ಪದ
ಯೇನಂದರು ಈಗ ಯನ್ನ
ಮನ ವೊಡಂ ಬಡುವುದಿಲ್ಲವೆ ನಾರೀ
ಮಾನಿನಿ ನೀನೇಕೆ, ಸುಮ್ಮನೆ
ಬಗುಳುವೆ ಯೆಂದನು ಕಮಲೇಶಾ ॥
ಕಮಲ: ಯಲೈ ಮಾನಿನಿ ನೀನು ಎಷ್ಟು ಹೇಳಿದರೂ ನನ್ನ ಮನಸ್ಸು ಒಡಂಬಡುವುದಿಲ್ಲ. ಪರಂತೂ ನನ್ನ ಬಾಲಕಿಯನ್ನು ಎಷ್ಟು ಮಾತ್ರಕ್ಕೂ ಕೊಡುವುದಿಲ್ಲ. ಸುಮ್ಮನೆ ಹೋಗೆ ಪಾಂಚಾಲಿ ॥
ಪದ
ನಾಡಿಗೊಡೆಯನಾಗಿ ರೂಢಿಯೊಳಪಕೀರ್ತಿ ಮಾಡಿ
ಕೊಟ್ಟ ಭಾಷೆಗೆ ನೀನೂ ಕೆಡುವರುಂಟೇನೋ ॥
ದ್ರೌಪದಿ: ಹೇ ಕಮಲ ಭೂಪಾಲ, ನೀನು ಕ್ಷತ್ರಿಯಕುಲದವನಾಗಿ ಆಡಿದ ಮಾತುಗಳನ್ನು ವ್ಯರ್ಥಮಾಡಿಕೊಂಡರೆ ಮುಂದೆ ನಿನ್ನ ಜನ್ಮ ನಿಸ್ಸಾರ್ಥಕವಲ್ಲವೇನೈ ದೊರೆಯೆ॥
ಪದ
ನಡೆಯದ ಕಾರ್ಯವ ನಡೆಸಬೇಕೆಂದರೆ ನಡೆಯುವುದಿಲ್ಲೆಂದಾ
ನಡೆನಡೆ ಮುಂದಕ್ಕೆ ಹೆಚ್ಚು ಮಾತಾಡದೆ ಕೊಚ್ಚಿ ಬಿಡುವೆಯೆಂದಾ ॥
ಕಮಲ: ಯಲೈ ಪಾಂಚಾಲಿ, ಸಂಚಿನಿಂದ ವಂಚಿಸಿ, ಭಾಷೆಯನ್ನು ಕೈಗೊಂಡು ನಡೆಯಬಾರದ ಕಾರ್ಯವನ್ನು ನಡೆಸಬೇಕೆಂದು ಬಾಯಿಬಡಕಿಯಂತೆ ಮಾತಾಡಬೇಡ. ಹಿಂದಕ್ಕೆ ತೆರಳೇ ಪಾಂಚಾಲೆ ॥
ಪದ
ರಾಜನೆ ಲಾಲಿಸು. ಸಾರಿಪೇಳುವೆ ನಾನು
ಹೆಡ್ಡತನದಿ ನೀನೂ ಕೆಡಬೇಡವೊ ರಾಜಾ ॥
ದ್ರೌಪದಿ: ಅಯ್ಯ ರಾಜನೆ, ನಾನು ಸಾರಿಸಾರಿ ಹೇಳುತ್ತೇನೆ. ನೀನು ಹೆಡ್ಡತನವನ್ನು ಬಿಟ್ಟು ನನ್ನ ಮಾತನ್ನು ಲಾಲಿಸುವಂಥವನಾಗು. ಆದರೆ ನೀತಿಯನ್ನು ಅರಿಯದ ರಾಜನು ಕೋತಿಗೆ ಸಮಾನನೆಂದು ತಿಳಿದು ಇಂತಾ ಮಾತನ್ನಾಡುವುದು ತರವಲ್ಲವೈ ರಾಜಾ ॥
ಭಾಮಿನಿ
ಕೇಳಿದನು ಪಾಂಚಾಲೆಯ –
ಬಿರುನುಡಿಯ ವಾಕ್ಯಗಳಂ ಕೇಳಿ
ಕಿಡಿಕಿಡಿಯನುಗುಳುತ ಕೊನೆ ಮೀಸೆಗಳಂ
ತಿರುವುತ, ತುರುಗವನು ಕಾಯುವ ಗೊಲ್ಲನ
ಮಗನಿಗೆನ್ನಯ ಪುತ್ರಿಯನು ಕೊಟ್ಟುದಾದರೆ
ನಾನೊಪ್ಪಿರುವ ಮೀಸೆಯಲ್ಲೆಂದಾ ॥
ಕಮಲ: ಹೇ ಬಾಯಿಬಡಕಿಯಾದ ಪಾಂಚಾಲೆ – ತುರುಗವನ್ನು ಕಾಯುವ ಆ ಗೊಲ್ಲನ ಮಗನಿಗೆ ನನ್ನ ಪುತ್ರಿಯನ್ನು ಕೊಟ್ಟದ್ದೇಯಾದರೆ ನಾನೊತ್ತಿರುವ ಮೀಸೆಯಲ್ಲೆಂದು ತಿಳಿ. ಅಯ್ಯ ಭಟರೆ ಈಕೆಯನ್ನು ಆಚೆಗೆ ತಳ್ಳುವಂಥವರಾಗಿ ॥
ಭಾಮಿನಿ
ಎಲೆಲೆ ಕಮಲನೆ ಕೇಳು ನಿನ್ನಯ
ಶೌರ್ಯವನು ನಾನು ನೋಡುವೆ.
ನಿನ್ನ ಪುತ್ರಿಯ ನಾಂ ತಾರದಿರ್ದೊಡೆ
ನಾನೊತ್ತಿರುವ ಕುಚವಲ್ಲೆಂದಳಾ ದ್ರೌಪದಿಯೂ॥
ದ್ರೌಪದಿ: ಎಲೈ ಕಮಲಾ ನಿನ್ನ ಶೌರ್ಯವನ್ನು ನಾನು ನೋಡುತ್ತೇನೆ. ವೊಳ್ಳೆ ಮಾತಿನಿಂದ ನಿನ್ನ ಪುತ್ರಿಯನ್ನು ಕೊಟ್ಟರೆ ಸರಿಯಾಯಿತು. ಇಲ್ಲವಾದರೆ ನಿನ್ನ ಪಟ್ಟಣವನ್ನು ಸುಟ್ಟು ಸೂರೆಮಾಡಿ ನಿನ್ನ ಮಗಳಾದ ರತೀದೇವಿಯನ್ನು ತೆಗೆದುಕೊಂಡು ಹೋಗದಿದ್ದರೆ ನಾನೊತ್ತಿರುವ ಕುಚವು ಎಕ್ಕದ ಕಾಯಿಯೆಂದು ತಿಳಿಯುವಂಥವನಾಗೋ ಕಮಲಾ ॥
(ರತಿಯು ಬರುವಿಕೆ)
ಪದ
ಮನಸಿಗೇ ಬಲುರಮ್ಯವಾಗಿ
ತೋರ್ಪುದೀ ವರ ಘನ ಸುಗಂಧವನ್ನು
ಬೀರುವ, ವಿನುತ ಕುಸುಮ ಬೃಂದತತಿಗಳ್ ॥
ರತಿ: ನಮೋ ನಮೋ ತಂದೆಯೇ ॥
ಕಮಲ: ಧೀರ್ಘಾಯುಷ್ಯಮಸ್ತು ಮೇಲಕ್ಕೇಳಮ್ಮಾ ಪುತ್ರಿ. ಅಮ್ಮಾ ಪುತ್ರಿ ನೀನು ಇಲ್ಲಿಗೆ ಬಂದ ಪರಿಯಾಯವೇನು ಹೇಳಮ್ಮ ಪುತ್ರಿ ॥
ರತಿ: ತಂದೆಯೇ ಅರಿಕೆ ಮಾಡಿಕೊಳ್ಳುತ್ತೇನೆ ॥
ಪದ
ನಿಶಿರಾತ್ರೆಯೊಳು ನಾರಿ ಬರಲು ಕಾರಣವೇನು.
ಪರಿ ಪರಿ ವಿಧದಲಿ ತಿಳುಹಯ್ಯ ಪಿತನೇ ॥
ರತಿ: ತಂದೆಯೇ, ನೀವು ನಿದ್ರೆಯಿಂದ ಪವಡಿಸಿರುವ ಸಮಯದಲ್ಲಿ ವೋರ್ವ ನಾರಿಯು ಬರುವುದಕ್ಕೆ ಕಾರಣವೇನು – ಆಕೆಯನ್ನು ಏತಕ್ಕೆ ದೂಡುವಂಥವರಾದಿರಿ ತಂದೆಯೇ ॥
ಕಮಲ: ಅಮ್ಮಾ ಪುತ್ರಿ ಆ ವಿಚಾರವು ನಿನಗೇತಕ್ಕೆ ಸುಮ್ಮನಿರು ॥
ಪದ
ಕೋಪಿಸಬೇಡಿರಿ, ತಾಪ ಸೈರಿಸಿ ಜನಕ.
ಎಂತೂ ಕಳುಹಿದೆಯೋ, ತರುಣೀಮಣಿಯಳಾ ॥
ರತಿ: ತಂದೆಯೇ ಸರ್ವಥಾ ನನ್ನ ಮೇಲೆ ಕೋಪಿಸಕೂಡದು. ನಿಧಾನವಾಗಿ ಕೇಳಿದರೆ ನಾನು ಹೇಳುತ್ತೇನೆ ಜನಕ ॥
ಪದ
ತಾತನೆ ಲಾಲಿಸು. ಹಿಂದಣ ಕಥೆಯನ್ನು
ವೊಪ್ಪಿತದಿಂ ವಿವಾಹ ಮಾಡಬೇಕೆನಗೇ ॥
ರತಿ: ತಂದೆಯೇ ತಪ್ಪಿತ ಕೆಲಸಕ್ಕೆ ವೊಪ್ಪಿತವೆ ಚಂದ, ಹಿಂದಣ ಜನ್ಮದಲ್ಲಿ ನಾನು ಚಂದ್ರನ ಮಗಳು. ಆ ಕಾಲದಲ್ಲಿ ಶಂಭರಾಸುರನೆಂಬ ದೈತ್ಯನು ನನ್ನನ್ನು ಸೆಳೆದುಕೊಂಡು ಬಂದು ಅಡಿಗೆ ಮಾಡುವುದಕ್ಕೆ ಸೆರೆಯಲ್ಲಿಟ್ಟನು ರುಕ್ಮಿಣಿ ಗರ್ಭದಲ್ಲಿ ಮನ್ಮಥದೇವರು ಹುಟ್ಟಿ ಆ ದೈತ್ಯನನ್ನು ಕೊಂದಂಥವರಾದರು ತಂದೆಯೇ – ಮುಂದೆ ಹೇಳುತ್ತೇನೆ ॥
ಪದ
ಹದಿನಾರು ಸಾವಿರ, ಸತಿಯರು ಮೊದಲಾಗಿ
ಸರ್ಪಶಯನನು ಯನಗೆ ಮಾವನಲ್ಲವೆ ತಂದೇ ॥
ರತಿ: ಹೇ ತಂದೆಯೇ, ಹದಿನಾರು ಸಾವಿರ ಗೋಪಿಕಾಂಗನೆಯರೆಲ್ಲಾ ದೇವಕಿಯ ಸೊಸೆಯರು, ನನಗೆ ಅತ್ತೆಯವರಲ್ಲವೆ ಸರ್ಪಶಯನನೆನ್ನುವರು ನನಗೆ ಮಾವನಲ್ಲವೆ ಮನ್ಮಥದೇವರಿಗೆ ನನ್ನನ್ನು ಕೊಟ್ಟು ಲಗ್ನವನ್ನು ಮಾಡುವಂಥವರಾಗಿರಿ ತಂದೆಯೇ ॥
ಪದ
ಬಾಲೆ ಪಾಂಚಾಲೆಯು, ಕೇಳಿದಳ್ ಸ್ಮರಗೆಂದು
ತಾಳಿಕೆಯಿಲ್ಲದೆ ನೂಕಿಸಿ ಬಿಟ್ಟೆನೂ ॥
ಕಮಲ: ಅಮ್ಮಾ ಪುತ್ರಿ, ಬಾಲೆಯಾದ ದ್ರೌಪದಿಯು ಮೊದಲೇ ಭಾಷೆಯನ್ನು ಕೈಗೊಂಡು, ಕೃಷ್ಣನ ಮಗನಿಗೆ ನಿನ್ನನ್ನು ಧಾರೆಯನ್ನೆರೆಯಬೇಕೆಂದು ಕೇಳುವಂಥವಳಾದಳು. ನಾನು ಕೋಪಾರೂಢನಾಗಿ ನೂಕಿಸಿ ಬಿಡುವಂಥವನಾದೆನಮ್ಮಾ ಪುತ್ರಿ ॥
ಪದ
ನಾರದ ಮುನಿ ಬಂದು ಸಾರಿ ನುಡಿದರೀಗ,
ಆ ಮಾತಿಗೆ ಚಿಂತೆಬೇಡ, ತಂದೆ ನೀ ಕೇಳೋ ॥
ಮುಪ್ಪುರಿಶಯನನು ನಮ್ಮ ಕಾಯ್ವನು ತಂದೆ,
ತಾತನೆ ಲಾಲಿಸು ಬಾಲೆಯ ನುಡಿಯನೂ ॥
ರತಿ: ಪರಾಕು ತಂದೆಯೆ, ಪೂರ್ವದಲ್ಲಿ ಸುರಮುನಿಯು ಅಪ್ಪಣೆ ಕೊಟ್ಟ ಪ್ರಕಾರ, ನಿನ್ನ ಗರ್ಭದಲ್ಲಿ ನಾನು ಜನಿಸಿರುತ್ತೇನೆ. ನನಗೆ ಮನೋರಮಣನಾದಂಥ ಮನಸಿಜನು ಎಂದಿಗೆ ದೊರಕುವನೆಂದು ಹಂಬಲಿಸುತ್ತಿರುವೆನು. ಅತಿಜಾಗ್ರತೆಯಿಂದ ಕೋಪಿಸಿಕೊಂಡು ಹೋಗಿರುವ ಪಾಂಚಾಲೆಯನ್ನು ಕರೆಸಿ ಮನ್ಮಥದೇವರಿಗೆ ನನ್ನನ್ನು ಧಾರೆಯನ್ನೆರೆಯುವಂತೆ ನಂಬಿಗೆಯನ್ನು ಕೊಟ್ಟು ಸಮಾಧಾನಗೊಳಿಸಬೇಕೈ ತಂದೆಯೇ ॥
ಭಾಮಿನಿ
ಎಂದ ನುಡಿಯನು ಕೇಳಿ ಮರುಗುತ
ಶಿವ ಶಿವ ಮೋಸ ಹೋದೆನು.
ಮಂದಬುದ್ದಿಯು ದೊರಕಿತೆನುತ,
ನಂದನೆಯ ಬಿಗಿದಪ್ಪಿ ಮನ್ನಿಸಿದನಾಕ್ಷಣಕೇ॥
ಕಮಲ: ಅಮ್ಮಾ ಪುತ್ರಿ, ನೀನು ಆಡುವಂಥ ಮಾತು ನನಗೆ ಬಹಳ ಸಂತೋಷವಾಯಿತು. ಈಗಲೇ ಹೋಗಿ, ನಾಗವೇಣಿಯನ್ನು ಸಮಾಧಾನಗೊಳಿಸಿ ಕರೆದುಕೊಂಡು ಬರುತ್ತೇನೆ, ನೀನು ಅರಮನೆಗೆ ತೆರಳಮ್ಮಾ ಪುತ್ರಿ ॥ಅಯ್ಯ ಭಟರುಗಳಿರಾ, ಕೋಪಿಸಿಕೊಂಡು ಹೋಗಿರುವ ಆ ಪಾಂಚಾಲೆಯನ್ನು ಜಾಗ್ರತೆ ಕರೆದುಕೊಂಡು ಬರುವಂಥವರಾಗಿ ॥ನಮೋ ನಮೋ ತಾಯೇ ॥
ದ್ರೌಪದಿ: ನಿನಗೆ ಮಂಗಳವಾಗಲಿ ಮೇಲಕ್ಕೇಳಯ್ಯ ರಾಜ ॥
ಪದ
ಮನ್ನಿಸಬೇಕಮ್ಮ, ಎನ್ನಪರಾಧವ
ಮನ್ನಿಸಬೇಕಮ್ಮ ಮಂಗಳಾಂಗಿಯೆ ನಾಂ,
ತಿಳಿಯದೆ ಪೋದೆ, ಮನ್ನಿಸಬೇಕಮ್ಮಾ ॥
ಎನ್ನ ಬಾಲಕಿಯಿಂದ ವಿವರವು ತಿಳಿಯಿತೂ,
ಮಂಗಳಾಂಗಿಯೇ ಇನ್ಯಾತಕೆ ತಡವೂ ॥
ಕಮಲ: ಅಮ್ಮಾ ದ್ರೌಪದಿ, ನಾನು ಮಾಡಿರುವಂಥ ಅಪರಾಧವನ್ನು ಕ್ಷಮಿಸಬೇಕಮ್ಮಾ ತಾಯೆ. ಮಂದಬುದ್ಧಿಯಿಂದ ಮುಂದರಿದು ಮಾತನಾಡುವಂಥವನಾದೆ, ನೀನು ಹೇಳಿದ ಮಾತೂ, ನನ್ನ ಬಾಲಕಿಯಾದ ರತಿದೇವಿಯಿಂದ ಪೂರ್ವಾಪರವು ಗೊತ್ತಾಗುವಂಥದ್ದಾಯಿತು. ನಿನ್ನ ಕೋರಿಕೆಯಂತೆ ನಡೆಸಬಹುದಮ್ಮಾ ತಾಯೇ ॥
ಭಾಮಿನಿ
ಯಿಂತೀ ಪರಿಯಲಿ ಸ್ತುತಿಪ ಭೂಪನಂ
ಕಾಣುತೆ ದ್ರೌಪದಿ. ಕೋಪವ ತಾಳದೆ.
ಅರಸು ಧರಣೀಸುತರ್ಗೆ ತಾಮಸವಿರಬೇಕೈ ರಾಜಾ ॥
ದ್ರೌಪದಿ: ಅಯ್ಯ ದೊರೆಯೆ, ರಾಜರಿಗೆ ತಾಮಸಗುಣವಿರುವುದು ನಿಜವೇ ಸರಿ. ಯೀ ವಿನಯವು ಮೊದಲೇ ಇದ್ದರೆ ಇಷ್ಟು ಕೊರತೆಯು ಬರುವುದಕ್ಕೆ ಕಾರಣವೇನು. ಆದರೂ ಚಿಂತೆಯಿಲ್ಲ. ಎಂತಾದರೂ ಮಾಡಿ ನಿನ್ನ ಮನಸ್ಸಂತೋಷ ಪಡಿಸುತ್ತೇನೆ. ಧೈರ್ಯದಿಂದಿರುವಂಥವನಾಗೈ ರಾಜ ॥
ಭಾಮಿನಿ
ಎನ್ನಯ ಗುಣದೋಷಂಗಳ ನೀ ನೋಡದೆ
ಸನ್ನುತಾಂಗಿ ಮುದದಿ ಪಾಲಿಸು, ನಿನ್ನ ಕೃಷ್ಣಗೆ
ದೊರೆಯುವಂದದಿ, ನಾಂ ಪಡೆದಿರ್ದೆನು ತಾಯೇ ॥
ಕಮಲ: ಅಮ್ಮಾ ತಾಯೆ, ಹಲವು ಮಾತಿನಿಂದ ಪ್ರಯೋಜನವಿಲ್ಲ. ಆದರೆ ಅವಗುಣವನ್ನು ನೋಡದೆ ಪಾಲಿಸಬೇಕಮ್ಮಾ ತಾಯೇ. ಇದೂ ಅಲ್ಲದೆ ಪರಮಾತ್ಮನಿಗೆ ನನ್ನ ಮೇಲೆ ಸಂಪೂರ್ಣವಾಗಿ ಕರುಣ ಬರುವಂತೆ ಮಾಡಬೇಕಮ್ಮ ತಾಯೆ ॥
ಭಾಮಿನಿ
ನಾಳೆ ಬರುವೆವು ನಾವು ಶೀಘ್ರದಿ ನೀನು
ಶೃಂಗರಿಸೈ ಪುರವ ಬೇಗದಿ, ಹರುಷದಿ ನಾಂ
ಪೋಗಿ ಬರುವೆನು ಎಂದಳಾ ದ್ರೌಪದಿಯೂ ॥
ದ್ರೌಪದಿ: ಅಯ್ಯ ಕಮಲ ರಾಜನೆ, ನಾಳೆಯ ದಿವಸ ಮನ್ಮಥನ ಲಗ್ನಕ್ಕಾಗಿ ನಿಮ್ಮ ಪುರಕ್ಕೆ ನಮ್ಮ ಅಂಣಯ್ಯನವರಾದ ಶ್ರೀಕೃಷ್ಣದೇವರು ಬರುತ್ತಾರೆ. ಇದೂ ಅಲ್ಲದೆ, ಸಕಲ ಪರಿವಾರವೂ ಬರುವಂತೆ ಮಾಡುತ್ತೇನೆ. ನೀನು ಪುರವನ್ನು ಶೃಂಗರಿಸಿ ಮಂಗಳಕರವಾದ ರಂಗಮಂಟಪವನ್ನು ರಚಿಸು. ದೇಶಾಧಿಪತಿಗಳು ಬಂಧು ಬಾಂಧವರನ್ನೆಲ್ಲಾ ಕರೆಸಿಕೊಳ್ಳುವಂಥವನಾಗು. ಗೋಪಿಕಾಂಗನೆಯರು ಮತ್ತು ಬಲರಾಮ ದೇವರು, ವಸುದೇವ ಸಾತ್ಯಕಿ, ಯದುಗಳು, ರುಕ್ಮಿಣಿ ಆದಿಯಾಗಿ ಸ್ತ್ರೀಯರು ಬರುತ್ತಾರೆ. ನೀನು ಸಿದ್ಧವಾಗಿರು. ನಾನು ಹೋಗಿ ನಾಳೆ ಹದಿನೈದನೆ ಗಳಿಗೆಗೆ ದಿಬ್ಬಣವು ಬರುವಂತೆ ಮಾಡುತ್ತೇನೆ. ನೀನು ಸಿದ್ಧನಾಗಿರುವಂಥವನಾಗು. ನಾನು ಹೋಗಿ ಬರುತ್ತೇನೆ ವೀಳ್ಯವನ್ನು ಕೊಡುವಂಥವನಾಗೈ ದೊರೆಯೆ ॥
ಕಮಲ: ಅಮ್ಮಾ ತಾಯೆ, ನಿಮ್ಮ ಇಷ್ಟದಂತೆ, ನಾಳೆ ಹದಿನೈದನೆ ಗಳಿಗೆಗೆ ಲಗ್ನವನ್ನು ನಿಶ್ಚಯಮಾಡಿರುತ್ತೇನೆ. ನೀವುಗಳು ನಾಳೆಯ ದಿವಸ ದಿಬ್ಬಣವು ಬರುವಂತೆ ಮಾಡಬೇಕಮ್ಮಾ ತಾಯೆ. ನೀವು ತೆರಳುವಂಥವರಾಗಿ ॥ಎಲೈ ಸಾರಥಿ ಶ್ರೀಕೃಷ್ಣದೇವರ ಮಗನಾದ ಮನ್ಮಥನಿಗೆ, ಪುತ್ರಿಯಾದ ರತೀದೇವಿಯನ್ನು ಕೊಡುವಂಥವನಾದೆ. ಪಟ್ಟಣವನ್ನು ಶೃಂಗರಿಸುವಂತೆ, ಡಂಗುರವನ್ನು ಬಜಾಯಿಸಿ, ಚಪ್ಪನೈವತ್ತಾರು ದೇಶದ ಅರಸರಿಗೆ ಲಿಖಿತವನ್ನು ಕೊಡುವಂತೆ ಭೂಸುರೋತ್ತಮರಿಗೆ ತಿಳಿಸುವಂಥವನಾಗೈ ಸಾರಥಿ ॥
ದ್ರೌಪದಿ: ನಮೋ ನಮೋ ಅಂಣಯ್ಯ ॥
ಕೃಷ್ಣ: ನಿನಗೆ ಮಂಗಳವಾಗಲೀ ಬಾರಮ್ಮ ತಂಗಿ ದ್ರೌಪದಿ. ಅಮ್ಮಾ ತಂಗಿ ದ್ರೌಪದಿ. ನೀನು ಹೋದ ಕಾರ್ಯವೇನಾಯಿತು ಇದೂ ಅಲ್ಲದೆ ನೀನು ಯಾವ ಯಾವ ದೇಶಗಳನ್ನು ತಿರುಗಿ ಬರುವಂಥವಳಾದೆ. ಪಂಚಬಾಣನಿಗೆ ಅಂಗನೆಯು ದೊರಕಿದಳೊ ಇಲ್ಲವೋ ನನ್ನಲ್ಲಿ ಮರೆಮಾಜದೆ ಹೇಳುವಂಥವಳಾಗಮ್ಮಾ ತಂಗಿ ದ್ರೌಪದಾ ॥
ಪದ
ಕರುಣ ವಾರುಧಿ ನಿಮ್ಮ ಕೃಪೆಯಿಂದ ತಿರುಗಿದೆ.
ಶ್ರೀನಿವಾಸ ಕಮಲಾವತಿಯ ಪುರವನ್ನು
ಒಳಹೊಕ್ಕು ಬಂದೆನು ಶ್ರೀನಿವಾಸ ॥
ಕಾಮಗೆ ತಕ್ಕಂತೆ ಕಡುಚಲ್ವೆ ಆ ಹೆಣ್ಣು ಶ್ರೀನಿವಾಸ ॥
ದ್ರೌಪದಿ: ಪರಾಕೆ ಅಂಣಯ್ಯ, ನಿಮ್ಮ ಕರುಣ ಕಟಾಕ್ಷದಿಂದ ಬಹುದೇಶಗಳನ್ನು ತಿರುಗಿ ಅಲ್ಲಿಂದ ಕಮಲಾವತಿ ಪಟ್ಟಣವನ್ನು ಒಳಹೊಕ್ಕು ಕಮಲ ಭೂಪತಿಯನ್ನು ಕಾಣುವಂಥವಳಾದೆ ॥ಕಮಲ ಭೂಪಾಲರ ಸುತೆಯಾದ ರತಿದೇವಿಯನ್ನು ಮನ್ಮಥನಿಗೆ ಕೊಟ್ಟು ಲಗ್ನವನ್ನು ಮಾಡುವಂತೆ ಗೊತ್ತುಮಾಡಿಕೊಂಡು ಬಂದಿರುತ್ತೇನೆ. ನೀವು ಕಡು ಸಡಗರದಿಂದ ಸರ್ವರೂ ಹೊರಡುವಂಥವರಾಗಿ ಅಂಣಯ್ಯ ಮುಂದಾದರೂ ಹೇಳುತ್ತೇನೆ ॥
ಪದ
ಪಂಚಬಾಣಗೆ ಕೊಟ್ಟು ಪರಿಣಯವೆಸೆಗೆಂದೆ ಶ್ರೀನಿವಾಸ
ಮಾತನ್ನು ನಿಂದಿಸಿ ಮತಿಯಿಂದ ನುಡಿದನು ಶ್ರೀನಿವಾಸ ॥
ದ್ರೌಪದಿ: ಅಂಣಯ್ಯ ಕಮಲಭೂಪಾಲನ ಮಗಳಾದ ರತಿದೇವಿಯನ್ನು ಪಂಚಬಾಣನಿಗೆ ಕೊಡು ಎಂಬುದಾಗಿ ಕೇಳುವಂಥವಳಾದೆ. ಆಗ ಕಮಲ ಭೂಪಾಲನು ಕೋಪದಿಂದ ನಿಂದ್ಯವನ್ನು ಮಾಡಿ ನೂಕಿಸುವಂಥವರಾದರೂ – ಆಗ ನಾನು ಕೋಪದಿಂದ ನಾಳೆ ಹನ್ನೆರಡನೆ ಗಳಿಗೆಯೋಳ್ ನಿನ್ನ ಪುರವನ್ನು ಸುಟ್ಟು ಸೂರೆಮಾಡುತ್ತೇನೆಂದು ಶೂರತ್ವವನ್ನು ನುಡಿಯುವಂಥವಳಾದೆ. ಆಗ ಕಮಲ ಭೂಪಾಲನು ನನ್ನನ್ನು ಮನ್ನಿಸಿ ಮಗಳಾದ ರತಿದೇವಿಯನ್ನು ಕೊಡುತ್ತೇನೆಂದು ಹೇಳಿ, ನಾಳೆ ಹದಿನೈದನೆ ಗಳಿಗೆಗೆ ದಿಬ್ಬಣವು ಬರುವಂತೆ ಮಾಡಬೇಕೆಂದು ಹೇಳುವಂಥವನಾದನೋ ಅಂಣಯ್ಯ. ಆದ್ದರಿಂದ ನೀವು ಜಾಗೃತೆಯಿಂದ ಪಟ್ಟಣವನ್ನು ಶೃಂಗಾರ ಮಾಡುವಂತೆ ಡಂಗುರವನ್ನು ಬಜಾಯಿಸು, ಇದೂ ಅಲ್ಲದೆ ಚಪ್ಪನ್ನೈವತ್ತಾರು ದೇಶದ ಅರಸರಿಗೆ ಲಗ್ನಪತ್ರಿಕೆಯನ್ನು ಕಳುಹಿಸುವಂಥವರಾಗಿ. ನಾನು ಬಂದು ಬಹಳ ಹೊತ್ತಾಯಿತು. ಎನ್ನ ಕಾಂತರಾದ ಪಾರ್ಥದೇವರು ನಿದ್ರೆಯನ್ನು ತಿಳಿದು ಕೋಪಿಸಿಕೊಳ್ಳುವರು. ಆದ್ದರಿಂದ ತಮ್ಮ ಕರುಣ ಕಟಾಕ್ಷವು ನನ್ನ ಮೇಲೆ ಸಂಪೂರ್ಣವಾಗಿರಬೇಕೈ ದೇವ, ನಾನು ಹೋಗಿಬರುತ್ತೇನೆ – ಅಪ್ಪಣೆಯನ್ನ ದಯಪಾಲಿಸಬೇಕೈ ಅಂಣಯ್ಯ॥
ಪದ
ವೂರುಕೇರಿಯ ಗೃಹಗಹಂಗಳ ನಾರಿ
ಅರಸುತ ಕಾಣದೀಗಲೆ. ಭಾರಿಬಾರಿಗು
ಬೀದಿ ಹುಡುಕುತ ನಾರಿಯನು ಪಾರ್ಥ ॥
ಅರ್ಜುನ: ಹರಹರ ಎನ್ನ ಕಾಂತೆಯಾದ ದ್ರೌಪದಿಯು, ಸಜ್ಜಾಗೃಹದಲ್ಲಿ ಪವಡಿಸಿದ್ದವಳು ಈ ನಿಶಿರಾತ್ರಿಯಲ್ಲಿ ಧಾವಲ್ಲಿಗೆ ಹೋದಳೋ ಕಾಣೆನಲ್ಲಾ, ಹರಹರಾ, ಈಗ ಆ ಖುಲ್ಲೆಯು ನನ್ನ ಕೈಗೆ ಸಿಕ್ಕಿದ್ದೇಯಾದರೆ, ಹಲ್ಲನ್ನು ಮುರಿಯದೆ ಎಂದಿಗೂ ಬಿಡುವುದಿಲ್ಲ. ಹರಹರ ಎಲ್ಲಿಗೆ ಹೋದಳೋ ಕಾಣೆನಲ್ಲಾ ಇರಲಿ ನೋಡುತ್ತೇನೆ ॥
ದ್ರೌಪದಿ: ನಮೋ ನಮೋ ಪ್ರಾಣಕಾಂತ ॥
ಪದ
ಎಲ್ಲಿ ಹೋಗಿದ್ದೆ ಖುಲ್ಲೆ ನಾರಿಯೆ,
ಪೇಳ್ವದೆನ್ನೊಳು ನೀನು ಯೀಗಲೆ ಕೊಲ್ಲುವೆನು
ಪುಸಿ ನುಡಿಯಬೇಡ ಎಂದ ಪಾರ್ಥ ॥
ಅರ್ಜುನ: ಎಲೈ ಖುಲ್ಲೆಯಾದ ನಲ್ಲೆಯೆ, ನಿನ್ನ ವಲ್ಲಭನಾದ ನನ್ನೊಡನೆ ಮಲಗಿರ್ದು ಈ ನಿಶಿರಾತ್ರಿಯೋಳ್ ಎಲ್ಲಿಗೆ ಹೋಗಿದ್ದೆ. ಸಾಂಗವಾಗಿ ಹೇಳೇ ಕಟಿಕಿ, ನಿನ್ನನ್ನು ಕೊಲ್ಲಬೇಕೆಂದರೆ ಸ್ತ್ರೀಹತ್ಯವು ಬರುವುದು. ಹಿಂದೆ ನಾವು ಬಹಳ ಶ್ರಮಪಟ್ಟೆವು. ಅಂತಾದ್ದರಲ್ಲಿ ಈಗ ಎಲ್ಲಿಗೆ ಹೋಗುವಂಥವಳಾದೆ. ನನ್ನಲ್ಲಿ ಸಾಂಗವಾಗಿ ಹೇಳುವಂಥವಳಾಗೇ ನಾರಿ ॥
ಪದ
ಎಂತು ಮಾಡಲೀಗ ನಾನು
ಕಂತು ಪಿತನ ಕರುಣವಿಲ್ಲದೆ ದಂತಿಗಮನ
ಚಿಂತೆ ಹರಿಸೋ ಎಂತು ಮಾಡಲೀ ॥
ದ್ರೌಪದಿ: ಅಯ್ಯೋ ಶ್ರೀಹರಿ, ಎನ್ನ ಕಾಂತರಾದ ಪಾರ್ಥದೇವರು ನನ್ನನ್ನು ಕಷ್ಟಪಡಿಸುತ್ತಿರುವರಲ್ಲಾ ನಿನ್ನ ಕರುಣವು ಎನ್ನ ಮೇಲೆ ಇಲ್ಲದೆ ಹೋಯಿತೆ ಶ್ರೀಹರಿ ದಾನವಾರಿ ॥
ಗ್ರಂಥ
ಹಾಲು ನೀರಾಗಿ ತೋರ್ಪುದು ಬಾಲ್ಯದ ಅತಿಹಿತರೆಲ್ಲರು ವೈರಿಗಳಾಗಿರ್ಪರು
ಮೂಲದ್ರವ್ಯವು ಕಾಂಬುದು ಶ್ರೀಹರಿಯ ಕರುಣ ತಪ್ಪಿದ ಬಳಿಕಂ ॥
ದ್ರೌಪದಿ: ಅಯ್ಯೋ ಶ್ರೀಹರಿ ದಾನವಾರಿ, ಈ ಕಾಲಕ್ಕೆ ಕ್ಷೀರವೆಂಬ ಪಾಲು ನೀರಾಗುವಂಥದ್ದಾಯಿತೆ. ಅಲ್ಲದೆ ಎನ್ನ ಕಾಂತರಾದ ಪಾರ್ಥದೇವರು ನನ್ನನ್ನು ಒಂದೇ ಪ್ರಾಣವಾಗಿ ಕಾಣುತ್ತಿದ್ದವರು ವೈರಿಗಳಾಗಿರುವರಲ್ಲಾ ಮತ್ತು ಮನೆಯಲ್ಲಿದ್ದ ದ್ರವ್ಯವು ಕಾಣದಂತಾಯಿತಲ್ಲ ದಾನವಾರಿ ॥
ಗ್ರಂಥ
ಅಕುಲಂಗೆ, ಸಕಲ ರಾಜ್ಯಂ ತ್ರಿಕರುಣಸಿದ್ದಿಂಗೆ ದೃಷ್ಟ ದಾರಿದ್ರತ್ವವಂ
ಸುಕುಮಾರಿಗೆ ವೈದ್ಯಂ ವಿಕಲಾಂಗಿ ಸೊಬಗು ಮೆರೆಯುವುದೀ ನಡತೇ ॥
ದ್ರೌಪದಿ: ಅಯ್ಯೋ ಶ್ರೀಹರಿ, ನೀಚಕುಲದವರಿಗೆ ರಾಜ್ಯ ಪದವಿಯನ್ನು ಕೊಡುವಂಥವರಾದಿರಿ. ತ್ರಿಕರಣಸಿದ್ಧಿಯಾದವನಿಗೆ ದುಷ್ಟದಾರಿದ್ರ್ಯವನ್ನು ಕೊಡುವಂಥವರಾಧಿರಿ. ಪತಿವ್ರತೆಯಳಾದ ಎನಗೆ ಬಹಳ ಕಷ್ಟವನ್ನು ಕೊಡುವಂಥವನಾದೆಯೋ ದೇವಾ ಮಹಾನುಭಾವ ॥
ಪದ
ಹಿಂದೆ ಧರಣಿಪ ನನುಜ ಬಂದು
ಸೀರೆಯನ್ನು ಸೆಳೆದಾನೂ, ಕಂದುಗೊರಳಾ
ಕಾಯೊ ಯನ್ನ ಮಂದರೀಶದೇವನೇ ॥
ದ್ರೌಪದಿ: ಅಯ್ಯೋ ಶ್ರೀಹರಿ ಆ ನೀಚನಾದ ದುಶ್ಶಾಸನನು ಬಂದು, ನಾನು ಧರಿಸಿರ್ಪ ಸೀರೆಯನ್ನು ಸೆಳೆಯುವಂಥ ಸಮಯದಲ್ಲಿ ಕಾಪಾಡುವಂಥವರಾದಿರಿ. ಈ ಕಾಲಕ್ಕೆ ನನ್ನ ಮೇಲೆ, ಕರುಣವಿಲ್ಲದೆ ಹೋಯಿತೆ ಶ್ರೀಹರಿ ॥
ಪದ
ದಡಭಡನೆ ಹೊಡೆಯುವೆ
ಪಡಪಡನೆಳಿಸುವೆ ಕಡುಮೂರ್ಖಳೆ,
ತಡವೇತಕೆನ್ನೊಳು ಧಡ ಭಡ ॥
ಅರ್ಜುನ: ಛೇ ನೀಚಳೆ, ನಮ್ಮ ಗೃಹಪ್ರವೇಶವನ್ನು ಬಿಟ್ಟು ವಿಕಟ ಕಲ್ಪತೆಯನ್ನು ಮಾಡುವುದಕ್ಕೆ, ಧಾವಲ್ಲಿಗೆ ಹೋಗಿದ್ದೆಯೇ ನಾರಿ ಮದನ ವೈಯ್ಯರಿ ॥
ಪದ
ಕೆಟ್ಟೆನಯ್ಯೆ, ವಾಯುದಿಟ್ಟ, ಧೀರಪಾರ್ಥನು
ಬಂದು ಸಿಟ್ಟಿನಿಂದ ಶಿರವ ಹೊಡೆವ,
ಪೆಟ್ಟ ನಾನು ಸಹಿಸಲಾರೆ ॥ಕೆಟ್ಟೆನೈಯ್ಯೋ ॥
ದ್ರೌಪದಿ: ಅಯ್ಯೋ ವಾಯುಪುತ್ರನಾದ ಭೀಮಸೇನರೇ, ಯನ್ನ ಮನೋರಮಣನಾದ ಪಾರ್ಥ ದೇವರು ಹೊಡೆಯುವಂಥ ಪೆಟ್ಟನ್ನು ಸಹಿಸಲಾರೆನಲ್ಲಾ ವಾಯುದಿಟ್ಟ. ಭೀಮಸೇನ, ಬೇಗ ಬಾ ॥
ಅರ್ಜುನ: ಛೇ ಛೇ ಮೂರ್ಖಳೆ ॥
ಪದ–ತ್ರಿವುಡೆ
ಎಂದು ಪಾರ್ಥನು ಗರ್ಜಿಸುತ್ತಲಿ ಬಂದು
ಪವನಜ ತಿಳಿಯುತೀಪರಿ. ಯಾಕೆ ಕೆದರಿದೆಯೋ
ತಮ್ಮ ಫಲುಗುಣ ಎಂದ ಭೀಮಾ ॥
ಭೀಮ: ಯೆಲಾ ಪಾರ್ಥ, ನಮ್ಮ ಪತ್ನಿಯು ಮಾಡಿದ ನಡತೆಯನ್ನು ನನ್ನಲ್ಲಿ ಸಾಂಗವಾಗಿ ಹೇಳುವಂಥವನಾಗು. ಸುಮ್ಮನೆ ಕೊರಳನ್ನು ಕೊಯ್ಯಬೇಡವೋ ಪಾರ್ಥ ॥
ಪದ
ಅಂಣ ಮಾರುತಿ ಚಿಂಣ ದ್ರೌಪದಿ ಸಜ್ಜೆಮನೆಯನೂ ॥
ಬಿಟ್ಟು ತೆರಳಲೂ ಮಂದ ಬುದ್ಧಿಯು ಬರುವುದಾಯ್ತೆ ॥
ಅರ್ಜುನ: ಅಂಣಾ ಭೀಮಸೇನ, ಈ ಭ್ರಷ್ಟೆಯು ಮಾಡಿದ, ದುರುಳತ್ವವನ್ನು ನೋಡಿದೆಯೋ. ಆದರೆ, ಸಜ್ಜಾಗೃಹದಲ್ಲಿ ಪವಡಿಸಿದ್ದವಳು ಧಾವಲ್ಲಿಗೆ ಹೋಗಿದ್ದಳೂ, ಇಂಥ ನೀಚಕೃತ್ಯವನ್ನು ಮಾಡಬಹುದೇನೊ ಅಂಣಯ್ಯ ॥
ಪದ
ಐವರೊಡನೆ ಇರುವ ಸತಿಯ ಹೊಡೆಯಲೇತಕೋ
ಪೊಡವಿಪಾಲನಾಜ್ಞೆಯಿಲ್ಲದೆ ಕಡಿದು ಬಿಡುವೆನು ॥
ಭೀಮ: ಎಲಾ ಅರ್ಜುನ, ಅಂಣಯ್ಯನವರಿಗೆ ಸತಿಯಾದಂಥ ದ್ರೌಪದಿಯನ್ನು, ಹೊಡೆಯುವುದಕ್ಕೆ ಕಾರಣವೇನು, ಅವಳು ಮಾಡಿರುವ ತಪ್ಪು ಕೆಲಸವೇನು, ವೊಳ್ಳೇ ಮಾತಿನಿಂದ ಹೇಳಿದರೆ ಸರಿಯಾಯಿತು. ಇಲ್ಲವಾದರೆ ಧರ್ಮರಾಯರ ಆಜ್ಞೆಯನ್ನು ಮೀರಿ, ಕತ್ತರಿಸಿ ಬಿಡುತ್ತೇನೆ. ಸತಿಯಳ ಜಡೆಯನ್ನು ಬಿಡುವಂಥವನಾಗೋ ಪಾರ್ಥ ॥
ಪದ
ತಪ್ಪು ಯಿರಲು ಕೆಟ್ಟ ಸಿಟ್ಟು ಬಕನ ವೈರಿಯೇ
ಮೌನದಿಂದ ಮನೆಯ ಬಿಟ್ಟು ತೆರಳಲೇತಕೋ ॥
ಅರ್ಜುನ: ಎಲೈ ಭಂಡರೋಳ್ ಭಂಡನಾದ ಭೀಮನೆ, ಆ ಪುಂಡೆಯಾದ ದ್ರೌಪದಿಯು ತಪ್ಪು ಕೆಲಸವನ್ನು ಮಾಡಿದ್ದರಿಂದ ನಾನು ಪೆಟ್ಟನ್ನು ಹೊಡೆಯುವಂಥವನಾದೆ. ಈ ಭ್ರಷ್ಠೆಯು, ಸಜ್ಜಾಗೃಹವನ್ನು ಬಿಟ್ಟು, ಧಾವಲ್ಲಿಗೆ ಹೋಗಿದ್ದಾಳೋ ಸಾಂಗವಾಗಿ ಹೇಳುವಂಥವನಾಗೋ ಭಂಡ ಭೀಮ ॥
ಪದ
ಭಂಡ ನೀನು ಬಗುಳಲೇಕೋ ದಿಂಡ ಪಾರ್ಥನೆ,
ಪುರುಷರಿಲ್ಲದ ಸತಿಯಳಂತೆ ಪೌರುಷವೇಕೋ ॥
ಭೀಮ: ಎಲಾ ಲಂಡಿಯಾದ ಅರ್ಜುನನೆ, ಯಾತಕ್ಕೆ ಬಾಯಿಗೆ ಬಂದ ಹಾಗೆ ಬಗುಳುತ್ತೀಯಾ, ಗಂಡರಿಲ್ಲದ ಮುಂಡೆಯೋಪಾದಿಯಲ್ಲಿ ಪೌರುಷವನ್ನು ವದರಬೇಡ, ಸತಿಯಳ ಜಡೆಯನ್ನು ಬಿಡುವಂಥವನಾಗೋ ಪಾರ್ಥ॥
Leave A Comment