(ಯುದ್ಧ

ಭಾಮಿನಿ
ಯಿತ್ತ ಪಾರ್ಥನು ಧರಣಿಗೊರಗಲ್
ಮತ್ತೆ ಹನುಮಂತನು ಬಂದು ಯೋಚಿಸಲು
ಹಿಂದೆ ತ್ರೇತಾಯುಗದಿ  ಇಂಥ ಭಂಗವನ್ನು ಪಟ್ಟಿರಲಿಲ್ಲ ತಾನೆಂದಾ ॥

ಆಂಜನೇಯ: ಅಯ್ಯೋ ಶ್ರೀಹರಿ ದಾನವಾರಿ, ಅರ್ಜುನನ ರಥಪತಾಕೆಯನ್ನು ನಾನು ಸೇರಿಕೊಂಡು, ಪಾರ್ಥನನ್ನು ಮೂರ್ಛೆಗೊಳಿಸಿದಂತಾದೆನಲ್ಲಾ  ಹಿಂದೆ ತ್ರೇತಾಯುಗದಲ್ಲಿ ನಾನು ಶ್ರೀರಾಮ ದೇವರ ಸೇನೆಯನ್ನು ಸೇರಿಕೊಂಡಿರುವಾಗ  ನಾನು ಇಂಥ ಶ್ರಮಪಟ್ಟಿರಲಿಲ್ಲ  ಈಗ್ಗೆ ಇಂಥ ವಿಘಾತ ಬರುವಂಥದ್ದಾಯಿತಲ್ಲಾ  ಶ್ರೀ ರಾಮರಾಮ ನಾನೇನು ಮಾಡಲಿ, ನಾನು ಈ ವೇಳೆಯಲ್ಲಿ ಮೂರ್ಛಿತರಾಗಿ ಬಿದ್ದಿರುವವರ ಮಧ್ಯದಲ್ಲಿ ಮೂರ್ಚಾಗತನಾದಂತೆ ಬಿದ್ದುಕೊಳ್ಳುತ್ತೇನೆ ಶ್ರೀ ರಾಮರಾಮಾ ॥

ಪದ
ತಾಳಲಾರೆ ತಾಳಲಾರೆ ತಾಳಲಾರೆ ತಾಪವ,
ದುರುಳರಿಂದ ಮೈಮರೆತೆಯೇನೈ ತಮ್ಮ ಪಾರ್ಥನೇ ॥

ಧರ್ಮಜ: ಅಯ್ಯೋ ತಮ್ಮಂದಿರಾ, ಆ ದುರುಳನಾದ ಮಗಧಕುಮಾರನಲ್ಲಿ ರಣಾಗ್ರವನ್ನು ಮಾಡಿ ಮೂರ್ಛೆಯನ್ನು ಹೊಂದಿ, ಈ ಧಾರುಣಿಯ ಮೇಲೆ ಮಲಗುವುದಕ್ಕೆ ಪ್ರೇಮವಾಯಿತೆ. ಅಯ್ಯೋ ಶ್ರೀಹರಿ. ಅಯ್ಯೋ ತಮ್ಮಂದಿರಾ ಎದ್ದು ವೊಂದು ಮಾತನ್ನಾದರೂ ಆಡಬಾರದೆ ತಮ್ಮಾ ಕಿರೀಟಿ ॥

ಪದ
ಮಾರುತಿಯೇ, ಪೂರ್ವದಲ್ಲಿ ಕೀಚಕನೋಳ್ ಸೆಣಸಿದೆಯೋ,
ಆಗಿನ ಪೌರುಷವೆಲ್ಲಿ ಅಡಗಿತೋ ತಮ್ಮಾ ಭೀಮಾ ॥

ಧರ್ಮಜ: ತಮ್ಮ ಭೀಮಸೇನಾ, ಹಿಂದೆ ದುರುಳನಾದ ಕೀಚಕನಲ್ಲಿ ರಣಾಗ್ರವನ್ನು ಮಾಡಿದಂಥ ಪರಾಕ್ರಮವು ಈಗ ಧಾವಲ್ಲಿಗೆ ಹೋಗುವಂಥದ್ದಾಯಿತಪ್ಪ ಭೀಮಸೇನಾ ॥

ಪದ
ಐರಾವತವ ಧರಣಿಗಿಳುಹಿದೆ, ಹದಿನೆಂಟು ಅಕ್ಷೋಹಿಣಿ
ಮಾರ್ಬಲವಾ, ಕೊಂದೆಯೋ ತಮ್ಮಾ
ಪಾರ್ಥ ಇಂದು ಮೂರ್ಛೆಗೈದೆಯಾ ॥

ಧರ್ಮಜ: ಅಯ್ಯೋ ತಮ್ಮಾ ಧನಂಜಯ, ಹಿಂದೆ ನಮ್ಮ ತಾಯಮ್ಮನವರಾದಂಥ, ಕುಂತೀ ದೇವಿಯ ಮಾತಿಗೋಸ್ಕರವಾಗಿ ಅಮರಾವತಿಯಲ್ಲಿರುವ ದೇವೇಂದ್ರನ ಬಿಳಿಯಾನೆಯನ್ನು ಮತ್ತು ಕಾಮಧೇನು ಕಲ್ಪವೃಕ್ಷ ವಜ್ರಾಯುಧ ಮೊದಲಾದ ವಸ್ತುಗಳನ್ನು ಈ ಧರಣಿಗೆ ಇಳಿಸುವಂಥವನಾದೆ. ಅಲ್ಲದೆ ಆ ದುರುಳನಾದ ಕೌರವನ ಯೇಕಾದಶ ಮಾರ್ಬಲವನ್ನು ಸಂಹಾರ ಮಾಡುವಂಥವನಾದೆ. ಇಂತಾದ್ದರಲ್ಲಿ ಆ ಖೂಳನಾದ ಮಗಧನಲ್ಲಿ ರಣಾಗ್ರವನ್ನು ಮಾಡಿ ಮೌನವನ್ನು ಧರಿಸುವಂಥವನಾದೆಯೋ ಧನಂಜಯಾ॥

ಪದ
ರಾಕ್ಷಸರಿಗೆ ನೀನೆ ಬಲನು. ಮಡಿದೆಯೇನೋ ತಮ್ಮಾ ಪಾರ್ಥ.
ತಾಳಲಾರೆ ಶೋಕವನ್ನು ತಮ್ಮಾ ಪಾರ್ಥ ॥

ಧರ್ಮಜ: ಅಯ್ಯೋ ತಮ್ಮಾ ಧನಂಜಯ, ಈ ಧಾರುಣಿಯ ಮೇಲೆ ಇರುವಂಥ ದೈತ್ಯರನ್ನು ಶಿಕ್ಷಿಸುವುದಕ್ಕೆ ನೀನೇ ಬಲವಂತನಾಗಿ ಇದ್ದುದಕ್ಕೆ ಆ ಖೂಳನಾದ ಮಗಧಕುಮಾರನಿಗೆ ಹೆದರಿ ಮೂರ್ಛೆಯಿಂದ ಮಲಗುವುದಕ್ಕೆ ಪ್ರೇಮವಾಯಿತೇನಪ್ಪ ತಮ್ಮಾ ಪಾರ್ಥ.

ಭಾಮಿನಿ
ಮರುಗುತ ಧರಣಿಗೆ ಬೀಳೆ,
ವರ ಧರ್ಮಜ ರೋಷವಂ ತಾಳೆ, ಹಿರಿಯರು
ಯೆಂಬುದನರಿತು ಬಂದು ಪೇಳಿದರು ಮನವರಿತೂ ॥

ಧರ್ಮಜ: ಅಯ್ಯ ಶ್ರೀಹರಿ ದಾನವಾರಿ, ಈ ದುರುಳನಾದ ಮಗಧನು ಸರ್ವರನ್ನು ಮೂರ್ಛೆಗೊಳಿಸಿರುವನಲ್ಲಾ ಯೇನು ಮಾಡಲಿ. ಇರಲಿ ಸರ್ವರನ್ನು ಮೂರ್ಛೆಗೊಳಿಸಿದಂಥ ಅಹಂಕಾರವನ್ನು ಈಗಲೇ ಹೋಗಿ ಅಡಗಿಸುತ್ತೇನೆ. ಯೆಲಾ ದೈತ್ಯ ನನ್ನಲ್ಲಿ ರಣಾಗ್ರಕ್ಕೆ ನಿಲ್ಲುವಂಥವನಾಗೊ ದೈತ್ಯ.

ಪದ
ತಂದೆ ಲಾಲಿಸು ನೀನು. ಮುಂದೆನ್ನ ರಣದೊಳಗೆ
ನೀ ಜೈಸಲಾರೆಯೋ ಪಿತನೆ ನೀನೆಂದಾ ॥

ಕೌಂಡ್ಲೀಕ: ಹೇ ತಂದೆಯಾದ ಧರ್ಮನಂದನರೆ, ಲಾಲಿಸುವಂಥವರಾಗಿರಿ, ನೀವು ನನ್ನಲ್ಲಿ ರಣಾಗ್ರವನ್ನು ಮಾಡುವುದಕ್ಕೆ ನಿಮ್ಮ ಕೈಯಲ್ಲಿ ಎಷ್ಟು ಮಾತ್ರಕ್ಕೂ ಆಗುವುದಿಲ್ಲ ಕಂಡಿರೋ. ನಾನು ನಿಮ್ಮಲ್ಲಿ ಎಷ್ಟು ಮಾತ್ರಕ್ಕೂ ರಣಾಗ್ರವನ್ನು ಮಾಡುವುದಿಲ್ಲ, ನಿಮಗೆ ಶರಣಾಗತನಾಗಿರುತ್ತೇನೆ, ಹಿಂದಕ್ಕೆ ತೆರಳುವಂಥವರಾಗಿರಿ ಧರ್ಮನಂದನರೆ.

ಪದ
ಯೆಲೈ ದೈತ್ಯ ಹೇಳುತ್ತೇನೆ ॥ಅನುಜರ ಪ್ರಾಣವನು
ಕಳುಹಿ ಹಿಂದಕ್ಕೆ ನಾನೂ ಪೋಗಲಾರೆನು
ಕೇಳೊ ಎಂದ ಧರ್ಮಜನೂ ॥

ಧರ್ಮಜ: ಯೆಲಾ ಮಗಧ ಕುಮಾರನಾದಂಥ ಕೌಂಡ್ಲೀಕನೇ ಕೇಳುವಂಥವನಾಗು, ನನ್ನ ತಮ್ಮಂದಿರಾದ ಭೀಮ ಅರ್ಜುನರು ಈ ಧಾರುಣಿಯ ಮೇಲೆ ಮೂರ್ಛೆಯಿಂದ ಮಲಗಿದವರನ್ನು ಬಿಟ್ಟು, ನನ್ನ ಶರೀರವನ್ನು ಇಟ್ಟುಕೊಂಡು ಹಿಂದಕ್ಕೆ ಹೋಗುವುದು ಹೇಗೆ, ರಣಾಗ್ರಕ್ಕೆ ನಿಲ್ಲುವಂಥವನಾಗೋ ಪಾಮರ.

ಕೌಂಡ್ಲೀಕ: ಹೇ ತಂದೆಯೇ, ನಾನು ನಿಮ್ಮಲ್ಲಿ ರಣಾಗ್ರವನ್ನು ಎಷ್ಟು ಮಾತ್ರಕ್ಕೂ ಮಾಡುವುದಿಲ್ಲ. ನಿಮಗೆ ಶರಣಾಗತನಾಗಿರುತ್ತೇನೆ. ಹಿಂದಕ್ಕೆ ತೆರಳುವಂಥವರಾಗಿ ತಂದೆಯೇ.

ಧರ್ಮಜ: ಅಯ್ಯೋ ಶ್ರೀಹರಿ, ಈತನು ಯೀ ರೀತಿ ಹೇಳುತ್ತಿರುವನಲ್ಲ. ಮುಂದೇನು ಮಾಡಲಿ. ಶರಣಾಗತರಾದವರಲ್ಲಿ ಯುದ್ಧವನ್ನು ಮಾಡುವುದು ಯುಕ್ತವಲ್ಲ. ಆದ್ದರಿಂದ ನಾನು ತೆರಳುವೆನು ॥

ಭಾಮಿನಿ
ಅಯ್ಯ, ಭಾಗವತರೆ ಹೇಳುತ್ತೇನೆ ॥
ಯಿತ್ತಲಾ ಮಗಧಕುಮಾರನು ಕಿಡಿ ಕಿಡಿಯಾಗಿ
ಕೋಪವಂ ತಾಳಿ ಯನಗಿಂತ ಶೂರರು
ಯಾರುಂಟು ಈ ಧಾತ್ರಿಯಲಿ
ಮಾಡಿ ಲಗ್ನವ ನೋಡುವೆನು ನಾನು
ಸ್ತ್ರೀ ಮೋಹರದಲೆಂದಾ॥

ಕೌಂಡ್ಲೀಕ: ಅಯ್ಯ ಭಾಗವತರೆ, ಇಲ್ಲಿರುವ ಸರ್ವರನ್ನು ಮೂರ್ಛೆಗೊಳಿಸುವಂಥವನಾದೆ, ನನಗಿಂತ ಶೂರರು ಯೀ ಧರಿತ್ರಿಯಲ್ಲಿ ಯಾರನ್ನು ಕಾಣಲಿಲ್ಲವಯ್ಯ ಭಾಗವತರೆ ॥ಇದೂ ಅಲ್ಲದೆ ನನ್ನಂಥ ವೀರಾಧಿವೀರರು ಸ್ವರ್ಗ ಮೃತ್ಯು ಪಾತಾಳವೆಂಬ ಮೂರು ಲೋಕದಲ್ಲಿಯೂ ನನ್ನ ಸರಿಸಮಾನರಾಗಿ ರಣಾಗ್ರವನ್ನು ಮಾಡುವಂಥ ಶೂರರು ಯಾರೂ ಇಲ್ಲವಾದ್ದರಿಂದ, ಸ್ತ್ರೀ ಮೋಹರವನ್ನು ಹೊಕ್ಕು, ನಾಗವೇಣಿಯಾದ ರತಿಯಳನ್ನು, ತೆಗೆದುಕೊಂಡು ಬರುತ್ತೇನೆ ನೋಡುವಂಥವರಾಗಿರೈ ಭಾಗವತರೆ॥

ಪದ
ವಾರಿಜಾಕ್ಷಿಯೆ ಬಾರೆ. ಬೇಗನೆ ನೀ ನೀರೆ
ಬೇಗದಿಂ ರತಿಯಳ ವಿವಾಹ ಮಾಡಮ್ಮಾ ॥

ಕೌಂಡ್ಲೀಕ: ಎಲೈ ವಾರಿಜಾಕ್ಷಿಯಾದಂಥ ರುಕ್ಮಿಣಿಯೆ ಕೇಳುವಂಥವಳಾಗೂ, ಅತಿ ಜಾಗ್ರತೆಯಿಂದ ನಾಗವೇಣಿಯಳಾದ ರತಿಯಳನ್ನು ನನಗೆ ಧಾರೆಯನ್ನೆರೆಯುವಂಥವಳಾಗು  ಆದರೆ, ನನ್ನಂಥ ಶೂರರು ಯಾರೂ ಇಲ್ಲವಮ್ಮಾ ತಾಯೆ ॥ಜಾಗ್ರತೆಯಿಂದ ರತಿಯಳನ್ನು ಧಾರೆಯನ್ನೆರೆಯುವಂಥ ವಳಾಗಮ್ಮ ತಾಯೆ॥

ಪದ
ಬಾರಯ್ಯ ಮೋಹನ ಮಾಡುವೆ ಪರಿಣಯವಾ
ಸಡಗರದಿಂದಲಿ ಯೆಂದಳು ವಾರಿಜನೇತ್ರೇ ॥

ರುಕ್ಮಿಣಿ: ಅಯ್ಯ ಮಗಧಕುಮಾರನೆ ಕೇಳುವಂಥವನಾಗು. ನೀನು ಸರ್ವರನ್ನು ಮೂರ್ಛೆೆಗೊಳಿಸುವಂಥವನಾದೆ. ಆದರೂ ಚಿಂತೆಯಿಲ್ಲ. ತಡವನ್ನು ಮಾಡದೆ ಕಡುಸಡಗರದಿಂದ ಬರುವಂಥವನಾಗು  ನಾಗವೇಣಿಯಾದ ರತಿಯಳನ್ನು ನಿನಗೆ ವಿವಾಹವನ್ನು ಮಾಡುತ್ತೇನೆ. ತಡಮಾಡದೆ ರಂಗು ಮಂಟಪಕ್ಕೆ ತೆರಳುವಂಥವನಾಗಪ್ಪಾ ಕಂದಾ ॥

ಪದ
ಸೈ ಸೈ ಅತ್ತಿಗಮ್ಮ ತಡಿ ತಡಿ ॥ಸೈ ॥
ಪೊಡವಿಪ ಸುತೆಯಳ, ತಡವನು ಮಾಡದೆ
ಕಡು ಸಡಗರದಲಿ ಪರಿಣಯವೆಸಗುವೆ ॥

ದ್ರೌಪದಿ: ಆಹಾ ಅತ್ತಿಗಮ್ಮನವರೆ ಸರಿಸರಿ ಚೆನ್ನಾಯಿತು ಬಿಡಿಬಿಡಿ. ಯೆಂತಾ ಕೆಲಸವನ್ನು ಮಾಡುವಂಥವರಾದಿರಿ. ಸಾಕು ಸಾಕು ಬಿಡಿಬಿಡಿ ಇಷ್ಟು ಕೆಲಸ ಮಾಡುವುದಕ್ಕೆ ನಾನಿಷ್ಟು ಶ್ರಮಪಟ್ಟಿರುವೆನೆ, ಸರಿಸರಿ, ಬಿಡಿಬಿಡಿ ನೀವು ಸ್ವಲ್ಪ ಮಾತ್ರ ಸೈರಿಸಿದ್ದೇಯಾದರೆ, ನಾನು ಬಂದು ನಿಮ್ಮ ಕಂದನಿಗೆ ಲಗ್ನವನ್ನು ಬೆಳೆಸುತ್ತೇನೆ. ನಿಧಾನ ಮಾಡಿರಿ ಅತ್ತಿಗಮ್ಮನವರೆ ॥

ರುಕ್ಮಿಣಿ: ಅತ್ತಿಗಮ್ಮನವರೆ ನಾನೇನು ಮಾಡಲಿ. ಈ ದುರುಳನ ಆರ್ಭಟವು ಬಹಳವಾಯಿತು. ಅದರಿಂದ ನಾನು ಇಷ್ಟು ಕೆಲಸವನ್ನು ಮಾಡಿದೆನೂ. ತಾವು ಬಂದುದು ಬಹಳ ಸಂತೋಷವಾಯಿತು. ನಿಮ್ಮ ಅಪ್ಪಣೆಯಂತೆ ಕಂದನಿಗೆ ಲಗ್ನವನ್ನು ಬೆಳೆಸುವಂಥವರಾಗಿ ಅತ್ತಿಗಮ್ಮನವರೆ ॥

ಪದ
ಬಾರೊ ಬಾರೆಲೋ ವೀರದೈತ್ಯನೆ,
ರಣದೊಳ್ ನಿನ್ನನೂ ಕುಟ್ಟಿ ಕೊಲ್ಲುವೆ॥

ದ್ರೌಪದಿ: ಯೆಲಾ ದೈತ್ಯ – ನೀನು ಸ್ತ್ರೀ ಮೋಹರವನ್ನು ಹೊಕ್ಕು ನಮ್ಮೊಡನೆ ಕೆಟ್ಟ ಕೆಟ್ಟ ಮಾತುಗಳನ್ನು ವುಚ್ಚರಿಸಬೇಡ  ವೊಳ್ಳೇ ಮಾತಿನಿಂದ ಹಿಂದಕ್ಕೆ ಹೋದರೆ ಸರಿಯಾಯಿತು. ಇಲ್ಲವಾದರೆ ಇದೇ ರಣಾಗ್ರದಲ್ಲಿ ಕೊಲ್ಲದೆ ಯೆಂದಿಗೂ ಬಿಡುವುದಿಲ್ಲವೋ ದೈತ್ಯ ॥

ಪದ
ತಕ್ಕ ಕಾಂತೆಯ ಬಿಟ್ಟರೆ, ವಂಶಕೆ ಕಂಟಕವಲ್ಲವೆ ನಾರೀ
ಸುಖವೇತಕಿಂತ ಮಾತನು ನೀನು ಲಾಲಿಸು  ರತಿಯಳ ವಿವಾಹವನೂ ॥

ಕೌಂಡ್ಲೀಕ: ಹೇ ದುರುಳೆಯಾದ ಪಾಂಚಾಲಿಯೆ, ಮೊದಲೆ ವಪ್ಪಿದ ಕನ್ನಿಕೆಯನ್ನು ಈಗ ಬಿಟ್ಟಿದ್ದೇಯಾದರೆ, ನನಗೆ ಕಂಟಕವಲ್ಲದೆ ಸುಖವಾಗುವುದೇನೆ ನಾರಿ. ಇಂತಾ ಮಾತುಗಳನ್ನು ಆಡಬೇಡವೆ ಪಾಂಚಾಲೆ॥

ಭಾಮಿನಿ
ಎಲೆಲೆ ದಾನವ ಕೇಳೂ  ಸುಮ್ಮನೆ ಕೆಡಬೇಡ ಹೋಗೆಲೆ
ಹದಿನೆಂಟಕ್ಷೋಹಿಣಿ ಮಾರ್ಬಲವ ನೀಗಿದೆನೆಂದು
ಗರ್ವಪಡಬೇಡ ಯೆಂದಳಾ ಪಾಂಚಾಲೆ ॥

ದ್ರೌಪದಿ: ಯೆಲಾ ದೈತ್ಯ, ನೀನು ಯಾತಕ್ಕೋಸ್ಕರ ಬಾಯಿಗೆ ಬಂದಹಾಗೆ ಮಾತುಗಳನ್ನು ಆಡಿ, ನನ್ನ ಕೈಯಲ್ಲಿ, ಪೆಟ್ಟು ತಿಂದು ಸಾಯಬೇಡ. ಸುಮ್ಮನೆ ಹೋಗಿ, ನಿನ್ನ ಪ್ರಾಣವನ್ನು ವುಳಿಸಿಕೊಳ್ಳುವಂಥ ವನಾಗೊ ದೈತ್ಯ ॥

ಪದ
ನಿನಗೇತಕೆ ರಣವು  ಛೀ ಹೋಗೆಲೆ ನೀನೆಂದಾ
ತಡವನು ಮಾಡದೆ, ಕಡು ಸಡಗರದಲಿ ರತಿಪರಿಣಯವಾ ॥

ಕೌಂಡ್ಲೀಕ: ಹೇ ಭ್ರಷ್ಟಳೆ, ಛೇ, ನಿನಗೇತಕ್ಕೆ ಹುಚ್ಚು ಮೂಳಿ. ನಮ್ಮಂಥ ವೀರಾದಿವೀರರು, ನಿನ್ನಂಥ ಹೆಣ್ಣು ಹೆಂಗಸಿನಲ್ಲಿ ರಣಾಗ್ರವನ್ನು ಮಾಡುವುದಿಲ್ಲ. ಆದ್ದರಿಂದ ನಾಗವೇಣಿಯನ್ನು ಕೊಟ್ಟು ವಿವಾಹವನ್ನು ಮಾಡುವಂಥವಳಾಗೆ ಹುಚ್ಚು ಮೂಳಿ ॥

ಪದ
ಭಂಡನೆ ಬಿಡು ಬಿಡು ಚಂದವೇತಕೆ
ನಿನಗೆ ಕಮಲನ ಕುವರಿಯನೂ
ಕೊಡುವರೆ ಸೃಷ್ಟಿಯೊಳಗೆ ನಿನ್ನ ಶಿರವ
ಕುಟ್ಟಿ ಕೊಲ್ಲುವೆ ನಾನೂ ॥

ದ್ರೌಪದಿ: ಯೆಲಾ ಭಂಡ – ನನ್ನಲ್ಲಿ ಯಾತಕ್ಕೆ ಭಂಡ ಮಾತುಗಳನ್ನಾಡುವೆ. ನಿನ್ನ ದುಷ್ಟತ್ವವನ್ನು ನಾನು ನೋಡುತ್ತೇನೆ ಸ್ವಲ್ಪ ಮಾತ್ರ ಸೈರಿಸುವಂಥವನಾಗೆಲಾ ದೈತ್ಯ ॥

ಪದ
ಅರಸು ಸುತನಾಗಿ ಜನಿಸಿ, ಸರಸಿಜಾಕ್ಷಿಯ ಬಿಡುವದುಂಟೆ
ಕಡುಶೀಘ್ರದಲಿ ಪರಿಣಯವ ಮಾಡೆನುತಲಿ, ಪಿಡಿದೆಳೆದಾ ॥

ಕೌಂಡ್ಲೀಕ: ಎಲೈ ಹುಚ್ಚು ಮೂಳಿ, ಮಗಧದೇಶಕ್ಕೆ ದೊರೆಯಾದ ಭೂಪತಿಯ ವುದರಾಬ್ದಿಯಲ್ಲಿ ಜನಿಸಿ ಕ್ಷಾತ್ರಿವಂಶದವನಾಗಿ ನಾನು ಈ ನಾರಿಯನ್ನು ಬಿಟ್ಟರೆ ಈ ಲೋಕದಲ್ಲಿರುವ ಸುಜನರು ಆಡಿಕೊಳ್ಳುವುದಿಲ್ಲವೇನೆ ಭ್ರಷ್ಟೆ. ವೊಳ್ಳೇ ಮಾತಿನಿಂದ ರತಿಯಳನ್ನು ವಿವಾಹ ಮಾಡಿದರೆ ಸರಿಯಾಯ್ತು, ಇಲ್ಲವಾದರೆ, ನಿನ್ನನ್ನು ಇದೇ ರಣಭೂಮಿಗೆ ದಿಗ್ಬಲಿಯನ್ನು ಕೊಟ್ಟು ರತಿಯಳನ್ನು ತೆಗೆದುಕೊಂಡು ಹೋಗದೆ ಇದ್ದರೆ, ಮಗಧಕುಮಾರನಲ್ಲವೆಂದು ತಿಳಿಯೇ ಹುಚ್ಚು ಮೂಳಿ ॥

ಪದ
ಬೇಡ ಮಗಧ ಸುತನೆ ಕೇಳೊ  ಕಡ್ಡಿ ಮುರಿದು
ಸಾರುವೆನು. ನಾರಿ ಗೊಡವೆ ಬೇಡ ತರಳ  ಕೇಳು ಎಂದಳೂ ॥

ದ್ರೌಪದಿ: ಯೆಲಾ ಮಗಧ ಸುತನಾದ ಕೌಂಡ್ಲೀಕನೇ ಕೇಳುವಂಥವನಾಗೂ  ಆ ರತಿಯನ್ನು ಎಷ್ಟು ಮಾತ್ರಕ್ಕೂ ಕೊಡುವುದಿಲ್ಲ  ಹಿಂದಕ್ಕೆ ತೆರಳುವಂಥವನಾಗೋ ಪಾಪಿ॥

ಪದ
ಯಾತಕ್ಕೆ ಬಂದೆಯೆ ನಾರಿ  ಛೀ ಸಾಕೆಲೆ ಬಿಡು ಬಿಡು ನೀನು,
ತಡವನ್ನು ಮಾಡದೆ, ಶೌರ‌್ಯವ ತೋರುವೆ, ಯೆಂದನು ಮಗಧೇಶಾ ॥

ಕೌಂಡ್ಲೀಕ: ಯೆಲೆ ಹುಚ್ಚು ಮೂಳಿ, ನೀನು ನಮ್ಮಂಥ ವೀರಾಧಿವೀರರಲ್ಲಿ ರಣಾಗ್ರ ಮಾಡುವುದಕ್ಕೆ  ನಿನಗೆ ನಾಚಿಕೆಯಾಗುವುದಿಲ್ಲವೇನೆ ನಾರಿ  ನನ್ನ ಪರಾಕ್ರಮವನ್ನು ತೋರಿಸುತ್ತೇನೆ  ನೋಡುವಂಥವಳಾಗೆ ಅಧಮಳೆ ॥

ಪದ
ಪರರ ಹೆಣ್ಣಿಗಾಗಿ  ದಶಕಂಠ ಕೆಟ್ಟನು
ಅಹಲ್ಯ ದೇವಿಯ ರಮಿಸಿ ದೇವೇಂದ್ರ ಕೆಟ್ಟನೂ ॥

ದ್ರೌಪದಿ: ಎಲೋ ಭ್ರಷ್ಟ, ರಘುನಾಥನಾದ ಶ್ರೀರಾಮಚಂದ್ರ ಮೂರ್ತಿಯವರ ಮಡದಿಯಾದ ಸೀತಾದೇವಿಯನ್ನು ಲಂಕಾ ನಗರವನ್ನು ಆಳುವಂಥ, ದಶಕಂಠನು, ಕಳುವಿನಿಂದ ಕದ್ದುಕೊಂಡು ಹೋಗಿ, ಮೃತಪಟ್ಟನು. ಇದೂ ಅಲ್ಲದೆ ಋಷಿಪತ್ನಿಯಾದಂಥ ಅಹಲ್ಯಾದೇವಿಯನ್ನು ಅಮರಾವತಿಯನ್ನು ಆಳುವಂಥ ದೇವೇಂದ್ರನು ಕೆಣಕಿದ್ದಕ್ಕೆ ದೇವೇಂದ್ರನ ಮೈಯೆಲ್ಲಾ ಯೋನಿಯಾಗುವಂಥದ್ದಾಯಿತು. ಈಗ ನೀನು ಕಮಲರಾಜನ ಕುವರಿಯನ್ನು ಕೆಣಕಿ ಸುಮ್ಮನೆ ಸಾಯಬೇಡ ಕಂಡೆಯೋ, ರತಿಯಳ ಜಡೆಮುಡಿಯನ್ನು ಬಿಡುವಂಥವನಾಗೋ ಭಂಡದೈತ್ಯ ॥

ಪದ
ಬಿಡೆ ನಡಿಯಲಿ ಬೇಡ, ಖಡ್ಗವ ನೋಡೆಲೆ ಗಾಢ
ಹುಡುಗಾಟವಾಡಲಿಬೇಡ, ಯೆನುತಲೆ ಝೇಂಕರಿಸಿದನೂ ॥

ಕೌಂಡ್ಲೀಕ: ಎಲೈ ಪಾಂಚಾಲೆ, ನನ್ನ ಯದುರಿನಲ್ಲಿ ನಿಂತುಕೊಂಡು ಹೆಮ್ಮೆ ಮಾತುಗಳನ್ನು, ಯಾತಕ್ಕೆ ಆಡುವೆ, ನಿನಗೆ ಪಂಚ ಪಾಂಡವರೈವರಲ್ಲದೆ ಆರನೆಯವನಾದ, ಕರ್ಣನ ಮೇಲೆ ಮನಸ್ಸು ಇಟ್ಟುಕೊಂಡಿದ್ದ ಭ್ರಷ್ಟೆಯು ನೀನು. ನನ್ನ ಕರದಲ್ಲಿರುವ ಖಡ್ಗದಿಂದ ನಿನ್ನನ್ನು ಸಂಹಾರ ಮಾಡುತ್ತೇನೆ, ಯದುರು ನಿಲ್ಲೆ ಹುಚ್ಚು ಮೂಳಿ॥

ಪದ
ಖುಲ್ಲ ನಿನ್ನಯ ಶಿರವೂ ಯನಗೊಂದಲ್ಲಿಗೆ ಸಾಲದು
ಕೇಳೋ  ಇಲ್ಲಿಗೆ ಬಿಡು ಬಿಡು  ನಿನ್ನಯ ಶೌರ‌್ಯವನೂ ॥

ದ್ರೌಪದಿ: ಯೆಲಾ ದೈತ್ಯ, ಯೇನ ಬಗುಳಿದೆಯೋ ಪಾಪಿ, ನಿನ್ನ ಶೌರ‌್ಯವನ್ನು ಇಲ್ಲಿಗೆ ಬಿಟ್ಟು ಬಿಡುವಂಥವನಾಗೊ  ಆದರೆ ನಿನ್ನ ಶಿರವೂ, ನನ್ನದೊಂದು ಹಲ್ಲಿಗೆ ಸಾಲದು, ನಿನ್ನ ಪ್ರಾಣವನ್ನು ವುಳಿಸಿಕೊಳ್ಳುವಂಥವನಾಗೊ ಪಾಪಿ. ಈಗ ಅಸುರಾಂತಕ ಆಂಜನೇಯನನ್ನು ಕರೆಸಿ, ನಿನ್ನ ಪಾಡೇನು ಮಾಡುತ್ತೇನೆ, ನನ್ನ ಸಾಹಸವನ್ನು ನೋಡುವಂಥವನಾಗೋ ಪಾಮರ ॥ವಾಯುಪುತ್ರ ಆಂಜನೇಯನೆ ಬೇಗ ಬಾ ॥

ಪದ
ರಾಮ ರಾಮ ರಾಮ ಸೀತ  ರಾಮ ರಾಮ ರಾಮ ಸೀತಾ ॥

ಆಂಜನೇಯ: ನಮೋ ನಮೋ ತಾಯೇ ॥

ದ್ರೌಪದಿ: ನಿನಗೆ ಮಂಗಳವಾಗಲಿ, ಮೇಲಕ್ಕೇಳಯ್ಯ ಹನುಮಂತೂ ॥

ಆಂಜನೇಯ: ಅಮ್ಮಾ ತಾಯೆ, ನನ್ನನ್ನು ನೆನವರಿಕೆ ಮಾಡಿದ ಅಭಿಪ್ರಾಯವೇನು, ಹೇಳುವಂಥವರಾಗಿ ತಾಯೇ ॥

ದ್ರೌಪದಿ: ಅಯ್ಯ ಹನುಮಂತ ನಿನ್ನನ್ನು ಕರೆಸಿದ ಕಾರಣವೇನೆಂದರೆ, ಈ ಖೂಳನಾದ ಮಗಧನು ಬಹಳ ಪರಾಕ್ರಮಿಯಾಗಿರುತ್ತಾನೆ. ನೀನು ಹೋಗಿ ಯಾವ ವುಪಾಯದಿಂದಲಾದರೂ ಅವನನ್ನು ಸಂಹಾರ ಮಾಡಿ ಬರುವಂಥವನಾಗಯ್ಯ ಹನುಮಂತ ॥

ಆಂಜನೇಯ: ಅಮ್ಮಾ ತಾಯೆ, ನಿಮ್ಮ ಅಪ್ಪಣೆ ಪ್ರಕಾರ ಹೋಗಿ, ಆ ಖೂಳನನ್ನು ಸಂಹಾರ ಮಾಡಿ ಬರುತ್ತೇನೆ. ಅಪ್ಪಣೆಯನ್ನು ಕೊಟ್ಟು ಕಳುಹಿಸುವಂಥವರಾಗಿ ತಾಯೇ॥

ಪದ
ಪದ್ಮನಾಭನ ವೈರಿ ಕೇಳೆಲಾ  ಯೆನ್ನ ವಾಕ್ಯವೂ ಬದ್ದವೇನೆಲಾ
ಶುದ್ಧ ನಿನ್ನ ನಾನು  ಕೊಲ್ಲದೆ ಬಿಡೆನು ಯೆಂದನೂ ॥

ಆಂಜನೇಯ: ಯೆಲಾ ದೈತ್ಯ, ಪದ್ಮನಾಭನಾದ ಮುರವೈರಿಯನ್ನು ಮೂರ್ಛೆ ಕೆಡಹಿದೆನೆಂಬ ಗರ್ವವನ್ನು ಬಿಡು, ಇಲ್ಲವಾದರೆ ನಿನ್ನನ್ನು ಕೊಲ್ಲುವಂಥ ಶೂರಳು ಬರುತ್ತಾಳೆ, ನನ್ನ ಮಾತು ನಿಜವೆಂದು ತಿಳಿಯೋ ದೈತ್ಯಾ ॥

ಪದ
ಮಂಗ ಕೋತಿಯೇ, ನಿನಗೆ ಅಂಗವೇತಕೆ,
ಹೆಂಗಸಿಗೆ ಹೆದರಿ ನಾನು ಹೋಗಬಹುದೇ ॥

ಕೌಂಡ್ಲೀಕ: ಯೆಲಾ ಮಂಗ ಕೋತಿಯೆ ನನ್ನ ಯದುರಿನಲ್ಲಿ ಯಾತಕ್ಕೋಸ್ಕರವಾಗಿ ಬಗುಳುತ್ತೀಯ ಈ ಭ್ರಷ್ಟಳಾದ ಹೆಂಗಸಿಗೆ ಹೆದರಿ ಹಿಂದಕ್ಕೆ ಹೋಗುವುದುಂಟೇನೋ ಕೋತಿಯೇ ॥

ಪದ
ಕೇಳೆಲೊ ಮಗಧಕುಮಾರ, ತಾಳೆಲೊ ಬಹುಶೂರ,
ಸೀಳುವಳ್ ತರುಣಿಯು ನಿನ್ನ ಕ್ಷಣ ಸೈರಿಸು ಮುನ್ನಾ ॥

ಆಂಜನೇಯ: ಯೆಲಾ ದೈತ್ಯ, ನೀನು ರಣಾಗ್ರದಲ್ಲಿ ಬಹಳ ಶೂರನಾಗಿರುತ್ತೀಯ. ನಿನ್ನ ಶೂರತ್ವವನ್ನು ಇದೇ ರಣಭೂಮಿಗೆ ಅಡಗಿಸುವಂಥ ಶೂರಳು ಬರುತ್ತಾಳೆ. ಕ್ಷಣಮಾತ್ರ ಸೈರಿಸುವಂಥವನಾಗೋ ಪಾಪಿ ॥

ಪದ
ಯೆಲಾ ಕೋತಿಯೆ, ಕತ್ತೆಯಂತೆ ಬಿದ್ದುಯಿದ್ದೆ
ಯೆದ್ದು ತೋರೊ ನಿನ್ನ ಶಕ್ತಿ ಬಂದ ಮಂಗನೇ ॥

ಕೌಂಡ್ಲೀಕ: ಎಲೈ ಮಂಗರೋಳ್ ಪುಂಡಕೋತಿಯೆ, ನೀನು ರಣಾಗ್ರದ ಮಧ್ಯದಲ್ಲಿ ಕತ್ತೆಯೋಪಾದಿಯಲ್ಲಿ ಬಿದ್ದಿರುವುದನ್ನು ಬಿಟ್ಟು ನನ್ನಲ್ಲಿ ರಣಾಗ್ರಕ್ಕೆ ಬಂದಿರುವೆಯ ಎಲಾ ಕೋತಿಯೆ, ರಣಾಗ್ರಕ್ಕೆ ಯದುರಾಗುವಂಥವನಾಗೆಲಾ ಮಂಗನೇ

ಯುದ್ಧ

ಪದ
ರೂಪ ಧರಿಸಲೆ ತಾಯೆ ಬೇಗನೆ,
ಭೂಪನನು ಹೊಡೆಯುವುದು ಯೀಗಲೆ.
ತಾಪಕ್ಕೆ ಮೊರೆ ಹೋಗುವುದಿಲ್ಲ, ಮಹಿಮನನುಜಾ ॥

ಅಂಜನೇಯ: ಅಮ್ಮಾ ತಾಯೆ, ನಾನು ಹೋಗಿ, ಆ ಖೂಳನಾದ ಮಗಧಕುಮಾರನಲ್ಲಿ ಸೆಣಸಿ, ಮೂರ್ಛೆೆಯನ್ನು ಹೊಂದಿ, ಎಚ್ಚೆತ್ತು ನಿಮ್ಮಲ್ಲಿ ಬಂದಿರುವೆನು. ನೀವು ಅತಿಜಾಗ್ರತೆಯಿಂದ ಅವತಾರವನ್ನು ತಾಳಿದ್ದೇಯಾದರೆ, ಅಂತಪ್ಪ ಖೂಳನು, ಮರಣನಾಗುತ್ತಾನೆ, ಜಾಗ್ರತೆಯಾಗಿ ರೂಪನ್ನು ಧರಿಸುವಂಥವ ಳಾಗಮ್ಮಾ ತಾಯೇ ॥

ಪದ
ಆರು ಯೋಜನದಗಲ ಬೆಳೆಯುವೆ,
ಹತ್ತು ಯೋಜನದುದ್ದ ಬೆಳೆಯುವೆ
ನೋಡೋ ತಾಳುವೆನು ಅವತಾರವಾ ಯೆಂದಳಾಗ ॥

ದ್ರೌಪದಿ: ಅಯ್ಯ ಮುಖ್ಯಪ್ರಾಣ, ನಾನು ರೂಪನ್ನು ಧರಿಸಬೇಕಾದರೆ, ಆರು ಯೋಜನದಗಲ ವಾಗಿಯೂ, ಹತ್ತು ಯೋಜನ ವುದ್ದವಾಗಿಯೂ, ರೂಪನ್ನು ಧರಿಸಿಕೊಂಡು, ಆ ಖೂಳನಾದ ದೈತ್ಯನನ್ನು ಸಂಹಾರ ಮಾಡುತ್ತೇನೆ. ನನ್ನ ಶೌರ‌್ಯವನ್ನು ನೋಡುವಂಥವನಾಗಯ್ಯ ಮುಖ್ಯಪ್ರಾಣ ॥

ಪದ
ರವಿಯ ಮಂಡಲ ಚಂದ್ರಮಂಡಲ  ತಾ ಮಂಡಲಕೀಗ ಬೆಳೆಯುತೆ,
ದುರುಳನನ್ನು ಸಂಹರಿಸು ನೀನು ಮುದದಿ ತಾಯೇ ॥

ಆಂಜನೇಯ: ಅಮ್ಮಾ ತಾಯೆ, ಸೂರ್ಯ ಮಂಡಲಕ್ಕೂ, ಚಂದ್ರಮಂಡಲಕ್ಕೂ, ತಾರಾಮಂಡಲಕ್ಕೂ ಪ್ರಕಾಶವಾಗಿ ಬೆಳೆದು ಆ ಖೂಳನಾದ ಮಗಧನನ್ನು ಸಂಹಾರ ಮಾಡುವಂಥವಳಾಗಮ್ಮ ತಾಯೇ ॥

ಆಂಜನೇಯ: ಎಲೆ ದೈತ್ಯ ನಿನ್ನನ್ನು ಕೊಲ್ಲುವಂಥ ಶೂರಳು ॥ಬರುತ್ತಾಳೆ ಸ್ವಲ್ಪ ಮಾತ್ರ ಸೈರಿಸೆಲಾ ಮಗದ ಭೂಪಾಲ ॥

ಭಾಮಿನಿ
ಯೆಂತು ಮಾಡಲಿ ನಾನೂ  ಕಂತುಪಿತನು ಮರಣವಾದನು
ಯಿಂತು ಈಕೆಯ ಕೈಲಿ ಮರಣವಾಗುವಂತಾಯ್ತೆ ಪರಮೇಶಾ ॥

ಕೌಂಡ್ಲೀಕ: ಅಯ್ಯೋ ಹರಹರ, ಯಿಂದಿನಾ ದಿವಸ, ನಾನು ಹೇಗೆ ಮಾಡುವಂಥವನಾಗಲಿ ಕಂತುಪಿತನಾದಂಥ ಶ್ರೀಕೃಷ್ಣನು ಮತ್ತು ಸರ್ವರಾದಿಯಾಗಿ  ನಾನು ಮೂರ್ಛೆಗೊಳಿಸುವಂಥವನಾದೆ. ಅಂತಪ್ಪಾ ಪರಾಕ್ರಮಿಯಾದ ನಾನು. ಈ ದುರುಳೆಯ ಕೈಯಲ್ಲಿ ಮರಣವಾಗುವುದಕ್ಕೆ ಪ್ರಾಪ್ತವಾಯಿತೆ. ಹರಹರಾ ದಂತಿವರನಾದಂಥ ಬ್ರಹ್ಮನು ಬರೆದ ಬರೆಹವನ್ನು ಮೀರುವದಕ್ಕೆ ಅಸಾಧ್ಯವಾಗಿರುವುದು  ಯಿರಲಿ  ಸ್ವಲ್ಪ ಮಾತ್ರ ರಣಾಗ್ರವನ್ನು ಮಾಡಿನೋಡುತ್ತೇನೆ ॥

ಪದ
ಎಲ್ಲಿ ತೋರಿಸೋ ಮಂಗ ಕೋತಿಯೇ ಭಂಗಪಡಿಸುವೆ ನಿನ್ನನೀಗಲೇ
ಚುಂಗ ಮುರಿಯುವೆ  ಚಂಗಿ ಮೂರ್ಖನೇ ॥

ಕೌಂಡ್ಲೀಕ: ಯೆಲವೋ ಮಂಗರೋಳ್  ಮಂಗಕೋತಿಯೆ  ನನ್ನನ್ನು ಕೊಲ್ಲುವಂಥ ಶೂರಳು ಯೆಲ್ಲಿ ಬರುವಳು, ಜಾಗ್ರತೆಯಿಂದ ತೋರಿಸುವಂಥವನಾಗೋ ಮಂಗ ಕೋತಿಯೇ ॥

ಆಂಜನೇಯ: ಎಲಾ ದೈತ್ಯ ಯಾತಕ್ಕೆ ಇಷ್ಟು ಕೋಪಾರೂಢನಾಗಿ ಮೆರೆಯುತ್ತಿರುವೆ. ಆ ಮಹಾತ್ಮಳ ಮಹಿಮೆಯನ್ನು ತೋರಿಸುತ್ತೇನೆ. ಸ್ವಲ್ಪಮಾತ್ರ ಸೈರಿಸುವಂಥವನಾಗೆಲಾ ದೈತ್ಯ ॥

ಪದ
ಪಡ ಪಡೆನುತಲಿ  ಕಡಿದು ಬಿಡುವೆನೂ
ಕಡುಸಡಗರದೋಳ್  ಹಿಡಿದು ಕೊಲ್ಲುವೇ ॥

ಕೌಂಡ್ಲೀಕ: ಯೆಲವೋ ಕೋತಿಯೆ  ನನಗೆ ವೈರಿಯಾಗಿರುವಂಥವಳು ಯೀ ಧರಿತ್ರಿಯಲ್ಲಿ ಯಾರಿರುವಳು ತೋರಿಸೂ  ಇಲ್ಲವಾದರೆ ನಿನ್ನನ್ನು ಶೀಳಿ ಬಿಡುತ್ತೇನೆ ॥

 

(ದ್ರೌಪದಿಯು ಚಂಡಿ ರೂಪವನ್ನು ತಾಳುವ್ಯ)

ಪದ
ಈಶ ಕಂದನೆ ಕೇಳೋ, ಮೋಕ್ಷವಾಯಿತು ಜಗದಿ
ಕ್ಲೇಶವ ಪರಿಹರಿಸೋ, ಯೀ ಬವಣೆಯನೂ ॥

ಚಂಡಿ: ಅಯ್ಯ ಹನುಮಂತ, ಈ ದುರುಳನಾದ ಮಗಧನನ್ನು ಸಂಹಾರ ಮಾಡಿರುತ್ತೇನೆ. ಯಿದೂ ಅಲ್ಲದೆ, ಯೀ ರಣಾಗ್ರದ ಮಧ್ಯದಲ್ಲಿ ಮೂರ್ಛೆಯಿಂದ ಮಲಗಿರುವವರನ್ನು ಎಚ್ಚರಿಸುವುದು ಹೇಗೆ. ನನ್ನಲ್ಲಿ ಸಾಂಗವಾಗಿ ಹೇಳುವಂಥವನಾಗೈಯ್ಯ ಹನುಮಂತ ॥

ಪದ
ರಾಮಾ ಪಾಳ್ಳದಿ ಹಿಂದೆ  ಇಂದ್ರಾರಿ ಚಾಪದಲೀ
ರಾಮ ಲಕ್ಷ್ಮಣ ಸಹಿತ ಮೂರ್ಚೆಗೊಂಡಿಹರಮ್ಮ

ಆಂಜನೇಯ: ಅಮ್ಮಾ ತಾಯೇ, ಹಿಂದೆ ತ್ರೇತಾಯುಗದಲ್ಲಿ ರಾಮದೇವರ ಸೇನೆಯಲ್ಲಿರುವಾಗ್ಗೆ ಲಂಕಾಪಟ್ಟಣವನ್ನು ಆಳುವಂಥ ದಶಕಂಠನ ಮಗನಾದಂಥ, ಇಂದ್ರಾರಿಯು  ನಮ್ಮ ರಘುನಾಥನಾದ ಶ್ರೀರಾಮದೇವರಲ್ಲಿ ರಣಾಗ್ರ ಮಾಡುವ ಸಮಯದಲ್ಲಿ ರಾಮದೇವರು ಲಕ್ಷಣದೇವರು ಸಹ ಅವನ ಬಾಣದ ವುಪಹತಿಯನ್ನು ತಾಳಲಾರದೆ ಮೂರ್ಛೆೆ ಹೊಂದುವಂಥವರಾದರಮ್ಮಾ ತಾಯೇ ॥ಮತ್ತೂ ಹೇಳುತ್ತೇನೆ ॥

ಪದ
ಪೋಗಿ ಸಂಜೀವನವ ತಂದೆನು ತಾಯೆ
ಪ್ರಾಣಗಳ ಪಡೆದೆನು ನಾನೂ  ರಾಮ ಲಕ್ಷಣರನ್ನು ಕಾಯೇ ॥

ಆಂಜನೇಯ: ಅಮ್ಮಾ ತಾಯೆ ಆಗ ನಾನೂ  ಚಂದ್ರದ್ರೋಣ ಪರ್ವತಕ್ಕೆ ಹೋಗಿ, ಜೀವರತ್ನವನ್ನು ತಂದು  ಮೂರ್ಛೆಯಿಂದ ಮಲಗಿದ್ದ ರಾಮ ಲಕ್ಷ್ಮಣದೇವರ ಮೂರ್ಛೆಯನ್ನು ತಿಳಿಸಿದಂಥವನಾದೆ ಯೀಗ ಅದೇ ಚಂದ್ರದ್ರೋಣ ಪರ್ವತಕ್ಕೆ ಹೋಗಿ ಜೀವರತ್ನವನ್ನು ತೆಗೆದುಕೊಂಡು ಬರುತ್ತೇನಮ್ಮಾ ತಾಯೇ ॥

ಪದ
ಹನುಮಂತ ನೀ ಬಾರೋ ಜೀವರತ್ನ ತಾರೋ
ಪ್ರಾಣಗಳ ಪಡೆಯಯ್ಯ ಹನುಮಾ ॥

ಚಂಡಿ: ಅಯ್ಯ ಹನುಮಂತ, ನೀನು ಜಾಗ್ರತೆಯಾಗಿ ಹೋಗಿ  ಜೀವರತ್ನವನ್ನು ತರುವಂಥವನಾಗಯ್ಯ ಹನಮಂತೂ ॥

ಪದ
ಅಮ್ಮಾ ತಾಯೇ ಈಗಲೇ ಹೋಗುತ್ತೇನೆ
ರಾಮ ರಾಮ ರಾಮ ಸೀತಾ ॥

ಆಂಜನೇಯ: ಅಮ್ಮಾ ತಾಯೇ ಇಗೋ ಜೀವರತ್ನವನ್ನು ತಂದಿರುತ್ತೇನೆ ॥

ಚಂಡಿ: ಅಯ್ಯ ಹನುಮಂತ, ನೀನು ತಂದಿರುವ ಜೀವರತ್ನವನ್ನು ಮೂರ್ಛೆಯಿಂದ ಮಲಗಿರುವವರ ಮೋಹರದ ಮೇಲೆ ತಳಿಯುವಂಥವನಾಗಯ್ಯ ಹನುಮಂತ ॥

ಪದ
ಅಮ್ಮಾ ತಾಯೆ ತಮ್ಮ ಅಪ್ಪಣೆಯಂತೆ ತಳಿಯುತ್ತೇನೆ
ರಾಮ ರಾಮ ಸೀತಾರಾಮ ನೀ ರಾಮಾ ॥

ಆಂಜನೇಯ: ಹರಿಹರ ಬ್ರಹ್ಮಾದಿಗಳಾದಿಯಾಗಿ ಸರ್ವರೂ ಮೇಲಕ್ಕೇಳುವಂಥವರಾಗಿ ॥

ಭಾಮಿನಿ
ಮಗದನನು ಮರಣ ಮಾಡಿದವರಾರೈ
ಪರಿಪರಿಯಲಿ ಭಂಗಗೊಳಿಸಿದ ದುರುಳನನು
ಕೊಂದವರಾರು ಪೇಳೆಂದನಾ ಹರಿಯೂ ॥

ಕೃಷ್ಣ: ಅಮ್ಮಾ ತಂಗಿ ದ್ರೌಪದಿ, ಈ ದುರುಳನಾದ ಮಗಧನನ್ನು ಸಂಹಾರ ಮಾಡಿದವರು ಯಾರು. ನನ್ನಲ್ಲಿ ಸಾಂಗವಾಗಿ ಹೇಳುವಂಥವಳಾಗಮ್ಮ ತಂಗಿ ದ್ರೌಪದಾ ॥

ಪದ
ಅಂಣ ಹರಿಯೆ ಕೇಳೋ ಪರಿಪರಿಯ
ಅವತಾರದೊಳು ಕೊಂದೆ ದೈತ್ಯನ ನಾನೂ ॥

ಚಂಡಿ: ಅಂಣಯ್ಯ ಶ್ರೀಹರಿ ನಾನು ಪರಿಪರಿ ಅವತಾರವನ್ನು ತಾಳಿ ನಿನ್ನ ಕರುಣ ಕಟಾಕ್ಷದಿಂದ ಆ ಖೂಳನಾದ ಮಗಧನನ್ನು ಸಂಹಾರ ಮಾಡಿರುತ್ತೇನೆ. ನೋಡುವಂಥವರಾಗಿ ಅಂಣಯ್ಯ ॥

ಕೃಷ್ಣ: ಅಮ್ಮಾ ತಂಗಿ ದ್ರೌಪದ. ನಿನ್ನ ಸಾಹಸವನ್ನು ಮೆಚ್ಚುವಂಥವನಾದೆ. ಸರ್ವರೂ ಕೂಡಿ ಲಗ್ನವನ್ನು ನಡೆಸುವಂಥವರಾಗಿ ॥ಅಯ್ಯ ಧರ್ಮಜ, ಭೀಮ ಅರ್ಜುನರೆ ಸರ್ವರಾದಿಯಾಗಿ ಮೂರ್ಛೆಯನ್ನು ಮಾಡಿದಂಥ, ಮಗಧನನ್ನು ಸಂಹಾರಮಾಡಿದಂಥ ವೀರಾಧಿವೀರಳಿಗೆ ಧೀಘರ್ದಂಡ ನಮಸ್ಕಾರವನ್ನು ಮಾಡುವಂಥವರಾಗಿರಯ್ಯ ಧರ್ಮಜ ಭೀಮಾ ಅರ್ಜುನರೆ ॥

ಧರ್ಮಜ: ಹೇ ಭಾವಯ್ಯ ನಮ್ಮ ಪತ್ನಿಯಾದ ದ್ರೌಪದಿಗೆ ಶರಣಾಗತರಾಗಿದ್ದೇಯಾದರೆ, ಈ ಲೋಕದಲ್ಲಿರುವ ಅಷ್ಟದಿಕ್ಪಾಲಕರು ಗರುಡಗಂಧರ್ವರು  ನಗುವುದಿಲ್ಲವೇನೈ ಭಾವಯ್ಯ ॥

ಕೃಷ್ಣ: ಅಯ್ಯ ಧರ್ಮಜಾ, ನಿನ್ನ ತಮ್ಮನಾದ ಅರ್ಜುನನು ಪೂರ್ವದಲ್ಲಿ ಯತಿವೇಷವನ್ನು ತಾಳಿಕೊಂಡು ಬಂದಾಗ್ಯೆ. ನಮ್ಮ ಅಂಣಯ್ಯನವರಾದ ಬಲರಾಮ ದೇವರು ದೀರ್ಘದಂಡ ನಮಸ್ಕಾರವನ್ನು ಮಾಡಲಿಲ್ಲವೇನಯ್ಯ ಧರ್ಮಜ. ಯೀಗ ನೀವು ಆ ದೈತ್ಯನನ್ನು ಸಂಹಾರ ಮಾಡಿದಂಥ. ಅಘೋರವಾದ ರೂಪನ್ನು ಧರಿಸಿಕೊಂಡಿರುವಂಥ ಮಹಾತ್ಮಳಿಗೆ ಶರಣಾಗತರಾಗಿದ್ದೇಯಾದರೆ ನಿಮಗೆ ಕುಂದಕ ಬರುವುದೇನಯ್ಯ ಧರ್ಮಜ ॥

ಧರ್ಮಜ: ಭಾವಯ್ಯ ತಮ್ಮ ಅಪ್ಪಣೆಯಂತಾಗಲಿ ॥(ಪಾಂಡವರೆಲ್ಲರೂ) ನಮೋ ನಮೋ ತಾಯೇ॥

ಚಂಡಿ: ನಿಮ್ಮೆಲ್ಲರಿಗೂ ಮಂಗಳವಾಗಲಿ ॥

ಕೃಷ್ಣ: ಅಮ್ಮಾ ತಂಗಿ ದ್ರೌಪದಾ  ನೀನು ಈ ಅಘೋರ ರೂಪನ್ನು ಬಿಟ್ಟು ನಿಜರೂಪನ್ನು ತಾಳುವಂಥವಳಾಗಮ್ಮ ತಂಗಿ ದ್ರೌಪದಾ ॥

ದ್ರೌಪದಿ: ನಮೋ ನಮೋ ಅಂಣಯ್ಯ ॥

ಕೃಷ್ಣ: ನಿನಗೆ ಮಂಗಳವಾಲಿ ಮೇಲಕ್ಕೇಳಮ್ಮಾ ತಂಗಿ ದ್ರೌಪತ ॥

ದ್ರೌಪದಿ: ನಮೋ ನಮೋ ಪ್ರಾಣಕಾಂತರೆ ॥

ಧರ್ಮಜ: ನಿನಗೆ ಮಂಗಳವಾಗಲಿ ಮೇಲಕ್ಕೇಳೆ ರಮಣಿ ॥

ಕೃಷ್ಣ: ಅಮ್ಮಾ ತಂಗಿ ದ್ರೌಪದ, ಸರ್ವರು ಆದಿಯಾಗಿ, ಲಗ್ನವನ್ನು  ನಡೆಸುವಂಥವರಾಗಿ ॥

॥ವಿವಾಹ ನಡೆಯುವುದೂ ॥

ರತಿ ಕಲ್ಯಾಣ ಸಂಪೂರ್ಣಂ