ಕುಲ ಹಿನ್ನೆಲೆ
ರಜಪೂತರು ತಮ್ಮನ್ನು ವೇ ಕಾಲದಷ್ಟು ಪುರಾತನವಾದ ಕ್ಷತ್ರಿಯ ಕುಲದವರೆಂದೂ, ಸೂರ್ಯ-ಚಂದ್ರರ ವಂಶಕ್ಕೆ ಸೇರಿದವರೆಂದೂ ಹೇಳಿಕೊಂಡಿದ್ದಾರೆ. ರಜಪೂತರು ಉತ್ತರ, ಪಶ್ಚಿಮ ಭಾರತದಲ್ಲಿ ಅದರಲ್ಲಿಯೂ ರಾಜಸ್ಥಾನದಲ್ಲಿ ಅಧಿಕಸಂಖ್ಯಯಲ್ಲಿರುವರು. ಹರ್ಷನ ನಂತರದಲ್ಲಿ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿರುವರು. ಮುಸ್ಲಿಂಮರು ಭಾರತದ ಮೇಲೆ ರಾಜಕೀಯ ಮತ್ತು ಧಾರ್ಮಿಕವಾಗಿ ದಾಳಿ ಆರಂಭಿಸಿದಾಗ ರಜಪೂತರು ಹಿಂದೂ ಧರ್ಮ, ಪರಂಪರೆಗಳ ನಿಷ್ಠಾವಂತ ಸೇವಕರಾಗಿ, ರಕ್ಷಕರಾಗಿ ಹೋರಾಟ ನಡೆಸಿದರು. ರಾಜಸ್ಥಾನವು ರಜಪೂತರ ತವರಾದರೂ ಸಹ ಅವರು ವಿವಿಧ ಕಾರಣಗಳಿಂದಾಗಿ ಇಂದು ದೇಶಾದ್ಯಂತ ಹರಡಿರುವರು. ಸ್ಥಳೀಯ ಪ್ರದೇಶ, ಜನಜೀವನ ಮತ್ತು ಭಾಷೆಗೆ ಅನುಗುಣವಾಗಿ ಇತರಲ್ಲಿ ಬೆರೆತು ಹೋಗಿರುವರು. ಯಾವುದೇ ಒಂದು ಜನಾಂಗದ ಸಂಸ್ಕೃತಿಯು ನಿಂತ ನೀರಲ್ಲ ಅದು ಹರಿಯುತ್ತಿರುವ, ನಿತ್ಯ ಪರಿವರ್ತನ ಶೀಲವಾದುದು ಎಂಬುದಕ್ಕೆ ಕರ್ನಾಟಕದ ಬಹುತೇಕ ಎಲ್ಲಾ ೧೭೬ ತಾಲೂಕುಗಳಲ್ಲಿ ವ್ಯಾಪಿಸಿರುವ ರಜಪೂತರ ಜನಜೀವನವೇ ಸಾಕ್ಷಿ.
ಉತ್ತರ ಭಾರತದ ರಜಪೂತರು ದಕ್ಷಿಣ ಭಾರತಕ್ಕೆ ಅದರಲ್ಲಿಯೂ ಕರ್ನಾಟಕ ರಾಜ್ಯಕ್ಕೆ ವಲಸೆ ಬಂದುದು ಹೇಗೆ? ಎಂಬುದಕ್ಕೆ ಸ್ಟಷ್ಟ ಆಧಾರಗಳು ಇಲ್ಲ. ಯುದ್ಧ ಕಲೆಯಲ್ಲಿ ಪರಿಣಿತರಾಗಿದ್ದ ರಜಪೂತರನ್ನು ರಾಜ್ಯದ ಕೆಲಸ ಸಂಸ್ಥಾನಿಕ ರಾಜರು ತಮ್ಮ ಸೈನಿಕರಿಗೆ ತರಬೇತಿ ನೀಡಲು, ಮತ್ತು ಸಂಸ್ಥಾನದ ರಕ್ಷಣೆಗಾಗಿ ಕರೆ ತಂದರೆ, ಮತ್ತೆ ಕೆಲವರು ಕಾಥೇವಾಡದ ಶ್ರೇಷ್ಠ ದರ್ಜೆಯ ಕುದುರೆಗಳ ವ್ಯಾಪಾರಕ್ಕೆ ಮತ್ತು ಅವುಗಳ ಯೋಗಕ್ಷೇಮ ನೋಡಿಕೊಳ್ಳುವುದಕ್ಕಾಗಿ ಬಂದಿರಬಹುದಾಗಿದೆ. ದೆಹಲಿಯ ಮೊಘಲ ಅರಸರ ದಬ್ಬಾಳಿಕೆಯಿಂದ ಸ್ವಧರ್ಮ ರಕ್ಷಣೆಗಾಗಿ, ರಾಜ್ಯ-ಆಶ್ರಮ ಎಲ್ಲವನ್ನು ಕಳೆದುಕೊಂಡು ಕೆಲವರು ಬಂದಿರಬಹುದಾಗಿದೆ. ಮೊಘಲರ ನಂತರ ಬ್ರಿಟಿಷ್ ಆಳ್ವಿಕೆ ಆರಂಭವಾದ ಪರಿಣಾಮವಾಗಿ ಸ್ಥಳೀಯ ಸಂಸ್ಥಾನಗಳು ಅಳಿದು ಹೋದವು. ರಜಪೂತರ ವೃತ್ತಿಯೇ ’ಯುದ್ಧ’ ಮಾಡುವುದಾಗಿತ್ತು. ಹೀಗಾಗಿ ಸ್ಳಳೀಯ ಸಂಸ್ತಾನಗಳ ಆಶ್ರಯದಲ್ಲಿದ್ದ ಸೈನಿಕರು ದಕ್ಷಿಣದೆಡೆಗೆ ಹರಿದು ಬಂದಿರಬಹುದಾಗಿದೆ. ಹೊರ ರಾಜ್ಯದಿಂದ ಬಂದ ಇವರು ಸ್ಥಳೀಯ ಜನಜೀವನದಲ್ಲಿ ಸಂಪೂರ್ಣವಾಗಿ ಬೆರೆತು ಹೋದರೂ ಸಹ ತಮ್ಮ ಸಂಸ್ಕೃತಿಯ ಅಸ್ತಿತ್ವವನ್ನು ಇನ್ನೂ ಕಾಪಾಡಿಕೊಂಡಿರುವರು. ರಾಜಸ್ಥಾನದ ಇತಿಹಾಸ ಕಾರನೆಂದು ಖ್ಯಾತರಾದ ಕರ್ನಲ್ ಟಾಡರು ರಜಪೂತ ಮೂಲ ಶೋಧನೆಗೆ ತಮ್ಮ ಜೀವನದ ಬಹುಭಾಗ ಕಳೆದವರು. ಅವರ ಪ್ರಕಾರ ’ರಜಪೂತ’ ಪದವು ’ರಾಜಪುತ್ರ’ ಎಂಬ ಸಂಸ್ಕೃತ ಪದದ ಅಪಭ್ರಂಶ ರೂಪ. ರಜಪೂತರು ರಾಜವಂಶದವರೆಂಬ ನಂಬಿಕೆ ಇದೆ. ಕಾಲಾಂತರದಲ್ಲಿ ದೇಶದೆಲ್ಲೆಡೆಗೆ ಚದುರಿ ಹೋಗಿರುವ ಇವರಲ್ಲಿ ಬಹಳಷ್ಟು ಪರಂಪರಾಗತ ಪದ್ಧತಿಗಳನ್ನು ದಾಖಲೆಯಾಗಿಡುವ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಮಹಿಳಾ ಸಂಸ್ಕೃತಿ ಮಾಲೆ ಅತ್ಯುತ್ತಮ ಕಾರ್ಯ ಮಾಡುತ್ತಲಿರುವುದನ್ನು ಕೃತಜ್ಞತೆಯಿಂದ ಸ್ಮರಿಸುತ್ತ ರಾಜ್ಯದಲ್ಲಿನ ರಜಪೂತರ ವಿವರ ನೀಡುವೆ.
ರಾಜ್ಯದ ಎಲ್ಲೆಡೆಯಲ್ಲಿ ಅದರಲ್ಲಿಯೂ ವಿಶೇಷವಾಗಿ ಕೋಟೆಗಳಿರುವ ಪ್ರತಿಯೊಂದು ಹಳ್ಳಿ ಪಟ್ಟಣಗಳಲ್ಲಿ ರಜಪೂತರು ಸಿಗುತ್ತಾರೆ. ರಾಜ್ಯದಲ್ಲಿ ಇವರ ಜನಸಂಖ್ಯೆ ಅಂದಾಜು ೭೫,೧೬೩ ಎನ್ನಲಾಗಿದ್ದು, ಇದು ರಾಜ್ಯದ ಜನಸಂಖ್ಯೆಯಲ್ಲಿ ಕೇವಲ ಶೇ ೫ರಷ್ಟು ಆಗಿರಬಹುದು.
ಬೆಂಗಳೂರು ಜಿಲ್ಲೆಯಲ್ಲಿ ಅತ್ಯಧಿಕ ಅಂದರೆ ೧೪,೮೭೨ ಜನಸಂಖ್ಯೆ ಇದ್ದರೆ, ಅತಿ ಕಡಿಮೆ ಅಂದರೆ ಕೇವಲ ೧೧೮ ಜನರು ಕೊಡಗು ಜಿಲ್ಲೆಯಲ್ಲಿದ್ದಾರೆ. ಜಿಲ್ಲಾವಾರು ಜನಸಂಖ್ಯೆಯ ವಿವರ ಈ ಕೆಳಗಿನಂತಿದೆ.
ಬೆಂಗಳೂರು ೧೪೮೭೨
ಬೆಳಗಾಂವ ೬೮೨೬
ಬೀದರ ೪೪೯೦
ಬಿಜಾಪೂರ ೭೯೨೨
ಚಿಕ್ಕಮಗಳೂರು ೯೮೨
ಚಿತ್ರದುರ್ಗ ೭೧೪
ದಕ್ಷಿಣ ಕನ್ನಡ ೩೦೨
ಧಾರವಾಡ, ಗದಗ, ಹಾವೇರಿ ೭೯೩೪
ಗುಲರ್ಬ ೮೩೦೯
ಹಾಸನ ೧೧೨೬
ಕೊಡಗು ೨೨೮
ಕೋಲಾರ ೧೧೭೪
ಮಂಡ್ಯ ೯೬೬
ಮೈಸೂರು ೨೧೬೮
ರಾಯಚೂರು, ಕೊಪ್ಪಳ ೫೫೭೬
ಶಿವಮೊಗ್ಗ ೨೨೮೮
ತುಮಕೂರು ೨೦೬೬
ಕಾರವಾರ ೧೯೪೨
೭೫,೧೯೩

ಭಾಷೆ:
ರಾಜ್ಯದಲ್ಲಿನ ರಜಪೂತರ ಮಾತೃ ಭಾಷೆ ಬಹುತೇಕವಾಗಿ ಹಿಂದಿ. ಹಿಂದಿ ಭಾಷೆ ಮಾತನಾಡುವಲ್ಲಿಯೂ ಸಹ ಸ್ಥಳೀಯ ಜನಸಮುದಾಯದ ಗಾಢ ಪ್ರಭಾವವಿದೆ. ಹೀಗಾಗಿ ಹಿಂದಿ ಬಳಕೆಯ ಭಾಷೆಯು ಪ್ರದೇಶದಿಂದ ಪ್ರದೇಶದಿಂದ ಪ್ರದೇಶದಕ್ಕೆ ವ್ಯತ್ಯಾಸವಿದೆ. ಉತ್ತರ ಭಾರತದ ಹಿಂದಿಗೆ ಹೋಲಿಸಿದಲ್ಲಿ ಸ್ವಲ್ಪ ಬಿರುಸಾಗಿದೆ. ಗ್ರಾಮೀಣ ಪ್ರದೇಶದಲ್ಲಿನ ರಜಪೂತರಿಗೆ ಹಿಂದಿಯ ಬದಲಿಗೆ ಕನ್ನಡವೇ ಮಾತೃಭಾಷೆ. ಇವರು ಕನ್ನಡ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ. ಇಂಥವರು ಮನೆಯಲ್ಲಿಯೂ ಸಹ ಹಿಂದಿ ಮಾತನಾಡದೇ ಇರುವದು ಗಮನಾರ್ಹ ಅಂಶ. ಸ್ಥಳೀಯ ಭಾಷೆಯ ಜೊತೆಗೆಯೇ ಉರ್ದು, ಮರಾಠಿ, ತೆಲಗು ಮಿಶ್ರಿತ ಹಿಂದಿಯನ್ನು ಗಡಿ ಭಾಗದ ಜಿಲ್ಲೆಗಳಲ್ಲಿ ಉಪಯೋಗಿಸುವದು ಸಾಮಾನ್ಯವಾಗಿದೆ. ಕನ್ನಡ ಭಾಷೆಯ ಬಳಕೆ ವ್ಯಾಪಕವಾಗಿದ್ದರೂ ಸಹ ಇತರ ಭಾಷಾ ಪ್ರಭಾವ ಹಾಗೂ ಸಂಪರ್ಕದ ಸಂಬಂಧದಿಂದ ಬೇರೆ ಬೇರೆ ಭಾಷೆಗಳ ಪದಗಳನ್ನು ಸ್ವೀಕರಿಸಿ, ಅದರ ಬಳಕೆ ಮಾಡುತ್ತಿರುವದು ಕಂಡು ಬಂದಿದೆ.
ಬರಸಾತ-ಪಾನಿಆರಾ
ಅರಗಿನಬಳೆ-ಲಾಕ್ ಚೂಡಿಯಾಂ
ಮಾಂಗಲ್ಯ-ಹಲ್ಡಾ, ಟೀಕ
ಹಚ್ಚೆ-ಗುಂದಾವಾ
ಗೋದಿಹಿಟ್ಟು-ಬೆಲ್ಲ ಕಲಸಿ ಎಣ್ಣೆಯಲ್ಲಿ ಕರೆಯುವದು-ಮಿಠಾ ವಡಾ, ಪುಲೋರೆ ಗುಲಗುಲೆ
ವೇಷ-ಭೂಷಣ ( ಉಡುಗೆ ತೊಡುಗೆ)
ರಜಫೂತ ಸ್ತ್ರೀಯರು ಉಡುಗೆ-ತೊಡುಗೆ ಮದುವೆ ಸಮಾರಂಭವೊಂದನ್ನು ಹೊರತು ಪಡಿಸಿದರೆ ಇತರೆ ಸಂದರ್ಭಗಳಲ್ಲಿ ಇತರರಿಗಿಂತ ಭಿನ್ನವಾಗೇನೂ ಇಲ್ಲ, ಹುಡುಗಿಯರು ಲಂಗ, ದವನಿ, ಪಂಜಾಬಿ ಡ್ರೆಸ ಹಾಕಿದರೆ, ಸ್ತ್ರೀಯರು ಸೀರೆ, ಕುಪ್ಪಸ ತೊಡುತ್ತಾರೆ. ಹಬ್ಬ, ಹರಿದಿನ, ಜಾತ್ರೆ, ಉತ್ಸವ ಮುಂತಾದ ಸಂದರ್ಭಗಳಲ್ಲಿ ಹೊಸ ಬಟ್ಟೆಯನ್ನುಟ್ಟು ಸಂತಸಪಡುತ್ತಾರೆ.
ಹಣೆ ಕುಂಕುಮ:
ಬಹುತೇಕವಾಗಿ ಎಲ್ಲಾ ಹೆಣ್ಣುಮಕ್ಕಳು ಹಣೆಯಲ್ಲಿನ ಕುಂಕುಮ ಹಚ್ಚುತ್ತಾರೆ. ಮೊದಲಿನ ಹೆಣ್ಣು ಮಕ್ಕಳು ಅಗಲವಾದ ಕುಂಕುಮ ಹಚ್ಚಿದರೆ ಈಗಿನವರು ಕುಂಕುಮದ ಆಕಾರವನ್ನು ಚಿಕ್ಕದು ಮಾಡಿದ್ದಾರೆ. ಪರಿಸ್ಥೀತಿಗನುಗುಣವಾಗಿ ಮತ್ತು ಸರಳ ಸಾಧನವಾಗಿ ಟಿಕಳ ಹಚ್ಚುವದು ಆರಂಭವಾಗಿದೆ. ಬೆವರಿನಿಂದ ಕುಂಕುಮ ಅಳಕಿ ಹೋಗುವದೂ ಸಹ ಮಹಿಳೆಯರು ಟಿಕಳಿಗೆ ಮೊರೆ ಹೋಗುವಂತೆ ಮಾಡಿದೆ.
ಹಬ್ಬ-ಹರಿದಿನ, ವಿಶೇಷ ಆಚರಣೆಗಳ ಸಂದರ್ಭದಲ್ಲಿ ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುವದೂ ಉಂಟು.
ಮೂಗು ಮೂಗುತಿ:
ಮಹಿಳೆಯರು ಎಡಗಡೆಗೆ ಮೂಗನ್ನು ಚುಚ್ಚಿಸಿಕೊಳ್ಳುತ್ತಾರೆ. ಲಗ್ನವಾಗುವ ಮೊದಲು ಮೂಗುತಿ ಹಾಕಿಕೊಳ್ಳುವುದು ಕಡಿಮೆ, ಲಗ್ನದ ನಂತರ ಮೂಗುತಿ ಹಾಕಿಕೊಳ್ಳುವುದು ಸಾಮಾನ್ಯ ಅಂಶವಾಗಿದೆ. ಹಬ್ಬ, ವಿಶೇಷ ಆಚರಣೆಗಳ ಸಮಯದಲ್ಲಿ ನತ್ತು ಹಾಕಿಕೊಳ್ಳುವರು. ಮೊದಲ ನತ್ತು ಮೂಗಿಗೆ ಭಾರವಾಗುವಂತಿದ್ದರೆ, ಈಗ ನಯ ನಾಜೂಕಿನ ನತ್ತುಗಳನ್ನು ಹಾಕಿಕೊಳ್ಳುತ್ತಿದ್ದಾರೆ. ದೊಡ್ಡ ನತ್ತು ಹಾಕಿಕೊಂಡು ಪರಂಪರೆ ಪಾಲಿಸುವವರು ಅಲ್ಲಲ್ಲಿ ಕಾಣಸಿಗುತ್ತಾರೆ.
ಕಿವಿ:
ಜನಪದ ನಂತರ ಕಿವಿ ಚುಚ್ಚಿಕೊಂಡಿರುವ ಮಹಿಳೆಯರುಮದುವೆಗೂ ಮೊದಲು ಮತ್ತು ನಂತರ ಕಿವಿಯಲ್ಲಿ ಹಾಕಿಕೊಳ್ಳುವ ವಿವಿಧ ನಮೂನೆಯ ಹರಳಿನ ಬೆಂಡೋಲೆ ಜುಮುಕಿ ಇತ್ಯಾದಿಗಳನ್ನು ಹಾಕಿಕೊಳ್ಳುತ್ತಿದ್ದು ಇದರಲ್ಲಿ ಹೇಳಿಕೊಳ್ಳವಂತಹ ಯಾವುದೇ ವಿಶೇಷತೆ ಇಲ್ಲ. ಪೇಟೆಯಲ್ಲಿ ಸಿಗುವ ವಿವಿಧ ಆಭರಣಗಳನ್ನು ಧರಿಸುತ್ತಾರೆ.
ಹಲ್ಡಾ-ಟೀಕ:
ಮದುವೆಗೂ ಮೊದಲು ಮಹಿಳೆಯರು ಪೇಟೆಯಲ್ಲಿ ಸಿಗುವ ಮುತ್ತಿನ ಸರ, ಚೈನಸರ ಹಾಕಿಕೊಂಡರೆ ಮದುವೆಯ ನಂತರ ಕರಿಮಣಿಯ ಜೊತೆಗೆ ಅಷ್ಟಪೈಲ ಗುಂಡು ಪುರುನಿ ಹಾಗು ಹಲ್ಡಾ-ಟೀಕ ಹಾಕಿಕೊಳ್ಳುವುದು ಅನಿವಾರ್ಯವಾಗಿದೆ. ಕೊರಳಲ್ಲಿ ಎಷ್ಟೇ ತೆರನಾದ ಬಂಗಾರದ ಆಭರಣಗಳನ್ನು ಧರಿಸಿದರೂ ಸಹ ಹಲ್ಡಾ-ಟೀಕ ಇರುವ ಪೋತನ್ನು ಎಲ್ಲಾ ಮುತೈದೆಯರು ಧರಿಸುತ್ತಾರೆ. ಸ್ಥಿತಿವಂತರು ಕೈಯಲ್ಲಿ, ತೋಳುಗಳಲ್ಲಿಯೂ ಸಹ ಬಂಗಾರದ ಆಭರಣ ಧರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಮಹಿಳೆಯರು ಸರಳ ಸಾದಾ ಬದುಕಿಗೆ ಮೊರೆ ಹೋಗುತ್ತಿದ್ದು, ಅಂಥವರು ಹಲ್ಡಾ-ಟೀಕ, ಕರಿಮಣಿ ಮಾತ್ರ ಹಾಕಿಕೊಳ್ಳುತ್ತಾರೆ.
ಲಾಕಕಿ ಚೂಡಿ:
ಗುಜರಾತ, ರಾಜಸ್ಥಾನ ಮತ್ತು ಹೈದ್ರಾಬಾದಗಳಲ್ಲಿ ಮಾತ್ರ ತಯಾರಿಸಲಾಗುತ್ತಿದ್ದ ಲಾಕಕಿ ಚೂಡಿ(ಅರಗಿನ ಬಳೆ)ಗಳನ್ನು ಬಹುತೇಕ ಎಲ್ಲಾ ಮಹಿಳೆಯರೂ ಕೈತುಂಬಾ ಧರಿಸುತ್ತಿದ್ದರು. ಆಯಾ ಊರುಗಳಲ್ಲಿ ಇರುವ ತಮ್ಮ ಬಂಧುಗಳಿಗೆ ಹೇಳಿ ಕಳಿಸಿ ಈ ಬಳೆಗಳನ್ನು ತರಿಸಿಕೊಳ್ಳುತ್ತಿದ್ದರು. ಈಗಲೂ ಸಹ ಅರಗಿನ ಬಳೆ ಹಾಕಿಕೊಳ್ಳಲಗುತ್ತಿದೆಯಾದರೂ ಸಹ ಅವು ಫ್ಯಾಷನ್ನಿನ ಮಾದರಿಗೆ ಬಂದಿರುವದು ಗಮನಾರ್ಹ ಸಂಗತಿ. ಮೊದಲು ಸಾದಾ ಅರಗಿನ ಬಳೆಗೆ ಅಲ್ಲೊಂದು ಇಲ್ಲೊಂದು ಗಾಜಿನ ತುಂಡು ಹಚ್ಚಿ ಅಲಂಕರಿಸಿದ್ದರೆ, ಈಗ ವಿವಿಧ ಮದರಿಯಲ್ಲಿನ, ಅಲಂಕೃತ ಗೊಮಡ ಅರಗಿನ ಬಳೆಗಳು ಪೇಟೆಯಲ್ಲಿ ಸಿಗುತ್ತಲಿವೆ. ಗಾಜಿನ ಬಳೆಗಳ ಜೊತೆಗೆ ಇವುಗಳನ್ನು ಸಹ ’ಗೋಟ’ , ಕಂಗನ್ ಮಾದರಿಯಲ್ಲಿ ಹಿಂದೆ ಮುಂದೆ ಒಂದೊಂದು ಅಥವಾ ನಡುವೆ ಒಂದನ್ನು ಹಾಕಿಕೊಮಡು ಪರಂಪರೆ ಮುಂದು ವರೆಸಲಾಗುತ್ತಿದೆ.
ಚೈನಾ-ಕಾಲುಂಗುರ:
ಮೊದಲಿನ ಮಹಿಳೆಯರು ಕಾಲಲ್ಲಿ ದಪ್ಪದಾದ ಬೆಳ್ಳಿಯ ಕಡಗ ಧರಿಸುತ್ತಿದ್ದರು. ಈಗ ಇವು ಮಾಯವಾಗಿವೆ. ಕಡಗದ ಜಾಗದಲ್ಲಿ ಚೈನ ಬಂದಿವೆ ಇವೂ ಸಹ ವಿವಿಧ ನಮೂನೆಯದ್ದಾಗಿವೆ. ಕೆಲವರು ಹೆಚ್ಚುಭಾರದ ದಪ್ಪ ಚೈನ ಇಷ್ಟಪಟ್ಟರೆ, ಮತ್ತೇ ಕೆಲವರು ನಯ-ನಾಜೂಕಿನ ಒಂದೇ ಎಳೆಯ ಚೈನ ಹಾಕಿಕೊಳ್ಳುತ್ತಿದ್ದಾರೆ.
ಮದುವೆಯ ನಂತರ ಬೆಳ್ಳಿ ಕಾಲುಂಗುರ ಹಾಕಿಕೊಳ್ಳುವದು ಮಹಿಳೆಯರಿಗೆ ಕಡ್ಡಾಯವಾಗಿದೆ. ಇದಕ್ಕೆ ಸುರುಳಿ, ಮಚ್ಚುವೆ, ಮಚ್ಚಿ ಹಾಗೂ ಬಿಛುವೆ ಎಂತಲೂ ಕರೆಯುತ್ತಾರೆ.
ಸಿಂಧೂರ:
ಮದುವೆಯಾದ ಎಲ್ಲಾ ಹೆಣ್ಣು ಮಕ್ಕಳು ಸ್ನಾನದ ನಂತರ ಬೈತಲೆಯಲ್ಲಿ ಸಿಂಧೂರ ತುಂಬಿಕೊಳ್ಳುವದು ತಮ್ಮ ಮುತ್ತೈದೆತನದ ದ್ಯೋತಕವೆಂದು ತಿಳಿಯುತ್ತಾರೆ. ಹಣಗೆ ಹಚ್ಚುವ ಕುಂಕುಮದಷ್ಟೇ ಮಹತ್ವವನ್ನು ಬೈತಲೆಯಲ್ಲಿ ಸಿಂಧೂರ ಹಚ್ಚಿಕೊಳ್ಳುವದಕ್ಕಿದೆ. ಕೆಲವರು ಹಣೆಯಿಂದಲೇ ತೀರಾ ದಪ್ಪವಾಗಿ ಸಿಂಧೂರ ಹಚ್ಚಿಕೊಂಡರೆ, ಮತ್ತೇ ಕೆಲವರು ಸಾಂಕೇತಿಕವಾಗಿ ಯಾದರೂ ಸಿಂಧೂರ ಹಚ್ಚಿಕೊಳ್ಳುವರು ಇದಿಲ್ಲದಿರುವ ಸ್ತ್ರೀಯರು ಬಹುಶಃ ಇರುವುದಿಲ್ಲ ಎಂಬುದು ವಿಶೇಷ.
ಘೂಂಘಟ (ಸೆರಗು ಹೊದ್ದಿರುವ):
ಮದುವೆಯಾದ ಹೆಣ್ಣು ಮಕ್ಕಳು ಘೂಂಘಟ ಹಾಕಿಕೊಳ್ಳುತ್ತಾರೆ. ತಲೆ ಮೇಲೆ ಸೆರಗು ಹೊತ್ತುಕೊಳ್ಳುವುದಕ್ಕೆ ಘೂಂಘಟ ಎನ್ನುತ್ತಾರೆ. ಮೊದಲಿನವರು ತಲೆಯ ಮೇಲೆ ಹಾಕಿಕೊಳ್ಳುತ್ತಿದ್ದ ಸೆರಗು ಅವರ ಮುಖವನ್ನು ಸಹ ಅರ್ಧ ಮುಚ್ಚಿರುತ್ತಿತ್ತು. ಈಗಿನವರಲ್ಲಿ ಈಪರಂಪರೆ ಕಾಣುತ್ತಿಲ್ಲವಾಗಿದೆ. ತಲೆ ಮೇಲೆ ಸೆರಗು ಹೊತ್ತುಕೊಂಡರೂ ಅವರ ಮುಖ ಕಾಣುತ್ತಿರುತ್ತದೆ. ಮತ್ತೆ ಕೆಲವರು ತಲೆಯ ಮೇಲೆ ಸೆರಗು ಹಾಕಿಕೊಳ್ಳುವದು ಹಿರಿಯರ ಎದುರಿಗೆ ಅಡ್ಡಾಡುವಾಗ, ಅವರಿಗೆ ಗೌರವ ನೀಡುವುದಕ್ಕಾಗಿಯೂ ಘೂಂಘಟ ಹಾಕಿಕೊಳ್ಳುತ್ತಾರೆಯೇ ವಿನಾ ನಾವೇಕೆ ಹಾಗೆಯೇ ಇರಬಾರದು ಎಂದು ಪ್ರಶ್ನಿಸುವ ಹಂತಕ್ಕೆ ಮುಟ್ಟಿಲ್ಲ. ವಿಶೇಷ ಕಾರ್ಯೇಕ್ರಮಗಳಲ್ಲಿ ಮಾತ್ರ ಓಸಿಪಲ್ಲೊ(ಘೂಂಘಟ) ಹಾಕಿಕೊಂಡೇ ಪತಿಯ ಜೊತೆಗಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಮದುವೆಯಾದ ಮೇಲೆ ಹೊರಗಡೆ ಹೋಗಬೇಕಾದಾಗ ಒಂದು ತಿಳುವಾದ ನೂಲಿನ ಅಚ್ಚಬಿಳಿ ಚಾದರ ಪೂರ್ಣ ಮೈ ಮುಚ್ಚುವಂತೆ, ಹೊದ್ದುಕೊಳ್ಳುವುದು ಸಾಮಾನ್ಯವಾಗಿತ್ತು. ಅದೀಗ ತೀರ ಕಡಿಮೆಯಾಗುತ್ತಿರುವುದು.
ಮಹೆಹಂದಿ:
ಮೆಹಂದಿ ಹಚ್ಚಿಕೊಳ್ಳುವದೂ ಸಹ ರಜಪೂತ ಮಹಿಳೆಯರು ಈ ರಾಜ್ಯಕ್ಕೆ ನೀಡಿರುವ ಕೊಡೆಗೆಯಾಗಿದೆ. ಹಬ್ಬ-ಹರಿದಿನ, ಮದುವೆ ಮುಂತಾದ ಸಂಭ್ರಮದ ದಿನಗಳಲ್ಲಿ ಮಹಿಳೆಯರಿಗೆ ಮೆಹಂದಿ ಹಚ್ಚಿಕೊಳ್ಳುವುದು ಅತ್ಯಂತ ಸಂಭ್ರಮದ ಸಂಗತಿ. ಮೊದಲು ಪೇಟೆಯಲ್ಲಿ ಮೆಹಂದಿ ಸಿಗುವದು ದುರ್ಭರವಾಗಿತ್ತು. ಆಗ ಹೈದ್ರಾಬಾದ, ಸೊಲ್ಲಾಫೂರ, ಅಹ್ಮದಾಬಾದ ಗಳಂತಹ ದೊಡ್ಡ ನಗರಗಳಿಗೆ ಹೋಗಿ ಬರುವವರು ತರುವ ವಸ್ತುಗಳಲ್ಲಿ ಮೆಹಂದಿ ಮುಖ್ಯವಾಗಿತ್ತು. ಪುಡಿಯಾಗಿದ್ದ ಮೆಹಂದಿಯನ್ನು ಹಗಲಲ್ಲಿ ನೀರು ಮತ್ತುನಿಂಬೆರಸದ ಹುಳಿಯಲ್ಲಿ ಕಲಸಿ ಇಟ್ಟು ರಾತ್ರಿ ಹೊತ್ತಿನಲ್ಲಿ ಕೈ ಕಾಲುಗಳಿಗೆ ವಿಶೇಷ ಮಾದರಿಯಲ್ಲಿ ಹಚ್ಚಿಕೊಳ್ಳುವದು ಸಂತಸದ ಸಂಗತಿಯಾಗಿತ್ತು. ಮೆಹಂದಿ ಹಚ್ಚುವಲ್ಲಿ ಕುಶಲಿಗಳಾದ ಮಹಿಳೆಯರಿಗೆ ತೀವ್ರತರ ಬೇಡಿಕೆ ಇತ್ತು ಅವರೂ ಸಹ ವಿವಿಧ ಮನೆಗಳಿಗೆ ಹೊಗಿ, ಇಲ್ಲವೇ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ಮೆಹಂದಿ ಹಚ್ಚುತ್ತಿದ್ದರು.
ಈಗ ಕಾಲ ಬದಲಾಗಿದೆ, ಮಹೆಂದಿ ಕಲಿಸಿ ಇಡುವ ಅಗತ್ಯತೆ ಈಗಿಲ್ಲ, ’ಕೋನ’ ಗಳಲ್ಲಿ ಅದು ರೆಡಿಮೇಡಾಗಿ ಸಿಗುತ್ತಲದೆ. ನಯ-ನಾಜೂಕಿನ ಚಿತ್ರಗಳನ್ನು ತೆಗೆಯಲು ಕೋನ ಹೆಚ್ಚು ಅನುಕೂಲವಾಗಿದೆ. ಇದನ್ನು ಹಚ್ಚಿಕೊಂಡು ರಾತ್ರಿಯಿಡಿ ಒಣಗಿಸಿ, ಬೆಳಿಗ್ಗೆ ತೊಳೆದುಕೊಳಳುವ ಅಗತ್ಯತೆ ಇಲ್ಲ, ಹಚ್ಚಿಕೊಂಡು ತಾಸಿನಲ್ಲಿಯೇ ಮೆಹಂದಿ ತೊಳೆದುಕೊಳ್ಳಬಹುದಾಗಿದೆ. ಚಿತ್ತಾರ ಬಿಡಿಸುವವರ ಬೇಡಿಕೆ ಮಾತ್ರ ಇನ್ನೂ ತಗ್ಗಿಲ್ಲ. ಮೆಹಂದಿ ಹಚ್ಚಿಕೊಳ್ಳುವದು ಈಗ ಒಂದು ಫ್ಯಾಶನ್ ಆಗಿರುವುದರಿಂದ ಮೆಹಂದಿ ತರಬೇತಿ ಶಿಬಿರಗಳೂ ಸಹ ಅಲ್ಲಲ್ಲಿ ನಡೆಯುತ್ತಲಿರುವದು ಗಮನಾರ್ಹವಾಗಿದೆ.
ಆಹಾರ ಪದ್ಧತಿ:
ರಜಪೂತ ಮಹಿಳೆಯರು ಶಾಕಾಹಾರಿಗಳೂ ಹೌದು, ಮಾಂಸಾಹಾರಿಗಳೂ ಹೌದು. ಶಾಕಾಹಾರದಲ್ಲಿ ಪೇಟೆಯಲ್ಲಿ ಸಿಗುವ ಎಲ್ಲ ಬಗೆಯ ಕಾಯಿಪಲ್ಯೆ, ತರಕಾರಿ, ಹಣ್ಣು-ಹಂಪಲ ಸೇರಿದ್ದರೆ ಮಾಂಸಾಹಾರದಲ್ಲಿ ಕೋಳಿ, ತತ್ತಿ, ಮೀನು ಮತ್ತು ಅದರ ಉತ್ಪನ್ನಗಳು ಸೇರಿವೆ. ಮಾಂಸದಲ್ಲಿ ಹೋತಮರಿ(ಗಂಡು ಆಡು)ಯ ಮಾಂಸವನ್ನು ಮಾತ್ರ ಸೇವಿಸುತ್ತಾರೆ.
ದನದ ಮಾಂಸ ನಿಷಿದ್ಧ:
ರಜಪೂತರಲ್ಲಿ ದನದ ಮಾಂಸ ಸೇವನೆ ಮಾಡುವುದು ನಿಷಿದ್ಧವಿದೆ. ಗೋವು ಪೂಜನೀಯವಾದುದು, ಬಹುತೇಕ ಎಲ್ಲ ಶುಭಕಾರ್ಯಗಳಲ್ಲಿ ಗೋವಿನ ಪೂಜೆ ಆರಮಭದಲ್ಲಿಯೇ ನಡೆಯುತ್ತದೆ. ಎತ್ತು ಕೃಷಿಯಲ್ಲಿ ಬಳಕೆ ಮಾಡಿದರೆ, ಆಕಳು ಪೌಷ್ಟಿಕರವಾದ ಹಾಲು ಕೊಡುವಂತಹದ್ದು. ಒಟ್ಟಾರೆಯಾಗಿ ದನಗಳು ಒಂದಿಲ್ಲೊಂದು ರೀತಿಯಲ್ಲಿ ಉಪಯುಕ್ತವಾದವುಗಳು, ಹೀಗಾಗಿ ಧಾರ್ಮಿಕವಾಗಿ, ಕೃತಜ್ಞತೆಯ ಭಾವದಿಂದಾಗಿ ದನದ ಮಾಂಸ ಸೇನೆ ಮಾಡುವುದಿಲ್ಲ.
ವಿಶಿಷ್ಟತೆ: ಕೆಲವು ಪ್ರದೇಶದಲ್ಲಿ ವಾಸಿಸುವ ರಜಪೂತರು ಮಾಂಸದ ಅಡಿಗೆ-ಊಟ ತಮ್ಮ ಮನೆಗಳಲ್ಲಿ ಮಾಡುವುದಿಲ್ಲ. ಇದಕ್ಕಾಗಿ ಮನೆಯ ಹೊರಗೆ ಔಟ್ ಹೌಸ್ ಕಟ್ಟಿಸಿರುತ್ತಾರೆ. ಮಾಂಸ ತಿನ್ನಬೇಕೆನಿಸಿದರೆ ಇಲ್ಲಿಯೇ ಅಡಿಗೆ ಮಾಡಿತಿಂದು ಸ್ನಾನ ಮಾಡಿ ಮನೆಯ ಒಳಗೆ ಬರುವ ವಿಶಿಷ್ಟ ಪದ್ಧತಿಯನ್ನುಪರಿಪಾಲನೆ ಮಾಡುತ್ತಿರುವರು.
ಬಲಿ ಪದ್ಧತಿ:
ದೇವಿಯ ಉಪಾಸಕರಾದ ರಜಪೂತರು ಹೋತಮರಿ ದೇವರಿಗೆ ಬಲಿ ಕೊಟ್ಟು ಅದರ ಮಾಂಸ ತಿನ್ನುವ ಪದ್ಧತಿ ಮುಂದುವರೆಸಿಕೊಂಡು ಬಂದಿರುವರು. ಇಂಥವರು ಮನೆಗಳಲ್ಲಿಯೂ ಮಾಂಸದ ಅಡಿಗೆ ಮಾಡಿ ತಿನ್ನುವಲ್ಲಿಯಾವುದೇ ತೆರನಾದ ಸಂಕೋಚವಿಲ್ಲ.
ಗುಂದಾವಾ (ಹಚ್ಚೆ) ಹಾಕಿಸಿಕೊಳ್ಳುವುದು:
ಹಣಚಿ ಬಟ್ಟಿನ ಕೈಯ ಒತ್ತಿಹಿಡಿಯಲಿಬ್ಯಾಡ
ನೆತ್ತರಿಳಿದಾವು ಬೆರಳೀಗಿ ನನಾರಾಯ
ಅತ್ತಿಬೈದಾಳು ಕೈಬಿಡೋ
ಎಂದು ಜನಪದ ಗರತಿಯೊಬ್ಬಳು ಗಂಡನನ್ನು ಕೇಳುವ ತ್ರಿಪದಿಯಲ್ಲಿ ಆಕೆ ಕೈಗೆ ಹಚ್ಚಿ ಹಾಕಿಸಿಕೊಂಡಿದ್ದು ಸ್ಪಷ್ಟವಾಗುತ್ತದೆ. ಹಚ್ಚಿ ಮೊದಲು ಭಾವನಾತ್ಮಕ ತುಮುಲದಿಂದ ರೂಪತಾಳಿ ನಂತರ ಸೌಂದರ್ಯ ಸಾಧನವಾಗಿ ಬೆಳೆದು, ಈಗೀಗ ಧಾರ್ಮಿಕ ಅಂಶಗಳನ್ನು ಮೈಗೂಡಿಸಿಕೊಂಡಿದೆ. ರಜಪೂತ ಮಹಿಳೆಯರು ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಹಣೆಯ ಮೇಲೆ ಹಚ್ಚಿ ಬಟ್ಟು ಇದ್ದರೆ, ಕೈಮೇಲೆ ಗಂಡನ ಹೆಸರು ಬರೆಸಿಕೊಳ್ಳುವ ರೂಢಿಯೂ ಇದೆ.
ವೃತ್ತಿ:
ರಜಪೂತ ಸ್ತ್ರೀಯರು ತಮ್ಮ ಪರಂಪರಾಗತವೃತ್ತಿಯನ್ನು ಮುಂದುವರೆಸಿಕೊಂಡುಬಂದಿರುವವರಲ್ಲಿ ಮೋರ (ಬಾಸಿಂಗ) ಮಾಡುವವರು ಗಮನಾರ್ಹವಾಗಿದ್ದಾರೆ. ಹನುಮಾನಸಿಂಗ ಭಾವರೆ ಎಂಬುವವರು ತಲೆಮಾರುಗಳಿಂದಲೂ ಬಾಸಿಂಗ ಮಾಡುವ ಕೆಲಸದಲ್ಲಿ ನಿರಂತರಾಗಿದ್ದು, ಅವರಿಗೆ ಹೆಣ್ಣುಮಕ್ಕಳು ಸಹಾಯ ನೀಡುತ್ತಾರೆ.
ವಿಶೇಷ ಖಾದ್ಯ ಪದಾರ್ಥಗಳು
ಗುಲಗುಲೆ-ಮಿಠಾ ವಡಾ:
ಗೋಧಿ ಹಿಟ್ಟು ಮತ್ತು ಬೆಲ್ಲ ಸೇರಿಸಿ ಮಾಡುವ ಖಾದ್ಯ ಪದಾರ್ಥ ಇದಾಗಿದೆ. ಬೆಲ್ಲವನ್ನು ನೀರಿನಲ್ಲಿ ಕರಗಿಸಿ ಅದರ ಪಾಕವನ್ನು ಗೋದಿ ಹಿಟ್ಟಿನಲ್ಲಿ ಹಾಕಿ ಕಲಿಸುತ್ತಾರೆ. ಹಿಟ್ಟು ಸ್ವಲ್ಪ ಅಳಕಾಗಿರಬೇಕು. ಅದು ನೆನೆದು ನಂತರ ಅಂಗೈಯಲ್ಲಿಟ್ಟುಕೊಂಡು ತಟ್ಟಿ, ದುಂಡಾಗಿ ಮಾಡಿ ಕಾದ ಎಣ್ಣೆಯಲ್ಲಿ ಹಾಕಬೇಕು. ಅದು ಎಣ್ಣೆಯಲ್ಲಿ ಬೆಂದು ಕಂದು ಬಣ್ಣಕ್ಕೆ ಬಂದಾಗ ಕರಿಯುವುದನ್ನು ನಿಲ್ಲಿಸಿ ಹೊರತೆಗೆಯಬೇಕು. ಈಗ ಮಿಠ್ಠಾವಡಾ ಸಿದ್ಧ
ಇದೇ ಹಿಟ್ಟನ್ನು ಉದ್ದಾಗಿ ಕಾದ ಎಣ್ಣೆಯಲ್ಲಿ ಬಿಟ್ಟು, ಕರಿದು, ಹೊರತೆಗೆಯುವುದಕ್ಕೆ ಗುಲಗುಲಾ ಎನ್ನುವರು. ಪೂಜೆ-ಪುರಸ್ಕಾರದಂತಹ ಸಂದರ್ಭಗಳಲ್ಲಿ ಮತ್ತು ಬಂಧು-ಮಿತ್ರರಿಗೆ ವಿಶೇಷ ಭೋಜನ ಮಾಡಿಸುವ ಸಂದರ್ಭದಲ್ಲಿ ಇದನ್ನು ಮಾಡುತ್ತಾರೆ. ಇದರ ಜೊತೆಗೆ ಮಾಂಸಾಹಾರ ಅಥವಾ ಆಲೂಗಡ್ಡೆ ಪಲ್ಲೆಯನ್ನು ಸೇವಿಸುತ್ತಾರೆ.
ಕುಟುಂಬ-ಸಂಸಾರ:
ರಜಪೂತರಲ್ಲಿಯೂ ಸಹ ಪಿತೃ ಪ್ರಧಾನ ಕುಟುಂಬ ವ್ಯವಸ್ಥೆ ಇದೆ. ಬಹುತೇಕವಾಗಿ ವಿಭಕ್ತ ಕುಟುಂಬ ಅಧಿಕವಾಗಿರುವುದನ್ನು ಕಾಣುತ್ತೇವೆ. ಇಂಥ ಕಡೆಗಳಲ್ಲಿ ಮನೆಯ ಯಜಮಾನ ಹೇಳಿದಂತೆಯೇ ಎಲ್ಲವೂ ನಡೆಯುತ್ತಿದೆ, ಸಾಮಾಜಿಕ ಕೆಲಸ ಕಾರ್ಯಗಳಲ್ಲಿಯೂ ಸಹ ಯಜಮಾನನ ಪಾಲ್ಗೊಳ್ಳುವಿಕೆಯು ಒಂದು ರೀತಿ ಕಡ್ಡಾಯವೇ ಆಗಿರುತ್ತದೆ. ಒಲೆ ಹಲವಾದರೂ ಸಹ ಒಮ್ಮತದಿಂದ ಬದುಕು ಸಾಗಿಸಲಾಗುತ್ತದೆ. ತಂದೆ ಇಲ್ಲದಾಗ ತಾಯಿಯೇ ಎಲ್ಲವೂ ಆಗಿ ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತು ನಂತರ ಹಿರಿಯ ಮಗನ ಕೈಗೆ ಹಿರಿತನ ಒಪ್ಪಿಸಿ, ಮಗ ಮತ್ತು ಸೊಸೆಯನ್ನು ಆಶ್ರಯಿಸಿ ಬದುಕುತ್ತಾಳೆ. ಕುಟುಂಬದ ಇತರ ಸದಸ್ಯರೆಲ್ಲರೂ ಮನೆಯ ಹಿರಿಯರನ್ನು ಅವಲಂಬಿಸಿ ಜೀವಿಸುತ್ತಾರೆ. ಗೊತ್ರಕ್ಕೆ ಅನುಗುಣವಾದ ಪದ್ಧತಿ ಇದೆ ಸ್ವಗೋತ್ರದವರೆಲ್ಲರೂ ಸಹೋದರ ಸಹೋದರಿಯರು ಎಂಬ ಭಾವನೆ ಇದೆ. ಇದೇ ಕಾರಣಕ್ಕಾಗಿ ಸ್ವಗೋತ್ರದಲ್ಲಿ ವಿವಾಹ ಏರ್ಪಡುವದಿಲ್ಲ ಬೇರೆ ಬೇರೆ ಗೋತ್ರದಲ್ಲಿಯೇ ಮದುವೆಗಾಗಿ ಹೆಣ್ಣು ಗೊತ್ತು ಪಡಿಸಲಾಗುತ್ತದೆ.
ಜೀವನ ಪದ್ಧತಿ:
ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳು ರಜಪೂತ ಮಹಿಳೆಯರ ಸಾಮಾಜಿಕ ಜೀವನದ ವ್ಯವಸ್ಥೆಯ ನಾಲ್ಕು ಮೂಲ ತತ್ವಗಳಾಗಿವೆ. ಒಳ್ಳೆಯ ಆಚಾರ, ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉದಾತ್ತ ಜೀವನ ನಡೆಸುವುದೇ ಧರ್ಮವಾಗಿದ್ದು, ಅದು ಸಮಾಜ ಪ್ರತಿಯೊಂದು ಕ್ಷೇತ್ರವನ್ನು ಆವರಿಸಿದೆ. ವ್ಯಕ್ತಿಧರ್ಮ , ಸಮಾಜ ಧರ್ಮ ಹಾಗೂ ರಾಷ್ಟ್ರಧರ್ಮಗಳು ಒಂದನ್ನೊಂದು ಅವಲಂಬಿಸಿವೆ. ರಜಪೂತರ ಕ್ಷಾತ್ರಧರ್ಮವೂ ಸಹ ಇಂದು ಕಾಲಕ್ಕನುಗುಣವಾಗಿ ಬದಲಾಗಿದೆ. ಇನ್ನು ಅರ್ಥವು ಸಂಪತ್ತು ಮತ್ತು ಅಧಿಕಾರಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಇಲ್ಲಿ ಮಹಿಳೆಯರಿಗೆ ಸೀಮಿತ ಅವಕಾಶವಿದೆ. ಕಾಮವು ಲೈಂಗಿಕ ವಿಷಯಕ್ಕೆ ಸಂಬಂಧಿಸಿದ ವಿಷಯವಾದರೂ ಸಹ ಇದಕ್ಕೆ ಧಾರ್ಮಿಕ, ನೈತಿಕ, ಸಾಮಾಜಿಕ ಬಂಧನವಿದೆ. ಕಾಮವು ಸುಖಕ್ಕಾಗಿರದೇ ಜನಾಂಗವಾಹಿನಿಯು ನಿರಂತರವಾಗಿ ಮುಂದುವರೆಯುವುದಕ್ಕಾಗಿ ಎಂಬ ಭಾವನೆಯು ಸಮಾಜದ ಪ್ರಮುಖ ಕಟ್ಟಳೆಯಾಗಿದೆ. ಮೋಕ್ಷ ಸಾಧನೆಯೇ ಜೀವನ್ಮುಕ್ತಿಯಿಂದ ಮನುಷ್ಯನಿಗೆ ಶಾಶ್ವತ ಸೌಖ್ಯಸಿಗುವುದು. ಮೋಕ್ಷ ಸಾಧನೆಯೇ ಜೀವನದ ಪರಮಗುರಿಯಾಗಿದೆ. ಆತ್ಮ ಪರಮಾತ್ಮಸಂಬಂಧ, ಪುನರ್ಜನ್ಮ, ಜನ್ಮ ಜನ್ಮಾತರದ ಸಂಬಂಧ, ಆತ್ಮದ ಅಮರತ್ವ ಮೊದಲಾದ ವಿಚಾರಗಳು ಸಾಮಾಜಿಕ ಜೀವನದ ಪದ್ಧತಿಯ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ.
ಗೃಹಶಾಂತಿ:
ಕುಟುಂಬದ ವಾಸಕ್ಕಾಗಿ ಮನೆಯನ್ನು ಮನೆಯನ್ನು ಹೇಗೆ ಕಟ್ಟಬೇಕು ಮತ್ತು ಕಟ್ಟಿದ ನಂತರ ಹೇಗೆ ಗ್ರಹ ಪ್ರವೇಶ ಮಾಡಬೇಕೆಂಬ ಬಗೆಗಿನ ಆಚರಣೆಯೂ ರಜಪೂತರಲ್ಲಿದೆ. ಹೊಸ ಮನೆಕಟ್ಟಿದ ನಂತರ ವಾಸ್ತುಶಾಂತಿಗಾಗಿ, ಹೋಮ ಹವನಾದಿಗಳನ್ನು ಮಾಡಿದ ನಂತರ ಅಲ್ಲಿ ಕುಟುಂಬ ನೆಲೆಸಬೇಕು ಮನೆಗೆ ಕೇವಲ ಭೌತಿಕ ಹಾಗೂ ಸಾಮಾನ್ಯ ಅಥವನ್ನು ಕಲ್ಪಿಸಲಾಗಿಲ್ಲ. ಹೊಸ ಮನೆಕಟ್ಟಿದ ನಂತರ ಮೃತರಾದ ಪಿತೃಗಳು ಬಂದು ವಾಸಿಸುವರೆಂಬ ಕಲ್ಪನೆಯ ಜೊತೆಗೆಯೇ ಮುಂಬರುವ ಮಕ್ಕಳು ಮರಿಗಳಿಗೆ ಈ ಗೃಹ ಸುಖ ಶಾಂತಿಯನ್ನು , ಸಮೃದ್ಧಿಯನ್ನು ತಂದು ಕೊಡಲಿ ಎಂಬ ಉದ್ದೇಶದಿಂದ ಗ್ರಹಶಾಂತಿ ಮಾಡಿಸಬೇಕೆಂಬ ರೂಢಿ ಬೆಳೆದು ಬಂದಿದೆ.