ನಾವು ಆಟವಾಡುವಾಗ ಅನುಭವಿಸಿದ ಚಿಕ್ಕ ಪುಟ್ಟ ಗಾಯಗಳಿಂದ ತ್ವಚೆಯಿಂದ ಹನಿ ರಕ್ತ ಹೊರಬಿದ್ದುದನ್ನು ಚಿಕ್ಕಮಕ್ಕಳಾಗಿದ್ದಾಗ ಅನುಭವಿಸುವದು ಸ್ವಾಭಾವಿಕ. ಅಪಘಾತಗಳಿಗೀಡಾದ ಗಾಯಾಳುಗಳ ದೇಹದಿಂದ ರಕ್ತಸ್ರಾವವಾಗುವದನ್ನು ಕಾಣುತ್ತೇವೆ. ವೈದ್ಯರು ರೋಗಿಗಳ ರಕ್ತ ತಪಾಸಣೆಗಾಗಿ ರೋಗಿಯ ರಕ್ತನಾಳದಿಂದ ಸೂಜಿ ಚುಚ್ಚಿ ಸಿರಿಂಜಿನಲ್ಲಿ ರಕ್ತ ತೆಗೆಯುವದನ್ನು ಕೆಲವರು ಅನುಭವಿಸುತ್ತಾರೆ. ಆಸ್ಪತ್ರೆಗಳಲ್ಲಿ ಕೆಲವು ರೋಗಿಗಳಿಗೆ ವೈದ್ಯರು ರಕ್ತ ಕೊಡುವದನ್ನು ಕಾಣಬಹುದಾಗಿದೆ.

ದೇಹದಲ್ಲಿ ರಕ್ತ ಹೇಗೆ ಹರಿದಾಡುತ್ತದೆ? ರಕ್ತದ ಬಣ್ಣ ಕೆಂಪು ಏಕೆ?  ರಕ್ತದ ಸ್ವರೂಪವೇನು?  ಈ ವಿಷಯಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಇರಿಸಿದೆ.

ವಯಸ್ಕರ ದೇಹದಲ್ಲಿ ಸುಮಾರು ಐದು ಲೀಟರ್ ರಕ್ತವಿದ್ದು ಅದು ಅನವರತವೂ ರಕ್ತನಾಳಗಳಲ್ಲಿ ದೇಹದ ತುಂಬ ಹರಿದಾಡುತ್ತದೆ. ರಕ್ತನಾಳಗಳಲ್ಲಿ ಹರಿಯಲು ಹೃದಯದ ಬಡಿತ ಮುಖ್ಯ ಕಾರಣ. ಪ್ರತಿ ನಿಮಿಷಕ್ಕೆ ಸುಮಾರು ೭೦-೮೦ ಸಲ ಹೃದಯ ಹಿಗ್ಗುವದು ಕುಗ್ಗುವದು. ಇದೇ ಹೃದಯ ಬಡಿತ ಎನ್ನುತ್ತೇವೆ. (ಚಿತ್ರ ೧ ನೋಡಿರಿ) ಹೃದಯದಲ್ಲಿ ಎರಡು ಮೇಲ್ಗಡೆ ಎರಡು ಕೆಳಗಡೆ ಇರಿಸಿದ ಒಟ್ಟು ನಾಲ್ಕು ಕೋಣೆಗಳಿವೆ (chambers)  ಮೇಲ್ಗಡೆಯ ಎರಡು ಕೋಣೆಗಳಿಗೆ ಹೃತ್ಕರ್ಣ ಮತ್ತು ಕೆಳಗಿನ ಎರಡು ಕೋಣೆಗಳಿಗೆ ಹೃತ್ಕುಕ್ಷಿಗಳು ಎಂದಿದೆ. ರಕ್ತವು ಮೇಲಿನ ಕೋಣೆಯಿಂದ ಅದರ ಕೆಳಗಿನ ಕೋಣೆಗೆ ಹರಿಯುತ್ತದೆ. ಎಡಗಡೆಯ ಹೃತ್ಕರ್ಣದಿಂದ ಎಡಗಡೆಯ ಹೃತ್ಕುಕ್ಷಿಗೆ ಹರಿಯುತ್ತದೆ. ಅದೇ ರೀತಿ ಬಲಗಡೆಯ ಹೃತ್ಕರ್ಣದಿಂದ ಬಲ ಹೃತ್ಕುಕ್ಷಿಗೆ ಹರಿಯುತ್ತದೆ. ಕೆಳಗಿನ ಕೋಣೆಗಳು ಆಕುಂಚನಹೊಂದಿದಾಗ ಎಡ ಹೃತ್ಕುಕ್ಷಿಯಿಂದ ರಕ್ತವು ಮಹಾ ಅಪಧಮನಿಯಲ್ಲಿ (aorta) ತಳ್ಳಲ್ಪಡುತ್ತದೆ. ಮಹಾ ಅಪಧಮನಿಯ ಕವಲುಗಳು ಅವುಗಳ ಉಪಕವಲುಗಳು  ಚಿತ್ರದಲ್ಲಿ ತೋರಿಸಿದಂತೆ ದೇಹದಲ್ಲೆಲ್ಲ ವ್ಯಾಪಿಸಿದ್ದು ರಕ್ತ ಅವುಗಳಲ್ಲಿ ಹರಿದು ಎಲ್ಲ ಅಂಗಾಂಗಗಳ ಜೀವಕೋಶಗಳಿಗೆ ಅತ್ಯವಶ್ಯಕ ಅಮ್ಲಜನಕ ಮತ್ತು ವಿವಿಧ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ಈ ಎಲ್ಲ ಅಂಗಗಳ ಜೀವಕೋಶಗಳಲ್ಲಿ ಉತ್ಪಾದಿತವಾದ ಇಂಗಾಲದ ಡೈಆಕ್ಸಾಯ್ಡ್ ಹಾಗು ವಿವಿಧ ಅಪಾಯಕಾರಿ ರಾಸಾಯನಿಕಗಳನ್ನು ಪಡೆದುಕೊಂಡು ಮಹಾ ಅಭಿಧಮನಿಯ ಮುಖಾಂತರ ಹೃದಯದ ಬಲ ಕೋಣೆಗೆ (ಹೃತ್ಕರ್ಣ) ತಲಪುತ್ತದೆ. ಹೃತ್ಕರ್ಣಗಳು ಆಕುಂಚನಹೊಂದಿದಾಗ ರಕ್ತ ಕೆಳಗಿನ ಕೋಣೆಗೆ ಹರಿಯುತ್ತದೆ. ಬಲ ಹೃತ್ಕರ್ಣದಿಂದ (ಇಂಗಾಲದ ಡೈಆಕ್ಸಾಯ್ಡ್ ಒಳಗೊಂಡ ಅಶುದ್ಧ ರಕ್ತ) ಬಲ ಹೃತ್ಕುಕ್ಷಿಗೆ ಸೇರುತ್ತದೆ. ಇಲ್ಲಿಂದ ಈ ಅಶುದ್ಧ ರಕ್ತ ಫುಪ್ಫುಸ ರಕ್ತನಾಳದ ಮುಖಾಂತರ ಫುಪ್ಫುಸಕ್ಕೆ ಸಾಗುತ್ತದೆ. ಉಸಿರಾಟದ ಸಮಯದಲ್ಲಿ ನಾವು ವಾತಾವರಣದಿಂದ ಸೇವಿಸಿದ ಆಮ್ಲಜಕವು ಫುಪ್ಫುಸದಲ್ಲಿನ ರಕ್ತನಾಳಗಳಲ್ಲಿ ಹರಿದಾಡಿದ ರಕ್ತದಲ್ಲಿ  ಸೇರುತ್ತದೆ ಮತ್ತು ರಕ್ತದಲ್ಲಿದ್ದ ಇಂಗಾಲದ ಡೈಆಕ್ಸಾಯ್ಡ್ ಫುಪ್ಫುಸ ಸೇರಿ ಉಸಿರಾಟದಲ್ಲಿ ಹೊರಕ್ಕೆ ಹೋಗುತ್ತದೆ. ಈಗ ಫುಪ್ಫುಸದಲ್ಲಿ ಶುದ್ಧೀಕರಣಗೊಂಡ ರಕ್ತ ಎಡ ಹೃತ್ಕರ್ಣ ಸೇರಿ ಮತ್ತೆ ಅಲ್ಲಿಂದ ದೇಹದ ಎಲ್ಲ ಅಂಗಾಂಗಗಳಿಗೆ ಚಲಿಸುತ್ತದೆ. ಇದೇ ರಕ್ತ ಪರಿಚಲನೆ. ಹೀಗೆ ರಕ್ತ ಸದಾ ಕಾಲ ವೃತ್ತಾಕಾರದಲ್ಲಿ ಚಲಿಸಿದೆ.

ರಕ್ತನಾಳದಿಂದ ಸಿರಿಂಜಿನಲ್ಲಿ ತೆಗೆದ ರಕ್ತವನ್ನು ಒಂದು ಗಾಜಿನ ನಳಿಕೆಯಲ್ಲಿಟ್ಟು ಕೆಲವು ಸಮಯದ ನಂತರ ನಳಿಕೆಯನ್ನು ವೀಕ್ಷಿಸಿದರೆ ಅಲ್ಲಿ ನಾವು ಬದಲಾವಣೆ ಕಾಣುತ್ತೇವೆ. ನಳಿಕೆಯ ತಳಭಾಗದಲ್ಲಿ ಘನರೂಪ ಮತ್ತು ಮೇಲ್ಭಾಗದಲ್ಲಿ ದ್ರವರೂಪ ಬೇರ್ಪಟ್ಟಿದ್ದುದಲ್ಲದೇ ತಳಭಾಗ ಕೆಂಪು ಬಣ್ಣ ಹೊಂದಿದೆ ಮತ್ತು ಮೇಲ್ಭಾಗ ತಿಳಿಹಳದಿ ನೀರಿನಂತಿದೆ. (ಚಿತ್ರ ೩ ನೋಡಿರಿ)

ರಕ್ತದಲ್ಲಿ ದ್ರವ ಮತ್ತು ಘನ ಭಾಗಗಳಿವೆ. ದ್ರವ ಪದಾರ್ಥಕ್ಕೆ ಪ್ಲಾಸ್ಮಾ (plasma) ಎಂದು ಹೆಸರು. ನಳಿಕೆಯ ತಳದಲ್ಲಿ ಶೇಖರಣೆಯಾದ ಕೆಂಪುಬಣ್ಣದ ಭಾಗದಲ್ಲಿ ರಕ್ತದ ಜೀವಕೋಶಗಳಿವೆ. ರಕ್ತದಲ್ಲಿ ಮೂರು ಬಗೆಯ ಜೀವಕೋಶಗಳಿವೆ. ಅವುಗಳಿಗೆ (೧) ಕೆಂಪು ರಕ್ತ ಜೀವಕೋಶ ( Red Blood Cell = RBC) (೨) ಬಿಳಿಯ ರಕ್ತಜೀವಕೋಶ  (White Blood Cell = Leucocyte) ಮತ್ತು (೩) ಹಲಗೆ ಕಣ  (Platelet or Thrombocyte) ಎಂದು ಹೆಸರುಗಳಿವೆ.

ಈ ಮೂರೂ ಬಗೆಯ ಜೀವಕೋಶಗಳು ಬರಿಗಣ್ಣಿಗೆ ಗೋಚರಿಸಲಾರವು. ಸೂಕ್ಷ್ಮದರ್ಶಕದಲ್ಲಿ ಕಾಣಲು ಸಾಧ್ಯ. ಅವುಗಳನ್ನು ತಜ್ಞರು ಪರೀಕ್ಷಿಸಿ ವಿವಿಧ ಬಗೆಯ ರೋಗನಿದಾನ ಮಾಡುತ್ತಾರೆ.

(ಚಿತ್ರ-೪ ನೋಡಿರಿ) ಕೆಂಪು ರಕ್ತ ಜೀವಕೋಶಗಳು ದುಂಡಗಿನ ನಾಣ್ಯದಂತಿವೆ. ಅವುಗಳ ವ್ಯಾಸ ೭.೨ ಮೈಕ್ರಾನ್. ಒಂದು ಮೈಕ್ರಾನ ಅಂದರೆ ಒಂದು ಮಿಲಿಮೀಟರಿನ ಸಾವಿರದ ಒಂದು ಭಾಗ! ನಾಣ್ಯದಂತೆ ವೃತ್ತಾಕಾರದ ಈ ಜೀವಕೋಶಗಳನ್ನು ಬದಿಯಿಂದ ನೋಡಿದಾಗ ಚಿತ್ರದಲ್ಲಿ ತೋರಿಸಿದಂತೆ ಕಾಣುತ್ತವೆ. ಮಧ್ಯಭಾಗದಲ್ಲಿ ಎರಡೂ ಬದಿಯಿಂದ ಅದು ತಗ್ಗು ಹೊಂದಿದೆ. ಹೀಗೆ ದ್ವಿನಿಮ್ನ ಆಕಾರದ ಜೀವಕೋಶಗಳನ್ನು ತಜ್ಞರು ಪರೀಕ್ಷಿಸಿ ಅವುಗಳ ಗಾತ್ರ, ರೂಪ, ಬಣ್ಣ ಇತ್ಯಾದಿಗಳನ್ನು ಗಮನಿಸಿ ವಿವಿಧ ರೋಗ ಪತ್ತೆ ಹಚ್ಚುತ್ತಾರೆ. ಕೆಂಪು ರಕ್ತಜೀವಕೋಶದಲ್ಲಿ ಹೀಮೋಗ್ಲೋಬಿನ್  (Haemoglobin) ಎಂಬ ರಾಸಾಯನಿಕ ಪದಾರ್ಥವಿದೆ. ಇದರಲ್ಲಿ ಕಬ್ಬಿಣ ಮತ್ತು ಗ್ಲೋಬಿನ್ ಎಂಬ ಪ್ರೋಟೀನುಯುಕ್ತ ಪದಾರ್ಥಗಳ ಸಂಯೋಜನೆಯಾಗಿರುತ್ತದೆ. ಹೀಮೋಗ್ಲೋಬಿನ್ ಪದಾರ್ಥದಿಂದಾಗಿಯೇ ಈ ಜೀವಕೋಶಗಳಿಗೆ ಕೆಂಪು ಬಣ್ಣವಿದೆ. (ದೇಹದಲ್ಲೆಲ್ಲ ಇರುವ ಸ್ನಾಯುಗಳಲ್ಲಿ ಕೂಡ ಮೈಯೋಗ್ಲೋಬಿನ್ ಎಂಬ ಪದಾರ್ಥವಿದ್ದುದರಿಂದ ಸ್ನಾಯುಗಳು ಕೆಂಬಣ್ಣ ಹೊಂದಿವೆ.) ಕೆಂಪು ರಕ್ತಜೀವಕೋಶಗಳಲ್ಲಿರುವ ಹೀಮೋಗ್ಲೋಬಿನ್ ಆಮ್ಲಜನಕವನ್ನು ದೇಹದ ಎಲ್ಲ ಅಂಗಾಂಗಗಳಿಗೆ ಒದಗಿಸುವ ಕಾಯ೯ಮಾಡುತ್ತದೆ. ಆಮ್ಲಜನಕವಾಯು ನಮ್ಮ ಅಸ್ತಿತ್ವಕ್ಕೆ ಅತ್ಯವಶ್ಯಕ. ಕೆಂಪು ರಕ್ತಜೀವಕೋಶಗಳ ಸಂಖ್ಯೆಯಲ್ಲಿ, ಅವುಗಳಲ್ಲಿರುವ ಹೀಮೋಗ್ಲೋಬಿನ್ ಪ್ರಮಾಣದಲ್ಲಿ ಮತ್ತು ಅವುಗಳ ಕಾರ್ಯದಲ್ಲಿ ನ್ಯೂನತೆಯುಂಟಾದಾಗ ರಕ್ತಹೀನತೆಯ ರೋಗವುಂಟಾಗುವದು. ಕೆಂಪು ರಕ್ತಜೀವಕೋಶಗಳು ರಕ್ತದಲ್ಲಿ ೧೨೦ ದಿನ ಜೀವಿಸಿರುತ್ತವೆ. ತದನಂತರ ಅವುಗಳನ್ನು ಗುಲ್ಮ (spleen) (ಇದು ಹೊಟ್ಟೆಯ ಎಡಭಾಗದಲ್ಲಿ ಎದೆಗೂಡಿನ ಕೆಳಕ್ಕೆ ಇದೆ) ಎಂಬ ಅಂಗವು ನಾಶಮಾಡುತ್ತದೆ. ಕೆಂಪು ರಕ್ತಜೀವಕೋಶಗಳ ಉತ್ಪತ್ತಿ ಎಲುಬುಗಳಲ್ಲಿ ಆಗುತ್ತದೆ. ಅವುಗಳ ಉತ್ಪತ್ತಿ ಮತ್ತು ನಾಶ ಅನವರತವೂ ನಡೆದಿರುತ್ತದೆ. ಕೆಂಪು ರಕ್ತಜೀವಕೋಶಗಳು ಮರಣಿಸಿದಾಗ ಅವುಗಳಲ್ಲಿರುವ ಹೀಮೋಗ್ಲೋಬಿನ್‌ವನ್ನು ದೇಹವು ಮತ್ತೆ ಬಳಸುತ್ತದೆ. ಹೀಮೋಗ್ಲೋಬಿನ್ ರಾಸಾಯನಿಕ ಕ್ರಿಯೆಗೊಳಗಾಗಿ ಯಕೃತ್ತಿನಲ್ಲಿ ಬಿಲಿರುಬಿನ್ ಎಂಬ ರಾಸಾಯನಿಕವಾಗಿ ನಂತರ ವಿವಿಧ ಕ್ರಿಯೆಗೊಳಪಟ್ಟು ಮೂತ್ರ ಮತ್ತು ಮಲದಲ್ಲಿ ಹೊರಹಾಕಲ್ಪಡುತ್ತದೆ. ಬಿಲಿರುಬಿನ್ ರಕ್ತದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಯಾವಾಗಲೂ ಇದ್ದೇ ಇರುತ್ತದೆ. ಆದರೆ ಯಕೃತ್ತಿನ ಬಾಧೆಯಾದಾಗ ಬಿಲಿರುಬಿನ್ ಹೆಚ್ಚು ಶೇಖರಣೆಯಾಗುವ ಸಾಧ್ಯತೆ ಇದೆ. ಹೀಗೆ ಅದು ಅಧಿಕ ಪ್ರಮಾಣದಲ್ಲಿ ರಕ್ತದಲ್ಲಿ ಶೇಖರಣೆಯಾದಾಗ ವ್ಯಕ್ತಿಯ ತ್ವಚೆ ಮತ್ತು ಕಣ್ಣುಗಳಲ್ಲಿ ಅದು ಹಳದಿ ಬಣ್ಣವಾಗಿ ಕಾಣುತ್ತದೆ. ಅದನ್ನೇ ನಾವು ಕಾಮಣಿ ( jaundice ) ಎಂದು ಹೇಳುತ್ತೇವೆ.

ಬಿಳಿಯ ರಕ್ತಜೀವಕೋಶಗಳು ಕೆಂಪು ರಕ್ತಜೀವಕೋಶಗಳಿಗಿಂತ ದೊಡ್ಡ ಗಾತ್ರ ಹೊಂದಿವೆ. (ಚಿತ್ರ ೪ ನೋಡಿರಿ) ಇದರಲ್ಲಿ ನ್ಯೂಟ್ರೋಫಿಲ್ (Neutrophil), ಇಯೋಸಿನೋಫಿಲ್ (Eosionophil) ಮತ್ತು ಬೇಸೋಫಿಲ್ (Basophil) ಮತ್ತು ಲಿಂಫೋಸೈಟ್ (Lymphocyte) ಎಂಬ ವಿವಿಧ ಜೀವಕೋಶಗಳಿದ್ದು ಇವೆಲ್ಲವುಗಳನ್ನೂ ಬಿಳಿಯ ರಕ್ತಜೀವಕೋಶಗಳೆಂದು ಕರೆಯುತ್ತಾರೆ. ಇವು ಬರಿಗಣ್ಣಿಗೆ ತೋರವು. ಸೂಕ್ಷ್ಮದರ್ಶಕದಲ್ಲಿ ಇವುಗಳನ್ನು ಪರೀಕ್ಷಿಸಿ ವಿವಿಧ ರೋಗಗಳನ್ನು ಪತ್ತೆಹಚ್ಚುತ್ತಾರೆ.

ಬಿಳಿಯ ರಕ್ತಜೀವಕೋಶಗಳನ್ನು ದೇಶದ ರಕ್ಷಣೆಮಾಡುತ್ತಿರುವ ಸೈನಿಕರಿಗೆ ಹೋಲಿಸಬಹುದು. ಈ ಜೀವಕೋಶಗಳು ರಕ್ತದಲ್ಲಿ ಹರಿದಾಡುತ್ತಿದ್ದು ದೇಹದ ಯಾವುದೇ ಭಾಗದಲ್ಲಿ ರೋಗಜನಕ ರೋಗಾಣುಗಳು ದೇಹಸೇರಿದಾಗ ಅಲ್ಲಿ ಧಾವಿಸಿ ಆ ರೋಗಾಣುಗಳನ್ನು ತಡೆಗಟ್ಟಿ ರೋಗ ಬಾರದಂತೆ ನಮ್ಮನ್ನು ರಕ್ಷಿಸುತ್ತವೆ. ರಕ್ತನಾಳಗಳಲ್ಲಿ ರಕ್ತದಲ್ಲಿ ತೇಲುತ್ತ ಸಾಗಿರುವ ಈ ಜೀವಕೋಶಗಳು ಸಂದರ್ಭವಿದ್ದಾಗ, ಲೋಮನಾಳಗಳಿಂದ (capillaries) ಹೊರಕ್ಕೆ (ಅಂದರೆ ರಕ್ತ ಪ್ರವಾಹದಿಂದ ಹೊರಗೆ) ನುಸುಳಿ ಅಂಗಾಂಶಗಳ ಜೀವಕೋಶಗಳ ಬದಿಗೆ ನಿಲ್ಲುತ್ತವೆ. ಅಲ್ಲಿರುವ ರೋಗಾಣುಗಳ ವಿರುದ್ಧ ಹೋರಾಡುತ್ತವೆ. ಈ ಕಾರ್ಯದಲ್ಲಿ ನ್ಯೂಟ್ರೋಫಿಲ್ ಮತ್ತು ಲಿಂಫೋಸೈಟ್ ಮುಖ್ಯ ಪಾತ್ರವಹಿಸುತ್ತವೆ. ಇಯೋಸಿನೋಫಿಲ್ ಜೀವಕೋಶಗಳು ಅಲರ್ಜಿ ಮತ್ತಿತರ ಸಂದರ್ಭದಲ್ಲಿ ತಮ್ಮ ರಕ್ಷಣಾಕಾರ್ಯ ಮಾಡುತ್ತವೆ.

ಬಿಳಿಯರಕ್ತ ಜೀವಕೋಶಗಳ ವಿಶಿಷ್ಟ ಪರೀಕ್ಷೆಮಾಡಿ (ಇತರ ಅಂಗಾಂಶಗಳ ಪರೀಕ್ಷೆ ಮಾಡಿ) ಆ ವ್ಯಕ್ತಿಯ ಎಚ್.ಎಲ್.ಎ. (HLA = Human Leucocyte Antigen) ಗುಂಪು ಯಾವುದು ಎಂದು ತಜ್ಞರು ಖಚಿತಪಡಿಸಿಕೊಂಡು ಅಂಗ ಕಸಿಗಳ ಸಾಧ್ಯತೆ ಇದೆಯೋ ಇಲ್ಲವೋ ಎಂದು ಹೇಳುತ್ತಾರೆ.

ಲಿಂಫೋಸೈಟ್ ಎರಡುಬಗೆಯವಾಗಿವೆ. ಅವು ರೋಗಾಣು ಮತ್ತಿತರ ಅಪಾಯಕಾರಿಗಳ ವಿರುದ್ಧ ಹೋರಾಡುತ್ತವೆ. ಪ್ರತಿರೋಧಕಗಳನ್ನು (antibody) ಉತ್ಪಾದಿಸುತ್ತವೆ.

ಮೂರನೆಯ ಪ್ರಕಾರದ ರಕ್ತ ಜೀವಕೋಶವನ್ನು ಹಲಗೆ ರಕ್ತಕಣ (ಹಲಗೆ ರಕ್ತಜೀವಕೋಶ) ಇಲ್ಲವೆ ಥ್ರಾಂಬೋಸೈಟ್ ( platelet = Thrombocyte) ಎನ್ನುತ್ತಾರೆ. ಇವು ಅತ್ಯಂತ ಚಿಕ್ಕ ಗಾತ್ರಹೊಂದಿದ್ದು ಇವುಗಳ ಆಕಾರ ಹಲಗೆಗಳಂತೆ ತೋರುವದೇ ಅವುಗಳ ಹೆಸರಿಗೆ ಕಾರಣ. ರಕ್ತಸ್ರಾವವಾಗುವದನ್ನು ತಡೆಗಟ್ಟಿ ರಕ್ಷಿಸಲು ಇವು ಅತ್ಯವಶ್ಯ. ಗಾಯವಾದಾಗ ಅಲ್ಲಿ ಧಾವಿಸಿ ರಕ್ತನಾಳಗಳಿಂದ ರಕ್ತ ಹೊರಗೆ ಹರಿಯದಂತೆ ಇವು ಗಡ್ಡೆಗಟ್ಟಿ ನಿಲ್ಲುತ್ತವೆ.

ಕೆಂಪುರಕ್ತ ಜಿವಕೋಶ, ಬಿಳಿಯರಕ್ತ ಜಿವಕೋಶ ಮತ್ತು ಹಲಗೆ ರಕ್ತ ಜಿವಕೋಶಗಳು ರಕ್ತದಲ್ಲಿರುವ ಪ್ಲಾಸ್ಮಾ ದ್ರವದಲ್ಲಿ ತೇಲುತ್ತ ಸಾಗಿರುತ್ತವೆ. ಪ್ಲಾಸ್ಮಾ ದ್ರವದಲ್ಲಿ ಸೋಡಿಯಂ, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮ್ಯಾಂಗನೀಜ್, ಗ್ಲುಕೋಜ್, ಅಲ್ಬ್ಯುಮಿನ್, ಕ್ರಿಯಾಟಿನೀನ್, ಯೂರಿಯಾ ಇತ್ಯಾದಿ ಧಾತುಗಳೂ, ರಾಸಾಯನಿಕಗಳೂ ಇವೆ. ರಕ್ತ ಪರಿಕ್ಷೆ ಮಾಡಿ ಈ ವಿವಿಧ ರಾಸಾಯನಿಕಗಳ ಮಟ್ಟವನ್ನು ಗುರುತಿಸಿ ಕೆಲವು ರೋಗಗಳನ್ನು ಪತ್ತೆಮಾಡಬಹುದು. (ಉದಾ: ಸಕ್ಕರೆ ಕಾಯಿಲೆ = ಡಯಬಿಟೀಸ್, ಥೈರಾಯ್ಡ್ ಗ್ರಂಥಿಯ ರೋಗ ಮೂತ್ರಪಿಂಡದರೋಗ ಇತ್ಯಾದಿ.)

ರಕ್ತವು ಅನವರತವೂ ರಕ್ತನಾಳಗಳಲ್ಲಿ ಹರಿದಾಡುತ್ತಲೇ ಇರಬೇಕು. ರಕ್ತವು ಗಡ್ಡೆಗಟ್ಟದಂತೆ ಕೆಲವು ರಾಸಾಯನಿಕಗಳು ಮತ್ತು ರಕ್ತನಾಳಗಳ ಒಳಾವರಣದ ಜೀವಕೋಶಗಳ ರಚನೆ ಕಾರ್ಯಮಾಡುತ್ತವೆ.  ಕೆಲವು ಸಂದರ್ಭಗಳಲ್ಲಿ ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟಿ ರೋಗವುಂಟುಮಾಡಬಲ್ಲದು. ರಕ್ತವು ನಾಳಗಳಲ್ಲಿ ಗಡ್ಡೆಗಟ್ಟಿದರೆ ರಕ್ತ ಪ್ರವಾಹಕ್ಕೆ ಆ ಭಾಗದಲ್ಲಿ ತೊಂದರೆಯಾಗುವದು. ಅದರ ಪ್ರಮಾಣವನ್ನವಲಂಬಿಸಿ ಕೆಲವೊಮ್ಮೆ ಆ ವ್ಯಕ್ತಿಯು ಸಾವನ್ನಪ್ಪಬಹುದು. ಪಾರ್ಶ್ವವಾಯು (ಅರ್ಧಾಂಗವಾಯು ) (ಉದಾ: ಮಿದುಳಿನಲ್ಲಿರುವ ರಕ್ತನಾಳಗಳ ರಕ್ತಹೆಪ್ಪುಗಟ್ಟಿದಾಗ; ಹೃದಯದ ಕಿರೀಟ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ ಹೃದಯಾಘಾತವಗುವದು) ಇಂಥ ಪ್ರಾಣಾಂತಿಕ ಸಂದರ್ಭಗಳಲ್ಲಿ ರಕ್ತ ಹೆಪ್ಪುಗಟ್ಟುವದನ್ನು ನಿವಾರಿಸಲು ಕೆಲವು ಔಷಧಿಗಳನ್ನು ವೈದ್ಯರು ಕೊಡುತ್ತಾರೆ.

ಕೆಲವು ರಕ್ತರೋಗಗಳು ಅನುವಂಶಿಕವಾಗಿ ಬರುತ್ತವೆ. ಉದಾ: ಕುಡುಗೋಲು ಜೀವಕೋಶ ರಕ್ತಹೀನತೆ (ಈ  ಬಾಧೆ ಇರುವ ವ್ಯಕ್ತಿಗಳ ಕೆಂಪು ರಕ್ತ ಜೀವಕೋಶಗಳು ಆಮ್ಲಜನಕದ ಕೊರತೆಯಾದಾಗ ತಮ್ಮ ದುಂಡಗಿನ ಆಕಾರ ಬದಲಿಸಿ ಕುಡುಗೋಲಿನಂತೆ ಕಾಣುವದರಿಂದ ಈ ಹೆಸರು ಬಂದಿದೆ.) (sickle cell anaemia,) ಮತ್ತೆ ಕೆಲವು ರೋಗಗಳು ರಕ್ತಜೀವಕೋಶಗಳನ್ನು ಮುತ್ತಿ ಆ ರೋಗ ತರುತ್ತವೆ. (ಉದಾ: ಮಲೇರಿಯ)

ಕೆಂಪು ರಕ್ತಜೀವಕೋಶಗಳು ಹೊಂದಿರುವ ಪ್ರತಿಜೀವಗಳ ರಚನೆಯಿಂದ ರಕ್ತವನ್ನು ಎ, ಬಿ, ಎಬಿ ಮತ್ತು ಓ (A, B, AB ಮತ್ತು O)ಎಂಬ ನಾಲ್ಕು ಪ್ರಮುಖ ಗುಂಪುಗಳನ್ನಾಗಿ ವಿಂಗಡಿಸಿದೆ. ಈ ರಕ್ತ ಗುಂಪುಗಳಲ್ಲಿ ಮತ್ತೆ ಆರ್ ಎಚ್ ಪೊಜಿಟಿವ್  ಮತ್ತು ಆರ್ ಎಚ್ ನೆಗೆಟಿವ್ (Rh +ve, Rh – ve) ಎಂಬ ಉಪ ಗುಂಪುಗಳಿವೆ. ರ‍್ಹೀಸಸ್ (rhesus) ಎಂಬ ಮಂಗಜಾತಿಯಲ್ಲಿ ಕಂಡುಬರುವ ರಕ್ತ ಗುಂಪು ಮಾನವರಲ್ಲಿ ಕಂಡುಬಂದಿರುವದರಿಂದ ಇದನ್ನು  ರ‍್ಹೀಸಸ್ (Rh ಗುಂಪು) ಎಂದು ಕರೆಯಲಾಗಿದೆ. ರಕ್ತದಾನಿಗಳ ರಕ್ತವನ್ನು ರೋಗಿಗೆ ಕೊಡುವಾಗ ಈ ರಕ್ತದ ಗುಂಪುಗಳಲ್ಲಿ ಹೊಂದಾಣಿಕೆ ಆಗುವದು ಅವಶ್ಯ.

ಒಂದು ಘನ ಮಿಲಿಮೀಟರ್ ರಕ್ತದಲ್ಲಿ (ಅಂದರೆ ಒಂದು ಮಿಲಿಮೀಟರ್ ಉದ್ದ, ಒಂದು ಮಿಲಿಮೀಟರ್ ಅಗಲ ಮತ್ತು ಒಂದು ಮಿಲಿಮೀಟರ್ ಎತ್ತರ ಹೊಂದಿರುವ ಘನಾಕೃತಿ) ಕೆಂಪು ರಕ್ತಜೀವಕೋಶಗಳ ಸಂಖ್ಯೆ ಸು. ೫-೭ ಮಿಲಿಯನ್, ಬಿಳಿಯ ರಕ್ತಜೀವಕೋಶಗಳ ಸಂಖ್ಯೆ ಸು. ೬-೧೦ ಸಾವಿರ ಮತ್ತು ಹಲಗೆ ರಕ್ತಕಣಗಳ ಸಂಖ್ಯೆ ಸು. ೨.೫ – ೫ ಲಕ್ಷಗಳು.

ರಕ್ತಹೀನತೆಯಿಂದ ವ್ಯಕ್ತಿಯಲ್ಲಿ ಅಶಕ್ತತನವುಂಟಾಗುವದು. ರಕ್ತಹೀನತೆಗೆ ವಿವಿಧ ಕಾರಣಗಳಿವೆ. ಅವುಗಳನ್ನು ಪತ್ತೆ ಹಚ್ಚಲು ವೈದ್ಯರು ದೈಹಿಕ ಪರೀಕ್ಷೆ ಮತ್ತು ರಕ್ತದ ತಪಾಸಣೆ ಮಾಡುತ್ತಾರೆ.  ದೇಹದಲ್ಲಿ ಕಬ್ಬಿಣದ ಕೊರತೆ ಬಿ-೯ ಮತ್ತು ಬಿ-೧೨ ಜೀವಸತ್ತ್ವಗಳ ಕೊರತೆ ಮತ್ತಿತರ ಅಂಶಗಳ ಕೊರತೆಯಿಂದ ರಕ್ತಹೀನತೆಯಾಗಬಹುದು. ಅದರ ಕಾರಣ ಕಂಡುಹಿಡಿದು ತಕ್ಕ ಚಿಕಿತ್ಸೆ ಕೊಡುತ್ತಾರೆ.

ಬಿಳಿಯ ರಕ್ತ ಜೀವಕೋಶಗಳು ಅನೇಕ ಬಾರಿ ಹೆಚ್ಚಿಗೆ ಉತ್ಪಾದನೆ ಆಗುತ್ತವೆ. ದೇಹದಲ್ಲಿ ಯಾವುದೇ ಭಾಗದಲ್ಲಿ ಸೋಂಕು ತಗಲಿದಾಗ (ಉದಾ: ಗಂಟಲಿನ ಉರಿಯೂತ, ಫುಪ್ಫುಸದ ಉರಿಯೂತ, ಕೀವು ಗುಳ್ಳೆ ಇತ್ಯಾದಿ) ತಾತ್ಕಾಲಿಕವಾಗಿ ಬಿಳಿಯ ರಕ್ತಜೀವಕೋಶಗಳು ಹೆಚ್ಚಿಗೆ ಉತ್ಪಾದಿತವಾಗುತ್ತವೆ.  ರೋಗಾಣುಗಳ ವಿರುದ್ಧ ಹೋರಾಡಿ ಆರೋಗ್ಯ ಕಾಪಾಡಲು ದೇಹವು ಹೀಗೆ ಪ್ರತಿಕ್ರಿಯಿಸುವದು.

ಕೆಲವೊಮ್ಮೆ ಯಾವುದೇ ಕಾರಣವಿರದೇ ಬಿಳಿಯ ರಕ್ತಜೀವಕೋಶಗಳು ಅನಿಯಂತ್ರಿತವಾಗಿ, ಅತ್ಯಧಿಕ ಸಂಖ್ಯೆಯಲ್ಲಿ ಉತ್ಪಾದಿತವಾಗುತ್ತಲೇ ಸಾಗುತ್ತವೆ. ಇದೇ ರಕ್ತದ ಕ್ಯಾನ್ಸರ್ ಅಥವಾ ರಕ್ತದ ಏಡಿಗಂತಿ (leukaemia). ಬಿಳಿಯ ರಕ್ತಜೀವಕೋಶಗಳಲ್ಲಿ ನ್ಯೂಟ್ರೋಫಿಲ್ (neutrophil) ಮತ್ತು ಲಿಂಫೋಸೈಟ್ (lymphocyte) ರಕ್ತದ ಕ್ಯಾನ್ಸರ್ ಮಾಡಬಲ್ಲವು. ಅನಿಯಂತ್ರಿತವಾಗಿ ಈ ಜೀವಕೋಶಗಳು ಮೂಳೆಗಳಲ್ಲಿ (ಅಸ್ಥಿಮಜ್ಜೆಯಲ್ಲಿ) ಉತ್ಪಾದಿತವಾಗುತ್ತವೆ.

ರಕ್ತದಾನಿಗಳು ತಮ್ಮ ರಕ್ತವನ್ನು ಕೊಟ್ಟಾಗ ಕೆಲವು ದಿನಗಳಲ್ಲಿ ಅವರ ಅಸ್ಥಿಗಳು ಆರೋಗ್ಯಕರ ಪ್ರಮಾಣಕ್ಕೆ ತರುವಂತೆ ರಕ್ತದ ಉತ್ಪಾದನೆ ಮಾಡುತ್ತವೆ.