() ಗಾಮೊಕ್ಕಲು ಮಹಾಭಾರತ:[1]

ಗಾಮೊಕ್ಕಲು ಉ.ಕ. ಜಿಲ್ಲೆಯ ಕುಮಟಾ-ಹೊನ್ನಾವರ ತಾಲೋಕಿನ ಹಳ್ಳಿಗಳಲ್ಲಿ ವಾಸಿಸುವ ಒಂದು ಬುಡಕಟ್ಟು ಜನಾಂಗ. ಇವರಿಗೆ ‘ಗ್ರಾಮವಾಸಿಗಳು’, ‘ಪಟಗಾರರು’ ಎಂದೂ ಹೆಸರಿದೆ. ತಿರುಪತಿ ವೆಂಕಟರಮಣ ಒಕ್ಕಲುಗಳಾದ ಇವರು ಹಾಲಕ್ಕಿ ಒಕ್ಕಲಿಗರಂತೆ ವೃತ್ತಿಯನ್ನಾಗಿ ಕೃಷಿಯನ್ನೇ ಆಧರಿಸಿದ್ದಾರೆ.

ವಿಶೇಷ ಸಂದರ್ಭಗಳಲ್ಲಿ ಈ ಜನಾಂಗಕ್ಕೆ ಸೇರಿದವರು ಹಾಡುವ ಭಾರತದ ಭಾಗಗಳನ್ನು ಭಿನ್ನ ಗಾಯಕ-ಗಾಯಕಿಯರಿಂದ ಸಂಪಾದಿಸಿ, ಎನ್.ಆರ್. ನಾಯಕ್ ಗಾಮೊಕ್ಕಲ ಮಹಾಭಾರತ ಎಂಬ ಹೆಸರಿನಲ್ಲಿ ೧೯೯೨ರಲ್ಲಿ ಪ್ರಕಟಿಸಿದರು. ಇದರಲ್ಲಿರುವ ಹತ್ತು ಭಾಗಗಳಲ್ಲಿ ಏಳು ಭಾಗಗಳನ್ನು ಸ್ತ್ರೀಯರು ಮತ್ತು ಉಳಿದ ಮೂರು ಭಾಗಗಳನ್ನು ಪುರುಷರು ಹಾಡಿದ್ದಾರೆ. ಆ ಹತ್ತು ಭಾಗಗಳು ಹೀಗಿವೆ: ೧) ಧರ್ಮರು, ೨) ಗೀಜಗ, ೩) ಸುಭದ್ರ, ೪) ಲಕ್ಷ್ಮಣ, ೫) ಅರ್ಜುನ, ೬) ಕುಸುಮಾಲಿ, ೭) ನಾಲ್ವರು ಹೆಂಡಿರು, ೮) ಕನಕಾಂಗಿ ಕಲ್ಯಾಣ, ೯) ಅಭಿಮನ್ಯ, ಮತ್ತು ೧೦) ಸಾವಿತ್ರಿ.

ಅಭಿಜಾತ ಮಹಾಭಾರತಗಳ ಹೋಲಿಕೆಯಲ್ಲಿ ಇದರಲ್ಲಿರುವ ಭಿನ್ನತೆಗಳನ್ನು ಹೀಗೆ ಗುರುತಿಸಬಹುದು:

ದ್ರೌಪದಿ: ಧರ್ಮರಾಯನು ದ್ಯೂತದಲ್ಲಿ ಸೋತು ಎಲ್ಲವನ್ನೂ ಕಳೆದುಕೊಂಡನಂತರ, ದ್ರೌಪದಿ ಮತ್ತೊಮ್ಮೆ ದುರ್ಯೋಧನನೊಡನೆ ದ್ಯೂತಕ್ಕೆ ಕುಳಿತು, ತನ್ನ ಚಾಕಚಕ್ಯತೆಯಿಂದ ಎಲ್ಲವನ್ನೂ ಮತ್ತೆ ಗೆಲ್ಲುತ್ತಾಳೆ. ಆದರೆ, ಸ್ತ್ರೀಯ ಗೆಲುವನ್ನು ಒಪ್ಪಿಕೊಳ್ಳಲಾಗದೆ ಧರ್ಮರಾಯನು ತನ್ನ ಸಹೋದರರು ಮತ್ತು ದ್ರೌಪದಿಯೊಡನೆ ವನವಾಸಕ್ಕೆ ತೆರಳುತ್ತಾನೆ. ಕೌರವ ಸಭೆಯಲ್ಲಿ ದುಃಶಾಸನನು ತನ್ನನ್ನು ಅಪಮಾನಿಸಿದ ಪ್ರಯುಕ್ತ ಅವನ ರಕ್ತದಿಂದ ತನ್ನ ಮುಡಿಯನ್ನು ಕಟ್ಟುತತೇನೆಂದು ಪ್ರತಿಜ್ಞೆ ಮಾಡುತ್ತಾಳೆ.

ಅಭಿಮನ್ಯು: ಇದರಲ್ಲಿಯೂ ನಾರಾಯಣ (ಕೃಷ್ಣನ) ಮೋಸದಿಂದ ಅಭಿಮನ್ಯ ಕೊಲ್ಲಲ್ಪಡುತ್ತಾನೆ. ಅರ್ಜುನನಿಲ್ಲದ ವೇಳೆಯಲ್ಲಿ ಅಭಿಮನ್ಯುವನ್ನು ಯುದ್ಧಕ್ಕೆ ಕಳಿಸಲು ನಾರಾಯಣನು ತನ್ನ ತಂಗಿಗೆ (ಸುಭದ್ರೆಗೆ) ಸೂಚಿಸಿದಾಗ ಅವಳು ಹೀಗೆ ನೊಂದು ನುಡಿಯುತ್ತಾಳೆ: “ಬೇಲಿದ್ದೆ ಕೆಯ್ ತಿಂಬಂಗೆ ಬೇರ್ಗೆ ಕಿಚ್ಚಿಡುವಂಗೆ/ನೀಗಿದ್ದಿ ನನ ಮಗನ ಕುಲುವಂಗೆ/ದೇವರೆ/ನಾನ್ಯಾರಿಗ್ ಹೇಳಿ ಮರಗಲೆ?” (“ಬೇಲಿಯೇ ಎದ್ದು ಕೆಯ್ವೊಲವನ್ನು ಮೇಯುವಾಗ, ಬೇರಿಗೇ ಬೆಂಕಿ ಬೀಳುವಾಗ, ನೀನಿದ್ದೂ ನನ್ನ ಮಗನನ್ನು ಕೊಲ್ಲುವಾಗ, ನಾನು ಯಾರಿಗೆ ಹೇಳಿ ಮರುಗಲಿ?”) ಆಶ್ಚರ್ಯದ ಸಂಗತಿಯೆಂದರೆ, ಈ ಸಂದರ್ಭದಲ್ಲಿ ಅಭಿಮ್ಯುವಿನ ಹೆಂಡತಿ ಋತುಮತಿಯಾಗುವುದು, ಅಲ್ಲಿಗೆ ಹೋಗಲು ಇಚ್ಛಿಸುವ ಅಭಿಮನ್ಯುವಿನ ಪ್ರಯತ್ನಗಳು ಕೃಷ್ಣದಿಂದ ಕುತಂತ್ರದಿಂದ ನಿಷ್ಫಲವಾಗುವುದು, ಇತ್ಯಾದಿ ವಿವರಗಳು ಭಿಲ್ಲ ಭಾರತದಲ್ಲಿರುವ ವಿವರಗಳನ್ನೇ ಹೋಲುತ್ತವೆ. ಆದರೆ, ಈ ಎರಡೂ ಜನಾಂಗಗಳಿಗೇ ಇಂದಿಗೂ ಯಾವುದೇ ಬಗೆಯ ಸಂಪರ್ಕವಿಲ್ಲ, ಭಾಷಿಕ ಸಾಮ್ಯವೂಇಲ್ಲ.

ಕರ್ಣ: ಇದರಲ್ಲಿ ಬರುವ ಕರ್ಣ ಸಾತ್ವಿಕ ಮತ್ತು ಧರ್ಮಭೀರು; ದ್ಯೂತದ ಸಂದರ್ಭದಲ್ಲಿ ಆಸ್ಥಾನಕ್ಕೆ ದ್ರೌಪದಿಯನ್ನು ಎಳೆದುತರಲು ದುರ್ಯೋಧನನು ಆಜ್ಞಾಪಿಸಿದಾಗ ಕರ್ಣನು ಆ ಸೂಚನೆಗೆ ಒಪ್ಪದೆ, ಗುಟ್ಟಾಗಿ, ದ್ರೌಪದಿಗೆ ತನ್ನ ಮಾನವನ್ನು ಕಾಪಾಡಿಕೊಳ್ಳುವ ಮಾರ್ಗವನ್ನು ಹೇಳಿಕೊಡುತ್ತಾನೆ. ಈ ಸಂದರ್ಭದಲ್ಲಿ, ಇನ್ನೊಬ್ಬರ ಊಳಿಗದಲ್ಲಿರುವುದು ಬಹು ಕಷ್ಟ ಎಂದು ನಿಟ್ಟುಸಿರಿಡುವ ಕರ್ಣನ ಈ ಮಾತುಗಳು ಮನನಯೋಗ್ಯವಾಗಿವೆ: “ಒಬ್ಬರ ವಲ್ಲೆ ಇರುವುದು ಅತಿಕಟ್ಟಾ/ ಹೇಳಿದೂಳಗವ ಸಲಿಸಬೇಕೊ/ಹೇಳಿದೂಳಗವಾ ಸಲಸದೇ ಇದ್ದರೆ/ ಕಟ್ ಕಂಬೇಕೋ ಪಂಜರದ ಅರಮನೆ.ಕರ್ಣನ ಪಾತ್ರದ ಸಂದರ್ಭದಲ್ಲಿಯೂ ಭಿಲ್ಲ ಭಾರತ ಮತ್ತು ಗಾಮೊಕ್ಕಲು ಭಾರತ ಇವುಗಳ ನಡುವೆ ಅಪಾರ ಸಾಮ್ಯವಿದೆ.

ಈ ಭಾರತದ ಮತ್ತೊಂದು ಗಮನೀಯ ಅಂಶವೆಂದರೆ, ಇದರಲ್ಲಿ ಜೈನ ಬಸದಿಯ ಪ್ರಸ್ತಾಪ ಬರುತ್ತದೆ; ಮತ್ತು ಕುಸುಮಾಲಿ (ಅರ್ಜುನನ ಪ್ರೇಯಸಿ; ಚಿತ್ರಾಂಗದೆ?) ಕೊನೆಯಲ್ಲಿ ಜೈನದೀಕ್ಷೆ ಪಡೆಯುತ್ತಾಳೆ.

() ಜನಪದ ಮಹಾಭಾರತ:[2]

ಏಕವಕ್ತೃ ಗಾಯನದ ಈ ಕಥನ ೩೬,೦೦೦ ಸಾಲುಗಳಷ್ಟು ಸುದೀರ್ಘವಾಗಿದೆ. ಇದನ್ನು ಹಾಡಿದವರು ಬೆಟ್ಟದಬೀಡು ಸಿದ್ಧಶೆಟ್ಟರು ಮತ್ತು ಸಂಪಾದಿಸಿ, ೨೦೦೪ರಲ್ಲಿ ಪ್ರಕಟಿಸಿದವರು ಪಿ.ಕೆ. ರಾಜಶೇಖರ. ಇದರ ಮೇಲೆ ಕುಮಾರವ್ಯಾಸ ಭಾರತದ ಪ್ರಭಾವವಿದ್ದು, ಒಟ್ಟಿನಲ್ಲಿ ಇದು ಆ ಭಾರತದ ಗತಿಯನ್ನೇ ಅನುಸರಿಸುತ್ತದೆ. ಆದರೂ ಶಿಷ್ಟ ಭಾರತಗಳ ಹೋಲಿಕೆಯಲ್ಲಿ ಉದ್ದಕ್ಕೂ ಅರ್ಥಪೂರ್ಣ ಭಿನ್ನತೆಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳನ್ನು ಹೀಗೆ ಗುರುತಿಸಬಹುದು:

(ಅ) ಉಪಕಥೆಗಳು: ಬ್ರಹ್ಮಕಪಾಲದ ಕಥೆ, ಭೀಮೇಶಲಿಂಗದ ಕಥೆ, ಗಯ ಚರಿತ್ರೆ, ಮಾರ್ಕಂಡೇಯನ ಕಥೆ, ಈರುಳ್ಳಿ ಕಥೆ, ಶ್ರೀಕೃಷ್ಣಗಾರುಡಿ ಕಥೆ, ನಿಜವಾದ ತಾಯಿಯ ಪರೀಕ್ಷೆ, ಇತ್ಯಾದಿ.

(ಆ) ಪ್ರಾದೇಶಿಕ/ಸ್ಥಳಿಕ ವಿವರಗಳು: ಹೆಚ್ಚಾಗಿ ಹಳೆಯ ಮೈಸೂರು ಪ್ರಾಂತದಲ್ಲಿ ಜನಪ್ರಿಯವಾಗಿರುವ ಕರಗದ ಆಚರಣೆ,‘ಕೊಂತಿ ಪೂಜೆ,’ ಮಲೆಯಾಳಿ ಮಂತ್ರವಾದಿಗಳ ಬಗ್ಗೆ ಇರುವ ನಂಬಿಕೆ, ಜೋಗಿ ಕುಲದ ವರ್ಣನೆ,ಇತ್ಯಾದಿ ಆಚರಣೆ-ನಂಬಿಕೆಗಳು; ಮತ್ತು ಸ್ಥಳ ಪುರಾಣಗಳು ಕಾವ್ಯದಲ್ಲಿ ಸೇರಿವೆ. ಹಾಗೆಯೇ, ಗಾಯಕನಿಗೆ ಪರಿಚಯವಿರುವ ಪಾಂಡವಪುರ, ನೆಲಮಂಗಲ, ಇತ್ಯಾದಿ ಊರುಗಳ ಸ್ಥಳಪುರಾಣಗಳು ಕಾವ್ಯವನ್ನು ಪ್ರವೇಶಿಸಿವೆ.

(ಇ) ಪಾತ್ರಗಳು: ಪಾತ್ರಗಳ ನೆಲೆಯಲ್ಲಿ ದ್ರೌಪದಿಯ ಪಾತ್ರ ಶಿಷ್ಟ ಭಾರತಗಳ ಹೋಲಿಕೆಯಲ್ಲಿ ತುಂಬಾ ಭಿನ್ನವಾಗಿದೆ. ಇಲ್ಲಿ ದ್ರೌಪದಿ ಮಹಾಶಕ್ತಿಯ ಅವತಾರ; ದ್ಯೂತದಲ್ಲಿ ಧರ್ಮರಾಯನು ಸೋತನಂತರ ದ್ರೌಪದಿಯೇ ಆಟಕ್ಕೆ ಕುಳಿತು ಎಲ್ಲವನ್ನೂ ಮತ್ತೆ ಗೆಲ್ಲುತ್ತಾಲೆ; ಕುರುಕ್ಷೇತ್ರ ಯುದ್ಧದಲ್ಲಿ ವಿಜಯವೂ ಪರೋಕ್ಷವಾಗಿ ದ್ರೌಪದಿಯ ಕಾರಣದಿಂದಲೇ ಪಾಂಡವರಿಗೆ ಸಾಧ್ಯವಾಗುತ್ತದೆ. ಕೃಷ್ಣನಿಗೆ ಮೂವರು ಸೋದಳಿಯಂದಿರು; ಅವರು ಮೂವರನ್ನೂ ಉದ್ದೇಶಪೂರ್ವಕವಾಗಿ ಕೃಷ್ಣನು ಯುದ್ಧದಲ್ಲಿ ಬಲಿ ಕೊಡುತ್ತಾನೆ. ವಿಚಿತ್ರವೀರನು ಭೀಷ್ಮನೊಡನಿದ್ದ ತನ್ನ ತಾಯಿಯನ್ನೇ ಸಂಶಯದಿಂದ ನೋಡಿದುದರಿಂದ ಅನಂತರ ಕೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅತಿ ವಿಸ್ತಾರವಾಗಿ ‘ಅರ್ಜುನ ಜೋತಿ’ ಕಥೆ ಮತ್ತು ಸಾಕಷ್ಟು ದೀರ್ಘವಾಗಿ ಶಕುನಿ ಮತ್ತು ಅವನ ಸೋಧರರ ಕಥೆ ಬರುತ್ತವೆ.

(ಈ) ಘಟನೆಗಳು: ಈ ನೆಲೆಯಲ್ಲಿ ಮುಖ್ಯವಾಗುವ ಒಂದು ಘಟನೆಯೆಂದರೆ ದ್ರೌಪದಿ ಸ್ವಯಂವರದಲ್ಲಿ ಮತ್ಸ್ಯ ಯಂತ್ರಭೇದನಕ್ಕೆ ಬದಲು ‘ಮಾರೀಚ ಕಾಗೆಯನ್ನು ಹೊಡೆಯುವುದು’ ಬರುತ್ತದೆ. (ಈ ಘಟನೆ ಗೊಂಡ ರಾಮಾಯಣದಲ್ಲಿಯೂ ಬರುತ್ತದೆ.) ಪಾಂಡವರು ಕೊನೆಯಲ್ಲಿ ಸ್ವರ್ಗಾರೋಹಣಕ್ಕಾಗಿ ಹಿಮಾಲಯವನ್ನು ಹತ್ತುವುದಕ್ಕೆ ಬದಲಾಗಿ ಸೀಲಾ ನದಿಯನ್ನು ದಾಟುತ್ತಾರೆ; ಧರ್ಮರಾಯನನ್ನು ಹೊರತುಪಡಿಸಿ ಇತರರೆಲ್ಲರೂ ನದಿಯ ಮದ್ಯದಲ್ಲಿ ಸಾಯುತ್ತಾರೆ.

* * *

ಪ್ರಾಯಃ, ಕ್ರಿಸ್ತಶಕೆಯ ಪೂರ್ವದಲ್ಲಿ, ನಾಲ್ಕೈದು ಶತಮಾನಗಳ ಹಿಂದೆ ಅಂದು ಸಮಾಜದಲ್ಲಿ ಪ್ರಚಲಿತವಿದ್ದ ಚಾರಿತ್ರಿಕ-ಜಾನಪದ ಕಥೆ-ಐತಿಹ್ಯಗಳನ್ನು ಆಧರಿಸಿ ರಚಿಸಲ್ಪಟ್ಟ, ೨೦,೦೦೦ ಶ್ಲೋಕಗಳ “ಜಯ” ಕಾವ್ಯ ಅನಂತರ ಬೆಳೆಯುತ್ತಾ “ಭಾರತ”ವಾಗಿ, ಅನಂತರ ಪುರಾಣಯುಗದ ಕಾಲಕ್ಕೆ ಒಂದು ಲಕ್ಷ ಶ್ಲೋಕಗಳ ಮಹಾಭಾರತವಾದದ್ದು ಒಂದು ರೋಚಕ ಸಾಂಸ್ಕೃತಿಕ ಇತಿಹಾಸ. ರಾಮಕಥೆಯಂತೆಯೇ ಭಾರತದ ಕಥೆಯೂ ಕಳೆದೆರಡು ಸಹಸ್ರಮಾನಗಳ ಅವಧಿಯಲ್ಲಿ ಹತ್ತಾರು ಭಾಷೆಗಳಲ್ಲಿ ನೂರಾರು ಕಾವ್ಯ-ನಾಟಕ-ಕಥೆಗಳಿಗೆ ಜನ್ಮವಿತ್ತಿದೆ; ಸಂಗೀತ-ನೃತ್ಯ-ಚಿತ್ರಕಲೆ-ಶಿಲ್ಪಕಲೆ ಇತ್ಯಾದಿ ಎಲ್ಲಾ ಲಲಿತ ಕಲೆಗಳ ಮಾಧ್ಯಮಗಳಲ್ಲಿಯೂ ಬಗೆಬಗೆಯ ರೂಪು ಪಡೆದಿದೆ; ಭಾರತೀಯ ಪ್ರಜ್ಞೆಯನ್ನು ರೂಪಿಸುವುದರಲ್ಲಿ ರಾಮಾಯಣದೊಡನೆ ಮಹತ್ತರ ಪಾತ್ರ ವಹಿಸಿದೆ.

ರಾಮಾಯಣಗಳಿಗೆ ಸಮಾನವಾಗಿ ಭಾರತಗಳನ್ನೂ ನಾವು ಸ್ಥೂಲವಾಗಿ ಮೂರು ವರ್ಗಗಳಲ್ಲಿ ಗುರುತಿಸಬಹುದು:

() ವ್ಯಾಸ ಭಾರತ: ಇಂದು ವ್ಯಾಸಭಾರತವೆಂದು ಗುರುತಿಸಲ್ಪಡುತ್ತಿರುವ ಮಹಾಕೃತಿ ರಾಮಾಯಣ – ಭಗವದ್ಗೀತೆಗಳು ಸೇರಿದಂತೆ ಅನೇಕ ಕಥೆ-ಉಪಕಥೆಗಳನ್ನೊಳಗೊಂಡ ಒಂದು ಮಹಾ ಸಾಗರದಂತಿದೆ. ಈ ಕಾರಣಕ್ಕಾಗಿಯೇ ‘ವ್ಯಾಸೋಚ್ಛಿಷ್ಟಮಿದಂ ಜಗತ್’ ಎಂಬ ಹೇಳಿಕೆ ಪ್ರಸಿದ್ಧವಾಗಿದೆ.

ಖ್ಯಾತ ಇತಿಹಾಸಜ್ಞೆ ರೋಮಿಲಾ ಥಾಪರ್ ಪ್ರಕಾರ ವ್ಯಾಸಭಾರತದಲ್ಲಿ ಎರಡು ಪ್ರಮುಖ ಹಾಗೂ ಸ್ಪಷ್ಟ ಸ್ತರಗಳಿವೆ: “ಒಂದು, ಮೌಖಿಕ ಚಾರಣರ ವಸ್ತುವನ್ನಾಧರಿಸಿ ಅನೇಕ ಕಥೆಗಳನ್ನೊಳಗೊಂಡ ಕಥನ ಸ್ತರ (Narrative Structure); ಎರಡನೆಯ ಸ್ತರವಾದರೋ ರಾಜಧರ್ಮ, ಮೋಕ್ಷಧರ್ಮ, ಮತ್ತು ಸಮಾಜದ ವಿವಿಧ ವರ್ಗಗಳ ವಿಹಿತ ಆಚಾರ-ವಿಚಾರಗಳ ವ್ಯಾಖ್ಯಾನಗಳನ್ನೊಳಗೊಂಡ ಉಪದೇಶಾತ್ಮಕ ಸ್ತರ (Didactic Structure.) ಎರಡನೆಯ ಉಪದೇಶಾತ್ಮಕ ಸ್ತರವು ಧರ್ಮಶಾಸ್ತ್ರ ವಾಙ್ಮಯ ವನ್ನಾಧರಿಸಿದ್ದು, ಎಷ್ಟೋ ಕಾಲದನಂತರ ಮೂಲ ಮಹಾಕಾವ್ಯಕ್ಕೆ ಸೇರಿಸಲ್ಪಟ್ಟಿತು.”[3]

() ವ್ಯಾಸಭಾರತದ ರೂಪಾಂತರಗಳು:

ಕಾಲಕಾಲಕ್ಕೆ ಬದಲಾದ ಧಾರ್ಮಿಕ ದೃಷ್ಟಿಕೋನ ಹಾಗೂ ವಿಶ್ವದೃಷ್ಟಿಗಳನ್ನಾಧರಿಸಿ ಭಾರತದ ಪ್ರಾಂತೀಯ ಭಾಷೆಗಳಲ್ಲಿ ಬರೆಯಲ್ಪಟ್ಟ ಭಾರತಗಳು/ಭಾರತದ ಭಾಗಗಳು: ಕನ್ನಡದಲ್ಲಿ, ಪಂಪನ ವಿಕ್ರಮಾರ್ಜುನ ವಿಜಯ, ರನ್ನನ ಸಾಹಸ ಭೀಮ ವಿಜಯ, ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ; ತಮಿಳಿನ ವಿಲ್ಲಿಭಾರತ, ನನ್ನಯ್ಯನ ಆಂಧ್ರ ಭಾರತ, ಇತ್ಯಾದಿ.

ವ್ಯಾಸಭಾರತದನಂತರ ಬಂದ ಭಾರತ-ಕಥನಗಳಲ್ಲಿ ಎರಡು ಪ್ರಮುಖ ಪರಂಪರೆಗಳನ್ನು ಗುರುತಿಸಬಹುದು: ಭಾಗವತ ಭಾರತ ಪರಂಪರೆ ಮತ್ತು ಜೈನ ಭಾರತ ಪರಂಪರೆ. ಭಾಗವತ ಪರಂಪರೆಯ ಭಾರತಗಳು (ಕುಮಾರವ್ಯಾಸ ಭಾರತದಂತೆ) ಸ್ಥೂಲವಾಗಿ ವ್ಯಾಸಭಾರತವನ್ನೇ ಅನುಸರಿಸಿದರೂ ಅವುಗಳು ಕೃಷ್ಣ ಕೇಂದ್ರಿತವಾಗಿದ್ದು, ಕೃಷ್ಣಭಕ್ತಿಯನ್ನು ಪ್ರಚುರಗೊಳಿಸುತ್ತವೆ. ಜೈನ ಭಾರತಗಳ ವಿಶಿಷ್ಟ ಲಕ್ಷಣಗಳನ್ನು ಹಂ. ಪ. ನಾಗರಾಜಯ್ಯನವರು ಹೀಗೆ ಗುರುತಿಸುತ್ತಾರೆ; (೧) ದ್ರೌಪದಿ ಅರ್ಜುನನಿಗೆ ಮಾತ್ರ ಪತ್ನಿಯಾಗಿದ್ದಳು; (೨) ದುರ್ಯೋಧನ ಚಕ್ರವರ್ತಿಯಲ್ಲ, ಒಬ್ಬ ಸಾಮಂತ ರಾಜ; ಜರಾಸಂಧ ದೊಡ್ಡ ಚಕ್ರವರ್ತಿ; (೩) ಕರ್ಣನೂ ಸೇರಿದಂತೆ ಎಲ್ಲಾ ಪಾಂಡವರೂ ಕುಂತಿ-ಪಾಂಡುವಿನ ದೇಹಸಂಬಂಧದಿಂದ ಜನಿಸಿದರೇ ಹೊರತು ಯಾವುದೇ ದಿವ್ಯ ಮಂತ್ರ ಪ್ರಯೋಗದಿಂದಲ್ಲ; (೪) ಕರ್ಣ ತನ್ನ ಮಗನೆಂಬ ಸಂಗತಿಯನ್ನು ಕುಂತಿ ಮುನಿಯೊಬ್ಬನಿಂದ ಅರಿತಳು; (೫) ಕರ್ಣ ಯುದ್ಧಭೂಮಿಯಲ್ಲಿ ಸಾಯುವುದಿಲ್ಲ, ಸುದರ್ಶನವೆಂಬ ವನಕ್ಕೆ ಹೋಗಿ ಅಲ್ಲಿಜೈನ ಯತಿಯಿಂದ ದೀಕ್ಷೆ ಪಡೆಯುತ್ತಾನೆ; (೬) ಶ್ರೀಕೃಷ್ಣನು ವಾಸುದೇವ (ನಾರಾಯಣ), ಜರಾಸಂಧನು ಪ್ರತಿ ವಾಸುದೇವ (ಪ್ರತಿನಾರಾಯಣ); ನಾರಾಯಣನಿಂದ ಪ್ರತಿನಾರಾಯಣ ನೇರವಾಗಿ ಕೊಲ್ಲಲ್ಪಡುತ್ತಾನೆ; (೭) ದ್ರೌಪದಿಯ ವಸ್ತ್ರಾಪಹರಣ ಸನ್ನಿವೇಶ ಇಲ್ಲ; ಧರ್ಮರಾಯನು ದ್ರೌಪದಿಯನ್ನು ದ್ಯೂತದಲ್ಲಿ ಪಣವಾಗಿ ಒಡ್ಡುವುದಿಲ್ಲ; (೮) ಕೀಚಕ-ಸೈರಂದ್ರೀ ಪ್ರಕರಣ ಇಲ್ಲ.[4]

() ಮೌಖಿಕ ಭಾರತಗಳು: ಭಿಲ್ಲ ಭಾರತ, ಜನಪದ ಮಹಾಭಾರತ, ಇತ್ಯಾದಿ.

ಲಿಖಿತ ಮತ್ತು ಮೌಖಿಕ ಭಾರತಗಳ ನಡುವೆ ಸತತವಾಗಿ ಕೊಡು-ಕೊಳ್ಳುವಿಕೆ ನಡೆದಿದೆಯೆಂಬುದು ಸರ್ವವಿದಿತ. ಆದರೂ, ಇವುಗಳ ನಡುವೆ ಇರುವ ಪ್ರಮುಖ ಭಿನ್ನತೆಗಳು ಆಯಾಯಾ ಸಮುದಾಯಗಳ ಭಿನ್ನ ಮೌಲ್ಯಗಳನ್ನು ಹಾಗೂ ಭಿನ್ನ ವಿಶ್ವದೃಷ್ಟಿಯನ್ನೂ ಅರ್ಥಪೂರ್ಣವಾಗಿ ದಾಖಲಿಸುತ್ತವೆ.

ಪ್ರಾರಂಭದಲ್ಲಿ, ತಮ್ಮ ಸ್ವರೂಪದಿಂದಾಗಿಯೇ, ಎಂದರೆ ಮೌಖಿಕ ಸಂವಹನದ ಕಾರಣದಿಂದಾಗಿಯೇ, ಮೌಖಿಕ ಭಾರತಗಳಲ್ಲಿ ಬರುವ ಕೆಲವು ಸಾಮಾನ್ಯ ಭಿನ್ನತೆಗಳನ್ನು ಗಮನಿಸಿ ಮುಂದುವರೆಯಬಹುದು.

() ಆಚರಣಾತ್ಮಕ ಆಯಾಮ: ಹೆಚ್ಚಿನ ಮೌಖಿಕ ಮಹಾಕಾವ್ಯಗಳಿಗೆ/ ದೀರ್ಘ ಕಥನಗಳಿಗೆ ಅವುಗಳು ಜನ್ಮಿಸುವ ಸಮುದಾಯಗಳಲ್ಲಿ ಒಂದು ವಿಶಿಷ್ಟ ಧಾರ್ಮಿಕ ಆಯಾಮವಿರುತ್ತದೆ. ಆ ಕಾರಣದಿಂದ, ಆ ಸಮುದಾಯಗಳ ಹೊರಗಿನವರಿಗೆ ಅಪ್ರಸ್ತುತವೆಂದು ತೋರುವ ಅನೇಕ ಘಟನೆಗಳು ಹಾಗೂ ವಿವರಗಳು ಈ ಕಾವ್ಯಗಳಲ್ಲಿರುತ್ತವೆ. ಉದಾಹಣೆಗೆ, ಭಿಲ್ಲ ಭಾರತದಲ್ಲಿ ಬರುವ ಸುದೀರ್ಘ “ಪಾಂಡವೋಂಕಾ ಸೆನೆತರಾ ಯಜ್ಞ”ದಂತಹ ಭಾಗಗಳು. ಈ ಭಾಗದಲ್ಲಿ ಪಾಂಡು ಮಹಾರಾಜನಿಗೆ ಸದ್ಗತಿ ನೀಡಲು ಪಾಂಡವರು ಮಾಡುವ ‘ಶಂಖೋದ್ಧಾರ’ ಯಜ್ಞದ ವಿವರಗಳಿಗೆ. ಈ ಭಾಗದ ಒಂದು ಪ್ರಮುಖ ಆಶಯವೆಂದರೆ ‘ಗುರುವಿನಮಹತ್ವ’ ಪಾಂಡು ಸತ್ತಾಗ ಮಾಡಿದ ಕ್ರಿಯೆಗೆ ಹರಗುರಾ ಎಂಬ ದ್ರೌಪದಿಯ ಗುರುವನ್ನು ಆಮಂತ್ರಿಸಿರಲ್ಲಿ; ಆದ್ದರಿಂದ ಆ ಯಜ್ಞವು ಸಫಲವಾಗಲಿಲ್ಲ. ಮತ್ತೆ ಮಾಡುವ ಕ್ರಿಯೆಗೆ ಹರಗುರಾ ಮತ್ತು ಇತರ ಗುರುಗಳನ್ನು ಆಹ್ವಾನಿಸುತ್ತಾರೆ; ಮತ್ತು ಅವರ ಆದೇಶದ ಪ್ರಕಾರ ‘ಕನ್ನೆ ಚಿನ್ನ,’ ‘ಹೊಸ ಮಣ್ಣು,’ ‘ಕನ್ನೆ ನೀರು,’ ಮತ್ತು ‘ಹೆಂಡತಿಯಿಂದ ಮಾರಲ್ಪಟ್ಟ ಗಂಡ’-ಇವುಗಳನ್ನು ಪಾಂಡವರು ತರಲು ಹರ ಸಾಹಸ ಪಡುತ್ತಾರೆ.

ಭಿಲ್ಲರ ಮರಣೋತ್ತರ ಕ್ರಿಯೆಗಳ ಸಂದರ್ಭದಲ್ಲಿ ಈ ಭಾಗವು ಹಾಡಲ್ಪಡುತ್ತದೆ ಎಂಬುದನ್ನು ನಾವು ಗಮನಿಸಿದರೆ, ಭಾರತ-ಕಥೆಗೆ ಸಂಬಂಧಿಸಿದ ಅನೇಕ ಘಟನೆ-ವಿವರಗಳು ಮೌಖಿಕ ಭಾರತಗಳಲ್ಲಿ ಏಕೆ ಸ್ಥಾನ ಪಡೆಯುತ್ತವೆಂಬುದು ಸ್ಪಷ್ಟವಾಗುತ್ತದೆ.

() ಮೌಖಿಕತೆಯ ಆಯಾಮ: ಇತರ ಮೌಖಿಕ ಕಥನಗಳಲ್ಲಿರುವಂತೆ ಮೌಖಿಕ ಭಾರತ-ಕಥನಗಳಲ್ಲಿಯೂ ಅನೇಕ ಕಥೆ-ಉಪಕಥೆಗಳಿರುತ್ತವೆ. ನಿದರ್ಶನಾರ್ಥಕವಾಗಿ: “ಧರಮಾಬಾಯಿ” ಮತ್ತು “ರಾಧಾ-ಕೃಷ್ಣ” ಪ್ರಸಂಗಗಳು (ಭಿಲ್ಲ ಭಾರತ); “ಕಮಂಡಲು ಹೂವು,” ಜನ್ನ ಚತ್ತರಿ ಹೂವು” ಮುಂತಾದ ಪ್ರಸಂಗಗಳು (ಜನಪದ ಮಹಾಭಾರತ ಕಥೆಗಳು); “ಚಿನ್ಮಥನ ಕಥೆ,” “ಮಾರ್ಕಂಡೇಯ ಪುರಾಣ,” “ನಾಯಿ ಕುಲಕ್ಕೆ ಭೀಮನ ಶಾಪ,” “ನಿಜವಾದ ತಾಯಿಯ ಪರೀಕ್ಷೆ,” ಇತ್ಯಾದಿ.

ಗಾಯಕರು ದೀರ್ಘಕಾಲದವರೆಗೆ ಹಾಡುವ ಸಂದರ್ಭಗಳಲ್ಲಿ ಕೇಳುಗರ ಆಸಕ್ತಿ-ಕುತೂಲಹಗಳನ್ನು ಉಳಿಸಿಕೊಂಡು ಅವರನ್ನು ರಂಜಿಸಲು ಅನೇಕ ಕಥನ ತಂತ್ರಗಳನ್ನಾಧರಿಸುತ್ತಾರೆ; ಅವುಗಳಲ್ಲಿ ರೋಚಕ/ಹಾಸ್ಯಪ್ರಧಾನ ಉಪಕಥೆಗಳ ಉಪಯೋಗವೂ ಒಂದು. ಆದ್ದರಿಂದ, ಲಿಖಿತ ವಾಙ್ಮಯಕ್ಕೆ ಉಪಯೋಗಿಸುವ ವಿಮರ್ಶಾ ಮಾನ ದಂಡಗಳು ಮೌಖಿಕ ವಾಙ್ಮಯದ ಸಂದರ್ಭದಲ್ಲಿ ಅಪ್ರಸ್ತುತವಾಗುತ್ತವೆ. ಗಾಯಕ-ಶ್ರೋತೃಗಳ ನಡುವೆ ಇರುವ ಗತಿ-ತಾರ್ತಿಕ ಸಂಬಂಧ ಲೇಖಕ-ಓದುಗರ ಸಂಬಂಧಕ್ಕಿಂತಾ ಬೇರೆಯೇ ಆದುದು.

ಅದೇ ನೆಲೆಯಲ್ಲಿ, ಪ್ರದರ್ಶನ ಸಂದರ್ಭಗಳಲ್ಲಿ ಮುಖ್ಯ ಗಾಯಕನೊಡನೆ ಸಹಾಯಕ ಗಾಯಕರೂ ಇರುತ್ತಾರೆ (ಹುಂಕಾರಚಿ/ ರಾಗಿಯಾ / ಹಿಮ್ಮೇಳ…). ಇವರುಗಳು ಉತ್ಸಾಹಪೂರ್ಣವಾಗಿ ಪ್ರದರ್ಶನದಲ್ಲಿ ಸ್ಪಂದಿಸದಿದ್ದರೆ ಯಾವ ಕಥನವೂ ಯಶಸ್ವಿಯಾಗುವುದಿಲ್ಲ. ಪರಿಣಾಮತಃ, ಅನೇಕ ಕಥನಗಳಲ್ಲಿ ಸಹಾಯಕ ಗಾಯಕರನ್ನು ಉತ್ತೇಜಿಸುವುದಕ್ಕಾಗಿಯೇ ನೇರ ಕಥೆಗೆ ಸಂಬಂಧವಿಲ್ಲದ ಕೆಲವು ಪ್ರಸಂಗಗಳು ಬರುತ್ತವೆ; ಉದಾ.: ಭಿಲ್ಲ ಭಾರತದ “ಭಕ್ತಿಕಾ ಪ್ರಾಕಟ್ಯ” ಇತ್ಯಾದಿ ಪ್ರಸಂಗಗಳು.

() ಸ್ಥಳೀಯ ಆಯಾಮ: ಈ ಅಧ್ಯಾಯದ ಮೊದಲ ಭಾಗದಲ್ಲಿ ಚರ್ಚಿಸಿದಂತೆ, ಪ್ರತಿಯೊಂದು ಭಾರತ-ಕಥನವೂ ಅದನ್ನು ಪ್ರಸ್ತುತ ಪಡಿಸುವವರ-ಕೇಳುಗ ಸಮುದಾಯದ ಪರಿಚಿತ ವಿಶ್ವದಲ್ಲಿಯೇ ಜನ್ಮತಾಳುತ್ತದೆ; ಅವರ ನಂಬಿಕೆ-ಆಚರಣೆಗಳು ಮತ್ತು ಸ್ಥಳೈತಿಹ್ಯಗಳು ಕೃತಿಯಲ್ಲಿ ಸ್ಥಾನ ಪಡೆದಿರುತ್ತವೆ.

(೧) ರಾಷ್ಟ್ರೀಯ ಕಥನವೊಂದನ್ನು ಸ್ಥಳೀಯವಾಗಿಸುವ ಪ್ರಕ್ರಿಯೆಯಲ್ಲಿರುವ ಒಂದು ಸರಳ ಮಾರ್ಗವೆಂದರೆ ಭಾರತಾದ್ಯಂತ ಹರಡಿರುವ ವಿವಿಧ ಜನಾಂಗ-ಸಮುದಾಯಗಳು ತಮ್ಮ ತಮ್ಮ ಪ್ರಾಂತ್ಯದೊಡನೆ ಆ ರಾಷ್ಟ್ರೀಯ ಕಥನದ ಘಟನೆ-ಪಾತ್ರಗಳಿಗೆ ಸಂಬಂಧ ಕಲ್ಪಿಸುವುದು.

ಹಿಮಾಲಯ ಪ್ರದೇಶದಲ್ಲಿ ಮಹಾಭಾರತದ ಅನೇಕ ಪಾತ್ರಗಳು ದೈವತ್ವಕ್ಕೇರಿಸಲ್ಪಟ್ಟು ಇಂದಿಗೂ ಪೂಜಿಸಲ್ಪಡುತ್ತಿದ್ದಾರೆ. ಕಾರಣ, ತಮ್ಮ ಭೂಭಾಗದೊಡನೆ ಆ ಪಾತ್ರಗಳಿಗೆ ವಿಶೇಷ ಸಂಬಂಧವಿದ್ದಿತೆಂದು ಅವರು ನಂಬುತ್ತಾರೆ: ಹಿಮಾಲಯ ಪ್ರದೇಶಕ್ಕೆ ಸೇರಿದ ದೇವತೆಯೆಂದು ನಂಬಲಾಗುವ ಹಿಡಿಂಬೆ ಅಲ್ಲಿಯ ಮಹಾಭಾರತ ಕಥೆಗಳಲ್ಲಿ ಭೀಮನ ಪತ್ನಿಯಾಗಿ ಮುಖ್ಯ ಪಾತ್ರ ವಹಿಸುತ್ತಾಳೆ; ಮತ್ತು ಆ ಪ್ರದೇಶದಲ್ಲಿ ಇಂದಿಗೂ ಬಹುಪತಿತ್ವ ಜಾರಿಯಲ್ಲಿದೆ.[5]

ಭಾರತದ ಬುಡಕಟ್ಟು ಜನಾಂಗಗಳಿಗೆ ಮಹಾಭಾರತದ ಇತರ ಪಾತ್ರಗಳಿಗಿಂತ ಭೀಮ ಅತಿ ಜನಪ್ರಿಯ ನಾಯಕ. ಭೀಮ ಬುಡಕಟ್ಟು ಜನಾಂಗಗಳಿಗೆ ದೈವವಾದವನು; ಅವರಿಗೆ ಸಾರಾಯಿ ತಯಾರಿಕೆ, ಕೃಷಿ, ಭತ್ತ, ಕಬ್ಬಿಣದ ಆಯುಧಗಳು ಇವೆಲ್ಲವನ್ನೂ ಪರಿಚಯಿಸಿದವನೆಂದು ಅವರು ನಂಬುತ್ತಾರೆ.[6] ಛತ್ತೀಸ್‌ಗಢ್‌ ಪ್ರಾಂತ್ಯದಲ್ಲಿ ಪ್ರಧಾನರು ಹಾಡುವ ಪಾಂಡುವಾನಿ ಕಾವ್ಯದಲ್ಲಿ ಭೀಮನೇ ನಾಯಕ.[7] (ಈ ಸಂದರ್ಭದಲ್ಲಿ ಕನ್ನಡದ ರನ್ನನ ಸಾಹಸ ಭೀಮವಿಜಯ ನೆನಪಿಗೆ ಬರುತ್ತದೆ.

ಪ್ರೊ. ಕೊಸಾಂಬಿಯವರು ಮಹಾಭಾರತವು ಮೂಲತಃ ನಾಗಾ ಜನಾಂಗ ಕಥೆ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದರು. ಅವರ ಅಭಿಪ್ರಾಯದಲ್ಲಿ, ಪರೀಕ್ಷಿತನನ್ನು ತಕ್ಷಕನು ಕಚ್ಚಿ ಸಾಯಿಸುವುದರಿಂದ ಮಹಾಭಾರತದ ಕಥೆ ಪ್ರಾರಂಭವಾಗಿ, ಜನಮೇಜನಯನ ಸರ್ಪಯಾಗದಿಂದ ಮುಗಿಯುತ್ತದೆ; ಮತ್ತು ಅರ್ಜುನ-ಚಿತ್ರಾಂಗದೆ ಪ್ರಕರಣ ಮಹಾಭಾರತ ಕಥೆಯ ಕೇಂದ್ರ.[8] ಹಾಗೆಯೇ, ತಮ್ಮ ಅಜ್ಞಾತವಾಸದ ಕಾಲದಲ್ಲಿ ಪಾಂಡವರು ತಮ್ಮ (ಎಂದರೆ ಜಮ್ಮು) ಪ್ರಾಂತ್ಯದಲ್ಲಿದ್ದರೆಂದು ಆ ಪ್ರಾಂತ್ಯದ ದುಗ್ಗರ್ದೇಶ್ ಎಂಬ ಮೌಖಿಕ ಭಾರತ ಚಿತ್ರಿಸುತ್ತದೆ.[9]

ಆಂಧ್ರದ ಪಾಂಡವಲು ಎಂಬ ಕುಲದವರಿಂದ ಹಾಡಲ್ಪಡುವ ತೆಲುಗು ಭಾಷೆಯ ಪಾಂಡವ ವನವಾಸಂ ಎಂಬ ಕಾವ್ಯ ಅದೇ ಕುಲದ ಜಂಪಣ್ಣ-ದುಗ್ಗಣ್ಣ ಎಂಬುವವರು ಪರೋಕ್ಷವಾಗಿ ದ್ರೌಪದಿಯ ಸಾವಿಗೆ ಕಾರಣರಾಗಿ, ಪರಿಣಾಮತಃ ಧರ್ಮರಾಯನಿಂದ ಶಪಿತರಾಗುವ ಪ್ರಸಂಗವಿದೆ.[10]

(೨) ಸ್ಥಳೀಯವಾಗಿಸುವ ಪ್ರಕ್ರಿಯೆಯ ಮತ್ತೊಂದು ಮಾರ್ಗವೆಂದರೆ, ರಾಷ್ಟ್ರೀಯ ಹಾಗೂ ಸ್ಥಳೀಯ ನೆಲೆಯ ಸ್ತ್ರೀ-ಪುರುಷರ ನಡುವೆ ವೈವಾಹಿಕ ಸಂಬಂಧವನ್ನೇರ್ಪಡಿಸುವುದು. ಹಿಮಾಚಲ ಪ್ರದೇಶದ ದೇವಿ ಹಿಡಿಂಬೆಯನ್ನು ಭೀಮನು ಮದುವೆಯಾಗುತ್ತಾನೆ; ಒರಿಯಾ ಭಾಷೆಯ ಭಾರತವೊಂದರಲ್ಲಿ ಧರ್ಮರಾಯನು ಒರಿಯಾ ಸ್ತ್ರೀಯನ್ನು ಮದುವೆಯಾಗುತ್ತಾನೆ; ಬೋಡೋ ಭಾರತವೊಂದರಲ್ಲಿ ಕೃಷ್ಣನ ಪತ್ನಿ ರುಕ್ಮಿಣಿ ಬೋಡೋ ಜನಾಂಗಕ್ಕೆ ಸೇರಿದವಳು; ಇತ್ಯಾದಿ.[11]

ಇಲ್ಲಿ, ಕುತೂಹಲದ ಸಂಗತಿಯೆಂದರೆ, ಈ ಬಗೆಯ ಸ್ಥಳೀಯ ಪ್ರಕ್ರಿಯೆಯಲ್ಲಿ ಪುರುಷನು ರಾಷ್ಟ್ರೀಯ ನೆಲೆಯ ಪಾತ್ರವಾದರೆ ಸ್ತ್ರೀ ಸ್ಥಳೀಯಳಾಗಿರುತ್ತಾಳೆ. ಈ ಬಗೆಯ ಸಂಬಂಧಗಳೂ ಪುರುಷ ಕೇಂದ್ರಿತ ಚಿಂತನೆಯ ಪರಿಣಾಮಗಳೆಂದು ಕಾಣುತ್ತದೆ.

(೩) ಸ್ಥಳೀಯ ಆಯಾಮದ ಮತ್ತೊಂದು ಮುಖವೆಂದರೆ ಸ್ಥಳೀಯ ಸಂಸ್ಕೃತಿ ಮತ್ತು ಆಚರಣೆಗಳೊಡನೆ ಭಾರತಕಥೆಗೆ ಸಂಬಂಧವನ್ನು ಕಲ್ಪಿಸುವುದು.

ಕನ್ನಡ ಜನಪದ ಮಹಾಭಾರತದ ಒಂದು ಮುಖ್ಯ ಪದರ ಕೃಷಿಕ ಸಂಸ್ಕೃತಿಗೆ ಸಂಬಂಧಿಸಿದೆ. ಶಿಷ್ಟ ಭಾರತದಲ್ಲಿ ಕುಂತಿ ಕುಂತೀಭೋಜನೆಂಬ ರಾಜನ ಮಗಳಾದರೆಈ ಕಾವ್ಯದಲ್ಲಿ ಅವಳು ಭೂಮಿಯ ಮಗಳು. ಕಾವ್ಯವು ಅವಳನ್ನು ‘ಧಾನ್ಯಲಕ್ಷ್ಮಿ’ಯೆಂದು ಕರೆದು, ಹಳೆಯ ಮೈಸೂರು-ಕೊಡಗು ಪ್ರಾಂತ್ಯಗಳಲ್ಲಿ ಇಂದಿಗೂ ಪ್ರಚಲಿತವಿರುವ ‘ಕೊಂತೀ ಪೂಜೆ’ಯೊಡನೆ ಅವಳನ್ನು ಸಮೀಕರಿಸುತ್ತದೆ. ಅದೇ ನೆಲೆಯಲ್ಲಿ, ಕುಂತಿಯು ಗಜಗೌರಿ ವ್ರತವನ್ನು ಮಾಡುವಾಗ ಕುಬೇರನು ತಿಪ್ಪೆಯಿಂದ ರಾಗಿ, ಭತ್ತ, ನವಣೆ, ಇತ್ಯಾದಿ ಧಾನ್ಯಗಳನ್ನು ಆಯುವುದು; ಮುದ್ದೇಗೌಡನು ತನ್ನ ದರಕಾಸ್ತ್ ಭೂಮಿಯನ್ನು ಪದಗೊಳಿಸಲು ಭೀಮನನ್ನು ಕೂಲಿಗೆ ಕರೆಯುವುದು; ಈರುಳ್ಳಿಯ ಸೃಷ್ಟಿ; ಪಾಂಡವರು ಇನ್ನೂ ಇದ್ದಾರೆ ಎಂದು ಎಲ್ಲರಿಗೂ ಆಶ್ವಾಸನೆಯನ್ನು ಕೊಡಲು ‘ಅವರೆ’ಕಾಯಿಯನ್ನು ಸೃಷ್ಟಿಸಿದುದು; ಇತ್ಯಾದಿ ವಿವರಗಳು ಕಾವ್ಯಪ್ರಪಂಚವನ್ನು ಪ್ರವೇಶಿಸುತ್ತವೆ. ಕಾರಣವೇನೆಂದರೆ ಈ ಭಾರತ-ಕಥನದ ಹೆಚ್ಚಿನ ಶ್ರೋತೃಗಳು ಮತ್ತು ಗಾಯಕರು ಕೃಷಿಕರು.

ಇದೇ ಬಗೆಯ ಸ್ಥಳೀಯ ಒತ್ತಡಗಳನ್ನು ನಾವು ಇತರ ಮೌಖಿಕ ಮಹಾಭಾರತಗಳಲ್ಲಿಯೂ ಕಾಣುತ್ತೇವೆ. ಪಶ್ಚಿಮ ಒರಿಸ್ಸಾದ ‘ದಂಡನಟ’ ಎಂಬ ಆಚರಣಾತ್ಮಕ ಪ್ರದರ್ಶನದಲ್ಲಿ ಶಿವನನ್ನು ಕೃಷಿಕನೆಂದು ಮತ್ತು ಭೀಮನನ್ನು ಅವನ ಸಹಾಯಕನೆಂದು ಚಿತ್ರಿಸುತ್ತಾರೆ. ಈ ಪ್ರದರ್ಶನದ ಒಂದು ಸಂದರ್ಭದಲ್ಲಿ ಭೀಮನು ಬಸುಮತಿ, ಕಲಿಖುಜಿ, ಪುಅಗಿ, ಸಪೂರಿ, ಇತ್ಯಾದಿ ಹೆಸರುಗಳಿಂದ ಆ ಗ್ರಾಮದ ತರುಣಿಯರನ್ನು ಕೂಗುತ್ತಾನೆ ಮತ್ತು ಅವರೆಲ್ಲಾ ಅಲ್ಲಿ ಬಂದು ಸೇರುತ್ತಾರೆ. ಈ ಸಂದರ್ಭದ ವಿಶೇಷ ವೆಂದರೆ, ಇವೆಲ್ಲವೂ ಭತ್ತದ ಸ್ಥಳೀಯ ತಳಿಗಳು. ಎಂದರೆ, ಇಲ್ಲಿ ಗಾಯಕನು ಸ್ತ್ರೀಯರನ್ನು ಮತ್ತು ಆಹಾರಧಾನ್ಯಗಳನ್ನು ಸಮೀಕರಿಸುತ್ತಾನೆ; ಏಕೆಂದರೆ, ಇದನ್ನು ದಾಖಲಿಸಿರುವ ಮಿಶ್ರಾ ಹೇಳುವಂತೆ, ಸ್ತ್ರೀ ಮತ್ತು ಧಾನ್ಯ ಇಬ್ಬರೂ ಸೃಷ್ಟಿಶಕ್ತಿಯನ್ನುಳ್ಳವರು.[12]

ಹಿಮಾಚಲ ಪ್ರದೇಶದಲ್ಲಿ ‘ಹರಿಜನ’ರು ಪ್ರಸ್ತುತ ಪಡಿಸುವ ಒಂದು ಭಾರತ-ಪಠ್ಯದಲ್ಲಿ ಬರುವ ಲಾಕ್ಷಾಗೃಹ ಹೀಗಿದೆ: ಪಾಂಡವರು ಗಿರಿಶಿಖರಗಳ ಮೇಲೆ ಮತ್ತು ಕೌರವರು ಅವುಗಳ ಬುಡದಲ್ಲಿ ವಾಸಿಸುತ್ತಿರುತ್ತಾರೆ. ಪಾಂಡವರು ಕೆಳಗೆ ಬರುವ ದಾರಿಯಲ್ಲಿ, ಒಂದು ಸಲ, ಅವರನ್ನು ಕೊಲ್ಲುವ ಉದ್ದೇಶದಿಂದ ಕೌರವರು ಒಂದು ಸಗಣಿಯ ಮನೆಯನ್ನು ನಿರ್ಮಿಸಿ, ಪಾಂಡವರು ಅದನ್ನು ಹೊಕ್ಕೊಡನೆ ಅದಕ್ಕೆ ಬೆಂಕಿ ಹಚ್ಚುತ್ತಾರೆ. ಆದರೆ, ಅಲ್ಲಿಯೇ ಇದ್ದ ಒಂದು ಸುರಂಗದ ಮಾರ್ಗವಾಗಿ ಪಾಂಡವರು ಪಾರಾಗುತ್ತಾರೆ. ಈ ಪಠ್ಯವನ್ನು ಹಾಡುವ ಅಶಿಕ್ಷಿತ ಗ್ರಾಮೀಣ ಗಾಯಕರಿಗೆ ‘ಲಾಕ್ಷಾಗೃಹ’ದ ಕಲ್ಪನೆಯಿಲ್ಲ; ಅವರಿಗೆ ಗೊತ್ತಿರುವುದು ಸಗಣಿ ಅಥವಾ ಮಣ್ಣಿನಿಂದ ಕಟ್ಟಲ್ಪಡುವ ಮನೆಗಳು. ಪರಿಣಾಮತಃ, ಅವರು ಮಹಾಭಾರತದ ‘ಲಾಕ್ಷಾಗೃಹ’ ಘಟನೆಯನ್ನು ತಮ್ಮ ಬದುಕಿಗೆ ಪರಿಚಿತವಾಗಿರುವ ಭಾಷೆಯಲ್ಲಿಯೇ ಪುನಃ ಸೃಷ್ಟಿಸುತ್ತಾರೆ.[13]

ಇದೇ ನೆಲೆಯಲ್ಲಿ, ಸ್ಥಳೀಯವಾದ ಕರ್ನಾಟಕದ ‘ಕರಗ’ ಕಥೆ ದ್ರೌಪದಿಯ ಮೂಲಕ ಸಿದ್ಧಶೆಟ್ಟಿಯವರು ಹಾಡಿರುವ ಮಹಾಭಾರತದಲ್ಲಿ ಬರುತ್ತದೆ; ಮತ್ತು ಸ್ಥಳೀಯ ಜನಸಾಮಾನ್ಯರ ನಂಬಿಕೆಯಾದ ‘ಮಲಯಾಳೀ ಮಂತ್ರವಾದ’ ಕಾವ್ಯದಲ್ಲಿ ಸ್ಥಾನ ಪಡೆಯುತ್ತದೆ. (ಅಜ್ಞಾತವಾಸದ ಕಾಲದಲ್ಲಿ ಪಾಂಡವರನ್ನು ಕೊಲ್ಲಲು ದುರ್ಯೋಧನನು ಕೊನುಗಯ್ಯ ಎಂಬ ಮಲಯಾಳಿ ಮಂತ್ರವಾದಿಯನ್ನು ಕಳಿಸುತ್ತಾನೆ.) ಕರ್ನಾಟಕ ರಾಜ್ಯ ನೆಲಮಂಗಲ, ಪಾಂಡವಪುರ, ಇತ್ಯಾದಿ ಊರುಗಳು ಪಾಂಡವರಡೊನೆ ಸೇರಿಹೋಗುತ್ತವೆ. ಮತ್ತೆ, ಅಚಾರಿತ್ರಿಕತೆಯ ಎಳ್ಳಷ್ಟೂ ಭೀತಿಯಿಲ್ಲದೆ, ಗಾಯಕರು ಆಧುನಿಕ ಕರ್ನಾಟಕ ವಿಶ್ವೇಶ್ವರಯ್ಯನವರ ಹೆಸರನ್ನು ಕಾವ್ಯದಲ್ಲಿ ತರುತ್ತಾರೆ; ಅರ್ಜುನನು ಮುಸಲ್ಮಾನರ ಬೀದಿಗಳಲ್ಲಿ ಸಂಚರಿಸುತ್ತಾನೆ; ಮಹಾಭಾರತದ ಪಾತ್ರಗಳು ಇಂಗ್ಲಿಷ್ ಶಬ್ದಗಳನ್ನು ಉಪಯೋಗಿಸುತ್ತಾರೆ. ಈ ವಿವರಗಳು ‘ಮೌಖಿಕ ಪಠ್ಯಗಳ ಆಂತರಿಕ ತರ್ಕವೇ ಬೇರೆ’ ಎಂಬುದನ್ನು ದೃಢ ಪಡಿಸುತ್ತವೆ.

ಸಾಂಸ್ಕೃತಿಕ ಆಕೃತಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ, ಒಂದು ಭಾಷೆ ಯಿಂದ ಮತ್ತೊಂದು ಭಾಷೆಗೆ ಪ್ರವೆಶಿಸುವಾಗ ಅವುಗಳ ಮುಖ್ಯ ತಿರುಳನ್ನು ಉಳಿಸಿಕೊಂಡೂ ಹೊಸ ಹುಟ್ಟನ್ನು ಪಡೆಯುತ್ತವೆ; ಸ್ಥಳೀಯ ಹೊರಮೈಯನ್ನು ಬೆಳೆಸಿಕೊಳ್ಳುತ್ತವೆ.

ಇಂತಹ ಮೌಖಿಕ ಕಥನಗಳಿಗೆ ವಿಶಿಷ್ಟವಾದ ಹೊರಮೈಯನ್ನು ಹೊರತುಪಡಿಸಿದರೂ ಶಿಷ್ಟ ಮತ್ತು ಜಾನಪದ ಕಥನಗಳಲ್ಲಿ ಅರ್ಥಪೂರ್ಣ ಭಿನ್ನತೆಗಳು ಕಾಣುತ್ತವೆ-ಅವುಗಳ ಭಿನ್ನ ವೈಚಾರಿಕತೆಯ ಕಾರಣದಿಂದಾಗಿ. ಈಗ ಈ ಬಗೆಯ ಭಿನ್ನತೆಗಳನ್ನು ಪರಿಗಣಿಸಬಹುದು.

ನಾನು ಅಧ್ಯಯನಕ್ಕಾಗಿ ಆರಿಸಿಕೊಂಡಿರುವ ಮೌಖಿಕ ಭಾರತಗಳು ಸಾಕಷ್ಟು ಭಿನ್ನವಾಗಿರುವ ಸಮುದಾಯಗಳಲ್ಲಿ ಜನ್ಮಿಸಿವೆ. ಈ ಸಮುದಾಯಗಳ ನಡುವೆ ಭಾಷಿಕ ಭಿನ್ನತೆ ಮತ್ತು ಭೌಗೋಳಿಕ ಸಾಧ್ಯತೆಗಳು ಅಸಾಧ್ಯವೆಂದೇ ಹೇಳಬಹುದು. ಹಾಗಿದ್ದರೂ, ಈ ಭಾರತ-ಕಥನಗಳ ನಡುವೆ ಚಕಿತಗೊಳಿಸುವಷ್ಟು ಸಮಾನ ಅಂಶಗಳಿವೆ. ಇವುಗಳನ್ನು ಅರ್ಥೈಸುವ ಬಗೆ ಹೇಗೆ?

ಉದಾಹರಣೆಗೆ:

() ಸೋದರಮಾವಸೋದರ ಅಳಿಯ ವೈಷಮ್ಯ:

ಈ ಲೇಖನದಲ್ಲಿ ನಾನು ಪರಿಗಣಿಸಿರುವ ನಾಲ್ಕು ಭಾರತಗಳಲ್ಲಿಯೂ ಕೃಷ್ಣ ಮತ್ತು ಅವನ ಸೋದರಳಿಯ ಅಭಿಮನ್ಯ ಇವರ ನಡುವೆ ವೈಷಮ್ಯವಿದೆ.

ಭಿಲ್ಲ ಭಾರತದಲ್ಲಿ ಅರ್ಜುನನೊಡನೆ ಮದುವೆಯಾದನಂತರ ಸುಭದ್ರೆಯ ಗರ್ಭವನ್ನು ಈಕೋ ದಾನವನು ಪ್ರವೇಶಿಸುತ್ತಾನೆ; ಮತ್ತು ಮುಂದೆ ಅವನೇ ಅಭಿಮನ್ಯವಾಗಿ ಜನಿಸುತ್ತಾನೆ; ಅವನು ಜನ್ಮತಾಳುವ ಮೊದಲೇ ಅವನನ್ನು ಸಂಹರಿಸಲು ಕೃಷ್ಣ ಪ್ರಯತ್ನಿಸುತ್ತಾನೆ. ಅಭಿಮನ್ಯ ಯುದ್ಧಕ್ಕೆ ಹೊರಡುವಾಗ ಉತ್ತರೆಯೊಡನೆ ಅವನ ನಿಷೇಕವಾಗಿಲ್ಲದುದರಿಂದ ಕೂಡಲೇ ಹೊರಟು ಬರಲು ಸುಭದ್ರೆಗೆ ಪಾಂಡವರು ಸಂದೇಶ ಕಳಿಸುತ್ತಾರೆ. ಆದರೆ, ಉದ್ದೇಶಪೂರ್ವಕವಾಗಿ ಕೃಷ್ಣನು ಅವಳ ದಾರಿಯಲ್ಲಿ ಅಡೆತಡೆಗಳನ್ನುಂಟುಮಾಡಿ ಅವಳು ಬರುವ ಹೊತ್ತಿಗೆ ಅಭಿಮನ್ಯ ಯುದ್ಧಕ್ಕೆ ಹೊರಟಾಗಿರುವಂತೆ ನೋಡಿಕೊಳ್ಳುತ್ತಾನೆ. ಯುದ್ಧದಲ್ಲಿ ಅಭಿಮನ್ಯ ಸಾಯುವಂತೆಯೂ ಅವನು ತಂತ್ರ ಹೂಡುತ್ತಾನೆ. ಆಶ್ಚರ್ಯವೆಂದರೆ, ಕನ್ನಡದಲ್ಲಿ ಗಾಮೊಕ್ಕಲ ಜನಾಂಗದವರು ಹಾಡಿರುವ ಗಾಮೊಕ್ಕಲ ಮಹಾಭಾರತದಲ್ಲಿಯೂ ಸರಿ ಸುಮಾರು ಇದೇ ಬಗೆಯ ಕೃಷ್ಣ-ಅಭಿಮನ್ಯ ಕಥೆಯಿದೆ.

ಕರಾಕೃ ಸಂಪಾದಿಸಿರುವ ಜನಪದ ಗೀತೆಗಳಲ್ಲಿ ಮಹಾಭಾರತದಲ್ಲಿ ಗರ್ಭಿಣಿ ಸುಭದ್ರೆ ತನಗಿಷ್ಟವಿಲ್ಲದಿದ್ದರೂ ಅಣ್ಣನ ಬಲವಂತಕ್ಕೆ ತೌರಿಗೆ ಹೋಗುತ್ತಾಳೆ. ಇನ್ನೂ ಅವಳು ಮಗುವಿಗೆ ಜನ್ಮ ಕೊಡುವ ಮೊದಲೆ “ಈ ಶಿಶುವ ಹುಟ್ಟುತಲೆ ಗೊಣ ಮುರಿಯಬೇಕು” ಎಂದು ಕೃಷ್ಣ ನಿರ್ಧರಿಸುತ್ತಾನೆ. ಜನಪದ ಭಾರತ ಕಥೆಗಳು ಸಂಕಲನದಲ್ಲಿ ಸುಭದ್ರೆ ಗರ್ಭಿಣಿಯಾದಾಗ ಅವಳ ಗರ್ಭದಲ್ಲಿರುವ ಶಿಶು ತನ್ನ ವೈರಿಯಾದ ರಾಕ್ಷಸ ಎಂಬುದು ಗೊತ್ತಾಗಿ ಅವನು ಜನ್ಮ ತಾಳುವ ಮೊದಲೆ ಅವನನ್ನು ಸಾಯಿಸಲು ಕೃಷ್ಣನು ಪ್ರಯತ್ನಿಸುತ್ತಾನೆ.

ಜನಪದ ಮಹಾಭಾರತದಲ್ಲಿ ಕೃಷ್ಣನಿಗೆ ಮೂವರು ಸೋದರಳಿಯಂದಿರು: ಅರ್ಜುನ-ಉಲೂಪಿ ಮಗ ನಾಗಾರ್ಜುನ; ಅರ್ಜುನ-ಸುಭದ್ರೆ ಮಗ ಅಭಿಮನ್ಯ; ಮತ್ತು ಭೀಮ-ಉರಿಸಿಂಗಿ ಮಗ ಭದ್ರಬಾಹು. ಈ ಮೂರು ಜನರೂ ಕುರುಕ್ಷೇತ್ರ ಯುದ್ಧ ವಿವಿಧ ಘಟ್ಟಗಳಲ್ಲಿ ಸಾವನ್ನಪುವಂತೆ ಕೃಷ್ಣನು ಉಪಾಯ ಮಾಡುತ್ತಾನೆ.

ಈ ಸಂದರ್ಭದಲ್ಲಿ ನಾವು ಮರೆಯಬಾರದ ಸಂಗತಿಯೆಂದರೆ ವ್ಯಾಸಭಾರತ-ಕುಮಾರವ್ಯಾಸ ಭಾರತಗಳು ಸೇರಿದಂತೆ ಯಾವ ಶಿಷ್ಟ ಭಾರತವೂ ಕೃಷ್ಣನ ಬಗೆಯ ದ್ವೇಷಾಸೂಯೆಗಳನ್ನು ದಾಖಲಿಸುವುದಿಲ್ಲ.

ಶಿಷ್ಟ ಹಾಗೂ ಮೌಖಿಕ ಭಾರತಗಳ ನಡುವೆ ಇರುವ ಈ ಭಿನ್ನತೆಯನ್ನು ಪ್ರಾಯಃ ಎರಡು ನೆಲೆಗಳಲ್ಲಿ ವ್ಯಾಖ್ಯಾನಿಸಬಹುದು; ಭಾಗವತ ಸಂಪ್ರದಾಯದ ಪ್ರಭಾವ ಮತ್ತು ಸಮಾಜಶಾಸ್ತ್ರೀಯ ಅಧ್ಯಯನ. ಒಂದು ಕಾಲಘಟ್ಟದಲ್ಲಿ, ಪ್ರಾಯಃ ಪುರಾಣಯುಗದಲ್ಲಿ, ಶಿಷ್ಟ ಭಾರತಗಳು ಭಾಗವತ ಪಂಥದಿಂದ ಪ್ರಭಾವಿಸಲ್ಪಟ್ಟುವು; ಮತ್ತು ಕೃಷ್ಣಭಕ್ತಿ ಎಲ್ಲವನ್ನೂ ಮೀರುವ ಮೌಲ್ಯವಾಯಿತು. ಕೃಷ್ಣನನ್ನು ಸರ್ವಶಕ್ತ-ಸರ್ವಜ್ಞ ಪರಮಾತ್ಮನೆಂದು ಒಪ್ಪಿಕೊಂಡನಂತರ ಗೀತಾಚಾರ್ಯನಾದ ಅವನಿಗೆ ಮಾನವ ಸಹಜ ದೌರ್ಬಲ್ಯಗಳನ್ನು ಆರೋಪಿಸುವುದು ಸಾಧ್ಯವೇ ಇರಲಿಲ್ಲ. ಆದ್ದರಿಂದ ಕೃಷ್ಣನಿಗೆ ಅವನ ಸೋದರಳಿಯರೊಂದಿಗೆ ಇದ್ದಿರಬಹುದಾದ ದ್ವೇಷಾಸೂಯೆಗಳನ್ನು ಶಿಷ್ಟ ಭಾರತಗಳು ಅಲಕ್ಷಿಸುತ್ತವೆ.

ಸಮಾಜಶಾಸ್ತ್ರೀಯ ನೆಲೆಯಲ್ಲಿ, ಶಿಷ್ಟ ವಾಙ್ಮಯಕ್ಕೆ ಆಧಾರವಾದ ಭಾರತೀಯ ಸಮಾಜ ಪಿತೃಮೂಲ (Patriarchal) ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಮೊದಲು ಪ್ರಾಯಃ ಭಾರತದುದಕ್ಕೂ ಮಾತೃಮೂಲೀಯ ವ್ಯವಸ್ಥೆಯಿದ್ದಿತು. (ಇಂದಿಗೂ, ತಾತ್ವಿಕ ನೆಲೆಯಲ್ಲಿ, ಕರ್ನಾಟಕದ ತುಳುವ ಸಮುದಾಯ, ಕೇರಳದ ನಾಯರ್ ಸಮುದಾಯ, ಗೊಂಡ-ಭಿಲ್ಲ ಇತ್ಯಾದಿ ಬಡುಕಟ್ಟು ಸಮುದಾಯಗಳು ಮಾತೃಮೂಲೀಯ ವ್ಯವಸ್ಥೆಯನ್ನೆ ಒಪ್ಪಿಕೊಂಡಿವೆ.) ಮಾತೃಮೂಲೀಯ ವ್ಯವಸ್ಥೆಯಲ್ಲಿ ಅನುವಂಶಿಕ ಆಸ್ತಿಯ ಹಕ್ಕು ತಾಯಿಯಿಂದ ಮಗಳಿಗೆ ಹಸ್ತಾಂತರವಾಗುವುದರಿಂದ ಮತ್ತು ತಾಯಿಯ ಸಹೋದರನೇ ಆಸ್ತಿಯ ಮೇಲ್ವಿಚಾರಣೆಯನ್ನು ಮಾಡುವುದರಿಂದ ಅಂತಹ ವ್ಯವಸ್ಥೆಯಲ್ಲಿ ಸೋದರಮಾವ-ಸೋದರಳಿಯ ಘರ್ಷಣೆ ಸಹಜವಾಗುತ್ತದೆ. ಈ ಆಶಯದ ಆದ್ಯಕೃತಿ ಭಾಗವತವೆ; ಅದರಲ್ಲಿ ಕೃಷ್ಣನು ತನ್ನ ಸೋದರಮಾವ ಕಂಸನನ್ನು ಕೊಲ್ಲುವುದು ಎಲ್ಲರಿಗೂ ಗೊತ್ತಿರುವ ವಿಷಯ. ಭಾಗವತದ ಛಯೆಯಿರುವ ಕಾಡುಗೊಲ್ಲರ ಮಹಾಕಾವ್ಯ ಜುಂಜಪ್ಪದಲ್ಲಿಯೂ ಜುಂಜಪ್ಪ ತನ್ನ ಏಳು ಜನ ಸೋದರಮಾವಂದಿರೊಡನೆ ಹೋರಾಡುತ್ತಲೇ ತನ್ನ ಬದುಕಿನ ಬಹುಭಾಗವನ್ನು ಕಳೆಯುತ್ತಾನೆ. ಇಂತಹ ಮಾತೃಮೂಲೀಯ ವ್ಯವಸ್ಥೆಯ ಕುರುಹುಗಳನ್ನು ಮೌಖಿಕ ಭಾರತಗಳು ದರ್ಶಿಸುತ್ತಿರಬಹುದು.

[1] ಎನ್.ಆರ್‌. ನಾಯಕ (ಸಂ), ಗಾಮೊಕ್ಕಲು ಮಹಾಭಾರತ (ಧಾರವಾಡ: ಕರ್ನಾಟಕ ವಿ.ವಿ., ೧೯೯೨)

[2] ಪಿ.ಕೆ. ರಾಜಶೇಖರ, ಸಂ. ಜನಪದ ಮಹಾಭಾರತ; ಹಾಡಿದವರು ಬೆಟ್ಟದ ಬೀಡು ಸಿದ್ದಶೆಟ್ಟಿ (ಮೈಸೂರು: ಹೊನ್ನಾರು ಜನಪದ ಗಾಯಕರು, ೨೦೦೪

[3] Romila Thapar, “The Historian and the Epic,” Annals of BORI, LX, Poona, 1979; p. 201.

[4] ಹಂಪ. ನಾಗರಾಜಯ್ಯ, “ಜೈನ ಭಾರತಗಳ ವೈಶಿಷ್ಟ್ಯ,” ಸಾಪ್ತಾಹಿಕ ವಿಜಯ, ೧೧/೧೨/೦೫, ಪು.೪.

[5] K.S. Singh(ed), “Introduction,” in The Mahabharata in the Tribal And Folk Traditions of India (Shimla: IIAS, 1993), p.ix.

[6] K.S. Singh, “The Mahabharata: An Anthropological Perspectives,” p.2.

[7] K.S. Singh, “The Mahabharata,” p.7.

[8] D. R. Bali, “Folk Version of Mahabharata in Jammu Region,” in K.S. Singh, pp. 28-30.

[9] P. Subba Chary, “The Pandavulu and Mahabharata Tradition,” in K.S. Singh, pp. 208-209.

[10] K.S. Singh, p.x, p.2.

[11] Mahendra Kumar Mishra, “A Hero of the Mahabharata in Folklore of Cenral India,” in K.S. Singh, pp. 162-163.

[12] B.R. Sharma, “Impact of the Mahabharata on Folk and Tribal Culture of Himachal Pradesh,” in K.S. Singh, p.39.

[13] ಎಲ್. ಆರ್. ಹೆಗಡೆ, ‘ಮುನ್ನುಡಿ,’ ಪು.೩.