ಪುತಿನ ಅವರ ಶ್ರೀ ಹರಿಚರಿತೆ ೧೯೮೮ರಲ್ಲಿ ಪ್ರಕಟವಾಯಿತು.[1]

ಅಂದಿನಿಂದ ಅದನ್ನು ಕುರಿತು ಸಾಕಷ್ಟು ವಿಮರ್ಶೆ-ವ್ಯಾಖ್ಯಾನಗಳು ಹೊರಬಂದಿವೆ; ಆದರೆ, ಜಿಎಸ್‌ಎಸ್. ಅವರನ್ನು ಹೊರತುಪಡಿಸಿ, ಹೆಚ್ಚಿನ ವಿಮರ್ಶಕರು ಕೃತಿಯ ಆಕೃತಿ ಮತ್ತು ತಾತ್ವಿಕತೆ ಇವುಗಳ ನಡುವೆ ಇರುವ (ಅಥವಾ ಅವರ ದೃಷ್ಟಿಯಲ್ಲಿ ಇಲ್ಲದಿರುವ) ಸಂಬಂಧಕ್ಕೇ ಒತ್ತು ಕೊಡುತ್ತಾ, ಈ ನೆಲೆಯಲ್ಲಿ ಕೃತಿ ಸೋಲುತ್ತದೆ ಎಂಬ ತೀರ್ಮಾನಕ್ಕೆ ಬರುತ್ತಾರೆ. ಉದಾಹರಣೆಗಾಗಿ ಈ ಕೆಲವು ಪ್ರಾತಿನಿಧಿಕ ತೀರ್ಮಾನಗಳನ್ನು ಪರಿಗಣಿಸಬಹುದು: ‘…ಇಡೀ ಕಥನದಲ್ಲಿ ತಾತ್ವಿಕತೆ ಕೇವಲ ಘೋಷಿತ ನೆಲೆಯಲ್ಲಿ ನಿಲ್ಲುವಂತಾಗಿದೆ. ಈ ವ್ಯಷ್ಟಿ ಸಮಷ್ಟಿ ಕುರಿತ ಜಿಜ್ಞಾಸೆ, ಕೃತಿಯಲ್ಲಿ ಆವಿರ್ಭನಿಸುತ್ತಾರೆ.[2] ಈ ತೀರ್ಮಾನವನ್ನೇ ಕೆ.ಎಲ್.ಗೋಪಾಲಕೃಷ್ಣಯ್ಯ ಮತ್ತೊಂದು ನೆಲೆಯಿಂದ ತಲುಪುತ್ತಾರೆ: ‘ತಾತ್ಪರ್ಯವೇನೆಂದರೆ ಕವಿಯ ಸಂಕಲ್ಪಿತ ಉದ್ದೇಶಗಳು ಕೃತಿಯ ಹೊರಗೇ ಉಳಿದು ಶ್ರೀಹರಿಚರಿತೆಯು ಒಂದು ರಮಣೀಯ ಕಾವ್ಯಖಂಡ ಅಥವಾ ಖಂಡಕಾವ್ಯವಾಗಿ ಓದುಗರನ್ನು ತಲಪುವಂತೆ ಮಾತ್ರ ತೋರುತ್ತದೆ.’[3] ಕೃತಿಯಲ್ಲಿ ನಿರೀಕ್ಷಿತ ಆಧುನಿಕ ಪ್ರಜ್ಞೆಯಿಲ್ಲದಿರುವುದನ್ನು ಲಂಕೇಶ್ ಹೀಗೆ ಗುರುತಿಸುತ್ತಾರ: ‘… ಪುತಿನ ರೀತಿಯಲ್ಲಿ ಆಧುನಿಕ ಪ್ರಜ್ಞೆಯ ಸವಾಲುಗಳನ್ನೇ ಎತ್ತಿಕೊಳ್ಳದೆ ಎಲ್ಲವನ್ನೂ ಭಾವುಕತೆ, ಮನಸ್ಸಿನ ವ್ಯಾಪಾರ ಎಂಬಂತೆ ನೋಡುವುದು ನಿಜವಾದ ಕವಿಯ ಕರ್ಮವಲ್ಲ.’[4] ಇದೇ ಧಾಟಿಯ ಇನ್ನೂ ಕೆಲವು ತೀರ್ಮಾನಗಳನ್ನು ಉದಹರಿಸಬಹುದು. ಆದರೆ, ಒಟ್ಟಿನಲ್ಲಿ, ಇಂದು ಈ ಕಾವ್ಯವನ್ನು ನೋಡಿದಾಗ ಎಚ್.ಎಸ್. ರಾಘವೇಂದ್ರ ರಾವ್ ಅವರು ಹೇಳುವ ಮಾತುಗಳು ಸತ್ಯದೂರವಲ್ಲ ಎಂದು ಕಾಣುತ್ತದೆ: ‘ …ಒಂದು ಕಾಲಮಾನದವರೆಗೆ, ಕನ್ನಡದ ಅತ್ಯುತ್ತಮ ಮನಸ್ಸುಗಳು ಇವರ (ಪುತಿನ) ಕಾವ್ಯದ ಬಗೆಗೆ ಆಳವಾದ ಅನುಸಂಧಾನವನ್ನು ನಡೆಸಲಿಲ್ಲ.’[5] ‘ಮಹಾಕಾವ್ಯವೆಂದರೇನು?’ ಎಂಬ ಪ್ರಶ್ನೆ ಇಂದಿಗೂ ಅನೇಕ ಸಂದರ್ಭಗಳಲ್ಲಿ ಚರ್ಚೆಗೆ ಒಳಪಡುತ್ತಿರುವ ಮತ್ತು ಯಾವುದೇ ಖಚಿತ ಉತ್ತರ ಸಾಧ್ಯವಿಲ್ಲದಿರುವ ಪ್ರಶ್ನೆ. ಆದ್ದರಿಂದ ಈ ಲೇಖನದಲ್ಲಿ ನಾನು ಆ ಪ್ರಶ್ನೆಯನ್ನು ಎತ್ತುತ್ತಿಲ್ಲ. ಕೃತಿಯ ಪ್ರಜ್ಞೆ ಆಧುನಿಕವೆ ಅಥವಾ ಪರಂಪರಾಗತವಾದದ್ದೇ ಎಂಬ ಪ್ರಶ್ನೆಯನ್ನು ಒಂದು ವಿಭಿನ್ನ ದೃಷ್ಟಿಕೋನದಿಂದ ಕೃತಿಯನ್ನು ವಿಶ್ಲೇಷಿಸಿ ಉತ್ತರಿಸಲು ಈ ಲೇಖನದಲ್ಲಿ ಪ್ರಯತ್ನಿಸಿದ್ದೇನೆ. ಈ ‘ವಿಭಿನ್ನ ಪರಿಪ್ರೇಕ್ಷ್ಯ’ವೆಂದರೆ ಕೃತಿಯ ಸ್ವಾಭಿಮುಖತೆ.[6]

ಸ್ವಾಭಿಮುಖತೆಯನ್ನು ಒಂದು ಕೃತಿಯ ಪ್ರಮುಖ ಆಯಾಮವೆಂದು ನಾವು ಪರಿಗಣಿಸಿದಾಗ ಮತ್ತೂ ಕೆಲವು ಪ್ರಶ್ನೆಗಳೇಳುತ್ತವೆ. ಅವುಗಳಲ್ಲಿ ಮುಖ್ಯವಾದುದೆಂದರೆ, ‘ಈ ಸ್ವಾಭಿಮುಖ ಆಯಾಮದ ಪ್ರಸ್ತುತತೆಯೇನು? ಕಾವ್ಯದ ಅರ್ಥಲೋಕವನ್ನು ಇದು ಹೇಗೆ ವಿಸ್ತರಿಸುತ್ತದೆ? – ಇತ್ಯಾದಿ.

ನನ್ನ ದೃಷ್ಟಿಯಲ್ಲಿ, ಈ ಪ್ರಶ್ನೆ (ಮತ್ತು ಅದರ ಸಾಧ್ಯ ಉತ್ತರ) ನೇರವಾಗಿ ಸಂವಹನ ಪ್ರಕ್ರಿಯೆಗೆ ಸಂಬಂಧಿಸಿದೆ. ಇತರ ಲಲಿತ ಕಲೆಗಳಂತೆ ಸಾಹಿತ್ಯವೂ ಒಂದು ಸಂವಹನ ಮಾಧ್ಯಮ ಮತ್ತು ಇದರ ಪರಿಮಾಣಗಳು ಮೂರು:

ಲೇಖಕ – ಕೃತಿ – ಓದುಗ
(ಪ್ರೇಷಕ – ಸಂದೇಶ – ಸ್ವೀಕರಿಸುವವ)

ಈ ಮೂರೂ ಪರಿಮಾಣಗಳು ಒಂದೇ ವೈಚಾರಿಕ ಸಂಹಿತೆಯ ಚೌಕಟ್ಟಿನಲ್ಲಿದ್ದರೆ ಏನೂ ಸಮಸ್ಯೆಯಿಲ್ಲದೆ ಸಂವಹನವು ಯಶಸ್ವಿಯಾಗುತ್ತದೆ. ಆದರೆ, ಸಂದೇಶ ಪ್ರೇಕ್ಷಕನ ಮತ್ತು ಅದನ್ನು ಸ್ವೀಕರಿಸುವವನ ವೈಚಾರಿಕ ಚೌಕಟ್ಟುಗಳು ಭಿನ್ನವಾದರೆ ಸಂವಹನವು ಪೂರ್ಣವಾಗದೆ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ.

ಭಾರತದಲ್ಲಿ ವಸಾಹತುಶಾಹಿಯ ಆಗಮನದವರೆಗೂ ಲೇಖಕ-ಕೃತಿ-ಓದುಗ ಇವರುಗಳ ನಡುವೆ, ಸಾಧಾರಣವಾಗಿ, ಸಮಾನ ವೈಚಾರಿಕ ಚೌಕಟ್ಟು ಇರುತ್ತಿತ್ತು. ಕಾರಣವೇನೆಂದರೆ, ಲೇಖಕನು ಕಟ್ಟಿಕೊಂಡು ಓದುಗ/ಕೇಳುಗ ಸಮುದಾಯ ಸೀಮಿತವಾಗಿರುತ್ತಿತ್ತು. ಆದರೆ, ವಸಾಹತುಶಾಹಿಯ ಆಗಮನದಿಂದುಂಟಾದ ಅನೇಕ ಪರಿಣಾಮಗಳಲ್ಲಿ ಒಂದೆಂದರೆ ಶಿಕ್ಷಿತ ಭಾರತೀಯರ ಪ್ರಜ್ಞೆ ಛಿನ್ನಗೊಂಡುದು. ಎಂದರೆ, ಈ ಪ್ರಜ್ಞೆಯ ಒಂದು ಸ್ತರ ಗತದಲ್ಲಿ ಆಳವಾಗಿ ಇಳಿದಿದ್ದರೆ, ಮತ್ತೊಂದು ಸ್ತರ ಆ ಸಮುದಾಯದ ಅಬಿರುಚಿ ಮತ್ತು ಆಪೇಕ್ಷೆ-ನಿರೀಕ್ಷೆಗಳು ಯಾವ ಲೇಖಕನೂ ಅಂದಾಜಿಸಲಾಗದಷ್ಟು ಭಿನ್ನ ಭಿನ್ನವಾಗಿವೆ; ಸಾಮುದಾಯಿಕ ‘ಸತ್ಯ’ಗಳೇ ಇಲ್ಲದೆ ಕೇವಲ ವೈಯಕ್ತಿಕ ‘ಸತ್ಯ’ಗಳು ಮಾತ್ರ ಉಳಿದಿವೆ. ಇಂತಹ ಸಾಹಿತ್ಯಕ-ಸಾಂಸ್ಕೃತಿಕ ಬಿಕ್ಕಟ್ಟಿನಲ್ಲಿ ಸ್ವಾಭಿಮುಖತೆ ಕೃತಿಯ ಒಂದು ಅನಿವಾರ್ಯ ಆಯಾಮವಾಗುತ್ತದಷ್ಟೇ ಅಲ್ಲದೆ ಅದನ್ನು ಅಲಕ್ಷಿಸಿ ಕೃತಿಯನ್ನು ಅರ್ಥೈಸಲು ಸಾಧ್ಯವೇ ಇಲ್ಲ.

ಈ ಚರ್ಚೆಯ ಹಿನ್ನೆಲೆಯಲ್ಲಿ, ಈಗ ಶ್ರೀ ಹರಿಚರಿತೆಯ ಸ್ವಾಭಿಮುಖಿ ಆಯಾಮವನ್ನು ಸ್ವಲ್ಪ ವಿವರವಾಗಿ ನೋಡೋಣ. ಈ ನೆಲೆಯಲ್ಲಿ ಕಾವ್ಯದ ‘ಪ್ರಣಾಮಂ’ ಎಂಬ ಮೊದಲನೆಯ ಮತ್ತು ‘ನಿವೇದನಂ’ ಎಂಬ ಕೊನೆಯ ಭಾಗಗಳಲ್ಲಿ, ಮತ್ತು ಉಳಿದ ೩೧ ಭಾಗಗಳಲ್ಲಿ ಹೆಚ್ಚಿನ ಭಾಗಗಳ ಪ್ರಾರಂಭದಲ್ಲಿ ಕವಿ ಕೃತಿಯ ಮುಖ್ಯ ವಸ್ತುವೆಂದು ತೋರುವ ಕೃಷ್ಣಕಥೆಯನ್ನು ಬಿಟ್ಟು ಬೇರೇನೋ ಹೇಳುತ್ತಾರೆಂದು ತೋರುತ್ತದೆ. ಈ ಭಾಗಗಳು ಹೀಗಿವೆ:

“… ಮನುಜನೆನೆ ಮನವೊಲ್ಲದೈ
ಮಿತಿಗೆ ಈತನನಳವಡಿಸಿ ಭಾವಿಸಲು. ದೇವನೆನೆ
ಆಧುನಿಕ ಬುದ್ಧಿ ಪ್ರಚುರಮಾದೀ ಯುಗದಿ ನಡೆಯಂ ಕೆಡವು
ದದ್ಭುತ ಚರಿತ ಕಥನಂ. ಕಾರ್ಯಂ ಕಾರಣ ಕಾತರಂ
ತತ್ವಂತರ್ಕನಿಷ್ಪೇಷ್ಟಿತಂ; ಮಿಕ್ಕೆಲ್ಲವಜ್ಜಿಕತೆ
ಲೇಸಾವುದಿದರಿಂದೆಂಬರನುಮಿತಿ ಪರಾಯಣರ್.
ಅದ್ಯತನಚಿತ್ತವಾತಾವರಣದೊಳು ರಸಕಲ್ಪತರು
ವಿಜ್ಞಾನದೋಹಳವ ಬಯಪುದು (“ಪ್ರಣಾಮಂ,” ಪು.೩).

ಇಲ್ಲಿ ಆರಿಸಿಕೊಂಡಿರುವ ಕಥಾನಾಯಕ ಮತ್ತು ಆಧುನಿಕ ಚಿತ್ತವೃತ್ತಿಯ ಓದುಗರು ಇವರ ನಡುವೆ ಇರುವ ಕಂದರವನ್ನು ಕವಿ ಗುರುತಿಸುತ್ತಿದ್ದಾರೆ. ಕಥಾನಾಯಕನು ಮಾನವನಲ್ಲ, ದೇವ; ಆದರೆ ಆಧುನಿಕ ಓದುಗರು ವೈಜ್ಞಾನಿಕ ದೃಷ್ಟಿಕೋನವುಳ್ಳವರಾದುದರಿಂದ ಅವರು ‘ಅನುಮತಿ ಪರಾಯಣರು’. ಎಂದರೆ, ಪ್ರತಿಯೊಂದರಲ್ಲಿಯೂ ತಾರ್ಕಿಕ ಕಾರ್ಯ-ಕಾರಣ ಸಂಬಂಧವನ್ನು ಅಪೇಕ್ಷಿಸುವವರು. ಹೀಗಿರುವಾಗ, ತನ್ನ ಕಾವ್ಯವನ್ನು ತನ್ಮಯತೆಯಿಂದ ಓದಿ ಆನಂದಿಸುವವರು ಯಾರು ಎಂದು ಕವಿ ಸಂದೇಹಿಸುತ್ತಾರೆ.

ಇದೇ ಪ್ರಶ್ನೆ, ತನ್ನ ಕೃತಿಯ ‘ಪ್ರಸ್ತುತತೆ’ಯ ಪ್ರಶ್ನೆ, ಕವಿಯನ್ನು ಮತ್ತೆ ಮತ್ತೆ ಕಾಡುತ್ತದೆ:

ವ್ಯರ್ಥವೀ ಕಬ್ಬಮನಪೇಕ್ಷಿತಂ ಸಹೃದಯದೂರಮೆಂ
ಬೂಹೆಯೊಳು ಕೊರಗುವೆನ್ನೀ ಚಿತ್ತವನು ಚೇತನಗೊಳಿಸಿ
ಪುಗುಪುಗಿರಿ ಅದು ತೋರ್ವ ಮಹೋನ್ನತ ಸಮಾಜಂಪೆತ್ತಹ
ನಲ್ನುಡಿಯ ವಿವರಂಗಳನು, ಕೃತ ಪನಃಖಾತಂಗಳನು.
ನಿಮ್ಮುಳಿವಿಗೀಜಡಮನದೆಸೆಕವೆ ಬಳಿ. ಮನವೆ ನೀ
ಕತೆ ಹಳದು ನಿಃಸ್ವಾದು ಎಂದದಕೆ ತಿರುಹದಿರು ಬೆನ್ನನು (೩:೨-೭; ಪು.೯).

ವಿಷಮಕಾಲದೊಳು ಹೆದ್ದೆರೆ ಹೊಯಿಲ ಕಡಲಿನ ನಡುವೆ
ಕುದುರಿನ ತೆರದೊಳೆದ್ದಿಹುದು ಶ್ರೀ ಹರಿ ಸ್ಮೃತಿ ದಾರ್ಢ್ಯವಂ
ಪ್ರಕಟಿಸುತಲೆನ್ನೀ ಕಬ್ಬ ಸಮಯಾಸಮಯದರಿವಿರದೆ,
ಆಡು ನಡು ಹೊಸ ಕನ್ನಡದ ಸಕ್ಕದದ ಬೆರಕೆಯ ರೀತಿ,
ಹೊಸ ಬಗೆ ನಡೆಯ ತೋಂತೋಂನ್ನ ತಾನಗತಿ ಗಮಕದ ಛಂದ,
ಅರ್ಥದೊಳೆ ತಾತ್ಪರ್ಯ, ಶ್ರೀ ಹರಿಚರಿತೆ ಲೋಕಪ್ರಸಿದ್ಧಂ.
ಮನ್ನಿಪರೆ ಬುಧರಿದನು?…” (“ನಿವೇದನ,” ೪೮-೫೫; ಪು.೪೮೭).

(೨) ಎರಡನೆಯದಾಗಿ, ಇಂತಹ ಭಾಗಗಳಲ್ಲಿ ತನ್ನ ಕಾವ್ಯವನ್ನು ಓದುಗರು ಹೇಗೆ ಆಸ್ವಾದಿಸಬೇಕು ಎಂಬುದನನೂ ಕವಿ ವಿವರಿಸುತ್ತಾರೆ. ಎಂದರೆ, ಈ ಸಂದರ್ಭಗಳಲ್ಲಿ ಕೃತಿ ಮತ್ತು ಕೃತಿ ವ್ಯಾಖ್ಯಾನ ಇವೆರಡೂ ಒಂದನ್ನೊಂದು ಹಿಂಬಾಲಿಸುತ್ತವೆ:

“…ಎಲ್ಲಿಹುದು ಬೃಂದಾವನಂ?
ಯಾವೆಡೆಯೊಲುಮೆಯೆಲ್ಲಿ ನೇಹಂ, ಮತ್ತೆಲ್ಲಿ ಕರುಬಿಲ್ಲ
ದಕ್ಕರೆಯೆಲ್ಲಿ ನಿರ್ಭಯವೆಲ್ಲಿ ಕೇಡಂ ಗೆಲವ ಹುರುಡು
ಪೌರುಷವೆಲ್ಲಿ ನಾಡೊಲಮೆ ನಾಡವರೊಲುಮೆ ಎಲ್ಲಿ
ಬಿಡುಗಡೆ ಎಲ್ಲೆ ಬೃಂದಾವನಂ ದಿವ್ಯಗಾನಾಶ್ರಯಂ (೧೦:೧೪-೧೮; ಪು.೪೧).

ಈ ಸಾಲುಗಳಲ್ಲಿ ಕವಿ ಓದುಗರಿಗೆ ತಿಳಿಸಿ ಹೇಳುವುದೇನೆಂದರೆ, ಕಾವ್ಯವು ಒಂದು ಸಾಂಕೇತಿಕ ವ್ಯವಸ್ಥೆಯಾದುದರಿಂದ ಅದರಲ್ಲಿ ಬರುವ ದೃಶ್ಯ-ಘಟನೆ-ಪಾತ್ರಗಳು ಸಾಂಕೇತಿಕ. ಬೃಂದಾವನವೆಂದರೆ ಒಂದು ಕಾಲವಿಶಿಷ್ಟ ಭೌಗೋಲಿಕ ಪ್ರದೇಶವಲ್ಲ; ಅದೊಂದು ಆದರ್ಶದ ರೂಪಕ. ಅರ್ಥಾತ್, ಇಲ್ಲಿ ಕವಿ ಸ್ಪಷ್ಟ ಪರಿಸುತ್ತಿರುವುದು (ಲೀಲಾವತಿಯ ನೇಮಿಚಂದ್ರನಂತೆ) ವೈಜ್ಞಾನಿಕ/ವಾಸ್ತವ ಸತ್ಯ ಮತ್ತು ಕಾವ್ಯ ಸತ್ಯ ಇವುಗಳ ನಡುವಿನ ವ್ಯತ್ಯಾಸ.

ಇದೇ ಅಂಶವನ್ನು – ಎಂದರೆ, ಭಾವಾಧಾರಿತ ಕಾವ್ಯಸತ್ಯ ಕರ್ತವನ್ನು ಮೀರಿದುದು ಎಂಬ ಅಂಶವನ್ನು – ಕವಿ ಮತ್ತೆ ಮತ್ತೆ ಓದುಗರ ಗಮನಕ್ಕೆ ತರುತ್ತಾರೆ:

ಬಿಡು ಮನವೆ ನೀರಸ ತರ್ಕ ಮಾಗವನು, ಸಾಗು ನೀ ಭಾವುಕ
ಜನದ ಬೆಂಗಡೆ, ಮಾಧವನ ರಸತೃಷ್ಣೆಯೊಳು;…” (೧೫:೮೬-೮೭; ಪು.೭೪).

ಶ್ರೀ ಗೋವಿಂದ ಚರಣಾನುಸರಣದೊಳು ಬಳಲದೆ ನಡೆವ
ಮನಕೇಕೆ ತರ್ಕಂ? ಭಾವನೆಯೆ ಸಾಲದೆ?… (೨೦:೧-೨; ಪು.೧೦೮);

ಒಂದಿನಿತು ದೂರಂ ನಡೆವುದು ತರ್ಕಯುಕ್ತ ಜಿಜ್ಞಾಸೆ
ಬಳಿಕುತ್ಮಾದಮೂಹಾತೀತಮಸಂಭವ ಸಂಭಂ
ಮಹಾಪುರುಷ ಚರಿತದೊಳು ಕಾಣಲಕ್ಕುಂ (೨೦:೭-೯; ಪು.೧೧೩).

ಸೂಚ್ಯವೋ ವಾಚ್ಯಮೋ?
ವಾಚ್ಯಮೆನಲಸಂಭಾವ್ಯಂ ಹುಸಿ.
ಸೂಚ್ಯಮೆನೆ ನನ್ನಿ ಅದು (೨೦:೫೯-೬೦; ಪು.೧೧೫).

ಇತ್ಯಾದಿ.

ಈ ಎಲ್ಲಾ ಉದ್ಧರಣಗಳ ಸಾರಾಂಶವನ್ನು ಮತ್ತೆ ಹೇಳುವುದಾದರೆ, ಪುತಿನ ಅವರ ಶ್ರೀ ಹರಿಚರಿತೆ ಒಂದೇ ಕಾಲದಲ್ಲಿ ಎರಡು ದಿಕ್ಕುಗಳಲ್ಲಿ ಕ್ರಿಯಾಶೀಲವಾಗುತ್ತದೆ: ಒಂದು ದಿಕ್ಕಿನಲ್ಲಿ ಪುರಾಣಪುರುಷನಾದ ಕೃಷ್ಣನ ಕಥೆಯನ್ನು ಚಿತ್ರಿಸುತ್ತಾ ಸಾಗಿದರೆ, ಮತ್ತೊಂದು ದಿಕ್ಕಿನಲ್ಲಿ ತನ್ನ ಬಗ್ಗೆಯೇ ಹಾಗೂ ತಾನಿರುವ ಸ್ವರೂಪದ ಬಗ್ಗೆಯೇ ಹೇಳುತ್ತಾ ಹೋಗುತ್ತದೆ – ಪುರಾಣ ಪುರುಷನ ಕಥೆಯನ್ನು ಇಂದು ನಾವು ಹೇಗೆ ಅರ್ಥೈಸಿಕೊಳ್ಳಬೇಕು? ಕಾವ್ಯಸತ್ಯವೆಂದರೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತಾ ಹೋಗುತ್ತದೆ. ಈ ಇಬ್ಬಗೆಯ ಗತಿಯಲ್ಲಿ ಕೃತಿಸೃಷ್ಟಿ ಮತ್ತು ಕೃತಿವ್ಯಾಖ್ಯಾನ ಇವೆರಡೂ ಒಂದನ್ನೊಂದು ಹಿಂಬಾಲಿಸುತ್ತವೆ; ಮತ್ತು ಕಾವ್ಯಾನುಶೀಲನೆಗೆ ಅಗತ್ಯವಾದ (ಸಹೃದಯನಲ್ಲಿರಬೇಕಾದ) ಗುಣಗಳನ್ನೂ ವಿವರಿಸುತ್ತಾ ಹೋಗುತ್ತದೆ. ಈ ಲಕ್ಷಣಗಳು ಸ್ವಾಭಿಮುಖ ಸಾಹಿತ್ಯದ ಪ್ರಮುಖ ಗುಣಗಳು.

ಈ ಬಗೆಯ ಕೃತಿಯ ಸ್ವಾಭಿಮುಖಿ ಆಯಾಮದ ಹಿನ್ನೆಲೆಯಲ್ಲಿ ನಾವು ಕೃತಿಯ ಪಾತ್ರ-ಘಟನೆಗಳನ್ನು ನೋಡಿದಾಗ ಪುರಾಣ ಪುರುಷನಾದ ಕೃಷ್ಣನ ಪಾತ್ರದ ಮೂಲಕ ‘ಆದರ್ಶ ನಾಯಕ’ನನ್ನು ಚಿತ್ರಿಸುವುದು ಕವಿಯ ಉದ್ದೇಶವೆಂದು ನಮಗೆ ಅರಿವಾಗುತ್ತದೆ. ಈ ಅಂಶವನ್ನು ಕೃತಿಯ ಪ್ರಾರಂಭದಲ್ಲಿಯೇ ಕವಿ ಸ್ಪಷ್ಟಪಡಿಸುತ್ತಾರೆ: “…ಇಂದನಂದಿಗೆ ಹೊಂದಿಸುತ” ಎಂದರೆ, ಪುರಾಣವನ್ನು ವರ್ತಮಾನಕ್ಕೆ ಪ್ರಸ್ತುವಾಗುವಂತೆ ವ್ಯಾಖ್ಯಾನಿಸುವುದು ಕೃತಿಯ ಪ್ರಮುಖ ಕಾಳಜಿ. ಆದರ್ಶ ರಾಷ್ಟ್ರನಾಯಕನಲ್ಲಿರಬೇಕಾದ ಗುಣಗಳೆಂದರೆ ‘ಸಮಷ್ಟಿ ಪ್ರಜ್ಞೆ’ ಮತ್ತು ವೈಯಕ್ತಿಕ ಸುಖ-ದುಃಖಗಳ ತ್ಯಾಗ. ಕೃತಿಯಲ್ಲಿ ಪ್ರಮುಖವಾಗಿ ಬರುವ ಕಾಳೀಯ ಮರ್ದನ, ವ್ರಜನಗರ ನಿರ್ಮಾಣ, ಗೋವರ್ಧನಗಿರಿ ಪ್ರಸಂಗ, ಇತ್ಯಾದಿ ಘಟನೆಗಳು ಕೃಷ್ಣ/ಆದರ್ಶ ನಾಯಕನಲ್ಲಿರಬೇಕಾದ ಸಮಷ್ಟಿ ಪ್ರಜ್ಞೆಯನ್ನು ದರ್ಶಿಸುತ್ತವೆ. ಹಾಗೆಯೇ, ಆದರ್ಶ ನಾಯಕನು ಸ್ವಹಿತ, ಸ್ವಜನ, ವೈಯಕ್ತಿಕ ಸ್ನೇಹ-ಪ್ರೇಮ, ಇತ್ಯಾದಿಗಳನ್ನು ತ್ಯಜಿಸಬೇಕಾಗುತ್ತದೆಂಬ ಅಂಶವನ್ನು ಕೃತಿ ‘ಗೋಕುಲ ನಿರ್ಗಮನ’ ಪ್ರಸಂಗ ಸಮರ್ಥವಾಗಿ ದಾಖಲಿಸುತ್ತದೆ. (ಆದುದು ಗೋಕುಲ ಮಗೋಚರಂ, ರಾಧೆಯುಂ ಚಿರವಿರಹಿ / ವೇಣುವು ಬರಿನಳಿಗೆ) ಇಲ್ಲಿ ಮುಖ್ಯವಾಗುವ ಸಂಗತಿಯೆಂದರೆ, ಕೃಷ್ಣನು ಈ ಘಟ್ಟದಲ್ಲಿ ತನ್ನ ಮುರಳಿಯನ್ನು ತ್ಯಜಿಸುವುದು. ಮುರಳಿ ಕೃಷ್ಣ-ರಾಧೆಯರ ಪ್ರೇಮದ ಹಾಗೂ ಕೃಷ್ಣನ ವೈಯಕ್ತಿಕ ಸುಖ-ಸಂತೋಷಗಳ ಸಂಕೇತ. ವೈಯಕ್ತಿಕವಾದುದೆಲ್ಲವನ್ನೂ ತ್ಯಜಿಸುವ ಸಂಕೇತವಾಗಿ ತನ್ನ ಮುರಳಿಯನ್ನು ತ್ಯಜಿಸಿ ಕೃಷ್ಣ ಕರ್ಮಕ್ಷೇತ್ರವಾದ ಮಧುರೆಗೆ ಹೊರಡುತ್ತಾನೆ.

ಕೃಷ್ಣನಲ್ಲಿರುವ ಆದರ್ಶ ರಾಷ್ಟ್ರನಾಯಕನ ಈ ಎಲ್ಲಾ ಗುಣಗಳ ಅದ್ಭುತ ರೂಪಕವೇ ಹತ್ತನೆಯ ಅಧ್ಯಾಯದಲ್ಲಿ ಬರುವ ಭಾಂಡೀರ ಅಥವಾ ವಟ ವೃಕ್ಷ. ಈ ವೃಕ್ಷವನ್ನು ತುಂಬಾ ದೀರ್ಘವಾಗಿ, ಅರ್ಥಪೂರ್ಣವಾಗಿ, ತನ್ಮತೆಯಿಂದ ಕವಿ ವರ್ಣಿಸುತ್ತಾರೆ:

“…ತನ್ನಳವಿನೊಳೆ ತನ್ನನೆತ್ತುವ ಬೆಳೆದ ಮಾಸತ್ವವನು
ಸಾಸಿರಗಂಬಗಳ ಕರುಮಾಡುವನು

ಬೇರೆ ಮರಗಳ ಬೃಹತ್ಕಾಂಡವೆಂಬ ಪರಿಯೊಳು ನಿಂತ,

ತಿರೆನಭಗಳೆರಡನು ಹೀರಿಯಪ್ರತಿಮ ಜೀವೇಚ್ಛೆಯನು
ಬಹು ಗಾಢ ಭಾವದಿಂ ಮೂರ್ತೀಕರಿಸುವೊಲು ನಿಂತಿರುವ
ಮೋಡವ ಸೆಳೆದು ಬಿಸಿಲನು ತಡೆದು ತಣುವರೆದು ತಂಪಾಳ್ವ
ವೃಕ್ಷ (೧೦:೪೯-೧೩೨; ಪು. ೪೪-೪೫).

ಸ್ವಲ್ಪದರಲ್ಲಿಯೇ ಹೇಳಬೇಕಾದರೆ, ಈ ಭಾಂಡೀರ ವೃಕ್ಷ ರಾಷ್ಟ್ರನಾಯಕನಲ್ಲಿರಬೇಕಾದ ‘ಮಹಾಸತ್ವ’ ಆಕಾಶದತ್ತ ಲಕ್ಷ್ಯವಿದ್ದರೂ ನೆಲವನ್ನು ಗಟ್ಟಿಯಾಗಿ ಮೆಟ್ಟಿರಬೇಕಾದ ಎಚ್ಚರ, ಅಪ್ರತಿಮ ಜೀವೇಚ್ಛೆ, ಎಲ್ಲಾ ಬಗೆಯ ಆಪತ್ತುಗಳನ್ನೂ ಎದುರಿಸಿ ಅವುಗಳಿಂದ ರಾಷ್ಟ್ರವನ್ನು ಕಾಪಾಡುವ ಸಾಮುದಾಯಿಕ ಪ್ರಜ್ಞೆ, – ಇವೆಲ್ಲಾ ಗುಣಗಳನ್ನೂ ಈ ವೃಕ್ಷ ಅನ್ಯಾದೃಶವಾಗಿ ಸಂಕೇತಿಸುತ್ತದೆ. ಇದರ ದರ್ಶನದಿಂದ ಮತ್ತು ಇದರ ಅರ್ಥವನ್ನು ಗ್ರಹಿಸುವ ಮೂಲಕ ಕೃಷ್ಣನು “ಕೆಲದಿನದೊಳೇ ಸಿದ್ಧಿಯ ಪಡೆದು,” ನಂತರ ಆದರ್ಶ ನಾಯಕನಾಗುತ್ತಾನೆ.

ಸ್ವಾಭಿಮುಖತೆ ಎಲ್ಲಾ ಸಾಹಿತ್ಯಕೃತಿಗಳ ಏಕಮೇವ ಲಕ್ಷಣ ಹಾಗೂ ಕಾರ್ಯ ಎಂಬ ಆಧುನಿಕೋತ್ತರವಾದಿಗಳ ನಿಲುವನ್ನು ನಾವು ಒಪ್ಪದೇ ಇರಬಹುದು. ಏಕೆಂದರೆ, ಈ ವಾದ ಸಾಹಿತ್ಯಕೃತಿಗಳ ‘ಅನ್ವಯಾತ್ಮಕತೆ’ಯನ್ನೇ (referentiality) ಅಲ್ಲಗಳೆದು, ಆ ಮೂಲಕ ಸಾಹಿತ್ಯಕ್ಕೂ ವಾಸ್ತವ ಬದುಕಿಗೂ ಇರುವ ಅವಿನಾ ಸಂಬಂಧವನ್ನೇ ನಿರಾಕರಿಸುತ್ತದೆ. ಆದರೆ, ಸ್ವಾಭಿಮುಖತೆ ಎಲ್ಲಾ ಸಾಹಿತ್ಯಕೃತಿಗಳ ಒಂದು ಮುಖ್ಯ ಆಯಾಮ ಎಂಬುದಂತೂ ಸತ್ಯ. ಹಾಗೆಯೇ, ಈ ಆಯಾಮ ಆಧುನಿಕ ಸಾಹಿತ್ಯದಲ್ಲಿ ಹೆಚ್ಚು ಪ್ರಖರವಾಗಿ ಕಾಣಿಸುತ್ತಾದರೂ ಇದೇನೂ ಆಧುನಿಕ ಸಾಹಿತ್ಯಕ್ಕೆ ಮಾತ್ರ ಸೀಮಿತವಾದುದಲ್ಲ. ಕನ್ನಡ ಸಾಹಿತ್ಯವನ್ನೇ ತೆಗೆದುಕೊಂಡರೂ, ಪಂಪನು ಕಾವ್ಯವನ್ನು ‘ನಿಚ್ಚಂ ಪೊಸತು ಅರ್ಣವಂಬೋಲ್’ ಎಂದು ವರ್ಣಿಸುವಾಗ; ಎರಡು ಷಟ್ಪದಿಗಳಲ್ಲಿ ದೀರ್ಘವಾಗಿ ತನ್ನ ಕಾವ್ಯ (ಪ್ರಭುಲಿಂಗ ಲೀಲೆ) ಕಾಳಗದ ಕಥೆಯಲ್ಲ… ಸತ್ತವರ ಕಥೆಯಲ್ಲ…” ಎಂದು ಚಾಮರಸರು ಘೋಷಿಸುವಾಗ; ಏಳು ಸಾಂಗತ್ಯಗಳಲ್ಲಿ ರತ್ನಾಕರವರ್ಣಿ ತನ್ನ ಕಾವ್ಯದ (ಭರತೇಶ ವೈಭವ) ಸ್ವರೂಪ-ಉದ್ದೇಶಗಳ ಬಗ್ಗೆ “ಸಕಲ ಲಕ್ಷಣವು ವಸ್ತುಕಕತೆ, ವರ್ಣಕಕಿಷ್ಟು / ವಿಕಳವಾದರೂ ದೋಷವಿಲ್ಲ,” “ರಳಕುಳ ಶಿಥಿಲ ಸಮಾಸ ಮುಂತಾದವ / ರೊಳಗಿಲ್ಲಿ ಕೆಲವುಳ್ಳರುಂಟು/ಕೆಲವಿಲ್ಲ…” ಎಂದು ನಮ್ರವಾಗಿ ಮಂಡಿಸುವಾಗ; – ಈ ಸಂದರ್ಭಗಳಲ್ಲೆಲ್ಲಾ ನಾವು ಕಾಣುವುದು ಸ್ವಾಭಿಮುಖತೆಯನ್ನೇ. ಆದರೆ, ಲೇಖಕ-ಓದುಗ ವೈಚಾರಿಕ ಚೌಕಟ್ಟು ಭಿನ್ನ ಭಿನ್ನವಾಗಿರುವ ಆಧುನಿಕ ಕಾಲದಲ್ಲಿ ಈ ಬಗೆಯ ಸ್ವಾಭಿಮುಖತೆ ಕೃತಿಯಲ್ಲಿ ಹೆಚ್ಚು ಒತ್ತು ಪಡೆಯುತ್ತದೆ ಎಂಬುದು ನಿಶ್ಚಯ. ಈ ಹೇಳಿಕೆಯ ನಿದರ್ಶನಗಳಾಗಿ, ಇಂಗ್ಲಿಷ್ ಕವಿ ಮಿಲ್ಟನ್ ಮತ್ತು ಕನ್ನಡ ಕವಿ ನಂದಳಿಕೆ ಲಕ್ಷ್ಮೀನಾರಣಪ್ಪ ಇವರಿಬ್ಬರನ್ನು ಪ್ರಾತಿನಿಧಿಕವಾಗಿ ನಾವು ಕಾಣಬಹುದು.

ಸಾಂಸ್ಕೃತಿಕ ಇತಿಹಾಸಕಾರರು ‘ರೆನಸನ್ಸ್-ರೆಫರ್ಮೇಶನ್’ ಯುಗವಾದ ೧೬-೧೮ನೆಯ ಶತಮಾನಗಳನ್ನು ಯೂರೋಪಿನ ಆಧುನಿಕ ಯುಗವೆಂದೇ ಗುರುತಿಸುತ್ತಾರೆ. ಈ ಅವಧಿಯಲ್ಲಿ, ೧೭ನೆಯ ಶತಮಾನದ ಉತ್ತರಾರ್ಧದಲ್ಲಿ ಒಂದು ಮಿಲ್ಟನ್‌ನ ಮಹಾಕಾವ್ಯ ಪ್ಯಾರಡೈಜ್ ಲಾಸ್ಟ್ ಅತ್ಯಂತ ಸ್ವಾಭಿಮುಖಿ ಕಾವ್ಯ. ಈ ಕಾವ್ಯವನ್ನು ಮಿಲ್ಟನ್ ರಚಿಸುವ ಕಾಲಕ್ಕೆ ಕಾವ್ಯ ಪ್ರಭೇದಕ್ಕೆ ಅನುವಂಶಿಕವಾಗಿ ಪ್ರೋತ್ಸಾಹ ನೀಡುತ್ತಿದ್ದ ಉಚ್ಛ ಶ್ರೀಮಂತ ವರ್ಗ ನಿಧಾನವಾಗಿ ತನ್ನ ಅಧಿಕಾರ-ಪ್ರಭಾವಗಳನ್ನು ಕಳೆದುಕೊಳ್ಳುತ್ತಿತ್ತು. ಮತ್ತು ಆ ವರ್ಗದ ಸ್ಥಾನವನ್ನು ವ್ಯಾಪಾರೀ ವರ್ಗ ಆಕ್ರಮಿಸುತ್ತಿತ್ತು. ಮತ್ತೊಂದೆಡೆ, ರಾಜನಾದ ಎರಡನೆಯ ಛಾರಲ್ಸ್ ಫ್ರಾನ್ಸ್‌ನಲ್ಲಿ ಬಹುಕಾಲ ಇದ್ದು ನಂತರ ಇಂಗ್ಲೆಂಡ್‌ಗೆ ಮರಳಿದ್ದರಿಂದ, ಅವನ ಹಾಗೂ ಅವನ ಆಸ್ಥಾನೀಕರ ಸಾಹಿತ್ಯಕ ಅಭಿರುಚಿಗಳು ಬದಲಾಗಿದ್ದುವು. ಈ ಕಾವ್ಯವನ್ನು ರಚಿಸುವ ವೇಳೆಗೆ ಮಿಲ್ಟನ್ ತನ್ನ ಅಧಿಕಾರ, ಸಾಮಾಜಿಕ ಸ್ಥಾನ-ಮಾನಗಳೆಲ್ಲವನ್ನೂ ಕಳೆದುಕೊಂಡು, ಒಂದು ಬಗೆಯ ‘ಗೃಹಬಂಧನ’ವನ್ನು ಅನುಭವಿಸುತ್ತಿದ್ದನು. ಎಲ್ಲದಕ್ಕಿಂತ ಮುಖ್ಯವಾಗಿ, ಯುರೋಪಿನಲ್ಲಿ ಮೊದಲ ಬಾರಿಗೆ ಪರಂಪರಾಗತ ಗ್ರೀಕ್-ಲ್ಯಾಟಿನ್ ಮಹಾಕಾವ್ಯಗಳ ಮಾದರಿಯನ್ನು ತಿರಸ್ಕರಿಸಿ, ಒಂದು ನೂತನ ‘ಕ್ರಿಶ್ಚಿಯನ್’ ಮಹಾಕಾವ್ಯವನ್ನು ಮಿಲ್ಟನ್ ಇಲ್ಲಿ ರಚಿಸಿದ್ದಾನೆ. ಈ ಎಲ್ಲಾ ಕಾರಣಗಳಿಂದ, ಅವನಿಗೆ ತನ್ನ ಕಾವ್ಯವನ್ನು ಓದುಗರು ಸ್ವೀಕರಿಸುವ ಬಗ್ಗೆ ಮತ್ತು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಬಗ್ಗೆ ಅಪಾರ ಸಂದೇಹವಿತ್ತು; ಈ ಸಂದೇಹಗಳೆಲ್ಲವನ್ನೂ ಮಿಲ್ಟನ್ ತನ್ನ ಕಾವ್ಯದಲ್ಲಿಯೇ ದಾಖಲಿಸುತ್ತಾನೆ.

ತನ್ನ ಮಹಾಕಾವ್ಯದ ಒಂಭತ್ತನೆಯ ಅಧ್ಯಾಯದ ಮೊದಲ ೪೭ ಸಾಲುಗಳಲ್ಲಿ ಮಿಲ್ಟನ್ ತನ್ನ ಕಾವ್ಯ ಹೇಗೆ ಮತ್ತು ಯಾವ ಕಾರಣಗಳಿಗಾಗಿ ಗ್ರೀಕ್-ಲ್ಯಾಟಿನ್ ಮಹಾಕಾವ್ಯಗಳಿಗಿಂತ ಭಿನ್ನವಾಗಿದೆ ಎಂಬುದನ್ನೇ ವಿವರಿಸುತ್ತಾನೆ:

ಕಾವ್ಯವಸ್ತುಗಳೆಂದರೆ ಯುದ್ಧಗಳು, ಕಲ್ಪನಾಶಕ್ತಿ
ಎಂದರೆ ಪ್ರಸಿದ್ಧ ಯೋಧರ ಸಾಹಸದ ವರ್ಣನೆ ಎಂದೇ ಇಂದಿನ ತನಕ
ಪರಿಗಣಿಸಲ್ಪಟಿವೆ. ಆದರೆ ನನಗೆ ಅವುಗಳಲ್ಲಿ ಆಸಕ್ತಿಯಿಲ್ಲ. ತಾಳ್ಮೆ
ಮತ್ತು ಶ್ರೇಯಸ್ಕರ ಆತ್ಮ ಸಮರ್ಪಣೆ ಇವುಗಳನ್ನು ಯಾರೂ ಇಲ್ಲಿಯವರೆಗೆ
ಕೀರ್ತಿಸಿಲ್ಲ. ಸ್ಪರ್ಧಾತ್ಮಕ ಆಟಪಾಟಗಳು, ಬೀಸುವ ಗದೆಬಾಣಗಳು,
ಹೊಳೆಯುವ ಗುರಾಣಿಗಳು, ಆನೆಕುದುರೆಇವೆಲ್ಲವೂ ಮಕ್ಕಳಾಟದ
ಬೇಗಡೆಯಂತೆ ನಿರರ್ಥಕ.[7]

ಇದೇ ನೆಲೆಯಲ್ಲಿ, ನೂತನ ಸ್ವರೂಪದ ತನ್ನ ಕಾವ್ಯವನ್ನು ಓದಿ ಆನಂದಿಸುವ ಯಾರಾದರೂ ಓದುಗರು ಇದ್ದಾರೆಯೆ ಎಂದು ಮಿಲ್ಟನ್‌ಗೆ ಸಂದೇಹ. ಆದ್ದರಿಂದ ತನ್ನ ಕಾವ್ಯದೇವನತೆಯನ್ನು ಒಂದು ಸಂದರ್ಭದಲ್ಲಿ ಹೀಗೆ ಪ್ರಾರ್ಥಿಸುತ್ತಾನೆ:

ಕಾವ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಓದುಗರನ್ನು
ಅಂತಹವರು ಒಬ್ಬಿಬ್ಬರೇ ಆದರೂ ಸರಿನೀನು ಒದಗಿಸಿಕೊಡು ಆದರೆ,
ಅನಾಗರಿಕ ಪಾನಮತ್ತ ಸ್ತ್ರೈಣರನ್ನು ದೂರಮಾಡು.[8]

ಸ್ವಲ್ಪದರಲ್ಲಿಯೇ ಹೇಳಬೇಕಾದರೆ, ಪರಂಪರಾಗತ ಮಹಾಕಾವ್ಯ ಶರೀರದಲ್ಲಿ ಕ್ರಿಶ್ಚಿಯನ್ ಧರ್ಮದಲ್ಲಿ ರೂಪಿಸಲ್ಪಟ್ಟ ಆತ್ಮವನ್ನು ಬೆಳಗುವ ಉದ್ದೇಶದಿಂದ ತನ್ನ ನೂತನ ಮಹಾಕಾವ್ಯವನ್ನು ರಚಿಸುವಾಗ ಮಿಲ್ಟನ್‌ಗಿದ್ದ ಓದುಗರನ್ನು ಕುರಿತ ಸಂದೇಹ, ಮತ್ತು ಆ ಸಂದೇಹವನ್ನು ದೂರ ಮಾಡಲು ಅವನೇ ತನ್ನ ಕಾವ್ಯದ ಅರ್ಥವನ್ನು ಅಲ್ಲಲ್ಲಿ ವ್ಯಾಖ್ಯಾನಿಸುವುದು, ತನ್ನ ನೂತನ ಕಾವ್ಯದ ಬಗ್ಗೆ ಅವನಿಗಿದ್ದ ಆತ್ಮವಿಶ್ವಾಸ ಹಾಗೂ ಸಂಶಯ – ಇವೆಲ್ಲವನ್ನೂ ಪ್ಯಾರಡೈಜ್ ಲಾಸ್ಟ್ ದರ್ಶಿಸುತ್ತದೆ.

ನಂದಳಿಕೆಯವರ ಪರಿಸ್ಥಿತಿ ಇನ್ನೂ ಬಿಕ್ಕಟ್ಟಿನದು. ಗದ್ದಯ ಮಾಧ್ಯಮ ಮತ್ತು ವಾಸ್ತವತಾವಾದ ಹಾಗೂ ತರ್ಕಾಧಾರಿತ ವಿಶ್ವದೃಷ್ಟಿ ಇವುಗಳು ಪ್ರಬಲವಾಗಿ ಸಾಹಿತ್ಯಕ್ಷೇತ್ರವನ್ನು ವ್ಯಾಪಿಸುತ್ತಿದ್ದ ಸಂದರ್ಭದಲ್ಲಿ, ಎಲ್ಲೆಡೆಯೂ ರಾಜಬಾಷೆಯೆಂದು ಇಂಗ್ಲೀಷ್ ಭಾಷೆ-ಸಾಹಿತ್ಯಗಳು ಮೆರೆಯುತ್ತಿದ್ದ ಕಾಲದಲ್ಲಿ, ಇಂಗ್ಲೀಷ್ ಬಾರದ ಹಾಗೂ ಕನ್ನಡದಲ್ಲಿ ಪುರಾಣಕಥೆಯನ್ನಾಧಿರಿಸದ ಮಹಾಕಾವ್ಯವೊಂದನ್ನು ಬರೆಯಲು ತೊಡಗಿದವನು ಲಕ್ಷ್ಮೀನಾರಣಪ್ಪ. ಪರಿಣಾಮತಃ, ಇವರಿಗೆ ಸಹಜವಾಗಿಯೇ ಪಾರಂಪರಿಕ ಮಹಾಕಾವ್ಯ ಪ್ರಭೇದದ ಸ್ವರೂಪವನ್ನು ಕುರಿತು, ತಾನು ಆರಿಸಿದ ಕಥಾವಸ್ತುವನ್ನು ಕುರಿತು, ಅದರ ಸಾಧ್ಯ ಶೈಲಿಯನ್ನು ಕುರಿತು, ಮತ್ತು ಅತಿ ಮುಖ್ಯವಾಗಿ ನೂತನ ಅಭಿರುಚಿಯನ್ನು ಬೆಳೆಸಿಕೊಂಡಿದ್ದ ಓದುಗವೃಂದವನ್ನು ಕುರಿತು ಅನೇಕಾನೇಕ ಸಂಶಯ-ಸಂದೇಹಗಳು ಹಾಗೂ ಕಳವಳಗಳು ಅಪಾರವಾಗಿದ್ದುವು. ಇವೆಲ್ಲವನ್ನೂ ನಿವಾರಿಸಿಕೊಳ್ಳಲು ಮುದ್ದಣನು (ಕನ್ನಡದಲ್ಲಿ ಮೊದಲ ಬಾರಿಗೆ) ಕಂಡುಕೊಂಡ ಮಾರ್ಗವೆಂದರೆ ತನ್ನ ವ್ಯಕ್ತಿತ್ವವನ್ನು ‘ಮುದ್ದಣ’ ‘ಮನೋರಮೆ’ ಎಂದು ಎರಡಾಗಿ ವಿಭಜಿಸಿಕೊಂಡು, ಮುದ್ದಣನ ಮೂಲಕ ಪ್ರಶ್ನೆಗಳನ್ನು ಕೇಳುತ್ತಾ, ಮನೋರಮೆಯ ಮೂಲಕ ಅವುಗಳಿಗೆ ಉತ್ತರಿಸುತ್ತಾ, ಕೃತಿಸೃಷ್ಟಿ-ಕೃತಿವ್ಯಾಖ್ಯಾನ ಇವೆರಡನ್ನೂ ಒಳಗೊಳ್ಳುವ ಅದ್ಭುತ ಸ್ವಾಭಿಮುಖತೆ. ಈ ಮಾರ್ಗದಲ್ಲಿ ನಂದಲಿಕೆಯವರು ದರ್ಶಿಸುವ ಪ್ರತಿಭೆ ಸ್ವೋಪಜ್ಞ.[9]

ಲಕ್ಷ್ಮೀನಾರಣಪ್ಪನವರು ಎದುರಿಸಿದ ಸಾಹಿತ್ಯಕ-ಸಾಂಸ್ಕೃತಿಕ ಬಿಕ್ಕಟ್ಟನ್ನೇ ಹೆಚ್ಚು ಕಮ್ಮಿ ಪುತಿನ ಅವರೂ ಎದುರಿಸಬೇಕಾಯಿತು. ಮುಖ್ಯವಾಗಿ ಇಬ್ಬರೂ ಬದಲಾದ ಸಂವೇದನೆ ಮತ್ತು ಓದುಗವೃಂದ ಇವುಗಳನ್ನು ಎದುರಿಸಬೇಕಾಯಿತು. ಆದ್ದರಿಂದಲೇ, ಪ್ರಾಯಃ, ಇಬ್ಬರ ಕಾವ್ಯಗಳಲ್ಲಿಯೂ ಕಾಲದ ಪರಮಾಧಿಕಾರವನ್ನು ಕುರಿತು ಹೃದಯಸ್ಪರ್ಶಿಯಾದ ವರ್ಣನೆಗಳಿವೆ. ರಾಮಾಶ್ವಮೇಧವಾದರೋ ಅಸಾಂಪ್ರದಾಯಿಕ ರೀತಿಯಲ್ಲಿ, ದೇವತಾಸ್ತುತಿ, ಕುಕವಿನಿಂದೆ, ಇತ್ಯಾದಿಗಳನ್ನು ತಿರಸ್ಕರಿಸಿ, ಸರ್ವಾಧಿಕಾರಿಯಾದ ‘ಕಾಲಪುರುಷ’ನ ವರ್ಣನೆಯಿಂದ ಪ್ರಾರಂಭವಾಗುತ್ತದೆ (ಓವೋ! ಕಾಲಪುರುಷಂಗೆ ಗುಣಮಣಮಿಲ್ಲಂ ಗಡ! …”) ಇಡೀ ವರ್ಣನೆಯ ಕೇಂದ್ರ ‘ದುರ್ದಿನ’ ಪದದ ಶ್ಲೇಷೆ: ಮೇಘಾಚ್ಛಾದಿತ ದಿನ ಮತ್ತು ಕೆಟ್ಟ ದಿನ. ಪುತಿನ ಅವರೂ ಕಾಲವನ್ನು ಹೀಗೆ ಭಾವುಕರಾಗಿ ವರ್ಣಿಸುತ್ತಾರೆ:

ಕಾಲಮೇ
ನೀ ಬಲು ಚೋರನಲ. ಕದ್ದೆಲ್ಲಿ ಬಯತಿಟ್ಟೆಯಾ ಗೊಲ್ಲ
ಚೆಲುವೆಯರ ಚೋತೋಲ್ಲಾಸವನು, ಹರಿಯ ಕೊಳಲಿನ ಕರೆಹ
ಕೋಗುಟ್ಟವರ? ಶ್ರೀಕೃಷ್ಣನವತರಿಸಿ ಮುರಲಿಯ ತುಟಿಗೆ
ತಹ ಮುನ್ನ ಮಾನವ ಜೀವನಕಮರಿತ್ತೆ ಬೇಸರ ಬೂಷ್ಟೆ?
ರೂಢಿಯ ಕುರುಡು ಕೂಪದೊಳದನು ನೀನೆಯಲ ಕೆಡಹಿದವ?
ಪಯಣದಾಯಾಸದೊಳು ನೀಂ ಬಿಡುವಂ ಕೊಂಬ ಹದವಿದುವೆ?
ನೀ ಸದಾಗತಿಯಲಾ? …” (೨೬:೯೭-೧೦೪; ಪು. ೧೪೫).

ಆದರೆ, ನಂದಳಿಕೆಯವರು ಮತ್ತು ಪುತಿನ ಇವರ ನಡುವೆ ಇರುವ ಒಂದು ಪ್ರಮುಖ ಭಿನ್ನತೆಯೆಂದರೆ, ಮನೋರಮೆಯ ರೂಪದಲ್ಲಿ ನಂದಳಿಕೆಯವರು ದರ್ಶಿಸುವ ಸ್ವವಿಮರ್ಶನ ಪ್ರಜ್ಞೆ ಪುತಿನ ಅವರಲ್ಲಿ ಅಷ್ಟಾಗಿ ಕಾಣುವುದಿಲ್ಲ.

ಲೇಖಕನೊಬ್ಬ ಒಂದು ಕಥೆಯನ್ನು ಅಥವಾ ಅನುಭವವನ್ನು ಕಥಿಸುತ್ತಿರುವಾಗಲೇ ತನ್ನ ಕಾಲದ ಸಾಹಿತ್ಯಕ-ಸಾಂಸ್ಕೃತಿಕ ಚರಿತ್ರೆಯನ್ನೂ ಕಟ್ಟುತ್ತಿರುತ್ತಾನೆ. ಇದೇ ಆ ಕೃತಿಯ ಸ್ವಾಭಿಮುಖತೆ ಆಯಾಮ. ಪರಿಣಾಮತಃ, ಕೃತಿಯೊಂದರ ಸ್ವಾಭಿಮುಖತೆ ಒಂದು ಕಾಲಘಟ್ಟದ ಸಾಹಿತ್ಯಕ-ಸಾಂಸ್ಕೃತಿಕ ತಲ್ಲಣಗಳ ಹಾಗೂ ತುಡಿತಗಳ ಅರ್ಥಪೂರ್ಣ ದಾಖಲೆ.

(‘ಪುತಿನ ವಿಚಾರ ಸಂಕಿರಣ-೨೦೦೪’ – ಇದರಲ್ಲಿ ಮಾಡಿದ ಭಾಷಣದ ವಿಸ್ತೃತ ಲಿಖಿತ ರೂಪ)

* * *

[1] ಪುತಿನ, ಶ್ರೀ ಹರಿಚರಿತೆ (೧೯೮೮; ಕನ್ನಡ ಪುಸ್ತಕ ಪ್ರಾಧಿಕಾರ, ೧೯೯೫), ನಾನು ಈ ಲೇಖನದುದ್ದಕ್ಕೂ ಉದ್ಧರಣಗಳಿಗೆ ಈ ಆವೃತ್ತಿಯನ್ನು ಆಧರಿಸಿದ್ದೇನೆ.

[2] ಕೆ.ವಿ. ನಾರಾಯಣ, “ಶ್ರೀ ಹರಿಚರಿತೆಯಲ್ಲಿ ವ್ಯಷ್ಟಿ-ಸಮಷ್ಟಿ ನೆಲೆ,” ಭೃಂಗಮಾರ್ಗ, ಸಂ, ಎಚ್.ಎಸ್. ರಾಘವೇಂದ್ರ ರಾವ್ (ಬೆಂಗಳೂರು: ಡಾ. ಪುತಿನ ಟ್ರಸ್ಟ್, ೨೦೦೫), ಪು. ೨೧೦.

[3] ಕೆ.ಎಲ್. ಗೋಪಾಲಕೃಷ್ಣಯ್ಯ, “ಶ್ರೀ ಹರಿಚರಿತೆಯ ಪುರಾಣ ಪ್ರತೀಕ,” ಭೃಂಗಮಾರ್ಗ, ಪು. ೨೩೬

[4] ಪಿ. ಲಂಕೇಶ್, “ ‘ಅಳುಬುರುಕುತನ’ ಮತ್ತು ಕಾವ್ಯಪ್ರೇಮ,’ ” ಭೃಂಗಮಾರ್ಗ, ಪು. ೧೩೦.

[5] ‘ಎಚ್.ಎಸ್. ರಾಘವೇಂದ್ರ ರಾವ್, “ಇದು ಮೀಸಲು ನಿಮಗೆ,” ಭೃಂಗಮಾರ್ಗ, ಪು. ix

[6] ‘ಸ್ವಾಭಿಮುಖತೆ’ ಎಂಬ ಪರಿಕಲ್ಪನೆಯನ್ನು ನಾನು ದೀರ್ಘವಾಗಿ ಇನ್ನೊಂದು ಲೇಖನದಲ್ಲಿ ಚರ್ಚಿಸಿದ್ದೇನೆ. ನೋಡಿ: “ಸ್ವಾಭಿಮುಖ ಸಾಹಿತ್ಯ: ಮುದ್ದಣನ ರಾಮಾಶ್ವಮೇಧ” ಬಯಲು – ರೂಪ-೧ (ಸ್ವಪ್ನ ಬುಕ್ ಹೌಸ್, ೨೦೦೬), ಪು. ೧೨೯-೧೪೪.

[7] ಮೂಲ ಕಾವ್ಯದ ಸಾಲುಗಳು ಹೀಗಿವೆ:
“…wars, hitherto the only argument
Heroic Deemed, chief maistry to dissect
With long and tedious havoc fabled knights
In battled feigned (the better fortitude
Of patience and heroic martyrdom
Unsung), or to describe races and games,
Or tilting furniture, emblazoned shields,
Impresses quaint, caparisons and seeds,
Bases and tinsel trappings, … “
(Bk. IX: 28-36)”

[8] ಮೂಲ ಕಾವ್ಯದ ಸಾಲುಗಳು ಹೀಗಿವೆ:
“….Still govern thou my song,
Urania, and fit audience find, though few.
But drive far off the barbarous dissonance
Of Bacchus and his revellers… (BK. VII: 30-34)”

[9] ಈ ಕಾವ್ಯದ ವಿಸ್ತೃತ ಚರ್ಚೆಗಾಗಿ ನೋಡಿ: “ಸ್ವಾಭಿಮುಖ ಸಾಹಿತ್ಯ: ಮುದ್ದಣನ ರಾಮಾಶ್ವಮೇಧ.”