗ್ಗೆ, ರಸವಿಶೇಷಗಳ ಬಗ್ಗೆ ಅಲ್ಲಲ್ಲಿ ಅನುಷಂಗಿಕವಾಗಿ ಬರುವ ಕಥೆ-ಚರ್ಚೆಗಳು ಒಟ್ಟಾರೆಯಾಗಿ ಮಾನವನ, ಮಾನವವ ಬದುಕಿನ ರಹಸ್ಯವನ್ನು, ಅರ್ಥಪೂರ್ಣತೆಯನ್ನು ಹಾಗೂ ಅದರೊಡನೆಯೇ ಅದರ ಅರ್ಥರಾಹಿತ್ಯವನ್ನೂ ದಾಖಲಿಸುತ್ತವೆ.

ನರ್ಮದೆ ಬದುಕಿನ ಸಂಕೇತವೂ ಹೌದು – ಭಾರತೀಯ ಸಂಸ್ಕೃತಿಯ ಸಂಕೇತವೂ ಹೌದು. ಶಿಲಾಯುಗಕ್ಕೆ ಸೇರಿದ ಭಾರತದ ಅತ್ಯಂತ ಪ್ರಾಚೀನ ಸ್ಮೃತಿಗಳು ನರ್ಮದಾ ತೀರದಲ್ಲಿವೆ. ತನ್ನ ಇತಿಹಾಸದಲ್ಲಿ ಗ್ರೀಕ್ ವಿದ್ವಾಂಸ ಟಾಲೆಮಿ ನರ್ಮದೆಯನ್ನು ಕುರಿತು ಬರೆದಿದ್ದಾನೆ ಮತ್ತು ಮುಖ್ಯವಾಗಿ ಸಾವಿರಾರು ವರ್ಷಗಳ ಕಾಲಾವಧಿಯಲ್ಲಿ ನಿರಂತರವಾಗಿ ನಡೆದ ಆರ್ಯ-ಅನಾರ್ಯ ಸಂಸ್ಕೃತಿಗಳ ಘರ್ಷಣೆಗೆ ನರ್ಮದೆ ಸಾಕ್ಷಿಯಾಗಿದೆ. ಒಂದೆಡೆ ಸುಪಾನೇಶ್ವರ ದೇವಸ್ಥಾನವಿದ್ದರೆ ಮತ್ತೊಂದೆಡೆ ಸೂಫಿ ಕವಿ ರೂಮಿಯ ಸಮಾಧಿಯಿರುವ ಮಸೀದಿಯಿದೆ, ಮತ್ತು ನರ್ಮದೆಯ ಉದ್ದಗಲಕ್ಕೂ ಜೈನರಿಗೆ, ಬೌದ್ಧರಿಕೆ, ಹಿಂದೂಗಳಿಗೆ ಮುಸಲ್ಮಾನರಿಗೆ ಗುಡ್ಡಗಾಡು ಜನಾಂಗಗಳಿಗೆ ಪವಿತ್ರವಾಗಿರುವ ಪೂಜ್ಯ ಸ್ಥಾನಗಳಿವೆ.

“ನದೀ ಸೂತ್ರ” ಅನನ್ಯ ಭಾರತೀಯ ಸಂಸ್ಕೃತಿ ‘ಸೂತ್ರ’.

(Literary Criterion ನಿಯತಕಾಲಿಕೆಯಲ್ಲಿ ಪ್ರಕಟವಾದ ಇಂಗ್ಲೀಷ್ ಲೇಖನದ ಅನುವಾದ)

* * *