ಅನೇಕ ಭಾರತೀಯ ಹಾಗೂ ಯೂರೋಪಿಯನ್ ಭಾಷೆಗಳಿಗೆ ರಾಜಾ ರಾವ್ ಅವರ ಕಥೆ-ಕಾದಂಬರಿಗಳು ಅನುವಾದಗೊಂಡಿವೆ; ಅವುಗಳನ್ನು ಕುರಿತು ಸಾಕಷ್ಟು ಸ್ವತಂತ್ರ ಗ್ರಂಥಗಳು ಹಾಗೂ ಲೇಖನಗಳು ಪ್ರಕಟಗೊಂಡಿವೆ. ಮೊದಲಿಗೆ ರಾಜಾರಾವ್ ಅವರ ಕೃತಿಗಳನ್ನು ದೀರ್ಘವಾಗಿ ಹಾಗೂ ಆಳವಾಗಿ ವಿಶ್ಲೇಷಿಸಿ, ಅವುಗಳ ವಿಶಿಷ್ಟತೆಯನ್ನು ಓದುಗರ/ವಿಮರ್ಶಕರ ಗಮನಕ್ಕೆ ತಂದವರು ಪ್ರೊ. ಸಿ.ಡಿ. ನರಸಿಂಹಯ್ಯನವರು. (ಅವರಿಬ್ಬರ ನಡುವೆ ಎಷ್ಟು ಗಾಢವಾದ ಸ್ನೇಹಾದರಗಳಿದ್ದುವೆಂದರೆ ಭಾರತಕ್ಕೆ ಬಂದಾಗಲೆಲ್ಲಾ ರಾಜಾ ರಾವ್ ಸಿ.ಡಿ.ಎನ್. ಅವರ ಧನ್ಯಾಲೋಕಕ್ಕೆ ಭೇಟಿ ನೀಡಿ ಕೆಲ ದಿನಗಳು ಅಲ್ಲಿಯೇ ಇರುತ್ತಿದ್ದರು. ನಾನು ಮೊದಲು ರಾಜಾರಾವ್ ಅವರನ್ನು ನೋಡಿದುದು ಧ್ಯನ್ಯಾಲೋಕದಲ್ಲಿಯೇ). ಅನಂತರ, ಬಹು ಬೇಗ ರಾಜಾರಾವ್ ಅವರ ಕಾದಂಬರಿಗಳನ್ನು ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿದ್ವಾಂಸರು ಅಧ್ಯಯನ ಮಾಡಲು ಪ್ರಾರಂಭಿಸಿದರು. ಈ ಲೇಖನದಲ್ಲಿ ನಾನು ಅವರ ಒಂದೆರಡು ಪ್ರಮುಖ ಕಾದಂಬರಿಗಳನ್ನು ಮಾತ್ರ ಗಮನಿಸಿದ್ದೇನೆ.

ಈ ಸಂದರ್ಭದಲ್ಲಿಯೇ ರಾಜಾರಾವ್ ಅವರಿಗೂ ಮತ್ತು ಅವರ ಸಮಕಾಲೀನ ಭಾರತೀಯ (ಇಂಗ್ಲೀಷ್) ಕಾದಂಬರಿಕಾರರಿಗೂ ಇರುವ ಭಿನ್ನತೆಗಳನ್ನು ಗಮನಿಸಿ ಮುಂದುವರೆಯುವುದು ಸೂಕ್ತ. ಸರಿ ಸುಮಾರು ಒಂದೇ ಕಾಲ ಘಟ್ಟದಲ್ಲಿ ಮುಲ್ಕ್‌ರಾಜ್‌ ಆನಂದ್, ಆರ್.ಕೆ. ನಾರಾಯಣ್, ಮತ್ತು ರಾಜಾರಾವ್ ಕಾದಂಬರಿ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದರು. ಆನಂದ್ ಅವರು ರಾಷ್ಟ್ರೀಯ ನೆಲೆಯಲ್ಲಿ ‘ಪ್ರಗತಿಶೀಲ ಚಳುವಳಿ’ಯಲ್ಲಿ ಪ್ರಮುಖರಾಗಿದ್ದು, ಎಡ ಪಂಥೀಯ ಚಿಂತನೆಯನ್ನು ಒಪ್ಪಿಕೊಂಡು ಅದಕ್ಕೆ ಬದ್ಧರಾಗಿ ಬರೆಯುತ್ತಿದ್ದರು; ಆದ್ದರಿಂದ ಅವರ ಪ್ರತಿಯೊಂದು ಕಾದಂಬರಿಯೂ ಅಸ್ಪೃಶ್ಯತೆ, ಕಾರ್ಮಿಕರ ಬದುಕು, ಇತ್ಯಾದಿ ಸಾಮಾಜಿಕ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ನಾರಾಯಣ್ ಅವರು ತಮ್ಮ ವಿಶಿಷ್ಟ ವೈನೋದಿಕ ಪ್ರತಿಭೆಯ ಮೂಲಕ ವೇಗವಾಗಿ ಸ್ಥಿತ್ಯಂತರಗೊಳ್ಳುತ್ತಿರುವ ಭಾರತೀಯ ಸಮಾಜದ ಚಿತ್ರವನ್ನು ತಮ್ಮ ಕಾದಂಬರಿಗಳಲ್ಲಿ ಕಟ್ಟಿಕೊಟ್ಟರು. ಆದರೆ, ಇವರಿಬ್ಬರಿಗಿಂತಲೂ ಭಿನ್ನವಾಗಿದ್ದ ರಾಜಾ ರಾವ್ ಕಾಂತಾಪುರದ ನಂತರ ಬರೆದ ತಮ್ಮೆಲ್ಲಾ ಕಾದಂಬರಿಗಳಲ್ಲೂ ವ್ಯಕ್ತಿ ಮತ್ತು ಅವನ ತಾತ್ವಿಕ ಶೋಧ, ವ್ಯಕ್ತಿ ಮತ್ತು ದೇವರು ಇವರುಗಳ ಸಂಬಂಧ ಈ ಆಶಯಗಳನ್ನು ತಮ್ಮ ಕಾದಂಬರಿಗಳಲ್ಲಿ ಪ್ರಮುಖವಾಗಿ ವಿಶ್ಲೇಷಿಸಿದರು. ಸಾಮಾಜಿಕ ಕಾಳಜಿ ಮತ್ತು ವೈನೋದಿಕ ದೃಷ್ಟಿಕೋನ ಇವೆರಡೂ ಇಲ್ಲದ, ಅವರ ಕಾದಂಬರಿಗಳನ್ನು ‘ದಾರ್ಶನಿಕ ಕಾದಂಬರಿ’ (`Metaphisical Novels’) ಎಂದು ಗುರಿತಿಸಬಹುದು.

ರಾಜಾರಾವ್ ಅವರ ಮೊದಲನೆಯ ಕಾದಂಬರಿ ಕಾಂತಾಪುರ ಮಾತ್ರ ಮೇಲಿನ ಹೇಳಿಕೆಗಳಿಗೆ ಒಂದು ಅಪವಾದ; ಮತ್ತು ಭಾರತೀಯ ಇಂಗ್ಲೀಷ್ ಸಾಹಿತ್ಯದಲ್ಲಿ ಅತ್ಯಂತ ಯಶಸ್ವಿ ‘ರಾಜಕೀಯ ಕಾದಂಬರಿ’. ಭಾರತದ ಲಕ್ಷಾಂತರ ಹಳ್ಳಿಗಳಂತೆ ಹಳೆಯ ಮೈಸೂರು ಪ್ರಾಂತ್ಯದ (ಕಾಲ್ಪನಿಕ) ಕಾಂತಾಪುರವೂ ಒಂದು ಹಳ್ಳಿ. ಈ ಹಳ್ಳಿಯಲ್ಲಿ ಭಿನ್ನ ಜಾತಿಗಳಿಗೆ ಸೇರಿದ ಜನರು ಭಿನ್ನ ಭಾಗಗಳಲ್ಲಿ ವಾಸಿಸುತ್ತಾರೆ; ಊರಿನ ಮಧ್ಯ ಭಾಗದಲ್ಲಿ ಗ್ರಾಮದೇವತೆ ಕೆಂಚಮ್ಮನ ಗುಡಿಯಿದೆ; ಮತ್ತು ತಲೆತಲಾಂತರಗಳಿಂದ ಪರಂಪರಾಗತ ವೃತ್ತಿಗಳನ್ನೇ ಅನುಸರಿಸಿ, ಬದುಕುತ್ತಿರುವ ಹಳ್ಳಿಗರು ಶತಮಾನಗಳಿಂದಲೂ ಯಾವ ಬದಲಾವಣೆಯೂ ಇಲ್ಲದ ಒಂದೇ ಬಗೆಯ ಜೀವನವನ್ನು ನಡೆಸುತ್ತಿರುತ್ತಾರೆ.

ಇಂತಹ ಹಳ್ಳಿಗೆ (ಸುಮಾರು ೧೯೨೦ರ ದಶಕದಲ್ಲಿ) ಪಟ್ಟನದಿಂದ ಮೂರ್ತಿ ಬಂದಾಗ, ಅಲ್ಲಿಯ ಸಾಮೂಹಿಕ ಬದುಕಿನಲ್ಲಿ ಅದ್ಭುತ ಚಲನೆಯುಂಟಾಗುತ್ತದೆ. ಅಶಿಕ್ಷಿತ ಹಳ್ಳಿಗರನ್ನು ಒಟ್ಟು ಸೇರಿಸಿ, ಮೂರ್ತಿ ಅವರಿಗೆ ಗಾಂಧಿ ತತ್ವಗಳು, ಗಾಂಧಿಯ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿ, ಇತ್ಯಾದಿಗಳನ್ನು ಹರಿಕಥೆಗಳ ರೂಪದಲ್ಲಿ ಪರಿಚಯಿಸುತ್ತಾನೆ; ಮದ್ಯಪಾನ ನಿರೋಧ, ಅಸ್ಪೃಶ್ಯತಾ ನಿರ್ಮೂಲನ, ಇತ್ಯಾದಿ ಸುಧಾರಣಾ ಕಾರ್ಯಗಳಿಗೆ ಅವರನ್ನು ಒಲಿಸುತ್ತಾನೆ. ಗಾಂಧಿ ಮತ್ತು ಸ್ವಾತಂತ್ರ್ಯ ಚಳುವಳಿಯನ್ನು ತಮ್ಮದೇ ಆದ ಪೌರಾಣಿಕ ಚೌಕಟ್ಟಿನಲ್ಲಿ ಅರ್ಥಮಾಡಿಕೊಂಡ ಹಳ್ಳಿಯ ಜನರು ಒಟ್ಟಾಗಿ ಬ್ರಿಟಿಷ್ ಸರಕಾರಕ್ಕೆ ಕೊಡಬೇಕಾದ ತೆರಿಗೆಯನ್ನು ಕೊಡದೆ ‘ಕರನಿರಾಕರಣ ಚಳುವಳಿ’ಯನ್ನು ಹೂಡುತ್ತಾರೆ. ಆದರೆ, ಆಡಳಿತವನ್ನು ಪ್ರತಿನಿಧಿಸುವ ಪೊಲೀಸರು ಮತ್ತು ಫ್ಯೂಡಲ್ ವ್ಯವಸ್ಥೆಯ ಮುಖಂಡರು ಈ ಬದಲಾವಣೆಯನ್ನು ವಿರೋಧಿಸುತ್ತ, ಅನೇಕ ನಿಷ್ಪಾಪ ಹಳ್ಳಿಗರನ್ನು ಜೈಲಿಗೆ ಅಟ್ಟುತ್ತಾರೆ. ಕೊನೆಗೆ, ಜೈಲಿನಿಂದ ಹೊರಗುಳಿದ ಹಳ್ಳಿಗರೆಲ್ಲರೂ ತಮ್ಮ ಹಳ್ಳಿಯನ್ನೇ ಬಿಟ್ಟು ದೂರ ಹೋಗುತ್ತಾರೆ.

ಈ ಕಾದಂಬರಿಯ ವೈಶಿಷ್ಟ್ಯವೆಂದರೆ, ಇದರಲ್ಲಿ ಯಾವ ಅಸಾಮಾನ್ಯ ನಾಯಕ-ನಾಯಕಿಯರೂ ಇಲ್ಲ; ಮತ್ತು ಯಾವ ಮಹತ್ವ ಘಟನೆಯೂ ನಡೆಯುವುದಿಲ್ಲ. ಈ ಕಾದಂಬರಿಯ ನಿರೂಪಕಿಯೂ ಓರ್ವ ಅಶಿಕ್ಷಿತ ವೃದ್ಧ ಮಹಿಳೆ (ರಂಗಮ್ಮ); ಮತ್ತು ಅವಳ ನಿರೂಪಣೆ ಯಾವ ಅಲಂಕಾರವೂ ಇಲ್ಲದ ಸರಳ ರೀತಿಯಲ್ಲಿ, ನಿಧಾನವಾಗಿ ಸಾಗುತ್ತದೆ. ಈ ಬಗೆಯ ಚಿತ್ರಣದಿಂದ ಹೇಗೆ ಗಾಂಧಿ ಮತ್ತು ಅವರ ತತ್ವಗಳು ಅಜ್ಞಾತ ಹಳ್ಳಿ-ಹಳ್ಳಿಗಳಿಗೂ ತಲಪಿದುವು ಮತ್ತು ಹೇಗೆ ಬಡ ಹಾಗೂ ಅಶಿಕ್ಷಿತ ಸಾಮಾನ್ಯ ಜನರೂ ಅವರ ತತ್ವಗಳಿಂದ ಪ್ರಭಾವಿತರಾಗಿ ಬ್ರಿಟಿಷರ ವಿರುದ್ಧ ಅಸಾಮಾನ್ಯ ಹೋರಾಟವನ್ನು ಹೂಡಿದರು ಎಂಬುದನ್ನು ಕಾದಂಬರಿ ಮನೋಜ್ಞವಾಗಿ ದಾಖಲಿಸುತ್ತದೆ.

ಕಾಂತಾಪುರದ ನಂತರ ಬಂದ ಎಲ್ಲಾ ಕಾದಂಬರಿಗಳನ್ನೂ ‘ಆಧ್ಯಾತ್ಮಿಕ ಶೋಧ’ವನ್ನು ಕೇಂದ್ರವಾಗುಳ್ಳ ದಾರ್ಶನಿಕ ಕಾದಂಬರಿಗಳೆಂದು ಪರಿಗಣಿಸಬಹುದು. ಈ ಕೃತಿಗಳಲ್ಲಿ ಶಂಕರಾಚಾರ್ಯರ ಅದ್ವೈತ ದರ್ಶನ ಎಷ್ಟು ವ್ಯಾಪಕವಾಗಿದೆಯೆಂದರೆ, ರಾಜಾ ರಾವ್ ಅವರನ್ನು ಶಂಕರರ ಸಾಹಿತ್ಯಕ ರೂಪವೆಂದೇ ಕಾಣಬಹುದು. ಅವರ ಎರಡನೆಯ ಕಾದಂಬರಿ ಸರ್ಪೆಂಟ್ ಅಂಡ್ ರೋಪ್ ಶಂಕರರ ಮಾಯಾವಾದವನ್ನು ‘ಸರ್ಪ-ರಜ್ಜು’ ರೂಪಕದ ಮೂಲಕ ದಾಖಲಿಸುತ್ತದೆ. ಕತ್ತಲಿನಲ್ಲಿ ನಾವು ಹಗ್ಗವನ್ನೇ ಹಾವೆಂದು ಬಗೆಯುವ ರೀತಿಯಲ್ಲಿ, ಅವಿದ್ಯೆಯ ಕಾರಣದಿಂದ ನಾವು – ಮರ್ತ್ಯ ಜೀವಿಗಳು – ಈ ಮಾಯಾಲೋಕವನ್ನೇ ಸತ್ಯವೆಂದು ಗ್ರಹಿಸಿ, ಅನೇಕ ಬಗೆಯ ತುಮುಲ-ಘರ್ಷಣೆಗಳನ್ನು ಅನುಭವಿಸುತ್ತೇವೆ. ಈ ಮಾಯೆಯ ತೆರೆ ಸರಿದಾಗ ಮಾತ್ರ ನಾವು ಸತ್ಯವನ್ನು ಅರಿಯಲು ಸಮರ್ಥವಾಗುತ್ತೇವೆ. ಕಾದಂಬರಿಯ ನಾಯಕನಾದ ರಾಮಸ್ವಾಮಿ ಭಾರತದಲ್ಲಿ ಪರಂಪರಾಗತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ಫ್ರಾನ್ಸ್‌ಗೆ ಹೋಗಿ, ಅಲ್ಲಿ ಫ್ರೆಂಚ್ ಯುವತಿ ಮೆಡಲೀನ್‌ಳನ್ನು ಮದುವೆಯಾಗಿ, ಭಿನ್ನ ಸಂಸ್ಕಾರ-ಸಂಸ್ಕೃತಿಗಳ ಕಾರಣದಿಂದ ಇನ್ನಿಲ್ಲದ ವ್ಯಥೆ-ನೋವುಗಳನ್ನು ಅನುಭವಿಸಿ, ಕೊನೆಗೆ ಆತ್ಮಜ್ಞಾನವನ್ನು ತನಗೆ ಕೊಡಬಲ್ಲ ಗುರುವನ್ನು ಅರಿಸಿಕೊಂಡು ಭಾರತಕ್ಕೆ ಮರಳುತ್ತಾನೆ. ‘ಕೋಹಂ?’ – ಎಂದು ಸದಾ ಪ್ರಶ್ನಿಸುತ್ತಾ, ಉತ್ತರಗಳಿಗಗಿ ಸದಾ ತಪತಪಿಸುವ ರಾಜಾರಾವ್ ಅವರ ನಾಯಕರಲ್ಲಿ ಮೊದಲನೆಯವರು ರಾಮಸ್ವಾಮಿ.

ಚೆಸ್ಮಾಸ್ಟರ್ ಅಂಡ್ ಹಿಸ್ ಮೂವ್ಸ್ಮಹತ್ವಾಕಾಂಕ್ಷೆಯ ೭೦೦ ಪುಟಗಳ ಕಾದಂಬರಿ; ಮತ್ತು ಆಧ್ಯಾತ್ಮಿಕ ಶೋಧದ ಆಶಯ ಇದರಲ್ಲಿ ಇನ್ನೂ ಹೆಚ್ಚು ವ್ಯಾಪಕವಾಗಿದೆ. ಕಾದಂಬರಿಯ ಕಾಲ ಎರಡು ವಾರಗಳಿಗೆ ಸೀಮಿತವಾಗಿದೆ. ಮುಖ್ಯ ಪಾತ್ರವಾದ ಶಿವರಾಮ ಶಾಸ್ತ್ರಿ ಗಣಿತಜ್ಞ ಮತ್ತು ಪ್ಯಾರಿಸ್‌ನಲ್ಲಿ ಉನ್ನತ ಸಂಶೋಧನೆಯನ್ನು ಕೈಗೊಂಡಿರುತ್ತಾನೆ. ಅವನ ತಂಗಿ ಉಮಾ ಮತ್ತು ಅವನ ಗೆಳತಿ ಜಯಾ ಪ್ಯಾರಿಸ್‌ಗೆ ಬಂದು, ಅವನೊಡನೆ ಎರಡು ವಾರಗಳಿದ್ದು ಅನಂತರ ಭಾರತಕ್ಕೆ ಮರಳುವಲ್ಲಿಗೆ ಕಾದಂಬರಿ ಮುಗಿಯುತ್ತದೆ. ಸುಸಂಬದ್ಧ ಕಥೆಯಾಗಲಿ ಸಂಕೀರ್ಣ ಪಾತ್ರಗಳಾಗಲಿ ಇಲ್ಲದಿರುವ ಈ ಕಾದಂಬರಿ ಉದ್ದಕ್ಕೂ ಶಿವರಾಮ ಶಾಸ್ತ್ರಿಯ ಆತ್ಮ ನಿರೀಕ್ಷಣೆ, ಭಿನ್ನ ಸ್ತ್ರೀಯರೊಡನೆ ಅವನು ಸ್ಥಾಪಿಸಲಾಗದ ಸಂಬಂಧಗಳು, ಮತ್ತು ಸಾಂಕರದರ್ಶನ, ಬೌದ್ದ-ಜೈನ ದರ್ಶನಗಳು, ಪಾಶ್ಚಿಮಾತ್ಯ ಭೌತಿಕವಾದ, ಇತ್ಯಾದಿಗಳ ಜಿಜ್ಞಾಸೆ-ಇವುಗಳನ್ನು ಪ್ರಜ್ಞಾಪ್ರವಾಹ ತಂತ್ರದ ಮೂಲಕ ದಾಖಲಿಸುತ್ತದೆ. ಕೃತಿಯುದ್ದಕ್ಕೂ ಕಾಳಿದಾಸನ ಕಾವ್ಯ-ನಾಟಕಗಳಿಂದ, ಭಗವದ್ಗೀತೆಯಿಂದ ಮತ್ತು ಶಂಕರರ ಪ್ರಖ್ಯಾತ ಸ್ತ್ರೋತ್ರಗಳಿಂದ ದೀರ್ಘ ಉದ್ಧರಣಗಳು (ಅನುವಾದವಿಲ್ಲದೆ, ಲಿಪ್ಯಂತರವಾಗಿ) ಬರುತ್ತವೆ. ಗಣಿತಜ್ಞನಾದ ಶಾಸ್ತ್ರಿ ಒಂದು ಸಂದರ್ಭದಲ್ಲಿ ತರ್ಕ-ಸ್ಫೂರ್ತಿ, ಪುರುಷ-ಸ್ತ್ರೀ, ಪೂರ್ವ-ಪಶ್ಚಮಿ, ವಾಸ್ತವ-ಭ್ರಮೆ, ಇತ್ಯಾದಿ ಈ ಜಗತ್ತಿನಲ್ಲಿರುವ ಎಲ್ಲಾ ದ್ವಿಮಾನ ವಿರೋಧಗಳನ್ನೂ ಗಣಿತದಲ್ಲಿ ಕಂಡುಬರುವ ಮೂಲಭೂತ ‘ಶೂನ್ಯ-ಅನಂತ’ (zero -infinity) ಈ ಮೂಲ ಮಾದರಿಯ ವಿನ್ಯಾಸಗಳೆಂದು ಮಂಡಿಸುತ್ತಾನೆ.

ರಾಜಾರಾವ್ ಅವರ ಈ ಬಗೆಯ ಕಾದಂಬರಿಗಳ ಬಗ್ಗೆ ಸಾರ್ವತ್ರಿಕ ಮೆಚ್ಚುಗೆಯನ್ನು ನಿರೀಕ್ಷಿಸುವುದು ಬಾಲಿಶವಾಗುತ್ತದೆ. ಅನೇಕ ವಿದ್ವಾಂಸರು-ವಿಮರ್ಶಕರು ರಾಜಾ ರಾವ್ ಅವರ ಕೃತಿಗಳನ್ನು ಕುರಿತು ಎರಡು ನೆಲೆಗಳಲ್ಲಿ ತಮ್ಮ ಅತೃಪ್ತಿಯನ್ನು ಮಂಡಿಸುತ್ತಾರೆ: ಕಾದಂಬರಿಕಾರರ ಭಾರತೀಯ ಸಂಸ್ಕೃತಿಯನ್ನು ಕುರಿತ ಪಾರ್ಶಿಕ ನಿಲುವು ಮತ್ತು ಅವರ ಕಾದಂಬರಿಗಳಲ್ಲಿ ತಾತ್ವಿಕ ಚಿಂತನೆಗೆ ಬಿದ್ದಿರುವ ಅಸಮರ್ಥನೀಯ ಒತ್ತು. ತಮ್ಮ ಸರ್ಪೆಂಟ್ ಅಂಡ್ ರೋಪ್ ಮತ್ತು ಚೆಸ್ ಮಾಸ್ಟರ್ ಕೃತಿಗಳಲ್ಲಿ ಪಾಶ್ಚಿಮಾತ್ಯ ಸಾಹಿತ್ಯ-ಸಂಸ್ಕೃತಿಗಳನ್ನು ಅತ್ಯಂತ ವಿಮರ್ಶಾತ್ಮಕವಾಗಿ (ಓರ್ವ ವಿಮರ್ಶಕನು ಹೇಳುವಂತೆ, ‘ತುಂಬಾ ಸೂಕ್ಷ್ಮ ದುರ್ಬೀನಿನಿಂದ’) ವಿಶ್ಲೇಷಿಸಿದರೆ, ಭಾರತೀಯ ಸಾಹಿತ್ಯ-ಸಂಸ್ಕೃತಿಗಳನ್ನು ಅಪಾರ ಪ್ರೀತ್ಯಭಿಮಾನಗಳಿಂದ ಹಾಗೂ ಮೆಚ್ಚುಗೆಯಿಂದ ಅವಿಮರ್ಶಾತ್ಮಕವಾಗಿ ಕೀರ್ತಿಸುತ್ತಾರೆ. ಒಂದು ಸಂದರ್ಭದಲ್ಲಿ ರಾಮಸ್ವಾಮಿ ಭಾರತದ ಬಗ್ಗೆ ಹೀಗೆ ಭಾವುಕನಾಗಿ ಚಿಂತಿಸುತ್ತಾನೆ: “(ಭಾರತದಲ್ಲಿ) ಭೂತ-ವರ್ತಮಾನಗಳೆರಡೂ ಒಂದು ಸಂಪೂರ್ಣ ಅನುಭವವಾಗಿ ಎಂದೆಂದಿಗೂ ಹೆಣೆಯಲ್ಪಟ್ಟಿವೆ… ಗಂಗಾ ನದಿಯಲ್ಲಿ ಚಲಿಸುತ್ತಿದ್ದಂತೆ ಯಾರು ತಾನೆ ಆ ‘ಅಪಾರ ಕರುಣಾಮಯಿಯು’- ಬುದ್ಧನು – ಅಲ್ಲಿಯೇ ಒಂದು ಕಡೆ, ಸರಯೂ ನದಿಯ ತೀರದಲ್ಲಿ, ತನ್ನ ಕಮಂಡಲುವನ್ನು ತೊಳೆಯುತ್ತಿದ್ದಾನೆಂದು ಭಾವಿಸುವುದಿಲ್ಲ? (‘…where the past and the present are for ever knit into one whole experience-going down the Ganges who could not imagine the Compassionate One Himself coming down the footpath, by the Sarayu, to wash the mendicant bowl! p. 35) ಮತ್ತೊಂದು ಸಂದರ್ಭದಲ್ಲಿ, ರಾಮನು ಹೀಗೆ ಉದ್ಗರಿಸುತ್ತಾನೆ: “ ‘ಸತ್ಯ’ ವೆಂದರೆ ಹಿಮಾಲಯ ಮತ್ತು ಗಂಗೆಯೆಂದರೆ ಮಾನವಸಂಕುಲ” (‘Truth is the Himalaya, and Ganges humanity,’ p.35). ಈ ನಿಲುವು ಅನಾದಿ ಕಾಲದಿಂದ ಭಾರತೀಯ ಸಂಸ್ಕೃತಿ-ಸಮಾಜಗಳಲ್ಲಿರುವ ಆಂತರಿಕ ಕ್ರೌರ್ಯ-ಘರ್ಷಣೆಗಳು ಮತ್ತು ವರ್ತಮಾನದ ಜ್ವಲಂತ ಸಮಸ್ಯೆಗಳು ಇವೆಲ್ಲವನ್ನೂ ನಿರ್ಲಕ್ಷಿಸುವ ನಿಲುವು. ಇನ್ನೊಂದು ನೆಲೆಯಲ್ಲಿ, ವಿಶೇಷವಾಗಿ ಚೆಸ್ಮಾಸ್ಟರ್ ಕಾದಂಬರಿಯಲ್ಲಿ ಬೌದ್ಧಿಕ ಚಿಂತನೆಯೇ ಪ್ರಮುಖವಾಗಿ, ಪುನರುಕ್ತಿ ಮತ್ತು ಪದ ಬಾಹುಳ್ಯ ವ್ಯಾಪಕವಾಗಿ ಕಂಡು ಬರುತ್ತವೆ. ಪ್ರಾಯಃ, ಈ ಸಂಗತಿಯ ಅರಿವು ರಾಜಾರಾವ್ ಅವರಿಗೂ ಇತ್ತೆಂದು ಕಾಣುತ್ತದೆ. ಕಾಮ್ರೇಡ್ ಕಿರಿಲೋವ್ ಕಾದಂಬರಿಯಲ್ಲಿ ಬರುವ ನಿರೂಪಕ ‘ಆರ್’ ಬಗ್ಗೆ ಐರೀನ್ ಎಂಬ ಒಂದು ಪಾತ್ರ ಹೀಗೆ ಹೇಳುತ್ತದೆ: “ಅನುಚಿತವೆನಿಸುವಷ್ಟು ವಾಚಾಳಿತನವೇ ಅವನ ದೌರ್ಬಲ್ಯವಾಗಿತ್ತು. ಆದರೆ, ಎಂತಹ ಸ್ಪಷ್ಟ ಹಾಗೂ ನೇರ ನುಡಿ- ಅಮೂರ್ತ ಚಿಂತನೆಯ ಬಗ್ಗೆ ಅವನಿಗಿರುವ ಎಂತಹ ಮಗುವಿನಂತಹ, ತಿದ್ದಲಾಗದ ಆಸಕ್ತಿ!” (‘His weakness is too many words. But such evident, hopeless, dependence upon the abstract!’ p. 119)

ರಾಜಾರಾವ್ ಇಂದು ನಮಗೆ, ಭಾರತೀಯರಿಗೆ, ಮತ್ತು ಒಂದು ನೆಲೆಯಲ್ಲಿ ಹೆಚ್ಚು ಪ್ರಸ್ತುತವಾಗುತ್ತಾರೆ – ಇಂಗ್ಲೀಷ್ ಭಾಷೆಯನ್ನು ಸಾಹಿತ್ಯಕ ಮಾಧ್ಯಮವಾಗಿ ಹೇಗೆ ಉಪಯೋಗಿಸಬೇಕು ಎಂದು ಅವರು ಮಾಡಿದ ಚಿಂತನೆ ಮತ್ತು ಹಾಕಿಕೊಟ್ಟ ಮಾದರಿ ಇವುಗಳ ನೆಲೆಯಲ್ಲಿ. ಈ ಪ್ರಶ್ನೆಯನ್ನು ಅವರು ತಮ್ಮ ಮೊದಲನೆಯ ಕಾದಂಬರಿಯ ಮುನ್ನುಡಿಯಲ್ಲಿಯೇ ಎತ್ತಿ, ತಮ್ಮ ವಾದವನ್ನು ಹೀಗೆ ಮಂಡಿಸುತ್ತಾರೆ: “ಇಂಗ್ಲೀಷಿನಲ್ಲಿ ಬರೆಯುವ ಭಾರತೀಯನೊಬ್ಬನು ತನ್ನದಲ್ಲದ ಭಾಷೆಯಲ್ಲಿ ತನ್ನದೇ ಆದ ಮನಸ್ಸನ್ನು ಹಾಗೂ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಬೇಕಾಗುತ್ತದೆ; ವಿಶಿಷ್ಟ ಆಲೋಚನಾ ಕ್ರಮವನ್ನು, ಅದರ ಸೂಕ್ಷ್ಮಾತಿ ಸೂಕ್ಷ್ಮ ವಿನ್ಯಾಸಗಳನ್ನು, ಮತ್ತು ಆ ಕ್ರಮವು ಒಳಗೊಳ್ಳುವ ಹಾಗೂ ತಿರಸ್ಕರಿಸುವ ಅಂಶಗಳನ್ನು ಸೆರೆಹಿಡಿಯಬೇಕಾಗುತ್ತದೆ… ಬ್ರಿಟಿಷರಂತೆ ನಾವು ಇಂಗ್ಲೀಷಿನಲ್ಲಿ ಬರೆಯಲಾಗುವುದಿಲ್ಲ; ಬರೆಯಕೂಡದು.”

ಈ ಬಗೆಯ ಖಚಿತ ಸೈದ್ಧಾಂತಿಕ ನೆಲೆಯಿಂದ ಅವರು ಇಂಗ್ಲೀಷಿನಲ್ಲಿ ಬರೆಯುವಾಗಲೂ ಕನ್ನಡದ ವಾಕ್ಯರಚನಾ ಕ್ರಮ, ಸಂಶೋಧನೆಗಳು ಮತ್ತು ಉಪಯೋಗಿಸುವ ಗಾದೆ- ಆಡುಮಾತುಗಳು, ವಿಶಿಷ್ಟ ಸಾಂಸ್ಕೃತಿಕ ವಿವರಗಳು – ಇವೆಲ್ಲವನ್ನೂ ಇಂಗ್ಲೀಷಿನಲ್ಲಿ ಪ್ರತಿಫಲಿಸಲು ಪ್ರಯತ್ನಿಸುತ್ತಾರೆ. ಹಾಗೆಯೇ, ನಿರೂಪಣೆಯಲ್ಲಿಯೂ ಭಾರತೀಯ ಮಾದರಿಗಳನ್ನು ಅನುಸರಿಸುತ್ತಾರೆ. ಉದಾಹರಣೆಗೆ: ಕಾಂತಾಪುರದ ನಿರೂಪಕಿ ಹೇಳುವ ಕಥೆಯನ್ನು ಪೌರಾಣಿಕ ದಂತಕಥೆಗಳು, ಐತಿಹ್ಯಗಳು, ಇತ್ಯಾದಿಗಳನ್ನೊಳಗೊಂಡ ‘ಸ್ಥಳಪುರಾಣ’ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಒಬ್ಬರನ್ನು ನಾವು ಸಂಬೋಧಿಸುವಾಗ ಉಪಯೋಗಿಸುವ ‘ರೆ’ ಪ್ರತ್ಯಯವನ್ನು ಇಂಗ್ಲೀಷಿನಲ್ಲಿಯೂ ಉಪಯೋಗಿಸುತ್ತಾರೆ (‘Bhattare’); ಮತ್ತು ನಾವು ಹಳ್ಳಿಗಳಲ್ಲಿ ಸ್ಥಳವಿಶೇಷಣಗಳನ್ನು ಬಳಸಿ ಒಬ್ಬರನ್ನು ಗುರುತಿಸುವುದನ್ನು ಅವರು ನೇರವಾಗಿ ಭಾಷಾಂತರಿಸುತ್ತಾರೆ: ‘ಮೂಲೆಮನೆ ಮೂರ್ತಿ’ (`Cornerhouse Moorthy’), ‘ಮುಂದಿನ ಮನೆ ಅಕ್ಕಮ್ಮ’ (‘Front House Akkamma), ಒಂದೇ ಸಮನೆ ಮಾತನಾಡುವ ವೆಂಕಮ್ಮ (’Waterfall Venkamma’), ಇತ್ಯಾದಿ. ಹಾಗೆಯೇ ರೂಪಕಾತ್ಮಕ ಕನ್ನಡ ವಾಕ್ಯಗಳನ್ನು ನೇರವಾಗಿ ಅನುವಾದಿಸುತ್ತಾರೆ: ‘ಚಿಕ್ಕಮ್ಮ’ (‘Litter Mothe’), ‘ನಮ್ಮ ಹೊಟ್ಟೆ ಯಾಕೆ ಉರಿಸುತ್ತಿಯಾ?’ (‘Whey do you make our stomachs burn?’). ಎಲ್ಲದಕ್ಕಿಂತ ಮುಖ್ಯವಾಗಿ ಕನ್ನಡದ ಗತಿ ಹಾಗೂ ಲಯಗಳನ್ನು ಇಂಗ್ಲೀಷಿನಲ್ಲಿ ತರಲು ಪ್ರಯತ್ನಿಸುತ್ತಾರೆ (ದೀರ್ಘ ವಾಕ್ಯಗಳು, ವರ್ತಮಾನಕಾಲದ ಉಪಯೋಗ, ಪದಗಳನ್ನು ಪುನರುಚ್ಚರಿಸುವುದು, ಇತ್ಯಾದಿ). ಒಟ್ಟಿನಲ್ಲಿ, ಆಫ್ರಿಕಾದ ಚಿನ ಅಚಿಬೆಯಂತೆ, ರಾಜಾರಾವ್ ಅವರ ಸಿದ್ಧಾಂತವೇನೆಂದರೆ, ನಾವು ನಮ್ಮದಲ್ಲದ ಭಾಷೆಯಲ್ಲಿ ಬರೆದರೂ ಸಂವೇದನೆ ನಮ್ಮದೇ ಆಗಿರಬೇಕು ಮತ್ತು ಭಾಷಿಕ-ಸಾಂಸ್ಕೃತಿಕ ವಿವರಗಳು ನಮ್ಮ ಸಮಾಜದ್ದೇ ಆಗಿರಬೇಕು. ಈ ನಿಲುವು ಅತ್ಯಂತ ಆರೋಗ್ಯಕರ ಮತ್ತು ನಮ್ಮ ಭಾಷಿಕ-ಸಾಂಸ್ಕೃತಿಕ ಅನನ್ಯತೆಯನ್ನು ಉಳಿಸಿಕೊಳ್ಳುವ ನಿಲುವು ಎಂದು ನನಗೆ ತೋರುತ್ತದೆ.

. ಶಶಿ ದೇಶಪಾಂಡೆ

ಕನ್ನಡದ ಪ್ರಖ್ಯಾತ ನಾಟಕಕಾರ-ಕಾದಂಬರಿಕಾರರಾದ ಶ್ರೀರಂಗರ ಮಗಳಾದ, ಭಾರತೀಯ ಸ್ತ್ರೀಯರ “ದೀರ್ಘ ಮೌನ”ದ ಬಗ್ಗೆ ಆಪ್ತವಾಗಿ ಇಂಗ್ಲೀಷ್‌ನಲ್ಲಿ ಬರೆಯುವ, ಭಾರತೀಯ ಸ್ತ್ರೀಯಾಗಿ ಇಂಗ್ಲೀಷ್‌ನಲ್ಲಿ ಬರೆಯುವುದೆಂದರೆ ಇಬ್ಬಗೆಯ ತಿರಸ್ಕಾರಕ್ಕೆ ಒಳಗಾಗುವುದು (“To be a woman writing in English is to be doubly damned…”) ಎಂದು ನೇರವಾಗಿ ಹೇಳುವ, ಅಪರೂಪದ ಲೇಖಕಿ ಶಶಿ ದೇಶಪಾಂಡೆ.

ಧಾರವಾಡದಲ್ಲಿ ೧೯೩೮ ರಲ್ಲಿ ಜನಿಸಿದ ಶಶಿ ದೇಶಪಾಂಡೆ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕಾನ್ವೆಂಟ್ ಶಾಲೆಗಳಲ್ಲಿ ಪಡೆದು, ಅನಂತರ ಮುಂಬಯಿಯಲ್ಲಿ ಅರ್ಥಶಾಸ್ತ್ರವನ್ನು ಮುಖ್ಯ ವಿಷಯವನ್ನಾಗಿ ಅಧ್ಯಯನ ಮಾಡಿ ಬಿ.ಎ. ಪದವಿಯನ್ನು ಪಡೆದರು. ಅನಂತರ, ಬೆಂಗಳೂರಿನಲ್ಲಿ ಕಾನೂನು ಶಾಸ್ತ್ರದಲ್ಲಿ (ಚಿನ್ನದ ಪದಕದೊಡನೆ) ಪದವಿ ಪಡೆದು, ಇಂಗ್ಲಿಷ್ ಸಾಹಿತ್ಯದಲ್ಲಿಯೂ ಎಂ.ಎ. ಪದವಿ ಪಡೆದರು. ಅನಂತರ ಪಥಾಲಜಿಯಲ್ಲಿ ವಿಶೇಷಜ್ಞರಾದ ವೈದ್ಯರನ್ನು ಮದುವೆಯಾಗಿ ಅವರೊಡನೆ ಇಂಗ್ಲೆಂಡ್‌ನಲ್ಲಿ ಕೆಲಕಾಲವಿದ್ದರು. ಸದ್ಯ ಬೆಂಗಳೂರಿನಲ್ಲಿ ತಮ್ಮ ಪತಿಯೊಡನೆ ವಾಸಿಸುತ್ತಿದ್ದಾರೆ.

ಶಶಿ ದೇಶಪಾಂಡೆಯವರು ಇಂಗ್ಲಂಡ್‌ನಲ್ಲಿದ್ದಾಗ, ಒಂದು ಬಗೆಯ ಒತಡದಲ್ಲಿ ಸದಾ ಇರುತ್ತಿದ್ದುದನ್ನು ಗಮನಿಸಿದ ಅವರ ಪತಿ ‘ನೀನೇಕೆ ನಿನ್ನ ಅನುಭವಗಳನ್ನು ಕುರಿತು ಬರೆಯಬಾರದು?’ ಎಂದು ಸೂಚಿಸಿದರು. ಕೂಡಲೇ ತಮ್ಮ ಅತೃಪ್ತಿಗೆ ಕಾರಣ ಸೃಜನಶೀಲತೆಯ ಒತ್ತಡವಿರಬಹುದೆಂದು ಅರಿತು, ಅವರು ಮೊದಲಿಗೆ ಕಥೆಗಳನ್ನು ಬರೆಯಲು ಪ್ರಾರಂಭಿಸಿದರು. ಇವರ ಮೊದಲ ಕಥೆ ೧೯೭೦ ರಲ್ಲಿ ಪ್ರಕಟವಾದರೆ, ಇವರ ಮೊದಲ ಕಾದಂಬರಿ, ಡಾರ್ಕ್ಹೋಲ್ಡ್ಸ್ ನೋ ಟೆರರ್ ೧೯೮೦ ರಲ್ಲಿ ಪ್ರಕಟವಾಯಿತು. ಇಲ್ಲಿಯವರೆಗೆ ಅವರು ರೂಟ್ಸ್ಅಂಡ್ ಶಡೋಜ಼್ (೧೯೮೩), ದಟ್ ಲಾಂಗ್ ಸೈಲೆನ್ಸ್ (೧೯೯೮), ಮ್ಯಾಟರ್ ಆಫ್ ಟೈಮ್ (೧೯೯೯), ಇತ್ಯಾದಿ ಆರು ಕಾದಂಬರಿಗಳು; ಸಮರ್ ಅಡ್ವೆಂಚರ್ (೧೯೭೮) ಇತ್ಯಾದಿ ನಾಲ್ಕು ಮಕ್ಕಳ ದೀರ್ಘ ಕಥೆಗಳು, ಮತ್ತು ಆರು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಶಶಿ ದೇಶಪಾಂಡೆಯವರ ವಾಙ್ಮಯವನ್ನು ಕುರಿತು ಸಾಕಷ್ಟು ಪೂರ್ಣ ಪ್ರಮಾಣದ ಗ್ರಂಥಗಳು ಹಾಗೂ ವಿದ್ವತ್ಪೂರ್ಣ ಲೇಖನಗಳು ಪ್ರಕಟವಾಗಿವೆ; ಅವರ ಅನೇಕ ಕಾದಂಬರಿಗಳು ಪದವಿ ತರಗತಿಗಳಲ್ಲಿ ಪಠ್ಯಗಳಾಗಿ ವಿವಿಧ ವಿ.ವಿ.ಗಳಲ್ಲಿ ಬೋಧಿಸಲ್ಪಡುತ್ತಿವೆ. ಅವರಿಗೆ ಸಂದಿರುವ ಪ್ರಶಸ್ತಿ-ಪುರಸ್ಕಾರಗಳಲ್ಲಿ ಮುಖ್ಯವಾದವುಗಳೆಂದರೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (ದಟ್ ಲಾಂಗ್ ಸೈಲೆನ್ಸ್, ೧೯೯೦), ನಂಜನಗೂಡು ತಿರುಮಲಾಂಬಾ ಪ್ರಶಸ್ತಿ, ಇತ್ಯಾದಿ. ಸರಿ ಸುಮಾರು ಇವರ ಎಲ್ಲಾ ಕಾದಂಬರಿಗಳೂ ಭಾರತೀಯ ಮತ್ತು ಯೂರೋಪಿಯನ್ ಭಾಷೆಗಳಿಗೆ ಅನುವಾದಗೊಂಡಿವೆ.

* * *

ಶಶಿ ದೇಶಪಾಂಡೆಯವರ ಹೆಚ್ಚಿನ ಕಥೆ-ಕಾದಂಬರಿಗಳ ಕೇಂದ್ರದಲ್ಲಿ ಸ್ತ್ರೀ ಇದ್ದಾಳೆ; ಮತ್ತು ಪುರುಷಕೇಂದ್ರಿತ ಭಾರತೀಯ ಸಮಾಜ ಸ್ತ್ರೀಯನ್ನು ಹೇಗೆ ಮೂಕಳನ್ನಾಗಿಸುತ್ತದೆ ಮತ್ತು ಹೇಗೆ ಸ್ತ್ರೀಯ ವಿಶಿಷ್ಟ ವ್ಯಕ್ತಿತ್ವವೇ ಕಡೆಗಾಣಿಸಲ್ಪಡುತ್ತದೆ ಎಂಬುದನ್ನು ಅವರ ಪ್ರತಿಯೊಂದು ಕಾದಂಬರಿಯೂ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಅವರ ಒಂದು ಕಾದಂಬರಿಯ ಪುರುಷ ಪಾತ್ರ ಹೀಗೆ ಹೇಳುತ್ತದೆ: “ಅವಳೇನೂ ದುಃಖಿಯಾಗಿದ್ದಾಳೆಂದು ನನಗೆ ತೋರುವುದಿಲ್ಲ; ಹಾಗಿದ್ದರೆ ಅವಳು ಇದರ ಬಗ್ಗೆ ದೂರುತ್ತಿದ್ದಳು, ಅಲ್ಲವೆ?” ಕೌಟುಂಬಿಕ ವ್ಯವಸ್ಥೆಯಲ್ಲಿ ಸ್ತ್ರೀ ತೀವ್ರವಾಗಿ ನರಳಿದರೂ, ಅವಳ ಭಾವನೆಗಳನ್ನು ವ್ಯಕ್ತಪಡಿಸಲು ಅವಳಿಗೆ ಅವಕಾಶವೇ ಇಲ್ಲದಿದ್ದರೂ, ಅವಳೇಕೆ ಈ ಪರಿಸ್ಥಿತಿಯ ಬಗ್ಗೆ ‘ದೂರುವುದಿಲ್ಲ’ ಎಂಬುದನ್ನು, ಎಂದರೆ ಅವರೇ ಹೇಳುವಂತೆ ‘ಸ್ತ್ರೀಯರ ಮೌನದ ಹಿಂದಿರುವ ಸತ್ಯ’ವನ್ನು, ‘ಮೌನದ ಹಿಂದಿರುವ ಅನೇಕ ಧ್ವನಿ’ಗಳನ್ನು ಅವರು ತಮ್ಮ ಪ್ರತಿಯೊಂದು ಕಾದಂಬರಿಯಲ್ಲಿಯೂ ಮತ್ತು ಹೆಚ್ಚಿನ ಕಥೆಗಳಲ್ಲಿ ಬಯಲು ಮಾಡುತ್ತಾರೆ.

ಆದರೆ, ಈ ಕಾರಣದಿಂದ ಅವರನ್ನು ‘ಸ್ತ್ರೀವಾದಿ’ಯೆಂದು ಕರೆಯುವುದು, ಮತ್ತು ‘ಕೌಟುಂಬಿಕ ಕಥೆಗಳನ್ನು ಬರೆಯುವ ಲೇಖಕಿ’ ಎಂದು ಪ್ರತ್ಯೇಕವಾಗಿ ವರ್ಗೀಕರಿಸುವುದು ಅವರಿಗೆ ಸರಿತೋರುವುದಿಲ್ಲ. ಈ ವಿಷಯದ ಬಗ್ಗೆ ಒಂದು ಸಂದರ್ಭದಲ್ಲಿ ಅವರು ಹೀಗೆ ಹೇಳುತ್ತಾರೆ: “ನನ್ನನ್ನು ‘ಸ್ತ್ರೀವಾದಿ’ ಲೇಖಕಿಯೆಂದು ಗುರುತಿಸಿಕೊಳ್ಳುವುದು ನನಗಿಷ್ಟವಿಲ್ಲ. ನಾನು ಸ್ತ್ರೀವಾದಿಯಿರಬಹುದು, ಆದರೆ ಯಾವುದೇ ಒಂದು ವಾದವನ್ನು ಮಂಡಿಸಲು ನಾನು ಸಾಹಿತ್ಯ ಸೃಷ್ಟಿ ಮಾಡುವುದಿಲ್ಲ. ಮೂಲತಃ, ನನ್ನದು ಸ್ತ್ರೀಯಲ್ಲಿರುವ ಮಾನವ ವ್ಯಕ್ತಿತ್ವದ ಶೋಧ” (“I don’t like to call myself a feminist writer. I say I am a Feminist, but I don’t write to propagate an ism. Basically mine is a quest for the human self within the woman”).

ಸ್ತ್ರೀಯ ಆಳದಲ್ಲಿರುವ ಮಾನವ ವ್ಯಕ್ತಿತ್ವವನ್ನು ಶೋಧಿಸುವ ಈ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯದಲ್ಲಿ ಮೊದಲು ಅವರು ಮಾಡುವುದು ಸ್ತ್ರೀಯರ ಬಗ್ಗೆ ಭಾರತೀಯ ಸಮಾಜದಲ್ಲಿರುವ ‘ರೂಢಿಗತ ಮಾದರಿಗ’ಗಳನ್ನು ಮುರಿಯುವುದು. ಅವರು ಸಾಂದರ್ಭಿಕವಾಗಿ ಮಂಡಿಸುವಂತೆ ಮತ್ತು ಕಾದಂಬರಿಗಳಲ್ಲಿ ಸೂಚಿಸುವಂತೆ, ಪತಿಯ ನೆರಳಾಗಿ ಬದುಕುವ ಸೀತೆ, ಸಾವಿತ್ರಿ, ದ್ರೌಪದಿ ಇತ್ಯಾದಿ ಸ್ತ್ರೀತ್ವದ ಮಾದರಿಗಳು ಧರ್ಮದಿಂದ, ಪುರಾಣಗಳಿಂದ, ಸಾಹಿತ್ಯಕೃತಿಗಳಿಂದ ಸಮಾಜದಲ್ಲಿ ಸೃಷ್ಟಿಸಲ್ಪಡುತ್ತವೆ. ಅವುಗಳನ್ನು ಗ್ರಹಿಸುವುದು, ತಿರಸ್ಕರಿಸುವುದು ಮತ್ತು ಮೀರುವುದು ಶಶಿ ದೇಶಪಾಂಡೆಯವರ ಜಯಾ, ಕಲ್ಪನಾ, ಉರ್ಮಿ, ಮೀರಾ ಇತ್ಯಾದಿ ನಾಯಕಿಯರ ಬದುಕಿನ ಮುಖ್ಯ ಉದ್ದೇಶವಾಗಿರುತ್ತದೆ. ಈ ಕಾರಣದಿಂದಲೇ ಎಂದು ಕಾಣುತ್ತದೆ, ಅವರ ಕೃತಿಗಳಲ್ಲಿ ಮತ್ತೆ ಮತ್ತೆ ರಾಮಾಯಣ-ಮಹಾಭಾರತಗಳ ಉದ್ದೇಶಿತ ಮಾರ್ದನಿಗಳು ಕಂಡುಬರುತ್ತವೆ.

ಈ ಅಂಶಗಳನ್ನು ಸ್ಪಷ್ಟ ಪಡಿಸಲು ನಾವು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ದಟ್ ಲಾಂಗ್ ಸೈಲೆನ್ಸ್ ಕಾದಂಬರಿಯನ್ನು ಸ್ವಲ್ಪ ವಿವರವಾಗಿ ನೋಡಬಹುದು. ಮೂರು ಪೀಳಿಗೆಗಳ ಸ್ತ್ರೀಯರ ‘ಮೌನ’ದ ಕಥೆಯನ್ನು ಹೇಳುವ ಈ ಕೃತಿ ಮೂರನೆಯ ಪೀಳಿಗೆಯ ಜಯಾಳ ಬದುಕಿನ ಒಂದು ನಿರ್ಣಾಯಕ ಘಟ್ಟದಿಂದ ಪ್ರಾರಂಭವಾಗಿ, ಅನಂತರ ಅನೇಕ ಹಿನ್ನೋಟಗಳ ಮೂಲಕ ಜಯಾಳ ತಾಯಿ (ಆಯಿ) ಮತ್ತು ಅಜ್ಜಿ ಇವರ ಬದುಕನ್ನೂ ಕಟ್ಟಿಕೊಡುತ್ತದೆ. ಇಡೀ ಕೃತಿ ನಿರೂಪಕಿ ಜಯಾಳ ‘ಸೀಮಿತ ಉತ್ತಮ ಪುರುಷ ನಿರೂಪಣೆ’ಯ ಮೂಲಕ ಓದುಗರಿಗೆ ದೊರಕುತ್ತದೆ.

ಜಯಾಳ ಪತಿ ಮೋಹನ. ಇವನು ತನ್ನ ಬಾಲ್ಯದ ಬಡತನದ ದಾರುಣ ಅನುಭವದಿಂದ ಮಾನವ ಸಂಬಂಧಗಳ ಬಗ್ಗೆ ಹಾಗೂ ಪರಂಪರಾಗತ ಮೌಲ್ಯಗಳ ಬಗ್ಗೆ ಒಂದು ಬಗೆಯ ನಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಂಡಿರುತ್ತಾನೆ; ಅಧಿಕಾರ ಮತ್ತು ಗಣ್ಯ ಸಾಮಾಜಿಕ ಸ್ಥಾನ-ಮಾನಗಳನ್ನು ಪಡೆಯಲು ಸ್ವಾರ್ಥಿಯಾಗಿ ಯಾವ ಮಾರ್ಗವನ್ನು ಬೇಕಾದರೂ ಅವಲಂಬಿಸಲು ಸಿದ್ಧನಿರುತ್ತಾನೆ. ಕಾದಂಬರಿ ಪ್ರಾರಂಭವಾಗುವಾಗ ತನ್ನ ವ್ಯವಹಾರದಲ್ಲಿ ಮಾಡಿದ ಒಂದು ಅಪರಾಧವು ಬೆಳಕಿಗೆ ಬಂದು, ಅವರ ವಿಚಾರಣೆಯಾಗಿ ತನಗೆ ಶಿಕ್ಷೆಯಾಗಬಹುದೆಂಬ ಭೀತಿಯಿಂದ, ಮನೆಯನ್ನು ಬದಲಾಯಿಸಿ, ಎಲ್ಲರಿಂದಲೂ ಕಣ್ಣುತಪ್ಪಿಸಿಕೊಂಡು ಇರುತ್ತಾನೆ. ಹೀಗೆ ಅಜ್ಞಾತನಾಗಿ ಭೀತಿಯಿಂದ ಕಾಲ ಕಳೆಯುತ್ತಿರುವಾಗಲೇ ಅನೇಕ ವರ್ಷಗಳಿಂದ ಹೊಗೆಯಾಡುತ್ತಿದ್ದ ಪತಿ-ಪತ್ನಿಯರ ವಿರಸ ಒಂದು ಸಂದರ್ಭದಲ್ಲಿ ಸ್ಫೋಟಗೊಂಡು ಮೋಹನ ಮನೆ ಬಿಟ್ಟು ಹೋಗುತ್ತಾನೆ. ಆ ಸಂದರ್ಭದಲ್ಲಿಯೇ ಪರಿಚಿತ ದಂಪತಿಗಳೊಡನೆ ಗೋವಾ ಪ್ರವಾಸಕ್ಕೆ ಹೋಗಿದ್ದ ಜಯಾ-ಮೋಹನರ ಮಗ ಯಾರಿಗೂ ತಿಳಿಸದೆ ಗೋವಾದಿಂದ ದೂರ ಹೋಗಿ ಕೊನೆಗೆ ತನ್ನ ಚಿಕ್ಕಪ್ಪನ ಮನೆಯನ್ನು ಸೇರುತ್ತಾನೆ. ಕಾದಂಬರಿಯ ಕೊನೆ ಉದ್ದೇಶಪೂರ್ವಕವಾಗಿ ಅಸ್ಪಷ್ಟವಾಗಿದೆ: ‘ಎಲ್ಲವೂ ಸರಿಯಾಗಿದೆ’ ಎಂಬ ಮೋಹನನ ಟೆಲಿಗ್ರಾಂನ ಉಲ್ಲೇಖವಿದ್ದರೂ ಅವನು ನಿಜವಾಗಿಯೂ ಮತ್ತೆ ಜಯಾಳ ಬಳಿಗೆ ಬರುತ್ತಾನೆಯೆ? ಮಗ ರಾಹುಲ್ ಮತ್ತೆ ತಾಯಿ-ತಂದೆಯನ್ನು ಒಪ್ಪಿಕೊಂಡು ಅವರ ಬಳಿಗೆ ಬರುತ್ತಾನೆಯೆ? – ಇತ್ಯಾದಿ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿಯುತ್ತವೆ.

ಮೊಟ್ಟ ಮೊದಲಿಗೆ ಓದುಗರನ್ನು ಸೆಳೆಯುವುದು ಕಾದಂಬರಿಯ ಸಂವಿಧಾನ. ಅದು ಎಷ್ಟು ಕೌಶಲ್ಯದಿಂದ, ಎಷ್ಟು ಎಚ್ಚರಿಕೆಯಿಂದ ಕಟ್ಟಲ್ಪಟ್ಟಿದೆಯೆಂಬುದನ್ನು ಗಮನಿಸಿದಾಗ ನಮಗೆ ಆಶ್ಚರ್ಯವಾಗುತ್ತದೆ. ಆಶ್ಚರ್ಯವೇಕೆಂದರೆ, ಮೂರು ಪೀಳಿಗೆಗಳ ಹಾಗೂ ಅವರ ಹತ್ತಿರ ಬಂದ ಹತ್ತಾರು ಜನರ ಬದುಕನ್ನು ಖಚಿತ ವಿವರಗಳೊಡನೆ ದಾಖಲಿಸುವ ಈ ಕಾದಂಬರಿಯ ‘ನಿರೂಪಣಾ ಕಾಲ’ ಕೇವಲ ಎರಡು ಮೂರು ವಾರಗಳಷ್ಟು. ತಮ್ಮ ವಿಶಾಲ ಫ಼್ಲ್ಯಾಟನ್ನು ಬಿಟ್ಟು ಇನ್ನೊಂದು ಚಿಕ್ಕ ಫ್ಲ್ಯಾಟಿಗೆ ಬಂದಂದಿನಿಂದ ಪ್ರಾರಂಭವಾಗುವ ಕೃತಿ, ಆ ಫ್ಲ್ಯಾಟನ್ನು ಬಿಡಲು ಜಯಾ ನಿರ್ಧರಿಸುವುದರೊಂದಿಗೆ ಮುಗಿಯುತ್ತದೆ. ಈ ಅಲ್ಪ ಕಾಲದ ಚೌಕಟ್ಟಿನಲ್ಲಿ ನಾವು ಸುಮಾರು ೧೫-೨೦ ಪಾತ್ರಗಳ ಬದುಕನ್ನು ಆಪ್ತವಾಗಿ ಅರಿಯುತ್ತೇವೆ.

ಒಂದು ನೆಲೆಯಲ್ಲಿ ಈ ಕಾದಂಬರಿ ಮಾಡುವ ಮುಖ್ಯ ಕಾರ್ಯವೆಂದರೆ ನಮ್ಮೆದುರು ಪುರುಷಕೇಂದ್ರಿತ ವ್ಯವಸ್ಥೆಯಲ್ಲಿ ಮೂಕವಾಗಿ ನರಳುವ ಸ್ತ್ರೀಲೋಕವನ್ನು ತೆರೆದಿಡುವುದು. ಈ ಲೋಕದಲ್ಲಿ ಯಾವ ಸ್ತ್ರೀಗೂ ತನ್ನದೇ ಆದ ವ್ಯಕ್ತಿತ್ವವಿಲ್ಲ, ತನ್ನದೇ ಆದ ಇಷ್ಟಾನಿಷ್ಟಗಳಿಲ್ಲ. ಪ್ರತಿಯೊಬ್ಬರ ಬದುಕೂ ತನ್ನ ಭಯಾನಕತೆಯಿಂದ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ; ಮಧ್ಯವಯಸ್ಸಿನಲ್ಲಿಯೇ ವಿಧವೆಯಾಗಿ ತನ್ನ ಬದುಕನ್ನು ಪತಿಯ ಮಂಚದ ಮುಂದೆ ಕಳೆಯುವ ಮತ್ತು ಮುಪ್ಪಿನಲ್ಲಿ ತನ್ನ ಮಗನ ಹೆಸರನ್ನು ಕೂಗುತ್ತಾ ಭೀಕರ ಒಂಟಿತನದಿಂದ ನರಳುವ ಜಯಾಳ ಅಜ್ಜಿ; ತನ್ನ ಮಕ್ಕಳೆಲ್ಲರಿಗೂ ಬೇಡದವಳಾಗಿ (ಜಯಾ ಮತ್ತು ಇಬ್ಬರು ಗಂಡು ಮಕ್ಕಳು), ತನ್ನ ಗಂಡ ಸತ್ತನಂತರ ಆ ಮನೆಯನ್ನು ಮಾರಿ ತವರಿನಲ್ಲಿ ಒಂಟಿಯಾಗಿ ಮಕ್ಕಳ ಕರೆಯನ್ನು ನಿರೀಕ್ಷಿಸುತ್ತಾ ಬದುಕು ಕಳೆಯುವ ಜಯಾಳ ತಾಯಿ; ಅಹನ್ಯಹನಿ ಕಾಲಕ್ಷೇಪಕ್ಕೆ ಸಂಚುಕಾರವಾದಾಗಲೂ ಮೌನವಾಗಿ ಎಲ್ಲವನ್ನೂ ಸಹಿಸುತ್ತಿದ್ದು, ಕೊನೆಗೊಂದು ದಿನ ಇನ್ನು ತಡೆಯಲಾಗದೆ (ಭಕ್ತಿ ತಟ್ಟುವಾಗ) ‘ನನಗಾಗೋದಿಲ್ಲ, ನನಗಾಗೋದಿಲ್ಲ’ ಎಂದು ತನ್ನ ಮುಖಕ್ಕೆ ತಾನೇ ಹೊಡೆದುಕೊಳ್ಳುತ್ತಾ, ಅದಾದ ಒಂದು ವಾರದಲ್ಲಿಯೇ ಸಾವನ್ನಪ್ಪಿದ ಜಯಾಳ ಅತೆ; ಬಡತನ-ಖಾಯಿಲೆಗಳಿಂದ ನರಳಿ ಕೊನೆಗೆ ಭಾವಿಗೆ ಬಿದ್ದು ಸತ್ತ ಕುಸುಮಾ; ಗರ್ಭಾಶಯದಲ್ಲಿ ಗಡ್ಡೆಯಾಗಿ ಭಯಂಕರ ನೋವನ್ನು ಅನುಭವಿಸಿ ಸಾಯುವ ಮೋಹನನ ತಂಗಿ ವಿಮಲಾ; – ಇವರೆಲ್ಲರೂ ಬದುಕಿನ ಹೋರಾಟದಲ್ಲಿ ಕೇವಲ ಮೌನ ಹಾಗೂ ಶರಣಾಗತಿ ಇವುಗಳನ್ನೇ ತಮ್ಮ ಆಯುಧಗಳನ್ನಾಗಿ ಮಾಡಿಕೊಂಡು ಬದುಕಿದವರು-ಮತ್ತು ಸತ್ತವರು.

ಈ ಬಗೆಯ ಮೌನ-ನಿಟ್ಟುಸಿರುಗಳ ಬದುಕು ಕೇವಲ ಮದ್ಯಮವರ್ಗದ ಮೇಲ್ಜಾತಿಯ ಸ್ತ್ರೀಯಾರಿಗೇ ಸೀಮಿತವಾದುದಲ್ಲ ಎಂಬುದನ್ನು ದಾಖಲಿಸಲು ಲೇಖಕಿ ಕಾದಂಬರಿಯ ಅಂಚಿನಲ್ಲಿ ಸುಳಿದಾಡುವ ಅನೇಕ ಕೆಳವರ್ಗದ ಪಾತ್ರಗಳನ್ನೂ ಆಪ್ತವಾಗಿ ದರ್ಶಿಸುತ್ತಾರೆ. ಇತರರ ಮನೆಗಳಲ್ಲಿ ಕೆಲಸ ಮಾಡುವ ನಯನಾ, ಜೀಜಾ, ‘ಆ ಹೆಂಗಸು’, ಇತ್ಯಾದಿ; ಇವರೆಲ್ಲರೂ ನರಳುವುದು “ಮದುವೆ, ಕುಡುಕ ಗಂಡ, ಮಕ್ಕಳು, ಇನ್ನೂ ಹೆಚ್ಚು ಮಕ್ಕಳು, ಬಡತನ, ಅನಾರೋಗ್ಯ, ಕ್ರೌರ್ಯ, ಕೆಲಸ, ಇನ್ನು ಹೆಚ್ಚಿನ ಕೆಲಸ” ಈ ಸುಳಿಯಲ್ಲಿ ಸಿಲುಕಿ ನರಳುವವರು. ಇವರಿಗೂ ಪ್ರತಿಭಟನೆಯ ಯಾವ ಮಾರ್ಗವೂ ಇಲ್ಲ. ಇವರೆಲ್ಲರೂ ಪಿತೃಪ್ರಧಾನ ವ್ಯವಸ್ಥೆಯ ಮೌಲ್ಯಗಳನ್ನು ಅಂತರಂಗೀಕರಿಸಿ ಕೊಂಡಿದ್ದಾರೆ; ಆದರೆ ಆ ಸ್ಥಿತಿಯ ಅರಿವು ಅವರಿಗಿಲ್ಲ. ಆದ್ದರಿಂದಲೇ ನಯನಾ ತನ್ನ ಗಂಡನ ಕ್ರೌರ್ಯದ ಅರಿವಿದ್ದೂ ಗಂಡು ಮಗುವಿಗಾಗಿ ಹಂಬಲಿಸುತ್ತಾಳೆ; ಜೀಜಾ ಹತಾಶೆಯಿಂದ “ಅಮ್ಮಾ, ನಾನು ಯಾರ ಮೇಲೆ ಸಿಟ್ಟು ಮಾಡಿಕೊಳ್ಳಲಿ?… ಅದು ನಮ್ಮಿಬ್ಬರ ದುರಾದೃಷ್ಟ” ಎಂದು ನಂಬುತ್ತಾಳೆ; ಗಂಡನ ದೈಹಿಕ-ಮಾನಸಿಕ ಕ್ರೌರ್ಯವನ್ನೂ ‘ಆ ಹೆಂಗಸು’ ಸಹಿಸುತ್ತಾ, ನಿರ್ಭಾವುಕವಾಗಿ ಒಲೆಯ ಮುಂದೆ ಕುಳಿತಿರುತ್ತಾಳೆ. ಅರ್ಥಾತ್, ಮೇಲ್ವರ್ಗದ ಜಯಾ ಅಥವಾ ಆಶಾ ಅಗಲಿ ಕೆಳ ವರ್ಗದ ನಯನಾ ಅಥವಾ ಜೀಜಾ ಅಗಲಿ, ಅವರೆಲ್ಲರಿಗೂ “ಬಾಳು ಕ್ರೂರವಾದುದು ಮಾತ್ರವೇ ಅಲ್ಲ, (ಅವರು) ಹುಟ್ಟಿದಾಗಿನಿಂದಲೂ ಬದುಕಿನ ಕ್ರೌರ್ಯಕ್ಕೆ ತುತ್ತಾಗಿದ್ದಾರೆ.”

ಮತ್ತೊಂದು ನೆಲೆಯಲ್ಲಿ, ಈ ಕಾದಂಬರಿಯ ಅತಿ ಮುಖ್ಯ ಸಾಧನೆಯೆಂದರೆ, ‘ಸೀಮಿತ ಉತ್ತಮ ಪುರುಷ ನಿರೂಪಕಿ’ಯನ್ನು ಸೃಷ್ಟಿಸಿ, ನಿರೂಪಣೆಯ ಮೂಲಕವೇ ಅವಳ ಪ್ರಜ್ಞೆ ಬೆಳೆಯುವ, ಪ್ರಬುದ್ಧವಾಗುವ, ಪ್ರಕ್ರಿಯೆಯನ್ನು ದಾಖಲಿಸುವುದು. ನಿರೂಪಕಿ ಜಯಾ ಪ್ರಾರಂಭದಲ್ಲಿ ತಾನು ಲೇಖಕಿಯಾಗಿರುವುದರಿಂದ ತಾನು ತುಂಬಾ ಸಂವೇದನಶೀಲೆಯೆಂದು, ತನ್ನ ತಾಯಿ ಮತ್ತು ಅಜ್ಜಿ ಒಪ್ಪಿಕೊಂಡಿರುವ ಪುರುಷಕೇಂದ್ರಿತ ವ್ಯವಸ್ಥೆಯ ಮೌಲ್ಯಗಳಿಂದ ಮುಕ್ತಳಾಗಿರುವೆನೆಂದು, ತನ್ನ ಗಂಡ-ಮಕ್ಕಳಿಗಾಗಿ ತಾನು ತುಂಬಾ ತ್ಯಾಗಮಾಡಿದ್ದೇನೆಂದು ನಂಬಿರುತ್ತಾಳೆ. ಆಗ, ಅವಳ ದೃಷ್ಟಿಯಲ್ಲಿ ಅವಳ ಗಂಡನ ಮೋಹನ ತುಂಬಾ ಅರಸಿಕ ಮತ್ತು ಸ್ವಾರ್ಥಿ. ಆದರೆ, ದಾದರಿನ ಫ಼್ಲ್ಯಾಟ್‌ಗೆ ಬಂದನಂತರ ನೆನಪುಗಳ ಮೂಲಕ ಮತ್ತು ತನ್ನ ಹಿಂದಿನ ದಿನಚರಿಯನ್ನು ಓದುವ ಮೂಲಕ, ತನ್ನ ಬಗ್ಗೆ ತಾನು ತಿಳಿದುಕೊಂಡಿದ್ದೆಲ್ಲವೂ ಭ್ರಮೆಯೆಂದು ಅವಳಿಗೆ ನಿಧಾನವಾಗಿ ಅರಿವಾಗುತ್ತದೆ. ತನ್ನ ತಾಯಿಯು ಒಂದು ಸಂದರ್ಭದಲ್ಲಿ (ಬಡ ವಿಮಲಾ ಕಾಕಿ-ಕುಸುಮಾ ಮನೆಗೆ ಹೋದಾಗ) ಅಲ್ಲಿ ಕೊಟ್ಟುದನ್ನೇನನ್ನೂ ತಿನ್ನದೇ ದೊಡ್ಡಸ್ತಿಕೆಯನ್ನು ಮೆರೆದಂತೆ, ತಾನೂ ಅದೇ ಬಗೆಯ ದೊಡ್ಡಸ್ತಿಕೆಯನ್ನು ‘ಐಸ್‌ಕ್ರೀಮ್‌’ ಸಂದರ್ಭದಲ್ಲಿ ಮತ್ತು ಲೀನಾಳ ಸ್ನೇಹವನ್ನು ಕಡಿದುಕೊಳ್ಳುವ ಸಂದರ್ಭದಲ್ಲಿ ತೋರಿದುದು ಅರಿವಾಗುತ್ತದೆ; ತನ್ನ ಸ್ವಾರ್ಥದಿಂದ ತನ್ನ ಮಗನನ್ನು ದೂರ ಹೋಗುವಂತೆ ಮಾಡಿದೆ ಎಂಬುದು ಗೊತ್ತಾಗುತ್ತದೆ; ಮತ್ತು ಗಂಡನಿಗೆ ಹೇಳದೆ ತಾನು ಮಗು ಬೇಡವೆಂದು ಅಬಾರ್ಶನ್‌ಮಾಡಿಸಿಕೊಂಡುದು ಕೂಡಾ ಸ್ವಾರ್ಥದ ಮತ್ತೊಂದು ರೂಪವೆಂದು ಗೊತ್ತಾಗುತ್ತದೆ. ಹೀಗೆ, ತನ್ನ ಬದುಕನ್ನು ವಿಮರ್ಶಿಸಿಕೊಳ್ಳುತ್ತಾ, ತನ್ನ ನಿಜ ವ್ಯಕ್ತಿತ್ವವನ್ನು ಅರಿತುಕೊಳ್ಳುವ ಜಯಾ ಕೊನೆಗೆ ತಾನು ಮೂಲತಃ ತನ್ನ ತಾಯಿ ಮತ್ತು ಅಜ್ಜಿಯರಿಗಿಂತ ಹೇಗೂ ಭಿನ್ನವಲ್ಲವೆಂದು ಅರಿಯುತ್ತಾಳೆ: “ನಾನೂ ಹೀಗೆಯೇ ನನ್ನ ತಾಯಿಯ ಜೊತೆ ವರ್ತಿಸಿದ್ದೆ; ಬಹುಶಃ ಅವಳೂ ತನ್ನ ತಾಯಿಯೊಡನೆ ಹೀಗೆಯೇ ವರ್ತಿಸಿದ್ದಳು; ಅಂತೆಯೇ ನನ್ನ ಮಗಳಾದ ರತಿಯ ವರ್ತನೆಯೂ ಕೂಡಾ… ಹೌದು; ನಾನು ಈ ಸತ್ಯ ಸಂಗತಿಯನ್ನು ಒಪ್ಪಲೇಬೇಕು.” ಈಗ ಜಯಾ ತಾಯಿಯ ಬಗ್ಗೆ ತನಗಿದ್ದ ದ್ವೇಷದಿಂದ ಮತ್ತು ಅಜ್ಜಿಯ ಬಗ್ಗೆ ಇದ್ದ ಅಸಹ್ಯದಿಂದ ಮುಕ್ತಳಾಗುತ್ತಾಳೆ. ಎಂತಹ ವ್ಯಕ್ತಿಗಳೇ ಇರಲಿ ಅವರು ಬದಲಾಗುವ ಸಾಧ್ಯತೆಯನ್ನು ಒಪ್ಪಿಕೊಂಡು, ತನ್ನ ನಿರೂಪಣೆಯನ್ನು ಹೀಗೆ ಅಸ್ತಿತ್ವವಾದಿ ನೆಲೆಯಲ್ಲಿ ಮುಗಿಸುತ್ತಾಳೆ: “ಈಗ ನನಗೆ ಇದೊಂದು ಸತ್ಯದ ಅರಿವಾಗಿದೆ: ಬಾಳನ್ನು ಯಾವಾಗಲೂ ಬಾಳಲರ್ಹವಾಗಿ ಮಾಡಲು ಶ್ರಮಿಸುತ್ತಿರಬೇಕು.”

(ಪರಂಪರೆ: ಸ್ಮರಣ ಸಂಚಿಕೆ, ೨೦೦೬)

* * *