ಪದ
ಯೆಂದ ಮಾತ ಕೇಳಿ ಮನದಿ ಕೋಪವಾನುತ
ನಿಂದ ಕಮಲ ಭೂಪ, ಕೋಪವಾನುತಾ ॥

ಕಮಲ: ಯೆಲಾ ಮಗಧಸುತ, ನೀನು ಲಗ್ನದಲ್ಲಿ ವಿಘ್ನವನ್ನು ತಂದಂಥ ಚಲವನ್ನು ತೋರಿಸುತ್ತೇನೆ, ಆದರೆ ಇಂಥ ಅವಿವೇಕದ ಕೆಲಸವನ್ನು ಮಾಡಬಹುದೇನೆಲಾ ಮೂದೇವಿ. ವೊಳ್ಳೇ ಮಾತಿನಿಂದ ಹಿಂದಕ್ಕೆ ಸಾರುವಂಥವನಾಗೆಲಾ ಪಾಪಿ॥ಹೇಳುತ್ತೇನೆ ॥

ಪದ
ಮಗಧಸುತನೆ ಸಲಿಗೆ ಯಾಕೊ, ಯನ್ನೊಳೆನುತಲೀ
ಎಂದು ಶರವನೆಸೆದನಾಗ ಕಮಲ ಭೂಪನೂ ॥

ಕಮಲ: ಎಲಾ ಮಗಧಸುತ, ನೀನು ಸಲಿಗೆಯಿಂದ, ಮಾತನಾಡುವ ನಿನ್ನ ನಾಲಿಗೆಯನ್ನು ನಿಲ್ಲಿಸುತ್ತೇನೆ, ಆದರೆ ನೀನು ಬಿಟ್ಟಿರುವ ಬಾಣವನ್ನು ಮಧ್ಯಮಾರ್ಗದಲ್ಲಿ ನಿಲ್ಲಿಸಿ, ನಿನ್ನ ರಥವು ಮುರಿದು ಹೋಗುವಂತೆ ಬಾಣವನ್ನು ಬಿಟ್ಟಿರುತ್ತೇನೆ. ತರಹರಿಸಿ ಕೊಳ್ಳೆಲಾ ನತದೃಷ್ಟ ॥

ಪದ
ಮಗಧಸುತನು ಕಿಡಿಯನುಗುಳಿ ರಣವಗೈದನೂ
ಸತ್ವದಿಂದ ನೃಪನ, ಮೂರ್ಛೆಗೊಳಿಸಿ ದೈತ್ಯನು ॥

ಕೌಂಡ್ಲೀಕ: ಎಲಾ ಕಮಲ, ನನ್ನಲಿ ರಣಾಗ್ರಕ್ಕೆ ಬಂದಿದ್ದೇಯಾದರೆ, ನಿನ್ನನ್ನು ಮೂರ್ಚೆಯನ್ನು ಮಾಡಿ, ನಿನ್ನ ಮಗಳನ್ನು ತೆಗೆದುಕೊಂಡು ಹೋಗದಿದ್ದರೆ, ಮಗಧಕುಮಾರನಲ್ಲವೆಂದು ತಿಳಿಯುವಂಥವನಾಗೊ ಮೂಢ ॥

ಪದ
ಯೆದ್ದು ಶರವ ತೊಟ್ಟನಾಗ ಬದ್ದ ಕಮಲನೂ
ಶುದ್ಧವಾಗಿ ರಣವ ಮಾಡೊ ಬದ್ಧವೈರಿಯೇ ॥

ಕಮಲ: ಎಲೈ ಚಾಂಡಾಲನಂತೊಪ್ಪುವ ಕೌಂಡ್ಳೀಕನೇ ಕೇಳುವಂಥವನಾಗು  ನೀನು ಬಿಟ್ಟಿರುವಂಥ ಬಾಣವನ್ನು ಮಧ್ಯ ಮಾರ್ಗದಲ್ಲಿ ಕತ್ತರಿಸಿ, ಪ್ರತಿಯಾಗಿ ಬಾಣವನ್ನು ಬಿಟ್ಟಿರುತ್ತೇನೆ. ತರಹರಿಸಿಕೊಂಡು ರಣಾಗ್ರಕ್ಕೆ ಯದುರಾಗುವಂಥವನಾಗೋ ಭಂಡಾ ॥

ಪದ
ಮಾನ ಹೀನ ತಂದೆ ನೀನು ಮಾದ್ರಿಸುತನಿಗೇ
ಯೆನುತ ಕರದ ಖಡ್ಗದಿಂದ ಭೂಮಿಗೊರಗಿಸೇ ॥

ಕೌಂಡ್ಲೀಕ: ಯೆಲಾ ನತದೃಷ್ಟನಾದಂಥ ಕಮಲನೇ ಕೇಳು, ಆದರೆ ಮಾನಹೀನನನ್ನು ಮಾಡುವಂಥವನಾದೆ. ಆದರೂ ಚಿಂತೆಯಿಲ್ಲ, ಯನ್ನ ಕರದಲ್ಲಿರುವ ಖಡ್ಗದಿಂದ, ನಿನ್ನ ಶಿರವನ್ನು ತುಂಡು ಮಾಡದೆ, ಎಂದಿಗೂ ಬಿಡುವುದಿಲ್ಲ. ರಣಾಗ್ರಕ್ಕೆ ಯದುರಾಗೆಲಾ ಭಂಡ ॥

ಕಮಲ: ಯೆಲಾ ಪಾಪಿ  ಹಾಗಾದರೆ ಯದುರಾಗೂ

ಯುದ್ಧ ಕಮಲನ ಮೂರ್ಚೆ

ಕೌಂಡ್ಲೀಕ: ಯೆಲಾ ಕಮಲಾ ನಿನ್ನ ಪಾಡೇನಾಯಿತು ನೋಡಿಕೊಳ್ಳುವಂತಾವನಾಗು ॥

 

(ಕೌಂಡ್ಲೀಕಮನ್ಮಥರ ಯುದ್ಧ)

ಪದ
ತರಳ ಬೇಡವೋ ರಣದ ವಿಷಯವೂ
ವುಳಿಸಿಕೊಳ್ಳೊ ನಿನ್ನ ಪ್ರಾಣ  ಎಂದ ದೈತ್ಯನೂ ॥

ಕೌಂಡ್ಲೀಕ: ಎಲಾ ತರಳ ರಣಾಗ್ರ ಅಂದರೇನು – ನೀನು ಅಂದರೇನು. ವೊಳ್ಳೆಯ ಮಾತಿನಿಂದ ಹಿಂದಕ್ಕೆ ಹೋಗಿ ಪ್ರಾಣವನ್ನು ವುಳಿಸಿಕೊಳ್ಳುವಂಥವನಾಗೈ ಮೂರ್ಖ.

ಪದ
ಕಾಯದಾಸೆ ಯನಗೆ ಇಲ್ಲ. ಪ್ರಾಣವನ್ನು ಬಿಡುವುದಿಲ್ಲ
ಸಾಯಬೇಡ ತೆರಳೊ ಎಂದ ಮನ್ಮಥ ॥

ಮನ್ಮಥ: ಯೆಲಾ ನತದೃಷ್ಟ ನನಗೆ ಪ್ರಾಣದ ಮೇಲಣ ಆಸೆಯು ಸ್ವಲ್ಪ ಮಾತ್ರವೂ ಇಲ್ಲವಾದ ಕಾರಣ ನಿನ್ನ ಪ್ರಾಣವನ್ನು ಎಂದಿಗೂ ಬಿಡುವುದಿಲ್ಲ. ಯುದ್ದಕ್ಕೆ ನಿಲ್ಲುವಂಥವನಾಗೊ ಮೂಢ

ಪದ
ಪುರುಷರಿಲ್ಲದ ಸತಿಯಳಂತೆ, ರಣದಿ ನಿಂತು ಬಗಳಬೇಡ,
ನಿಲ್ಲೊ ನಿಲ್ಲೊ ಸಮರಕೀಗ ಎಂದ ದೈತ್ಯನೂ ॥

ಕೌಂಡ್ಲೀಕ: ಯೆಲಾ ಮೂರ್ಖ, ಗಂಡರಿಲ್ಲದ ಸತಿಯಳಂತೆ, ಈ ರಣಾಗ್ರದಲ್ಲಿ ನಿಂತುಕೊಂಡು, ಹುಚ್ಚನಂತೆ ಬಗುಳಬೇಡ ರಣಾಗ್ರಕ್ಕೆ ನಿಲ್ಲುವಂಥವನಾಗೊ ನತದೃಷ್ಟ ॥

ಪದ
ಕಮಲನನ್ನು ಕೊಂದೆನೆಂಬ ಗರ್ವದಿರುವುದೇನಲಾ
ನಿನ್ನ ಗರ್ವ ತ್ಯಜಿಸಿ ಬಿಡುವೆ, ಯದುರು ನಿಲ್ಲೆಲಾ ॥

ಮನ್ಮಥ: ಯೆಲಾ ದೈತ್ಯ, ನಮ್ಮ ಮಾವನಾದ ಕಮಲಭೂಪತಿಯನ್ನು ಸಂಹಾರ ಮಾಡಿದಂಥ ಗರ್ವವನ್ನು ಅಡಗಿಸುತ್ತೇನೆ, ಯುದಕ್ಕೆ ನಿಲ್ಲುವಂಥವನಾಗೋ ದೈತ್ಯ ॥

ಪದ
ಕೊಳದ ನೀರ ದಾಂಟದಧಮ
ಹೊಳೆಯ ಬಯಸುವೆ, ನಿನ್ನ ಶಿರವ
ಕಡಿದು ಬಿಡುವೆ, ಖೂಳ ನೋಡೆಲಾ ॥

ಕೌಂಡ್ಲೀಕ: ಎಲಾ ಅಧಮ ನಿನಗೆ ಬಚ್ಚಲ ನೀರನ್ನು ದಾಂಟುವುದಕ್ಕೆ ಶಕ್ತಿಯಿಲ್ಲ. ದೊಡ್ಡ ಸಮುದ್ರವನ್ನು ದಾಂಟುವೆಯೇನೋ ಮೂದೇವಿ. ನಿನ್ನ ಸಾಹಸವನ್ನು ನೋಡುತ್ತೇನೆ. ರಣಾಗ್ರಕ್ಕೆ ನಿಲ್ಲೋ ಪಾಮರ॥

 

(ಯುದ್ಧ ಮನ್ಮಥನ ಮೂರ್ಛೆ)

ಪದ
ಯೆಂತು ಮಾಡಲೀಗ ನಾನು ಕಂದ
ತಾನು ಮಡಿದನೂ ಮುಂದೇನು ಗತಿಯು ದೇವ,
ಎಂತು ಮಾಡಲೀಗ ನಾನೂ ॥

ರುಕ್ಮಿಣಿ: ಮಗು ಬಾಲನೆ, ಗುಣಶೀಲನೆ, ಇಂದಿನ ದಿವಸ ಮಗಧ ಕುಮಾರನಲ್ಲಿ ಯುದ್ಧವನ್ನು ಮಾಡಿ, ಈ ಧರಣಿಯ ಮೇಲೆ ಮಲಗುವುದಕ್ಕೆ ಪ್ರೇಮವಾಯಿತೇನಪ್ಪಾ ಕಂದ. ಈ ಧರಿತ್ರಿಯಲ್ಲಿ ನಾನು ಹೇಗೆ ಪ್ರಾಣವನ್ನು ಇಟ್ಟುಕೊಳ್ಳಲಿ. ನನ್ನಲ್ಲಿ ವೊಂದು ಮಾತನ್ನಾದರೂ ಆಡಬಾರದೇನಪ್ಪಾ ಕಂದಾ॥

ಪದ
ವೊಡಲೊಳುರಿಯು ಸುಡುತಲಿಹುದು,
ನಡುವು ಬಾಧೆ ತಡೆಯಲಾರೆ, ಯೇನ
ಹೇಳಲಯ್ಯ ಮಗನೆ, ತಾಳಲಾರೆ ಬೇನೆಯಾ ॥

ರುಕ್ಮಿಣಿ: ಅಯ್ಯ ಮಗು, ಯನ್ನ ಹೃದಯದಲ್ಲಿ, ವುರಿತಾಪವು ಬಹುಗನತೆಯಾಗಿರುವುದಲ್ಲಪ್ಪ ಕಂದ ಅಪ್ಪಾ ಮಗನೆ, ನನ್ನಲ್ಲಿ ಕಣ್ಣು ತೆರೆದು ಮಾತನಾಡ ಬಾರದೇನಪ್ಪಾ ಕಂದಾ ॥

ಪದ
ಎತ್ತಿ ಸಾಕಿದಂತ ತೋಳು, ವ್ಯರ್ಥವಾಯಿತಲ್ಲಾ ಮಗನೇ,
ಸತ್ಯ ಸಾಹಸದೊಳು ನಿನ್ನ ಪಡೆದೆ ನಾನು ಕಂದನೇ ॥

ರುಕ್ಮಿಣಿ: ಅಯ್ಯೋ ಮಗು, ಮುದ್ದುಬಾಲನೆ, ನಾನು ಎತ್ತಿ ಸಾಕಿದಂಥ ತೋಳುಗಳು ವ್ಯರ್ಥವಾಗಿ ಹೋಗುವಂಥದ್ದಾಯಿತೆ, ಆದರೆ ನಿನ್ನನ್ನು ಬಹಳ ಕಷ್ಟಪಟ್ಟು ಪಡೆಯುವಂಥವಳಾದೆನಲ್ಲಪ್ಪಾ ಕಂದ, ಮೇಲಕ್ಕೇಳಪ್ಪ ಮಗನೇ, ಅಯ್ಯೋ ಮುಂದೇನು ಮಾಡಲಿ ॥

ಪದ
ಯಾವ ದೇಶದ ದೊರೆಯೊ
ಯಾರ ಕಂದನು ಪೇಳೊ ಧರಣಿ ಪಾಲಕರೊಳು
ಇಂತ ಶೂರರುಂಟು. ಎಂದನು ಬಲರಾಮಾ ॥

ಬಲರಾಮ: ಯೆಲಾ ದೈತ್ಯ ನೀನು ಯಾರು. ನಿನ್ನ ಹೆಸರೇನು, ನೀನು ಯಾರ ಮಗನು ನನ್ನಲ್ಲಿ ಪೇಳುವಂಥವನಾಗೂ ಆದರೆ ನಿನ್ನಂಥ ಶೂರರನ್ನು, ಯಾರನ್ನೂ ಕಾಣಲಿಲ್ಲವೋ ದೈತ್ಯ ॥

ಪದ
ನಿನಗೇತಕೊ ವೃತ್ತಾಂತ. ಬಿತ್ತರಿಸುವೆ ಕೇಳೋ
ಅಕ್ಕರವನು ಬಿಡು. ತಕ್ಕ ವುಪಾಯದಿ ಬಿಕ್ಕೆಯ ಹಾಕುವೆನೂ ॥

ಕೌಂಡ್ಲೀಕ: ಯೆಲಾ ಅಧಮ ನನ್ನ ವೃತ್ತಾಂತವು ನಿನಗೇತಕೊ ದುಷ್ಟ  ನಾನು ಯಾರಾದರೆ ನಿನಗೇನು, ನೀನು ಬಂದ ದಾರಿಯನ್ನು ಹಿಡಿದು ಹಿಂದಕ್ಕೆ ಹೋಗುವಂಥವನಾಗೋ ಅಧಮಾ ॥

ಪದ
ಕ್ಷಾತ್ರಿ ವಂಶಾಧಿಪನಾದರೆ  ರಣವ ಮಾಡೆಲೊ ॥
ದುರುಳಾ ಸೊಲ್ಲನಡಗಿಸಿ ದಿಗ್ಬಲಿ ಕೊಡುವೆನು
ಎಂದನಾ ಮಗಧೇಶಾ ॥

ಕೌಂಡ್ಲೀಕ: ಯೆಲಾ ನೀಲಾಂಬರಿ, ನೀನು ಕ್ಷಾತ್ರಿ ವಂಶದವನಾದರೆ, ನನ್ನಲ್ಲಿ ರಣಾಗ್ರವನ್ನು ಮಾಡು, ಇಲ್ಲವಾದರೆ ಹಿಮ್ಮುಖವಾಗಿ ತೆರಳುವಂಥವನಾಗೋ ನೀಲಾಂಬರಿ॥

ಪದ
ಬದಲು ಮಾತ್ಯಾತಕೊ ನಿನಗೆ  ನೀನು ಕದನದಿಂದ ಗೆಲುವೊ ದುರುಳ
ಹೊಡೆದು ನಿನ್ನನು ಜೈಸಿಪೋಗುವೆ  ಎಂದನು ಬಲರಾಮಾ ॥

ಬಲರಾಮ: ಎಲಾ ದೈತ್ಯನೆ ಕೇಳುವಂಥವನಾಗೂ  ನೀನು ಯಾತಕ್ಕೋಸ್ಕರವಾಗಿ, ನನ್ನಲ್ಲಿ ಬದಲು ಮಾತುಗಳನ್ನು ಆಡುವೆ, ಪಾಪಿ, ಯುದ್ಧಕ್ಕೆ ನಿಲ್ಲುವಂಥವನಾಗು, ಇಲ್ಲವಾದರೆ ಹಿಮ್ಮುಖವಾಗಿ ತೆರಳುವಂಥವನಾಗೊ ನತದೃಷ್ಟ ॥

ಪದ
ಕೊಕ್ಕೆ ನೇಗಿಲ ಹಿಡಿದು ನಿಂದೆಯೊ ಹಲಧರ
ನಿಮ್ಮ ಸೊಕ್ಕ ಮುರಿಯುವೆ ನಾನು. ದುರುಳ ನೋಡೆಲವೋ ॥

ಕೌಂಡ್ಲೀಕ: ಎಲಾ ಕೊಕ್ಕೆ ನೇಗಿಲನ್ನು ಹಿಡಿದಿರುವಂಥ ಹಲಧರನೇ ಕೇಳು. ನಿಮ್ಮನ್ನು ಲೆಕ್ಕವಿಲ್ಲದಂತೆ ಸಂಹಾರ ಮಾಡುತ್ತೇನೆ. ರಣಾಗ್ರಕ್ಕೆ ಯದುರಾಗೆಲಾ ಭಂಡ ॥

ಪದ
ಕಾಯದಾಸೆ ಯನಗೆ ಯಿಲ್ಲ ಪ್ರಾಣವನ್ನು ಬಿಡುವುದಿಲ್ಲ
ಸಾಯಬೇಡ ಎನುತ ಬಲರಾಮ ನುಡಿದನೂ ॥

ಬಲರಾಮ: ಎಲಾ ದೈತ್ಯ, ನನಗೆ ಪ್ರಾಣದ ಮೇಲಣ ಆಸೆಯು ಸ್ವಲ್ಪ ಮಾತ್ರವೂ ಇಲ್ಲವಾದ ಕಾರಣ, ನೀನು ನನ್ನಲ್ಲಿ ರಣಾಗ್ರವನ್ನು ಮಾಡಿ ಸಾಯಬೇಡ. ಹಿಂದಕ್ಕೆ ಹೋಗಿ ನಿನ್ನ ಪ್ರಾಣವನ್ನು ವುಳಿಸಿಕೋ ಇಲ್ಲವಾದರೆ ನನ್ನಲ್ಲಿ ರಣಾಗ್ರಕ್ಕೆ ನಿಲ್ಲುವಂಥವನಾಗೋ ದೈತ್ಯ ॥

ಕೌಂಡ್ಲೀಕ: ಎಲಾ ಹಲಧರ. ಹಾಗಾದರೆ ನಿನ್ನ ಸಾಹಸವನ್ನು ನೋಡುತ್ತೇನೆ. ಯದುರಾಗೆಲಾ ಭಂಡಾ॥

 

(ಯುದ್ಧ ಬಲರಾಮನ ಮೂರ್ಛೆ)

ಭಾಮಿನಿ
ಕಾಣುತಲಿ ಶ್ರೀಲೋಲ, ಮೂರ್ಚೆಗೊಂಡಿಹ ಸುತನ,
ಪ್ರಾಣ ಪದಕವೆ, ಹಾಯೆನುತ, ಶೋಕವಂ ಗೈಯುತ
ನೀಲಾಂಬರ ಯೆನುತ, ಮೊರೆಯಿಟ್ಟನಾ ಹರಿಯೂ ॥

ಕೃಷ್ಣ: ಅಯ್ಯೋ ಹರಹರ, ಈ ದುರುಳನಾದ ಮಗಧನಲ್ಲಿ ಸೆಣಸಿ ಮೂರ್ಚೆಯನ್ನು ಹೊಂದುವಂಥವನಾದೆಯೋ ಕಂದ. ಇದೂ ಅಲ್ಲದೆ ನೀಲಾಂಬರನಾದ ನಮ್ಮ ಅಣ್ಣನು ಮೂರ್ಚೆ ಹೋದನ  ಇದಕ್ಕೇನ ಮಾಡಲೋ ಹರಹರ ಮುಂದೇನು ಗತಿ ॥

ಪದ
ಕಂದನೆ ಇದು ಯೇನು ಮೋಸ
ಇದು ಯೇನು ಸಾಹಸ, ವೊಡಲೊಳುರಿಯು
ಸುಡುತಲಿಹುದು, ನಡುವು ಬಾಧೆ ತಡೆಯಲಾರೆ ॥

ಕೃಷ್ಣ: ಅಯ್ಯೋ ಮಗು ಯಿಂದಿನ ದಿವಸ, ಈ ರಣಾಗ್ರದ ಮಧ್ಯದಲ್ಲಿ ಮೂರ್ಛೆಯನ್ನು ಹೊಂದಿ ಮಲಗುವುದಕ್ಕೆ ಪ್ರೇಮವಾಯಿತೆ, ಇದೂ ಅಲ್ಲದೆ, ನನ್ನ ವುದರದಲ್ಲಿ ವುರಿತಾಪವು, ಗನತೆಯಾಗಿರುವುದಲ್ಲ ಕಂದ, ಎದ್ದು ವೊಂದು ಮಾತನ್ನಾಡ ಬಾರದೆ ಮಗೂ ಕಂದ. ಶಿವ ಶಿವ ಯೇನು ಮೋಸವು ಬರುವಂಥದ್ದಾಯಿತು. ಇರಲಿ ಯೆಷ್ಟು ಚಿಂತಿಸಿದರೂ ಪ್ರಯೋಜನವಿಲ್ಲ. ನನ್ನ ಕಂದನಾದ ಮನ್ಮಥನನ್ನು ಸಂಹಾರ ಮಾಡಿದಂಥ, ಮಗನನ್ನು ನಾನು ಸಂಹಾರ ಮಾಡದೆ ಇದ್ದರೆ, ವಸುದೇವನ ಪುತ್ರನಲ್ಲವೆಂದು ತಿಳಿಯುವಂಥವರಾಗಿ॥

ಪದ
ಯಾವ ರಾಜ್ಯವೊ ಯೆಲೊ ಹುಡುಗ,
ಯಾರ ಕಂದನು ಪೇಳೋ ಮಾತಾಪಿತೃಗಳ್ಯಾರು ನಿನಗೆ,
ಪೇಳು ಯನ್ನೊಳು ಎಂದ ಹರಿಯು ॥

ಕೃಷ್ಣ: ಯೆಲಾ ಹುಡುಗ  ನೀನು ಯಾರು, ನಿನ್ನ ರಾಜ್ಯ ಯಾವುದು, ನಿನ್ನ ಮಾತಾ ಪಿತೃಗಳಾರು, ನನ್ನಲ್ಲಿ ಹೇಳುವಂಥವನಾಗೊ ಭಂಡಾ ॥

ಪದ
ಯಾರಾದರೇನಯ್ಯ, ಮಾಡು ನೀ ಮದುವೆಯನು,
ಮಾಡಿ ನೀವೆಲ್ಲರು ಯೆಂದಾ. ನಿನ್ನಯ
ಸುತನನ್ನು ರಣರಂಗದೊಳಗೆ ಆಹುತಿಗೈದಿಹೆನೂ ॥

ಕೌಂಡ್ಲೀಕ: ಯೆಲಾ ಕೃಷ್ಣ, ನಾನು ಯಾರಾದರೆ ನಿನಗೇನಾಗಬೇಕು. ನಿನ್ನ ಮಗನಾದಂಥ ಮನ್ಮಥನನ್ನು ಈ ರಣಭೂಮಿಗೆ, ಈಡುಮಾಡಿರುತ್ತೇನೆ. ನೋಡಿಕೊಳ್ಳುವಂಥವನಾಗೆಲಾ ಭಂಡ ॥

ಪದ
ನಿನ್ನ ಬಾಲತ್ವಕೆ ನಾನು ಮೆಚ್ಚೆದೆ ಕೇಳೋ
ಬಿಡುಬಿಡು ಶೌರ‌್ಯಸಾಹಸವ. ರಣವನೀ ಗೈಯದೆ
ಹಿಂದಕ್ಕೆ ಸಾರೆಲೊ ಹರಿಯುವೆ ನಿನ್ನ ಕೊರಳಾ ॥

ಕೃಷ್ಣ: ಯೆಲಾ ಹುಡುಗ, ನಿನ್ನ ಬಾಲತ್ವವನ್ನು ಮೆಚ್ಚುವಂಥವನಾದೆ. ಆದರೆ ನಿನ್ನ ಸಾಹಸವನ್ನು ಬಿಟ್ಟು ಹಿಂದಕ್ಕೆ ಹೋಗುವಂಥವನಾಗೊ ತರಳ. ಹರಿಯುವೆ ನಿನ್ನ ಕೊರಳಾ ॥

ಪದ
ಇಷ್ಟು ಮಾತ್ಯಾಕಲೊ ನಿನಗೆ.
ಅರಮನೆಯ ಮೆಟ್ಟುಗಲ್ಲನ್ನು
ಹತ್ತಲು ಯೋಗ್ಯತೆ ಸಾಲದು
ಹೊತ್ತು ಕಳೆಯಲಿಬೇಡ, ನಿಲ್ಲೆಲೊ ಸಮರಕ್ಕೆ ॥

ಕೌಂಡ್ಲೀಕ: ಯೆಲಾ ಕೃಷ್ಣ  ನನ್ನ ಅರಮನೆಯ ಮುಂದೆ ಇರುವಂಥ ಮೆಟ್ಟಲುಗಲ್ಲನ್ನು ಹತ್ತುವುದಕ್ಕೆ ನಿನಗೆ ಯೋಗ್ಯತೆ ಸಾಲದು  ನನ್ನ ಮುಂದೆ ಯಾತಕ್ಕೋಸ್ಕರವಾಗಿ ಹಲವು ಮಾತುಗಳನ್ನಾಡುವೆ ಆದರೆ ನನ್ನ ಜನ್ಮ ಸ್ಥಿತಿಯನ್ನು ಹೇಳುತ್ತೇನೆ ಕೇಳುವಂಥವನಾಗೂ ॥

ಕೃಷ್ಣ: ಹಾಗಾದರೆ ನಿನ್ನ ಜನ್ಮ ಸ್ಥಿತಿಯನ್ನು ಹೇಳುವಂಥವನಾಗೂ ॥

ಭಾಮಿನಿ
ಹರಿಯೆ ಲಾಲಿಸು ಮೊದಲು, ಕಂಸಾಸುರನಾಗಿ ಜನಿಸಲು
ಯುಕ್ತಿಯಿಂದಲಿ ಸಂಹರಿಸಿದೆಯೋ, ಎರಡನೆಯ
ಜನ್ಮಕಾದುದು ಸೌಭದ್ರೆಯ ಗರ್ಭದೋಳ್ ಅಭಿಮನ್ಯುವಾಗಿ
ಜನಿಸಿದೆನು ಚಕ್ರಬಿಂಬವನು ರಚಿಸಿ ಮೋಸದಿಂ ಕೊಲ್ಲಿಸಿದೆ.
ಪಾತಕಿಯೆ ಪರಮ ಮಗಧಾಧಿಪನ ವುದರದೋಳ್ ಜನಿಸಿರುವೆ
ಈಗ ಮೂರನೆಯ ಜನ್ಮವನು ಕೇಳೆಂದಾ ॥

ಕೌಂಡ್ಲೀಕ: ಎಲಾ ಗೊಲ್ಲ ನಾನು ಮೊದಲನೆಯ ಜನ್ಮದಲ್ಲಿ ಮಧುರೆಯಲ್ಲಿ ಕಂಸಾಸುರನಾಗಿ ಜನಿಸಿದ್ದಕ್ಕೆ ಯುಕ್ತಿಯನ್ನು ಮಾಡಿ ಕೊಲ್ಲುವಂಥವನಾದೆ. ಇದೂ ಅಲ್ಲದೆ ಎರಡನೆಯ ಜನ್ಮದಲ್ಲಿ ನಿನ್ನ ತಂಗಿಯಾದ ಸುಭದ್ರೆಯ ಗರ್ಭದಲ್ಲಿ ಅಭಿಮನ್ಯುವಾಗಿ ಜನಿಸಿದ್ದಕ್ಕೆ, ಮೋಸದಿಂದ ಚಕ್ರ ಬಿಂಬವನ್ನು ಮಾಡಿಸಿ ಅಲ್ಲಿ ನನ್ನನ್ನು ಕೊಲ್ಲಿಸುವಂಥವನಾದೆ, ಈಗ ಮೂರನೆಯ ಜನ್ಮಕ್ಕೆ ಮಗಧದೇಶವನ್ನು ಆಳುವಂಥ ಶಲ್ಯ ಭೂಪತಿಗೆ ಮಗನಾಗಿ, ಕೌಂಡ್ಲೀಕನೆಂಬ ನಾಮಾಂಕಿತವನ್ನು ಪಡೆದು ಬಂದಿರುತ್ತೇನೆ, ನೀನು ಶೌರ‌್ಯವಂತನಾದರೆ ನನ್ನಲ್ಲಿ ರಣಾಗ್ರವನ್ನು ಮಾಡಿ ಜೈಸುವಂಥವನಾಗೋ ಗೊಲ್ಲಾ ॥

ಪದ
ದೇವ ಪರಶಿವಾ, ಕಾಯೊ ಯನ್ನನೂ,
ಸಾಕೋ ಪರಿಣಯ ಯೆಂದನಾ ಹರಿಯೂ
ಯಾಕೆ ಚಕ್ರವೂ ಯನುತಾ ಧರಣಿಗೆ ಬಿಸುಟನೂ ॥

ಕೃಷ್ಣ: ಅಯ್ಯೋ ಹರಹರ, ಈ ಹುಡುಗನ ಪರಾಕ್ರಮವನ್ನು ನೋಡುವಲ್ಲಿ, ಬಹಳ ಆಶ್ಚರ್ಯವಾಗಿರುವುದು, ಆದರೆ ನನ್ನ ಕರದಲ್ಲಿತಕ್ಕಂಥ ಚಕ್ರವನ್ನು, ಯೀ ಧಾರುಣಿಯ ಮೇಲಿಟ್ಟು, ಹಿಂದಕ್ಕೆ ಹೋಗುವುದು ಚೆನ್ನಾಗಿರುವುದು. ಇರಲಿ, ಯೇನು ಬಂದರೂ ಬರಲಿ, ಈ ಹುಡುಗನ ಪರಾಕ್ರಮವನ್ನು ಸ್ವಲ್ಪ ನೋಡುತ್ತೇನೆ॥

ಪದ
ಯೆಂದ ಮಾತಕೇಳಿ ದೈತ್ಯನಂದು ಗರ್ಜಿಸೀ
ಇಂದು ನೀನು ರಣವ ಮಾಡೊ ಯೆಂದ ದೈತ್ಯನೂ ॥

ಕೌಂಡ್ಲೀಕ: ಎಲಾ ಗೊಲ್ಲಾ, ಈ ರಣಾಗ್ರದ ಮಧ್ಯದಲ್ಲಿ ಯಾತಕೋಸ್ಕರವಾಗಿ ಕುಳಿತುಕೊಂಡೆ, ಚಿಂತೆಯನ್ನು ಬಿಟ್ಟು, ರಣಾಗ್ರವನ್ನು ಮಾಡುವಂಥವನಾಗೊ ಮೂರ್ಖ ಮುಂದಾದರೂ ಹೇಳುತ್ತೇನೆ ॥

ಪದ
ಹಿಂದೆ ಜರಾಸಂಧನಿಗೆದರಿ  ಸಮುದ್ರ ಮಧ್ಯದಲ್ಲಿ
ಮನೆಯ ಮಾಡಿಕೊಂಡ ಶಕ್ತಿಯನ್ನು  ತೋರೊ ಗೊಲ್ಲನೆ ॥

ಕೌಂಡ್ಲೀಕ: ಯಲಾ ನತದೃಷ್ಟ ಹಿಂದೆ ನೀನು ಜರಾಸಂಧನಲ್ಲಿ ರಣಾಗ್ರವನ್ನು ಮಾಡಲಾರದೆ, ಕದ್ದು ಕಳ್ಳನಂತೆ ಹೆದರಿ ಹೋಗಿ ಸಮುದ್ರದ ಮಧ್ಯದಲ್ಲಿ ಮನೆಯನ್ನು ಕಟ್ಟಿಕೊಂಡು ಕಾಲಾಹರಣ ಮಾಡುವುದನ್ನು ಬಿಟ್ಟು. ಯನ್ನಲ್ಲಿ ರಣಾಗ್ರಕ್ಕೆ ಬಂದಿರುವೆ, ಯದುರಾಗೆಲಾ ಪಾಪಿ, ಪಾಮರ ॥

ಪದ
ನಡೆಯುವ ಲಗ್ನಕ್ಕೆ, ಕೆಡುಕು ತಂದೆಯ ಪಾಮರನೇ,
ಅಡಗಿಸುವೆನು ನಿನ್ನ ಸೊಲ್ಲಾ, ಬಿಡುಬಿಡು ಶೌರ‌್ಯವನು.
ಯೆನುತ ಚಕ್ರವ ಬಿಸುಟ ಹರಿಯೂ ॥

ಕೃಷ್ಣ: ಯೆಲಾ ಹುಡುಗ, ನಡೆಯುವಂಥ ವಿವಾಹಕ್ಕೆ, ಕೆಡುಕನ್ನು ಮಾಡುವುದು ಯುಕ್ತವಲ್ಲಾ ಕಂಡೆಯೋ ವೊಳ್ಳೆ ಮಾತಿನಿಂದ ಹಿಂದಕ್ಕೆ ಹೋದರೆ ಸರಿಯಾಯಿತು. ಇಲ್ಲವಾದರೆ ಈಗಲೇ ನಿನ್ನ ಸೊಲ್ಲನ್ನು ಅಡಗಿಸುತ್ತೇನೆ  ಸ್ವಲ್ಪ ಮಾತ್ರ ಯೋಚಿಸಿ ನೋಡುವಂಥವನಾಗೊ ದೈತ್ಯ ॥

ಪದ
ಮೋಸಗಾರ ಕೃಷ್ಣ ಕೇಳೋ  ಈಶ ಕರುಣವಿದ್ದರೀಗ
ಯಮನ ಪಾಶಕೆ ಇನ್ನು ನಿನ್ನ ಗುರಿಯ ಮಾಡಿ ಕೊಲ್ಲುವೇ ॥

ಕೌಂಡ್ಲೀಕ: ಯೆಲಾ ಗೊಲ್ಲರ ಹುಡುಗನೆ, ಕೈಲಾಸವಾಸನಾದಂಥ ಸಾಂಭ ಮೂರುತಿಯ ಕರುಣಕಟಾಕ್ಷವು ನನ್ನ ಮೇಲೆ ಸಂಪೂರ್ಣವಾಗಿ ಇದ್ದದ್ದೇಯಾದರೆ ನಿನ್ನನ್ನು ಇದೇ ರಣಭೂಮಿಗೆ ದಿಗ್ಬಲಿಯನ್ನು ಕೊಡದೆ ಯೆಂದಿಗೂ ಬಿಡುವುದಿಲ್ಲವೊ ಅಧಮಾ ॥

ಪದ
ಸರ್ವರನ್ನು ಕೊಂದೆನೆಂಬ ಗರ್ವವಿರುವುದೇನೆಲಾ
ಅರುಹು ಇಲ್ಲದಂತೆ ಯಮನಪುರಕೆ ಕಳುಹುವೇ ॥

ಕೃಷ್ಣ: ಯೆಲಾ ದೈತ್ಯ. ಸರ್ವರನ್ನು ಮೂರ್ಛೆಮಾಡಿದೆನೆಂಬ ಗರ್ವವನ್ನು ಮಾಡಿಕೊಂಡಿರುವೆಯಾ. ಯಾರೂ ಅರಿಯದಂತೆ ನಿನ್ನನ್ನು ಸಂಹಾರ ಮಾಡದೆ ಯೆಂದಿಗೂ ಬಿಡುವುದಿಲ್ಲ. ಯನ್ನ ಕರದಲ್ಲಿರುವ ಚಕ್ರವನ್ನು ಮಂತ್ರಿಸಿ ಬಿಟ್ಟರುತ್ತೇನೆ. ತರಹರಿಸಿಕೊಳ್ಳುವಂಥವನಾಗೆಲಾ ದೈತ್ಯ ॥

ಪದ
ಪಂಚಶರವ ಹೂಡಿ ಇರುವೆ, ಪಂಚಬಾಣಪಿತನೆ
ನಿನಗೆ ನಿನ್ನ ಪ್ರಾಣವುಳಿಸಿಕೊಳ್ಳೊ ಯೆಂದ ದೈತ್ಯನೂ ॥

ಕೌಂಡ್ಲೀಕ: ಯೆಲಾ ಪಾಪಿ  ನೀನು ಬಿಟ್ಟಿರುವ ಚಕ್ರವನ್ನು ತರಹರಿಸಿಕೊಂಡು ಪುನಹ ನಿನ್ನ ಚಕ್ರಕ್ಕೆ ಐದು ಬಾಣಗಳನ್ನು ಬಿಟ್ಟಿರುತ್ತೇನೆ. ರಣಾಗ್ರಕ್ಕೆ ಯದುರಾಗೆಲಾ ಭಂಡಾ ॥

 

(ಯುದ್ಧಕೃಷ್ಣನ ಮೂರ್ಛೆ)

ಪದ
ನಾನೇನ ಮಾಡಲೀ  ಮತ್ತೆಲ್ಲಿ ಸ್ಮರಿಸಲಿ ವುದರದೋಳ್
ತಾಪವೂ, ಅದುರತಲಿರ್ಪುದೂ ॥ವಿವಾಹದೋಳ್ ವಿಘ್ನವೂ
ಬಂದೊದಗಿದುದೊ ಹರಿಯೇ ॥

ರಾಧೆ: ಹಾ ಪ್ರಾಣಕಾಂತರೆ  ಆ ಖೂಳನಾದ ಮಗಧನಲ್ಲಿ ನೀವು ರಣಾಗ್ರವನ್ನು ಮಾಡಿ, ಮೂರ್ಚೆ ಹೊಂದುವಂಥವರಾದಿರ, ಹಾ ಪ್ರಾಣಕಾಂತರೆ, ನಾನು ಯಾರಲ್ಲಿ ಸೇರಿಕೊಳ್ಳಲಿ, ಕಾಂತ, ನೇತ್ರವನ್ನು ತೆರೆದು, ನನ್ನಲ್ಲಿ ವೊಂದು ಮಾತನಾಡಬಾರದೆ ರಮಣ, ಲಗ್ನಕ್ಕೆ ಮಂದಮತಿಯಾದ ಖೂಳನಿಂದ ವಿಘ್ನವು ಬಂದಿತಲ್ಲಾ ಶ್ರೀಹರಿ ॥

ಪದ
ಹರಿಯು ಬೀಳಲೂ  ಹರನು ಬಂದನೂ
ಭರವಸದೊಳೂ  ನಿನ್ನ ಶಿರವ ತರಿದು ಬಿಡುವೆನೂ ॥

ಈಶ್ವರ: ಅಯ್ಯೋ ಶ್ರೀಹರಿ, ಇಂದಿನ ದಿವಸ ಮಗಧನಲ್ಲಿ ಸೆಣಸಿ, ಮೂರ್ಛೆ ಹೊಂದುವಂಥವನಾದೆಯಾ, ಶ್ರೀಹರಿ  ಆದರೂ ಚಿಂತೆಯಿಲ್ಲ, ನಾನು ಹೋಗಿ, ವಂದೇ ಕ್ಷಣಮಾತ್ರದಲ್ಲಿ ಸಂಹರಿಸಿ ಬರುತ್ತೇನೆ. ಎಲೋ ದೈತ್ಯ ಇತ್ತ ಕಡೆ ಬಂದು ಸಾರೆಲೋ ಭಂಡಾ ॥

ಪದ
ಹಿಂದೆ ಚಕ್ರವರ್ತಿಸುತನ ಬಾಗಿಲನ್ನು ಕಾಯ್ದೆ ಯೆಲವೋ,
ದಶಮುಖನ ಹಿಂದೆ ನಿನ್ನ ಮಡದಿಯನ್ನು ಕಳುಹಿಸಿ ಕೊಟ್ಟೆಯೋ ॥

ಕೌಂಡ್ಲೀಕ: ಯೆಲಾ ಈಶಾ, ಹಿಂದೆ ಬಲಿಚಕ್ರವರ್ತಿ ಸುತನಾದಂಥ ಬಾಣಾಸುರನ ಬಾಗಿಲನ್ನು ಕಾಯ್ದುಕೊಂಡಿರುವಂಥನಾದೆ. ಇದೂ ಅಲ್ಲದೆ, ಲಂಕಾ ಪಟ್ಟಣವನ್ನು ಆಳುವಂಥ ದಶಕಂಠನು ಬಂದು ಕೇಳಿದ್ದಕ್ಕೆ, ನಿನ್ನ ಮಡದಿಯಾದ ಪಾರ್ವತಾದೇವಿಯನ್ನು ಅವನ ಹಿಂದೆ ಕಳುಹಿಸಿದಂಥ ನತದೃಷ್ಟ. ನಿನಗೆ ಆಗಿಲ್ಲದ ಪೌರುಷ ಈಗ ಧಾವಲ್ಲಿ ಬಂತೋ ಮೂರ್ಖ, ನಿನ್ನ ಜನ್ಮವನ್ನು ಸುಡಬಾರದೇನೋ ಈಶಾ.

ಪದ
ಭಂಡ ನುಡಿಯನು ನಾನು, ಕಂಡು ಸೀಳುವೆ,
ಪುಂಡ ನೀನು, ಗಂಡನಾಗು, ಜಗಕೆ ಯೆಂದನೂ ॥

ಈಶ್ವರ: ಯೆಲಾ ದೈತ್ಯ. ನನ್ನ ಮುಂದೆ ಯಾತಕ್ಕೋಸ್ಕರವಾಗಿ ಭಂಡ ಮಾತುಗಳನ್ನು ಬಗುಳುತ್ತೀಯಾ. ಈ ಧಾತ್ರಿಯಲ್ಲಿರುವಂಥ ಪುಂಡರನ್ನು ಶಿಕ್ಷಿಸುವುದಕ್ಕೆ ನಾನು ಗಂಡನಾಗಿರುತ್ತೇನೆ. ನಿನ್ನ ಪುಂಡತನವನ್ನು ವಂದೇ ಕ್ಷಣದಲ್ಲಿ ಅಡಗಿಸುತ್ತೇನೆ. ಸ್ವಲ್ಪ ಮಾತ್ರ ಸೈರಿಸುವಂಥವನಾಗೊ ಭಂಡಾ ॥