ಸ್ಯಾನ್‌ಫ್ರಾನ್ಸಿಸ್ಕೋದಿಂದ, ಅದೇ ಪೆಸಿಫಿಕ್ ಸಾಗರ ತೀರದ ಉದ್ದಕ್ಕೂ ಕೆಳಕ್ಕೆ ಅಂದರೆ ದಕ್ಷಿಣಕ್ಕೆ, ಒಂದೂಕಾಲು ಗಂಟೆಯ ವಿಮಾನದ ಹಾದಿಯಲ್ಲಿದೆ ಲಾಸ್‌ಏಂಜಲೀಸ್. ಲಾಸ್‌ಏಂಜಲೀಸ್‌ನಲ್ಲಿ ನಾನು ಇದ್ದದ್ದು ಮೂರುದಿನ. ನನ್ನ ಅತಿಥೇಯರಾದ ಶ್ರೀನಿವಾಸ್ ಅವರ ಮನೆಯಲ್ಲಿ, ಶ್ರೀನಿವಾಸ್ ಅವರು, ನನ್ನ ಪ್ರಿಯಗುರುಗಳಾದ ಪ್ರೊ|| ಎಸ್. ವಿ. ಪರಮೇಶ್ವರ ಭಟ್ಟರ ಅಳಿಯಂದಿರು. ಭಟ್ಟರ ಮಗಳು ಸೌಮ್ಯ (ನನಗೆ ಪರಿಚಿತವಾದ ಆಕೆಯ ಹೆಸರು ನಾಗರತ್ನ) ನನ್ನ ಯೋಗಕ್ಷೇಮವನ್ನು ತುಂಬ ವಿಶ್ವಾಸದಿಂದ ನೋಡಿಕೊಂಡರು. ಮರುದಿನ ನಾನೊಬ್ಬನೇ, ನನಗಾಗಿ ಕಾದಿರಿಸಿದ ಟಿಕೆಟ್ ಹಿಡಿದು ಲಾಸ್‌ಏಂಜಲೀಸ್‌ದಿಂದ ಕೇವಲ ಮೂವತ್ತು ನಲವತ್ತು ಮೈಲಿ ದೂರದ, ತಾರಾ ನಗರವೆಂದು ಪ್ರಸಿದ್ಧವಾಗಿರುವ ಹಾಲಿವುಡ್‌ನಲ್ಲಿರುವ ‘ಯೂನಿವರ್ಸಲ್ ಸ್ಟುಡಿಯೋ’ ನೋಡಲು ಹೋದೆ. ಹಾಲಿವುಡ್ ತುಂಬ ಸುಂದರವಾದ ಪರಿಸರದ ನಡುವೆ ಇರುವ ಸೊಗಸಾದ ಊರು. ಸುತ್ತಲೂ ತಲೆಯೆತ್ತಿಕೊಂಡ ಬೆಟ್ಟಗಳು, ಮತ್ತು ದಟ್ಡವಾದ ಹಸಿರ ನಡುವಣ ಹಾಲಿವುಡ್ ನಗರದ ಉತ್ತರದ ಬಡಾವಣೆಗೆ ‘ಸ್ಟುಡಿಯೋ ಸಿಟಿ’ ಎಂದೇ ಹೆಸರು. ಇಲ್ಲಿಯೇ ಯೂನಿವರ್ಸಲ್ ಸ್ಟುಡಿಯೋ ಇರುವುದು. ಇದು ಅಮೆರಿಕಾದ ಚಲನಚಿತ್ರಗಳ ನಿರ್ಮಾಣದ ತವರುಮನೆಯಾಗಿದೆ. ಈಗಲೂ ಬಹುಸಂಖ್ಯೆಯ ಚಲನಚಿತ್ರಗಳೂ, ಟಿ.ವಿ. ಫಿಲ್ಮ್‌ಗಳೂ ತಯಾರಾಗುವುದು ಇಲ್ಲಿಯೇ. ಲಾಸ್‌ಏಂಜಲೀಸ್‌ದಿಂದ ಸುಸಜ್ಜಿತವಾದ ಬಸ್ಸೊಂದರಲ್ಲಿ ನಾನು ಇಲ್ಲಿಗೆ ಬಂದ ಕೂಡಲೇ, ನಮ್ಮನ್ನು ಅಂದರೆ ಪ್ರವಾಸಿಗಳನ್ನು, ಟ್ರಾಲಿಯಾಕಾರದ ಉದ್ದವಾದ ವಾಹನವೊಂದರಲ್ಲಿ ಯೂನಿವರ್ಸಲ್ ಸ್ಟುಡಿಯೋದ ವಿಸ್ತಾರದೊಳಗಿನ ಸಂಚಾರಕ್ಕೆ ಕರೆದೊಯ್ಯಲಾಗುತ್ತದೆ. ಟ್ರಾಲಿಯ ಚಾಲಕನ ಪಕ್ಕದಲ್ಲಿ ಕೂತ ಮಾರ್ಗದರ್ಶಿಯಾದ ಚಾಲಾಕಿ ಹೆಣ್ಣೊಬ್ಬಳು ತುಂಬ ಚೂಟಿಯಾದ ಹಾವಭಾವ ವಿಲಾಸ ವಿಭ್ರಮಗಳಿಂದ ಮತ್ತು ಮಾತುಗಳಿಂದ ರಂಜಿಸುತ್ತಾಳೆ. ಕೈಯಲ್ಲೊಂದು ಧ್ವನಿವರ್ಧಕವನ್ನು ಹಿಡಿದು ಪಟಪಟನೆ ಅವಳು ಉದ್ದಕ್ಕೂ ಆಡುವ ಮಾತು, ನೀಡುವ ವಿವರಣೆ, ಸಿಡಿಸುವ ‘ಜೋಕು’ಗಳು ಬಲು ಮಜವಾಗಿರುತ್ತವೆ.

ನಾಲ್ಕು ನೂರಾಐವತ್ತು ಎಕರೆಗಳಷ್ಟು ವಿಸ್ತಾರವಾದ ಈ ಸ್ಟುಡಿಯೋದಲ್ಲಿ ೧೯೧೫ಕ್ಕಿಂತ ಹಿಂದೆ ತಯಾರಾದ ಚಲನಚಿತ್ರಗಳ ಮೂಲ ನೆಲೆಯೊಳಕ್ಕೆ ನಮ್ಮನ್ನು ಕರೆದೊಯ್ಯಲಾಗುತ್ತದೆ. ಒಟ್ಟು ೪೬೦ ಹೊರಾಂಗಣ ದೃಶ್ಯಗಳು ಮತ್ತು ಅನೇಕ ಚಲನಚಿತ್ರಗಳಿಗಾಗಿ ನಿರ್ಮಿಸಲಾದ ಪೇಟೆಯ ಬೀದಿಗಳು, ಹಳ್ಳಿಯ ಮನೆಗಳು, ಉದ್ಯಾನ, ಸುರಂಗಮಾರ್ಗ ಮತ್ತು ಬೆಟ್ಟದ ಏರುಗಳು ಇಲ್ಲಿವೆ. ಬಹುಮುಖ್ಯವಾದ ಊರುಗಳ, ಆಯಾ ಚಿತ್ರಕಥೆಗೆ ಸಂಬಂಧಿಸಿದ ಸ್ಥಳಗಳು, ದೊಡ್ಡ ದೊಡ್ಡ ಕಟ್ಟಡಗಳು, ಅಂಗಡಿಬೀದಿ, ಉಪಹಾರ ಗೃಹದ ದೃಶ್ಯ, ಇವೆಲ್ಲಾ ಹೊರಗಿನಿಂದ ನಿಂತು ನೋಡುವ ನಮಗೆ ವಾಸ್ತವವೆಂಬಂತೆಯೆ ತೋರುತ್ತವೆ. ಆದರೆ ಒಳಗೆ ಹೋಗಿ ನೋಡಿದರೆ ಏನೆಂದರೆ ಏನೂ ಇಲ್ಲ. ಎಲ್ಲ ಖಾಲಿ ಖಾಲಿ. ಈ ಎಲ್ಲವೂ ತೋರಿಕೆಗಾಗಿ ನಿರ್ಮಿತಿಯಾದ ರಚನೆಗಳು. ನಾವು ಕುಳಿತ ಟ್ರಾಲಿ, ಒಂದು ದೊಡ್ಡ ರಣರಂಗದ ಪರಿಸರವನ್ನು ಪ್ರವೇಶಿಸುತ್ತದೆ. ಕೂಡಲೆ ನಮ್ಮ ಕಡೆ ಗುರಿಯಿಟ್ಟ ಬಂದೂಕುಗಳೂ, ಫಿರಂಗಿಗಳೂ ಢಮಾರ್ ಎಂದು ಸಿಡಿಯತೊಡಗಿ ದಟ್ಟವಾದ ಹೊಗೆ ಆವರಿಸುತ್ತದೆ. ಟ್ರಾಲಿಯ ಮಾರ್ಗದರ್ಶಕಿಯಾದ ಹೆಣ್ಣು, ಟ್ರಾಲಿಯ ಡ್ರೈವರ್‌ನನ್ನು ಉದ್ದೇಶಿಸಿ, ‘ಅಯ್ಯೋ ಅಪ್ಪ, ನಮ್ಮನ್ನು ಎಂಥ ಕಡೆ ತಂದೆಯೋ, ನಮ್ಮನ್ನು ಕೊಂದೆಯೋ’ ಎಂದು ಅಳು ದನಿಯಲ್ಲಿ ಅಭಿನಯ ಮಾಡುತ್ತಾಳೆ. ರಣರಂಗದ ಸಿಡಿಗುಂಡುಗಳ ಸದ್ದು, ದಟ್ಟವಾದ ಹೊಗೆಯ ನಡುವೆ ಕುದುರೆಗಳ ಖುರಪುಟಧ್ವನಿ, ಸಾಯುವವರ, ನೋಯುವವರ ಚೀತ್ಕಾರ ಇವುಗಳ ಮಧ್ಯೆ ಸಿಕ್ಕ ನಮ್ಮ ಎದೆ ಬಡಿತ ಹೆಚ್ಚಾಗುತ್ತದೆ. ಸ್ವಲ್ಪ ಹೊತ್ತಿನಲ್ಲೇ ನಾವು ಕೂತ ಟ್ರಾಲಿ ಆ ರಣರಂಗವನ್ನು ಹಾದು ಮುಂದೆ ಬರುತ್ತದೆ. ಈಗ ನಾವು ಎತ್ತರವಾದ ಗಗನಚುಂಬಿ ಮಹಾನಗರದ ಬೀದಿಯಲಿದ್ದೇವೆ. ಅದು ನ್ಯೂಯಾರ್ಕ್ ನಗರ. ರಾತ್ರಿಯಾಗಿದೆ. ನಗರದ ಎತ್ತರವಾದ ಕಟ್ಟಡಗಳ ಕಿಟಕಿ ಕಣ್ಣುಗಳ ತುಂಬ ಬೆಳಕಿದೆ. ಇದ್ದಕ್ಕಿದ್ದ ಹಾಗೆ ಕಿವಿ ಬಿರಿಯುವ ಭಯಂಕರ ಚೀತ್ಕಾರವೊಂದು ನಮ್ಮನ್ನು ನಡುಗಿಸುತ್ತದೆ. ಆ ನಗರದ ಕಿಕ್ಕಿರಿದ ಕಟ್ಟಡಗಳ ಇಕ್ಕಟ್ಟಿನಿಂದ ಭಾರೀ ಗಾತ್ರದ ಗೊರಿಲ್ಲಾವೊಂದು ತಟ್ಟನೆ ಮೇಲೆದ್ದು, ತನ್ನ ಕೆಂಪಾದ ಅಗಲವಾದ ಬಾಯಿ ತೆರೆದು, ತನ್ನ ಕಪ್ಪು ಕೂದಲ ಉದ್ದವಾದ ಕೈಯ್ಯನ್ನು ನಮ್ಮ ಕಡೆ ಚಾಚುತ್ತದೆ. ಎರಡೂ ಕಡೆ ನಿಂತ ಮನೆಗಳು ಹೊತ್ತಿಕೊಂಡು ಉರಿ ಕಾಣಿಸುತ್ತದೆ. ಗೊರಿಲ್ಲಾದ ಅಬ್ಬರ, ಹೊತ್ತಿಕೊಂಡು ಉರಿಯುವ ಮನೆಗಳ ನೋಟ, ನಮ್ಮ ಮಾರ್ಗದರ್ಶಕಿಯ ಗೋಳು ದನಿಯ ಅಭಿನಯ- ಎಲ್ಲವೂ ನಮ್ಮಲ್ಲಿ ತಲ್ಲಣವನ್ನುಂಟು ಮಾಡುತ್ತದೆ. ವಾಸ್ತವವಾಗಿ ನಮ್ಮೆದುರು ಈಗ ಅಭಿನಯಿತವಾದ ಈ ದೃಶ್ಯ ಹಿಂದೆ ಒಂದು ಕಾಲಕ್ಕೆ ಜಗತ್ ಪ್ರಸಿದ್ಧವಾದ, ‘ಕಿಂಗ್ ಕಾಂಗ್’ ಎಂಬ ಚಲನಚಿತ್ರದ ದೃಶ್ಯವೊಂದರ ಪುನರಭಿನಯ. ‘ಕಿಂಗ್ ಕಾಂಗ್’ ಎನ್ನುವುದು ಆ ಚಿತ್ರದಲ್ಲಿ ಬರುವ ಬೃಹದ್ಗಾತ್ರದ ಗೊರಿಲ್ಲಾದ ಹೆಸರು. ಈ ಭಯೋತ್ಪಾದಕ ಭ್ರಮಾಲೋಕವನ್ನು ದಾಟಿ, ನಮ್ಮ ಟ್ರಾಲಿ ಮುಂದೆ ಬರುತ್ತದೆ. ನಾವೊಂದು ಗ್ರಾಮಾಂತರ ಪರಿಸರದಲ್ಲಿದ್ದೇವೆ. ಎರಡೂ ಕಡೆ ಚಾಚಿಕೊಂಡ ಹಳ್ಳಿಯ ಮನೆಗಳ ಬೀದಿ. ನಾವು ನೋಡುತ್ತಿದ್ದ ಹಾಗೆ ಅದೆಲ್ಲಿಂದಲೋ ಭೋರ್ಗರೆಯುವ ನೀರಿನ ಪ್ರವಾಹವೊಂದು, ಹಳ್ಳಿ ಮನೆಯ ಬೀದಿಯಿಕ್ಕಟ್ಟುಗಳ ಮಧ್ಯೆ ನುಗ್ಗಿ ಬಂದು, ನಾವು ಕೂತ ಟ್ರಾಲಿಯ ಗಾಲಿಗಳಿಗೆ ಬಡಿದು ಮುಂದೆ ಹೋಗುತ್ತದೆ. ಇನ್ನೂ ಮುಂದುವರಿದು ನಮ್ಮ ಟ್ರಾಲಿ ಬೆಟ್ಟದ ಗುಹೆಯೊಳಗೆ, ಸುರಂಗ ಮಾರ್ಗವನ್ನು ಪ್ರವೇಶಿಸುತ್ತದೆ. ಆಗ ಬೆಟ್ಟದೊಳಗಿನ ಸುರಂಗಮಾರ್ಗದ ಮೇಲಿನ ಹಿಮಾಚ್ಛಾದಿತ ಗೋಡೆಗಳು ಕುಸಿದು, ಇನ್ನೇನು ನಮ್ಮ ಮೇಲೆಯೆ ಬೀಳುತ್ತವೆ ಅನ್ನಿಸುತ್ತದೆ. ಈ ‘ಅಪಾಯ’ದಿಂದ ಪಾರಾಗಿ ಸರೋವರದ ತೀರವೊಂದರ ಬದಿಗೆ ನಾವು ಬರುತ್ತೇವೆ. ಆ ಸರೋವರ ಜಲದೊಳಗೆ ಬಾಯ್ದೆರೆದುಕೊಂಡ ಷಾರ್ಕ್‌ಮೀನು ನಮ್ಮ ಕಡೆಗೇ ಧಾವಿಸುತ್ತದೆ. ಈ ರಬ್ಬರಿನ ಷಾರ್ಕ್ ಯಾವುದು ಗೊತ್ತೆ? ಬಹುಶಃ ಎಲ್ಲರೂ ನೋಡಿರಬಹುದಾದ ‘JAWS’ ಎಂಬ ಚಿತ್ರದಲ್ಲಿ ಬರುವ ಷಾರ್ಕ್ ಇದೇ. ಒಟ್ಟಿನಲ್ಲಿ ಇದೊಂದು ಭ್ರಮಾಲೋಕ. ರಜತ ಪರದೆಯ ಮೇಲೆ ನಾವು ಕಾಣುವ ಚಲನಚಿತ್ರದ ವಿಸ್ಮಯಾದ್ಭುತಗಳಿಗೆ, ಮೂಲವಾದ ಒಳಮನೆಯ ರಹಸ್ಯಗಳು, ಅಲ್ಲ ವಾಸ್ತವಗಳು ಇಲ್ಲಿವೆ.

ಇವಲ್ಲದೆ ಇನ್ನೂ ಹಲವಾರು ಪ್ರದರ್ಶನಗಳು ಇಲ್ಲಿ ಹರಡಿಕೊಂಡಿವೆ. ಚಲನಚಿತ್ರಗಳನ್ನು ತೆಗೆಯಲು ಜೋಡಿಸಿದ, ವೀರಾದ್ಭುತ ಕತೆಗಳ, ‘ಸೆಟ್ಟಿಂಗ್’ ಇಲ್ಲಿವೆ. ವೈಜ್ಞಾನಿಕ ಚಲನಚಿತ್ರಗಳನ್ನು ತೆಗೆಯುವಾಗ ಅನುಸರಿಸುವ ತಂತ್ರ ವಿಶೇಷಗಳೂ ಇಲ್ಲಿವೆ. ಅನೇಕ ಸಣ್ಣ ಸ್ಟುಡಿಯೋಗಳಲ್ಲಿ, ಹಗಲೂ ರಾತ್ರಿ ಟಿವಿ. ಚಿತ್ರಗಳ ತಯಾರಿಕೆ ನಡೆದೇ ಇದೆ.

ಸಂಜೆಯವರೆಗೂ ಕುತೂಹಲದ ಕಣ್ಣಿಂದ ಅಲೆದಾಡಿ ಸುಸ್ತಾಯಿತು. ಇನ್ನೂ ನಾನು ಹಿಡಿಯಬೇಕಾದ ಬಸ್ಸಿಗೆ ಸಮಯವಿದ್ದುದರಿಂದ, ಹಣ್ಣು ಹಂಪಲು ಮೇಯುತ್ತಾ ಚಾ ಕುಡಿಯುತ್ತಾ, ಉತ್ಸಾಹದ ಚಿಲುಮೆಗಳಂತಿದ್ದ ಜನರ  ಮಧ್ಯೆ ಅಡ್ಡಾಡಿದೆ. ದೇಶ ವಿದೇಶದ ಜನರ ನಡುವೆ, ನಮ್ಮ ಭಾರತೀಯರನ್ನು ಸಾಕಷ್ಟು ಸಂಖ್ಯೆಯಲ್ಲಿ ಕಂಡೆ. ನನ್ನನ್ನಿರಲಿ, ಅವರು ಇತg   ಭಾರತೀಯರನ್ನು ಕೂಡಾ ಕುತೂಹಲಕ್ಕಾದರೂ ಮಾತನಾಡಿಸದೆ, ತಮ್ಮ ತಮ್ಮವರ ಜತೆಗೆ, ಒಂದು ಬಗೆಯ ಬಿಗುಮಾನದಿಂದ ನಡೆದುಕೊಂಡಂತೆ ತೋರಿತು.

ಲಾಸ್‌ಏಂಜಲೀಸ್‌ಗೆ ಸಮೀಪದಲ್ಲಿ ವಾಲ್ಟ್‌ಡಿಸ್ನಿ ಮೊದಲು ಸ್ಥಾಪಿಸಿದ ಡಿಸ್ನಿಲ್ಯಾಂಡ್ ಇದೆ. ಆದರೆ ನಾನು ಮಯಾಮಿಗೆ ಹೋಗುವ ಕಾರ‍್ಯಕ್ರಮವಿದ್ದುದರಿಂದ, ಅಲ್ಲಿಗೆ ಸಮೀಪದ ಆರ್ಲ್ಯಾಂಡೋದಲ್ಲಿರುವ ವಿಸ್ತೃತವಾದ ಡಿಸ್ನಿವರ್ಲ್ಡ್ ಅನ್ನು ನೋಡುವ ಉದ್ದೇಶದಿಂದ, ಇಲ್ಲಿನ ಡಿಸ್ನಿಲ್ಯಾಂಡನ್ನು ನೋಡದೆ, ಅದರ ಬದಲು ಲಾಸ್‌ಏಂಜಲೀಸ್‌ನಲ್ಲಿರುವ ಸುಪ್ರಸಿದ್ಧವಾದ ಕೌಂಟಿಮ್ಯೂಸಿಯಂ ಮತ್ತು ಸ್ವಾಮಿ ಯೋಗಾನಂದ ಪರಮಹಂಸರು ಸ್ಥಾಪಿಸಿದ, ಆಧ್ಯಾತ್ಮಿಕ ಕೇಂದ್ರವನ್ನು ನೋಡುವುದರಲ್ಲಿ, ಇನ್ನೂ ಒಂದು ದಿನವನ್ನು ಬಳಸಿಕೊಂಡೆ.

ಪೆಸಿಫಿಕ್‌ಸಾಗರ ತೀರದ ಈ ನಗರ, ಸ್ಯಾನ್‌ಫ್ರಾನ್ಸಿಸ್ಕೋದಂತೆಯೇ ಭೂಕಂಪಗಳ ಬೀಡು. ೧೮೫೭ರಲ್ಲಿ ಸಂಭವಿಸಿದ ಭಾರೀ ಭೂಕಂಪದಿಂದ ಇಡೀ ನಗರ ಹಾನಿಗೊಳಗಾಯಿತು. ೧೯೭೨ರಲ್ಲೂ ಇನ್ನೊಂದು ಭೂಕಂಪ ಸಂಭವಿಸಿತು. ೩೦.೧೦.೧೯೮೭ರ ಬೆಳಿಗ್ಗೆ ಫೀನಿಕ್ಸ್‌ಗೆ ನಾನು ಹಿಡಿಯಬೇಕಾದ ವಿಮಾನಕ್ಕಾಗಿ, ಲಾಸ್‌ಏಂಜಲೀಸ್ ವಿಮಾನ ನಿಲ್ದಾಣಕ್ಕೆ ನನ್ನನ್ನು ಕರೆದುಕೊಂಡು ಬರುವ ದಾರಿಯಲ್ಲಿ ಶ್ರೀನಿವಾಸ್ ಹೇಳಿದರು: ‘ಇಷ್ಟರಲ್ಲೇ ಇನ್ನೂ ಒಂದು ಭೂಕಂಪವನ್ನು ನಾವು ನಿರೀಕ್ಷಿಸುತ್ತಿದ್ದೇವೆ.’