() ಸೀತೆಲಕ್ಷ್ಮಣರಾವಣರ ಪಾತ್ರಗಳು:

ಶಿಷ್ಟ ರಾಮಾಯಣಗಳಿಗಿಂತ ಸಂಪೂರ್ಣ ಭಿನ್ನವಾಗಿ ಮೌಖಿಕ ರಾಮಾಯಣಗಳು ಕಾಣುವುದು ಸೀತೆ, ಲಕ್ಷ್ಮಣ, ರಾವಣ ಈ ಮೂರು ಪಾತ್ರಗಳ ಚಿತ್ರಣದಲ್ಲಿ. ಇಲ್ಲಿಯೂ ಅತ್ಯಂತ ಭಿನ್ನವಾಗಿ, ಎದ್ದು ಕಾಣುವ ಪಾತ್ರ ಸೀತೆಯದಾದ್ದರಿಂದ ಮೊದಲು ಆ ಪಾತ್ರವನ್ನೇ ನೋಡಬಹುದು.

ಸೀತೆ: ವಾಲ್ಮೀಕಿ ರಾಮಾಯಣದಲ್ಲಿ ಸೀತೆಯನ್ನು ‘ಭೂಮಿಸುತೆ’ ಎಂದಷ್ಟೇ ಹೇಳಲಾಗಿದೆ. ಜನಕನು ಸೀತೆಯ ಜನ್ಮ ವೃತ್ತಾಂತವನ್ನು ನಿರೂಪಿಸುವಾಗ “ಅಥಮೇ ಕೃಷತಃ ಕ್ಷೇತ್ರಂ ಲಾಙೂಲಾದುತ್ಠಿತಾ ಮಯಾ/ ಕ್ಷೇತರಂ ಶೋಧಯತಾ ಲಬ್ಧಾ ನಾಮ್ನಾ ಸೀತೇತಿ ವಿಶ್ರುತಾ” (೧:೬೬:೧೩). ಪದ್ಮಪುರಾಣವೂ ಇದನ್ನೇ ಹೇಳುತ್ತದೆ: “ಶುಭಕ್ಷೇತ್ರೇ ಹಲೋತ್ಖಾತೇ… ಸೀತಾಮುಖೇ ಸಮುತ್ಪನ್ನಾ…” ನನಗೆ ತಿಳಿದಂತೆ ಎಲ್ಲಾ ಶಿಷ್ಟ ರಾಮಾಯಣಗಳೂ ವಾಲ್ಮೀಕಿಯನ್ನೇ ಅನುಸರಿಸುತ್ತವೆ.

ಆದರೆ, ಹನ್ನೆರಡನೆಯ ಶತಮಾಣದಲ್ಲಿ ರಚಿಸಲ್ಪಟ್ಟ ಅದ್ಭುತ ರಾಮಾಯಣವು ಮಾತ್ರ ಸೀತೆಯನ್ನು ಭಿನ್ನವಾಗಿ ಚಿತ್ರಿಸುತ್ತದೆ. ಕಾಶ್ಮೀರದ ಶಾಕ್ತ ಪಂಥದಿಂದ ಪ್ರಭಾವಿತವಾದ ಈ ರಾಮಾಯಣದಲ್ಲಿ ರಾವಣ-ಮಂಡೋದರಿಯರ ಮಗಳಾದ ಸೀತೆ ಭದ್ರಕಾಳಿಯ ರೂಪು ತಾಳಿ ರಾವಣನನ್ನು ಕೊಲ್ಲುತ್ತಾಳೆ. ವಿದ್ವಾಂಸರ ಪ್ರಕಾರ ಹತ್ತನೆಯ ಶತಮಾನದ ಅಭಿನಂದನ ಸಂಸ್ಕೃತದ ರಾಮ ಚರಿತದಲ್ಲಿಯೂ ಶಾಕ್ತಪಂಥಗಳೊಡನೆ ರಾಮಕಥೆಯನ್ನು ಸೇರಿಸಲಾಗಿದೆ; ಮತ್ತು ಒರಿಯಾ ಭಾಷೆಯ ಸರಳದಾಸನ ರಾಮಾಯಣವೂ ಸೀತೆಯ ಪಾತ್ರ ಚಿತ್ರಣದಲ್ಲಿ ಅದ್ಭುತ ರಾಮಾಯಣ ಪರಂಪರೆಯನ್ನು ಅನುಸರಿಸುತ್ತದೆ. ಪ್ರಾಯಃ, ರಾಮಾಯಣಗಳಿಗಿಂತ ಒಂದು ಸಹಸ್ರಮಾನಕ್ಕೂ ಹಿಂದಿನಿಂದಲೇ ಕೃಷಿ-ಫಲವಂತಿಕೆಯ ದೇವತೆಯೆಂದು ಸೀತೆಯು ಪೂಜಿಸಲ್ಪಡುತ್ತಿದ್ದಳು; ಮತ್ತು ಆ ಕಾರಣದಿಂದಲೇ ಅವಳ ಜನ್ಮ ಮತ್ತು ಮರಣ ಎರಡೂ ಭೂಮಿಯಲ್ಲಿಯೇ ಆಗುತ್ತವೆ. “ಕೌಶಿಕ ಸೂತ್ರ”ವು ಅವಳನ್ನು ‘ಎಲ್ಲಾ ದೇವತೆಗಳ, ಮಾನವರ ಹಾಗೂ ಪ್ರಾಣಿಗಳ ತಾಯಿ’ ಎಂದು ವರ್ಣಿಸುತ್ತದೆ.

ಮೌಖಿಕ ರಾಮಾಯಣಗಳು ಮತ್ತು ಅದ್ಭುತ ರಾಮಾಯಣ ಇವೆರಡರಲ್ಲಿ ಯಾವುದು ಯಾವುದನ್ನು ಅನುಸರಿಸುತ್ತದೆ ಎಂದು ಹೇಳುವುದು ಅಸಾಧ್ಯ. ಪ್ರಾಯಃ, ಎರಡೂ ಒಂದು ಕಾಲದಲ್ಲಿ ಪ್ರಚಲಿತವಿದ್ದ ಜಾನಪದ ಕಥೆಗಳನ್ನು ಅವಲಂಬಿಸಿರಬಹುದು. ರಾಮಾನುಜನ್ ಹೇಳುವಂತೆ ೧೮ನೆಯ ಶತಮಾನದಲ್ಲಿ ಬರೆಯಲ್ಪಟ್ಟ ರಾಮಾಕೀನ್ ಎಂಬ ಥಾಯ್ ರಾಮಾಯಣದಲ್ಲಿಯೂ ಸೀತೆ ರಾವಣ-ಮಂಡೋದರಿಯರ ಮಗಳು.[1]

ಪ್ರಭಾವದ ಅಥವಾ ಅನುಕರಣೆಯ ಪ್ರಶ್ನೆಯನ್ನು ಬದಿಗಿಟ್ಟು ನೋಡುವುದಾದರೆ, ಉತ್ತರ ಭಾರತದ ಅವಧ ರಾಮಾಯಣವಾಗಲಿ ದಕ್ಷಿಣ ಭಾರತದ (ಕನ್ನಡ) ಜಾನಪದ ರಾಮಾಯಣವಾಗಲಿ, ಹೆಚ್ಚಿನ ಮೌಖಿಕ ರಾಮಾಯಣಗಳು ಸೀತೆಯನ್ನು ರಾವಣ-ಮಂಡೋದರಿಯರ ಮಗಳೆಂದೇ ಚಿತ್ರಿಸುತ್ತವೆ. ಇವುಗಳ ಪ್ರಕಾರ, ಹುಟ್ಟಿದ ಕೂಡಲೇ ಅವಳು ‘ಕುಲನಾಶ-ನಿಮಿತ್ತಿಕೆ’ಯೆಂದು ಜ್ಯೋತಿಷಿಗಳು ಭವಿಷ್ಯ ನುಡಿಯುವುದರಿಂದ ಅವಳನ್ನು ಒಂದುಪೆಟ್ಟಿಗೆಯಲ್ಲಿಟ್ಟು ನದಿಯಲ್ಲಿ ತೇಲಿ ಬಿಡಲಾಗುತ್ತದೆ; ಮತ್ತೆ ಹೇಗೋ ಆ ಪೆಟ್ಟಿಗೆ ಜನಕನ ರಾಜ್ಯವನ್ನು ಸೇರಿ, ಜನಕನ ಮನೆಯಲ್ಲಿ ಸೀತೆ ಬೆಳೆಯುತ್ತಾಳೆ.

ಸೀತೆಯು ರಾವಣಾತ್ಮಕಜೆಯೆಂಬುದನ್ನು ಶಿಷ್ಟ ರಾಮಾಯಣಗಳು ಹೇಳದಿರುವುದಕ್ಕೆ (ಅಥವಾ ಅದರ ಬಗ್ಗೆ ಮೌನವಾಗಿರುವುದಕ್ಕೆ) ಕಾರಣವೇನು?

ಪ್ರಾಯಃ, ಈ ಮೌನದ ಮುಖ್ಯ ಕಾರಣ ವೈದಿಕ ಚಿಂತನೆಯಲ್ಲಿ ‘ಆಗಮ್ಮ ಗಮನ’ದ ಬಗ್ಗೆ ಇದ್ದ ಅಪಾರ ಭೀತಿ; ಮತ್ತು ಆ ಭೀತಿಯ ಕಾರಣದಿಂದ ಆ ಚಿಂತನೆ ‘ಅಗಮ್ಯ ಗಮನ’ವನ್ನು ಘೋರ ಪಾತಕವೆಂದು ಪರಿಗಣಿಸಿದ್ದುದು. ಸಿತೆ ರಾವಣನ ಮಗಳು ಎಂದ ಕೂಡಲೇ ಮುಂದೆ ಅವನು ಸೀತೆಯನ್ನು ಕಾಮಿಸುವುದರಿಂದ ಇದು ಅಗಮ್ಯ ಗಮನದ ಜ್ವಲಂತ ನಿದರ್ಶನವಾಗುತ್ತದೆ. ಈ ಅಂಶವನ್ನು ಕನ್ನಡದ ಒಂದು ಮೌಖಿಕ ರಾಮಯಣ ನೇರವಾಗಿ ದಾಖಲಿಸುತ್ತದೆ. ಜನಕರಾಯನ ಮನೆಯಲ್ಲಿ ಬೆಳೆಯುವ ಸೀತೆ ತನಗೆ ಬೇಕೆಂದು ರಾವಾಳ (ರಾವಣ) ಕೇಳಿದಾಗ ಜನಕನು ಹೀಗೆ ಉತ್ತರಿಸುತ್ತಾನೆ:

ನೀವು ಪಡೆದ ಮಕ್ಕಳ ನೀವೇಯೇ ಕೇಳೋದ/
ನೀವು ಬಿತ್ತಿದ ಬೆಳೆಯ ನೀವೇಯೆ ಉಂಡಾರೆ
ಯಾವ ದೇವರಿಗೆ ಸಲ್ಯಾತು/ರಾವಾಳ.
ನಾಚಿಗೆ ಇಲ್ಲದೆ ಮಾತಾಡಿ ತಗ್ಗಬೇಡ ರಾವಾಳ/ಎದ್ದುಹೋಗು ನಿನ್ನ ಅರಮನಿಗೆ

ತಂದೆ ಮಗಳನ್ನು ಬಯಸುವ ‘ಅಗಮ್ಯ ಗಮನ’ವನ್ನು ರಾಮಾನುಜನ್ “ವಿಪರ್ಯಸ್ತ, ರಕ್ಷಣಾತ್ಮಕ, ಮತ್ತು ನಕಾರಾತ್ಮಕ ಈಡಿಪಸ್ ಮಾದರಿ” (“reverse, defensive, `negative,’ Oedipus type”) ಎಂದು ಗುರುತಿಸುತ್ತಾರೆ.[2] (ಈ ಸಂದರ್ಭದಲ್ಲಿ ಅವರು ವಡ್ಡಾರಾಧನೆಯಲ್ಲಿ ಬರುವ ‘ಕಾರ್ತಿಕ ಮುನಿಯ ಕಥೆ’ಯನ್ನೂ ಚರ್ಚಿಸುತ್ತಾರೆ.) ಈ ಮಾದರಿಯನ್ನು ರಾಮಾನುಜನ್ ‘ನಕಾರಾತ್ಮಕ’ ಎಂದು ಕರೆಯುತ್ತಾರೇಕೆಂದರೆ, ಗ್ರೀಕ್ ಪುರಾಣದ ಕಥೆಯಲ್ಲಿ ಮಗನು ತಂದೆಯನ್ನು (ಈಡಿಪಸ್ ತನ್ನ ತಂದೆಯಾದ ಲೇಯಸ್‌ನನ್ನು) ಕೊಂದರೆ ಎಲ್ಲಾ ಭಾರತೀಯ ಪುರಾಣಗಳಲ್ಲಿಯೂ ತಂದೆ ಮಗನನ್ನು (ನಿಜವಾಗಿ ಅಥವಾ ಸಾಂಕೇತಿಕವಾಗಿ) ಕೊಲ್ಲುತ್ತಾನೆ. ಈ ಬಗೆಯ ಸಾಮೂಹಿಕ ಮನಃಸ್ಥಿತಿಯನ್ನು ಅವರು “ಸಾಂಸ್ಕೃತಿಕ ದಮನ” (Cultural Re-pression) ಎಂದು ಕರೆಯುತ್ತಾರೆ.

ಸಂಕ್ಷಿಪ್ತವಾಗಿ ಹೇಳಬೇಕಾದರೆ, ಅಗಮ್ಯ ಗಮನದ ಆಶಯ ಜಾನಪದ ಕಥೆಗಳಲ್ಲಿ/ ಗಾದೆಗಳಲ್ಲಿ ಎಂದಿನಿಂದಲೂ ಇದೆ; ಮತ್ತು ಈ ಕಥೆಗಳು ಆ ಆಶಯವನ್ನು ಖಂಡಿಸುವುದೂ ಇಲ್ಲ, ಕೀರ್ತಿಸುವುದೂ ಇಲ್ಲ. ನಿರ್ಭಾವುಕವಾಗಿ, ಇತರ ಘಟನೆಗಳ ನಿರೂಪಣೆಯಂತೆಯೇಇದನ್ನೂ ಜಾನಪದ ಕಥೆಗಳು ನಿರೂಪಿಸುತ್ತವೆ. ಆದರೆ, ಧಾರ್ಮಿಕ/ನೈತಿಕ ಸಂಕಥನ ಈ ಆಶಯವನ್ನು ಘೋರ ಪಾಪದಂತೆ ದರ್ಶಿಸುತ್ತದೆ-‘ಕಾರ್ತಿಕ ಮುನಿಯ ಕಥೆ’ಯಲ್ಲಿಯಂತೆ. ಇದೇ ನೆಲೆಯಲ್ಲಿ ವೈದಿಕ ಚಿಂತನೆಯ ವಾಲ್ಮೀಕಿ ರಾಮಾಯಣ, ತುಳಸೀ ರಾಮಾಯಣ, ಇತ್ಯಾದಿ ಈ ಆಶಯವನ್ನು ಸಂಪೂರ್ಣವಾಗಿ ತಿರಸ್ಕರಿಸಿದುವು; ಆ ಕಾರಣದಿಂದಲೇ ಸೀತೆಯ ಹುಟ್ಟಿನ ಬಗ್ಗೆ ಇವುಗಳು ಮೌನ ತಾಳುತ್ತವೆ. ಅಗಮ್ಯ ಗನದ ಭೀತಿ ಆರ್ಷೇಯ ಹಿಂದೂ ಸಮಾಜದಲ್ಲಿ ಎಷ್ಟಿತ್ತೆಂದರೆ, ಸ್ಮೃತಿಯೊಂದ ‘ಸ್ತ್ರೀ ತನ್ನ ತಂದೆ-ಸಹೋದರ-ಮೈದುನ ಅಥವಾ ವಯಸ್ಸಿಗೆ ಬಂದ ಮಗ ಇವರಲ್ಲಿ ಯಾರೊಬ್ಬರೊಡನೆಯೂ ಏಕಾಂತದಲ್ಲಿರಬಾರದು ಎಂದು ವಿಧಿಸಿತು. ಇದರ ಒಂದು ಆಯಾಮವಾದ ‘ಪಾತಿವ್ರತ್ಯ’ದ ಕಲ್ಪನೆ ಎಷ್ಟು ಅಮಾನವೀಯವಾಗಿತ್ತೆಂದರೆ, ಅಕಸ್ಮಾತ್ತಾಗಿಯಾದರೂ ಪರಪುರುಷನ ಸಂಪರ್ಕವು ಸ್ತ್ರೀಗೆ ಘಟಿಸಿದರೆ ಅದನ್ನು ಪಾವೆಂದು ಪರಿಗಣಿಸಲಾಗುತ್ತಿತ್ತು. ವಾಲ್ಮೀಕಿ ರಾಮಾಯಣದಲ್ಲಿ ರಾಮನು ಸೀತೆ ಅಗ್ನಿ ಪ್ರವೇಶ ಮಾಡಿ ತನ್ನ ಪಾವಿತ್ರ್ಯವನ್ನು ಸಾಬೀತು ಮಾಡಬೇಕೆಂದು ಹೇಳುವಾಗ ಅವಳ ದೋಷವನ್ನು ಹೀಗೆ ಪಟ್ಟೀ ಮಾಡುತ್ತಾನೆ:

ಪ್ರಾಪ್ತ ಚಾರಿತ್ರ ಸಂದೇಹಾ ಮಮ ಪ್ರತಿಮುಖೆ ಸ್ಥಿತಾ/
….
ರಾವಣಾಂಕ ಪರಿಭ್ರಷ್ಟಾಂ ದುಷ್ಟೇನ ಚಕ್ಷುಸಾ/
ಕಥಂ ತ್ವಾಂ ಪುನರಾದದ್ಯಾಂ ಕುಲಂ ವ್ಯಪದಿಶನ್ಮಹತ್//

(ಚಿರಕಾಲ ಪರಪುರುಷನ ಮನೆಯಲ್ಲಿದ್ದ ಕಾರಣ ನೀನು ಸಂದೇಹಾಸ್ಪದ ಚಾರಿತ್ರ್ಯದಿಂದ ಕೂಡಿ ನನ್ನೆದುರು ನಿಂತಿರುವೆ… ರಾವಣನ ತೊಡೆಯ ಸಂಪರ್ಕದಿಂದ ದೂಷಿತೆಯಾಗಿ, ಅವನ ದುಷ್ಟ ಕಣ್ಣುಗಳಿಂದ ನೋಡಲ್ಪಟ್ಟಿರುವ ನಿನ್ನನ್ನು ಮಹಾಕುಲಸಂಭೂತನಾದ ನಾನು ಹೇಗೆ ತಾನೆಪುನಃ ಪರಿಗ್ರಹಿಸಲಿ?)

ಈ ಸಂದರ್ಭದಲ್ಲಿ “(ಭಾರತೀಯ) ಮಹಾಕಾವ್ಯಗಳ ಜಗತ್ತು ಸಂಪೂರ್ಣವಾಗಿ ಪುರುಷ ಜಗತ್ತು; ಮತ್ತು ಈ ಜಗತ್ತಿನಲ್ಲಿ ಪುರುಷರು ಸ್ತ್ರೀಯರ ಬಗ್ಗೆ ಇರುವ ತಮ್ಮ ಉತ್ಕಟ ಲೈಂಗಿಕ ಭೀತಿಯನ್ನು ಮತ್ತೆ ಮತ್ತೆ ವ್ಯಕ್ತಪಡಿಸುತ್ತಾರೆ” ಎಂಬ ಜಾನ್ ಸ್ಮಿತ್ ಅವರಮಾತುಗಳು ಅರ್ಥಪೂರ್ಣವೆನಿಸುತ್ತವೆ.[3] ಲೈಂಗಿಕ ಭೀತಿಯಿಂದ ಜನ್ಮಿಸಿದ ಧಾರ್ಮಿಕ (ವೈದಿಕ) ಸಂಕಥನವೇ ಶಿಷ್ಟ ರಾಮಾಯಣಗಳಲ್ಲಿ ಸೀತೆಯ ಹುಟ್ಟಿನ ಬಗ್ಗೆ ಮೌನವಾಗಿರಲು ಕಾರಣ ಎಂದು ತೋರುತ್ತದೆ.

ಲಕ್ಷ್ಮಣನ ಪಾತ್ರ: ವಾಲ್ಮೀಕಿ ರಾಮಾಯಣದಲ್ಲಿ ಲಕ್ಷ್ಮಣನು ಅಣ್ಣನ ಛಾಯೆಯಂತೆ ಮಾತ್ರ ಸದಾ ವರ್ತಿಸುತ್ತಾನೆ. ಕೃತಿಯಲ್ಲಿ ಬರುವ ಶಿವಧನುರ್ಭಂಗ, ಅಹಲ್ಯೋದ್ಧಾರ, ವಾಲಿವಧೆ, ರಾವಣ ಸಂಹಾರ, ಇತ್ಯಾದಿ ಎಲ್ಲಾ ಮಹತ್ಕಾರ್ಯಗಳೂ ರಾಮನಿಂದ ಘಟಿಸಲ್ಪಡುತ್ತವೆ. ಆದರೆ, ಹೆಚ್ಚಿನ ಮೌಖಿಕ ರಾಮಾಯಣಗಳಲ್ಲಿ ಶಿವಧನುರ್ಭಂಗ (ಅಥವಾ ಅದರ ಪರ್ಯಾಯವಾದ ಉಕ್ಕಿ ‘ಆಕಾಸ ಕಾಕಿ’ಯನ್ನು ಹೊಡೆಯುವುದು), ರಾವಣವಧೆ, ಮುಂತಾದ ಮಹಾ ಕಾರ್ಯಗಳಾಗುವುದು ಲಕ್ಷ್ಮಣನಿಂದ. ಕನ್ನಡದ ಗೊಂಡ ರಾಮಾಯಣ ಮತ್ತು ತಂಬೂರಿ ಸಂಪ್ರದಾಯದ ರಾಮಾಯಣ, ಭಿಲ್ಲ ರಾಮಾಯಣ, ಕುಂಕಣಾ ರಾಮಾಯಣ, ಇವೇ ಮುಂತಾದ ಮೌಖಿಕ ರಾಮಾಯಣಗಳಲ್ಲಿ ಲಕ್ಷ್ಮಣನೇ ನಾಯಕ; ಮತ್ತು ಲಕ್ಷ್ಮಣನ ಯೋಗ-ಸಾಧನೆ, ಅವರ ಧೈರ್ಯ-ಸಾಹಸ, ಇತ್ಯಾದಿಗಳನ್ನು ಇವುಗಳ ದೀರ್ಘವಾಗಿ ದಾಖಲಿಸುತ್ತವೆ. ಭಿಲ್ಲ ರಾಮಾಯಣ ಲಕ್ಷ್ಮನನ್ನು ‘ಪರಿಪೂರ್ಣ ಮಾನವ’ (Perfect Man) ಎಂದು ಬಣ್ಣಿಸಿದರೆ, ರಾಜಸ್ಥಾನಿ ಭಾಷೆಯ ಪಾಬೂಜಿ ಎಂಬ ಮೌಖಿಕ ಮಹಾ ಕಾವ್ಯ ಅವನನ್ನು ‘ಮರಳುಗಾಡಿನ ದೇವ’ ಎಂದು ಕರೆಯುತ್ತದೆ.

ಈ ಬಗೆಯಲ್ಲಾಗುವ ಲಕ್ಷ್ಮಣನ ಸ್ಥಾನ ಪಲ್ಲಟಕ್ಕೆ ಬಹುಷಃ ಎರಡು ಕಾರಣಗಳನ್ನು ಕೊಡಬಹುದು:

(೧) ಜಾನಪದ ವಾಙ್ಮಯದಲ್ಲಿ ಸಾಧಾರವಣವಾಗಿ ಸಹೋದರರಲ್ಲಿ ಕಿರಿಯ ಸಹೋದರನಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ; ಮತ್ತು ಅವನು ತನ್ನ ಅಣ್ಣಂದಿರಿಗಿಂತ ಹೆಚ್ಚು ಸಾಹಸಿಯೂ, ಹೆಚ್ಚು ಬುದ್ಧಿವಂತನೂ ಆಗಿರುತ್ತಾನೆ. ತಮಿಳಿನ ಮೌಖಿಕ ಮಹಾಕಾವ್ಯ ಅಣ್ಣನ್ಮಾರ್ ಕೃತಿಯ ಸಂವಿಧಾನವನ್ನು ಚರ್ಚಿಸುವಾಗ ಬ್ರೆಂಡಾ ಬೆಕ್ ಈ ಅಂಶವನ್ನು ದಾಖಲಿಸುತ್ತಾರೆ.[4]

ಪರಿಣಾಮತಃ, ಜಾನಪದ ಪ್ರಜ್ಞೆಗೆ ಹಿರಿಯನಾದ ರಾಮನಿಗಿಂತ ಅವನ ತಮ್ಮ ಲಕ್ಷ್ಮಣನೇ ಹೆಚ್ಚು ಮಹತ್ವದ ಪಾತ್ರವೆಂದು ಕಂಡಿರಬಹುದು.

(೨) ಇನ್ನೊಂದು ಕಾರಣ ಕೌಟುಂಬಿಕ-ಸಾಮಾಜಿಕ ರಚನೆಯನ್ನು ಕುರಿತ ವೈದಿಕ ಚಿಂತನೆಯೆಂದು ಹೇಳಬಹುದು. ವರ್ಣಾಶ್ರಮ ವ್ಯವಸ್ಥೆಯಲ್ಲಿ ಜ್ಯೇಷ್ಠ ಪುತ್ರನು ಇತರರಿಗೆ ಪಿತೃಸಮಾನ; ಅವನೊಬ್ಬನೇ “ಧರ್ಮಜ”, ಇತರ ಮಕ್ಕಳೆಲ್ಲರೂ “ಕಾಮಜ”ರು. ತಂದೆ-ತಾಯಿಯರ ಅಂತ್ಯಕ್ರಿಯೆಗಳ ಹಕ್ಕೂ ಜ್ಯೇಷ್ಟಪುತ್ರನದು; ಇತರರು ಅವನ ಅನುವರ್ತಿಗಳು. ಆದ್ದರಿಂದ ವೈದಿಕ ಸಂಕಥನದಿಂದ ರೂಪಿಸಲ್ಪಟ್ಟಿರುವ ವಾಲ್ಮೀಕಿ ರಾಮಾಯಣದಲ್ಲಿ ರಾಮನು ನಾಯಕನಾದರೆ ಮೌಖಿಕ ರಾಮಾಯಣಗಳಲ್ಲಿ ಲಕ್ಷ್ಮಣನು ನಾಯಕನಾಗುತ್ತಾನೆ. ಆಧುನಿಕ ಯುಗಕ್ಕೆ ಬಂದರೂ, ಮೈಥಿಲಿಕರಣ ಗುಪ್ತರ ಸಾಕೇತ್, ವೀರಪ್ಪ ಮೊಯಿಲಿ ಅವರ ರಾಮಾಯಣ ಮಹಾನ್ವೇಷಣಂ, ಇವೇ ಮುಂತಾದ ಕೃತಿಗಳಲ್ಲಿ ಲಕ್ಷ್ಮಣನಿಗೆ ಆದ್ಯತೆ ದೊರೆಯುವುದು ಲೇಖಕರಿಗಿರುವ ವರ್ಣಾಶ್ರಮ ಧರ್ಮದ ತಿರಸ್ಕಾರವೇ ಕಾರಣವೆಂದು ಹೇಳಬಹುದು. ಈ ಅಂಶವನ್ನು ಮತ್ತೊಂದು ನೆಲೆಯಲ್ಲಿಯೂ ಗ್ರಹಿಸಬಹುದು: ಭಾರತೀಯ ಮನಸ್ಸು ಮೌಖಿಕ ಸಂಸ್ಕೃತಿಯಿಂದ ಶಿಷ್ಟ-ಲಿಖಿತ ಸಂಸ್ಕೃತಿಗೆ ಮಾರುಹೋಗಿ, ಮತ್ತೆ ಆಧುನಿಕ ಕಾಲದಲ್ಲಿ ಮೌಖಿಕ ಸಂಸ್ಕೃತಿಯ ಮುಖ್ಯ ಮೌಲ್ಯಗಳತ್ತ ಹೊರಳುತ್ತಿದೆಯೆಂದು ಕಾಣುತ್ತದೆ.

ರಾವಣ: ಮೌಖಿಕ ರಾಮಾಯಣಗಳಲ್ಲಿಯೂ ರಾವಣನು ದುಷ್ಟ ಪಾತ್ರದಂತೆಯೇ, ಕಾಮುಕನಂತೆಯೇ ಚಿತ್ರಸಲ್ಪಟ್ಟಿದ್ದಾನೆ. ಆದರೂ ಕೆಲವೆಡೆಗಳಲ್ಲಿ ಅವನ ದುಷ್ಟತನವನ್ನು ಕಮ್ಮೀ ಮಾಡುವ ಪ್ರಯತ್ನ ಕಂಡುಬರುತ್ತದೆ.

ಅವಧ್ ರಾಮಾಯಣದಲ್ಲಿ ಸೀತೆಯನ್ನು ಅಪಹರಿಸಲು ಯತಿಯ ವೇಷದಲ್ಲಿ ಬರುವ ರಾವಣನು “ಸೀತಾಕೋ ಮನ್ ಹೀ ಮನ್ ಪ್ರಾಣಮ್ ಕಿಯಾ” (‘ಸೀತೆಗೆ ಮನಸ್ಸಿನಲ್ಲಿಯೇ ಪ್ರಣಾಮಮಾಡಿದನು’) ಎಂದು ಬರುತ್ತದೆ. ಅನಂತರ ಅವಳನ್ನು ಅಪಹರಿಸಿ, ಅಶೋಕನಗರದಲ್ಲಿರಿಸಿದಾಗ ರಾವಣನು ಅವಳಿಗೆ ಈ ಆಶ್ವಾಸನೆಯನ್ನು ಕೊಡುತ್ತಾನೆ: “ಹನ್ನೆರಡು ವರ್ಷ ನಮ್ಮಿಬ್ಬರ ಸಂಬಂಧ ಅಣ್ಣ-ತಂಗಿಯರಂತೆ ಇರುತ್ತದೆ; ಅನಂತರ ಯಾವ ಸಂಬಂಧ ಬೇಕಾದರೂ ಆಗಲಿ” (“ಬಾರಹ್ ಬರಿಸ್ ಬಹಿನ್ಕಾ ರಿಸ್ತಾ ಪಾಛೆ ಕಯ್ ನನ್ ಬನಾಯಿ/ಬುರಾ ನಿಗಾಹ್ ತುಮ್ ಹಮಾರಾ ತಕೆದು ತುಹಕಾ ದೇನ್ ಜಲಾಯಿ,” ಪು. ೫೨)

() ಸ್ಥಳಿಕ ರೂಪ:

ಪ್ರಾಂತ-ರಾಷ್ಟ್ರಗಳ ಎಲೆಗಳನ್ನು ಮೀರುವ ರಾಮಕಥೆಯನ್ನು ಗಾಯಕ-ಗಾಯಕಿಯರು ತಮ್ಮ ಬದುಕಿನ ಭಾಗವನ್ನಾಗಿಸಿಕೊಳ್ಳುವ, ಸ್ಥಳೀಯವಾಗಿಸುವ ಪ್ರಕ್ರಿಯೆ ತುಂಬಾ ಕುತೂಹಲಕರ. ಇವರುಗಳಿಗೆ ರಾಮ-ಸೀತೆಯರು ಅಯೋಧ್ಯೆಯ ರಾಜ-ರಾಣಿಯರಲ್ಲ, ರಾವಣ ಲಂಕೆಯವನಲ್ಲ; ಅವರೆಲ್ಲರೂ ಗಾಯಕರಿಗೆ ಪರಿಚಿತವಾಗಿರುವ ಲೋಕದಲ್ಲಿಯೇ ಬದುಕುತ್ತಾರೆ. ಇವರುಗಳ ಕಥೆಯನ್ನು ತಮಗೆ ಗೊತ್ತಿರುವ ದೈನಂದಿನ ಬದುಕಿನ ಅಚ್ಚಿನಲ್ಲಿಯೇ ಎರಕ ಹೊಯ್ದು ಅವರ ಕಥೆಗಳ ಮೂಲಕ ತಮ್ಮದೇ ಕಥೆಯನ್ನು ಈ ಜಾನಪದ ಗಾಯಕರು ಕಥಿಸುತ್ತಾರೆ. ಕನ್ನಡದ (ರಾಗೌ ಇತ್ಯಾದಿ ಸಂಪಾದಿಸಿರುವ) ರಾಮಾಯಣದಲ್ಲಿ ರಾಮ-ಲಕ್ಷ್ಮಣ-ಸೀತೆಯರು “ಜೇನ್ನಲ್ಲಿ ಬೆಟ್ಟದಲ್ಲಿ/ಬಿದ್ರಕ್ಕಿ ಅನ್ನ ಮಾಡಿ, ಕಾವೇರಿ ನೀರ ಕುಡ್ಡದು/ಹಾವೇರಿ ಹಾಲ ಕುಡ್ದುವನವಾಸ ಕಾಲದಲ್ಲಿ ಕಾಡಿನಲ್ಲಿ ಸುಖವಾಗಿ ಇರುತ್ತಾರೆ (ಪು.೨೧).

() ಸ್ತ್ರೀ ಪಠ್ಯಗಳು: ಸ್ತ್ರೀಯರೇ ಪ್ರಸ್ತುತ ಪಡಿಸುವ ರಾಮಕಥೆಯಲ್ಲಿ ಸಹಜವಾಗಿಯೇ ಸ್ತ್ರೀಲೋಕಕ್ಕೆ ಸಂಬಂಧಿಸಿದ ಆಚರಣೆಗಳು ಮತ್ತು ಅನುಭವಗಳು ಪ್ರವೇಶ ಪಡೆಯುತ್ತವೆ. ಸ್ತ್ರೀಯರೇ ಹಾಡುವ ಅವಧ್ ರಾಮಾಯಣ ಗೀತೆಗಳಲ್ಲಿ ರಾಮನ ಉಪನಯನದ ಸಂದರ್ಭದಲ್ಲಿ ಅಲ್ಲಿಗೆ ಬರುವ ಕ್ಷೌರಿಕನ ಹೆಂಡತಿ (ನಾಯಿನ್) ಕೌಸಲ್ಯೆ ಕೊಡುವ ಚಿನ್ನದ ಬಳೆ, ಸುಮಿತ್ರೆ ಕೊಡುವ ರತ್ನ, ಇತ್ಯಾದಿಗಳಿಂದ ತೃಪ್ತಳಾಗದೆ ಕೌಸಲ್ಯೆಯ ಕೊರಳಿನ ಹಾರವನ್ನು ಅಪೇಕ್ಷಿಸುತ್ತಾಳೆ. ಸೀತಾ ಪರಿಣಯದ ಸಂದರ್ಭದಲ್ಲಿ ಬರುವ ನಾಯಿನ್ ‘ನವಛೂ’ (ಉಗುರು ಕತ್ತರಿಸುವ) ಸಂದರ್ಭದಲ್ಲಿ ಗಂಡನ ಸಲಹೆಯಂತೆ ಒಂದು ಕುದುರೆಯನ್ನು ಉಡುಗೆರೆಯಾಗಿ ಬೇಡುತ್ತಾಳೆ. ‘ಬಾರಾತ್‌’ನ ದೀಘ ವರ್ಣನೆ ರಾಮನ ದಿಬ್ಬಣವನ್ನು ಇಂದಿನ ಕಾಲದ ಮದುವೆ ದಿಬ್ಬಣದಂತೆಯೇ ತೋರಿಸುತ್ತದೆ. ಮದುವೆಯಾದನಂತರ ವಧೂವರರ ಕಡೆಯ ಸ್ತ್ರೀಯರು ಹಾಡುವ ಪರಸ್ಪರ ನಿಂದನೆಯ ಹಾಡುಗಳು, ರಾಮನ ಪಾದರಕ್ಷೆಯನ್ನು ಸೀತೆಯ ಕಡೆಯವರು ಬಚ್ಚಿಡುವುದು, ಇತ್ಯಾದಿ ಉತ್ತರ ಭಾರತದ ಪರಂಪರಾಗತ ಆಚರಣೆಗಳ ಮನೋಜ್ಞ ವರ್ಣನೆ ಈ ಗೀತೆಗಳಲ್ಲಿ ಬರುತ್ತದೆ.

ಹಾಗೆಯೇ, ಈ ಗೀತೆಗಳನ್ನು ಸ್ತ್ರೀಯರೇ ಹಾಡುವುದರಿಂದ ಈ ಗುಚ್ಛದ ಅತ್ಯಂದ ಹೃದಯಸ್ಪರ್ಶಿಯಾದ ಗೀತೆಗಳೆಂದರೆ ಕಾಡಿನಲ್ಲಿ ರಾಮನಿಂದ ತ್ಯಜಿಸಲ್ಪಟ್ಟ ಸೀತೆ ಮಾಡುವ ವಿಲಾಪ, ಅವಳ ಪ್ರಸವ ವೇದನೆ ಇತ್ಯಾದಿಗಳನ್ನು ವರ್ಣಿಸುವ ಭಾಗಗಳು. ಈ ಹೇಳಿಕೆ ಸ್ತ್ರೀಯರೇ ಹಾಡುವ ಕನ್ನಡದ ರಾಮಾಯಣಗಳಿಗೂ/ರಾಮಾಯಣ-ಭಾಗಗಳಿಗೂ ಅನ್ವಯಿಸುತ್ತದೆ. ಕನ್ನಡ ಜನಪದ ರಾಮಾಯಣದಲ್ಲಿ ಗರ್ಭವತಿ ಸೀತೆಗೆ “ಏಳು ಹುಣಸೆಕಾಯಿ” ತಂದುಕೊಡಲು ರಾಮನು ಕಾಡಿಗೆ ಹೋಗುತ್ತಾನೆ. ಅಲ್ಲಿ ಮಡಿವಾಳ ಮಾಚಪ್ಪನ ಹೀಯಾಳಿಕೆಯನ್ನು ಕೇಳಿ ಮನೆಗೆ ಬಂದ ರಾಮನು ಲಕ್ಷ್ಮಣನಿಗೆ ಸೀತೆಯ ಶಿರಚ್ಛೇದ ಮಾಡಲು ಆಜ್ಞಾಪಿಸುತ್ತಾನೆ. ಆಗ, “ಅಪ್ಪಾ, ಜನಕ ಮಾರಾಜುರ್ಗೆ ಮಗಳಾಗಿ/ದಶರಥು ಮಾರಾಜುರ್ಗೆ ಸೊಸೆಯಾಗಿ… ಎಂಥಾ ಕಷ್ಟಕೆ ಗುರಿಯು ಅದೆನಯ್ಯ” ಎಂದು ಸೀತೆ ಮರುಗುತ್ತಾಳೆ. ಕೊನೆಗೆ, “ಹೆಣ್ಣಾಗಿ ಹುಟ್ಟಿದ ಪುಣ್ಯ/ಸಾಕಪ್ಪ ರಾಮ ರಾಮ” ಎನ್ನುತ್ತಾ ಕಾಡಿಗೆ ಹೋಗುತ್ತಾಳೆ. ಇಲ್ಲಿ ಸೀತೆ ರಾಮಾಯಣದ ಒಂದು ಪಾತ್ರವಾಗದೆ ಇಡೀ ಸ್ತ್ರೀ ಜಾತಿಯ ಮತ್ತು ಅವರ ನೋವು-ದುಃಖಗಳ ಪ್ರತಿನಿಧಿಯಾಗುತ್ತಾಳೆ. ಈ ಸಂದರ್ಭದಲ್ಲಿ ತೆಲುಗು ಮೌಖಿಕ ವಾಙ್ಮಯದ ಬಗ್ಗೆ ಅಪಾರ ಕೆಲಸ ಮಾಡಿರುವ ನಾರಾಯಣ ರಾವ್ ಹೇಳುವ ಮಾತುಗಳು ಪ್ರಸ್ತುತವಾಗುತ್ತವೆ: “ರಾಮಾಯಣದ ಪ್ರಸಂಗಗಳನ್ನು ಒಳಗೊಂಡ ಅನೇಕ ಗೀತೆಗಳನ್ನು ತೆಲುಗು ಬ್ರಾಹ್ಮಣ ಸ್ತ್ರೀಯರು ಹಾಡುತ್ತಾರೆ. ಈ ಗೀತೆಗಳಲ್ಲಿ ಪ್ರಧಾನವಾಗಿ ಕಂಡುಬರುವ ಸಂಗತಿಗಳೆಂದರೆ ಕೌಸಲ್ಯೆಯ ಪರಸವವೇದನೆ, ಅವಳು ಶಿಶು ರಾಮನಿಗೆ ಊಟಮಾಡಿಸುವುದು, ರಾಮ-ಸೀತೆಯರ ಪತಿ-ಪತ್ನಿ ಕಲಹ, ತಂದೆಯ ಬಗ್ಗೆ ಲವ-ಕುಶರ ಕ್ರೋಧ, ಇತ್ಯಾದಿ. ಎಂದರೆ ಸ್ತ್ರೀಯರು ಹಾಡುವ ರಾಮಾಯಣದಲ್ಲಿ ಅವರಿಗೆ ಮುಖ್ಯವಾಗುವುದು ಸ್ತ್ರೀ ಜಗತ್ತಿನ ಅನುಭವಗಳೇ.”[5] ಅರ್ಥಾತ್‌ ಒಂದು ಮೌಖಿಕ ಕಾವ್ಯದಲ್ಲಿ ಬರುವ ಘಟನೆಗಳು-ವಿವರಗಳು ಹೆಚ್ಚಿನ ಸಂದರ್ಭಗಳಲ್ಲಿ ಹಾಡುವವರನ್ನು, ಎಂದರೆ ಅವರು ಸ್ತ್ರೀಯರೆ ಅಥವಾ ಪುರುಷರೆ, ಸಮಾಜದಲ್ಲಿ ಅವರ ಸ್ಥಾನ-ಮಾನಗಳೇನು, ಇತ್ಯಾದಿ ಸಂಗತಿಗಳನ್ನು ಅವಲಂಬಿಸಿರುತ್ತವೆ ಎಂಬುದು ಸ್ಪಷ್ಟ.

() ಜಾನಾಂಗಿಕ ಅನನ್ಯತೆ: ಕುಂಕಣ ರಾಮಾಯಣದಲ್ಲಿ ರಾವಣವನ್ನು ವಂಚಿಸಲು ಕೃಷ್ಣನು ಅದೇ ಬುಡಕಟ್ಟಿನವನಂತೆ ವೇಷ ಧಾರಣೆ ಮಾಡಿ ರಾವಣನನ್ನು ಭೇಟಿಯಾಗುತ್ತಾನೆ; ರಾಮಜನ್ಮದ ಸಂದರ್ಭದಲ್ಲಿ ರಾವಣನಿಗೆ ಮಲೇರಿಯಾ ಜ್ವರ ಬರುತ್ತದೆ. ಗೊಂಡ ರಾಮಾಯಣದಲ್ಲಿ ದಶರಥನು ಬೇಟೆಗೆ ಹೋಗುವಾಗ “ಚಣ್ಣಾಗುಂಡಿನ ಕೋವಿಯಲಿ” ಮದ್ದುಗುಂಡು ತುಂಬಿಕೊಂಡು ಹೋಗುತ್ತಾನೆ; ಅವನ ಜೊತೆಯಲ್ಲಿ “ಹುಂಡಾ ನಾಯಿ” ಇರುತ್ತದೆ; ಕಾಡಿನಲ್ಲಿ ಮದ್ದಾನೆಯನ್ನು ಕಂಡು “ಚೆಣ್ಣಾ ಗುಂಡೀನ ಕೋವಿ” ಯಿಂದ ಅದನ್ನು ಹೊಡೆಯುತ್ತಾನೆ; ಸಾಯುವಾಗ ಅದು ಅವನಿಗೆ ಶಾಪವಿತ್ತು ಸಾಯುತ್ತದೆ. ಅವನಿಗೆ ಮಕ್ಕಳಾದಾಗ ಅವರಿಗೆ “ಜಾದೂ ವಿದ್ದೀವಿ ಕಲಿಸಿದರೋ.”

ತಂಬೂರಿ ಸಂಪ್ರದಾಯದ ರಾಮಾಯಣದಲ್ಲಿ ಮಂಡೋದರಿ ಬಂಜೆತನದಿಂದ ನರಳುತ್ತಾ ರಾವಳಾಸುರನಿಗೆ ಯಾರಾದರೂ “ಜೋಗಿ-ಜಂಗಮರನ್ನು ಕಂಡು ಮಕ್ಕಳ ಫಲದ ಬಗ್ಗೆ ತಿಳಿದುಕೊಂಡು ಬನ್ನಿ” ಎಂದು ಹೇಳುತ್ತಾಳೆ. ಅದೇ ರೀತಿ ರಾವಳನು ನಗರಕ್ಕೆ ಹೊರಟಾಗ “ಆರಾವೆ ಹೊತ್ತೀನ ರೊಟ್ಟೀಯ ಸುಟ್ಟಿದೀನಿ/ಮೂರಾವೆ ಹೊತ್ತಿನ ಬುತ್ತೀನ ಕಟ್ಟಿದ್ದೀನಿ” ಎಂದು ರೈತವರ್ಗದ ಸಾಧಾರಣ ಮಹಿಳೆಯಂತೆ ಹೇಳುತ್ತಾಳೆ. ಗೊಂಡ ರಾಮಾಯಣದಲ್ಲಿ ಸೀತೆಯು ಮಾಯಾಮೃಗವನ್ನು ಯಾತಕ್ಕೆ ಅಪೇಕ್ಷಿಸುತ್ತಾಳೆ ಎಂದರೆ ಅದರ ಚರ್ಮದಿಂದ ಅವಳು ಒಳ್ಳೆಯ ಕುಬುಸ ಹೊಲಿಸಿಕೊಳ್ಳಲು ಆಗುತ್ತದೆ ಎಂದು.

ಮಲಯಾಳಂ ಭಾಷೆಯಲ್ಲಿ “ಬ್ಯಾರಿ ರಾಮಾಯಣ” ಎಂಬ ಕಿರು ಕಥನವಿದೆ. ಇದು ಶೂರ್ಪನಖಾ ಪ್ರಸಂಗದಿಂದ ಪ್ರಾರಂಭಿಸಿ, ಲಂಕಾದಹನದ ವರೆಗೆ ರಾಮಾಯಣದ ಕಥೆಯನ್ನು ಹೇಳುತ್ತದೆ. ಕೇರಳ ಮುಸ್ಲಿಮರಾದ ಮತ್ತು ಮಲಯಾಳಂ ಮಾತನಾಡುವ ಬ್ಯಾರಿ ಜನಾಂಗದವರು ಈ ಕಥನವನ್ನು ಹಾಡುವುದರಿಂದ ರಾಮಾಯಣದ ಪಾತ್ರಗಳೆಲ್ಲವೂ ಇದರಲ್ಲಿ ಬ್ಯಾರಿಗಳಾಗುತ್ತಾರೆ. ರಾವಣನ ತಂಗಿಯಾದ ಮತ್ತು ಪಾತಾಳದ ಸುಲ್ತಾನನ ಬೀಬಿಯಾದ ಶೂರ್ಪನಖಿ ಅವಳ ಗಂಡ ಸತ್ತು ಹೋಗಿರುವುದರಿಂದ ಇನ್ನೊಬ್ಬ ಮಾಪಿಳ್ಳೆಯನ್ನು ಅರಸುತ್ತಿರುತ್ತಾಳೆ: “ಒಲ್ಲದ ಶೀಲದ ಈಕೆಗೆ ಬೇಕು ಮಾಪಿಳ್ಳೆ ಇನ್ನೊಬ್ಬ.” ತನ್ನ ವಯಸ್ಸನ್ನು ಮುಚ್ಚುವುದಕ್ಕೆ ಬೇಕಾದಷ್ಟು ಅಲಂಕಾರ ಮಾಡಿಕೊಂಡು ಅವಳು ಕಾಡಿನಲ್ಲಿ ಅಲೆದಡುತ್ತಿರುವಾಗ, ಲಾಮನನ್ನು ಕಂಡ ಕೂಡಲೇ “ನಿಕಾಹ್‌ಗೆ ಯೋಗ್ಯ ಮಾಪಿಳ್ಳೆ” ಎಂದು ಭಾವಿಸಿ, ಅವನ ಬಳಿ ಬರುತ್ತಾಳೆ. ರಾಮನು ತನಗೆ ವಿವಾಹವಾಗಿದೆಯೆಂದು ಹೇಳಿದಾಗ “ಗಂಡಿಗೆ ಹೆಣ್ಣು ನಾಲ್ಕೋ ಐದೋ ಇದ್ದರೆ ಏನಾಯ್ತು ಎಂದು ಕೇಳುತ್ತಾಲೆ.[6]

ಅದೇ ಭಾಷೆಯ ಮತ್ತೊಂದು ದೀರ್ಘ ಕಥನ ಕವನ “ಧರೆಗೆ ಮರಳ್ಯಾಳ.” ಇದು ಚಿತ್ರಪಟ ರಾಮಾಯಣದ ಕಥೆಯನ್ನು ಸಂಪೂರ್ಣವಾಗಿ ನಿರೂಪಿಸುತ್ತದೆ. ಆದರೆ, ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಸೀತೆಯನ್ನು ರಾವಣನ ಚಿತ್ರ ಬರೆಯಲು ಪುಸಲಾಯಿಸುವವರು ಕೌಸಲ್ಯೆ, ಸುಮಿತ್ರೆ, ಇತ್ಯಾದಿ ಅವಳ ಅತ್ತೆಯರು. “ಎರಳೆಗಣ್ಣಿನ ಹೆಣ್ಣು ಸೀತವ್ವ” ಇಷ್ಟವಿಲ್ಲದಿದ್ದರೂ ನಿರ್ವಾಹವಿಲ್ಲದೆ ರಾವಣನ ಚಿತ್ರ ಬರೆದಾಗ, ಅವಳ ಅತ್ತೆಯರು ಅದು ರಾಮನ ಕಣ್ಣಿಗೆ ಬೀಳುವಂತೆ ಮಾಡಿ, ಆ ಮೂಲಕ ಸೀತೆಯನ್ನು ರಾಮನು ಕಾಡಿಗೆ ಕಳಿಸುವಂತೆ ಮಾಡುತ್ತಾರೆ. ಎಂದರೆ, ಈ ಕಥನದಲ್ಲಿ ಬರುವ ರಾಮ-ಸೀತೆ-ಕೌಸಲ್ಯೆ ಮುಂತಾದವರು ಇಂದಿನ ವಾಸ್ತವ ಜಗತ್ತಿನ ಅತ್ತೆ-ಮಗ-ಸೊಸೆಯೇ ಹೊರತು ರಾಮಾಯಣದ ಪಾತ್ರಗಳಲ್ಲ.[7]

ಒಟ್ಟಿನಲ್ಲಿ ಹೇಳುವುದಾದರೆ, ಗೊಂಡ ರಾಮಾಯಣದಲ್ಲಿ ರಾಮ-ಲಕ್ಷ್ಮಣರು ಗೊಂಡರೇ ಆಗುತ್ತಾರೆ; ಭಿಲ್ಲ ರಾಮಾಯಣದಲ್ಲಿ ಭಿಲ್ಲರೇ ಆಗುತ್ತಾರೆ; ಸ್ತ್ರೀಯರ ರಾಮಾಯಣದಲ್ಲಿ ಸೀತೆ ಬಸಿರು-ಬಾಣಂತನಗಳಿಂದ ನರಳುವ ಸಾಧಾರಣ ಸ್ತ್ರೀಯೇ ಆಗುತ್ತಾಳೆ. ಪ್ರಾಯಃ, ಈ ಕಾರಣದಿಂದಲೇ ಎಲ್ಲಾ ಜನಾಂಗಗಳು ಎಂದಿನಿಂದಲೂ ರಾಮಾಯಣವನ್ನು ಪ್ರೀತಿಸುತ್ತಿದ್ದಾರೆ; ರಾಮಾಯಣದ ಆವರಣದಲ್ಲಿ ತಮ್ಮದೇ ‘ರಾಮಾಯಣ’ವನ್ನು ಹೇಳುತ್ತಾ ಬಂದಿದ್ದಾರೆ.

* * *

. ಮೌಖಿಕ ಮಹಾಭಾರತಗಳು

ನಾನು ಈ ಕೆಳಗಿನ ಮೌಖಿಕ ಮಹಾಭಾರತಗಳನ್ನು ಈಭಾಗದಲ್ಲಿ ಪರಿಗಣಿಸಿದ್ದೇನೆ: (೧) ಭಿಲ್ಲ ಭಾರತ (೨) ಜನಪದ ಭಾರತ ಕಥೆಗಳು (೩) ಗಾಮೊಕ್ಕಲು (೪) ಜನಪದ ಮಹಾಭಾರತ- ಇವುಗಳ ಸ್ಥೂಲ ಪರಿಚಯ ಹೀಗಿದೆ:

() ಭಿಲ್ಲ ಭಾರತ: (ಭೀಲೋಂಕಾ ಭಾರಥ್”)[8]

ಈ ಕಥನ ಉತ್ತರ ಗುಜರಾತಿನ ಬನಸ್ಕಾಂತ ಜಿಲ್ಲೆಯ ಭಿಲ್ ಸಮುದಾಯದ ಮೌಖಿಕ ವಾಙ್ಮಯದ ಭಾಗ ಮತ್ತು ಅವರ ಧಾರ್ಮಿಕ ಆಚರಣೆಗಳ ಒಂದು ಭಾಗ. ಇದರ ಆಯ್ದ ಭಾಗಗಳನ್ನು ವಿಶಿಷ್ಟ ಸಂದರ್ಭಗಳಲ್ಲಿ ಪ್ರಸ್ತುತಪಡಿಸುತ್ತಾರೆ. ಇದನ್ನು ಸಂಪಾದಿಸಿದವರು ಭಗವಾನ್‌ದಾಸ್ ಪಟೇಲ್ ಮತ್ತು ಇದನ್ನು ಹಿಂದೆಗೆ ಅನುವಾದಿಸಿದವರು ಮೃದುಲಾ ಪಾರೇಖ್. ಸಾಹಿತ್ಯ ಅಕಾಡೆಮಿಯಿಂದ ಈ ಕೃತಿ ೨೦೦೦ದಲ್ಲಿ ಪ್ರಕಟವಾಯಿತು. ನಾನು ಹಿಂದಿ ಅನುವಾದವನ್ನು ಆಧರಿಸಿದ್ದೇನೆ.

ಭಿಲ್ಲ ಭಾಷೆಯಲ್ಲಿ ‘ಭಾರಥ್’ ಎಂದರೆ ‘ಯುದ್ಧ’. ಪದ್ಯ-ಗದ್ಯಗಳನ್ನೊಳಗೊಂಡ ಚಂಪೂಶಯಲಿಯಲ್ಲಿರುವ ಈ ಕಥನದಲ್ಲಿ ೨೭ ಭಾಗಗಳಿವೆ. ಅವುಗಳೆಂದರೆ:

(೧) “ಶಂತನು ಔರ್‌ಗಂಗಾ”: ಶಂತನು-ಗಂಗೆ ವಿವಾಹ; ಗಾಂಗೇಯ, ಚಿತ್ರವೀರ್ಯ-ವಿಚಿತ್ರವೀರ್ಯರ ಜನ್ಮ; ಶಂತನು ಸಾವು; ಇತ್ಯಾದಿ. (೨) “ಗಾಂಧಾರಿ ಔರ್ ಕುಂತಿ”: ಸಪ್ತರ್ಷಿಗಳ ಆಶೀರ್ವಾದದಿಂದ ಕುಂತಿಗೆ ಪಂಚ ಪಾಂಡವರು ಮತ್ತು ಗಾಂಧಾರಿಗೆ ೨೮ ಕೌರವರು ಜನಿಸುತ್ತಾರೆ. (೩) “ಪಾಂಡೂ ರಾಜಾ”: ಪಾಂಡುವಿಗೆ ಶಾಪ, ಅವನ ಸಾವು ಮತ್ತು ಉತ್ತರಕ್ರಿಯೆ. (೪) “ಕರ್ಣ ಪಾಂಡವ್”: ಕುಂತಿಗೆ ವಿವಾಹಪೂರ್ವದಲ್ಲಿ ಜನಿಸಿದ ಮಗುವನ್ನು ಅವಳು ಒಂದು ಹೊಲದಲ್ಲಿ ಬಚ್ಚಿಡುತ್ತಾಳೆ; ಆ ಮಗು ಕೌರವರ ಮಾಲಿಗೆ ಸಿಗುತ್ತದೆ; ತನ್ನ ಪರಾಕ್ರಮದಿಂದ ಕರ್ಣ ಕೌರವಸೇನೆಯಲ್ಲಿ ದಂಡನಾಯಕನಾಗುತ್ತಾನೆ. (೫) “ದ್ರಾಪದಿ ಔರ್ ವಾಸುಕಿ”: ಪಾತಾಳದ ವಾಸುಕಿ ದ್ರೌಪದಿಯ ಒಂದು ಕೂದಲನ್ನು ನೋಡಿ, ಅವಳನ್ನು ಮೋಹಿಸಿ, ಅವಳ ಅರಮನೆಗೆ ಬಂದು ಅವಳನ್ನು ಅರ್ಜುನನ ಎದುರೇ ಭೋಗಿಸುತ್ತಾನೆ. (೬) “ದ್ರೌಪದಿ ಔರ್ ಭೀಮ್‌”: ದ್ರೌಪದಿಯು ಸ್ತ್ರೀರೂಪದಲ್ಲಿರುವ ಒಂದು ಭೂತವೆಂದು ಗೊತ್ತಾಗುತ್ತದೆ; ಅವಳು ಉಳಿದೆಲ್ಲರನ್ನೂ ವಶಪಡಿಸಿಕೊಂಡಿದ್ದರೂ ಧರ್ಮರಾಯನನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. (೭) “ಭಕ್ತಿ ಕಾ ಪ್ರಾಕಟ್ಯ”: ಮುಖ್ಯ ಗಾಯಕನಿಗೆ ‘ಸಾಥ್ ಕೊಡುವುದು’ ಕಮ್ಮಿಯೇನಲ್ಲ ಎಂದು ಭೀಮನು ಸಹದೇವನಂತೆ ತಾನೂ ಹಾಡಲು ಪ್ರಯ್ನಿಸಿದಾಗ ಅರಿತುಕೊಳ್ಳುತ್ತಾನೆ. (೮) “ಪಾಂಡವೋಂಕಾ ಸೆನೆತರಾ ಯಜ್ಞ”: ೧೬ ಪುಟಗಳಷ್ಟು ದೀರ್ಘವಾಗಿರುವ ಈ ಭಾಗದಲ್ಲಿ ಪಾಂಡುರಾಜನಿಗೆ ಸದ್ಗತಿ ದೊರಕಿಸಿಕೊಡಲು ಪಾಂಡವರು ಕೈಗೊಂಡ ಯಜ್ಞದ ಮತ್ತು ಆ ಸಂಬಂಧದಲ್ಲಿ ಅವರು ಮಾಡಿದ ಸಾಹಸಗಳ ವರ್ಣನೆಯಿದೆ. ಶಿಷ್ಟ ಭಾರತಗಳ ರಾಜಸೂಯ ಯಾಗಕ್ಕೆ ಬದಲಾಗಿ ಇದು ಇಲ್ಲಿ ಬಂದಿದೆ. (೯) “ಭೀಮ್‌ಪಾಂಡವ್”: ಬಾಲ್ಯದಲ್ಲಿ ಆಟವಾಡುವಾಗ ಭೀಮನ ಹಿಂಸೆಯನ್ನು ತಾಳಲಾರದೆ ಕೌರವರು ಅವನನ್ನು ಬಲಿ ಕೊಡಲು ಪ್ರಯತ್ನಿಸುತ್ತಾರೆ. (೧೦) “ಹಿಡಿಂಬಾ”: ಹಿಡಿಂಬೆ ಭೀಮನನ್ನು ಮೋಹಿಸಿ ಮದುವೆಯಾಗುತ್ತಾಳೆ; ಘಟೋತ್ಕಜನ ಜನ್ಮ; ಕುಂತಿಯನ್ನು ಅಪಹರಿಸಿದ್ದ ಕೌರವದಿಂದ ಅವಳನ್ನು ಭೀಮ-ಘಟೋತ್ಕಚರು ರಕ್ಷಿಸುತ್ತಾರೆ. (೧೧) “ಕೃಷ್ಣ ಔರ್ ದಾನವ್‌”: ಕೃಷ್ಣ ನಾರದನೊಡನೆ ದಾನವ ರಾಜ್ಯಕ್ಕೆ ಹೋಗಿ ಅಲ್ಲಿ ಸಿಕ್ಕಿ ಬಿದ್ದು, ಉಪಾಯದಿಂದ ತಪ್ಪಿಸಿಕೊಳ್ಳುತ್ತಾನೆ. (೧೨) “ಈಕೋ ದಾನವ್”: ಈಕೋ ಎಂಬ ದಾನವ ಕೃಷ್ಣನ ತಂತ್ರದಿಂದ ಪಂಜರದಲ್ಲಿ ಬಂಧಿಸಲ್ಪಡುತ್ತಾನೆ. (೧೩) “ಅಭಿಮನ್ಯು”: ಸುಭದ್ರೆಯ ಮದುವೆ ಅರ್ಜುನನೊಡನೆ ಆದಾಗ ಅವಳ ಗರ್ಭವನ್ನು ಈಕೋ ದಾನವ ಪ್ರವೇಶಿಸುತ್ತಾನೆ. ಮುಂದೆ ಅವನೇ ಅಭಿಮನ್ಯುವಾಗಿ ಜನ್ಮ ತಾಳುತ್ತಾನೆ. (೧೪) “ನಾರದ್ ಔರ್‌ಕೌರವ್‌” ಗರ್ವೀ ಕೌರವರ ಸಭೆಯಿಂದ ನಾರದ ಪಾಂಡವರಲ್ಲಿಗೆ ಬರುತ್ತಾನೆ. (೧೫) “ಇಂದ್ರಾಣಿ ಔರ್ ಅಭಿಮನ್ಯ”: ಸ್ವರ್ಗಲೋಕದಿಂದ ಬೇಸತ್ತು ಇಂದ್ರಾಣಿಯು ಮಾನವ ವೀರನನ್ನು ಮದುವೆಯಾಗಲು ಭುಮಿಗೆ ಬರುತ್ತಾಳೆ; ಅಭಿಮನ್ಯು ಅವಳನ್ನು ಸ್ವೀಕರಿಸುತ್ತಾನೆ; ತನ್ನ ಮೇಲೆ ಯುದ್ಧ ಮಾಡಲು ಬಂದ ಇಂದ್ರನನ್ನು ಸೋಲಿಸುತ್ತಾನೆ. (೧೬) “ವಿರಾಟ ರಾಜಾ”: ಅಭಿಮನ್ಯುವಿಗೆ ಉತ್ತರೆಯನ್ನು ಕೊಡಲು ವಿರಾಟನು ಒಪುತ್ತಾನೆ; ಪಾಂಡವರ ದಿಬ್ಬಣ ವಿರಾಟನ ಪರೀಕ್ಷೆಯಲ್ಲಿ ಕೃಷ್ಣನ ಸಹಾಯದಿಂದ ಗೆದ್ದು ವಿರಾಟನಗರಿಗೆ ಬರುತ್ತದೆ. (೧೭) “ಖಂಡೋಂಕಾ ಬಟವಾರಾ”: ಕೃಷ್ಣನು ಪಾಂಡವರಿಗೆ ಮೂರು ಖಂಡಗಳನ್ನು ಮತ್ತು ಕೌರವರಿಗೆ ಒಂದು ಖಂಡವನ್ನು ಹಂಚಿದಾಗ ಕೌರವರಿಗೆ ಕೋಪ ಬಂದು ಯುದ್ಧ ನಿಶ್ಚಯವಾಗುತ್ತದೆ. (೧೮) “ಭಾರಥ್ ಕೀ ತೈಯ್ಯಾರಿ”: ಯುದ್ಧದಲ್ಲಿ ಗೆಲ್ಲಲು ಕೆಲವು ಅಪೂರ್ವ ವಸ್ತುಗಳನ್ನು ತರಲು ಕೃಷ್ಣನು ಪಾಂಡವರಿಗೆ ಹೇಳುತ್ತಾನೆ; ಅವುಗಳನ್ನು ಸಂಪಾದಿಸಲು ಅರ್ಜುನನು ಪಾತಾಳಕ್ಕೆ ಹೋಗುತ್ತಾನೆ. (೧೯) “ಯುದ್ಧ್ ಕಾ ಸಂದೇಶ್‌”: ಕೌರವದಿಂದ ಯುದ್ಧಕ್ಕೆ ಆಹ್ವಾನ; ಅರ್ಜುನನು ಪಾತಾಳದಲ್ಲಿರುವುದರಿಂದ ಪಾಂಡವರಿಗೆ ಚಿಂತೆ; ಅಭಿಮನ್ಯ ತಾನು ಯುದ್ಧ ಮಾಡಲು ಮುಂದೆ ಬರುತ್ತಾನೆ. (೨೦) “ಉತ್ತರಾ ಕಾ ಗೌನಾ”: ಇದು ಇನ್ನೊಂದು ದೀರ್ಘ ಹಾಗೂ ಪ್ರಮುಖ ಭಾಗ. ಉತ್ತರೆಯೊಡನೆ ಅಭಿಮನ್ಯವಿನ ನಿಷೇಕವಿನ್ನೂ ಆಗದಿರುವುದರಿಂದ ಕೂಡಲೇ ಹೊರಟು ಬರಲು ಉತ್ತರೆಗೆ ಸಂದೇಶ; ಕೃಷ್ಣನ ಕಾರಸ್ಥಾನದಿಂದ ಅವಳು ದಾರಿ ತಪ್ಪಿ, ಅವಳು ಬರುವ ಹೊತ್ತಿಗೆ ಅಭಿಮನ್ಯ ಯುದ್ಧಕ್ಕೆ ಹೊರಟಾಗಿದೆ. “ಭಾರಥ್”: ಯುದ್ಧದಲ್ಲಿ ಅಭಿಮನ್ಯುವಿನ ಸಾವು; ‘ಈ ಯುದ್ಧದಲ್ಲಿ ನಿರ್ದೋಷಿಗಳಾದ ನಾವು ಏಕೆ ಸಾಯಬೇಕು’ ಎಂದು ಗುಬ್ಬಿಗಳು ಕೃಷ್ಣನನ್ನು ಪ್ರಾರ್ಥಿಸುತ್ತವೆ; ಅವುಗಳಿಗೆ ಕೃಷ್ಣನ ರಕ್ಷಣೆ; ಯುದ್ಧದಲ್ಲಿ ಕೌರವರೆಲ್ಲರೂ ಸಾಯುತ್ತಾರೆ. (೨೨)“ಅರ್ಜುನ್ ಕಾ ಶೋಕ್”: ಅಭಿಮನ್ಯುವಿನ ಸಾವಿಗಾಗಿ ಅರ್ಜುನ ಶೋಕಿಸುತ್ತಾನೆ; ಕೊನೆಗೆ ಅಭಿಮನ್ಯುವಿನ ಆತ್ಮವೇ ಅವನ ಬಳಿಗೆ ಬಂದು ‘ನಾವು ಎಷ್ಟು ದಿನ ಬದುಕುತ್ತೇವೋ ಅಷ್ಟೇ ದಿನ ನಮ್ಮದು’ ಎಂದು ಅರ್ಜುನನನ್ನು ಸಮಾಧಾನ ಮಾಡುತ್ತದೆ. (೨೩) “ಕೃಷ್ಣಲೀಲಾ”: ಗರ್ವದಿಂದ ಬೀಗುತ್ತಿದ್ದ ಅರ್ಜುನನಿಗೆ ಕೃಷ್ಣನು ಬುದ್ಧಿ ಕಲಿಸುತ್ತಾನೆ. (೨೪) “ಧರಮಾಬಾಯಿ ಕಾ ಮಾಯರಾ”: ಸಹೋದರರಿಲ್ಲದೆ ತನ್ನ ಮಗಳ ಮದುವೆಯಲ್ಲಿ ಅಪಮಾನಕ್ಕೆ ಈಡಾಗಿರುವ ಧರಮಾಬಾಯಿಗೆ ಭಿಮ ಸಹೋದರನಾಗಲು ಒಪ್ಪಿ ಮದುವೆಯನ್ನು ನಡೆಸಿಕೊಡುತ್ತಾನೆ. (೨೫) “ಕಲಿಯುಗ್ ಕಾ ಪ್ರವೇಶ್”: ಧರಮಾಬಾಯಿಯ ಮಗಳ ಮದುವೆಗೆ ಚಿನ್ನದ ಸೀರೆ ತರಲು ಅರ್ಜುನನು ಪಾತಾಳಕ್ಕೆ ಹೋದಾಗ ಅಲ್ಲಿ ಕಲಿಪುರುಷನನ್ನು ಭೇಟಿಯಾಗುತ್ತಾನೆ. (೨೬) “ಹಿಮಾಲಯ್ ಕೆ ಫಥ್ ಪರ್ ಪಾಂಡವ್”: ದಾರಿಯಲ್ಲಿ ಒಬ್ಬೊಬ್ಬರಾಗಿ ಎಲ್ಲರೂ ಬೀಳುತ್ತಾರೆ; ಧರ್ಮರಾಯನು ಮಾತ್ರ ವೈಕುಂಠಪುರಿಯನ್ನು ಸೇರುತ್ತಾನೆ. (೨೭) “ರಾಧಾ ಔರ್ ಸಾವರಾ”: ಸ್ತ್ರೀಯರು ಚಂಚಲ ಸ್ವಭಾವದವರೆಂದು ತೋರಿಸಿಕೊಡಲು ಕೃಷ್ಣನು ರಾಧೆಯ ಮನೆಯಿಂದ ಹೊರಗೆ ಹೋಗಿ, ಬಳೆಗಾರನಂತೆ ಮತ್ತೆ ಅವಳ ಮನೆಗೆ ಬಂದು ಅವಳನ್ನು ಒಲಿಸಿಕೊಳ್ಳುತ್ತಾನೆ.

() ಜನಪದ ಭಾರತ ಕಥೆಗಳು[9]

ಕನ್ನಡದಲ್ಲಿ ಈ ಕಥನಗೀತೆಗಳನ್ನು ಹಾಡಿದವರು ಉತ್ತರ ಕರ್ನಾಟಕದ ಗೌಡರು, ಜೋಗಿಗಳು, ಮತ್ತು ಕುಣಬಿಗಳು. ಈ ಸಂಕಲನದಲ್ಲಿ ೨೭ ಭಾಗಗಳಿವೆ ಮತ್ತು ಒಂದೊಂದು ಭಾಗವನ್ನುಒಬ್ಬೊಬ್ಬರು ಹಾಡಿದ್ದಾರೆ. ೧೯೮೦ರಲ್ಲಿ ಪ್ರಕಟವಾದ ಈ ಗೀತೆಗಳನ್ನು ಸಂಗ್ರಹಿಸಿದ ಎಲ್. ಆರ್. ಹೆಗಡೆಯವರು ಕಥೆಗಳನ್ನು ಸರಳ ಗದ್ಯದಲ್ಲಿ ನಿರೂಪಿಸಿದ್ದಾರೆ. ಈ ೨೭ ಭಾಗಗಳ ಸ್ಥೂಲ ಪರಿಚಯ ಹೀಗೆದೆ:

(೧) “ಉತ್ಪತ್ತಿಯ ಕಥೆ”: ಭಾವಾ ಸನ್ಯಾಸಿಯು ಅಂಬಿಗರ ಹುಡುಗಿಯನ್ನು ಕೊಡುವುದರಿಂದ ಅವಳಿಗೆ ನಾಲ್ಕು ಜನ ಮಕ್ಕಳಾಗುತ್ತಾರೆ. ಮೊದಲನೆಯವನು ಹುಟ್ಟಿದ ಕೂಡಲೇ ಆಕಾಶಕ್ಕೆ ಹೋಗುತ್ತಾನೆ; ಉಳಿದವರು ಆದಶಿ, ಗಂಟಶಿ, ಮತ್ತು ದಂಟಶಿ. ಒಂದು ಸಂದರ್ಭದಲ್ಲಿ ತಮ್ಮ ತಾಯಿಯ ನಡತೆಯನ್ನೇ ತಪ್ಪಾಗಿ ಸಂಶಯಿಸಿದುದರಿಂದ ಗಂಟಶಿ ಮತ್ತು ದಂಟಶಿ ಕೊಂಡದಲ್ಲಿ ಬಿದ್ದು ಸತ್ತು, ಅನಂತರ ಅದೇ ಕೊಂಡದಿಂದ ನಾಲ್ವರು ಎದ್ದು ಬರುತ್ತಾರೆ. ಅವರೇ ಪಾಂಡೋರಾಜಾ, ಕೈಲೋರಾಜಾ, ಕುಂಟಿ ಮತ್ತು ಗಂದೊರಿ. (೨) “ಮೃಗಬೇಟೆ”: ಪಾಂಡೋರಾಜನು ಸುರತದಲ್ಲಿ ಮಗ್ನವಾಗಿದ್ದ ಮೃಗಗಳಲ್ಲಿ ಒಂದನ್ನು ಕೊಲ್ಲುತ್ತಾನೆ; ಹೆಣ್ಣು ಮೃಗದಿಂದ ಶಾಪ. (೩) “ಕೌರವ-ಪಾಂಡವರ ಜನ್ಮ (೪) “ಪಾಂಡುವಿನ ಮರಣ”: ಪಾಂಡು ಸತ್ತನಂತರ ಅವನ ಶವವನ್ನು ಪಾಂಡವರು ತಿನ್ನುತ್ತಿರುವಾಗ ಅಲ್ಲಿಗೆ ಬಂದ ಕೃಷ್ಣ ಅವರ ಕೃತ್ಯಕ್ಕೆ ನಗುತ್ತಾ, ಶವಗಳನ್ನು ಸುಡಬೇಕೆಂದು ಹೇಳುತ್ತಾನೆ. (೫) “ಕೌರವ-ಪಾಂಡವರ ಕಲಹದ ಬೀಜ”: ಆಟಗಳಲ್ಲಿ ಭೀಮನೇ ಯಾವಾಗಲೂ ಗೆದ್ದು ಇತರರನ್ನು ಹಿಂಸಿಸುತ್ತಾನೆ. (೬)“ ಅರಗಿನ ಮನೆಗೆ ಬೆಂಕಿ”: ದ್ರಾಪದಿ ಜೂಜಿನಲ್ಲಿ ಗೆಲ್ಲುತ್ತಾಳೆ; ಪಾಂಡವರು ವಿರಾಟನಗರಿಗೆ ಬರುತ್ತಾರೆ. (೭)“ಪಾಂಡವರ ಕ್ರಿಯಾಚರಣೆ”: ಕೌರವರು ಪಾಂಡವರು ಸತ್ತರೆಂದು ಅವರಿಗೆ ಕ್ರಿಯೆ ಮಾಡುತ್ತಿರುವಾಗ ಭೀಮನು ಅಲ್ಲಿಗೆ ಭಟ್ಟನಂತೆ ಬಂದು ಮಾಡಿದ ಅಡಿಗೆಯೆಲ್ಲವನ್ನೂ ಒಬ್ಬನೇ ಮುಗಿಸುತ್ತಾನೆ. (೮)“ತಿಂಡೀಪೋತ ಭೀಮ” (೯)“ಬಕಾಸುರ ವಧೆ” (೧೦)“ಶಂಬರಾಸುರ ವಧೆ” (೧೧)“ದೇವತೆಗಳಲ್ಲಿ ಶ್ರೇಷ್ಠರು”: ಎಲ್ಲರಿಗಿಂತ ಶ್ರೇಷ್ಠರು ಪಾಂಡವರೆಂದು ಸಿರಿಯಮ್ಮ ಹೇಳುತ್ತಾಳೆ. (೧೨)“ಕಮಂಡಲ ಹೂವು” : ಭೀಮನು ಕಮಂಡಲ ಹೂವಿನೊಡನೆ ದೇವಕನ್ಯೆಯನ್ನೂ ತರುತ್ತಾನೆ. (೧೩)“ಜನ್ನ ಚತ್ತರಿ ಹೂ”: ಸಾಹಸದಿಂದ ಸಿರಿಯಮ್ಮ ಕೇಳಿದ ಹೂವನ್ನು ಅರ್ಜುನನ್ನು ತರುತ್ತಾನೆ; ಸಿರಿಯಮ್ಮ ದ್ರೌಪದಿಯ ದಾಸಿಯಾಗುತ್ತಾಳೆ. (೧೪)“ಕೆಂದಾಳಿರಾಯನ ಪಟ್ಟಣದಲ್ಲಿ”: ಕೌರವರ ಕೈಯಲ್ಲಾಗದ ಕೆಂದಾಳಿ ಹೂವನ್ನು ಭೀಮಾರ್ಜುನರು ಸಾಹಸದಿಂದ ತರುತ್ತಾರೆ. (೧೫)“ಹಣ್ಣಲ್ಲ ಹೆಣ್ಣು”: ಕೃಷ್ಣನ ತಂಗಿ ರೂಪತಾ ದೇವಿ ಮದುವೆಯಾಗದೆ ಮೈನೆರೆದಾಗ ಕೃಷ್ಣ ಅವಳನ್ನು ಕಾಡಿನಲ್ಲಿ ಬಿಡುತ್ತಾನೆ; ಪಾಂಡವರು ಅವಳನ್ನು ಕರೆದುಕೊಂಡು ಬಂದು, ತಾಯಿ ಗೊತ್ತಿಲ್ಲದೆ ಹೇಳಿದಂತೆ ಅವಳನ್ನು ಮದುವೆಯಾಗುತ್ತಾರೆ. (೧೬)“ರೂಪೋತಿ”: ಮೇಲಿನ ಕಥೆಯೇ, ಹೆಚ್ಚು ವಿವರಗಳೊಡನೆ. (೧೭)“ಪಾಂಡವರ ಏಕಾದಶಿ ವ್ರತಪೂಜೆ”: ಭೀಮನ ಭಕ್ತಿಯನ್ನು ಅಳೆಯಲಾಗುವುದಿಲ್ಲ. (೧೮)“ಅರ್ಜುನ ಜೋತಿ”: ಅರ್ಜುನ-ಸುಭದ್ರೆಯರ ಮದುವೆ; ಅವಳನ್ನು ಮನೆಗೆ ಕರೆತಂದಾಗ “ಅರ್ಜುನ ಸ್ವಾಮಿ, ಕದ್ದುಹೋಗಿ ಹೆಣ್ಣನ್ನು ಏಕೆ ತಂದಿರಿ” ಎಂದು ಐದು ಜನ ದೇವಿಯರೂ ಕೇಳುತ್ತಾರೆ. (೧೯)“ಗರ್ಭಿಣಿ ಸುಭದ್ರೆ”: ಅವಳ ಗರ್ಭದಲ್ಲಿರುವ ಶಿಶು ತನ್ನ ವೈರಿಯಾದ ರಾಕ್ಷಸ ಎಂಬುದು ಗೊತ್ತಾಗಿ ಅದನ್ನು ಸಾಯಿಸಲು ಕೃಷ್ಣನು ಪ್ರಯತ್ನಿಸುತ್ತಾನೆ. (೨೦)“ದ್ರೌಪದಿಯ ಜೂಜು”: ಧರ್ಮರಾಯನು ಎಲ್ಲವನ್ನೂ ಸೋತ ಬಳಿಕ ದ್ರೌಪದಿಯು ತಾನು ಆಟಕ್ಕೆ ಕುಳಿತು ಮತ್ತೆ ಎಲ್ಲವನ್ನೂ ಗೆಲ್ಲುತ್ತಾಳೆ; ಭಾನುಮತಿ ದ್ರೌಪದಿಯ ದಾಸಿಯಾಗುತ್ತಾಳೆ. (೨೧)“ದ್ರೌಪದಿ ವಸ್ತ್ರಾಪಹರಣ” (೨೨)“ಕೀಚಕ ವಧೆ” (೨೩)“ಶ್ರೀಕೃಷ್ಣ ರಾಯಭಾರ”: ರಾಯಭಾರ ವಿಫಲವಾಗುತ್ತದೆ. (೨೪)“ದುರ್ಯೋಧನನ ಮರ್ಮಸ್ಥಾನ”: ಕೃಷ್ಣನ ಕುತಂತ್ರದಿಂದ ದುರ್ಯೋಧನನ ಕೆಳ ಅರ್ಧಭಾಗ ಹಾಗೆಯೇ ಉಳಿಯುತ್ತದೆ. (೨೫)“ದುರ್ಯೋಧನನ ಬಂಧನ” (೨೬)“ಅಭಿಮನ್ಯ ವಧೆ” (೨೭)“ದೇವಲೋಕ ಯಾತ್ರೆ”

(ಬಹು ನಿರೂಪಕರಿಂದ ಕಥೆಯ ಭಾಗಗಳನ್ನು ಸಂಗ್ರಹಿಸಿರುವುದರಿಂದ ಅಲ್ಲಲ್ಲಿ ಪುನರುಕ್ತಿ ಮತ್ತು ಕಥಾಂಶಗಳ ಪಲ್ಲಟ ಕಂಡುಬರುತ್ತವೆ.)

[1] “Three Hundred Ramayanas,” p. 148-150.

[2] A.K. Ramanujan, “The Indian Oedipus,” in Collected Essays, p.393.

[3] John D. Smith, “Scapegoats of the Gods: The Ideology of the Indian Epics,” in ed. Stuart Blackburn, et al. Oral Epics in India (Berkeley, LA: Univ. of Cal. Press. 1989), pp.188-189

[4] Brenda E. F. Beck, The Three Twins: The Telling of a South Indian Folk Epic (Bloomington: Indiana Univ. Press, 1982). pp. 177-178.180-181.

[5] V. Narayana Rao, “A Ramayana of Their Own: Women’s Oral Tradition in Telugu,” in Paula Richman, pp. 129-133.

[6] ಸಿ.ರಾಘವನ್ (ಅನು), “ಬ್ಯಾರಿ ರಾಮಾಯಣ,” ಮಲಯಾಳದ ಜಾನಪದ ಹಾಡುಗಳು, ಸಂ. ಅಯ್ಯಪ್ಪ ಪಣಿಕ್ಕರ್ (ಬೆಂಗಳೂರು: ಸಾ. ಅ. ಭಾಷಾಂತರ ಕೇಂದ್ರ, ೨೦೦೬), ಪು. ೧೮೯-೧೯೪.

[7] ಸಿ. ರಾಘವನ್, “ಧರೆಗೆ ಮರಳ್ಯಾಳ.” ಪು. ೨೨೦-೨೪೦.

[8] ಭಗವಾನ್‌ದಾಸ್ ಪಟೇಲ್, ಸಂ. ಭಿಲ್ಲ ಭಾರಥ್; ಹಾಡಿದವರು ನಾಥೂಭಾಯಿ ಭೂರಾಭಾಯಿ; ಹಿಂದಿಗೆ ಅನುವಾದ: ಮೃದುಲಾ ಪಾರೀಕ್‌, ಭೀಲೋಂಕಾ ಭಾರಥ್ (ನ್ಯೂ ಡೆಲ್ಲಿ: ಸಾಹಿತ್ಯ ಅಕಾಡೆಮಿ, ೨೦೦೦). ನಾನು ಹಿಂದಿ ಅನುವಾದವನ್ನು ಅನುಸರಿಸಿದ್ದೇನೆ.

[9] ಎಲ್. ಆರ್. ನಾಯಕ ಸಂ, ಜನಪದ ಭಾರತ ಕಥೆಗಳು (ಕುಮಟಾ: ಜನಸಾಧನ ಗ್ರಂಥಮಾಲೆ, ೧೯೮೦).