ರಾಗ ಶಂಕರಾಭರಣ

ದುರುಳ ಕೇಳೆಲಾ | ದುಗುಡವೇನೆಲಾ |
ಕೊರಳಕಡಿವೆನೆನುತ ಕೂರ್ಗಣೆಗಳೆಸೆದನೂ ||೧೬೯||

ಕಡಿವುತಸ್ತ್ರವಾ | ಖಳನು ರೋಷವಾ
ವಡನೆ ತಾಳಿ ವರಶರೌಗವೆಚ್ಚನಾಕ್ಷಣ ||೧೭೦||

ಖಳನ ಶರವನೂ ಕಂಡು ರಾಮನೂ |
ಭಳಿರೆನುತ್ತಾ ಖಡ್ಗದಿಂದ ಬಡಿದದುಷ್ಟನಾ ||೧೭೧||

ಕಡುಗದಿರಿತದಿ | ಕಾಲನಂದದೀ |
ಪಡಪಡೆನುತ ಶೂಲವೆತ್ತಿ ಹೊಡೆದ ಖತಿಯಲಿ ||೧೭೨||

ಅಶಿಕಶೀಲನು | ಅಂದು ಖಳನನು |
ಮುಸುಲವೆತ್ತಿ ಪೊಡೆಯಲಾಗ ಮೂರ್ಚ್ಛೆಗೈದನೂ ||೧೭೩||

ಭಾಮಿನಿ

ಧರಣಿಯಲಿ ಮುಂದೆರಡುದಿನಋಣ |
ವಿರುವಕಾರಣದಿಂದ ಬದುಕಿದ |
ಹೊರತು ಮುಸುಲಾಯುಧದ ಗಾಯದಿ ಉಳಿದ ಜನರುಂಟೇ ||
ದುರುಳರತ್ಯಂತಾಯಸದಿ ಚೇ |
ತರಿಸಿಕೊಂಡೆಡಬಲವ ನೀಕ್ಷಿಸು
ತಿರಲು ಯದುಕುಲತುಡುಕಲಾ ಬಲರಾಮನಿಂತೆಂದಾ ||೧೭೪||

ವಾರ್ಧಕ

ಆಹ ಕೆಡಿಸುವಿರಿನ್ನು ಕಲಹ ಇಂದಿಗೆ ಸಾಕು |
ಸಹಜವಲ್ಲೀಗ ಘನ ಕಾರ‍್ಯವೊಂದುಂಟು ಮ |
ತ್ತಹಿತನಲ್ಲಿವನು ನಮ್ಮಣ್ಣನಾಗಿಹನೈಸೆ ಕೃಷ್ಣ ಬರುವನಕನೀವು |
ಸಹನೆಯಿಂದೀ ಜೀವಮಾತ್ರವನ್ನುಳಿಸೆಂದು
ಬಹುವಿಧದಿ ಯಾದವರನೊಡಬಡಿಸಿ ನಿಜಸೈನ್ಯ |
ಸಹಿತ ಅಂತಃಪುರಕೆ ನಡೆತಂದ ಬಲರಾಮನತಿವಾದ್ಯ ಘೋಷದಿಂದಾ ||೧೭೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕ್ಷೋಣಿಪತಿ ಕೇಳ್ ಮೂರ್ಖರವಗುಣ | ಚೂಣಿಗಾಯ ದೊಳಡಗುವುದೆ ಕೇಳ್ |
ಪ್ರಾಣಮಾತ್ರದಿ ಪವುಂಡ್ರಕನು ನಿಜಠಾಣ್ಯ ಕೈದಾ ||೧೭೬||

ಮರುದಿವಸ ದುರ್ವಸನವನು ತಾ | ಳ್ಪುರತರದಹಂಕಾರದಲಿ ದಳ |
ವೆರಸಿಮುತ್ತಿದ ರಾತ್ರೆಯಲಿಂ ತು | ಮರಳಿಬಂದೂ ||೧೭೭||

ಧಾರುಣೀಯೊಳು ಚೋದ್ಯವೆನಿಸಿ ಕ | ಠೋರ ಕದನಗಳಾಗುತಿರೆ ಭರ
ವೇರಿಕಳಕಳವಾದುದಂತಿಪ್ಪ | ಊರಜನರೂ ||೧೭೮||

ವಾರ್ಧಕ

ಆರನೆಯದಿನದಿತ್ತ ಕಮಲಾಕ್ಷ ನಡೆತಂದು |
ದ್ವಾರಕಿಗೆ ಬಂದು ವಸುದೇವ ಮುಖ್ಯರಿಗೆರಗಿ |
ವೀರರಂ ಮನ್ನಿಸುತ ರುಕ್ಮಿಣೀ ಮೊದಲಾದ ಸತಿಯರಂ ಸಂತೈಸುತಾ ||
ಆರೋಗಣೆಯಗೈದು ರತ್ನಸಿಂಹಾಸನವ |
ನೇರಿ ಪವುಂಡ್ರಕನಿರವ ಕೇಳಿ ನಸುನಗುತಿರಲ್ |
ಭೂರಿ ಬೇಗದಿ ಖಳನ ಬಳಿಯಿಂದ ಚರರೀರ‍್ವರೈತಂದು ಮಣಿದೆಂದರೂ ||೧೭೯||

ರಾಗ ಸೌರಾಷ್ಟ್ರ ತ್ರಿವುಡೆತಾಳ

ನಂದನಂದನ ಲಾಲಿಸೊ | ನಾವೆಂಬುದ | ನಂದದಿಂದೋಲಾಲಿಸು || ಪಲ್ಲ ||

ಹಿಂದೆ ಕಾಶಿದೇಶದರಸನ | ಮಗಳಾಗೋ | ವಿಂದ ನಿಮ್ಮಯ್ಯ | ಕೈಪಿಡಿದ ಕಾರಣದಿಂದಾ || ಅ.ಪ. ||

ಆಪತಿವೃತೆಯೊಳಿಂದು | ಪವುಂಡ್ರಕನೆಂಬಾ | ಭೂಪ ಪುಟ್ಟಿದ ನೋಡಿಂದೂ |
ಆ ಪರಾಕ್ರಮಿಯ ಪ್ರತಾಪಕಿನ್ನಿದಿರಿಲ್ಲಾ | ಗೋಪಾಂಗನೆಯರ ಸೊಲ್ಲಿಪದಂತಲ್ಲಾ || ನಂದ ||೧೮೦||

ದುಮ್ಮಾನದಲ್ಲಿ ದಂಡೆತ್ತಿ | ಬರುವದು ಕೇಳ್ | ನಿಮ್ಮ ಪಟ್ಟಣವನೊತ್ತಿ ||
ತಮ್ಮನೆಂಬಾಸೆ ಇಂದೊಮ್ಮೆ ಮುತ್ತುವದು | ಸದ್ದರ್ಮವಲ್ಲೆಂದು ಮತ್ತೆಮ್ಮ ನಟ್ಟಿದನಿಲ್ಲಿ ||೧೮೧||

ವಾಸು ಕೀರ್ತಿಸು ವಾಮನಾ | ಪೀತಾಂಬರ | ವಾಸುದೇವಾಭಿದಾನಾ ||
ಈಶಂಕಚಕ್ರಭ್ಜ ಭೂಷಣ ಚತುರ್ಭುಜ | ಸಾಸಿರನಾಮವೆಲ್ಲಾ ಸಮರರ್ಗೆ ಯೋಗ್ಯಾ ||೧೮೨||

ಇನ್ನಾದರಿದನೆಲ್ಲನೂ | ತಂದೊಪ್ಪಿಸಿ | ಮನ್ನಿಸಿದರೆ ನಿಮ್ಮನೂ |
ಭಿನ್ನವಿಲ್ಲದೆ ತನ್ನ ಬೆನ್ನಂತೆ ನೋಳ್ಪನು | ನಿನ್ನನೆ ಕೈಮುಟ್ಟಿ ಸಂಪನ್ನಾ ಪೇಳಿರುವಾ || ||೧೮೩||

ಭಾಮಿನಿ

ಇಂತು ಚರರೆಂದುದನು ಕೇಳುತ |
ಸಂತಸದಿ ಹರಿನಗುತಲೆಂದನೂ |
ಚಿಂತೆಯೇನಿದು ನಮಗೆ ಭಾದ್ಯಾರು ನಾವು ಬಾಲಕರೂ ||
ಪಂಥವೇತಕೆ ಹಿರಿಯರಲಿ ಬಲ |
ವಂತ ನಾಮೊದಲಿಲ್ಲಾ ಸಮರದಿ |
ತಂತು ಮಾತ್ರವ ತೋರಿಕೊಡುವೆ ಸಮಸ್ತ ಬಿರುದುಗಳಾ ||೧೮೪||

ಕಂದ

ಇಂತೆಂದು ದೂತರನುಂ |
ಕಂತುಪಿತನು ಬೀಳ್ಕೊಟ್ಟು ಪರಮಕರುಣಾರ್ಣವದೀ
ಸಂತೈಸುತನಿಜಸೈನ್ಯವ |
ಅಂತಕನೆದೆನಡುಗುವಂತೆ ನಡೆದನಾ ಹವಕಂ ||

ರಾಗ ಪಂತುವರಾಳಿ ರೂಪಕತಾಳ

ವಾರಿಜಾಕ್ಷ ನಡೆದ ಸಮರಕೆ | ಸಂತೋಷದಿಂದಾ | ಸರಸಿಜಾಕ್ಷ ನಡದ ಸಮರಕೆ || ಪಲ್ಲ ||

ತರತರದಲಿ ಛತ್ರಚಾಮರ ನಿಶಾನಿ ಸಾಲ್ಗೆ ಎರಡು ತಟ್ಟಿನಲಿ ವೀಲಾಸವೆರಡು ಹರಿ ನಿರೀಕ್ಷಿಸುತ್ತ ರೋಶದಿ ಝೇಂಕರಿಸಿ ಮೆರೆವುತಿಹ ನಗಾರಿ ಘೋಶದೀ ಇಂದಿರೇಶ ಭರದೊಳೈದಿ ಗರುಡನೇರಿದಾ | ಕರದ ಮೇಲ್ವರಿಯತೆರದಿ | ಇಂದಿರೇಶ ನಡದ ಸಮರಕೆ ||೧೮೫||

ಜಂಭವೈರಿ ಮುಖ್ಯ ಸುರಕದಂಭವೆಲ್ಲಾ ತಮ್ಮ ತಮ್ಮವರ |
ಕುಂಭಿಣಿಯರ ಕೂಡಿ ಗಗನತುಂಬಿ ಮುಸುಕುವಂತೆ ಕೇಳು |
ಅಂಬುಜಾಕ್ಷಪುರದ ಯಾದವಾದಿಗಳ ಕೂಡೆ |
ಸಂಭ್ರಮದಲಿ ಸರಸವಾಡುವಾಟ ರಚಿಸುತ ವಿ |
ಜ್ರುಂಭಮಾತ ಸೇರಿ ರಿಪುಗಳುಂಭಿನಿಂದಾ ಸವರುತಾಗಾ |
ಸರಸಿಜಾಕ್ಷ ನಡದ ಸಮರಕೆ | ||೧೮೬||

ವಾರ್ಧಕ

ಏನೆಂಬೆನದುಭುತವಸುರಿಯಾಹವದಿನೃಪಾ |
ಸೇನೆಗಳ್ ಬೆದರೆಹಿಮ್ಮೆಟ್ಟಲಾ ಖಳತನ್ನ
ವೈನತೇಯನಡರ್ದು ಕರಚತುಷ್ಟಯದಿಂದ ಧುರಕೈದಿ ಬಂದು ನಿಲಲು ||
ನಾನಾ ವಿಚಿತ್ರ ಬಿರುದುಗಳಿಂದ ವೀಕ್ಷಿಸುತ |
ದಾನವಾಂತಕ ಮಹೋಲ್ಲಾಸದಿಂ ಗಹಗಹಿಸಿ |
ಮಾನಕಂಜುವನಲ್ಲಾ ಎಂದು ನಿಶ್ಚೈಸಿ ಮತ್ತಿಂತೆಂದ ಖೂಳನೊಡನೇ ||೧೮೭||

ಭಾಮಿನಿ

ಅಣ್ಣನವರೇ ನಮ್ಮ ಗರುಡನ |
ಬಣ್ಣ ಮಿಗಿಲಾಗಿಹುದು ಪುತ್ತಳಿ |
ವರ್ಣದಂತಿದೆ ಮರವೊಮಣ್ಮರದಿಂದಲೊಪ್ಪುವದೊ ||
ಮಿಣ್ಣಗಿಹುದೀ ಪಕ್ಷಿಮಹಿಮೆಯ |
ಬಣ್ಣಿಸುವರೆನಗಳವೆ ನೀವದ |
ಸಣ್ಣವನ ಮೇಲ್ದಯದಿ ಹಾರಿಸಿ ತೋರಬೇಕೆಂದಾ ||೧೮೮||

ರಾಗ ಶಂಕರಭಾರಣ ಮಟ್ಟೆತಾಳ

ಹರಿವಿನೋದವೆರದು ಪೇಳ್ದಾನುರುತರಾಗ್ರದೀ |
ದುರುಳಬೋರ್ಗರವುತೆಂದ ದುರದ ಮಧ್ಯದೀ ||
ತರಳನೆಂಬ ಮರದನುಡಿಯ ಮರಸಿಬಿಡುವೆನೊ |
ಮರುಳೆ ಸಂಗರದಿ ಹಲ್ಲಾ ಮುರಿಸಿಕೊಡುವೆನೂ ||೧೮೯||

ನಿಲ್ಲೆಲೋ ವಿಚಾರವುಂಟು ಕಳ್ಳ ನೋಡಿಕೋ |
ಸುಳ್ಳುಸಟಿಯಾನೆಲ್ಲ ಗೊಲ್ಲರಲ್ಲಿತೋರಿಕೋ ||
ಬಲ್ಲೆ ನಿನ್ನಾ ಬಿರಿದುಗಳಿಗ್ಯಾಕೆ ಕಂಡಿತೂ |
ಸಲ್ಲಾವಿನ್ನು ಬರಿಬೆಸವುರ‍್ಯಾವೆಲ್ಲಾನಿಗಿತ್ತು ||೧೯೦||

ಹಿಂಡು ಗೋವ್ಗಳನು ಕಾದಲಂಡತನದಲೀ |
ಕಂಡಕಂಡವರ ಮನೆಯೊಳುಂಡು ಸುಖದಲೀ |
ಮಿಂಡಿ ಪೆಣ್ಗಳೊಡನೆ ಕುಣಿವ ಭಂಡವೃತ್ತಿಯಾ |
ಕಂಡಿಸೀಗಾ ತೋರ್ಪೆ ನಿನ್ನ ಪುಂಡಚೇಷ್ಟೆಯಾ ||೧೯೧||

ಯದುಕುಲಾಗ್ರಗಣ್ಯನಾದ ಉದರಭರಣಕೆ |
ದಧಿಯ ಪಾಲ್ಬೆಣ್ಣೆ ಕದ್ದು ಮೆಲುವದ್ಯಾತಕೆ ||
ಮುದುಕ ಸಹಿತಯನ್ನ ಬಳಿಗೆ ಮುದದಿ ಬಂದರೆ |
ಸದೆಯದಿನ್ನು ಸಲಹಿಕೊಂಬೆ ಬೆದರಿನಿಂದರೇ ||೧೯೨||

ಮತಿವಿಹೀನ ಪುತ್ರರುದಿಸಿ ಸತತ ಕೀರ್ತಿಯಾ |
ಕ್ಷಿತಿಯೊಳೆಲ್ಲಾ ತುಂಬಿಸಿದಿರಿ ಪಿತನ ಬಾಳ್ವೆಯಾ |
ಅತಿಶಯವು ಚಂದವಾತು ಕೃತಕ ನಿನ್ನನೊ |
ಹತವ ಮಾಳ್ಪೆನೆನುತ ಬಾಣಕತಿಯೊಳೆಸದನೂ ||೧೯೩||

ವಾರ್ಧಕ

ಧರಣಿಪತಿ ಕೇಳ್ಬಳಿಕ ಹರಿಯಕವುತುಕವ ನೆಂ |
ತೊರವೆ ನಾಖಗಪತಿಗೆ ನಮಿಸಲವ ಬಂದೆರಗಿ |
ಮೆರೆವ ಚಿನ್ನದಗರುಡ ನೂತನದಕರದ್ವಯದ ಆಭರಣ ಬಿರುದುಗಳನೂ |
ಚರಣಚಂಚುಕ ಪುಟಗಳಿಂದ ತಂದಾಕ್ಷಣಂ |
ಮುರಹರನ ಮುಂದಿಡುತಿರಲ್ |
ದುರುಳ ತಲೆಕೆಳಗಾಗಿ ಬೀಳುತಿರೆ ಕಂಡು ಹರಿ ತಾನಗುತಲಿಂತೆಂದನೂ ||೧೯೪||

ಭಾಮಿನಿ

ಗರುಡವಾಹನವೆಲ್ಲ್ಲಿ ನಿಮ್ಮಯ |
ಕರಗಳೆರಡೇನಾಯ್ತು ಪೀತಾಂ |
ಬರ ಸುದರ್ಶನ ದಿವ್ಯ ಮುಖ್ಯಾಭರಣ ಮೊದಲಿಲ್ಲಾ ||
ಬರಿದೆ ಧರಣೀ ತಳದಿ ಪೊಗಳುವ |
ಪರಿಯದೇನಾಶ್ಚರ್ಯ ಭೂತ |
ಸ್ವರವೊ ಪೈಶಾಚಿಕವೊ ನೀಪೇಳೆಂದನಸುರಾರೀ ||೧೯೫||

ರಾಗ ಶಂಕರಾಭರಣ ಮಟ್ಟೆತಾಳ

ಮಾನಭಂಗವೆಸವುತಾ ಸುಮ್ಮಾನದಿಂದಾ ಜರೆಯ ಕೇಳುತಾ |
ಆನರೇಂದ್ರನುರಿಯನುಗುಳುತಾಧಿಕ ರೋಷದೀ ||
ಭಾನುಮುಸುಕುವಂತೆ ಶರವಿತಾನದಿಂದ ಯಾದವಾದಿ |
ಸೇನೆಗಡಂ ಪೊಕ್ಕನಾರ್ಭಟಿಸಿ ರೋಷದೀ ||೧೯೬||

ದುರುಳನೆಚ್ಚ ಶರಗಳೆಲ್ಲಾ ತರಿದು ಫಡಧಡೆನುತನ್ನ
ಹಿರಿಯನೆಂದು | ತಡದರಿಂತು ಗರ್ವವೇನೆಲ್ಲಾ |
ಶಿರವನರಿದು || ಭೂತಗಣಕೆ ಹರುಷದಿಂದ ಉಣಿಸಿಬಿಡದೆ |
ಧುರದಿನಿಲ್ಲು ನಿಲ್ಲೆನುತ ಸುರಿದ ಬಾಣವಾ ||೧೯೭||

ಚೋರ ಚೋರ ತನವ ಮಾಳ್ಪೆ ಪೋರಾನಿನಗೆಯೇನು ರಣವಿ
ಚಾರ ಬಲ್ಲೆ ನೋಡು ನೀನು ನಿಮುಶ ಮಾತ್ರದೀ |
ಮಾರಬೇಡಾ ತೆಂಕದಿಕ್ಕು ನೂರಪೋಗಿಸಿ ತೋರ್ಪೆ
ನುತ ಭಾರಿಗದೆಯ ನೆತ್ತಿ ಹೊದಾ ಖಮ್ಮನಿರೋಶದೀ || ||೧೯೮||

ವಗದಿಬರುವ ಗದೆಯ ಮುರಿದು ಪದುಮನಾಭ ನಿನ್ನದು
ರ್ಮದವ ನಿಲಿಸಿಕೊಡುವೆ ನೀಗ ಕದನ ಮಧ್ಯದೀ |
ಸದರವಾಯ್ತು ಕದನ ನಿನಗೇ ತುದಿಯದೀಗ ಯೆನುತ ಕೂಳ |
ನೆದೆಯಾ ತಿವಿಯೆ ಕುಂತದಿಂದ ಕುದಿವರೋಶದೀ ||೧೯೯||

ಉರು ಕಠೋರವಾದ ಕುಂತ | ಧುರಕೆ ಬೊಬ್ಬಿಡುತ್ತ ಧರಣಿ |
ಬಿರಿವತೇರೊ ಳೊದರೆ ಭೋರ್ಮೆರವ ಖಡುಗದೀ ||೨೦೦||

ಭರದೊಳೆತ್ತಿ ತಿರುಹಿ ಮೇಲ್ವರಿದು ಪೊಡವುತಿರಲು | ಕಂಡು
ಕರಗಳೆರಡು ಕಡಿಯೆ ಶೌರಿತಾಳ್ದ ರೋಷದೀ ||೨೦೧||

ಭಳಿರೆ ಭಳಿರೆ ನೋಡು ಕಾಲುಗಳಿಗೆ ಮಾತ್ರವೆನುತ ಉ
ಮ್ಮಳಿಸಿ ಚಕ್ರ ಬಿಡಲು ಪಿಡಿದು ಮಿಂಚಿನಂದದಿ |
ಮೊಳಗುತಾರ್ಭಟಿಸಿ ಬಂದು ಖಳನಶಿರವ ಭರದಿ ಭೂಮಿ
ಗಿಳುಹಿಮೆರೆದುದಾಗ ಹರಿಯ ಹಸ್ತದೀ ||೨೦೨||

ಭಾಮಿನಿ

ಅರಸಕೇಳ್ ಪೌವುಂಡ್ರಕನ ಶಿರವನು |
ಪರಿಹರಿಸಿಯದು ಮೋಹರವೆರಸಿ |
ಹರಿಯು ಪರಮಾನಂದದಲಿ ರಣಭೂಮಿ ಈಕ್ಷಿಸುತ ||
ಮೆರೆವ ಭೇರಿ ಮೃದಂಗ ವಾದ್ಯಾ |
ಸ್ವರದಿ ಪುರಕೈತಂದು ನಿಜಮಂ |
ದಿರವ ಪೊಕ್ಕ ಮಹಾನುಭಾವನು ಮೆರೆದನರ್ತಿಯಲೀ ||೨೦೩||

ಕಂದ
ಅತಿ ಹರುಷದೊಳ ಭುಜಾಂಬಕ
ಸುತನಾಗುವ | ವಾರ್ತೆಯು ರುಕ್ಮಿಣಿಗರುಹಲ್
ಸತಿಮುದದಿಂ | ದುತ್ತಮ
ಮತಿಯಂ ತಾಳುತ ದೂರಕೆಲಜ್ಜಿಸಿ ಸಾರ್ದಳ್ ||೨೦೪||

ರಾಗ ಝಂಪೆತಾಳ

ಸತಿ ಶಿರೋಮಣಿ ಪುಷ್ಪವತಿಯಾದಳು | ಮತಿವಂತೆ ಚಲುವಿಕೆಯ ನುತಿಸಲಳವೆಂಬಂತೆ || ಪಲ್ಲ ||

ಮೃಗಧರನ ಪೋಲ್ವನುಣ್ಮಾದಗ ಮುತ್ತುಗಳಂತೆ |
ಸೊಗೆಯಿಸುವ ವೊಡವೆಮ್ಮ ಸೊಗಸಿನಿಂದೊಲಿದು |
ಮಿಗೆವರ್ಜಿ ದುರುಳಂಪತಿಗಳು ಮೆರವಂದದಲೀ |
ನಗಧರನ ರಾಣಿ ನಸುನಗುತ ದುಮ್ಮಾನದಲ್ಲೀ | ||೨೦೫||

ತರುಣಿ ಮೊಗದಾವರೆಯೊಳಿರುವ ಮಧುರಸವುಂಡು
ಮರಿದುಂಬೆಗಳು ಕುಣಿವಂತೆ ರವಿಮುಂಗುರುಳಾ ||
ಪರಿಶೋಭಿಸುತಂಬರ ಉಟ್ಟು ನೊಲವಿಂದೆಸೆರಗು ಮಾಸಿದೆವೆಂಬ
ಸರಸವಾಡುತ್ತಲಂದೂ ಸತಿ ಶಿರೋಮಣಿ ||೨೦೬||

ಜಲಜಾಕ್ಷ ಚಂದ್ರ ಮಂಡಲವ ಪಣಿತುಡುಕುತಿಹ |
ವಲವನೀಕ್ಷಿಸಿ ಫಣೆಗೆ ತಿಲಕವಿಡಿದಿಹಳೂ ||
ಚೆಲುವೆ ಚಂದ್ರುಟ್ಯಯಾದಲೊಪ್ಪಿನಿನ್ಯಾಕೆನುತ |
ಲಲನೆ ಮುದದಿ ವೀಳ್ಯಕೊಳ್ಳುತ್ತ ||೨೦೭||

ಕಂದ

ಐನೀರನೆರಕೊಂಡು
ಇನನಲಂ | ಕಾರಭೂಷಿತವಾದಳ್
ಶ್ರೀ ನಾರಾಯಣ | ನೀಕ್ಷಿಸೆ
ಮಿನಾಂಕನ | ಬಲೆಸಿಲುಕಿ ವಿರಹತಾಳ್ದಳೂ ||೨೦೮||

ವಾರ್ಧಕ

ಮಗಮಗಿಪ ಸುಮಗಂಧ ಪರಿಮಳಾದಿಗಳಿಂದ |
ಉಗುರೊತ್ತು ಸರಸಚುಂಬನ ವಿನೋದಗಳಿಂದ |
ಸೊಗಸಿನಿಂದವ್ಯತಾಂಬೂಲ ಗುಟಿಕೆಗಳಿಂದ ನಿಲಲತ್ಯ ಭಾವದಿಂದಾ ||
ಮೃಗಧರನ ತಲೆಯ ತೋರೆಂಬಸನ್ನೆಗಳಿಂದ |
ಬಗೆಬಗೆಯ ಸತ್ಕರದಿ ಸರಸವಾದಿಗಳಿಂದ |
ಮುಗುಳಂಬ ನಾಟಕ ವಿಚಿತ್ರ ರಾಸುಗಳಿಂದ ನೆರದ ಸರಸ ರತಿಯಿಂದಾ ||೨೦೯||

ಭಾಮಿನಿ

ಮನಸಿಜಾಗಮ ವಿಧಿಯೊಳೊಂದೇ |
ಮನದಿ ರಾತ್ರೆಯ ನರೆನಿಮಿಷವೆಂ |
ದೆನಿಸಿ ಸನ್ಮೋಹನದೊಳೀರ್ವರು ಬೆವರುಉದಿಸಿದರೂ ||
ವನಿತೆ ಮೊಗದಂಜನಿತ ಬೇರೊಂ |
ದನುಕರಿಸುತಿರೆ ಮುಚ್ಚಿಕಂಗಳು |
ಗನುತಾರನಂದಲಿ ಗರ್ಭವತಾಳ್ದಳಬುಜಾಕ್ಷಿ ||೨೧೦||

ರಾಗ ಕಾಂಭೋಜಿ ಆದಿತಾಳ

ಅಹಹ ಯೇನುಸುರಲಿ ಪಿತಪತ್ರವು ತುಹಿನ ಕಿರಣದಂತೆ |
ಬಹಳ ವಿಲಾಸದಿ ಗರ್ಭವ ಧರಿಸಿದಳ್ ಹರಿಶಯನನ ಕಾಂತೆ ||೨೧೧||

ತರುಣಿಲೋಚನೆ ಕಜ್ಜಳ ಸುಪಯೋಧರಧರನೆ ಈಕ್ಷಿಸುತಾ ||
ಪರಿತಂದಿಹದನುವಂದದಿ ಮೆರದುದು ಗುರುಕುಚದಗ್ರದೊಳು ||೨೧೨||

ಲಲನೆಯ ಕುಮಾಳಿಯೆಂಬಹಿಕೆ ಇರಲು ಕಂಡತಿ ಭರದೀ ||
ವಳಸಂಪವಬಿಟ್ಟು ತಿಳುವಳಿಗಳು ವಳಪೊಕ್ಕಳತಿ ಭರದೀ ||೨೧೩||

ಭಾಮಿನಿ

ನಳಿನಗರ್ಭನ ಲಾಂಛನವು ಬೆಳೆ
ಬೆಳೆದು ಸತಿಮನದೊಳಗೆ ವಿಧವಿಧ
ಗಳನು ಬಯಸುತ ಮಧುರ ಮನದಲಿ ಮೆಲ್ಲಡಿಯನಿಡುತ ||
ಮಲಗಿ ಮಂಚದೊಳೆದ್ದು ಕುಳಿತಾ |
ಬಳಲಿ ಸಂಕಟಬಡುವ ಭಾವವ |
ಲಲನೆಯೋರ್ವಳು ತಿಳಿದು ಕೇಳಿದಳತಿ ವಿಚಿತ್ರದಲೀ ||೨೧೪||

ರಾಗ ಸುರಟಿ ಆದಿತಾಳ

ಚೆನ್ನರಚೆಲ್ಲು ನಿನ್ನಂಗ ದೇಹವು | ಬಣ್ಣಬೇರಾಗಿರಾಹುದೇನೆ |
ಧಿಟ್ಟತನದಿ ದಿವ್ಯ | ಕಸ್ತೂರಿ ಕದಡಿಯ | ಮುಟ್ಟಿನೊಳ್ನೆಲಸಿತ್ತು ಕಾಣೆ ||೨೧೫||

ತಳತಳಿಸುವ ನಗೆಮೊಗವು ಕರ್ಪೂರದಂತೆ | ಹೊಳೆವ ಕಾರಣವೇನು ಪೇಳೇ ||
ನಳಿನಾಕ್ಷಿ ಮುತ್ತಿನ ಮೂಗುತಿ | ಬೆಳಕು ಪ್ರಜ್ವಲಿಸುವದಲ್ಲದೆ ನೋಡೂ ||೨೧೬||

ಬಳಲಿ ಬಾಡುತ್ತ ಬಸವಳಿದು ವಿಳಂಬದಿ | ತಳಿರಡಿ ಇಡುವದಿದ್ಯಾಕೆ |
ಲಲನೆ ಕೇಳದೆ ನಿದ್ರೆಗೈದು ಬಂದುದರಿಂದ | ಕಳವಳವಾಗುವದಿಂದೂ ||೨೧೭||

ಕನ್ನೆಮಣಿಯೆ ಬಾಲೆ ಸುಳಿಯಂತೆ ತುಟಿಯು | ಉನ್ನತವಾಗಿಹುದೇನೆ |
ಕನ್ನೆ ಜಾಣೆ ನೀ ತಿಳಿದುಬಾರೇನೀರೆ | ಎನ್ನಾ ಮೂದಲಿಪುದಿದ್ಯಾಕೆ ||೨೧೮||

ಅರಿತೆ ನಾ ನಿನ್ನಂತರಂಗನಾಚುವದ್ಯಾಕೆ | ತರಳನಾಗುವನು ಶೀಘ್ರದಲೀ ||
ನೆರೆಜಾಣೆಯಹು ಸಾಕುಸಾಕ್ ಬಡಿವಾರ | ಬರಿದೆ ಬಡಿಸಬೇಡಾವೆನ್ನಾ ||೨೧೯||

ಕಂದ

ಇನಿತೆಂದುದ ಕೇಳ್ದಾಸಖ |
ಘನಬೇಗದೊಳೈ | ತಂದು ಮನದಿ ಸಂಭ್ರಮಬಡುತ |
ಮನುಮಥ ನರಗಿಣಿಯಂದದಿ
ಕನಕಾಂಬರನಂ | ಘ್ರಿಗೆರಗುತ್ತ ವಿನಯದೊಳೆಂದಳ್ ||೨೨೦||

ರಾಗ ನವರೋಜು ಆದಿತಾಳ

ಶ್ರೀ ಮಹಾವಲ್ಲಭೆ ಕೇಳು | ತಾಮಸವೇನಿದು ಪೇಳು |
ತಾಮರಸಾಂಬಕಿ ರುಕ್ಮಿಣಿ ಗರ್ಭವ ತಾಮುದದಿಂದಿರಿಸಿಹಳು ಪರಾಕೇ | ||೨೨೧||

ಪ್ರೀತಿಯ ವಸ್ತುವನ್ನಿತ್ತು | ಸವಿಮಾತನು ಕೇಳಿದೆ ಹೊತ್ತು |
ನೂತನಗರ್ಭಿಣಿಯಾದ ಕಾರಣದಿಂದ ತರುಣಿರನ್ನಳೆ ನಾಚುವಳೆಮ್ಮೊಡನೇ || ||೨೨೨||

ಶೀಮಂತಾದಿಗಳನ್ನು | ಸುಪ್ರೇಮದಲಕರಸಿನ್ನೂ |
ಸಾಮಾನ್ಯದ ಬಸುರಲ್ಲದಾ ನೋಡಲುತಾ ಮನೆಸಂಭವಿಸುವ ನಿನ್ನುದರದೀ | ||೨೨೩||

ವಾರ್ಧಕ

ತರುಣಿಯೆಂದುದ ಕೇಳಿ ಸಂತೋಷವೆರದು ಸ |
ತ್ಮರುಣದಿಂ ಬೇಡಿದ ಪದಾರ್ಥಗಳ ನೀವುದೆಂ |
ದೊರೆದು ವೈದಜ್ಯರಕರಸಿ ಲಗ್ನವನಿರಿಸಿ ಪುರವಲಂಕರಿಸಿ ಬಳಿಕಾ ||
ಧರೆಯೊಳಿಹ ನೆಂಟರಿಷ್ಟರ ಕರಸಿ ಬಳಿಕ ಭೂ
ಸುರರ ಸತಿಯರ ಸಮೂಹದಲಿ ಸತಿಯೊಡಗೊಂಡು |
ಮೆರೆವ ಹಸೆಮಣೆಯಲ್ಲಿ ಕುಳಿತು ಸೀಮಂತವಾರಂಭಿಸಿದರತಿ ವಿಭವದೀ ||೨೨೩||

ರಾಗ ಢವಳಾರ

ಚಿತ್ತಜನಯ್ಯ ರುಕ್ಮಿಣಿ ಸಹಿತ | ರತ್ನದ ಹಸೆಮೇಲೆ ಕುಳಿತು ರಂಜಿಸುತ |
ಅರ್ತಿಲಿ ಸರ್ವರು ಸಂತೋಷಿಸುತಾ | ಮುತೈದರೆಲ್ಲರು ಸ್ವರವೆತ್ತಿ ಪಾಡುತ್ತ |
ಉತ್ತಮ ರಾಗದಿ ಪೊಗಳುತಪಾಡುತ | ಮುತ್ತಿನಾರತಿಯಾ ಬೆಳಗಿರೇ || ಶೋಭಾನೆ ||೨೨೪||

ಬೇರಿನಗಾರಿಂಬಟಕುರಿಯದಿ | ಧಾರುಣಿಸುರರು ಪೇಳುವ ಮಂತ್ರಿಗಮನದಿ |
ಚಾರುತರಶ್ವರ ಸ್ತ್ರೀಯ ನೃತ್ಯದೀ | ಭೇರಿಸಹಿತ ಸದ್ಗುಣ ವಿಧಾನದಿ |
ವಾರಿಜಾಕ್ಷಿಯರು ಜೊಡೊಳೆದ್ದು | ಮುದದಿಂದ | ಮೇರುವೆಯಾರಾರತಿಯ ಬೆಳಗೀರೆ ||                                ಶೋಭಾನೆ ||೨೨೫||

ಮಂಗಳಮಹಿಮ ಶ್ರೀರಂಗನಾಯಕಗೆ | ಭ್ರಂಗಕುಂತಳೆ ಶ್ರೀತುರಂಗಲೋಚನೆಗೆ |
ಗಂಗಜನಕನು ವಿಹಂಗವಾಹನಗೇ | ಸ್ರುಂಗತಾಂಗ ಮೊತ್ತಂಗಗಾಮಿನಿಗೇ |
ಸಂಗೀತಸ್ವರವೆತ್ತು ಶೋಭಾನವೆನ್ನುತ ಸನ್ಮಂಗಳಾರತಿಯಾ ಬೆಳಗೀರೆ || ಶೋಭಾನೆ ||೨೨೬||

ವಾರ್ಧಕ

ಪರಮಮಂಗಲ ಖಾದ್ಯವನು ವೈಗರಿಸಿ ಮತ್ತೆ |
ನೆರೆದ ಸಂದಣಿಗೆ ಭೊಜನ ಕನಕ ವೀಳ್ಯವನು |
ಪರಿಪರಿಯ ವಸ್ತ್ರಗಳನಿತ್ತು ಸತ್ಕರಿಸುತಾ ಮುರವೈರಿತೋಷದಿಂದಾ ||
ಇರಲಿತ್ತ ಭರದೊಳಂತಃಪುರದಿ ರುಕ್ಮಿಣಿಯು |
ಹರುಷದಿಂ ನವಮಾಸ ತುಂಬಿ ಸುಮುಹೂರ್ತದೊಳು |
ಮೆರೆವ ಸತ್ಪುತ್ರನಂ ಪಡದಳೇನೆಂಬೆನಾತತ್ಸುತನ ಚಲುವಿಕೆಯನೂ ||೨೨೭||

ಭಾಮಿನಿ

ಜನನವನು ಕಾಣುತ್ತ ಕರುಣಾ |
ವನಧಿ ಸಂತೋಷದಲಿ ನಾನಾ |
ಜನರ ಭೀಷ್ಟವನಿತ್ತು ದೂರದಿ ಶಿಶುವ ನೀಕ್ಷಿಸುತಾ ||
ಮನದಿ ಹಿಗ್ಗುತ ನಾಮಕರಣವ |
ನನುಕರಿಸಿ ಯಂಗನೆಯರಣುಗನ |
ಕನಕನಿರ್ಮಿತದ ತೊಟ್ಟಿಲೊಳಿಟ್ಟು ತೂಗಿದರೂ ||೨೨೮||

ರಾಗ ಜೋಗುಳ ಪದ

ಜೋಜೋ ನವಮೋಹನಾಂಗ ಕುಮಾರಾ | ಜೋಜೋ ರುಕ್ಮಿಣಿ ನಂದಕುಮಾರಾ |
ಜೋಜೋ ಸಾರಸುರಪುತ್ರನೇತ್ರ ಜೋಜೋ ಪಾಸುದಾಕರವಕ್ತ್ರ ಜೋಜೋ ||೨೨೯||

ಚೆನ್ನರಚೆಲುವೆ ಮನ್ಮಥ ಪಂಕಜಬಾಣಾ | ಸನ್ನುತ ಸದ್ಗುಣ ಸಲೆಸುಪ್ರವೀಣಾ |
ಚಿನ್ಮಯಚಾರಿತ ನಿರ್ಮಲನಂದಾ | ಪನ್ನಗಶಯನನ ಮೋಹನ ಕಂದಾ || ಜೋಜೋ ||೨೩೦||

ಶ್ರೀಪತಿ ವದನಾಬ್ಜ ಷಡ್ಪದಕಾಮ | ಚಾರುಮಂಗಲ ರೂಪಾ ಪರಿಪೂರ್ಣ ಕಾಮ |
ಪಾರವಾರ ಗಂಭೀರ ನಿಷ್ಕಳಂಕ | ಕಾರಣಮೂಲ ಕಂದರ್ಪ ಮೀನಾಂಕಾ || ಜೋಜೋ ||೨೩೧||