ಸಿಖ್ ಮತವು ಭಾರತದಲ್ಲಿ ಹದಿನಾರನೆಯ ಶತಮಾನದಲ್ಲಿ ಸ್ಥಾಪನೆಯಾಯಿತು. ಗುರುನಾನಕ್ ಈ ಮತದ ಸ್ಥಾಪಕ. ಆಗಿನ ಸಮಾಜದಲ್ಲಿದ್ದ ಅಜ್ಞಾನ, ಮೂಢನಂಬಿಕೆ ಇವುಗಳನ್ನು ಹೋಗಲಾಡಿಸಲು ಗುರುನಾನಕ್ ಈ ಹೊಸ ಮತವನ್ನು ಸ್ಥಾಪಿಸಿದರು. ಈ ಸಮಯದಲ್ಲಿ ಹಿಂದೂಗಳ ಜೀವನ ರೀತಿಯಲ್ಲಿ ಅನೇಕ ದೋಷಗಳು ಸೇರಿಹೋಗಿದ್ದವು. ಮಹಮದೀಯರ ದಾಳಿಯ ಪರಿಣಾಮವಾಗಿ ಹಿಂದೂ ಮತ್ತು ಸಮಾಜದಲ್ಲಿ ಅನೇಕ ಬದಲಾವಣೆಗಳುಂಟಾಗಿದ್ದವು. ಹಿಂದೂಗಳು ಆಚಾರಗಳಿಗೆ ಹೆಚ್ಚಿನ ಗಮನವನ್ನು ಕೊಟ್ಟಿದ್ದರು. ಆಗ ಹಿಂದೂ ಧರ್ಮದಲ್ಲಿನ ಸಾರವನ್ನು ಎತ್ತಿ ತೋರಿಸಿ, ಹಿಂದೂ ಸಮಾಜದಲ್ಲಿ ಸೇರಿಹೋಗಿದ್ದ ದೋಷಗಳನ್ನು ನಿವಾರಿಸುವ ಚಳವಳಿಯೊಂದು ಪ್ರಾರಂಭವಾಯಿತು. ಇದಕ್ಕೆ ಭಕ್ತಿ ಪಂಥವೆಂದು ಹೆಸರು.

ನಾನಕ್ ಭಕ್ತಿಪಂಥದ ಒಬ್ಬ ನಾಯಕ. ದೇವರು ಒಬ್ಬನೇ, ಅವನು ಸರ್ವಶಕ್ತ, ಸರ್ವವ್ಯಾಪಿ, ಅವನಿಗೆ ಹುಟ್ಟು, ಸಾವು ಇಲ್ಲ. ಅವನಿಗೆ ಆಕಾರವಿಲ್ಲ. ಆ ದೇವನನ್ನು ಭಕ್ತಿಯಿಂದ ಭಜಿಸಬೇಕು. ಇವು ಸುಖ ಮತದ ಬೋಧೆಗಳು. ಸಿಖ್ಖರು ಕಾಲಕ್ರಮದಲ್ಲಿ ತಮ್ಮದೇ ಆದ ಗುರುಮುಖಿ ಎಂಬ ಲಿಪಿಯನ್ನು ಬಳಸಲಾರಂಭಿಸಿದರು. ಅವರ ಧರ್ಮಗ್ರಂಥ ಗ್ರಂಥಸಾಹಿಬ್ ಆ ಧರ್ಮದ ಮುಖ್ಯ ಬೋಧೆಗಳನ್ನು ಒಳಗೊಂಡಿದೆ.

ಹಿಂದೂ-ಮುಸಲ್ಮಾನರು ಎಂಬ ಭೇದವನ್ನು ತೊಡೆದು ಹಾಕಲು ನಾನಕ್ ಈ ಹೊಸ ಮತವನ್ನು ಪ್ರಾರಂಭಿಸಿದರು. ಆದರೆ ಈ ಮತ ಬಹು ಬೇಗ ಮುಸ್ಲಿಮರ ದಾಳಿಗೆ ತುತ್ತಾಯಿತು. ತಮ್ಮ ಧರ್ಮವನ್ನು ರಕ್ಷಿಸಿಕೊಳ್ಳಲು ಸಿಖ್ಖರು ಅಹಿಂಸೆಯನ್ನು ಬಿಟ್ಟು ಖಡ್ಗವನ್ನು ಹಿಡಿದರು.

ಗುರು ಗೋವಿಂದಸಿಂಗ್

ಸಿಖ್ಖರ ಹತ್ತನೇ ಗುರು ಗೋವಿಂದಸಿಂಗ್‌ನ ಕಾಲದಲ್ಲಿ ಈ ಬದಲಾವಣೆ ಉಂಟಾಯಿತು. ಆತ ಹೊರಗಿನವರ ದೌರ್ಜನ್ಯಕ್ಕೆ ಸಿಕ್ಕಿ ಹತಾಶರಾಗಿದ್ದ ಜನರಿಗೆ ಧೈರ್ಯ ತುಂಬಿ ಸೈನಿಕ ಜನಾಂಗವನ್ನಾಗಿ ಮಾಡಿದನು. ಒಬ್ಬ ವ್ಯಕ್ತಿಯು ಒಂದು ಸೈನ್ಯವನ್ನು ಎದುರಿಸುವಷ್ಟು ಧೈರ್ಯ, ಶೌರ್ಯವನ್ನು ಹೊಂದಿರಬೇಕು, ಗುಬ್ಬಚ್ಚಿಯು ಗಿಡುಗನನ್ನು ಹಿಮ್ಮೆಟ್ಟಿಸಬೇಕು ಎಂದು ಈ ಗುರು ಕರೆ ನೀಡಿದನು. ಸಿಖ್ ಜನಾಂಗವನ್ನು ಖಾಲ್ಸಾ ಎಂಬ ಹೆಸರಿನಿಂದ ಕರೆದರು. (ಅಂದರೆ ಪರಿಶುದ್ಧವಾಗ ಒಕ್ಕೂರ), ಸಿಖ್ಖರು ಕೇಶ, ಕಂಘ (ಬಾಚಣಿಗೆ), ಕರ (ಬಳೆ) ಮತ್ತು ಕೃಪಾಣ (ಖಡ್ಗ) ನಿಯಮಗಳನ್ನು ಅನುಸರಿಸುವಂತೆ ಮಾಡಿದನು. ಈ ಧರ್ಮದ ಅನುಯಾಯಿಗಳು ತಮ್ಮ ಕೂಡಲನ್ನು ಕತ್ತರಿಸಬಾರದು. ಒಂದು ಖಡ್ಗ, ಬಾಚಣಿಗೆ ಮತ್ತು ಕೈಯಲ್ಲಿ ಲೋಹದ ಬಳೆಗಳನ್ನು ಹೊಂದಿರಬೇಕು ಎಂದು ನಿಯಮಿಸಿದನು. ಸಿಖ್ಖರು ಉತ್ತಮ ನಡತೆಯನ್ನು ಹೊಂದಿ ಧೀರರಾಗುವಂತೆ ಮಾಡಿದನು. ಈ ರೀತಿ ಗುರು ಗೋವಿಂದಸಿಂಗ್ ಸಿಖ್ ಮತಕ್ಕೆ ಅಂತಿಮವಾದ ರೂಪವನ್ನು ಕೊಟ್ಟನು.

ಗುರುಗೋವಿಂದನ ನಂತರವೂ ಸಿಖ್ಖರನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದವು. ಅವರು ಒಂದಾಗಿ ಮೊಘಲರ ವಿರುದ್ಧ ಹೋರಾಡುತ್ತಾ ಬಂದರು. ದೊಡ್ಡ ಮೊಘಲ್ ಸಾಮ್ರಾಜ್ಯದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಿಖ್ಖರಲ್ಲಿ ಹನ್ನೆರಡು ಸ್ವತಂತ್ರವಾದ ಮಿಸಲ್ ಎಂಬ ಕೂಟಗಳು ಹುಟ್ಟಿಕೊಂಡವು. ಇವು ಕಾಲಕಳೆದಂತೆ ಪುಟ್ಟ-ಪುಟ್ಟ ರಾಜ್ಯಗಳಾದವು. ಇಂತಹ ಸಣ್ಣ ರಾಜ್ಯಗಳಲ್ಲಿ ಒಂದಕ್ಕೆ ಅಧಿಪತಿಯಾಗಿದ್ದ ಮಹಾಸಿಂಗನ ಮಗನೇ ರಣಸಿತ್ ಸಿಂಗ್.

ಬಾಲ್ಯ

ಮಹಾಸಿಂಗ್ ಲಾಹೋರಿನ ವಾಯುವ್ಯಕ್ಕಿದ್ದ ಸುಕರ್‌ಚೇಕಿಯಾ ಮಿಸಲಿನ ಒಕ್ಕೂಟದ ನಾಯಕ. ಅವನ ಹಿರಿಯರೂ ಶಾರ್ಯ ಪ್ರತಾಪಗಳಿಗೆ ಪ್ರಸಿದ್ಧರಾಗಿದ್ದರು. ರಣಜಿತ್‌ಸಿಂಗ್ ೧೭೮೦ ನೆಯ ಇಸವಿಯಲ್ಲಿ (ನವೆಂಬರ್ ೧೩ನೆಯ ತಾರೀಖು) ಗುಜ್ರನ್‌ವಾಲಾದಲ್ಲಿ ಜನಿಸಿದ. ಅವನು ಹುಟ್ಟಿದಾಗ ಅವನಿಗೆ ಬುಧಸಿಂಗ್ (ಅಂದರೆ ಜ್ಞಾನಿ, ವಿದ್ಯಾವಂತ) ಎಂದು ಹೆಸರಿಟ್ಟರು. ತಂದೆ ಮಹಾಸಿಂಗ್ ಆಗ ಮಹಮದೀಯ ಬುಡಕಟ್ಟಿನ ಮೇಲೆ ಯುದ್ಧಕ್ಕೆ  ಹೋಗಿದ್ದ. ಮಗ ಹುಟ್ಟಿದ ಸುದ್ಧಿಯನ್ನು ಕೇಳಿ ಭವಿಷ್ಯಬಲ್ಲವನಂತೆ ಮಗನ ಹೆಸರನ್ನು ರಣಜಿತ್ ಸಿಂಗ್ (ಯುದ್ಧಗಳನ್ನು ಗೆಲ್ಲುವವನು) ಎಂಬ ಹೆಸರಿಟ್ಟ. ಮುಂದೆ ರಣಜಿತ್ ಸಿಂಗ್ ವಿದ್ಯೆ ಕಲಿಯಲಿಲ್ಲ/ ಆದರೆ ರಣರಂಗದಲ್ಲಿ ವಿಜಯ ಶಾಲಿಯಾಗಿ ಮೆರೆದ.

ಬಾಲ್ಯದಲ್ಲಿಯೇ ರಣಜಿತ್ ಸಿಂಗ್ ಸಿಡುಬು ರೋಗಕ್ಕೆ ತುತ್ತಾಗಿ ತನ್ನ ಎಡಗಣ್ಣನ್ನು ಕಳೆದುಕೊಂಡ. ಅವನ ತಂದೆ ಮಗನಿಗೆ ವಿದ್ಯಾಭ್ಯಾಸ ಕೊಡಿಸಲು ಪ್ರಯತ್ನಿಸಲಿಲ್ಲ. ತಾಯಿ ರಾಜಕೌರ್ ಅಂದಿನ ಪದ್ಧತಿಯಂತೆ ಅರಮನೆಯ ಅಂತಃಪುರದೊಳಗೇ ಇರಬೇಕಾಗಿತ್ತು. ಹೀಗಾಗಿ ರಣಜಿತ್ ಸಿಂಗನಿಗೆ ಓದು ಬರಹ ಕಲಿಯಲಾಗಲಿಲ್ಲ. ಆಗಾಗ ಗುರುದ್ವಾರಗಳಲ್ಲಿ (ಸಿಖ್ಖರ ದೇವಾಲಯಗಳಲ್ಲಿ) ಧರ್ಮಗ್ರಂಥ ಪಠಣ ಮತ್ತು ಧರ್ಮೋಪದೇಶವನ್ನು ಬಾಲಕ ರಣಜಿತ್ ಸಿಂಗ್ ಕೇಳುತ್ತಿದ್ದ. ಈ ರೀತಿಯಲ್ಲಿ ಸಿಖ್ ಧರ್ಮದ ಮುಖ್ಯ ತತ್ವಗಳ ಪರಿಚಯ ಅವನಿಗಾಯಿತು. ಧರ್ಮ, ದೇವರು ಈ ವಷಯಗಳಲ್ಲಿ ಅವನು ಶ್ರದ್ಧೆ, ಭಕ್ತಿಯನ್ನು ಬೆಳೆಸಿಕೊಂಡ.

ಹತ್ತು ವರ್ಷದ ಸೇನಾನಾಯಕ

ರಣಜಿತ್ ಸಿಂಗ್‌ ಬಹು ಚಿಕ್ಕವಯಸ್ಸಿನಲ್ಲಿಯೇ ರಾಜನಾದನು. ಅವನು ಅಧಿಕಾರಕ್ಕೆ ಬಂದ ರೀತಿ ಅವನ ಶೌರ್ಯ, ಸಾಹಸಗಳನ್ನು ತೋರಿಸುತ್ತದೆ. ತಂದೆ ಮಹಾಸಿಂಗ್ ಮಗನೊಂದಿಗೆ ಸೋಧ್ರಾನ್ ಎಂಬ ಕೋಟೆಗೆ ಮುತ್ತಿಗೆಯನ್ನು ಹಾಕಿದ್ದು. ಯುದ್ಧ ಮುಂದುವರಿದಿದ್ದಿತು. ಇದ್ದಕ್ಕಿದ್ದಂತೆ ಮಹಾಸಿಂಗನಿಗೆ ಆರೋಗ್ಯ ಕೆಟ್ಟಿತು. ತಾನು ಬದುಕುವುದಿಲ್ಲವೆಂದು ತಿಳಿದು ಮಹಾಸಿಂಗ್ ಮಗ ರಣಜಿತ್ ಸಿಂಗನಿಗೆ ಸುಕರ್‌ ಚೇಕಿಯಾದ ನಾಯಕತ್ವವನ್ನು ವಹಿಸಿಕೊಟ್ಟು ರಾಜಧಾನಿಗೆ ಹಿಂದಿರುಗಿದ. ಹತ್ತು ವರ್ಷದ ಬಾಲಕನೊಬ್ಬರು ದಳಪತಿಯಾಗಿದ್ದ ಸೈನ್ಯವನ್ನು ಸುಲಭವಾಗಿ ಸೋಲಿಸಬಹುದೆಂದು ಭಾವಿಸಿ ಅನೇಕ ಸರದಾರರು ಅವನ ಮೇಲೆ ಯುದ್ಧಕ್ಕೆ ಬಂದರು. ರಣಜಿತ್ ಸಿಂಗ್ ಅಸಾಧಾರಣವಾದ ಧೈರ್ಯ, ಸಾಹಸಗಳಿಂದ ಶತ್ರುಗಳನ್ನು ಸೋಲಿಸಿದ. ಮಗನ ಈ ವಿಜಯದ ವಾರ್ತೆಯನ್ನು ಕೇಳಿದ ಸ್ವಲ್ಪ ಕಾಲದಲ್ಲಿಯೇ ಮಹಾಸಿಂಗ್ ಸತ್ತು ಹೋದನು.  ಈ ರೀತಿಯಲ್ಲಿ ಇನ್ನೂ ಆಟವಾಡುವ ವಯಸ್ಸಿನಲ್ಲಿ ರಣಜಿತ್ ಸಿಂಗ್‌ ಒಂದು ಸಣ್ಣ ರಾಜ್ಯದ ರಾಜನಾದನು.

ಹದಿನೈದನೆಯ ವಯಸ್ಸಿನಲ್ಲಿ ಅವನಿಗೆ ಮಹತಾಬ್ ಕೌರ್ ಜನತೆಯಲ್ಲಿ ವಿವಾಹವಾಯಿತು.ಈಕೆ ಸಿಖ್ಖರ ಮತ್ತೊಂದು ಪ್ರಮುಖ ಶಾಖೆಯಾದ ಕನ್ಹಯ ಗುಂಪಿನ ಮುಖ್ಯಸ್ಥನ ಮಗಳು. ರಣಜಿತ್ ಸಿಂಗ್‌ ಈ ವಿವಾಹದಿಂದ ಎರಡು ರಾಜ್ಯಗಳಿಗೂ ಅಧಿಪತಿಯಾಗುವ ಅವಕಾಶವನ್ನು ಪಡೆದುಕೊಂಡ. ಪ್ರಾರಂಭದಲ್ಲಿ ಅವನ ಅತ್ತೆಯಾದ ಸದಾಕೌರ್ ಮತ್ತು ಇತರ ಬಂಧುಗಳು, ಅಧಿಕಾರಿಗಳು ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಅರಮನೆಯಲ್ಲಿದ್ದ ಬಿಗಿಯಾದ ವಾತಾವರಣ, ಅಧಿಕಾರಕ್ಕಾಗಿ ಹೋರಾಟ, ಒಳಜಗಳ ಇವುಗಳಿಂದ ರಣಜಿತ್ ಸಿಂಗ್‌ನಿಗೆ ಬೇಸರವುಂಟಾಯಿತು. ಅವನಿಗೆ ಆಗ ಕುದುರೆ ಸವಾರಿ, ಬೇಟೆ ಇವುಗಳಲ್ಲಿ ಹೆಚ್ಚಿನ ಆಸಕ್ತಿಯಿದ್ದಿತು. ಆದರೆ ಕಾಲ ಕಳೆದಂತೆ ರಾಜ್ಯದ ವ್ಯವಹಾರಗಳ ಕಡೆ ಗಮನವನ್ನು ಕೊಡುತ್ತಾ ಬಂದ. ಅರಮನೆಯಲ್ಲಿ ಅಧಿಕಾರಕ್ಕಾಗಿ ಪಿತೂರಿಗಳು ಉಂಟಾಗಿ ಅಶಾಂತಿ ಬಿಕ್ಕಟ್ಟು ತಲೆದೋರಿದಾಗ ರಣಜಿತ್ ಸಿಂಗ್‌ ಪೂರ್ಣ ಅಧಿಕಾರವನ್ನು ಕೈಗೆ ತೆಗೆದುಕೊಂಡನು. ಆಗ ಅವನಿಗೆ ಹದಿನೇಳು ವರ್ಷ ವಯಸ್ಸಾಗಿದ್ದಿತು.

ಭಾರತದ ಪರಿಸ್ಥಿತಿ:

ಆಡಳಿತದ ಅನುಭವವಿಲ್ಲದ ತರುಣ ಅಧಿಕಾರಕ್ಕೆ ಬಂದಾಗ ದೇಶದ ಪರಿಸ್ಥಿತಿ ಬಹಳ ಗಂಭೀರವಾಗಿದ್ದಿತು. ಹಿಂದೂಸ್ಥಾನವನ್ನು ಆಳುತ್ತಿದ್ದ ಮೊಘಲರು ಕ್ಷೀಸಿಸಿದ್ದರು. ವ್ಯಾಪಾರೆಕ್ಕೆಂದು ನಮ್ಮ ದೇಶಕ್ಕೆ ಬಂದಿದ್ದ ಯೂರೋಪಿಯನ್ನರು ದೇಶದ ರಾಜಕೀಯದಲ್ಲಿ ಪ್ರವೇಶ ಮಾಡಿದ್ದರು. ಇಂಗ್ಲಿಷರು ಹಿಂದೂಸ್ಥಾನದ ಬಹು ಭಾಗಗಳನ್ನು ಆಕ್ರಮಿಸಿಕೊಂಡಿದ್ದರು. ನಾಡಿನ ಅನೇಕ ಅರಸರು ತಮ್ಮ ಸ್ವಾತಂತ್ಯ್ರವನ್ನು ಕಳೆದುಕೊಂಡಿದ್ದರು. ಪ್ರಬಲರಾಗಿದ್ದ ಮರಾಠರೂ ಸುಭದ್ರವಾದ ರಾಜ್ಯವನ್ನು ಕಟ್ಟಲು ಸಾಧ್ಯವಾಗಿರಲಿಲ್ಲ. ಬ್ರಿಟಿಷನ ಸಾಮ್ರಾಜ್ಯ ಭಾರತದಲ್ಲಿ ಬೆಳೆಯುತ್ತಾ ಹೋಯಿತು. ಬಲಿಷ್ಠರಾಗಿದ್ದ ಹೈದರಾಬಾದಿನ ನಿಜಾಮನಾಗಲಿ, ಮೈಸೂರಿನ ಹೈದರ್‌ ಆಲಿ, ಟಿಪ್ಪೂಸುಲ್ತಾನರಾಗಲಿ ಬ್ರಿಟಿಷರನ್ನು ಓಡಿಸಲಾಗಲಿಲ್ಲ.

ಪಂಜಾಬಿನಲ್ಲಿಯೂ ಗಂಭೀರವಾದ ಪರಿಸ್ಥಿತಿಯಿದ್ದಿತು. ಸಿಖ್ಖರು ತಮ್ಮಲ್ಲೇ ಜಗಳವಾಡುತ್ತಿದ್ದರು. ಅವರ ಒಳ ಜಗಳಗಳಿಂದ ಪಂಜಾಬಿನಲ್ಲಿ ಅಶಾಂತಿಯುಂಟಾಗಿತ್ತು. ಇದರಿಂದ ಪ್ರಯೋಜನ ಪಡೆದ ಪಂಜಾಬನ್ನು ಆಕ್ರಮಿಸಿಕೊಳ್ಳಬೇಕೆಂದು ಸುತ್ತಲೂ ಇದ್ದ ರಾಜ್ಯರಾಗಳು ಕಾಯುತ್ತಿದ್ದವು.

ಆಗ ಪಂಜಾಬಿಗೆ ಭೇಟಿ ಕೊಟ್ಟ ವಿಲಿಯಂ ಫಾಸ್ಟರ್‌ ಎಂದ ಇಂಗ್ಲಿಷ್ ಯಾತ್ರಿಕ ಇಂತಹ ಪರಿಸ್ಥಿತಿಯಲ್ಲಿ ಸಿಖ್ಖರು ಒಂದಾಗಿ ಹೋರಾಡಲು ಮುಂದಾದರು ಮುಂದೆ ಅಂದರೆ ಅವರ ಶಕ್ತಿಯನ್ನು ಉಪಯೋಗಿಸಿಕೊಂಡು ರಾಜ್ಯ ಕಟ್ಟ ಬಲ್ಲವನು ರಣಜಿತ್ ಸಿಂಗ್‌ ಒಬ್ಬನೇ ಎಂದು ಭವಿಷ್ಯ ನುಡಿದಿದ್ದ!

ಹಶ್ಮತ್ಖಾನನ ವಧೆ

ರಣಜಿತ್ ಸಿಂಗ್‌ ಆಗಲೇ ತನ್ನ ಶೌರ್ಯ ಸಾಹಸಗಳಿಂದ ಹೆಸರುಗಳಿಸಿದ್ದ. ಒಂದು ಬಾರಿ ಅವನು ಭೇಟೆಗೆ ಹೋಗಿದ್ದಾಗ ಹಶ್‌ಮತ್‌ಖಾನ್‌ ಎಂಬ ಸರದಾರನು ರಣಜಿತ್ ಸಿಂಗ್‌ ಹತ್ತಿರ ಬಂದಾಗ ಕಠಾತ್ತನೆ ಅವನ ಮೇಲೆರಗಿದ್ದ. ರಣಜಿತ್ ಸಿಂಗ್‌ ಈಟಿಯಿಂದ ಅವನನ್ನು ತಿವಿದು ಕ್ಷಣಾರ್ಧದಲ್ಲಿ ಅವನ ತಲೆಯನ್ನು ಕತ್ತರಿಸಿದ. ಈ ರೀತಿ ಅವನು ಚಿಕ್ಕವನಾದರೂ ಶೂರನೂ ಧೈರ್ಯಶಾಲಿಯೂ ಆಗಿದ್ದನು.

ಸಿಖ್ಖರು ಒಂದಾಗಬೇಕು

ಆದರೆ ಬರಿಯ ಶೌರ್ಯದಿಂದ ತನ್ನ ಮುಂದಿನ ಸಮಸ್ಯೆಗಳಿಗೆ ಪರಿಹಾರ ಸಿಗಲಾರದು ಎಂದು ರಣಜಿತ್ ಸಿಂಗ್ ತಿಳಿದಿದ್ದ. ಸಿಖ್ ರಾಜ್ಯ ಉಳಿಯಬೇಕಾದರೆ ಎಲ್ಲ ಸಿಖ್ ಒಕ್ಕೂಟಗಳು ಒಂದಾಗಬೇಕು ಎಂದು ಅವನು ನಂಬಿದ್ದ. ಸಿಖ್ಖರ ನಡುವಿನ ಕಾದಾಟ ನಿಲ್ಲಬೇಕು, ತಾನು ಒಂದು ಗೂಡಿದ ಸಿಖ್ ರಾಜ್ಯದ ಅಧಿಪತಿಯಾಗಬೇಕು. ಇದೇ ಅವನ ಆಕಾಂಕ್ಷೆಯಾಗಿದ್ದಿತು. ಈ ಉದ್ದೇಶದಿಂದ ಅವನು ಸಣ್ಣಪುಟ್ಟ ಸಿಖ್ ರಾಜ್ಯಗಳನ್ನು ಗೆದ್ದು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲಾರಂಭಿಸಿದ. ಇದೇ ಸಮಯದಲ್ಲಿ ಆಫ್ಘಾನಿಸ್ತಾನದ ದೊರೆ ಜಮಾನ್‌ ಷಾ ಪಂಜಾಬಿಗೆ ದಾಳಿಯಿಟ್ಟ. ಸಿಖ್ ನಾಯಕರೆಲ್ಲ ಭೀತಿಯಿಂದ ತತ್ತರಿಸಿದರು. ರಣಜಿತ್ ಸಿಂಗ್‌ ಅವರನ್ನು ಒಟ್ಟು ಗೂಡಿಸಿ ಶತ್ರುವನ್ನು ಎದುರಿಸಲು ಪ್ರೇರೇಪಿಸಿದ. ಜಮಾನ್ ಷಾ, ರಣಜಿತ್‌ನ ಶೌರ್ಯಕ್ಕೆ ಮಣಿಯ ಬೇಕಾಯಿತು. ಭಾರತವನ್ನು ಗೆಲ್ಲಬೇಕೆಂಬ ಅವನ ಆಕಾಂಕ್ಷೆ ಮಣ್ಣುಗೂಡಿತು. ಈ ರೀತಿ ತನ್ನ ನಾಡನ್ನು ವಿದೇಶಿಯರ ಆಕ್ರಮಣದಿಂದ ತಪ್ಪಿಸಿದ ರಣಜಿತ್ ಸಿಂಗ್‌ಗೆ ಆಗ ಹದಿನೆಂಟು ವರ್ಷ.

ಪಂಜಾಬಿನ ಮಹಾರಾಜ

ಲಾಹೋರಿನಲ್ಲಿ ಅಶಾಂತಿ ಮತ್ತು ಅವ್ಯವಸ್ಥೆ ಉಂಟಾಗಿ ಅಲ್ಲಿನ ಜರು ಅದರ ಆಡಳಿತವನ್ನು ನೋಡಿಕೊಳ್ಳಲು ರಣಜಿತ್ ಸಿಂಗ್‌ನನ್ನು ಆಹ್ವಾನಿಸಿದರು. ಅವನು ಅದನ್ನು ತನ್ನ ವಶಕ್ಕೆ ತೆಗೆದುಕೊಂಡ. ಹಾಗೆಯೇ ಅಮೃತಸರ ಮತ್ತಿತರ ಪ್ರದೇಶಗಳನ್ನು ಗೆದ್ದುಕೊಂಡ. ರಣಜಿತ್ ಸಿಂಗ್‌ ತಾನು ಸಿಖ್ಖರ ಒಂದು ಶಾಖೆಗೆ ಮಾತ್ರ ನಾಯಕನಲ್ಲ. ಇಡೀ ಪಂಜಾಬಿನ ದೊರೆ ಎಂದು ತೋರಿಸಲು ಬಯಸಿದ. ತಮ್ಮ ವಂಶ ಪಾರಂಪರ್ಯವಾಗಿ ಬಂದಿದ್ದ ಗುಜ್ರನ್‌ವಾಲಾವನ್ನು ಬಿಟ್ಟು ಲಾಹೋರನ್ನು ರಾಜಧಾನಿಯನ್ನಾಗಿ ಮಾಡಿಕೊಂಡ. ೧೮೦೧ರಲ್ಲಿ ವೈಶಾಖ ಮಾಸದ ಮೊದಲನೆಯ ದಿನ ಪಟ್ಟಭಿಷೇಕ ಮಹೋತ್ಸವವನ್ನು ನಡೆಸಿ ಪಂಜಾಬಿನ ಮಹಾರಾಜ ಎಂಬ ಬಿರುದನ್ನು ಧರಿಸಿದ. ಇದರಿಂದ ಪಂಜಾಬಿನ ಜನರೆಲ್ಲರೂ ತನ್ನ ನಾಯಕತ್ವವನ್ನು ಒಪ್ಪುತ್ತಾರೆ ಎಂದು ಅವನು ಭಾವಿಸಿದ್ದನು.

ಕರುಣಾಳು ಶೂರ

ಸಿಖ್ ಪ್ರದೇಶಗಳನ್ನು ಗೆದ್ದು ತನ್ನ ಬಲವನ್ನು ಹೆಚ್ಚಿಸಿಕೊಂಡ ನಂತರ ತನ್ನ ಸುತ್ತ ಮುತ್ತಲಿದ್ದ ಶತ್ರುಗಳ ಕಡೆ ಅವನ ಗಮನ ಹರಿಯಿತು. ಆಫ್ಘಾನಿಸ್ತಾನಕ್ಕೆ ಸೇರಿದ ಅನೇಕ ಪ್ರದೇಶಗಳನ್ನು ತನ್ನ ವಶಪಡಿಸಿಕೊಂಡ. ಈ ತೀರಿ ತನ್ನ ಗಡಿಯಲ್ಲಿದ್ದ ರಾಜ್ಯಗಳನ್ನು ಗೆಲ್ಲುತ್ತಿದ್ದಾಗ ಅವನು ಕಸೂರಿನ ನಾಯಕ ಕುತುಬುದ್ದೀನನ ಮೇಲೆ ಯುದ್ಧ ಮಾಡಬೇಕಾಗಿ ಬಂದಿತು. ಕುತುಬುದ್ದೀನ್ ಪಠಾಣರಲ್ಲಿ ಸಿಖ್ಖರ ವಿರುದ್ಧ ಜಿಹಾದ್ ಅಥವಾ ಧರ್ಮಯುದ್ಧ ಮಾಡುತ್ತಿರುವುದಾಗಿ ಹೇಳಿಕೊಂಡ. ರಣಜಿತ್ ಸಿಂಗ್ ಈ ರೀತಿಯ ಮತ ದ್ವೇಷ ಸಲ್ಲದೆಂದು ಅವನಿಗೆ ಹೇಳಿಕಳುಹಿಸಿದರೂ ಪ್ರಯೋಜನವಾಗಲಿಲ್ಲ. ಕಡೆಗೆ ಕಸೂರಿನ ಮೇಲೆ ಯುದ್ಧ ಮಾಡಬೇಕಾಯಿತು. ಸಿಖ್ಖರಿಗೆ ಸುಲಭವಾಗಿ ಜಯ ಲಭಿಸಿತು. ಸೋತು ಓಡಿ ಹೋಗುತ್ತಿದ್ದ ಕುತುಬುದ್ದೀನನನ್ನು ಸೆರೆಹಿಡಿಯಲಾಯಿತು. ರಣಜಿತ್ ಸಿಂಗ್‌ ಔದಾರ್ಯದಿಂದ ಅವನನ್ನು ಕ್ಷಮಿಸಿದ. ಅವನಿಗೆ ಒಳ್ಳೆಯಸ ಜಾಗೀರನ್ನು ಕೊಟ್ಟು ಕಳುಹಿಸಿದ.

ಮುಂದೆ ರಣಜಿತ್ ಸಿಂಗ್‌ ವಾಯುವ್ಯ ಗಡಿಯಲ್ಲಿದ್ದ ದುರ್ಗಮವಾದ ಕೋಟೆಗಳನ್ನೂ, ನಗರಗಳನ್ನೂ ವಶಪಡಿಸಿಕೊಂಡ.  ರಣಜಿತ್ ಸಿಂಗ್‌ ಪೆಷಾವರಿನ ಮೇಲೆ ಧಾಳಿ ನಡೆಸಿದಾಗ ಅಲ್ಲಿದ್ದ ಅಧಿಕಾರಿ ಮಹಮದ್‌ಖಾನ್ ಹೆದರಿ ಓಡಿದ. ಪೆಷಾವರ್ ಸಿಖ್ಖರ ವಶವಾಯಿತು. ಸಾಮಾನ್ಯವಾಗಿ ಆಫ್ಘನ್ನರು ಅಥವಾ ಪಠಾಣರು ಹೀಗೆ ಒಂದು ನಗರವನ್ನು ಗೆದ್ದಿದ್ದರೆ ಅದನ್ನು ಕೊಳ್ಳೆ ಹೊಡೆಯುತ್ತಿದ್ದರು. ಆದರೆ ರಣಜಿತ್ ಲೂಟಿ ಹೊಡೆಯಕೂಡದೆಂದು ಸೈನಿಕರಿಗೆ ಆಜ್ಞೆ ನೀಡಿದ. ಅವನು ಒಂದು ಘೋಷಣೆಯನ್ನು ಹೊರಡಿಸಿ ಆ ಪಟ್ಟಣದ ನಾಗರಿಕರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಅವರು ತಮ್ಮ ತಮ್ಮ ವೃತ್ತಿಗಳನ್ನು ಶಾಂತವಾಗಿ ಅನುಸರಿಸಬಹುದು ಎಂದು ತಿಳಿಸಿದ. ಏಳುನೂರು ವರ್ಷಗಳ ಇತಿಹಾಸದಲ್ಲಿ ಭಾರತೀಯನೊಬ್ಬ ಪೆಷಾವರವನ್ನು ಗೆದ್ದದ್ದು ಅದೇ ಮೊದಲ ಸಲವಾಗಿದ್ದಿತು.

ದೊಡ್ಡ ರಾಜ್ಯವನ್ನು ಕಟ್ಟಬೇಕೆಂಬ ಆಕಾಂಕ್ಷೆಯಿದ್ದ ಈ ಸಿಖ್ ದೊರೆ ಪ್ರಬಲ ಶತ್ರುಗಳನ್ನು ಸೋಲಿಸಿ ದೂರದ ಪ್ರದೇಶಗಳನ್ನು ಗೆದ್ದು ಸ್ವಾಧೀನಪಡಿಸಿಕೊಂಡ. ಅಲ್ಲಿನ ಜನರೂ ಸಿಖ್ಖರನ್ನು ಸಂತೋಷದಿಂದ ಸ್ವಾಗತಿಸುತ್ತಿದ್ದರು. ರಣಜಿತ್‌ ಸಿಂಗ್‌ ದಕ್ಷ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿದ್ದುದರಿಂದ ಅವನ ರಾಜ್ಯ ವಿಸ್ತರಣೆಗೆ ಪ್ರಜೆಗಳ ಬೆಂಬಲವೂ ದೊರಕಿದ್ದಿತು.

ರಣಜಿತ್ ಸಿಂಗ್ ಮತ್ತು ಬ್ರಿಟಿಷರು

ಎಲ್ಲಾ ದಿಕ್ಕುಗಳಲ್ಲಿಯೂ ರಾಜ್ಯ ವಿಸ್ತರಣೆ ಮಾಡುತ್ತಾ ಬಂದ ರಣಜಿತ್‌ ಸಿಂಗ್‌ ಪೂರ್ವದಲ್ಲಿ ಯಮುನಾ ನದಿಯವರೆಗೆ ತನ್ನ ಆಳ್ವಿಕೆಯನ್ನು ಹಬ್ಬಿಸಿದ್ದ ಬ್ರಿಟಿಷರನ್ನು ಎದುರಿಸಬೇಕಾಯಿತು. ಬ್ರಿಟಿಷರಿಗೂ ಆಯಕಟ್ಟಿನ ಪ್ರದೇಶವಾದ ಪಂಜಾಬನ್ನು ತಮ್ಮದನ್ನಾಗಿ ಮಾಡಿಕೊಳ್ಳಬೇಕೆಂಬ ಆಸೆ ಇತ್ತು. ಆದರೆ ಸಿಖ್ಖರನ್ನು ತಮ್ಮ ಶತ್ರುಗಳನ್ನಾಗಿ ಮಾಡಿಕೊಳ್ಳಲು ಅವರು ಸಿದ್ಧವಾಗಿರಲಿಲ್ಲ. ಆದರೆ ಈ ಸಿಖ್ ದೊರೆ ಒಂದೊಂದೇ ಪ್ರದೇಶವನ್ನು ಗೆದ್ದು ತನ್ನ ರಾಜ್ಯವನ್ನು ವಿಸ್ತರಿಸುತ್ತಾ ಬಂದಾಗ ಅವರ ಕಣ್ಣು ಕೆಂಪಗಾಯಿತು. ಫ್ರೆಂಚ್ ಅಥವಾ ರಷ್ಯನ್ನರು ಭಾರತಕ್ಕೆ ದಾಳಿಯಿಡುವ ಭಯವಿದ್ದುದರಿಂದ ಇಂಗ್ಲಿಷರು ರಣಜಿತ್‌ ಸಿಂಗ್‌ನಂಥ ಬಲಿಷ್ಠ ದೊರೆಗಳು ತಮಗೆ ಸಹಾಯಕರಾಗಬಹುದೆಂದು ನಂಬಿದ್ದರು. ಫ್ರೆಂಚ್ ಚಕ್ರವರ್ತಿ ನೆಪೋಲಿಯನ್ ಭಾರತಕ್ಕೆ ದಾಳಿ ನಡೆಸುವ ಸಂಭವವಿಲ್ಲದಂತಾದಾಗ ಇಂಗ್ಲಿಷರ ನೀತಿ ಬದಲಾಯಿತು. ರಣಜಿತ್‌ ಸಿಂಗ್‌ ಸಿಂಧ್ ಪ್ರಾಂತ್ಯವನ್ನು ಆಕ್ರಮಿಸಿಕೊಳ್ಳಲು ಹೋದಾಗ ಅದಕ್ಕೆ ಅವಕಾಶ ಕೊಡಲಿಲ್ಲ. ಸಟ್ಲೆಜ್, ಪಾಟಿಯಾಲ, ನಭ ಮೊದಲಾದ ಸಿಖ್ ರಾಜ್ಯಗಳು ರಣಜಿತ್ ಸಿಂಗ್‌ಗೆ ಕಪ್ಪ ಕಾಣಿಕೆಗಳನ್ನು ಕೊಟ್ಟು ಅವನ ಅಧಿಪತ್ಯವನ್ನು ಒಪ್ಪಿಕೊಂಡಾಗ ಬ್ರಿಟಿಷರು ಅದನ್ನು ಸಹಿಸದಾದರು. ಸಟ್ಲೆಜ್ ನದಿಯವರೆಗೂ ತಮ್ಮ ಅಧಿಕಾರ ವಿಸ್ತರಿಸಿದೆ ಎಂದು ವಾದಿಸಿದರು. ಬ್ರಿಟಿಷರ ಈ ಕಟ್ಟುಪಾಡುಗಳನ್ನು ರಣಜಿತ್‌ ಸಿಂಗ್‌ ಒಪ್ಪಲಿಲ್ಲ. ಆಗ ಬಿಕ್ಕಟ್ಟಿನ ಸ್ಥಿತಿ ಉಂಟಾಯಿತು. ಎರಡೂ ಪಕ್ಷಗಳೂ ಯುದ್ಧಕ್ಕೆ ಸಿದ್ಧವಾದವು. ಆದರೆ ರಣಜಿತ್‌ ಸಿಂಗ್‌ ದುಡುಕಿ ಯುದ್ಧಕ್ಕೆ ಧುಮುಕಲಿಲ್ಲ. ಬ್ರಿಟಿಷರ ಬಲಾಬಲಗಳನ್ನು ಅವನು ಅರಿತಿದ್ದ. ಸಾಧಾರಣ ಸೈನಿಕನಂತೆ ವೇಷ ಧರಿಸಿಕೊಂಡು ಹೋಗಿ ಬ್ರಿಟಿಷರ ಸೈನ್ಯದ ತರಬೇತಿ ಶಿಸ್ತು ಇವುಗಳನ್ನು ಕಣ್ಣಾರೆ ಕಂಡು ಬಂದಿದ್ದನು. ಬ್ರಿಟಿಷರ ಬಳಿ ಉತ್ತಮ ಶಸ್ತ್ರಾಸ್ತ್ರಗಳೂ ಇದ್ದವು. ಅವರ ಮೇಲೆ ಯುದ್ಧಕ್ಕೆ ಹೋದರೆ ಭಾರತದ ಇತರ ಸಂಸ್ಥಾನಗಳಿಗಾದಂತೆ ತನ್ನ ಸರ್ವ ನಾಶವಾಗುತ್ತದೆ ಎಂದು ಅವನು ಭಾವಿಸಿದ. ಈ ರೀತಿ ಯೋಚಿಸಿ ಬ್ರಿಟಿಷರೊಡನೆ ಸಂಧಾನಕ್ಕೆ ಒಪ್ಪಿದ. ೧೮೦೯ ರಲ್ಲಿ ಬ್ರಿಟಿಷರಿಗೂ ರಣಜಿತ್‌ ಸಿಂಗ್‌ನಿಗೂ “ಶಾಶ್ವತ ಮೈತ್ರಿಯ” ಒಪ್ಪಂದವಾಯಿತು.

 

ರಣಜಿತ್ ಸಿಂಗ್ ಕುತುಬುದ್ದೀನನನ್ನು ಕ್ಷಮಿಸಿದ

ಬ್ರಿಟಿಷರ ವಿರೋಧದಿಂದ ರಣಜಿತ್‌ ಸಿಂಗ್‌ನ ರಾಜ್ಯ ವಿಸ್ತರಣೆ ನಿಲ್ಲಲಿಲ್ಲ. ಪಶ್ಚಿಮ ಮತ್ತು ಉತ್ತರ ದಿಕ್ಕುಗಳಲ್ಲಿ ಅವನ ವಿಜಯಗಳು ಮುಂದುವರಿದವು. ಪಶ್ಚಿಮದಲ್ಲಿ ಬಹಳ ದುರ್ಗಮವಾದ ಪ್ರದೇಶಗಳನ್ನು ಅವನು ಗೆದ್ದುಕೊಂಡನು. ಖೈಬರ್ ಗಡಿಯವರೆಗೂ ಅವನ ರಾಜ್ಯ ವಿಸ್ತರಿಸಿತು. ಆಫ್ಘಾನಿಸ್ತಾನವನ್ನು ಗೆದ್ದು ವಶಪಡಿಸಿಕೊಳ್ಳಲು ಅವನು ಯೋಚಿಸಿದ. ಬ್ರಿಟಿಷರು ಮತ್ತೊಮ್ಮೆ ಅಡ್ಡಿಯನ್ನೊಡ್ಡಿದರು. ಕಾಶ್ಮೀರ ಹಾಗೂ ಲಡಖ್ ಇವುಗಳನ್ನೂ ಮಹಾರಾಜ ರಣಜಿತ್ ಸಿಂಗ್ ಗೆದ್ದು ಸ್ವಾಧೀನ ಪಡಿಸಿಕೊಂಡ.

ಕೊಳ್ಳೆ ಸುಲಿಗೆ ಬೇಡ

ಕಾಂಗ್ರದ ಮೇಲೆ ಅವನು ಮುತ್ತಿಗೆ ಹಾಕಿದಾಗ ಘೂರ್ಕರು ಬಹು ಶೌರ್ಯದಿಂದ ಹೋರಾಡಿದರು. ರಣಜಿತ್‌ ಸಿಂಗ್‌ ಅವರ ಹೋರಾಟವನ್ನು ಮೆಚ್ಚಿಕೊಂಡ, ಸಿಖ್ಖರಿಗೆ ಜಯ ಲಭಿಸಿದರೂ ಘೂರ್ಖರ ನಾಯಕ ಅಮರಸಿಂಗ್ ಥಾಪನನ್ನು ಹಿಂಸೆಗೆ ಗುರಿಮಾಡದೆ ಗೌರವದಿಂದ ಕಂಡ. ಯುದ್ಧದಲ್ಲಿ ಗೆದ್ದವರು ಸಿಕ್ಕಿದ್ದನ್ನು ದೋಚಬಹುದಾಗಿತ್ತು. ರಣಜಿತ್ ಸಿಂಗ್ ಲೂಟಿ ಹೊಡೆಯುವುದಕ್ಕೆ ಅವಕಾಶ ಕೊಡಲಿಲ್ಲ. ಕೆಲವು ಸಾಮಂತ ರಾಜರು ಆತುರದಿಂದ ಲೂಟಿ ಹೊಡೆದಿದ್ದ ವಸ್ತುಗಳನ್ನು ಹಿಂದಿರುಗಿಸುವಂತೆ ಆಜ್ಞಾಪಿಸಿದ. ಮಹಾರಾಜ ರಣಜಿತ್‌ ಸಿಂಗ್‌ ಶೂರನಾದರೂ ಕ್ರೂರಿಯಾಗಿರಲಿಲ್ಲ. ಸೋತವರನ್ನು ಮನ್ನಿಸಿ ಅವರನ್ನು ಗೌರವದಿಂದ ಕಾಣುತ್ತಿದ್ದ. ಸುಲಿಗೆ, ರಕ್ತಪಾತ, ಕ್ರೌರ್ಯಗಳನ್ನೂ ಅವನು ದೂರ ಮಾಡಿದ್ದ. ಶತ್ರುಗಳಾಗಿದ್ದವರನ್ನು  ತನ್ನ ಔದಾರ್ಯದಿಂದ ಅವನು ಮಿತ್ರರನ್ನಾಗಿ ಮಾಡಿಕೊಂಡಿದ್ದ. ಬಲಾಢ್ಯನಾದ ದೊರೆ ಈ ರೀತಿ ಕರುಣೆ ಕ್ಷಮೆಯನ್ನು ತೋರಿಸುತ್ತಿದ್ದುದು ಬಹಳ ವಿರಳವೇ!

 

ತನ್ನ ಆಸ್ಥಾನಕ್ಕೆ ಬಂದ ವಿದೇಶಿಯರನ್ನು ಪ್ರಶ್ನಿಸಿ ಹಲವು ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದ

ತನ್ನ ಸ್ವಂತ ಸಾಮರ್ಥ್ಯದಿಂದ ರಣಜಿತ್‌ ಸಿಂಗ್‌ ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದ. ಪುಟ್ಟ ರಾಜ್ಯದ ಅಧಿಪತಿಯಾಗಿದ್ದವನು ಭಾರತದಲ್ಲಿನ ಅತ್ಯಂತ ಪ್ರಬಲ ದೊರೆ ಎನ್ನಿಸಿಕೊಂಡ. ಅವನ ರಜ್ಯ ಸಟ್ಲೆಜ್ ನದಿಯಿಂದ ಖೈಬರ್‌ವರೆವಿಗೂ ಟಿಬೆಟ್‌ನಿಂದ ಸಿಂಗ್‌ವರೆವಿಗೂ ಹಬ್ಬಿದ್ದಿತು. ಭಾರತದ ಸಾವಿರ ವರ್ಷಗಳ ಇತಿಹಾಸದಲ್ಲಿ ವಾಯುವ್ಯ ದಿಕ್ಕಿನಿಂದ  ಬಂದ ದಾಳಿಕೋರರನ್ನು ತಡೆದು ನಿಲ್ಲಿಸಿದ ಪ್ರಥಮ ದೊರೆ ರಣಜಿತ್‌ ಸಿಂಗ್‌, ಬ್ರಿಟಿಷರು ಆಫ್ಘನ್ನರ ಮತ್ತು ರಷ್ಯನ್ನರ ಧಾಳಿಯ ಭೀತಿಯಿಂದ ತತ್ತರಿಸುತ್ತಿದ್ದಾಗ ರಣಜಿತ್‌ ಸಿಂಗ್‌ನಿಂದ ತಮಗೆ ರಕ್ಷಣೆಯೆಂದು ಅವರು ಭಾವಿಸಿದ್ದರು.

ಆಡಳಿತ ವ್ಯವಸ್ಥೆ

ರಣಜಿತ್‌ ಸಿಂಗ್‌ ಕೇವಲ ರಾಜ್ಯ ವಿಸ್ತರಿಸುವುದರಲ್ಲೇ ತನ್ನ ಕಾಲವನ್ನು ಕಳೆಯಲಿಲ್ಲ. ರಣರಂಗದಂತೆ ಆಡಳಿತ ರಂಗದಲ್ಲೂ ಅವನು ತನ್ನ ಸಾಮರ್ಥ್ಯವನ್ನು ತೋರಿಸಿದನು. ನೆಪೋಲಿಯನ್ನನಂತೆ ಇವನು ಪ್ರಸಿದ್ಧನಾಗಿರುವುದು ಅವನ ಸೈನಿಕ ವಿಜಯಗಳಿಗಿಂತಲೂ ಹೆಚ್ಚಾಗಿ ಅವನ ದಕ್ಷ ಆಡಳಿತ ಪದ್ಧತಿಯಿಂದ. ವಿಶಾಲವಾದ ರಾಜ್ಯವನ್ನು ಕಟ್ಟಿದ ನಂತರ ಮಹಾರಾಜ ರಣಜಿತ್‌ ಸಿಂಗ್‌ ಒಳ್ಳೆಯ ಆಡಳಿತ ಪದ್ಧತಿಯನ್ನು ಜಾರಿಗೆ ತಂದನು. ಹಿಂದಿನಿಂದ ಬಂದ ಕೆಲವು ಪದ್ಧತಿಗಳನ್ನು ಉಳಿಸಿಕೊಂಡು ಕೆಲವು ಹೊಸ ಸುಧಾರಣೆಗಳನ್ನು ಜಾರಿಗೆ ತಂದನು.

ರಣಜಿತ್ ಸಿಂಗ್ ಭೂಕಂದಾಯ ಪದ್ಧತಿಯನ್ನು ಉತ್ತಮಪಡಿಸಿದ. ಇದರಿಂದ ರೈತರಿಗೆ ಅನುಕೂಲವಾಯಿತು. ಸರ್ಕಾರದ ವರಮಾನವೂ ಹೆಚ್ಚಿತು. ಕಂದಾಯ ಮತ್ತು ರಾಜಮನೆತನದವರಿಗೆ ಕೊಡುತ್ತಿದ್ದ ಬಹುಮಾನ ಇವೆಲ್ಲವೂ ಸೇರಿ ಬೆಳೆಯ ಅರ್ಧ ಭಾಗಕ್ಕೆ ಮೀರದಂತೆ ನೋಡಿಕೊಳ್ಳಲಾಗುತ್ತಿತ್ತು.

ಭವಾನಿದಾಸನನ್ನು ಆರ್ಥಿಕ ವ್ಯವಹಾರಗಳಲ್ಲಿ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. ಅವನು ರಾಜ್ಯದಲ್ಲಿ ಅನೇಕ ಖಜಾನೆಗಳನ್ನು ಸ್ಥಾಪಿಸಿದ.

ರಣಜಿತ್‌ ಸಿಂಗ್‌ನದು ದರ್ಪದ ಪ್ರಭುತ್ವವಾಗಿದ್ದರೂ ಪ್ರಜೆಗಳ ಹಿತ ಅವನ ಮುಖ್ಯ ಗುರಿಯಾಗಿತ್ತು.

ಸೈನ್ಯ ವ್ಯವಸ್ಥೆ

ರಣಜಿತ್‌ ಸಿಂಗ್‌ನದು ಸೈನ್ಯ ವ್ಯವಸ್ಥೆ ಅವನ ಬಹಳ ದೊಡ್ಡ ಸಾಧನೆ. ಸೈನ್ಯದ ಬಲದಿಂದಲೇ ಅವನು ತನ್ನ ಬಾಳಿನ ಗುರಿಯನ್ನು ಸಾಧಿಸಿದ. ಸಿಖ್ಖರು ಹುಟ್ಟಿನಿಂದ ಒಳ್ಳೆಯ ಯೋಧರಾಗಿದ್ದರು. ಉತ್ತಮ ಯೋಧರಾಗಲು ಬೇಕಾದ ನಿಯಮಗಳನ್ನು ಅವರ ಧರ್ಮವೇ ರೂಪಿಸಿತ್ತು. ಆದರೆ ಅವರಲ್ಲಿ ಶಿಸ್ತು ಇರಲಿಲ್ಲ. ಹಳೆಯ ಪದ್ಧತಿಗಳು  ವಿಧಾನಗಳನ್ನು ಮಾತ್ರ ಅವರಿಗೆ ಗೊತ್ತಿದ್ದವು. ಹೊಸ ಅಸ್ತ್ರಗಳನ್ನು ಉಪಯೋಗಿಸುವುದು ಅವರಿಗೆ ಗೊತ್ತಿರಲಿಲ್ಲ.

ಈ ದೋಷಗಳನ್ನು ಹೋಗಲಾಡಿಸಿ, ರಣಜಿತ್‌ ಸಿಂಗ್‌ ಅವರಲ್ಲಿ ಆಧುನಿಕ ಪದ್ಧತಿಗಳನ್ನು ಜಾರಿಗೆ ತಂದನು. ಜಾತಿ, ಮತ, ರಾಜ್ಯಗಳ ಭೇದವನ್ನು ಕಡೆಗಿಸಿ ಉತ್ತಮ ಯೋಧರನ್ನು ತನ್ನ ಸೈನ್ಯಕ್ಕೆ ಸೇರಿಕೊಂಡನು. ಅವನ ಸೈನ್ಯದಲ್ಲಿ ಘೂರ್ಕರು, ಮಹಮ್ಮದೀಯರು, ಪಠಾಣರು, ಬೇರೆ ಪ್ರಾಂತಗಳಿಂದ ಬಂದಿದ್ದ ಜನರು ಇದ್ದರು. ಬ್ರಿಟಿಷ್‌ ಸೈನ್ಯ ಅಷ್ಟು ಶ್ರೇಷ್ಠವಾಗಿರಲು ಕಾರಣವೇನೆಂಬುದನ್ನು ತಿಳಿಯಲು ರಣಜಿತ್ ಸಿಂಗ್ ಮಾರುವೇಷದಿಂದ ಅವರ ಕವಾಯಿತವನ್ನು ನೋಡಿ ಬಂದನು. ತನ್ನ ಸೈನ್ಯವನ್ನು ಯುರೋಪಿಯನವರ ಮಾದರಿಯ ಮೇಲೆ ಆಧುನಿಕಗೊಳಿಸಲು ನಿರ್ಧರಿಸಿದನು. ಅದಕ್ಕಾಗಿ ನೂರು ಜನರ ವಿದೇಶಿಯರನ್ನು ನೇಮಿಸಿಕೊಂಡನು. ಫ್ರೆಂಚ್, ಇಟಾಲಿಯನ್, ಗ್ರೀಕ್, ಜರ್ಮನ್ ಮತ್ತು ಅಮೆರಿಕನ್ ಅಧಿಕಾರಿಗಳು ಅವನು ಸೈನ್ಯಕ್ಕೆ ಶಿಕ್ಷಣ ಕೊಡಲು ನೇಮಕಗೊಂಡಿದ್ದರು. ಅಲ್ಲರ್ಡ್‌, ವೆಂಟುರಾ, ಕೋರ್ಟ್ ಮೊದಲಾದ ಸುಪ್ರಸಿದ್ಧ ದಳಪತಿಗಳು ಸಿಖ್‌ ಸೈನ್ಯಕ್ಕೆ ಶಿಕ್ಷಣ ನೀಡಿದ್ದರು. ಇಂತಹ ಅನುಭವಿಗಳಾದ ಸೈನ್ಯಾಧಿಕಾರಿಗಳಿಂದ ಶಿಕ್ಷಣ ಪಡೆದ ಅವನ ಸೈನ್ಯದಲ್ಲಿ ಶಿಸ್ತು, ದಕ್ಷತೆ ಇದ್ದಿತು. ಅವನ ಸೈನಿಕರೆಲ್ಲಾ ಮಹಾರಾಜನಲ್ಲಿ ನಿಷ್ಠೆಯನ್ನು ಹೊಂದಿದ್ದರು. ರಣಜಿತ್ ಸಿಂಗನ ಸ್ಫೂರ್ತಿಯುತವಾದ ನಾಯಕತ್ವದಲ್ಲಿ ತಯಾರಾದ ಈ ಸೈನ್ಯ ಜಗತ್ತಿನಲ್ಲಿಯೇ ಬಹಳ ಶ್ರೇಷ್ಠವಾದುದೆಂದು ಹೆಸರು ಪಡೆದಿತ್ತು.

ಆದರ್ಶಯೋಧ

ರಣಜಿತ್‌ ಸಿಂಗ್‌ ಯೋಧನ ಆದರ್ಶವನ್ನು ರೂಢಿಸಿಕೊಂಡಿದ್ದ. ಹಲವಾರು ಬಾರಿ ತಾನೇ ಸೈನ್ಯದ ಮುಂದಾಳುವಾಗಿರುತ್ತಿದ್ದನು. ಒಂದು ಬಾರಿ ಸಿಖ್ ಸೈನ್ಯವು ತುಂಬಿದ ನದಿಯನ್ನು ದಾಟಬೇಕಾಗಿದ್ದಿತು. ರಣಜಿತ್‌ ಸಿಂಗ್‌ ಕುದುರೆಯನ್ನೇರಿ ಮುಂದೆ ನಡೆದನು. ಅವನ ಸೈನ್ಯವು ಅವನ ಹಿಂದೆಯೇ ನದಿಯನ್ನು ದಾಟಿತು. ಇನ್ನೊಮ್ಮೆ ಮಹಾರಾಜ ರಣಜಿತ್‌ ಸಿಂಗ್‌ ಆನೆಯ ಮೇಲೆ ಕುಳಿತು ನದಿಯನ್ನು ದಾಟುತ್ತಿದ್ದಾಗ ಪ್ರವಾಹ ಕಡಿಮೆಯಾಗಿ ಅವನ ಸೈನ್ಯವೆಲ್ಲಾ ನದಿಯನ್ನು ದಾಟಿದ ನಂತರ ಪ್ರವಾಹ ಹೆಚ್ಚಾಯಿತೆಂದು ಒಂದು ಕಥೆಯಿದೆ. ಇಟ್ಟಿನಲ್ಲಿ ಅವನ ಸರದಾರರಿಗೆ ಸೈನಿಕರಿಗೆ ತಮ್ಮ ರಾಜನ ಮೇಲೆ ಸಂಪೂರ್ಣ ವಿಶ್ವಾಸ, ನಿಷ್ಠೆಯಿದ್ದಿತು. ಸಿಖ್ ಸೈನ್ಯದಲ್ಲಿದ್ದ ನಿಹಾಂಗರು ತಮ್ಮ ಶೌರ್ಯ, ಧೈರ್ಯ, ತ್ಯಾಗಗಳಿಂದ ಜಗತ್ತಿನಲ್ಲಿ ಪ್ರಸಿದ್ಧರಾಗಿದ್ದರು.

ಹರಿಸಿಂಗ್ ನಾಲ್ವ

ಹರಿಸಿಂಗ್ ನಾಲ್ವ, ರಣಜಿತ್‌ ಸಿಂಗ್‌ನ ಸೈನ್ಯದ ಬಹಳ ಪ್ರಸಿದ್ಧನಾದ ದಳಪತಿಯಾಗಿದ್ದ. ಒಂದು ಬಾರಿ ಆಫ್ಘನ್ನರ ಮೇಲೆ ಯುದ್ಧ ಮಾಡುತ್ತಿದ್ದಾಗ ಈ ದಳಪತಿಗೆ ತೀವ್ರವಾದ ಗಾಯಗಳಾದವು. ಅವನ ಎದೆಯ ಮೇಲೆ ಎರಡು ಕತ್ತಿಯ ಗಾಯಗಳಾಗಿದ್ದವು. ಒಂದು ಬಾಣವು ಅವನ ಎದೆಗೆ ನಾಟಿದ್ದಿತು. ಅದನ್ನು ತಾನೇ ಕಿತ್ತು ಹಾಕಿ ಯುದ್ಧರಂಗದಲ್ಲಿ ತನ್ನ ಸೈನ್ಯಕ್ಕೆ ಆಜ್ಞೆ ನೀಡುತ್ತಿದ್ದನು. ಕಡೆಗೆ ಒಂದು ಗುಂಡಿನ ಏಟಿನಿಂದ ಅವನು ಉರುಳಿಬಿದ್ದನು. ತಾನು ಉಳಿಯುವುದಿಲ್ಲವೆಂದು ಅವನಿಗೆ ಗೊತ್ತಾಯಿತು. ಹೊಸ ಸೈನ್ಯದ ತುಕಡಿಗಳು ಬರುವವರೆಗೂ ತನ್ನ ಸಾವಿನ ಸುದ್ಧಿಯನ್ನು ಬಹಿರಂಗಪಡಿಸಬಾರದೆಂದು ಅವನು ಕೇಳಿಕೊಂಡನು. ಸಿಖ್ಖರು ಶೌರ್ಯದಿಂದ ಹೋರಾಡಿದರು. ಹರಿಸಿಂಗ್ ನಾಲ್ವ ಸತ್ತ ಸುದ್ದಿಯನ್ನು ಕೇಳಿ ಮಹಾರಾಜ ರಣಜಿತ್‌ ಸಿಂಗ್‌ ದುಃಖದಿಂದ ಕಣ್ಣೀರಿಟ್ಟನು.

ರಣಜಿತ್‌ ಸಿಂಗ್‌ನಂತೆಯೇ ಅವನ ಮಕ್ಕಳು, ಮೊಮ್ಮಕ್ಕಳು ತಮ್ಮ ಶೌರ್ಯ, ಪ್ರತಾಪಗಳಿಗೆ ಹೆಸರಾಗಿದ್ದರು. ಮಹಾರಾಜನ ಮಗ ಖರತ್ ಸಿಂಗ್, ಷೇರ್‌ಸಿಂ‌ಗ್ ಮತ್ತು ಅವನ ಮೊಮ್ಮಗ ನೌನಹಾಲ್‌ಸಿಂಗ್, ಇವರು ಸಣ್ಣ ವಯಸ್ಸಿನಲ್ಲಿಯೇ ಯುದ್ಧಗಳಲ್ಲಿ ಹೋರಾಡಿ ಅಸಾಧಾರಣವಾದ ಪರಾಕ್ರಮವನ್ನು ತೋರಿಸಿದರು.

ಮಹಾರಾಜನು ತನ್ನ ಸೈನಿಕರ ಬಗ್ಗೆ, ಅಧಿಕಾರಿಗಳ ಬಗ್ಗೆ ಅಷ್ಟೇ ಆಸಕ್ತಿಯನ್ನೂ ವಿಶ್ವಾಸವನ್ನೂ ಹೊಂದಿದ್ದನು. ಯುದ್ಧದಲ್ಲಿ ಅಸಾಧಾರಣ, ಶೌರ್ಯ ಸಾಹಸಗಳನ್ನು ತೋರಿಸಿದವರಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದನು. ಅಂತೆಯೇ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತಿತ್ತು. ತನ್ನ ಸೈನಿಕರು ಕೊಳ್ಳೆ ಹೊಡೆದಾಗ ಶಿಸ್ತು, ಸಭ್ಯತೆ ಉಲ್ಲಂಘಿಸಿದಾಗ ಅವರಿಗೆ ಶಿಕ್ಷೆಯಾಗುತ್ತಿತ್ತು. ಒಟ್ಟಿನಲ್ಲಿ ಸಿಖ್ಖರಿಗೆ ಉನ್ನತ ಮಟ್ಟದ ಸೈನಿಕ ಶಿಕ್ಷಣ ನೀಡಿ ಅವರನ್ನು ಜಗತ್ತಿನ ಶ್ರೇಷ್ಠ ಯೋಧರನ್ನಾಗಿ ಮಾಡಿದನು. ಏಷ್ಯಾದಲ್ಲೇ ಅತ್ಯುತ್ತಮ ಸೈನ್ಯವೆಂದು ಅವನ ಸೈನ್ಯ ಖ್ಯಾತಿ ಗಳಿಸಿದ್ದಿತು.

ನ್ಯಾಯಾಡಳಿತ

ಮಹಾರಾಜ ರಣಜಿತ್‌ ಸಿಂಗ್‌ನ ಆಡಳಿತ ಪದ್ಧತಿ ಎಲ್ಲಾ ಜನರಿಗೂ ನ್ಯಾಯವನ್ನು ದೊರಕಿಸುವ ಉದ್ದೇಶವನ್ನು ಹೊಂದಿದ್ದಿತು. ನ್ಯಾಯ ವಿಚಾರಣೆ ಸುಲಭವಾಗಿದ್ದಿತು. ಎಲ್ಲರಿಗೂ ನ್ಯಾಯ ದೊರಕುವಂತೆ ಇದ್ದಿತು. ಅಪರಾಧ ಮಾಡಿದವರಿಗೆ ಜುಲ್ಮಾನೆ, ಅಂಗಚ್ಛೇದನ ಮೊದಲಾದ ಶಿಕ್ಷಕೆಗಳಿದ್ದವು. ಮರಣದಂಡನೆ ಇರಲಿಲ್ಲ. ನ್ಯಾಯಾಡಳಿತದಲ್ಲಿ ಗ್ರಾಮ ಪಂಚಾಯತಿಗಳಿಗೆ ಹೆಚ್ಚಿನ ಜವಾಬ್ದಾರಿಯಿತ್ತು. ಪಂಚಾಯಿತಿಗಳ ತೀರ್ಪನ್ನು ಒಪ್ಪದಿದ್ದವರು ಜಿಲ್ಲಾಧಿಕಾರಿ ಹಾಗೂ ಪ್ರಾಂತ್ಯದ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದಾಗಿತ್ತು. ಮಹಾರಾಜದ ಆಸ್ಥಾನ ರಾಜ್ಯದ ವರಿಷ್ಠ ನಯಾಯಾಲಯವಾಗಿತ್ತು. ಯಾವ ವ್ಯಕ್ತಿಗೇ ಅನ್ಯಾಯವಾಗಿದ್ದರೂ ಅವನು ಮಹಾರಾಜನನ್ನು ಕಂಡು ತನ್ನ ದೂರನ್ನು ಹೇಳಿಕೊಳ್ಳಬಹುದಾಗಿತ್ತು. ಕೆಲವು ವೇಳೆ ನ್ಯಾಯಾಧೀಶರು ರಾಜ್ಯದಲ್ಲಿ ಸಂಚಾರ ಮಾಡಿ ವ್ಯವಹಾರಗಳನ್ನು ಬಗೆಹರಿಸುತ್ತಿದ್ದರು. ಒಳ್ಳೆಯ ಆಡಳಿತ ಮತ್ತು ನ್ಯಾಯಾಡಳಿತ ವ್ಯವಸ್ಥೆಯಿಂದ ರಾಜ್ಯದಲ್ಲಿ ಶಾಂತಿ ಭದ್ರತೆ ನೆಲೆಸಿತ್ತು. “ಅಷ್ಟು ದೊಡ್ಡ ರಾಜ್ಯದಲ್ಲಿ ಅಪರಾಧಗಳು ಅಷ್ಟು ಕಡಿಮೆ ಇರುವಂತೆ ಹಿಂದೆ ಯಾರೂ ಆಳಿರಲಿಲ್ಲ”. ಎಂದು ಅವನ ರಾಜ್ಯಕ್ಕೆ ಬಂದಿದ್ದ ಜರ್ಮನ್ ಯಾತ್ರಿಕ ಕಾರ್ಲ್‌ವ್ಯಾನ್ ಹೂಗಲ್ ಹೇಳಿದ್ದಾನೆ. ಇನ್ನೊಬ್ಬ ವಿದೇಶಿ ಯಾತ್ರಿಕ ಈ ರಾಜ್ಯದಲ್ಲಿ ಕಳ್ಳತನಗಳು ಬಹಳ ವಿರಳ. ಪುಂಡರು ಊರುಗಳನ್ನೂ, ಪಟ್ಟಣಗಳನ್ನೂ ಲೂಟಿ ಹೊಡೆಯುವುದು ನಿಂತಿದೆ ಎಂದು ಬರೆದಿದ್ದಾನೆ.

ವಿದ್ಯೆಗೆ ಪ್ರೋತ್ಸಾಹ

ಮಹಾರಾಜ ರಣಜಿತ್‌ ಸಿಂಗ್‌ನು ಪ್ರಜೆಗಳಿಗೆ ಅನುಕೂಲಗಳನ್ನು ಕಲ್ಪಿಸಿಕೊಟ್ಟನು. ರಸ್ತೆ, ವಿಶ್ರಾಂತಿ ಗೃಹಗಳನ್ನು ನಿರ್ಮಿಸಿದನು. ನಗರಗಳಲ್ಲಿ ಆಸ್ಪತ್ರೆಗಳನ್ನು ಪ್ರಾರಂಭಿಸಿದನು. ಹಿಂದೂ ಮತ್ತು ಮಹಮ್ಮದೀಯರ ಪಾಠಶಾಲೆಗಳಿಗೆ ಧನ ಸಹಾಯ ಮಾಡಿದನು. ದೇವಾಲಯಗಳಿಗೂ, ಧರ್ಮ ಸಂಸ್ಥೆಗಳಿಗೂ ನೆರವು ನೀಡುತ್ತಿದ್ದನು. ಸಾಹಿತಿಗಳನ್ನೂ, ವಿದ್ವಾಂಸರನ್ನೂ ಪ್ರೋತ್ಸಾಹಿಸುತ್ತಿದ್ದನು.

ಒಂದು ದಿನ ಲೇಖಕನೊಬ್ಬಮಹಾರಾಜನ ಆಪ್ತ ಮಂತ್ರಿ ಫಕೀರ್ ಅಜೀಜುದ್ದೀನ್ ಬಳಿ ಬಂದು ತಾನು ಕೈಯಲ್ಲಿ ಬರೆದ ಖುರಾನಿನ ಹಸ್ತಪ್ರತಿಯನ್ನು ಕೊಳ್ಳುವಂತೆ ಕೇಳುತ್ತಿದ್ದ. ಅಜೀಜುದ್ದೀನ್ ತಾನು ಅಷ್ಟು ಹಣ ಕೊಡುವುದು ಸಾಧ್ಯವಿಲ್ಲವೆಂದು ಹೇಳಿದ. ಆ ಮಾತನ್ನು ರಣಜಿತ್‌ ಸಿಂಗ್‌ ಕೇಳಿಸಿಕೊಂಡ. ಆ ಮಹಮ್ಮದೀಯ ಲೇಖಕನನ್ನು ಕರೆದು ಹಸ್ತಪ್ರತಿಯನ್ನು ಪರಿಶೀಲಿಸಿದ. (ಆಗಿನ ಕಾಲದಲ್ಲಿ ಅಚ್ಚುಕೂಟಗಳಿರಲಿಲ್ಲ. ಒಂದು ಗ್ರಂಥದ ಒಂದೊಂದು ಹಸ್ತಪ್ರತಿ ಸಿದ್ಧವಾಗುವುದೂ ಕಷ್ಟವಾಗಿತ್ತು ಎಂದು ನೆನಪಿಡಬೇಕು) ರಣಜಿತ್‌ ಸಿಂಗ್‌ನು ಅವನು ಕೇಳಿದಷ್ಟು ಹಣವನ್ನು ಕೊಟ್ಟು ಅವನ ಹಸ್ತಪ್ರತಿಯನ್ನು ಕೊಂಡನು.

ಜ್ಞಾನದಾಹ

ತಾನು ಅನಕ್ಷರಸ್ಥನಾದರೂ ರಣಜಿತ್‌ ಸಿಂಗ್‌ ವಿದ್ಯಾಪಕ್ಷಪಾತಿಯಾಗಿದ್ದ. ಅವನ ಆಸ್ಥಾನದಲ್ಲಿ ಮುನ್ಷಿ ಸೋಹನ್‌ಲಾಲ್ ಮಿಯಾನ್‌ಷಾ ಮಹಮದ್, ದಿವಾನ ಅಮರನಾಥ್, ಗಣೇಶ್‌ದಾಸ್ ಮೊದಲಾದ ಸಾಹಿತಿಗಳಿದ್ದರು. ಹಣಜಿತ್ ಸಿಂಗ್‌ನಿಗೆ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಇದ್ದಿತು. “ನಾನು ಸಂಧಿಸಿದವರಲ್ಲಿ ವಿಷಯಗಳನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಇದ್ದಿತು. “ನಾನು ಸಂಧಿಸಿದವರಲ್ಲಿ ವಿಷಯಗಳನ್ನು ತಿಳಿಸುಕೊಳ್ಳಬೇಕೆಂಬ ಕುತೂಹಲವುಳ್ಳ ಮೊದಲನೆಯ ವ್ಯಕ್ತಿ” ಎಂದು ಜಾಕ್‌ಮೆಂಟ್ ಎಂಬ ಫ್ರೆಂಚ್ ಯಾತ್ರಿಕ ಅವನನ್ನು ಅರ್ಣಿಸಿದ್ದಾನೆ.

ವಿದೇಶಿಯರನ್ನು ಸಂಧಿಸುವಾಗ ಅವರ ದೇಶ ಜನ ಜೀವನ, ಆಡಳಿತ ಇವುಗಳ ಬಗ್ಗೆ ಒಂದೇ ಸಮನೆ ಪ್ರಶ್ನೆ ಕೇಳುತ್ತಿದ್ದ. ಅವನ ಪ್ರಶ್ನೆಗಳ ಸುರಿಮಳೆಯಿಂದ ಎಂಥ ಬುದ್ದಿವಂತರೂ ತತ್ತರಿಸುತ್ತಿದ್ದರು ಎಂದು ಅವನನ್ನು ಕಂಡಿದ್ದ ಐರೋಪ್ಯರು ಹೇಳಿದ್ದಾರೆ. ಅವನಿಗೆ ಅಸಾಧಾರಣೆ ಬುದ್ಧಿಶಕ್ತಿ, ಒಳ್ಳೆಯ ಜ್ಞಾಪಕಶಕ್ತಿಯಿದ್ದವು. ತನ್ನ ರಾಜ್ಯದ ಸುಮಾರು ಹನ್ನೆರಡು ಸಾವಿರ ಹಳ್ಳಿಗಳ ಹೆಸರು ಅವುಗಳ ಇತಿಹಾಸವನ್ನು ಅವನು ನೆನಪಿನಲ್ಲಿಟ್ಟುಕೊಂಡಿದ್ದ. ರಣಜಿತ್ ಸಿಂಗ್ ಗುಣಗ್ರಾಹಿಯಾಗಿದ್ದ. ಯಾರನ್ನು ಹೇಗೆ ಎಷ್ಟರ ಮಟ್ಟಿಗೆ ನಂಬಬೇಕೆಂಬುದು ಅವನಿಗೆ ತಿಳಿದಿತ್ತು.

ಎಲ್ಲ ಧರ್ಮಗಳೂ ಸಮಾನ

ರಣಜಿತ್‌ ಸಿಂಗ್‌ ಎಲ್ಲ ಮತಗಳಿಗೂ ಗೌರವವನ್ನು ಕೊಡುತ್ತಿದ್ದ, “ಎಲ್ಲ ಧರ್ಮಗಳನ್ನೂ ಒಂದೇ ರೀತಿಯಾಗಿ ಕಾಣಲು ದೇವರು ನನಗೆ ಒಂದೇ ಕಣ್ಣನ್ನು ಕೊಟ್ಟಿದ್ದಾನೆ” ಎಂದು ಅವನು ಹೇಳುತ್ತಿದ್ದ. ಎಲ್ಲ ಮತಗಳ ಮುಖಂಡರನ್ನೂ, ಸಂತರನ್ನೂ ಅವನು ಗೌರವದಿಂದ ಕಾಣುತ್ತಿದ್ದ. ಒಂದು ದಿನ ಮಹಮ್ಮದೀಯ ಸಂತನೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದಾಗ ರಣಜಿತ್ ಸಿಂಗ್ ಅವನ ಕಾಲಿಗೆರಗಿ ನಮಿಸಿದ. ಅನೇಕ ವೆಳೆ ಮಹಮ್ಮದೀಯ ಸಂತರ ಸಮಾಧಿಗಳಿಗೆ ಮಸೀದಿಗಳಿಗೆ ಹೋಗಿ ಪ್ರಾರ್ಥಿಸಿದ್ದುಂಟು. ಆತನು ಎಲ್ಲ ಮತಗಳ ಹಬ್ಬ ಹರಿದಿನಗಳಲ್ಲೂ ಭಾಗವಹಿಸುತ್ತಿದ್ದ. ಮಹಾರಾಜನು ಮೆರವಣಿಗೆ ಹೋಗುವಾಗಲೂ, ಬೇಟೆಗೆ ಹೋಗುವಾಗಲೂ ಚಿನ್ನದ ಅಂಬಾರಿಯನ್ನು ಸಿಖ್‌ ಧರ್ಮಗ್ರಂಥ ಗ್ರಂಥಸಾಹಿಬ್ ಇರುತ್ತಿತ್ತು.

ಜಾತ್ಯಾತೀತ ರಾಜ್ಯ

ರಣಜಿತ್‌ ಸಿಂಗ್‌ನ ಗುರಿ ಸುಖ್ ರಾಜ್ಯ ಸ್ಥಾಪನೆಯೇ ಆಗಿರಲಿಲ್ಲ. ಕಾನೂನಿನ ದೃಷ್ಟಿಯಿಂದ ಹಿಂದೂ ಸಿಖ್ ಮಹಮ್ಮದೀಯರೆಲ್ಲರ ಸಮಾನರಾದ ಪಂಜಾಬಿ ರಾಜ್ಯ ಅವನಸ ಗುರಿಯಾಗಿತ್ತು. ಎಲ್ಲರಿಗೂ ಸಮಾನ ಹಕ್ಕು ಭಾಧ್ಯತೆಗಳಿದ್ದುವು. ಅವನ ದರ್ಬಾರಿನಲ್ಲಿ ಯುರೋಪಿಯನ್ನಿರಿಗೆ, ಮಹಮ್ಮದೀಯರಿಗೆ ಎಲ್ಲರಿಗೂ ಸಮಾನ ಸ್ಥಾನ ನೀಡಿದ್ದನು. ಅನೇಕ ಮಹಮ್ಮದೀಯರು ಅವನ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದರು. ಫಕೀರ್ ಅಜೀಜುದ್ದೀನ್ ರಣಜಿತ್ ಸಿಂಗ್‌ನ ವಿದೇಶಾಂಗ ಸಚಿವನಾಗಿದ್ದನು.

ಖಾಲ್ಸಾ ದರ್ಬಾರ್

ತನ್ನ ಎಲ್ಲ ವಿಜಯಗಳಿಗೂ, ಸಾಧನೆಗಳಿಗೂ ದೇವರ ಕೃಪೆಯೇ ಕಾರಣ ಎಂದು ಮಹಾರಾಜ ರಣಜಿತ್‌ ಸಿಂಗ್ ಹೇಳುತ್ತಿದ್ದ. ತನ್ನ ರಾಜ್ಯವನ್ನು ಖಾಲ್ಸಾ, ಖಾಲ್ಸಾ ದರ್ಬಾರ್ ಎಂದು ಕರೆಯುತ್ತಿದ್ದ. ಸಿಖ್ ಗುರುಗಳು ತಮ್ಮ ಧ್ಯೇಯವನ್ನು ಪೂರೈಸಲು ನನ್ನನ್ನು ಆರಿಸಿದ್ದಾರೆ, ಆ ಧ್ಯೇಯ ಸಾಧನೆಯಲ್ಲಿ ತಾನೊಂದು ನಿಮಿತ್ತ ಎಂದು ಅವನು ನಂಬಿದ್ದ. ಬಲಿಷ್ಠನಾದ ದೊರೆ ಈ ತೀರಿ ದೇವರ ಹೆಸರಿನಲ್ಲಿ ರಾಜ್ಯವಾಳಿದ್ದು ಬಹಳ ವಿರಳ, ಅವನು ಅಚ್ಚು ಹಾಕಿಸಿದ ನಾಣ್ಯಗಳಲ್ಲಿ ತನ್ನ ಹೆಸರನ್ನು ಹಾಕದೆ ನಾನಕ್‌ಶಾಹಿ (ನಾನಕನ ಸಾಮ್ರಾಜ್ಯ) ಎಂದೇ ಮುದ್ರಿಸಿದ.

ಇಂಗ್ಲಿಷರಿಗೆ ಧರ್ಮ ಬೋಧಿಸಿ

ದೇವರು ಧರ್ಮದ ಬಗ್ಗೆ ರಣಜಿತ್‌ ಸಿಂಗ್‌ ಭಕ್ರಿ ಮತ್ತು ಶ್ರದ್ಧೆಯನ್ನು ಹೊಂದಿದ್ದನಾದರೂ ಯುರೋಪಿಯನ್ನರ ಧರ್ಮ ನೀತಿಯ ಬಗ್ಗೆ ಅವನಿಗೆ ಅಷ್ಟು ವಿಶ್ವಾಸವಿರಲಿಲ್ಲ. ಜೋಸೆಫ್ ವುಲ್ಫ್‌ ಎಂಬ ಕ್ರೈಸ್ತಪಾದ್ರಿ ಪಂಜಾಬಿನಲ್ಲಿ ತನ್ನ ಧರ್ಮ ಪ್ರಸಾರ ಮಾಡುತ್ತಿದ್ದ. ಭಾರತೀಯರಿಗೆ ದೇವರಲ್ಲಿ ನಂಬಿಕೆಯಿಲ್ಲ. ದೇವರನ್ನು ನಂಬಿದವರಿಗೆ ಸಾವಿನ ಭಯವಿಲ್ಲ ಎಂದು ಅವನು ಬೋಧಿಸುತ್ತಿದ್ದ. ರಣಜಿತ್‌ ಸಿಂಗ್‌ನಿಗೆ ಇವನು ಪುಕ್ಕಲು ಸ್ವಭಾವದವನೆಂಬುದು ಗೊತ್ತಾಯಿತು. ಅವನನ್ನು ತನ್ನ ಆಸ್ಥಾನಕ್ಕೆ ಕರೆಸಿ ಕೇಳಿದ. “ಯಾವುದಕ್ಕೂ ಹೆದರಬಾರದೆಂದು ನೀವು ಬೋಧಿಸುವಿರಾ?”

“ಹೌದು” ವುಲ್ಫ್‌ ಹೇಳಿದ.

“ದಯಾಮಯನಾದ ಭಗವಂತನಲ್ಲಿ ನಂಬಿಕೆಯಿಡಬೇಕೆಂದು ನೀವು ಉಪದೇಶಿಸುವಿರಾ?”

“ಹೌದು”

“ಹಾಗಾದರೆ ಆನೆಯ ಮೇಲೆ ಕುಳಿತು ಸಿಂಧೂ ನದಿಯನ್ನು ತೂಗು ಸೇತುವೆ ಮೇಲೆ ದಾಟುವಾಗ ಏಕೆ ಹೆದರಿದಿರಿ?” ಜೋಸೆಫ್ ವುಲ್ಫ್ ನಾಚಿ ತನ್ನ ದೌರ್ಬಲ್ಯವನ್ನು ಒಪ್ಪಿಕೊಂಡ. “ನೀವು ಧರ್ಮ ಪ್ರಸಾರ ಮಾಡುತ್ತಿದ್ದರೆ ಧರ್ಮ ಬಾಹಿರರಾದ ಇಂಗ್ಲಿಷರಿಗೆ ಏಕೆ ಬೋಧಿಸುವುದಿಲ್ಲ”? ಎಂದು ಆತನನ್ನು ಕೇಳಿದ ರಣಜಿತ್‌ ಸಿಂಗ್‌. ಬ್ರಿಟಿಷರು ಕಪಟಿಗಳು, ಸಮಯ ಸಾಧಕರು ಎಂದು ರಣಜಿತ್‌ ಸಿಂಗ್‌ ತೀರ್ಮಾನಿಸಿದ್ದನು.

ಶಿಸ್ತಿನ ಸಿಪಾಯಿ

ಮಹಾರಾನ ರಣಜಿತ್‌ ಸಿಂಗ್‌ ವೈಯಕ್ತಿಕ ಜೀವನ ಅವನ ರಾಜಕೀಯ ಜೀವನದಷ್ಟೇ ವರ್ಣಮಯವಾಗಿದ್ದಿತು. ಸೈನಿಕನಾಗಿ ಸದಾ ಶಿಸ್ತಿನ ಜೀವನವನ್ನು ನಡೆಸಿದನು. ದಿನವೂ ತಪ್ಪದೆ ವ್ಯಾಯಾಮ ಮಾಡುತ್ತಿದ್ದನು. ಬೆಳಿಗ್ಗೆ ಸಂಜೆ ಕುದುರೆ ಸವಾರಿ ಮಾಡುತ್ತಿದ್ದನು. ಅವನ ದೈಹಿಕ ಶಕ್ತಿ ಅಸಾಧಾರಣವಾಗಿತ್ತು. ಮಹಾರಾಜನ ಆಪ್ತನಾಗಿದ್ದ ಅಜೀಜುದ್ದಿನ್ ಆತನನ್ನು “ದೋಷ ರಹಿತವಾದ ಮುತ್ತು” ಎಂದು ವರ್ಣಿಸಿದ್ದಾನೆ. ಅವನ ಆರೋಗ್ಯ ಯಾವಾಗಲೂ ಉತ್ತಮ ರೀತಿಯಲ್ಲಿರುತ್ತಿತ್ತು.

ರಣಜಿತ್‌ ಸಿಂಗ್‌ ಶಕ್ತಿಶಾಲಿಯಾಗಿದ್ದರೂ ರೂಪವಂತನಾಗಿರಲಿಲ್ಲ. ಅಷ್ಟೇನೂ ಎತ್ತರವಲ್ಲದ ದೇಹ. ಸಿಡುಬಿನ ಕಲೆಗಳಿಂದ ಕೂಡಿದ ಮುಖ. ಅವನಿಗೆ ಒಂದೇ ಕಣ್ಣು. ಅವನು ನೋಡಕ್ಕೆ ರೂಪವಂತನಲ್ಲದಿದ್ದರೂ ತೇಜಸ್ವಿಯಾಗಿದ್ದನು. ಅವನ ಒಂದೇ ಕಣ್ಣು ಸದಾ ಕೆಂಡದಂತೆ ಹೊಳೆಯುತ್ತಿತ್ತು.

ಯಾವ ಕಣ್ಣು ಕುರುಡು?

ಒಮ್ಮೆ ಅವನ ಆಪ್ತ ಅಧಿಕಾರಿ ಫಕೀರ ಅಜೀಜುದ್ದೀನನ್ನು ಯಾರೋ ಕೇಳಿದರಂತೆ “ಮಹಾರಾಜನಿಗೆ ಯಾವ ಕಣ್ಣು ಕುರುಡು?” ಎಂದು. ಅದಕ್ಕೆ ಆತ “ಅವನ ಮುಖ ಕಾಂತಿ ಎಷ್ಟು ತೀಕ್ಷ್ಣವಾಗಿದೆಯೆಂದರೆ ನಾನು ಅದನ್ನು ಹತ್ತಿರದಿಂದ ದಿಟ್ಟಿಸಿ ನೋಡಲು ಸಾಧ್ಯವಿಲ್ಲ” ಎಂದು ಉತ್ತರಿಸಿದನಂತೆ! ಅವನ ರೂಪವನ್ನು ಮತ್ತು ಸಾಮರ್ಥ್ಯ, ಆಕಾಂಕ್ಷೆಯನ್ನು ವಿವರಿಸುವ ಇನ್ನೊಂದು ಕಥೆ ಇದೆ. ಅಷ್ಟೇನು ಸುಂದರವಲ್ಲದ ಅವನ ಮುಖವನ್ನು ನೋಡಿ ಅವನ ಪ್ರೇಯಸಿ ಅವನನ್ನು ಛೇಡಿಸಿದಳು, “ದೇವರು ಸೌಂದರ್ಯವನ್ನು ಹಂಚುತ್ತಿದ್ದಾಗ ನೀನೇನು ಮಾಡುತ್ತಿದ್ದೆ” ರಣಜಿತ್‌ ಸಿಂಗ್‌ ಅವಿಚಲನಾಗಿ ಉತ್ತರವಿತ್ತ. “ನಾನು ರಾಜ್ಯವೊಂದನ್ನು ಕಟ್ಟುವುದರಲ್ಲಿ ನಿರತನಾಗಿದ್ದೆ”!

ಸರ್ಕಾರದ ಕೆಲಸ ಮೊದಲು

ರಣಜಿತ್‌ ಸಿಂಗ್‌ ರಸಿಕ, ವಿಲಾಸಿ ಮತ್ತು ಸ್ನೇಹ ಪರನಾಗಿದ್ದ. ಅವನಿಗೆ ಬಾಲ್ಯದಲ್ಲಿಯೇ ಕುಡಿತದ ಅಭ್ಯಾಸ ಅಂಟಿಕೊಂಡಿತ್ತು. ಉತ್ತಮವಾದ ಅಶ್ವಗಳು ಎಂದರೆ ಅವನಿಗೆ ಬಹಳವಾದ ಆಸಕ್ತಿ. ರಣಜಿತ್‌ ಸಿಂಗ್‌ನಿಗೆ ಹಲವು ದುಶ್ಚಟಗಳಿದ್ದರೂ ಅವನು ತನ್ನ ಕರ್ತವ್ಯವನ್ನು ಕಡೆಗಣಿಸಿ ಭೋಗ ವಿಲಾಸಗಳಲ್ಲಿ ತೊಡಗಲಿಲ್ಲ. ರಾಜ್ಯದ ಕೆಲಸಕ್ಕೆ ಅವನು ಮೊದಲು ಗಮನ ಕೊಡುತ್ತಿದ್ದನು. ಬೆಳಗಿನ ಜಾವದಿಂದ ರಾತ್ರಿಯವರೆಗೂ ಕುಳಿತು ಸರ್ಕಾರದ ವ್ಯವಹಾರಗಳನ್ನು ಗಮನಿಸುತ್ತಿದ್ದನು. ಕೆಲವು ವೇಳೆ ಕಾಯಿಲೆ ಇದ್ದರೂ ಕೂಡ ಪ್ರಜೆಗಳ ಅರ್ಜಿಗಳನ್ನು, ಸಮಸ್ಯೆಗಳನ್ನು ವಿಚಾರಿಸುತ್ತಾ ಆ ಸ್ಥಾನದಲ್ಲಿ ಕುಳಿತು ಬಿಡುತ್ತಿದ್ದನು. ಈ ರೀತಿ ಪ್ರಜೆಗಳ ಅನುಕೂಲಕ್ಕಾಗಿ ಅವನು ಬಹಳ ಮಟ್ಟಿಗೆ ಶ್ರಮಿಸುತ್ತಿದ್ದನು. ಅಧಿಕಾರಿಗಳು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದಾಗ ಅದನ್ನು ಗುರುತಿಸಿ ಬಹುಮಾನಗಳನ್ನು ಕೊಡುತ್ತಿದ್ದನು. ಇದರಿಂದ ಅಧಿಕಾರಿಗಳು ನಿಸ್ಪೃಹರಾಗಿ ಕೆಲಸ ಮಾಡಲು ಪ್ರೋತ್ಸಾಹದ ವಾತಾವರಣ ಏರ್ಪಟ್ಟಿದ್ದಿತು. ರಾಜ್ಯದಲ್ಲಿ ಸಂಚಾರ ಕೈಗೊಂಡು ಜನರ ಕಷ್ಟ-ಸುಖಗಳನ್ನು ವಿಚಾರಿಸುತ್ತಿದ್ದ. ಇದರಿಂದ ಅಧಿಕಾರಿಗಳು ದಕ್ಷರಾಗಿರುತ್ತಿದ್ದರು. ಭ್ರಷ್ಟಾಚಾರ ಕಡಿಮೆಯಾಯಿತು.

ವಿದೇಶಿಯರ ಪ್ರಶಂಸೆ

“ಪಂಜಾಬಿನ ಸಿಂಹ” ಎಂದು ಪ್ರಪಂಚದಲ್ಲಿ ಪ್ರಸಿದ್ಧವಾಗಿರುವ ರಣಜಿತ್‌ ಸಿಂಗ್‌ ಸಿಖ್ಖರಲ್ಲಿ ಅತ್ಯಂತ ಜನಪ್ರಿಯನಾಗಿದ್ದ, ದೊರೆಯಾಗಿದ್ದ. ಅವನ ದಕ್ಷ ಆಡಳಿತದಿಂದ ರಾಜ್ಯದಲ್ಲಿ ಶಾಂತಿ, ಸುಭಿಕ್ಷ ನೆಲೆಸಿತ್ತು. ಬರ್ನೆಸ್ ಎಂಬ ಇಂಗ್ಲಿಷ್ ಯಾತ್ರಿಕ” ವಿದ್ಯೆ ಇಲ್ಲದೆ, ಇತರರ ಮಾರ್ಗದರ್ಶನವಿಲ್ಲದೆ ಈ ದೊರೆ ಅಸಾಧಾರಣ ಶಕ್ತಿಯಿಂದ ರಾಜ್ಯದ ವ್ಯವಹಾರಗಳನ್ನು ನಿರ್ವಹಿಸುತ್ತಾನೆ” ಎಂದು ತಿಳಿಸಿದ್ದಾನೆ. ಅವನನ್ನು ನೋಡಿದ ವಿದೇಶಿಯರೆಲ್ಲ ಅವನ ಬುದ್ಧಿಶಕ್ತಿ, ಸಾಮರ್ಥ್ಯ, ಜನ ಸೇವೆಯನ್ನು ಹೊಗಳಿದ್ದಾರೆ. ಎಮಿಲಿ ಈಡನ್ ಎಂಬ ಇಂಗ್ಲಿಷ್ ಮಹಿಳೆ ಈ ದೊರೆಯನ್ನು ಮೆಚ್ಚ ಹೀಗೆ ಬರೆಯುತ್ತಾಳೆ: “ಅವನು ತನ್ನ ಸಾಮರ್ಥ್ಯದಿಂದಲೇ ಪ್ರಖ್ಯಾತ ದೊರೆ ಎನಿಸಿಕೊಂಡಿದ್ದಾನೆ. ಅನೇಕ ಪ್ರಬಲ ಶತ್ರುಗಳನ್ನು ಗೆದ್ದಿದ್ದಾನೆ, ನ್ಯಾಯ ನಿಷ್ಠೆಯಿಂದ ರಾಜ್ಯವನ್ನಾಳುತ್ತಾನೆ. ಈತನು ಯಾರನ್ನೂ ಕೊಲ್ಲಲು ಇಷ್ಟಪಡುವುದಿಲ್ಲ. ದರ್ಪಿಷ್ಠ ಪ್ರಭುಗಳಲ್ಲಿ ಇದು ಆಶ್ಚರ್ಯಕರವಾದುದು. ಈತನು ತನ್ನ ಪ್ರಜೆಗಳ ಪ್ರೀತಿಪಾತ್ರನಾದ ದೊರೆಯಾಗಿದ್ದಾನೆ.”

ನಾನು ರಾಜ್ಯವೊಂದನ್ನು ಕಟ್ಟುವುದರಲ್ಲಿ ನಿರತನಾಗಿದ್ದೆ

ಮಹಾರಾಜನ ಮರಣ

ಹೀಗೆ ಸರ್ವಾದರಣೀಯನಾಗಿದ್ದ ಮಹಾರಾಜ ರಣಜಿತ್‌ ಸಿಂಗ್‌ ೧೮೩೯ ರಲ್ಲಿ ತನ್ನ ೬೦ ನೇ ವಯಸ್ಸಿನಲ್ಲಿ ಮರಣ ಹೊಂದಿದ. ಅವನ ಮರಣದಿಂದ ಪಂಜಾಬಿನ ಜನರೆಲ್ಲಾ ಅತೀವ ಶೋಕಕ್ಕೊಳಗಾದರು. ಅವನ ಮರಣಾನಂತರ ಅವನ ರಾಜ್ಯದ ಅವನತಿ ಪ್ರಾರಂಭವಾಯಿತು. ಅವನ ಮಗ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ಸತ್ತು ಹೋದನು. ಅವನ ಮೊಮ್ಮಗನು ಅಧಿಕಾರಕ್ಕೆ ಬಂದ ಕೂಡಲೇ ಮರಣ ಹೊಂದಿದನು. ಬಹು ಬೇಗ ರಾಜ್ಯದಲ್ಲಿ ಅನಾಯಕತೆ ತಲೆದೋರಿತು. ಅಶಿಸ್ತು ಅವ್ಯವಸ್ಥೆ ಹೆಚ್ಚಿತು .ಪಂಜಾಬಿನಲ್ಲಿ ಉಲ್ಬಣ ಪರಿಸ್ಥಿತಿ ಉಂಟಾಯಿತು. ಬ್ರಿಟಿಷರು ಪಂಜಾಬನ್ನು ವಶಪಡಿಸಿಕೊಂಡರು. ಈ ರೀತಿ ಮಹಾರಾಜ ರಣಜಿತ್‌ ಸಿಂಗ್‌ ಅತ್ತ ಆರು ವರ್ಷಗಳೊಳಗಾಗಿ ಅವನ ರಾಜ್ಯವು ವಿದೇಶಿಯರ ಪಾಲಾಯಿತು.

ಸಿಖ್ ರಾಜ್ಯ ಅಷ್ಟು ಬೇಗ ನಾಶವಾಗಲು ರಣಜಿತ್‌ ಸಿಂಗ್‌ನ ಆಳ್ವಿಕೆಯ ಕೆಲವು ದೋಷಗಳು ಕಾರಣ ಎಂದು ಚರಿತ್ರಕಾರರು ಹೇಳುತ್ತಾರೆ. ಅವನು ಅಧಿಕಾರವನ್ನೆಲ್ಲಾ ತನ್ನ ಕೈಯಲ್ಲಿಟ್ಟುಕೊಂಡಿದ್ದ. ಸಮರ್ಥರಾದ ಉತ್ತರಾಧಿಕಾರಿಯನ್ನು ಬಿಟ್ಟು ಹೋಗಲಿಲ್ಲ ಎಂದು ಹೇಳಲಾಗಿದೆ. ಬ್ರಿಟಿಷರ ಬಗ್ಗೆ ಅವನು ಅನುಸರಿಸಿದ ನೀತಿ ಸರಿಯಾದುದಲ್ಲ. ಬ್ರಿಟಿಷರನ್ನು ರಣಜಿತ್ ಸಿಂಗ್ ಸೋಲಿಸಬಹುದಾಗಿತ್ತು. ರಣಜಿತ್ ಸಿಂಗ್ ಅವರನ್ನು ಎದುರಿಸುವ ಬದಲು ಅವರಿಗೆ ಶರಣಾಗತವಾದ ಎಂಬ ಆರೋಪವಿದೆ.

ಸಬ್ಲಾಲ್ ಹೋ ಜಾಯೆಗಾ

ಆದರೆ ರಣಜಿತ್‌ ಸಿಂಗ್‌ ಒಬ್ಬ ವಾಸ್ತವವಾದಿಯಾಗಿದ್ದ. ನಮ್ಮ ದೇಶದ ಸ್ಥಿತಿ ಅವನಿಗೆ ಚೆನ್ನಾಗಿ ಗೊತ್ತಿತ್ತು. ಬ್ರಿಟಿಷರ ಸಾಮರ್ಥ್ಯ ಅವನಿಗೆ ತಿಳಿದಿತ್ತು. ಅವರೊಂದಿಗೆ ಯುದ್ಧವಾದರೆ ತಾನು ಸೋಲುವುದಲ್ಲದೆ ತನ್ನ ರಾಜ್ಯವೂ ನಾಶವಾಗುವುದೆಂದು ಅವನು ಭಾವಿಸಿದ್ದ. ಭಾರತದಲ್ಲಿ ಬ್ರಿಟಿಷರ ಸಾಮ್ರಾಜ್ಯದ ಬೆಳವಣಿಗೆಯನ್ನು ತಾನು ತಡೆಯಲು ಸಾಧ್ಯವಿಲ್ಲವೆಂದು ಅವನು ಮನಗೊಂಡಿದ್ದನು. ಒಂದು ದಿನ ಅವನ ಅಧಿಕಾರಿಯೊಬ್ಬ ಭೂಪಟದಲ್ಲಿ ಭಾರತದಲ್ಲಿ ಬ್ರಿಟಿಷರು ಆಕ್ರಮಿಸಿಕೊಂಡಿದ್ದ ಪ್ರದೇಶಗಳನ್ನು ತೋರಿಸುತ್ತಿದ್ದ. ಆ ಭಾಗಗಳನ್ನು ಕೆಂಪು ಬಣ್ಣದಿಂದ ಗುರುತಿಸಲಾಗಿತ್ತು. ಅದನ್ನು ಸ್ವಲ್ಪ ಕಾಲ ದಿಟ್ಟಿಸಿ ನೋಡಿ ರಣಜಿತ್‌ ಸಿಂಗ್‌ ಹೇಳಿದ “ಸಬ್ ಲಾಲ್ ಹೋ ಜಾಯೆಗಾ” (ಎಲ್ಲವೂ ಕೆಂಪಾಗುತ್ತದೆ).

ರಣಜಿತ್‌ ಸಿಂಗ್‌ನನ್ನು ಭಾರತೀಯರ ಕೊನೆಯ ಸಮರ್ಥ ದೊರೆ ಎಂದು ಕರೆಯಲಾಗಿದೆ. ಪೌರ್ವಾತ್ಯ ಸಾಮ್ರಾಜ್ಯವನ್ನು ಕಟ್ಟಲು ಅಗತ್ಯವಾದ ಗುಣಗಳು ಅವನಲ್ಲಿದ್ದುವು.

ಅವನಲ್ಲಿ ಕೆಲವು ದೌರ್ಬಲ್ಯಗಳಿದ್ದರೂ ಅವನೊಬ್ಬ ಆಕರ್ಷಕ ವ್ಯಕ್ತಿಯಾಗಿದ್ದ. ದಕ್ಷ ರೀತಿಯಿಂದ ರಾಜ್ಯವಾಳಿದ. ಆಧುನಿಕಪದ್ಧತಿಗಳ ಕಡೆ ಒಲವು ತೋರಿ ಒಳ್ಳೆಯ ಆಡಳಿತ ಪದ್ಧತಿಯನ್ನೂ ಸ್ಥಾಪಿಸಿದ. ಒಡೆದು ಹೋಗಿದ್ದ ಸಿಖ್ಖರನ್ನು ಒಂದು ಗೂಡಿಸಿದ. ಸೈನ್ಯ ಶಕ್ತಿಯಿಂದ ಒಂದು ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದ. ಮೊಘಲ್ ಸಾಮ್ರಾಜ್ಯವು ನಾಶವಾದ ಮೇಲೆ ಭಾರತದಲ್ಲಿ ಆಳಿದ ಅರಸರಲ್ಲಿ ಅತ್ಯಂತ ಸಮರ್ಥನಾಗಿದ್ದ ರಣಜಿತ್‌ ಸಿಂಗ್‌. ಈ ಪಂಜಾಬಿನ ಸಿಂಹನ ಜೀವನ, ಸಾಧನೆ ಸಿಖ್ಖರಿಗೆ ಮಾತ್ರವಲ್ಲ ಭಾರತೀಯರಿಗೆಲ್ಲಾ ಸ್ಫೂರ್ತಿದಾಯಕವಾಗಿದೆ.