ಪದ
ಸೊಕ್ಕಿನ ಮಾತುಗಳೇತಕೊ ನಿನಗೆ ವಕ್ಕಳಿಸದಿರೆಲವೋ
ಅಕ್ಕರವನು ಬಿಡುತಕ್ಕ ವುಪಾಯದಿ  ಬಕ್ಕೆಯ ಹಾಕುವೆನೂ ॥

ಮೇಗಾಸುರ: ಯೆಲಾ ಕ್ರಿಷ್ಣಾ, ನಿನ್ನ ಸೊಕ್ಕಿನ ಮಾತುಗಳನ್ನು ನಾನು ಬಲ್ಲೆ  ಅಂಥ ಶೂರನಾದರೆ, ನನ್ನಲ್ಲಿ ರಣಾಗ್ರವನ್ನು ಮಾಡುವಂಥವನಾಗೆಲಾ ಭಂಡ ॥

ಪದ
ಖುಲ್ಲ ಬಂದೆ ಜಗಳಬೇಡ  ತಡೆದ ನಮ್ಮನೆಲ್ಲದೀಗ
ಕೊಲ್ಲುವೆಯ ನಮ್ಮ ಯೆಂದನೂ ॥

ಕೃಷ್ಣ: ಎಲಾ ಖುಲ್ಲನಾದ ದೈತ್ಯನೆ, ನಾವುಗಳು ಶುಭಕಾರ‌್ಯಕ್ಕೆ ಹೋಗುವ ಸಮಯದಲ್ಲಿ ಈ ಮಧ್ಯಮಾರ್ಗದಲ್ಲಿ ತಡೆದಿದ್ದೇಯಾದರೆ ನಿನ್ನನ್ನು ಕೊಲ್ಲದೆ ಎಂದಿಗೂ ಬಿಡುವುದಿಲ್ಲವೋ ದೈತ್ಯ ॥

ಪದ
ಭಾಪುಯೆಂದು ಯಾಕೋ ನಿನಗೆ ವಿಪ್ರತಾಪವು
ರೂಪುಗೆಡಿಸುತ್ತಿರುವೆ ಎಂದು. ಈ ಪರಾಕ್ರಮಾ ॥

ಮೇಗಾಸುರ: ಎಲೈ ಲಂಡಿ, ಸ್ಪುಟತರವಾದ ವಾಕ್ಯಗಳಿಂದ ಪಟುಪರಾಕ್ರಮಿಯಂತೆ ಬಗುಳಬೇಡ ಕಂಡೆಯೋ. ಆದರೆ ಲಟಕಟಿಸಿ ನಿನ್ನನ್ನು ತಟಕಸಹಿತ ಕೊಲ್ಲುವೆನೊ ಭಂಡ ॥

ಪದ
ತಂಗಿಯನ್ನು ಕೊಂಡೆನೆಂಬ ಗರ್ವವಿರುವುದೇ
ಭಂಗಪಡಿಸದೀಗ ಬಿಡೆನು ಪುಂಡಬಾಲನೆ ॥

ಮೇಗಾಸುರ: ಎಲಾ ಲಂಡಿಯಾದ ಕೃಷ್ಣನೇ ಕೇಳು. ತಂಗಿಯಾದ ಮೆಗಾಸ್ತಿನಿಯನ್ನು ಕೊಂದೆನೆಂಬ ಗರ್ವವನ್ನು ಯನ್ನ ಮುಂದೆ ತೋರಿಸುವಂಥವನಾಗೊ ಗೊಲ್ಲ ॥

ಕೃಷ್ಣ: ಎಲಾ ದೈತ್ಯ. ಯುದ್ಧಕ್ಕೆ ನಿಲ್ಲುವಂಥವನಾಗೂ ॥

ಭಾಮಿನಿ
ಧರಣಿಪತಿ ಕೇಳಿಂತು ಮೆರೆವ ದೈತ್ಯನನು
ಸಂಹರಿಸಿದೆನು. ಬಳಿಕಂ ಹರಿಹರರೆಲ್ಲ
ವೊಟ್ಟಾಗಿ ನಡೆದರು ಕಮಲನ ಪಟ್ಟಣಕ್ಕೆ.

ಕೃಷ್ಣ: ಅಯ್ಯ ಸಾಂಬಮೂರುತಿ, ಬ್ರಹ್ಮದೇವರೆ ಮೊದಲಾದವರೆಲ್ಲಾ ಕೇಳುವಂಥವರಾಗಿ. ಈ ಖೂಳರಾದ ದೈತ್ಯರನ್ನು ಸಂಹಾರ ಮಾಡಿದೆನು. ಇನ್ನು ಸಾವಕಾಶವಾಗುವುದು ಕಮಲಾವತಿ ಪಟ್ಟಣಕ್ಕೆ ತೆರಳುವಂಥವರಾಗಿ॥

ಎಲೈ ಸಾರಥಿ ಶ್ರೀಕೃಷ್ಣದೇವರ ದಿಬ್ಬಣವು ಬಂದಿರುವುದೆಂದು ಕಮಲ ಭೂಪಾಲನಿಗೆ ತಿಳಿಸುವಂಥವನಾಗೂ॥

ಸಾರಥಿ: ನಮೋ ನಮೋ ಕಮಲ ಭೂಪಾಲರೆ ॥

ಕಮಲ: ಸಾರಥಿ ವರ್ತಮಾನವೇನೂ ॥

ಸಾರಥಿ: ಸ್ವಾಮಿ ಕ್ರಿಷ್ಣದೇವರ ದಿಬ್ಬಣವು ಬಂದಿರುವುದೂ ॥

ಕಮಲ: ಬಂದಂಥ ದಿಬ್ಬಣವನ್ನು ಮರ‌್ಯಾದೆಯಿಂದ ಕರೆದುಕೊಂಡು ಬಾ ॥

ಕೃಷ್ಣ: ನಮೋ ನಮೋ ಕಮಲಭೂಪಾಲ ॥

ಕಮಲ: ನಿಮಗೆ ಮಂಗಳವಾಗಲಿ  ಕೃಷ್ಣದೇವರೆ. ಸರ್ವರೂ ಆದಿಯಾಗಿ ಬರುವಂಥವರಾದಿರ ॥ಅಲ್ಲದೆ ಮುಂದಿನ ಕಾರ‌್ಯವನ್ನು ನಡೆಸುವಂಥವರಾಗಿ. ಭಲೈ ಸಾರಥಿ ಬಂದಿರುವ ಅರಸರಿಗೆ ಬೇರೆ ಬೇರೆ ಬಿಡಾರವನ್ನು ಕೊಟ್ಟು ಸತ್ಕರಿಸುವಂಥವನಾಗೂ  ಹೇ ರಮಣಿ ಹೇಳುತ್ತೇನೆ ॥

ಪದ
ಕಾಂತೆ ಲಾಲಿಸಿಕೇಳು ॥ಬೇಗದಿಂದುಪಚರಿಸೂ
ಬಂದಿಹ ಜನರಿಗೆ ವುಪಚರಿಸಿ ನಾರೀ ॥

ಕಮಲ: ಎಲೈ ಕಾಂತೆ, ಹರುಷದಿಂದ ಪರಿಣಯಕ್ಕೆ ಬಂದ ದ್ರೌಪದಾದೇವಿ ಮೊದಲಾದ ಸ್ತ್ರೀಯರನ್ನು ಸತ್ಕರಿಸುವಂಥವಳಾಗೂ. ಇದೂ ಅಲ್ಲದೆ ಮಂಟಪದಲ್ಲಿ ಶೋಬಾನಂಗಳನ್ನು ಮಾಡಿಸುವಂಥವಳಾಗೆ ರಮಣಿ॥

ಚಂದ್ರಮತಿ: ರಮಣ, ತಮ್ಮ ಅಪ್ಪಣೆಯಂತೆ ಮಾಡಿಸುವೆನು ॥ಅಮ್ಮಾ ದ್ರೌಪದಾದೇವಿ ಈ ಕಾರ‌್ಯವು ನಿನ್ನದಲ್ಲವೆ. ಶೀಘ್ರದಿಂದ ಪುತ್ರಿಯನ್ನು ಶೃಂಗರಿಸಿ ಧಾರಾಮಂಟಪಕ್ಕೆ ಕರೆತರುವರಾಗಿ ॥

ದ್ರೌಪದಿ: ತಮ್ಮ ಅಪ್ಪಣೆಯಂತೆ ಸರ್ವಕಾರ್ಯವನ್ನು ಸಿದ್ಧಪಡಿಸಿಕೊಂಡು ಬರುತ್ತೇನೆ॥

ಪದ
ದೇವ ಮಾಧವ  ಮಗಧಸುತನಿಗೆ ಯನ್ನ
ಕುವರಿಯ ಕೊಡುವೆನೆಂದು ಮೊದಲೆ ಪೇಳಿದ್ದೆನೂ ॥

ಕಮಲ: ಅಯ್ಯ ಕೃಷ್ಣದೇವರೆ, ಮಗಧ ದೇಶವನ್ನು ಆಳುವಂಥ ಕೌಂಡ್ಲೀಕನಿಗೆ, ನನ್ನ ಕುವರಿಯನ್ನು ಕೊಡುತ್ತೇನೆಂದು ಮೊದಲೇ ಹೇಳಿದ್ದೆನು. ಆದ್ದರಿಂದ ಆತನಿಗೆ ವೋಲೆಯನ್ನು ಕೊಡದೆ ಇರುವೆನು. ನೀವುಗಳು ತಡಮಾಡದೆ ಲಗ್ನವನ್ನು ಬೆಳೆಸುವಂಥವರಾಗಿ.

ಕೃಷ್ಣ: ಅಯ್ಯ ಕಮಲಭೂಪಾಲ ಬ್ರಾಹ್ಮಣೋತ್ತಮರನ್ನು ಕರೆಸಿ, ಮುಹೂರ್ತವನ್ನು ನಡೆಸುವಂಥವರಾಗಿ ॥

ಕಮಲ: ಭಲೈ ಸಾರಥಿ. ಅರಮನೆಯ ಪುರೋಹಿತರನ್ನು ಕರೆದುಕೊಂಡು ಬರುವಂಥವನಾಗೂ ॥

ಪದ
ಬನ್ನಿರಯ್ಯ ಬನ್ನಿರಿ. ಬನ್ನಿರಯ್ಯ ಬನ್ನಿರೋ
ಹೋಳ್ಗೆ ಕರ್ಜಿಕಾಯ್ಗಳಾ, ಬೇಗದಿಂದ ತಿಂಬೋಣ ॥

ಕಮಲ: ಭೂಸುರೋತ್ತಮರಿಗೆ ನಮಸ್ಕರಿಸುವೆನೂ ॥

ಬ್ರಾಹ್ಮಣರು: ನಿನಗೆ ಮಂಗಳವಾಗಲಿ ಬರುವಂಥವನಾಗಯ್ಯ ರಾಜ ನಮ್ಮನ್ನು ಕರೆಸಿದ ಕಾರಣವೇನೂ॥

ಕೃಷ್ಣ: ಸ್ವಾಮಿ ಭೂಸುರೋತ್ತಮರೆ, ಲಗ್ನಕ್ಕೆ ತಡವಾಗುವುದು ಬೇಗನೆ ಮಹೂರ್ತಕ್ಕೆ ಪ್ರಾರಂಭಿಸು ವಂಥವರಾಗಿ.

 

(ಮಹೂರ್ತ ಮಂಟಪ, ಮಹೂರ್ತ ನಡೆಯುವುದೂ)

ಕೌಂಡ್ಲೀಕನ ಸಭೆ

ಪದ
ಶೂರ ಚರರೆ ಬೇಗಬನ್ನಿ  ವರಪ್ರಧಾನಿಯೆ ಕೇಳು
ವೀರರೆ ಲೋಕದ ವಾರ್ತೆಯ ಬೇಗದಿಂದಲಿ ॥

ಕೌಂಡ್ಲೀಕ: ಅಯ್ಯ ಪ್ರಧಾನಿಯೇ ಸಕಲ ಪರಿವಾರಗಳು ಕ್ಷೇಮದಿಂದ ಇರುವುದೆ, ಇದೂ ಅಲ್ಲದೆ ವೀರರೆಲ್ಲರೂ ಎನಗೆ ಕಪ್ಪವನ್ನು ತಂದು ವೊಪ್ಪಿಸುತ್ತಿರುವರೊ ಇಲ್ಲವೋ ಹೇಳುವಂಥವನಾಗೂ ॥

ಪದ
ಜಯ ಜಯ ದೈತ್ಯ ಕುಲೋತ್ತಮ.
ಜಯ ಜಯ ಜಲನಿಧಿಯೇ.
ದೇಶದೇಶದ ರಾಜರೆಲ್ಲರು ತಪ್ಪದೆ
ಕಪ್ಪವ ತಂದೊಪ್ಪಿಸುವರೂ ॥

ಮಂತ್ರಿ: ಭಲೈ ದೊರೆಯೆ. ನಿಮಗೆ ಸರಿಸಮಾನವಾದ ರಾಜರನ್ನು ಈ ಧರಿತ್ರಿಯಲ್ಲಿ ಯಾರನ್ನೂ ಕಾಣಲಿಲ್ಲ. ಇದೂ ಅಲ್ಲದೆ ಪ್ರತಿ ದಿನವೂ ರಾಜರುಗಳೆಲ್ಲ ಕಪ್ಪವನ್ನು ತಂದು ವಪ್ಪಿಸುತ್ತಿರುವರೈ ರಾಜೇಂದ್ರ॥

ಪದ
ಅಮರಾದಿಗಳಿಗೆಲ್ಲ ಹೊಕ್ಕ ಲಿಖಿತವನ್ನು
ನಮಗೆ ಮೀರಿ ನಡೆಯುವರಾರು ಹೇಳೈ ॥

ಕೌಂಡ್ಲೀಕ: ಭಲೈ ಮಂತ್ರಿಯೆ, ಇಂದ್ರ ಅಗ್ನಿ ಯಮ ನೈರುತ್ಯ ವರುಣ ವಾಯುವ್ಯ ಕುಬೇರ ಈಶಾನ್ಯ ಮೊದಲುಗೊಂಡು ಸರಿಯಾಗಿ ಲಿಖಿತವನ್ನು ಕೊಡುವರೊ ಇಲ್ಲವೊ. ಇದೂ ಅಲ್ಲದೆ ನಮಗೆ ಮೀರಿ ನಡೆಯುವರ‌್ಯಾರೂ ನನ್ನಲ್ಲಿ ಸಾಂಗವಾಗಿ ಹೇಳುವಂಥವನಾಗೈಯ್ಯ ಮಂತ್ರಿಯೆ ॥

ಪದ
ದೊರೆರಾಯ ಲಾಲಿಸೈಯ್ಯ.
ಇಂದಿನ ವೃತ್ತಾಂತವ ಮಹಾರಾಜ
ಲಾಲಿಸೈಯ್ಯ ಅಮರ ಅಗ್ನಿ ಯಮ
ನೈರುತ್ಯ ಮೊದಲಾಗಿ ಲಿಖಿತವ ಕೊಡುತಿಹರೂ ॥

ಮಂತ್ರಿ: ಅಯ್ಯ ರಾಜನೆ ಯಿಂದಿನ ದಿವಸಾ ನಿಮಗೆ ಇಂದ್ರ-ಅಗ್ನಿ ಯಮ ನೈರುತ್ಯ ವರುಣ, ವಾಯುವ್ಯ ಕುಬೇರ ಈಶಾನ್ಯ ಮೊದಲುಗೊಂಡು ತಪ್ಪದೆ ಲಿಖಿತವನ್ನು ಕೊಡುತ್ತಿರುವರು. ಇಲ್ಲದೆ ನಿಮ್ಮನ್ನು ಮೀರಿ ನಡೆಯುವ ರಾಜರನ್ನು ನೋಡಲಿಲ್ಲವೈಯ್ಯ ದೊರೆಯೆ ॥

ಕೌಂಡ್ಲೀಕ: ಭಲೈ ಮಂತ್ರಿ ಬಹಳ ಸಂತೋಷವಾಯಿತು. ಈ ಪೀಠದಲ್ಲಿ ಮಂಡಿಸು.

ಪದ
ಜಯ ಜಯ ಕೃಷ್ಣ ಮುಕುಂದ ಮುರಾರಿ.
ಕಾಳಿಂಗ ಮರ್ದನ ಕಂಸನಸುತನ ಕನಕಾಂಬರಧಾರಿ ಗೋಪಾಲ.

ನಾರದ: ನಾರಾಯಣ ನಾರಾಯಣ ವೇದ ಪಾರಾಯಣ, ಅಯ್ಯ ಸೇವಕ. ನಾರದ ಮಹಾತ್ಮರು ಬಂದಿರುವರೆಂದು ನಿಮ್ಮ ರಾಜನಿಗೆ ತಿಳಿಸು.

ಸಾರಥಿ: ಮಹಾರಾಜರಿಗೆ ಜಯವಾಗಲಿ. ನಾರದ ಮಹಾತ್ಮರು ಬಂದಿರುವರು.

ಕೌಂಡ್ಲೀಕ: ಭಲೈ ಸಾರಥಿ, ಬಂದಂಥ ನಾರದ ಮಹಾತ್ಮರನ್ನು ವಳಗೆ ಬಿಡುವಂಥವನಾಗು ನಮೋ ನಮೋ ನಾರದ ಮಹಾತ್ಮರೆ ॥

ನಾರದ: ನಿನಗೆ ಮಂಗಳವಾಗಲಿ ಬಾರೈಯ್ಯ ದೈತ್ಯೇಂದ್ರ.

ಕೌಂಡ್ಲೀಕ: ಸ್ವಾಮಿ ನಾರದ ಮುನಿಗಳೆ, ಈ ಪೀಠದಲ್ಲಿ ವಿಶ್ರಮಿಸಿಕೊಳ್ಳುವಂಥವರಾಗಿ॥ಹೇಳುತ್ತೇನೆ॥

ಪದ
ತ್ರೈಲೋಕವನು ಚರಿಪ ನಾರದ ಮುನಿಗಳೇ
ಮೂರು ಲೋಕದ ವಾರ್ತೆ ಅರುಹಿರಿ ಯನಗೆಂದಾ ॥

ಕೌಂಡ್ಲೀಕ: ಸ್ವಾಮಿ ನಾರದ ಮುನಿಗಳೆ  ತ್ರೈಲೋಕ ಸಂಚಾರಿಗಳಾದ ನೀವುಗಳು ಮೂರು ಲೋಕದ ವರ್ತಮಾನವನ್ನು ಪೇಳುವಂಥವರಾಗಿ ನಾರದ ಮುನಿಗಳೇ ॥

ನಾರದ: ದೈತ್ಯೇಂದ್ರ ಹಾಗಾದರೆ ಹೇಳುತ್ತೇನೆ ॥

ಪದ
ದೈತ್ಯರಾಜನೆ ಕೇಳು, ಮಾಜದೆ ಪೇಳುವೆನು.
ಕಮಲಾವತಿಯ ಪುರದಿ ಕಮಲನೆಂಬುವ ದೊರೆಯೂ ॥

ನಾರದ: ಅಯ್ಯ ದೈತ್ಯೇಂದ್ರ, ಆದರೆ ನಾನು ಬರುವಾಗ್ಯೆ ವೊಂದು ವಿಚಾರವನ್ನು ನೋಡಿ ಬಂದೆನಯ್ಯ ದೈತ್ಯೇಂದ್ರಾ ಮತ್ತೂ ಹೇಳುತ್ತೇನೆ ॥

ಪದ
ಕಮಲನೆಂಬುವ ದೊರೆಯು ತನ್ನ ಸುತೆಯು ರತಿಯಾ
ಕೃಷ್ಣನ ಸುತನಿಗೆ ಕೊಟ್ಟು ಲಗ್ನವ ಗೈಯ್ವ ॥

ನಾರದ: ಅಯ್ಯ ದೈತ್ಯೇಂದ್ರ, ಕಮಲಾವತಿಯ ಅರಸನಾದ ಕಮಲರಾಜನು, ತನ್ನ ಮಗಳಾದ ರತೀದೇವಿಯನ್ನು ಕೃಷ್ಣನ ಮಗನಾದ ಮನ್ಮಥನಿಗೆ ಕೊಟ್ಟು ವಿವಾಹವನ್ನು ನಡೆಸುತ್ತಿದ್ದುದನ್ನು ನಾನು ನೋಡಿ ಬಂದೆನೈಯ್ಯ ದೈತ್ಯೇಂದ್ರ, ಇಷ್ಟೇ ಹೊರತು ಮತ್ತೇನೂ ಇಲ್ಲವೈಯ್ಯ. ನಾನಾದರೂ ಹೋಗಿ ಬರುತ್ತೇನೆ॥

ಪದ
ದೊರೆರಾಯ ಲಾಲಿಸಯ್ಯ.
ಇಂದಿನ ದಿವಸ ಕಮಲವತಿಯ ಪುರದಿ,
ನಿಮ್ಮ ಮಾವನು ಕೇಳು, ಕಮಲನೆಂಬುವ ದೊರೆಯು,
ನಡೆಸಿದ ದುರುಳತ್ವವಾ॥

ಮಂತ್ರಿ: ಭಲೈ ರಾಜನೆ ಇಂದಿನ ದಿವಸ ನಾರದರು ಹೇಳಿದ ವಾರ್ತೆಯನ್ನು ಎಷ್ಟೆಂದು ಹೇಳಲಯ್ಯ ದೊರೆಯೆ. ಆದರೆ ಕಮಲಾವತಿಯನ್ನು ಆಳುವಂಥ ನಿಮ್ಮ ಮಾವನಾದ ಕಮಲರಾಜನು. ಮಾಡಿರುವ ದುರುಳತ್ವವನ್ನು ಎಷ್ಟೆಂದು ಹೇಳಲಯ್ಯ ದೊರೆಯೆ ॥

ಕೌಂಡ್ಳೀಕ: ಅಯ್ಯ ಮಂತ್ರಿ ಅಂಥ ಅತಿಶಯವಾದ ವಿಷಯವೇನು ಹೇಳುವಂಥವನಾಗು॥

ಪದ
ನಿಮಗೆ ವೋಲೆಯ ಕೊಡದೆ,
ಮನಸಿಜಗೆ ಮಗಳನ್ನು, ಪರಿಣಯವೆಸಗಲೂ,
ಯೇನು ಮೋಸವಗೈದ.
ಕಮಲನು ಎಂದು ನುಡಿದ ಮಂತ್ರೀಶ.

ಮಂತ್ರಿ: ಅಯ್ಯ ದೊರೆಯೆ, ಅಂತಪ್ಪ ಕಮಲ ಭೂಪಾಲನು. ನಿಮಗೆ ವೋಲೆಯನ್ನು ಕೊಡದೆ ಶ್ರೀಕೃಷ್ಣನ ಮಗನಾದ ಮನ್ಮಥನಿಗೆ – ಮಗಳಾದ ರತಿದೇವಿಯನ್ನು ಕೊಟ್ಟು ಲಗ್ನವನ್ನು ಮಾಡುತ್ತಾರಂತೆ, ಯಂತಾ ಮೋಸವು ಬರುವಂಥದ್ದಾಯಿತೈ ದೊರೆಯೇ ॥

ಪದ
ಆಹಾ ಇದು ಯೇನಿದು ಮೋಸವು ಲೋಕದಿ
ರೂಢೀಶ ಪುಸಿಗೈದನೆ ಸಾಹಸ
ದ್ರೋಹಿಯಾದನೆ ಯನಗೀಗ ಕಮಲೇಶ ॥

ಕೌಂಡ್ಲೀಕ: ಆಹಾ ಜಗದೀಶಾ, ಯಂತಾ ಮೋಸವು ಬರುವಂಥದ್ದಾಯಿತು, ನಮ್ಮ ಮಾವನಾದಂಥ ಕಮಲಭೂಪಾಲನು ಭಂಡರ ಮಾತುಗಳನ್ನು ಕೇಳಿದನೆ, ಹರಹರ ಅವನ ಸಾಹಸವನ್ನು ನೋಡುತ್ತೇನೆ॥

ಪದ
ಸೋದರಳಿಯ ನಾನು ಇರಲು ಕಮಲನೆಂಬ
ದೊರೆಯು ತಾನೂ ಅರಸಿ ಮಗಳನ್ನು
ಕೊಟ್ಟರೆ ಶೋಧಿಸದೆ ನಾ ಬಿಡೆನೂ ॥

ಕೌಂಡ್ಲೀಕ: ಭಲೈ ಪ್ರದಾನಿಯೆ, ಮಾವನಾದಂಥ ಕಮಲ ಭೂಪಾಲನು ಸೋದರಳಿಯನಾದ ನನಗೆ ತಪ್ಪಿಸಿ, ಗೋವನ್ನು ಕಾಯುವವನ ಕಂದನಿಗೆ, ಸುಂದರಿಯನ್ನು ಕೊಟ್ಟನೆ, ಶಿವಶಿವಾ. ಸಾಂಬ ಮೂರುತಿಯ ಕೃಪೆ ಯನ್ನ ಮೇಲೆ ಇದ್ದದ್ದೇಯಾದರೆ, ಯಮನ ಪಟ್ಟಣಕ್ಕೆ ಕಳುಹಿಸುತ್ತೇನೆ. ನನ್ನ ಸಾಹಸವನ್ನು ತೋರಿಸುತ್ತೇನೆ. ಅಹುದೋ ಇಲ್ಲವೋ ಪ್ರಧಾನಿಯೆ ॥

ಪದ
ಸುಡುವೆ ಅವನ ರಥವನ್ನು,
ಖಂಡ್ರಿಸುವೆನು ಶ್ರೀಪತಿಯ ಗತಿಯಿಲ್ಲದೆ
ಅವ ಬಂದು ಮತಿಭ್ರಷ್ಮನಾಗುವತಿಯಿಂದೂ ॥

ಕೌಂಡ್ಲೀಕ:ಭಲೈ ಮಂತ್ರಿಯೆ – ಸತ್ಯಲೋಕಕ್ಕೆ ಅಧಿಪತಿಯಾದ ಬ್ರಹ್ಮನು ಯೇನು ಮೋಸವನ್ನು ಮಾಡುವಂಥವನಾದನು. ಆದರೆ ಸತ್ಯಲೋಕವನ್ನು ಸುಟ್ಟು ಸೂರೆ ಮಾಡುತ್ತೇನೆ ನೋಡುವಂಥವನಾಗೈ ಮಂತ್ರಿ ॥

ಪದ
ಪೋಗುವೆ ಭರದಿಂದೀಗ  ನಾ ತರುವೆನು
ರತಿಯಳ ಬೇಗ ಅತಿಹಿತರೆಲ್ಲರು ಬಂದು
ಸತಿಯಳ ವೊಲಿಸುವರೆಂದೂ ॥

ಕೌಂಡ್ಲೀಕ: ಭಲೈ ಮಂತ್ರಿ – ಕಮಲಾವತಿಗೆ ಹೋಗಿ ರತಿಯಳನ್ನು ತೆಗೆದುಕೊಂಡು ಬರುವ ಸಮಯದಲ್ಲಿ ಹರಿಹರ ಬ್ರಹ್ಮಾದಿಗಳೆ ಬಂದು ಯದುರು ನಿಂತರೂ ಬಿಡುವುದಿಲ್ಲ. ಭಲೈ ಸಾರಥಿ – ಜಾಗ್ರತೆ ರಥವನ್ನು ತಯಾರು ಮಾಡುವಂಥವನಾಗೂ ॥

ಪದ
ಹೊಡೆಯೊ ಹೊಡೆಯೋ ರಥವ
ನೀನು ತಡವ ಮಾಡದೆ. ದಡಾಭಡಾ
ಪೊಡವಿಪ ಸುತೆಯಳ ತರುವೆನು ನಾನೀಗ ॥

ಕೌಂಡ್ಲೀಕ:ಭಲೈ ಸಾರಥಿ. ಮಣಿಮಯವಾದ ರಥಕ್ಕೆ ಸೂರ‌್ಯ ಲಕ್ಷಣವುಳ್ಳ ಕುದುರೆಯನ್ನು ಹೂಡಿ, ರಥವನ್ನು ಹಾರಿಸುವಂಥವನಾಗು. ಸಾರಥಿ ರಥವು ಎಲ್ಲಿಗೆ ಬರುವಂಥದ್ದಾಯಿತು ॥

ಸಾರಥಿ: ಕಮಲಾವತಿ ಪಟ್ಟಣಕ್ಕೆ ಬಂದಿರುವುದೂ ॥

ಪದ
ಚದುರ ಯಾಕೆ ಬರಿದೆ ಬಂದೆ, ಯದುರು ನಿಲ್ಲೆಲಾ
ಸದರವೆಂದು ಪುರದೊಳಗೆ ನೀನು ಬಂದೆಯಾ ॥

ಭಟರು: ಯೆಲಾ ಚದುರ, ನೀನು ಯಾರು  ನಿನ್ನ ಹೆಸರೇನು ನಮ್ಮ ಪಟ್ಟಣಕ್ಕೆ ಬರುವುದಕ್ಕೆ ಕಾರಣವೇನೂ, ನಮ್ಮ ಪಟ್ಟಣವು ನಿನಗೆ ಸದರವಾಯಿತೆ, ನಮ್ಮಲ್ಲಿ ರಣಾಗ್ರವನ್ನು ಮಾಡಿ, ಹೋಗುವಂಥವನಾಗೋ ತರಳಾ  ಮುರಿಯುವೆ ನಿನ್ನ ಕೊರಳಾ ॥

ಪದ
ಭಟನೆ ನೀನು ತಡೆಯಲೇಕೆ, ಯೆನುತ ತಿವಿದನೂ,
ವೊದರಿ ಬಿದ್ದ ಅಕಟಯೆನುತ  ಭೂಮಿಗೊರಗಿದಾ ॥

ಕೌಂಡ್ಲೀಕ: ನಮೋ ನಮೋ ಮಾವಯ್ಯ ॥

ಕಮಲ: ದೀರ್ಘಾಯುಷ್ಯಮಸ್ತು ಬಾರಯ್ಯ ಮಗಧಸುತ ॥

ಪದ
ಮಾವಯ್ಯ ಹೇಳುತ್ತೇನೆ ॥ಯೇನು
ಅವಿವೇಕವನು ಮಾಡಿದೆಯೋ ಮಾವ
ಮನವಳಿದು ಜಗಕೆ ಬಾಳುವರೆ ಮಾವಯ್ಯ ॥

ಕೌಂಡ್ಲೀಕ: ಹೇ ಮಾವಯ್ಯನಾದ ಕಮಲೇಶನೆ ಇಂಥ ಅವಿವೇಕವನ್ನು ಸಂತಸದಿಂದ ಮಾಡಬಹುದೆ. ನಿನ್ನ ಜನ್ಮವನ್ನು ಇಲ್ಲಿ ಇಡುವುದಕ್ಕಿಂತಲೂ ಅಗ್ನಿಯಲ್ಲಿ ಸುಡುವುದು ಲೇಸಾಗಿರುವುದೊ ಮಾವಯ್ಯ॥

ಪದ
ಹಿಂದೆ ಮುಂದೆ ಯೋಚಿಸದೆ,
ಸುಂದರಾಂಗಿ ರತಿಯಳನ್ನು ಗೊಲ್ಲನ
ಮಗನಿಗೆ ನೀ ಕೊಡಬಹುದೇ ಮಾವಾ ॥

ಕೌಂಡ್ಲೀಕ: ಹೇ ಮಾವಯ್ಯ, ಬಂಧುಗಳಾದ ನಮ್ಮೊಂದಿಗೆ ವಂದು ಮಾತನ್ನು ಹೇಳದೆ ಕ್ರಿಷ್ಣನ ಮಗನಾದ ಮನ್ಮಥನಿಗೆ ನಿನ್ನ ಮಗಳನ್ನು ಕೊಡುವಂಥದ್ದು ಸರಿಯೇನೋ ಮಾವಯ್ಯ ಮತ್ತೂ ಹೇಳುತ್ತೇನೆ ॥

ಪದ
ಸೋದರಳಿಯನಿಗಿಂತ ಹಿತವಾದನೆ ಸ್ಮರನೇ
ಮೇಧಿನಿಯೋಳ್ ನೀನು ಕೆಟ್ಟೆ ಮಾವಯ್ಯ ॥

ಕೌಂಡ್ಲೀಕ: ಹೇ ಮಾವಯ್ಯ ಸೋದರಳಿಯನಾದ ನಾನು ॥ಸಕಲ ಭೋಗ ಭಾಗ್ಯ ರೂಪು ಲಾವಣ್ಯದಲ್ಲಿ ಇದ್ದಂಥವನಿಗೆ ವಂಚಿಸಿ, ಪಂಚಬಾಣನಿಗೆ ಕೊಡುವುದು ಯುಕ್ತವೇನೊ ಮಾವಯ್ಯ ॥

ಪದ
ವಿಘ್ನವೇತಕೊ ನನಗೆ, ಶುಭಲಗ್ನದೊಳಗೆ,
ವಿಘ್ನವನುತರಬೇಡ ಅಳಿಯಾ॥

ಕಮಲ: ಹೇಮಾದ್ರಿ ಸುತನೆ, ಲಗ್ನದಲ್ಲಿ ವಿಘ್ನವನ್ನು ತಂದು, ಸುಮ್ಮನೆ ಕೆಡುವುದು ಯುಕ್ತವಲ್ಲವೋ ಯುಗದ ಭೂಪಾಲ  ಮತ್ತೂ ಹೇಳುತ್ತೇನೆ ॥

ಪದ
ಶ್ರೀಹರಿಯ ಸುತನಿಗೆ ಕೊಟ್ಟು,
ಪರಿಣಯ ನಡೆಸುವೆ ನಾನೂ,
ಹರಿಯ ಕರುಣದೊಳೀಗ
ನೀನು ನಡೆಸೆಂದಾ ॥

ಕಮಲ: ಹೇ ಮಗಧ ಭೂಪಾಲ, ಶ್ರೀಹರಿಯ ಸುತನಾದ ಮನ್ಮಥನಿಗೆ ಲಗ್ನವನ್ನು ಮಾಡುತ್ತೇನೆ. ನೀನೇ ಬಂದೂ ಈ ಕಾರ‌್ಯವನ್ನು ನೆರವೇರಿಸಿಕೊಂಡು ಹೋಗುವಂಥವನಾಗು  ಸುಮ್ಮನೆ ಕೆಡುವುದು ಯುಕ್ತವಲ್ಲ.

ಪದ
ಹಲವು ಮಾತುಗಳೇಕೋ,
ಕಲಹ ತೋರುವೆ ನೋಡೋ ತಡವ ಮಾಡದೆ,
ಕೊಡು ಸುತೆಯಳ ಯನಗೇ ॥

ಕೌಂಡ್ಲೀಕ: ಹೇ ಮಾವಯ್ಯ, ನನ್ನ ಮುಂದೆ ಹಲವು ಮಾತುಗಳನ್ನು ಯಾತಕ್ಕೆ ಆಡುವೆ, ವೊಳ್ಳೇ ಮಾತಿನಿಂದ ನಿನ್ನ ಕುವರಿಯನ್ನು ಕೊಟ್ಟರೆ ಸರಿಯಾಯ್ತು. ಇಲ್ಲವಾದರೆ ನಿನ್ನ ಪಾಡೇನು ಮಾಡುತ್ತೇನೆ ನೋಡುವಂಥವನಾಗು.

ಪದ
ಆಕೆಗೆ ಮೊದಲು ನೀ ಪೇಳದೆ ಅಳಿಯಾ
ಪರಿಣಯದಿ ನೀ ಮರಣವಾಗಲಿ ಬೇಡಾ ನೀ ತರಳಾ ॥

ಕಮಲ: ಹೇ ಮಗಧ ಸುತನೆ, ನೀನು ದ್ರೌಪದಿಯು ಬರುವುದಕ್ಕಿಂತ ಮೊದಲೇ ಬಂದು ಕೇಳಿದ್ದೇಯಾದರೆ ಕೊಡುತ್ತಿದ್ದೆನು  ಯೀಗ ಬಂದು ಕೇಳಿ ಮರಣಕ್ಕೆ ಗುರಿಯಾಗಬೇಡವೋ ತರಳಾ ॥

ಭಾಮಿನಿ
ಇಂತಾಡಿದ ನುಡಿಯಂ ಕೇಳಿ ದೈತ್ಯನು,
ಗುಡುಗುಡಿಸಿ, ಇನ್ನೊಮ್ಮೆ ಕಳುಹಿಸುವೆ,
ಅಂತಕನ ಪುರಕೇ.

ಕೌಂಡ್ಲೀಕ: ಯೆಲಾ ಕಮಲ, ಇನ್ನೊಂದು ಸಾರಿ ಈ ನುಡಿಗಳನ್ನು ನುಡಿದದ್ದೇಯಾದರೆ ಅಂತಕನಾದ ಯಮನಿಗೆ ವಿಕ್ರಯ ಮಾಡುತ್ತೇನೆ. ಇಂಥಾ ನುಡಿಗಳನ್ನು ನುಡಿಯಬೇಡವೋ ಪಾಪಿ, ಹೇಳುತ್ತೇನೆ ಕೇಳೂ ॥

ಪದ
ಮುಷ್ಟಿಯೆನುತ – ಕಮಲಭೂಪ
ಸಲಿಗೆಯಿಂದಲೀ ತಿಳಿಯದೋದೆ
ವೀರನುಡಿಯ ಭಲೆಯ ಬಿಡುತಲೀ
ವಲಿಸಿಕೊಂಬೆ ಯೆನುತ ಮನದಿ, ಬಗೆದೆಯೇನೆಲಾ ॥

ಕೌಂಡ್ಲೀಕ: ಯೆಲಾ ಪುಂಡರಿಗೆ ಸರಿಸಮಾನವಾದ ಮಂಡಲೇಶನೇ ಕೇಳು. ಇಂಥ ನೀತಿ ಮಾತುಗಳನ್ನಾಡಿದರೆ, ಸೋತುಬರುವೆನೆಂದು ತಿಳಿಯಬೇಡ ಕಂಡೆಯೋ ಈಗಲಾದರೂ ನಿನ್ನ ಮಗಳನ್ನು ಕೊಟ್ಟರೆ ಸರಿಯಾಯ್ತು – ಇಲ್ಲವಾದರೆ ನಿನ್ನ ಮದುವೆ ಮನೆಯವರನ್ನೆಲ್ಲಾ ಈ ಸಭಾ ಮಧ್ಯಕ್ಕೆ ಮುಳುಗುವಂತೆ ಮಾಡುತ್ತೇನೆ  ನನ್ನ ವಾಹನವನ್ನು ನೋಡುವಂಥವನಾಗೋ ಪಾಪಿ ॥