“ಬಹು ವರ್ಣಗಳ, ಬಹು ಸಮುದಾಯಗಳ, ಬಹು ಭಾಷೆಗಳ, ಮತ್ತು ಬಹು ವಿಚಾರಗಳ ಹಾಗೂ ದೃಷ್ಟಿಕೋನಗಳ ಅಸ್ತಿತ್ವ ಎಂತಹ ಅದ್ಭುತ ಸಂಗತಿ!” – ಹರ್ಮನ್ ಹೆಸೆ, ನೊಬೆಲ್ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ.

ಸಿದ್ಧಾರ್ಥ ಕಾದಂಬರಿಯ ಮೂಲಕ (ಮತ್ತು ಶಶಿಕಪೂರ್ – ಸಿಮಿ ಗರೆವಾಲ್ ಅಭಿನಯದ ‘ಸಿದ್ಧಾರ್ಥ’ ಇಂಗ್ಲೀಷ್ ಚಲನಚಿತ್ರದ ಮೂಲಕ) ವಿಶ್ವಾದ್ಯಂತ ಪರಿಚಿತನಾದ ಜರ್ಮನ್ ಲೇಖಕ ಹರ್ಮನ್ ಹೆಸೆ ಅಸಾಧಾರಣ ವ್ಯಕ್ತಿ. ಮಿಶನರಿಗಳ ವಂಶದಲ್ಲಿ ಹುಟ್ಟಿದರೂ ತಾನು ಮಿಶನರಿಯಾಗಲು ಒಪ್ಪದ, ಅಂದಿನ ಕ್ರಿಶ್ಚಿಯನ್ ಸಮಾಜದ ಅಪೇಕ್ಷೆ-ನಿರೀಕ್ಷೆಗಳಿಗೆ ವಿರುದ್ಧವಾಗಿ ‘ವ್ಯಕ್ತಿಯೊಬ್ಬನ ಧರ್ಮ ಯಾವುದೆಂಬುದು ನನಗೆ ಮುಖ್ಯವಲ್ಲ’ ಎಂದು ಘೋಷಿಸಿದ, ಎರಡೂ ವಿಶ್ವಸಮರಗಳ ಕಾಲದಲ್ಲಿ ತನ್ನ ಯುದ್ಧ ವಿರೋಧಿ ನೀತಿಯಿಂದಾಗಿ ‘ದೇಶದ್ರೋಹಿ’ ಎಂದು ತನ್ನ ಸಮಕಾಲೀನರ ದ್ವೇಷ-ತಿರಸ್ಕಾರಗಳಿಗೆ ಗುರಿಯಾದ, ಪುಸ್ತಕ ಮಳಿಗೆಯೊಂದರಲ್ಲಿ ಸಹಾಯಕನಾಗಿ ಪ್ರಾರಂಭಿಸಿ ಕೊನೆಗೆ ೧೯೪೬ ರಲ್ಲಿ ತನ್ನ ಸಾಹಿತ್ಯ ಸಾಧನೆಗಾಗಿ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾದ ಅಸಾಧಾರಣ ಪ್ರತಿಭಾಶಾಲಿ ಹರ್ಮನ್ ಹೆಸೆ. ಅವನ ಜನ್ಮಸ್ಥಳವಾದ ಕಾಲ್ಫ್ (calw) ಪಟ್ಟಣ ಮತ್ತು ಇಡೀ ಜರ್ಮನ್ ರಾಷ್ಟ್ರ ಪ್ರಸಕ್ತ ೨೦೦೨ನೆಯ ವರ್ಷವನ್ನು ‘ಹೆಸೆ ವರ್ಷ’ ಎಂದು ಘೋಷಿಸಿ, ವರ್ಷಪೂರ್ತಿ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿವೆ; ಹೆಸೆಯ ಜನ್ಮಸಂವತ್ಸರವನ್ನು ಉತ್ಸವ ರೂಪದಲ್ಲಿ ಆಚರಿಸುತ್ತಿವೆ.

ಹೆಸೆ-ಉತ್ಸವದಲ್ಲಿ ಭಾಗವಹಿಸಲು ನನಗೆ ಅವಕಾಶ ದೊರಕಿದುದು ಒಂದು ಆಕಸ್ಮಿಕ. ತಮ್ಮ ಊರಿನ ಹಿರಿಯರು ಅನೇಕ ದಶಕಗಳ ಕಾಲ ವಾಸಮಾಡಿದ ಮತ್ತು ಅಪಾರ ಸೇವೆ ಗೈದ ಮಂಗಳೂರು, ತಲಶೇರಿ, ಮುಂತಾದ ಸ್ಥಳಗಳನ್ನು ಸಂದರ್ಶಿಸಲು ಕಳೆದ ಅಕ್ಟೋಬರ್ ಮಾಸದಲ್ಲಿ ಕಾಲ್ಫ್ ಪಟ್ಟಣದ ೩೮ ಪ್ರಮುಖರ ತಂಡವೊಂದು ಅಲ್ಲಿಯ ಲಾರ್ಡ್ ಮೇಯರ್ ಅವರ ನೇತೃತ್ವದಲ್ಲಿ ದಕ್ಷಿಣ ಭಾರತಕ್ಕೆ ಬಂದಿದ್ದರು. ಆ ತಂಡ ಮಂಗಳೂರಿಗೆ ಬಂದಿದ್ದಾಗ ಮಂಗಳೂರು ನಗರ ಸಭೆ ಮತ್ತು ಕರ್ನಾಟಕ ಥಿಯಲಾಜಿಕಲ್ ಸಂಸ್ಥೆ ಒಟ್ಟಾಗಿ ಅವರಿಗೊಂದು ಸಾರ್ವಜನಿಕ ಸತ್ಕಾರ ಸಮಾರಂಭವೊಂದನ್ನು ಏರ್ಪಡಿಸಿದ್ದುವು. ಆ ಸಂದರ್ಭದಲ್ಲಿ ನಾನು ಭಾರತೀಯ-ಜರ್ಮನ್ ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಮತ್ತು ಸಿದ್ಧಾರ್ಥ ಕಾದಂಬರಿಯ ಬಗ್ಗೆ ಮಾತನಾಡಿದ್ದೆ (ಮತ್ತು ಅನಂತರ ಆ ಘನಟೆಯನ್ನು ಮರೆತಿದ್ದೆ). ಅದಾಗಿ ಐದು ತಿಂಗಳುಗಳ ನಂತರ, ಅನಿರೀಕ್ಷಿತವಾಗಿ, ಹೆಸೆ-ಉತ್ಸವದಲ್ಲಿ ಭಾಗವಹಿಸಲು ನನನ್ನು ಆಹ್ವಾನಿಸುವ ಮೇಯರ್ ಅವರ ಪತ್ರ ಮತ್ತು ವಿಮಾನಯಾನದ ಟಿಕೆಟ್ ಅಂಚೆಯಲ್ಲಿ ಬಂದುವು. ಮಂಗಳೂರಿನಲ್ಲಿ ಕಾಲ್ಫ್ ತಂಡದ ಅತಿಥೇಯರಾಗಿದ್ದ ಮತ್ತು ಥಿಯಲಾಜಿಕಲ್ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಸದಾನಂದ ಅವರನ್ನು ಇದರ ಬಗ್ಗೆ ವಿಚಾರಿಸಿದಾಗ, ಇಲ್ಲಿಯ ಕಮೀಶನರ್ ಸೇರಿದಂತೆ ಮಂಗಳೂರಿನಿಂದ ನಾಲ್ವರು, ತಲಶೇರಿಯಿಂದ ಐದು ಜನರು, ಧಾರವಾಡದಿಂದ ಒಬ್ಬರು, ಮತ್ತು ನ್ಯೂ ಮಾಹೆಯಲ್ಲಿರುವ ‘ಮಲಯಾಳ ಕಲಾಗ್ರಾಮ’ ಸಂಸ್ಥೆಯಿಂದ ೩೦ ಜನರ ಒಂದು ತಂಡ- ಇಷ್ಟು ಜನರನ್ನೂ ಹೆಸೆ-ಉತ್ಸವದಲ್ಲಿ ಭಾಗವಹಿಸಲು ಆಹ್ವಾನಿಸಿರುವುದಾಗಿ ತಿಳಿದುಬಂದಿತು. ಆ ಆಹ್ವಾನವನ್ನು ಅಂಗೀಕರಿಸಿ, ಮಂಗಳೂರು ನಗರಪಾಲಿಕೆಯ ಕಮೀಶನರ್ ಜೆ.ಆರ್. ಲೋಬೋ ಇಲ್ಲಿಯ ಬಿಷಪ್ ಡಾ. ಫೂರ್ಟಾಡೋ ಮತ್ತವರ ಪತ್ನಿ ಇವರೊಡನೆ ಕಾಲ್ಫ್ ನಗರಕ್ಕೆ ಹೋಗಿ, ಹೆಸೆ-ಉತ್ಸವದಲ್ಲಿ ಭಾಗವಹಿಸಿ ಮತ್ತು ಹೆಸೆ-ವಿಚಾರ ಸಂಕಿರಣದಲ್ಲಿ ಒಂದು ಪ್ರಬಂಧವನ್ನು ಮಂಡಿಸಿ, ಅಲ್ಲಿಯ ರಾಜಕಾರಣಿ-ಬುದ್ಧಿಜೀವಿಗಳೊಡನೆ ಹೆಸೆ-ಸಾಹಿತ್ಯ, ಜಾಗೀಕರಣ, ಇತ್ಯಾದಿಗಳ ಬಗ್ಗೆ ದೀರ್ಘ ಚರ್ಚೆ ನಡೆಸುತ್ತಾ, ಅಲ್ಲಿ ಕಳೆದ ಒಂದು ವಾರ (ಜೂನ್ ೩೦-ಜುಲೈ ೬, ೨೦೦೨) ಅವಿಸ್ಮರಣೀಯ, ಈ ಲೇಖನದ ಮೂಲಕ ಆ ಅನುಭವವನ್ನು ಓದುಗರೊಡನೆ ಹಂಚಿಕೊಳ್ಳಲು ಪ್ರಯತ್ನಿಸಿದ್ದೇನೆ. ಲೇಖನದ ಮೊದಲ ಭಾಗದಲ್ಲಿ ಹೆಸೆ-ಉತ್ಸವದ ವಿವರಗಳಿದ್ದರೆ, ಎರಡನೆಯ ಭಾಗದಲ್ಲಿ ಹೆಸೆಯ ಬದುಕು ಮತ್ತು ಸಿದ್ಧಾರ್ಥ ಕಾದಂಬರಿಯ ವ್ಯಾಖ್ಯಾನ ಇವುಗಳಿವೆ.

ಸ್ಪುಟ್‌ಬರ್ಗ್ ನಗರದಿಂದ ೬೦ ಮೈಲಿಗಳ ದೂರದಲ್ಲಿರುವ ಕಾಲ್ಫ್ ದಕ್ಷಿಣ ಜರ್ಮನಿಯ ಬಾಡೆನ್ – ಉರ್ಟೆಮ್‌ಬರ್ಗ್ ಪ್ರಾಂತಕ್ಕೆ ಸೇರಿದ ಒಂದು ಪುಟ್ಟ ಗ್ರಾಮ; ಜನಸಂಖ್ಯೆ ಕೇವಲ ೨೩ ಸಾವಿರ. ದಕ್ಷಿಣ ಜರ್ಮನಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿರುವ ಕಾಲ್ಫ್ ‘ಕಪು ಕಾಡಿನ’ (Black Forest) ಮಡಿಲಲ್ಲಿ ಕಂಗೊಳಿಸುವ ಸುಂದರ ಶಿಶುವಿನಂತಿದೆ. ಪ್ರವಾಸಿಗಳನ್ನು ಸದಾ ಆಕರ್ಷಿಸುವ ಈ ನಗರದ ಪ್ರೇಕ್ಷಣೀಯ ಸ್ಥಳಗಳಲ್ಲಿ ಮುಖ್ಯವಾದವುಗಳೆಂದರೆ, ಕ್ರಿ.ಶ. ೮೩೦ ರಲ್ಲಿ ನಿರ್ಮಿಸಲ್ಪಟ್ಟ ಸೇಂಟ್ ಆರೇಲಿಯಸ್ ಚರ್ಚ್, ೧೨ನೆಯ ಶತಮಾನದ ಭವ್ಯ ದುರ್ಗ, ಹೆಸೆ-ಮ್ಯೂಜಿಯಂ, ಪಕ್ಕದಲ್ಲೇ ಹರಿಯುವ ನಾಗೋಲ್ಡ್ ನದಿ (ಚಿನ್ನದ ನದಿ), ಇತ್ಯಾದಿ. ಇಲ್ಲಿರುವ ಮನೆಗಳ ಹೆಚ್ಚಿನ ಭಾಗಗಳು ಮರದಿಂದ ಕಟ್ಟಲ್ಪಟ್ಟಿವೆ; ಮತ್ತು ಇಂದಿಗೂ ಅವು ತಮ್ಮ ಪರಂಪರಾಗತ ಲಕ್ಷಣಗಳನ್ನು ಉಳಿಸಿಕೊಂಡಿವೆ. ಸಣ್ಣ ಗ್ರಾಮವಾದುದರಿಂದ ಭಾರತೀಯ ಅತಿಥಿಗಳಿಗೆ ಸಾರ್ವಜನಿಕ ಅತಿಥಿಗೃಹಗಳಲ್ಲಿ ಮತ್ತು ಊರಿನ ಪ್ರಮುಖರ ಮನೆಗಳಲ್ಲಿ ವಸತಿ ಏರ್ಪಡಿಸಿದ್ದರು. ಕಮೀಶನರ್ ಲೋಬೋ ಮತ್ತು ನಾನು ಒಟ್ಟಿಗೇ ಕೋಬ್ಲಿಟ್ಸ್ ಎನ್ನುವವರ ಮನೆಯಲ್ಲಿದ್ದೆವು. ಮಿ.ಕೋಬ್ಲಿಟ್ಸ್ ಅಲ್ಲಿಯ ಕಮೀಶನರ್ ಆದರೆ ಅವರ ಪತ್ನಿ ಜೋಸೆಫೀನ್ ಕೋಬ್ಲಿಟ್ಸ್ ಅಲ್ಲಿಯ ಕೌಟುಂಬಿಕ ನ್ಯಾಯಾಲಯದ ಜಜ್. ಇವರಿಬ್ಬರಿಗೂ ಭಾರತದ ಬಗ್ಗೆ ಅಗಾಧ ಗೌರವ. ತಮ್ಮ ಭಾರತ ಪ್ರವಾಸದ ನಂತರ ಜೋಸೆಫಿನ್ ಸಂಪೂರ್ಣ ಶಾಕಾಹಾರಿಯಾಗಿ ಪರಿವರ್ತಿತರಾಗಿದ್ದರು. ಅವರಿಬ್ಬರೂ ನಮ್ಮನ್ನು ಎಷ್ಟು ಪ್ರೀತ್ಯಭಿಮಾನಗಳಿಂದ ನೋಡಿಕೊಂಡರೆಂದರೆ, ನಾವು ಭಾರತಕ್ಕೆ ಮರಳುವಾಗ ಅವರಿಬ್ಬರ ಮತ್ತು ನಮ್ಮ ಕಣ್ಣಂಚಿನಲ್ಲಿ ನೀರು ತುಂಬಿತ್ತು.

ಹೆಸೆ-ಉತ್ಸವದ ವ್ಯಾಪ್ತಿ ಎಷ್ಟೆಂದರೆ, ಕಾಲ್ಫ್ ಗ್ರಾಮವೊಂದರಲ್ಲಿಯೇ ಜೂನ್ ೨೯ ರಿಂದ ಆಗಸ್ಟ್ ೩೧ ರ ವರೆಗೆ ಬಗೆಬಗೆಯ ಕಾರ್ಯಕ್ರಮಗಳು ಯೋಜಿಸಲ್ಪಟ್ಟಿವೆ. (ಹಾಗೆಯೇ ಇತರ ನಗರಗಳಲ್ಲಿ ಭಿನ್ನ ಕಾಲಘಟ್ಟಗಳಲ್ಲಿ ಕಾರ್ಯಕ್ರಮಗಳಿರುತ್ತವೆ.) ಈ ಕಾರ್ಯಕ್ರಮಗಳಲ್ಲಿ ಪ್ರಮುಖವಾದವುಗಳೆಂದರೆ: ಸಿದ್ಧಾರ್ಥ ಕಾದಂಬರಿಯ ಗೀತ ರೂಪಕ, ಹೆಸೆ-ಸಾಹಿತ್ಯವನ್ನು ಕುರಿತು ಇಡೀ ಯೂರೋಪಿನ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ, ಹೆಸೆ-ಸಾಹಿತ್ಯದ ಬಗ್ಗೆ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳು, ೪೮ ಘಂಟೆಗಳ ಕಾಲ ಅವಿಚ್ಛಿನ್ನವಾಗಿ ನಡೆಯುವ ಹೆಸೆ-ಕೃತಿಗಳ ವಾಚನ, ಹೆಸೆ-ಕೃತಿಗಳನ್ನಾಧರಿಸಿದ ನಾಟಕ-ಚಲನಚಿತ್ರಗಳ ಪ್ರದರ್ಶನ, ಚರ್ಚ್‌ನಲ್ಲಿ ನಡೆಯುವ ಗಾನಮೇಳಗಳು, ಭಾರತ-ಫ್ರಾನ್ಸ್-ಇಟಲಿ ದೇಶಗಳ ಅಭಿಜಾತ ಸಂಗೀತ-ನೃತ್ಯ ಪ್ರದರ್ಶನಗಳು ಇತ್ಯಾದಿ. ಎಲ್ಲೆಡೆ ಹರ್ಮನ್ ಹೆಸೆ ಚಿತ್ರವಿರುವ ವಾಚುಗಳು, ಟಿ-ಶರ್ಟ್‌ಗಳು, ಪಿಂಗಾಣಿ ಮಗ್‌ಗಳು, ಟೈ-ಪೆನ್-ನೋಟ್ ಬುಕ್ಕುಗಳು ಮಾರಾಟಕ್ಕೆ; ಮತ್ತು ಇಡೀ ಗ್ರಾಮ ಜಾತ್ರೆಯ ಕಾಲದಲ್ಲೆಂಬಂತೆ ಸಿಂಗರಿಸಲ್ಪಟ್ಟಿದ್ದಿತು. ಪ್ರತಿದಿನದ ಕಾರ್ಯಕ್ರಮವೂ (ನಾವಿದ್ದ ಒಂದು ವಾರದಲ್ಲಿ) ಕಥಕ್ಕಳಿ, ಭರತನಾಟ್ಯ, ಮೋಹಿನಿಯಾಟ್ಟಂ, ಇತ್ಯಾದಿ ಭಾರತೀಯ ನೃತ್ಯಪ್ರದರ್ಶನಗಳಿಂದ ಪ್ರಾರಂಭವಾಗುತ್ತಿತ್ತು.

ಆ ಕಾರ್ಯಕ್ರಮಗಳ ವೈಶಿಷ್ಟ್ಯವನ್ನು ಅರಿಯಲು ಒಂದು ನಿದರ್ಶನ ಸಾಕು. ಹೆಸೆಯ ಜನ್ಮದಿನವಾದ ಜುಲೈ ೨ ರಂದು ಕಾಲ್ಫ್ ಗ್ರಾಮದ ಹೆಸೆ-ಉತ್ಸವದ ಉದ್ಘಾಟನಾ ಕಾರ್ಯಕ್ರಮ. ಇದಕ್ಕಾಗಿ ಊರಿನ ಮಧ್ಯಭಾಗದಲ್ಲಿಯೇ, ನಾಲ್ಕು ದಾರಿಗಳು ಸೇರುವ ಸ್ಥಳದಲ್ಲಿ ವಿಶಾಲ ಹಾಗೂ ಅಲಂಕೃತ ವೇದಿಕೆಯನ್ನು ನಿರ್ಮಿಸಿದ್ದರು. ನಾಲ್ಕು ಘಂಟೆಗೆ ಕಾರ್ಯಕ್ರಮದ ಪ್ರಾರಂಭ; ಮೂರು ಘಂಟೆಯ ಹೊತ್ತಿಗೇ ವಿವಿಧ ಶಾಲಾ-ಕಾಲೇಜುಗಳ ಬಾಲಕ-ಬಾಲಕಿಯರು, ವಿವಿಧ ಸಂಘ-ಸಂಸ್ಥೆಗಳು ಪೌರರು, ಎಲ್ಲರೂ ಒಂದು ಗೊತ್ತುಪಡಿಸಿದ ಜಾಗದಲ್ಲಿ ಸೇರಿದರು. ಪ್ರತಿಯೊಂದು ತಂಡಕ್ಕೂ ತನ್ನದೇ ಆದ ವರ್ಣರಂಜಿತ ಯೂನಿಫಾರಂ; ತಂಡದ ಮುಂದೆ ಸಂಸ್ಥೆಯ ನಾಮಫಲಕ ಹಿಡಿದ ಸುಂದರ ಬಾಲಕಿ, ಬ್ಯಾಂಡ್ ಸಂಗೀತದ ಹಿನ್ನೆಲೆಯಲ್ಲಿ ನಿಧಾನವಾಗಿ ಈ ಮೆರವಣಿಗೆ ನಡೆದು ವೇದಿಕೆಯ ಬಳಿ ಬಂದಿತು. ನಾಲ್ಕು ಘಂಟೆಗೆ ಸರಿಯಾಗಿ ಕಾರ್ಯಕ್ರಮದ ಪ್ರಾರಂಭ.

ಕಾರ್ಯಕ್ರಮದಲ್ಲಿ ಆ ರಾಜ್ಯದ ಅಧ್ಯಕ್ಷರು, ಕಾಲ್ಫ್‌ನ ಮೇಯರ್, ಭಾರತದ ರಾಯಭಾರಿ, ಅಮೆರಿಕಾದ ಹಿರಿಯ ವಿದ್ವಾಂಸರು – ಇವರೆಲ್ಲರು ಇದ್ದರೂ ವೇದಿಕೆಯ ಮೇಲೆ ಯಾರಿಗೂ ಸ್ಥಾನವಿಲ್ಲ; ದೀರ್ಘ ಭಾಷಣಗಳಿಲ್ಲ. ಚಿಕ್ಕ ಹಾಗೂ ಸಮಯೋಚಿತ ಭಾಷಣಗಳ ನಡುನಡುವೆ ಬೇರೆ ಬೇರೆ ದೇಶಗಳ ಗಾಯನ-ನೃತ್ಯ ಪ್ರದರ್ಶನಗಳು, ಭಾರತದ ರಾಯಭಾರಿಗಳು ರಾಷ್ಟ್ರಪತಿಯವರ ಸಂದೇಶವನ್ನು ವಾಚಿಸಿ, ಸಮಾರಂಭಕ್ಕೆ ಶುಭ ಕೋರಿದರು. ಈ ಕಾರ್ಯಕ್ರಮದ ಒಂದು ಮುಖ್ಯ ಭಾಗವೆಂದರೆ, ಹೆಸೆ-ಸಾಹಿತ್ಯವನ್ನು ಕುರಿತು ಸಮಗ್ರ ಅಧ್ಯಯನ ಮಾಡಿರುವ ಅಮೆರಿಕನ್ ವಿದ್ವಾಂಸರೊಬ್ಬರಿಗೆ ಸನ್ಮಾನ. ಎರಡೂವರೆ ಘಂಟೆಗಳ ಕಾರ್ಯಕ್ರಮ ಸರಿಯಾಗಿ ಅಷ್ಟು ಹೊತ್ತಿಗೇ ಮುಕ್ತಾಯ. ಸಡಗರವಿದ್ದೂ ಶಿಸ್ತು, ವೈವಿಧ್ಯಮಯ ಕಾರ್ಯಕ್ರಮಗಳಿದ್ದೂ ಸಮಯಪಾಲನೆ – ಇವು ಎದ್ದು ಕಾಣುತ್ತಿದ್ದುವು.

ಕಾಲ್ಫ್ ನಗರದಲ್ಲಿರುವ ‘ಹೆಸೆ ಸಂಗ್ರಹಾಲಯ’ ನೋಡುವಂಥಹುದು. ಅಲ್ಲಿ ಹೆಸೆಯ ಎಲ್ಲಾ ಲೇಖನಗಳು, ಕೃತಿಗಳು, ಪತ್ರಗಳಲ್ಲದೆ ಅವನ ಕೃತಿಗಳ ಎಲ್ಲಾ ಭಾಷೆಗಳಲ್ಲಾಗಿರುವ ಅನುವಾದಗಳು, ಕೃತಿಗಳನ್ನಾಧರಿಸಿರುವ ಎಲ್ಲಾ ರೂಪಕಗಳು ಮತ್ತು ಕಲಾಕೃತಿಗಳು, ಅವನ ಸಾಹಿತ್ಯದ ಮೇಲೆ ಬಂದಿರುವ ಸಮಗ್ರ ವಿಮರ್ಶಾ ಕೃತಿ-ಲೇಖನಗಳು, ಇವುಗಳ ಸಂಗ್ರಹವಿದೆ. (ಅಲ್ಲಿ ಹೆಸೆಯ ಕನ್ನಡಾನುವಾದಗಳಿರಲಿಲ್ಲ. ಕನ್ನಡದಲ್ಲಿಯೂ ಅವನ ಕೆಲವು ಕೃತಿಗಳು ಅನುವಾದಗೊಂಡಿವೆಯೆಂದು ಅವರಿಗೆ ತಿಳಿಸಿ, ನಾನು ಯಾರಿಗೆ ಮರಳಿದನಂತರ, ಜ.ಹೋ. ನಾರಾಯಣಸ್ವಾಮಿಯವರು ಅನುವಾದಿಸಿರುವ “ಹರ್ಮನ್ ಹೆಸೆ: ವಾಚಿ” (ಕನ್ನಡ ಪುಸ್ತಕ ಪ್ರಾಧಿಕಾರ, ೧೯೯೭) ಕೃತಿಯನ್ನು ಅಲ್ಲಿಗೆ ಕಳುಹಿಸಿಕೊಟ್ಟೆ.)

ಈ ಪ್ರಮಾಣದಲ್ಲಿಲ್ಲದಿದ್ದರೂ, ಹೆಸೆ-ಉತ್ಸವವನ್ನು ಹೋಲುವ ಕೆಲವು ಕಾರ್ಯ ಕ್ರಮಗಳು ಭಾರತದಲ್ಲಿಯೂ ನಡೆಯುತ್ತವೆ. ಕೂಡಲೇ ನೆನಪಿಗೆ ಬರುವ ನಿದರ್ಶನಗಳೆಂದರೆ, ಜ್ಞಾನಪೀಠ ಪ್ರಶಸ್ತಿ ವಿಜೇತ ಎಂ.ಟಿ. ವಾಸುದೇವನ್ ನಾಯರ್ ಅವರ ನೇತೃತ್ವದಲ್ಲಿ ಪ್ರತಿವರ್ಷವೂ ತಿರೂರಿನಲ್ಲಿ ನಡೆಯುವ “ಕವಿ ತಂಚನ್ ಉತ್ಸವ” ಮತ್ತು ನೀನಾಸಂ ಸಂಸ್ಥೆಯ ವಾರ್ಷಿಕ “ಸಂಸ್ಕೃತಿ ಶಿಬಿರ”ಗಳು. “ತಂಚನ್ ಉತ್ಸವ”ದಲ್ಲಿ ಪ್ರತಿ ವರ್ಷವೂ ರಾಷ್ಟ್ರೀಯ ನೆಲೆಯ ವಿಚಾರ ಸಂಕಿರಣಗಳು ಮತ್ತು ಕವಿ ಸಮ್ಮೇಳನಗಳು, ಭಾರತದ ವಿವಿಧ ರಾಜ್ಯಗಳ ನೃತ್ಯ-ಸಂಗೀತ-ನಾಟಕಗಳು, ಇತ್ಯಾದಿ ಯಶಸ್ವಿಯಾಗಿ ಆಯೋಜಿಸಲ್ಪಡುತ್ತವೆ. (ನಾನು ಮೊದಲ ಬಾರಿಗೆ ಒರಿಸ್ಸಾದ ‘ಚೌ’ ನೃತ್ಯವನ್ನು ನೋಡಿ ಆನಂದಿಸಿದುದು ‘ತಂಚನ್’ ಉತ್ಸವದಲ್ಲಿಯೇ.) ಪ್ರಾಯಃ ಇದೇ ಬಗೆಯಲ್ಲಿ ಕುಪ್ಪಹಳ್ಳಿಯಲ್ಲಿಯೂ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬಹುದೇನೋ!

ನಾವಲ್ಲಿದ್ದ ಒಂದು ವಾರದಲ್ಲಿ ಆತಿಥೇಯರು ನಮಗೆ ಅಲ್ಲಿಯ ರಾಜ್ಯ-ಸಂಪತ್ತು, ವಿಶ್ವವಿದ್ಯಾನಿಲಯ, ಸರಕಾರೀ ಆಸ್ಪತ್ರೆ, ತ್ಯಾಜ್ಯವಸ್ತುಗಳನ್ನು ರೀಸೈಕಲ್ ಮಾಡುವ ಬೃಹತ್ ಕಾರಖಾನೆ, ಪಶು-ಸಾಕಾಣಿಕೆಯ ಫಾರಂ, ಇತ್ಯಾದಿ ಸ್ಥಳಗಳಿಗೆಲ್ಲಾ ಪ್ರವಾಸವನ್ನೇರ್ಪಡಿಸಿದ್ದರು. ಈ ಪ್ರವಾಸಗಳು ಮತ್ತು ಆ ಸಂದರ್ಭಗಳಲ್ಲಿ ನಡೆಸಿದ ಚರ್ಚೆಗಳು ಇವು ಅಮೆರಿಕಾದಕ್ಕಿಂತ ಭಿನ್ನವಾದ ಆದುನಿಕತೆಯ ಸ್ವರೂಪವನ್ನು ನಮಗೆ ಪರಿಚಯಿಸಿದುವು.

ಉದಾಹರಣೆಗೆ ಶಿಕ್ಷಣ. ಜರ್ಮನಿಯಲ್ಲಿ ಉಚ್ಚಶಿಕ್ಷಣವೂ ಸೇರಿದಂತೆ ಪ್ರಜೆಯೊಬ್ಬನ/ಒಬ್ಬಳ ಇಡೀ ಶಿಕ್ಷಣ ಜವಾಬ್ದಾರಿ ಸರಕಾರದ್ದು. ಇದನ್ನು ನಂಬಲಾಗದೆ, ಎಲ್ಲೋ ಸಂವಹನದ ಸಮಸ್ಯೆ ಇದೆಯೆಂದು ಭಾವಿಸಿ, ಬೇರೆಬೇರೆ ಶಿಕ್ಷಣತಜ್ಞರನ್ನು ಅದೇ ಪ್ರಶ್ನೆಯನ್ನು ಕೇಳಿದೆ- ಉತ್ತರ ಒಂದೇ: ಸಾಮಾನ್ಯ ಶಿಕ್ಷಣವಿರಬಹುದು, ವೈದ್ಯಕೀಯ ಶಿಕ್ಷಣವಿರಬಹುದು, ವಿದ್ಯಾರ್ಥಿಯೊಬ್ಬನ ಇಡೀ ಶಿಕ್ಷಣದ ಖರ್ಚನ್ನು ಸರಕಾರ ವಹಿಸಿಕೊಳ್ಳುತ್ತದೆ. “How can you afford it?” ಎಂದು ನಾನು ಕೂಗಿದಾಗ, ಅಲ್ಲಿಯ ರಾಜ್ಯ-ಸಂಸತ್ತಿನ ಉಪಾಧ್ಯಕ್ಷರು (ಮಹಿಳೆ) ಶಾಂತವಾಗಿ ಉತ್ತರಿಸಿದರು: “Well-we just have to”. ವಿದ್ಯಾರ್ಥಿ ಕಾಲೇಜನ್ನು/ವಿವಿಯನ್ನು ಪ್ರವೇಶಿಸುವಾಗ ರೆಜಿಸ್ಟ್ರೇಷನ್‌ಗಾಗಿ ಕಟ್ಟುವ ಅಲ್ಪ ಹಣ ಮಾತ್ರ ಅವನದು. ಹಾಗೆಯೇ, ಅಲ್ಲಿಯ ಚಿಕಿತ್ಸಾಲಯಗಳು ಸಂಪೂರ್ಣವಾಗಿ ಕೇಂದ್ರ-ಪ್ರಾಂತ್ಯ ಸರಕಾರಗಳ, ನಗರಪಾಲಿಕೆಗಳ ನೆರವಿನಿಂದ ನಡೆಯುತ್ತವೆ; ಪ್ರತಿಯೊಬ್ಬರಿಗೂ ಚಿಕಿತ್ಸೆ ಉಚಿತ. “ನಾವು ಒಪ್ಪಿಕೊಂಡಿರುವ ಮುಖ್ಯ ಸಮಾಜಿಕ ತತ್ವವೆಂದರೆ, ಪ್ರತಿ ಪ್ರಜೆಗೂ ಉಚಿತ ಶಿಕ್ಷಣ ಮತ್ತು ಉಚಿತ ಚಿಕಿತ್ಸೆ ಪಡೆಯುವ ಹಕ್ಕಿದೆ. ಪ್ರಜೆಗಳ ಶಿಕ್ಷಣ ಮತ್ತು ಆರೋಗ್ಯ ಸರಕಾರದ ಜವಾಬ್ದಾರಿ” ಎಂದು ಆ ಪ್ರಾಂತ್ಯ ಸಂಸತ್ತಿನ ಉಪಾಧ್ಯಕ್ಷೆ ಹೇಳಿದರು.

ಉದಾರ ಆರ್ಥಿಕ ನೀತಿಯ ಹೆಸರಿನಲ್ಲಿ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುತ್ತಿರುವ, ತಮ್ಮ ಸಂಪನ್ಮೂಲಗಳನ್ನು ತಾವೇ ರೂಢಿಸಿಕೊಳ್ಳಬೇಕೆಂದು ಶಿಕ್ಷಣ ಸಂಸ್ಥೆಗಳಿಗೆ ಉಪದೇಶ ಕೊಡುವ, ಆರ್ಥಿಕ ಸಂಕಷ್ಟದ ನೆವದಲ್ಲಿ ಸಾವಿರಾರು ಶಿಕ್ಷಕರ ಸ್ಥಳಗಳನ್ನು ವರ್ಷಗಟ್ಟಲೆ ಖಾಲಿ ಇಡುವ, ಮತ್ತು ಮಾತುಮಾತಿಗೂ ಅಮೆರಿಕಾದ ಉದಾಹರಣೆ ಕೊಡುವ ಕರ್ನಾಟಕದ/ಭಾರತದ ಶಿಕ್ಷಣ ಸಚಿವರು ಜರ್ಮನಿಯಿಂದ ಕಲಿಯಬೇಕಾದದ್ದು ಸಾಕಷ್ಟಿದೆ.

ಹಾಗೆಯೇ, ಇಂಗ್ಲೀಷ್ ಭಾಷೆಯ ಸ್ಥಾನ. ಉಗ್ರ ರಾಷ್ಟ್ರೀಯತೆಗೆ ಜರ್ಮನಿ ಪ್ರಸಿದ್ಧ; ಇಂತಹ ಉಗ್ರ ರಾಷ್ಟ್ರೀಯತೆಯೇ ಎರಡು ವಿಶ್ವ ಸಮರಗಳಿಗೆ ಮತ್ತು ಅಪಾರ ರಕ್ತಪಾತಕ್ಕೆ ಕಾರಣವಾದದ್ದು ಇಂದು ಎಲ್ಲರಿಗೂ ಗೊತ್ತಿರುವ ವಿಷಯ. ಅಂತಹ ಜರ್ಮನಿ ಮುಂದಿನ ಶೈಕ್ಷಣಿಕ ವರ್ಷದಿಂದ (೨೦೦೩) ಇಂಗ್ಲೀಷ್ ಭಾಷೆಯನ್ನು ಮಾತೃಭಾಷೆಯೊಡನೆ ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣದ ಮೊದಲನೆಯ ವರ್ಷದಿಂದಲೇ ಕಲಿಸಲು ನಿರ್ಧರಿಸಿದೆ. ಇದು ಕೇವಲ ಕೆಲವರ ಅಥವಾ ಕೆಲವು ಶಾಲೆಗಳ ಪ್ರಯೋಗವಲ್ಲ – ಜರ್ಮನ್ ಕೇಂದ್ರ ಸರಕಾರ ಈ ಭಾಷಾನೀತಿಯನ್ನು ರೂಪಿಸಿದೆ. “ಇಂಗ್ಲೀಷ್ ಭಾಷೆಯೊಡನೆಯೇ ಅದು ಅನಿವಾರ್ಯವಾಗಿ ತರುವ ಗಂಟು ಮೂಟೆಗಳು- ಪಾಪ್ ಸಂಸ್ಕೃತಿ, ಜಂಕ್ ಫುಡ್, ಮುಕ್ತ ಲೈಂಗಿಕತೆ, ಇತ್ಯಾದಿ- ಇವುಗಳಿಗೂ ನೀವು ಸಿದ್ಧರಿದ್ದೀರಾ?” ಎಂದು ಕೇಳಿದಾಗ, ಅಲ್ಲಿಯ ವಿವಿಯ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರೊಬ್ಬರು ಹೀಗೆ ಹೇಳಿದರೆ : “ನಮಗೆ ಅವುಗಳ ಅರಿವಿದೆ; ಹಾಗೆಯೇ ನಮ್ಮ ಸಂಸ್ಕೃತಿಯಲ್ಲಿ ನಂಬಿಕೆಯೂ ಇದೆ. It can withstand any onslaught”. ಏಕೆಷ್ಟು ಇಂಗ್ಲೀಷ್ ಮೋಹ? ಎಂದರೆ, “ನಾವು ಒಂದು ರಾಷ್ಟ್ರವಾಗಿ ಇಂದು ಅಮೆರಿಕಾದೊಡನೆ ಸ್ಪರ್ಧಿಸಿ ಬದುಕಬೇಕು. ಅಮೆರಿಕಾದ ಭಾಷೆ ಇಂಗ್ಲೀಷ್; ಆದ್ದರಿಂದ ನಾವೂ ಇಂಗ್ಲೀಷ್ ಕಲಿಯಬೇಕು.” ಎಂದುತ್ತರಿಸುತ್ತಾ. ಇತ್ತೀಚೆಗೆ ಜಪಾನ್, ರಷ್ಯಾ, ಮುಂತಾದ ರಾಷ್ಟ್ರಗಳಲ್ಲಿ ಇಂಗ್ಲೀಷ್ ಗಳಿಸುತ್ತಿರುವ ಸ್ಥಾನಗಳನ್ನು ವಿವರಿಸಿದರು.

ಇನ್ನು ಜಾಗತೀಕರಣದ ಪ್ರಶ್ನೆ: ಜಾಗತೀಕರಣದಿಂದಾಗಿ ಜರ್ಮನಿಯ ಚಿಕ್ಕ ಮತ್ತು ಮಧ್ಯಮ ಮಟ್ಟದ ಉದ್ಯಮಗಳು ಹಾಳಾಗಿವೆ; ಸಾವಿರಾರು ಶ್ರಮಿಕರು ಬೀದಿ ಪಾಲಾಗಿದ್ದಾರೆ. ಇದನ್ನು ಜರ್ಮನ್ ತಜ್ಞರೂ ಒಪುತ್ತಾರೆ: ಆದರೆ, ಅವರ ದೃಷ್ಟಿಯಲ್ಲಿ ಇದು ಅಲ್ಪಕಾಲೀನ ಸಂಕ್ರಮಣಾವಸ್ಥೆಯ ಲಕ್ಷಣ. ಬಹು ಬೇಗ ಹೊಸ ಉದ್ಯಮಗಳು ಮೇಲೆಳುತ್ತವೆ ಎಂಬ ಭರವಸೆ ಅವರಿಗಿದೆ. ಇನ್ನೂ ಮುಖ್ಯವಾಗಿ, ಉದಾರೀಕರಣವನ್ನು ಒಪ್ಪಿಕೊಂಡೂ ಯುರೋಪಿನ ರಾಷ್ಟ್ರಗಳೆಲ್ಲವೂ ಒಂದಾಗಿ, ಅನೇಕ ಸವಲತ್ತುಗಳನ್ನು ಪಡೆದುಕೊಂಡಿವೆ- ಉದಾಹರಣೆಗೆ, ಅವುಗಳ ಕೃಷಿ ಉತ್ಪನ್ನಗಳಿಗೆ ಕೊಡಮಾಡುವ ಸಬ್ಸಿಡಿ, ಭಾರತದಂತೆ ಅಮೆರಿಕನ್ ತಜ್ಞರ ಎಲ್ಲಾ ಶರತ್ತುಗಳಿಗೂ ಮೂಕವಾಗಿ ಒಪ್ಪಿಗೆ ನೀಡಿಲ್ಲ.

ಕೂಡಲೇ ನಾನಿಲ್ಲಿ ಒಂದು ತಿದ್ದುಪಡಿಯನ್ನು ದಾಖಲಿಸಬೇಕು. ಭಾರತಕ್ಕೆ ಹೋಲಿಸಿದರೆ ಜರ್ಮನಿ ಒಂದು ಚಿಕ್ಕ ರಾಷ್ಟ್ರ; ಮತ್ತು ಎರಡು ಶತಮಾನಗಳ ಔದ್ಯೋಗೀಕರಣದ ಹಿನ್ನೆಲೆಯಿರುವ ದೇಶ. ಆದ್ದರಿಂದ, ಕೆಲವು ಸಮಸ್ಯೆಗಳ ಪರಿಹಾರ ಆ ರಾಷ್ಟ್ರಕ್ಕೆ ಸುಲಭವಾಗುವುದಿಲ್ಲ. ಆದರೂ…

ಎರಡೂ ವಿಶ್ವಸಮರಗಳ ಕಾಲದಲ್ಲಿ ಜರ್ಝರಿತವಾಗಿದ್ದ ಜರ್ಮನಿ ಇಂದು ಮತ್ತೆ ಅಭಿಮಾನದಿಂದ ತಲೆಯೆತ್ತಿ ನಿಂತಿದೆ. ತನ್ನ ಆಜನ್ಮ ಶತ್ರುಗಳೆಂದು ಭಾವಿಸಿ, ನೂರಾರು ವರ್ಷಗಳ ಕಾಲ ಇಂಗ್ಲೆಂಡ್, ಫ್ರಾನ್ಸ್, ಮುಂತಾದ ದೇಶಗಳೊಡನೆ ಕಾದಾಡಿದ ಜರ್ಮನಿ ಇಂದು ಅವುಗಳೊಡನೆಯೇ ಕೈಜೋಡಿಸಿ, ಯುರೋಪ್-ಒಕ್ಕೂಟವನ್ನು ಒಪ್ಪಿಕೊಂಡಿದೆ; ಸಮಾನ ನಾಣ್ಯ (ಯುರೋ), ಸಮಾನ ಆರ್ಥಿಕ- ವಾಣಿಜ್ಯ ನೀತಿ, ಇವುಗಳನ್ನು ಒಪ್ಪಿಕೊಂಡಿದೆ. ಆದರೆ, ಭಾರತ ತನ್ನೆಲ್ಲಾ (ಪರಿಮಿತ) ಶಕ್ತಿಯನ್ನೂ ತನ್ನ ನೆರೆಯ ರಾಷ್ಟ್ರವನ್ನು ಹೀಗಳೆಯುವುದರಲ್ಲಿ ಮತ್ತು ಅದರೊಡನೆ ಕಾದಾಡುವುದರಲ್ಲಿ ಕಳೆಯುತ್ತಿದೆ; ಗುಡಿಗೋಪುರಗಳನ್ನು ಕಟ್ಟುವುದರಲ್ಲಿ ಹಾಗೂ ಕೆಡಹುವುದರಲ್ಲಿ ತನ್ನೆಲ್ಲಾ ಸಾರ್ಥಕತೆಯನ್ನು ಗುರುತಿಸಿಕೊಳ್ಳುತ್ತಿದೆ. ತಾತ್ವಿಕ ನೆಲೆಯಲ್ಲಾದರೂ ಜರ್ಮನಿಯ ಮಾದರಿಯನ್ನು ಭಾರತ ಅನುಸರಿಸಲು ಸಾಧ್ಯವಾಗುವುದಾದರೆ!

* * *

ಕಾಲ್ಫ್ ಗ್ರಾಮದಲ್ಲಿ ಜುಲೈ ೨, ೧೮೭೭ ರಲ್ಲಿ ಜನಿಸಿದ ಹರ್ಮನ್ ಹೆಸೆಯ ಅಪ್ಪ-ಅಮ್ಮ ಅಜ್ಜ-ಅಜ್ಜಿ, ಸೋದರ ಮಾವಂದಿರು ಇವರೆಲ್ಲರೂ ಮಿಶನರಿಗಳು, ಮತ್ತು ಬಾಷೆಲ್ ಮಿಶನ್ ಸಂಸ್ಥೆಯಲ್ಲಿ ದುಡಿದವರು. ಇವರುಗಳಲ್ಲಿ ಅತಿ ಪ್ರಸಿದ್ಧನಾದವನೆಂದರೆ ಡಾ. ಫಿಲ್ ಹರ್ಮನ್ ಗುಂಡರ್ಟ್, ಹೆಸೆಯ ಅಜ್ಜ. ೧೮೩೬ ರಲ್ಲಿ ಭಾರತಕ್ಕೆ ಬಂದ ಗುಂಡರ್ಟ್ ಕೇರಳದ ತಲಶೇರಿ ನಗರಕ್ಕೆ ಸಮೀಪವಿರುವ ಇಳ್ಳಿಕುನ್ನು ಗ್ರಾಮವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಆರಿಸಿಕೊಂಡು, ಸುಮಾರು ಎರಡು ದಶಕಗಳ ಕಾಲ ಅಲ್ಲಿದ್ದು ಸಮಾಜಸೇವೆ ಮಾಡಿದನು. ಶ್ರೇಷ್ಠ ಭಾಷಾತಜ್ಞನಾಗಿದ್ದ ಗುಂಡರ್ಟ್‌ನನ್ನು ‘ಮಲಯಾಳಂ ಭಾಷೆಯ ಕಿಟೆಲ್’ ಎಂದು ಕರೆಯಬಹುದು. ಅವನ ಮುಖ್ಯ ಸಾಧನೆಗಳಲ್ಲಿ ಕೆಲವೆಂದರೆ: ಇಳ್ಳಿಕುನ್ನುವಿನಲ್ಲಿ ಪ್ರಥಮ ಮಲಯಾಳಂ ಶಾಖೆಯ ಸ್ಥಾಪನೆ, ಪ್ರತಮ ಮಲಯಾಳಂ ವ್ಯಾಕರಣ ಮತ್ತು ಪ್ರಥಮ ಮಲಯಾಳಂ ವಾರ್ತಾಪತ್ರಿಕೆ (“ರಾಜ್ಯ ಸಮಾಚಾರಂ,” ೧೮೪೭), ಮತ್ತು ಇವೆಲ್ಲಕ್ಕೂ ಕಳಶಪ್ರಾಯವಾದ ಪ್ರಥಮ ಮಲಯಾಳಂ-ಇಂಗ್ಲೀಷ್ ಕೋಶದ ರಚನೆ. ಅವನ ಪತ್ನಿ ಜೂಲಿ ಗುಂಡರ್ಟ್ ಕೂಡಾ ಅಲ್ಲಿಯ ಬಾಲಿಕೆಯರ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು.

ಇಳ್ಳಿಕುನ್ನುವಿನಲ್ಲಿಯೇ ಹುಟ್ಟಿ ಬೆಳೆದ ಗುಂಡರ್ಟ್-ಜೂಲಿ ಇವರ ಮಕ್ಕಳಲ್ಲಿ ನಾಲ್ಕನೆಯ ಏಳು ಮೇರಿ ಗುಂಡರ್ಟ್. ಮೇರಿಯೂ ಕೂಡಾ ತಂದೆಯ ಹಾದಿಯಲ್ಲಿಯೇ ನಡೆದು, ಕೋಜೀಕೋಡ್, ನೀಲಗಿರಿ, ಮುಂತಾದೆಡೆಗಳಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದಳು. ಮೇರಿಯ ಗಂಡ ಯೋಹಾನೆಸ್ ಹೆಸೆ ಮಂಗಳೂರು, ನೀಲಗಿರಿ, ಮುಂತಾದೆಡೆಗಳಲ್ಲಿ ಸಮಾಜಸೇವೆ ಮಾಡಿದವ. ಮೇರಿ-ಯೋಹಾನೆಸ್ ಇವರ ಪುತ್ರ ಹರ್ಮನ್ ಹೆಸೆ.

ಇಂತಹ ಕುಟುಂಬದಲ್ಲಿ ಜನಿಸಿದ ಹರ್ಮನ್ ಕೂಡಾ ಮಿಶನರಿಯಾಗಬೇಕೆಂಬುದು ಅವನ ತಂದೆ-ತಾಯಿಯರ ಆಸೆಯಾಗಿತ್ತು. ಆಧರೆ, ಹರ್ಮನ್ ಹೆಸೆ ಹುಟ್ಟಾ ಬಂಡುಕೋರ. ಯಾವ ಬಗೆಯ ಶಿಸ್ತನ್ನೂ ಒಪ್ಪದೆ ಹೆಸೆ ತನ್ನ ಅವಿಧೇಯತೆಯ ಕಾರಣದಿಂದ ಅನೇಕ ಶಾಲೆಗಳನ್ನು ಬದಲಾಯಿಸಬೇಕಾಯಿತು. ಕೊನೆಗೆ, ತನ್ನ ೧೯ನೆಯ ವಯಸ್ಸಿನಲ್ಲಿ ತನ್ನ ಗುರಿ ಲೇಖಕನಾಗುವುದೆಂದು ನಿರ್ಧರಿಸಿ, ತಾನು ಓದುತ್ತಿದ್ದ ಧಾರ್ಮಿಕ ಶಾಲೆಯನ್ನು ತೊರೆದು, ಹತ್ತಿರದ ಟ್ಯೂಬಿಂಗನ್ ನಗರಕ್ಕೆ ಹೋಗಿ, ಅಲ್ಲಿಯ ಪುಸ್ತಕ ಮಳಿಗೆಯೊಂದರಲ್ಲಿ ನೌಕರನಾಗಿ ಸೇರಿದ. ಆ ನೌಕರಿ ಅವನಿಗೇನೂ ಕೈತುಂಬಾ ಹಣವನ್ನು ಕೊಡದೆ ಹೋದರೂ ಹಗಲು-ರಾತ್ರಿ ತನಗಿಷ್ಟವಾದ ಪುಸ್ತಕಗಳನ್ನು ಓದುವ ಅವಕಾಶವನ್ನು ಕೊಟ್ಟಿತು. ಮುಂದೆ ಹೆಸೆ ದಾಖಲಿಸುವಂತೆ, ಆ ಕಾಲದಲ್ಲಿ ಗಯಟೆ ಕವಿಯ ದರ್ಶನ, ಭಾರತ ಮತ್ತು ಚೀನಾ ದೇಶಗಳ ತಾತ್ವಿಕ ಚಿಂತನೆ ಅವನನ್ನು ಆಳವಾಗಿ ಪ್ರಭಾವಿಸಿದವು.

ಹೆಸೆಯ ಮೊದಲ ಕವನ ಸಂಕಲನ ಅಷ್ಟೇನೂ ಓದುಗರ ಗಮನವನ್ನು ಸಎಳೆಯಲಿಲ್ಲ. ಆಧರೆ, ೧೯೦೪ ರಲ್ಲಿ ಪ್ರಕಟವಾದ Peter Camenzind ಎಂಬ ಕಾದಂಬರಿ ಅಪಾರ ಜನಪ್ರಿಯತೆಯನ್ನು ಗಳಿಸಿ, ಸ್ವಲ್ಪ ಕಾಲದಲ್ಲಿಯೇ ಅನೇಕ ಮರು ಮುದ್ರಣಗಳನ್ನು ಕಂಡಿತು. ಇಲ್ಲಿಂದ ಮುಂದೆ ಬರವಣಿಗೆಯನ್ನೇ ತನ್ನ ವೃತ್ತಿಯನ್ನಾಗಿ ಸ್ವೀಕರಿಸಲು ಹೆಸೆ ನಿರ್ಧರಿಸಿದನು. ಇದೇ ಕಾಲದಲ್ಲಿಯೇ ತನಗಿಂತ ಹತ್ತು ವರ್ಷ ಹಿರಿಯಳಾಗಿದ್ದ ಮರಿಯಾ ಬರ್ನೋಲಿ ಎಂಬ ಚಿತ್ರ ಕಲಾವಿದೆಯನ್ನು ಮದುವೆಯಾಗಿ, ಒಂದು ಹಳ್ಳಿಯ ತೋಟದ ಮನೆಯೊಂದರಲ್ಲಿ ವಾಸಿಸಲು ಪ್ರಾರಂಭಿಸಿದನು.

ಸದಾ ಹೊಸ ವಿಚಾರಗಳ ಮತ್ತು ಅನುಭವಗಳ ಶೋಧಕನಾಗಿದ್ದ ಹೆಸೆ ೧೯೧೧ ರಲ್ಲಿ ಪೌರ್ವಾತ್ಯ ದೇಶಗಳ ಪ್ರವಾಸವನ್ನು ಕೈಗೊಂಡು, ಭಾರತ, ಶ್ರೀಲಂಕಾ, ಸಿಂಗಪುರ್, ಸುಮಾತ್ರ, ಇತ್ಯಾದಿ ದೇಶಗಳಲ್ಲಿ ಸಂಚರಿಸಿದನು. ಅನಂತರ, ತನ್ನ ಪ್ರವಾಸಕಾಲದ ಅನುಭವಗಳನ್ನು ಆಧರಿಸಿ, “ಭಾರತದ ಪ್ರವಾಸ ಚಿತ್ರಗಳು ಮತ್ತು ಕಥೆಗಳು” ಎಂಬ ಕೃತಿಯನ್ನು ೧೯೧೩ ರಲ್ಲಿ ಪ್ರಕಟಿಸಿದನು. ದುರದೃಷ್ಟವಶಾತ್, ೧೯೧೪ ರಲ್ಲಿ ಪ್ರಾರಂಭವಾದ ಪ್ರಥಮ ವಿಶ್ವ ಸಮರ ಹೆಸೆಯ ಬದುಕನ್ನು ಬುಡಮೇಲು ಮಾಡಿತು. ತನ್ನ ಯುದ್ಧ ವಿರೋಧಿ ನಿಲುವಿನಿಂದಾಗಿ ‘ದೇಶದ್ರೋಹಿ’ ಎಂಬ ಕುಖ್ಯಾತಿಗೆ ಹೆಸೆ ಗುರಿಯಾಗಬೇಕಾಯಿತು; ಮತ್ತು ಅವನ ಕೃತಿಗಳು ಮೂಲೆಗುಂಪಾದುವು. ಮನೆಯಲ್ಲಿ ಒಬ್ಬ ಮಗ ದೀರ್ಘಕಾಲ ರೋಗಗ್ರಸ್ತನಾಗಿ ಹಾಸಿಗೆ ಹಿಡಿದನು ಮತ್ತು ಅವನ ಹೆಂಡತಿ ಮರಿಯಾ ನರದೌರ್ಬಲ್ಯದಿಂದ ನರಳುತ್ತಾ ಮಾನಸಿಕ ಚಿಕಿತ್ಸೆಗೆ ಒಳಪಡಬೇಕಾಯಿತು. ಇವೆಲ್ಲಾ ಕಾರಣಗಳಿಂದ ಹೆಸೆ ಜರ್ಮನಿಯನ್ನೇ ತೊರೆಯಲು ನಿಶ್ಚಯಿಸಿ, ೧೯೧೯ ರಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಮಾಂಟನೋಲಾ ಎಂಬಲ್ಲಿಗೆ ಕುಟುಂಬದೊಡನೆ ವಲಸೆ ಹೋದನು; ಅಲ್ಲಿಯೇ ಕೊನೆಯವರೆಗೂ ಹೆಸೆ ನೆಲೆಸಿದನು.

ಆದರೆ, ತನ್ನ ಯುದ್ಧವಿರೋಧೀ ತಾತ್ವಿಕ ಬದ್ಧತೆಯಿಂದಾಗಿ ಹೆಸೆ ಮುಂದೆಯೂ ಅಪಾರ ಕಷ್ಟ ನಷ್ಟಗಳಿಗೆ ಗುರಿಯಾಗಬೇಕಾಯಿತು. ಮೂವತ್ತರ ದಶಕದಲ್ಲಿ ಅಧಿಕಾರಕ್ಕೆ ಬಂದ ನಾಟ್ಸಿ ಪಕ್ಷ ಹೆಸೆಯ ಕೃತಿಗಳನ್ನೆಲ್ಲಾ ಮುಟ್ಟುಗೋಲು ಹಾಕಿಕೊಂಡಿತು. ಎರಡನೆಯ ಮಹಾಯುದ್ಧದ ನಂತರ, ೧೯೪೬ ರಲ್ಲಿ ಪ್ರತಿಷ್ಠಿತ ನೊಬೆಲ್ ಪುರಸ್ಕಾರ ಹೆಸೆಗೆ ಸಂದರೂ ಅವನ ಸಾಹಿತ್ಯಾಭಿಮಾನಿಗಳ ಸಂಖ್ಯೆಯೇನೂ ಹೆಚ್ಚಾಗಲಿಲ್ಲ. ಆದರೆ, ಅವನು ಸಾಯುವ ಕಾಲಕ್ಕೆ (೧೯೬೨) ಅಮೆರಿಕಾವೂ ಸೇರಿದಂತೆ ಇಡೀ ಪಶ್ಚಿಮ ರಾಷ್ಟ್ರಗಳಲ್ಲಿ ಭುಗಿಲೆದ್ದ ತರುಣ ಜನಾಂಗದ ಪರಂಪರಾ-ವಿರೋಧಿ ಚಳುವಳಿಯ ಕಾಲದಲ್ಲಿ ಹೆಸೆಯ ಕೃತಿಗಳಿಗೆ ಮತ್ತೆ ಮಹತ್ವ ಬಂದಿತು; ಮತ್ತು ಅಂದಿನಿಂದ ಜಗತ್ತಿನ ಮಹಾನ್ ಸಾಹಿತಿ-ಚಿಂತಕರಲ್ಲಿ ಒಬ್ಬನೆಂದು ಹೆಸೆ ಪರಿಗಣಿಸಲ್ಪಟ್ಟಿದ್ದಾನೆ.

ಹೆಸೆಯ ಕೆಲವು ಪ್ರಮುಖ ಕೃತಿಗಳು ಹೀಗಿವೆ:

. ಪೀಟರ್ ಕಾಮೆನ್ಟ್ಸಿಂಡ್ (೧೯೦೪): ಈ ಕಾದಂಬರಿ ಬಡ ಕೃಷಿಕ ಕುಟುಂಬದ ವ್ಯಕ್ತಿಯೊಬ್ಬನು ಪ್ರಸಿದ್ಧ ಲೇಖಕನಾದನಂತರ ಅವನು ಎದುರಿಸುವ ಆಧುನಿಕ ಜಗತ್ತಿನ ಪ್ರಲೋಭನೆಗಳು, ಮತ್ತು ಕೊನೆಯಲ್ಲಿ ಕೀರ್ತಿ-ಪ್ರತಿಷ್ಠೆಗಳ ಪೊಳ್ಳುತನವನ್ನು ಕಂಡುಕೊಂಡು ಅವನು ತನ್ನ ಹುಟ್ಟೂರಿಗೆ ಹಿಂತಿರುಗುವುದು – ಇವುಗಳನ್ನು ಮನೋಜ್ಞವಾಗಿ ಚಿತ್ರಿಸುತ್ತದೆ.

. ಡಿಮೇನ್ (೧೯೧೭) : ಪರಂಪರಾಗತ ಧಾರ್ಮಿಕತೆ, ರಾಷ್ಟ್ರೀಯ ಪ್ರಜ್ಞೆ, ನೈತಿಕತೆ ಇತ್ಯಾದಿಗಳ ವಿರುದ್ಧ ಬಂಡೆದ್ದು, ತನ್ನದೇ ಆದ ವ್ಯಕ್ತಿನಿಷ್ಠ ಸತ್ಯವನ್ನು ಅರಸುವ ಯುವಕನ ಬದುಕನ್ನು ಈ ಕಾದಂಬರಿ ಚಿತ್ರಿಸುತ್ತದೆ. ಈ ಕಾಲಘಟ್ಟದಲ್ಲಿ ತನ್ನ ಯುದ್ಧವಿರೋಧೀ ನಿಲುವಿನಿಂದಾಗಿ ಹೆಸೆ ಓದುಗರ ತಿರಸ್ಕಾರಕ್ಕೆ ಎಷ್ಟು ಗುರಿಯಾಗಿದ್ದನೆಂದರೆ, ಈ ಕಾದಂಬರಿಯನ್ನು ಅವನು ‘ಎಮಿಲಿ ಸಿಂಕ್ಲೇರ್’ ಎಂಬ ಕಲ್ಪಿತ ಹೆಸರಿನಲ್ಲಿ ಪ್ರಕಟಿಸಬೇಕಾಯಿತು.

. ಸಿದ್ಧಾರ್ಥ (೧೯೨೨): ಈ ಪ್ರಸಿದ್ಧ ಕೃತಿಯ ವಿಶ್ಲೇಷಣೆ ಮುಂದಿನ ಭಾಗದಲ್ಲಿದೆ.

. ಸ್ಪೆಪೆನ್ ವುಲ್ಫ್ (೧೯೨೭): ತನ್ನಲ್ಲಿ ಸುಪ್ತವಾಗಿದ್ದ ಎಲ್ಲಾ ಕಾಮನೆಗಳನ್ನೂ ವಾಸ್ತವ ಬದುಕಿನಲ್ಲಿ ಮುಕ್ತವಾಗಿ ಪೂರೈಸಿಕೊಳ್ಳುವ ಮತ್ತು ಅಂತಹ ‘ಲಂಪಟ’ ಬದುಕಿನಲ್ಲಿಯೂ ಅಪಾರ ಮಾನವಪ್ರೇಮವನ್ನು ಉಳಿಸಿಕೊಳ್ಳುವ ಬುದ್ಧಿಜೀವಿಯೊಬ್ಬನನ್ನು ಈ ಕಾದಂಬರಿ ಚಿತ್ರಿಸುತ್ತದೆ. ಇದು ಇಂಗ್ಲೀಷ್‌ನಲ್ಲಿ ಪ್ರಸಿದ್ಧ ಚಲನಚಿತ್ರವೂ ಆಗಿದೆ.

. ಗ್ಲಾಸ್ಪರ್ಲೆನ್ ಸ್ಟೀಲ್ (೧೯೪೩) : ಇತರ ಕೃತಿಗಳಿಗಿಂತ ಭಿನ್ನವಾಗಿರುವ ಈ ಕಾದಂಬರಿ ವಾಸ್ತವ ಜಗತ್ತಿನ ಎಲ್ಲಾ ಬಗೆಯ ದೋಷಪೂರ್ಣ ಸಂಸ್ಥೆಗಳನ್ನೂ ನಿಧಾನ್ವಾಗಿ ಹಾಗೂ ಮಾತುಕಥೆಗಳ ಮೂಲಕ ಸುಧಾರಿಸಲು ಪ್ರಯತ್ನಿಸುವ ಬುದ್ಧಿಜೀವಿಯೊಬ್ಬನನ್ನು ಚಿತ್ರಿಸುತ್ತದೆ. ಮುಖ್ಯವಾಗಿ, ಈ ಕೃತಿಯ ನಾಯಕ ಹಿಂಸಾತ್ಮಕ ಬಂಡುಕೋರತನವನ್ನು ತಿರಸ್ಕರಿಸಿ, ಸಂಧಾನದ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದು ಈ ಕಾಲಘಟ್ಟದ ಹೆಸರು ಪಕ್ವ ಮನಸ್ಥಿತಿಯನ್ನು ದರ್ಶಿಸುತ್ತದೆ.

ಸಾಂಸ್ಥಿಕ ಧರ್ಮ, ಶೌರ್ಯ, ದೇಶಪ್ರೇಮ, ರಾಷ್ಟ್ರೀಯ ಪ್ರಜ್ಞೆ – ಇವೇ ಮುಂತಾದ ಭಾವನಾತ್ಮಕ ಪರಿಕಲ್ಪನೆಗಳನ್ನು ವಿರೋಧಿಸುವ ಮತ್ತು ತನ್ನ ಯುದ್ಧವಿರೋಧೀ ನಿಲುವನ್ನು ಯಾವ ಪರಿಸ್ಥಿತಿಯಲ್ಲಿಯೂ ಬದಲಾಯಿಸದ ಹೆಸೆ ವ್ಯಕ್ತಿಯಾಗಿ ಮತ್ತು ಲೇಖಕನಾಗಿ ಸದಾ ಹೊಸ ಮೌಲ್ಯಗಳನ್ನು ಅರಸುವ ಶೋಧಕ. (ಹುಟ್ಟಾ ಬಂಡುಕೋರನಾದ ಹೆಸೆ ತನ್ನ ವೈಯಕ್ತಿಕ ಹಾಗು ಸಾಹಿತ್ಯಕ ಬದುಕಿನಲ್ಲಿ ಶಿವರಾಮ ಕಾರಂತರಿಗೆ ಬಹು ಹತ್ತಿರ ಬರುತ್ತಾನೆ.) ಹೆಸೆಯ ವೈಚಾರಿಕ ಬದ್ಧತೆಯನ್ನು ಮತ್ತು ಅವನ ಮೂಲಭೂತ ಮಾನವೀತೆಯನ್ನು ನಾವು ಅವನ ‘ನೊಬೆಲ್ ಪ್ರಶಸ್ತಿ ಸ್ವೀಕಾರ ಭಾಷಣ’ದಲ್ಲಿ ಕಾಣಬಹುದು. (ಅನಾರೋಗ್ಯದ ಕಾರಣದಿಂದ ಸ್ವತಃ ಪ್ರಶಸ್ತಿ ಸಮಾರಂಭದಲ್ಲಿ ಉಪಸ್ಥಿತನಿರಲು ಹೆಸೆಗೆ ಸಾಧ್ಯವಾಗಲಿಲ್ಲ; ಅವನ ಭಾಷಣದ ಪ್ರತಿಯನ್ನು ಸಮಾರಂಭದಲ್ಲಿ ಓದಲಾಯಿತು.) ಭಾಷಣದ ಮುಖ್ಯ ಭಾಗಗಳು ಹೀಗಿವೆ;

“ನನ್ನ ಆರೋಗ್ಯವು ಯಾವಾಗಲೂ ದುರ್ಬಲವಾಗಿಯೇ ಇದೆ; ಆದರೆ, ೧೯೩೩ರ ನಂತರದ ಕಷ್ಟಕೋಟಲೆಗಳು ನನ್ನ ಇಡೀ ಬದುಕಿನ ಸಾಧನೆಗಳನ್ನು ನಾಶಮಾಡಿ, ಮತ್ತೆ ಮತ್ತೆ ಹೊರಲಾರದ ಜವಾಬ್ದಾರಿಯನ್ನು ನನ್ನ ಮೇಲೆ ಹೊರೆಸಿ, ನನ್ನನ್ನು ಶಾಶ್ವತವಾಗಿ ಅಶಕ್ತನನ್ನಾಗಿ ಮಾಡಿವೆ. ಆದರೆ, ನನ್ನ ಮನಸ್ಸನ್ನು ಮಾತ್ರ ಅವುಗಳಿಗೆ ಮುರಿಯಲಾಗಿಲ್ಲ; ಮತ್ತು ಅದು ನೊಬೆಲ್ ಸಂಸ್ಥೆಯ ಉದ್ದೇಶಕ್ಕೆ ಸಹಮತವಾಗಿದೆ.- ಅದೇನೆಂದರೆ, ಮನಸ್ಸು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರಾತೀತ; ಅದು ಯುದ್ಧ ಮತ್ತು ಸರ್ವನಾಶಗಳಿಗಲ್ಲದೆ ಶಾಂತಿ ಮತ್ತು ಸಹಬಾಳ್ವೆಗಳಿಗಾಗಿ ಸದಾ ತುಡಿಯಬೇಕು.

“ನನ್ನ ಆದರ್ಶ ರಾಷ್ಟ್ರೀಯ ವಿಶಿಷ್ಟತೆಗಳನ್ನು ಕಳೆದುಕೊಂಡು ಏಕರೂಪೀ ಬೌದ್ಧಿಕ ಚಿಂತನೆಯ ಆಗರವಾಗುವ ಮಾನವ ಸಮಾಜವಲ್ಲ. ಬದಲಾಗಿ, ಎಲ್ಲಾ ರೂಪಗಳ ಹಾಗೂ ವರ್ಣಗಳ ಭಿನ್ನತೆ ಈ ನಮ್ಮ ಪ್ರಿಯ ಭೂಮಿಯ ಮೇಲೆ ಶಾಶ್ವತವಾಗಿರಲಿ. ಭಿನ್ನ ಜನಾಂಗಗಳ, ಭಿನ್ನ ಸಮುದಾಯಗಳ, ಭಿನ್ನ ಭಾಷೆಗಳ, ಭಿನ್ನ ವಿಚಾರಗಳ ಮತ್ತು ಭಿನ್ನ ದೃಷ್ಟಿಕೋನಗಳ ಅಸ್ತಿತ್ವ ಅದೆಷ್ಟೊಂದು ಅದ್ಭುತ ಸಂಗತಿ! ಯುದ್ಧಗಳು, ವಿಜಯಗಳು, ಮತ್ತು ಆಕ್ರಮಣಗಳು ಇವುಗಳ ಬಗ್ಗೆ ನನಗೆ ಅನೇಕ ಕಾರಣಗಳಿಗಾಗಿ ಬದ್ಧ ದ್ವೇಷವಿದೆ; ಆದರೆ ಅವುಗಳಲ್ಲಿ ಮುಖ್ಯವಾದುದೆಂದರೆ, ಬಹು ಪರಿಶ್ರಮದಿಂದ ಬೆಳೆದು ಬಂದಿರುವ, ತೀರಾ ವೈಯಕ್ತಿಕ ಸ್ವರೂಪದ, ಮತ್ತು ಅತ್ಯಂತ ವೈವಿಧ್ಯಮಯ ಅನೇಕಾನೇಕ ಸಾಧನೆಗಳು ಈ ಕರಾಳ ಶಕ್ತಿಗೆ ಬಲಿಯಾಗಿವೆ. ವ್ಯಾಪಕ ಸರಳೀಕರಣಗಳನ್ನು ನಾನು ಯಾವಾಗಲೂ ದ್ವೇಷಿಸುತ್ತೇನೆ….”

* * *

ಸಿದ್ಧಾರ್ಥ ಒಂದು ಹೊಸ ಬಗೆಯ ಪ್ರಯೋಗಾತ್ಮಕ ಕಾದಂಬರಿ. ಇದನ್ನು ‘ಭಾವ ಗೀತಾತ್ಮಕ ಕಾದಂಬರಿ’, ‘ದಾರ್ಶನಿಕ ಕಾದಂಬರಿ’ ಎಂದೆಲ್ಲಾ ವಿಮರ್ಶಕರು ಗುರುತಿಸಿದ್ದಾರೆ. ಮುಖ್ಯವಾಗಿ, ಇದು ‘ಶೋಧ’ದ ಕಥನ – ತನ್ನ ಸತ್ಯವನ್ನು ತಾನೇ ಅರಸುವ, ಆ ಅರಸುವ ಪ್ರಕ್ರಿಯೆಯಲ್ಲಿ ಅನಿವಾರ್ಯವಾಗುವ ತೊಳಲಾಟದ ಮೂಲಕವೇ ಮಾಗುವ ವ್ಯಕ್ತಿಯೊಬ್ಬನ ಕಥನ.

ಕಾದಂಬರಿಯಲ್ಲಿ ನಾವು ಸಿದ್ಧಾರ್ಥನೆಂಬ ಬ್ರಾಹ್ಮಣ ಯುವಕನೊಬ್ಬನ ಬದುಕಿನ ನಾಲ್ಕು ಘಟ್ಟಗಳನ್ನು ಕಾಣುತ್ತೇವೆ. ಪ್ರಾರಂಭದಲ್ಲಿ, ಕರ್ಮಠ ಬ್ರಾಹ್ಮಣನ ಮಗನಾದ ಸಿದ್ಧಾರ್ಥ ಚಿಕ್ಕ ವಯಸ್ಸಿನಲ್ಲಿಯೇ ವೇದಾಧ್ಯಯನ ಮಾಡಿ, ಕರ್ಮನಿಷ್ಠನಾಗಿ, ಅಪಾರ ಹೆಸರು ಗಳಿಸಿರುತ್ತಾನೆ. ಆದರೆ, ಅವನ ಮನಸ್ಸಿನಾಳದಲ್ಲಿ ಅಶಾಂತಿಯ ಹೊಗೆಯಾಡುತ್ತಿರುತ್ತದೆ. ‘ಇವೆಲ್ಲವುಗಳ ಅಂತಿಮ ಫಲವೇನು?’ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಿರುತ್ತನೆ. ಇದ್ದಕ್ಕಿದ್ದಂತೆಯೇ ಒಂದು ದಿನ ಕರ್ಮಮಾರ್ಗದ ಮೇಲೆ ಜಿಹಾಸೆಯಾಗಿ, ಎಲ್ಲವನ್ನೂ ತೊರೆದು ತನ್ನ ಆಪ್ತಮಿತ್ರ ಗೋವಿಂದನೊಡನೆ ಸಮಣವಾಗುತ್ತಾನೆ. ಈ ಎರಡನೆಯ ಘಟ್ಟದಲ್ಲಿ ಪ್ರಾಪಂಚಿಕ ಸುಖಗಳ ನಿರಾಕರಣೆ, ಇಂದ್ರಿಯ ನಿಗ್ರಹ, ಮತ್ತು ಯೋಗಾಭ್ಯಾಸ ಇವುಗಳಲ್ಲಿ ಮಗ್ನನಾಗುತ್ತಾನೆ. ಆದರೆ, ಮತ್ತೆ ಮತ್ತೆ ‘ನನ್ನ ಗುರಿಯೇನು? ನಾನದನ್ನು ಮುಟ್ಟಿದ್ದೇನೆಯೆ?’ ಎಂಬ ಪ್ರಶ್ನೆ ಕಾಡುತ್ತದೆ. ಒಂದು ಸಂದರ್ಭದಲ್ಲಿ ಭಗವಾನ್ ಬುದ್ಧನ ಭೇಟಿಯಾದನಂತರ, ಬುದ್ಧನಂತೆ ತಾನೇ ತನ್ನ ದಾರಿಯನ್ನು ಮತ್ತು ಗುರಿಯನ್ನು ಶೋಧಿಸಬೇಕೆಂಬ ಅರಿವು ಗಟ್ಟಿಯಾಗುತ್ತದೆ.

ಈ ಬದುಕಿರುವುದು ಅದರಿಂದ ದೂರವಾಗುವುದಕ್ಕಿಲ್ಲ – ಎಂಬ ಅರಿವು ಅವನನ್ನು ಮತ್ತೆ ಪ್ರಾಪಂಚಿಕ ಬಂಧನಕ್ಕೆ ತಳ್ಳುತ್ತದೆ. ಇದು ಮೂರನೆಯ ಘಟ್ಟ. ಈ ಘಟ್ಟದಲ್ಲಿ, ರಾಜಧಾನಿಗೆ ಬಂದು, ಅಲ್ಲಿ ಕಮಲಾ ಎಂಬ ರಾಜನರ್ತಕಿಯ ಪ್ರೇಮಿಯಾಗಿ, ರಾಮಸ್ವಾಮಿಯೆಂಬ ಶ್ರೀಮಂತ ವರ್ತಕನ ಬಳಿ ಕೆಲಸಕ್ಕೆ ಸೇರಿ ಅನಂತರ ಆ ವರ್ತಕನ ವ್ಯವಹಾರದಲ್ಲಿ ಪಾಲುದಾರನಾಗುತ್ತಾನೆ. ಬಹು ಬೇಗ ಅರ್ಥಾರ್ಜನೆ, ವಿಷಯಾಸಕ್ತಿ, ಜೂಜು-ವಿನೋದ ಮುಂತಾದವುಗಳು ಅವನನ್ನು ಸಂಪೂರ್ಣವಾಗಿ ಸಂಸಾರ ಸಾಗರದಲ್ಲಿ ಮಳುಗಿಸುತ್ತವೆ. ಆದರೆ, ಕೆಲ ವರ್ಷಗಳ ನಂತರ ‘ಈ ಸಂಸಾರ ದೇಹಕ್ಷಯ ಮತ್ತು ಸಾವಿನೆಡೆಗೇ ಹೊರತು ಮತ್ತೆಲ್ಲಿಗೂ ತನ್ನನ್ನು ಒಯ್ಯಲಾರದು’ ಎಂಬ ಅರಿವು ಮತ್ತೆ ಅವನನ್ನು ಜಾಗ್ರತಗೊಳಿಸುತ್ತದೆ; ಮತ್ತು ಹಿಂದಿನಂತೆ. ಹಠಾತ್ತನೆ ತನ್ನೆಲ್ಲಾ ಸಂಪತ್ತನ್ನು ದಾನಮಾಡಿ, ಕಮಲಾಗೆ ವಿದಾಯ ಹೇಳಿ, ಉಟ್ಟ ಬಟ್ಟೆಯಲ್ಲಿ ಕಾಡಿಗೆ ಹೊರಟು ಬಿಡುತ್ತಾನೆ.

ಕೊನೆಯ ಘಟ್ಟದಲ್ಲಿ, ತನ್ನ ತಿರುಗಾಟದಲ್ಲಿ ಒಂದು ನದಿಯ ಬಳಿ ಭೇಟಿಯಾದ ವಾಸುದೇವನೆಂಬ ಅಂಬಿಗನೊಡನೆ ತಾನೂ ನಾವೆಯನ್ನು ನಡೆಸುತ್ತಾ, ವಿರಕ್ತ ಜೀವನವನ್ನು ನಡೆಸಲು ಪ್ರಾರಂಭಿಸುತ್ತಾನೆ. ಕೆಲ ದಿನಗಳ ನಂತರ, ಕಮಲಾ ತನ್ನ ಮಗನೊಡನೆ ಅಲ್ಲಿಗೆ ಬಂದು ಅವನನ್ನು ಸಂಧಿಸುತ್ತಾಳೆ. ಆದರೆ, ಅಲ್ಲಿಯೇ ಹಾವು ಕಚ್ಚಿ ದುರದೃಷ್ಟವಶಾತ್ ಕಮಲಾ ಸಾವನ್ನಪುತ್ತಾಳೆ ಮತ್ತು ಸಿದ್ಧಾರ್ಥ ತನ್ನ ಮಗನೊಡನೆ ವಾಸಿಸಲು ಪ್ರಾರಂಭಿಸುತ್ತಾನೆ. ಮಗನ ಮೇಲಿನ ಅತೀವ ಮೋಹದಿಂದ ಮತ್ತೆ ಸಂಸಾರದ ಬಂಧನದಲ್ಲಿ ಸಿಕ್ಕಿಬಿದ್ದು, ಸಿದ್ಧಾರ್ಥ ಅವನನ್ನು ತನ್ನ ರೀತಿಯಲ್ಲಿಯೇ ಬೆಳೆಸಲು ಪ್ರಯತ್ನಿಸುತ್ತಾನೆ. ಆದರೆ ಒಂದು ದಿನ, ಅವನ ಮಗನೂ ತನ್ನ ಬದುಕನ್ನು ತನಗೆ ಸರಿಕಂಡ ದಾರಿಯಲ್ಲಿ ರೂಪಿಸಿಕೊಳ್ಳಲು ಅಲ್ಲಿಂದ ಓಡಿಹೋಗುತ್ತನೆ. ಈಗ ನಿಜವಾಗಿಯೂ ಎಲ್ಲಾ ಬಂಧನಗಳಿಂದ ಮುಕ್ತನಾಗಿ ಸಿದ್ಧಾರ್ಥ, ನಿರಂತರ ಪ್ರವಹಿಸುತ್ತಿರುವ ನದಿ, ಬೀಸುವ ಗಾಳಿ, ನಿಯಮಿತ ಸೂರ್ಯೋದಯಾಸ್ತಗಳು ಇವುಗಳ ಶ್ರುತಿಯನ್ನು ಅಂತರ್ಗತವಾಗಿಸಿಕೊಂಡು, ‘ಸರ್ವ ಸೃಷ್ಟಿಯಲ್ಲಿಯೂ ಇರುವ ಏಕತೆ’ಯನ್ನು ಅರಿತು, ಆತ್ಮಜ್ಞಾನಿಯಾಗುತ್ತಾನೆ.

ಕಾದಂಬರಿಯ ಇತಹ ಗತಿ ಸ್ಪಷ್ಟಪಡಿಸುವಂತೆ, ಸಿದ್ಧಾರ್ಥ ‘ಇರುವಿಕೆಯಿಂದ ಆಗುವಿಕೆಯ’ ತೊಳಲಾಟದ ದಾಖಲೆ. ಆದ್ದರಿಂದ ಈ ಕೃತಿಯನ್ನು ಅಸ್ತಿತ್ವವಾದೀ ಕಾದಂಬರಿಯೆಂದೂ ನೋಡಬಹುದು. ಆದರೆ, ನಮಗೆ, ಭಾರತೀಯರಿಗೆ, ಸಿದ್ಧಾರ್ಥ ತುಂಬಾ ಅರ್ಥಪೂರ್ಣವಾಗುವುದು ಉಪನಿಷತ್ತುಗಳ ಹಿನ್ನೆಲೆಯಲ್ಲ.

ಎಲ್ಲರಿಗೂ ಗೊತ್ತಿರುವಂತೆ ಉಪನಿಷತ್ತುಗಳು ವೇದೋಕ್ತ ಕರ್ಮಖಾಂಡವನ್ನು ಮತ್ತು ಯಾವುದೇ ಬಗೆಯ ಒಂದು ವೈಚಾರಿಕ ಪ್ರಣಾಲಿಯನ್ನು ತಿರಸ್ಕರಿಸುತ್ತವೆ; (‘ವೇದಜಡ’ ಎಂಬ ಮಾತು ಅವುಗಳಲ್ಲಿ ಮತ್ತೆ ಮತ್ತೆ ಬರುತ್ತದೆ.) ಅವುಗಳ ಆಕೃತಿ ‘ಸಂವಾದತ್ಮಕ’; ಗುರು-ಶಿಷ್ಯರ ಸಂವಾದದ ಮೂಲಕವೇ ಅವುಗಳಲ್ಲಿ ಬ್ರಹ್ಮಜಿಜ್ಞಾಸೆ ನಡೆಯುತ್ತದೆ.

ಇಂತಹುದೇ ಸಂವಾದಾತ್ಮಕ ಆಕೃತಿಯನ್ನು ನಾವು ಕಾದಂಬರಿಯಲ್ಲಿ ಕಾಣುತ್ತೇವೆ. ಅಲ್ಲಲ್ಲಿ ನಿರೂಪಣಾ ಭಾಗಗಳಿದ್ದರೂ ಕಾದಂಬರಿಯ ಹೆಚ್ಚಿನ ಭಾಗ ಸಿದ್ಧಾರ್ಥ-ಗೋವಿಂದ, ಸಿದ್ಧಾರ್ಥ-ಬುದ್ಧ, ಸಿದ್ಧಾರ್ಥ-ವಾಸುದೇವ ಇವರುಗಳ ನಡುವೆ ನಡೆಯುವ ಸಂವಾದಗಳ ಮೂಲಕ ಸಾಗುತ್ತದೆ. ಕಾದಂಬರಿಯ ಕೊನೆಯ ಭಾಗವಂತೂ ಸಂಪೂರ್ಣವಾಗಿ ಗೋವಿಂದನ ಪ್ರಶ್ನೆಗಳು ಮತ್ತು ಸಿದ್ಧಾರ್ಥನ ಉತ್ತರಗಳು ಇವುಗಳಿಂದಲೇ ಕೂಡಿದೆ.

ಇನ್ನೂ ಮುಖ್ಯವಾಗಿ, ಈ ಕಾದಂಬರಿಯ ಒಟ್ಟು ಆಶಯ ಉಪನಿಷತ್ತುಗಳ ಮುಖ್ಯ ಆಶಯವನ್ನು ಪ್ರತಿಫಲಿಸುತ್ತದೆ. ತನ್ನ ಬದುಕಿನ ಎರಡನೆಯ ಘಟ್ಟದಲ್ಲಿ ಬುದ್ಧನೂ ಸೇರಿದಂತೆ ಯಾವ ಗುರುವಿನ ಶಿಷ್ಯನಾಗಲೂ ಸಿದ್ಧಾರ್ಥ ನಿರಾಕರಿಸುತ್ತಾನೆ. ಕಾರಣ: ನಿಜವಾದ ಜ್ಞನವನ್ನು, ಆತ್ಮಜ್ಞನವನ್ನು, ಯಾವ ಗುರುವೂ ಶಿಷ್ಯನಿಗೆ ನೀಡಲಾರನು; ಅದನ್ನು ಶಿಷ್ಯ ತಾನೇ ಅರ್ಜಿಸಬೇಕು: “ನಿನ್ನ ಗುರುಗಳಿಂದ ಮತ್ತು ಅವರ ಬೋಧನೆಯಿಂದ ನೀನೇನನ್ನು ಕಲಿಯಲು ಪ್ರಯತ್ನಿಸಿದೆ? ಅವರೇನೋ ನಿನಗೆ ಸಾಕಷ್ಟು ಕಲಿಸಿದರು. ಆದರೆ, ಅವುರ ಕಲಿಸಲು ಅಸಾಧ್ಯವಾದದ್ದೇನು?… ಆತ್ಮದ ಬಗ್ಗೆ, ಆತ್ಮದ ಸ್ವರೂಪದ ಬಗ್ಗೆ. ಇದನ್ನು ಯಾರೂ ಕಲಿಸಲಾರರು.” (ಪು.೩೦-೩೧).

ಇದೇ ಗ್ರಹಿಕೆಯನ್ನು ಬಹುತೇಕ ಇದೇ ಶಬ್ದಗಳಲ್ಲಿ ಕಠೋಪನಿಷತ್ತಿನ ಈ ಭಾಗ ಸ್ಪಷ್ಟಪಡಿಸುತ್ತದೆ: “ನಾಯಮಾತ್ಮಾ ಪ್ರವಚನೇನ ಲಭ್ಯೋ / ನ ಮೇಧಯಾ ನ ಬಹುನಾ ಶ್ರುತೇನ / ಯಮೆವೈಷ ವೃಣುತೆ ತೇನ ಲಭ್ಯಃ / ತಸ್ಯೆ ಷಾ ಆತ್ಮಾ ವಿವೃಣುತೆ ತನೂಂ ಸ್ವಾಂ //” (ಆತ್ಮನು ಶಾಸ್ತ್ರಾಧ್ಯಯನದ ಮೂಲಕ ಲಭಿಸುವುದಿಲ್ಲ; ಬುದ್ಧಿಶಕ್ತಿಯಿಂದ ಅಥವಾ ಶ್ರೇಷ್ಠ ಉಪದೇಶದಿಂದಲೂ ಲಭಿಸುವುದಿಲ್ಲ. ಯಾರು ಆರಿಸಲ್ಪಡುತ್ತಾರೋ ಅವರಿಗೆ ಮಾತ್ರ ಅದು ಪ್ರಾಪ್ತಿಯಾಗುತ್ತದೆ – ಏಕೆಂದರೆ ‘ಅವರುಗಳು’ ಅವನನ್ನು ಆರಿಸುತ್ತಾರೆ. ಆ ರೀತಿ ಆಯ್ಕೆಗೊಂಡವರಿಗೆ ಮಾತ್ರ ಆತ್ಮಪ್ರಾಪ್ತಿಯಾಗುತ್ತದೆ.)

ಕಾದಂಬರಿಯಲ್ಲಿ ಅಲ್ಲಲ್ಲಿ ಹೆಸೆ ನೇರವಾಗಿ ಕೆಲವು ಉಪನಿಷದ್ವಾಕ್ಯಗಳನ್ನು ಉದಹರಿಸುತ್ತಾನೆ: “ಪ್ರಣವೋ ಧನುಃ, ಶರೋಹ್ಯಾತ್ಮಾ, ಬ್ರಹ್ಮತಲ್ಲಕ್ಷ್ಯ ಮುಚ್ಯತೆ” (ಮಾಂಡೂಕ್ಯ), ಇತ್ಯಾದಿ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಉಪನಿಷದ್ವಾಣಿಗೆ ಸಮಾನವಾದ ಗ್ರಹಿಕೆ ಕಂಡುಬರುತ್ತದೆ. ನಿದರ್ಶನಾರ್ಥವಾಗಿ: ಕೃತಿಯ ಕೊನೆಯಲ್ಲಿ ಒಂದು ಭವ್ಯ ದೃಶ್ಯದ ವರ್ಣನೆಯಿದೆ. ಮಂದಸ್ಮಿತನಾದ ಸಿದ್ಧಾರ್ಥನ ಹಣೆಯನ್ನು ಗೋವಿಂದನು ಸ್ಪರ್ಶಿಸಿದಾಗ ಅವನಿಗೆ ನೂರಾರು, ಸಾವಿರಾರು ಮುಖಗಳು ಒಂದರ ಹಿಂದೆ ಒಂದು ಸತತವಾಗಿ ಪ್ರವಹಿಸುವುದು ಕಾಣಿಸುತ್ತದೆ;” … ಮತ್ತು, ಆ ಎಲ್ಲಾ ಆಕಾರಗಳು ಮತ್ತು ಮುಖಗಳು ಸ್ತಬ್ಧವಾದುವು, ಹರಿದುವು, ತಮ್ಮನ್ನೇ ತಾವು ಮರು ಸೃಷ್ಟಿಸಿದುವು, ಒಂದರ ಪಕ್ಕ ಒಂದು ಈಜಿದುವು, ಮತ್ತು ಒಂದರೊಳಗೊಂದು ಐಕ್ಯವಾದುವು…” (ಪು. ೧೧೮). ಗೋವಿಂದನು ಕಾಣುವ ಈ ದೃಶ್ಯ ಒಂದೆಡೆ ಗೀತೆಯ ‘ವಿಶ್ವರೂಪ ದರ್ಶನ’ವನ್ನು ನೆನಪಿಸಿದರೆ, ಮತ್ತೊಂದೆಡೆ ಛಾಂದೋಗ್ಯೋಪನಿಷತ್ತಿನ ಈ ಕಾಣ್ಕೆಯನ್ನು ಚಿತ್ರಿಸುತ್ತದೆ: “ಸ ಯ ಏಷೋ ಅನಿಮೈತದಾತ್ಮ್ಯಂ ಇದಂ ಸರ್ವಂ ತತ್ ಸತ್ಯಂ/ಸ ಆತ್ಮಾ ತತ್ವಮಸಿ ಶ್ವೇತಕೇತೋ//” (ಈ ವಿಶ್ವವೆಲ್ಲವೂ ‘ಅದರಿಂದ’ ತುಂಬಿದೆ; ಅದೇ ಸತ್ಯ ಮತ್ತು ಅದೇ ಆತ್ಮ. ಅದೇ ನೀನಾಗಿದ್ದೀಯೆ, ಓ ಶ್ವೇತಕೇತು.)

ಒಟ್ಟಾರೆಯಾಗಿ ಹೇಳಬೇಕಾದರೆ, ಸಿದ್ಧಾರ್ಥ ಕಾದಂಬರಿಯ ಆಕೃತಿಯ ಮತ್ತು ಆಶಯ ಇವೆರಡೂ, ಸಂಕ್ಷಿಪ್ತ ರೂಪದಲ್ಲಿ, ತೈತ್ತರೀಯೋಪನಿಷತ್ತಿನ ‘ಭೃಗುವಲ್ಲಿ’ ಎಂಬ ಭಾಗದಲ್ಲಿ ಕಂಡುಬರುತ್ತವೆ. ಈ ಪ್ರಸಿದ್ಧ ಭಾಗವನ್ನು ಹೀಗೆ ಸಂಗ್ರಹಿಸಬಹುದು:

ಒಮ್ಮೆ ಭೃಗು ತನ್ನ ತಂದೆ ವರುಣನ ಬಳಿಗೆ ಹೋಗಿ ‘ಬ್ರಹ್ಮನ ಬಗ್ಗೆ ನನಗೆ ತಿಳಿಸಿರಿ’ ಎಂದು ಕೇಳಿದನು. ವರಣನು ‘ತಪಸ್ಸು ಮಾಡು; ತಿಳಿ’ ಎಂದು ಉತ್ತರಿಸುತ್ತಾನೆ. ಭೃತು ತಪಸ್ಸು ಮಾಡಿ, ಕೆಲ ಕಾಲದ ನಂತರ, ‘ಅನ್ನದಿಂದಲೆ ಸಕಲ ಜೀವಿಗಳು ಜನ್ಮ ತಾಳುತ್ತಾರೆ; ಅನ್ನದಿಂದಲೇ ಜೀವಿಸುತ್ತಾರೆ; ಮತ್ತು ಕೊನೆಗೆ ಅನ್ನಕ್ಕೇ ಮರಳುತ್ತಾರೆ. ಆದ್ದರಿಂದ ಅನ್ನವೇ ಬ್ರಹ್ಮ’ ಎಂದು ಅರಿಯುತ್ತಾನೆ. ಆನಂತರ ತನ್ನ ತಂದೆಯ ಬಳಿಗೆ ಹೋಗಿ ತನ್ನ ಅರಿವು ಸರಿಯೇ ಎಂದು ಕೇಳುತ್ತಾನೆ. ತಂದೆಯಾದರೋ ‘ತಪಸ್ಸು ಮಾಡು; ತಿಳಿ’ ಎಂದಷ್ಟೇ ಉತ್ತರಿಸುತ್ತಾನೆ. ಮತ್ತೆ ತಪಸ್ಸು ಮಾಡಿದ ಭೃಗು, ಕ್ರಮವಾಗಿ, ಪ್ರಾಣವೇ ಬ್ರಹ್ಮ, ಮನಸ್ಸೇ ಬ್ರಹ್ಮ, ವಿಜ್ಞಾನವೇ ಬ್ರಹ್ಮ ಎಂದು ತಿಳಿದು ತಂದೆಯ ಬಳಿಗೆ ಹೋದಾಗ ಪ್ರತಿಸಲವೂ ‘ತಪಸ್ಸು ಮಾಡು ; ತಿಳಿ’ ಎಂದೇ ಉತ್ತರ ಬರುತ್ತದೆ. ಕೊನೆಗೆ, ಬಹು ಕಾಲದ ನಂತರ, ಭೃಗು ‘ಆನಂದೋ ಬ್ರಹ್ಮಮಿತ್ಯಜಾನನ್ – ಆನಂದವೇ ಬ್ರಹ್ಮ’ ಎಂದರಿಯುತ್ತಾನೆ. ಅಲ್ಲಿಂದ ಮುಂದೆ ಯಾವ ಪ್ರಶ್ನೆಗಳೂ ಇಲ್ಲ. ಯಾವ ಉತ್ತರಗಳೂ ಇಲ್ಲ.

(ಪ್ರಜಾವಾಣಿ, ೨೦೦೩)

* * *