ರಾಗ ಭೈರವಿ ಅಷ್ಟತಾಳ

ಲಾಲಿಸೈಯೆನ್ನ ಮಾತಾ ಸದಾನಂದಾ ||
ನೀಲಮೇಘಶ್ಯಾಮ ಲಕ್ಷ್ಮೀಲೋಲ ಬಂದಿಹನಿಲ್ಲಿಗೇ |  || ಪಲ್ಲ ||

ರಂಗನಾಯಕ ರಮಣೀಯ | ತುರಂಗಧರ ಮುಖ್ಯವೈನತೇಯಾ
ತುರಂಗ ಮೋಹನಾಂಗ ನಾ | ಲಾಲಿಸೈ ||೮೯||

ಮಂದಹಾಸ ಮುರಾರಿ ಮುಕುಂದಾ ಗೋವಿಂದಕರುಣಾಸಿಂಧು |
ಶಕ್ರಂದನಾದಿ ಸುರವಂದ್ಯನಾ | ಲಾಲಿಸೈ ||೯೦||

ದ್ವಿಪದಿ

ಎನೆಕೇಳ್ದು ಪಾರ್ವತಿಯ ಮೊಗವನೀಕ್ಷಿಸುತಾ |
ಘನತೋಷದಿಂದ ಧಿಮ್ಮನೆಯೆದ್ದು ನಗುತಾ ||೯೧||

ಹೇರಂಬ ಷಣ್ಮುಖಪ್ರಮಥ ಗಣವೆರದೂ
ಚಾರುಗಂಧರ್ವಗಾನದಲಿ ಮನವೊಲಿದೂ ||೯೨||

ಗಿರಿಜಾತೆಯೊಡೆಗೊಂಡು ಗಿರೀಶನೈತರಲೂ ||
ಗರುಡವಾಹನವಿಳಿದು ಹರಿಯು ಶೀಘ್ರದೊಳೂ ||೯೩||

ಹರುಷ ಆಲಿಂಗನವ ಗೈಯೆ ಹರಿಹರರು |
ಸುರಜಾಲ ಮುನಿಗಳೆಲ್ಲರು ಸ್ತುತಿಯಗೈದಿದರೂ ||೯೪||

ವೋಲಗಕೆ ಬಂದು ಸಿಂಹಾಸನವ ಪಡೆದು |
ನೀಲಕಂಧರನೆಂದಸಂತೋಷವೆರದೂ ||೯೫||

ರಾಗ ಮಾರವಿ ಏಕತಾಳ

ಏನಿದು ವಿಚಿತ್ರ | ವಿಮಲಚಾರಿತ್ರಾ |
ದಾನವಾರುಧಿ ಬಂದಕಾರಣವೇನಿದು || ಏನಿದು ವಿಚಿತ್ರ ||೯೬||

ಕ್ಷೇಮವೆ ವಸುದೇವ ದೇವಕಿ ಕುಶಲವೆ |
ಕಾಮಜನಕ ಪರಿಣಾಮವೇನಯ್ಯಾ || ||೯೭||

ಆ ಮಹಾರುಕ್ಮಿಣೀ | ಅಷ್ಟಮಾಂಗನೆಯರು |
ಪ್ರೇಮದೊಳಿಹರೇನೈ ಪಂಕಜಲೋಚನ || ||೯೮||

ತವಸೋದರಿಯನೋಳ್ಪ ಪ್ರೀತಿಯಮನವೋ |
ದೇವತೆಗಳ ಸಲಹುವಕಾರ್ಯವೇನಯ್ಯಾ ||೯೯||

ಭುವಿಯೊಳಧಿಕವಾದ ದ್ವಾರಕನಗರದಿ |
ಯುವತಿಯರಾಮನೆಗೈವ | ದಾರಿತಪ್ಪಿತೊ ಕೃಷ್ಣ || ಏನಿದು ವಿಚಿತ್ರ ||೧೦೦||

ಗರುಡವಾಹನನಾಗಿ | ಸುಂದರುಶನವಿತ್ತು |
ಪರಿಣಾಮವಾದುದಿನ್ನೇನು ಇಂದಿನ ದಿವಸ ||೧೦೧||

ಪರಮರಜತಗಿರಿ | ಪಾವನವಾಯಿತೆಂದು |
ಹರನು ಪೇಳಲು ಲಕ್ಷ್ಮೀವಲ್ಲಭನಿಂತೆಂದಾ ||೧೦೨||

ರಾಗ ಮಧುಮಾಧವಿ ತ್ರಿವುಡೆತಾಳ

ಯಾರಿಗಿಷ್ಟುಪಚಾರವೈ | ಪಾರ್ವತೀಪತಿ | ಯಾರಿಗಿಷ್ಟುಪಚಾರವೈ |
ಭೂರಿನಿಗಮ ಪುರಾಣದೊಳ್ ನಿನಗೆನಗೆ ಭೇದವ ತೋರಿಸುವ ನೆರೆ
ಜಾಣರುಂಟೇ ಮೂರುಲೋಕದ ಜೀವರಾಶಿಯೊಳೂ || ||೧೦೩||

ನಿನ್ನಂತರ್ಯವ ನಾಬಲ್ಲೇ ಯೆನ್ನಿರವ ಕೇಳ್ | ಚೆನ್ನಾಗಿಹುದು ನಿನ್ನಲ್ಲೇ ||
ದೋಷವಿದೂರ ನ್ಯಾಯಮಥನವ ನಾನೊಲ್ಲೆ ಇನ್ನುಸುರಲೊಲ್ಲೆ ||೧೦೪||

ಅನ್ಯರೇನಿದ ತಿಳಿದರೊಂದೇ ಬಣ್ಣಚಿಣ್ಣದೊಳೆರಡು ಬೊಂಬೆಗಳನ್ನು
ನಿರ್ಮಿಸಿದಂದವಿದು ಕೇಳ್ |
ಮನ್ನಿಸುವರೇ ನಮ್ಮ ನಿಮ್ಮೊಳ್ || ||೧೦೫||

ಮೂವತ್ತೆರಡು ಹಂಗಳಾ | ಮಾಯಕೆ ಸೋತು | ಭಾವಜೆಯರ ಮಂಗಳಾ | ಶೀಲೆಯಮರವಾರ್ತೆ ಕೇಳೀ ಭುವನಂಗಳ ವ್ಯಾಪಿಸುತ್ತಿರಲಾ
ಸಾವಧಾನದಿ ಮತ್ಸಹೋದರಿ ಯಾವ ರೀತಿಯೊಳಿಹಳೆಂಬ
ಸೋವನೋಡಲು ಬಂದೆನೈ ಮಹಾದೇವಾ || ||೧೦೬||

ದಾರಿತಪ್ಪಿ ನಡೆವರೆ ಪುರುಷರು | ಭೋಗಕೊಲಿದು | ಭ್ರಮಿಸಿ ತರುಣಿರೂಪಿಗೆ ಸೋಲ್ವದು |
ಚೋದ್ಯವೆ ನಾನಿನ್ನೊರೆಯಲ್ಯಾತಕೆ ಸಾಕಿದು | ನೀಕರುಣಿಸುವದು ಹರನೇ |
ಕೇಳಾದಿಯಲಿ ಸುಮಶರತರಳತನದಿಂದುರಿದು ಪೋದನು |
ಬರಿದೆ ಮನ್ಮಥ ಜನಕನೆಂಬ ಬಿರಿದೆನಗೆ ಬಿಡದೇನಮಾಡಲೀ || ||೧೦೭||

ಆ ಸಂತಾನವ ಮುದದಿ | ಇತ್ತರೆ ಶಂಭ | ರಾಸುರ ನಾಹವದೀ |
ಮನ್ಮಥಗೆಲ್ವ | ವಾಸವಾದ್ಯರು ಮುದದೀ || ಸುಖದಿ ಬಾಳ್ವರು ಭರದೀ ||೧೦೮||

ಈಶ ಕೇಳ್ತವ ಪತ್ನಿ ರತಿಗೆ ವಿ | ಲಾಸವಹುದು ರುಕ್ಮಿಣಿಯು ಸಂ
ತೋಷಿಸುವಳೆನ್ನಿಂದ ಮನದಭಿ | ಲಾಷೆ ಕೈಸೇರುವದು ಪುರಹರ || ||೧೦೯||

ಭಾಮಿನಿ

ಪರಮಮಾಯಾ ಪುಂಜವಾಗಿಹ |
ಹರಿಯವಾಕ್ಯವ ಕೇಳ್ದು ನಗುತಾ |
ತರುಣಿರುಕ್ಮಿಣಿಯಲ್ಲಿ ಜನಿಸುವ ಮದನ ಶೀಘ್ರದಲೀ ||
ಭರವಸವಿದೀಗೆಂದು ಪೇಳಲು |
ನಿರುಪಮಾನಂದದಲಿ ಮುರಹರ |
ನೆರದಿರುವ ಸುರಪಾದಿ ಸಂದಣಿಗೆಂದನುಚಿತದಲೀ ||೧೧೦||

ರಾಗ ಕೇತಾರಗೌಳ ಅಷ್ಟತಾಳ

ಕೇಳಿ ನೀವೆಲ್ಲಾ ಕಿವಿಗೊಟ್ಟು ಮಾತಾ |
ಪೇಳುವೆನಿದು ಸಿದ್ಧಾ ಸುರಮುನಿ ವ್ರಾತಾ |
ಹರಿಯೆ ತಾ ಹರನಿಂದು | ಹರನು ಶ್ರೀಹರಿಯೆಂದು |
ಮೆರವುತ್ತಲಿದೆ ಶೃತಿ ಪರಮಮಂತ್ರಗಳಿಂದಾ ||೧೧೧||

ಪರಿಭೇದವಿಲ್ಲಾರ್ಥ | ವಾದಿಪುರುಷ ರುದ್ರ ತಮ್ಮೊಳು ನಿರರ್ಥಾ |
ಸಂಶಯದಿಂದಾ ದುರಿತಾಕಾರವ | ಬರಿದೆ ಸಾಧಿಸುವರೈ ಕೇಳಿ ನೀವೆಲ್ಲಾ ||೧೧೨||

ಶಿವನನೆಂದಿಸುವ ಮಾನವನೆನ್ನಾ ಬೈವಾ |
ಶಿವನನರ್ಚಿಸಿ ಮದ್ಭವನವ ಸೇರುವನೂ ||೧೧೩||

ಶಿವಶಕ್ತಾತ್ಮಕರು ನಾವು | ದರ್ಪಣದಿ ತೇಜದಂತಿಹೆವೂ |
ನಿಶ್ಚಯವಿದು ಭುವನವಪಾಲ ಪರದ್ವಯದಂತೆ ||೧೧೪||

ಭಾಮಿನಿ

ಹರಿಹರರ ಚಾರಿತ್ರಕೇಳುತ |
ಶಿರವ ಕಂನಗೈವುತಾಕ್ಷಣ
ಸುರರು ಗಂಧರ್ವಾದಿ ಮುನಿಗಣ ಶಿವಶಿವಾಯೆನುತಾ ||
ಕರವ ಮುಗಿದತ್ಯಂತ ಹರುಷದಿ |
ಪರಮ ಪುರುಷರು ನಿಮ್ಮ ಮಹಿಮೆಯ |
ನೊರೆಯಲಿಕ್ಕೆಮಗೀಗ ಸಾಧ್ಯವೆ ಎನುತ ನುತಿಸಿದರೂ ||೧೧೫||

ವಾರ್ಧಕ

ಜಯಜಯ ರಮಾರಮಣ ಜಯ ಪನ್ನಗಾಭರಣ |
ಜಯ ಸುಪರ್ಣತುರಂಗ ಜಯ ಭಸ್ಮಪೂತಾಂಗ
ಜಯ ಹರೇ ವೈಕುಂಠ ಜಯ ವಿಭುಶ್ರೀಕಂಠ ಜಯ ಸುಗುಣ ವರ್ಗ ಭರ್ಗಾ ||
ಜಯ ಪುಷ್ಪಶರತಾತ ಜಯ ಭೂತಗಣವ್ರಾತ |
ಜಯ ಸರೋರುಹವದನ ಜಯ ರಜತಗಿರಿಸದನ |
ಜಯ ಮಹಾಲಂಕಾರ ಜಯ ಭೀಷಣಾಕಾರ ಜಯ ಮಹಾನಂತಶಾಂತಾ ||೧೧೬||

ರಾಗ ಭೈರವಿ ಝಂಪೆತಾಳ

ಇಂತಖಿಳಸನ್ನುತಿಯ | ಸಂತಸದೊಳಾಲಿಸುತ
ಕಂತುಪಿತ ಹರನೆಲ್ಲ | ಯಾಂತರದೊಳಂದೂ ||೧೧೭||

ನೆರೆದ ಸಂದಣಿಗೂಡಿ | ಪರಿ ಪರಿಯ ದಿವ್ಯರಸ |
ಭರಿತ ಬೋಜ್ಯಗಳುಂಡು | ಮುರವೈರಿ ಮುದದೀ ||೧೧೮||

ಹರುಷದಲಿ ಬೀಳ್ಕೊಂಡು | ಗರುಡವಾಹನದಿಂದೈ |
ಪುರಕೈಯ್ಯಬೇಕೆಂದು | ಭರದಿ ನಡೆತಂದೂ ||೧೧೯||

ಪಥವಿಡಿದು ಬಂದು ಮಾ | ಪತಿ ಬದರಿಕಾವನದಿ |
ಅತಿಮುದದಿ ತಾಪಸರ | ಜತೆಯೊಳಿರುತಿರ್ದಾ ||೧೨೦||

ಕಂದ

ಪೃಥ್ವಿಪತಿ ಲಾಲಿಸಿ ಕೆ |
ಳಿತ್ತ ಪವುಂಡ್ರಕ ವಾಸುದೇವನ ಕಥೆಯ
ನತ್ಯಧಿಕನಂದದಿ |
ವಿಸ್ತರಿಪೆನೆಂದು ಮುನಿಪ ತೊಡಗಿದನಾಗಳ್ ||೧೨೧||

ವಾರ್ಧಕ

ಹಿಂದೆ ಕಾಶೀದೇಶದರಸಂಗೆ ಸುತರಿಲ್ಲ |
ವೆಂದು ನಿಜ ಪುತ್ರಿಯಂ ವಸುದೇವಗಿತ್ತು ನಲ
ವಿಂದ ಪಟ್ಟವಗಟ್ಟಿವನಕೈಯ್ಯಲಿತ್ತಲುಂ ತತ್ಸುತೆಗೆ ತೋಷದಿಂದಾ ||
ಕಂದರ್ಪನಂದದೀ ಪವುಂಡ್ರಕಂ ಜನಿಸಲಾ |
ನಂದದಿಂ ಆತ್ಮಜನ ಪಟ್ಟಣ ದೊಳಿರಿಸಿಗೋ |
ವಿಂದಪಿತ ಮಧುರೆಗೈತಂದು ಸಂತಸದಿ ನಿಜಭೂಮಂಡಳವನಾಳುತ ||೧೨೨||

ಭಾಮಿನಿ

ಮರೆದು ತತ್ಸಂಗವನು ಕಂಸಾ |
ಸುರನ ತಂಗಿಯ ಮದುವೆಯಾಗಿರು
ತಿರಲು ಮುರಹರ ಜನಿಸಿ ರಂಜಿಪ ವಾರ್ತೆಯಂ ಕೇಳ್ದು ||
ಉರುತರದ ಮತ್ಸರದಿ ಕಾಶೀ |
ಶ್ವರನು ಚರರಟ್ಟಲ್ಕೆ ಬಂದಾ
ಹರಿಯ ಮಹಿಮೆಯ ಬಿನ್ನವಿಸಿದರು ಚೆಂದದಿಂದಾಗ ||೧೨೩||

ರಾಗ ಬೇಗಡೆ ಅಷ್ಟತಾಳ

ಲಾಲಿಸೈ ಕಾಶಿದೇಶಾಧಿಪ ಮುದದಿ | ಪಾಲಿಸಬೇಕು ಕೋಪಿಸದೆ ನೀದಯದಿ ||  ||ಪ||

ವಸುದೇವರೆಲ್ಲಿಹರೆಂದು ನಾವೆಲ್ಲಾ | ವಸುದೇವಂದಿಷ್ಟನ್ನು ಬಿಡಲಿಲ್ಲಾ |
ದೆಸೆದೆಸೆ ಗೈದಿದೆವು ನಾನಾ ರಾಜ್ಯ | ಗಳನುಪರಿಸಿದೆವು | ಪುಸಿಯಲ್ಲ ಕೇಳಿದೆವು ||೧೨೪||

ದ್ವಾರಕ ಪಟ್ಟಣವೆಂಬುದೊಂದಿಹುದು | ಮೂರು ಲೋಕದೊಳಿಲ್ಲದಂತೆ ರಂಜಿಪುದೂ |
ದ್ವಾರಕೆ ನೀಕ್ಷಿಸಲೆದೆಯು ಬಿಚ್ಚುವುದು | ವೀರಾಧಿವೀರರಾರ್ಭಟೆಗಳೆಂತಿಹುದೂ ||೧೨೫||

ನವರತ್ನಖಚಿತಸುವರ್ಣದಾಲಯವು | ರವಿಮಂಡಲವು ತುಡುಕುವದು ಗೋಪುರವು ||
ನವನೂತನದಿ ಶೋಭಿಸುವ ದುರ್ಗದೊಲವಾ | ಶಿವನೊಬ್ಬ ಬಲ್ಲನೈ ಪುರದ ಸಂಭ್ರಮವಾ ||೧೩೬||

ಹರುಷದೊಳ್ ನಿನ್ನಯ್ಯ ನಗರದೊಳಿರುವ | ದುರುಳ ಕಂಸನ ತಂಗಿ ಮದುವೆಯಾಗಿರುವಾ | ಪುರದಗೋಷ್ಠಿಯಬಿಟ್ಟು ಮೋಹದ ಸತಿಯಾ | ಹರುಷದೊಳಾಳುತ್ತ ಸಲಹುವ ಕ್ಷಿತಿಯಾ ||೧೨೭||

ಮಕ್ಕಳೀರ್ವರು ರಾಮಕೃಷ್ಣರೆಂಬವರು | ಚಿಕ್ಕಜವ್ವನದಿ ವಿರಾಜಿಸುತ್ತಿಹರೂ |
ಮಿಕ್ಕವರಂತಿರಲಿ ಕನಿಷ್ಠನಂದನನಾ | ಠಕ್ಕು ಕಾತಾಳಿಗಳೆಂತು ಪೇಳ್ವೆನೀ ಹದನಾ ||೧೨೮||

ಪಂಕಜಾಂಬಕಗೆ ಚತುರ್ಭುಜವಂತೆ | ಶಂಖಚಕ್ರಾ ಗದಾಪದ್ಮನಾಲ್ಕಂತೆ |
ಕುಂಕುಮ ಸಮಕಸ್ತೂರಿ ಬೊಟ್ಟಂತೆ | ಅಂಕದಿ ಭುಜಪರಾಕ್ರಮ ಧೀರನಂತೆ ||೧೨೯||

ಪಕ್ಕಚೋರ ನೆಂಟರಿಷ್ಟರ ಗೃಹವಾ | ಪೊಕ್ಕು ಪಾಲ್ಪೆಣ್ಣೆ ಮೊಸರನು ಮೆಲುವಾ |
ಕಕ್ಕಸ ಕುಚೆಯರ ಕೈಪಿಡಿದೆಳೆವಾ | ಹಕ್ಕಿಯ ಮೇಲೇರಿ ತನ್ನಿಚ್ಚೆಯೊಳ್‌ಮೆರೆವಾ ||೧೩೦||

ಶ್ರೀವಾಸುದೇವನಾತ್ಮಜನೆಂದು ಜನರು | ಭೂವಲಯದಿ ವಾಸುದೇವನೆನ್ನುವರೂ |
ಸಾವಿರ ನಾಮವುಂಟಂತೆ ಸತ್ಕುಲಜಾ | ಮಾವನ ಪೆಸರಡಗಿಸಿದ ನಿನ್ನನುಜಾ || ಲಾಲಿಸೈ ||೧೩೧||

ಭಾಮಿನಿ

ಚರರ ವಾಕ್ಯವ ಕೇಳ್ದು ಕೋಪದಿ |
ವುರಿಯನುಗುಳುತ ಹುಂಕರಿಸಿ ಕ |
ಣ್ಣೆರದು ಮಿಸೆಯ ತಿರುಹಿ ದೂತರ ಮೊಗವನೀಕ್ಷಿಸುತಾ ||
ಮರುಳುಗಳಿರಾ ನೀವು ನಮ್ಮಯ |
ಧುರಕೆ ನಿಲುವವರುಂಟೆ ತರಳನ |
ಬರಿದೆ ಪೊಗಳ್ವಿರಿಯೆನುತ ಘರ್ಜಿಸಿ ಮಂತ್ರಿಯೊಡನೆಂದಾ ||೧೩೨||

ರಾಗ ಕಾಂಭೋಜಿ ಝಂಪೆತಾಳ

ಮನೆಯಳಿಯತನದಿ ಬಾಳುವೆನೆಂದು ಮೊದಲು ಮ | ಜ್ಜನಕಮಾ ಕಾಮಹಗೆಪೇಳಿ ||
ಸನುಮತದೊಳೆನ್ನ ಪೆತ್ತವಳ ಕೈವಿಡಿದು ವಂ | ಚನೆ ಗೈದನೀಗ ಕೇಳ್ಮಂತ್ರಿ ||೧೩೩||

ಪಟ್ಟದರಸಿಯನಗಲಿ ಜೇಷ್ಠಸುತನಾನಿರಲು | ಬಿಟ್ಟು ಮತ್ತೊಬ್ಬಳನು ಕೂಡಿ ||
ದಿಟ್ಟತನದಲಿ ಮೋಹವಿಟ್ಟು ಕೂಡಿಹನಂತೆ | ಕೆಟ್ಟನೈ ಮುದುಕತಾನಿಂದೂ ||೧೩೪||

ಯೆನ್ನ ಮಲತಾಯಿ ಪಡೆದಿಹಳಂತೆ ತತ್ಸು ತರ | ಇನ್ನೆಂತೊರವೆನವರಗುಣವಾ ||
ಮುಂನಿನವನೆಜಳ್ಳ ಮತ್ತೊಬ್ಬನೆಕುಳ್ಳ | ಚೆನ್ನಾ ತು ಮತ್ಪಿತನ ಯೋಗಾ ||೧೩೫||

ಕಿರಿಯಮಗ ಕೃಷ್ಣನೆಂಬವನು ಕೇಳ್ಕಳವುಹಾ | ದರದಿ ಬಹುಶೂರ ತರಳನಂತೆ ||
ತರಳರುದಿಸುವದೆಲ್ಲಾ ಪಿತನ ಪುಣ್ಯವೆ ಹೊರತು | ಬರಿದೆ ಸತ್ಪುತ್ರರಹರೆನ್ನೆ ||೧೩೬||

ಗರುಡವಾಹನ ಶಂಕಚಕ್ರಾಬ್ಜಧರದಿಂದ | ಮೆರವುತ್ತ ಭುಜವುನಾಲ್ಕಂತೆ ||
ವರಪೀತವಸನ ಮುಂತಾದ ಬಿರುದುಗಳಲಂ | ಕರಿಸಿದಿವನ್ಯಾರೆಂದು ಪೇಳೈ ||೧೩೭||

ಮರುಳಾದನವಳಮಾಯಕೆ ಮುದುಕ ಮುಂದಿನ್ನು | ತರಳರೇ ದಾಯಾದ್ಯರೆನಗೇ ||
ಯೆರಡಾಗಿ ಸವತಿಯೊಳಗಿರುವದಾಯಿತು ಮಜ್ಜನನಿ | ಮರವುದುಚಿತವಲ್ಲನಾವು ||೧೩೮||

ವಸುದೇವತಾನರಸ ಪುತ್ರನಾಗಿರಲು ಕೈ | ವಶವಾದ ಹೆಂಗಳಾತ್ಮಜರೂ ||
ಕುಶಲಗುಣದೀಕ್ಷಿಸದೆ ವಾಸುದೇವಾನೆಂಬ | ಪೆಸರಿಡುವದುಚಿತವೇನೈ ||೧೩೯||

ಭಾಮಿನಿ

ವರಸಚಿವ ಕೇಳ್ ಧುರಕೆ ಸನ್ನಹ |
ಸರಿಗೊಳಿಸು ದ್ವಾರಕಿಯ ಮುತ್ತುವ |
ತರಳಕೃಷ್ಣನ ಪಿಡಿವನಕ ಲೇಸಲ್ಲನಮಗಿನ್ನೂ ||
ಭರದಿ ಚಿನ್ನದ ಶಂಖ ಚಕ್ರಾಂ |
ಬುರುಹಗದೆಗರುಡಾದಿ ಗೋಪ |
ಸ್ಕರಗಳನು ಒದಗಿಸೆನೆ | ನೃಪತಿಗೆ ಪೇಳ್ದನುತ್ತರವಾ ||೧೪೦||

ರಾಗ ನಾದನಾಮಕ್ರಿಯೆ ಅಷ್ಟತಾಳ

ಕೇಳಯ್ಯ ಕಾಶಿಭೂಪಾಲಕ | ನಾನು | ಪೇಳುವೆ ವಸುದೇವ ಬಾಲಕ |
ತಾಳುವದುಚಿತವೆ ಕ್ರೋಧವ | ವನ | ಮಾಲಿಯೊಡನೆ ಬೇಡ ವ್ಯಾಜ್ಯವಾ ||೧೪೧||

ಮನುಜತಾನಲ್ಲ ನಿನ್ನನುಜಾತಾ | ಜಗ | ಜ್ಜನ | ವಲ್ಲಭವಾಣಿವರತಾತಾ ||
ಘನತರದುಷ್ಟನಿಗ್ರಹಕೆಂದು | ಕುಂ | ಭಿನಿಯೊಳು ಸಂಭವಿಸಿದನು ಬಂದೂ ||೧೪೨||

ಸೇರಿದ ಜನರ ಸಂತೈಸುವ | ತನ್ನ | ವೈರಿಯಾದವರ ಸಂಹರಿಸುವ |
ಧೀರತ್ವ ಬಾರದಾತನ ಮುಂದೆ | ಕೈ | ಸೇರುವನಲ್ಲಾ ನಿನ್ನಯ ತಂದೆ ||೧೪೩||

ಕ್ರೋಧವೆಂಬುದು ಶತ್ರು ಸರ್ವಥಾ | ಸಮಾ | ಧಾನವೆಂಬುದು ಸಕಲಸಮ್ಮತಾ |
ಮಾಧವನೊಡ ಗೆಲ್ಲುವ ಚಿಂತೆ | ಬೇಡ | ಸಾಧಿಸಿ ಮೃತ್ಯುವ ಕರದಂತೆ ||೧೪೪||

ದಶಕಂಠನಿರವ ನೀ ನೋಡಿಕೋ | ಆ | ಶಿಶುಪಾಲನೊಳು ಮಾತನಾಡಿಕೊ |
ಅಸುರ ಕಂಸನ ವರ್ತಮಾನವಾ ಈಗ | ಪುಸಿಯೋ ದಿಟವೋ ತಿಳಿ ಪೋಗುವಾ ||೧೪೫||

ಭಾಮಿನಿ

ಇನಿತು ಪೇಳ್ದುದ ಕೇಳಿ ಕೋಪದೊ |
ಳೆನಗೆ ನೀನುತ್ತರವನೀಯಲು |
ಧನಬಲವೊ ಮೈನೆಣವೊ ಸುಖದನ್ನಾಸುಸಂಪದವೊ |
ಮನದಗರ್ವವೊ ಮರುಳೊ ಬೇಗದಿ |
ರಣಕೆ ಸನ್ನಹಗಳನು ವದಗಿಸು |
ಎನುತ ವೀರಾವೇಶದಲಿ ಹೊರವಂಟನಾಕ್ಷಣದೀ ||೧೪೬||

ರಾಗ ಪಂತುವರಾಳಿ ತ್ರಿವುಡೆತಾಳ

ದಂಡೆತ್ತಿ ನಡೆದನಂದೂ | ಪವುಂಡ್ರಕನಂದು | ದಂಡೆತ್ತಿಬಂದನಂದೂ || ಪ ||

ತಂಡತಂಡದಿ ಸುಪ್ರಚಂಡ ಮೋಹರವಾ |
ಮುಂಕೊಂಡುಪವುಂಡ್ರಕ | ನುದ್ದಂಡತನದೊಳು ಬಂದೂ ||೧೪೭||

ವಸುದೇವನಾತ್ಮಜನಾದಕಾರಣದಿಂದೆಮ್ಮ | ಪೆಸರು ಪವುಂಡ್ರಕವಾಸುದೇವ |
ಭೂಪತಿಯೆಂಬ ಪೆಸರುಚ್ಚರಿಸಿ ಪೊಗಳುವದೆಂದು |
ತನ್ನ ಪೆಸರ ಕರೆಯಾನೇಮಿಸಿ ಡಂಗುರಹೊಸಿ || ದಂಡೆತ್ತಿ ಬಂದನಂದೂ ||೧೪೮||

ಮೊಳಗುವ ಭೇರಿತಂಬಟೆಗಳು ನಾಲ್ದೆಸೆಯೊಳು ಕಂಪಿಸುವಂದದಿ ಸಂಗರದಿ ಪಲ್ಮೊರೆವುತೈದಲಭ್ರದಲೀ ಕೆಂಧೂಳಿಗಪ್ಪಿ ಸರಸಿ ತರಣಿಮಂಡಲ ತುಡುಕುವಂತೆ ||೧೪೯||

ಮುಂತೊತ್ತಿ ಪಾಲ್ಗಟ್ಟಿ ಪವುಜುಗಳೆಡೆಬಿಡದೆ | ಪೃಥ್ವಿಯೊಳೈತರುತ ಕಂಡಕಂಡವರನ್ನು
ಕತ್ತಿಯೊಳ್ ಕಡಿದಾಡುತ್ತ ವೀರಾವೇಶವೆತ್ತು ದ್ವಾರಕಿಯಾ ಸಮಿಪಕೈದಿದರೆಲ್ಲಾ || ||೧೫೦||

ಪರವ ನೀಕ್ಷಿಸುತ ಪವುಂಡ್ರಕನಿಂತೆಂದು | ಮುಂದರಿದ ಸೈನ್ಯಗಳೆಲ್ಲಾ | ಬರಲಿ ಕಳ್ಳನಪಿಡಿತರಲಿಂದು ಹೊತ್ತಲ್ಲಯೆನುತ ಸಮುದ್ರದ ಕರೆಯಲ್ಲಿ ನಿಂದು
ಸೂಳೆಯರಾಲಯದಲ್ಲಿ || ಕೈಸೆರೆಯಾಸಿಕ್ಕುವನೆಂದು ||೧೫೧||

ಯತ್ನಗಳುಸುರುತ್ತಾ | ಉಚ್ಚೇರಿಸುತ ಕಾರ್ಮುಗಿಲ ಮುಸುಕುವಂತೆ ಸರಿರಾತ್ರೆಯಲಿ ಘರ್ಜಿಸುತಲೇ | ಬಂದೆರಗಿದುರ್ಗವ ಮುತ್ತುವದ್ಭುತವೇನೆಂಬೆ ||೧೫೨||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಧರಣಿಪತಿ ಕೇಳ್ ಬಾಗಿಲಲ್ಲಿಹ | ಚರರಗೋಳ್ಗುಟ್ಟಿಸುತಜನ |
ವೆಚ್ಚರಿತು ಗಜಬಜವಾದುದಂತಃಪುರದೊಳಂದೂ ||೧೫೩||

ಜಗದೊಡೆಯ ಬಲರಾಮ ಸಾತ್ಯಕಿ | ಸುಗುಣ ಯಾದವ ಉಗ್ರಸೇನಾ
ದಿಗಳು ಒಡ್ಡೋಲಗವಗೊಟ್ಟರು | ದಿಗಿಲೆನುತ್ತಾ ||೧೫೪||

ಯೇನಿದೇನಾಶ್ಚರ್ಯಕರವಿದು | ಈ ನಗರಕೆ ರಾತ್ರೆಯಲಿ ಸಂ |
ಧಾನವಿಲ್ಲದೆ ಬಂದ ಸುಭಟರ | ಕಾಣಲಿಲ್ಲ | ||೧೫೫||

ಧೀರನವನಿನ್ನೇನು ಧೈರ‍್ಯದಿ | ಸೇರಿದನೊ ಮತ್ಪುರವನೆಂದು ವಿ |
ಚಾರಿಸುತಲಿರಲೋರ್ವ ಚಾರಕ | ದ್ವಾರದಿಂದಾ ||೧೫೬||

ಬಂದು ಹಲಧರನಡಿಯೊಳೆರಗುತ್ತ | ಬಂದವಾರ್ತೆಯನೆಲ್ಲ ಯಾದವ |
ವೃಂದಕುಸರಿದನಂದ ಕಾತುರ | ದಿಂದಲವನೂ ||೧೫೭||

ಭಾಮಿನಿ

ಜೀಯ ಕಾಶೀದೇಶನೃಪ ನಿ |
ನ್ನಯ್ಯನವರಸುಪತ್ರನಂತಿಹ |
ತೋಯಜಾಂಬಕನಣ್ಣ ಪವುಂಡ್ರಕ ವಾಸುದೇವಾಖ್ಯಾ ||
ದಾಯವಾದಿಯ ಮತ್ಸರದಿ ಸಮು |
ದಾಯವೆರದೈ ತಂದಿಹನು ಯದು
ರಾಯ ನಾನೆಂತೊರೆವೆ ಸೈನ್ಯವನೆಂದನತಿಭಯದಿ ||೧೫೮||

ವಾರ್ಧಿಕ

ಚರರೆಂದ ನುಡಿಕೇಳಿ ಕರಿರಥ ಪದಾತಿಗಳು |
ನೆರದು ಬಲರಾಮನೊಡನಕ್ರೂರ ಸಾಂಭಾದಿ |
ಧುರಧೀರ ಯಾದವರು ಕಡುರೋಷವೆತ್ತು ಭೂಮಂಡಲವ ನಡುಗುವಂತೆ ||
ಮೆರವುತಿಹ ಭೇರಿಕಹಳಾರವದೊಳೈತಂದು |
ಪರಬಲವ ಕಂಡು ಶಿಡಿಲೆರಗುವಂದದಿ ಪೊಕ್ಕು |
ತರತರದ ಬಾಣಗಳ ಸುರಿಯಲಿತ್ತಟ್ಟಿನೊಳ್ ಕೈಗಲಸಿತಾಕ್ಷಣದೊಳೂ ||೧೫೯||

ರಾಗ ಭೈರವಿ ಯೇಕತಾಳ

ಸಿಡಿಲಂದದಿ ಭೋರ್ಗರೆದು | ಕೆಂ | ಗಿಡಿವುಗುಳುತ ಮೇಲ್ವರಿದು
ತುಡುತುಡುಕುತ ಯಾದವರು | ಕಂಗೆದರಿದಶಕ್ತಿ ವಿಕ್ರಮರೂ ||೧೬೦||

ಮುಂಬಲತಾಸ್ತ್ರಗಳಿಡುತಾ | ಆ | ಸಾಂಭನಹಿಮ್ಮೆಟ್ಟಿಸುತ ||
ಕುಂಭಿನಿ ನಡುಗುವತೆರದೀ | ಬಹ | ಳಂಬುಗಳೆಚ್ಚನು ಭರದೀ ||೧೬೧||

ಹಿಂದೊತ್ತಿ ಸೈನ್ಯವನೂ | ತಾ | ನಿಂದೀಕ್ಷಿಸಿ ಪ್ರೌಂಡ್ರಕನೂ |
ಮುಂದರಿತವುಲಾಕ್ಷಣದೀ | ಇಂ | ತೆಂದನು ಸಾತ್ಯಕಿ ಧುರದೀ ||೧೬೨||

ಈ ದುರ್ಗವನೊ ಪೊಗಲೂ | ಪೇಳ್ದವರಾರು ನಿಮಿಷದೊಳು |
ನೂದಿಸುವೆನು ನಿನ್ನೊಲವ | ಎನ | ಲಾದುರ್ಜನದಿಂದೊಲವಾ ||೧೬೩||

ಆದರೆ ನಿನಗೇನೋ ಈ ಧರೆಗಧಿಪತಿ ನಾನು |
ಭೋರನೆ ಕೈಸೆರೆಪಿಡಿದು | ಮತ್ತಾರೆಂದೊರೆವೆನು ತಿಳಿದೂ ||೧೬೪||

ಸರಿರಾತ್ರೆಯ ವೇಳ್ಯದೊಳು | ಕಳ್ಳರೆ ಹೊರತೀ ಭೂಮಿಯೊಳು |
ಪರರೈತಹರೆಂದೆನುತ | ಬಲು | ಶರವೆಚ್ಚನು ಕೋಪಿಸುತ ||೧೬೫||

ಯೆನಲಾಕಾಶೀಶ್ವರನು | ಆ | ಮನೆಮನೆ ಪಾಲ್ಬೆಣ್ಣೆಯನೂ |
ಮೆಲುವಾತನ ತೋರೆಂದು | ಹೊಸ | ಕಣೆಗಳ ಕರದನಂದೂ ||೧೬೬||

ಬರುವ ಶರಂಗಳ ಮುರಿದು | ಆದುರುಳರ ಮಹಾಸ್ತ್ರವ ತೆಗೆದು |
ವರ ಸಾತ್ಯಕಿಯುರಕಿಡಲು | ಮೈ | ಮರೆದಾಕ್ಷಣ ಭೂಮಿಯೊಳು ||೧೬೭||

ಭಾಮಿನಿ

ಆರೆನಿಮಿಷ ಸಾತ್ಯಕಿಯು ಮೈಮರೆ |
ದಿರಲು ವೀರಾವೇಶದಲಿ ಹಲ |
ಧರನು ಫಣಿಪತಿಯಂತೆ ಭೋರ್ಗರೆವುತ್ತ ಬಂದೆರಗೀ ||
ಮರುಳೆ ಕೇಳ್ ಮತ್ಕುಲಜ ನೀನೆಂ |
ದರಿತು ನೋಡಿದರಿಂತು ಗರ್ವವೆ |
ಧುರದೊಲವ ತೋರಿಸುವೆನೆನುತಾಸ್ತ್ರಗಳ ಮಳೆಸುರಿದಾ ||೧೬೮||