ಬಾಲಕನಿದ್ದ. ಒಂದು ಸುಂದರ ಸಂಜೆ ಆ ಬಾಲಕ ಹಾಲಿನ ಬಣ್ಣದ ಸೊಗಸಾದ ಕುದುರೆಯ ಮೇಲೆ ಠೀವಿಯಿಂದ ಕುಳಿತು ಸವಾರಿ ಮಾಡುತ್ತಾ ಮನೆಯ ಮುಂಭಾಗಕ್ಕೆ ಬಂದ. ತಂದೆ ಅವನಿಗಾಗಿಯೇ ಕಾದಿದ್ದರು. ಕುದುರೆಯಿಂದ ಇಳಿದು ಹುಡುಗ ಅವರಿಗೆ ಮೈಸೂರು ರಾಜ್ಯ. ಅಲ್ಲೊಂದು ಸಣ್ಣ ಗ್ರಾಮ. ಆ ಗ್ರಾಮದ ಹೆಸರು ತೆರಕಣಾಂಬಿ. ಅಲ್ಲೊಬ್ಬ ಹನ್ನೆರಡು ವರ್ಷದ ನಮಸ್ಕಾರ ಮಾಡಿದ.

ಸಿಂಹಾಸನ ನೋಡುವುದು ಯಾವಾಗ?”

ತಂದೆ ಮಗನನ್ನು ಪ್ರೀತಿಯಿಂದ ತಬ್ಬಿಕೊಂಡು ಅವನ ತಲೆ ನೇವರಿಸಿ ಕೇಳಿದರು:

“ಮಗೂ ಕಂಠೀರವ, ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ದೆ? ಊಟ, ತಿಂಡಿ, ವಿಶ್ರಾಂತಿ ಎಲ್ಲವನ್ನೂ ಅಲಕ್ಷ್ಯ ಮಾಡಿ ಕುದುರೆ ಸವಾರಿ ಮಾಡುತ್ತಿದ್ದೆಯಾ?”

“ಹೌದು ಅಪ್ಪಾಜಿ, ಕುದುರೆ ಸವಾರಿ, ಕತ್ತಿ ವರಸೆ ಮಡುವುದನ್ನು ಚೆನ್ನಾಗಿ ಕಲಿತುಕೊಂಡರೆ ರಾಜಧಾನಿಗೆ ಕಳುಹಿಸುತ್ತೇನೆಂದು ನೀವೆ ಆ ದಿನ ಹೇಳಿದಿರಲ್ಲ……..? ಅಪ್ಪಾಜಿ ………?

“ಏನು ಮಗು?”

“ನನ್ನನ್ನು ನೀವು ಯಾವಾಗ ರಾಜಧಾನಿಗೆ ಕಳುಹಿಸುತ್ತೀರಿ? ನಾನು ಸಿಂಹಾಸನವನ್ನು ನೋಡುವುದು ಯಾವಾಗ?”

ಸ್ವದೇಶದ ಮೇಲೆ ಮಗನಿಗಿದ್ದ ಅಭಿಮಾನ, ಆಸಕ್ತಿ ಕಂಡು ತಂದೆಯ ಹೃದಯ ಹಿಗ್ಗಿನಿಂದ ಕುಣಿಯಿತು. ತಂದೆ ಮೊದಲು ಮೈಸೂರು ರಾಜ್ಯಕ್ಕೆ ರಾಜರಾಗಿದ್ದ ಬೆಟ್ಟದ ಚಾಮರಾಜ ಒಡೆಯರು.

ಚಿಕ್ಕ ವಯಸ್ಸಿನ ಆ ಬಾಲಕ ಸಾಹಸಿ. ಅವನ ಮಯಸ್ಸು ಕೇವಲ ಹನ್ನೆರಡಾಗಿದ್ದರೂ ಮೈಸೂರಿನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣಕ್ಕೆ ಹೋಗಿ ಸಿಂಹಾಸನವನ್ನು ನೋಡುವ ಬಯಕೆ.

ಹದಿನಾರನೆಯ ವಯಸ್ಸಿನಲ್ಲಿ ಅವನ ಬಹುದಿನದ ಆಸೆ ನೆರವೇರಿತು. ಅವನು ರಾಜಧಾನಿಗೆ ಹೋದ. ಆ ಪವಿತ್ರ ಸಿಂಹಾಸನವನ್ನು ನೋಡಿದ. ಅಷ್ಟೇ ಅಲ್ಲದೆ ಇಪ್ಪತ್ತಮೂರನೆಯ ಮಯಸ್ಸಿನಲ್ಲಿ ಆ ಹುಡುಗ ಅದೇ ಸಿಂಹಾಸನದ ಮೇಲೆ ಕುಳಿತು ಇಪ್ಪತ್ತೊಂದು ವರ್ಷಗಳ ಕಾಲ ಬುದ್ಧಿವಂತಿಕೆಯಿಂದ, ಧೈರ್ಯದಿಂದ ಮೈಸೂರು ರಾಜ್ಯವನ್ನು ಆಳಿದ. ಅನೇಕ ಸಾಹಸ ಕೆಲಸಗಳನ್ನು ಮಾಡಿ, ಸ್ಥಿರವಾದ ಕೀರ್ತಿ, ಯಶಸ್ಸನ್ನು ಸಂಪಾದಿಸಿದ.

ಮೈಸೂರು ರಾಜ್ಯವನ್ನು ಅನೇಕ ಸಮರ್ಥ, ಶಕ್ತಿವಂತ ರಾಜರು ಆಳಿದರು. ಅವರಲ್ಲಿ ಅತ್ಯಂತ ವಿವೇಕಿಗಳೂ, ಶೂರರೂ ಆದ ಕಂಠೀರವ ಒಡೆಯರು ರಣಧೀರರು, ದಕ್ಷ ಆಡಳಿತಗಾರರು ಮತ್ತು ನಮ್ಮ ದೇಶದ ಧರ್ಮ, ಸಂಸ್ಕೃತಿಯನ್ನು ರಕ್ಷಣೆ ಮಾಡಿದ ಜನಪಾಲಕರು, ಜನಸೇವಕರು ಎಂದು ಪ್ರಖ್ಯಾತರಾದರು. ಸಾಹಸಕ್ಕೇ ಮತ್ತೊಂದು ಹೆಸರು ರಣಧೀರ ಕಂಠೀರವ ಎನ್ನುವಂತಾಯಿತು.

ಕಂಠೀರವನ ಸೇವೆಗೆ ನಾವು ಮುಡಿಪು”

ಬೆಟ್ಟದ ಚಾಮರಾಜ ಒಡೆಯರು ರಾಜಕೀಯ ವಾತಾವರಣ, ಕೃತ್ರಿಮಗಳಿಂದ ಬೇಸರ ಹೊಂದಿ, ತಮ್ಮನಾದ ರಾಜ ಒಡೆಯರನ್ನು ಸಿಂಹಾಸನದ ಮೇಲೆ ಕೂರಿಸಿ ತಾವು ತೆರಕಣಾಂಬಿ ಗ್ರಾಮಕ್ಕೆ ಹೊರಟುಹೋದರು. ಗ್ರಾಮದ ಸುಂದರ, ಶಾಂತ ವಾತಾವರಣ, ಸರಳ ಜೀವನ ಅವರ ಮನಸ್ಸಿಗೆ ಹಿಡಿಸಿತು.

ಅವರಿಗೆ ೧೬೧೫ರಲ್ಲಿ ಒಂದು ಮುದ್ದಾದ ಗಂಡು ಮಗು ಹುಟ್ಟಿತು. ಆ ಮಗು ನರಸಿಂಹ ಜಯಂತಿಯ ಶುಭ ದಿನದಂದು ಹುಟ್ಟಿತು. ಮಗುವಿಗೆ “ಕಂಠೀರವ ನರಸಿಂಹ” ಎಂದು ನಾಮಕರಣ ಮಾಡಿದರು. (ಕಂಠೀರವ ಎಂದರೆ ಸಿಂಹ).

ಕಂಠೀರವನಿಗೆ ಚಿಕ್ಕಂದಿನಿಂದಲೇ ಭಯ ಎನ್ನುವುದಿಲ್ಲ. ಮಗನನ್ನು ಕಂಡರೆ ತಂದೆಗೆ ತುಂಬ ಪ್ರೀತಿ, ಅಭಿಮಾನ. ಮಗನಿಗೂ ತಂದೆಯಲ್ಲಿ ಅಪಾರ ಗೌರವ, ವಿಧೇಯತೆ. ಹನ್ನೆರಡನೆಯ ವಯಸ್ಸಿನಲ್ಲೇ  ಕಂಠೀರವ ಕುದುರೆ ಸವಾರಿ, ಕತ್ತಿ ವರಸೆ ಮತ್ತು ಮಲ್ಲ ಯುದ್ಧಗಳಲ್ಲಿ ಆಸಕ್ತಿ ಹೊಂದಿದ. ಚಾಮರಾಜ ಒಡೆಯರಿಗೂ ಇದರಿಂದ ಬಹಳ ಸಂತೋಷವಾಯಿತು. ರಾಜನಿಗೆ ಯೋಗ್ಯವಾದ ಎಲ್ಲ ವಿದ್ಯೆಗಳನ್ನೂ ಮಗನಿಗೆ ಕಲಿಸಲು ಏರ್ಪಾಡು ಮಾಡಿದರು. ಕಂಠೀರವ ಕತ್ತಿ, ಭಲ್ಲೆ, ಚಾಕು, ಕಠಾರಿ, ಚಕ್ರಾಯುಧ ಮುಂತಾದ ಆಯುಧಗಳೊಡನೆ ಯುದ್ಧ ಮಾಡುವುದನ್ನು ಕಲಿತುಕೊಂಡ. ಮಲ್ಲಯುದ್ಧದಲ್ಲಿ ಅವನಿಗೆ ತುಂಬ ಪ್ರೀತಿ. ಅದಕ್ಕಾಗಿ ಅವನು ಸುತ್ತುಮುತ್ತಲಿಲ್ಲದ್ದ ಹಳ್ಳಿಗಳಿಂದ ಇಪ್ಪತ್ತು ಮೂವತ್ತು ಮಂದಿ ಬಲಿಷ್ಠ ಯುವಕರನ್ನು ಕರೆಸಿಕೊಂಡು ಒಂದು ಮಲ್ಲ ಶಾಲೆಯನ್ನು ಪ್ರಾರಂಭಿಸಿದ. ಪ್ರತಿದಿನವೂ ಅಭ್ಯಾಸ ಮಾಡಿ ಮಲ್ಲವಿದ್ಯೆಯನ್ನು ಕಲಿತುಕೊಂಡ. ಗೆಳೆಯರೆಲ್ಲ ಕಂಠೀರವನ ಪ್ರಚಂಡ ಶಕ್ತಿ, ಸದ್ಗುಣಗಳನ್ನು ಮೆಚ್ಚಿಕೊಂಡು ಅವನ ಪ್ರೀತಿಯ, ನೆಚ್ಚಿನ ಗೆಳೆಯರಾದರು. ಕಂಠೀರವನು ಅವರೊಂದಿಗೆ ತುಂಬ ಸಲಿಗೆ ಸ್ನೇಹದಿಂದಿದ್ದ, ಸರಿ ಸಮಾನವಾಗಿ ಬೆರೆಯುತ್ತಿದ್ದ. ಆ ಸ್ನೇಹಿತರೆಲ್ಲ ಒಂದು ದಿನ ಕಂಠೀರವನಿಗೆ ಗೊತ್ತಾಗದಂತೆ ಒಟ್ಟಾಗಿ ಸೇರಿ ಪ್ರತಿಜ್ಞೆ ಮಾಡಿದರು:

“ಕಂಠೀರವ ನಮ್ಮೆಲ್ಲರಿಗೂ ಪ್ರೀತಿಯ ಸ್ನೇಹಿತ, ಧೀರ, ಸದ್ಗುಣಿ. ಈ ನಾಡಿನ ಏಳಿಗೆಗಾಗಿ ದುಡಿಯಬೇಕೆಂದು ಅವನ ಹಿರಿಯಾಸೆ. ಅವನ ಆಸೆಯನ್ನು ನಡೆಸಲು ನಾವೆಲ್ಲರೂ ನಮ್ಮ ಪ್ರಾಣಗಳನ್ನೇ ಮುಡಿಪಾಗಿಟ್ಟು ಅವನಿಗೆ ಕೈಲಾದ ಸಹಾಯ ಮಾಡೋಣ” ಎಲ್ಲರೂ ನುಡಿದಂತೆ ನಡೆದುಕೊಂಡರು.

ಚಾಮರಾಜ ಒಡೆಯರು ರಾಜಕೀಯದಿಂದ ದೂರವಾಗಿದ್ದರೂ ವೈಭವದಿಂದ ಮೆರೆದ ಮೈಸೂರು ರಾಜ್ಯ, ಹಿಂದಿನ ರಾಜರುಗಳು ಸಾಧನೆ, ಅಡಳಿತದ ವಿಷಯವನ್ನೆಲ್ಲ ಮಗನಿಗೆ ತಿಳಿಸಿದರು. ಧೀರ ಮಗನಿಗೆ ತಂದೆ ಒಳ್ಳೆಯ ಶಿಕ್ಷಣವನ್ನೆ ಕೊಟ್ಟರು.

ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತೇನೆ”

ಒಂದು ದಿನ ಚಾಮರಾಜ ಒಡೆಯರು ಮಗನನ್ನು ಪಕ್ಕದಲ್ಲಿ ಪ್ರೀತಿಯಿಂದ ಕೂರಿಸಿಕೊಂಡು ಹೇಳಿದರು:

“ಕಂಠೀರವ, ಕುದುರೆ ಸವಾರಿ ಮಾಡುವುದನ್ನು ಚೆನ್ನಾಗಿ ಕಲಿತುಕೊಂಡಿದ್ದೀಯಾ?”

“ಹುಂ……. ಅಪ್ಪಾಜಿ, ನನ್ನನ್ನು ನೀವು ಯಾವಾಗ ರಾಜಧಾನಿಗೆ ಕಳುಹಿಸುತ್ತೀರಿ?”

“ಆತುರ ಪಡಬೇಡ ಕಂಠೀರವ…….. ನೀನಿನ್ನೂ ಚಿಕ್ಕವನು. ಶ್ರದ್ಧೆಯಿಟ್ಟು ಎಲ್ಲ ವಿದ್ಯೆಗಳನ್ನೂ ಕಲಿತುಕೊಂಡು ಬುದ್ಧಿವಂತನಾಗು. ಚೆನ್ನಾಗಿ ಕತ್ತಿ ವರಸೆ, ಕುದರೆ ಸವಾರಿ ಮಾಡುವುದನ್ನು ಕಲಿ. ಪಟ್ಟಣದ ಜನ, ಅರಮನೆಯವರು ನಿನ್ನನ್ನು ನೋಡಿ “ಹಳ್ಳಿಯವನು” ಎಂದು ಹಾಸ್ಯ ಮಾಡಿ ನಕ್ಕರೆ ನಿನಗೆ ಅವಮಾನವಲ್ಲವೇ? ನನಗೂ ತಲೆ ತಗ್ಗಿಸುವಂತಾಗುವುದಿಲ್ಲವೇ?”

“ನಿಮ್ಮ ಮತು ನಿಜ ಅಪ್ಪಾಜಿ. ನಿಮಗೆ ಅವಮಾನವಾಗುವಂತಹ ಯಾವ ಕೆಲಸವನ್ನೂ ನಾನು ಮಾಡುವುದಿಲ್ಲ.

“ಕಂಠೀರವ ಮೈಸೂರು ಸಿಂಹಾಸನ ಸಾಮಾನ್ಯವಾದ ಸಿಂಹಾಸನವಲ್ಲ. ಅದು ಅತ್ಯಂತ ಪ್ರಾಚೀನದ, ಪವಿತ್ರವಾದ ಸಿಂಹಾಸನ. ಆ ಸಿಂಹಾಸನ ಮಹಾಭಾರತದ ಧರ್ಮರಾಯನದು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಪರಾಕ್ರಮಶಾಲಿಗಳು, ಪ್ರಜೆಗಳ ಹಿತವನ್ನೇ ಬಯಸಿದ ಎಷ್ಟೋ ಮಂದಿ ರಾಜರು ಆ ಸಿಂಹಾಸನದ ಮೇಲೆ ಕುಳಿತು ರಾಜ್ಯವನ್ನಾಳಿದರು. ದುಷ್ಟರನ್ನು, ಶತ್ರುಗಳನ್ನು ಸದೆಬಡಿದು, ಅಧರ್ಮ, ಅನ್ಯಾಯಗಳನ್ನು ತುಳಿದು ಹಾಕಿದರು. ರಾಜ್ಯವನ್ನು ರಕ್ಷಣೆ ಮಾಡಿ ಪ್ರಜೆಗಳ ಸೇವೆ ಮಾಡಿದವರು. ಅಂತಹವರೇ ಅದರಲ್ಲಿ ಕುಳಿತುಕೊಳ್ಳಬೇಕು.”

ಕಂಠೀರವನ ಮುಖ ಉತ್ಸಾಹದಿಂದ ಅರಳಿತು.

“ಅಪ್ಪಾಜಿ, ನೋಡುತ್ತೀರಿ…… ನಾನೂ ಆ ಸಿಂಹಾಸನದ ಮೇಲೆ ಕುಳಿತು ಮೈಸೂರು ರಾಜ್ಯವನ್ನು ಆಳುತ್ತೇನೆ. ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತೇನೆ. ಶತ್ರುಗಳನ್ನು ಕತ್ತರಿಸಿ ಹಾಕಿ ರಾಜ್ಯವನ್ನು ಕಾಪಾಡುತ್ತೇನೆ. …….

ಮಗನ ಧೀರ ಮಾತುಗಳನ್ನು ಕೇಳಿ ತಂದೆ ಸಂತೋಷಪಟ್ಟರು. ಮಗನ ತಲೆಯ ಮೇಲೆ ಕೈಇಟ್ಟು ಆಶೀರ್ವಾದ ಮಾಡಿದರು. ಅವರು ಮಗನಿಗೆ ರಾಜನ ಧರ್ಮವೇನು, ಆತನ ಕರ್ತವ್ಯಗಳೇನು, ಆದರ್ಶವೇನು, ಆತನ ಆಡಳಿತ ನ್ಯಾಯರೀತಿಗಳು ಹೇಗಿರಬೇಕು, ರಾಜ ಪ್ರಜೆಗಳ ಯೋಗಕ್ಷೇಮ ಹೇಗೆ ನೋಡಕೊಳ್ಳಬೇಕು, ಶತ್ರುಗಳಿಂದ ರಾಜ್ಯವನ್ನು ರಕ್ಷಿಸಲು ಯಾವ ಕ್ರಮ ಕೈಗೊಳ್ಳಬೆಕು ಮುಂತಾದ ವಿಷಯಗಳನ್ನೆಲ್ಲ ವಿವರವಾಗಿ ತಿಳಿಸಿಕೊಟ್ಟರು.

ಕಂಠೀರವ ಈಗ ಮುಖದ ಮೇಲೆ ಚಿಗುರು ಮೀಸೆ ಹೊತ್ತ ದಷ್ಟಪುಷ್ಟವಾಗಿ ಬೆಳೆದ ಹದಿನಾರು ವರ್ಷದ ಯುವಕ. ಚಿಕ್ಕ ವಯಸ್ಸಿನಲ್ಲೇ ಅವರು ರಾಜನಲ್ಲಿರಬೇಕಾದ ಎಲ್ಲ ಅರ್ಹತೆ, ಯೋಗ್ಯತೆಗಳನ್ನು ಸಂಪಾದಿಸಿಕೊಂಡರು. ಅವರು ಹೇಡಿಗಳ ಎದೆಯಲ್ಲಿ ಧೈರ್ಯ ತುಂಬುತ್ತಿದ್ದರು. ಸ್ವಾರ್ಥಿಗಳನ್ನು ಕಂಡರೆ ಸಿಡಿದು ಬೀಳುತ್ತಿದ್ದರು. ಅವರ ನಡೆ, ನುಡಿಯಲ್ಲಿ ಆದರ್ಶ, ಗತ್ತು, ಠೀವಿ ಎದ್ದು ಕಾಣುತ್ತಿದ್ದವು. ಕಂಠೀರವರು ಬಹಳ ಛಲಗಾರರು. ಹಟ ಹಿಡಿದರೆ ಕಾರ್ಯ ಸಾಧಿಸುವವರೆಗೂ ಅವರು ವಿಶ್ರಾಂತಿ, ನಿದ್ರೆ ಆಹಾರಗಳನ್ನು ನಿರ್ಲಕ್ಷಿಸಿ ಸಾಹಸ ಪಡುತ್ತಿದ್ದರು.

 

ಇದೆಂತಹ ಆಸ್ಥಾನ!

“ಅಪ್ಪಾಜಿ, ನಾನು ರಾಜಧಾನಿಗೆ ಹೋಗುವುದು ಯಾವಾಗ?” ಕಂಠೀರವರು ಒಂದು ದಿನ ತಂದೆಯನ್ನು ಕೇಳಿದರು.

ಚಾಮರಾಜ ಒಡೆಯರು ಪಕ್ಕದಲ್ಲಿ ನಿಂತಿದ್ದ ಮಗನನ್ನೇ ಒಂದು ಕ್ಷಣ ದಿಟ್ಟಿಸಿನೋಡಿದರು. ಎತ್ತರವಾದ ನಿಲುವು, ಬಿಲಿಷ್ಠವಾದ ಅಂಗಾಂಗಗಳು, ತೇಜಸ್ಸಿನಿಂದ ಕೂಡಿದ ದರ್ಪದ ಮುಖ, ಕಾದ ಕಬ್ಬಿಣದಂತೆ ಕೆಂಪಾದ ಮೈ ಚರ್ಮ. ಅವರ ಹೃದಯ ಹೆಮ್ಮೆಯಿಂದ ಹಿಗ್ಗಿತು.

“ನಾಳೆಯೇ ರಾಜಧಾನಿಗೆ ಹೋಗಿ ಬಾ, ಕಂಠೀರವ.”

ತಂದೆಯ ಅನುಮತಿ ಸಿಕ್ಕಿದ ಕೂಡಲೆ ಕಂಠೀರವರು ಸಂತೋಷದಿಂದ ತಂದೆಯ ಕಾಲು ಮುಟ್ಟಿ ನಮಸ್ಕಾರ ಮಾಡಿದರು.

ಮಾರನೆಯ ದಿನ ಚಾಮರಾಜ ಒಡೆಯರು “ಸ್ವತಂತ್ರನಾಗಿ ಶೂರ ರಾಜನಾಗಿ ಬಾಳು” ಎಂದು ಮಗನನ್ನು ಹರಸಿ ರಾಜಧಾನಿಗೆ ಕಳುಹಿಸಿದರು. ಮಗನ ಜೊತೆಯಲ್ಲಿ ನಂಬಿಕೆಯ ಆಳಾದ ಕೆಂಪನಾರಸಿಂಹ ಸೆಟ್ಟಿಯನ್ನೂ ಕಳುಹಿಸಿಕೊಟ್ಟರು. ಮಹಾರಾಜರ ಒಡ್ಡೋಲಗವೆಂದರೆ ಪವಿತ್ರ ಸ್ಥಳ, ಭವ್ಯ ಸಭೆ, ವೈಭವ ಎಂದೆಲ್ಲಾ ಕಂಠೀರವರು ತಿಳಿದುಕೊಂಡಿದ್ದರು. ಆ ಆಸ್ಥಾನವನ್ನು ನೋಡಲು ತವಕದಿಂದ, ಭಕ್ತಿಯಿಂದ ಹೋದರು. ಭರ್ಜರಿಯಾಗಿ ಉಡುಪು ಹಾಕಿಕೊಂಡು ಠೀವಿಯಿಂದ ಹೋದರು.

ಅಲ್ಲಿ ಕಂಡ ದೃಶ್ಯ ಅವರಿಗೆ ಅನಿರೀಕ್ಷಿತವಾಗಿತ್ತು. ಮನಸ್ಸಿಗೆ ಆಘಾತವನ್ನು ಮಾಡುವಂತಹದು.

ಮಹಾರಾಜರು ತಮ್ಮ ಸ್ಥಾನಮಾನವನ್ನು ಮರೆತು ಸಿಂಹಸಾನದ ಮೇಲೆ ಕುಳಿತುಕೊಂಡೇ ಮದ್ಯಪಾನ ಮಾಡುತ್ತಿದ್ದರು. ಅವರ ಅಕ್ಕಪಕ್ಕದಲ್ಲಿ ಯಾರು ಯಾರೋ ಹೆಂಗಸರು ಕುಳಿತುಕೊಂಡು ತಮಾಷೆಯಾಗಿ ಕಾಲ ಕಳೆಯತ್ತಿದ್ದರು.

ಮೈಸೂರು ಸಿಂಹಾಸನ! ಆ ಪವಿತ್ರ ಸಿಂಹಾಸನದ ಮೇಲೆ ಕುಳಿತು ಮಹಾರಾಜರ ಮಧ್ಯಪಾನ! ರಾಜ ಸಭೆಯಲ್ಲಿ ಹೆಂಗಸರೊಂದಿಗೆ ತಮಾಷೆ!

ಆಸ್ಥಾನದಲ್ಲಿ ಕಂಠೀರವರು ನಿರೀಕ್ಷಿಸುತ್ತಿದ್ದ ರೀತಿ, ನೀತಿ, ಕ್ರಮ, ಶಿಸ್ತು, ಅಚ್ಚುಕಟ್ಟು ಯಾವುದೂ ಕಾಣಿಸಲಿಲ್ಲ. ಮೈಸೂರು ಸಿಂಹಾಸನದ ದುರವಸ್ಥೆಯನ್ನು ಕಣ್ಣಾರೆ ಕಂಡ ಕಂಠೀರವರು ಸಂಕಟಪಟ್ಟರು. ಕೋಪ ದುಃಖವನ್ನು ಹಿಂಬಾಲಿಸಿ ಬಂತು. ಅವರು ಸಿಡಿಲು ಮರಿಯಂತೆ ಅರ್ಭಟಿಸಿದರು:

” ಇದೇನು ಕರ್ನಾಟಕ ರತ್ನಸಿಂಹಸನಾಧೀಶ್ವರ ಅರಸರ ರಾಜಸಭೆಯೋ ಅಥವಾ ಅಗ್ಗದ ಜೂಜು ಕಟ್ಟೆಯೋ?”

ಕಂಠೀರವರು ಯಾರೆಂದು ರಾಜಸಭೆಯಲ್ಲಿದ್ದ ಆಸ್ಥಾನಿಕರಿಗೆ ಗೊತ್ತಿಲ್ಲ. ಪ್ರಧಾನಿ ರಂಗನಾಥ ದೀಕ್ಷಿತ ಸ್ವಾರ್ಥಿ, ದುರಹಂಕಾರಿ. ರಾಜನನ್ನು ತನ್ನ ಕೈಗೊಂಬೆ ಮಾಡಿಕೊಂಡು ರಾಜ್ಯಾಡಳಿತ ಸೂತ್ರಗಳನ್ನೆಲ್ಲ ತಾನೇ ನಡೆಸುತ್ತಾ ಬಲಶಾಲಿಯಾಗಿದ್ದ. ಮಹಾರಾಜ ವ್ಯಕ್ತಿತ್ವವನ್ನೆಲ್ಲ ಕಳೆದುಕೊಂಡು ಪ್ರಧಾನಿ ಹೇಳಿದಂತೆ ಕೇಳುತ್ತಿದ್ದ. ರಾಜನನ್ನು ತನ್ನ ಅಡಿಯಾಳನ್ನಾಗಿ ಮಾಡಿಕೊಂಡಿದ್ದ ದೀಕ್ಷಿತ ಕಂಠೀರವರ ಮಾತು ಕೇಳಿ ಸಿಟ್ಟಾದ.

“ಚೋಟುದ್ದ ಇದ್ದೀಯ…….. ನಿನ್ನೆ ಮೊನ್ನೆ ಹುಟ್ಟಿದ ಪಿಳ್ಳೆ ನೀನು……. ನನ್ನ ಮುಂದೆ ನಿಂತು ಸೊಕ್ಕಿನಿಂದ ಮಾತನಾಡಲು ನಿನಗೆಷ್ಟು ಧೈರ್ಯ?”

” ಈ ಹುಡುಗ ಯಾರು?” ಯಾರೋ ಕೇಳಿದರು.

ರಾಜಸಭೆಯಲ್ಲಿದ್ದವರೆಲ್ಲ ಗಟ್ಟಿಯಾಗಿ ನಕ್ಕರು. ಮತ್ತೆ ಮದ್ಯಕ್ಕೆ ತಿರುಗಿದರು.

ಕಂಠೀರವನ ಜೊತೆಯಲ್ಲಿ ರಕ್ಷಣೆಗೆ ಬಂದಿದ್ದ ಕೆಂಪನಾರಸಿಂಹ ಸೆಟ್ಟಿ ಗಂಭೀರ ಧ್ವನಿಯಲ್ಲಿ ಹೇಳಿದ:

“ಶ್ರೀಕಂಠೀರವ ನರಸಿಂಹರಾಜ ಒಡೆಯರು.”

ಸಭೆಯಲ್ಲಿದ್ದವರಿಗೆ ಕಂಠೀರವರ ಪರಿಚಯವಾಯಿತು. ನಗು ನಿಂತು ಸದ್ದಡಗಿತು. ಕಂಠೀರವರು ದರ್ಪದಿಂದ ಎದೆ ಮುಂದೆ ಚಾಚಿ ಠೀವಿಯಿಂದ ನಿಂತು ಒಂದು ಸಲ ಸುತ್ತಲೂ ನೆರೆದಿದ್ದ ಸಭಿಕರನ್ನು ನೋಡಿ ಹೇಳಿದರು:

"ಈ ಚೋಟುದ್ದದ ಪಿಳ್ಳೆ ಯಾರು ತಿಳಿಯಿತೆ?"

” ಈ ಚೋಟುದ್ದದ ಪಿಳ್ಳೆ ಯಾರೆಂದು ಈ ಸಭೆಗೆ ಈಗ ತಿಳಿಯಿತೆ?”

ಕಂಠೀರವರ ಸಿಂಹಗರ್ಜನೆ ಕೇಳಿ ಎಲ್ಲರೂ ನಡುಗಿದರು. ಮನಸ್ಸಿಗೆ ಬಂದಂತೆ ಉಡುಪು ಹಾಕಿಕೊಂಡು ಬಂದಿದ್ದ ಆಸ್ಥಾನಿಕರನ್ನು ಕಂಠೀರವರು ಗಮನಿಸಿದರು.

“ರಾಜಸಭೆಗೆ, ಮಹಾರಾಜರ ಸನ್ನಿಧಾನಕ್ಕೆ ಬರುವಾಗ ಮರ್ಯಾದೆಯಿಂದ ಉಡುಪು ಹಾಕಿಕೊಂಡು ಬರಬೇಕೆಂದೂ ನಿಮಗೆ ತಿಳಿಯದೇ?” ಎಂದು ಕಂಠೀರವರು ಸಭಿಕರನ್ನು ಎಚ್ಚರಿಸಿ ಗ್ರಾಮಕ್ಕೆ ಹಿಂತಿರುಗಿದರು.

ಬಹು ಭರವಾದ ಹೃದಯದಿಂದ ಕಂಠೀರವರು ತಂದೆಯ ಬಳಿಗೆ ಹೋದರು. ಹೀನ ಸ್ಥಿತಿಗೆ ಬಂದಿರುವ ಸಿಂಹಾಸನದ ಸ್ಥಿತಿಯನ್ನು ತಂದೆಗೆ ತಿಳಿಸಿದರು. “ಅಪ್ಪಾಜಿ, ಆ ಸಿಂಹಾಸನವನ್ನು ಹತ್ತಿ ಅದನ್ನು ಉಳಿಸಲು, ಮೊದಲಿನಂತೆ ಅದನ್ನು ಪವಿತ್ರ ಮಾಡಲು ನಾನು ನನ್ನ ಪ್ರಾಣವನ್ನೇ ಮೀಸಲಾಗಿಡುತ್ತೇನೆ? ಎಂದು ಪ್ರತಿಜ್ಞೆ ಮಾಡಿದರು.

ಧೀರ ರಾಜನಾಗಬೇಕು, ಧೈರ್ಯ ಸಾಹಸಗಳಿಂದ ರಾಜ್ಯವಾಳಬೇಕು ಎಂದು ಕಂಠೀರವರು ತೀರ್ಮಾನಿಸಿದರು. ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಮಲ್ಲವಿದ್ಯೆಯಲ್ಲಿ ಪ್ರವೀಣರಾದರು. “ವಿಜಯನಾರಸಿಂಹ” ಎನ್ನುವ ಕತ್ತಿಯನ್ನು ಅತಿ ಚಮತ್ಕಾರದಿಂದ ಉಪಯೋಗಿಸುವುದರಲ್ಲೂ ಅವರು ನಿಸ್ಸೀಮರಾದರು. ಆ ಕತ್ತಿ ಚಿಕ್ಕದಾಗಿದ್ದರೂ ಎರಡೂ ಕಡೆ ಚೂಪಾಗಿ, ತೆಳುವಾಗಿ, ಬಳ್ಳಿಯಂತೆ ಬಳುಕುತ್ತಿತ್ತು. ನೋಡುವವರ ಕಣ್ಣಿಗೂ ಕಾಣಿಸದಷ್ಟು ವೇಗವಾಗಿ ಕಂಠೀರವರು ಆ ಕತ್ತಿಯನ್ನು ಸೊಂಟದಿಂದ ಎಳೆದು ಉಪಯೋಗಿಸಿ ಮತ್ತೆ ಯಾರಿಗೂ ಗೊತ್ತಾಗದಂತೆ ಸೊಂಟಕ್ಕೆ ಸೇರಿಸುತ್ತಿದ್ದರು. ಸದಾ ಕಾಲವೂ ಆ ಕತ್ತಿ ಅವರ ನಡುವಿನಲ್ಲಿರುತ್ತಿತ್ತು.

ಬನ್ನಿ, ಈಗಲೇ ತಿರುಚಿನಾಪಳ್ಳಿಗೆ ಹೋಗೋಣ!”

ತಿರುಚಿನಾಪಳ್ಳಿಯಲ್ಲಿ ಮಲ್ಲಯುದ್ಧದಲ್ಲಿ ಪ್ರಸಿದ್ಧನಾದ ಜೆಟ್ಟಿಯೊಬ್ಬನಿದ್ದ. ಅವನು ತುಂಬ ಬಲಿಷ್ಠ, ಶೂರ, ಅದರೆ ಅವನಿಗೆ ಬಹು ಅಹಂಕಾರ. ತನ್ನ ಸಮಾನ ಮತ್ತೊಬ್ಬ ಜಟ್ಟಿ ಈ ರಾಜ್ಯದಲ್ಲೇ ಇಲ್ಲ ಎಂದು ಅವನು ಅಹಂಕಾರದಿಂದ ಮೆರೆಯುತ್ತಿದ್ದ.

ಮುಖ್ಯರಸ್ತೆಗೆ ಅಡ್ಡವಾಗಿ ತನ್ನ ದಟ್ಟಿ, ಚಲ್ಲಣಗಳನ್ನು ಅವನು ಕಟ್ಟಿಸಿ ರಾಜ್ಯದಲ್ಲೆಲ್ಲಾ ಡಂಗುರ ಹೊರಡಿಸಿದ.

“ಪ್ರಜೆಗಳೆಲ್ಲರೂ ನನ್ನ ದಟ್ಟಿ, ಚಲ್ಲಣದ ಕೆಳಗೇ ಓಡಾಡಬೇಕು. ಯರಾದರೂ ಸಾಹಸಿಗಳು ಅವುಗಳನ್ನು ತೆಗೆದುಹಾಕಿದರೆ ಅವರು ನನ್ನೊಂದಿಗೆ ಮಲ್ಲಯುದ್ಧ ಮಾಡಬೇಕು.”

ರಾಜ್ಯದಲ್ಲಿದ್ದ ಜಟ್ಟಿಗಳೆಲ್ಲಾ ಅವನೊಡನೆ ಮಲ್ಲಯುದ್ಧ ಮಾಡಲು ಹೆದರಿದರು. ಒಂದಿಬ್ಬರು ಮಲ್ಲಯುದ್ಧ ಮಾಡಲು ಬಂದರು. ಪಾಪ ಆ ಜಟ್ಟಿಯ ಏಟುಗಳಿಗೆ ಸಿಕ್ಕಿ ಪ್ರಾಣವನ್ನೇ ಕಳೆದುಕೊಂಡರು.

ತಿರುಚಿನಾಪಳ್ಳಿಯಿಂದ ಬಂದವರೊಬ್ಬರು ಈ ವಿಷಯವನ್ನು ಕಂಠೀರವರಿಗೆ ಹೇಳಿದರು.

” ಆ ಜಟ್ಟಿಯ ಹೆಸರೇನು?” ಕಂಠೀರವರು ಆಸಕ್ತಿಯಿಂದ ಕೇಳಿದರು.

“ವೀರಮಲ್ಲ”

“ಅವನ ವಯಸ್ಸೆಷ್ಟು?”

“ಮೂವತ್ತು ವರ್ಷವಿರಬಹುದು. ದಕ್ಷಿಣ ದೇಶದಲ್ಲೆಲ್ಲಾ ನನ್ನಂತಹ ಬಲಶಾಲಿಯೇ ಇಲ್ಲ ಎಂದು ಅವನು ಗರ್ವಪಡುತ್ತಿದ್ದಾನೆ. ಕರ‍್ರಗೆ ಕೋಣನ ಹಾಗಿದ್ದಾನೆ. ಅವನನ್ನು ನೋಡಿದರೆ ಹೆದರಿಕೆಯಾಗುತ್ತೆ. ಆ ಜಟ್ಟಿಗೆ ತಿರುಚಿನಾಪಳ್ಳಿಯ ರಾಜನ ಪ್ರೋತ್ಸಾಹವೂ ಇದೆ. ಆ ರಾಜ ಮೈಸೂರಿನವರು ಹೇಡಿಗಳು, ಕೈಲಾಗದವರು, ಬಳೆ ತೊಟ್ಟವರು, ಅವರಿಗೆ ಬುದ್ಧಿಯೂ ಇಲ್ಲ, ಶಕ್ತಿಯೂ ಇಲ್ಲ ಎಂದು ಆಸ್ಥಾನದಲ್ಲಿ ಹೇಳಿದ ಮಾತನ್ನು ನಾನೇ ಕಿವಿಯಾರೆ ಕೇಳಿಸಿಕೊಂಡೆ.” ಈ ಮಾತು ಕೇಳಿ ಕಂಠೀರವರು ಕೆಂಡವಾದರು.

“ಏನು, ನಮ್ಮ ರಾಜದ್ಯದವರು ಹೇಡಿಗಳು ಎಂದನೆ ಆ ರಾಜ? ಸಿಂಹವನ್ನು ಕೆಣಕಿದ ನಾಯಿಮರಿ ಬದುಕುವುದೇ? ಆ ಜಟ್ಟಿಯನ್ನು ಮಲ್ಲಯುದ್ಧದಲ್ಲಿ ಸೋಲಿಸಿ ಆ ರಾಜನ ಗರ್ವಭಂಗ ಮಾಡದಿದ್ದರೆ ನಾನು ಕಂಠೀರವನೇ ಅಲ್ಲ. ಬನ್ನಿ, ಈಗಲೇ ತಿರುಚಿನಾಪಳ್ಳಿಗೆ ಹೋಗೋಣ.”

ಬಂದವರು ಹೇಳಿದರು: “ಹಾಗೆ ದುಡಕಬೇಡಿ. ವೀರಮಲ್ಲ ಮಹಾಶೂರ. ಬಂಡೆಗಳನ್ನು ಕೈಯಿಂದಲೇ ಪುಡಿಪುಡಿ ಮಾಡಿದ್ದಾನೆ. ನಿಮ್ಮ ಪ್ರಾಣಕ್ಕೇನಾದರೂ ಅಪಾಯವಾದರೆ?”

ಕಂಠೀರವರು ನಕ್ಕು ಹೇಳಿದರು: “ನಾನು ದುರ್ಬಲ, ಹೇಡಿ ಎಂದುಕೊಂಡಿರಾ? ಕಲ್ಲುಕಂಬಗಳನ್ನು ಕಾಲಿನಲ್ಲಿ ಒದ್ದು ಪುಡಿಪುಡಿ ಮಾಡುವ ಶಕ್ತಿ ನನಗಿದೆ. ಶೂರರು ಸಾವಿಗೆ ಹೆದರುವುದಿಲ್ಲ ಎನ್ನುವುದು ನಿಮಗೆ ತಿಳಿಯದೆ?”

ಕಂಠೀರವರು ತಿರುಚಿನಾಪಳ್ಳಿ ತಲುಪಿದರು. ಗೆಳೆಯನಿಗೆ ಹೇಳಿ, ಒಂದು ಕೋಲಿನಿಂದ ಹೆಬ್ಬಾಗಿಲ ಮೇಲಿದ್ದ ದಟ್ಟಿ, ಚಲ್ಲಣಗಳನ್ನು ತೆಗೆಸಿಹಾಕಿದರು.

ಊರಿನವರೆಲ್ಲ ದಿಗ್ಭ್ರಮೆಗೊಂಡರು. ವೀರಮಲ್ಲನಿಗೆ ಸವಾಲು ಹಾಕುವವರೂ ಉಂಟೇ?

ವಿಷಯ ತಿಳಿದ ವೀರಮಲ್ಲ ಮಲ್ಲಯುದ್ಧಕ್ಕೆ ಸಿದ್ಧನಾದ. ಮಲ್ಲಯುದ್ಧ ನೋಡಲು ಸಾವಿರಾರು ಜನ ಕಿಕ್ಕಿರಿದರು. ತಿರುಚಿನಾಪಳ್ಳಿ ದೊರೆಯ ಎದುರಿನಲ್ಲೇ ಮಲ್ಲಯುದ್ಧ.

ಕಂಠಿರವರು ಧೈರ್ಯದಿಂದ ಹೋರಾಡಿದರು.

“ವೀರಮಲ್ಲ, ನಾಲ್ಕಾರು ಆನೆಗಳ ಬಲವುಳ್ಳ ಶೂರ ನೀನು! ನಿನ್ನ ಶಕ್ತಿ ಸಾಮರ್ಥ್ಯಗಳನ್ನು ತೋರಿಸಿ ನಮಗೆಲ್ಲಾ ಸಂತೋಷವನ್ನುಂಟುಮಾಡು, ಈ ಜಟ್ಟಿಯನ್ನು ಕೊಂದು ಹಾಕು” ಎಂದು ರಾಜನು ವೀರಮಲ್ಲನನ್ನು ಹುರಿದುಂಬಿಸಿದ.

ವೀರಮಲ್ಲ, ಸುಮ್ಮನೆ ಏಕೆ ನಿಂತೆ?”

ಕುಸ್ತಿ ಪ್ರಾರಂಭವಾಯಿತು. ಬಹು ಅಹಂಕಾರದಿಂದ, ಗೆದ್ದೇಗೆಲ್ಲುತ್ತೇನೆ ಎಂಬ ವಿಶ್ವಾಸದಿಂದ ವೀರಮಲ್ಲ ಕಣಕ್ಕಿಳಿದಿದ್ದ. ಅರ್ಧ ಕ್ಷಣದಲ್ಲಿ ಅವನಿಗೆ ಅರ್ಥವಾಯಿತು – ತನ್ನ ಎದುರಾಳಿ ಸಾಮಾನ್ಯನಲ್ಲ, ಶಕ್ತಿಯಲ್ಲಿ ಪಟ್ಟುಗಳಲ್ಲಿ ತನ್ನನ್ನು ಮೀರಿಸಿದವನು ಎಂದು ಗೆಲ್ಲುತ್ತೇನೆ ಎಂಬ ನಂಬಿಕೆ ಕುಸಿಯತೊಡಗಿತು. ಅನ್ಯಾಯದ ರೀತಿಯಲ್ಲಿ ಕುಸ್ತಿ ಮಾಡಲು ಪ್ರಾರಂಭಿಸಿದ.

ಅವನ ಊರು, ಅವರ ಪರವಾದ ರಾಜ. ಅವನನ್ನು ತಡೆದು ನ್ಯಾಯ ಹೇಳುವವರು ಯಾರು?

ಅನ್ಯಾಯ, ಮೋಸದಿಂದ ಮಲ್ಲ ಯುದ್ಧ ಮಾಡುತ್ತಿದ್ದ ವೀರಮಲ್ಲನೋಂದಿಗೆ ಧರ್ಮಯುದ್ಧ ಮಾಡಿ ಗೆಲ್ಲುವುದು ಸಾಧ್ಯವಿಲ್ಲವೆಂದು ಕಂಠೀರವರು ತೀರ್ಮಾನಿಸಿದರು. ಸೊಂಟದಲ್ಲಿದ್ದ “ವಿಜಯನಾರಸಿಂಹ” ಕತ್ತಿಯನ್ನು ಕೈ ಚಳಕದಿಂದ ಯಾರಿಗೂ ಕಾಣಿಸದಂತೆ ಹೊರಗೆಳೆದರು. ಕಣ್ಣು ರೆಪ್ಪೆ ಹಾಕುವಷ್ಟರಲ್ಲಿ ಆ ಜಟ್ಟಿಯ ತಲೆಯನ್ನು ಕತ್ತರಿಸಿದರು.

ಕಂಠೀರವರ ಕತ್ತಿಯಾಗಲಿ, ಅವರು ಜಟ್ಟಿಯ ತಲೆ ಕತ್ತರಿಸಿದ್ದಾಗಲಿ ಯಾರಿಗೂ ಕಾಣಿಸಲಿಲ್ಲ. ಕತ್ತರಿಸಿದ ತಲೆ ಕೆಳಗೆ ಬೀಳದೆ ಹಾಗೆಯೇ ನಿಂತಿತ್ತು. ಜಟ್ಟಿಯ ಸತ್ತ ದೇಹ ಬೊಂಬೆಯಂತೆ ನಿಂತುಕೊಂಡಿತು.

ತಿರುಚಿನಾಪಳ್ಳಿಯ ಮಹಾರಾಜನಿಗೆ ಆಶ್ಚರ್ಯವಾಯಿತು.

“ಏನಿದು ವೀರಮಲ್ಲ? ಸುಮ್ಮನೆ ಏಕೆ ನಿಂತೆ?” ಎಂದು ಕೇಳಿದ.

ಕಂಠೀರವರು ಒಂದು ಕೋಲಿನಿಂದ ಎದುರಾಳಿಯನ್ನು ತಿವಿದರು. ವೀರಮಲ್ಲನ ತಲೆ ಬುರುಡೆ ನೆಲದ ಮೇಲೆ ಉರುಳಿಬಿತ್ತು. ಆಗಲೇ ನೆರೆದವರಿಗೆಲ್ಲಾ ಗೊತ್ತಾದದ್ದು, ಜಟ್ಟಿ ಸತ್ತು ಹೋಗಿದ್ದಾನೆ ಎಂದು!

ಕಂಠೀರವರು ತಿರುಚಿನಾಪಳ್ಳಿಯ ರಾಜನಿಗೆ ಒಂದು ಕಾಗದ ಬರೆದಿಟ್ಟು ಜನರ ಗುಂಪಿನಲ್ಲಿ ಚಮತ್ಕಾರದಿಂದ ತಪ್ಪಿಸಿಕೊಂಡು ಊರಿಗೆ ಹೋದರು.

ರಾಜನಿಗೆ ಕಾಗದ ತಲುಪಿತು. ಮೈಸೂರಿನ ಒಡೆಯರು ಜಟ್ಟಿಯಾಗಿ ಬಂದು ಕಾಳಗದಲ್ಲಿ ವೀರಮಲ್ಲನನ್ನು ಕೊಂದರೆಂದು ತಿಳಿಯಿತು.

ಈ ಘಟನೆ ನಡೆದ ಮೇಲೆ ಕಂಠೀರವರ ಶಕ್ತಿ, ಸಾಮರ್ಥ್ಯಗಳಿಗೆ ಕಳಶವಿಟ್ಟಂತಾಯಿತು.

ಕಂಠೀರವರು ಕೋಲಿನಿಂದ ತಿವಿದಾಗ ವೀರಮಲ್ಲನ ತಲೆಬುರುಡೆ ನೆಲಕ್ಕೆ ಉರುಳಿತು.

ಪಟ್ಟಾಭೀಷೇಕ

ರಾಜ ಒಡೆಯರು ಮಕ್ಕಳಿಲ್ಲದೇ ಸತ್ತು ಹೋದರು. ಅವರ ಚಿಕ್ಕಪ್ಪ ಇಪ್ಪತ್ತು ವರ್ಷದ ಇಮ್ಮಡಿ ರಾಜ ಒಡೆಯರು ಪಟ್ಟಕ್ಕೆ ಬಂದರು. ಅವರ ಪಟ್ಟಕ್ಕೆ ಬಂದ ಒಂದೂವರೆ ವರ್ಷಕ್ಕೆಲ್ಲಾ ಮಹಾವಂಚಕ, ಕ್ರೂರಿಯಾದ ವಿಕ್ರಮರಾಯನೆಂಬ ದಳವಾಯಿ ಅವರಿಗೆ ವೈದ್ಯನ ಸಹಾಯದಿಂದ ವಿಷ ಕೊಟ್ಟು ಕೊಲ್ಲಿಸಿದ. ಇಮ್ಮಡಿ ರಾಜ ಒಡೆಯರ ನಂತರ ಅವರ ತಾಯಿ ತಿಮ್ಮಾಜಮ್ಮಣ್ಣಿಯವರು ಕಂಠೀರವರನ್ನು ಸಕಲ ಮರ್ಯಾದೆಗಳಿಂದ ರಾಜದಾನಿಗೆ ಕರೆಸಿಕೊಂಡರು. ಆಗ ಶ್ರೀರಂಗಪಟ್ಟಣ ಮೈಸೂರು ರಾಜ್ಯದ ರಾಜಧಾನಿಯಾಗಿತ್ತು. ೧೬೩೮ರಲ್ಲಿ ಕಂಠೀರವ ನರಸಿಂಹರಾಜ ಒಡೆಯರಿಗೆ ವೈಭವದಿಂದ ಪಟ್ಟಾಭಿಷೇಕವಾಯಿತು. ಆಗ ಅವರ ವಯಸ್ಸು ಇಪ್ಪತ್ತಮೂರು.

ಬಹಳ ದಿನಗಳಿಂದ ಸಮರ್ಥರಾದ ರಾಜರಿಲ್ಲದೆ ಪ್ರಜೆಗಳೆಲ್ಲ ಸುಖ, ಶಾಂತಿ, ನೆಮ್ಮದಿಗಳನ್ನು ಕಳೆದುಕೊಂಡಿದ್ದರು. ಅಧಿಕಾರಿಗಳು ದಳವಾಯಿಗಳ ಕೈಗೆ ಸಿಕ್ಕಿ ಚೈತನ್ಯ ಕಳೆದುಕೊಂಡಿದ್ದರು. ರಾಜ್ಯದ ಒಳಗೂ ಹೊರಗೂ ಅನೇಕ ಶತ್ರುಗಳು ಹುಟ್ಟಿಕೊಂಡಿದ್ದರು. ಪ್ರಬಲನಾಗಿದ್ದ ವಿಕ್ರಮರಾಯ ಇನ್ನೂ ಇದ್ದ. ಕಂಠೀರವರನ್ನು ತನ್ನ ಕೈಗೊಂಬೆ ಮಾಡಿಕೊಳ್ಳಬೇಕು, ಇಲ್ಲವಾದರೆ ಅವರನ್ನು ಕೊಂದು ಹಾಕಬೇಕು. ಎಂದು ಹೊಂಚು ಹಾಕುತ್ತಿದ್ದ. ಮೈಸೂರು ಸಿಂಹಾಸನ ಹೂವಿನ ಹಾಸಿಗೆಯಾಗಿರಲಿಲ್ಲ. ಕಂಠೀರವರು ರಾಜರದಾಗ ಪರಾಕ್ರಮಿ ಹಾಗೂ ಸಮರ್ಥ ರಾಜರೊಬ್ಬರು ಸಿಂಹಾಸನಕ್ಕೆ ಬಂದರಲ್ಲ ಎಂದು ಪ್ರಜೆಗಳೆಲ್ಲ ಸಂತೋಷಪಟ್ಟರು. ಶತ್ರುಗಳನ್ನೆಲ್ಲ ಸೋಲಿಸಿ ಮೈಸೂರು ರಾಜ್ಯವನ್ನು ರಕ್ಷಿಸುವ, ಪ್ರಜೆಗಳ ಯೋಗಕ್ಷೇಮ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ಕಂಠೀರವರ ಹೆಗಲ ಮೇಲೆ ಬಿತ್ತು.

ವಿಜಯ ಯಾತ್ರೆಗಳು

ಸಿಂಹಾಸನಕ್ಕೆ ಬಂದ ಕೂಡಲೆ ಕಂಠೀರವರು ಸುತ್ತಲೂ ಮುತ್ತಿಕೊಂಡಿದ್ದ ಶತ್ರುಗಳನ್ನು ಎದುರಿಸಲು ದೊಡ್ಡ ಸೈನ್ಯವೊಂದನ್ನು ಸಿದ್ಧಮಾಡಿಕೊಂಡರು. ಇಮ್ಮಡಿ ರಾಜ ಒಡೆಯರನ್ನು ವಿಕ್ರಮರಾಯ ವಿಷ ಕೊಟ್ಟು ಕೊಲ್ಲಿಸಿದ ಎನ್ನುವ ರಹಸ್ಯವನ್ನು ಅವರು ಜಾಣತನದಿಂದ ಪತ್ತೆ ಮಾಡಿದರು. ರಾಜದ್ರೋಹಿ ವಿಕ್ರಮರಾಯನಿಗೆ ಕಂಠೀರವರು ಮರಣ ದಂಡನೆ ವಿಧಿಸಿದರು.

ದಿನದಿನಕ್ಕೆ ಪ್ರಸಿದ್ಧಿಗೆ ಬರುತ್ತಿದ್ದ ಕಂಠೀರವರನ್ನು ಕಂಡು ಬಿಜಾಪುರದ ಸುಲ್ತಾನ ಅಸೂಯೆಗೊಂಡ. ದಕ್ಷಿಣ ಭಾರತವನ್ನೆಲ್ಲ ಗೆದ್ದು ತನ್ನ ಅಧೀನ ಮಾಡಿಕೊಳ್ಳಬೇಕೆಂದು ಅವನ ದುರಾಸೆ. ಅವನು ನಲವತ್ತು ಸಾವಿರ ಕುದುರೆಗಳಿದ್ದ ಭರಿ ಸೈನ್ಯದೊಂದಿಗೆ ರಣದುಲ್ಲಾ ಖಾನ್‌ ಎಂಬ ಪ್ರಸಿದ್ಧ ದಳಪತಿಯನ್ನು ಕಳುಹಿಸಿದ. ಖಾನ್‌ ಶ್ರೀರಂಗಪಟ್ಟಣದ ಕೋಟೆಯನ್ನು ಮುತ್ತಿದ. ಅವನ ಸೈನ್ಯವನ್ನು ಕಂಠೀರವರ ಶಿಸ್ತಿನಿಂದ ಕೂಡಿದ ಸೈನ್ಯ ಹೊಡೆದೋಡಿಸಿತು. ಕಂಠೀರವರು ಉಗ್ರನರಸಿಂಹನಂತೆ ವೀರಾವೇಶದಿಂದ ಯುದ್ಧದಲ್ಲಿ ಹೋರಾಡಿದರು. ರಣದುಲ್ಲ ಖಾನ್‌ ಸೋತು ಓಡಿಹೋದ. ಕೈಗೆ ಸಿಕ್ಕಿದವರಿಗೆ ಕೈಕಾಲು ಕಿವಿ ಮೂಗುಗಳನ್ನು ಕಂಠೀರವರು ಕತ್ತರಿಸಿ ಅವಮಾನ ಮಾಡಿ ಕಳುಹಿಸಿದರು. ಉಳಿದ ಶತ್ರುಗಳು ಹೆದರಿ ಓಡಿಹೋದರು. ಮತ್ತೊಂದು ಸಲ ಮುಸ್ತಾಫ್‌ ಖಾನ್‌ ಮತ್ತು ವೇಮಾಜಿ ಪಂತ ಎಂಬ ಬಿಜಾಪುರ ಸೈನ್ಯಧಿಕಾರಿಗಳು ಬಂದು ಕೋಟೆಯನ್ನು ಮುತ್ತಿದರು. ಅವರನ್ನೂ ಕಂಠೀರವರು ಸೋಲಿಸಿ ಓಡಿಸಿದರು.

ಪರಾಕ್ರಮಿ, ಶೂರ, ಯುದ್ಧಪ್ರೇಮಿ ಕಂಠೀರವರು ಶತ್ರುಗಳಿಗೆ ಮೃತ್ಯು ಸ್ವರೂಪದಂತಿದ್ದರು. ಅವರು ಯುದ್ಧ ಮಾಡಿ ಮುಸ್ಲಿಮರ ವಶದಲ್ಲಿದ್ದ ರತ್ನಗಿರಿ, ಪೆನ್ನಗರ ಮುಂತಾದ ಊರುಗಳನ್ನು ವಶಪಡಿಸಿಕೊಂಡರು. ರಾಮಗಿರಿ, ಗುರುಗೆರೆ, ಬಾಗೂರು, ಕಡಬ ಮುಂತಾದ ಊರುಗಳನ್ನು ಗೆದ್ದು ಮೈಸೂರು ರಾಜ್ಯಕ್ಕೆ ಸೇರಿಸಿದರು. ಮಧುರೆ, ತಂಜಾವೂರು, ಕೊಂಕಣ, ಮಲೆಯಾಳದ ರಾಜರನ್ನು ಸೋಲಿಸಿ ಅವರಿಂದ ಕಪ್ಪ ಕಾಣಿಕೆಗಳನ್ನು ವಸೂಲು ಮಾಡಿದರು. ಈ ಮಧ್ಯೆ ಪಿರಿಯಾಪಟ್ಟಣದಲ್ಲಿ ಆಳುತ್ತಿದ್ದ ನಂಜುಂಡ ಎಂಬಾತ ಪ್ರತಿ ವರ್ಷವೂ ಕಂಠೀರವರಿಗೆ ಕೊಡಬೇಕಾಗಿದ್ದ ಮೂರು ಸಾವಿರ ವರಹಗಳನ್ನು ಕೊಡುವುದಿಲ್ಲವೆಂದ. ಕಂಠೀರವರು ಒಂದು ದೊಡ್ಡ ಸೈನ್ಯದೊಂದಿಗೆ ಹೋಗಿ ಪಿರಿಯಾಪಟ್ಟಣವನ್ನು ಗೆದ್ದರು. ಯುದ್ಧದಲ್ಲಿ ನಂಜುಂಡ ಸತ್ತ. ದಕ್ಷಿಣಕ್ಕೆ ಸತ್ಯಮಂಗಲ, ದಣ್ಣಾಯಕನ ಕೋಟೆಯವರೆಗೂ, ಉತ್ತರಕ್ಕೆ ಹೊಸೂರಿನವರೆಗೂ, ಪಶ್ಚಿಮಕ್ಕೆ ಅರಕಲಗೂಡು ಬೆಟ್ಟದಪುರದವರೆಗೂ ಕಂಠೀರವರು ಮೈಸೂರು ರಾಜ್ಯವನ್ನು ವಿಸ್ತರಿಸಿದರು.

ಕಂಠೀರವ ಒಡೆಯರು “ರಣಧೀರ” ಎಂದು ಪ್ರಖ್ಯಾತರಾದರು. ಅವರ ಹೆಸರನ್ನು ಕೇಳಿದರೆ ಸಾಕು, ಶತ್ರುಗಳು ದುಷ್ಟರು ಹೆದರಿಕೆಯಿಂದ ನಡುಗುತ್ತಿದ್ದರು. ಆಗಿನ ಕಾಲದಲ್ಲಿ ಕಂಠೀರವನ್ನು ಮಲ್ಲಯುದ್ಧ, ಕತ್ತಿ ವರಸೆಯಲ್ಲಿ ಸೋಲಿಸುವವರು ಮೈಸೂರು ರಾಜ್ಯದಲ್ಲಿ ಯಾರೂ ಇರಲಿಲ್ಲ. ಅವರ ದೇಹಶಕ್ತಿ ಎಷ್ಟರ ಮಟ್ಟಿಗಿತ್ತೆಂದರೆ ಧಾರವಾಡದ ಒಂದು ಎಮ್ಮೆಯನ್ನು ಅವರು ಭುಜದ ಮೇಲೆ ಹೊತ್ತುಕೊಂಡು ದಿನವೂ ಚಾಮುಂಡಿ ಬೆಟ್ಟ ಹತ್ತಿ ಇಳಿಯುತ್ತಿದ್ದರಂತೆ.

ಕೊಲೆಯ ಪ್ರಯತ್ನ

ತಿರುಚಿನಾಪಳ್ಳಿಯ ವೀರಮಲ್ಲನನ್ನು ಅಲ್ಲಿನ ರಾಜನೆದುರಿಗೇ ಕೊಂದರಲ್ಲವೇ ಕಂಠೀರವರು? ಆಗಿನಿಂದಲೇ ಆ ರಾಜನಿಗೆ ಅವರೆಂದರೆ  ಹೆದರಿಕೆ. ಆನಂತರ ಅವರ ದಿಗ್ವಿಜಯಗಳನ್ನು ಕಂಡು ಅವನು ಗಾಬರಿಯಾದ. ಇಂದಲ್ಲ ನಾಳೆ ಈ ಪರಾಕ್ರಮಿಯಿಂದ ತನಗೂ ತೊಂದರೆ ತಪ್ಪಿದ್ದಲ್ಲ ಎಂದು ಅವನು ಚಿಂತಿಸಿ, ಕಂಠೀರವರನ್ನು ಏನಾದರೂ ಮಾಡಿ ಕೊಲ್ಲಿಸಬೇಕೆಂದು ತೀರ್ಮಾನಿಸಿದ. ಶಕ್ತಿಯಿಂದ ಅವರನ್ನು ಸೋಲಿಸುವುದು ಸಾಧ್ಯವಿಲ್ಲವೆಂದು ಅವನಿಗೆ ಗೊತ್ತು. ಮೋಸದಿಂದ ಅವರನ್ನು ಕೊಲ್ಲಿಸಲು ಒಂದು ಉಪಾಯ ಮಾಡಿದ. ಇಪ್ಪತ್ತೈದು ಜನ ಬಿಲಿಷ್ಠ ಕಳ್ಳರನ್ನು ಕರೆಸಿದ. ಕೈತುಂಬ ಹಣ ಕೊಟ್ಟು ಹೇಳಿದ: “ಒಂದು ವಾರದೊಳಗೆ ನೀವು ಕಂಠೀರವರನ್ನು ಕೊಂದು ಅವರ ತಲೆಯನ್ನು ನನ್ನ ಸಿಂಹಾಸನದ ಕಾಲ ಬಳಿಯಲ್ಲಿ ಇಡಬೇಕು.”

ಕಂಠೀರವರ ಹೆಸರನ್ನು ಕೇಳಿಯೇ ಕಳ್ಳರು ನಡುಗಿದರು.

ಮಹಾರಾಜರೇ, ಆ ರಣಧೀರನನ್ನು ಕೊಲ್ಲುವುದು ನಮ್ಮಿಂದ ಸಾಧ್ಯವೇ?” ಕಳ್ಳರು ಸಂದೇಹದಿಂದ ತೊದಲಿದರು.

” ಒಂದು ವಾರದಲ್ಲಿ ಕಂಠೀರವರ ತಲೆಯನ್ನು ನನಗೆ ತಂದುಕೊಡದಿದ್ದರೆ ನಿಮ್ಮ ತಲೆಗಳನ್ನೆಲ್ಲ ನಾನೇ ಕತ್ತರಿಸಿ ಹಾಕುತ್ತೇನೆ.”

ಹಣದ ಆಸೆ! ಮಹಾರಾಜ ಆಜ್ಞಾಪನೆ!

ಕಳ್ಳರೆಲ್ಲಾ ಮೈಸೂರು ರಾಜಧಾನಿಗೆ ಬಂದರು. ಬಹಳ ಪ್ರಯಾಸದಿಂದ ಯಾರಿಗೂ ಗೊತ್ತಾಗದಂತೆ ಕಳ್ಳರೆಲ್ಲ ಕಂಠೀರವರು ಮಲಗುತ್ತಿದ್ದ ಕೋಣೆಯಲ್ಲಿ ಅವಿತಿಟ್ಟುಕೊಂಡರು. ಆ ರಾತ್ರಿ ಕಂಠೀರವರು ಊಟ ಮುಗಿಸಿ ತಾಂಬೂಲ ಜಗಿಯುತ್ತಾ ಹೆಂಡತಿಯೊಡನೆ ಮಲಗುವ ಕೋಣೆಗೆ ಬಂದರು. ಮಹಾರಾಜರ ಕಣ್ಣು ಬಹು ಸೂಕ್ಷ್ಮ. ರಾಣಿಯೊಂದಿಗೆ ಮಾತನಾಡುತ್ತಿದ್ದಂತೆಯೇ ಒಂದು ದೊಡ್ಡ ಕಂಬದ ಹಿಂದೆ ನಾಲ್ಕಾರು ನೆರಳುಗಳು ಅವರ ಚುರುಕು ಕಣ್ಣಿಗೆ ಬಿದ್ದವು. ಸೂಕ್ಷ್ಮ ಬುದ್ಧಿಯ ಮಹಾರಾಜರಿಗೆ ಕೂಡಲೇ ಅರ್ಥವಾಯಿತು -ತಮ್ಮನ್ನು ಕೊಲ್ಲಲು ಯಾರೋ ಶತ್ರುಗಳು ಕೊಠಡಿಯೊಳಕ್ಕೆ ಬಂದು ಬಿಟ್ಟಿದ್ದಾರೆ!

ರಾಜರೊಬ್ಬರೇ, ಅವರು ಎಷ್ಟು ಜನ ಇದ್ದಾರೋ? (ವಾಸ್ತವವಾಗಿ ಇಪ್ಪತ್ತೈದು ಮಂದಿ ಇದ್ದರು). ಕೂಡಲೇ ರಾಜರು ಸೊಂಟದಲ್ಲಿದ್ದ ಕತ್ತಿಯನ್ನು ಮುಟ್ಟಿ ನೋಡಿಕೊಂಡರು. ಮಲಗುವ ಕೋಣೆಯಲ್ಲೇ ಅಡಗಿ ಕುಳಿತಿರುವ ಶತ್ರುಗಳೊಡನೆ ಕಾದಾಡಬೇಕು. ಆಗ ಹೆಂಡತಿಗೇನಾದರೂ ಏಟು ಬಿದ್ದರೆ? ಶತ್ರುಗಳಿಗೆ ಸುಳಿವು ಕೊಡದಂತೆ ಹೆಂಡತಿಗೆ ಎಚ್ಚರಿಕೆ ಕೊಡಬೇಕು, ಇಲ್ಲವೇ ಆಕೆಯನ್ನು ಸುರಕ್ಷಿತವಾದ ಜಾಗಕ್ಕೆ ಕಳುಹಿಸಬೇಕು. ಹೇಗೆ? ಅಂತಹ ವಿಷಮ ಸ್ಥಿತಿಯಲ್ಲೂ ಅವರು ಹೆದರದೆ ಚುರುಕಾಗಿ ಬುದ್ಧಿ ಓಡಿಸಿದರು.

ಮಂಚದ ಕೆಳಗೆ ಮಲಗು”

ಕಂಠೀರವರು ಹೆಂಡತಿಯ ಕಡೆ ತಿರುಗಿದರು, ಕೋಪದ ಧ್ವನಿಯಲ್ಲಿ ಹೇಳಿದರು: “ಆಯಿಮೆ, ನಿನಗೊಂದು ಶಿಕ್ಷೆ ಕೊಟ್ಟಿದ್ದೇನೆ. ಈ ರಾತ್ರಿಯೆಲ್ಲಾ ನೀನು ಹಾಸಿಗೆಯ ಮೇಲೆ ಮಲಗಕೂಡದು. ಈ ಮಂಚದ ಕೆಳಗೆ ನೆಲದ ಮೇಲೆ ಮಲಗಬೇಕು.” ಗಂಡನ ಮಾತು ಕೇಳಿ ಪಟ್ಟದರಾಣಿಗೆ ಆಶ್ಚರ್ಯವಾಯಿತು.

ಯಾವ ತಪ್ಪನ್ನು ಮಾಡದ ತನಗೇಕೆ ಈ ಶಿಕ್ಷೆ? ಕಾರಣ ತಿಳಿಯದೆ ಆಕೆ ತಲೆ ಎತ್ತಿ ಗಂಡನ ಮುಖವನ್ನು ನೋಡಿದಳು. ಕಂಠೀರವರ ಕಿಡಿ ಕಾರುವ ಕಣ್ಣುಗಳು, ಕೋಪದ ಮುಖ ನೋಡಿ ಆಕೆಗೆ ಪ್ರಶ್ನಿಸುವ ಧೈರ್ಯವಾಗಲಿಲ್ಲ. ಅಸಹನೆಯಿಂದ ಕಂಠೀರವರು ಮತ್ತೊಂದು ಸಲ ಆರ್ಭಟಿಸಿದರು.

“ಹುಂ…… ನಾನು ಹೇಳಿದ್ದು ಅರ್ಥವಾಗಲಿಲ್ಲವೇ? ಬೇಗ ಮಂಚದ ಕೆಳಗೆ ಮಲಗಿಕೊ.”

ಆಯಿಮೆ ಮಾತಿಲ್ಲದೆ ವಿಧೆಯತೆಯಿಂದ ಮಂಚದ ಕೆಳಗೆ ಮಲಗಿಕೊಂಡಳು.

ಹೋಗಿ ನಿಮ್ಮ ರಾಜನಿಗೆ ಹೇಳಿ”

ತಕ್ಷಣ ಕಂಠೀರವರು ಸೊಂಟದಲ್ಲಿದ್ದ “ವಿಜಯನಾರಸಿಂಹ” ಕತ್ತಿಯನ್ನು ಹೊರಗೆಳೆದರು. ನೆರಳು ಕಂಡ ಕಂಬದ ಬಳಿಗೆ ನುಗ್ಗಿದರು.

ಕಂಠೀರವರು ಒಬ್ಬರೇ ಒಂದು ಕಡೆ! ಉಳಿದವರೆಲ್ಲ ಮತ್ತೊಂದು ಕಡೆ! ರಾಜರು ಸ್ವಲ್ಪವೂ ಆಳುಕಲಿಲ್ಲ. ಚಮತ್ಕಾರದಿಂದ ಕತ್ತಿಯನ್ನು ಬೀಸುತ್ತಾ ಧೈರ್ಯದಿಂದ ಹೋರಾಡಿದರು. ಅವರ ಕತ್ತಿಗೆ ಕೆಲವರು ಬಲಿಯಾದರು. ಚಮತ್ಕಾರದಿಂದ ಅವರು ಕಾಲು ಮುಂದಿಟ್ಟಾಗ ಮುಗ್ಗರಿಸಿ ಕೆಲವರು ಬಿದ್ದರು. ಅವರು ಹಿಂದೆ ಸರಿದಾಗ ನುಗ್ಗುತ್ತಿದ್ದ ಇಬ್ಬರು ಒಬ್ಬರಿಗೊಬ್ಬರು ಡಿಕ್ಕಿ ಹೊಡೆದು ಬಿದ್ದರು. ಕೈ ಕಾಲುಗಳನ್ನು ಕಳೆದುಕೊಂಡ ಶತ್ರುಗಳೆಲ್ಲ ಕೆಳಕ್ಕುರುಳಿದರು. ನೆಲವೆಲ್ಲ ರಕ್ತ ! ಉಳಿದ ನಾಲ್ಕೈದು ಜನ ಪ್ರಾಣ ಕಾಪಾಡಿಕೊಳ್ಳಲು ಓಡಿದರು. ಅವರಿಗೆ ಕೇಳಿಸುವಂತೆ ಕಂಠೀರವರು ಕೂಗಿ ಹೇಳಿದರು:

“ಇಲ್ಲಿ ನಡೆದ ವಿಷಯವನ್ನೆಲ್ಲ ನಿಮ್ಮ ರಾಜನಿಗೆ ಸರಿಯಾಗಿ ವಿವರಿಸಿ ಹೇಳಿ, ಹೋಗಿ…..”

ಅನಂತರ ಮಂಚದ ಕೆಳಗೆ ನೋಡುತ್ತಾ ಹೇಳಿದರು:

“ಆಯಿಮೆ ನಿನ್ನ ಶಿಕ್ಷೆ ಅವಧಿ ಕಡಿಮೆ ಮಾಡಿದ್ದೇನೆ. ಮಂಚದ ಕೆಳಗಿನಿಂದ ಹೊರಗೆ ಬಂದು ಹಾಯಾಗಿ ಸುಪ್ಪತ್ತಿಗೆಯ ಮೇಲೆ ಮಲಗು”.

ಕಂಠೀರವರ ಪರಾಕ್ರಮವನ್ನು ಕುರಿತು ಪ್ರಜೆಗಳೆಲ್ಲ ಮೆಚ್ಚುಗೆಯ ಮಾತುಗಳನ್ನಾಡುವವರೆ! ಮೈಸೂರು ಸಂಸ್ಥಾನದ ಆಚೆಯೂ ಅವರ ಕೀರ್ತಿ ಹಬ್ಬಿತು. ಶತ್ರುಗಳು ನಡುಗಿದರು.

ರಾಜ್ಯದ ಆಡಳಿತ

ಕಂಠೀರವ ನರಸಿಂಹರಾಜ ಒಡೆಯರು ದಕ್ಷ ಆಡಳಿತಗಾರರು. ಏನನ್ನೂ ಪ್ರತಿಯಾಗಿ ಅಪೇಕ್ಷಿಸದೆ ದೇಶ ಸೇವೆ ಮಾಡುವುದು, ದೇಶದ ಮಾನ ಕಾಪಾಡುವುದು, ಪ್ರಜೆಗಳ ಯೋಗಕ್ಷೇಮ ನೋಡಿಕೊಳ್ಳುವುದು ಪರಮ ಶ್ರೇಯಸ್ಸು ಎಂದು ಅವರು ಭಾವಿಸಿದ್ದರು. ಕಂಠೀರವರ ಬಿಗಿಯಾದ, ಶಿಸ್ತಿನಿಂದ ಕೂಡಿದ ಆಡಳಿತದಲ್ಲಿ ಪ್ರಜೆಗಳು ತೃಪ್ತಿ, ಸಂತೋಷದಿಂದ ಜೀವನ ನಡೆಸಿದರು. ಕಂಠೀರವರು ಸಾಮಾನ್ಯ ಪ್ರಜೆಯಂತೆ ಉಡುಪು ಹಾಕಿಕೊಂಡು ಯಾರಿಗೂ ತಿಳಿಯದಂತೆ ರಾಜ್ಯದ ಎಲ್ಲ ಕಡೆಗಳಲ್ಲೂ ಸುತ್ತಾಡುತ್ತಾ ರಾಜದ್ರೋಹಿಗಳನ್ನು, ದುಷ್ಟರನ್ನು ಪತ್ತೆ ಮಾಡಿ ಶಿಕ್ಷಿಸುತ್ತಿದ್ದರು.

ಕಂಠೀರವರು ರಾಜ್ಯದಲ್ಲಿದ್ದ ಅಧಿಕಾರಿಗಳನ್ನೆಲ್ಲಾ ಬರಮಾಡಿಕೊಂಡು ಅವರಿಂದ ನಾಡಿನ ಆರ್ಥಿಕ ಸ್ಥಿತಿ ತಿಳಿದುಕೊಂಡರು. ವ್ಯಕ್ತಿಯ ಯೋಗ್ಯತೆಗೆ ತಕ್ಕಂತೆ ಕೆಲಸ ಹಂಚಿದರು. ದೇಶದ ಆಡಳಿತ ನೋಡಿಕೊಳ್ಳಲು ಅಧಿಕಾರಿಗಳನ್ನು ನೇಮಿಸಿದರು. ಅವರೆಲ್ಲರೂ ನ್ಯಾಯ, ನಿಷ್ಠೆಯಿಂದ ಕೆಲಸ ಮಾಡುವಂತೆ ಕಂಠೀರವರು ಮೇಲ್ವಿಚಾರಣೆಗೆ ಏರ್ಪಾಡು ಮಾಡಿದರು. ಪ್ರತಿಯೊಂದು ಗಡಿಗೂ ಒಬ್ಬ ಸುಬೇದಾರ, ಇಬ್ಬರು ಕರಣಿಕರು ಮತ್ತು ಗುಮಾಸ್ತರನ್ನು ಅವರು ಗೊತ್ತು ಮಾಡಿದರು. ರಾಜ್ಯದ ಎಲ್ಲ ಕಡೆಗಳಿಂದ ತೊಂದರೆಯಿಲ್ಲದೆ ಹಣ ಬೊಕ್ಕಸಕ್ಕೆ ಬರುವಂತೆ ಅವರು ತಕ್ಕ ವ್ಯವಸ್ಥೆ ಮಾಡಿದರು. ತಾವು ಗೆದ್ದ ಊರುಗಳಿಗೆ ಅವುಗಳ ಯೋಗ್ಯತೆಗೆ ತಕ್ಕಂತೆ ಕಂದಾಯ ಹಾಕಿದರು. ಸರಿಯಾದ ರೀತಿಯಲ್ಲಿ ಆಡಳಿತ ನಡೆಸಲು ಅವರು ಈ ಹೊಸ ಏರ್ಪಾಡನ್ನು ಮಾಡಿದರು.

ಮೈಸೂರಿನಲ್ಲಿ ಕಂಠೀರವರು ಒಂದು ಟಂಕಸಾಲೆಯನ್ನು ಸ್ಥಾಪಿಸಿದರು. ೧೬೪೩ರ ಮೊದಲೇ ಭಾರತೀಯ ಟಂಕಸಾಲೆಯನ್ನು ಕನ್ನಡ ನಾಡಿನಲ್ಲಿ ಸ್ಥಾಪಿಸಿದ ಕೀರ್ತಿ ಅವರದು. ಪಾಳೇಗಾರರ ಕಾಲದಲ್ಲಿ ಚಿನ್ನದ ನಾಣ್ಯಗಳ ಮೇಲೆ ಬೇರೆ ಬೇರೆ ಚಿತ್ರಗಳ ಮುದ್ರೆ ಇರುತ್ತಿತ್ತು. ಒಂದೇ ಬಗೆಯ ಮುದ್ರೆಯಿರುವ ನಾಣ್ಯಗಳು ಎಲ್ಲ ಕಡೆಗಳಲ್ಲೂ ಬಳಕೆಯಲ್ಲಿರಬೇಕೆಂದು ಅವರು ತೀರ್ಮಾನಿಸಿದರು. ಅದಕ್ಕಾಗಿ ಸಿಂಹದ ಮುದ್ರೆ ಇರುವ ನಾಣ್ಯಗಳ ತಯಾರಿಕೆಯನ್ನು ಅವರು ಪ್ರಾರಂಭಿಸಿದರು. ಪ್ರತಿನಾಣ್ಯದ ಮೇಲೆ “ಕಂಠೀರಾಯ” ಎಂಬ ಕನ್ನಡ ಅಕ್ಷರಗಳಿವೆ. ಆ ನಾಣ್ಯಕ್ಕೆ “ಕಂಠೀರಾಯ ಹಣ” ಎಂದು ಹೆಸರಾಯಿತು.

ಕಂಠೀರವರು ರಾಜನೀತಿ ರಾಜತಂತ್ರಗಳಲ್ಲಿ ತುಂಬ ಬುದ್ಧಿವಂತರು ಮತ್ತು ನಿಷ್ಠುರ ನ್ಯಾಯವಾದಿಗಳು. ನ್ಯಾಯದ ವಿಷಯದಲ್ಲಿ, ದುಷ್ಟರನ್ನು ಶಿಕ್ಷಿಸುವ ಸಂದರ್ಭದಲ್ಲಿ ಅವರು ಸ್ವಲ್ಪವೂ ಕರುಣೆ ತೋರುತ್ತಿರಲಿಲ್ಲ. ತಪ್ಪು ಮಾಡಿದವರಿಗೆ ಕ್ರೂರವಾದ ಶಿಕ್ಷೆಗಳನ್ನು ಕೊಡುತ್ತಿದ್ದರು. ಇದರ ಪರಿಣಾಮ ಪ್ರಜೆಗಳು, ಅಧಿಕಾರಿಗಳು ಕಂಠೀರವರಲ್ಲಿ ನ್ಯಾಯದಿಂದ, ಭಯಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು.

ಚಮತ್ಕಾರದಿಂದ ಮುಂದಾಲೋಚನೆಯಿಂದ ಕಂಠೀರವ ಒಡೆಯರು ರಾಜ್ಯದ ಆಡಳಿತವನ್ನು ನಡೆಸುತ್ತಿದ್ದರು. ಗೆದ್ದ ರಾಜ್ಯಗಳಿಂದ ತಂದ ಹಣವನ್ನು ಅವರು ತಮಗಾಗಿ ಖರ್ಚು ಮಾಡುತ್ತಿರಲಿಲ್ಲ. ಆ ಹಣದಿಂದ ಪ್ರಜೆಗಳಿಗೆ ಅನೇಕ ರೀತಿಯಲ್ಲಿ ಅನುಕೂಲ ಮಾಡಿಕೊಟ್ಟರು.

“ಪ್ರಜೆಗಳೆಲ್ಲ ನನ್ನ ಮಕ್ಕಳು. ನನಗಾಗಿ ನಾನು ರಾಜನಲ್ಲ. ನಾನು ಪ್ರಜೆಗಳ ರಾಜ. ಅವರಿಗೆ ಮೋಸ ಮಾಡಿದರೆ ದೇವರು ಖಂಡಿತ ಮೆಚ್ಚುವುದಿಲ್ಲ. ಪ್ರಜೆಗಳನ್ನು ಸುಖವಾಗಿಡುವುದು ನನ್ನ ಕರ್ತವ್ಯ” ಎಂದು ಕಂಠೀರವರು ಹೇಳುತ್ತಲೇ ಇದ್ದರು. ನುಡಿದಂತೆ ಅವರು ನಡೆದುಕೊಂಡರು.

ರಾಜಧಾನಿಯ ಸುತ್ತಲಿದ್ದ ಕೋಟೆಯನ್ನು ಒಡೆಯರು ಭದ್ರ ಮಾಡಿದರು. ಅದಕ್ಕಾಗಿ ಕೋಟೆಯ ಸುತ್ತಲೂ ದೊಡ್ಡ ದೊಡ್ಡ ಕಲ್ಲುಗಳನ್ನು ಹಾಕಿಸಿದರು. ಅವರು ಅಲ್ಲಲ್ಲಿ ಮನೆಗಳನ್ನು ಕಟ್ಟಿಸಿ ಆಯುಧ, ಮದ್ದು ಗುಂಡುಗಳನ್ನು ಶೇಖರಿಸಿಡುವಂತೆ ಮಾಡಿದರು. ಕೋಟೆಯ ರಕ್ಷಣೆಗೆ ಸುತ್ತಲೂ ಅನೇಕ ಫೀರಂಗಿಗಳನ್ನಿಡಿಸಿದರು. ಪ್ರವಾಹ ಕಾಲದಲ್ಲಿ ಕಾವೇರಿ ನದಿಯಿಂದ ಜನರಿಗೆ ಕೋಟೆಯ ಒಳಗೂ ಹೊರಗೂ ಓಡಾಡಲು ತುಂಬ ತೊಂದರೆಯಾಗುತ್ತಿತ್ತು. ಅದನ್ನು ತಪ್ಪಿಸಲು ಕಂಠೀರವರು ನದಿಗೆ ಎರಡು ಸೇತುವೆಗಳನ್ನು ಹಾಕಿಸಿದರು. ಸೇತುವೆ ಮೇಲ್ಭಾಗದಿಂದ ತರಲಾದ ಹೊಸ ಕಾಲುವೆಗೆ ಅವರೇ “ಬಂಗಾರದೊಡ್ಡಿ ಕಾಲುವೆ” ಎಂದು ಹೆಸರಿಟ್ಟರು.

ಕಂಠೀರವರ ಆಡಳಿತ ಕಾಲದಲ್ಲಿ ಮೈಸೂರು ರಾಜ್ಯದ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣ ಸುಖ, ಸಂಪತ್ತು, ವೈಭವದಿಂದ ಕಂಗೊಳಿಸುತ್ತಿತ್ತು. ಸುಂದರವಾದ ರಾಜಧಾನಿಯ ಸುತ್ತಲೂ ಭದ್ರವಾದ ಕಲ್ಲಿನ ಕೋಟೆ, ವಿಶಾಲವಾದ ಬೀದಿಗಳು, ದೊಡ್ಡ ದೊಡ್ಡ ಭವನಗಳು, ಹೂ ಹಣ್ಣಿನ ತೋಟಗಳು, ಚಿನ್ನದ ಗೋಪುರಗಳಿದ್ದ ಅರಮನೆಗಳು ನೋಡುವವರ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತಿದ್ದವು. ಅರಮನೆಗೆ ಹೋಗುವ ರಾಜಬೀದಿ ಮತ್ತು ಹೆಬ್ಬಾಗಿಲನ್ನು ಮುತ್ತಿನ ತೋರಣಗಳಿಂದ ಅಲಂಕರಿಸುತ್ತಿದ್ದರು. ಯುದ್ಧ ಕಾಲದಲ್ಲಿ ಕೋಟೆಯ ಒಳಗಿರುವ ಜನರಿಗೆ ತೊಂದರೆಯಾಗಬಾರದೆಂದು ಒಡೆಯರು ದೊಡ್ಡ ದೊಡ್ಡ ಉಗ್ರಾಣಗಳನ್ನು ಕಟ್ಟಿಸಿದರು. ಅವುಗಳಲ್ಲಿ ದವಸ, ಧಾನ್ಯಗಳನ್ನು ಶೇಖರಿಸಿಡುವ ವ್ಯವಸ್ಥೆ ಮಾಡಿದರು. ಅವರ ಕಾಲದಲ್ಲಿ ಮೈಸೂರು ರಾಜ್ಯ ಧರ್ಮದ ನೆಲೆಯಾಯಿತು. ವಿದ್ಯೆ ಮತ್ತು ಕಲೆಗಳ ತೌರು ಮನೆಯಾಯಿತು. ನ್ಯಾಯ, ನಿಷ್ಠೆಯಿಂದ ರಾಜ್ಯವಾಳಿ, ಕನ್ನಡನಾಡಿನ ರಕ್ಷಣೆಗಾಗಿ ತಮ್ಮ ದೇಹವನ್ನೇ ಮುಡಿಪಾಗಿಟ್ಟು ಅವರು ಜನರ ಪ್ರೀತಿ ಗೌರವಗಳನ್ನು ಸಂಪಾದಿಸಿದರು.

ಆದರ್ಶ ವ್ಯಕ್ತಿತ್ವ

ರಣಧೀರ ಕಂಠೀರವರು ಅನೇಕ ಸದ್ಗುಣಗಳಿಂದ ಶೋಭಿಸುತ್ತಿದ್ದರು. ಬಾಲ್ಯದಿಂದ ಅವರು ದೇಶ ಪ್ರೇಮಿಗಳು, ಕರ್ತವ್ಯ ನಿಷ್ಠರು. ಧೈರ್ಯ, ಸಾಹಸ, ದೇಶ ಭಕ್ತಿಗೆ ಅವರಿಗೆ ರಕ್ತಗತವಾಗಿ ಬಂದಿದ್ದವು. ದೇಶ ದ್ರೋಹಿಗಳನ್ನು, ಶತ್ರುಗಳನ್ನು ಸದೆಬಡಿದು ಅವರು ರಾಜ್ಯವನ್ನು ರಕ್ಷಿಸಿದರು. ವಿಜಯನಗರ ರಾಜ್ಯದ ಶಕ್ತಿ ಕುಂದುತ್ತಿತ್ತು, ಅದರ ಶತ್ರಗಳು ಪ್ರಬಲರಾಗದಂತೆ ಕಂಠೀರವರು ತಡೆದು. ದೇಶ ಹಿತ, ದೇಶರಕ್ಷಣೆಯೇ ಅವರ ವ್ರತವಾಗಿತ್ತು. ಪ್ರಜಾಪಾಲನೆಯೆ ಅವರ ಕರ್ತವ್ಯ. ಬಲಿಷ್ಠವಾದ ತೋಳುಗಳಿದ್ದಂತೆ ಅವರ ಬುದ್ಧಿಯೂ ತುಂಬ ಚುರುಕಾಗಿತ್ತು. ದೇವರಲ್ಲಿ ಅವರಿಗೆ ತುಂಬ ಭಕ್ತಿ.

ಒಡೆಯರು ನುರಿತ ಶಿಲ್ಪಿಗಳನ್ನು ಬರಮಾಡಿಕೊಂಡು ಅವರಿಗೆ ಕೈತುಂಬ ಹಣ ಕೊಟ್ಟು ರಾಜ್ಯದ ಅನೇಕ ಕಡೆಗಳಲ್ಲಿ ದೇವಾಲಯಗಳನ್ನು ಕಟ್ಟಿಸಿದರು. ಶ್ರೀರಂಗಪಟ್ಟಣದಲ್ಲಿ ರಂಗನಾಥಸ್ವಾಮಿ ಗುಡಿಯನ್ನು ಹೋಲುವಂತಹ ಒಂದು ದೊಡ್ಡ ದೇವಸ್ಥಾನವನ್ನು ಕಟ್ಟಿಸಿದರು. ಆ ದೇವಸ್ಥಾನದಲ್ಲಿ ನರಸಿಂಹ ದೇವರನ್ನು ಪ್ರತಿಷ್ಠೆ ಮಾಡಿಸಿದರು. ನಂಜನಗೂಡಿನಲ್ಲಿ ಕೊಂಡಿನೀ ನದಿಗೆ ಅವರು ಆಣೆಕಟ್ಟು ಹಾಕಿಸಿ “ನರಸಾಂಬುಧಿ” ಸರೋವರವನ್ನು ಕಟ್ಟಿಸಿದರು. ಇದರಿಂದ ಊರಿನ ಜನರಿಗೆ ಅನುಕೂಲವಾಯಿತು. ರಾಜ್ಯದ ಎಲ್ಲ ಪುಣ್ಯಕ್ಷೇತ್ರಗಳಲ್ಲಿ ಮತ್ತು ಶ್ರೀರಂಗಕ್ಷೇತ್ರ ಮತ್ತು ಕಾಶಿಗಳಲ್ಲಿ ಒಡೆಯರು ಅನ್ನಸತ್ರಗಳನ್ನು ಕಟ್ಟಿಸಿದರು. ಇದರಿಂದ ಪರಸ್ಥಳದ ಯಾತ್ರಿಕರಿಗೆ ತುಂಬ ಅನುಕೂಲವಾಯಿತು.

ಕಂಠೀರವರು ತಂದೆತಾಯಿಗಳನ್ನು ಪ್ರತ್ಯಕ್ಷ ದೇವರೆಂದು ತಿಳಿದು ಅವರೊಡನೆ ಭಕ್ತಿ, ಗೌರವಗಳಿಂದ ನಡೆದುಕೊಳ್ಳುತ್ತಿದ್ದರು. ಕಂಠೀರವರು ಕೊಡುಗೈ ದಾನಿ. ಕೇಳಿದವರಿಗೆ ಇಲ್ಲ ಎನ್ನದೆ ಕೈತುಂಬ ಹಣ ಕೊಟ್ಟು ಕಳುಹಿಸುತ್ತಿದ್ದರು.

ರಣಧೀರ ಒಡೆಯರು ಸಂಗೀತ ಪ್ರೇಮಿಗಳು, ಸಾಹಿತ್ಯದ ಆರಾಧಕರು ಮತ್ತು ಕಲೋಪಾಸಕರು. ಸಂಗೀತ ಮತ್ತು ಶಿಲ್ಪಕಲೆಗೆ ತುಂಬ ಪ್ರೋತ್ಸಾಹ ಕೊಟ್ಟರು. ಆ ಸ್ಥಾನದಲ್ಲಿ ಪ್ರತಿರಾತ್ರಿಯೂ ಅವರು ರಾಜಸಭೆ ನಡೆಸುತ್ತಿದ್ದರು. ಸಂಗೀತ ನಾಟ್ಯಗಳನ್ನು ಏರ್ಪಡಿಸಿ ಸಭಿಕರಿಗೆ ಮನರಂಜನೆ ಒದಗಿಸುವ ಏರ್ಪಾಡು ಮಾಡುತ್ತಿದ್ದರು. ಅವರ ಕಾಲದಲ್ಲಿ ಅನೇಕ ಧೀರ ನಾಯಕರು, ಶಿಲ್ಪಿಗಳು, ವಿದ್ವಾಸಂರು, ಕಲಾವಿದರು ಬೆಳಕಿಗೆ ಬಂದರು. ರಾಜ ಸಭೆಗೆ ಒಡೆಯರು ವಿದ್ವಾಂಸರನ್ನು ಬರಮಾಡಿಕೊಂಡು ಚರ್ಚಾಗೋಷ್ಠಿ, ವಿಮರ್ಶಾಗೋಷ್ಠಿ, ಅಧ್ಯಯನಗೋಷ್ಠಿಗಳನ್ನು ನಡೆಸುತ್ತಿದ್ದರು. ಗೋಷ್ಠಿಗಳಲ್ಲಿ ವ್ಯಾಕರಣ, ನಾಟಕಕಲೆ, ಶಾಸ್ತ್ರ ಸಾಹಿತ್ಯ, ಇತಿಹಾಸ, ರಾಜಕೀಯ ಮುಂತಾದ ವಿಷಯಗಳನ್ನು ಕುರಿತು ಚರ್ಚೆ ನಡೆಸುತ್ತಿದ್ದರು.

ಪ್ರಜಾವಾತ್ಸಲ್ಯ, ಲೋಕಕಲ್ಯಾಣ, ನ್ಯಾಯ ನಿಷ್ಠುರತೆ ಮುಂತಾದ ಸದ್ಗುಣಗಳಿಂದ ಕೂಡಿದ ಕಂಠೀರವರು ಕನ್ನಡ ರಾಜ್ಯ, ಕನ್ನಡ ಸಂಸ್ಕೃತಿ ಮತ್ತು ಕನ್ನಡ ಜನರನ್ನು ಕಾಪಾಡಿದರು. ಅವರಿಂದ ಮೈಸೂರು ಸಿಂಹಾಸನದ ಕೀರ್ತಿ ದೇಶದಲ್ಲೆಲ್ಲಾ ಹಬ್ಬಿತು. ವ್ಯವಹಾರ ಚತುರರಾದ ಕಂಠೀರವರು ಅನೇಕ ಶತ್ರುಗಳನ್ನು ತಮ್ಮ ಮಿತ್ರರನ್ನಾಗಿ ಮಾಡಿಕೊಂಡರು. ಹಿರಿಯ ಆದರ್ಶ, ಶ್ರೇಷ್ಠ ಧರ್ಮಗಳನ್ನು ಅವರು ಅನುಸರಿಸಿದರು. ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಂಡರು. ಹಣದ ಸಹಾಯ ಮಾಡಿ ರೈತರಿಗೆಲ್ಲ ವ್ಯವಸಾಯಕ್ಕೆ ಒಡೆಯರು ಅನುಕೂಲ ಮಾಡಿಕೊಟ್ಟರು.

ಕಂಠೀರವರು ಆಕರ್ಷಕ ವ್ಯಕ್ತಿತ್ವ, ಭವ್ಯವಾದ ನಿಲುವು. ಒಂದು ಸಲ ನೋಡಿದವರಿಗೆ ಮತ್ತೆ ಮತ್ತೆ ಅವರನ್ನು ನೋಡಬೇಕೆನಿಸುತ್ತಿತ್ತು. ಸದಾ ಕಾಲವೂ ಒಡೆಯರು ಭರ್ಜರಿಯಾಗಿ ಉಡುಪು ಧರಿಸುತ್ತಿದ್ದರು. ನವರತ್ನದ ಬೆಲೆಬಾಳುವ ಆಭರಣಗಳನ್ನು ಹಾಕಿಕೊಂಡು ತಲೆಗೆ ಜರತಾರಿ ಕಸೂತಿಯ ರುಮಾಲು ಕಟ್ಟಿಕೊಳ್ಳುತ್ತಿದ್ದರು. ಕಾಲಿಗೆ ವಜ್ರಖಚಿತವಾದ ಚಿನ್ನದ ಚಪ್ಪಲಿಗಳು.

ಅನೇಕ ಸಾಹಸ, ಸಾಧನೆ, ದಿಗ್ವಿಜಯ, ಸತ್ಕಾರ್ಯಗಳಿಂದ ಕಂಠೀರವರು ಮೈಸೂರು ರಾಜ್ಯವನ್ನು ಇಪ್ಪತ್ತೊಂದು ವರ್ಷಕಾಲ ಆಳಿ ೧೬೫೯ ರಲ್ಲಿ ತಮ್ಮ ೪೪ನೇ ವಯಸ್ಸಿನಲ್ಲಿ ಸ್ವರ್ಗಸ್ಥರಾದರು. ಕಂಠೀರವರ ನೆನಪಿಗಾಗಿ ಅವರ ರಾಣಿಯವರು ೧೬೬೨ರಲ್ಲಿ ಕಳಲೆಯಲ್ಲಿ ಒಂದು ಮಠ ಕಟ್ಟಿಸಿದರು.

ಪ್ರಚಂಡ ಶಕ್ತಿ, ಚೈತನ್ಯಗಳೊಂದಿಗೆ ಭೋರ್ಗರೆಯುತ್ತಾ ಸಿಕ್ಕಿದ ಅಡ್ಡಿಗಳನ್ನು ಕೊಚ್ಚಿಕೊಂಡು ಗುರಿ ಮುಟ್ಟುವ ಉದ್ದೇಶದಿಂದ ಹರಿಯುವ ನದಿಯ ಪ್ರವಾಹದಂತೆ ಕಂಠೀರವರ ಜೀವನ.