ರಾಗ ಶಂಕರಾಭರಣ ಏಕತಾಳ

ಅರರೆ ಬಲು ಬಲು ಶಭಾಸೈನಾ | ಮರುಳಾದೆ ಕೇಳ್ ಮೊದಲೆ
ನಿನಗಿಂನೊರವ ಕಾರ‍್ಯವೇನುಂಟು ಕೇಳ್ದರಿದೆ ಖಳರಾಯಾ ||೩೦೪||

ನಾರದನೀನೆಂದ ಮಾತ | ಮಿರೆಮರೆದುದಿಲ್ಲವೈಯ್ಯಾ
ಮಾರನ ತಿಂದಬ್ಧಿಯಲಿ ತೋರಿಸಿ ಬಂದೆ ||೩೦೫||

ಪರಿತೋಷವ್ಯಾತಿನ್ನೆನಂ ತತ್ಪುರದಿ ಪಾಕವನು ಮಾಳ್ಪ
ತರುಣಿಯ ಕ್ರೀಡಿಸುವಂತ ಪುರುಷನಾರೈಯ್ಯಾ ||೩೦೬||

ಮಿನಿನ ಗರ್ಭದಿ ಬಂದ | ಸೂನು ಯೆನ್ನಪ್ಪಣೆಯಿಂದಾ ||
ನಾರಿ ಮಣ್ಣಿಸುವಳನು ಮಾನವೇನಿದಕೆ ||೩೦೭||

ಪಗಲಿರುಳೆನ್ನದೆ ಸಂಪತಿಗೆ ಮೇಲ್ ದಂಪತಿಗಳಂತೆ |
ಮುಗುಳಂಬ ನಾಟ್ಯದೊಳ್ತತಿ ಸೊಬಗಿನಿಂದಿಹರೈ ||೩೦೮||

ಹರ ಹರ ಸಣ್ಣವರನೋಡಿ ಬರಿದಪವಾದಗಳನ್ನು
ಹೊರಿಸುವದಲ್ಲದೆ ಮುಂದೆತರುವ ಮಾತುಂಟೆ ||೩೦೯||

ಬಿಡು ಬಿಡು ಸಾಕಿನ್ನೇನೆಂಬೆ | ಹುಡುಗಿ ಹುಡುಗನ ಬಗೆಯಲ್ಲಾ |
ಕಿಡಿಯೇರುವುದೈ ಬಳಿಕ | ತಡಿಗೆ ಖಳರಾಯ ||೩೧೦||

ರಾಗ ಮಾರವಿ ಏಕತಾಳ

ಗರುಡಿಯ ಮನೆಯೊಳು ನಿನ್ನಲಿ ಸಾಧಕ | ವರಿತು ಪುರುಷನೊಡನೇ |
ಮರಣವಬಹುದೆಂದಗಜೇಶ್ವರ | ಪೇಳಿರುವದು ಮರತೆಯಲ್ಲಾ ||೩೧೧||

ನಿನ್ನಲಿ ಪಾಕವರಚಿಸುವಳೆ ರತಿ | ಕನ್ನೆಗೆ ಬೆರದಿರುವ ||
ಚನ್ನಾಂಗನ ಸ್ಮರದಂಪತಿಗಳನೀ | ಮನ್ನಿಸುವದು ಸಹಜ ||೩೧೨||

ಯೇಕೋಭಾವದೊಳೆಮ್ಮಪುರವೀಕ್ಷಿಸ | ಬೇಕೆನುತಿಹ ಜನಕೆ
ಯಾಕೆ ವಿರೋಧವ ಮಾಳ್ಪುದು ನಮ್ಮ ವಿ | ವೇಕವು ಹಿತವಲ್ಲಾ ||೩೧೩||

ಕಂದ

ಇನಿತೆಂದಾಕ್ಷಣ ಪೋಗಲ್
ಮುನಿ ವಚನವ ಕೇಳ್ದು ಮನಚೇತರಿಕೆಗೊಳುತಂ
ದನುಜಾಧಿಪ ಕಡುರೋಷಪೆತ್ತು
ಕೊನೆ ಮಿಸೆಯ ತಿರುವುತ ದೂತರಿಗೆಂದಂ ||೩೧೪||

ರಾಗ ಕೇತಾರಗೌಳ ಝಂಪೆತಾಳ

ಚರರು ಕೇಳ್ ಮಂದಿರದೊಳಿರುವ ಸಣ್ಣವನ
ಸಿರಿವರದ ನಮ್ಮೊಡನೆ ಬಂದೊರೆವುದೀಕ್ಷಣದೀ ||೩೧೫||

ಘನಪಾಕಗೃಹದೊಳೀ ವನಿತೆಯನು ಪಿಡಿದು
ಈಕ್ಷಣೆ ಸೆರೆಮನೆಯೊಳಿರಿಸೆನುತ ನೇಮಿಸಿದ ||೩೧೬||

ಭಾಮಿನಿ

ದುರುಳರೆಂದುದ ಕೇಳಿ ಕರ್ಕಶ |
ಚರರು ಬಂದಾಕ್ಷಣದೊಳಂತಃ |
ಪುರದ ರತಿಯೊಡನತಿ ವಿಲಾಸದೊಳಿರುವ ಮನ್ಮಥನಾ ||
ಭರದಿ ತುಡುಕಲು ದೂತರನು ಸಂ |
ಹರಿಸಿ ನಿಮ್ಮಯ ತಾತಗುಸುರೆಂ |
ದೊರೆಯಲೋರ್ವನು ಖಳನ ಸನ್ನಿಧಿಗೈದು ಮಣಿದೆಂದಾ ||೩೧೭||

ರಾಗ ಕೇದಾರಗೌಳ ಝಂಪೆತಾಳ

ಬಿನ್ನವಿಸಲ್ಯಾಕೆ ಜೀಯಾ | ಲಾಲಿಪು | ಚೆನ್ನಾಯ್ತು ಕಾಯ್ವ ಕಾಯ ||
ಇನ್ನೇನು ಹಾಡುಹಗಲೇ | ಮಲಗಿದಳು | ಸಣ್ಣವನ ಬದಿಯೊಳಬಲೆ ||೩೧೮||

ಮತ್ತವನ | ಧೀರತನಕೆಣೆ ಇಲ್ಲವಯ್ಯಾ
ಶೂರ ಕೇಳ್ ನಿಮ್ಮವರನೂ | ಕ್ಷಣದೊಳೆಮದನೂರಿಗಟ್ಟಿ | ತರಳನೂ ||೩೧೯||

ವಾರ್ಧಕ

ದೂತರೆಂದುದ ಕೇಳ್ದು ಧರೆಗಿಳಿದು ನಾರದನ |
ಮಾತುಪುಸಿಯಲ್ಲೆನುತಖತಿವೆತ್ತು ನಿರ್ಜರಂ |
ಭೂತಪತಿಯಂತೆ ಭೋರ್ಗರದು ಕೆಂಗಿಡಿಯನುಗುಳುತಾರ್ಭಟಿಸಿ ಮುಂದೆ ಬಂದೂ ||
ಭೂತಳವೆ ನಡಗುವಂದದಿ ಮುತ್ತಿ ಗಜರಥ ಪ |
ದಾತಿಗಳ್ವೆರದು ಖಳನೈತಂದು ನಿಜ ಮಕರ |
ಕೇತನರ್ಕದಲ್ಲಿ ಮುದದಿ ಮೈಮರದಿರಲ್ ಕಂಡು ಮತ್ತಿಂತೆಂದರೂ ||೩೨೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅಹಹ ಮುನಿಯೆಂದುದನು ಮನದಲಿ | ಗ್ರಹಿಸಿ ನೋಡಲುಬೇಕೆನುತ ವಿ
ಗ್ರಹದಿ ಮೃತ್ಯುವ ತಂದು ಸೇರಿಸ | ಬಹುದೇ ಹೀಗೆ ||೩೨೧||

ಘನದುರಿತ ಭಯಕಂಜಿ ಮಗುವಿನ | ವನದಮಧ್ಯದಿ ಬಿಸುಟುಬಂದಿರು | ವೆನಗೆ
ಮೂಲ ವಿದಾತು ಮುಂದಿಂದೆ | ನುವದೇನೂ ||೩೨೨||

ಮಿನಿನಂದದಿಶಿರುವ ಶಿಶುವನು | ಮಾನುನಿಯವಶಕಿತ್ತು ದನುಚಿತ |
ಯೇನನಾದರಿನ್ನೇನು ಬುದ್ಧಿ | ಹೀನನಾದೆ ||೩೨೩||

ಭಾಮಿನಿ

ಬಗೆಬಗೆಯ ಮೋಹದಲಿ ಸುಪ್ಪ |
ತ್ತಿಗೆಯ ಮೇಲ್ ದಂಪತಿಗಳೀರ್ವರು |
ಮೊಗಕೆ ಮೊಗವಿತ್ತಂದದಲಿ ಬಿಗಿಯಪ್ಪಿ ಮಲಗಿರಲು ||
ಬಿಗಡರಕ್ಕಸರಾರ್ಭಟೆಗೆ ತ |
ತ್ಸುಗಣೆತಾನೆಚ್ಚರ್ತಳಾಕ್ಷಣ |
ಮುಗುದೆ ಮನ್ಮಥನುರಕೆಕುಚಗಳನಿತ್ತು ಪೇಳಿದಳೂ ||೩೨೪||

ರಾಗ ಕಾಂಭೋಜಿ ತ್ರಿವುಡೆತಾಳ

ಎನ್ನೊಳೇನಿದೆ ಮುನಿಸು | ಕೇಳಿನ್ಯಾವಕನ್ನೆಯೊಳಿಡೆ ಮನಸು |
ಮಣ್ಣನೆಯಲ್ಲಿ ಮತ್ತನ್ಯರಾವೆರಸೀಗಾ ನಿನ್ನ ಬಿಟ್ಟಿರುವಳಲ್ಲಾ | ಏನಲ್ಲಾ ||೩೨೫||

ಚತುರನೆಂತುಸುರುವೆನು | ಮಹಾಬ್ಧಿಯೊಳ್ಮೊದಲೆನಾ ಮುಳುಗಿದೆನು |
ಮದನಕೇಳಾಕ್ಷಣವೆನ್ನ ಬಲೆಯಾಗದಿದ್ದರೆ | ಬದುಕುವ ಬಗೆಯ ಕಾಣೆ | ನಿನ್ನಾಣೆ ||೩೩೬||

ಅನುದಿನ ಮನ್ಮಥನ | ನಿನ್ನಲಿ ಬಿಟ್ಟೆನ್ನನು ಕಂಗೆಡಿಸಿರುವಾ |
ತನುವಿಗೆನ್ನಿಂದ ಮೃತನುವಿದಲ್ಲಿನ | ಕನಸಿನ ವೈದ್ಯವಹುದುದಲ್ಲಿ | ನಿನ್ನಲ್ಲಿ ||೩೨೭||

ಕಂದ

ಅತಿಸನ್ಮೋಹದಿ ಕಾಂತನ |
ರತಿ ತನ್ನಯ ತೋಳ್ಗಳಿಂದ ತಕೈಸುತಿರಲಿತ್ತ |
ಸ್ಮಿತ ವದನೆಯ ಗಲ್ಲವನುಂ |
ಪತಿಭಾವದಿಪಿಡಿದು ಮುದ್ದಿಸುತಿಂತೆಂದಂ ||೩೨೮||

ರಾಗ ನೀಲಾಂಬರಿ ಏಕತಾಳ

ಭಾವಕಿ ನಿನ್ನಗಳಿದರಿನ್ಯಾವ ಸುದತಿಯೆನಗೆಣೆಯೇ
ಕೇವಲ ಸಂಜೀವನ ಸನ್ಮೋಹದದರಗಿಣಿಯೇ |
ಮಾವಿನಹಣ್ಣಿನ ರಸವು ಸೋಸುತಿಹ ಕೋಗಿಲೆಗೆ |
ಬೇವಿನಫಲ ಸೊಗಸಹುದೆ ಕೋಗಿಲೆ ಪೇಳೆನಗೆ ||೩೨೯||

ಚಂದಿರನಂದಿರುವನಕನಂದಗಳಳಿಲ್ಲದೆ ಬರಿದೇ |
ನಂದನದಿಲ್ಲಿ ಪುಷ್ಪಗಳೆಂದಿಗೂ ನೋಡುವುದೆ |
ಆಂದಿಂದಿನ ಸಂಪ್ರೀತಿಗಳೆಂದಿಗೆ ಸಾಕೆನಿಸುವುದೇ |
ಸುಂದರಿ ನಮ್ಮಿರ್ವರ ಸನ್ಮಂಗಳೆರಡಿಹುದೇ ||೩೩೦||

ತರುಣಿಮಣಿ ನಾರದನಿಗೆ ಭರವಸವಿತ್ತುದರಿಂದ |
ಪರಿಪರಿ ಸೈನ್ಯ ಶಂಭರಕದನಕ್ಕೆ ನಡೆತಂದಾ |
ಅರೆನಿಮಿಷ ದೈತ್ಯನ ಸಂಹರಿಸಿ ಸುಪಾದ್ಯರನು |
ತರುಣಿ ನಿನ್ನಗಲದೆ ಸಾನಂದದೊಳಿರಿಸುವೆನೂ ||೩೩೧||

ಭಾಮಿನಿ

ಸರಸಿಜಾಕ್ಷಿಯನೊಡಂ ಬಡಿಸಿ ಪೂ |
ಶರಮನೋರಂಗದಲಿ ಪ್ರೇಮಿಸಿ |
ದರಸಿಯನ್ನೊಡಗೊಂಡು ರಣಕೈತಂದು ಮುಂಬರಿದಾ ||
ತುರಗಜರಥ ಸೈನ್ಯಗಳ ಸಂ |
ಹರಿಸಿ ಸಂತೋಷದಲಿ ಬಾಣವ
ಸುರಿವುತೊಯ್ಯನೆ ಪೊಕ್ಕುದನುಜನೊಳೆಂದ ನಸುನಗುತ ||೩೩೨||

ರಾಗ ಶಂಕರಾಭರಣ ಮಟ್ಟೆತಾಳ

ಭಳಿರೆ ಧೈತ್ಯ ತರಳನೊಡನೆ ಸರಸವೇನಿದೆ |
ಬರಿದೆ ದಳವ ತಂದ ಭೂತಳವ ತುಂಬಿದೆ ||
ಚೆಲುವ ಮೋಹನಾಂಗಿಗಿತ್ತು ಸಲಹುಯೆನ್ನನೂ |
ಚಲುವದಲ್ಲ ನಿನಗೆ ಈ ಚಲವ ಮನದೊಳು ||೩೩೩||

ಪೋರತನದ ಮಾತಿನಲಿ ಶರೀರದಾಶೆಯ |
ಮಾರಬೇಡವೆನುತ ರೋಷವೇರಿ ಮಿಸೆಯಾ |
ಪೋರತನುಜ ತಿರುಹುತಾ ಕಠೋರದಸ್ತ್ರದೀ |
ಮಿರಿಡದ ಗರ್ಜಿಸುತ್ತ ಮಾರನುಗ್ರದೀ ||೩೩೪||

ಉರಿಯನುಗುಳ ಕೈಯ್ವ ಸರಳ ಮುರಿದು ಮನ್ಮಥ |
ಭರದಿ ಪೇಳ್ದ ತನ್ನ ಪೊರೆದ ಹಿರಿಯನೆನ್ನುತ ||
ಸ್ಮರಿಸಿನೋಳ್ದರಿಂತು ಬರಿದೆ ಶೌರ‍್ಯವ್ಯಾತಕೇ |
ದುರುಳನೋಡೆನ್ನುತ್ತಲೆಚ್ಚ ದುರುಳನಂಗಕೆ ||೩೩೫||

ಶಿವನೆ ತನ್ನ ಮೈಯ ಕುಸಿವ ಕೋಪದೀ |
ಕುಸುಮಬಾಣನೆಂಬ ನಿನ್ನ ಹೆಸರ ನಿಮಿಷದೀ ||
ಮಸಣಿಸುವೆನೆಂದು ಧರಣಿ ಕುಸಿವ ತೆರದಲೀ |
ಪೊಸಶರವುಗಳ ವೆಚ್ಚನಾರ್ಭಟಿಸಿರೌದ್ರದಿ ||೩೩೬||

ಒದಗಿ ಬರುವ ಶರವನರಿತು ಹರಿವ ಕೋಪದಿ |
ತುದಿಯದೀಗಲೆನುತಲೆಚ್ಚಲದ್ಭುತಾಸ್ತ್ರದೀ ||
ಮುದದಿ ಶಂಭರನ್ನ ನೋಡಿ ಮದನ ಹೊಡೆಯಲು |
ಒದರಿ ಮೈಯ್ಯ ಮರೆದನಂದು ಕದನ ಕ್ಷಿತಿಯೊಳೂ ||೩೩೭||

ವಾರ್ಧಕ

ರಘುರಾಮ ರಾವಣರ ಸಮರಕಿಮ್ಮಡಿಯಾಯ್ತು |
ಮಗುಳಂಬು ದೊಲವನೆಂ ತೊರೆವೆ ಶಂಬರನಾ ಸೈ |
ನ್ಯಗಳಲ್ಲಿ ಗಜತುರಗ ಕಾಲಾಳುಗಳು ಸಾಲುಗಟ್ಟಿ ತಾಮಡಿವುತಿರಲೂ ||
ಗಗನಸುರರಘೇಯೆಂದೆನುತಿರಲು ಖಳನು ಪ
ನ್ನಗನಂತೆ ಭೋರ್ಗರೆದು ಮದದಿ ಮೈ ಮುರಿದೆದ್ದು
ಮಿಗೆಮಹಾ ರೋಷದಲಿ | ಕೆಂಗಿಡಿಯನುಗುಳುತ್ತ ಮನ್ಮಥನಿಗಿಂತೆಂದನೂ ||೩೩೮||

ರಾಗ ಭೈರವಿ ಏಕತಾಳ

ಅಡಿಗೆಯ ಮನೆಯೊಳ್ನಲಿವಾ | ಆ | ಮಡದಿಯ ಮಾತಾಡಿಸುವಾ |
ಬೆಡಗಲ್ಲ ನೋಡ್ ತರಳ | ಎಂದೊಡನೆಚ್ಚನು ಕಳಸರಳಾ ||೩೩೯||

ತನ್ನರಸಿಯನಾಳುವದೂ | ಕೇ | ಳೆನುತವೆ ಮೇಲ್ವರಿದು |
ಅನ್ಯಾಂಗನೆಯರಗೊಲಿದು ಫಲ | ವೆನ್ನುತಲಾಸ್ತ್ರವಸುರಿದು ||೩೪೦||

ಬಣ್ಣದ ಸವಿಮಾತಿನಲಿ | ಯೆಲೆ ಹೆಣ್ಣುಗಳತಿ ಮೋಹದಲೀ |
ಬಣ್ಣಿಪ ಸೊಗಸಲ್ಲೆಂದಾ | ಆ | ಚಿಣ್ಣನತುರಿದನಂದೂ ||೩೪೧||

ಅಂದಂದಿಗು ಮುನಿಗಳನೂ | ಸಾ | ನಂದದಿ ಸುರಪಾದ್ಯರನೂ |
ಬಂಧಿಪ ಶೌರ‍್ಯನಿದಲ್ಲಾ | ನೋ | ಡೆಂದೆ ಸೆದನೂಕಬ್ಬಿಲ್ಲಾ ||೩೪೨||

ಪುರಹರ ಪಾಲಾಗ್ನಿಯಲೀ | ಬಿ | ದುರಿದುದು ನೋಡು ನಿಮಿಷದಲೀ |
ಶಿರವರಿಯದೆ ನೋಡೆನುತ | ಖಳ | ಸುರಿದಸ್ತ್ರವ ಕೋಪಿಸುತಾ ||೩೪೩||

ಬರುವಸ್ತ್ರವ ಸಂಹರಿಸಿ | ಆ | ಸ್ಮರನತಿರೋಷವ ಧರಿಸಿ
ಉರುತರ ಬಾಣದಿ ಮದನ | ಕತ್ತರಿಸಿದ ಹಸ್ತಗಳಿವನ ||೩೪೪||

ಭೋರ್ಗರವುತ ಆರ್ಭಟಿಸೀ | ಆ | ಕೂರ್ಮನು ನಡುಗುವ ತೆರದಿ |
ಮಾರ್ಮಲವ ಸುರಾಧಿಪನು | ನಿಜ | ಕಾರ್ಮುಕವನು ತುಡುಕಿದನೂ ||೩೪೫||

ಕಳನಿರವನು ಕಂಡಾಗ | ಮನುಮಥನಳುಕದೆ ತಾ ಬೇಗಾ
ಘಳಿಲನೆ ದೈತ್ಯನ ಶಿರವ | ಧರೆಗಿಳುಹಿದಾ ಬಾಣದೊಳಸುವ ||೩೪೬||

ವಾರ್ಧಕ

ಧರಣಿಪತಿ ಕೇಳಿಂತು ಶಂಭರನ ಮಸ್ತಕವು |
ಧರಣಿಯೊಳ್ಕುಣಿವುದಂ ಕಂಡು ಸುರರಂಬರದಿ |
ಹರುಷಾಬ್ಧಿಯೊಳಗಾಡಿ ಮದನರತಿಯರ ಮೇಲೆ ಪೂಮಳೆಯಗರೆಯೆ ಮುದದೀ ||
ಮೆರೆವ ದುಂದುಭಿ ನಾದಮಂಗೈದು ಸುದತಿಯರ್ |
ಮೆರೆದು ದಿವ್ಯಾರತಿಯನೆತ್ತಲು ಬಳಿಕ ಸುಮ |
ಶರ ನಧಿಕತೋಷದಲಿ ನಿಜಸತಿಯೊಳಾನಂದವೆರೆದ ನಂತಃಪುರದೊಳೂ ||೩೪೭||

ಕಂದ

ನಾರದ ಮುನಿಯಿತ್ತಲಾ |
ದ್ವಾರಕಿಗೈದು ಹರಿಯಮಂದಿರಗಾಗಳ್ |
ನಾರಾಯಣ ಸಿಂಹಾಸನ |
ವೇರಿವಿದಿಯೋಪಚಾರಗೈವುತಿಂತೆಂದಾ ||೩೪೮||

ರಾಗ ಬೇಗಡೆ ಏಕತಾಳ

ಎತ್ತಣಿಂದ ಬಂದುದು ಸಾರಿ | ಸಂತೋಷವಾಯ್ತು |
ಚಿತ್ತದಿ ನಮ್ಮೇಲೆ ದಯದೋರಿ | ಸತ್ಯವಂತರ ಬೇಟಿನಮಗಿನ್ನೊತ್ತರಕಾರ‍್ಯ ಲೋಕದ
ವರ್ತಮಾನವೆಲ್ಲಾ | ಸಾಂಗ್ಯದಿ ವಿಸ್ತರಿಸಿ ಪೇಳಬೇಕೆನ್ನತ್ತಣಿಂದಾ ||೩೪೯||

ಅಷ್ಟಮೂರ್ತಿಮಹಿಮಸಾನಂದ | ನಾನೆಂದ ಮಾತಿಗೆ | ಮುಟ್ಟಿನಂದನನಿತ್ತ ನೋಡೆಂದಾ |
ತೊಟ್ಟಿಲೊಳಿಟ್ಟು | ಚಂದದಿಂದ ಮುದ್ದಿಟ್ಟು | ತೂಗುತ್ತಪಾಡಿ
ಕಣ್ಣಿಟ್ಟು ಸತಿಯರ್ಕಂದಿರಲು ಮಾಪುಟ್ಟಮಂಗಳ ಮಾಯವಾದುದು ||೩೫೦||

ಜೀವಭಯವಿಲ್ಲೆಂದು ರುಗ್ಮಿಣಿಗೆ | ನಾಪೇಳ್ದನಂತ | ರ್ಭಾವ ನಿಶ್ಚಯವಿಲ್ಲಾ ಭಾಮಿನಿಗೆ |
ಆವನಂಗೋಪಾಂಗ ಲಕ್ಷಣದವ ಭಾವವ ಚಿಂತಿಸುತಿಹ
ಭಾವಕಿಯ ಸಂತಾಪವನು ಮಹದೇವನೊಬ್ಬ ನೋಡಿ ||೩೫೧||

ಭಾಮಿನಿ

ಮುರಹರನ ನುಡಿ ಕೇಳಿ ನಾರದ |
ಹರುಷದಲಿ ನಸುನಗುತ ನಿನ್ನಯ |
ಪರಮಮಾಯಕ ಯೆನ್ನೊಡನೆ ಬೀರುವದು ತರವಲ್ಲಾ ||
ದುರಿತಹರ ನೀನರಿಯದಿದನೆಂ |
ದೊರವೆನೈ ನಾನೆಂದು ತಾಪಸವರನು |
ಸುರಲಾಕ್ಷಣದಿ ರುಕ್ಮಿಣಿ ಕೇಳ್ದಳೊಲವಿನಲೀ ||೩೫೨||

ರಾಗ ತೋಡಿ ರೂಪಕತಾಳ

ಕಾಣಲಿಲ್ಲವೆಯೆನ್ನ ಮಗುವಾ | ಇಂತ | ಜಾಣವಿದ್ಯಾತಕೆ ಶಿಶುವಾ
ವೇಣಾಂಕ ಶಂಕರನಾಣೆ ನಿನ್ನಯ ಮುಂದೆ | ಪ್ರಾಣಯಿವೆನು ಪಂಚ ಬಾಣನಸೋವಾ ||೩೫೩||

ಬರಿದೆ ಮೂಜಗವ ಸಂಚರಿಸಿ | ಅಲ್ಲಿ | ಸರಸದಿ ಚಾಡಿಯ ನಡಿಸಿ |
ಆರೆನಿಮುಷದಿ ಸತಿಪುರುಷಗೆ ಜಗಳವ | ತರಿಸಿ ನೋಡುವ ಮಹಾವರ ಮುನಿರಾಯ || ಕಾಣ ||೩೫೪||

ಕನಸಿನಗಂಟಿನಂತಾಯ್ತು | ಕೇಳೈರತಿಪತಿ ಪಿತನೆಂದ ಮಾತು
ವೆನುವದೇನಿದು ಕಂದರ್ಪನ ಬಾಲಲೀಲೆಯ | ಕ್ಷಣವಾಗಲಿ ಮನದಿ ಮುದ್ದಿಸಲಿಲ್ಲಾ ||೩೫೫||

ಗಂಡು ಸಾಕೆಂದೆಯುತಲ್ಲೆನುತವಾಗದೆ ಕಣ್ಣಿಕ್ಕಿ ಕಂಡೆನು ಮನವಾ ||
ಉಂಡುಂಡು ಮೋಜಿನೊಳ್ಪುಂಡರಿಕಾಂಬಕ | ಗಂಡುಳ್ಳಗರತಿಯ ತಂಡದೊಳಿಹುದಾಯ್ತು ||೩೫೬||

ಹೆಂಗರುಳಾದಕಾರಣದೀ | ಅಂತ ರಂಗದೊಳ್ಮರುಗುವೆ ಮನದಿ |
ಹೆಂಗಳಹಲುಬಿದ | ರಂಗಜವಿರವೆಂತು | ಕಂಗೊಳಿಪುದುಯೆನ್ನ ಅಂಗನೆಗುಸುರಿದಾ ||೩೫೭||

ರಾಗ ಶಂಕರಾಭರಣ ಅಷ್ಟತಾಳ

ಜಂಭರಾಳಕಿ ನಿನ್ನ ಸುತನ | ಖಳ ಶಂಭರಾಸುರ ಬಂದಂಗಜನ | ವೈರಿ
ಯೆಂಬಾ ಸಂಶಯದಿಂದ | ಸುರನ ನೋಡಿ ಬಹುಶ್ಯ ದೋಶಕನ | ತಂದು | ಅಂಬುಧಿನಿಡಲರಳಂಬುಜ ಮಿನೊಂದು ಸಂಭ್ರಮದಲಿ ನುಂಗಿತಂಬುಜ ನಿಭಮುಖ ||೩೫೮||

ಮಿನಿನ ಗರ್ಭದಿ ನಿಂದು | ಸಾ | ನಂದದಿ ವಿವರಿಸಲೋರ್ವ ಬಂದೂ |
ತನ್ಮಧ್ಯದೊ ಪಾಪವ ಬೀಳಲಿಂದು | ಆ ಮಿನು ಅದಕ್ಕೆ ಸಿಕ್ಕಲು ಬೇಗ ತಂದು |
ಮುದದಿ ಶಂಭರಗೀಯಲಿದನು | ಚಂದವನೋಡಿ | ಸರಸದೊಳಿಹಗೆಮ್ಮ ಸುದತಿಯ
ಕರೆದೆಂದಾ ||೩೫೯||

ಭರದಿ ಪಾಕವ ಮಾಡೆಂದನಲು | ಕೊಂಡೊ | ಯರಿಯಲಾಕ್ಷಣ ಬಸುರಿನೊಳು |
ಸಂದಸರಗಿಲೆ ಕಂಡು ಚಿತ್ತದೊಳು | ತನ್ನ ಪುರುಷನೆಂದರಿತ ನನ್ಯದೊಳು |
ದಂಪತಿಗಳು ಬೆದರಲ್ಲಿ | ಶಂಭರನಪ | ಹರಿಸಿ ತತ್ಪುರದೊಳಗಿರುತಿಹರೊಂದಾಗೀ ||೩೬೦||

ಶ್ಲೋಕ

ಸತಿಚಿಂತಾಮಣಿ ನಿನ್ನ ಪುತ್ರನ ಪರಾಕ್ರಮದ ನಾನೆಂತುಸುರಲಿ |
ದಿತಿಜದೀಶಾನ ಕೊಂದು ಮತ್ತವನಿ ಭಾರವ ನಿಳುಹಿ ಸತ್ಕೃಪೆಯಲಿ |
ಶಶಿಯಾಗದ್ಯಾರನುದ್ಧರಿಸಿ ದಂಪತಿಗಳು ಮೊಹೊಲ್ಲಾಸದಿಂದಾಡುತಿಹರೆನಲೂ |
ಮಾಧವನೆಂದ ಸಂತಸದಿ ||೩೬೧||

ಸ್ತನ್ಯ ಪಾನವನರಿಯದ ಶಿಶು ಪುಣ್ಯಜನ ಭೂಮಿ ಶಶಂಭರೆನುನ್ನತಹ ಕಿದರೆ ಚೋದ್ಯವಿದೀಗ ನಿನ್ನ ನುಡಿ ಸನ್ನುತ ಸುಲಕ್ಷಣದಾರತಿಯನು ಮನ್ಮಥನ ಬೆದರಿಸಲು ದಿಟಿವೆ ಹಿರಣ್ಯ ಗರ್ಭನ
ಲಿಪಿಯ ಮಿರ್ದರ‍್ಯಾರು ಭೂವನದಲ್ಲಿ ||೩೬೨||

ರಾಗ ಕಾಂಭೋಜಿ ಝಂಪೆತಾಳ

ಇರಲಿತ್ತ ಕಂದರ್ಪ ಮಕರ ಕೇತನದಿಂದ | ಮೆರವ ಮಣಿರಥದಿ ಸತಿಸಹಿತ ||
ಸರಸದಲಿ ಕಟಿಲಜಾಗಮದೆಡೆಗೆ ಪೂ | ಸರಳನೇರಿಸುತ ಸಂತಸದೀ ||೩೬೩||

ಅಂಗನೆಯ ಮೊಗವಲುಗಿ ಮುದ್ದಾಡುತಿರಲು ಮುನಿ |
ಪುಂಗವಾರರನು ಮೋಹಿಸುತ ||೩೬೪||

ರತಿಮಹಾರತಿ ಸೊಬಗವನು ಯಿಕ್ಷಿಸುತ ಜನರು | ಮತಿಗೆಟ್ಟು ತಮ್ಮ ತಮ್ಮೊಡನೆ |
ಕ್ಷಿತಿ ರಸಾತಳ ದೇವಲೋಕದೊಳಗೀರ್ದರಿಗೂ | ಜತೆಗಾಣೆ ಯೆನುತೀರ್ದರಾಗಾ ||೩೬೫||

ವಾರ್ಧಿಕ

ಇಂತೆಸೆವ ಸಂಭ್ರಮದಿ ಮಾರನೈ ತರುತ ಮಹಾ |
ಕಾಂತ ನಾರದ ನುಡಿಯ ಲಾಲಿಸುತ ರುಕ್ಮಿಣಿಯು |
ಚಿಂತೆಯ ಹರಿಸಿ ಸಂತಸದಿಮದಿರಲ್ ಮಿಂಚಿನಂದದಿ ಮೆರವುತ ||
ಕಂತುವಿನ ರಥವರಂಜಿಸಿ ಬರುವದ ಕಂಡು |
ಕಾಂತನಿಹೆನೆಂದು ಕೇಳಲೆ ತವಪುತ್ರ |
ಕಾಂತೆಯ ನ್ನೊಡಗೊಂಡು ನಿನ್ನ ಸನ್ನಿಧಿಗೈದನೆಂದವರ ಮುನಿ ನುಡಿದನೂ ||೩೬೬||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅನಿತರೊಳು ದಂಪತಿಗಳೀರ್ವರು | ಮಣಿಮಯದ ಪುಷ್ಪಕವ ನಿಲಿದಾ |
ಜನಕ ಜನನಿಯ ರಂಘ್ರಿ ಕಮಲವ | ಮಣಿವುತಿರಲೂ ||೩೬೭||

ನಂದತನಯನು ಜಾನುಭಾವಗಳಿಂದಳೀರ್ವರು ಅಪ್ಪಿ ಮುದ್ದಿಸಿ |
ದಂದದಿಂ ತೊಡೆವೆಣ್ಣೆಯೊಳಿರಿಸಿ ಇಂ | ತೆಂದ ಮುದದೀ ||೩೬೮||

ಗುರು ಹರಿಯರೆಲ್ಲರನು ವಂದಿಸಿ | ಸರಸಿಜಾಕ್ಷಿಯನರಸಿ ಪೋಪುದು |
ತರವೆ ಹೇಳೆಂದೆನಲು ಮನ್ಮಥ | ನೊರೆದನಾಗಾ ||೩೬೯||

ರಾಗ ಶಂಕರಾಭರಣ ತ್ರಿವುಡೆತಾಳ

ಬಾಲಕನೆನುವದು ಜಾಲವೊ ದಿಟವೊ ಲಾಲಿಸೈ |
ನಾರದ ನೈತಂದು ನಾನಾ ಧರ್ಮದ ಪೇಳಿಘೋರ ದೈತ್ಯನ ಕಾಲನೂರ ಪೊಗಿಸಿದೆನೈ ||೩೭೦||

ತರುಣಿಯೆಲ್ಲಿಹಳೆಂದು ತಿಳಿದವನಾನಲ್ಲ | ಮರೆಮೋಸದ ಆ ಮುನಿವರ ಬೋಧಿಸಿದನಾಗಾ ||೩೭೧||

ಮತಿಯಿಲ್ಲಾ ನಿನಗೆ ದಂಪತಿಗಳು ಮೊದಲೆ ನಿನ್ನದು
ರತಿಯೊಡನೆಂದು | ವೃತವತಾಳಿದನಂದೂ || ೩೭೨ ||

ಕಂದ

ಕಂದನವಚನವ ಕೇಳ್ದ ಬುಜಾಂಬಕ |
ಮುನಿಯ ನೋಡಿ ರತಿಯಂಗಜನಂ |
ಚಂದದಿ ಕೈಪಿಡಿದಾ ಕ್ಷಣ
ಮಂದಸ್ಮಿತ | ವಚನದಿಂದ ರುಕ್ಮಿಣಿಗೆಂದಂ ||೩೭೩||

ಭಾಮಿನಿ

ಸರಸಿಜಾಂಬಕಿ ನಿನ್ನೊಡನೆ ನಾ |
ನೊರೆದ ನುಡಿಗತಿಶಯದ ಫಲವಿ |
ರ್ವರನು ಸಂತೈಸೆನುತ ತತ್ಕರಕಮಲದಲಿ ಕೊಡಲು |
ಪರಮ ಸಂತೋಷದಲಿ ಮೈತಡ |
ವರಿಸಲಾಕ್ಷಣ ರುಕ್ಮಿಣಿಯ ಕುಚ |
ವೆರಡರೊಳು ಪಾಲ್ಕಡಲು ಸುರಿಯಿತು ಬಹು ವಿಚಿತ್ರದಲೀ ||೩೭೪||

ವಾರ್ಧಕ

ನಂದನನ ಬಾಲಲೀಲೆಯ ನೋಡಲಿಲ್ಲ ನಲ |
ವಿಂದವರ ಕಲ್ಯಾಣ ಸಮಯದಲಿ ಚಿತ್ತಕಾ |
ನಂದವಂ ಬೆಸಸಬೇಕೆಂದು ರುಕ್ಮಿಣಿಪೇಳ್ದ ನುಡಿಕೇಳಿತಾನಾಕ್ಷಣಾ ||
ಕಂದರ್ಪಜನಕ ಮುದದಿಂದ ಮೂಲೋಕಜನ |
ವೃಂದವನು ಬರಿಸೆ ತತ್ಪುರವಲಂಕರಿಸಿ ಬುಧ |
ಸಂದಣಿಯರೊಡಗೂಡಿ ಶಾಸ್ತ್ರೋಕ್ತ ವಿಧದಿಂದ ಶೋಭಾನವನು ರಚಿಸುತಾ || ||೩೭೫||

ಹರುಷದಿಂದಾಗ ಮದುಮಕ್ಕಳಂ ಬಳಿಕರೆದು |
ಹರಸಿ ದಿವ್ಯಾಭರಣದಿಂದ ಶೃಂಗರಿಸಿ ಸು
ಸ್ವರದಿಂದ ಪಾಡುವ ಸುವನಿತೆಯರೊಳೊಗ್ಗಿನಲಿ ಕುಣಿಕೆಯರ ನರ್ತನದಲಿ
ತರತರದ ವಾದ್ಯ ತಂಬಟೆ ಭೇರಿ ಕಹಳೆವೋಂ
ಕರಿಸಿ ವೀಣಾನಾದ ಪರಮೋತ್ಸಹದಿ ಪಂಚ
ಶರನ ರತಿ ಹಸೆಮಣೆಯ ಮೇಲೆ ಕುಳ್ಳಿರಿಸಿ ಕರಗ್ರಹಣವನು ಮಾಡಿಸಿದರು || ||೩೭೬||

ರಾಗ ಢವಳಾರ

ಅಂಬುಜಾಂಬಕ ಹಿಡಿಂಬಿಗೆ | ಪರಿ | ದುಂಬೆಗುರುಳಿನಾರಂಭೆಗೆ
ಕಂಬುನಗರದ ಮುಗುಳಂಬನಿಗೆ | ಅಂಬುಜಾವಾರತಿಯಾ ಬೆಳಗಿರೆ ||೩೭೭||

ಮಂಗಳ ಪದ

ವಸುದೇವ ತನಯನಿಗೆ | ವಾರುಧಿ ಸದನಗೆ | ವಸುಮತಿ ರಮಣನಿಗೆ ಮಂಗಳಂ |
ವಸುದೆ | ಈರಡಿಮಾಡಿದ ಮಹಾತ್ಮಗೆ | ವಸುದೇವನಿಗೆ ಮಂಗಳಂ ||೩೭೮||

ಕಾಲಿಯ ಕೋಣೆಯಲಿ ಕಾಲಿನತಿಪುಟ್ಟಿ | ಕಾಲಲಿ ಕುಣಿದಾತನಿಗೆ | ಮಂಗಳಂ |
ಬಾಲಗೋಪಿಯರ್ಕೂಡಿ ಬಾಲಲೀಲೆಯನಾಡಿ | ಬಾಲಕೃಷ್ಣಯ್ಯಗೆ ಮಂಗಲಂ ||೩೭೯||

ಮಂಗಳಶೀಲನಿಗೆ ಸಂಗೀತಲೋಲಗೆ | ಗಂಗಜನಕನಿಗೆ | ಮಂಗಳಂ |
ಆಂಗಜಶತಕೋಟಿ ತುಂಗಲಾವಣ್ಯಗೆ | ತುಂಗವಿಠಲನಿಗೆ ಮಂಗಲಂ ||೩೮೦||


ಯಕ್ಷಗಾನ ರತಿಜನ್ಮ (ಶಂಬರಾಸುರ ಕಾಳಗ) ಮುಗಿದುದು