ಪದ
ವನವಾಸದೊಳಗೆ ಭಗ್ನ ಮಾಡಿದ ರುಷಿಯು
ಅಕ್ಷಯ ಎಂದ ಮಾಧವನೂ॥

ಕೃಷ್ಣ: ಅಮ್ಮಾ ತಂಗಿ ದ್ರೌಪದ  ನೀವುಗಳು ವನವಾಸದಲ್ಲಿರುವಾಗ ರುಷಿ ದುರ್ವಾಸ ಮುನಿಗಳು ಹನ್ನೆರಡು ಸಾವಿರ ಶಿಷ್ಯರನ್ನು ಕರೆದುಕೊಂಡು ಬಂದು, ನಿಶಿರಾತ್ರಿಯಲ್ಲಿ ಅನ್ನವನ್ನು ಬೇಡುವಂತಾದಾಗ ನಾನು ನಿಮಗೆ, ಅಕ್ಷಯ ಪಾತ್ರೆಯನ್ನು ಕೊಟ್ಟು ಕಾಪಾಡಲಿಲ್ಲವೆ. ಈಗ ನನಗೆ ಬಂದಿರುವ ಕೊರತೆ ನೀವುಗಳು ಪರಿಹರಿಸಿ ಕಾಪಾಡಬಾರದೇನಮ್ಮ ದ್ರೌಪತ ॥

ಭಾಮಿನಿ
ಅಂಗಜನ ಪಿತನೆನ್ನ ಧ್ಯಾನಿಪ,
ಮಂಗಳಾತ್ಮಕಿ ದ್ರುಪದ ನಂದನೆ, ಇಂದಿನ ದಿನ,
ಅರಸ ಪಾರ್ಥನ ಸಜ್ಜೆಯೊಳು ದೇವಾ ॥

ದ್ರೌಪದಿ: ಆಹಾ ನಾವು ಸಜ್ಜಾಗೃಹದಲ್ಲಿ. ಪವಡಿಸಿರುವಲ್ಲಿ ಯೀ ನಿಶಿರಾತ್ರಿಯಲ್ಲಿ, ಯಾರದೋ ಧ್ವನಿಯಾಗುವುದಲ್ಲ ಶ್ರೀಹರಿ ದಾನವಾರಿ ॥

ಪದ
ಮತ್ತೆ ಹರಿನುಡಿ ಶಬ್ದವಾಗಲು,
ಭಕ್ತಿಯಲಿ ದ್ರೌಪದಿಯು ಕೇಳುತಾ,
ಇಂತು ತಾನೆಚ್ಚರಗೊಂಡು ಲಾಲಿಸಿದಳೂ ॥

ದ್ರೌಪದಿ: ಅಯ್ಯೋ ಶ್ರೀಹರಿ ದಾನವಾರಿ, ನೀವು ನನ್ನನ್ನು ನೆನವರಿಕೆ ಮಾಡಲು ಕಾರಣವೇನು, ಇದೂ ಅಲ್ಲದೆ ನಮ್ಮ ಅಂಣಯ್ಯನವರ ಧ್ವನಿಯಲ್ಲದೆ ಮತ್ತೆ ಬೇರೆ ಇಲ್ಲವೋ ದೇವಾ  ಮಹಾನುಭಾವ॥

ಪದ
ಹರಿ ಜನಾರ್ಧನಾ, ಕ್ರಿಷ್ಣ ಕೇಶವಾ
ಯಾತಕೆನ್ನನೂ ನೆನೆದೆಯೋ ದೇವಾ,
ಕಾಯೊ ಯನ್ನನೂ  ಶ್ರೀ ಮುಕುಂದನೇ ॥

ದ್ರೌಪದಿ: ಹರಿಜನ್ಯವಾರಿ, ಮುರಾರಿ, ನಾರೀ ದೇವಕೀನಂದನ ಅಕ್ರೂರ, ಅಂಬರೀಶ, ವರಚಕ್ರಪಾಣಿಯೆ ಈ ನಿಶಿರಾತ್ರೆಯೋಳ್ ನನ್ನನ್ನು ಸ್ಮರಿಸುವುದಕ್ಕೆ ಕಾರಣವೇನೋ ದೇವಾ ಮಹಾನುಭಾವ ॥

ಪದ
ಪ್ರಾಣೇಶಾ ಪಾರ್ಥನೂ ಶಾನೆ ನಿದ್ರೆಯೊಳಿಹನೂ,
ಯೆಂತು ಯೆಚ್ಚರಿಸಲಿ ನಾನೂ ಯನ್ನ ಪ್ರಿಯನನ್ನು ॥

ದ್ರೌಪದಿ: ಅಯ್ಯೋ ಶ್ರೀಹರಿ ಪ್ರಾಣಕಾಂತರಾದ ಪಾರ್ಥದೇವರು, ಅತಿ ನಿದ್ರೆಯಿಂದಿರುವರು. ನಾನು ಎಚ್ಚರಿಸಿದ್ದೇ ಆದರೆ, ಕೋಪಿಸಿಕೊಳ್ಳುವರೇನೊ ಕಾಣೆನಲ್ಲ ದೇವಾ ॥

ಭಾಮಿನಿ
ಪರಮಾತ್ಮನೆ ನೀ ಯನ್ನ ನೆನೆಸಿದ ತೆರದಿ,
ನಾಂ ಪೋಗದಿರೆ, ಬರುವುದು ಎನಗೆ ಅಪಕೀರ್ತಿ ದೇವಾ ॥

ದ್ರೌಪದಿ: ಅಯ್ಯೋ ಹರಹರಾ, ವನಜಾಕ್ಷನಾದಂಥ ನಮ್ಮ ಅಂಣಯ್ಯನವರು ನೆನೆಸಿದ ಕೂಡಲೆ ಹೋಗದೆ ಇದ್ದರೆ ಸನುಮತವಲ್ಲಾ ಪರಂತು ಯನ್ನ ಕಾಂತರಾದ ಪಾರ್ಥದೇವರು ಕೋಪಮಾಡಿದಾಗ್ಯೂ ಕೊರತೆ ಬಾರದು, ಈಗ ಬಂದಿರುವ ಕೊರತೆಯನ್ನು ಹೇಗೆ ಸಹಿಸಲೋ ದೇವಾ ॥

ಭಾಮಿನಿ
ಪೂರ್ವದಲಿ ದುಶ್ಯಾಸನ ನಾಂ ಧರಿಸಿರ್ಪ
ವಸ್ತ್ರವಂ ಸೆಳೆದನು. ಅಕ್ಷಯವನಿತ್ತ, ಹೇ ಪಕ್ಷಿಗಮನಾ ॥

ದ್ರೌಪದಿ: ಅಯ್ಯ ಸಾಂಬಾ, ಪೂರ್ವದಲ್ಲಿ ದುಶ್ಶಾಸನನು ನಾನು ಧರಿಸಿರ್ಪ ಸೀರೆಯನ್ನು ಸೆಳೆಯುವ ಸಮಯದಲ್ಲಿ ನಾನು ನೆನೆಸಿದ ತಕ್ಷಣವೇ ಬಂದು ಕಾಪಾಡಿದಂಥ ನಾರಾಯಣನಿಗೆ ಯೇನು ಕೊರತೆ ಬಂದಿರುವುದೋ ಕಾಣೆನು. ಇಲ್ಲಿಗೆ ಅರುವತ್ತು ಯೋಜನವಿದ್ದರೂ ಹೋಗಿ ಬರುತ್ತೇನೆ ॥

ತ್ರಿವುಡೆ
ಗಂಡುಗಾಸೆಯ ಬಿಗಿದು
ದ್ರೌಪದಿ ಪಾಂಡವಂಗೆ ವಂದಿಸೀಗಲೆ
ಆದುದಾಗಲಿ ಎಂದು ತರುಣಿ ಹೊರಟಳಾಗ ॥

ದ್ರೌಪದಿ: ಹೇ ದೇವಾ ನಾನು ಗಂಡುಗಾಸೆಯನ್ನು ಹಾಕಿಕೊಂಡು ನಮ್ಮ ಅಂಣಯ್ಯನವರನ್ನು ನೋಡುವುದಕ್ಕೆ ಹೊರಡುತ್ತೇನೆ. ಇದೂ ಅಲ್ಲದೆ ನನ್ನ ಪತಿಗಳೈವರಿಗೆ ನಮಸ್ಕರಿಸಿರುವೆನು. ನಾನು ಕರದಲ್ಲಿ ಖಡ್ಗವನ್ನು ಹಿಡಿದುಕೊಂಡು ಈಗಲೇ ಹೊರಡುತ್ತೇನೆ ॥

ಭಾಮಿನಿ
ವಿಶ್ವಸಂಗನೆ, ವಿಶ್ವರೂಪನೆ,
ವಿಶ್ವಪೂಜಿತ ನಿನ್ನ ಬೇಡುವೆ,
ದೇವನಾರಾಯಣ ನಮೋ ನಮೋ ॥

ದ್ರೌಪದಿ: ನಮೋ ನಮೋ ಅಂಣಯ್ಯ ॥

ಕೃಷ್ಣ: ನಿನಗೆ ಮಂಗಳವಾಗಲಿ ಬಾರಮ್ಮ ತಂಗೀ ದ್ರೌಪದಾ ॥

ದ್ರೌಪದಿ: ಅಂಣಯ್ಯ ಶ್ರೀಹರಿ ಈ ನಿಶಿರಾತ್ರೆಯಲ್ಲಿ ನನ್ನನ್ನು ನೆನವರಿಕೆ ಮಾಡಲು ಕಾರಣವೇನೋ ಅಂಣಯ್ಯ॥

ಪದ
ತಂಗಿ ನೀ ಬಂದುದು ಲೇಸಾಯ್ತು,
ಕಾರ‌್ಯಕ್ಕೆ ಮಂಗಳವಾಗಲಿ ನಿನಗೆ.
ಬಂದಿರುವ ಕಷ್ಟಕ್ಕೆ ನಿನ್ನನ್ನು ಕರೆಸಿದೆ
ತಂಗಿ ದ್ರೌಪದಿ ಕೇಳೇ ॥

ಕೃಷ್ಣ: ಅಂಮ್ಮಾ ತಂಗಿ ದ್ರೌಪದ, ನೀನು ಶೀಘ್ರದಿಂದ ಬಂದಿರುವುದು ನನಗೆ ಬಹಳ ಸಂತೋಷವಾಯಿತು. ನನಗೆ ಬಂದಿರುವ ಕಷ್ಟಕ್ಕಾಗಿ  ನಿನ್ನನ್ನು ಸ್ಮರಿಸುವಂಥವನಾದೆನಮ್ಮ ತಂಗಿ ದ್ರೌಪದಾ॥

ಪದ
ದ್ವಾರಕಿಯೊಳಿರಲು,
ವೊಂದುದಿನ ರುಕ್ಮಿಣಿಯೂ ಬಂದು
ಬೇಡಿದಳೆನ್ನ ಮಂದಬುದ್ಧಿಯೊಳು
ಮುಂದರಿಯದೆ ಕೇಳೆ ॥

ಕೃಷ್ಣ: ಅಮ್ಮಾ ತಂಗಿ ದ್ರೌಪದ. ನನ್ನ ಸತಿಯರಾದ ರಾಧಾರುಕ್ಮಿಣಿ ಮೊದಲಾದವರು ನನ್ನ ಸಂಗಡ ಮುಂದರಿಯದೆ ಮಂದಬದ್ದಿಯಿಂದ ವೊಂದು ಪ್ರತಿಜ್ಞೆಯನ್ನು ಮಾಡಿದೆನು. ಅದೇನೆಂದರೆ ಕಂದನಾದ ಮನ್ಮಥನಿಗೆ ಸುಂದರಿಯಳಾದ ಕನ್ನಿಕೆಯನ್ನು ಅರಸಿಕೊಂಡು ಬರುವೆನೆಂದು ಹೇಳುವಂಥವನಾದೆನಲ್ಲಮ್ಮಾ ತಂಗಿ ॥

ಪದ
ಹದಿನಾರು ಸಾವಿರ ಗೋಪಿಕಾಂಗನೆಯರೋಳ್
ರತಿಕ್ರೀಡೆಯೊಳಿಹೆಯೆಂದಾ॥

ಕೃಷ್ಣ: ಅಮ್ಮಾ ತಂಗಿ ದ್ರೌಪದ ನಾನು ಹದಿನಾರು ಸಾವಿರ ಗೋಪಿಕಾ ಸ್ತ್ರೀಯರಲ್ಲಿ ರತಿಕ್ರೀಡೆಯನ್ನು ಆಡಿಕೊಂಡಿರುವ ಕಾಲದಲ್ಲಿ ನನ್ನ ಮನಕ್ಕೆ ವೊಂದು ಕೊರತೆಯು ವೊದಗುವಂಥದ್ದಾಯಿತಲ್ಲಮ್ಮ ತಂಗಿ ದ್ರೌಪತ ॥

ಪದ
ಬಿಡದೆಂಟು ದಿನದೊಳಗೆ
ಮದುವೆ ಮಾಡುವೆನೆಂದು
ಚದುರೆ ದ್ರೌಪದಿ ನಾನು ನುಡಿದೇ ॥

ಕೃಷ್ಣ: ಕೇಳಿದೇನಮ್ಮಾ ತಂಗಿ, ಯಿದೂ ಅಲ್ಲದೆ ನನ್ನ ಸತಿಯರ ಮಧ್ಯದಲ್ಲಿ ಅತಿಶಯದಿಂದ ಎಂಟು ದಿವಸದಲ್ಲಿ ಕಂದನಾದ ಮನ್ಮಥನಿಗೆ ಕನ್ನಿಕೆಯನ್ನು ತಂದು ವಿವಾಹವನ್ನು ಮಾಡುತ್ತೇನೆಂದು ಭಾಷೆಯನ್ನು ಮಾಡಿಕೊಡಲು. ರುಕ್ಮಿಣಿ ಮೊದಲಾಗಿ ಹದಿನಾರು ಸಾವಿರ ಸತಿಯರೆಲ್ಲರೂ ಕನ್ನಿಕೆಯನ್ನು ಅರಸಿಕೊಂಡು ಬರುವವರೆಗೂ ನಿಮ್ಮನ್ನು ಬಿಟ್ಟು ಬೇರೆ ಇರುತ್ತೇವೆಂದು ಪಂಥವನ್ನು ಮಾಡಿದರಲ್ಲಮ್ಮಾ ತಂಗಿ ॥

ಪದ
ಆಡಿದಂದದಿ ಎಂಟು ದಿನಗಳು ಬಂದಿಹುದು,
ನಾಡಿನೊಳಗಪಕೀರ್ತಿ ಬರುವುದು ಅನುಜೆ ॥

ಕೃಷ್ಣ: ಅಮ್ಮಾ ತಂಗಿ ದ್ರೌಪತ. ನಾನು ಭಾಷೆಯನ್ನು ಮಾಡಿ ನಾಳೆ ವೊಂದು ದಿವಸವು ಕಳೆದರೆ ಎಂಟು ದಿನವು ಪೂರೈಸುವಂಥದ್ದಾಯಿತು. ಆದರೆ ಈ ಕಾರ‌್ಯಕ್ಕೆ ಕೊರತೆ ಇಲ್ಲದಂತೆ ನೀನು ನೆರವೇರಿಸಬೇಕು. ಇದಕ್ಕಾಗಿ ನಿನ್ನನ್ನು ನೆನವರಿಕೆ ಮಾಡಿದೆನಮ್ಮಾ ತಂಗಿ. ಪರಂತು, ಈ ನಾಡಿನಲ್ಲಿರುವ ಸುಜನರೆಲ್ಲರೂ ನನ್ನನ್ನು ಅಪಹಾಸ್ಯ ಮಾಡುವರು. ಜಾಗ್ರತೆಯಿಂದ ನನಗೆ ಬಂದ ಕಷ್ಟವನ್ನು ಪರಿಹರಿಸಬೇಕಮ್ಮಾ ತಂಗಿ ದ್ರೌಪದ.

ಭಾಮಿನಿ
ಇಂತಾಡಿದ ಲಕ್ಷ್ಮೀಶಗೆ,
ಸಂತಸವಾಕ್ಯದಿಂ ವಂದಿಸಿ ಪ್ರಾರ್ಥನೆಯಂ
ಮಾಡಿ ದ್ರೌಪದಿ ಬಳಿಕಂ ಕುರಿತು ಭಕ್ತಿಯಲಿ
ನಮಿಸಿ ಬಿನ್ನಹವಂಗೈದಳೂ, ನಸುನಗುತಾ॥

ದ್ರೌಪದಿ: ಅಂಣಯ್ಯ ಶ್ರೀಹರಿ, ಯನ್ನ ಬಿನ್ನಪವನ್ನು, ಚೆನ್ನಾಗಿ ಲಾಲಿಸುವಂಥವರಾಗಿ, ಅಂಣಯ್ಯ ಈ ಲೋಕದಲ್ಲಿ ನರನಾಟಕ ಸೂತ್ರಧಾರಿಯಾದ ನಿಮ್ಮ ಕೈಯಲ್ಲಿ ಆಗದ ಕಾರ‌್ಯವು – ಅಬಲೆಯಾದ ನನ್ನಿಂದ ಎಷ್ಟು ಮಾತ್ರಕ್ಕೂ ಆಗುವುದಿಲ್ಲವೋ ದೇವಾ ಮುರಮರ್ಧನ ॥

ಪದ
ಲೋಕೇಶಪಿತನಾಗಿ, ಲೋಕಪಾಲಿತನಾಗಿ,
ಜೋಕೆಯಿಂದಿರುತಿರಲು ಅಂಣ ನೀ ಕೇಳೋ ॥

ದ್ರೌಪದಿ: ಪರಾಕೆ ಸ್ವಾಮಿ, ಬ್ರಹ್ಮದೇವನ ತಂದೆಯಾದ, ದೇವತೆಗಳಿಗೆ ಒಡೆಯನಾದ ನಿನ್ನಿಂದ ಈ ಕಾರ‌್ಯವು ಆಗಲಾರದೆಂದರೆ ನನಗೆ ಬಹಳ ನಗೆ ಬರುವುದಲ್ಲಾ ಅಂಣಯ್ಯ ॥

ಪದ
ಹೆಣ್ಣಿನಿಂದಾಗುವ ಕಾರ‌್ಯವ ನುಡಿ ದೇವಾ
ಬಣ್ಣದ ಮಾತಲ್ಲ ಅಂಣ ನೀ ಕೇಳೋ॥

ದ್ರೌಪದಿ: ಹೇ ಅಂಣಯ್ಯ ಈ ಕಾರ‌್ಯವು ಹೆಂಣಿನಿಂದಾಗತಕ್ಕದ್ದಲ್ಲ. ಕಂಡೆಯೋ ಪರಂತು ನೀವುಗಳು ಪರಮಾತ್ಮನಾಗಿರುವ ನಿನಗೆ ತಿಳಿಯದಿರುವುದು ಇನ್ನೊಂದು ವುಂಟೆ ದೇವಾ ॥

ಪದ
ತರುಣಿಮಣಿ ದ್ರೌಪದಿಯೆ ಸರಸದ ಮಾತಾಡಿ
ಕೊರಳ ಕೊಯ್ಯಲಿ ಬೇಡ, ಕೇಳಮ್ಮ ತಂಗೀ ॥

ಕೃಷ್ಣ: ಅಮ್ಮಾ ತಂಗಿ ದ್ರೌಪದ, ನೀನು ನನ್ನಲ್ಲಿ ಸರಸದ ಮಾತುಗಳನ್ನಾಡಿ, ಯನ್ನ ಕೊರಳನ್ನು ಕೊಯ್ಯಬೇಡ, ನನ್ನ ಮನಸ್ಸು ಸಂತೋಷವಾಗುವಂತೆ ಕರುಣವಿಟ್ಟು ಕಾಪಾಡಬೇಕಮ್ಮಾ ॥

ಪದ
ಯನ್ನ ಪಂಥವ ನಡೆಸೊ ಕನ್ನಿಕೆಯ ನೀ ತರಿಸೂ ॥
ಇಂದು ಮನ್ಮಥನಿಗೆ ಲಗ್ನವ ನೀ ನಡೆಸೂ ॥

ಕೃಷ್ಣ: ಅಮ್ಮಾ ತಂಗಿ, ಆಡಿದ ಭಾಷೆಗೆ ಕೇಡು ಬಾರದಂತೆ, ಕನ್ನಿಕೆಯನ್ನು ಬೇಗ ಅರಸಿಕೊಂಡು ಬಂದು ಮನ್ಮಥನಿಗೆ ಲಗ್ನವನ್ನು ಮಾಡಿಸು. ಇಲ್ಲವಾದರೆ ಹದಿನಾರು ಸಾವಿರ ಗೋಪಿಕಾಸ್ತ್ರೀಯರು ನನ್ನನ್ನು ಬಿಟ್ಟು ಬೇರೆ ಹೋಗುವರಲ್ಲಮ್ಮಾ ತಂಗಿ ॥

ಪದ
ಅಂಣ ಲಾಲಿಸು ಚಿಂತೆ ಬಿಡು ಬಿಡು
ಶೀಘ್ರದಿಂದಲಿ ಪೋಗಿ ಬರುವೆನು ವಿಹಿತದಿಂದಲಿ
ಕನ್ನಿಕೆಯ ನಾನು ತರುವೇ ॥

ದ್ರೌಪದಿ: ಪರಾಕೆ ಅಂಣಯ್ಯ ಈ ಸಣ್ಣ ಕೆಲಸಕ್ಕೆ ಬಣ್ಣಗುಂದಬೇಡ ಕಂಡಿರೋ, ನಿಮ್ಮ ಕರುಣ ಕಟಾಕ್ಷದಿಂದ ಬೇಗನೆ ಹೋಗಿ ಕನ್ನಿಕೆಯನ್ನು ಅರಸಿಕೊಂಡು ಬರುತ್ತೇನೆ. ಆದರೆ ಬಜ್ಜರದ ಸಜ್ಜೆಯಲ್ಲಿ ನಿದ್ರೆಯಿಂದ ಇರುವ ವಿಜಯರಿಗೆ ಎಚ್ಚರಗೊಳಿಸಿ ಹೇಳದೆ ಬಂದಿರುವೆನು. ಇದಕ್ಕಾಗಿ ಏನು ಕೊರತೆ ಬಂದರೂ ನೀನೇ ಕಾಪಾಡಬೇಕೋ ದೇವಾ ಮಹಾನುಭಾವ ॥

ಪದ
ಎಲ್ಲಿ ಇದ್ದರು ಬಿಡೆನು ಶೀಘ್ರದಿಂದಲಿ
ಪೋಗಿ ಬರುವೆನು, ಅಭಯವನು
ಪಾಲಿಸು ಯನಗೆ ಎಂದು ದ್ರೌಪದಿಯು ॥

ದ್ರೌಪದಿ: ಅಂಣಯ್ಯ ನಿಮ್ಮ ಕಂದನಾದ ಮನ್ಮಥನಿಗೆ ಕನ್ನಿಕೆಯನ್ನು ಎಲ್ಲಿ ಇದ್ದರೂ ಅರಸಿಕೊಂಡು ಬರುತ್ತೇನೆ. ನನ್ನ ಸಾಹಸವನ್ನು ನೋಡುವಂಥವರಾಗಿ ಮಧುಸೂಧನ, ನನಗೆ ಅಪ್ಪಣೆಯನ್ನು ದಯಪಾಲಿಸಬೇಕೂ ॥

ಕೃಷ್ಣ: ಅಮ್ಮಾ ತಂಗಿ ಅಪ್ಪಣೆಯನ್ನು ಕೊಟ್ಟಿರುತ್ತೇನೆ, ತೆರಳಮ್ಮ ತಂಗಿ ॥

ಭಾಮಿನಿ
ಪತಿವ್ರತೆಯಳಾದ ಕಾರಣದಿಂದಲರಿತು
ದಿವ್ಯದೃಷ್ಟಿಯಿಂದ ಕಮಲಾವತಿಯ ಪುರಕೆ
ತೆರಳಲು ಚಾರಕರು ತಡೆದರಾಕ್ಷಣದೀ ॥

ಪದ
ಬನ್ನಿರಯ್ಯ ಭಟರುಗಳಿರ,
ಇಂದಿನ ದಿನದೀ, ದ್ವಾರಬಾಗಿಲ
ಕಾಯ್ದುಕೊಳ್ಳಿ ಎಂದ ಕಮಲನೂ ॥

ಕಮಲರಾಜ: ಭಲೈ ಭಟರುಗಳಿರಾ, ಈ ದಿವಸ ಒಳಗೆ ಯಾರೂ ಬಾರದಂತೆ ದ್ವಾರ ಬಾಗಿಲನ್ನು ಕಾಯ್ದುಕೊಳ್ಳುವಂಥವರಾಗಿ ॥

ಭಟರು: ಭಲೈ ದೊರೆಯೆ ತಮ್ಮ ಅಪ್ಪಣೆಯಂತೆ ಕಾಯ್ದುಕೊಂಡಿರುತ್ತೇವೆ ॥

ಪದ
ಮಧ್ಯರಾತ್ರಿ ವೇಳೆಯಲ್ಲಿ, ಮಾತನಾಡದೆ
ಸುಮ್ಮನಿರಲು. ನೀನು ಯಾರು
ತರುಣಿಮಣಿಯೆ ಪೇಳು ಎಂದರು ॥

ಭಟರು: ಎಲೈ ನಾರಿ ಈ ಮಧ್ಯರಾತ್ರಿಯಲ್ಲಿ ಮಾತನಾಡದೆ ಸುಮ್ಮನೆ ಬಂದು ನಿಂತಿರುವ ನೀನು ಯಾರು. ನಮ್ಮಲ್ಲಿ ಸಾಂಗವಾಗಿ ಪೇಳುವಂಥವಳಾಗೆ ನಾರಿ ॥

ಪದ
ಯಾತಕೆನ್ನ ತಡೆದಿರಯ್ಯ ಭಟರೆ,
ನಾರಿಯೊಬ್ಬಳಾದೆಳೆಂದು ಭಟರೆ ॥

ದ್ರೌಪದಿ: ಎಲೈ ನನ್ನನ್ನು ಯಾತಕೋಸ್ಕರ ತಡೆಯುವಂಥವರಾದಿರಿ  ವೋರ್ವ ನಾರಿಯು ಬಂದಿರುತ್ತಾಳೆಂಬುದಾಗಿ  ನಿಮ್ಮ ರಾಜನಲ್ಲಿ ಹೇಳುವಂಥವರಾಗಿರೈ ಭಟರೆ ॥

ಪದ
ವಾರೆನೋಟ ನೋಡಿಕೊಂಡು.
ನಾರಿ ಬರುವ ಕಾರ‌್ಯವನು, ಮೀರಿ ನೀನು
ಪೋದರೀಗ ಬಿಡೆನು ಎಂದರೂ ॥

ಭಟರು: ಎಲೈ ನಾರಿ ಈ ನಿಶೆರಾತ್ರಿಯಲ್ಲಿ, ನೀನು ಬಂದಿರುವ ಕಾರ‌್ಯವನ್ನು ನಮ್ಮಲ್ಲಿ ಹೇಳುವಂಥವಳಾಗು. ಇದೂ ಅಲ್ಲದೆ ನಮ್ಮ ದೊರೆಯ ಅಪ್ಪಣೆ ಇಲ್ಲದೆ, ಬಿಡುವುದಿಲ್ಲವೇ ನಾರೀ ॥

ಪದ
ಧರಣಿಪಾಲಗೆ ತಿಳುಹಿರಯ್ಯ, ಭಟರೆ,
ದ್ವಾರ ಬಾಗಿಲು ಬಿಡಿರಿ ನೀವು, ಭಟರೆ ॥

ದ್ರೌಪದಿ: ಅಯ್ಯ ಭಟರೆ, ನಿಮ್ಮ ದೊರೆಯಾದ ಕಮಲ ಭೂಪಾಲರಲ್ಲಿ, ನನ್ನ ವಾರ್ತೆಯನ್ನು ಹೇಳುವಂಥವರಾಗಿ, ಇದೂ ಅಲ್ಲದೆ, ದ್ವಾರಬಾಗಿಲನ್ನು ಬಿಡುವಂಥವರಾಗಿರೈ ಭಟರೆ ॥

ಪದ
ಸುದತಿ ನೀನ್ಯಾರಮ್ಮ,
ಪೇಳೆ ವೊದಗಿ ಇರುವದೀಗ ಮೃತ್ಯು.
ಅರಸ ಬರುವನೇನೆ ಈಗ ಸರಸಿಜಾಕ್ಷಿಯೇ ॥

ಭಟರು: ಎಲೈ ನಾರಿ ನೀನು ಯಾರು. ನಿನ್ನ ಹೆಸರೇನು. ಅತಿ ಜಾಗೃತೆಯಿಂದ ಹೇಳುವಂಥವಳಾಗೂ, ಇದೂ ಅಲ್ಲದೆ ವೊಳ್ಳೆ ಮಾತಿನಿಂದ ಹಿಂದಕ್ಕೆ ಹೋದರೆ ಸರಿಯಾಯ್ತು ಇಲ್ಲವಾದರೆ ನಿನಗೆ ಮೃತ್ಯು ವದಗಿರುವದೇ ನಾರಿ  ಆದರೆ ನೀನು ಹೇಳಿದ ಮಾತಿಗೆ  ನಮ್ಮ ದೊರೆಯು  ಬರುವದುಂಟೇನೇ ನಾರಿ ಹೆಮ್ಮಾರಿ ॥

ಪದ
ಹೆಂಣಿಗಾಗಿ ಬಂದೆ ನಾನು ಭಟರೆ,
ಪರಮಾತ್ಮನ ತಂಗಿ ನಾನು ಭಟರೆ,
ಕರವ ಮುಗಿದೂ ಬೇಡಿಕೊಳ್ವೆ ಭಟರೆ,
ಕಂಣತೆರೆದು ನೋಡಿರಯ್ಯ ಭಟರೆ॥

ದ್ರೌಪದಿ: ಅಯ್ಯ ಭಟರೆ ನಾನು ವೊಂದು ಕಾರ‌್ಯಕ್ಕಾಗಿ ಬಂದಿರುವೆನು. ಪರಮಾತ್ಮನ ತಂಗಿಯಾದ ದ್ರೌಪದಿಯು ನಾನು. ನನ್ನ ಪತಿಗಳು ಪಂಚ ಪಾಂಡವರೈವರು. ಆದ್ದರಿಂದ ನೀವುಗಳು ಕಣ್ಣು ತೆರೆದು ನೋಡುವಂಥವರಾಗಿರೈ ಭಟರೆ.

ಪದ
ಶ್ವಾನನಂತೆ ಬಗಳಬೇಡ,
ಭ್ರಷ್ಟ ಮೂಳಿಯೆ ಮಾನ ಕಳೆದು
ನಿನ್ನನೀಗ ಕೊಂದು ಬಿಡುವೆವೂ ॥

ಭಟರು: ಎಲೈ ನಾರಿ ನೀನು ಏತಕೋಸ್ಕರವಾಗಿ ಶ್ವಾನನಂತೆ ಬಗುಳುತ್ತೀಯಾ, ಆದರೆ ನಮ್ಮಲ್ಲಿ ರಣಾಗ್ರಕ್ಕೆ ನಿಲ್ಲುವಂಥವಳಾಗೆ, ಭ್ರಷ್ಠ ಮೂಳಿ ॥

ಪದ
ಭ್ರಷ್ಟ ಮೂಳಿಯನುತಲಾಗ,
ಮುಷ್ಟಿಯಿಂದರಿವಿದಳವಳು,
ರಟ್ಟೆ ಮುರಿದು ಓಡಿ ಹೋದರು ಕಮಲನ ಭಟರೂ ॥

ದ್ರೌಪದಿ: ಎಲೈ ಭ್ರಷ್ಟರೆ ನಿಮ್ಮ ಪಾಡೇನಾಗಿರುವುದು. ನೋಡಿಕೊಳ್ಳುವಂಥವರಾಗಿ  ಅಯ್ಯೋ ಶ್ರೀಹರಿ ಈ ದುರುಳರಲ್ಲಿ ಸೆಣಸಿ ನನಗೆ ಬಹಳ ಆಯಾಸವಾಗಿರುವುದು. ಸ್ವಲ್ಪ ಮಾತ್ರ ವಿಶ್ರಮಿಸಿಕೊಂಡು ಮುಂದೆ ಹೋಗುತ್ತೇನೆ॥

ಭಟರು: ಅಯ್ಯೋ ಹರಹರ, ಈ ಭ್ರಷ್ಟೆಯು ನಮ್ಮ ರಟ್ಟೆಯನ್ನು ಮುರಿಯುವಂಥವಳಾದಳಲ್ಲ. ಈ ವಾರ್ತೆಯನ್ನು ನಮ್ಮ ದೊರೆಯಲ್ಲಿ ಹೇಳಿಕೊಳ್ಳುತ್ತೇವೆ ॥ನಮೋ ನಮೋ ದೊರೆಯೆ ॥

ಪದ
ಬನ್ನಿರಯ್ಯ ಭಟರುಗಳಿರ, ಏನಿದೇನಿದು
ಬೆದರಿ ಬಂದ ಕಾರ‌್ಯವನ್ನು, ಅರುಹಿ ಬೇಗನೆ ॥

ಕಮಲ: ಅಯ್ಯ ಭಟರುಗಳಿರಾ  ಈ ನಿಶಿರಾತ್ರಿಯೋಳ್ ಓಡಿ ಬಂದಂಥ ವಿಚಾರವನ್ನು ನನ್ನಲ್ಲಿ ಸಾಂಗವಾಗಿ ಹೇಳುವಂಥವರಾಗಿರೈ ಭಟರುಗಳಿರಾ॥

ಪದ
ದೊರೆರಾಯ ಲಾಲಿಸಯ್ಯ. ಪೇಳುವೆ ಜೀಯ
ಮಹರಾಜ ಲಾಲಿಸಯ್ಯ. ಅರುಹುವರೆನಗೆ
ಅಂಜಿಕೆಯಾಗುವದು. ಮಹರಾಜ ಲಾಲಿಸಯ್ಯ
ನಿಶಿರಾತ್ರಿಯೊಳು ನಾರಿಯು  ಜಾಗ್ರತೆಯಿಂದ
ದ್ವಾರಬಾಗಿಲ ಬಿಡಿ ಎಂದಳೂ॥ದೊರೆರಾಯ ॥

ಭಟರು: ಅಯ್ಯ ದೊರೆಯೆ, ಇಂದಿನ ದಿವಸ ನಡೆದ ವಾರ್ತೆಯನ್ನು ಹೇಳುವುದಕ್ಕೆ ಆಶ್ಚರ‌್ಯವಾಗುವುದು. ಅದು ಯೇನೆಂದರೆ ವೋರ್ವನಾರಿಯು ಬಂದು ನಮ್ಮ ಪಟ್ಟಣದ ಬಾಗಿಲಲ್ಲಿ ನಿಂತುಕೊಂಡು ಇದ್ದಳೂ. ನಾವು ದ್ವಾರ ಬಾಗಿಲನ್ನು ಬಿಡುವುದಿಲ್ಲ ಎಂಬುದಾಗಿ ಹೇಳುವಲ್ಲಿ ಆ ಮಾತಿಗೆ ನಮ್ಮ ಮೇಲೆ ರಣಾಗ್ರವನ್ನು ಮಾಡಿ ನಮ್ಮ ರಟ್ಟೆಗಳನ್ನು ಮುರಿಯುವಂಥವಳಾದಳೂ. ಆದ್ದರಿಂದ ಈ ವಾರ್ತೆಯನ್ನು ತಮ್ಮಲ್ಲಿ ಹೇಳುವುದಕ್ಕೆ ಬಂದೆವೈ ದೊರೆಯೆ ॥

ಪದ
ಸಡಗರದಲಿ ಕರೆಸು ಅವಳನ್ನು ಭೇರಿ ವಾದ್ಯಗಳಿಂದಲಿ
ಘಡಘಡನೆ ನೀ ಪೋಗಿ ಕರೆದು ತನ್ನಿರಿ ಎಂದನೂ ॥

ಕಮಲ: ಅಯ್ಯ ಭಟರುಗಳಿರಾ, ನಮ್ಮ ಪಟ್ಟಣದವರೆಗೂ ಬಂದಿರುವ ನಾರಿಯನ್ನು ಅತಿಜಾಗ್ರತೆಯಿಂದ ಹೋಗಿ ಭೇರಿ, ನಗಾರಿ ಸಂಪತ್ತುಗಳಿಂದ ವಾದ್ಯಘೋಷಗಳಿಂದಲೂ  ಛತ್ರಿ ಚಾಮರಗಳಿಂದಲೂ ಪಟ್ಟಣಕ್ಕೆ ಕರೆದುಕೊಂಡು ಬರುವಂಥವರಾಗಿರೈ ಭಟರುಗಳಿರಾ ॥

ದ್ರೌಪದಿ: ನಮೋ ನಮೋ ದೊರೆಯೇ ॥

ಕಮಲ: ಧೀರ್ಘಾಯುಷ್ಯಮಸ್ತು, ಮೇಲಕ್ಕೇಳೆ ನಾರೀ

ಪದ
ಬೆದರಿ ಬೆಚ್ಚದೆ, ದೈರ‌್ಯದಿಂದ
ಮುದದಿಬಂದ ಚೋದ್ಯವೇನೇ,
ಸುದತಿ ರನ್ನಳೆ ನೀನು ಯಾರು ಪೇಳೆ ಚರನುಡಿಯಾ ॥

ಕಮಲ: ಎಲೈ ನಾರೀಮಣಿ ನೀನು ಯಾರು. ನಿನ್ನ ಹೆಸರೇನು. ಈ ನಿಶಿರಾತ್ರಿಯೋಳ್ ಬರಲು ಕಾರಣವೇನು. ಬೆದರದೆ ನನ್ನಲ್ಲಿ ಹೇಳುವಂಥವಳಾಗಮ್ಮಾ ನಾರಿ. ಇದೂ ಅಲ್ಲದೆ ನೀನು ನಾರಿಯಾಗಿರುವುದರಿಂದ ನಿನ್ನನ್ನು ಬಿಟ್ಟಿರುತ್ತೇನೆ. ಖುಲ್ಲರಾಗಿದ್ದೇಯಾದರೆ ಕೊಲ್ಲದೆ ಬಿಡುತ್ತಿರಲಿಲ್ಲ. ನೀನು ಬಂದ ವಿಚಾರವೇನು, ಹೇಳುವಂಥವಳಾಗೇ ನಾರಿ ॥

ಪದ
ಭೂಪಾಲ ದ್ರುಪದನ, ಸುತೆಯು ದ್ರೌಪದಿ ನಾನೂ
ಪತಿಗಳೈವರು ಯನಗೇ ಪಂಚ ಪಾಂಡವರೂ ॥

ದ್ರೌಪದಿ: ಅಯ್ಯ ರಾಜನೆ ನಾನು ಹೇಳುವ ಮಾತುಗಳನ್ನು ಚೆನ್ನಾಗಿ ಲಾಲಿಸುವಂಥವರಾಗಿ. ನಾನು ದೃಪದನ ಸುತೆಯಾದ ದ್ರೌಪದಿಯು. ನನ್ನ ಪತಿಗಳು ಪಂಚಪಾಂಡವರೈವರು. ಆದರೆ ತಮ್ಮಲ್ಲಿಗೆ ನಾನು ವೊಂದು ಕಾರ‌್ಯವನ್ನು ಕುರಿತು ಬಂದಿರುವೆನು. ಇದಕ್ಕೆ ಅಪ್ಪಣೆಯನ್ನು ದಯಪಾಲಿಸಬೇಕು.

ಕಮಲ: ಅಂಥ ವಿಷಯವೇನು, ಹೇಳುವಂಥವಳಾಗೂ ॥

ದ್ರೌಪದಿ: ಮಹಾರಾಜನ್ ನನಗೆ ನಂಬಿಗೆಯನ್ನು ಕೊಟ್ಟಿದ್ದೇಯಾದರೆ ಅರಿಕೆಮಾಡಿಕೊಳ್ಳುತ್ತೇನೆ.

ಪದ
ನಾರಿ ನಡೆಸುವೆ ನಿನ್ನ ಕೋರಿಕೆ
ನಾನು ಈಗಲೆ ಭಾಷೆ ಕೊಡುವೆನು
ಹಿಡಿ ಹಿಡಿ ಎಂದು ನುಡಿದ ಕಮಲೇಶ ॥

ಕಮಲ: ಎಲೈ ವಾರಿಜಾಕ್ಷಿಯೆ, ನಿನ್ನ ಕೋರಿಕೆಯಂತೆ ಭಾಷೆಯನ್ನು ಕೊಡುತ್ತೇನೆ. ಹಿಡಿಯುವಂಥವಳಾಗೆ ನಾರಿ ॥

ಭಾಮಿನಿ
ಲಾಲಿಸೈ ನರನಾಥನೆ ದ್ವಾರಕಾಪುರದೊಡೆಯ
ಯನ್ನ ಸಹಜಾತನ ಮಗನು.
ಮೇಲಾದ ಕುಮಾರನಿಗೆ ಬಾಲಕಿ
ರತಿಯನು ಧಾರೆಯರೆಯಬೇಕೈ ರಾಜಾ॥

ದ್ರೌಪದಿ: ಅಯ್ಯ ದೊರೆಯೆ ದ್ವಾರಕಾಪುರದೊಡೆಯನಾದಂಥ ಶ್ರೀಕೃಷ್ಣನು ನಮ್ಮ ಅಂಣನು. ಆತನ ಮಗನಾದಂಥ ಮನ್ಮಥನಿಗೆ ನಿನ್ನ ಮಗಳಾದ ರತೀ ದೇವಿಯನ್ನು ಕೊಟ್ಟು ಧಾರೆಯನ್ನು ಎರೆದಿದ್ದೆಯಾದರೆ, ಪರಮಾತ್ಮನು ಆದಿಯಾಗಿ, ಪಾಂಡವರು ಮತ್ತು ಯದುಗಳೆಲ್ಲಾ ನಿನಗೆ ನಂಟರಾಗುವರು, ಅತಿಜಾಗ್ರತೆಯಿಂದ ತಡಮಾಡದೆ, ಕೊಡುವಂಥವನಾಗು ರಾಜನೆ ॥

ಭಾಮಿನಿ
ಇಂತಾಡಿದ ನುಡಿಗೆ ಕೋಪವಂ ತಾಳಿ
ಅಂತಕನಂದದಿ ಗರ್ಜಿಸಿ ಗುಡಗುಡಿಸಿ
ಇಂತೆಂದ ಕಮಲೇಶಾ ॥

ಕಮಲ: ಛೇ ಕಣ್ಣು ಕಾಣದ ಹೆಂಗಸೆ, ಸದರದಿಂದೊದರಿದ ನಿನ್ನ ಮಾತಿಗೆ ಯೇನ ಹೇಳಲೆ ತಾಟಕಿ. ತುರುಗವನ್ನು ಕಾಯುವ ಗೊಲ್ಲನ ಮಗನಿಗೆ ನನ್ನ ಕುವರಿಯನ್ನು ಕೊಡು ಎಂಬುದಾಗಿ ಕೇಳುವುದಕ್ಕೆ ನಿನ್ನ ಬಾಯಿ ಹೇಗೆ ಬಂತೆ ಹುಚ್ಚು ಮೂಳಿ. ಛೆ ಭ್ರಷ್ಟೆ ಹಿಂದಕ್ಕೆ ತೆರಳೂ ॥

ಭಾಮಿನಿ
ಕೇಳಯ್ಯ ದೊರೆರಾಯ, ದ್ವಾರಕಾಪುರದಿ
ತರಳ ಮನ್ಮಥನ ಪರಿಣಯದ ಸಂಗತಿಯಾ
ಎಂಟುದಿನದೊಳು ಹರಿಯು ಲಗ್ನವ
ಮಾಡುವೆನೆಂದು ಮಾಡಿದರು ಭಾಷೆಯನೂ ॥

ದ್ರೌಪದಿ: ಹೇ ರಾಜನೆ, ದ್ವಾರಕಾಪುರದೊಡೆಯರಾದ ಶ್ರೀಕೃಷ್ಣದೇವರು ಮಗನಾದಂತ ಮನ್ಮಥನಿಗೆ ಎಂಟು ದಿವಸದಲ್ಲಿ ತಕ್ಕ ಸುಂದರಿಯನ್ನು ತಂದು ವಿವಾಹವನ್ನು ಮಾಡುತ್ತೇನೆಂದು ರಾಧಾರುಕ್ಮಿಣಿಯರಲ್ಲಿ ಪ್ರತಿಜ್ಞೆಯನ್ನು ಮಾಡುವಂಥವರಾದರು. ಹಾಗೆ ಮಾಡದೆ ಇದ್ದರೆ ಸಿರಿಕಂಠನ ಪಾದದಾಣೆಯಾಗಿಯೂ ಹದಿನಾರು ಸಾವಿರ ಗೋಪಿಕಾಸ್ತ್ರೀಯರನ್ನು ಬಿಡುತ್ತೇನೆ. ಇಲ್ಲವಾದರೆ ಅಗ್ನಿಪ್ರವೇಶವಾಗುತ್ತೇನೆಂದು, ಪಂಥವನ್ನು ಮಾಡಿಕೊಂಡಿದ್ದಾರೆ. ಆದ್ದರಿಂದ ನಮ್ಮಲ್ಲಿ ದಯವಿಟ್ಟು ಕನ್ನಿಕೆಯನ್ನು ಕೊಡುವಂಥವರಾಗಿರೈ ದೊರೆಯೆ ॥