ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು
ಅಡಿಗ

ನಾನು ಅಮೆರಿಕಾದ ಮಯಾಮಿ ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ. ಪದವಿಗಾಗಿ ವ್ಯಾಸಂಗ ಮಾಡುತ್ತಿದ್ದಾಗ ನಡೆದ ಘಟನೆ ಇದು (೧೯೭೮-೭೯). ಪಿ.ಎಚ್.ಡಿ. ವ್ಯಾಸಂಗದಲ್ಲಿ ಎಲ್ಲರಿಗೂ ಅತ್ಯಂತ ಕಷ್ಟಕರವಾದ ಘಟ್ಟವೆಂದರೆ ‘ಕಾಂಪ್ರಹೆನ್ಸಿನ್ ಪರೀಕ್ಷೆ’: ಮೂರು ಮೂರು ತಾಸು ಅವಧಿಯ ನಾಲ್ಕು ಪ್ರಶ್ನಾಪತ್ರಿಕೆಗಳು ಮತ್ತು ನಾಲ್ಕು ತಾಸು ಅವಧಿಯ ವಿಶೇಷ ಅಧ್ಯಯನ ಕ್ಷೇತ್ರದ ಪ್ರಶ್ನಾಪತ್ರಿಕೆ; ಇವೆಲ್ಲದರಲ್ಲಿಯೂ ತೇರ್ಗಡೆಯಾದರೆ ೩-೪ ತಾಸು ಅವಧಿಯ ಮೌಖಿಕ ಪರೀಕ್ಷೆ. ಈ ಪರೀಕ್ಷೆಗೆ ತಯಾರಿ ನಡೆಸಲು ನಾವೊಂದು ಐದು ಜನ ಸಹಪಾಠಿಗಳು ಪ್ರತಿದಿನ ಒಂದು ಕಡೆ ಸೇರಿ ಸಂಬಂಧಿಸಿದ ಪಠ್ಯಗಳ ಬಗ್ಗೆ ಹಾಗೂ ಅವುಗಳ ವ್ಯಾಖ್ಯಾನಕ್ರಮಗಳ ಬಗ್ಗೆ ಚರ್ಚಿಸುತ್ತಿದ್ದೆವು. ಒಂದು ಸಂದರ್ಭದಲ್ಲಿ ಶೆಕ್ಸ್‌ಪಿಯರ್‌ನ ಮರ್ಚ್ಂಟ್ ಆಫ್ ವೆನಿಸ್ ನಾಟಕದ ಶೈಲಾಕ್ ಪಾತ್ರದ ಬಗ್ಗೆ ಕಾವೇರಿದ ಚರ್ಚೆ ನಡೆಯುತ್ತಿದ್ದಾಗ, ಒಬ್ಬ ಯಹೂದಿ ವಿದ್ಯಾರ್ಥಿ ಸ್ವಲ್ಪ ಉದ್ವೇಗದಿಂದ ಹೀಗೆ ವಾದಿಸಿದ : “ಶೇಕ್ಸ್‌ಪಿಯರ್‌ನ ಮಾನವೀಯತೆ, ‘ಕರುಣೆಯನ್ನು ಕುರಿತ ಅವನ ಅಮೋಘ ಹೇಳಿಕೆ’ ಇತ್ಯಾದಿಗಳ ಬಗ್ಗೆ ಏಕೆ ಚರ್ಚಿಸುತ್ತೀರಿ, ನನಗರ್ಥವಾಗುವುದಿಲ್ಲ. ನಾಟಕದಲ್ಲಿ ಆಗುವುದಾದರೂ ಏನು? ಮೊದಲೆಲ್ಲಾ ಕರುಣೆ ಕ್ಷಮೆ, ಇತ್ಯಾದಿಗಳ ಬಗ್ಗೆ ಮಾತನಾಡುತ್ತಾ, ಶೈಲಾಕ್‌ನನ್ನು ತನ್ನ ಮಾತಿನ ಬಲೆಯೊಳಗೆ ಸಿಕ್ಕಿಸಿಕೊಂಡು, ಅನಂತರ ಪೋರ್ಶಿಯಾ ಮಾಡುವುದೇನೆಂದರೆ ಅವನ ಎಲ್ಲಾ ಸಂಪತ್ತನ್ನು ಕಿತ್ತುಕೊಂಡು, ಅವನನ್ನು ಬಲಾತ್ಕಾರದಿಂದ ಮತಾಂತರಿಸುವುದು. ಹಾಗೆ ನೋಡಿದರೆ, ನಿಜವಾಗಿ ‘ಚಿನ್ನದ ಕರಂಡಕ’ ಎಂದರೆ ಪೋರ್ಶಿಯಾ ಮತ್ತು ಆ ಪಾತ್ರವನ್ನು ಸೃಷ್ಟಿಸಿದ ಶೇಕ್ಸ್‌ಪಿಯರ್; ಹೊರಗೆ ತೋರಿಕೆಯ ಪ್ರೀತಿ-ಔದಾರ್ಯ, ಒಳಗೆ ಕ್ರೌರ್ಯದ ಪೂತ್ಕಾರ.” ಈ ನಿಲುವಿಗೆ ಸ್ಪಂದಿಸುತ್ತಾ ಒಬ್ಬ ಕ್ರಿಶ್ಚಿಯನ್ ವಿದ್ಯಾರ್ಥಿ ಹೀಗೆ ವಾದಿಸಿದ : “ನಿಜ; ನೀನು ಹೇಳುವುದೆಲ್ಲವೂ ಸ್ವೀಕಾರಾರ್ಹ – ಇಂದಿನ ಸಾಮಾಜಿಕ – ನೈತಿಕ ಮಾನದಂಡಗಳ ನೆಲೆಯಲ್ಲಿ. ಆದರೆ, ಶೇಕ್ಸ್‌ಪಿಯರ್ ಇದ್ದುದು ೧೬ನೆಯ ಶತಮಾನದಲ್ಲಿ. ಅಂದು ಯಹೂದಿಗಳಿಗೆ ತಮ್ಮದೇ ಆದ ರಾಷ್ಟ್ರವಿರಲಿಲ್ಲ. ಎಲ್ಲಾ ದೇಶಗಳಲ್ಲಿಯೂ ಅವರು ಪರದೇಶಿಗಳಾಗಿಯೇ ಇರಬೇಕಾಗಿತ್ತು. ಯಾವ ಸ್ಥರಾಸ್ತಿಯನ್ನು ಮಾಡಲೂ ಅವರಿಗೆ ಹಕ್ಕಿರಲಿಲ್ಲ. ಯಹೂದೀ ಜನಾಂಗದ ಬಗ್ಗೆ ಇಡೀ ಯುರೋಪಿನಲ್ಲಿ ಹತ್ತಿ ಉರಿಯುತ್ತಿದ್ದ ದ್ವೇಷದ ಪರಿಸ್ಥಿತಿಯಲ್ಲಿಯೂ ಶೇಕ್ಸ್‌ಪಿಯರ್ ಯಹೂದಿಗಳೂ ಮನುಷ್ಯರು ಎಂದು ತೋರಿಸುತ್ತಾನೆ: ‘ಯಹೂದಿಗೆ ಕಣ್ಣುಗಳಿಲ್ಲವೇನು? ಅವನಿಗೆ ಕಿವಿಗಳಿಲ್ಲವೇನು? ನೀವು ನಮಗೆ ಕಚಗುಳಿ ಮಾಡಿದರೆ ನಾವು ನಗುವುದಿಲ್ಲವೇನು? ನೀವು ನಮ್ಮನ್ನು ಚುಚ್ಚಿದರೆ ನಮ್ಮ ಮೈಯಿಂದಲೂ ರಕ್ತ ಹರಿಯುವುದಿಲ್ಲವೇನು?” ಎಂದು ಯಹೂದಿಯಾದ ಶೈಲಾಕ್‌ನಿಂದ ಹೇಳಿಸುತ್ತಾನೆ. ಅಂದಿನ ಕಾಲಘಟ್ಟದಲ್ಲಿ ಇದಕ್ಕಿಂತ ಹೆಚ್ಚು ಏನು ಮಾಡಲು ಸಾಧ್ಯವಿತ್ತು? ಚರ್ಚೆ ಅನಂತರ ಟೆಂಪೆಸ್ಟ್ ನಾಟಕದ ಪ್ರಾಸ್‌ಪೆರೋ ಪಾತ್ರದ ಬಗ್ಗೆ ಹೊರಳಿತು.

* * *

ಕನ್ನಡದಲ್ಲಿ, ಇಂಗ್ಲೀಷ್‌ನಲ್ಲಿ, ಮತ್ತು ಇತರ ಭಾಷೆಗಳಲ್ಲಿ ಟಿಪುವಿನ ಬಗ್ಗೆ ನಾನು ಬೇಕಾದಷ್ಟು ನಾಟಕ-ಕಾದಂಬರಿಗಳು, ಚರಿತ್ರೆಗಳು, ನೆನಪುಗಳು, ಆತ್ಮಕಥೆಗಳು ಇತ್ಯಾದಿ ಪ್ರಕಟವಾಗಿವೆ; ಆದರೂ ಟಿಪುವಿನ ವ್ಯಕ್ತಿತ್ವದ ಬಗ್ಗೆ ಇದಮಿತ್ಥಂ ಎಂಬ ಗ್ರಹಿಕೆ ಸಾಧ್ಯವಾಗಿಲ್ಲ. ಈಗ ನಾವು ಮಾಡಬಹುದಾದ ಕಾರ್ಯವೆಂದರೆ, ಮೊದಲಿಗೆ ಟಿಪುವಿನ ಬಗ್ಗೆ ಸರಿಸುಮಾರು ಎಲ್ಲಾ ವಿದ್ವಾಂಸರೂ ಒಪುವ ಕೆಲ ಸಂಗತಿಗಳನ್ನು ದಾಖಲಿಸಿ, ಅನಂತರ ಮುಂದುವರೆಯುವುದು:

(೧) ಟಿಪು ಅಸಮಾನ್ಯ ವೀರ ಮತ್ತು ರಣನೀತಿಯಲ್ಲಿ ಪಾರಂಗತ. ಅವನ ರಣನೀತಿ ಎಷ್ಟು ಪ್ರಬಲವಾಗಿತ್ತೆಂದರೆ “ತನ್ನ ಸೈನ್ಯದ ಶೀಘ್ರ ಚಲನೆಯಿಂದ ಮತ್ತು ಹಠಾತ್ತನೆ ಯುದ್ಧಭೂಮಿಯನ್ನು ಬದಲಾಯಿಸುವ ತನ್ನ ಚಾತುರ್ಯದಿಂದ ಬ್ರಿಟಿಷ್ ಸೇನಾಪತಿಗಳನ್ನು ದಿಗ್ಭ್ರಮೆಗೊಳಿಸುತ್ತಿದ್ದನು” ಎಂದು ಇತಿಹಾಸಜ್ಞ ಪರ್ಸಿವಲ್ ಸ್ಪಿಯರ್ ಹೇಳುತ್ತಾನೆ (ಪು.೯೬).

(೨) ಅವನಿಗೆ ಸಮಕಾಲೀನ ಯೂರೋಪಿನಲ್ಲಾಗುತ್ತಿದ್ದ ಸಂಶೋಧನೆ-ಆವಿಷ್ಕಾರಗಳನ್ನು ಕುರಿತು ಅಪಾರ ಆಸಕ್ತಿಯಿತ್ತು: ಮತ್ತು ಎಲ್ಲವನ್ನೂ ಪ್ರಯೋಗ ಮಾಡಿ ನೋಡುವ ವೈಜ್ಞಾನಿಕ ದೃಷ್ಟಿಕೋನವಿತ್ತು. “ಅಕ್ಬರನನ್ನು ನೆನಪಿಸುವಂಥಹ ಕುತೂಹಲ ಮತ್ತು ಚಿಕಿತ್ಸಕ ಬುದ್ದಿ ಅವನಿಗಿತ್ತು” ಎಂದು ಎಡ್ವರ್ಡ್ ಥಾಮ್‌ಸನ್ ಮತ್ತು ಜಿ.ಟಿ.ಗ್ಯಾರಟ್ ಹೇಳುತ್ತಾರೆ. (ಪು.೨೦೬) ಇನ್ನೂ ನಿಖರವಾಗಿ, ‘ಆಗ ತಾನೇ ಫ್ರಾನ್ಸ್‌ನಲ್ಲಿ ಕಂಡುಹಿಡಿದಿದ್ದ ಥರ್ಮಾಮೀಟರ್ ಬಗ್ಗೆ ಅವನಿಗೆ ಅಪಾರ ಕುತೂಹಲವಿತ್ತು. ಮಸ್ಕತ್ ಸನಿಹದ ದ್ವೀಪಗಳಿಂದ ರೇಷ್ಮೆ ಹುಳುಗಳನ್ನು ತರಿಸಿ, ಅವುಗಳ ತಳಿಯನ್ನು ವೃದ್ಧಿಪಡಿಸುವುದರ ಬಗ್ಗೆ ಅವನಿಗೆ ತೀವ್ರ ಕಾಳಜಿಯಿತ್ತು’ ಎಂದು ಗಿರೀಶ್ ಕಾರ್ನಾಡ್ ತಮ್ಮ ನಾಟಕದಲ್ಲಿ ದರ್ಶಿಸುತ್ತಾರೆ.

(೩) ಇತರ ರಾಷ್ಟ್ರಗಳೊಡನೆ ಮತ್ತು ದೇಶಗಳೊಡನೆ ವ್ಯಾಪರವನ್ನು ಬೆಳೆಸಿ, ಆ ಮೂಲಕ ತನ್ನ ರಾಜ್ಯವನ್ನು ಶ್ರೀಮಂತಗೊಳಿಸುವ ದೂರದೃಷ್ಟಿ ಟಿಪುವಿನಲ್ಲಿತ್ತು. ಕಾರ್ನಾಡರ ನಾಟಕದಲ್ಲಿ ಟಿಪು ಒಂದು ಸಂದರ್ಭದಲ್ಲಿ ಹೀಗೆ ಹೇಳುತ್ತಾನೆ: “ಸೈನಿಕರು, ಆಯುಧಗಳು, ಎಲ್ಲಾ ನಿಜ. ಆದರೆ ಮಹತ್ವದ್ದು ವ್ಯಾಪಾರ-ಉದ್ಯೋಗ-ಹಣ” (ಪು.೨೭). “ಅವನು ಕೆನರಾದ (ಪಶ್ಚಿಮ ಕರಾವಳಿ) ಉದ್ದಿಮೆಗಳನ್ನು ಮತ್ತು ಮೈದಾನ ಭಾಗದ (ಹಳೆಯ ಮೈಸೂರು ಪ್ರಾಂತ್ಯದ) ಕೃಷಿಯನ್ನು ಎಷ್ಟು ವೃದ್ಧಿ ಪಡಿಸಿದನೆಂದರೆ ಮೈಸೂರಿನ ಪ್ರಜೆಗಳು ಇಡೀ ಭಾರತದಲ್ಲೆ ಅತ್ಯಂತ ಸುಖ-ಸಂತೋಷಗಳಿಂದ ಇದ್ದರು” ಎಂದು ಮಿಷೋ ಮಂಡಿಸುತ್ತಾನೆ (ಪ.೭೩-೭೪).

(೪) ಆಡಳಿತ: ಟಿಪ್ಪೂವಿನಲ್ಲಿ ಆಡಳಿತ ದಕ್ಷತೆ ಮತ್ತು ಸುಧಾರಣಾ ಮನೋಭಾವವಿತ್ತು. ಟಿಪು ತನ್ನ ಕಾಲದ “ಮೊದಲನೆಯ ದರ್ಜೆಯ ಸಮರ್ಥ ರಾಜಕಾರಣಿ,” ಮತ್ತು ಪಾನನಿರೋಧ-ವೇಶ್ಯಾ ಪದ್ದತಿಯ ನಿಷೇಧ-ರೈತರಿಗೆ ಸುಲಭ ಕೃಷಿ ಸಾಲ ಇತ್ಯಾದಿ ಸುಧಾರಣೆಗಳನ್ನು ಮೊದಲಿಗೆ ಭಾರತದಲ್ಲಿ ಜಾರಿಗೆ ತಂದವನು ಟಿಪು ಎಂದು ಮಿಷೋ, ಕಿರಮಾನಿ, ಕಬಿರ್ ಕೌಸರ್, ಇತ್ಯಾದಿ ಎಲ್ಲಾ ಇತಿಹಾಸಜ್ಞರೂ ಒಪ್ಪುತ್ತಾರೆ.

(೫) ತಾನು ಅಧಿಕಾರವನ್ನು ವಹಿಸಿಕೊಂಡ ಕೂಡಲೇ ಟಿಪು ಪರ್ಶಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿ, ಅನೇಕೆ ಕೋಟೆಗಳ, ಕಛೇರಿಗಳ ಮತ್ತು ತಿಂಗಳು-ವರ್ಷಗಳ ಹೆಸರುಗಳನ್ನು ಪರ್ಶಿಯನ್ ಭಾಷೆಗೆ ಬದಲಾಯಿಸಿದನೆಂದು ಅವನ ಆಸ್ಥಾನದಲ್ಲಿಯೇ ಇದ್ದ ಕಿರ್ಮಾನಿ ಹೇಳುತ್ತಾನಲ್ಲದೆ, ತನ್ನ ಹೇಳಿಕೆಗೆ ನಿದರ್ಶನವಾಗಿ ಹಾಗೆ ಪಶೀಯನ್ ಭಾಷೆಗೆ ಬದಲಾದ ಹೆಸರುಗಳ ಒಂದು ದೊಡ್ಡ ಪಟ್ಟಿಯನ್ನೇ ಕೊಡುತ್ತಾನೆ. (ಪು.೫೭,೧೫೯, ೧೯೦).

ಇಲ್ಲಿ, ಪರ್ಶಿಯನ್ ಭಾಷೆಯ ಉಪಯೋಗಕ್ಕೂ ಟಿಪುವಿನ ಕನ್ನಡ ಭಾಷೆಯ ತಿರಸ್ಕಾರ ಅಥವಾ ಅವನ ಇಸ್ಲಾಂ ಧರ್ಮ ಇವುಗಳಿಗೂ ನಾವು ಸಂಬಂಧವನ್ನೇನೂ ನಾವು ಕಲ್ಪಿಸಬೇಕಾಗಿಲ್ಲ. ೧೬-೧೮ನೇಯ ಶತಮಾನಗಳಲ್ಲಿ ಭಾರತದ ಹೆಚ್ಚಿನ ಹಿಂದು-ಮುಸಲ್ಮಾನ ರಾಜ್ಯಗಳಲ್ಲಿ ಆಡಳಿತ ಭಾಷೆಯಾಗಿದ್ದುದು ಪರ್ಶಿಯನ್; ಮತ್ತು ಈ ಕಾರಣದಿಂದಲೇ ಪ್ರತಿಯೊಂದು ರಾಜ್ಯದ ದುಭಾಷಿಗಳೂ ಹಾಗೂ ಮುನ್ಶೀಗಳೂ ತಮ್ಮ ಸ್ಥಳೀಯ ಭಾಷೆಗಳೊಡನೆ ಪರ್ಶಿಯನ್ ಭಾಷೆಯನ್ನೂ ಕಲಿಯುತ್ತಿದ್ದರು. ಪ್ರಸಿದ್ಧ ಸುಧಾರಣಾವಾದಿ ರಾಜಾ ರಾಮಮೋಹನ ರಾಯ್ ಮುನ್ಶಿಯಾಗಲು ಮೊದಲು ಕಲಿತದ್ದು ಪರ್ಶಿಯನ್; ಅನಂತರ ಕಲಿತದ್ದು ಬೆಂಗಾಳಿ, ಸಂಸ್ಕೃತ ಮತ್ತು ಇಂಗ್ಲಿಷ್.

ಇತಿಹಾಸಕಾರರಲ್ಲಿ ಮತ್ತು ಸಾಹಿತಿಗಳಲ್ಲಿ ಪರಸ್ಪರ ವಿರುದ್ಧ ಅಭಿಪ್ರಾಯಗಳಿರುವುದು ಕೇವಲ ಎರಡೇ ವಿಷಯಗಳ ಬಗ್ಗೆ: ಟಿಪುವಿನಲ್ಲಿದ್ದ/ಇರದಿದ್ದ ರಾಷ್ಟ್ರಪ್ರೇಮ ಮತ್ತು ಟಿಪುವಿನ ಮತಾಂಧತೆ/ಪರಮತ ಸಹಿಷ್ಣುತೆ. ಈಗ ಇವುಗಳನ್ನು ಸ್ವಲ್ಪ ವಿವರವಾಗಿ ನೋಡೋಣ.

ರಾಷ್ಟ್ರಪ್ರೇಮ: ಶೇಖ್ ಅಲಿ, ಭಗವಾನ್ ದಾಸ್ ಗಿದ್ವಾನಿ, ಗಿರೀಶ್ ಕಾರ್ನಾಡ್ ಇತ್ಯಾದಿ ಇತಿಹಾಸಜ್ಞರು/ಸಾಹಿತಿಗಳು ಟಿಪುವಿನಲ್ಲಿ ಅವನ ಸಮಕಾಲೀನ ರಾಜ ನವಾಬರಲ್ಲಿ ಇರದಿದ್ದ ರಾಷ್ಟ್ರದ ಗ್ರಹಿಕೆ ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿಯ ನಿಜ ಸ್ವರೂಪದ ಅರಿವು ಇದ್ದವು ಎಂದು ವಾದಿಸುತ್ತಾರೆ.

ಕಾರ್ನಾಡರ ನಾಟಕದಲ್ಲಿ ಟಿಪು ಒಂದು ಸಂದರ್ಭದಲ್ಲಿ ಹೀಗೆ ಉದ್ಗರಿಸುತ್ತಾನೆ: “ಒಬ್ಬ ಅಂಗ್ರೇಜ ಎಂದೂ ಇನ್ನೊಬ್ಬ ಅಂಗ್ರೇಜನ ವಿಶ್ವಾಸಘಾತ ಮಾಡೋದಿಲ್ಲ. ಎಲ್ಲರೂ ತಮ್ಮ ರಾಷ್ಟ್ರಕ್ಕಾಗಿ ದುಡೀತಾರೆ. ಇಂಗ್ಲಿಸ್ತಾನ್! ಏನದು? ಜಾತಿಯಲ್ಲ, ಧರ್ಮವಲ್ಲ…” (ಪು.೬೭). ಈ ನೆಲೆಯಲ್ಲಿ ಕಾರ್ನಾಡರ ನಾಟಕದ ಹೆಸರು ತುಂಬಾ ಅರ್ಥಪೂರ್ಣವಾಗಿದೆ. ಟಿಪು ತನ್ನ ಕನಸುಗಳನ್ನು ಬರೆದಿಡುತ್ತಿದ್ದ ಮತ್ತು ಅವುಗಳನ್ನು ಅರುದಿನ ಆಸ್ಥಾನದಲ್ಲಿ ಚರ್ಚಿಸುತ್ತಿದ್ದ ಎಂಬುದನ್ನು ಅನೇಕ ಇತಿಹಾಸಜ್ಞರು ದಾಖಲಿಸಿದ್ದಾರೆ. ಕಾರ್ನಾಡರ ನಾಟಕದಲ್ಲಿ ಟಿಪುವಿನ ನಾಲ್ಕು ಕನಸುಗಳ ಚಿತ್ರಣವಿದ್ದರೂ ನಾಟಕದ ಹೆಸರು ‘ಟಿಪು ಸುಲ್ತಾನ ಕಂಡ ಕನಸು’. ಅರ್ಥಾತ್ ‘ಹಾರೈಕೆ’ ಎನ್ನುವ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಮತ್ತು ‘ಈ ಕನಸು’ ನಾಟಕದ ಕೊನೆಯಲ್ಲಿ ಬರುತ್ತದೆ. ಆ ಕನಸಿನಲ್ಲಿ ಮರಾಠರು ಮತ್ತು ನೈಜಾಂ ತಮ್ಮಿಂದಾಗುತ್ತಿದ್ದ ತಪುಗಳನ್ನು ಅರಿತುಕೊಂಡು, ಟಿಪುವಿಗೆ ಸಹಾಯ ಮಾಡಲು ಬರುತ್ತಾರೆ; ಇವರ ಒಗ್ಗಟ್ಟಿನಿಂದಾಗಿ ಬ್ರಿಟಿಷ್ ಸೈನ್ಯ ಸೋತು ಓಡಿಹೋಗುತ್ತದೆ. ನಾಟಕದ ರ್ಧವನಿಯೆಂದರೆ, ಅದೃಷ್ಟವಶಾತ್ ಟಿಪುವಿನ ಕನಸು ನನಸಾಗುವುದಿಲ್ಲ. ಮತ್ತು ಮೈಸೂರು ಸೇರಿದಂತೆ ಇಡೀ ಭಾರತ ಬ್ರಿಟಿಷರ ವಶವಾಗುತ್ತದೆ. ಟಿಪುವಿನ ‘ರಾಷ್ಟ್ರಪೇಮ’ದ ಬಗ್ಗೆ ಇದೇ ಬಗೆಯ ನಿಲುವನ್ನು ಶೇಖ್ ಅಲಿ, ಗಿದ್ವಾನಿ, ಮುಂತಾದ ರಾಷ್ಟ್ರೀಯ/ವಸಾಹತೋತ್ತರ ಚಿಂತಕರು/ಲೇಖಕರು ತಾಳುತ್ತಾರೆ.

ಇಲ್ಲಿ ಏಳುವ ಪ್ರಶ್ನೆಯೆಂದರೆ, ಟಿಪುವಿನ ಕಾಲದಲ್ಲಿ ‘ಇಡೀ ಭಾರತ ಒಂದು ರಾಷ್ಟ್ರ’ ಎಂಬ ಗ್ರಹಿಕೆ ಇತ್ತೆ ಎಂಬುದು. ಸಾಧ್ಯವಿರುವ ಎಲ್ಲಾ ಆಕರಗಳನ್ನೂ ವಸ್ತುನಿಷ್ಠವಾಗಿ ಆಧರಿಸಿ ತಮ್ಮ ಪ್ರಸಿದ್ಧ ಪಾನಿಪತ್ ಕಾದಂಬರಿಯನ್ನು ಬರೆದಿರುವ ವಿಶ್ವಾಸ್ ಪಾಟೀಲ್ ಪಾನಿಪತ್ ಯುದ್ಧದಲ್ಲಿ ಅಬ್ದಾಲಿಯ ವಿರುದ್ಧ ಮರಾಠರು ನಿರ್ಣಾಯಕ ಸೋಲನ್ನು ಏಕೆ ಅನುಭವಿಸುತ್ತಾರೆ ಎಂಬುದಕ್ಕೆ ನೀಡುವ ಅನೇಕ ಕಾರಣಗಳಲ್ಲಿ ಒಂದು ಹೀಗಿದೆ: ಅಂದು (೧೮ನೇಯ ಶತಮಾನದಲ್ಲಿ) ಮರಾಠರನ್ನು ‘ದಖನಿ ಪ್ರಾಂತ್ಯ’ದವರೆಂದು. ‘ಹಿಂದೂಸ್ತಾನ’ ತಮ್ಮದೆಂದು ವಿಂಧ್ಯದಿಂದ ಉತ್ತರಕ್ಕೆ ಇದ್ದ ಎಲ್ಲಾ ಹಿಂದು-ಮುಸ್ಲಿಂ ರಾಜ-ನವಾಬರು ಭಾವಿಸಿ, ಅವರಿಗೆ ಯಾವ ಸಹಾಯವನ್ನು ಮಾಡುವುದಿಲ್ಲ. ಎಂದರೆ, ೧೯ನೇಯ ಶತಮಾನದವರೆಗೂ, ರಾಜಕೀಯವಾಗಿ, ‘ಹಿಂದೂಸ್ತಾನ’ವೆಂದರೆ ‘ಉತ್ತರ ಭಾರತ’ ಎಂಬ ಗ್ರಹಿಕೆಯಿದ್ದದ್ದು ನಿಜ. ಸಾಂಸ್ಕೃತಿಕ-ಧಾರ್ಮಿಕ ನೆಲೆಯಲ್ಲಿ ಎಂದಿನಿಂದಲೂ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ‘ಭಾರತ ಒಂದು’ ಎಂಬ ಗ್ರಹಿಕೆಯಿದೆ. ನಿಜ: “ಅಸ್ತ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ/ಪೌರ್ವಾಪರೌ ತೋಯನಿಧಿಂ ವಗಾಹ್ಯ ಸ್ತಿತಃಪೃಥವ್ಯಾಮಿಹ ಮಾನದಂಡಃ”; “ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ/ನಮ್ದೆ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು”; ಇತ್ಯಾದಿ. ಆದರೆ, ರಾಜಕೀಯವಾಗಿ, ಅಶೋಕ-ಅಕ್ಬರರ ಕಾಲವೂ ಸೇರಿದಂತೆ ಎಂದೂ ಭಾರತ ಒಂದು ರಾಷ್ಟ್ರವಾಗಿರಲಿಲ್ಲ. ರಾಜಕೀಯವಾಗಿ ಮತ್ತು ಭಾಷಿಕವಾಗಿ ‘ರಾಷ್ಟ್ರೀಯತೆ’ಯ ಕಲ್ಪನೆ ಪಶ್ಚಿಮದಲ್ಲಿ ಪ್ರಾರಂಭವಾದದ್ದು ೧೯ನೇಯ ಶತಮಾನದಲ್ಲಿ ಮತ್ತು ಅನಂತರ ಅದು (ಮುಖ್ಯವಾಗಿ ಬ್ರಿಟಿಷರನ್ನು ಎದುರಿಸಲು) ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ಮುಡಿಬಂದಿತು. ಈ ಪರಿಕಲ್ಪನೆಯನ್ನು ೫೦೦ಕ್ಕೂ ಹೆಚ್ಚು ಸ್ವತಂತ್ರ ರಾಜ್ಯಗಳಿದ್ದ ಮತ್ತು ಪ್ರತಿಯೊಂದೂ ‘ರಾಷ್ಟ್ರ’ವೇ ಆಗಿದ್ದ ಟಿಪುವಿನ ಕಾಲಕ್ಕೆ ಅನ್ವಯಿಸುವುದು ಅಷ್ಟೇನೂ ಉಚಿತವಲ್ಲ ಎಂದು ತೋರುತ್ತದೆ. ಟಿಪು ಬ್ರಿಟಿಷರನ್ನು ತೀವ್ರವಾಗಿ ದ್ವೇಷಿಸುತ್ತಿದ್ದನೆಂಬುದು ನಿಜ: ಆದರೆ ಅದರ ಕಾರಣ ಅವನ ‘ರಾಷ್ಟ್ರಪ್ರೇಮ’ ಎಂದು ಹೇಳಲು ಸಾಧ್ಯವಿಲ್ಲ. ಬ್ರಿಟಿಷರನ್ನು ದ್ವೇಷಿಸುತ್ತಿದ್ದ ಟಿಪು ಫ್ರೆಂಚರನ್ನು ಓಲೈಸುತ್ತಿದ್ದ ಮತ್ತು ಯೂರೋಪಿನಲ್ಲಿ ಫ್ರೆಂಚರು ಬ್ರಿಟಿಷರ ವಿರುದ್ಧ ಸೋಲದೇ ಹೋಗಿದ್ದರೆ ಭಾರತದಲ್ಲಿ ಬ್ರಿಟಿಷರ ಬದಲು ಫ್ರೆಂಚರು ತಮ್ಮ ವಸಾಹತ್ತನ್ನು ಸ್ಥಾಪಿಸುತ್ತಿದ್ದರು. ಈ ನೆಲೆಯಲ್ಲಿ ಟಿಪು, ಶಿವಾಜಿ, ಝಾನ್ಸಿರಾಣಿ, ನಾನಾ ಸಾಹೆಬ್ ಇವರೆಲ್ಲರನ್ನೂ ‘ರಾಷ್ಟ್ರಪ್ರೇಮಿ’ಗಳೆಂದು ಕರೆಯುವುದರ ಹಿಂದಿರುವ ಸಾಂಸ್ಕೃತಿಕ ಒತ್ತಡಗಳನ್ನು ಮುಂದೆ ಚರ್ಚಿಸಬಹುದು.

ಮತೀಯತೆ: ಟಿಪು ಸುಲ್ತಾನನ ಮತೀಯತೆಯನ್ನು ಕುರಿತು ವಾದದ ಎರಡು ತುದಿಗಳನ್ನು ಪ್ರತಿನಿಧಿಸುವ ಎರಡು ವರ್ಗಗಳನ್ನೇ ನಾವು ನೋಡಬಹುದು. ‘ಟಿಪು ಎಲ್ಲಾ ಧರ್ಮಗಳನ್ನೂ ಸಮಾನವಾಗಿ ಗೌರವಿಸುತ್ತಿದ್ದ ಮತ್ತು ಬಲಾತ್ಕಾರದ ಮತಾಂತರವನ್ನು ಅವನು ಂದೂ ಪ್ರಯತ್ನಿಸಲಿಲ್ಲ’ ಎಂದು ವಾದಿಸುವವರ ವರ್ಗದಲ್ಲಿ ಶೇಖ್ ಅಲಿ, ಮೊಹಿಬುಲ್ ಹಸನ್ ಖಾನ್, ಕಬೀರ್ ಕೌಸರ್ ಇತ್ಯಾದಿ ಇತಿಹಾಸಜ್ಞರು; ಮತ್ತು ಗಿದ್ವಾನಿ, ಕಾರ್ನಾಡ್, ಶಿವಪ್ರಕಾಶ್, ಇತ್ಯಾದಿ ಸಾಹಿತಿಗಳು ಬರುತ್ತಾರೆ. ಇವರುಗಳು ತಮ್ಮ ವಾದದ ಸಮರ್ಥನೆಗೆ ಆಧರಿಸುವುದು, ಟಿಪು ಶೃಂಗೇರಿ ಮಠಕ್ಕೆ ನೀಡಿದ ದಾನ-ದತ್ತಿಗಳು, ಅಂದಿನ ಶೃಂಗೇರಿ ಪೀಠದ ಜಗದ್ಗುರುಗಳೊಡನೆ ಮಾಡುತ್ತಿದ್ದ ಪತ್ರವ್ಯವಹಾರ, ಶ್ರೀರಂಗಪಟ್ಟಣದ ಶ್ರೀರಂಗಸ್ವಾಮಿಗೆ ಅವನು ಸಮರ್ಪಿಸಿದ ಕಾಣಿಕೆಗಳು ಮತ್ತು ಇವನ ಸೈನ್ಯದಲ್ಲಿಯೇ ಉನ್ನತ ಹುದ್ದೆಗಳನ್ನು ಪಡೆದಿದ್ದ ಹಿಂದು ಸರದಾರರು. ಈ ವರ್ಗಕ್ಕೆ ಸೇರುವವರ ವಾದವೇನೆಂದರೆ ಭಾರತೀಯರನ್ನು ಧರ್ಮದ ಹೆಸರಿನಲ್ಲಿ ಒಡೆದು ಆಳುವ ಉದ್ದೇಶದಿಂದ ಅಂದಿನ ಬ್ರಿಟಿಷ್ ಇತಿಹಾಸಜ್ಞರು ಉದ್ದೇಶಪೂರ್ವಕವಾಗಿ, ಭಾರತದ ರಾಜ-ನಾವಾಬರನ್ನು ಮತಾಂಧರೆಂದು ಮತ್ತು ವಿಷಯಾಸಕ್ತರೆಂದು ಭಾರತೀಯ ತಿಹಾಸವನ್ನು ತಿರುಚಿ ಬರೆದರು; ಮತ್ತು ಇಂದು ನಮ್ಮ ಮುಂದಿರುವ ಕರ್ತವ್ಯವೆಂದರೆ, ಆ ಇತಿಹಾಸವನ್ನು ತಿರಸ್ಕರಿಸಿ, ಭಾರತದ ‘ನಿಜ’ ಇತಿಹಾಸವನ್ನು ರಚಿಸುವುದು.

‘ಟಿಪು ಓರ್ವ ಮತಾಂಧ, ಮತೀಯ ಕಾರಣಗಳಿಗಾಗಿ ಅನ್ಯ ಮತೀಯರಿಗೆ ಉಗ್ರ ಹಿಂಸೆಯನ್ನು ವಿಧಿಸಿದವನು, ಸಾವಿರಾರು ಅನ್ಯಮತೀಯರನ್ನು ಇಸ್ಲಾಂ ಮತಕ್ಕೆ ಸೇರುವಂತೆ ಬಲಾತ್ಕರಿಸಿದವನು’ ಎಂಬ ನಿಲುವನ್ನು ತಾಳುವ ಎರಡನೆಯ ವರ್ಗದಲ್ಲಿ ಸತ್ಯನಾತಿಯರ್, ಮೇಜರ್ ಡಿರೋಮ್, ಹಯವದನ ರಾವ್, ಮಿಷೋ, ಇತ್ಯಾದಿ ಇತಿಹಾಸಜ್ಞರು ಮತ್ತು ಲೆಕ್ಕವಿಲ್ಲದಷ್ಟು ಇಂಗ್ಲೀಷ್-ಕನ್ನಡ ಕಥೆ-ಕಾದಂಬರಿಕಾರರು ಬರುತ್ತಾರೆ. ಇವರ ಪ್ರಕಾರ, ಟಿಪು ‘ಜೆಹಾದ್’ನಲ್ಲಿ (‘ಧರ್ಮಯುದ್ಧ’) ಗಾಢ ನಂಬಿಕೆಯಿದ್ದವನು, ಮತ್ತು ಇಸ್ಲಾಂ ಧರ್ಮ ರಕ್ಷಣೆ-ಪ್ರಸಾರಗಳಿಗಾಗಿಯೇ ತನಗೆ ದೇವರು ಅಧಿಕಾರವನ್ನು ನೀಡಿರುವುದು ಎಂದು ನಂಬಿದ್ದನು. ಕಿರ್ಮಾನಿಯಂತೂ ಟಿಪುವನ್ನು “ಇಸ್ಲಾಂ ಧರ್ಮ ಪ್ರಚಾರಕ್ಕಾಗಿ ಮತ್ತು ಕಾಫಿರರ ನಾಶಕ್ಕಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟವನು” ಎಂದು ಪದೇ ಪದೇ ಬಣ್ಣಿಸುತ್ತಾನೆ. ಆಫ಼್‌ಘಾನಿಸ್ತಾನದ ರಾಜ (ಅಬ್ದಾಲಿಯ ಮೊಮ್ಮಗ) ಜ಼ಮಾನ್ ಶಾಗೆ ಟಿಪು ಸುಲ್ತಾನ್ (೫/೨/೧೭೯೭) ರಲ್ಲಿ ಬರೆದ ಒಂದು ಪತ್ರದ ಅನುವಾದವನ್ನು ಕಬೀರ್ ಕೌಸಲ್ ಕೊಡುತ್ತಾರೆ; ಅದರಲ್ಲಿ ಟಿಪು ಹೀಗೆ ಬರೆದಿರುತ್ತಾನೆ: “ನಮ್ಮ ಧರ್ಮದ ಶತ್ರುಗಳ ವಿರುದ್ಧ ನಾವೆಲ್ಲರೂ ಒಂದಾಗಿ, ಒಗ್ಗಟ್ಟಿನಿಂದ ಧರ್ಮಯುದ್ಧವನ್ನು ನಡೆಸಬೇಕು” ಮತ್ತು “ನಿಮಗೆ ಈಗಾಗಲೇ ಗೊತ್ತಿರುವಂತೆ ನನ್ನ ಅತ್ಯುಚ್ಚ ಮಹತ್ವಾಕಾಂಕ್ಷೆಯೆಂದರೆ ಧರ್ಮಯುದ್ಧವನ್ನು ಹೂಡುವುದು” (ಪು. ೧೪೬). ಇದೇ ತಾತ್ಪರ್ಯವನ್ನುಳ್ಳ ಟಿಪುವಿನ ಇನ್ನೂ ಅನೇಕ ಪತ್ರಗಳನ್ನು ಮತ್ತು ಅವನು ತನ್ನ ಸೈನಿಕರಿಗೆ ನೀಡುತ್ತಿದ್ದ ಸಂದೇಶಗಳನ್ನೂ ನಾವು ಉದಹರಿಸಬಹುದು.

ಇಲ್ಲಿ ಗಮನಿಸಬೇಕಾದ ಒಂದು ಸಂಗತಿಯೆಂದರೆ, ರಾಜ-ನವಾಬರು ಹೋರಾಟಕ್ಕೆ ತಮ್ಮ ಸೈನಿಕರನ್ನು ಹುರಿದುಂಬಿಸಲು ಮತ್ತು ತಮ್ಮ ಆಳ್ವಿಕೆಗೆ ಮಾನ್ಯತೆಯನ್ನು ಪಡೆಯಲು ಮತ-ಧರ್ಮಗಳ ಆಸರೆಯನ್ನು ಪಡೆಯುತ್ತಿದ್ದರು ಎಂಬುದು. ಅವರಲ್ಲಿ ನಿಜವಾಗಿಯೂ ಧರ್ಮನಿಷ್ಠೆ ಇದ್ದಿತೆ ಎಂಬುದು ಊಹೆಗೆ ಬಿಟ್ಟದ್ದು.

ಈ ಬಗೆಯ ಭಾಷಣಗಳು ಮತ್ತು ಪತ್ರಗಳನ್ನು ಬಿಟ್ಟು, ವಾಸ್ತವ ಘಟನೆಗಳಿಗೆ ಬಂದರೆ, ಈ ವರ್ಗದ ಇತಿಹಾಸಜ್ಞರು/ಲೇಖಕರು ಆಧರಿಸುವುದು ಎರಡು ಯುದ್ಧಗಳನ್ನು: ೧೭೮೪ ರಲ್ಲಿ ನಡೆದ ಮಂಗಳೂರು ಯುದ್ಧ ಮತ್ತು ೧೭೮೯-೮೭ ರಲ್ಲಿ ಮಲಬಾರ್‌ನಲ್ಲಿ ಘಟಿಸಿದ ನಾಯರ್ ದಂಗೆ ಮತ್ತು ಅದರ ದಮನ. ಮಂಗಳೂರು ಯುದ್ಧದಲ್ಲಿ ಬ್ರಿಟಿಷರ ವಿರುದ್ಧ ಅಗಾಧ ಜಯ ಪಡೆದ ನಂತರ, ಅಲ್ಲಿನ ಸಾವಿರಾರು ಕ್ರಿಶ್ಚಿಯನ್ನರಿಗೆ ಟಿಪು ಕೊಟ್ಟದ್ದು ಎರಡೇ ಆಯ್ಕೆ: ಇಸ್ಲಾಂಗೆ ಮತಾಂತರ ಅಥವಾ ಸಾವು; ಮತಾಂತರಕ್ಕೆ ಒಪ್ಪದಿದ್ದ ನೂರಾರು ಕ್ರಿಶ್ಚಿಯನ್ನರನ್ನು ಶ್ರೀರಂಗಪಟ್ಟಣಕ್ಕೆ ನಡೆಸಿಕೊಂಡು ಬಂದು ಅವರನ್ನು ಸೆರೆಯಲ್ಲಿಟ್ಟು ಹಿಂಸಿಸಿದುದನ್ನು ಕಿರ್ಮಾನಿ, ಮೊಹಿಬುಲ್ ಹಸನ್, ಇತ್ಯಾದಿ ಅನೇಕ ಇತಿಹಾಸಜ್ಞರು ದಾಖಲಿಸುತ್ತಾರೆ. ಹಾಗೆಯೇ, ಮಲಬಾರ್‌ನಲ್ಲಿ ಟಿಪು ನಾಯರ್ ಗುಂಪುಗಳನ್ನು ಸೆರೆ ಹಿಡಿಯಲಾಯಿತು; ಮತ್ತು ಅವರೆಲ್ಲರನ್ನೂ ಕತ್ತಿಯ ಅಲುಗಿನ ಅಡಿಯಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಯಿತು” ಎಂದು ಟಿಪುವಿನ ಅಭಿಮಾನಿಯಾದ ಪ್ರಾಕ್ಸಿ ಫ಼ರ್ನಾಂಡಿಸ್ ದಾಖಲಿಸುತ್ತಾನೆ. ಇದೇ ಬಗೆಯಲ್ಲಿ “ದೇವದೇವನ ಆದೇಶದಂತೆ ಕಾಫ಼ಿರರು ನಾವು ಕೇಳಿದ ಕಪ್ಪವನ್ನು ಕೊಡಬೇಕು, ಇಲ್ಲಾ ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕು” ಎಂದು ಟಿಪು ಹೊರಡಿಸಿದ್ದ ರಾಜಾಜ್ಞೆಯನ್ನು ಮೇಜರ್ ಡಿರೋಂ; ಮತ್ತು “…ಅವನನ್ನು (ಧೋಂಡಾಜಿಯನ್ನು) ಸೆರೆ ಹಿಡಿದು, ಸರಪಳಿಗಳಲ್ಲಿ ಬಂಧಿಸಿ, ಸೆರೆಮನೆಯಲ್ಲಿಡಲಾಯಿತು ಮತ್ತು, ಅನಂತರ ಸುನ್ನತ್ ಕ್ರಿಯೆಯನ್ನು ಮಾಡಿ ಅವನನ್ನು ಇಸ್ಲಾಂ ಧರ್ಮಕ್ಕೆ ಸೇರಿಸಿಕೊಳ್ಳಲಾಯಿತು” ಎಂದು ಕಿರ್ಮಾನಿ ದಾಖಲಿಸುತ್ತಾರೆ. ಒಂದು ಕಾಲಘಟ್ಟದ ಚರಿತ್ರೆಯನ್ನು ಕಟ್ಟುವಲ್ಲಿ ‘ಜಾನಾಂಗಿಕ ಸ್ಮೃತಿ’ ಎಂಬುದೂ ಮುಖ್ಯವಾಗುತ್ತದೆ. ಇಂದಿಗೂ ದ.ಕ. ಜಿಲ್ಲೆಯ ಪುರಾತನ ಕ್ರಿಶ್ಚಿಯನ್ ಕುಟುಂಬಗಳಲ್ಲಿ ಮತ್ತು ಮಲಬಾರ್ ಪ್ರಾಂತ್ಯದ ನಾಯರ್ ಸಮುದಾಯದಲ್ಲಿ ಟಿಪು ನಡೆಸಿದ ಹಿಂಸೆಯ ಹಾಗೂ ಮತಾಂತರದ ನೆನಪು ಹಸಿರಾಗಿಯೇ ಉಳಿದಿದೆ.

ಮತಾಂತರದ ಪ್ರಶ್ನೆಯನ್ನು ಕುರಿತು ಮೊಹಿಬುಲ್ ಹಸನ್ ಒಂದು ಮಹತ್ವದ ವ್ಯಾಖ್ಯಾನವನ್ನು ಮಾಡುತ್ತಾನೆ. ಅವನ ಪ್ರಕಾರ, “ಟಿಪು ವಿಧಿಸಿದ ಮತಾಂತರದ ಸ್ವರೂಪ ರಾಜಕೀಯವಾಗಿದ್ದಿತೇ ಹೊರತು ಮತೀಯವಾಗಿರಲಿಲ್ಲ” (ಪು. ೩೬೬). ಶೃಂಗೇರಿ ಮಠದ ಹಿಂದಿನ ಎಲ್ಲಾ ಕಾಗದ-ಪತ್ರಗಳನ್ನೂ ಅಧ್ಯಯನ ಮಾಡಿರುವ ಉಮಾನಾಥ ಶೆಣೈ ಅವರೂ ಇದೇ ತೀರ್ಮಾನಕ್ಕೆ ಬರುತ್ತಾರೆ. ಇವರುಗಳು ಹೇಳುವುದೇನೆಂದರೆ, ಅಂದಿನ ಕಾಲದಲ್ಲಿ ತಮ್ಮ ‘ಶತ್ರುಗಳಿಗೆ’ ಗೆದ್ದ ರಾಜ-ನವಾಬರು ಕ್ರೂರ ಶಿಕ್ಷೆಗಳನ್ನು ನೀಡುತ್ತಿದ್ದರು; ಮತ್ತು ಅಂತಹ ಶಿಕ್ಷೆಗಳಲ್ಲಿ ಮತಾಂತರವೂ ಒಂದು ಬಗೆಯ ‘ಶಿಕ್ಷೆ’ಯಾದೀತು. (ಇಲ್ಲಿ, ಈ ಲೇಖನದ ಪ್ರಾರಂಭದಲ್ಲಿ ಪ್ರಸ್ತಾಪಿಸಿದ ಶೈಲಾಕ್‌ಗೆ ಕೊಡುವ ಮತಾಂತರದ ‘ಶಿಕ್ಷೆ’ಯನ್ನು ನೆನಪಿಸಿಕೊಳ್ಳಬಹುದು.) ಎಂದರೆ, ಮತಾಂತರದ ಶಿಕ್ಷೆಗೂ ಮತೀಯತೆಗೂ ಸಂಬಂಧವಿರಲಿಲ್ಲ. ಹಿಂದೂ ರಾಜ-ಮಹಾರಾಜರು ಈ ಶಿಕ್ಷೆಯನ್ನು ಯಾಕೆ ನೀಡುತ್ತಿರಲಿಲ್ಲವೆಂದರೆ ಹಿಂದೂ ಧರ್ಮದಲ್ಲಿ ಅನ್ಯ ಮತೀಯರ ಪ್ರವೇಶಕ್ಕೆ ಸ್ಥಾನವಿರಲಿಲ್ಲ; ಹುಟ್ಟಿನಿಂದಾಗಿಯೇ ಒಬ್ಬನು/ಒಬ್ಬಳು ಹಿಂದೂ ಆಗಬಹುದಾಗಿತ್ತು. (ಈ ಕಾರಣದಿಂದಲೇ ದಯಾನಂದ ಸರಸ್ವತಿಯವರು ಆರ್ಯಸಮಾಜದಲ್ಲಿ ‘ಶುದ್ಧೀಕರಣ’ದ ಮೂಲಕ ಅನ್ಯ ಮತೀಯರಿಗೂ ಹಿಂದು ಧರ್ಮಕ್ಕೆ ಪ್ರವೇಶವನ್ನು ಕಲ್ಪಿಸಿದರು.)

ಟಿಪುವಿನ ಮತೀಯತೆಯನ್ನು ಕುರಿತ ಈ ಎರಡೂ ಪರಸ್ಪರ ವಿರುದ್ಧ ತೀರ್ಮಾನಗಳಿಗೆ ದಾಖಲೆಗಳಿವೆ; ಎಂದರೆ, ಎರಡೂ ‘ಸತ್ಯ’ವೆ. ಈ ‘ಸತ್ಯ’ವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

* * *

ಈ ಯಕ್ಷಪ್ರಶ್ನೆಗೆ ಒಂದು ಸಾಧ್ಯ ಉತ್ತರ ನಮಗೆ ಅಂದಿನ ರಾಜ್ಯಗಳ ಭೌಗೋಳಿಕ ಎಲ್ಲೆಗಳಲ್ಲಿ ದೊರಕಬಹುದು. ಟಿಪು ಮತಾಂತರವನ್ನು ಬಲಾತ್ಕಾರದಿಂದ ಜಾರಿಗೆ ತಂದನು ಎಂದು ಗಟ್ಟಿಯಾಗಿ ವಾದಿಸುವರು ಆ ಮತಾಂತರಗಳು ಮೈಸೂರಿನ ಪ್ರಾಂತ್ಯದಲ್ಲಿ ಆದವುಗಳೆಂದು ವಾದಿಸುವುದಿಲ್ಲ; ಅವರೆಲ್ಲರ ಪ್ರಕಾರ, ಸಾಮೂಹಿಕ ಮತಾಂತರಗಳನ್ನು ಟಿಪು ಮತ್ತು ಅವನ ಸೈನಿಕರು ಜಾರಿಗೊಳಿಸಿದುದು ಮಂಗಳೂರಿನಲ್ಲಿ ಕ್ರಿಶ್ಚಿಯನ್ನರ ವಿರುದ್ಧ (ಅಂದು ಮಂಗಳೂರು ಮೈಸೂರು ರಾಜ್ಯದ ಭಾಗವಾಗಿರಲಿಲ್ಲ) ಮತ್ತು ಮಲಬಾರ್ ಪ್ರಾಂತ್ಯದಲ್ಲಿ ನಾಯರ್ ಸಮುದಾಯದ ವಿರುದ್ಧ. ಹಾಗೆಯೇ, ಅವನು ಮತಾಂತರವಲ್ಲದಿದ್ದರೂ ಕ್ರೂರವಾಗಿ ನಡೆದುಕೊಂಡುದು ಕರ್ನೂಲ್ ಮತ್ತು ಸವಣೂರಿನ ನವಾಬರು ಮತ್ತು ಅವರ ಪ್ರಜೆಗಳ ವಿರುದ್ಧ. ಇದರಿಂದ ಎರಡು ಅಂಶಗಳು ಸ್ಪಷ್ಟವಾಗುತ್ತವೆ: ಅ) ಮತಾಂತರದ ‘ಶಿಕ್ಷೆ’ಯನ್ನು ಅವನು ಜಾರಿ ಮಾಡುತ್ತಿದ್ದುದು ತನ್ನ ಶತ್ರುಗಳ ರಾಜ್ಯದಲ್ಲಿ ಮತ್ತು ಆ ರಾಜ್ಯಗಳ ಕ್ರಿಶ್ಚಿಯನ್ನರು ಮತ್ತು ನಾಯರ್‌ಗಳು ಬ್ರಿಟಿಷರಿಗೆ ಸಹಾಯ ಮಾಡುತ್ತಿದ್ದರೆಂಬ ಕಾರಣಕ್ಕಾಗಿ; ಆ) ಎರಡನೆಯದಾಗಿ, ಅವನು ಅನ್ಯ ಮತೀಯ ಶತ್ರು ರಾಜ್ಯಗಳ ಪ್ರಜೆಗಳೊಡನೆ ಕ್ರೂರವಾಗಿ ವರ್ತಿಸುತ್ತಿದ್ದಂತೆಯೇ ಸ್ವಮತೀಯ ಶತ್ರುರಾಜ್ಯಗಳ ಪ್ರಜೆಗಳೊಡನೆಯೂ ಕ್ರೂರವಾಗಿ ವರ್ತಿಸುತ್ತಿದ್ದನು.

ಈಗ, ಅದೇ ಕಾಲಘಟ್ಟದ (೧೭-೧೮ನೆಯ ಶತಮಾನಗಳ) ಇತರ ಭಾರತೀಯ ರಾಜ-ನವಾಬನ ವರ್ತನೆಯನ್ನು ನೋಡೋಣ. ಅತ್ಯಂತ ಧರ್ಮಿಷ್ಠನಾದ ಶಿವಾಜಿ ತನ್ನ ಮರಾಠ ಸಾಮ್ರಾಜ್ಯಕ್ಕೆ ಸೇರಿದ ಸೂರತ್ ಪಟ್ಟಣವನ್ನು ಎರಡು ಬಾರಿ ಕೊಳ್ಳೆ ಹೊಡೆದನು; ಅವನ ನಂತರ ಅಧಿಕಾರಕ್ಕೆ ಬಂದ ಪೇಶ್ವಾಗಳೂ ತಮ್ಮ ಸಾಮ್ರಾಜ್ಯದ ಹೊರಗಿದ್ದ ಉತ್ತರದ ರಜಪೂತರು, ಜಾಟರು, ಸಿಖ್ಖರು, ದೆಹಲಿಯ ಮುಸ್ಲಿಂ ನವಾಬರು ಎಲ್ಲರಿಂದಲೂ ಪ್ರತಿವರ್ಷ ನಿರ್ದಾಕ್ಷಿಣ್ಯವಾಗಿ ‘ಚೌಥಯಿ’ ವಸಲು ಮಾಡುತ್ತಿದ್ದರು; ತುಳಜಾ ಭವಾನಿಯ ಪರಮ ಭಕ್ತರಾಗಿದ್ದ ಆ ‘ಬ್ರಾಹ್ಮಣ’ ಪೇಶ್ವಾಗಳು ಸರದಾರರು (ಪರುಶುರಾಮ ಭವೂ) ಮೈಸೂರು ರಾಜ್ಯಕ್ಕೆ ಸೇರಿದ್ದ ಶೃಂಗೇರಿಯ ಶಾರದಾ ಪೀಠವನ್ನು ಲೂಟಿ ಮಾಡಿದರು. ಕಟ್ಟಾ ಇಸ್ಲಾಂ ಧರ್ಮದ ಅನುಯಾಯಿಯಾಗಿದ್ದ ಔರಂಘಜೇಬ್ ತನ್ನದೇ ಧರ್ಮಕ್ಕೆ ಸೇರಿದ ಬಿಜಾಪುರದ ಸುಲ್ತಾನನೊಡನೆ ಅನೇಕ ವರ್ಷಗಳ ಕಾಲ ಭೀಕರ ಯುದ್ಧವನ್ನು ನಡೆಸಿದನು. ಇನ್ನೂ ಸ್ವಲ್ಪ ಹಿಂದಕ್ಕೆ ಹೋದರೆ, ವಿಜಯನಗರ ಸಾಮ್ರಾಜ್ಯದ ಕೊನೆ ದಿನಗಳಲ್ಲಿ, ಕೃಷ್ಣದೇವರಾಯ, ಅಳಿಯ ರಾಮರಯ, ಮುಂತಾದವರು ಐದು ಮುಸ್ಲಿಂ ರಾಜ್ಯಗಳಲ್ಲಿ ಒಂದರೊಡನೆ ಸ್ನೇಹದಿಂದಿದ್ದು (ಬಿಜಾಪುರದ ಅಥವಾ ಅಹಮದ್‌ನಗರದ ಸುಲ್ತಾನನೊಡನೆ) ಮತ್ತೊಂದರ ಮೇಲೆ ಯುದ್ಧ ಮಾಡುತ್ತಿದ್ದರು.

ಈ ಎಲ್ಲಾ ವಿವರಗಳು ನಮಗೆ ಏನನ್ನು ಸ್ಪಷ್ಟಪಡಿಸುತ್ತವೆ ಎಂದರೆ, ಮಧ್ಯಕಾಲೀನ ಭಾರತದಲ್ಲಿ ಸ್ವರಾಜ್ಯ-ಮಿತ್ರ ರಾಜ್ಯ-ಶತ್ರುರಾಜ್ಯ’ ಎಂಬ ಪ್ರಭಾವೀ ವೈಚಾರಿಕತೆಯನ್ನು ಸರಿಸುಮಾರು ಅಂದಿನ ಎಲ್ಲಾ ರಾಜ-ಮಹಾರಾಜರು ಮತ್ತು ನವಾಬ-ಸುಲ್ತಾನರೂ ಒಪ್ಪಿಕೊಂಡಿದ್ದರು. ತಮ್ಮ ‘ಸ್ವರಾಜ್ಯ’ದಲ್ಲಿ ಹೆಚ್ಚಿನವರು ಧರ್ಮಬೀರುಗಳಾಗಿದ್ದು, ಎಲ್ಲಾ ಮತಗಳನ್ನೂ ಎಲ್ಲಾ ಪ್ರಜೆಗಳನ್ನೂ ಸಮಾನವಾಗಿ ಕಂಡು, ಉತ್ತಮ ಆಡಳಿತವನ್ನು ನಡೆಸುತ್ತಿದ್ದರು; ಆದರೆ, ಈ ಯಾವ ಕಟ್ಟುಪಾಡೂ ಅವರುಗಳಿಗೆ ‘ಶತ್ರು ರಾಜ್ಯ’ಗಳಲ್ಲಿ ಅನ್ವಯಿಸುತ್ತಿರುಲಿಲ್ಲ. ಗೆದ್ದ ರಾಜ-ನವಾಬರು ಸೋತ ರಾಜ-ನವಾಬರ ಮೇಲೆ ಮತ್ತು ಅವರ ಪ್ರಜೆಗಳ ಮೇಲೆ ಯಾವ ಬಗೆಯ ದೌರ್ಜನ್ಯವನ್ನು ಬೇಕಾದರೂ ನಡೆಸಬಹುದಾಗಿತ್ತು; ಮತ್ತು ಅವರು ಹಾಗೆಯೇ ನಡೆದುಕೊಳ್ಳುತ್ತಿದ್ದರು. ಈ ಮಾತು ಟಿಪುಗಿನ ಎಷ್ಟು ಅನ್ವಯಿಸುತ್ತದೋ ಅಷ್ಟೇ ಅವನ ಸಮಕಾಲೀನ ಇತರ ರಾಜ-ನವಾಬ-ಸುಲ್ತಾನರಿಗೂ ಅನ್ವಯಿಸುತ್ತದೆ.

ಎಂದರೆ, ಮಧ್ಯಕಾಲೀನ ಭಾರತದಲ್ಲಿ ಪ್ರಭಾವಿಯಾಗಿದ್ದ ಮತ್ತು ಸರಿ ಸುಮಾರು ಎಲ್ಲರೂ ಒಪ್ಪಿಕೊಂಡಿದ್ದ ರಾಜಕೀಯ-ನೈತಿಕ ವೈಚಾರಿಕತೆಯೆಂದರೆ ‘ಸ್ವರಾಜ್ಯ-ಶತ್ರುರಾಜ್ಯ’ ಎಂಬ ವೈಚಾರಿಕತೆ, (ಈ ಅಂಶವನ್ನು ನನ್ನ ಗಮನಕ್ಕೆ ತಂದವರು ಮಂಗಳೂರು ವಿ.ವಿ.ಯ ಇತಿಹಾಸದ ಪ್ರಾಧ್ಯಾಪಕರಾಗಿರುವ ಡಾ. ಸುರೇಂದ್ರ ರಾವ್). ಇದು ಕಳೆದೆರಡು ದಶಕಗಳಲ್ಲಿ ಪಶ್ಚಿಮದಲ್ಲಿ ಪ್ರಭಾವಿಯಾಗಿ ಮೂಡಿ ಬರುತ್ತಿರುವ ‘ನವಚಾರಿತ್ರಿಕ ವಾದ’ (‘New Historicism’) ಎಂಬ ವಿಮರ್ಶನ ಪ್ರಸ್ಥಾನ. ಈ ವಿಮರ್ಶನ ಚೌಕಟ್ಟನ್ನು ಒಪ್ಪಿಕೊಳ್ಳದೆ ನಾವು ಮಧ್ಯಕಾಲೀನ ಭಾರತದ ರಾಜಕೀಯ ಆಗುಹೋಗುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವೆ ಇಲ್ಲ.

ಈ ಸಂಗತಿ, ಹೈದರ್-ಟಿಪ್ಪು ಕಾಲದಲ್ಲಿ ಅವರ ವಿರುದ್ಧ ಕೆಲಸ ಮಾಡಿದ ಖಂಡೇರಾವ್, ತಿರುಮಲ ಸಹೋದರರು, ಅಂಚೆ ಶಾಮಣ್ಣ, ಮುಂತಾದವರ ಬಗ್ಗೆ ಇನ್ನೂ ಪ್ರಖರವಾಗಿ ಅನ್ವಯಿಸುತ್ತದೆ. ಟಿಪುವನ್ನು ‘ಇಂಗ್ಲಿಷರ ವಿರುದ್ಧ ಹೋರಾಡಿದ ರಾಷ್ಟ್ರಪ್ರೇಮಿ’ ಎಂದು ಗ್ರಹಿಸಿದ ಕೂಡಲೇ ತಿರುಮಲ ಸಹೋದರರು ಇತ್ಯಾದಿ ‘ರಾಷ್ಟ್ರದ್ರೋಹಿ’ಗಳಾಗುತ್ತಾರೆ. ಈ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ಮನಜ ಅವರು ತಮ್ಮ ಸೂರಪ್ಪ ಕಾದಂಬರಿಯಲ್ಲಿ ಮತ್ತೆ ಮತ್ತೆ ಹೀಗೆ ದಾಖಲಿಸುತ್ತಾರೆ. “ಆದರೆ, ಮೂಲತಃ ಪರಮ ದೇಶದ್ರೋಹಿಗಳೇ ಆಗಿದ್ದ ತಿರುಮಲ ರಾವ್ ಮತ್ತು ನಾರಾಯಣ ರಾವ್ ಮಹಾ ದೇಶಪ್ರೇಮಿಗಳಂತೆಯೇ ಮೆರೆದರು. ಏಕೆಂದರೆ ಅವರು ನಡೆಸಿದ ಫಿತೂರಿ ಮತ್ತು ಕುತಂತ್ರಗಳೆಲ್ಲಾ ಫಲಿಸಿದುವು” (ಪು. ೬೦೨-೬೦೩).

ಈ ಸಂದರ್ಭದಲ್ಲಿ ನಾವು ಮರೆಯಬಾರದ ಸಂಗತಿಯೆಂದರೆ, ಹೈದರ್-ಟಿಪ್ಪು ಆಳ್ವಿಕೆಯ ಕಾಲದಲ್ಲಿ ಯಾವುದು ಸ್ವಾಮಿದ್ರೋಹ, ಯಾವುದು ದೇಶದ್ರೋಹ ಎಂಬುದು, ಪ್ರಾಯಃ, ಯಾರೂ ನಿರ್ಧರಿಸಲಾಗದಂತಹ ನೈತಿಕ ಕಗ್ಗಂಟುಗಳಾಗಿದ್ದವು. ವಂಶಪಾರಂಪರ್ಯ ಅಧಿಕಾರವು ಮಾನ್ಯವಾಗಿದ್ದ ಕಾಲದಲ್ಲಿ, ಅನೂಚಾನವಾಗಿ ಒಡೆಯರ ಅಧಿಪತ್ಯದಲ್ಲಿದ್ದ ಮೈಸೂರು ರಾಜ್ಯದಲ್ಲಿ, ಒಡೆಯರ ದಳವಾಯಿಯಾಗಿದ್ದ ಹೈದರ್ ಆಲಿ ತನ್ನ ಶಕ್ತಿ-ಸಾಹಸಗಳಿಂದ ಮೇಲೇರಿ, ತನ್ನೊಡೆಯನ್ನಾಗಿದ್ದ ರಾಜನನ್ನೇ ಹಿಂದೆ ಸರಿಸಿ, ಸಂಸ್ಥಾನದ ಸಂಪೂರ್ಣ ಆಡಳಿತಾಧಿಕಾರವನ್ನು ತಾನು ವಹಿಸಿಕೊಳ್ಳುತ್ತಾನೆ. ಅವನ ಮಗ ಟಿಪು ಮಹಾರಾಣಿಯೂ ಸೇರಿದಂತೆ ರಾಜವಂಶಸ್ಥರನ್ನೆಲ್ಲಾ ಸೆರೆಮನೆಗೆ ತಳ್ಳಿ, ತಾನೇ ಸ್ವತಃ ರಾಜನೆಂದು ಘೋಷಿಸಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ, ಪರಂಪರಾ ಗತವಾಗಿ ತಮ್ಮದಾದ ರಾಜ್ಯವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದ ಸೆರೆಮನೆಯಲ್ಲಿದ್ದ ಮಹಾರಾಣಿಗೆ ಸಹಾಯ ಮಾಡುವುದು ರಾಜದ್ರೋಹವೋ ರಾಜನಿಷ್ಠೆಯೋ? ಹಾಗೆಯೇ, ಪರಕೀಯರಾದ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಟಿಪುವಿನ ವಿರುದ್ಧ ಕೆಲಸ ಮಾಡುವುದು ರಾಷ್ಟ್ರದ್ರೋಹವೋ ರಾಷ್ಟ್ರನಿಷ್ಠೆಯೋ? ಮರಾಠರದು, ನಿಜಾಮನದು ಯಾವ ಬಗೆಯ ನಿಷ್ಠೆ? ಯಾರಿಗೆ? ನನಗೆ ತೋರುವಂತೆ, ಇದೊಂದು ಇದಮಿತ್ಥಂ ಎಂದು ಯಾರೂ ನಿರ್ಧರಿಸಲಾಗದಂತಹ ದುರದೃಷ್ಟಕರ ಹಾಗೂ ಘೋರ ಚಾರಿತ್ರಿಕ ವ್ಯಂಗ್ಯ. (ಈ ಚಾರಿತ್ರಿಕ ವ್ಯಂಗ್ಯವನ್ನು ಆಳವಾಗಿ ಮಾಸ್ತಿ ತನ್ನ ಚನ್ನಬಸವ ನಾಯಕ ಕಾದಂಬರಿಯಲ್ಲಿ, ಹೈದರಾಲಿಯ ವಿರುದ್ಧ ಮಹಾರಣಿಯವರು ಹಿಂದೂ ಸರದಾರರನ್ನು ಸಹಾಯ ಮಾಡಲು ಕೋರುವಾಗ ಚಿತ್ರಿಸುತ್ತಾರೆ

* * *

ಇಲ್ಲಿಯವರೆಗೆ ಮಾಡಿ ಚರ್ಚೆಯ ಹಿನ್ನೆಲೆಯಲ್ಲಿ, ಪ್ರಾಯಃ, ಈ ಕೆಲಗಿನ ತೀರ್ಮಾನಗಳಿಗೆ ಬರಬಹುದು.

(೧) ವರ್ತಮಾನದ ವೈಚಾರಿ ಚೌಕಟ್ಟಿನಲ್ಲಿ ಭೂತಕಾಲವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ; ಹಾಗೆ ಮಾಡುವ ನಮ್ಮ ಎಲ್ಲಾ ಪ್ರಯತ್ನಗಳೂ ಅಪೂರ್ಣವಾಗಿರುತ್ತವೆ.

(೨) ‘ಸಾಹಿತ್ಯ’ ಎಂಬ ಜ್ಞಾನವರ್ಗದಂತೆಯೇ ‘ಇತಿಹಾಸ’ ಎಂಬ ವರ್ಗವೂ ಸ್ವಯಂ ಸಿದ್ಧ ಸಾರ್ವಕಾಲಿಕ ಸತ್ಯವಲ್ಲ; ಸಾಹಿತ್ಯದಂತೆಯೇ ಅದೂ ಒಂದು ‘ರಚನೆ’; ಮತ್ತು ಈ ರಚನೆಗಳು ಕಾಲ-ಸ್ಥಳ ಬದ್ಧವಾಗಿರುತ್ತವೆ.

(೩) ಪರಿಣಾಮತಃ, ಒಂದು ಕಾಲಘಟ್ಟದ ಘಟನೆಗಳನ್ನು / ವ್ಯಕ್ತಿಗಳನ್ನು / ಸಂಸ್ಥೆಗಳನ್ನು ಅರ್ಥೈಸಲು ಮೊದಲಿಗೆ ಆ ಕಾಲಗಟ್ಟದಲ್ಲಿದ್ದ ರಾಜಕೀಯ-ಆರ್ಥಿಕ-ಸಾಂಸ್ಕೃತಿಕ ಪ್ರಭಾವಿ ವೈಚಾರಿಕತೆಯನ್ನು ಅರಿತುಕೊಳ್ಳಬೇಕು. ಈ ವೈಚಾರಿಕತೆಯ ಚೌಕಟ್ಟನ್ನು ವ್ಯಕ್ತಿಯೊಬ್ಬನು / ಸಂಸ್ಥೆಯೊಂದು ಸಂಪೂರ್ಣ ಒಪ್ಪಿಕೊಂಡಿರಬಹುದು, ಅಥವಾ ಆ ಚೌಕಟ್ಟನ್ನು ಮೀರಲು ಪ್ರಯತ್ನಿಸಿರಬಹುದು, ಅಥವಾ ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿರಬಹುದು. ಏನೇ ಆದರೂ, ಆ ಚೌಕಟ್ಟನ್ನು ಅರಿತುಕೊಳ್ಳದೆ, ಆಯಾಯಾ ವ್ಯಕ್ತಿಗಳನ್ನು / ಸಂಸ್ಥೆಗಳನ್ನು ಅರಿಯಲಾಗುವುದಿಲ್ಲ.

(೪) ಚರಿತ್ರೆಯನ್ನು ವರ್ತಮಾನದ ಅಗತ್ಯಕ್ಕೆ ಅನುಸಾರವಾಗಿ ತಿದ್ದಲು, ಪುನರ್ರಚಿಸಲು ಸಾಧ್ಯವಿಲ್ಲ. ಚರಿತ್ರೆಯಿರುವುದು ಅರ್ಥಮಾಡಿಕೊಳ್ಳುವುದಕ್ಕೇ ಹೊರತು ಅದನ್ನು ಕುರಿತು ಇಂದಿನ ಒತ್ತಡಗಳಿಗನುಸಾರವಾಗಿ ನೈತಿಕ ತೀರ್ಮಾನಗಳನ್ನು ಅದರ ಮೇಲೆ ಮಾಡುವುದಕ್ಕಲ್ಲ.

(೫) ಗತವು ವರ್ತಮಾನಕ್ಕೆ ದಾರಿ ತೋರುವ ಮಾರ್ಗವಾಗಿರಬೇಕೇ ಹೊರತು ವರ್ತಮಾನವನ್ನೇ ಹಿನ್ನೆಲೆಗೆ ಸರಿಸಿದರೆ, ಅದು ವರ್ತಮಾನದ ಘೋರ ಸತ್ಯಗಳಿಂದ, ಒತ್ತಡಗಳಿಂದ ಪಲಾಯನ ಮಾಡಲು ಅಡಗುಸ್ಥಾನವಾಗುತ್ತದೆ, ಅಷ್ಟೆ. ಅಡಿಗರು ಅದ್ಭುತವಾಗಿ ಹೇಳಿದಂತೆ, ಭಾರತವನ್ನು ‘ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು”; ಇಂತಹ ಭೂತದಿಂದ ಮುಕ್ತಿ ಸಾಧ್ಯವಾಗದೆ ಹೋದರೆ ವರ್ತಮಾನವೂ ಅಸಾಧ್ಯವಾಗುತ್ತದೆ

* * *

(ಈ ಲೇಖನದಲ್ಲಿ ನಾನು, ನನ್ನ ಮಾರ್ಗದರ್ಶನದಲ್ಲಿ ಮಂಗಳೂರು ವಿ.ವಿ.ಯ ಎಂ.ಫಿಲ್. ಪದವಿಗಾಗಿ ಪ್ರೊ. ಟಿ. ಸೀತಾರಾಮ ಭಟ್ಟರು ಸಲ್ಲಿಸಿದ “ ’History’ And ‘Fiction’ in Meadows Taylor’s Tippu Sultan: A Study” ಎಂಬ ಮಹಾ ಪ್ರಬಂಧ ಮಾಹಿತಿಯನ್ನು ಉಪಯೋಗಿಸಿಕೊಂಡಿದ್ದೇನೆ; ಇದಕ್ಕಾಗಿ ಪ್ರೊ. ಭಟರ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ.) – ೨೦೭

* * *

ಗ್ರಂಥ ಋಣ

  1. Ali, Sheik B. (1982) Tippu Sultan: A Study in Diplomacy and Confrontation. Mysore: Geetha Book House.
  2. Dirom, Major (1793). A Narrative of the Campaign in India which Terminated the War with Tippoo Sultan in 1972. rpt. New Delhi; Asian Education Services, 1985.
  3. Fernandes, Praxy (1969). Storm Over Seringapatam: The Incredible Story of Hyder Ali and Tippu Sultan. Bombay : Thackers & Co.
  4. Gidwani Bhagawan S (1978). The Sword of Tipu Sultan. rpt. New Delhi: Allied Publishers Pvt. Ltd., 1981.
  5. Hasa, Mohibbul (1971). History of Tipu Sultan. Calcutta: The World Press.
  6. Kausar, Kabir (1980). Secret Correspondence of Tipu Sultan. New Delhi: Light and Life Ppublishers.
  7. Kirmani, Mir. Hussein Ali Khan (1980). The History of the Reign of Tipu Sultan. Trans. Col. W. Miles. New Delhi: Oriental Publishers & Distributors.
  8. Menon, V.K.R. (tr.) Michaud’s History of Mysore Under Hyder Ali and Tippu Sultan (1801-1809, French Publication), New Delhi: Asian Educational Services, 1985.
  9. Sathianathier, R (1982) A Political and Cultural History of India; Vol. III Modern India. Madras: S. Vishwanathan.

೧. ಗಿರೀಶ್ ಕಾರ್ನಾಡ್ (೨೦೦೦). ಟಿಪು ಸುಲ್ತಾನ ಕಂಡ ಕನಸು. ಧಾರವಾಡ; ಮನೋಹರ ಗ್ರಂಥಮಾಲಾ.

೨. ಮೈ. ಉಮಾನಾಥ ಶೆಣೈ, “ಟಿಪು ಸುಲ್ತಾನನು ಹಿಂದು ದ್ವೇಷಿಯೆ?” ತರಂಗ, ಮೇ ೧೯೮೯, ೨೫-೨೯.

೩. ಮ.ನ. ಜವರಯ್ಯ (೨೦೦೪): ಸೂರಪ್ಪ ಮೈಸೂರು: ಬಹುಜನ ಮಾಧ್ಯಮ ಕೇಂದ್ರ, ೨೦೦೪.

* * *