ಕೇವಲ ೨೦೦-೩೦೦ ವರ್ಷಗಳ ಹಿಂದೆ ವಸಾಹತುಶಾಹಿಯೊಡನೆ ಭಾರತವನ್ನು ಪ್ರವೇಶಿಸಿದ ಅ-ಭಾರತೀಯ ಇಂಗ್ಲೀಷ್ ಭಾಷೆ ಭಾರತದಲ್ಲಿ ಬೇರು ಬಿಟ್ಟು, ವಸಾಹತುಶಾಹಿಯು ಭಾರತದಿಂದ ನಿರ್ಗಮಿಸಿದರೂ ಆ ಭಾಷೆ ಇಲ್ಲಿಯೇ ಸ್ಥಿರವಾಗಿ ನಿಂತಿದೆ; ೨೦೦೦ ವರ್ಷಗಳ ಇತಿಹಾಸವಿರುವ ಭಾರತೀಯ ಭಾಷೆಗಳನ್ನೂ ಮೀರಿ ಬೆಳೆಯುತ್ತಿದೆ. ಭಾರತದಲ್ಲಿ ಈ ಭಾಷೆ ಕೇವಲ ವ್ಯಾವಹಾರಿಕ ಅಥವಾ ಆಡಳಿತ ಭಾಷೆಯಾಗಿ ಇರದೆ ಕಳೆದ ಇನ್ನೂರು ವರ್ಷಗಳಿಂದ ಸೃಜನಶೀಲ ವಾಙ್ಮಯದ ಮಾಧ್ಯಮವೂ ಆಗಿದೆ. ಈ ಕಿರು ಲೇಖನದಲ್ಲಿ ಇಂಗ್ಲೀಷ್‌ನಲ್ಲಿ ಬರೆಯುವ ಮೂವರು ಖ್ಯಾತ ಕನ್ನಡಿಗರ – ಆರ್.ಕೆ.ನಾರಾಯಣ್, ರಾಜಾರಾವ್, ಮತ್ತು ಶಶಿ ದೇಶಪಾಂಡೆ, ಇವರ – ಪರಿಚಯವಿದೆ. ಇಂಗ್ಲೀಷ್‌ನಲ್ಲಿ ಬರೆಯುವ ಇನ್ನೂ ಅನೇಕ ಪ್ರಸಿದ್ಧ ಕನ್ನಡಿಗರಿದ್ದಾರೆ; ಆದರೆ, ಸ್ಥಳಾಭಾವದಿಂದ, ಈ ಲೇಖನದಲ್ಲಿ ನಾನು ಈ ಮೂರು ಜನರನ್ನು ಮಾತ್ರ ಚರ್ಚಿಸಿದ್ದೇನೆ.

. ಆರ್.ಕೆ. ನಾರಾಯಣ್

ಭಾರತೀಯ ಇಂಗ್ಲೀಷ್ ಕಾದಂಬರಿಯ ತ್ರಿಮೂರ್ತಿಗಳೆಂದು ಪ್ರಸಿದ್ಧರಾದವರಲ್ಲಿ ಮೊದಲಿನವರು ಆರ್.ಕೆ. ನಾರಾಯಣ್; ಇನ್ನಿಬ್ಬರು ಮುಲ್ಕ್‌ರಾಜ್ ಆನಂದ್ ಮತ್ತು ರಾಜಾರಾವ್. ವಸಾಹತುಶಾಹಿಯ ಪ್ರವೇಶದಿಂದ ಸಾಂಪ್ರದಾಯಿಕ ಭಾರತೀಯ ಸಮಾಜದಲ್ಲಿ ಉದ್ಭವಿಸಿದ ಆತಂಕ-ತಲ್ಲಣಗಳು, ನೂತನ ಆಸೆ-ಆಕಾಂಕ್ಷೆಗಳು, ಸಾಂಪ್ರದಾಯಿಕತೆ ಮತ್ತು ಆಧುನಿಕತೆಗಳ ನಡುವಿನ ಸಂಘರ್ಷ-ರಾಜಿಸೂತ್ರಗಳು- ಇವೆಲ್ಲವನ್ನೂ ತಮ್ಮ ಅಸಾಧಾರಣ ವ್ಯಂಗ್ಯ-ವೈನೋದಿಕ ಶೈಲಿಯಲ್ಲಿ ದಾಖಲಿಸಿ, ಭಾರತೀಯ ಇಂಗ್ಲೀಷ್ ಕಾದಂಬರಿಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ಮೊಟ್ಟ ಮೊದಲಿಗೆ ದೊರಕಿಸಿಕೊಟ್ಟವರು ಆರ್.ಕೆ. ನಾರಾಯಣ್.

ಅಂದಿನ ಮದರಾಸಿನಲ್ಲಿ, ಅಕ್ಟೋಬರ್ ೧೦, ೧೯೦೬ರಲ್ಲಿ ಜನಿಸಿದ ರಾಸಿಪುರಂ ಕೃಷ್ಣಸ್ವಾಮಿ ಅಯ್ಯರ್‌ನಾರಾಯಣ ಸ್ವಾಮಿ ತಮ್ಮ ಬದುಕಿನ ಬಹು ಭಾಗವನ್ನು ಮೈಸೂರಿನಲ್ಲಿ ಕಳೆದರು. (ಅವರು ಲೇಖನ ವೃತ್ತಿಯನ್ನು ಕೈಗೊಂಡನಂತರ ತಮ್ಮ ಸ್ನೇಹಿತರಾದ ಪ್ರಸಿದ್ಧ ಕಾದಂಬರಿಕಾರ ಗ್ರಹಾಂ ಗ್ರೀನ್ ಅವರ ಸಲಹೆಯಂತೆ ‘ಆರ್.ಕೆ. ನಾರಾಯಣ್‌’ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡರು). ಸುಪ್ರಸಿದ್ಧ ವ್ಯಂಗ್ಯಚಿತ್ರಕಾರರಾದ ಆರ್.ಕೆ. ಲಕ್ಷ್ಮಣ್‌ ಇವರ ಸಹೋದರರು. ಶಿಕ್ಷಕರಾಗಿದ್ದ ಇವರ ತಂದೆ ಹಾಸನ, ಚನ್ನಪಟ್ಟಣ, ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿ, ಕೊನೆಗೆ ಮೈಸೂರಿ ಮಹಾರಾಜಾ ಹೈಸ್ಕೂಲಿನ ಮುಖ್ಯೋಪಾಧ್ಯರಾಗಿ ನಿವೃತ್ತರಾದರು. ಸಹಜವಾಗಿಯೇ ನಾರಾಯಣ್ ಅವರ ಹೈಸ್ಕೂಲ್-ಕಾಲೇಜ್ ಶಿಕ್ಷಣ ಮೈಸೂರಿನಲ್ಲಿಯೇ ಆಯಿತು. ಇವರ ವಿದ್ಯಾರ್ಥಿ ಜೀವನದ ಒಂದು ಬಹು ದೊಡ್ಡ ವ್ಯಂಗ್ಯವೆಂದರೆ, ಮುಂದೊಂದು ದಿನ ಇಂಗ್ಲೀಷ್ ಲೇಖಕರಾಗಿ ವಿಶ್ವಾದ್ಯಂತ ಪ್ರಸಿದ್ಧಿ ಪಡೆಯಲಿದ್ದ ನಾರಾಯಣ್ ತಮ್ಮ ಇಂಟರ್‌ಮೀಡಿಯಟ್ ಪರೀಕ್ಷೆಯಲ್ಲಿ ಇಂಗ್ಲೀಷ್ ವಿಷಯದಲ್ಲಿ ಅನುತ್ತೀರ್ಣರಾಗಿ, ತಂದೆಯ ಕೋಪಕ್ಕೆ ಪಾತ್ರರಾಗಿದ್ದುದು. ಅನಂತರ ತಮ್ಮ ಶಿಕ್ಷಣವನ್ನು ಮುಂದುವರಿಸಿ, ಮಹಾರಾಜಾಸ್ ಕಾಲೇಜಿನಿಂದ ೧೯೩೦ ರಲ್ಲಿ ನಾರಾಯಣ್‌ ಬಿ.ಎ. ಪದವಿ ಪಡೆದು, ನಂತರ ಒಂದೆರಡು ವರ್ಷಗಳ ಕಾಲ ಶಿಕ್ಷಕರಾಗಿ ದುಡಿದರು. ಆದರೆ, ಬಹು ಬೇಗ ಇವರಿಗೆ ಶಿಕ್ಷಕ ವೃತ್ತಿಯಲ್ಲಿ ಬೇಸರ ಮೂಡಿ, ಲೇಖನ ವೃತ್ತಿಯನ್ನೇ ಅವಲಂಬಿಸಲು ನಿರ್ಧರಿಸಿದರು. ೧೯೩೨ರ ಸುಮಾರಿಗೆ ಇವರ ಮೊದಲ ಕಾದಂಬರಿ ಸ್ವಾಮಿ ಅಂಡ್ ಹಿಜ್ ಫ್ರೆಂಡ್ಸ್ ಪೂರ್ಣವಾಗಿತ್ತು. ಇದೇ ಸಮಯದಲ್ಲಿ ಅವರು ರಾಜಂ ಎಂಬ ಯುವತಿಯನ್ನು ಮದುವೆಯಾದರು. ಆದರೆ, ದುರದೃಷ್ಟವಶಾತ್, ನಾರಾಯಣ್ ಅವರ ಸಾಂಸಾರಿಕ ಬದುಕು ಬಹುಬೇಗ ಕೊನೆಗೊಂಡಿತು. ೧೯೩೭ ರಲ್ಲಿ ಅವರ ಪತ್ನಿ ಅಕಾಲಿಕ ಮೃತ್ಯುವಿಗೆ ತುತ್ತಾದರು. ಈ ಆಘಾತದಿಂದ ಚೇತರಿಸಿಕೊಳ್ಳಲು ನಾರಾಯಣ್ ಅವರಿಗೆ ಸಾಕಷ್ಟು ಕಾಲ ಬೇಕಾಯಿತು. (ಈ ಕಾಲಘಟ್ಟದ ತಮ್ಮ ಬದುಕನ್ನು ಭಾವಪೂರ್ಣವಾಗಿ ನಾರಾಯಣ್ ಮೈ ಡೇಜ಼್ (೧೯೭೫) ಎಂಬ ಆತ್ಮಕಥೆಯಲ್ಲಿ ಮತ್ತು ಇಂಗ್ಲೀಷ್ ಟೀಚರ್ (೧೯೪೫) ಎಂಬ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.)

ತಮ್ಮ ಮೊದಲ ಕಾದಂಬರಿಗೆ ಪ್ರಕಾಶಕರನ್ನು ಹುಡುಕುವುದು ನಾರಾಯಣ್ ಅವರಿಗೆ ಅಷ್ಟೇನೂ ಸುಲಭವಾಗಿರಲಿಲ್ಲ. ತಮ್ಮ ಕಾದಂಬರಿಯನ್ನು ಲಂಡನ್ನಿನ ಪ್ರಕಾಶಕರಿಗೆ ಕಳುಹಿಸಿ, ಪ್ರತಿದಿನವೂ ಅವರಿಂದ ಬರುವ ಉತ್ತರವನ್ನು ಕಾಯುವುದೇ ಅಂದಿನ ದಿನಗಳ ಬಹು ಮುಖ್ಯ ಕೆಲಸವಾಗಿತ್ತೆಂದು ಅವರು ದಾಖಲಿಸುತ್ತಾರೆ. ಅಂಚೆಯನ್ನು ಇವರು ಆ ಕಾಲಘಟ್ಟದಲ್ಲಿ ಎಷ್ಟು ಕಾತುರದಿಂದ ಕಾಯುತ್ತಿದ್ದರೆಂದರೆ, “ನೀವೇನಾದರೂ ನಿಮ್ಮ ಹುಡುಗಿಯಿಂದ ಪ್ರೇಮಪತ್ರವನ್ನಾಗಲಿ ಅಥವಾ ಯಾವುದಾದರೂ ಸಂಸ್ಥೆಯಿಂದ ನೌಕರಿಯ ಪತ್ರವನ್ನಾಗಲಿ ಕಾಯುತ್ತಿದ್ದೀರೇನು?” ಎಂದು ಆಗಾಗ್ಗೆ ಅಂಚೆಯವನು ಕೇಳುತ್ತಿದ್ದನಂತೆ. ಆದರೆ, ಪ್ರತಿ ಆರೇಳು ವಾರಗಳಿಗೊಮ್ಮೆ ನಿಯಮಿತವಾಗಿ ಪ್ರಕಾಶಕರ ಅಸ್ವೀಕೃತಿಯ ಪತ್ರದೊಡನೆ ಕಾದಂಬರಿಯ ಹಸ್ತಪ್ರತಿ ಇವರಿಗೇ ಮರಳಿ ಬರುತ್ತಿತ್ತು. ಬೇಸತ್ತು, ಕೊನೆಗೆ ಆಪ್ತರಾಗಿದ್ದ ಗ್ರಹಾಂ ಗ್ರೀನ್ ಅವರಿಗೆ ಹಸ್ತಪ್ರತಿಯನ್ನು ಕಳುಹಿಸಿ, ಹೀಗೆ ಬರೆದರಂತೆ: “ಪ್ರಕಾಶಕರು ದೊರೆಯದಿದ್ದರೆ ಇದನ್ನು ಮರಳಿಸಬೇಡಿ; ಅಲ್ಲಿಯೇ ಯಾವುದಾದರೂ ರೈಲಿನಿಂದ ದೂರ ಎಸೆದುಬಿಡಿ.” ಓದುಗರ ಅದೃಷ್ಟದಿಂದ ಅಂತಹ ಗತಿಯೇನೂ ಕಾದಂಬರಿಗೆ ಬರಲಿಲ್ಲ. ಹ್ಯಾಮಿಶ್ ಹ್ಯಾಮಿಲ್ಟನ್ ಎಂಬ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯೊಂದು ಆ ಕಾದಂಬರಿಯನ್ನು ಪ್ರಕಟಿಸುವಂತೆ ಗ್ರೀನ್ ಆಸಕ್ತಿ ವಹಿಸಿದರು. ಅನಂತರ, ಕಥೆ-ಕಾದಂಬರಿಗಳಲ್ಲಿ ಹೇಳುವಂತೆ, ‘ಮುಂದಿನದು ಇತಿಹಾಸ.’

ಎಂಟು ದಶಕಗಳ ಕಾಲಾವಧಿಯಲ್ಲಿ ನಾರಾಯಣ್ ಸೃಷ್ಟಿಸಿದ ಒಟ್ಟು ಸಾಹಿತ್ಯ ಗಾತ್ರದಲ್ಲಿ ಹಾಗೂ ಮೌಲ್ಯದಲ್ಲಿ ಅಗಾಧ: ಹದಿನಾರು ಕಾದಂಬರಿಗಳು, ಆರು ಕಥಾ ಸಂಕಲನಗಳು, ರಾಮಾಯಣ-ಮಹಾಭಾರತಗಳ ರೂಪಾಂತರಗಳು, ಎರಡು ಪ್ರವಾಸ ಕಥನಗಳು, ಆತ್ಮ ಚರಿತ್ರೆ ಮತ್ತು ಬಿಡಿ ಲೇಖನಗಳ ನಾಲ್ಕು ಸಂಕಲನಗಳು. ಇವರ ಪ್ರಸಿದ್ಧ ಕಾದಂಬರಿಗಳೆಂದರೆ, ಮಿಸ್ಟರ್ ಸಂಪತ್(೧೯೪೯), ಫ಼ಿನಾನ್ಶಿಯಲ್ ಎಕ್ಸ್ಪರ್ಟ್(೧೯೫೨), ಗೈಡ್ (೧೯೫೮), ವೆಂಡರ್ ಆಫ್ ಸ್ವೀಟ್ಸ್ (೧೯೬೭), ಇತ್ಯಾದಿ. ಇವರ ಪ್ರಸಿದ್ಧ ಕಥಾ ಸಂಕಲನಗಳೆಂದರೆ, ಅನ್ ಅಸ್ಟ್ರಾಲಜರ್ಸ್ಡೇ, ಮಾಲ್ಗುಡಿ ಡೇಜ್, ಇತ್ಯಾದಿ.

ಅವರ ಜೀವನದ ಇಳಿಗಾಲದಲ್ಲಿ ನಾರಾಯಣ್ ಅವರನ್ನು ಅನೇಕ ಬಗೆಯ ಪ್ರಶಸ್ತಿಪುರಸ್ಕಾರಗಳು ಅರಸಿ ಬಂದುವು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ( ಗೈಡ್, ೧೯೬೦), ಪದ್ಮಭೂಷಣ ಪ್ರಶಸ್ತಿ (೧೯೬೪), ಲಂಡನ್ನಿನ ‘ದ ರಾಯಲ್ ಸೊಸೈಟಿ ಫ಼ಾರ್ ಲಿಟ್ರಚರ್’ ಸಂಸ್ಥೆಯಿಂದ ಕೊಡಲ್ಪಟ್ಟ ಎ.ಸಿ. ಬೆನ್ಸನ್ ಪದಕ, ಅಮೆರಿಕಾದ ‘ಅಕಾಡೆಮಿ ಆಫ್ ಲೆಟರ್ಸ್‌‌’ನ ಗೌರವ ಸದಸ್ಯತ್ವ, ರಾಜ್ಯಸಭೆಗೆ ನಾಮಕರಣ (೧೯೮೯), ಇತ್ಯಾದಿ. ಅನೇಕ ಭಾರತೀಯ ಮತ್ತು ಪಾಶ್ಚಿಮಾತ್ಯ ವಿಶ್ವವಿದ್ಯಾನಿಲಯಗಳು ಇವರನ್ನು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದುವು. ಎರಡು ಬಾರಿ ನೊಬೆಲ್ ಪ್ರಶಸ್ತಿಗೂ ನಾರಾಯಣ್ ನಾಮಕರಣಗೊಂಡಿದ್ದರು. (ಇವರಿಗೆ ಈ ಪ್ರಶಸ್ತಿಯನ್ನು ಕೊಡುವ ಬಗ್ಗೆ ನೊಬೆಲ್ ಆಯ್ಕೆ ಸಮಿತಿಯಲ್ಲಾಗಬಹುದಾದ ಒಂದು ಕಾಲ್ಪನಿಕ ಚರ್ಚೆಯ ಚಿತ್ರಣ ಇವರ ಹಾಸ್ಯ ಲೇಖನವೊಂದರಲ್ಲಿದೆ.)

ಎಲ್ಲಾ ಭಾರತೀಯ ಭಾಷೆಗಳೂ ಸೇರಿದಂತೆ ವಿಶ್ವದ ಅನೇಕ ಭಾಷೆಗಳಿಗೆ ಇವರ ಕಥೆ-ಕಾದಂಬರಿಗಳು ಅನುವಾದಿಸಲ್ಪಟ್ಟಿವೆ; ಗೈಡ್ ಸೇರಿದಂತೆ ಅನೇಕ ಕಥೆ-ಕಾದಂಬರಿಗಳು ಚಲನಚಿತ್ರಗಳಾಗಿ ಪ್ರಸಿದ್ಧವಾಗಿವೆ (ಇಲ್ಲಿ, ಶಂಕರ್‌ನಾತ್‌ನಿರ್ಮಿಸಿ ನಟಿಸಿದ ಪ್ರಸಿದ್ಧ ಕಿರುತೆರೆಯ ಧಾರಾವಾಹಿ ಮಾಲ್ಗುಡಿ ಡೇಜ್ ಅನ್ನು ನೆನಪಿಸಿಕೊಳ್ಳಬಹುದು.)

ಬದುಕಿನ ಬಹುಭಾಗವನ್ನು ಮೈಸೂರಿನಲ್ಲಿ ಕಳೆದ ನಾರಾಯಣ್‌ ಮೈಸೂರನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ಇಂದಿಗೂ ಅವರ ಮನೆ ಮೈಸೂರಿನ ಯಾದವಗಿರಿ ಯಲ್ಲಿದೆ. ಒಂದು ದಶಕದ ಕೆಳಗೆ ಮೈಸೂರಿನ ಕುಕ್ಕರಹಳ್ಳಿ ಕೆರೆಯನ್ನು ಅದಿರುವಂತೆಯೇ ಉಳಿಸಲು ಇತರರೊಡನೆ ನಾರಾಯಣ್ ಒಂದು ಹೋರಾಟವನ್ನೇ ನಡೆಸಿದುದು ಇಂದಿಗೂ ಅನೇಕ ಮೈಸೂರಿಗರ ನೆನಪಿನಲ್ಲಿದೆ. ವಿಪುಲ ಹಣ ಹಾಗೂ ಕೀರ್ತಿ ಇವುಗಳನ್ನು ಪಡೆದರೂ ನಾರಾಯಣ್ ಕೊನೆಯವರೆಗೂ ಅತ್ಯಂತ ಸರಳ ಜೀವನವನ್ನು ನಡೆಸಿದರು. ಸಾಹಿತಿಯಾಗಿ ಅವರ ಏಕಮಾತ್ರ ಧ್ಯೇಯವೆಂದರೆ, ಬದುಕಿಗೆ ಹಾಗೂ ಬದುಕಿನ ಸತ್ಯಕ್ಕೆ ಬದ್ಧರಾಗಿರುವುದು. “ಬದುಕಿನ ಸತ್ಯಕ್ಕೆ, ನಾನು ಅರಿತಂತೆ, ಕಥೆಯೊಂದು ಸಂಪೂರ್ಣವಾಗಿ ನಿಷ್ಠವಾಗಿದ್ದರೆ ಅದು ತನಗೆ ತಾನೇ ಅರ್ಥಪೂರ್ಣವಾಗಿರುತ್ತದೆ” ಎಂದು ಒಂದು ಸಂದರ್ಶನದಲ್ಲಿ ಅವರು ಹೇಳುತ್ತಾರೆ.

* * *

ಭಾರತೀಯ ಇಂಗ್ಲೀಷ್ ಸಾಹಿತ್ಯದ ಬಹು ಚರ್ಚಿತ ಲೇಖಕರಲ್ಲಿ ನಾರಾಯಣ್ ಒಬ್ಬರು. ಇವರ ಭಾಷೆ, ಧಾಟಿ-ಧೋರಣೆ, ಇವರು ಚಿತ್ರಿಸಿರುವ ಭಾರತೀಯ ಸಮಾಜದ ನೈಜತೆ, ಇವರ ಕೃತಿಗಳಲ್ಲಿ ಗೃಹೀತವಾಗಿರುವ ಜೀವನದೃಷ್ಟಿ – ಇತ್ಯಾದಿ ಅಂಶಗಳನ್ನು ಕುರಿತು ಅನೇಕ ಪೂರ್ಣಪ್ರಮಾಣದ ವಿಮರ್ಶಾ ಗ್ರಂಥಗಳು, ವಿಪುಲ ಲೇಖನಗಳು ಮತ್ತು ಪಿ.ಎಚ್.ಡಿ. ಪ್ರಬಂಧಗಳು ರಚಿಸಲ್ಪಟ್ಟಿವೆ. ಬದುಕಿನ ಮೊದಲಭಾಗದಲ್ಲಿ ಇವರ ಸಾಹಿತ್ಯ ವಿಮರ್ಶಕರ ಅವಜ್ಞೆಗೆ ಒಳಗಾಗಿದ್ದರೂ ಅನಂತರ, ಸುಮಾರು ೭೦ರ ದಶಕದಿಂದ, ಇವರ ಸಾಹಿತ್ಯದ ಅಧ್ಯಯನ-ಪುನರವಲೋಕನಗಳು ಸಾಕಷ್ಟು ನಡೆದು, ಇವರ ವಿಶಿಷ್ಟ ಸಾಧನೆಯನ್ನು ಗುರುತಿಸುವ ಪ್ರಯತ್ನಗಳು ನಡೆದಿವೆ. ಇಂತಹ ಪುನರ್ಮೌಲ್ಯೀ ಕರಣದಲ್ಲಿ ಸಿ.ಡಿ. ನರಸಿಂಹಯ್ಯ, ಎಂ.ಕೆ. ನಾಯಕ್, ವಿಲಿಯಂ ವಾಲ್ಶ್‌, ಪ್ಯಾಟ್ರಿಕ್ ಸ್ವಿನ್‌ಡನ್, ಇತ್ಯಾದಿ ವಿದ್ವಾಂಸರ ಕೊಡುಗೆ ಉಲ್ಲೇಖನೀಯ.

ನಾರಾಯಣ್ ಅವರ ಕಥೆ-ಕಾದಂಬರಿಗಳಲ್ಲಿ ಅಪ್ರತಿಮ ನಾಯಕ-ನಾಯಕಿಯರಿಲ್ಲ; ಅಸಾಧಾರಣ ಪಾತ್ರಗಳಾಗಲಿ ಘಟನೆಗಳಾಗಲಿ ಇಲ್ಲ. ಜನಸಾಮಾನ್ಯರ ಬದುಕಿನ ನೋವು-ನಲಿವುಗಳು, ಅವರು ಕಾಣುವ ಸಾಧಾರಣ ಕನಸುಗಳು ಮತ್ತು ಆ ಕನಸುಗಳನ್ನು ನನಸಾಗಿಸಲು ಅವರು ತೆರಬೇಕಾಗುವ ಬೆಲೆ, ಇವುಗಳನ್ನು ಚಿತ್ರಿಸುವುದರಲ್ಲಿಯೇ ನಾರಾಯಣ್ ಅವರಿಗೆ ಆಸಕ್ತಿ. ಇವರು ಉಪಯೋಗಿಸುವ ಇಂಗ್ಲೀಷ್ ಭಾಷಾಸ್ತರವೂ ವೈಭವೀಕೃತವಾದದ್ದಲ್ಲ. ಅತ್ಯಂತ ಸರಳ ಭಾಷೆ ಮತ್ತು ಮೆಲುದನಿಯ ನಿರೂಪಣಾ ಶೈಲಿ ನಾರಾಯಣ್ ಅವರ ಕೃತಿಗಳ ವೈಶಿಷ್ಟ್ಯಗಳು.

ಪ್ರಾಯಃ, ಈ ಕಾರಣಗಳಿಂದಾಗಿಯೇ, ಅನೇಕ ವಿಮರ್ಶಕರು ನಾರಾಯಣ್ ಅವರ ಸಾಧನೆಯನ್ನು ಹೀಗಳೆಯುತ್ತಾರೆ. ಅವರ ಕೃತಿಗಳನ್ನು ಆನಂದ್, ರಾಜಾರಾವ್, ಮುಂತಾದವರ ಕೃತಿಗಳೊಡನೆ ಹೋಲಿಸುತ್ತಾ, ‘ನಾರಾಯಣ್ ಅವರಲ್ಲಿ ಆನಂದರ ಕೃತಿಗಳಲ್ಲಿರುವ ಸಾಮಾಜಿಕ ಬದ್ಧತೆಯಿಲ್ಲ; ರಾಜಾರಾವ್ ಅವರ ಕೃತಿಗಳಲ್ಲಿರುವ ಆಧ್ಯಾತ್ಮಿಕ ಆಯಾಮವಿಲ್ಲ; ಏನಿದ್ದರೂ ಇವರು ಬದುಕಿನ ಮೇಲುಮೇಲಿನ ಚಿತ್ರಣವನ್ನು ಕೊಟ್ಟು ಓದುಗರನ್ನು ರಂಜಿಸುವಷ್ಟರಲ್ಲಿಯೇ ತೃಪ್ತರಾಗುತ್ತಾರೆ’ ಎಂದು ತೀರ್ಮಾನಿಸುತ್ತಾರೆ. ಆದರೆ, ಇಂತಹ ತೀರ್ಮಾನಗಳು ನಾರಾಯಣ್ ಅವರ ವ್ಯಂಗ್ಯ ಕೆಲಸ ಮಾಡುವ ಸೂಕ್ಷ್ಮತೆಯ ಅರಿವಿಲ್ಲದೆ ದುಡುಕಿನಿಂದ ಕೈಗೊಳ್ಳುವ ತೀರ್ಮಾನಗಳು. ನಾರಾಯಣ್ ಅವರ ‘ಮೆಲುದನಿಯ ನಿರೂಪಣೆ’ಯಿಂದಾಗಿ ಅವರು ತಮ್ಮ ಕಥೆ-ಕಾದಂಬರಿಗಳಲ್ಲಿ ದರ್ಶಿಸುವ ಸೂಕ್ಷ್ಮಾತಿಸೂಕ್ಷ್ಮ ಒಳನೋಟಗಳು ನಮ್ಮ ಗಮನಕ್ಕೆ-ನಾವು ಎಚ್ಚರದಿಂದಿರದಿದ್ದರೆ-ಬರುವುದೇ ಇಲ್ಲ.

ಉದಾಹರಣೆಗಾಗಿ, ನಾವು ಈ ಪ್ರಾತಿನಿಧಿಕ ಸನ್ನಿವೇಶಗಳನ್ನು ಗಮನಿಸಬಹುದು. ಮಾರ್ಕ್‌ಟ್ರೇನ್‌ನ ಟಾಮ್ಸಾಯರ್ ಮಾದರಿಯಲ್ಲಿ ರಚಿಸಲ್ಪಟ್ಟಿರುವ ಸ್ವಾಮಿ ಅಂಡ್ ಹಿಸ್ ಫ್ರೆಂಡ್ಸ್ಕೃತಿ ಸ್ವಾಮಿನಾಥನ್ ಎಂಬ ಬಾಲಕನ ಅನುಭವಗಳನ್ನು ಅವನ ಪ್ರಜ್ಞೆಯ ಮೂಲಕವೇ ನಿರೂಪಿಸುತ್ತದೆ. ಇದರಲ್ಲಿ ಬರುವ ಒಂದು ಸಂದರ್ಭ ಹೀಗಿದೆ. ತನ್ನ ಸಹಪಾಠಿಯಾದ ರಾಜಂ ಎಂಬುವವನನ್ನು ಒಂದು ಸಲ ಸ್ವಾಮಿ ತನ್ನ ಮನೆಗೆ ‘ಟಿಫಿನ್‌’ಗಾಗಿ ಆಮಂತ್ರಿಸುತ್ತಾನೆ. ರಾಜಂ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಪೊಲೀಸ್ ಆಫೀಸರ್ ಮಗ; ಅವನು ತನ್ನ ಮನೆಗೆ ಬರುವುದಕ್ಕೆ ಒಪ್ಪಿರುವುದೇ ಸ್ವಾಮಿಗೆ ಹೆಮ್ಮೆಯ ವಿಷಯ. ರಾಜಂ ಬರುವ ದಿನ ಎಂತೆಂತಹ ತಿಂಡಿಗಳನ್ನು ಮಾಡಬೇಕು, ಹೇಗೆ ಅವುಗಳನ್ನು ಬಡಿಸಬೇಕು, ಎಂದೆಲ್ಲಾ ತನ್ನ ಅಜ್ಜಿಯೊಡನೆ ಹೇಳುತ್ತಾ, ಕೊನೆಗೆ “ರಾಜಂ ಮನೆಯಲ್ಲಿ ಇರುವವರೆಗೂ ನೀನು ಹೊರಗೆ ಬರಬಾರದು” ಎಂದು ಅಜ್ಜಿಗೆ ಹೇಳುತ್ತಾನೆ. ಏಕೆಂದು ಅರ್ಥವಾಗದೆ ನಕ್ಕು ಅಜ್ಜಿ ಅವನ ಮಾತಿಗೆ ಒಪುತ್ತಾಳೆ. ಅನಂತರ, ಲೇಖಕರ ಸೂಚನೆಯಿಂದ ನಮಗೆ ತಿಳಿಯುವುದೇನೆಂದರೆ, ತನ್ನ ಸಂಪ್ರದಾಯಸ್ಥ ಹಾಗೂ ವಯಸ್ಸಾದ ಅಜ್ಜಿಯನ್ನು ರಾಜಮ್‌ಗೆ ಪರಿಚಯಿಸುವುದು ತನಗೆ ಅಪಮಾನಕರವೆಂದು ಸ್ವಾಮಿ ಭಾವಿಸಿರುತ್ತಾನೆ. (ಆದರೆ, ಅನಂತರ ರಾಜಂ ಸ್ವತಃ ಅಜ್ಜಿಯ ಬಳಿಗೆ ಬಂದು ಅವಳೊಡನೆ ತುಂಬಾ ಮಾತನಾಡುತ್ತಾನೆಂಬುದು ಬೇರೆಯೇ ವಿಷಯ.) ಒಬ್ಬ ಬಡ, ಮುಗ್ಧ ಬ್ರಾಹ್ಮಣ ಬಾಲಕನಲ್ಲಿ ಆಧುನಿಕತೆಯ ಬಗ್ಗೆ ಇರುವ ಆಕರ್ಷಣೆ ಮತ್ತು ಮುಪು-ಸಾವುಗಳ ಬಗ್ಗೆ ಇರುವ ಬಾಲಿಶ ಭಾವನೆಗಳು ಇವೆಲ್ಲವನ್ನೂ ಒಟ್ಟಿಗೆ, ಮನೋಜ್ಞವಾಗಿ ಈ ಘಟನೆ ದಾಖಲಿಸುತ್ತದೆ. ಆದರೆ, ಇಂತಹ ಸೂಕ್ಷ್ಮಗಳನ್ನು ಗ್ರಹಿಸಲು ಓದುಗರು ಜಾಗೃತರಾಗಿರಬೇಕು, ಅಷ್ಟೇ.

ಹಾಗೆ ನೋಡಿದರೆ, ನಾರಾಯಣ್ ಅವರ ವಿಶಿಷ್ಟ ಶಕ್ತಿಯಿರುವುದು ಬ್ರಿಟಿಷ್ ಆಗಮನದಿಂದ ಭಾರತೀಯ ಸಮಾಜದಲ್ಲಾದ ಪರಂಪರೆ-ಆಧುನಿಕತೆಗಳ ಸಂಘರ್ಷವನ್ನು, ತಲ್ಲಣವನ್ನು, ಆಪ್ತವಾಗಿ ಹಾಗೂ ವಸ್ತುನಿಷ್ಠವಾಗಿ ದಾಖಲಿಸುವುದರಲ್ಲಿ. ಈ ನೆಲೆಯಲ್ಲಿ ನಾರಾಯಣ್ ಶಿವರಾಮ ಕಾರಂತರಿಗೆ ಬಹು ಸಮೀಪ ಬರುತ್ತಾರೆ: ಇಬ್ಬರೂ ಸ್ಥಿತ್ಯಂತರ ಸಮಾಜದ ಸಮರ್ಥ ವ್ಯಾಖ್ಯಾನಕಾರರು. ಇವರ ನಡುವೆ ಕಂಡುಬರುವ ಒಂದು ವ್ಯತ್ಯಾಸವೆಂದರೆ ಇವರ ನಿರೂಪಣಾ ಧಾಟಿ: ಕಾರಂತರದು ಗಂಭೀರ ವಾಸ್ತವವಾದಿ ಧಾಟಿಯಾದರೆ ನಾರಾಯಣ್ ಅವರದು ವ್ಯಂಗ್ಯ-ವೈನೋದಿಕ ಧಾಟಿ. ಆದ್ದರಿಂದಲೇ ಇವರಿಬ್ಬರೂ ಪರಸ್ಪರ ತುಂಬಾ ಭಿನ್ನವಾಗಿ ಕಾಣುತ್ತಾರೆ.

ನಾರಾಯಣ್ ಅವರ ಕೃತಿಗಳ ಬಗ್ಗೆ ಮಾತನಾಡುವಾಗ ಅವರು ಸೃಷ್ಟಿಸಿದ ‘ಮಾಲ್ಗುಡಿ’ ಎಂಬ ದಕ್ಷಿಣ ಭಾರತದ ಕಾಲ್ಪನಿಕ ಗ್ರಾಮದ ಬಗ್ಗೆ ಮಾತನಾಡದೆ ಮುಂದುವರಿಯುವುದು ಅಸಾಧ್ಯ. ಅವರ ಹೆಚ್ಚಿನ ಕಥೆ-ಕಾದಂಬರಿಗಳ ಕಾರ್ಯಸ್ಥಳ ಮಾಲ್ಗುಡಿ; ಮತ್ತು ಇಂದು ಅದು ಟಾಮಸ್ ಹಾರ್ಡಿಯ ಕಾಲ್ಪನಿಕ ‘ವೆಸೆಕ್ಸ್‌’ ಪ್ರಾಂತ್ಯದಷ್ಟೇ ಪ್ರಸಿದ್ಧವಾಗಿದೆ. ಈ ಗ್ರಾಮದ ಸೃಷ್ಟಿಯ ಬಗ್ಗೆ ನಾರಾಯಣ್ ಅವರೇ ಒಂದು ಸಂದರ್ಭದಲ್ಲಿ ಹೀಗೆ ಹೇಳುತ್ತಾರೆ: “ಮಾಲ್ಗುಡಿ ಎಂಬುದು ನನಗೆ ಭೂಮಿಯ ಕಂಪನದಂತಹ ಒಂದು ಶೋಧ. ಏಕೆಂದರೆ ನನಗೆ ಯಾವುದೇ ಒಂದು ನಿಜ ಸ್ಥಳದ ಬಗ್ಗೆ ಬರೆಯಲು ಅವಶ್ಯಕವಾದ ಖಚಿತ ವಿವರಗಳಲ್ಲಿ ಆಸಕ್ತಿಯಿರಲಿಲ್ಲ. ಮೊದಲಿಗೆ ನಾನು ಇಡೀ ಗ್ರಾಮವನ್ನಲ್ಲದೆ ಕೇವಲ ಆ ಗ್ರಾಮದ ರೇಲ್ವೇ ನಿಲ್ದಾಣವನ್ನು ಚಿತ್ರಿಸಿದೆ. ಆ ನಿಲ್ದಾಣದಲ್ಲಿರುವುದು ಒಂದೇ ಪ್ಲಾಟ್‌ಫ಼ಾರಂ, ಒಂದು ಆಲದ ಮರ, ಮತ್ತು ಒಬ್ಬ ಸ್ಟೇಷನ್‌ಮಾಸ್ಟರ್. ಅಲ್ಲಿಗೆ ಬರುವ ರೈಲುಗಾಡಿಗಳು ಎರಡೇ: ಒಂದು ಅಲ್ಲಿಗೆ ಬರುವುದು ಮತ್ತು ಇನ್ನೊಂದು ಅಲ್ಲಿಂದ ಹೊರಡುವುದು. ಒಂದು ವಿಜಯ ದಶಮಿಯ ದಿನ ನಾನು ಬರೆಯಲು ಕುಳಿತು ಆ ಗ್ರಾಮದ ಬಗ್ಗೆ ಈ ಮೊದಲ ವಾಕ್ಯವನ್ನು ಬರೆದೆ: ‘ರೇಲ್‌ಗಾಡಿಯು ಆಗ ತಾನೆ ಮಾಲ್ಗುಡಿಗೆ ಬಂದಿತ್ತು.’ “ಈ ರೀತಿ ನಾರಾಯಣ್ ಸೃಷ್ಟಿಸಿದ ಮಾಲ್ಗುಡಿ ಭಾರತದ ಲಕ್ಷಾಂತರ ಗ್ರಾಮಗಳ ಪ್ರಾತಿನಿಧಿಕ ಗ್ರಾಮ; ಹಾಗೆಯೇ ವಸಾಹತುಶಾಹಿ ಕಾಲದ ಇಡೀ ಭಾರತದ ಸೂಕ್ಷ್ಮ ರೂಪವೂ ಅಹುದು. ನೂರಾರು ವರ್ಷಗಳಿಂದ ಇಲ್ಲಿನ ಪರಂಪರಾಗತ ಬದುಕು ಹಿಗ್ಗದೆ, ಕುಗ್ಗದೆ, ಸಾಗುತ್ತಿರುತ್ತದೆ – ಬ್ರಿಟಿಷರ ಆಗಮನದವರೆಗೆ. ಅನಂತರ, ಭಾರತದ ಇತರ ಭಾಗಗಳಲ್ಲಾದಂತೆ ಮಾಲ್ಗುಡಿಯಲ್ಲಿಯೂ ಆಧುನಿಕತೆಯ ಗಾಳಿ ಜೋರಾಗಿ ಬೀಸಲಾರಂಭಿಸುತ್ತದೆ; ಮತ್ತು ಅತಿ ಶೀಘ್ರವಾಗಿ ಅಲ್ಲಿಯ ಪರಂಪರಾಗತ ಮೌಲ್ಯಗಳು ಮತ್ತು ಜೀವನಕ್ರಮಗಳು ದಿಗ್ಭ್ರಮೆಗೊಳಿಸುವಷ್ಟು ಬದಲಾಗುತ್ತವೆ. ಈ ಸಂದರ್ಭದಲ್ಲಿ ನಾವು ಗಮನಿಸಬೇಕಾದ ಒಂದು ಅತಿ ಮುಖ್ಯ ಅಂಶವೆಂದರೆ, ನಾರಾಯಣ್ ಮಾಲ್ಗುಡಿಯಲ್ಲಾಗುವ (ಎಂದರೆ ಭಾರತದಲ್ಲಾಗುವ) ಸಾಮಾಜಿಕ-ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಸ್ತ್ರೀಪಾತ್ರಗಳ ಮೂಲಕ ದಾಖಲಿಸುತ್ತಾರೆ. ಅವರ ಅನೇಕ ಕಾದಂಬರಿಗಳಲ್ಲಿ ಸ್ತ್ರೀಯರು ಸಾಮಾಜಿಕ ಬದಲಾವಣೆಯ ಮಾಧ್ಯಮಗಳಾಗಿ, ಮತ್ತೆ ಕೆಲವೊಮ್ಮೆ ಆ ಬದಲಾವಣೆಯ ಬಲಿಪಶುಗಳಾಗಿ, ಬರುತ್ತಾರೆ. (ಈ ನೆಲೆಯಲ್ಲಿಯೂ ಕಾರಂತರ ಮತ್ತು ನಾರಾಯಣ್ ಅವರ ನಿಲುವುಗಳಲ್ಲಿ ಅನೇಕ ಸಾಮ್ಯತೆಗಳಿವೆ.) ಹೆಚ್ಚಿನ ವಿಮರ್ಶಕರು ನಾರಾಯಣ್ ಸ್ತ್ರೀಪಾತ್ರಗಳಿಗೆ ಕೊಡುವ ಈ ಬಗೆಯ ಮಹತ್ವವನ್ನು ಗಮನಿಸಿಲ್ಲ.

ಪರಂಪರಾಗತ ಭಾರತೀಯ ಸಮಾಜದಲ್ಲಿ ಸ್ತ್ರೀಗಿರುವ ನಿಕೃಷ್ಟ ಸ್ಥಾನ ತಮ್ಮನ್ನು ಬಹು ಹಿಂದಿನಿಂದಲೂ ಕಾಡುತ್ತಿತ್ತೆಂದು ನಾರಾಯಣ್ ತಮ್ಮ ಆತ್ಮಕಥೆಯಲ್ಲಿ ದಾಖಲಿಸುತ್ತಾ, ಹೀಗೆ ಹೇಳುತ್ತಾರೆ: “ಪುರುಷನು ಎಷ್ಟು ಚಾತುರ್ಯದಿಂದ, ಎಷ್ಟು ಕುಟಿಲತೆಯಿಂದ ಸ್ತ್ರೀಯನ್ನು ತನಗಿಂತ ಕೆಳಗಿನ ಸ್ಥಾನದಲ್ಲಿಟ್ಟಿರುವನೆಂದರೆ ಅವಳೇ ತಾನಾಗಿ ತನ್ನ ಸ್ವಾತಂತ್ರ್ಯ, ತನ್ನ ವ್ಯಕ್ತಿತ್ವ, ಘನತೆ ಮತ್ತು ಶಕ್ತಿ ಇವೆಲ್ಲವನ್ನೂ ನಿಧಾನವಾಗಿ ಕಳೆದುಕೊಳ್ಳುವಂತಾಯಿತು. ಆರ್ಷೇಯ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ‘ಪತ್ನಿ’ಯಾದವಳು ಅಂತಹ ಸಂದರ್ಭದ ಅತ್ಯುತ್ತಮ ಬಲಿಪಶುವಾಗಿದ್ದಳು.” ಇಂತಹ ಪುರುಷ ಕೇಂದ್ರಿತ ವ್ಯವಸ್ಥೆಯನ್ನು ವಿರೋಧಿಸುವ, ಒಂದು ಮಟ್ಟದವರೆಗೆ ಅದರ ವಿರುದ್ಧ ಹೋರಾಡುವ, ಅನೇಕ ಆಧುನಿಕ ಸ್ತ್ರೀಪಾತ್ರಗಳು ನಾರಾಯಣ್‌ ಅವರ ಕಥೆ-ಕಾದಂಬರಿಗಳಲ್ಲಿ ಕಾಣಬರುತ್ತವೆ: ಡಾರ್ಕ್ರೂಮ್ ಕೃತಿಯ ಶಾಂತಾಬಾಯಿ, ಮಿಸ್ಟರ್ ಸಂಪತ್ ಕಾದಂಬರಿಯ ಶಾಂತಿ, ಪೇಂಟರ್ ಆಫ಼್ಸೈನ್ಸ್ ಕಾದಂಬರಿಯ ಡೇಸಿ, ಸಾಲ್ಟ್ ಅಂಡ್ ಡಸ್ಟ್ಕಥೆಯ ವೀಣಾ, ಇತ್ಯಾದಿ. ಇವರೆಲ್ಲರೂ ಬಂಡುಕೋರರೇ. ಮಾಲ್ಗುಡಿಗೆ ಬಂದಕೂಡಲೇ ಶಾಂತಾಬಾಯಿ ಹೀಗೆ ಘೋಷಿಸುತ್ತಾಳೆ: “ಅಡಚಣೆಯನ್ನೊಡ್ಡುವ ಕುಟುಂಬವೊಂದು ನನಗಿದ್ದರೆ ನಾನಿಲ್ಲಿಗೆ ಬರುತ್ತಲೇ ಇರಲಿಲ್ಲ.” ಅವಳು ಒಂದು ಬೇಬಿ ಆಸ್ಟಿನ್ ಕಾರನ್ನು ಕೊಳ್ಳಲು ಆಸೆಪಡುತ್ತಾಳೆ; ಮತ್ತು ರಾಮಾಯಣದಂತಹ ಚಲನಚಿತ್ರಗಳನ್ನು ‘ಪೌರಾಣಿಕ ಅಸಂಬದ್ಧ’ಗಳೆಂದು ಹೀಗಳೆಯುತ್ತಾಳೆ; ತನ್ನ ಕುಡುಕ ಗಂಡನನ್ನು ತ್ಯಜಿಸಿ, ಸ್ವತಂತ್ರ ಬದುಕು ನಡೆಸಲು ಪ್ರಯತ್ನಿಸುತ್ತಾಳೆ. ಡೇಸಿ ಇನ್ನೂ ಒಂದು ಹೆಜ್ಜೆ ಮುಂದಿದ್ದಾಳೆ. ಅತ್ಯಂತ ಸ್ವತಂತ್ರ ಪ್ರವೃತ್ತಿಯ ಡೇಸಿ “ಗರ್ಭಧಾರಣೆಯ ಬಗ್ಗೆ ನನ್ನ ತೀವ್ರ ವಿರೋಧವಿದೆ” ಎಂದು ಆಗಾಗ್ಗೆ ಘೋಷಿಸುತ್ತಾ ಇತರರನ್ನು ಬೆಚ್ಚಿಸುತ್ತಾಳೆ. ಅವಳ ಅತಿ ಮುಖ್ಯ ಕಾರ್ಯಕ್ರಮವೆಂದರೆ ಕುಟುಂಬ ಯೋಜನೆಯ ಪ್ರಚಾರ. ೧೯೯೩ರಲ್ಲಿ ನಾರಾಯಣ್ ಬರೆದ ಕಥೆಯೊಂದರಲ್ಲಿ ಬರುವ ವೀಣಾ ಪರಂಪರಾಗತ ಸ್ತ್ರೀ-ಪುರುಷ ಸಂಬಂಧವನ್ನು ಸಂಪೂರ್ಣವಾಗಿ ತಲೆಕೆಳಗು ಮಾಡಿದ್ದಾಳೆ. ಅವಳು ಯಶಸ್ವಿ ಲೇಖಕಿ ಹಾಗೂ ಬುದ್ಧಿಜೀವಿ. ಅವಳ ಗಂಡ ಸ್ವಾಮಿ ಅಡಿಗೆಯೂ ಸೇರಿದಂತೆ ಗೃಹಕೃತ್ಯವನ್ನು ಸಂಪೂರ್ಣವಾಗಿ ತಾನು ವಹಿಸಿಕೊಂಡು, ತನ್ನ ಪತ್ನಿ ವೀಣಾಳಿಗೆ ಬೇಕಾದ ಸಮಯ ಹಾಗೂ ಸ್ವಾತಂತ್ರ್ಯವನ್ನು ಕೊಡುತ್ತಾನೆ.

ಕೂಡಲೇ ಇಲ್ಲೊಂದು ತಿದ್ದುಪಡಿಯನ್ನು ಕೊಡಬೇಕು. ಶಾಂತಾಬಾಯಿ, ಶಾಂತಿ, ರೋಸಿ, ಡೇಸಿ, ವೀಣಾ, ಮುಂತಾದವರ ವಿಚಾರಗಳನ್ನು ಮತ್ತು ಜೀವನದೃಷ್ಟಿ ಕೋನಗಳನ್ನು ನಾರಾಯಣ್ ಸಂಪೂರ್ಣವಾಗಿ ಒಪುತ್ತಾರೆಂದೇನಲ್ಲ. ತಮ್ಮ ಎಲ್ಲಾ ಪಾತ್ರಗಳಿಂದಲೂ ನಾರಾಯಣ್ ಸಾಕಷ್ಟು ದೂರವನ್ನು ಕಾಯ್ದು ಕೊಳ್ಳುತ್ತಾರೆ. ಅವರೆಂದೂ ಉಗ್ರ ಸ್ತ್ರೀಚಳುವಳಿಯ ಸಮರ್ಥಕರಲ್ಲ. ಆದರೆ, ಪುರುಷನಂತೆಯೇ ಸ್ತ್ರೀ ಸಮಾನ ಆರ್ಥಿಕ-ಶೈಕ್ಷಣಿಕ ಅವಕಾಶಗಳಿರಬೇಕು, ಮತ್ತು ಅವರಿಬ್ಬರ ಸಾಮಾಜಿಕ ಸ್ಥಾನಮಾನಗಳು ಸಮಾನವಾಗಿರಬೇಕು ಎಂದು ಅವರು ನಂಬಿದ್ದರೆಂಬುದು ನಿರ್ವಿವಾದ.

ಕೊನೆಯಲ್ಲಿ ನಾರಾಯಣ್ ಅವರ ಗೈಡ್ ಕಾದಂಬರಿಯ ಬಗ್ಗೆ ಒಂದು ಕುತೂಹಲಕರ ಅಂಶವನ್ನು ದಾಖಲಿಸಿ, ಈ ಲೇಖನವನ್ನು ಮುಗಿಸಬಹುದು. ಗೈಡ್ ಕಾದಂಬರಿ ಹಿಂದಿ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಚಲನಚಿತ್ರವಾದುದರಿಂದ ಅದು ಓದುಗರೆಲ್ಲರಿಗೂ ಚಿರಪರಿಚಿತವಾಯಿತು. ಈ ಕಾದಂಬರಿಯ ನಾಯಕ ರಾಜು ಒಂದು ವಿಚಿತ್ರ ಹಾಗೂ ಸಂಕೀರ್ಣ ಪಾತ್ರ: ಪ್ರಾರಂಭದಲ್ಲಿ ಒಂದು ಚಿಕ್ಕ ಅಂಗಡಿಯನ್ನು ನಡೆಸುತ್ತಾ, ಅನಂತರ ‘ಟೂರಿಸ್ಟ್‌ಗೈಡ್ ಆಗಿ, ರೋಸಿ ಎಂಬ ವಿವಾಹಿತ ಮಹಿಳೆಯ ಪ್ರೇಮಿಯಾಗಿ ಮತ್ತು ಅನಂತರ ಅವಳು ಪ್ರಖ್ಯಾತ ನರ್ತಕಿಯಾಗುವಂತೆ ಮಾಡಿ, ಒಂದು ಸಂದರ್ಭದಲ್ಲಿ ಅವಳ ಗಂಡನ ಮಾತಿನಂತೆ ರೋಸಿಯ ಸಹಿ ಮಾಡಿ ಆ ಅಪರಾಧಕ್ಕಾಗಿ ಸೆರೆಮನೆಗೆ ಹೋಗಿ, ಕೊನೆಯಲ್ಲಿ ತನಗಿಷ್ಟವಿಲ್ಲದಿದ್ದರೂ ಮುಗ್ಧ ಹಳ್ಳಿಗರ ಒತ್ತಾಯಕ್ಕೆ ಮಣಿದು ಸಂತನಾಗುವ (ಅಥವಾ ಹಾಗೆ ನಟಿಸುವ) ರಾಜು ‘ಸತ್ಯ’ ಮತ್ತು ‘ಭ್ರಮೆ’ ಇವುಗಳ ನಡುವಿನ ವ್ಯತ್ಯಾಸವನ್ನೇ ಅಳಿಸಿಹಾಕುವ, ವಂಚಕ-ಸಂತ ಅಥವಾ ಸಂತ-ವಂಚಕ. ಕಾದಂಬರಿಯ ಕೊನೆಯಲ್ಲಿ, ಹಳ್ಳಿಗರ ಮಾತನ್ನು ಪಾಲಿಸಲು ರಾಜು ಮಳೆಗಾಗಿ ಉಪವಾಸ ಮಾಡುತ್ತಿದ್ದಾಗ ಬರುವ ಮಳೆ ನಿಜವಾದ ಮಳೆಯೋ ಅಥವಾ ರಾಜುವಿನ ಭ್ರಮೆಯೋ ಗೊತ್ತಾಗುವುದಿಲ್ಲ; ಹಾಗೆಯೇ, ಕೊನೆಗೆ ರಾಜು ಉಪವಾಸದಿಂದ ಸಾಯುತ್ತಾನೆಯೋ ಅಥವಾ ಬದುಕುತ್ತಾನೆಯೋ ಅದೂ ಅಸ್ಪಷ್ಟವಾಗಿಯೇ ಉಳಿಯುತ್ತದೆ.

ಇದೊಂದು ನಿಜ ಘಟನೆಯನ್ನಾಧರಿಸಿದ ಕಾದಂಬರಿಯೆಂದು, ಆ ಘಟನೆಯನ್ನು ತಾವು ಯಾವುದೋ ವರ್ತಮಾನಪತ್ರಿಕೆಯಲ್ಲಿ ಓದಿದ್ದಾಗಿಯೂ ನಾರಾಯಣ್ ಹೇಳುತ್ತಾರೆ. ಆಶ್ಚರ್ಯದ ಸಂಗತಿಯೆಂದರೆ, ಇದೇ ಬಗೆಯ ಪಾತ್ರ-ಘಟನೆಯನ್ನಾಧರಿಸಿದ ಕಾದಂಬರಿಯನ್ನು ಕನ್ನಡದ ಪ್ರಸಿದ್ಧ ನಾಟಕಕಾರ-ಕಾದಂಬರಿಕಾರ ಶ್ರೀರಂಗರೂ ಬರೆದಿದ್ದಾರೆ. ವಿಶ್ವಾಮಿತ್ರನ ಸೃಷ್ಟಿ ಎಂಬ ಈ ಕಾದಂಬರಿ ೧೯೩೪ರಷ್ಟು ಹಿಂದೆಯೇ ಪ್ರಕಟವಾಯಿತು; ಗೈಡ್ ಕಾದಂಬರಿ ೧೯೫೮ ರಲ್ಲಿ ಪ್ರಕಟವಾಯಿತು. (ಈ ಸಾಮ್ಯತೆಯನ್ನು ಮೊದಲಿಗೆ ಗುರುತಿಸಿದವರು ಡಾ. ಜಿ.ಎಸ್. ಅಮೂರ್.)

ಶ್ರೀರಂಗರ ಕಾದಂಬರಿಯ ಮುಖ್ಯ ಕಥಾಧಾರೆಯನ್ನು ನೋಡಿದಾಗ ಈ ಎರಡೂ ಕೃತಿಗಳ ಸಾಮ್ಯತೆ ಹೆಚ್ಚು ಸ್ಪಷ್ಟವಾಗಬಹುದು. ವಿಶ್ವಾಮಿತ್ರಸೃಷ್ಟಿಯ ನಾಯಕ ನಾರಾಯಣ ಇಂಗ್ಲೀಷ್ ಶಿಕ್ಷಣ ಪಡೆದ ಆಧುನಿಕ ತರುಣ. ತನಗಿಷ್ಟವಿಲ್ಲದ ಮದುವೆಯನ್ನು ತನ್ನ ತಂದೆತಾಯಿಯರು ಮಾಡಲು ಯತ್ನಿಸಿದಾಗ ಮನೆ ಬಿಟ್ಟು ಹೋಗುವ ನಾರಾಯಣ, ಎಲ್ಲೆಲ್ಲಿಯೋ ತಿರುಗುತ್ತಾ, ಹೋಟೆಲ್ ಮಾಣಿಯ ಕೆಲಸವೂ ಸೇರಿದಂತೆ ಅನೇಕ ಬಗೆಯ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತಾ, ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಅನೈಕತಿಕ ಸಂಬಂಧಗಳನ್ನು ಮಾಡುತ್ತಾ, ಕೊನೆಗೆ ಒಂದು ಹಳ್ಳಿಗೆ ಬಂದು ತಲುಪುತ್ತಾನೆ. ಅಲ್ಲಿಯೇ ಕೆಲ ಕಾಲ ಇರುವಾಗ ಅವನನ್ನು ‘ಮಹಾ ಯತಿ’ಯೆಂದು ಹಳ್ಳಿಗರು ಗುರುತಿಸುತ್ತಾರೆ. ಹಳ್ಳಿಗೆ ಕ್ಷಾಮ ಬಂದಾಗ ಊರಿನವರು ಅವನಿಂದ ಪವಾಡವೊಂದನ್ನು ನಿರೀಕ್ಷಿಸುತ್ತಾರೆ. ಇದರಿಂದ ಬೇಸತ್ತ ನಾರಾಯಣ ಒಂದು ತೆಂಗಿನಕಾಯಿಯಿಂದ ತಲೆ ಚೆಚ್ಚಿಕೊಂಡಾಗ ಇದ್ದಕ್ಕಿದ್ದಂತೆ ಮಳೆ ಬೀಳಲಾರಂಭಿಸುತ್ತದೆ.

ಇಬ್ಬರು ಲೇಖಕರೂ ಒಂದೇ ಘಟನೆಯನ್ನಾಧರಿಸಿ ತಮ್ಮ ಕೃತಿಗಳನ್ನು ರಚಿಸಿದ್ದಾರೆಯೆ, ಅಥವಾ ನಾರಾಯಣ್ ಶ್ರೀರಂಗರ ಕಾದಂಬರಿಯನ್ನು ಓದಿದ್ದರೆ ಎಂಬುದು ಒಂದು ಚಿದಂಬರ ರಹಸ್ಯ. ಸಾಹಿತ್ಯ ಕ್ಷೇತ್ರದಲ್ಲಿ ಇಂತಹ ಯೋಗಾಯೋಗಗಳು ಆಗಾಗ್ಗೆ ಕಂಡುಬರುವುದು ಕೂತುಹಲಕರ.

. ಹಾಸನದ ರಾಜಾರಾವ್

“ಬರೆಯುವುದೂ ಸಾಧನೆಯ ಒಂದು ಮಾರ್ಗ” ಎಂದು ನಂಬಿದ್ದ, ಭಾರತೀಯ ಮತ್ತು ಪಾಶ್ಚಿಮಾತ್ಯ ದರ್ಶನ-ಸಾಹಿತ್ಯ-ಸಂಸ್ಕೃತಿಗಳ ನಡುವೆ ಜೀವಂತ ಸೇತುವೆಯಾಗಿದ್ದ, ಭಾರತೀಯ ಇಂಗ್ಲೀಷ್ ಕಾದಂಬರಿ ಪ್ರಭೇದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟ, ‘ನಾನೃಷಿಃ ಕುರುತೆ ಕಾವ್ಯಂ’ ಎಂಬ ಉಕ್ತಿಯ ಸಾಕಾರ ನಿದರ್ಶನವಾಗಿದ್ದ ದಾರ್ಶನಿಕ ಸಾಹಿತಿ ರಾಜಾ ರಾವ್. ಅವರು ಇತ್ತೀಚೆಗೆ ಟೆಕ್ಸಾಸ್ ಪ್ರಾಂತ್ಯದ ಆಸ್ಟಿನ್ ನಗರದಲ್ಲಿ, ತಮ್ಮ ೯೬ನೆಯ ವರ್ಷದಲ್ಲಿ ನಿಧನರಾದುದು ಭಾರತೀಯ/ವಿಶ್ವ ಸಾಹಿತ್ಯಕ್ಕಾದ ತುಂಬಲಾರದ ನಷ್ಟ.

ನವೆಂಬರ್ ೮, ೧೯೦೮ ರಲ್ಲಿ, ಹಾಸನದ ಒಂದು ಸುಸಂಸ್ಕೃತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ರಾಜಾ ರಾವ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೈದರಾಬಾದಿನ ಶಾಲೆಗಳಲ್ಲಿ ಮುಗಿಸಿ, ಅನಂತರ ಉತ್ತರ ಪ್ರದೇಶದ ಅಲಿಘರ್‌ ಮುಸ್ಲಿಂ ಯೂನಿವರ್ಸಿಟಿಯಿಂದ ಇಂಗ್ಲೀಷ್ ಸಾಹಿತ್ಯ ಮತ್ತು ಇತಿಹಾಸ ಇವುಗಳನ್ನು ಐಚ್ಛಿಕ ವಿಷಯಗಳನ್ನಾಗಿ ಆರಿಸಿಕೊಂಡು ೧೯೨೯ ರಲ್ಲಿ ಬಿ.ಎ. ಪದವಿ ಪಡೆದರು. ಅನಂತರ, ಅಂದಿನ ಹೈದರಾಬಾದ್ ಸರಕಾರದ ವಿಶೇಷ ವಿದ್ಯಾರ್ಥಿವೇತನವನ್ನು ಪಡೆದು, ಫ್ರಾನ್ಸ್‌ನ Montpellier ವಿಶ್ವವಿದ್ಯಾನಿಲಯದಲ್ಲಿ ಫ್ರೆಂಚ್ ಭಾಷೆ-ಸಾಹಿತ್ಯಗಳನ್ನು ಅಧ್ಯಯನ ಮಾಡಿ, ಅನಂತರ ಅಲ್ಲಿಯ ಪ್ರತಿಷ್ಠಿತ ಸೊರ್‌ಬಾನ್ ವಿಶ್ವ ವಿದ್ಯಾನಿಲಯದಲ್ಲಿ ‘ಐರಿಷ್‌ಸಾಹಿತ್ಯ ಮೇಲೆ ಭಾರತದ ಪ್ರಭಾವ’ ಎಂಬ ವಿಷಯವನ್ನು ಕುರಿತು ಸಂಶೋಧನೆ ನಡೆಸಿದರು. ಸಂಶೋಧನೆಯ ನಂತರ, ೧೯೩೨-೧೯೩೭ರ ಅವಧಿಯಲ್ಲಿ ಫ್ರೆಂಚ್ ಭಾಷೆಯ “Mercure de France” ಎಂಬ ಪ್ರತಿಷ್ಠಿತ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಒಬ್ಬರಾಗಿ ಕಾರ್ಯ ನಿರ್ವಹಿಸಿದರು. ಅನಂತರ, ಭಾರತವೂ ಸೇರಿದಂತೆ ವಿವಿಧ ದೇಶಗಳ ವ್ಯಾಪಕ ಸಂಚಾರವನ್ನು ಕೈಗೊಂಡು, ೧೯೬೬ ರಲ್ಲಿ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಆಸ್ಟಿನ್ ಶಾಖೆಯಲ್ಲಿ ಭಾರತೀಯ ತತ್ವಶಾಸ್ತ್ರದ ಬೋಧನೆಯನ್ನು ಕೈಗೊಂಡರು; ಅಲ್ಲಿಯೇ ‘ಎಮರಿಟಸ್ ಪ್ರೊಫೆಸರ್’ ಆಗಿ ೧೯೮೦ರಲ್ಲಿ ನಿವೃತ್ತರಾದರು.

ರಾಜಾರಾವ್ ಅವರ ವೈವಾಹಿಕ ಜೀವನವೇನೂ ಅಷ್ಟು ಯಶಸ್ವಿಯಾದುದಾಗಿರಲಿಲ್ಲ. ಅವರು ಸೋರ್‌ಬಾನ್ ವಿ.ವಿ.ಯಲ್ಲಿ ಸಂಶೋಧನೆ ನಡೆಸುತ್ತಿರುವಾಗ ಅಲ್ಲಿಯೇ ಫ್ರೆಂಚ್ ಭಾಷೆಯ ಅಧ್ಯಾಪಕಿಯಾಗಿದ್ದ ಕ್ಯಾಮಿಲ್ ಮೋಲಿ (Camille Mouly) ಎಂಬುವವಳನ್ನು ೧೯೩೧ ರಲ್ಲಿ ಮದುವೆಯಾದರು. ಆದರೆ, ಸ್ವಲ್ಪ ಕಾಲದಲ್ಲಿಯೇ ಅವರಿಬ್ಬರ ನಡುವೆ ಇದ್ದ ಸಂಸ್ಕೃತಿ -ವ್ಯಕ್ತಿತ್ವಗಳ ಭಿನ್ನತೆಗಳಿಂದಾಗಿ ಅವರ ದಾಂಪತ್ಯ ಜೀವನ ಕೊನೆಗಂಡಿತು. ಅನಂತರ ಕ್ಯಾಮಿಲ್ ಬೌದ್ಧ ಧರ್ಮವನ್ನು ಸ್ವೀಕರಿಸಿದಳು. (ರಾಜಾ ರಾವ್ ಅವರ ಪ್ರಸಿದ್ಧ ಸರ್ಪೆಂಟ್ ಅಂಡ್ ರೋಪ್ ಕಾದಂಬರಿಯಲ್ಲಿ ಬರುವ ರಾಮಸ್ವಾಮಿ-ಮೆಡಲೀನ್ ದಾಂಪತ್ಯ ಜೀವನ ಮತ್ತು ಅದರಲ್ಲಿ ಅನಿವಾರ್ಯವಾಗುವ ಘರ್ಷಣೆಗಳು ರಾಜಾ ರಾವ್ ಅವರ ವಾಸ್ತವ ಬದುಕಿನ ಅನುಭವಗಳನ್ನೇ ಆಧರಿಸಿವೆ.) ಒಂದೆರಡು ದಶಕಗಳ ನಂತರ, ೧೯೬೫ ರಲ್ಲಿ ರಾಜಾ ರಾವ್ ಅಮೆರಿಕಾದಲ್ಲಿ ನೆಲೆಸಿ, ಅಲ್ಲಿಯ ಕ್ಯಾಥರೀನ್ ಜೋನ್ಸ್‌ಎಂಬ ನಟಿಯನ್ನು ಮದುವೆಯಾದರು.

ವಿದ್ಯಾರ್ಥಿದೆಸೆಯಿಂದಲೂ ರಾಜಾ ರಾವ್ ಅವರಿಗೆ ಸಾಮ್ರಾಜ್ಯಶಾಹಿ ಮತ್ತು ಸರ್ವಾಧಿಕಾರತ್ವಗಳ ಬಗ್ಗೆ ಅಪಾರ ಕ್ರೋಧವಿತ್ತು. ಹಿಟ್ಲರ್‌ನ ಜನಾಂಗವಾದವನ್ನು ತೀವ್ರವಾಗಿ ವಿರೋಧಿಸುತ್ತಿದ್ದ ರಾಜಾ ರಾವ್ ೧೯೩೯ ರಲ್ಲಿ ಹಠಾತ್ತನೆ ಫ್ರಾನ್ಸ್ ದೇಶವನ್ನು ತ್ಯಜಿಸಲು ಒಂದು ಪ್ರಬಲವಾದ ಕಾರಣವೆಂದರೆ ಆಗ ಪ್ರಾರಂಭವಾದ ಹಿಟ್ಲರ್‌ ಪ್ರಚೋದಿತ ಎರಡನೆಯ ವಿಶ್ವ ಯುದ್ಧ. “ನಾನಲ್ಲಿ ಇನ್ನು ಹದಿನೈದು ದಿನಗಳು ಹೆಚ್ಚಿಗೆ ಇದ್ದಿದ್ದರೆ ಇಂದು ಬದುಕಿರುತ್ತಿರಲಿಲ್ಲ” ಎಂದು ಅವರೇ ಒಂದು ಸಂದರ್ಭದಲ್ಲಿ ದಾಖಲಿಸಿದ್ದಾರೆ. ಭಾರತಕ್ಕೆ ಮರಳಿದನಂತರ, ೧೯೪೨ ರಲ್ಲಿ ಬ್ರಿಟಿಷರ ವಿರುದ್ಧ ಭೂಗತ ಚಟುವಟಿಕೆಗಳಲ್ಲಿ ಕೆಲ ಕಾಲ ತಮ್ಮನ್ನು ತೊಡಗಿಸಿಕೊಂಡಿದ್ದರು; ಮತ್ತು ಅದೇ ಸಮಯದಲ್ಲಿ ಮೂರು ವರ್ಷಗಳ ಕಾಲ “ಟುಮಾರೊ” ಎಂಬ ಪತ್ರಿಕೆಯ ಸಂಪಾದಕರಾಗಿದ್ದರು.

ಸದಾ ಧ್ಯಾನ-ಅಧ್ಯಯನಗಳಲ್ಲಿ ನಿರತರಾಗಿದ್ದ ತಮ್ಮ ಅಜ್ಜನ ಪ್ರಭಾವದಿಂದಾಗಿ, ರಾಜಾ ರಾವ್‌ಗೆ ಬಾಲ್ಯದಿಂದಲೇ ಭಾರತೀಯ ತತ್ವಜ್ಞಾನದ ಬಗ್ಗೆ, ವಿಶೇಷವಾಗಿ ಶಂಕರರ ಅದ್ವೈತ ದರ್ಶನದ ಬಗ್ಗೆ ಅಪಾರ ಆಸಕ್ತಿ ಬೆಳೆದಿತ್ತು. ಫ್ರಾನ್ಸ್‌ಗೆ ಉಚ್ಚ ಶಿಕ್ಷಣಕ್ಕಾಗಿ ತೆರಳಿದನಂತರ, ಮೊದಲ ಬಾರಿಗೆ ಭಾರತಕ್ಕೆ ಬಂದಾಗ ರಾಜಾ ರಾವ್ ಅನೇಕ ಆಧ್ಯಾತ್ಮಿಕ ಕೇಂದ್ರಗಳನ್ನು ಸಂದರ್ಶಿಸಿದರು – ಮುಖ್ಯವಾಗಿ, ಗಾಂಧಿಯವರ ಸೇವಾಗ್ರಾಮದ ಆಶ್ರಮ, ಪಾಂಡಿಚೆರಿಯ ಅರಬಿಂದೋ ಆಶ್ರಮ, ತಿರುವಣ್ಣಾ ಮಲೈಯಲ್ಲಿರುವ ರಮಣ ಮಹರ್ಷಿಗಳ ಆಶ್ರಮ ಇವುಗಳಲ್ಲಿ ಸಾಕಷ್ಟು ಕಾಲ ಆಧ್ಯಾತ್ಮಿಕ ಸಾಧನೆಯನ್ನು ಕೈಗೊಂಡರು. ಕೊನೆಗೆ, ಇವರ ಈ ಬಗೆಯ ಆಧ್ಯಾತ್ಮಿಕ ಅನ್ವೇಷಣೆಯ ಗುರಿಯಾಗಿದ್ದ ‘ಗುರು’ ಅವರಿಗೆ ಕೇರಳದ ತಿರುವಳ್ಳಪುರಂನಲ್ಲಿ ದೊರಕಿದರು. ಅಲ್ಲಿ ಇದ್ದ ಶ್ರೀ ಆತ್ಮಾನಂದರನ್ನು ಗುರುಗಳೆಂದು ಸ್ವೀಕರಿಸಿ, ಅಂದಿನಿಂದ ಭಾರತಕ್ಕೆ ಬಂದಾಗಲೆಲ್ಲಾ ಸಾಕಷ್ಟು ಕಾಲ ಆ ಗುರುಗಳ ಆಶ್ರಮದಲ್ಲಿ ಇರುತ್ತಿದ್ದರು.

ಪ್ರಾರಂಭದಲ್ಲಿ ಕನ್ನಡದಲ್ಲಿ ಮತ್ತು ಫ್ರೆಂಚ್ ಭಾಷೆಯಲ್ಲಿ ಕಥೆ-ಲೇಖನಗಳನ್ನು ಬರೆಯಲು ಪ್ರಾರಂಭಿಸಿದ ರಾಜಾ ರಾವ್ ಅನಂತರ ಇಂಗ್ಲೀಷ್ ಭಾಷೆಯನ್ನೇ ಸಂಪೂರ್ಣವಾಗಿ ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಆರಿಸಿಕೊಂಡರು. ಅವರು ಇಂಗ್ಲೀಷಿನಲ್ಲಿ ರಚಿಸಿದ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯುಳ್ಳ ಕಾಂತಾಪುರ ಎಂಬ ಕಾದಂಬರಿ ೧೯೩೮ರಲ್ಲಿ ಪ್ರಕಟವಾಗಿ ಇವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು. ಅನಂತರ ಅವರು ರಚಿಸಿದ ಪ್ರಮುಖ ಕಥೆ-ಕಾದಂಬರಿಗಳು ಹೀಗಿವೆ: ಸರ್ಪೆಂಟ್ ಅಂಡ್ ರೋಪ್ (೧೯೬೦); ಕ್ಯಾಟ್ ಅಂಡ್ ಶೇಕ್ಸ್ಪಿಯರ್ (೧೯೬೫); ಕಾಮ್ರೇಡ್ ಕಿರಿಲೋವ್ (೧೯೭೬); ಮತ್ತು ಚೆಸ್ ಮಾಸ್ಟರ್ ಅಂಡ್ ಹಿಸ್ ಮೂವ್ಸ್ (೧೯೮೮). ಈ ಕಾದಂಬರಿಗಳಲ್ಲದೆ, ಅವರು ಎರಡು ಕಥಾಸಂಕಲನಗಳು, ಗಾಂಧೀಜಿಯವರ ಜೀವನ ಚರಿತ್ರೆ (೧೯೯೮), ಭಾರತೀಯ ಸಂಸ್ಕೃತಿ ( ಮೀನಿಂಗ್ ಆಫ್ ಇಂಡಿಯಾ, ೧೯೯೬), ಇತ್ಯಾದಿ ಕೃತಿಗಳನ್ನೂ ರಚಿಸಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಗುರುತಿಸಿ, ಅವರನ್ನು ಗೌರವಿಸಿದ ಅನೇಕ ಪದವಿ-ಪ್ರಶಸ್ತಿಗಳಲ್ಲಿ ಮುಖ್ಯವಾದವುಗಳೆಂದರೆ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ( ಸರ್ಪೆಂಟ್ ಅಂಡ್ ರೋಪ್ ಕಾದಂಬರಿಗಾಗಿ, ೧೯೬೩); ಪದ್ಮ ಭೂಷಣ ಪ್ರಶಸ್ತಿ (೧೯೬೯); ಮತ್ತು ಎರಡು ವರ್ಷಗಳಿಗೊಮ್ಮೆ ವಿಶ್ವದ ವಿಖ್ಯಾತ ಲೇಖಕರಿಗೆ ಕೊಡಲ್ಪಡುವ ‘ನೋಸ್ಟಾಟ್ ಇಂಟರ್ನ್ಯಾಶನಲ್ ಪ್ರೈಜ್ (Neustadt International Prize, ೧೯೮೮).

* * *