ಬದುಕು ಮತ್ತು ಸಂಸ್ಕೃತಿ

ಛಟ್ಟಿ ಜನನ ಸಂಸ್ಕಾರ

ಹೆರಿಗೆಯಾದ ಐದನೆಯ ದಿನಕ್ಕೆ ಮಾಡಲಾಗುವ ಛಟ್ಟಿ ಕಾರ್ಯಕ್ರಮವನ್ನು ’ಛಟ್ಟಿ ಮಾತಾಕಿ’ ಪೂಜೆ ಎಂದು ಕರೆಯುತ್ತಾರೆ. ಅಂದು ಹುಟ್ಟಿದ ಮಗುವಿನ ಹಣೆಬರಹ ಬರೆಯುವ ದಿನ ಎಂದೂ ನಂಬಲಾಗಿದೆ. ಅಂದು ಬೆಳಿಗ್ಗೆ ಮುತ್ತೈದೆಯರನ್ನು, ಸಣ್ಣ ಹೆಣ್ಣು-ಗಂಡುಮಕ್ಕಳನ್ನು ಎಣ್ಣೆ ಹಚ್ಚಿ ಸ್ನಾನ ಮಾಡಿಸಲಾಗುತ್ತದೆ. ಎತ್ತಿನ ಸಗಣಿಯಿಂದ ಸೆಟಿಗೆವ್ವನ ಆಕಾರ ಮಾಡಲಾಗುತ್ತದೆ. ಅದನ್ನು ಬಿಳಿ ಬಟ್ಟೆಯಲ್ಲಿರಿಸಿ, ಅದಕ್ಕೆ ಅರಿಷಿಣ, ಕುಂಕುಮ ಹಚ್ಚುತ್ತಾರೆ. ಯದು ಮನೆಗಳಿಂದ ಬರುವ ಸಣ್ಣಮಕ್ಕಳು ತಮ್ಮ ಜೊತೆಗೆ ಬಟ್ಟಲಿಲ್ಲಿ ತರುವ ಜೋಳ, ಗೋಧಿ, ಅಕ್ಕಿಯನ್ನು ದೇವರ ಮುಂದೆ ಹಾಕಲಾಗುತ್ತದೆ. ಖಾಲಿಯಾದ ಬಟ್ಟಲಲ್ಲಿ ಅನ್ನ, ತುಪ್ಪ, ಬೆಲ್ಲ ಹಾಕಿ ಪೂಜೆಗೆ ಇಡುತ್ತಾರೆ. ಪೂಜೆ ನಂತರ ಈ ಬಟ್ಟಲನ್ನು ಆಯಾ ಮಕ್ಕಳ ಕೈಗೆ ಕೊಡುತ್ತಾರೆ ಮಕ್ಕಳು ಅದರಲ್ಲಿನ ಒಂದೊಂದು ತುತ್ತು ಬಾಣಂತಿಯ ಉಡಿಯಲ್ಲಿ ಹಾಕುತ್ತಾರೆ. ಬಾಣಂತಿ ಇದನ್ನು ಪ್ರಸಾದವೆಂದು ತಿನ್ನುತ್ತಾಳೆ. ಈ ಸಂದರ್ಭದಲ್ಲಿ ಮನೆಯ ಮಗಳ ಉಡಿ ತುಂಬುವ ಕಾರ್ಯಕ್ರಮ ನಡೆಯುತ್ತದೆ. ಬಹುತೇಕವಾಗಿ ಜೋಳದಿಂದಲೇ ಉಡಿ ತುಂಬುತ್ತಾರೆ. ಜೋಳವನ್ನು ’ಮುತ್ತಿನ’ ರೂಪದಲ್ಲಿ ಕಾಣಲಾಗುತ್ತದೆ.

ಸಂಜೆ ಮುಖ್ಯ ಕಾರ್ಯಕ್ರಮ ನಡೆಯುತ್ತದೆ. ಹೋತಮರಿಯನ್ನು ಕೊಯ್ದು ಮಾಂಸದ ಅಡಿಗೆ ಮಾಡುವದು, ಅಂಗಡಿಯಿಂದ ತಂದ ಮಾಂಸದ ಅಡಿಗೆ ಮಾಡುವುದು ಉಂಟು. ಕೆಲವೆಡೆಗೆ ಸಸ್ಯಾಹಾರದ ಅಡಿಗೆ ಮಾಡುವರು. ಮಾಡಿದ ಅಡಿಗೆ ತಾಟಿನಲ್ಲಿ ತುಂಬಿ ದೇವರ ಮುಂದಿಡುತ್ತಾರೆ. ಇದರ ಜೊತೆಗೆ ಪೆನ್ನು, ಹಾಳಿ ಮತ್ತು ಕರಿದಾರದ ಉಂಡಿ ಇಟ್ಟಿರುತ್ತಾರೆ. ಹುಟ್ಟಿದ ಮಗುವನ್ನು ಸ್ವಲ್ಪ ಹೊತ್ತು ಇದರ ಮುಂದೆಯೇ ಮಲಗಿಸುತ್ತಾರೆ. ಆಗಲೇ ಮಗುವಿನ ಹಣೆಬರಹ ಬರೆಯಲ್ಪಡುತ್ತದೆಯೆಂಬ ನಂಬಿಕೆ ಇದೆ. ಕರಿದಾರವನ್ನು ಮಗು ಮತ್ತು ಬಾಣಂತಿ ಕೈ -ಕಾಲಲ್ಲಿ ಕಟ್ಟಿ, ಕೆಟ್ಟ ದೃಷ್ಟಿ ಬೀಳದಂತೆ ರಕ್ಷಿಸುವ ವಿಧಾನವಿದೆ. ವೃದ್ಧೆಯರು ಮನೆಯಲ್ಲಿ ಆಗ ಹಾಡು ಹಾಡುತ್ತಿರುತ್ತಾರೆ. ಅವರಿಗೆ ಊಟ ಮಾಡಿಸಿದ ನಂತರವೇ ಬಂಧು ಬಳಗದವರು ಊಟ ಮಾಡುತ್ತಾರೆ. ಊಟಕ್ಕೆ ಬಂದವರು ಮಗಿವಿಗೆ ಅರಿವೆ, ಕೊಬ್ಬರಿ-ಬೆಲ್ಲ ಮತ್ತು ಬಾಣಂತಿಯ ಸಾಮಾನು ತರುತ್ತಾರೆ. ಇದಾದ ನಂತರವೇ ಬಾಣಂತಿ ಮತ್ತು ಮಗುವಿಗೆ ಕಾಡಿಗೆ ಹಚ್ಚಲಾಗುತ್ತದೆ.

ಎಂಟು ದಿನಕ್ಕೊಮ್ಮೆ ’ಛಲ್ಲಾ’ ಎಂದು ಎರೆಯುತ್ತಾರೆ. ಬಾಣಂತಿ ಮತ್ತು ಮಗಿವಿಗೆ ಎರೆಯುವ ಇಂಥ ಒಟ್ಟು ಐದು ಕಾರ್ಯಕ್ರಮಗಳು ನಡೆಯುತ್ತವೆ. ಆಗ ಪ್ರತಿಬಾರಿಯೂ ಬಾಣಂತಿಗೆ ಊಟ ಮಾಡಲು ಸಿಹಿ ಅಡಿಗೆಯನ್ನು ಕೊಡುತ್ತಾರೆ. ೪೦ ದಿನಗಳಾದ ನಂತರ ’ಗಂಗಾಮಾತೆ’ಯ ಪೂಜೆಯ ಕಾರ್ಯಕ್ರಮ ನಡೆಯುತ್ತದೆ.

ಮೊದಲು ಬಾವಿಗಳು ಇದ್ದವು. ಬಾಣಂತಿ ಮಗುವಿನೊಂದಿಗೆ ಅಲ್ಲಿಗೆ ಹೋಗಿ ಪೂಜೆ ಮಾಡುತ್ತಿದ್ದಳು. ಈಗ ಬೋರವೆಲ್ಲಿನ ಕಡೆಗೆ ಹೋಗಿ ಪೂಜೆ ಮಾಡುತ್ತಾರೆ. ಅದಾದ ನಂತರ ಬಾಣಂತಿಗೆ ಹಸಿರು ಬಳೆ ತೊಡಿಸುತ್ತಾರೆ. ಅಂದಿನಿಂದ ಬಾಣಂತಿ ಹೊರಗೆ ಅಡ್ಡಾಡಲು, ಮನೆಯ ದೈನಂದಿನ ಕೆಲಸ ಕಾರ್ಯದಲ್ಲಿ ತೊಡಗುವಳು.ಚೊಚ್ಚಲ ಹೆರಿಗೆ ಬಹುತೇಕವಾಗಿ ತವರು ಮನೆಯಲ್ಲಿಯೇ ನಡೆಯುತ್ತದೆಯೆಂಬ ಅಂಶವು ಇಲ್ಲಿ ಗಮನಾರ್ಹವಾಗಿದೆ.

ನಾಮಕರಣ:

ಮಗುವಿನ ನಾಮಕರಣ ಕಾರ್ಯಕ್ರಮವು ಬಾಣಂತಿಯ ತವರು ಮನೆಯಲ್ಲಿ ಅಥವಾ ಗಂಡನ ಮನೆಯಲ್ಲಿ ನಡೆಯುತ್ತದೆ. ಅನುಕೂಲ ಆದಾಗ ತೊಟ್ಟಲಲ್ಲಿ ಹಾಕಲಾಗುತ್ತದೆ. ಇದಕ್ಕೆ ನಿಶ್ಚಿತ ಸಮಯವಿಲ್ಲ, ಈ ಸಂದರ್ಭದಲ್ಲಿ ತೊಟ್ಟಲನ್ನು ಶೃಂಗಾರ ಮಾಡಿ ಅದರ ಕೆಳಗೆ ನೀರು ತುಂಬಿದ ತುಂಬಿಗೆ ಇಡಲಾಗುತ್ತದೆ. ತೊಟ್ಟಿಲಿಗೆ ಪೂಜೆ ಮಾಡಿ ಆರತಿ ಮಾಡಲಾಗುತ್ತದೆ. ಶ್ರೀಗಂಧದ ಕಟ್ಟಿಗೆಯನ್ನುಹೊಸ ಅರಿವೆಯಲ್ಲಿ ಸುತ್ತಿ ತೊಟ್ಟಿಲಲ್ಲಿ ಇಡುತ್ತಾರೆ. ಮೊದಲು ಆ ಕಟ್ಟಿಗೆಗೇ ಹೆಸರಿಟ್ಟು ನಂತರ ಮಗುವನ್ನು ಐದು ಸಲ ತೊಟ್ಟಿಲ ಕೆಳಗಿನಿಂದ ಮೇಲೆ ತೆಗೆದುಕೊಂಡು ತೊಟ್ಟಿಲಲ್ಲಿ ಹಾಕುತ್ತಾರೆ. ಎಲೆಯಿಂದ ತುತ್ತೂರಿ ಮಾಡಿ ಅದರ ಮೂಲಕ ಮೊದಲು ಮನೆ ದೇವರ, ಐವರು ಹಿರಿಯರ ಹೆಸರು ಇಟ್ಟು ನಂತರ ತಮಗೆ ಬೇಕಾದ ಹೆಸರನ್ನು ಮಗುವಿಗೆ ಇಡುತ್ತಾರೆ. ಬಂಧು ಬಳಗದವರು ಮಗುವಿಗೆ ಹೊಸ ಅರಿವೆ ತರುತ್ತಾರೆ. ತುತ್ತೂರಿಯ ಮೂಲಕ ಮಗುವಿನ ಕಿವಿಯಲ್ಲಿಹೆಸರು ಹೇಳಲಾಗುತ್ತದೆ. ಈ ಎಲ್ಲ ಕಾರ್ಯಕ್ರಮ ನಿರ್ವಹಿಸು ಜವಾಬ್ದಾರಿಯು ಸೋದರತ್ತೆಗೆ ಸೇರಿದ್ದಾಗಿದೆ.

ಜಾವಳ ತೆಗೆಸುವುದು:

ಮಗು ಹುಟ್ಟಿದ ವರ್ಷದೊಳಗೆ ಅಥವಾ ಮೂರು ವರ್ಷದೊಳಗೆ ಜಾವುಳ ತೆಗೆಸುವ ಕಾರ್ಯಕ್ರಮ ನಡೆಯುತ್ತದೆ. ಆಯಾ ಮನೆತನದವರು ತಮ್ಮ ಮನೆ ದೇವರಿಗೆ ಬೇಡಿಕೊಂಡ ಸ್ಥಳದಲ್ಲಿ ಅಥವಾ ಮನೆಯಲ್ಲಿಯೇ ಜವುಳ ತೆಗೆಸಲಾಗುತ್ತದೆ. ಈ ಸಂದರ್ಭದಲ್ಲಿಯೂ ಸಹ ಹೋತಮರಿ ಕೋಯ್ದು ಅಥವಾ ಸಿಹಿ ಅಡಿಗೆ ಮಾಡಿ ಬೇಕಾದವರನ್ನು ಊಟಕ್ಕೆ ಕರೆಯುತ್ತಾರೆ.

ತವರು ಮನೆಯವರು ಗಂಡ ಹೆಂಡತಿಯನ್ನು ಹೂ ಮುಡಿಸಿ, ಅರಿವೆ ಕೊಡುತ್ತಾರೆ. ಮಗುವಿನ ಮಾಮಾ ಅಂದರೆ ಬಾಣಂತಿಯ ಅಣ್ಣ ಇಲ್ಲವೇ ತಮ್ಮನಿಗೆ ಇದರಲ್ಲಿ ಆದ್ಯತೆ. ಕೂಸಿನ ಸ್ವಲ್ಪ ಕೂದಲನ್ನು ಬಂಗಾರದ ಉಂಗರದಲ್ಲಿ ಹಾಕಿ ಮಾಮಾ ಅವುಗಳನ್ನು ಸಾಂಕೇತಿಕವಾಗಿ ಕತ್ತರಿಸುತ್ತಾನೆ. ನಂತರ ಕ್ಷೌರಿಕನಿಂದ ಕೂಸಿನ ತಲೆಗೂದಲನ್ನೇಲ್ಲಾ ತೆಗೆದು ಹಾಕಲಾಗುತ್ತದೆ. ತಲೆಗೆ ತೇಯ್ದಿಟ್ಟ ಶ್ರೀಗಂಧವನ್ನು ಲೇಪಿಸಲಾಗುತ್ತದೆ. ಇದಾದ ನಂತರ ಪೂಜೆ ಮಾಡಿ, ಮಾಮಾನಿಗೆ ಹೊಸ ಅರಿವೆಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಬಂಧು ಬಾಂಧವರನ್ನು ಇಷ್ಟ ಮಿತ್ರರನ್ನು ಊಟಕ್ಕೆ ಕರೆಯಲಾಗುತ್ತದೆ.

ಋತುಮತಿಯಾದಾಗ:

ರಜಪೂತರಲ್ಲಿ ವಧುದಕ್ಷಿಣೆ ಪದ್ದತಿ ಇದೆ, ಎಂದರೆ ಬಹುತೇಕ ಜನರಿಗೆ ಆಶ್ಚರ್ಯವಾಗದೇಇರದು. ಇಂಥ ಸಂದರ್ಭದಲ್ಲಿ ನಮ್ಮ ಮನೆಯಲ್ಲಿಯೂ ಕನ್ಯೆ ಇದ್ದಾಳೆಂದು ಜನರಿಗೆ ತಿಳಿಸುವುದಕ್ಕಾಗಿ ಪೊರಗಿ ಋತುಮತಿಯಾದಾಗ ಅವಳನ್ನುಮಂಟಪದಲ್ಲಿ ಕೂಡ್ರಿಸಿ-ಹಾಡುಹಾಡುವ ಪದ್ಧತಿ ಆರಂಭವಾಯಿತು. ಈಗ ಪರಿಸ್ಥಿತಿ ಬದಲಾಗಿರುವುದರಿಂದ ಹೆಣ್ಣಿಗೆ ೧೩-೧೪ನೇ ವಯಸ್ಸಿನಲ್ಲಿ ಆಗುವ ಸಹಜ ಬದಲಾವಣೆ ಎಂದು ಇದನ್ನು ಪರಿಗಣಿಸಿದರೂ ಸಹ ಮೊದಲಿನ ರೂಢಿ ಅಲ್ಲಲ್ಲಿ ಚಾಲ್ತಿಯಲ್ಲಿದೆ.

ಬಾಲಿಕೆ- ಸ್ತ್ರೀ ಆಗಿಪರಿವರ್ತನೆಯಾದಾಗ ಅವಳು ತೊಟ್ಟಿದ್ದ ಅರಿವೆಗಳನ್ನು ಅಗಸರಿಗೆ ಕೊಟ್ಟು, ಅವರು ಕೊಟ್ಟ ಅರಿವೆಯನ್ನುತೊಟ್ಟುಕೊಳ್ಳುವ ರೂಢಿ ಮೊದಲು ಇತ್ತು, ಬಾಲಿಕೆ ಋತುಮತಿಯಾದನಂತರ ಆ ವೇಳೆಯ ಮಹತ್ವದ ಬಗೆಗೆ ಬ್ರಾಹ್ಮಣರಲ್ಲಿ ಕೇಳಲಾಗುತ್ತದೆ. ಅವರೇನಾದರೂ ಶಾಂತಿ ಮಾಡಿಸಬೇಕೆಂದರೆ ಅದರಂತೆಯೇ ನಡೆಯಲಾಗುತ್ತದೆ. ೯ ಅಥವಾ ೧೧ದಿನಗಳ ವರೆಗೆ ಅವಳನ್ನು ಪ್ರತ್ಯೇಕವಾಗಿ ಕ್ರೂಡಿಸಲಾಗುತ್ತದೆ. ಈ ಸಮಯದಲ್ಲಿ ಇವಳಿಗೆ ಎರೆಯುವ, ಶೃಂಗರಿಸುವ ಕೆಲಸ ಸಂಪೂರ್ಣವಾಗಿ ಸೋದರತ್ತೆಗೆ ಸೇರಿದ್ದು, ಅವಳೊಬ್ಬಳು ಮಾತ್ರ ಇವಳನ್ನು ಮುಟ್ಟುತ್ತಾಳೆ. ನಿತ್ಯವೂ ಆರತಿ ಮಾಡಲಾಗುತ್ತದೆ. ಕೆಲವೆಡೆ ಹಾಡು ಹಾಡುವ ಪರಂಪರೆಯೂ ಇದೆ. ಕೊನೆಯ ದಿನ ತಂದೆ ತಾಯಿಗಳು ಹೊಸ ಸೀರೆ ತಂದು ಉಡಿಸಿ, ಉಡಿ ತುಂಬುತ್ತಾರೆ. ಈ ಸಂದರ್ಭದಲ್ಲಿ ಸೋದರತ್ತೆಗೂ ಹೊಸ ಸೀರೆ ತೊಡಿಸಲಾಗುತ್ತದೆ. ದೇವರ ಗುಡಿಗೆ ಹೋಗಿ ಬಂದ ನಂತರ ಈ ಹೆಣ್ಣುಮಗಳ ಸಹಜ ಜೀವನ ಆರಂಭವಾಗುತ್ತದೆ.

ಮದುವೆ

ರಜಪೂತರಲ್ಲಿ ಇತರರಿಗಿಂತಲೂ ಭಿನ್ನವಾದ ರೀತಿಯಲ್ಲಿ ಮತ್ತು ಆಕರ್ಷಣೀಯವಾಗಿ ಮದುವೆ ಸಮಾರಮಭಗಳು ನಡೆಯುತ್ತವೆ. ಸ್ವಗೋತ್ರದಲ್ಲಿ ವಿವಾಹ ಸಂಬಂಧಗಳು ಏರ್ಪಡುವುದಿಲ್ಲ

ಪಾನ್ ಬಾಟನಾ:

ಮೊದಲು ನಡೆಯುವ ಕಾರ್ಯಕ್ರಮವೆ ಪಾನ್ ಬಾಟನಾ, ದೈವದ ಹಿರಿಯರು ಸೇರಿ ನಡೆಸುವ ಮಾತು ಕತೆ ಅನಂತರ ಸಗಾಯಿ. ಇದಕ್ಕೆ ನಿಶ್ಚಿತಾರ್ಥವೆಂದೂ ಹೆಸರು. ಈ ಕೆಲಸ ಕಡ್ಡಾಯವಾಗಿ ಹೆಣ್ಣಿನ ಮನೆಯಲ್ಲಿಯೇ ನಡೆಯುತ್ತದೆ. ಸಮಾಜದ ಹಿರಿಯರು, ಬಂಧು-ಮಿತ್ರರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಹೆಣ್ಣಿಗೆ ಒಂದು ಜೊತೆ ಕಾಲು ಚೈನ, ಸೀರೆ-ಕುಪ್ಪಸ, ಕೊಬ್ಬರಿ ಬೆಲ್ಲ ಕೊಡುತ್ತಾರೆ. ಮತ್ತು ಹೂಮುಡಿಸಿ, ಉಡಿ ತುಂಬಲಾಗುತ್ತದೆ. ಹೆಣ್ಣಿನ ಮನೆಯವರು ಅನ್ನ ಸಕ್ಕರೆ (ಸಕ್ರಾನಾ)ಯನ್ನು ಬೆರೆಸಿ ತಾಟೊಂದರಲ್ಲಿ ತುಂಬಿ ಕೊಡುತ್ತಾರೆ. ಅದನ್ನು ವರನ ಮನೆಗೆ ತಂದು, ಅಲ್ಲಿ ಆತನಿಗೆ ಹೂ ಮುಡಿಸಿ, ಎಲ್ಲರೂ ಕೂಡಿ ನಾಲ್ಕೈದು ಮತ್ತು ಸಕ್ರಾನಾ ತಿನ್ನುವುದು ವಾಡಿಕೆ. ಬದಲಾದ ಪರಿಸ್ಥಿತಿಯಲ್ಲಿಯೂ ಸಹ ಈ ಪರಂಪರೆ ಮುಂದುವರೆದಿದೆ. ಹೆಣ್ಣಿನ ಮನೆಯಲ್ಲಿ ಗಂಡಿನವರು ಮೊದಲಸಲ ಊಟ ಮಾಡುವುದು ಕಾರ್ಯಕ್ರಮದ ವಿಶ್ಲೇಷತೆ.

ರಜಾ ಕೇಳುವುದು:

ವಿವಾಹಕ್ಕೆ ಶುಭ ಮುಹೂರ್ತವನ್ನು ನಿಗದಿ ಮಾಡುವುದು. ಇದೂ ಸಹ ಹೆಣ್ಣಿನ ಮನೆಯಲ್ಲಿಯೇ ನಡೆಯುವ ಕಾರ್ಯಕ್ರಮ. ಮದುವೆ ಮಾಡಿಕೊಡುವುದು ಹೆಣ್ಣಿನವರ ಕೆಲಸ. ಬಹುತೇಕ ಮದುವೆಗಳು ಹಣ್ಣಿನ ಮನೆಯ ಮುಂದೆಯೇ ನಡೆಯುತ್ತವೆ. ಛತ್ರ, ಕಲ್ಯಾಣ ಮಂಟಪಗಳಲ್ಲಿ ಮದುವೆ ಆದರೂ ಅದರ ಖರ್ಚು-ವೆಚ್ಚವನ್ನು ಹೆಣ್ಣಿನ ಮನೆಯವರೇ ವಹಿಸಿಕೊಳ್ಳುತ್ತಾರೆ. ಶುಭ ಮುಹೂರ್ತ ನಿಗದಿಯಾದ ನಂತರ ವಿವಹಾ ಸಮಿಪಿಸುತ್ತಿರುವಂತೆಯೇ ವಧುವಿಗೆ ತಂದಿರುವ ಸೀರೆ, ಆಭರಣಗಳನ್ನೆಲ್ಲಾ ದೇವರ ಮುಂದಿಟ್ಟು ಪೂಜಿಸಿ, ವಧುವಿಗೆ ಕಳಿಸಿಕೊಡಲಾಗುತ್ತದೆ. ವಧುವನ್ನು ಸಾಕ್ಷಾತ್ ಲಕ್ಷ್ಮಿಯ ಅವತಾರವೆಂದೇ ರಜಪೂತರು ನಂಬಿದ್ದಾರೆ. ಇದನ್ನು ’ಸುಹಾಗನ ಪೂಜೆ’ ಎಂತಲೂ ಕರೆಯುತ್ತಾರೆ.

ಬಳೆ ಹಾಕಿಸುವುದು:

ಸ್ತ್ರೀಗೆ ಬಳೆ ಶುಭ ಸಂಕೇತವಾಗಿದೆ. ಹೀಗಾಗಿ ಮದುವೆಯ ಕಾರ್ಯಕ್ರಮ ಮುತ್ತೈದೆಯರನ್ನು ಬಾಲಕಿಯರನ್ನು ಕರೆದು ಬಳೆ ಹಾಕಿಸುವುದರೊಂದಿಗೆ ಆರಂಭವಾಗುತ್ತದೆ. ಇಲ್ಲಿ ಹಸಿರು ಬಳೆಗೆ ಪ್ರಥಮ ಆದ್ಯತೆ. ಹಸಿರು ಸಮೃದ್ಧಿಯ ದ್ಯೋತಕವಾಗಿದ್ದು, ಇದನ್ನು ತೊಡಿಸುವ ಮೂಲಕ ಹೆಣ್ಣುಮಗಳ ಜೀವನದಲ್ಲಿ ಸುಖ-ಸಮೃದ್ಧಿಬರಲೆಂದು ಹಾರೈಸಲಾಗುತ್ತದೆ.

ಚಿಕ್ಕನವರಿ ಬೀಸುಕಲ್ಲಿನ ಪೂಜೆ:

ಅರಿಸಿಣ, ಕುಂಕುಮ ವಿವಿಧ ಬಣ್ಣಗಳಿಂದ ಬೀಸುಕಲ್ಲನ್ನು ಶೃಂಗಿರಿಸಿ, ಅದಕ್ಕೆ ಕಂಕಣ ಕಟ್ಟಿ,ಮಯತ್ತೈದೆಯರು ಹಾಡುತ್ತಾ ಅದರಲ್ಲಿಗೋಧಿ ಹಾಕಿ ಬೀಸುತ್ತಾರೆ ಇದಾದ ನಂತರ ಶ್ಯಾವಿಗೆ ಮಣಿಗೆ ಕಂಕಣ ಅದರಲ್ಲಿ ಶ್ಯಾವಿಗೆ ಮಾಡುವರು. ಪೂಜೆಯ ಸಮಯದಲ್ಲಿ ಗಂಡು ಹೆಣ್ಣಿನ ಮನೆಯವರು ನೀಡಿದ ದಕ್ಷಣೆಯನ್ನು ಎಲ್ಲ ಮುತ್ತೈದೆಯರು ಹಂಚಿಕೊಳ್ಳುತ್ತಾರೆ. ಕೊನೆಗೆ ಎಲಿ-ಅಡಿಕೆ ಜೊತೆಗೆ ಚುರುಮರಿಯನ್ನುಮುತ್ತೈದೆಯರಿಗೆ ಉಡಿಯಲ್ಲಿರಿಸಲಾಗುತ್ತದೆ.

ರಜ್ಜಗಾ ರೋಟಿ:

ಹೊರಗಿನ ದೇವರ -ದೇವಿಯರ ಆರಾಧನೆ ಮಾಡುತ್ತ ಜಾಗರಣೆ ಮಾಡುವುದೇ ರಜ್ಜಗಾ. ಹಿರಿಯರ ಆತ್ಮಶಾಂತಿಗಾಗಿ ಮತ್ತು ಪೂರ್ವಜರನ್ನು ಸ್ಮರಿಸುವುದಕ್ಕಾಗಿಯೂ ಸಹ ಈ ಕಾರ್ಯಕ್ರಮ ನಡೆಯುತ್ತದೆ.

ಊಂಚಾ, ಉಂಚಾ ಪಾಡ ಹೈ, ಅಂಬೆ ಕಾ ದರಬಾರ ಹೈ

ಆಜಾ ಮೇರಿ ಮಾ, ತೇರಾ ಇಂತಜಾರ ಹೈ…..

ಎಂದು ದೇವಿಯನ್ನು ಸುತ್ತಿಸುತ್ತ ಹೆಣ್ಣುಮಕ್ಕಳು ರಾತ್ರಿಯಿಡೀ ಜಾಗರಣೆ ಮಾಡುತ್ತಾರೆ ಇದಕ್ಕೆ ’ಜಸ್ಸಾ’ ಹೇಳುವುದು ಎಂತಲೂ ಹೆಸರು. ಈ ಸಂದರ್ಭದಲ್ಲಿ ಪುಟಾಣಿ ಹಿಟ್ಟು ಮತ್ತು ಸಕ್ಕರೆ ಮಿಶ್ರಿತ ಮೇವಾ (ಪ್ರಸಾದ) ವನ್ನು ಹಂಚುತ್ತಾರೆ. ಮದರಂಗಿ ಕಲಿಸಿ ಪೂಜೆಯಾದ ನಂತರ ಹಚ್ಚಿಕೊಂಡು ಶೃಂಗಾರಗೊಳ್ಳುತ್ತಾರೆ. ಕೆಲವೆಡೆಗೆ ಇದನ್ನು ’ರಥಜಗಾ’ ಎನ್ನುವರು. ದೇವರ ಕಳಸ ಸ್ಥಾಪಿಸುತ್ತಾರೆ. ಚನಾಭಾಜಿ-ಹಲವಾಪುರಿ ನೈವೇದ್ಯ ಏರಿಸುತ್ತಾರೆ. ದೇವರ ಹಾಡು ಹಾಡುತ್ತಾರೆ.

ಛಾಂದಾ ಕೊಡುವುದು

ಮದುವೆಯ ಆರಂಭ ಮತ್ತು ಅಂತ್ಯ ’ಛಾಂದಾ’ ಕೊಡುವುದರಿಂದ ಆಗುತ್ತದೆ. ಘಟ್ಟ (ನವರಾತ್ರಿಯಲ್ಲಿ ಮಾಡುವ ಘಟಸ್ಥಾಪನೆ) ಯಾರ ಮನೆಯಲ್ಲಿ ಹಾಕುವರೋ ಅವರ ಮನೆಯಲ್ಲಿ ಮತ್ತು ನರಸಿಂಹ ದೇವರು ಇರುವ ಮನೆಯಲ್ಲಿ ಮದುವೆ ನಡೆಯುತ್ತಿದ್ದರೆ, ಮದುವೆಗೂ ಮೊದಲು ನಿಶ್ಚಿತ ದಿನದಂದು ಮತ್ತುಮದುವೆಯ ನಂತರ ಗಂಡಿನ ಮನೆಯ ಮುಖ್ಯಸ್ಥರು ಜಳಕ ಮಾಡಿ, ಒದ್ದೆ ಅರಿವೆಯಲ್ಲಿ ಹೆಣ್ಣಿನ ಮನೆಗೆ ಹೋಗಿ ಅವರ ಮನೆ ದೇವರಿಗೆ ಪೂಜೆ ಸಲ್ಲಿಸುವುದಕ್ಕಾಗಿ ಹಣ ಕೊಡುತ್ತಾರೆ. ಈ ಹಣದಲ್ಲಿ ಹೆಣ್ಣಿನ ಮನೆಯವರು ಪೂಜಾ ಸಾಮಗ್ರಿಗಳನ್ನು ಖರೀದಿಸಿ ಮನೆ ದೇವರಿಗೆ ಪೂಜೆ ಮಾಡುತ್ತಾರೆ.

ಲಗನ, ಟೀಕಾ, ಸಗಾಯಿ:

ಈ ದಿನ ವಿವಾಹ ಕಾರ್ಯಕರಮದ ಆರಂಭ ಎನ್ನಬಹುದು, ವರ-ವಧುವಿನ ಮನೆ ಮುಂದೆ ಬಂದು ಕುಳಿತುಕೊಳ್ಳುತ್ತಾನೆ. ಗುರು-ಹಿರಿಯರ ಸಮಕ್ಷಮ ’ಟೀಕಾ’ ಕಾರ್ಯಕ್ರಮ ನಡೆಯುತ್ತದೆ. ಅಂದರೆ ವಧುವಿನ ತಮ್ಮನನ್ನು ವಿಶೇಷ ಅಲಂಕಾರ ಮಾಡುತ್ತಾರೆ. ವರನಿಗೆ ತಿಲಕ ಹಚ್ಚಿ ಹಣೆಗೆ ೧ರೂ. ನಾಣ್ಯವನ್ನು ಹಚ್ಚುತ್ತಾರೆ ಮತ್ತು ವಧುವಿನ ತಂದೆತಾಯಿಯ ವತಿಯಿಂದ ಬೆಳ್ಳಿಯ ಕೈ ಕಡಗಕೊಡುತ್ತಾರೆ. “ಅದನ್ನು ಮಾ -ಬಾಪಕೇ ಘರಕೇ ಸವಾಲಾಖ್ಖಾ ಕಡಾ” ಎಂದೇ ಸಂಭೋಧಿಸುತ್ತಾರೆ. ವಧು-ವರರ ಮನೆಯವರ ಉಡುಗೊರೆ ವಿನಿಮಯವೂ ನಡೆಯುತ್ತದೆ. ವಧುವಿಗೆ ವರ ಅಣ್ಣಮನೆಯ ಒಳಗಡೆಗೆ ಬಂದು ಬೆಲ್ಲ, ಕೊಬ್ಬರಿ ಇಟ್ಟು ಉಡಿ ತುಂಬುವನು. ವರನು ತಂದಂತಹ ಮಾವಿನ ಟೊಂಗೆ (ಢಾಲಿ) ಯನ್ನು ವಧುವಿನ ಮನೆ ಮುಂದೆ ಅಂಗಳದಲ್ಲಿ ನೆಡುತ್ತಾರೆ. ಈ ಕೆಲಸವನ್ನುಮನೆಯ ಹೆಣ್ಣುಮಕ್ಕಳೇ ಮಾಡಬೇಕು. ಟೊಂಗೆಯ ಸುತ್ತಲೂ ಮಣ್ಣಿನಿಂದ ಸಣ್ಣ ಕಟ್ಟೆಯೊಂದನ್ನು ಮಾಡಿ, ಅದರ ಮೇಲೆ ಎರಡುಮಣ್ಣಿನ ಮಡಿಕೆಗಳನ್ನಿಟ್ಟು, ಅದರಲ್ಲಿ ದೀಪ ಹಚ್ಚುತ್ತಾರೆ. ಮಡಿಕೆಗಳನ್ನು ಸೆಗಣಿಯಿಂದ, ಬಣ್ಣದಿಂದ ಶೃಂಗರಿಸಿ ಅದಕ್ಕೆ ಜವೆ ಗೋಧಿ ಚುಚ್ಚಿ ಅದರ ಅಂದ ಹೆಚ್ಚಿಸುತ್ತಾರೆ. ಈ ಸಂದರ್ಭದಲ್ಲಿ ’ಕಲಶ ಚೀತನಾ’ ಮತ್ತು ’ಚೌಕ ಮೈ ಭರೂಂಗಿ’ ಎಂಬ ಹಾಡು ಹಾಡಲಾಗುತ್ತದೆ. ಇದನ್ನು ಗಂಗಾಪೂಜೆ ರೂಪದಲ್ಲಿ ಆಚರಿಸಲಾಗುತ್ತದೆ.

ರಸ್ತೆಕೆ ಪೂಜಾ:

ಸಂಜೆಹೆಣ್ಣುಮಕ್ಕಳು ರಸ್ತೆಯ ಪೂಜೆಗೆ ಹೋಗುತ್ತಾರೆ ಗೋಧಿ ಹಿಟ್ಟಿನಿಂದ ತಯಾರಿಸಿದ ಪೂರೆ ಪೂಜೆಯ ನೈವೇದ್ಯವಾಗಿದೆ. ಕೂಡು ರಸ್ತೆಯ ಬಳಿ ಚಿಕ್ಕ ಚಿಕ್ಕ ಕಲ್ಲುಗಳನ್ನಿಟ್ಟು, ಅವುಗಳ ಮುಂದೆ ಪೂರಿ, ಬೆಲ್ಲ, ಮೊಸರು, ಅರಿಷಿಣ, ಕುಂಕುಮ, ನಾಡಾಪುಡಿ, ಪುಟಾಣಿ ಇಟ್ಟು ಪೂಜಿಸಿ ಟೆಂಗಿನಕಾಯಿ ಒಡೆದು ಬರುತ್ತಾರೆ. ಇದು ದೇವರ ನಿರಾಕಾರದ ಪೂಜೆಯ ದ್ಯೋತಕವೂ ಆಗಿದೆ. ಬರುವಾಗ ಒಬ್ಬರಿಗೊಬ್ಬರು ಅರಿಷಿಣ ಹಚ್ಚುತ್ತಾರೆ. ಮನೆಗೆ ಬಂದು ಅದೇ ಅರಿಷಿಣ ಕುಂಕುಮವನ್ನು ವಧು ವರರಿಗೆ ಹಚ್ಚುವ ಮೂಲಕ ಅವರನ್ನು ಬನಡಿ(ವಧು) ಬನಡಾ(ವರ) ಮಾಡುವ ಕಾರ್ಯಕ್ರಮ ನಡೆಯುತ್ತದೆ.

ತೇಲ ಹಲದಿ ಕೀ ರಸಂ:

ರಾತ್ರಿಗೆ ಢಾಲಿ (ಮಾವಿನ ಟೊಂಗೆ) ಇಟ್ಟ ಸ್ಥಳದಲ್ಲಿ ಚೌಕಾಕಾರವನ್ನು ಹಿಟ್ಟಿನಿಂದ ಹಾಕಿ, ಅದನ್ನು ವಿವಿಧ ಬಣ್ಣಗಳಿಂದ ಅಲಂಕರಿಸಿ, ಅದರ ಮೇಲೆ ಮಣೆಯನ್ನಿಟ್ಟು ವಧುವನ್ನು ಅದರ ಮೇಲೆ ಕ್ರೂಡಿಸಿ, ಕೊಬ್ಬರಿ ಎಣ್ಣೆಯಲ್ಲಿ ಸುಗಂಧ ದ್ರವ್ಯಗಳನ್ನು ಬೆರೆಸಿ ವಧುವಿನ ಕಾಲ್ಬೆರಳುಗಳಿಂದ ಹಿಡಿದು ನೆತ್ತಿಯ ವರೆಗೆ ಎಣ್ಣೆ ಹಚ್ಚುತ್ತಾರೆ. ಈ ಕಾರ್ಯಕ್ರಮದಲ್ಲಿ ಸಹೋದರ -ಸಹೋದರಿಯರು, ಬಂಧುಗಳು ಪಾಲ್ಗೊಳ್ಳುತ್ತಾರೆ. ಹೀಗೆ ಮಾಡುವಾಗ ವಧುವಿನ ತಲೆಯ ಮೇಲೆ ಚೌಕಾಕಾರದ ಬಿಳಿ ಬಟ್ಟೆಯನ್ನು ಅದರ ನಾಲ್ಕೂ ಮೂಲೆಗಳಲ್ಲಿ ಪೂರಿ ಬೆಲ್ಲದ ತುಂಡು ಇಟ್ಟು ಅದನ್ನು ಬಾಲಕಿಯರು ಹಿಡಿದಿರುತ್ತಾರೆ. ಇದನ್ನು ’ತೈಲ ಮಂಡವಾ’ ಎಂತಲೂ ಕರೆಯುತ್ತಾರೆ. ಇದಾದ ನಂತರ ವಧುವಿನ ತಾಯಿಗೆ, ಅವಳ ಅಜ್ಜಿಗೆ ಸೀರೆ ಕೊಡುತ್ತಾರೆ. ಇದನ್ನು ’ಕುವಾರಾ ಮಂಡವಾ’ ಎಂದು ಕರೆಯುತ್ತಾರೆ. ನಂತರ ಅರಿಷಿಣ ಹಚ್ಚಿ, ಮುತ್ತೈದೆಯರು ವಧುವನ್ನು ಸ್ನಾನ ಮಾಡಿಸುತ್ತಾರೆ. ರಾತ್ರಿ ಹಲ್ದಿ(ಅರಿಷಿಣ) ಹಚ್ಚುವ ಕಾರ್ಯಕ್ರಮವಿರುತ್ತದೆ. ವಧುವಿಗೆ ಸೀರೆ (ಪಾತಲ) ಮತ್ತು ವರನ ರಾಜಪೋಷಾಕನ್ನು (ನೀಮಾ-ಜಾಮಾ, ಝಗ್ಗಾ-ಜಂಗಾ) ಅರಿಷಿಣ-ಸುಣ್ಣ ನೀರಿನಲ್ಲಿ ಬೆರೆಸಿ ಅದಕ್ಕೆ ಹಚ್ಚುತ್ತಾರೆ. ಈ ಕಾರ್ಯಕ್ರಮವು ವರ ಮತ್ತು ವಧುವಿನ ಪ್ರತ್ಯೇಕವಾಗಿ ನಡೆಯುತ್ತದೆ.

ಇದಾದ ನಂತರ ’ಢೋಲಕಿ ಪೂಜಾ’ ನಡೆಯುತ್ತದೆ.

’ಮೋಡ’ ತಯಾರಿಸಿ ಅದನ್ನು ತಯಾರಕ ಮನೆಯಿಂದ ಮೆರವಣಿಗೆಯಲ್ಲಿ ವರನ ಮನೆಗೆ ತರುವುದೇ ಸಂಭ್ರಮ.

ಬರಾತ

ವರ ಕುದುರೆ ಏರಿ, ಕೈಯಲ್ಲಿ ಕತ್ತಿಯೊಂದನ್ನು ಹಿಡಿದು, ಬಾಜಾ-ಭಜಂತ್ರಿಗಳ ಸಮೇತ ವಧುವಿನ ಮನೆಗೆ ಮೆರವಣಿಗೆಯಲ್ಲಿ ಹೋಗುವುದೇ ರಜಪೂತರ ಮದುವೆಯ ಅತ್ಯಂತ ಆಕರ್ಷಕ ಅಂಶವಾಗಿದೆ. ಆಗ ಆತ ರಾಜಪೋಷಾಕ (ನೀಮಾ-ಜಾಮಾ) ತೊಟ್ಟಿರುತ್ತಾನೆ. ತಲೆಯ ಮೇಲೆ ’ಮೋರ’ ಇರುತ್ತದೆ. ಈಚಲಗರಿಗಳನ್ನು ಸುಣ್ಣದ ನೀರಿನಲ್ಲಿ ಹಾಕಿ ಅದಕ್ಕೆ ಹೊಂಬಣ್ಣ ಬಂದ ನಂತರ ಮಾಡಿದ ಆಕರ್ಷಕ ಕಿರೀಟ(ಬಾಸಿಂಗ) ಧರಿಸಿರುತ್ತಾನೆ. ಮೆರವಣಿಗೆಯಲ್ಲಿ ಬಂದ ವರನನ್ನು ಸ್ವಾಗತಿಸುವುದೇ ವಧುವಿನ ಮನೆಯವರಿಗೆ ಸಂಭ್ರಮ. ಅವನ ಜೊತೆಗೆಯೇ ಮೆರವಣಿಗೆಯಲ್ಲಿ ಸ್ವಲ್ಪ ದೂರ ಹೋದ ನಂತರ ವಧುವಿನ ಮನೆಗೆ ವಾಪಸ ಬರುವದು ’ಬರೀಕಿ ಟೋಕರಿ’ ಇದರಲ್ಲಿ ವಧುವಿನ ಶೃಂಗಾರದ ವಸ್ತುಗಳು ಮತ್ತು ಹೋಮದ ಸಾಮಗ್ರಿಗಳು ಇರುತ್ತವೆ. ಇವುಗಳನ್ನು ಉಪಯೋಗಿಸಿ ವಧು ಶೃಂಗರಿಸಿಕೊಂಡು, ಓಡಪಲ್ಲೊ(ರಾಜಸ್ಥಾನ ಮಹಿಳೆಯಂತೆ) ಹಾಕಿಕೊಂಡು ಸೀರೆಯುಟ್ಟು, ಮೋರನಿ ಧರಿಸಿಕೊಂಡು, ಚುನರಿ ಹಾಕಿಕೊಂಡಿರುತ್ತಾಳೆ. ಮನೆಯ ಒಳಗೆ ನಿಂತಾಗಲೇ ಮೆರವಣಿಗೆಯಲ್ಲಿ ವರ ಬರುತ್ತಾಣೆ. ಆಗ ವಧು ತಲೆಯ ಮೇಲೆ ಸಣ್ಣ ಕಳಸ ಇಟ್ಟುಕೊಂಡು ವರನ ಭೇಟಿಗೆ ಬರುವುದಕ್ಕೆ “ಸಜನಕಿ ಭೇಟ” ಎನ್ನುತ್ತಾರೆ ಆಗ ಅವಳು ವರನ ಕಡೆಯಿಂದ ಸಾಂಕೇತಿಕವಾಗಿ ’ವಧು ದಕ್ಷಿಣೆ’ ಪಡೆದುಕೊಂಡು ನಂತರವೇ ಮದುವೆ ಮಂಟಪಕ್ಕೆ ಬರುತ್ತಾಳೆ. ನಂತರ ವೈದಿಕ ಬ್ರಾಹ್ಮಣರ ನೇತೃತ್ವದಲ್ಲಿ, ಮಂತ್ರೋಚ್ಛಾರಗಳ ನಡುವೆ ವಧುವಿನ ತಂದೆ-ತಾಯಿ ಸೇರಿ ವರನ ತಂದೆ -ತಾಯಿಗಳಿಗೆ ತೆಂಗಿನಕಾಯಿ (ಪೂರ್ಣಫಲ)ಯನ್ನು ಹಸ್ತಾಂತರಿಸುವ ಮೂಲಕ ಕನ್ಯಾದಾನ ಮಾಡುವ ಕಾರ್ಯಕ್ರಮ

ಭೌರಿ

ಅಶ್ವತ್ಥನಾರಾಯಣ ಗಿಡದ ಅರಣಿ ಹೋಮಕ್ಕೆ ಬಳಸಲಾಗುತ್ತದೆ. ಇಂಗಲಿಗಿಡದ ನಾಲ್ಕು ಕಟ್‌ಇಗೆಯ ತುಂಡುಗಳನ್ನು ಗೋಧಿ ಹಿಟ್ಟಿನಿಂದ ಮಾಡಿದ ಉಂಡೆಗಳಿಗೆ ಚುಚ್ಚಿ ಅದಕ್ಕೆ ಸುತ್ತಲೂ ದಾರದಿಂದ ಏಳು ಸುತ್ತುಗಳನ್ನು ಹಾಕಿ, ಅದರ ನಡುವೆ ಅಗ್ನಿ ಹೊತ್ತಿಸಲಾಗುತ್ತದೆ. ಅಗ್ನಿ ಹಚ್ಚುವ ಕೆಲಸ ಬ್ರಾಹ್ಮಣರದ್ದೇ ಆದರೂ ಅದಕ್ಕೆ ತುಪ್ಪ ಹಾಕಿ ಅದರ ಜ್ವಾಲೆ ನಿರಂತರವಾಗಿ ಕಾಪಾಡಿಕೊಳ್ಳುವುದು ವಧುವರರ ಕೆಲಸ. ಮಂತ್ರೋಚ್ಚಾರಗಳ ನಡುವೆ ವಧು-ವರರು ಅಗ್ನಿಸಾಕ್ಷಿಯಾಗಿ ದೈವಸಾಕ್ಷಿಯಾಗಿ ಏಳು ಸುತ್ತು ತಿರುಗುವುದಕ್ಕೆ ’ಭೌರಿ’ ಎನ್ನುವರು. ಸಪ್ತಪದಿ ತುಳಿಯುವ ೪ ಸುತ್ತು ವರ ಮುಂದೆ ಇದ್ದರೆ, ೩ ಸುತ್ತು ವಧು ಮುಂದೆ ಇರುತ್ತಾಳೆ. ಜೀವನವೆಂಬ ರಥ ಎಳೆಯಲು ಸ್ತ್ರೀ ಪುರುಷರಿಬ್ಬರೂ ಒಟ್ಟಾಗಿ ಶ್ರಮಿಸಬೇಕೆಂಬುದು ಇದರರ್ಥವಾಗಿದೆ. ಈ ಸಂದರ್ಭದಲ್ಲಿ ವರನ ನೀಮಾಜಾಮಾದ ನಡಕಟ್ಟಿಗೆ ಕಟ್ಟಿದ ಅರಿವೆ ಮತ್ತು ವಧುವಿನ ಚುನರಿಯ ಅರಿವೆಯನ್ನು ಕೂಡಿಸಿ ಗಂಟು ಹಾಕಿರುತ್ತಾರೆ. ಇದಕ್ಕೆ ’ಘರ ಜೋಡಾ’ ಎಂತಲೂ ಹೆಸರು. ವಧುವಿನ ಸಹೋದರ ಪ್ರತಿಸುತ್ತಿನ ಅಂತ್ಯದಲ್ಲಿ ವಧು-ವರರ ಬೊಗಸೆಗೆ ಚುರಮರಿ ಹಾಕುತ್ತಾನೆ. ಅವರು ಅದನ್ನು ಕೆಳಗೆ  ಕೈ ಬಿಡುತ್ತಾರೆ. ಇದು ಮದುವೆ ಸಮಾರಂಭದಲ್ಲಿ ಮಹತ್ವದ ಕಾರ್ಯಕ್ರಮ.

ಪಾಂವ್ ಧೋನಾ:

ವಧು-ವರರನ್ನು ಈ ಸಂದರ್ಭದಲ್ಲಿ ಸಾಕ್ಷಾತ್ ಲಕ್ಷ್ಮೀ-ನಾರಾಯಣನ ಸ್ವರೂಪದಲ್ಲಿಯೇ ಕಾಣಲಾಗುತ್ತದೆ. ಅಗಲವಾದ ತಾಟಿನಲ್ಲಿ ಸಾಂಕೇತಿಕವಾಗಿ ವಧು ವರರ ಹೆಬ್ಬೆಟ್ಟು ಇಡಿಸಿ, ಅವುಗಳಿಗೆ ಅರಿಷಿಣ-ಕುಂಕುಮ ಹಚ್ಚಿ ಪೂಜೆಇಸುವರು. ಈ ಸಂದರ್ಭದಲ್ಲಿಯೇ ಬಂಧುಗಳು ವಧು-ವರರಿಗೆ ಕೊಡಬೇಕೆಂದಿರುವ ಉಡುಗೊರೆಗಳನ್ನು ಬಹಿರಂಗವಾಗಿ ನೀಡದೇ ವಧು-ವರರ ಹೆಬ್ಬೆಟ್ಟು ಪೂಜಿಸಿ, ಅದರಡಿಗೆ ಉಡುಗೊರೆಗಳನ್ನು ಹಾಲಿನ ನೀರಿನಲ್ಲಿ ಕೈಬಿಡುತ್ತಾರೆ. ಹೆಬ್ಬೆಟ್ಟುಗಳನ್ನು ಮೊದಲು ಹಾಲಿನಿಂದ, ನಂತರ ನೀರಿನಿಂದ ತೊಳೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಉಡುಗೊರೆ ಕೊಡುವದು ಬಹಿರಂಗ ಪ್ರದರ್ಶನಗಳಾಗುತ್ತಿವೆಯೆಂಬ ಅಂಶವನ್ನು ಅಲ್ಲಗೆಳೆಯಲಾಗದು.

ಜುವಾ (ಜೂಜು):

ಮದುವೆಯ ತಕ್ಷಣವೇ ವಧು-ವರರಿಗೆ ಜುವಾ (ಜೂಜು) ಆಟ ಆಡಿಸಲಾಗುತ್ತದೆ. ದೊಡ್ಡ ತಾಟೊಂದರಲ್ಲಿ ಹಾಲು, ಅರಿಷಿಣ, ಕುಂಕುಮದ ನೀರಿನಲ್ಲಿ ಬೆಳ್ಳಿಯ ಉಂಗುರ, ಅಡಿಕೆ ಬೆಟ್ಟ ಹಾಕಲಾಗುತ್ತದೆ. ಇದರಲ್ಲಿ ಬೆಳ್ಳಿಯ ಉಂಗುರ ಆಯ್ದುಕೊಂಡವರು ಗೆದ್ದಂತೆ ಎಂದು ಆಟ ನಿರ್ಧರಿಸಲಾಗುತ್ತದೆ. ಇದು ಪತಿ-ಪತ್ನಿಯರನ್ನು ಹತ್ತಿರ ಸೆಳೆಯುವ ತಂತ್ರವಾಗಿದೆ.

ಡೋಲಿ ಬಿದಾಯಿ:

ಸಂಜೆ ನಡೆಯುವುದೇ ಡೋಲಿ ಕಾರ್ಯಕ್ರಮ. ಹೆಣ್ಣು ತವರು ಮನೆ ಬಿಟ್ಟು ಗಂಡನ ಮನೆಗೆ ಹೋಗುವಾಗಿನ ಈಕಾರ್ಯಕ್ರಮ ಹೆಚ್ಚು ಗಂಭೀರ ಮತ್ತು ಹೃದಯಸ್ಪರ್ಶಿಯಾಗಿರುತ್ತದೆ. . ಬಂದು-ಬಾಂಧವರ ಕಣ್ಣಂಚಿನಲ್ಲಿ ನೀರು ಬರುವದು ಇದೇ ವೇಳೆಯಲ್ಲಿ, ಮೊದಲು ವಧುವನ್ನು ತೊಟ್ಟಿಲ ಮೇಲೆ ಡಂಬೊಂದನ್ನು ಇಟ್ಟು ಅದೇ ಮೇಲೆ ಶಾಲು ಹೊಚ್ಚಿ ಅದರಲ್ಲಿ ಕೂಡ್ರಿಸಿಕೊಂಡು, ಅದನ್ನು ಹೊತ್ತುಕೊಂಡು ಹೋದರೆ, ಈಗೀಗ ಈ ಪದ್ಧತಿ ಮಾಯವಾಗುತ್ತಲಿದೆ. ಕೆಲವರು ಕೈಹಿಡಿದು, ಮತ್ತೆ ಕೆಲವರು ಕಾರಿನಲ್ಲಿಕುಳ್ಳಿರಿಸಿಕೊಂಡು ತಮ್ಮ ಮನೆಗೆ ಕರೆದೊಯ್ಯುತ್ತಿದ್ದಾರೆ. ಅದೇ ಮೇಲೆ ಶಾಲು ಹೊಚ್ಚಿ ಅದರಲ್ಲಿ ಕೂಡ್ರಿಸಿಕೊಂಡು, ಅದನ್ನುಹೊತ್ತುಕೊಂಡು ಹೋದರೆ, ಈಗೀಗ ಈ ಪದ್ಧತಿ ಮಾಯವಾಗುತ್ತಲಿದೆ. ಕೆಲವರು ಕೈಹಿಡಿದು, ಮತ್ತೆ ಕೆಲವರು ಕಾರಿನಲ್ಲಿಕುಳ್ಳಿರಿಸಿಕೊಂಡು ತಮ್ಮಮನೆಗೆ ಕರೆದೊಯ್ಯುತ್ತಿದ್ದಾರೆ. ಅದೇ ದಿನ ರಾತ್ರಿ ವಧುವು ವರನ ಮನೆಯಲ್ಲಿಯೇ ಸ್ನಾನ ಮಾಡಿ ಮಡಿ ಸೀರೆಯುಟ್ಟು ತಾಯಿ ಮನೆಗೆ ಬರುವ ಕಾರ್ಯಕ್ರಮಕ್ಕೆ ’ಕಾಚಿ’ ಎನ್ನುವರು. ಸಂಜೆ ’ಗಡ ಜೀತನೆ ಕಾ’ (ಕೋಟೆ ಗೆಲ್ಲುವ) ಕಾರ್ಯಕ್ರಮವಿರುತ್ತದೆ. ವರ ಹನಮಂತದೇವರ ಗುಡಿಗೆ ಹೋಗಿ ದರ್ಶನ ಪಡೆದು ವಧುವಿನ ಮನೆಗೆ ಬಂದು ಸಹಂದರದ ಕಂಬವೊಂದನ್ನು ಸಾಂಕೇತಿಕವಾಗಿ ಅಲ್ಲಾಡಿಸುತ್ತಾನೆ. ಆಗ ಮದುವೆಯ ಕಾರ್ಯಕ್ರಮ ಮುಕ್ತಾಯವಾದಂತೆ. ಹಂದರದ ಪೂಜೆ ಮಾಡಿದ ನಂತರ ಅದನ್ನು ತೆಗೆದು ಹಾಕಲಾಗುತ್ತದೆ. ನಂತರ ಶುಭ ದಿನದಂದು ಆಯಾ ಮನೆತನದ ದೇವರಿಗೆ ಹೋಗಿ ಬರುವ ಕಾರ್ಯಕ್ರಮಕ್ಕೆ ’ಹಾತ ಬರತಾ ನೇಕಾ’ ಎನ್ನುತ್ತಾರೆ. ಇದಾದ ನಂತರ ಬಾಸಿಂಗ (ಮೋರ) ಬಿಡುವ ಕಾರ್ಯಕ್ರಮವನ್ನು ಹೆಣ್ಣಿನ ಮನೆಯವರು ಮಾಡುತ್ತಾರೆ. ಹರಿಯುವ ಹೊಳೆಯಲ್ಲಿ ಅದನ್ನು ಬಿಟ್ಟು ಬರುತ್ತಾರೆ.

ರಾತ್ರಿಮದುವೆ:

ನಿಜಾಮರ ಆಡಳಿತದ ಅವಧಿಯಲ್ಲಿ ರಜಪೂತರಲ್ಲಿನ ಮದುವೆ ಕಾರ್ಯಕ್ರಮಗಳು ರಾತ್ರಿಯೇ ನಡೆಯುತ್ತಿದ್ದವು. ಮುಸ್ಲಿಂ ರಾಜರ ದೌರ್ಜನ್ಯ ತಡೆಗಾಗಿ ಹೀಗೆ ಮಾಡಲಾಗುತ್ತಿತ್ತು. ಹೈದ್ರಾಬಾದ ನಿಜಾಮರ ಆಡಳಿತಕ್ಕೆ ಒಳಪಟ್ಟ ಪ್ರದೇಶದಲ್ಲಿನ ಕೆಲವರು ಈಗಲೂ ಸಹ ರಾತ್ರಿ ಮದುವೆ ಮಾಡುವ ಪದ್ಧತಿಯನ್ನು ಇನ್ನೂ ಉಳಿಸಿಕೊಂಡಿರುವದು ಗಮನಾರ್ಹ ಸಂಗತಿಯಾಗಿದೆ. ಆ ಭಾಗದ ಜನರೊಂದಿಗೆ ವಿವಾಹ ಸಂಬಂಧ ಏರ್ಪಡಿಸಿಕೊಂಡ ಕರ್ನಾಟಕದಲ್ಲಿಯ ರಜಪೂತರೂ ಸಹ ರಾತ್ರಿ ಮದುವೆಯ ಪರಂಪರೆ ಪಾಲಿಸುತ್ತಲಿರುವರು. ಛತ್ರದಲ್ಲಿ ಮದುವೆ ರಾತ್ರಿ ನಡೆದು, ಬೆಳಗಾಗುವುದರೊಳಗೆ ಬೀಗರು ತಮ್ಮ -ತಮ್ಮ ಊರಿನೆಡೆಗೆ ತೆರಳಿರುತ್ತಾರೆ. ಸ್ಥಳೀಯ ಬೀಗರ ಆಗ್ರಹದಂತೆ ವರ ಅಥವಾ ವಧು ಮತ್ತು ಕೇಲವೇ ಕೆಲ ಆಪ್ತರು ಮಾತ್ರ ಸ್ಥಳೀಯ ಪದ್ಧತಿಯ ಮಧ್ಯಾಹ್ನದ ಮದುವೆಗೆ ಉಳಿದಿರುತ್ತಾರೆ ಆರಕ್ಷತೆಯ ಕಾರ್ಯಕ್ರಮದಂತೆ ಮದುವೆ ಕಾರ್ಯ ನಡೆಯುತ್ತದೆ.

ಮರುಮದುವೆ (ವಿಧಾವಾ ವಿವಾಹ), ವಿವಾಹ ವಿಚ್ಛೇದನೆ:

ರಜಪೂತರಲ್ಲಿ ಮರುಮದುವೆ (ವಿಧವಾ ವಿವಾಹ) ಇರುವುದಿಲ್ಲ, ಸಾಮಾನ್ಯವಾಗಿ ಇವು ನಿಷಿದ್ಧವಾಗಿದೆ. ಅಲ್ಲಲ್ಲಿ ನಡೆದಿರುವದು ಕಂಡುಬಂದರೂ ಸಹ ಅವುಗಳಿಗೆ ಸಾಮಾಜಿಕ ಮನ್ನಣೆ ನೀಡಲಾಗಿಲ್ಲ. ವಿವಾಹ ವಿಚ್ಛೇದನದಂತಹ ಪ್ರಕರಣಗಳು ನಡೆಯುವದು ಅಪರೂಪ. ನಡೆದರೂ ಅವುಗಳನ್ನು ಬಂಧುಗಳಲ್ಲಿಯೇ ಬಗೆಹರಿಸಲಾಗುತ್ತದೆ.

ಚೋಲಿ (ಕುಬಸ) ಮಾಡುವುದು:

ಮದುವೆಯ ನಂತರ ಹೆಣ್ಣಿಗೆ ತಾಯಿಯಾಗುವ ಅವಕಾಶ ಸಿಗುವುದಕ್ಕೆ ಸಮಾಜದಲ್ಲಿನ ವ್ಯಾಪದ ಮಹತ್ವ ನೀಡಲಾಗಿದೆ. ಮಹಿಳೆ ಗರ್ಭಿಣಿಯಾದ ಮೂರು ತಿಂಗಳಾದ ನಂತರ ಚೋರ ಚೋಲಿ (ಕಳ್ಳ ಕುಬಸ) ಯನ್ನು ತವರು ಮನೆಯವರು ಮಾಡುತ್ತಾರೆ. ಯಾರಿಗೂ ಹೇಳದೆ ಗರ್ಭಿಣಿಯನ್ನು ಕರೆದುಕೊಂಡು ಹೋಗಿ ಹಸಿರು ಬಳೆ ಹಾಕಿಸಿ, ಹೊಸ ಕುಬುಸ ಉಡಿಸಿ, ಆರತಿ ಮಾಡಿ ಕಳಿಸುತ್ತಾರೆ. ೬ ಅಥವಾ ೮ ತಿಂಗಳಲ್ಲಿ ದೊಡ್ಡ ಕುಬಸ ಮಾಡುತ್ತಾರೆ. ನಿಶ್ಚಿತ ದಿನದ ಮೊದಲ ದಿನದಂದು ಬುತ್ತಿ ರೊಟ್ಟಿಯನ್ನು (ಗಂಡನ ಮನೆಯಲ್ಲಿರುವಾಗಲೇ) ತೆಗೆದುಕೊಂಡು ಹೋಗುತ್ತಾರೆ. ಇದನ್ನು ಗರ್ಭಿಣಿಯ ಮುಂದೆ ಇಟ್ಟು, ಬಿಚ್ಚಿ ದೈವದ ಎಲ್ಲರಿಗೂ ಅದನ್ನು ಹಂಚುತ್ತಾರೆ. ಮರುದಿನ ಹಸಿರು ಬಳೆ ಉಡಿಸಿ, ಗಂಡ-ಹೆಂಡತಿ ಈರ್ವರನ್ನು ಒಟ್ಟಾಗಿ ಕೂಡ್ರಿಸಿ ಹೂ ಮುಡಿಸುತ್ತಾರೆ. ತಮಗೆ ಬೇಕೆನಿಸಿದವರಿಗೆ ಊಟ ಮಾಡಿಸುತ್ತಾರೆ. ಇದಾದ ನಂತರ ಅವಳನ್ನು ತವರು ಮನೆಗೆ ಕಳಿಸಲಾಗುತ್ತದೆ. ಅಲ್ಲಿ ಗರ್ಭಿಣಿಯ ಸಂಬಂಧಿಕರು ಅವಳನ್ನು ತಮ್ಮ ಮನೆಗೆ ಕರೆದು ಊಟ ಮಾಡಿಸಿ, ಸೀರೆ-ಕುಪ್ಪಸ ಕೊಟ್ಟು ಕಳಿಸುವದು ವಾಡಿಕೆ. ಇದಕ್ಕೆ ’ಸೀಮಂತ’ ಕಾರಣವೆಂದು ಕರೆಯುತ್ತಾರೆ.

ಮರಣ ಸಂಸ್ಕಾರ:

ಹೆಣ್ಣು ಮಕ್ಕಳು ತೀರಿಕೊಂಡಾಗ ಶವದ ಕಾಲು ಮನೆಯ ಮುಖ್ಯ ಬಾಗಿಲಿನ ಕಡೆಗೆ ಮಾಡಿ ಮಲಗಿಸಿ, ತಲೆ ಹತ್ತಿರ ನಂದಾದೀಪ ಊದಿನಕಡ್ಡಿ ಹಚ್ಚುವರು.

ತವರು ಮನೆಯವರು ಸೀರಿ ತರಬೇಕು. ಮುತ್ರೈದೆ ಹೆಣ್ಣು ಮಕ್ಕಳಿದ್ದರೆ ಸೀರಿಯ ಜೊತೆಗೆ ಉಡಿತುಂಬುವ ಸಾಮಾನು ತರುತ್ತಾರೆ. ಉಳಿದುದನ್ನು ಗಂಡನ ಮನೆಯವರೇ ನಿರ್ವಹಿಸಬೇಕು. ೧೩ ಮೀಟರ ಬಿಳಿ ಅರಿವೆ, ಸೀರೆ, ಉಡಿ ತುಂಬು ಸಾಮಾನು ಪ್ರತ್ಯೇಕವಾಗಿ ತರಲಾಗುತ್ತದೆ. ಶವವನ್ನು ಶ್ಮಶಾನಕ್ಕೆ ತೆಗೆದುಕೊಂಡು ಹೋಗುವ ಮುನ್ನಸ್ನಾನಮಾಡಿಸಲಾಗುತ್ತದೆ. ಆರತಿಗೆ ಸಾಸಿವೆ ಕಾಳಿನ ಗಂಟು ಕಟ್ಟಲಾಗುತ್ತದೆ ಮತ್ತು ಅದನ್ನು ದಾರಿಯುದ್ಧಕ್ಕೂ ಬೀಳಿಸುತ್ತಾ ಹೋಗುತ್ತಾರೆ. ಭೂತ-ಪಿಶಾಚಿಯ ರೂಪದಲ್ಲಿ ಯಾವುದೇ ಆತ್ಮ ಮರುಕಳಿಸಬಾರದೆಂದು ಹೀಗೆ ಮಾಡಲಾಗುತ್ತದೆ. ಮನೆಯ ಕಡೆಯಿಂದ ಸ್ಮಶಾನಕ್ಕೆ ಹೋಗುವಾಗ ಕಾಲು ಮುಮದೆ ಮಾಡಿ ಹೊತ್ತೊಯ್ಯಲಾಗುತ್ತದೆ. ಸ್ಮಶಾನದ ಆವರಣ ಪ್ರವೇಶದ ನಂತರ ಶವ ಇಳಿಸಿ, ಶವದ ತಲೆಯ ಹತ್ತಿರ ಮದುವೆ ಆದವರು ೫ ಆಗದವರು೩ ಸಣ್ಣ ಸಣ್ಣ ಕಲ್ಲುಗಳನ್ನು ಹಾಕುತ್ತಾರೆ. ಅವುಗಳ ಜೊತೆಗೆ ಚಿಲ್ಲರೆ ಹಣವನ್ನು ಸಹ ಹಾಕಲಾಗುತ್ತದೆ. ರಾಜಾ ಹರಿಶ್ಚಂದ್ರನ ಕಾಲದಲ್ಲಿ ಶ್ಮಶಾನ ತೆರಿಗೆ ಇತ್ತು ಈಗಲೂ ಅದರ ದ್ಯೋತಕವಾಗಿ ಹೀಗೆ ಮಾಡಲಾಗುತ್ತದೆ. ಚಿತೆಯ ಮೇಲೆ ಶವನ್ನು ಉತ್ತರಕ್ಕೆ ಕಾಲು ಮತ್ತು ದಕ್ಷಿಣಕ್ಕೆ ತಲೆ ಬರುವಂತೆ ಇಡಲಾಗುತ್ತದೆ. ಅದಕ್ಕೆ ಕಿಚ್ಚು ಹಿಡಿದವನಿಂದ ಮೊದಲು ಅಗ್ನಿ ಸಂಸ್ಕಾರವಾಗುತ್ತದೆ. ನಂತರ ಕಿಚ್ಚು ಹಿಡಿದವನು ನೀರು ತುಂಬಿದ ಬಿಂದಿಗೆಯನ್ನು ಹೊತ್ತು ಶವಕ್ಕೆ ಐದು ಸುತ್ತು ಹಾಕುತ್ತಾನೆ. ಆಗ ಪ್ರತಿ ಸುತ್ತಿಗೂ ಬಿಂದಿಗೆಗೆ ಚೂಪಾದ ಕಲ್ಲಿನಿಂದ ಹೊಡೆದು ಅದಕ್ಕೆ ತೂತು ಬೀಳಿಸಿ ಅದರಿಂದ ನೀರು ಹೊರಬರುವಂತೆ ಮಾಡಲಾಗುತ್ತದೆ. ಕೊನೆಯ ಐದನೇ ಸುತ್ತ ಪೂರ್ಣಗೊಂಡಾಗ ಆತ ಬಿಂದಿಗೆಯನ್ನು ಅಲ್ಲಿಯೇ ಒಗೆದು ಕೈ ಬಾಯಿಗೆ ಹಚ್ಚಿ ಹಿಂದೆ ತಿರುಗಿ ನೋಡದಂತೆ ಮನೆಗೆ ಬರುತ್ತಾರೆ. ನಂತರ ಅಂತ್ಯಯಾತ್ರೆಯಲ್ಲಿ ಪಾಲ್ಗೊಂಡವರುಚಿತೆಗೆ ಅಗ್ನಿ ಸ್ಪರ್ಶ ಮಾಡುತ್ತಾರೆ. ಮತ್ತು ಧೂಪ -ಕರ್ಪೂರ ಹಾಕಿ ನಮಸ್ಕರಿಸಿ ಮನೆಗೆ ತೆರಳುತ್ತಾರೆ. ಅವರೆಲ್ಲರೂ ತಮ್ಮ ತಮ್ಮ;ಮನೆಗೆ ಹೋಗಿ ಸ್ನಾನ ಮಾಡಿದ ನಂತರಮತ್ತೆ ಸಾವನ್ನಪ್ಪಿದವರ ಮನೆಗೆ ಬಂದು ಅಲ್ಲಿ ಅಂಗಳದಲ್ಲಿಟ್ಟ ಕರಿಮೆಣಸು(ಸಾವನ್ನಪ್ಪಿದವರು ದೊಡ್ಡವರಿದ್ದರೆ) ಅಥವಾ ಬೇವಿನ ಎಲೆ(ಸಾವನ್ನಪ್ಪಿದವರು ಸಣ್ಣಮಕ್ಕಳಿದ್ದರೆ) ಯನ್ನು ಬಾಯಲ್ಲಿಟ್ಟು ಸಾಂಕೇತಿಕವಾಗಿ ಕಡಿದು ಆಗಿರುವ ದುಃಖದ ಕಹಿಯಲ್ಲಿ ತಾವೂ ಸಹ ಭಾಗಿಗಳು ಎನ್ನುವುದನ್ನು ಸಿದ್ಧ ಪಡಿಸಿ ಮತ್ತೆ ತಮ್ಮ -ತಮ್ಮ ಮನೆಗಳಿಗೆ ಹೋಗುವರು.

ಸಾವನ್ನಪ್ಪಿದವರ ಮನೆಯಲ್ಲಿ ೧೩ ದಿವಸಗಳ ವರೆಗೆ ಯಾವುದೇ ತೆರನಾದ ಪೂಜೆ-ಪುರಸ್ಕಾರಗಳು ಇರುವುದಿಲ್ಲ.

ಅಸ್ಥಿ ಆರಿಸುವುದು:

ಸಾವನ್ನಪ್ಪಿದ ಮೂರನೇ ದಿನಕ್ಕೆ ಮತ್ತೇ ಸ್ಮಶಾನಕ್ಕೆ ತೆರಳಿ ಅಸ್ಥಿಯನ್ನು ಬಿಂದಿಗೆಯೊಂದರಲ್ಲಿ ಹಾಕಿಕೋಂಡು ನಂತರ ಮೃತರು ಇಚ್ಛೆ ಪಡುತ್ತಿದ್ದ ವಸ್ತುಗಳೊಂದಿಗೆ ಅಸ್ಥಿ ಬಿಂದಿಗೆಯನ್ನು ಸ್ಮಶಾನದಲ್ಲಿಟ್ಟು, ಆ ವಸ್ತುಗಳನ್ನು ಕಾಗೆ ಮುಟ್ಟಿದ ನಂತರ ಅಸ್ಥಿ ಬಿಂದಿಗೆಯನ್ನು ಹೊಳೆ ಅಥವಾ ನದಿಯಲ್ಲಿ ವಿಸರ್ಜಿಸಲಾಗುತ್ತದೆ. ಆಗ ಸ್ಥಳೀಯ ಬ್ರಾಹ್ಮಣ ನೆರವು ಪಡೆಯಲಾಗುತ್ತದೆ.

೯ನೇ ದಿನಕ್ಕೆ ಮನೆ ಸಾರಿಸಿ, ಅರಿವೆಯನ್ನೆಲ್ಲ ಒಗೆದು ತಲೆ ಸ್ನಾನ ಮಾಡಿ ಮಡಿಯಾಗುತ್ತಾರೆ. ೧೦ನೇ ದಿನದ ದಶಪಿಂಡ ಸಮಾರಾಧನೆ ಎರಡು ರೀತಿಯಲ್ಲಿ ಮಾಡಲಾಗುತ್ತದೆ.

ದಶಪಿಂಡ (ಹಳೆಯದು):

ಮನೆಯ ಮುಂದೆ ಗುಡಾರದಿಂದ ಟೆಂಟ್ ಹಾಕಿ ಅದರಲ್ಲಿ ಸಾವನ್ನಪ್ಪಿದವರ ಫೋಟೋ ಇಟ್ಟು ಪೂಜಿಸುವುದು. ಈ ದಿನ ಚಪಾತಿ, ಅನ್ನ, ಮೊಸರಿನಿಂದ ಮಾಡಿದ ಕಡಿ, ಅದರಲ್ಲಿ ಭಜಿ ಹಾಕಿರುತ್ತಾರೆ. ಈ ಅಡಿಗೆಯನ್ನೆಲ್ಲಾ ಸ್ಮಶಾನಕ್ಕೆ ಕೊಂಡೊಯ್ದು ಅಲ್ಲಿ ಚಿತೆಗೆ ಅಗ್ನಿ ಸ್ಪರ್ಶ ಮಾಡುವಾಗ ನೀರಿನ ಬಿಂದಿಗೆ ಒಡೆದುಕಲ್ಲು ಸಹ ಇಟ್ಟು ಪೂಜಿಸಿ, ಪಿಂಡವನ್ನು ಕಾಗೆ ಮುಟ್ಟಿದ ನಂತರ ಕಿಚ್ಚು ಹಿಡಿದವರು ಹಸಿ ಅರಿವೆಯಲ್ಲಿ ಬರಿಕಾಲಿನಿಂದ ಮನೆ ಮನೆಗೆ ಹೋಗಿ ’ಅಂಗಾರಿ ಕೋಚಲೋ’ ಎನ್ನುತ್ತಾರೆ. ಸಾಮಾನ್ಯವಾಗಿ ಆಯಾ ಮನೆತನದ ಜನರು ಕೂಡಿ ಊಟ ಮಾಡುತ್ತಾರೆ. ಹೊರಗೆ ಮಾಡಿದ ಅಡಿಗೆಯನ್ನು ಸಂಜೆ ಉಳಿಸುವಂತಿಲ್ಲ ಮತ್ತು ಮನೆಯ ಒಳಗೆ ತರುವಂತಿಲ್ಲ. ಆದರೆ ಮನೆಯ ಮಗಳು ಈ ಅಡುಗೆಯನ್ನು ತನ್ನ ಮನೆಗೆ ಕೊಂಡೊಯ್ಯುವ ಹಕ್ಕು ಪಡೆದಿರುವಳು.

ಬಿಶಾಂದಿ ಊಟ:

ರಾತ್ರಿಯ ಊಟವನ್ನು ಬಿಶಾಂದಿ ಊಟವೆಂದು ಕರೆಯುತ್ತಾರೆ. ಇದು ಮಾಂಸದ ಊಟವಾಗಿದ್ದು, ಮನೆಯ ಜನರು ಮಾತ್ರ ಉಣ್ಣುತ್ತಾರೆ. ಊಟದ ನಂತರ ಉಳಿದ ಅಡಿಗೆಯನ್ನು ಊರ ಹೊರಗೆ ಹೋಗಿ ಇಟ್ಟು ಬರುತ್ತಾರೆ.

ದಶಪಿಂಡ (ಹೊಸದು)

ನೀರು ಇರುವಲ್ಲಿಯೇ ಮನೆ ಜನರು ಹೋಗಿ ಮಾಡುತ್ತಾರೆ. ಇಲ್ಲಿ ಮನೆಯ ಪುರುಷರೆಲ್ಲರೂ ತಲೆ ಬೋಳಿಸಿಕೊಳ್ಳುತ್ತಾರೆ. ಅನ್ನವನ್ನು ತಯಾರಿಸಿ ಅದರ ೩ ಉಂಡೆ, ಮೈದಾಹಿಟ್ಟಿನ ೧೦ ಉಚಿಡಿ, ಆಕಳು-ಕರು-ಗ್ವಾದಲಿಯ ಆಕಾರವನ್ನು ಹಿಟ್ಟಿನಲ್ಲಿಯೇ ಮಾಡಿ ಎಲ್ಲವನ್ನು ಎಲೆ ಮೇಲಿಟ್ಟು ಅಭೀರ-ಗುಲಾಲದೊಂದಿಗೆ ಚಿತೆಗೆ ಅಗ್ನಿಸ್ಪರ್ಶ ಮಾಡುವಾಗ ನೀರಿನ ಬಿಂದಿಗೆಯನ್ನು ಒಡೆದ ಚೂಪಾದಕಲ್ಲು ಸಹ ಪೂಜೆಗೆ ಇಡುತ್ತಾರೆ. ಇದಕ್ಕೆ ಕಾಗೆಗೆ ಪಿಂಡ ಕೊಡುವದು ಎಂದೂ ಇದಾದ ನಂತರ ಎಲ್ಲರೂ ಮತ್ತೊಮ್ಮೆ ಸ್ನಾನ ಮಾಡಿ ಮನೆಗೆ ಬರುತ್ತಾರೆ.

೧೨೧೩ನೇ ದಿನ:

ಹೆಣ್ಣುಮಕ್ಕಳು ಸಾವನ್ನಪ್ಪಿದ್ದರೆ ೧೨ನೇದಿನಕ್ಕೆ, ಗಂಡಸರು ಸತ್ತರೆ ೧೩ನೇ ದಿನಕ್ಕೆ ಮಾಡುವ ಕಾರ್ಯಕ್ರಮ ವೈಕುಂಠ ಸಮಾರಾಧನೆ, ಅಂದು ಗೋಧಿ ಹಿಟ್ಟಿನಲ್ಲಿಮಾಡಿದ ಗಣಮಪತಿಯನ್ನು ತುಪ್ಪದಲ್ಲಿ ಕರಿದು, ಉದ್ದಿನ ಬೇಳೆಯಿಂದ ಮಾಡಿದ ಕಚೂರಿ(ವಡಾ), ಪೂರಿ ಅಡಿಗೆ ಮಾಡುವರು. ಇದರಲ್ಲಿ ಉಪ್ಪು ಹಾಕುವುದಿಲ್ಲ. ಮೊಸರು ಮತ್ತು ಸಕ್ಕರೆ ಬೆರೆಸಿ ಈ ಸಂದರ್ಭದಲ್ಲಿ ತಿನ್ನುತ್ತಾರೆ. ಅನ್ನದ ಅಡಿಗೆ ಊಟಕ್ಕೆ ಇರುವುದಿಲ್ಲ, ಆದರೆ ಈಗೀಗ ಈ ಕಾರ್ಯಕ್ರಮದಲ್ಲಿ ಹೊರಗಿನ ಜನರೂ ಸಹ ಪಾಲ್ಗೊಳ್ಳುತ್ತಿರುವುದರಿಂದ ಸಿಹಿ ಅಡಿಗೆಯ ಜೊತೆಗೆ ಅನ್ನು ಸಾರು ಸಹ ಇರುತ್ತದೆ. ಉಪ್ಪನ್ನು ಪ್ರತ್ಯೇಕವಾಗಿ ನೀಡಲಾಗುತ್ತಿದೆ.

ಸಂಜೆ ಸೂರ್ಯ ಮುಳುಗುವ ಮೊದಲು ೧೨-೧೩ ನೇ ದಿನಕ್ಕೆ ಗಣಪತಿ ಇಟ್ಟು ಬ್ರಾಹ್ಮಣರಿಂದ ಪೂಜೆ ಮಾಡಿಸಲಾಗುತ್ತದೆ. ಹೋಮ ಮಾಡುವವರೂ ಇದ್ದಾರೆ. ಈ ಸಂದರ್ಭದಲ್ಲಿ ಕಿಚ್ಚು ಹಿಡಿದವರಿಗೆ ಮನೆಯ ಹೆಣ್ಣುಮಕ್ಕಳು(ಅಕ್ಕ ತಂಗಿಯರು) ಹೊಸ ಬಟ್ಟೆ ತೊಡಿಸಿ, ಹೂ ಮುಡಿಸಿ ಹನಮಂತದೇವರಿಗೆ ಕರೆದೊಯ್ದು ಅಲ್ಲಿ ಪೂಜಿಸಲಾಗುತ್ತದೆ. ಇಚ್ಛಿತರು ಅಲ್ಲಿಯೇ ಒಂದು ದಿನ ಇರುತ್ತಾರೆ. ಕೆಲವರು ಪೂಜೆಯ ನಂತರ ಮರಳಿ ಮನೆಗೆ ಬರುತ್ತಾರೆ.

ಸಾವನ್ನಪ್ಪಿದವರ ಸ್ಮರಣಾರ್ಥ ೩,೬ ತಿಂಗಳು ಮತ್ತು ವರ್ಷಕ್ಕೆ ಪೂಜೆ ಮಾಡಲಾಗುತ್ತದೆ. ಇದಾದ ನಂತರ ಅವರು ದೀಪಾವಳಿಯಲ್ಲಿ ಆಚರಿಸಲಾಗುವ ದೀಪಾರಾಧನೆಯ ’ಹಿರಿಯರ’ ಪಂಕ್ತಿಯಲ್ಲಿ ಸೇರುತ್ತಾರೆ.

ಗಂಡ ಸತ್ತಾಗ:

ವಿವಾಹಿತ ಸ್ತ್ರಿಯ ಗಂಡ ಸಾವನ್ನಪ್ಪಿದಾಗ ಶವ ಒಯ್ಯುವ ಮೊದಲು ಸ್ತ್ರೀಯನ್ನು ಶವದ ಹತ್ತಿರ ಕರೆದುಕೊಂಡು ಹೋಗುವ ವಿಧವೆಯರು, ಆಕೆಯ ಮುತ್ತೈದೆತನ ಇಳಿಸುತ್ತಾರೆ. ಸ್ತ್ರೀ ಧರಿಸಿರುವ ಬಳೆ ಒಡೆದು ತಾಳಿ, ಕರಿಮಣಿಯನ್ನು ತೆಗೆಯುತ್ತಾರೆ. ಕುಂಕುಮವನ್ನು ಅಳಕಿಸುತ್ತಾರೆ. ಇದರ ಸ್ವಲ್ಪ ಭಾಗವನ್ನು ಶವದ ಎದೆ ಮೇಲೆ ಹಾಕಿ ಅದನ್ನು ಶವದೊಂದಿಗೆ ಶ್ಮಶಾನಕ್ಕೆ ಕೊಂಡೊಯ್ಯುತ್ತಾರೆ.

ಈ ಮಹಿಳೆಯನ್ನು ಒಂದು ತಿಂಗಳ ನಂತರ ತವರು ಮನೆಯವರು ಕರೆದುಕೊಂಡು ಹೋಗಿ ಎರಡು ದಿನ ಇರಿಸಿಕೊಂಡು ಹೊಸ ಸೀರೆ ಉಡಿಸಿ, ಹೊಟ್ಟೆ ಶಾಂತಿ ಮಾಡಿಕಳಿಸುತ್ತಾರೆ.

ಹೆಣ್ಣು ಮಗಳಿಗೆ ಅಧಿಕಹೊಣೆ:

ಸಾವನ್ನಪ್ಪಿದವರ ಮನೆಯಲ್ಲಿನ ಎಲ್ಲ ಕಲಸ ಕಾರ್ಯದ ಹಿರಿತನ ೧೩ ನೇ ದಿನದ ಕಾರ್ಯಕ್ರಮ ವಾಗುವ ವರೆಗೆಮನೆಯ ಮಗಳಿಗೆ. ಈ ಸಂದರ್ಭದಲ್ಲಿ ದೇವರ ಮನೆ ಮತ್ತುಅಡಿಗೆ ಮನೆಯ ಪ್ರವೇಶ ಅವಳಿಗೆ ಮಾತ್ರ ಸೀಮಿತವಾಗಿರುತ್ತದೆ. ಮನೆಯ ಜನರಿಗೆ ಈ ಅವಧಿಯಲ್ಲಿ ಅಡಿಗೆ ಸಿದ್ಧಪಡಿಸಿ, ಊಟ ಮಾಡಿಸುವ ಹೊಣೆಗಾರಿಕೆಯೂ ಅವಳಿಗೆಯೇ ಸೇರಿದ್ದು, ಶವ ತೆಗೆದುಕೊಂಡು ಹೋದ ನಂತರ ಅದರ ಹೂ, ಅರಿವೆ, ಹೊರಗೆ ಒಗೆದು ನೀರಿನಿಂದ ಮನೆಯನ್ನು ಶುದ್ಧಗೊಳಿಸುವದರಿಂದ ಹಿಡಿದು ೧೩ನೇ ದಿನದ ವರೆಗಿನ ಎಲ್ಲ ಕಾರ್ಯಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಾರೆ. ಹೀಗಾಗಿ ಮನೆ ಮಗಳಿಗೆ ಸಂದರ್ಭದಲ್ಲಿ ಎಲ್ಲಿಲ್ಲದ ಮಹತ್ವ ನೀಡಲಾಗುತ್ತದೆ.

ವಿಶೇಷತೆ:

ಸಾವನ್ನಪ್ಪಿದವರ ಮನೆ ಮತ್ತು ಅಲ್ಲಿ ಸೇರಿದ ಸಮಾಜದ ಇತರೆ ಹೆಣ್ಣುಮಕ್ಕಳು ಮರಣ ಸಂಸ್ಕಾರ ಆಗುವ ವರೆಗೆ ಬಾಯಲ್ಲಿ ನೀರೂ ಸಹ ಹಾಕದೇ ಅಳುತ್ತ ಕುಳಿತುಕೊಂಡಿರುತ್ತಾರೆ. ಶವ ಸಂಸ್ಕಾರ ಆದನಂತರ ಜಳಕ ಮಾಡಿದ ನಂತರವೇ ಅವರು ನೀರು ಸೇವಿಸುತ್ತಾರೆ ನಂತರ ಫಲಾಹಾರ-ಚಹಾವನ್ನು ಸಾವನ್ನಪ್ಪಿದವರ ಮನೆಗೆ ತೆಗೆದುಕೊಂಡು ಹೋಗಿ ಅವರಿಗೆ ಕೊಟ್ಟು ಬರುತ್ತಾರೆ. ಈ ಪದ್ಧತಿ ಸಮಾಜದಲ್ಲಿ ಅನ್ಯೋನ್ಯ ಸಂಬಂಧ ಬೆಸೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೆಣ್ಣು ಮಕ್ಕಳು ಸ್ಮಶಾನಕ್ಕೆ ಬರುವ ಪದ್ಧತಿ ಇರುವುದಿಲ್ಲ.

ಕಿಚ್ಚು ಹಚ್ಚುವದು:

ಸಾಮಾನ್ಯವಾಗಿ ಶವ ಅಗ್ನಿಗೆ ನೀಡುವದು ವಾಡಿಕೆ. ಇದಕ್ಕಾಗಿ ಗಂಧದ ಕಟ್ಟಿಗೆ(ಅಲ್ಪ-ಸ್ವಲ್ಪವಾದರೂ) ಸಾದಾಕಟ್ಟಿಗೆ, ಡಾಲ್ಡಾ, ಸೂಜಿ,ಮೈದಾಹಿಟ್ಟು, ಮೆಣಸು, ಅತ್ತರಬಾಟ್ಲಿ, ಮೈತೊಳೆಯಲು ಸಬಕಾರ, ಅಬೀರ-ಗುಲಾಲ, ದಂಡಿ ಮುತ್ತೈದೆಗೆ, ಸಾಸಿವೆ, ಸೆಣಬು, ಆರತಿ(ಸಿದಗಿ) ಕೊಡದಷ್ಟು ಗಡಿಗಿ, ಸಣ್ಣಗಡಗಿ (ಕಿಚ್ಚು ಹಿಡಿಯಲು). ಕುಡುಕಿ (ಮೊಸರಿಗಾಗಿ), ಬಿಂದಿಗಿ-ಮುಚ್ಚಳ ಸಮೇತ, ಸ್ನಾನ ಮಾಡಿಸಲು ಚರಗಿ ಖರೀದಿಸಲಾಗುತ್ತದೆ.

ಸಾಮಾನ್ಯವಾಗಿ ಮನೆಯ ಮಗ, ಈತನಿಗೆ ತಲೆ ಕ್ಷೌರ ಮಾಡಿಸುವದು, ನಿಯಮಕ್ಕಾಗಿ ಸ್ವಲ್ಪ ಕೂದಲು ಕತ್ತರಿಸುವದು, ಚಂಡಕಿ ಬಿಟ್ಟು ಉಳಿದೆಲ್ಲ ಕೂದಲು ತೆಗೆದಯುವ ವಿವಿಧ ಪದ್ಧತಿಗಳಿವೆ. ಯಾವುದು ಅನುಸರಿಸಲು ಸಾಧ್ಯವೋ ಅದನ್ನು ಅನುಸರಿಸುವ ಸ್ವಾತಂತ್ಯ್ರವಿದೆ.

ಸಾಂಸ್ಕೃತಿಕ ಹಿರಿಮೆ

ರಜಪೂತ ಸಮಾಜದಲ್ಲಿ ಬ್ರಾಹ್ಮಣರಿಗೆ ಹೆಚ್ಚಿನ ಪೂಜ್ಯತೆ ಮತ್ತು ಗೌರವವಿತ್ತು ಬ್ರಾಹ್ಮನರಿಗೆ ಸಮಾಜದಲ್ಲಿ ವಿಶೇಷವಾದ ಹಕ್ಕುಗಳು ಇದ್ದವು. ಅವರು ರಾಜರ ಮಂತ್ರಿಗಳಾಗಿ, ಪುರೋಹಿತರಾಗಿ, ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದುದರಿಂದ ಬಹುತೇಕ ಹಬ್ಬಗಳು ವೈದಿಕ ಪರಂಪರೆಯನ್ನು ಹೋಲುತ್ತವೆಯಾದರೂ, ಅವುಗಳಲ್ಲಿ ಸ್ವಂತಿಕೆಯನ್ನು ಕಾಣಬಹುದು. ಹಬ್ಬಗಳ ಆಚರಣೆಯಲ್ಲಿ ಮಹಿಳೆಯರದ್ದೇ ಹಿರಿತನ.

ತಿಲ್ ಸಗಟ್‌:

ಜನೇವರಿ ೧೪ ಸೂರ್ಯ ತನ್ನ ಚಲಿಸುವ ಪಥ ಬದಲಿಸುವ ದಿನ. ಇದನ್ನುಮಕರ ಸಂಕ್ರಮಣ ಎಂದು ದೇಶದ ಜನರೆಲ್ಲಾ ಆಚರಿಸುತ್ತಾರೆ. ಆದರೆ ರಜಪೂತರು ಮಾಘ ಸ್ನಾನಾರಂಭದ ಬನದ ಹುಣ್ಣೆಮೆಯ ನಾಲ್ಕನೇ ದಿನ ಬರುವ ಸಂಕಷ್ಟ ಚತುರ್ಥಿಯಂದು ಜಗತ್ತಿನ ಸರ್ವ ಸಂಕಟಗಳ ನಿವಾರಣೆಗಾಗಿ ’ಸಂಕಟ ಮಾತಾ ಕಿ ಪೂಜಾ’ ಮಾಡುತ್ತಾರೆ. ಪ್ರಕೃತಿಯಲ್ಲಿ ಸಿಗುವ ಎಳ್ಳು, ಬೆಲ್ಲ, ಗಜ್ಜರಿ, ಬಾರಿಹಣ್ಣು, ಗೆಣಸು, ಕಬ್ಬು, ಕಡ್ಲಿಗಿಡ ಮುಂತಾದವನ್ನು ದೊಡ್ಡ ತಾಟಿನಲ್ಲಿಟ್ಟು ನೈವೇದ್ಯ ಮಾಡುತ್ತಾರೆ. ಎಳ್ಳಿನ ಜೊತೆಗಿರುವ ಬೆಲ್ಲದ ತುಂಡನ್ನು ದಂಟಿನ ಸಿಬಿರಿನಿಂದ ಕೊಯ್ಯುವಾಗ,

ಆರಜಾತಿ, ಪಾರಜಾತಿ, ಖೇತಖಾತಿ ಮೇರಾ ರಾಮ
ಭಗವಾನ ಕಾಹುಕುಮ ಹುವಾ ತೋ
ಬಲಿ ದೇ ದೂ ತೇರಾ,

ಎಂದು ಹೇಳುತ್ತಾರೆ. ಆಗ ಕೈಯಲ್ಲಿ ಹಿಡಿದಷ್ಟು ಎಳ್ಳು-ಬೆಲ್ಲವನ್ನು ಮನೆಯಲ್ಲಿನ ಎಲ್ಲರಿಗೂ ಪ್ರಸಾದವೆಂದು ಹಂಚುತ್ತಾರೆ. ರಾತ್ರಿಯಿಡೀ ಆ ತಾಟನ್ನು ಕಾಪಾಡುತ್ತಾರೆ. ಮರುದಿನ ಎಳ್ಳು -ಬೆಲ್ಲ ಇತರರಿಗೆ ಹಂಚುವ ಪದ್ಧತಿ ಇದೆ. ಸೂರ್ಯ ಅಥವಾ ಚಂದ್ರನಿಗೆ ತುಂಬಿದ ತಂಬಿಗೆಯಲ್ಲಿನೀರನ್ನು ಅರ್ಘ್ಯವಾಗಿ ಅರ್ಪಿಲಾಗುತ್ತದೆ.

ಇದೇ ದಿನ ಮಹಿಳೆಯರು ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಇಡೀ ದಿನ ಬಾಯಲ್ಲಿ ತೊಟ್ಟು ನೀರೂ ಸಹ ಹಾಕಿಕೊಳ್ಳದೇ ರಾತ್ರಿ ಚಂದ್ರನ ದರ್ಶನವಾದ ನಂತರವೇ ಪೂಜೆ ಮಾಡಿ ಊಟ ಮಾಡುವರು. ಇದನ್ನು ’ಕರವಾ ಚೌತ್’ ಎಂದೂ ಕರೆಯುತ್ತಾರೆ.

ಹೋಳಿ ಹುಣ್ಣಿಮೆ (ಧುಲಂಡಿ):

ಅಧರ್ಮದ ಮೇಲೆ ಧರ್ಮದ ವಿಜಯದ ದ್ಯೋತಕವಾಗಿ, ಹೋಲಿಕಾ ದಹನದ ಸಂತಸಕ್ಕಾಗಿ, ಹೋಳಿ ಹುಣ್ಣಿಮೆ ಆಚರಿಸುವದು ಎಲ್ಲೆಡೆಗೂ ಕಂಡು ಬರುವ ವಿಷಯವಾದರೂ ಸಹ ಈ ದಿನದಂದು ರಜಪೂತರು ಕೇಸರಿ ಬಣ್ಣದಾಟ ಆಡುವದು ವಿಶೇಷ. ಕೆಲವೆಡೆಗಳಲ್ಲಿ ಈ ಹಬ್ಬವನ್ನು ’ಧುಲಂಡಿ’ ಎಂದೂ ಆಚರಿಸುವರು. ಇದಕ್ಕಾಗಿ ಕುಂಬಾರನಲ್ಲಿನ ಹೊಸ ಗಡಿಗೆ ತಂದು ಹೋಲಿ ಹುಣ್ಣಿಮೆಯ ರಾತ್ರಿ ಸಮಯದಲ್ಲಿ ಅಂಬಲಿ ತುಂಬಿ, ಅಡಿಗೆ ಮಾಡಿದ ಎಲ್ಲವನ್ನು ಅವುಗಳ ಮೇಲಿಟ್ಟು, ನೆನೆಯಲು ಹಾಕಿದ ಕಡಲೆಯನನು ಮೇಲೆ ಹಾಕಿ ಶೀತಲಮಾತಾ (ಶೇಡಲ ಮಾತಾ )(ಗೆ ಪೂಜೆ ಮಾಡುತ್ತಾರೆ. ಇಡೀ ಮನೆತನದ ದೇವರು ಒಂದೇ ಕಡೆಗಿದ್ದು, ತಲೆ ಮಾರುಗಳು ಉರುಳಿ ಹೋದರೂ ಎಲ್ಲರೂ ಒಂದೇ ಕಡೆಗೆ ಸೇರಿ ಪೂಜೆ ಮಾಡುವ ರೂಢಿ ಈಗಲೂ ಕೆಲವು ಮನೆತನಗಳಲ್ಲಿದೆ. ಪೂಜೆಯ ನಂತರ ನೈವೇದ್ಯದೊಂದಿಗೆ ತುಂಬಿಟ್ಟ ಅಂಬಲಿಯ ಚರಿಗೆಯನ್ನು ಮನೆಯ ಹೆಣ್ಣುಮಕ್ಕಳಿಗೆ ನೀಡಿ, ಅವರಿಗೆಉಡಿ ತುಂಬಿ, ಮನೆತನದ ಸೊಸೆ ನಮಸ್ಕರಿಸಿ ಆಶೀರ್ವಾದ ಪಡೆಯುವ ರೀತಿ ನಿಜಕ್ಕೂ ಸೋಜಿಗದ್ದಾಗಿದೆ. ಬೇಸಿಗೆಯ ಬಿಸಿಲಿನ ಧಗೆಯಿಂದ ಜನರಿಗೆ ಅಪಾಯವಾಗದಂತೆ ಎಲ್ಲರಿಗೂ ರಕ್ಷಣೆ ನೀಡಬೇಕೆಂದು ದೇವಿಯಲ್ಲಿ ಪ್ರಾರ್ಥಿಸುವುದೇ ಈ ಹಬ್ಬದ ವಿಶೇಷತೆಯಾಗಿದೆ. ಹೋಳಿ ಹುಣ್ಣಿಮೆಯ ಮರುದಿನ ಇದನ್ನು ಆಚರಿಸಲಾಗುತ್ತದೆ.

ಯುಗಾದಿ(ಪಾಡುವಾ)

ಹೆಸರೇ ಸೂಚಿಸುವಂತೆ ಯುಗಾದಿ ಆದಿ ಯುಗಾದಿ ಶಾಲಿವಾಹ ಶೆಕೆ ಹೊಸ ವರ್ಷದ ಆರಂಭದ ಹಬ್ಬವಾಗಿದೆ. ಯುಗಾದಿ ಅಮವಾಸ್ಯೆಗೂ ಮೊದಲು ಮನೆಯನ್ನೆಲ್ಲಾ ಸಾರಿಸಿ ಬಟ್ಟೆ ಬರೆಯ್ನೆಲ್ಲಾ ತೊಳೆದು ಸ್ವಚ್ಛಗೊಳಿಸುತ್ತಾರೆ. ಅಮವಾಸ್ಯೆ ದಿನಹೋಳಿಗೆ ಅಡಿಗೆ ಮಾಡಿ ಮನೆ ದೇವರಿಗೆ ಪೂಜೆ ಮಾಡುತ್ತಾರೆ. ಮರುದಿನವೇ ಯುಗಾದಿ ಪಾಡುವಾ. ಅಂದು ಅಭ್ಯಂಜನ ಸ್ನಾನ, ನವವಸ್ತ್ರ ಧಾರುಣ, ತಳಿರು ತೋರಣಾದಿಗಳಿಂದ ಗೃಹಾಂಲಕಾರ, ಬೇವು-ಬೆಲ್ಲದ ಪೂಜೆ ಮತ್ತು ಅದರ ಸೇವನೆ ಮಾಡಲಾಗುತ್ತದೆ. ವಸಂತ ಋತುವಿನಲ್ಲಿ ಉಂಟಾಗಬಹುದಾದ ರೋಗ ರುಚಿನಗಳ ನಿಗ್ರಹಕ್ಕಾಗಿ ಮತ್ತು ಆರೋಗ್ಯ ವೃದ್ಧಿಗಾಗಿ ಬೇವು ಬೆಲ್ಲದ ಸೇವನೆ ಈ ಹಬ್ಬದ ವಿಶೇಷತೆಯಾಗಿದೆ. ಹೊಸ ವರುಷದಲ್ಲಿ ಪ್ರತಿ ವ್ಯಕ್ತಿಯೂ ಅನುಭವಿಸಬೇಕಾದ ಸುಖ; ದುಃಖ, ಲಾಭ-ನಷ್ಟ, ಜಯ-ಅಪಜಯ ಮುಂತಾದ ಸಿಹಿ-ಕಹಿ ಅನುಭವಗಳನ್ನು ಸಮದೃಷ್ಟಿಯಿಂದ ಕಾಣಬೇಕೆಂಬ ವಿವೇಕದ ಪ್ರಚೋದನೆಗೆ ಸಂಕೇತವಾಗಿಯೇ ಬೇವು ಬೆಲ್ಲದ ಸೇವನೆ ನಡೆಯುತ್ತದೆ.

ಈ ದಿನ ಗಂಡು ಮಕ್ಕಳಿಗೆ ಅಕ್ಕತಂಗಿಯರು ಆರತಿ ಮಾಡಿ ಶುಭಾಶೀರ್ವದಿಸಿ, ಶ್ಯಾವಿಗೆ ಪಾಯಸವನ್ನು ಸೇವಿಸಲು ನೀಡುತ್ತಾರೆ. ಸ್ಥಳೀಯ ಊರಲ್ಲಿಯ ಮದುವೆಯಾದ ಹೆಣ್ಣುಮಕ್ಕಳೂ ಸಹ ಈ ಕಾರ್ಯಕ್ಕಾಗಿ ತವರು ಮನೆಗೆ ಬರುತ್ತಾರೆ. ಮನೆ ದೇವರು ನರಸಿಂಹ ಇರುವವರು ಅಂದು ತುಪ್ಪ ದಲ್ಲಿಯೇ ಹೋಳಿಗೆ, ಮತ್ತಿತರ ಭಕ್ಷ ಭೋಜನವನ್ನು ತಯಾರಿಸಿ ಪೂಜಿಸುತ್ತಾರೆ. ಮನೆಯ ಹೆಣ್ಣು ಮಕ್ಕಳು ಈ ಪೂಜೆ ನೋಡುವಂತಿಲ್ಲ ಮತ್ತು ಅಡಿಗೆ ತಿನ್ನುವಂತಿಲ್ಲವೆಂದ ಅಂಶವನ್ನು ಇಲ್ಲಿ ಕಡ್ಡಾಯವಾಗಿ ಪರಿಪಾಲಿಸಲಾಗುತ್ತದೆ.

ಶ್ರಾವಣ ಮಾಸದ ಕಾರ್ಯಕ್ರಮ:

ಪ್ರತಿವರ್ಷ ಶ್ರಾವಣ ಮಾಸದಲ್ಲಿ ಬಹುತೇಕವಾಗಿ ದೇವರ ನಾಮಸ್ಕರಣೆಯಲ್ಲಿಯೇ ಕಾಲ ಕಳೆಯುವದು ವಿಶೇಷತೆ, ಮಹಿಳೆಯರಂತೂ ಇದನ್ನು ಹೆಚ್ಚು ಭಯ ಭಕ್ತಿಯಿಂದ ಆಚರಿಸುತ್ತಾರೆ. ಪ್ರತಿ ಸೋಮವಾರ ಮತ್ತು ಶುಕ್ರವಾರದಂದು ಮುತ್ತೈದೆ ಮಹಿಳೆಯರನ್ನು ಮನೆಗೆ ಅರಿಷಿಣ ಕುಂಕುಮಕ್ಕಾಗಿ ಕರೆದು ಉಡಿ ತುಂಬುವ ಕಾರ್ಯಕ್ರಮ ನಡೆಸಲಾಗುತ್ತದೆ. ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿ ನಡೆಯುವ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ.

ಶ್ರಾವಣ ಮಾಸದುದ್ದಕ್ಕೂ ಮನೆಯಲ್ಲಿ ಮಾಂಸಾಹಾರ ಸೇವನೆ ನಿಷಿದ್ಧವಿರುತ್ತದೆ. ಕೇವಲ ಸಾತ್ವಿಕ ಆಹಾರ ಮಾತ್ರ ಸೇವಿಸುತ್ತಾರೆ. ತಿಂಗಳುದ್ದಕ್ಕೂ ಪೂಜೆಮಾಡಲು, ಹಾಡು ಹಾಡಲು ಸೇರುವ ಮಹಿಳೆಯರಿಗೆ ಪ್ರತಿ ದಿನವೂ ಒಬ್ಬರಂತೆ ಉಪಾಹಾರ ಹಂಚುವ ಮೂಲಕ ದಿನವಿಡೀ ಉಪವಾಸ ವೃತ ಮಾಡಿದವರಿಗೆ ತಮ್ಮ ಸೇವೆ ಸಲ್ಲಿಸುವ ಮನೋಭಾವ ತೋರ್ಪಡಿಸಲಾಗುತ್ತದೆ.

ದಸರಾ:

ಶರನ್ನವರಾತ್ರಿ ಮತ್ತುವಿಜಯದಶಮಿ ಎಂದು ಕರೆಯಲಾಗುವ ದಸರಾ ರಜಪೂತ ಮಹಿಳೆಯರು ಭಯ-ಭಕ್ತಿಯಿಂದ ಆಚರಿಸಲಾಗುವೆ ವಿಶಿಷ್ಟಹಬ್ಬ. ಒಂಭತ್ತು ದಿನಗಳ ವರೆಗೆ ದೇವಿಯ ಸುತ್ತಿ ಮಾಡುವುದು, ದೇವರ ಸಮೀಪವೇ ಇದ್ದು, ಮಾಂಸದೂಟ, ಮದ್ಯಪಾನ ಮಾಡದೇ ಇರುವದು ಮತ್ತು ಕೇವಲ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸುವದು ಈ ಹಬ್ಬದ ವಿಶೇಷತೆಯಾಗಿದೆ. ಶಕ್ತಿದೇವತೆಯ ಪೂಜೆ ಮಾಡುವುದೇ ಹಬ್ಬದ ಮುಖ್ಯ ಅಂಶವಾಗಿದೆ. ದೇವಿ ಪುರಾಣ ಪರಾಯಣ ಮಾಡಲಾಗುತ್ತದೆ. ಹೆಣ್ಣು ಮಕ್ಕಳು ಪಾರಾಯಣವನ್ನು ಕೇಳುತ್ತಾ ಕುಳಿತುಕೊಂಡಿರುತ್ತಾರೆ. ಅಮಾವಾಸ್ಯೆಯ ಮರುದಿನ ದೇವಿಯ ಮುಂದೆ ಘಟಸ್ಥಾಪನೆ ಮಾಡುತ್ತಾರೆ. ಹೊಲದಿಂದ ತಂದ ಮಣ್ಣನ್ನು ದೇವಿಯ ಮುಂದೆ ಜಗಲಿಯ ಸುತ್ತ ಹಾಕಿ ಅದರಲ್ಲಿ ಗೋಧಿ ಬಿತ್ತುತ್ತಾರೆ. ಅದಕ್ಕೆ ನಿತ್ಯ ನೀರು ಹಾಕುವುದರಿಂದ ನಾಲ್ಕೈದು ದಿನಗಳಲ್ಲಿ ಗೋದಿ ಮೊಳಕೆವೊಡೆಯುತ್ತದೆ ಐದನೆ ದಿನದಿಂದ ಸ್ತ್ರೀಯರು ಸೇರಿಕೊಂಡುದೇವಿಯ ಮುಂದೆ ಹಾಡು ಹಾಡುತ್ತಾ, ಅವಳ ಮಹಿಳೆಯನ್ನು ಸುತ್ತಿಸುತ್ತಾರೆ. ಐದು ದಿನಗಳವರೆಗೆ ಈ ಕಾರ್ಯಕ್ರಮವು ಅವ್ಯಾಹತ ನಡೆಯುತ್ತದೆ. ಘಟ ಸ್ಥಾಪನೆ ಮಾಡಿದ ಮನೆಯ ಮುಖ್ಯಸ್ಥೆ ಸಾಂಪ್ರದಾಯಿಕವಾಗಿ ಐದು ಮನೆಗಳಿಗೆ ಹೋಗಿ ”ಜೋಗ’ (ಭಿಕ್ಷೆ) ತೆಗೆದುಕೊಂಡು ಬರುತ್ತಾಲೆ. ಈಹಿಟ್ಟಿನಿಂದ ಮಾಡಿದ ರೊಟ್ಟಿ-ಪಲ್ಲೆಯ ವೈವೇದ್ಯವನ್ನು ದೇವಿಗೆ ಏರಿಸಿ, ಪೂಜೆ ಮಾಡಿ,ಅದನ್ನು ಐದು ಮನೆಗಳಿಗೆ ಹಂಚುತ್ತಾರೆ.

ಖಂಡೇ ಪೂಜಾ( ಆಯುಧ ಪೂಜೆ):

ರಜಪೂತರು ಆಯುಧ ಪ್ರಿಯರು. ಆಯುಧಗಳ ಬಲದಿಂದಲೇ ರಾಜ್ಯಭಾರ ಮಾಡಿದವರು. ಹೀಗಾಗಿ ಆಯುಧ ಪೂಜೆ ಪರಂಪರಾಗತವಾಗಿ ಬಂದ ಹಬ್ಬ. ಮೊದಲು ಶಸ್ತ್ರಾಸ್ತ್ರಗಳನ್ನು ಪೂಜಿಸುತ್ತಿದ್ದವರು. ಈಗ ಬದಲಾದ ಪರಿಸ್ಥಿತಿಯಲ್ಲಿ ನಿತ್ಯ ಕಾಯಕ್ಕಾಗಿ ಬಳಸುವ ವಸ್ತುಗಳನ್ನೇ ಓರಣವಾಗಿಟ್ಟು ಪೂಜಿಸಲಾಗುತ್ತದೆ. ಘಟಸ್ಥಾಪನೆ ಮಾಡಿದ ಮನೆಗಳಲ್ಲಿ ಈ ದಿನಂದು ಹೋತಮರಿಯನ್ನು ದೇವಿಗೆ ಬಲಿ ಕೊಡಲಾಗುತ್ತದೆ. ಇದರ ಅಡಿಗೆ ಮಾಡಿ ದೇವಿಗೆ ನೈವೇದ್ಯ ಮಾಡಿ ನಂತರ ಬಂಧು-ಮಿತ್ರರಿಗೆ ಊಟ ಮಾಡಿಸಲಾಗುತ್ತದೆ.

ವಿಜಯದಶಮಿ:

ಕೆಟ್ಟದ್ದರ ಮೇಲೆ ಒಳಿತು ವಿಜಯಸಾಧಿಸಿದ ದಿನವೇ ವಿಜಯದಶಮಿ. ಶ್ರೀ ರಾಮನು ರಾವಣನನ್ನು ವಧಿಸಿ ಜಯಶೀಲನಾದ ದಿನ ಇದು. ಶ್ರೀರಾಮನು ನವರಾತ್ರ ಒಂಭತ್ತು ದಿನವೂಶಕ್ತಿಮಾತೆಯನ್ನು ಆರಾಧಿಸಿ ವಿಜಯದಶಮಿಯ ದಿನ ಶಮೀವೃಕ್ಷವನ್ನು ಪೂಜಿಸಿ ಚೈತ್ರ ಯಾತ್ರೆ ಪ್ರಾರಂಭಿಸಿ, ರಾವಣನನ್ನು ವಧಿಸಿ ಸೀತೆಯನ್ನು ಬಂಧನದಿಂದ ಮುಕ್ತಗೊಳಿಸಿದನೆಂಬ ನಂಬಿಕೆಯ ಆಧಾರದಲ್ಲಿಯೇ ಈ ಹಬ್ಬವನ್ನು ಆಚರಿಸಲಾಗುತ್ತದೆ. ಆದ್ದರಿಂದ ಯಾವುದೇ ಕಾರ್ಯದಲ್ಲಿ ಜಯಗಳಿಸಲು ಶಮೀವೃಕ್ಷದ ಪೂಜೆಯ ಅಗತ್ಯವಿದೆ. ಇದಕ್ಕಾಗಿಯೇ ಬನ್ನಿ(ಶಮೀ) ಗಿಡಕ್ಕೆ ಪೂಜೆ ಸಲ್ಲಿಸಿ, ಬನ್ನಿ ಮುಡಿದು ಅದನ್ನು ಹಿರಿಯರಿಗೆ ನೀಡಿ ಆಶೀರ್ವಾದ ಪಡೆದುಕೊಳ್ಳುವದು. ಸಾಮಾನ್ಯ ಅಂಶವಾಗಿದೆ. ಅಂದರೆ ನಿತ್ಯದ ವ್ಯವಹಾರದಲ್ಲಿ ಪರಸ್ಪರರಲ್ಲಿ ವಿಜಯ ಕೋರುವುದರ ದ್ಯೋತಕವಾಗಿದೆ. ಕೆಲವೆಡೆಗೆ ಬನ್ನಿ ಮುಡಿಯುವ ಕಾರ್ಯಕ್ರಮವು ಸಾಮೂಹಿಕವಾಗಿ ನಡೆಯುತ್ತದೆ. ಹಬ್ಬಗಳು ತಮ್ಮ ಅರ್ಥ ಕಳೆದುಕೊಳ್ಳುತ್ತಲಿರುವ ವಿಷಮ ಪರಿಸ್ಥಿತಿಯಲ್ಲಿಯೂ ಸಹ ರಜಪೂತರಲ್ಲಿ ಕೆಲವರು ಈ ವಿಶಿಷ್ಟ ಪರಂಪರೆಯನ್ನು ಕಾಪಾಡಿಕೊಂಡಿರುವರು. ಸಂಜೆ ಸಮಾಜ ಬಾಂಧವರೆಲ್ಲರೂ ಬನ್ನಿ ಗಿಡಕ್ಕೆ ತೆರಳಿ ಅಲ್ಲಿ ಬ್ರಾಹ್ಮಣರಿಂದ ಮಂತ್ರಘೋಷಗಳ ಪೂಜೆಯ ನಂತರವೇ ಬನ್ನಿ ಮುಡಿಯುತ್ತಾರೆ ಇದು ಜನರಲ್ಲಿನ ಪರಸ್ಪರ ಪ್ರೀತಿ, ವಿಶ್ವಾಸ ವರ್ಧನೆ ಮತ್ತು ಒಗ್ಗಟಿಗೆ ಕಾರಣವಾಗಿದೆ.

ದೇವಿ ವಿಸರ್ಜನೆ:

ಘಟಸ್ಥಾಪನೆ ಮಾಡಿದ ಮನೆಗಳ ಸ್ತ್ರೀಯರು ದೇವಿಯ ಮುಂದೆ ಬೆಳೆದ ಗೋದಿಯ ಬೆಳೆಸಿ (ಬುಜರ‍್ಯಾ) ಮತ್ತು ಮಣ್ಣನ್ನು ಬುಟ್ಟಿಯಲ್ಲಿ ಹಾಕಿಕೊಂಡು ಕರೆ-ಬಾವಿಗಳಿಗೆ ಹೋಗಿ ಅಲ್ಲಿ ಪೂಜಿಸಿ ಅದನ್ನು ವಿಸರ್ಜಿಸಿ ಬರುತ್ತಾರೆ ಅಂದರೆ ದೇವಿಯನ್ನು ತನ್ನ ಹೃದಯದಲ್ಲಿ ತುಂಬಿ ಕೊಳ್ಳುವುದೇ ಈ ಪೂಜೆಯ ಸಂಕೇತವಾಗಿದೆ.

ದೀಪಾವಳಿ:

ರಕ್ಕಸ ದೊರೆ ನರಕಾಸುರನನ್ನು ಶ್ರೀಕೃಷ್ಣ ವಧಿಸಿದ ವಿಜಯೋತ್ಸವದ ದಿನವಾದ ನರಕ ಚತುರ್ದಶಿಯಂದು ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರಿಗೆ ಅಭ್ಯಂಜನ ಸ್ನಾನ ಮಾಡಿಸುತ್ತಾರೆ. ಹೊಸ ಅಳಿಯನನ್ನು ಮಗಳ ಜೊತೆಗೆ ಅಳಿಯತನಕ್ಕೆ ಕರೆಯಲಾಗುತ್ತದೆ.

ಮರುದಿನದ ಅಮವಾಸ್ಯೆಯನ್ನು ವರ್ಷದ ಅತ್ಯಂತ ಕತ್ತಲೆಯ ದಿನವೆಂದು ಪರಿಗಣಿಸಲಾಗುತ್ತದೆ. ಕತ್ತಲೆ, ಅಜ್ಞಾನದ ಪ್ರತೀಕವಾಗಿದ್ದು, ಅದನ್ನು ಹೊಡೆದೋಡಿಸಿ ದೀಪ, ಅದರ ಬೆಳಕು ಜ್ಞಾನದ ಸಂಕೇತವಾಗಿದ್ದು ಅದನ್ನು ಆಹ್ವಾನಿಸುವುದೇ ಈ ಹಬ್ಬದ ವಿಶೇಷತೆ. ವಿಕ್ರಮ ಶಕೆಯ ಹೊಸ ವರ್ಷದ ಆರಂಭವಾದ ದೀಪಾವಳಿಯಂದು ಮಹಾಲಕ್ಷ್ಮಿ ಮತ್ತು ಕುಬೇರನ ಪೂಜೆ ಮಾಡಿ ಉತ್ತಮ ಧನ ಪ್ರಾಪ್ತಿಗಾಗಿ ಪ್ರಾರ್ಥಿಸಲಾಗುತ್ತದೆ. ಸಂಜೆ ಹೊಲದಲ್ಲಿನ ಮಣ್ಣನ್ನು ತಂದು ಅದರಿಂದ ದೀಪವನ್ನು ತಮ್ಮ ಮನೆತನದಲ್ಲಿನ ಪೂರ್ವಜರ ಹೆಸರಿನಿಂದ ಬೆಳಗಿಸಲಾಗುತ್ತದ.ಎ ಮನೆತನದ ಎರಡು ಮೂರು ತಲೆಮಾರುಗಳ ಪರಿಚಯವಿದ್ದವರೇ ಕಡಿಮೆಯಾಗುತ್ತಿರುವಾಗ, ರಜಫೂತರು ತಮ್ಮವಂಶಾವಳಿಯ ಪರಂಪರೆಯನ್ನು ಈ ದಿನದಂದು ಸ್ಮರಿಸುತ್ತಾರೆ. ಪೂಜೆ ಮಾಡಿದ ನಂತರ ಬೆಳಗಿಸಲ್ಪಟ್ಟ ದೀಪಗಳನ್ನು ಮನೆಯ ಎಲ್ಲಾ ಕಡೆಗೂ ಇಡುವ ಮೂಲಕ ಮೂಲೆ ಮೂಲೆಗಳಲ್ಲಿಯ ಅಂಧಕಾರ ಕಳೆಯುವ ಪ್ರಯತ್ನ ಮಾಡಲಾಗುತ್ತದೆ. ಬೆಳಕು ಮೂಡಿಸಲಾಗುತ್ತದೆ. ಮರುದಿನ ಈ ದೀಪಗಳನ್ನು ಕೆರೆ ಬಾವಿಯಲ್ಲಿ ಹಾಕಲಾಗುತ್ತದೆ ಮತ್ತು ಪ್ರತಿಯೊಬ್ಬ ಪೂರ್ವಜರ ಹೆಸರನ್ನು ಹೇಳಿ ಕರಿಕೆ ಮತ್ತು ಅಕ್ಕಿಕಾಳನ್ನು ನೀರಲ್ಲಿ ಹಾಕಿ ಅರ್ಘ್ಯ ಕೊಡಲಾಗುತ್ತದೆ. ಈ ಕಾರ್ಯಕ್ರಮವು ಸೂರ್ಯ-ಚಂದ್ರರಿಂದಲೇ ಆರಂಭವಾಗುತ್ತದೆ. ಸಾವನ್ನಪ್ಪಿರುವ ಪೂರ್ವಜರಾದ ಗಂಡಸರಿಗೆ ಪೂರ್ವದತ್ತ ಮತ್ತು ಹೆಂಗಸರಿಗೆ ಪಶ್ಚಿಮದತ್ತ ಮುಖ ಮಾಡಿ ಎರಡು ಬೊಗಸೆ ಅರ್ಘ್ಯ ಕೊಡಲಾಗುತ್ತದೆ. ನಂತರ ಅಲ್ಲಿಯೇ ಸ್ನಾನ ಮಾಡಿ ಬರುವಾಗ ಒಂದು ತಂಬಿಗೆ ನೀರು ಮತ್ತು ಕೆಲ ಔಡಲ ಎಲೆಗಳನ್ನು ಪೂಜೆಗಾಗಿ ತರಲಾಗುತ್ತದೆ. ಮನೆಗೆ ಬರುವುದರೊಳಗಾಗಿ ಮಹಿಳೆಯರು ಅನ್ನದ ಉಂಡೆ ಮಾಡಿರುತ್ತಾರೆ. ಔಡಲ ಎಲೆಗಳನ್ನು ನೆಲಕ್ಕೆ ಹಾಸಿ, ದೀಪಗಳನ್ನಿಟ್ಟ ಜಾಗದಲ್ಲಿಯೇ, ಪೂರ್ವಜರ ಹೆಸರಿನಿಂದ ಹಿರಿಯರಿಗೆ ಪಿಂಡ ಪ್ರದಾನ ಮಾಡಲಾಗುತ್ತದೆ. ದೀಪಾರಾಧನೆ ಮತ್ತು ಪಿಂಡ ಪ್ರದಾನ ಮಾಡುವದು ರಾಮಾಯಣದಲ್ಲಿಯೂ ಸಹ ಉಲ್ಲೇಖವಾಗಿರುವದು ಗಮನಾರ್ಹ ಅಂಶವಾಗಿದೆ.

ಗೋವರ್ಧನನ ಪೂಜೆ:

ಗೋರ್ಧನಕಿ ಪೂಜಾ ಎಂದೇ ಹೆಸರು ವಾಸಿಯಾಗಿರುವ ಗೋವರ್ಧನನ ಪೂಜೆಯನ್ನು ಮಹಿಳೆಯರು ಮನೆಯ ಹೊರಗೆ ಅಂಗಳಲದಲಿ ಶ್ರದ್ಧಾಭಕ್ತಿಯಿಂದ ಮಾಡುವರು. ಇದಕ್ಕಾಗಿ ಅವರು ಆಕಳ ಸೆಗಣಿಯಿಂದ ’ಗಿರಿ’ಯನ್ನುಮಾಡುತ್ತಾರೆ. ಸೆಗಣಿಯನ್ನು ಕುಳ್ಳಿನಾಕಾರದಲ್ಲಿ ಬಡಿದು ನಡುವೆ ಸ್ವಲ್ಪ ಎತ್ತರವಾದ ಸೆಗಣಿಯ ಆಕೃತಿ ಮಾಡಿ, ಅದರ ಸುತ್ತಲೂ ಮತ್ತೇ ನಾಲ್ಕು ಆಕೃತಿಗಳನ್ನು ಸ್ವಲ್ಪ ಚಿಕ್ಕದು ಮಾಡಲಾಗುತ್ತದೆ. ಇದಕ್ಕೆ ಪ್ರಕೃತಿಯಲ್ಲಿ ಸಿಗುವ ಉತ್ತರಾಣಿ ಕಡ್ಡಿ ಹಾಗು ಹೊನ್ನಂಬರಿ ಕಡ್ಡಿಗಳನ್ನು ಚುಚ್ಚುತ್ತಾರೆ. ಅಂಗಳದಲ್ಲಿ ಮೂರು ಕಟ್ಟಿಗೆಗಳನ್ನು ಕಟ್ಟಿ ಅವುಗಳನ್ನು ತ್ರಿಕೋನ ಆಕಾರದಲ್ಲಿ ನಿಲ್ಲಿಸಿ ಅದರ ಮೇಲೆ ಕಂಬಳಿಯೊಂದನ್ನು ಹಾಕುತ್ತಾರೆ. ಇದೂ ಸಹ ಗೋವರ್ಧನ ಗಿರಿಯಂತೆಯೇ ಆಗಿರುತ್ತದೆ. ಇಲ್ಲಿ ಪೂಜೆ ಮಾಡಿದ ನಂತರ ಇಟ್ಟಿರುವ ದಕ್ಷಿಣೆ ಹಣವನ್ನು ಮನೆಯ ಹೆಣ್ಣುಮಕ್ಕಳೆಲ್ಲರೂ ಹಂಚಿಕೊಳ್ಳುವ ಪರಿಪಾಠವಿದೆ.

ರಾಮನವಮಿ:

ಯುಗಾದಿಯಿಂದ ಎಂಟು ದಿನಗಳ ನಂತರ ಬರುವ ಚೈತ್ರ ಶುಕ್ಲ ನವಮಿ ಶ್ರೀ ರಾಮನ ಜನ್ಮ ದಿನ. ಅಂದು ಮದ್ಯಾಹ್ನ ರಾಮಾವತಾರವಾದದ್ದು ಎಂಬ ನಂಬಿಕೆ ಇದೆ. ವಾಸ್ತವವಾಗಿ ನವಮಿಯ ರಾತ್ರಿಯಿಂದಲೇ ಮಹಿಳೆಯರು ಉಪವಾಸ ಆರಂಭಿಸುತ್ತಾರೆ. ಮಹಿಳೆಯರು ವಿಶೇಷವಾಗಿ ಶೃಂಗರಿಸಿಕೊಂಡು ದೇವಸ್ಥಾನದಲ್ಲಿ ಸಾಮೂಹಿಕವಾಗಿ ಸೇರುತ್ತಾರೆ ಮತ್ತು ತೊಟ್ಟಿಲ್ನು ಶೃಂಗರಿಸಿ ಶ್ರೀರಾಮಚಂದ್ರನ ಪ್ರತಿರೂಪವನ್ನು ತೊಟ್ಟಿಲಲ್ಲಿ ಹಾಕುವರು. ಯುಗಾದಿಯಿಂದ ಒಂಭತ್ತು ದಿನ ದೇವಸ್ಥಾನಗಳಲ್ಲಿ ಪೂಜೆ, ರಾಮಾಯಣದ ಪಾರಾಯಣ, ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಕೊನೆಗೆ ಪ್ರಸಾದ ವಿತರಣೆ ಈಕಾರ್ಯಕ್ರಮದಲ್ಲಿ ಮಹಿಳೆಯರು ಸಕ್ರೀಯವಾಗಿ ಪಾಲ್ಗೊಳ್ಳುತ್ತಾರೆ.

ಶ್ರೀ ಕೃಷ್ಣಜನ್ಮಾಷ್ಟಮಿ:

ಶ್ರೀಕೃಷ್ಣ ಜನ್ಮಾಷ್ಟಮಿಯು ಶ್ರದ್ಧೆಯಿಂದ ಆಚರಿಸುವ ಮತ್ತೊಂದು ಹಬ್ಬ. ಶ್ರೀಕೃಷ್ಣನ ಜನನ ಆದದ್ದು ಮಧ್ಯರಾತ್ರಿಯಾದುದರಿಂದ ವ್ರತವೂ ಅರ್ಧರಾತ್ರಿಯಿಂದಲೇ ಆರಂಭವಾಗುತ್ತದೆ. ಇಡೀ ರಾತ್ರಿಉಪವಾಸ, ಜಾಗರಣೆಗಳೊಡೆನೆ ಭಾಗವತದ ಪಠಣ, ಕೃಷ್ಣ ಕಥಾ ಪ್ರಸಂಗಗಳು, ಬಜನೆ ನಡೆಯುತ್ತದೆ ರಾತ್ರಿ ೧೨ ಗಂಟೆಗೆ ಶ್ರೀ ಕೃಷ್ಣನನ್ನು ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ ನಡೆಯುತ್ತದೆ.

ಗಣೇಶ ಚತುರ್ಥಿ:

ಬದುಕಿನ ವಿಘ್ನಗಳನ್ನುನಿವಾರಿಸುವ ದೇವನಾದ ಗಣೇಶನನ್ನು ಪೂಜಿಸುವುದೇ ಗಣೇಶ ಚತುರ್ಥಿಯ ವಿಶೇಷತೆ. ಸಮಗ್ರ ಜ್ಞಾನವನ್ನು, ವಿವೇಕವನ್ನು, ಸಾಹಿತ್ಯ ಕಲೆಗಳಲ್ಲಿ ಕುಶಲತೆಯನ್ನುನೀಡುವ ದೇವನೇ ಗಣೇಶ, ಗಣೇಶ ಚತುರ್ಥಿಯಂದು ಮನೆಯಲ್ಲಿ ಗಂಡು ಮಗುವಿಗೆ ಜನನವಾದರೆ ಗಣೇಶನನ್ನು ಪ್ರತಿಷ್ಠಾಪಿಸುವ ಪರಂಪರೆ ಇದೆ.

ನಾಗಪಂಚಮಿ:

ಇದು ಹೆಣ್ಣುಮಕ್ಕಳ ಹಬ್ಬ. ನಾಗಪಂಚಮಿಯ ಮುನ್ನಾದಿನದಂದು ರೊಟ್ಟಿ ಪಂಚಮಿ ಮಾಡಲಾಗುತ್ತದೆ. ಅಂದು ವಿವಿಧ ನಮೂನೆಯ ಅಡಿಗೆ ಮಾಡುತ್ತಾರೆ. ಮರುದಿನ ನಾಗ ಪಂಚಮಿಯ ನಿಮಿತ್ಯ ಅಳ್ಳಿಟ್ಟು, ಖಿಲಿಯಾ, ಹಂಗನೂಲ, ಕೊಬ್ಬರಿ ಬಟ್ಟಲು-ಬೆಲ್ಲ-ಹಾಲು, ಮಾಡಿದ ಎಲ್ಲಾ ತರಹದ ಉಚಿಡಿ ತಾಟಿನಲ್ಲಿಟ್ಟುಕೊಂಡು ನಾಗಪ್ಪನಿಗೆ ಹಾಲು ಎರೆಯಲು ಹೋಗುವ ಮಹಿಳೆಯರ ಸಂಭ್ರಮ ಹೇಳತೀರದು. ಹಾಲು ಹಾಕಿ ಬಂದ ಮಹಿಳೆಯರು ಉಂಡಿ ಮತ್ತು ಅಡಿಗೆಯ ಸಾಮಾನುಗಳನ್ನು ಬಂಧು ಮಿತ್ರರಲ್ಲಿ ಹಂಚುತ್ತಾರೆ. ಗಿಡಕ್ಕೆ ’ಜೋಕಾಲಿ’ ಹಾಕಿ ಎಲ್ಲ ಹೆಣ್ಣುಮಕ್ಕಳು ಸರದಿಯಲ್ಲಿ ನಿಂತು ಜೋಕಾಲಿ ಆಡುವಲ್ಲಿನ ಸಂಭ್ರಮ ಅನುಭವಿಸಿದವರಿಗೆಯೇ ಗೊತ್ತು ಅಂದು ಇಡೀ ದಿನ ಮಹಿಳೆಯರು ಹರ್ಷೋಲ್ಲಾಸದಲ್ಲಿ ಮುಳುಗಿರುತ್ತಾರೆ. ವಿವಾಹಿತೆ ತವರು ಮನೆಗೆ ಬರುವಂತೆ ಆಕೆಯ ಅಣ್ಣ ತಮ್ಮಂದಿರು ಆಮಂತ್ರಿಸಿ ಸೋದರಿಯನ್ನು ಪ್ರೀತ್ಯಾದರದಿಂದ ಕಾಣುವ ಹಬ್ಬ ಇದು.

***