ಪದ
ಹಿಂದೆ ಬಕನ ಕೂಳ ತಿಂದ  ಬಕನ ವೈರಿಯೆ
ಕಂಡ ಕಂಡಹಾಗೆ ಬಗುಳಬೇಡ ವಾಯುತನುಜನೇ ॥

ಅರ್ಜುನ: ಎಲಾ ಭೀಮಾ ಹಿಂದೆ ಬಕಾಸುರನಿಗೆ ವೊಂದು ಬಂಡಿ ಅನ್ನವನ್ನು ಕೊಟ್ಟು ಕಳುಹಿಸಿದ್ದಕ್ಕೆ, ಮಧ್ಯ ಮಾರ್ಗದಲ್ಲಿ ತಿಂದುಕೊಂಡು ಅಂಡು ಕುಂಡಿಗಳನ್ನು ಬೆಳೆಸಿಕೊಂಡು ಯನ್ನ ಮುಂದೆ, ಕೆಟ್ಟ ಕೆಟ್ಟ ಮಾತುಗಳನ್ನು ಯಾತಕ್ಕೆ ಬಗಳುವೆ, ಹಿಂದಕ್ಕೆ ಸಾರೋ ಲಂಡ ಭೀಮಾ ॥

ಪದ
ಹಿಂದೆ ಕೀಚಕನಿಂದ ದುರುಳತ್ವ ತಾಳಿದೆ.
ಮೌನವ ತಾಳಿದೆಯೊ  ಖೂಳ ಪಾರ್ಥನೇ ॥

ಭೀಮ: ಯೆಲಾ ಪಾರ್ಥ ನಾವು ಮತ್ಸ್ಯನಗರದಲ್ಲಿರುವಾಗ ದುರುಳನಾದ ಕೀಚಕನು ದ್ರೌಪದಿಯ ಮಾನ ಅಪಹರಣ ಮಾಡುವ ಸಮಯದಲ್ಲಿ ನೀನು ಮೌನವನ್ನು ತಾಳಿಕೊಂಡು ನಾರಿಯಂತೆ ಸೀರೆಯನ್ನುಟ್ಟುಕೊಂಡು, ಅವನ ಮೇಲೆ ರಣಾಗ್ರವನ್ನು ಮಾಡದೆ, ಮೌನವನ್ನು ತಾಳಿಕೊಂಡು ಹೋದೆ, ಆಗಿಲ್ಲದ ಪೌರುಷವು ಈಗ ಧ್ಯಾವಲ್ಲಿ ಬಂತೋ ಪಾರ್ಥ ॥

ಅರ್ಜುನ: ಎಲೆ ಭೀಮ, ಶ್ರೀಹರಿಯ ಕರುಣ ಕಟಾಕ್ಷವು ನನ್ನ ಮೇಲೆ ಯಿದ್ದಿದ್ದೇಯಾದರೆ, ನಿನ್ನ ಶೂರತ್ವವನ್ನು ನೋಡುತ್ತೇನೆ ಯುದ್ಧಕ್ಕೆ ಯದುರು ನಿಲ್ಲೆಲಾ ಭೀಮಾ ॥

ಭೀಮ: ಯೆಲಾ ಪಾರ್ಥ ನಿನ್ನ ಸಾಹಸವನ್ನು ನೋಡುತ್ತೇನೆ, ರಣಾಗ್ರಕ್ಕೆ ಯದುರು ನಿಲ್ಲೆಲಾ ಪಾರ್ಥ॥

ಭೀಮಾರ್ಜುನರ ಯುದ್ಧ

ಪದ
ತಮ್ಮಾ ಕೋಪಿಸಬೇಡಿ ನೀವು
ತರವೇನೊ ನಿಜಕುಲ ॥ತಮ್ಮಾ ಕೋಪಿಸಬೇಡ ॥
ಧರ್ಮವಲ್ಲವು ನಿಮಗೆ ಮರ್ಮದಿಂದಿರಿ ನೀವು
ತಮ್ಮಾ ಕೋಪಿಸಬೇಡಿ ನೀವು ॥

ಧರ್ಮಜ: ಅಯ್ಯ ತಮ್ಮಂದಿರಾ  ನೀವು ಮರ್ಮದಲ್ಲಿ ರಣಾಗ್ರವನ್ನು ಮಾಡುವುದು ಯುಕ್ತವಲ್ಲ. ಹೆಮ್ಮೆಯಿಂದ ಕೆಡಬೇಡಿ, ನಾನು ವೊಂದು ಧರ್ಮನೀತಿಯನ್ನು ಹೇಳುತ್ತೇನೆ, ಕೇಳುವಂಥವರಾಗಿರಪ್ಪ ತಮ್ಮಂದಿರ.

ಧರ್ಮಜ: ಅಯ್ಯ ತಮ್ಮಂದಿರಾ  ಹುಲಿಯು ವರುಷವೊಂದಕ್ಕೆ ಐದು ಮಕ್ಕಳನ್ನು ಪಡೆಯುವುದು. ಸರ್ಪ ನೂರು ಮಕ್ಕಳನ್ನು ಪಡೆದುಕೊಳ್ಳುವುದು ಗೋವು ವರುಷಕ್ಕೆ ವಂದು ಸೂಲು ಪಡೆದಾಗ್ಯೂ  ಗೋವಿನ ಸಂತತಿಯು ಹೆಚ್ಚಿಕೊಂಡಿರುವುದು. ಆದ್ದರಿಂದ ನೀವು ಯುದ್ಧ ಮಾಡುವುದು ನನಗೆ ಸಮಾಧಾನವಲ್ಲವೈ ತಮ್ಮಂದಿರಾ. ಈ ಧರಣಿಯ ಮೇಲೆ ಇರುವಂಥ ಸತಿಯರಿಗೆಲ್ಲಾ, ನಮ್ಮ ಮಡದಿ ದ್ರೌಪದಿಯು ಅತಿಶಯವಾಗಿರುವಳು. ಸುಮ್ಮನೆ ರಣಾಗ್ರ ಮಾಡಿ ಕೆಡಬೇಡಿರಪ್ಪಾ ತಮ್ಮಂದಿರಾ.

ಪದ
ಹಿಂದೆ ವನವಾಸ ಕಳೆದೂ, ವೃಕ್ಷದೊಳಗೆ ಧನು
ಸವ್ಯಸಾಚಿಗೆ ಕೊಡಬೇಕೆಂದು, ನುಡಿದೆಯಾ
ಅಂಣಾ ಕಾನನದೊಳು ಸೇರಿಕೊಂಡು ಧಾಳಿಧೂಳಿ
ಇಡಿಸುತ್ತಾ ಜೇಷ್ಟನೆಂಬ ಭಾವದಿಂದ ಬಿಟ್ಟೆ ನಿನ್ನನೂ ॥

ಭೀಮ: ಹೇ ಅಗ್ರಜಾ, ಕೌರವನಿಗೋಸ್ಕರ ಅವನವುಪಹತಿಯನು ತಾಳಲಾರದೆ ದ್ಯೂತ ಮುಖದಿಂದ ಸೋತು ನಾರು ವಸ್ತ್ರವನ್ನುಟ್ಟು ಹನ್ನೆರಡು ವರುಷ ವನವಾಸ ಕಳೆದು ಅಜ್ಞಾತವಾಸಕ್ಕೆ ಹೋಗುವ ಸಮಯದಲ್ಲಿ, ಮತ್ಸ್ಯಾಧಿಪತಿಯಾದ, ವಿರಾಟರಾಯನ ಶೃಂಗಾರ ತೋಟದಲ್ಲಿ ಯಿರುವ ಬನ್ನಿಮರಕ್ಕೆ ನಮ್ಮ ಬಾಣ ಬತ್ತಳಿಕೆಯನ್ನು ಕಟ್ಟಿ ಹೋಗುವ ಸಮಯದಲ್ಲಿ ಆ ಖೂಳನಾದ ಅರ್ಜುನನು ಬಂದು ಕೇಳಿದರೆ ಕೊಡು ಎಂಬುದಾಗಿ ಹೇಳಿದೆ. ಭೀಮ ಬಂದು ಕೇಳಿದರೆ ಕೊಡಬೇಡವೆಂದು ಹೇಳಿದೆ. ಆ ಅರ್ಜುನನು ಅಂತಾ ಪರಾಕ್ರಮಿಯೆ, ನಾವೆಲ್ಲಾ ಶಿಖಂಡಿಗಳೋ ಇಂಥ ಮಾತುಗಳನ್ನು ಆಡಿದ್ದೆಯಾದರೆ, ನಿಮ್ಮನ್ನು ಸಂಹಾರ ಮಾಡುತ್ತಿದ್ದೆನು. ಅಗ್ರಜನೆಂಬ ಭಾವವನ್ನು ತಿಳಿದು ಬಿಟ್ಟೆನೋ ಅಗ್ರಜಾ. ಈ ರಣ ಹೇಡಿಯಾದ, ಅರ್ಜುನನನ್ನು ಸಂಹಾರಮಾಡದೆ ಎಂದಿಗೂ ಬಿಡುವುದಿಲ್ಲವೋ ಅಗ್ರಜಾ ॥

ಧರ್ಮಜ: ಅಯ್ಯ ತಮ್ಮಂದಿರಾ  ಇದರ ಅರ್ಥವೇನೆಂದರೆ ವೊಂದು ಕ್ಷಣದೊಳಗೆ ಮನಸ್ಸು ವಿಕಲ್ಪವಾಗುವುದು ಮತ್ತೊಂದು ಕ್ಷಣದೊಳಗೆ ಮೃತ್ಯು ಬೆನ್ನನ್ನು ಬಿಡದೆ ಕಾಯ್ದುಕೊಂಡಿರುವುದು, ಇನ್ನೊಂದು ಕ್ಷಣದೊಳಗೆ, ಯಮಧರ್ಮರಾಯರಲ್ಲಿ, ಕರುಣವಿಲ್ಲದೆ ಹೋಗುವುದು, ಆದ್ದರಿಂದ ಬುದ್ಧಿವಂತರಾದವರು ಗರ್ವವನ್ನು ಆಚರಿಸುವುದಿಲ್ಲ. ನೀವುಗಳು ಗರ್ವವನ್ನು ಬಿಟ್ಟು ಬಿಡುವಂಥವರಾಗಿರಯ್ಯ ತಮ್ಮಂದಿರಾ ॥

ಪದ
ನಿಶಿರಾತ್ರಿಯೊಳು ನಾರಿಯು ಗೃಹವ ಬಿಟ್ಟು
ತೆರಳೆಬಹುದೆ ಅಂಣಾ  ಜೇಷ್ಟ ಅಂಣನೆ
ಪೇಳಿ ನೀವು ಎಂದು ನುಡಿದ ಪಾರ್ಥ ॥

ಅರ್ಜುನ: ಹೇ ಅಗ್ರಜಾ, ದ್ರೌಪದಿಯು, ಈ ನಿಶಿರಾತ್ರೆಯಲ್ಲಿ ಸಜ್ಜಾಗೃಹವನ್ನು ಬಿಟ್ಟು ಹೋಗಬಹುದೇನೋ ಅಂಣಯ್ಯ. ಈ ಖುಲ್ಲೆಯು ಮಾಡಿದ ತಪ್ಪಿಗಾಗಿ ಒಂದು ಪೆಟ್ಟನ್ನು ಹೊಡೆಯುವಂಥವನಾದೆ. ಇಷ್ಟಕ್ಕಾಗಿ ಈ ವಾಯುದಿಟ್ಟನು ಬಂದು, ನನ್ನನ್ನು ಬಹುವಾಗಿ ದುರ್ನುಡಿಗಳನ್ನು ನುಡಿದದ್ದರಿಂದ ನಾನು ಕೋಪದಿಂದ, ರಣಾಗ್ರವನು ಮಾಡುವಂಥವನಾದೆನೊ ಅಗ್ರಜಾ.

ಭಾಮಿನಿ
ಧರಣಿಪಾಗ್ರಣಿ ಕೇಳು, ಇಂದಿನ ಹಗರಣವು
ಯಾರಿಂದ ನಡೆದುದು. ನ್ಯಾಯ ಅನ್ಯಾಯವನು
ಶೋಧಿಸಿ ನೋಡೆಂದನಾ ಪವನಜನೂ ॥

ಭೀಮ: ಅಂಣಾ ಧರ್ಮನಂದನ, ಈ ಅಗಾಧವಾದ ಮಾತು ಯಾರಿಂದ ನಡೆದಿರುವುದು. ಇದನ್ನು ನ್ಯಾಯವೋ ಅನ್ಯಾಯವೋ ನೀವೇ ಯೋಚಿಸಿ ನೋಡುವಂಥವರಾಗಿ ಅಂಣಯ್ಯ ಧರ್ಮಜಾ.

ಭಾಮಿನಿ
ಸತಿಯಳ ಪತಿವ್ರತವಾ  ಅತಿಹಿತರೆಲ್ಲಾ ನೋಡಲಿ,
ಖತಿಯಿಂದ ಹತ್ತಿಸು. ಅಗ್ನಿಯನು ಬೇಗ,
ಸತಿಯಳ ಧರ್ಮವನೂ ॥

ಧರ್ಮಜ: ಅಯ್ಯ ತಮ್ಮಂದಿರಾ, ದ್ರೌಪದಿಯ ಪತಿವ್ರತಧರ್ಮವನ್ನು ನೋಡಬೇಕೆಂದು ನಿಮ್ಮ ಮನಸ್ಸಿಗೆ ವಿಕಲ್ಪವಾಗಿದ್ದೇ ಆದರೆ  ಅಗ್ನಿಕುಂಡಕ್ಕೆ ಹಾಕುವಂಥವರಾಗಿರಯ್ಯ ತಮ್ಮಂದಿರಾ ॥

ಭೀಮ: ಅಗ್ರಜಾ  ತಮ್ಮ ಅಪ್ಪಣೆಯಂತಾಗಲಿ. ಹೇ ಪಾರ್ಥ ಅಗ್ನಿಕುಂಡವನ್ನು ರಚಿಸುವಂಥವನಾಗೂ॥

ಅರ್ಜುನ: ಅಗ್ರಜಾ ಅಗ್ನಿಕುಂಡವನ್ನು ರಚಿಸಿರುತ್ತೇನೆ. ಹೇ ರಮಣಿ ಅಗ್ನಿಕುಂಡದಲ್ಲಿ ನಿಲ್ಲುವಂಥವಳಾಗೂ॥

ಸ್ತೋತ್ರ
ಜಯ ಜಯ ಜನಾರ್ಧನ, ಮುಕುಂದ
ಮುರವೈರಿ ಗರುಡವಾಹನ, ನೀಲಕಂಠ
ಯನ್ನ ಕಷ್ಟವಂ ಪರಿಹರಿಸೋ ಶ್ರೀನಿವಾಸ ॥

ಪದ
ತಮ್ಮ ಫಲುಗುಣ, ತರುಣೀಮಣಿಯಳ ಮಹಿಮೆ
ನೋಡಿದೋ ಮಂಗಳಾಂಗಿಯಾ ॥

ಭೀಮ: ತಮ್ಮಾ ಪಾರ್ಥ, ನಮ್ಮ ಸತಿಯಳ ಮಹಿಮೆಯನ್ನು ನೋಡಿದೆಯಾ. ಇದೂ ಅಲ್ಲದೆ, ಮಂಗಳಾಂಗಿಯು ಮಾಡಿದಂಥ ಕೃತಕವನ್ನು ಕಣ್ಣುತೆರೆದು ನೋಡುವಂಥವನಾದೆಯೇನೋ ಫಲುಗುಣ ಮತ್ತೂ ಹೇಳುತ್ತೇನೆ ॥

ಪದ
ಜರಿದ ಪರಿಯನು, ಮರೆಯೋ ಬೇಗನೆ,
ತಿಳಿಯದೋದೆಯೋ, ಮರುಳೆ ಫಲುಗುಣ ॥

ಭೀಮ: ತಮ್ಮ ಧನಂಜಯ, ನೀನು ನಿಶಿರಾತ್ರಿಯೋಳ್ ಪತಿವ್ರತೆಯಳಾದ ದ್ರೌಪದಿಯನ್ನು ಜರಿದಂಥವನಾದೆ. ನೋಡುವಂಥವನಾಗೂ. ಆದರೆ ತಿಳಿಯದೆ ಕುಹಕ ವಿದ್ಯವನ್ನು ಮಾಡುವಂಥ ವನಾದೆಯೋ ಕಿರೀಟಿ ॥

ಅರ್ಜುನ: ಅಂಣಾ ಭೀಮಸೇನ, ನಾನು ತಿಳಿಯದೆ, ಕುಹಕ ವಿದ್ಯೆಯನ್ನು ಮಾಡುವಂಥವನಾದೆ. ಆದರೆ ದ್ರೌಪದಿಯ ಪತಿವ್ರತಾ ಧರ್ಮವು ಗೊತ್ತಾಗುವಂಥದ್ದಾಯಿತು. ತಮ್ಮ ಅಪ್ಪಣೆ ಪ್ರಕಾರ ಅರಮನೆಗೆ ತೆರಳುತ್ತೇನೋ ಅಗ್ರಜಾ ॥

ಧರ್ಮಜ: ಅಯ್ಯ ತಂಮಂದಿರಾ  ಸರ್ವರೂ ತೆರಳುವಂಥವರಾಗಿರೀ ॥

ರಾಧೆ ರುಕ್ಮಿಣಿ: ಪ್ರಾಣಕಾಂತರಿಗೆ ನಮಸ್ಕರಿಸುವೆವೂ ॥

ಕೃಷ್ಣ: ನಿಮಗೆ ಮಂಗಳವಾಗಲಿ, ಮೇಲಕ್ಕೇಳಿ ನಾರೀಮಣಿಯರೇ ॥

ರಾಧೆ ರುಕ್ಮಿಣಿ: ಪ್ರಾಣಕಾಂತ ಅರಿಕೆ ಮಾಡಿಕೊಳ್ಳುತ್ತೇವೆ.

ಪದ
ಯೇನು ಭೂಷಣವೋ ಪ್ರಾಣನಾಥ,
ಅನುಪಮಗುಣವೈ ಯೇನು ಭೂಷಣವೋ ॥
ಕಂದನಿಗೆ ಸುಂದರಿಯೂ ಮುಂದೆಲ್ಲಿ ದೊರಕಿದಳೋ
ಪ್ರಿಯಾ ಯೇನು ಭೂಷಣವೋ.

ರಾಧೆ ರುಕ್ಮಿಣಿ: ಪ್ರಾಣಕಾಂತರೆ, ಮನೋ ಆನಂದವಾದ ಕಂದನಿಗೆ ತಕ್ಕ ಕನ್ನಿಕೆಯು ದೊರಕಿದಳೋ ಇಲ್ಲವೋ ಹೇಳುವಂಥವರಾಗಿ ಸ್ವಾಮೀ ॥

ಪದ
ಸೌರಾಷ್ಟ್ರ ಮಹಾರಾಷ್ಟ್ರ ಮಾಳವದೇಶದೊಳು
ಪಂಚಬಾಣಗೆ ತಕ್ಕ ಕನ್ನಿಕೆಯು ಇಲ್ಲಾ ॥
ಅಲ್ಲಿಂದ ಕಮಲಾವತಿಯ,
ಪುರವನ್ನು ವೊಳಹೊಕ್ಕು ದ್ರೌಪದಿಯೂ॥

ಕೃಷ್ಣ: ಕೇಳಿದಿರೇನೆ ಪ್ರಾಣಕಾಂತೆಯರೆ, ನನ್ನ ತಂಗಿಯಾದ ದ್ರೌಪದಿಯು ಸೌರಾಷ್ಟ್ರ, ಮಹಾರಾಷ್ಟ್ರ ದೇಶಂಗಳನ್ನು ನೋಡಿ ಅಲ್ಲಿಂದ ಮುಂದಕ್ಕೆ ಕಮಲಾವತಿ ಪಟ್ಟಣವನ್ನು ವೊಳಹೊಕ್ಕು, ಕಮಲಭೂಪಾಲನ ಸುತೆಯಾದ ರತೀದೇವಿಯನ್ನು ಗೊತ್ತು ಮಾಡಿಕೊಂಡು ಬಂದಿರುತ್ತಾಳೆ. ಇದೂ ಅಲ್ಲದೆ ನಾಳೆ ಹದಿನೈದನೆ ಗಳಿಗೆಗೆ ಸರಿಯಾಗಿ, ಲಗ್ನವನ್ನು ನಡೆಸಬೇಕು. ನೀವು ತಡವನ್ನು ಮಾಡದೆ ಹೊರಡುವಂಥವರಾಗಿರೈ ಪ್ರಾಣಕಾಂತೆಯರೆ ॥

ರಾಧೆ ರುಕ್ಮಿಣಿ: ಸ್ವಾಮೀ ಪ್ರಾಣಕಾಂತರೆ ನಮ್ಮ ಮನಸ್ಸಿಗೆ ಆನಂದವಾಯಿತು. ಅಪ್ಪಣೆಯಂತೆ ಹೊರಡುತ್ತೇವೆ ॥

ಕೃಷ್ಣ: ಎಲೈ ಸಾರಥಿ, ನಮ್ಮ ಅಂಣಯ್ಯನವರಾದ ಬಲರಾಮ ದೇವರನ್ನು ಕರೆದುಕೊಂಡು ಬರುವಂಥವನಾಗೂ, ನಮೋ ನಮೋ ಅಂಣಯ್ಯ.

ಬಲರಾಮ: ಧೀರ್ಘಾಯುಷ್ಯಮಸ್ತು ಬಾರಯ್ಯ ಪಕ್ಷಿವಾಹನ  ತಮ್ಮಾ ಪಕ್ಷಿವಾಹನ. ನನ್ನನ್ನು ಕರೆಸಿದಂಥ ಅತಿಶಯವೇನು ॥

ಕೃಷ್ಣ: ಅಂಣಯ್ಯ ತಮ್ಮನ್ನು ಕರೆಸಿದ ಅಭಿಪ್ರಾಯವೇನೆಂದರೆ ಕಂದನಾದ ಮನ್ಮಥನಿಗೆ ಕಮಲಾವತಿ ಪಟ್ಟಣದ ಕಮಲರಾಜನ ಪುತ್ರಿಯಾದ ರತೀದೇವಿಯನ್ನು ಕೊಡುವಂತೆ ನಿಶ್ಚಯ ಮಾಡಿಕೊಂಡು ಬಂದು ನಾಳೆ, ಹದಿನೈದನೆ ಗಳಿಗೆಗೆ ಸರಿಯಾಗಿ ಮಹೂರ್ತವಾಗಬೇಕಾಗಿದೆ. ಆದ್ದರಿಂದ ತಮ್ಮನ್ನು ಕರೆಸಿರುತ್ತೇನೆ, ಕಾರ‌್ಯಕ್ಕೆ ಹೊರಡುವಂಥವರಾಗಿ ಅಂಣಯ್ಯ.

ಪದ
ಅನುಜಾ ಲಾಲಿಸು ಇಂದು ವನಜನಾಭನ ಲಗ್ನ
ನಡೆಸಲು ದಿನ ಕಳೆದು ಪೋಗುವದು ತಮ್ಮಾ ॥

ಬಲರಾಮ: ತಮ್ಮಾ ಮುರಾಂತಕ, ಶಹಬ್ಬಾಷ್ ನನ್ನ ಮನಸ್ಸಿಗೆ ಬಹಳ ಸಂತೋಷವಾಗುವಂಥದ್ದಾಯಿತು. ಆದರೆ ಕಂದನಾದ ಮನ್ಮಥನ ಲಗ್ನವನ್ನು ಶೀಘ್ರದಿಂದ ನಡೆಸುವಂಥವನಾಗೊ ಅನುಜಾ ॥ಹೇಳುತ್ತೇನೆ॥

ಪದ
ಕರೆಸಿಕೊ ಹರನನ್ನು, ಅಮರ ಅಗ್ನಿಯರನ್ನು,
ತ್ವರಿತದಿಂದಲಿ ಪರಿಣಯವ ನೀ ನಡೆಸೋ ॥

ಬಲರಾಮ: ಅಯ್ಯ ಮುರಾಂತಕ, ಜಾಗ್ರತೆಯಾಗಿ, ಕೈಲಾಸವಾಸನಾದ ಸಾಂಬಮೂರುತಿಯನ್ನು ಕರೆಸಬೇಕೂ. ಬ್ರಹ್ಮದೇವರು ಮೊದಲಾದವರನ್ನು ಕರೆದುಕೊಂಡು ಲಗ್ನಕ್ಕೆ ಹೊರಡುವಂಥವನಾಗಯ್ಯ ಮುರಾಂತಕ ॥

ಪದ
ಮುತ್ತುಗಳ ಸುರಿಸುರಿದು ಮುಂದೆ ಗೋಡೆಯೊಳೂ
ಅರ್ತಿಯಿಂ ಮಾಡಿಸೈ ದ್ವಾರಕಾಪುರವಾ ॥

ಬಲರಾಮ: ತಮ್ಮಾ ಪಕ್ಷಿವಾಹನ, ಮುತ್ತು ರತ್ನ ವಜ್ರ ವೈಢ್ಯೂರ‌್ಯದಿಂದ ಪಟ್ಟಣವನ್ನು ಶೃಂಗಾರ ಮಾಡುವಂಥವನಾಗೈ ಅನುಜಾ ॥ಮತ್ತೂ ಹೇಳುತ್ತೇನೆ ॥

ಪದ
ಪಟ್ಟೆ ಪೀತಾಂಬರ, ಪರಮ ವಿಧದಿಂದ, ಪಟ್ಟಣದೊಳಗೆಲ್ಲಾ
ಮೇಲ್ಕಟ್ಟ ಕಟ್ಟಿಸು ತಮ್ಮಾ ಎಂದನು ಬಲರಾಮಾ ॥

ಬಲರಾಮ: ತಮ್ಮಾ ಮುರಾಂತಕ, ಪಟ್ಟೆ ಪೀತಾಂಬರಗಳಿಂದಲೂ, ಮಕರ ತೋರಣಗಳಿಂದಲೂ, ಮೇಲ್ಕಟ್ಟು ಕಟ್ಟಿಸುವಂಥವನಾಗೋ ಪಕ್ಷಿವಾಹನ, ಮತ್ತು ದೇಶದೇಶದ ಅರಸರಿಗೆ ವೋಲೆಯನ್ನು ಬರೆದು ಕಳುಹಿಸುವಂಥವನಾಗು. ಬ್ರಾಹ್ಮಣರನ್ನು ಕರೆದುಕೊಂಡು ಹೊರಡುವಂಥವನಾಗೈ ತಮ್ಮಾ ಮುರಾಂತಕ ಮತ್ತೂ ಹೇಳುತ್ತೇನೆ ॥

ಪದ
ತ್ವರಿತದಿಂದಲಿ ಪೋಗಿ, ಭರದಿ ಪಾಂಡವರಿಗೆ,
ಹರುಷದಿಂ ಪತ್ರಿಕೆಯ ಕೊಟ್ಟು ಕಳುಹಿಸೈ ॥

ಬಲರಾಮ: ಹೇ ತಮ್ಮಾ, ಅತಿಹರುಷದಿಂದ, ಹಸ್ತಿನಾವತಿಯಲ್ಲಿರುವ ಪಾಂಡವರಿಗೆ, ವಕ್ಕಣೆಯನ್ನು ಜೋಡಿಸಿ ತಂಗಿಯಾದ ದ್ರೌಪದಿಯು, ಸರ್ವರು ಆದಿಯಾಗಿ ಬರುವಂತೆ ಲಿಖಿತವನ್ನು ಕಳುಹಿಸುವಂಥವನಾಗಯ್ಯ ತಮ್ಮ ॥

ಕೃಷ್ಣ: ಅಂಣಯ್ಯ, ತಮ್ಮ ಅಪ್ಪಣೆ ಪ್ರಕಾರ ಲಗ್ನಪತ್ರಿಕೆಯನ್ನು ದೇಶದೇಶದ ಅರಸರಿಗೆ ಕೊಟ್ಟು ಕಳುಹಿಸುತ್ತೇನೆ ಅಗ್ರಜಾ ॥ಭಲೈ ಸಾರಥಿ ಭೂಸುರೋತ್ತಮರನ್ನು ಕರೆದುಕೊಂಡು ಬರುವಂಥವನಾಗೂ॥

ಬ್ರಾಹ್ಮಣರು: ಅಯ್ಯ ಕೃಷ್ಣಾ ನಮ್ಮನ್ನು ಕರೆಸಿದ ಕಾರಣವೇನೂ ॥

ಕೃಷ್ಣ: ಸ್ವಾಮಿ ಭೂಸುರೋತ್ತಮರೆ, ಹಸ್ತಿನಾವತಿಯಲ್ಲಿರುವ ನಮ್ಮ ಭಾವಯ್ಯನವರಿಗೂ ಮತ್ತು ದ್ರೌಪದಿಗೆ ಸಹಿತ ವಕ್ಕಣೆಯನ್ನು ಜೋಡಿಸಿ ಚಾರಕನ ಮುಖೇಣ ಕಳುಹಿಸುವಂಥವರಾಗಿ ॥

ಬ್ರಾಹ್ಮಣ: ಯಲಾ ಹನುಮನಾಯ್ಕ, ಇಲ್ಲಿ ಬಾ, ಈ ಪತ್ರಿಕೆಯ್ನ ತೆಗೆದುಕೊಂಡು ಹೋಗಿ ಹಸ್ತಿನಾವತಿಯಲ್ಲಿರುವ ಪಾಂಡವರಿಗೆ ಕೊಟ್ಟು ಬಾ ॥

ಚಾರಕ: ಧರ್ಮರಾಯರಿಗೆ ನಮಸ್ಕರಿಸುವೆನೂ ॥

ಧರ್ಮರಾಯ: ಯಾರಯ್ಯ ನೀನು, ಎಲ್ಲಿಂದ ಬರುವಂಥವನಾದೆ ॥

ಚಾರಕ: ಸ್ವಾಮೀ, ನಾನು ಕ್ರಿಷ್ಣದೇವರ ಕಡೆ ಹನುಮನಾಯ್ಕ. ಕ್ರಿಷ್ಣದೇವರು ಈ ಪತ್ರಿಕೆಯನ್ನು ಕೊಟ್ಟು ಕಳುಹಿಸಿರುತ್ತಾರೆ. ತೆಗೆದುಕೊಳ್ಳುವರಾಗಿ ಸ್ವಾಮೀ ॥

ಧರ್ಮಜ: ಅಯ್ಯ ತಮ್ಮಂದಿರಾದ ಭೀಮಾರ್ಜುನರೆ, ದ್ವಾರಕಾಪುರದೊಡೆಯರಾದ, ನಮ್ಮ ಭಾವಯ್ಯನವರು ಕೊಟ್ಟು ಕಳುಹಿಸಿರುವ ಪತ್ರಿಕೆಯನ್ನು ಓದುವಂಥವರಾಗಿರೈ ತಮ್ಮಂದಿರಾ ॥

ಭೀಮ: ಅಗ್ರಜಾ ॥ಅಪ್ಪಣೆ ಪ್ರಕಾರ ವೋದುತ್ತೇನೆ ನೋಡುವಂಥವರಾಗಿ. ಕುಂಭಿಣಿಗೆ ರಾಜಾಧಿರಾಜ ಶಶಿವಂಶದೋಳ್ ಸಂಭ್ರಮದಿ ಮೆರೆಯುವ ರವಿಸೂನುವಿನ ಸುತೆಗೆ ಏಕೋಭಾವದಿಂದ ಬರೆದ ಲಿಖಿತ. ಎನ್ನಯ ಸುತನಿಗೆ ಪರಿಣಯವಂ ಗಾಂಭೀರ‌್ಯದಿಂದೆಸಗುವೆನೂ. ಸರ್ವರೂ ಈ ಕಾರ‌್ಯಕ್ಕೆ ಆಗಮಿಸಬೇಕೆಂದು ಬರೆದಿರುತ್ತಾರೈ ಅಗ್ರಜಾ ॥

ಧರ್ಮಜ: ಅಯ್ಯ ತಂಮಂದಿರಾ, ಕುಂಭಿಣಿಗೆ ಸರಿಸಮಾನವಾದ ಸಮುದ್ರದಂತಿರುವ ನಮಗೆ, ನಮ್ಮ ಭಾವಯ್ಯನವರು, ಬರೆದಿರುವ ಲಿಖಿತವನ್ನು ನೋಡುವಂಥವರಾದಿರೋ. ಆದರೆ ನಮ್ಮ ಸತಿಯಾದ ದ್ರೌಪದಿಯು ಮಾಡಿದ ಕೃತಕವನ್ನರಿಯದೆ ಅಗ್ನಿ ಕುಂಡಕ್ಕೆ ಹಾಕಿಸಿ ಸ್ತ್ರೀಹತ್ಯವೆಂಬ ಪಾತಕಕ್ಕೆ ಗುರಿಯಾಗುವಂತೆ ಮಾಡುತ್ತಿದ್ದಿರಿ. ಆಗ ನಾನು ತಡೆದಿದ್ದು ನಿಧಾನವಲ್ಲವೇನಿರಯ್ಯ ತಮ್ಮಂದಿರಾ. ಜಾಗ್ರತೆಯಿಂದ ರಥ ಪತಾಕೆ ಸಮೇತರಾಗಿ, ದ್ವಾರಕಾಪುರಕ್ಕೆ ಹೊರಡುವಂಥವರಾಗಿರೈ ತಮ್ಮಂದಿರಾ॥

ಪಾಂಡವರು: ಭಾವಯ್ಯನವರಿಗೆ ನಮಸ್ಕರಿಸುವೆವೂ ॥

ಕೃಷ್ಣ: ನಿಮಗೆ ಮಂಗಳವಾಗಲಿ ಬಾರಮ್ಮ ತಂಗಿ ದ್ರೌಪತ ಅಯ್ಯ ಧರ್ಮಜ, ಸರ್ವರೂ ಆದಿಯಾಗಿ ಬರುವಂಥವರಾದಿರ ॥

ಧರ್ಮಜ: ಭಾವಯ್ಯ, ಸರ್ವರಾದಿಯಾಗಿ ಬಂದಿರುತ್ತೇವೆ ॥

ಕೃಷ್ಣ: ಅಯ್ಯ ಧರ್ಮಜ, ನಿಮ್ಮಯ್ವರಿಗೆ ತಾಯಿಯಾದ ಕುಂತೀದೇವಿಯು, ದ್ರೌಪದಿಯು  ನಿನ್ನ ತಮ್ಮಂದಿರಾದ ಭೀಮ ಅರ್ಜುನ ನಕುಲ ಸಹದೇವರಾದಿಯಾಗಿ ಕ್ಷೇಮದಲ್ಲಿರುವರೇನಯ್ಯ ಧರ್ಮಜಾ. ಆದರೆ ನನ್ನ ಮಗನಾದ ಮನ್ಮಥನ ಲಗ್ನವನ್ನು ನೀವೆಲ್ಲರೂ ನಿಂತು ನೆರವೇರಿಸಬೇಕು. ಇದೂ ಅಲ್ಲದೆ ಬಂಧು-ಬಾಂಧವರನ್ನು ಸುಂದರವಾದ ಮಂದಿರದಲ್ಲಿ ವುಪಚರಿಸುವಂಥವರಾಗಿರಯ್ಯ ಧರ್ಮಜಾ॥ಎಲೈ ಸಾರಥಿ, ಕೈಲಾಸ ವಾಸನಾದ ಈಶ್ವರ ಮಹದೇವರನ್ನು ಕರೆದುಕೊಂಡು ಬಾ ॥

ಪದ
ಶಂಕರಾ ವಸುದೇವಾ ವಂದಿಪೆನೈ,
ವಸುದೇವಾ ಜಾತಾ, ವಂದಿಪೆ ಲೋಲ॥

ಕೃಷ್ಣ: ನಮೋ ನಮೋ ಈಶ್ವರ ಮಹದೇವರೆ ॥

ಈಶ್ವರ: ನಿನಗೆ ಮಂಗಳವಾಗಲಯ್ಯ ಮುರಾಂತಕ, ನನ್ನನ್ನು ಕರೆಸಿದ ಕಾರಣವೇನು ಹೇಳುವಂಥವನಾಗೂ॥

ಕೃಷ್ಣ: ಸಾಂಬ ಮೂರುತಿ, ಬ್ರಹ್ಮದೇವನು ಬರಲಿ ಹೇಳುತ್ತೇನೆ. ಎಲೈ ಸಾರಥಿ ಬ್ರಹ್ಮದೇವರನ್ನು ಕರೆದುಕೊಂಡು ಬರುವಂಥವನಾಗೂ ॥

ಬ್ರಹ್ಮ: ನಂದಿವಾಹನ, ನೀಲಕಂಠ, ಪೊರೆಯೊ ಶಂಭೋ ಶಂಕರಾ ॥

ಕೃಷ್ಣ: ಬ್ರಹ್ಮ ದೇವರಿಗೆ ನಮಸ್ಕರಿಸುವೆನೂ ॥

 

(ಕೃಷ್ಣ ಪರಿವಾರ ಸಮೇತ ಕಮಲಾಪುರಕ್ಕೆ ತೆರಳುವುದು)

ಮೇಗಾಸ್ತಿನಿ: ಹರಹರಾ, ನಾವು ಯಿರುವ ವನಾಂತರದಲ್ಲಿ ನರ ಮನುಷ್ಯರ ವಾಸನೆಯು ಬರುತ್ತಿರುವುದು. ಹರಹರಾ ಮುಂದೆ ಹೋಗಿ ನೋಡುತ್ತೇನೆ ॥

ಪದ
ಆರೆಲೊ ಬಂದವನೀಗ, ಸಾರುತ ದಾನವರರಿಯದೆ,
ನಾವಿರುವಂಥಡವೀಗೆ, ನರಕುರಿಗಳಂದದಿ ನೀವೂ ॥

ಮೇಗಾಸ್ತಿನಿ: ಯಲೈ ನರಕುರಿಗಳೆ, ನಾವಿರುವ ಘೋರಾರಣ್ಯಕ್ಕೆ ಬರಲು ಕಾರಣವೇನು, ನಾನು ನರಮನುಷ್ಯರ ಮಾಂಸವಿಲ್ಲದೆ ಬಹಳ ದಿವಸದಿಂದ ಹಂಬಲಿಸುತ್ತಿದ್ದೆನು. ಈಗ ನನ್ನ ಕೈಗೆ ಸಿಕ್ಕಿದ್ದು ಪರಮ ಸಂತೋಷವಾಯಿತು, ಎಲೈ ನರಮಾನವ ಹೇಳುತ್ತೇನೆ ॥

ಪದ
ಕೊಲ್ಲದೆ ಬಿಡೆನೆಲವೋ  ನಿಮ್ಮೆಲ್ಲರ ನಾನೀಗ
ಖುಲ್ಲೆಯು ಗರ್ಜಿಸಿ ಕೇಳುತ ನಿಲ್ಲಲು, ತಾ ಬೇಗ ॥

ಮೇಗಾಸ್ತಿನಿ: ಎಲೈ ನರಕುರಿಗಳೆ, ನಿಮ್ಮನ್ನು ಕೊಲ್ಲದೆ ಎಷ್ಟು ಮಾತ್ರಕ್ಕೂ ಬಿಡುವುದಿಲ್ಲ, ಕಂಡೆಯೋ, ಈ ಕ್ಷಣದಲ್ಲಿಯೇ ಸಂಹಾರ ಮಾಡಿ, ನಿಮ್ಮ ವುದರ ಮಾಂಸವನ್ನು, ಭಕ್ಷಣೆಯನ್ನು ಮಾಡಿ ನನ್ನ ಮನಸ್ಸು ಸಂತೋಷಪಡಿಸಿಕೊಳ್ಳುತ್ತೇನೆ, ನೋಡುವಂಥವರಾಗಿರೋ  ನರಕುರಿಗಳೇ ॥

ಪದ
ಪಕ್ಕೆಯಲುವಿಗೀಗ ನಾನು ಪುಪ್ಪಸವರಿ
ತಿನ್ನುವೆನು ನರಮಾಂಸ ಬಹುರುಚಿಯೂ ॥

ಮೇಗಾಸ್ತಿನಿ: ಎಲೈ ಭಂಡರೆ ನರಮಾಂಸ ಬಹಳ ರುಚಿಯಾಗಿರುವುದರಿಂದ ನಿಮ್ಮ ಪಕ್ಕೆ ಯಲುವಿಗೆ ವುಪ್ಪನ್ನು ಸವರಿಕೊಂಡು ಚಪ್ಪರಿಸದೆ ಎಂದಿಗೂ ಬಿಡುವುದಿಲ್ಲ. ನನ್ನಲ್ಲಿ ಯುದ್ದಕ್ಕೆ ನಿಲ್ಲುವಂಥವರಾಗಿರೋ ನರ ಕುರಿಗಳೇ॥

ಪದ
ನಿಲ್ಲು ನಿಲ್ಲು ಸಮರಕೀಗ, ಖುಲ್ಲ ದಾನವಿ, ಅಡಗಿಸುವೆನು
ನಿನ್ನ ಸೊಲ್ಲ ಯೆನುತ ಹರಿಯು ಚಕ್ರವೆಸೆದನೂ ॥

ಮೇಗಾಸ್ತಿನಿ: ಎಲೈ ದೈತ್ಯ ಮುಂಡೆ, ನಾವುಗಳು ಶುಭ ಕಾರ‌್ಯಕ್ಕೆ ಹೋಗುವ ಸಮಯದಲ್ಲಿ ನಮ್ಮನ್ನು ತಡೆಯಬೇಡ. ವೊಳ್ಳೇ ಮಾತಿನಿಂದ ಹಿಂದಕ್ಕೆ ಹೋಗಿ, ನಿನ್ನ ಪ್ರಾಣವನ್ನು ವುಳಿಸಿಕೊ. ಇಲ್ಲವಾದರೆ ಯುದ್ಧಕ್ಕೆ ನಿಲ್ಲುವಂಥವಳಾಗೆ ದೈತ್ಯಮುಂಡೆ ॥

 

(ಯುದ್ಧ: ಮೇಗಾಸ್ತಿನಿ ಬೀಳುವುದು)

ಪದ
ಯೆಲಾ ದೈತ್ಯಮುಂಡೆ  ನಿನ್ನ ಪಾಡೇೀನಾಗಿರುವುದು ನೋಡು
ಯೇನು ಸೋಜಿಗವಿದು ದೇವಾ ಮಹಾನುಭಾವಾ,
ಶುಭಕಾರ‌್ಯದೊಳು ಇಂಥ ವಿವರವು ನಡೆದುದು ॥
ಮುಂದೇನು ತಿಳಿಯದು ದೇವಾ ಹರಮಹಾದೇವಾ ॥

ಕೃಷ್ಣ: ಅಯ್ಯ ಕೈಲಾಸ ವಾಸನೆ, ವಾಣಿವರನಾದಂಥ ಬ್ರಹ್ಮದೇವನೆ, ಎಂತಾ ದೋಷವು ಸಂಭವಿಸುವಂಥದ್ದಾಯಿತು  ಮುಂದೇನಾಗುವುದೋ ತಿಳಿಯಲಿಲ್ಲವಲ್ಲಾ ಸಾಂಬಾ ॥

ಮೇಗಾಸುರ: ಎಲೈ ನರಮಾನವ  ಇಂದಿನ ದಿವಸದಲ್ಲಿ ನಾವು ಇರುವಂಥದ್ದನ್ನು ತಿಳಿಯದೇ ನೀವು ಘೋರಾರಣ್ಯಕ್ಕೆ ಬರಲು ಕಾರಣವೇನು  ಪೇಳುವಂಥವರಾಗಿರೋ ನರಮಾನವಾ ॥

ಪದ
ಕೊಲ್ಲದೆ ಬಿಡೆನೆಲವೊ  ನಿಮ್ಮೆಲ್ಲರ ನಾನೀಗ
ಹಲ್ಲನು ಗರ್ಜಿಸಿ  ಕೇಳುತ ನಿಲ್ಲಲು ಹರಿ ಬೇಗಾ ॥

ಮೇಗಾಸುರ: ಎಲಾ ನರಮಾನವಾ  ನೀವು ಬಂದಿರುವುದನ್ನು ನೋಡಿದ್ದೇಯಾದರೆ, ನನಗೆ ಬಹಳ ಸಂತೋಷವಾಯಿತು  ಈ ಕ್ಷಣದಲ್ಲಿಯೇ ಸಂಹಾರ ಮಾಡದೆ, ಯೆಂದಿಗೂ ಬಿಡುವುದಿಲ್ಲಾ.

ಪದ
ನೀಚನೆ ಪೋಗುವುದ್ಯಾತಕೆ. ನಾಚಿಕೆ ಬಾರದೇನೋ
ವಾಚಿಸಬೇಡವೋ ರಾಕ್ಷಸರಾಚರ ಸುರದೇನೋ ॥

ಕೃಷ್ಣ: ಯೆಲಾ ಪುಂಡನಾದ ದೈತ್ಯನೆ, ಭಂಡತನದಿಂದ ನಮ್ಮನ್ನು ತಡೆಯಬೇಡ ಕಂಡೆಯೋ ಆದರೆ ನಿನ್ನನ್ನು ತುಂಡು ತುಂಡಾಗಿ ಕತ್ತರಿಸುವೆನು  ಅತಿಜಾಗ್ರತೆಯಿಂದ ಯುದ್ಧಕ್ಕೆ ನಿಲ್ಲುವಂಥವನಾಗು॥

ಪದ
ಯೆಂದ ಮಾತಕೇಳಿ ದನುಜನಂದು ಗರ್ಜಿಸಿ
ನಿಂದ ಪರಿಯ ತಾನು ಕಂಡು ಹರಿಯು ಗರ್ಜಿಸೇ ॥

ಮೇಗಾಸುರ: ಯೆಲಾ ಕೃಷ್ಣ ಸದರದಿಂದ ಒದರಬೇಡ ಕಂಡೆಯೋ, ನನ್ನಲ್ಲಿ ಕದನವನ್ನು ಮಾಡಿ ಗೆಲ್ಲುವಂಥವನಾಗೆಲಾ ಗೊಲ್ಲ ಮತ್ತೂ ಹೇಳುತ್ತೇನೆ.

ಪದ
ಮಾಡು ಯುದ್ಧವ ನೋಡು ಸಾಹಸ
ಜೋಡಿಯಾಯಿತೋ ಗೌಡದಿಂದಲೀ॥

ಕೃಷ್ಣ: ಯೆಲಾ ದೈತ್ಯ, ಯೇನ ಬಗುಳಿದೆಯೋ ನತದೃಷ್ಟ ಅತಿಜಾಗ್ರತೆಯಿಂದ ರಣಾಗ್ರಕ್ಕೆ ನಿಲ್ಲುವಂಥವನಾಗು ನಿನ್ನ ಸಾಹಸವನ್ನು ತೋರಿಸುತ್ತೇನೆ ॥