ಶಾರ್ದೂಲ ವಿಕ್ರೀಡಿತ ವೃತ್ತ
ಕೃಷ್ಣಂ ಶ್ರೀಯದುವಂಶಮೌಕ್ತಿಕಮಣಿಂ | ಭೂಷ್ಣೋಃಪುರೇಶಾಂಬರೇ |
ಕಾರ್ಷ್ಣೇಃ ಶ್ರೀರತಿಪಾಣಿಪೀಡನಕರಂ | ಸೋಷ್ಣೀಷಭೂಪಾದೃತಮ್ ||
ಜಿಷ್ಣುಂ ಭೀಷ್ಮಸುತಾಖಿಲೇಷ್ಟವರದಂ | ಧೃಷ್ಣುಂ ಜಗತ್ಪಾಲಕಂ ||
ಜಿಷ್ಣುಪ್ರೀತಿವರ್ಧನಂ ಸುಖತನುಂ | ವಿಷ್ಣುಂ ಭಜೇ ಸರ್ವದಾ ||೧||
ವಾರ್ಧಕ
ಕರಿವರದಮಿತ್ರನಂ ಕಾಳಿಕಾಕರ್ತ್ರನಂ |
ವರಗುಣಕದಂಬನಂ ವಿನುತಹೇರಂಬನಂ |
ನಿರುಪಮಾನಂದನ ನಿಖಿಳ ಮುನಿವೃಂದನಂ ಭೀಮನಂ ಸ್ಮರದಾಮನಂ ||
ಕರುಣಾಲಪಾಲನಂ ಕಮನೀಯಶೀಲನಂ |
ದುರಿತಸಂಹಾರನಂ ದುರ್ಜನವಿಧೂರನಂ |
ಹರಿದಶ್ವಭಾಸನಂ ಹತ ಮಂದಹಾಸನಂ ವಂದಿಸುವೆ ಸೋಮೇಶನಂ ||೨||
ರಾಗ ಸುರಟಿ ಆದಿತಾಳ
ಪಾಲಿಸು ಸರ್ವಾಣೀ | ಮುಕುರಕ | ಪೋಲ ಕೀರವಾಣೀ |
ಶೈಲ್ಯಾಧಿಪನ ಬಾಲಕಿ ಶಡ್ವಧಾ | ನಿರುರ ಕರುಣಾಲವಾಲ ಶಿವೆ ||೩||
ರಾಜ್ಯಲಕ್ಷ್ಮಿದಾತೇ | ಸುಗುಣೆ ಸ | ರೋಜವದನೆ ಮಾತೆ
ರಾಜೇಶ್ವರಿ ಮೃಗರಾಜಸುಮರ್ಧ್ಯೆ | ರಾಜರಾಪ್ತಕ ರಾಜಕರುಚಿರೆ || ಪಾಲಿಸು ||೪||
ನಂದಜಾತಭಗಿನಿ | ಪರಮಾ | ನಂದಜಗಜ್ಜನನೀ |
ವಾರಿಜದಳನೇತ್ರೇ | ನಿರ್ಜರ | ವಾರವಿನುತ ಪಾತ್ರೆ || ಪಾಲಿಸು ||೫||
ಭಾಮಿನಿ
ಉಮೆ ಸರಸ್ವತಿ ಲಕ್ಷ್ಮಿಯರ ಪದ |
ಕಮಲಕಭಿವಂದಿಸುತ ಸುರರಿಗೆ |
ನಮಿಸಿ ಗುರು ಚರಣಾರವಿಂದಕೆ ಮಣಿದು ಭಕ್ತಿಯಲಿ ||
ಅಮರಋಷಿ ಯೋಗಿಗಳ ಪದಯುಗ |
ಕ್ರಮದಿ | ಸಂನುತಿಗೈದು ಸಂತತ |
ಸುಮನಸರ | ಸಂದಣಿಯ ನೆನದತ್ಯಧಿಕ ಹರುಷದಲೀ ||೬||
ದ್ವಿಪದಿ
ಪರಮಭಾಗವತಾಖ್ಯ ಚಾರುಚರಿತೆಯಲೀ |
ಹರಿತಂದ ಶಂಬರಾಸುರನ ಯುದ್ಧದಲಿ ||
ಪರಿಹರಿಸಿ ರತಿಗೆ ವಲ್ಲಭನಾದ ಕಥೆಯಾ |
ನೊರೆವೆನೈ ಯಕ್ಷಗಾನದಲಿ ಸಂಗತಿಯಾ ||೭||
ಕೇಳಿ ಕವಿಜನರು ತಪ್ಪಿರಲು ತಿದ್ದುವದೂ |
ಶೀಲಗುಣದಿಂದ ಆದರಿಸಿ ಮೆರಸುವದೂ ||೮||
ರಾಗ ಸೌರಾಷ್ಟ್ರ ತ್ರಿವುಡೆತಾಳ
ವರಪರೀಕ್ಷಿತರಾಯ ಶುಕಮುನಿ | ಚರಣಯುಗ್ಮಕೆ ವಂದಿಸು ತಪೂ |
ಶರನು ಪುನರಪಿ ಜನಿಸಿ ಕೃಷ್ಣಗೆ | ತರಳನಾಗೀ ||೯||
ದುರುಳಶಂಬರನೆಂಬವನ ಪರಿ | ಹರಿಸಿ ಮತ್ತಾರತಿಯಭೀಷ್ಟವ |
ಹರುಷದೇ ಪಾಲಿಸಿದ ಕಥನವ | ನೊರೆವುದೆಂದೂ ||೧೦||
ಬಿನ್ನವಿಸಲತ್ಯಧಿಕ ತೋಷಧಿ | ಮನ್ನಿಸುತಲಾರಂಭಿಸುವ ಮುನಿ |
ಮನ್ಮಥನ ವಿಕ್ರಮದ ಗುಣ ಸಂಪನ್ನನೃಪಗೇ ||೧೧||
ವಾರ್ಧಕ
ವಸುಮತಿಯ ಭಾರಮಂ ತೆಗೆಯಲ್ಕೆ ಮಾರಮಣ |
ವಸುಧೆಗುತ್ತಮವಾದ ದ್ವಾರಕಾಪುರದರಸ |
ವಸುದೇವನುದರದಲಿ ಜನಿಸಿ ನರನಾಟಕದಿ ವರನಂದಗೋಕುಲದಲಿ ||
ಎಸೆವ ಪೂತನಿಯಸುವಗೊಂಡು ರಾಧೆಯ ಮನವ |
ಕುಸುಮಶರ ತಂತ್ರದಿಂದೊಲಿಸಿ ಕಂಸನ ಕೊಂದು |
ಕುಶಲದಿಂ ಯಾದವರ ಮಂದಿರವ ಪೊಕ್ಕು ನವನೀತ ಪಾಲ್ಮೊಸರು ಮೆಲುತಾ ||೧೨||
ಸರಸದಿಂದಧಿಯ ಬಾಂಡವನೊಡೆದು ಲೂಟಿಯಂ |
ವಿರಚಿಸುತ ತುರುಗಾವಲವರೊಡನೆ ಮೆರವುತ್ತ
ಮುರಲಿಯ ಧ್ವನಿಗೈವುತಾ ಗೋಪವನಿತೆಯರ ಚಿತ್ತವನು ಸೂರೆಗೊಳುತಾ ||
ವರಜಲಕ್ರೀಡೆಯೊಳು ಕಡಹದಾಮರನೇರಿ |
ತರುಣಿಯರ ವಸ್ತ್ರ ಮೇಲ್ಗಟ್ಟಿ ಬತ್ತಲೆ ನಿಲಸಿ |
ನಿರುಪಮ ವಿಲಾಸಮಂ ತೋರಿಸುತ ವರ್ತಿಸಿದ ನವ ಮೋಹನಾಂಗನಾಗೀ ||೧೩||
ದುರುಳ ಶಿಶುಪಾಲನಂ ಮದಗೆಡಿಸಿ ರುಕ್ಮಿಣಿಗೆ |
ವರನಾಗಿ ನಗರಕೈತಂದು ಸದ್ಧರ್ಮದಿಂ
ಧರೆಯನಾಳುತ್ತ ಯದುವರ್ಗ ಪರಿವಾರ ಸಹಿತ ಪ್ರಜೆಗಳನು ತೋಷದಲ್ಲಿ ||
ಧರಿಸುತಲಿ ಹದಿನಾಲ್ಕು ಕರದಿ ಚಕ್ರವರಾಬ್ಜ
ಕರ ವಿಭೂಷಣದಿಂದ | ಮೆರೆವುತ್ತ ಕೌಸ್ತುಭ
ಧರಿಸಿ ಬಲರಾಮನಿಂ | ದೊಡಗೂಡಿ ದಾನವಧ್ವಂಸಿ ತಾ ಬಳಿಕ ಮುದದೀ ||೧೪||
ರಾಗ ಕಾಂಭೋಜಿ ಝಂಪೆತಾಳ
ತರಣಿ ಬಿಂಬವ ತುಡುಕುವಂತೆಸೆವ ಗೋಪುರದ | ಮಾವೈಭವದಿ ರಂಜಿಸುವಾ ||
ನಿರುಪಮದ ದ್ವಾರಕಿಯ ವರ್ಣಿಸಲುವಾಸುಕಿಶ್ವರನಿಗಸದಳವುಸಿದ್ಧಾ ||೧೫||
ಕನಕಮಯ ಭಿತ್ತಿನವರತುನದಿಂ ನಿರ್ಮಿಸಿದ | ಘನತರಕವಾಟಂಗಳಿಂದಾ ||
ಅನುಪಮ ಸುಮೌಕ್ತಿಕಾಲಂಕಾರದಿಂದ ಪ | ಟ್ಟಣವೆಸೆದುದತಿ ಸಂಭ್ರಮದೊಳೂ ||೧೬||
ಪಕ್ಷಿವಾಹನನಸತಿ ಲಕ್ಷ್ಮೀತಾನಾಗಿರಲು | ಚಿತ್ರವೇ ಮೆರದುದೀ ನಗರಾ ||
ನೂತನದೋಲಗದೊಳಮರಾವತೀ ರಂಜಿಸಿತು ಶತ | ಪತ್ರಲೋಚನನಸಭೆಗೆ ಮಿಗಿಲು ||೧೭||
ಕಂದ
ಚಿಂತಿತ ತತ್ಪಲದಾಯಕ |
ಸಂತೋಷದೊಳಿರಲೊಂದು ದಿನಂ
ಅಂತಃಪುರದಲಿ
ರುಕ್ಮಿಣಿಯು | ಸಂತತಿಯ ಬಯಸಿ ತನ್ನ ಪತಿಯೊಡನೆಂದಳ್ ||೧೮||
ರಾಗ ಕೇದಾರಗೌಳ ಅಷ್ಟತಾಳ
ವನರುಹಲೋಚನ ಲಾಲಿಸಿಂದಿರುಳಿನೊಳ್ | ಕನಸಕಂಡೆನು ಮುದದೀ |
ವಿನಯದೊಳಾ ಸ್ವಪ್ನಫಲವಾ ನೀನೊರೆಯಬೇ | ಕೆನಲು ತಾನಿಂತೆಂದನೂ ||೧೯||
ಕಾಂತೆ ನೀ ಕೇಳಿಂಥ ಸ್ವಪ್ನವ ಪೇಳಲು | ಚಿಂತೆಯಾತಕೆ ಬರಿದೇ |
ಸಂತಸದಿಂದುಸುರೆನಲಾಗ ನಾಚುತ್ತ | ಕಾಂತನಿಗಿಂತೆಂದಳೂ ||೨೦||
ಮುದ್ದುಮೊಗದ ಸುಕುಮಾರನ ತೊಡೆಯೊಳು | ಮುದ್ದಿಸುತಿರಲು ನಾನು ||
ಸದ್ದಿಲ್ಲದಂತೆ ನೀ ಬಂದೆತ್ತಿಕೊಂಡುದ | ಬದ್ಧವಾಗಿಯೆ ಕಂಡೆನೂ ||೨೧||
ಎನಲು ತೋಷದಿ ನಸುನಗುತ ಇಂತೆಂದ ಕೇಳ್ | ವನಿತೆರನ್ನಳೆ ಕ್ಷಿಪ್ರದೀ ||
ತನಯನ ಪಡೆವ ಸೂಚನೆಯುದೋರುತಲಿದೆ | ಕನಸಿನ ಫಲವೆಂದನೂ ||೨೨||
ರಂಜಿಪ ಯದುವಂಶ ಪ್ರಕಟಿಸದಿರಲೆನ್ನಾ | ಬಂಜೆಯೆಂಬರು ಲೋಕದೀ |
ಮಂಜುಳಾಕರ ಪುತ್ರವತಿ ನಾನಾದರೆ ನಿ | ರಂಜನವಹುದೆಂದಳೂ ||೨೩||
ರಮಣಿ ನೀ ಮಂದಿರದಲ್ಲಿರು ಪಾರ್ವತಿ | ರಮಣನ ಪ್ರೀತಿಯಿಂದಾ |
ಯಾತ್ಮಜನನ್ನು ಪಡೆಯದಿದ್ದರೆ ನಿನ್ನಾ | ರಮಣಿ ರಮಣನೆ ನಾನಲ್ಲವೆಂದೂ ||೨೪||
ರಾಗ ಭೈರವಿ ಝಂಪೆತಾಳ
ಚಿಂತೆಬೇಡೆಂದು ನಿಜ | ಕಾಂತೆಯ ಕರಾಬ್ಜವನು |
ಸಂತೋಷದಲಿ ಮುಟ್ಟಿ | ಕಂತುಪಿತ ಬಳಿಕಾ ||೨೫||
ಭಾವಭಕ್ತಿಯಲಿ ವಸು | ದೇವ ಬಲರಾಮ ಗುರು |
ದೇವಕಿಯರಡಿಗೆರಗಿ | ಗೋವಿಂದ ಮುದದೀ ||೩೬||
ಸ್ಮರಿಸುತಿರಲಾಕ್ಷಣದಿ | ಗರುಡನೈತಂದು ಪದ |
ಸರಸಿಜಕೆ ಮಣಿದು ನಿಂ | ತಿರಲು ಸಂತಸದೀ ||೨೭||
ಮೆರೆವವಾದ್ಯ ಮೃದಂಗ | ವರಗೀತವಾಕ್ಷಣದಿ |
ಹರಿಸುಪರ್ಣವನಡರಿ | ಭರದಿ ನಡೆತಂದಾ ||೨೮||
ಕಂದ ಪದ್ಯ
ಅನಿಲಗತಿಯ ಜರೆವಂದದಿ |
ವಿನತಾಸುತನೂ (ಹಾರಲು ಗಗನಾಂಗಣಕೇ)
ವನಜಾಂಬಕ ನಾಪುರ
ಜನವಂ ಬೀಳ್ಕೊಟ್ಟು ಮೆರೆದನಂಬರ ಪಥದೊಳ್ ||೨೯||
ವಾರ್ಧಕ
ವರವೇದತರ್ಕವ್ಯಾಕರಣಾದಿ ಘೋಷದಿಂ |
ಪರಮ ಮಂತ್ರೋಪದೇಶಿಸುವ | ಸಂತೋಷದಿಂ |
ನಿರುತದಿವ್ಯಾತ್ಮನ ಧ್ಯಾನಿಪ ವಿಲಾಸದಿಂ | ಸಮಿಧಾಜ್ಯ ಕುಶಗಳಿಂದಾ ||
ನಿರುಪಮ ಕಮಂಡಲಾಂಛಿತ ಭಸ್ಮಲೇಪದಿಂ |
ತರತರದೊಳಗ್ನಿಕ್ರಿಯಾದಿ ಸುಕಲಾಪದಿಂ |
ಸ್ಥಿರತಪವಗೈವ ಮುನಿನಿಕರ ಪ್ರತಾಪದಿಂ ಬದರಿಕಾಶ್ರಮವೆಸದುದೂ ||೩೦||
ರಾಗ ಸಾಂಗತ್ಯ ರೂಪಕತಾಳ
ಇಂತು ರಂಜಿಪ ಬದರಿಕಾಶ್ರಮದೆಡೆಗೆ ಶ್ರೀ | ಕಾಂತನತ್ಯಂತ ತೇಜದಲೀ ||
ಸಂತೋಷವೆತ್ತು ಸುಪರ್ಣವಾಹನದೊಳ | ತ್ಯಂತ ಶೀಘ್ರದೊಳ್ ನಡೆತಂದಾ ||೩೧||
ಚಾರುಕಾಸರವ ಕಂಡಲ್ಲಿ ಮಿಂದು ಕಂ | ಸಾರಿ ಶುಚಿರ್ಭೂತನಾಗಿ ||
ಗೌರಿವಲ್ಲಭನ ಧ್ಯಾನಿಸಬೇಕೆಂದಿರೆ ಮುನಿ | ವರ್ಯರು ತಮ್ಮೊಡನೆಂದರಾಗಾ ||೩೨||
ಅನುದಿನಾಹಾರವಬಿಟ್ಟು ಸಮಾಧಿಯ | ನನುಕರಿಸಿದರುಚಿತದಲಿ ||
ನೆನೆಯಲಸಾಧ್ಯವಾಗಿಹ ವಿಷ್ಣುವೀವನಕೆ | ಬಂದುದು ವಿಚಿತ್ರವೆಂದೂ ||೩೩||
ಚಿನುಮಯಾತ್ಮಕನ ಮೂರ್ತಿಯ ನೋಡಿ ಸಾಧನ್ಯರಾದೆವೆನುತಲಾಕ್ಷಣದಿಂ ||
ಸನ್ಮೋಹನಾಂಗನ ಸನ್ನುತಿ ಗೈದು ಸಂ | ಪೂರ್ಣರಂದವ ತಾಳ್ದರೆಲ್ಲಾ ||೩೪||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇತ್ತ ಕಮಲದಳಾಕ್ಷನಿರುತಿರೆ | ಅತ್ತ ಘಂಟಾಕರ್ಣನೆಂಬವ |
ಕೃತ್ತಿವಾಸನ ಗಣದೊಳವನ | ತ್ಯಂತ ತನದೀ ||೩೫||
ವೀರಶೈವಶಿಖಾಮಣಿಯು ತಾ | ವಾರಿಜಾಕ್ಷನ ದಿವ್ಯನಾಮೋ |
ಚ್ಚಾರಣೆಯ ಕಿವಿಗೊಟ್ಟು ಲಾಲಿಸ | ಬಾರದೆಂದೂ ||೩೬||
ಕರ್ಣಮೂಲದಿ ಕಟ್ಟಿ ಘಂಟೆಯ | ನನ್ಯ ದೈವವ ನೀಕ್ಷಿಸದೆ ಸಂ
ಪನ್ನ ಗರ್ವದೊಳಿರಲು ತಿಳಿದುಸು | ಪರ್ಣಚೇಲಾ ||೩೭||
ಮುರಿದು ದುಷ್ಟ ಕಿರಾತಚಯವನು | ಅನುಕರಿಸಿ ಭೂತಳದೊ | ಳಿಹುದೆಂ
ದೆನುತ ಶಾಪವ ಕೊಡಲು ಮತ್ತಾ | ಜನರು ಬೆರಗಾಗೇ ||೩೮||
ಅಪರಿಮಿತ ಕಿರಾತಸೈನ್ಯಕೆ | ನೃಪತಿತಾನೆಂದೆನಿಸಿ ನಾನಾ |
ವಿಪಿನದೊಳು ಸಂಚರಿಸುತೀರ್ದನು | ಕೃಪಣದಲಿ ಬಳಿಕಾ ||೩೯||
ಭಾಮಿನಿ
ದುರುಳವೃತ್ತಿಯೊಳಿಹುದರಿಂದಲಿ |
ಹರಣವುಳಿದರೆ ಸಾಕೆನುತ ಶಶಿ |
ಧರಗೆ ಬಿನ್ನೈಸಲ್ಕೆ ಹರಿಸನ್ನಿಧಿಯಾ ಪಡೆಯೆನಲೂ ||
ಮುರಹರನ ಕಾಂಬೋತ್ಸಹದಿ ಪಡೆ |
ವೆರಸಿ ತನ್ನನು | ಜಾತನೊಡಗೊಂ |
ಡುರುತರಾ ನಂದದಲಿ ಪೊರಟೈ ತಂದರಾವನಕೇ ||೪೦||
ರಾಗ ಪಂತುರಾವಳಿ ಮಟ್ಟೆತಾಳ
ಬಂದರು ಭರದಿ | ಬಹಳಾರವದಿ | ಬಂದಲ್ಲಿ ತಪತರವೇರಿ ಅಬ್ಬರ |
ದಿಂದಲಿ ಘೋರಾಕಾರದಿ ಮೃಗ ಹಿಂಸಕದೀ ||೪೧||
ಘೋರಾನನತೋರ್ದೆಡೆ ವಿಕಾರದ ರೂಪಿನಲಿ |
ಬೀರುತ ಕೆಂಗಣ್ಣ ಕಠೋರ ಧ್ವನಿಗಳಲೀ ||೪೨||
ಜೋಲ್ಮೂಗಿನ ಮಾಂಸಂಜೆಯ | ಕಾರದಿ ರಂಜಿಸುತ |
ಮೇಲೆಮೇಲ್ ಪುಲಿಕರಡಿಗೆ ಜೂಲ್ನಾಯಿಗಳ ಬಿಡುತ ||೪೩||
ಘುಡು ಘುಡಿಸುತ ಮುನಿಗಡಣ ಇದ್ದೆಡೆಯಲ್ಲಿ ಬಂದಾಗಾ |
ತುಡು ತುಡುಕುತ್ತ ಪಿಡಿದೆಳವುತ್ತ ತಮ್ಮೊಡನೆಂದರ್ಬೇಗಾ ||೪೪||
ರಾಗ ಮಾರವಿ ಏಕತಾಳ
ಎಲೆ ಎಲೆ ನೋಡ್ಮ್ಯಾ ಕುಂತೈದಾರೇ | ಬಲ್ ಬಲ್ ಮುನಿ ಹಾರುವರೂ |
ಗಲಗಲವೆಂಬಾ ಬೆಂಕಿಯ ಬದಿಯಲಿ | ಪಿಲ್ ಪಿಲ್ ನೋಡೈತಾರೆ ||೪೫||
ಹೊಡೆಹೊಡೆಯಾ ಮುದಿ ಬ್ರಾಹ್ಮಣನೊಡಲನು | ಕಡಿದಾರಿಸು ಮೇಲ್ ಖಂಡಾ |
ಸಡಗರದಲಿ ಬಾಬಿಡುತಲಿ ಶಾಪವ | ಕೊಡುತಾ ನ್ಯಾರೀ ಪುಂಡಾ | ||೪೬||
ಕೊಳುಗಿನೊಬ್ಬುಳಿನುಟ್ಟು | ಬೆರಳ ಮೂಗಿನೊಳಿಟ್ಟು |
ಸುಳ್ಳಾಶಾಸ್ತ್ರವ ಮಿಡಿಮಿಡಿಯೆಂಬವ | ಕಳ್ಳರಾದ ವರ್ಮುಟ್ಟು ||೪೭||
ಯೇಟಾದರು ಬಡಹಾರುವಗಳ ಬಗೇ | ವೋಟಿ ಸರಿಕಾಣಣ್ಣಾ |
ಕಾಟಕಮಂದಿ ಮೈವರ ಹರ | ರಾಟ ನಡೆಯದಣ್ಣಾ ||೪೮||
ಚನ್ನಾಗಿ ಮಾಂಸವ ಪಾಕಮಾಡಿ ಮನೆಯ ಸಾಮಿಗಿತ್ತು | ಗೆಣೆಯರೆಲ್ಲಾ |
ಕೂಂತು ಮೋಜಿನಿಂದ ಉಣುವಾ ನಾವೀಹೊತ್ತು ||೪೯||
ಹರಿನಾರಾಯಣ ಗೋವಿಂದಚ್ಚುತ | ಮುರಹರ ಕೇಶವಯೆನುತಾ |
ಕರೆದಾನಾಯ್ಗಳ ಛೂಛೂ ಎಂದ | ಬ್ಬರದಲಿ ಮುಂದಕೆ ಬಿಡುತ ||೫೦||
ಬಂಟಾರಾದವರೆಲ್ಲರು ವೈಕುಂಠಾ | ನಡೆಗೈತಂದೂ |
ತುಂಟುತನವಮಾಡಲೆಮ್ಮಾ | ಘಂಟಾಕರ್ಣನಂದೂ ||೫೧||
ಬಿಡು ನೋಡಾಬಟಿಯಿಡಾರಿವನ | ಗೊಡವೆನಮಗ್ಯಾಕೆನುತ |
ಬಡಮುನಿಗಳು ಕಂಗೆಡುತಾ ಮತ್ತವ | ರೆಂದರು ಬಾಬಿಡುತಾ ||೫೨||
ರಾಗ ಸೌರಾಷ್ಟ್ರ ಅಷ್ಟತಾಳ
ಹರಹರಾ ಇಂಥಾ ದುರಾತ್ಮರಾಶ್ರಮವೆಂದು ನಾವರಿಯದೆ ಬಂದೆವಿಲ್ಲಿ |
ಸರಿರಾತ್ರೆಯಲಿ ದುಷ್ಟಜನರ ಕೈಯಲಿ ಸಿಕ್ಕಿ ದುರ್ಮರಣವು ದೊರಕಿತಲ್ಲಾ ||೫೩||
ಜಪತಪ ಸುಡಲಿನ್ನು ಜೀವುವೊಂದುಳಿದರೆ ತಪಸಿನ ಫಲವೆಮಗೆ |
ವಿಪರೀತ ಸಮಿಧಾಜ್ಯ ಕುಶಗಳ ಬಿಟ್ಟಿನ್ನು ವಿಪಿನದೊಳಿರೆವೆನುತಾ ||೫೪||
ವೇದತರ್ಕ ಪುರಾಣಶಾಸ್ತ್ರಂಗಳ | ಸಾಧಿಸಿ ಗೆಲಬಹುದು |
ಈ ದುಷ್ಟ ಜನರಿಗೆ ಮಂತ್ರಗಳಿದಿರೆಮ್ಮಾ | ಹಾದಿನೋಡುವೆವೆಂದರೂ ||೫೫||
ವಾರ್ಧಕ
ಮುರಹರನು ಮುನಿಗಳರ್ಥವ ಕಂಡು ನಗುತ ಸ |
ತ್ಕರುಣದಿಂ ಹರಿಯ ಪೆಸರುಚ್ಚರಿಸೆ ನಾಯ್ಗಳಂ |
ಕರದ ಬಗೆಯರಿತು ನಿಜಭೋಜ್ಯಮಂ ಸ್ವಾಮಿಗರ್ಪಿಸಿರೆ ಬಳಿಕ ತಾನು ಮುದದಿ ||
ಪರಿಜನರು ಕೂಡಿ ಭುಕ್ತವಚರಿಸಬೇಕೆಂಬ |
ದುರಿತಾತ್ಮರಂತರಂಗವ ತಿಳಿದು ಸಂತೋಷ |
ವೆರೆದು ಘಂಟಾಕರ್ಣನೆಂಬ | ಪ್ರಮುಖನಂ ಕರೆದಾಗಲಿಂತೆಂದನೂ ||೫೬||
ರಾಗ ಕಾಪಿ ಅಷ್ಟತಾಳ
ಪೇಳಿ ನೀವ್ಯಾರೆಂಬುದೀಗಾ | ಇಂಥಾ | ಖೂಳಚರ್ಯಗಳು ಬೇಗಾ |
ಹಾಲುಹಾಲಾಹಲಹವಣಿಸಿದಂತಿದೆ | ನಿಮ್ಮ | ಜಾಲವೇನಿದ ನಿಮ್ಮ ಜಾತಿಲಕ್ಷಣವೇನು ||೫೭||
ಭೂತಪಿಶಾಚಿಯಾಕಾರಾ | ಕಿ | ರಾತರುಚರಿಪ ವ್ಯಾಪಾರಾ |
ಘಾತುಕರಲ್ಲ ನೀವತ್ಯಂತ ನಿಪುಣರು ವಿ | ಖ್ಯಾತರೆಂದೆನಿಸಿ ತೋರುತಲಿದೆ ಮಾಜದೆ ||೫೮||
ವರತಪಸಿಗಳವರೆಲ್ಲಾ | ಈ ದು | ಷ್ಕೃತಿಯು ತರವಲ್ಲಾ ||
ಪರಲೋಕ ದೂರರಾಗುವಿರಿ ಬ್ರಹ್ಮ ದ್ವೇಷ ಬರಿದೆಪಾಪವು ಬೆನ್ನಟ್ಟಿಬರುವದಯ್ಯಾ ||೫೯||
ಶ್ರೀ ನಾರಾಯಣಕೃಷ್ಣಯೆನುತ ದಿವ್ಯ | ಜ್ಞಾನದಿ ಹರಿಯ ನುತಿಸುತ್ತಾ |
ಶ್ವಾನನ ಕರದು ಭೋಜ್ಯವಮಾಡಿ ಮಾಂಸದಿ | ಯಾವ ದೇವತೆಗೆ ಅರ್ಪಿತವೊಯೆಂಬಂತೆ ||೬೦||
ಕಂದ ಪದ್ಯ
ಎಂದಾ ಹರಿ ಕೇಳುತಾ ಖಳ
ವೃಂದಾರ್ಭಟವೆತ್ತು ಹಿರಿದಾಗೆನಲು |
ವಂದದಿ ಘಂಟಾಕರ್ಣನು |
ಮಂದಿಯನೊಡಬಡಿಸೆ ಲಕ್ಷುಮಿ ವರನೊಳಿಂತೆಂದಂ ||೬೧||
ರಾಗ ರೇಗುಪ್ತಿ ಝಂಪೆತಾಳ
ಇಂತೆಮ್ಮಾ ನೀಕೇಳ್ವ | ಬಳಿಕ ನಾಪೇಳ್ವೆ | ಚಿಂತಿತಾರ್ಥವನೀವ ಚದುರನೀನಹುದೂ || ಪಲ್ಲ ||
ಖೂಳರೆಂದೆನ್ನದಿರು ತ್ರಿಪುರಾರಿಯ ಪ್ರಮಥ | ಪಾಳಯದಿ ಪ್ರಮುಖ ಘಂಟಾಕರ್ಣನೆನುವಾ ||
ಶೀಲಸಂಪನ್ನನೆನ್ನನುಜನಿರ್ವನೋರ್ವನೆ | ಜಾಲಮಾತಲ್ಲಾ ನೆರೆ ಜಾಣದಿಟವಿದ ಕೊ ||೬೨||
ಹರನ ಸದ್ಭಕ್ತಾಗ್ರಗಣ್ಯರಂದೆನಿಸಿರಲು | ಒರೆಯಲೇನದು ಪೂರ್ವ ಜನ್ಮಾಂತರದ ಸುಕ್ರುತಾ ||
ದುರುಳಮತಿಯನುಸರಿಸಿ ಹರಿಯ ನಾಮಸ್ಮರಣೆ | ಆರೆನಿಮಿಷ ಕಿವಿಗೊಳಿಸಬಾರದೆಂದೂ ||೬೩||
ಕೇಶವನ ಮುಖದೊಳಗೀಶರ್ತಬರಲು ಮ | ತ್ತೀಶನಂಘ್ರಿಯಲಿ ಪೊಡಮಡಲು ಹರನೂ ||
ಆ ಶಂಖಧರನಿತ್ತ ನುಡಿತಪ್ಪದೀಗಾ ನ | ಮ್ಮಾಸೆಯನು ಬಿಟ್ಟು ವನಸೇರಿ ಬದುಕೆನಲು ||೬೪||
ಹರಿಯ ಕಾಂಬುತ್ಸಹದೊಳೈ ತಂದೆವಿಲ್ಲಿ ಕೇಳ್ | ದುರುಳಮತಿಯನು ಮಾಳ್ಪುದೆಮ್ಮಕುಲಧರ್ಮಾ ||
ಪರಮಾತ್ಮ ಸರ್ವಗಮ್ಯಕನೆಂದು ತಿಳಿದೆವು | ಪರಿಪರಿಯ ಮಾಂಸಗಳ ಮಾಪುಗೈಯ್ಯೋ ||೬೫||
ರಾಗ ರೇಗುಪ್ತಿ ಆದಿತಾಳ
ಪಾಲಿಸೊ ಪಾವನಚರಿತ ಮುಕುಂದಾ |
ಜಾಲವ್ಯಾತಕೊ ಜಗನ್ನಾಯಕ ಗೋವಿಂದಾ || ಪಲ್ಲ ||
ನಗಧರ ನಿನ್ನನು ನೋಡಿದ ಬಳಿಕಿನ್ನು |
ಜಗದಿ ನಾನೇ ಧನ್ಯ ಜ್ಞಾನದಿ ಪಿತಯನ್ನಾ | ಪಾಲಿಸೋ ||೬೬||
ದುರಿತಪಯೋಧಿಯ ದಾಟಿಸಿ ಮುಕ್ತಿಯ |
ಕರುಣಿಸು ದೇವನೆ | ಕಾಮಜನಕ ನೀನೆ | ಪಾಲಿಸೊ ||೬೭||
ತಾರಕ ಬ್ರಹ್ಮನೆಂದು ತಿಳಿದೆನು ನಾನಿಂದು |
ಕ್ರೂರವೆನ್ನೊಡನ್ಯಾಕೆ ಕೇಶವ ಪರಾಕೆ | ಪಾಲಿಸು ||೬೮||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇನಿತು ಸನ್ನುತಿಗೈದು ಹರಿಪದ | ವನರುಹದಿ ಮಣಿದೆದ್ದುವುದ್ಧರಿ |
ಸೆನಲು ಕರುಣಾವನಧಿ ಭಕ್ತನ | ಮನಕೆ ಮೆಚ್ಚಿ ವಿಲಾಸದಿ | ಚಂದದಿಂದಾ ||೬೯||
ದುರುಳನಲ್ಲಾ ಇನಿತು ಹರಿಕಿಂ | ಕರನುದೇಶ ಸುಶೀಲನೀನೆಂ |
ದೊರೆದು ನಿಜ ಕರಕಮಲದಲಿ ಮೈ | ತಡವರಿಸಲಾಕ್ಷಣ | ನಿಮಿಷದಿ | ಚಂದದಿಂದಾ ||೭೦||
ಘೋರ ರೂಪುಗಳಡಗಿ ದಿವ್ಯಾ | ಕಾರದಲಿ ಗಂಧ | ರ್ವರಾಗಿಯೆ
ಶೌರಿಯಂಘ್ರಿಗೆ ವಂದಿಸುತ ಮುದ | ವೇರಿ ಹರುಷದಿ ಪೋದರು | ಚಂದದಿಂದಾ ||೭೧||
ರಾಗ ಕೇತಾಳಗೌಳ ಆದಿತಾಳ
ಹರಿಗಂಧರ್ವರ ಬೀಳ್ಕೊಟ್ಟು ಮುನಿವರರನು ಮೋಹಿಸುತಾ |
ಇರುಳುಹಗಲಂಬರದಲ್ಲಿ ಭಾಸ್ಕರನು | ಮೆರದ ಮಹೋತ್ಸವದೀ ||೭೨||
ಮಾಧವನೀಕ್ಷಿಸೆ ಮಿಂದರ್ಘ್ಯಾದಿಸ್ಥಾನವದನುಕರಿಸೆ |
ಆದುರ್ಜಟಿಯನು ನೋಡುವನೆಂಬವಿನೋದದಿ ಇರುತೀರ್ದಾ ||೭೩||
ಅತ್ತಲಮರ ಗಣ ಶಂಭರನೆಂಬಾ ದೈತ್ಯನ ಮುಖದಿಂದ |
ಅತ್ಯುಪಟಳವೆತ್ತು ಸುರಪನಿಗೆ ವಿಸ್ತರಿಸಿದರಂದೂ ||೭೪||
ರಾಗ ದೇಶಿ ಅಷ್ಟತಾಳ
ಲಾಲಿಸಬೇಕು ದೇವೇಂದ್ರಾ | ಕೇಳು | ಜಾಲಮಾತಲ್ಲಿದು ಸದ್ಗುಣ ಸಾಂದ್ರಾ || ಪಲ್ಲ ||
ಶಂಭರಾಸುರನುಪಟಳದೀ | ನಮ್ಮ | ಹಂಬಲನ್ಯಾತಕೆ ಬಂದು ನೀದಯದೀ |
ಕುಂಬಿನಿಭಾರವನಿಳುಹಿಸು ಕುಟುಂಬವ ರಕ್ಷಿಸು ಖಳನ ಸಂಹರಿಸಿ | ಲಾಲಿಸಬೇಕು ದೇವಾ ||೭೫||
ಭೃಂಗಾಳಕಿಯರ ಕೊಂಡೊದಾ | ನಮ್ಮ | ಶೃಂಗಾರ ತೋಟವ ಸಂಹಾರಗೈದಾ |
ಹಿಂಗದೆಸೆರೆ ಇಟ್ಟನಲ್ಲಾ ನಾವು | ಭಂಗಬಟ್ಟಿರುವದು ಶಿವನೊಬ್ಬ ಬಲ್ಲಾ ||೭೬||
ಯಾಗಾದಿ ಷಟ್ಕರ್ಮವೆಲ್ಲಾ | ಮುಂದೆ | ಸಾಧಿಸಿಮದ್ಭಾಗರಿಲ್ಲಾ
ಬೇಗ ನಿನೇಳಬೇಕೆನುತ | ಪೇಳಲಾಗ ಪುರಂದರನಿಂತೆಂದನಗುತ ||೭೭||
ರಾಗ ಚೂರ್ಣಿಕೆ
ಎನ್ನಿಂದಾಗುವದೇನು ಬನ್ನಿ ಕಮಲಾಕಾಂತನಂಘ್ರಿಗೆ ಸೇರುವ
ಪನ್ನಗಾರಿವರ ಬದರಿಕಾಶ್ರಮದಲ್ಲಿ ಮೈದೋರುವಾ ||೭೮||
ಅನ್ಯಥಾಸ್ಪದವಿಲ್ಲವೆಂದಖಿಳರಿಂದೊಡಗೂಡಿ ಸಾನಂದದಿಂ
ಸಂಗೀತರನಿತರೋಳ್ ಬಂದು ಹರಿಗಂಬಿನ್ನೈಸಿದರ್ ಚಂದದಿಂ ||೭೯||
ರಾಗ ಸಾರಂಗ ಆದಿತಾಳ
ಚಿತ್ತಾವಧಾನ ಶ್ರೀ ವೈಕುಂಠ ಜೀಯಾ | ವೃತ್ತಾಂತವೆಲ್ಲಾನಂದದಿ ಲಾಲಿಸೈಯ್ಯಾ |
ಖೂಳಶಂಬರ ದೈತ್ಯ ಬಂದೆಮ್ಮ ಪುರವಾ | ಧಾಳಿಯೊಡ್ಡಿ ಪುರವಾಗೋಳಿಡುತ ||೮೦||
ಲೋಲಾಕ್ಷಿಯರನೊದ ದಾಸಿಯರಂದದಲಿ | ಕೋಲಾಹಲವ ಮಾಳ್ಪ ಬಹಳಗರ್ವದಲೀ ||
ಕನಸಿನೊಳಾದರು ಸುಖವಿನಿತಿಲ್ಲಾ | ದನುಜಾರಿಪತಿ ಸಾಂಬದೇವತಾ ಬಲ್ಲಾ ||೮೧||
ಭಾಮಿನಿ
ಸುರಪಕೇಳ್ ಶಿವನಲ್ಲಿ ಮನ್ಮಥ |
ಹೊರತು ಕೊಲುವವರಿಲ್ಲವೆಂದೀ |
ವರವ ಪಡೆದಿಹ ದೈತ್ಯ ತದ್ಬಲದಿಂದ ಬಾಧಿಸುವ ||
ಭರದಿ ರುಕ್ಮಿಣಿಯುದರಲಿ ಪೂ |
ಶರನುದಿಸಿ ತತ್ಖಳನ ಸಂ |
ಹರಿಸುವನು ನಿಮ್ಮಿಷ್ಟವಾಹುದು ಬೆದರಲೇಕೆಂದಾ ||೮೨||
ವಚನ
ಈ ರೀತಿಯಿಂದಾ ಸುರಪತಿ ಸಂದಣಿ ಸಹಿತ ತೆರಳಿದರು ಗಗನ
ಪಥವಿಡಿದು ಅತಿ ಹರುಷದಿಂದಾ ||೮೩||
ವಾರ್ಧಕ
ಗರುಡ ಗಂಧರ್ವರ ವಿತಾನದಿಂ ಮಾನದಿಂ |
ಪರಿಪರಿಯ ವಾದ್ಯಗಳ ಘೋಷದಿಂ ತೋಷದಿಂ |
ಮೆರೆಯುತಿಹ ದಿವ್ಯಕಾಸಾರದಿಂ ತೀರದಿಂದುರುತರಾನಂದದಿಂದ ||
ಪುರಹರನ ನೇತ್ರಾಗ್ನಿಯಿಂದ ಪೂರ್ವದಿ ಪಂಚ |
ಶರನುದಹಿಸಲ್ಕಾಗ ತತ್ಪತ್ನಿ ರತಿಗುಮಾ |
ವರನನುಗ್ರಹಿಸಲಾ ವನಿತೆ ಸಂತಸವೆತ್ತು ಇರುತಿರಲ್ಕತ್ತ ಬಳಿಕಾ ||೮೪||
ಅರುಹಲದನಿನ್ನೇನು ದೈವಸಂಘಟನೆಯೊಳ್ |
ಹರಿಹರರ ಸಂಯೋಗವಾಗಿಹುದು ತತ್ಸಮಯ |
ಒರೆಯಲೇನಂಗಜನಿದಿರ್ಬಂದು ಕಾಣಿಕೆಯನಿತ್ತಂತೆ ಗಿರಿಮೆರೆದುದೂ ||
ಚರಿಸುವ ಗಣತ್ರಯದಿ ಮಧ್ಯವರ್ಗಾಕ್ಷರಗ |
ಳೆರಡು ಮಿಥಿಲೇಶಸುತೆಯಭಿಧಾನದಗ್ರಮ |
ತ್ತರವಿಂದನಾಭನ ಕರಾಭರಣದಿಂದ ಮತ್ತವನರ್ಧದೇಹಸತಿಯ ||೮೫||
ವರ ನಾಮದ ಪ್ರಥಮದೀ ತೆರದ ಸಂಜ್ಞೆಯೊಳ್ |
ಮೆರೆಯುತಿಹ ಪಂಚವರ್ಣಗಳಿಂದ ಸರ್ವಜನ |
ಗಿರಿಯ ಪೆಸರುಚ್ಚರಿಸಿ ಸರಸಿಜಾಂಬಕನೊಡನೆ ನಡೆತಂದರರ್ಥಿಯಿಂದ ||
ಗಿರಿಸುತೆಯ ಮೊಗನೋಡಿ ಮುದದಿಂದ ಮದದಿಂದ |
ಸರಸವಾಡುತ ಪಂಚಮುಖದಿಂದ ಸುಖದಿಂದ |
ಕರಿಮುಖಗುಹಾದಿಗಳ ನಯದಿಂದ ಭಯದಿಂದ ಭರಿತ ವೈಭವಗಳಿಂದ ||೮೬||
ಪರಮಸಂಗೀತಸುಸ್ವರದಿಂದ ಭರದಿಂದ |
ವರಗಳನು ಕರೆದೀವ ಮತಿಯಿಂದ ನುತಿಯಿಂದ |
ನಿರುತ ನಿರ್ಮಲಸುಮಂಗಲದಿಂದ ನೊಲವಿಂದ ರಜತಾದ್ರಿ ಕಣ್ಗೆಸದುದೂ ||೮೭||
ಕಂದ
ಈತೆರನತ್ಯಾನಂದದಿ |
ಭೂತಾಧಿಪ ನವರತ್ನ ಪೀಠದೊಳಿರಲಾಗಲೆ |
ಪೀತಾಂಬರನೈತಂದಿಹ |
ವಾರತೆಯಂ ದೂತನೋರ್ವನೈತಂದು ಹರಗಿಂತೆಂದಾ ||೮೮||
Leave A Comment