ಪದ
ಗೊಲ್ಲಗೆ ಸಹಾಯವಾಗಿ ಮೆಲ್ಲಗೆ ಬಂದೆಯಾ ನೀನು
ಖುಲ್ಲರನ್ನು ಸದೆಬಡಿದು ನಾನು ಶರದಿಂದ ಕಡಿಯುವೆನೂ ॥

ಕೌಂಡ್ಲೀಕ: ಯೆಲವೋ ಈಶಾ, ಗೊಲ್ಲನಿಗೆ ಸಹಾಯವಾಗಿ, ನನ್ನಲ್ಲಿ ರಣಾಗ್ರಕ್ಕೆ ಬರುವಂಥವನಾದೆಯಾ, ನನ್ನ ಕರದಲ್ಲಿರುವ ಬಾಣಕ್ಕೆ ನಿನ್ನನ್ನು ಆಹುತಿಯನ್ನು ಕೊಡುತ್ತೇನೆ, ನನ್ನ ಸಾಹಸವನ್ನು ನೋಡುವಂಥವನಾಗೊ ಭಂಡಾ ॥

ಪದ
ಹಿಂದೆ ಜಲಾಧರನ, ಕೊಂದೆನೆಂಬ ಶಕ್ತಿಯನ್ನು ತೋರ್ಪೆನು,
ಖೂಳ ನಿಂತು ಧುರವ ಮಾಡೊ ನೀನು ಯೆಂದ ಈಶನೂ ॥

ಈಶ್ವರ: ಎಲಾ ಖೂಳಾ, ಹಿಂದೆ ಜಲಂಧರನನ್ನು ಕೊಂದಂಥ ಶಕ್ತಿಯನ್ನು ತೋರಿಸುತ್ತೇನೆ, ನೀನು ನನ್ನಲ್ಲಿ ನಿಂತು ರಣಾಗ್ರವನ್ನು ಮಾಡೋ ಪಾಪಿ, ಪಾಮರ ॥

ಪದ
ಹಲವು ಮಾತು ಯಾಕೊ ಈಶ. ತರಹರಿಸಿಕೊಳ್ಳೊ ಇದನು,
ಭರದಿ ಪರ್ವತಾಸ್ತ್ರವನ್ನು ಯೆಸೆದನೂ ॥

ಕೌಂಡ್ಲೀಕ: ಎಲಾ ಈಶಾ ನನ್ನ ಮುಂದೆ ನಿಂತುಕೊಂಡು ಹಲವು ಮಾತುಗಳನ್ನು, ಏತಕ್ಕೆ ವುಚ್ಚರಿಸುವೆ, ನಾನು ಪರ್ವತಾಸ್ತ್ರವನ್ನು ಬಿಟ್ಟಿರುತ್ತೇನೆ, ತರಹರಿಸಿಕೊಳ್ಳುವಂಥವನಾಗೋ ಈಶಾ ॥

ಪದ
ಇರಿವೆ ತ್ರಿಶೂಲದಿಂದ, ಭರದಿ ನಿನ್ನನೂ ಹಗರಣವ
ಮಾಡಿದೆಲವೋ  ಯೆನುತ ಈಶನೂ ॥

ಈಶ್ವರ: ಯೆಲಾ ಖೂಳ ನನ್ನ ಕರದಲ್ಲಿರುವಂಥ ತ್ರಿಶೂಲದಿಂದ ನಿನ್ನ ಶಿರವನ್ನು ಕತ್ತರಿಸದೆ ಇದ್ದರೆ, ನಾನು ಸಾಂಬನೆಂದು ತಿಳಿಯ ಬೇಡವೋ ಖೂಳ ॥

ಪದ
ಅಗ್ನಿ ಬಾಣವೆಸೆಯೆಲಾಗ  ಭೂಮಿಗಡರಿ
ಮೂರ್ಛೆಯಾದ  ಪಾರ್ವತೀಶನೂ॥

ಕೌಂಡ್ಲೀಕ: ಯೆಲಾ ಈಶಾ, ನಾನು ಅಗ್ನಿಬಾಣವನ್ನು ಬಿಟ್ಟಿರುತ್ತೇನೆ, ರಣಾಗ್ರಕ್ಕೆ ಯದುರಾಗು ವಂಥವನಾಗೋ ಈಶಾ ॥

 

(ಯುದ್ಧ ಈಶ್ವರನ ಮೂರ್ಛೆ)

ಪದ
ಮೋಸವಾಯಿತು ಮಗಧನಿಂದ  ಮಹದೇವಾ
ತ್ರಾಸು ಮೂರುಗಳಿಗೆ ಯೊಳಗೆ  ಮಹದೇವಾ ॥

ಬ್ರಹ್ಮ: ಅಯ್ಯೋ ಹರಹರ, ಮಗಧ ಕುಮಾರನಾದ ಕೌಂಡ್ಲೀಕನಿಂದ, ಮೋಸವಾಗುವಂಥದ್ದಾಯಿತಲ್ಲ ಆದರೆ ಮೂರು ಗಳಿಗೆಯಲ್ಲಿ ನಮ್ಮ ಮೋಹರವೆಲ್ಲಾ ಕಂಗೆಟ್ಟು ಹೋಗುವಂಥದ್ದಾಯಿತಲ್ಲಾ ಮುಂದೇನು ಮಾಡಲಿ॥

ಪದ
ಸರ್ವರೆಲ್ಲರು ಮೂರ್ಛೆ ಹೊಂದಿದರೂ ಮಹದೇವಾ
ಸರ್ವಕಾರ‌್ಯ ಕೆಟ್ಟು ಹೋಯ್ತು ಮಹದೇವಾ ॥

ಬ್ರಹ್ಮ: ಅಯ್ಯೋ ಹರಹರ, ನೀವೆಲ್ಲರೂ ರಣಾಗ್ರದಲ್ಲಿ ಮೂರ್ಛೆ ಹೊಂದಿದ್ದಕ್ಕೆ ಸರ್ವಕಾರ‌್ಯವು ಕೆಟ್ಟು ಹೋಗುವಂಥದ್ದಾಯಿತಲ್ಲಾ  ಶಿವಶಿವ ಹೇಗೆ ಮಾಡಲೋ ಸಾಂಬಾ ॥

ಪದ
ಎಂತು ಇವನೋಳ್, ಕಾದು ನಾನೂ ಮಹದೇವಾ
ಕಂತು ಪಿತನು ಮೂರ್ಛೆಯಾದ ಮಹದೇವಾ ॥

ಬ್ರಹ್ಮ: ಅಯ್ಯೋ ಹರಹರ  ಇವನಲ್ಲಿ ರಣಾಗ್ರವನ್ನು ಹೇಗೆ ಮಾಡಲಿ, ಕಂತುಪಿತನಾದಂಥ ಶ್ರೀ ಕೃಷ್ಣನೂ ಸಹ ಮೂರ್ಛೆಯಾದನಲ್ಲ. ಇರಲಿ ರಣಾಗ್ರಕ್ಕೆ ಹೊರಡುತ್ತೇನೆ.

ಪದ
ರಣ ಹೇಡಿಯಾದಿರಲ್ಲೋ ಯೀ ಪರಿ ಬವಣೆಯಾಯಿತು ಈಗ
ಬಲಹು ಹರಿಯು  ನಿಮ್ಮೆಲ್ಲರ ವುಳುಹ ಬಾರದೇ ॥

ಕೌಂಡ್ಲೀಕ: ಎಲಾ ಬ್ರಹ್ಮ, ಈ ರಣಾಗ್ರದ ಮಧ್ಯದಲ್ಲಿ ಹೇಡಿಯಂತೆ, ಯಾತಕ್ಕೆ ಕುಳಿತುಕೊಂಡಿರುವೆ, ಆ ಗೊಲ್ಲನಾದ ಶ್ರೀಕ್ರಿಷ್ಣನು ನಿಮ್ಮನ್ನು ವುಳಿಸಿಕೊಳ್ಳಬಾರದೆ. ಇದೂ ಅಲ್ಲದೆ, ನಿಮ್ಮ ಸೇನಾ ಮಾರ್ಬಲವೆಲ್ಲ ಕಂಗೆಟ್ಟು ಮೂರ್ಛೆಯಾಗುವಂತೆ ಮಾಡಿರುವೆನೂ  ನೀನು ನನ್ನಲ್ಲಿ ಸೆಣಸಿ, ಸುಮ್ಮನೆ ಸಾಯಬೇಡವೋ ಬ್ರಹ್ಮ

ಪದ
ಸೆಣಸಿ ನೋಡೋ ಕಾರ‌್ಯವನ್ನು ಅಣಕವನ್ನು ಬಿಡೋ ದುರುಳ,
ಸರ್ವರೆಂದು ತಿಳಿಯಬೇಡ ಯೆಂದ ಬ್ರಹ್ಮನೂ ॥

ಬ್ರಹ್ಮ: ಎಲಾ ದೈತ್ಯ, ನೀನು ನನ್ನಲ್ಲಿ ರಣಾಗ್ರಕ್ಕೆ ನಿಂತಿದ್ದೇಯಾದರೆ, ನಿನ್ನ ಅಣಕವನ್ನು ವಂದೇ ಕ್ಷಣ ಮಾತ್ರದಲ್ಲಿ ಅಡಗಿಸುತ್ತೇನೆ, ಸ್ವಲ್ಪ ಮಾತ್ರ ಸೈರಿಸುವಂಥವನಾಗೋ ದೈತ್ಯ ॥

ಕೌಂಡ್ಲೀಕ: ಯೆಲಾ ಬ್ರಹ್ಮ ಯೇನ ಬಗಳಿದೆಯೊ ನತದೃಷ್ಟ, ನಿನ್ನ ಪಾಡೇನು ಮಾಡುತ್ತೇನೆ. ಯುದ್ಧಕ್ಕೆ ನಿಲ್ಲುವಂಥವನಾಗೊ ಬ್ರಹ್ಮ ॥

 

(ಯುದ್ಧಮೂರ್ಛೆ)

ಭಾಗವತ: ಇತ್ತಲಾ ಹರಿಹರರೆಲ್ಲರೂ ಮೂರ್ಛಿತರಾಗಿ ಬೀಳಲು ಮತ್ತೆ ಕೆಲವರು ಬರುತ ಸಂದರು. ಇತ್ತ ಭೀಮನು ಬಂದು ನಿಂತನು ವೈರಿಯದುರಿನಲೀ ॥

ಭೀಮ: ಅಯ್ಯ ಭಾಗವತ, ಆ ಖೂಳನಾದ ಮಗಧನಲ್ಲಿ ಸೆಣಸಿ, ಹರಿಹರ ಬ್ರಹ್ಮಾದಿಗಳೇ ಮೊದಲುಗೊಂಡು  ಮೂರ್ಚೆಯನ್ನು ಹೊಂದಿ ಯೀ ಧರಣಿಯ ಮೇಲೆ ಮಲಗುವಂಥವರಾದರಲ್ಲ ಹರಹರ ನಾವು ಇದ್ದುದಕ್ಕೆ ಸಾರ್ಥಕವೇನು. ಯೀ ಕ್ಷಣದಲ್ಲಿಯೆ ಹೋಗಿ ಆ ಖೂಳನನ್ನು ಸಂಹಾರ ಮಾಡುತ್ತೇನೆ, ನನ್ನ ಸಾಹಸವನ್ನು ನೋಡುವಂಥವರಾಗಿ ॥

ಪದ
ಸಾಕು ಬಿಡು ಬಿಡು  ಶೌರ‌್ಯ ಸಾಹಸ,
ಸಾರಸಾಕ್ಷನ ಕೊಂದೆನೆನುತಲೀ,
ಮಾನ ಹೀನವೂ ಜಗದಿ ಆಯಿತೂ
ಕಿಡಿಯನುಗುಳುತ ನುಡಿದ ಭೀಮನೂ ॥

ಭೀಮ: ಯೆಲಾ ಮಗಧ ಕುಮಾರನೆ ಕೇಳುವಂಥವನಾಗೂ. ಸಾರಸಾಕ್ಷನಾದಂತ, ಹರಿಹರ ಬ್ರಹ್ಮಾದಿಗಳೇ ಮೊದಲಾಗಿ ಮೂರ್ಚೆಯನ್ನು ಹೊಂದಿಸಿದಂಥ ಸಾಹಸವನ್ನು ಬಿಡುವಂಥವನಾಗು. ಅಂಥ ಸಾಹಸವಂತನಾದರೆ ನನ್ನಲ್ಲಿ ರಣಾಗ್ರವನ್ನು ಮಾಡಿ, ಜೈಸುವಂಥವನಾಗೆಲಾ ದೈತ್ಯ ॥

ಪದ
ಹಿಂದೆ ಬಕನ ಕೂಳಿಂದ, ಬಕನ ವೈರಿಯೇ.
ಸಾಕು ಸಾಕು ಶೌರ‌್ಯಗುಣವು ಎಂದ ಮಗಧೇ ॥

ಕೌಂಡ್ಲೀಕ: ಯೆಲಾ ಭಂಡ ಭೀಮ, ಹಿಂದೆ ಬಕಾಸುರನಿಗೆ ಬಂಡಿ ಅನ್ನವನ್ನು ಕಳುಹಿಸಿ ಕೊಟ್ಟಿದ್ದಕ್ಕೆ ಅವನಿಗೆ ಕೊಡದೆ ಮಧ್ಯಮಾರ್ಗದಲ್ಲಿ ತಿಂದಂಥ ಲಂಡ ಭೀಮನು ನೀನು  ನಿನ್ನ ಶೌರ‌್ಯವನ್ನು ನಾನು ಬಲ್ಲೆನು – ಆದರೆ ಸುಮ್ಮನೆ ನನ್ನಲ್ಲಿ ರಣಾಗ್ರವನ್ನು ಮಾಡಿ ಕೆಡಬೇಡವೋ ಲಂಡ ಭೀಮಾ ॥

ಪದ
ಗಜವು ನೀನು ಸಿಂಹ ನಾನೆ ಅಜನ ಕೊಂದ ಕಾರ‌್ಯವನ್ನು
ಸುಜನ ನಿನ್ನ ಕೊಲ್ಲದೀಗ ಬಿಡೆನು ಯೆಂದನೂ ॥

ಭೀಮ: ಯೆಲಾ ದೈತ್ಯ, ಯೇನ ಬಗುಳಿದೆಯೊ ನತದೃಷ್ಟ, ಆದರೆ ನೀನೆ ವೊಂದು ಆನೆಯು. ನಾನೇ ವೊಂದು ಸಿಂಹದೋಪಾದಿಯಲ್ಲಿರುವ ನಾನು ನಿನ್ನನ್ನು ಸಂಹಾರ ಮಾಡದೆ ಬಿಡುವುದಿಲ್ಲ. ಯೀಗ ನನ್ನಲ್ಲಿ ರಣಾಗ್ರಕ್ಕೆ ನಿಲ್ಲುವಂಥವನಾಗೋ ದೈತ್ಯ ॥ಮತ್ತೂ ಹೇಳುತ್ತೇನೆ ॥

ಪದ
ಹರನ ಕೊಂದೆನೆಂಬ ಗರ್ವ ಇರುವುದೇನೆಲಾ,
ಬರಿದೆ ನಾನು ನಿನ್ನ ಶಿರವ ತರಿದು ಬಿಡುವೆನೂ ॥

ಭೀಮ: ಯೆಲಾ ದೈತ್ಯ, ಕೈಲಾಸವಾಸನಾದಂಥ ಸಾಂಬಮೂರುತಿಯನ್ನು ಮೂರ್ಛೆ ಹೊಂದಿಸಿದಂಥ, ಗರ್ವವನ್ನು, ನನ್ನ ಮುಂದೆ ತೋರುವಂಥವನಾಗೊ ದೈತ್ಯ, ಆದರೆ ಈ ಕ್ಷಣದಲ್ಲಿಯೇ ನಿನ್ನ ಶಿರವನ್ನು, ನನ್ನ ಕರದಲ್ಲಿರುವ, ಗದಾದಂಡದಿಂದ ಸಂಹಾರ ಮಾಡಿ  ಯೀ ಧಾರುಣಿಯ ಮೇಲಿರುವ ಭೂತಗಳಿಗೆ ಹಬ್ಬವನ್ನು ಮಾಡಿಸುತ್ತೇನೆ  ನನ್ನ ಸಾಹಸವನ್ನು ನೋಡುವಂಥವನಾಗೋ ದೈತ್ಯ ॥

ಪದ
ಸೂರೆ ಮಾಡುವೆ ನಾನು, ಪೌರುಷವೇತಕ್ಕೆ
ಗಾರುಗೆಟ್ಟು ಪೋಗಬೇಡ ಸಾರೊ ಹಿಂದಕೆ ॥

ಕೌಂಡ್ಲೀಕ: ಯೆಲಾ ಮೂರ್ಖನಾದ ಭೀಮಸೇನನೆ, ವೊಂದು ಕ್ಷಣ ಮಾತ್ರದಲ್ಲಿಯೇ ಸಂಹಾರ ಮಾಡದೆ, ಎಂದಿಗೂ ಬಿಡುವುದಿಲ್ಲ ಕಂಡೆಯೋ, ನೀನು ಆಡುವ ಪೌರುಷದ ಮಾತುಗಳನ್ನು, ನನ್ನ ಮುಂದೆ ತೋರದೆ, ನಿನ್ನ ಪ್ರಾಣವನ್ನು ವುಳಿಸಿಕೊಳ್ಳುವಂಥವನಾಗೋ ಭಂಡ ಭೀಮಾ ॥

ಪದ
ಮರ ಮರಂಗಳ, ವುಭಯ ಭರದೊಳೂ,
ತರತರದಿ ನಿನ್ನ ಶಿರವ ತರಿದು ಬಿಡುವೆನೂ ॥

ಭೀಮ: ಯೆಲಾ ದೈತ್ಯ, ಯೇನ ಬಗುಳುದಿಯೊ ಪಾಪಿ ಪಾಮರ. ನೀನು ಹೊಡೆದಿರುವ ಪೆಟ್ಟನ್ನು ಸೈರಿಸಿಕೊಂಡು, ಈ ಧರಣಿಯ ಮೇಲಿರುವ ದೊಡ್ಡ ದೊಡ್ಡ ಮರಗಳನ್ನು ಕಿತ್ತುಕೊಂಡು, ಹಾಗೆ ನಿನ್ನನ್ನು ಅಪ್ಪಳಿಸಿ, ಈ ಭೂಮಿಗೆ ದಿಗ್ಬಲಿಯನ್ನು ಕೊಡುತ್ತೇನೆ, ಯೆದುರಾಗೆಲಾ ಭಂಡ ॥

ಪದ
ಮೂಢ ಹೋಗೆನುತಲಾಗ, ಗಾಢದಿಂದ ಶರವ ಬಿಡಲು
ಭೂಮಿಗಡರಿ ಮೂರ್ಛೆಯಾದ ಪಾಂಡುನಂದನಾ ॥

ಕೌಂಡ್ಲೀಕ: ಯೆಲಾ ಭಂಡ ಭೀಮನೆ, ನಾನು ಬಾಣವನ್ನು ಪ್ರಯೋಗಿಸಿರುತ್ತೇನೆ ರಣಾಗ್ರಕ್ಕೆ ಯೆದುರಾಗು॥

 

(ಯುದ್ಧಭೀಮನ ಮೂರ್ಛೆ)

ಪದ
ಅಗ್ರಜನೆ ಮಡಿದೆಯೇನೋ
ದುರುಳನಲ್ಲಿ ಸೆಣಸಿ ನೀನೂ  ಯೆದ್ದು ಮಾತನಾಡೊ
ಅಂಣಾ ಭೀಮಸೇನನೇ ॥

ಅರ್ಜುನ: ಅಂಣ ಭೀಮಸೇನ, ಈ ದಿವಸ ಆ ಖೂಳನಾದ ಮಗಧ ಕುಮಾರನಲ್ಲಿ ರಣಾಗ್ರವನ್ನು ಮಾಡಿ, ಈ ಧರಣಿಯ ಮೇಲೆ ಮಲಗುವುದಕ್ಕೆ ಪ್ರೇಮವಾಯಿತೆ ಅಗ್ರಜಾ. ಯೆದ್ದು ಯನ್ನಲ್ಲಿ ವೊಂದು ಮಾತನ್ನು ಆಡಬಾರದೆ ಅಗ್ರಜಾ ॥

ಪದ
ರಂಗನಾಥ ಪೊರೆಯೇನೋ
ಹಿಂಗದೆನ್ನ ಕಾಯ್ವರ‌್ಯಾರೂ ವೊಡಲೊಳುರಿಯು
ಸುಡುತಲಿಹುದೂ, ನಡುವು ಭಾದೆ ತಡೆಯಲಾರೆ ॥

ಅರ್ಜುನ: ಅಯ್ಯೋ ಶ್ರೀಹರಿ ನೀವು ಮೂರ್ಛಿತರಾಗಿ ಮಲಗಿದ್ದಕ್ಕೆ ನಮ್ಮ ಸೇನಾಮಾರ್ಬಲವೆಲ್ಲ ಕಂಗೆಟ್ಟು ಹೋಗುವಂಥದ್ದಾಯಿತು. ನಮ್ಮನ್ನು ಕಾಪಾಡುವಂಥ ಕರ್ತರು  ಯಾರೂ ಯಿಲ್ಲವಲ್ಲಾ  ಶ್ರೀಹರಿ ದಾನವಾರಿ ಮುಂದೇನು ಮಾಡಲಿ.

ಭಾಮಿನಿ
ಯಿತ್ತಲಾ ಪವನಜನೂ, ಶ್ರೀಹರಿಯು
ಮೂರ್ಛಿತರಾಗಿ ಮಲಗಲು ಅದಂಕಂಡು
ಪಾರ್ಥನು ಕಿಡಿಕಿಡಿಯಾಗಿ
ಧನುವನೆ ಗೈದು ಹೊರಟನಾ ಕ್ಷಣಕೇ॥

ಅರ್ಜುನ: ಅಯ್ಯೋ ಶ್ರೀಹರಿ, ನಮ್ಮ ಅಂಣಯ್ಯನವರಾದ, ಭೀಮಸೇನನೂ ಸಹ ಮೂರ್ಛೆಯಿಂದ ಮಲಗುವಂಥವರಾದರೂ ಆದರೂ ಚಿಂತೆಯಿಲ್ಲ. ನಾನು ಹೋಗಿ ಆ ಮಗಧನನ್ನು ಸಂಹಾರ ಮಾಡಿ ಬರುತ್ತೇನೆ, ನನ್ನ ಸಾಹಸವನ್ನು ನೋಡುವಂಥವರಾಗಿ ॥

ಭಾಮಿನಿ
ಹಿಂದೆ ಕುರುಕ್ಷೇತ್ರದಲಿ
ಬಂದ ಬಂದವರನೆಲ್ಲಾ ಮರ್ದಿಸಿ ಇಂದಿರಾಪತಿ
ನೀನೆ ಕಾಯ್ದೆ, ಯಿಂದು ದೊರಕಿತು
ನಮಗೆ ಅಪಜಯ. ಅಸುರ
ಕುಲ ಧೂಳೀಪಟನನು ಸ್ತುತಿಯ
ಮಾಡುವೆನೆಂದನಾ ಕಲಿಪಾರ್ಥ ॥

ಅರ್ಜುನ: ಅಯ್ಯೋ ಭಾಗವತರೆ, ಇಂದಿನಾ ದಿವಸ, ಸರ್ವರು ರಣಾಗ್ರ ಮಧ್ಯದಲ್ಲಿ ಮೂರ್ಛೆಯಿಂದ ಮಲಗುವಂಥವರಾದರು. ಆದರೆ ಹಿಂದೆ ನಾವುಗಳು, ಕುರುಕ್ಷೇತ್ರದಲ್ಲಿ ಇರುವಂಥ ಕಾಲದಲ್ಲಿ ದನುಜರ ಆರ್ಭಟವು ಬಹಳವಾಗಿ ನಮ್ಮನ್ನು ಭಾದೆಪಡಿಸುವಂಥ ಕಾಲದಲ್ಲಿ ದನುಜಾರಿಯಾದಂಥ ಶ್ರೀಕೃಷ್ಣದೇವರು ಕಾಪಾಡುವಂಥವರಾದರು. ಯೀಗ ನಮ್ಮನ್ನು ಕೈಬಿಟ್ಟು ಮೂರ್ಛೆಯಿಂದ ಮಲಗುವಂಥವರಾದರು. ಆದರೆ ಅಸುರಕುಲಧೂಳೀಪಟನಾದಂಥ ಆಂಜನೇಯನನ್ನು ಕರೆಸಿಕೊಳ್ಳುತ್ತೇನೈ ಭಾಗವತರೇ ॥

ಸ್ತೋತ್ರ
ಎಲ್ಲಿರುವೆ ತಂದೆ ಬಾರೋ ಮಾರುತಿ ಯೆಲ್ಲಿ
ಯೆಲ್ಲಿ ನೋಡಿದರು ಅಲ್ಲಿ ನಿಮ್ಮ ಕೀರುತಿ.
ಅಲ್ಲಲ್ಲಿ ಕೂಡಿರುವ ಶ್ರೀಪತಿ ರಂಗನರ್ಧಾಂಗಿಗೆ ವುಂಗುರವನಿತ್ತು
ವನಭಂಗವ ಮಾಡಿದಲ್ಲೊ ಮಾರುತಿ
ರಕ್ಕಸರ ಸೊಕ್ಕು ಮುರಿದಿಕ್ಕಿ ಲಂಕೆಗೆ ವುರಿ ಸಿಕ್ಕಿ ವೋಡಾಡಿದಲ್ಲೋ ಮಾರುತಿ ॥

ಅರ್ಜುನ: ವಾಯುಪುತ್ರ ಆಂಜನೇಯ, ಹನುಮಂತ  ಮಾರುತಿ  ಎಲ್ಲಿರುವೆ  ಬೇಗ ಬಾ ಬೇಗ ಬಾ ॥

ಪದ
ರಾಮ ರಾಮ  ರಾಮ ಸೀತ  ರಾಮ ಸೀತ ರಾಮಾ ॥

ಆಂಜನೇಯ: ಶ್ರೀರಾಮ ರಾಮ

ಅರ್ಜುನ: ನಮೋ ನಮೋ ವಾಯುಪುತ್ರ ॥

ಆಂಜನೇಯ: ನಿನಗೆ ಮಂಗಳವಾಗಲಯ್ಯ ಪಾರ್ಥ. ಅಯ್ಯ ಪಾರ್ಥ ನನ್ನನ್ನು ನೆನವರಿಕೆ ಮಾಡಿದ ಅಭಿಪ್ರಾಯವೇನು. ಹೇಳುವಂಥವನಾಗಯ್ಯ ಪಾರ್ಥ.

ಪದ
ಅಂಜನಾಸುತ ಅರಸಕುಲಗಜ ॥
ಯಿಂದು ವದನನ ಸುತನ ಲಗ್ನದಿ ಧುರುಳ
ಮಗಧನು ಬಂದು ಮೂರ್ಚೆಯಗೊಳಿಸಿದನೂ ॥

ಅರ್ಜುನ: ಅಯ್ಯ ಮುಖ್ಯಪ್ರಾಣನಾದಂಥ ಆಂಜನೇಯನೆ ಕೇಳೂವಂಥವನಾಗು  ಮಗಧ ದೇಶವನ್ನು ಆಳುವಂಥ ಕೌಂಡ್ಲೀಕನು ಬಂದು  ನಮ್ಮ ಸೇನಾ ಮಾರ್ಬಲವನ್ನೆಲ್ಲಾ ಮೂರ್ಚಿ ಹೊಂದಿಸಿದನಲ್ಲಾ ಅವನನ್ನು ಈ ಕ್ಷಣದಲ್ಲಿಯೆ ಸಂಹಾರ ಮಾಡಬೇಕಾಗಿರುತ್ತೆ ನೀನು ಬಾಲವನ್ನು ಬೆಳೆಸಿಕೊಂಡು ಹೊರಡುವಂಥವನಾಗಯ್ಯ  ಮುಖ್ಯಪ್ರಾಣ ಮತ್ತೂ ಹೇಳುತ್ತೇನೆ ॥

ಪದ
ಮಾತೆಗೋಸುಗ ಯಿಂದ್ರನಾನೆಯ ತರಿಸಿ
ಲೋಕದೊಳ್ ಪ್ರಸಿದ್ಧನಾದೆನೂ. ಬಂದುದೆಮಗೆ
ಅಪಜಯವು ಯಿಂದು ಅಂಜನಾಸುತನೇ ॥

ಅರ್ಜುನ: ಅಯ್ಯ ಮುಖ್ಯಪ್ರಾಣ, ನಮ್ಮ ತಾಯಮ್ಮನವರಾದ ಕುಂತೀದೇವಿಗೋಸ್ಕರವಾಗಿ ಅಮರಾವತಿಯಲ್ಲಿರುವ ದೇವೇಂದ್ರನ ಬಿಳಿಯಾನೆಯನ್ನು ಮತ್ತು ಕಾಮಧೇನು, ಕಲ್ಪವೃಕ್ಷ, ವಜ್ರಾಯುಧ ಮೊದಲಾದಂಥ ವಸ್ತುಗಳನ್ನು ತರಿಸಿ ಗಜನೋಂಪಿಯನ್ನು ಮಾಡಿಸಿ, ಮೂರು ಲೋಕಕ್ಕೆ ಪ್ರಸಿದ್ಧನಾದ್ದಕ್ಕೆ ಈ ದಿವಸ ಅಪಜಯವು, ಬಂದು ವೊದಗುವಂಥದ್ದಾಯಿತಯ್ಯಾ, ಮುಖ್ಯಪ್ರಾಣ ॥ಮತ್ತೂ ಹೇಳುತ್ತೇನೆ॥

ಪದ
ತುರುವಿಗೋಸುಗ ಬಲವ ಗೆಲಿಸಿದೆ,
ಸಂಸಾರಿಯಿಲ್ಲದೆ ಪರಿಯು ಆಯಿತು ಜಗದಿಯೆಂದಾ ॥

ಅರ್ಜುನ: ಅಯ್ಯ ಹನುಮಂತ ನಾವುಗಳು ಮತ್ಸ್ಯನಗರದಲ್ಲಿರುವಾಗ್ಯೆ ಆ ದುರುಳನಾದ ಕೌರವನು ಕರ್ಣನನ್ನು ಕಳುಹಿಸಿ ತುರುಗವನ್ನು ಅಟ್ಟಿಕೊಂಡು ಹೋಗುವ ಸಮಯದಲ್ಲಿ ನಾನೇ ಹೋಗಿ ಆ ಕೌರವರ ಮಾರ್ಬಲವನ್ನು ಸಂಹಾರ ಮಾಡಿ ಗೋವುಗಳನ್ನು ಅಟ್ಟಿಕೊಂಡು ಬರುವಂಥವನಾದೆ. ಆದರೆ ಶ್ರೀ ಕೃಷ್ಣದೇವರ ಕರುಣವು ತಪ್ಪಿದ್ದರಿಂದ ಇಂಥ ವಿಘ್ನವು ಬರುವಂಥದ್ದಾಯಿತು. ಆ ಖೂಳನಾದ ಮಗಧನನ್ನು ಸಂಹಾರ ಮಾಡುವುದಕ್ಕೆ ಹೊರಡುವಂಥವನಾಗಯ್ಯ ಮುಖ್ಯಪ್ರಾಣ ॥

ಪದ
ಬಿಡುವೆ ಬಾಲವ  ಸುಡುವೆ ಪುರವನೂ
ಕೊಡು ಕೊಡಪ್ಪಣೆ – ಯೆನುತ ಲಂಘಿಸೀ ॥

ಆಂಜನೇಯ: ಅಯ್ಯ ಪಾರ್ಥ, ನೀನು ಜಾಗ್ರತೆಯಿಂದ ಅಪ್ಪಣೆಯನ್ನು ಕೊಟ್ಟಿದ್ದೇಯಾದರೆ, ನನ್ನ ಬಾಲವನ್ನು ಬೆಳೆಸಿಕೊಂಡು ಅವನ ಪಟ್ಟಣವನ್ನು ಸುಟ್ಟು, ಸೂರೆಮಾಡಿ ಬರುತ್ತೇನೆ, ಅಪ್ಪಣೆಯನ್ನು ಕೊಡುವಂಥವನಾಗಯ್ಯ ಅರ್ಜುನ ॥

ಅರ್ಜುನ: ಅಯ್ಯ ಮುಖ್ಯಪ್ರಾಣ ಹಾಗಾದರೆ ಹೊರಡುವಂಥವನಾಗೂ॥

ಪದ
ಪಾವಕಶಸ್ತ್ರ ಹೂಡಿ ಇರುವೆನೂ
ಶೀಘ್ರದಿಂದಲಿ ತಡೆದುಕೊಳ್ಳಿರಿ ಎಂದ ಕಿರೀಟಿ ॥

ಅರ್ಜುನ: ಯೆಲಾ ದೈತ್ಯ. ಸರ್ವರನ್ನು ಮೂರ್ಛೆಗೊಳಿಸಿದೆನೆಂದೂ, ಗರ್ವಿಸಬೇಡ ಕಂಡೆಯೋ, ಆದರೆ ನನ್ನಲ್ಲಿ ಇರುವ ಉರುಗಾಸ್ತ್ರವನ್ನು ಬಿಟ್ಟಿರುತ್ತೇನೆ, ತರಹರಿಸಿಕೊಳ್ಳುವಂಥವನಾಗೆಲಾ ದೈತ್ಯ ॥

ಪದ
ಬಿಟ್ಟ ಶರವನೂ, ಮಧ್ಯ ಮಾರ್ಗದಿ,
ತುಂಡು ಮಾಡಿ ಹಾಳುಗೈದು ಶರವ ಯೆಸೆದನೂ ॥

ಕೌಂಡ್ಲೀಕ: ಯೆಲಾ ಅರ್ಜುನ. ನೀನು ಬಿಟ್ಟಿರುವಂಥ ಪರ್ವತಾಸ್ತ್ರವನ್ನು, ಮಧ್ಯಮಾರ್ಗದಲ್ಲಿ ಚೂರ್ಣಕೃತ್ಯವನ್ನು ಮಾಡಿ, ಪ್ರತಿಯಾಗಿ ಬಾಣವನ್ನು ಪ್ರಯೋಗಿಸಿರುತ್ತೇನೆ, ತರಹರಿಸಿಕೊಳ್ಳುವಂಥ ವನಾಗೆಲಾ ಅರ್ಜುನ ॥

ಪದ
ಕೊಟ್ಟ ಶರವನೂ, ಮುರಿದು ಇರುವೆನೂ,
ದಿಟ್ಟಶಕ್ತಿಯ ತೋರೊ ಮೂರ್ಖನೇ.
ಹರಿಯ ಕೊಂದ ಶಕ್ತಿಯನ್ನು ತ್ಯಜಿಸಿಬಿಡುವೆನೂ ॥

ಅರ್ಜುನ: ಯೆಲಾ ದೈತ್ಯ, ನೀನು ಬಿಟ್ಟಿರುವಂಥ ಬಾಣವನ್ನು ಮಧ್ಯಮಾರ್ಗದಲ್ಲಿ ಕತ್ತರಿಸಿ, ಪ್ರತಿಯಾಗಿ ಬಾಣವನ್ನು ಬಿಟ್ಟಿರುತ್ತೇನೆ. ರಣಾಗ್ರಕ್ಕೆ ನಿಲ್ಲುವಂಥವನಾಗೋ ಪಾಪಿ ॥

ಪದ
ಹನುಮಗಾರು ಪಾರ್ಥ ಹೇಳು
ಶರಮೆಸೆದನೂ ಶರವ ಬಿಡಲು ತಡೆಯದೀಗ,
ಭೂಮಿಗಡರಿ ಬಿದ್ದ ಪಾರ್ಥನೂ ॥

ಕೌಂಡ್ಲೀಕ: ಎಲಾ ಲಂಡಿಯಾದ ಅರ್ಜುನನೆ, ನಿನ್ನ ಧ್ವಜಾಗ್ರದಲ್ಲಿರುವ ಹನುಮಂತನಿಗೆ ಆರು ಬಾಣವು ನಿನಗೆ ಏಳು ಬಾಣವನ್ನು ಬಿಟ್ಟಿರುತ್ತೇನೆ. ಹಿಂದಕ್ಕೆ ಹೋಗಿ, ನಿನ್ನ ಪ್ರಾಣವನ್ನು ವುಳಿಸಿಕೊಳ್ಳುವಂಥ ವನಾಗೋ ಪಾರ್ಥ – ಇಲ್ಲವಾದರೆ ರಣಾಗ್ರಕ್ಕೆ ಯದುರಾಗುವಂಥವನಾಗು ॥