ಸನ್ ವಂದು ಸಾವಿರದ ಒಂಬೈನೂರ ಐವತ್ತಾರನೆಯ ಇಸ್ವಿ ಜನವರಿ ತಾರೀಕು ಮೂರರಲ್ಲು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿ ಬಾಗೇಶಪುರ ಗ್ರಾಮದ ಲಿಂಗೇಗೌಡ ಮಗ ಭಾಗವತ ಬಿ.ಎಲ್. ಚಿಕ್ಕೇಗೌಡರು ದಕ್ಷಿಣಾದಿಯಲ್ಲಿ ರತಿ ಕಲ್ಯಾಣ ಬರೆಯುವುದಕ್ಕೆ ಶುಭಮಸ್ತು

ಕಥಾ ಪ್ರಾರಂಭ

ಪದ

ತಂಗಿ ನಿನ್ನಯ ಮುಖ, ಕಂದಿದ ಪರಿಯೇನು
ಇಂದು ಯನ್ನೊಳು ನೀನು ಪೇಳಮ್ಮ ತಂಗೀ ॥

ರಾಧೆ: ಅಮ್ಮಾ ತಂಗಿ ರುಕ್ಮಿಣಿ, ಈ ದಿವಸ ಚಂದ್ರನಂಥ ನಿನ್ನ ಮುಖವು ಕಂದಿ ಕುಂದಿರಲು ಕಾರಣವೇನು ಹೇಳುವಂಥವಳಾಗಮ್ಮ ತಂಗಿ ರುಕ್ಮಿಣೀ.

ಪದ

ಯಾರು ನಿನ್ನ ಯೀಗ ದೂರಿದರೆಲೆ ತಂಗಿ
ಮಾರಪಿತನು ನಿನ್ನ ದೂರಿದನೇನೆ॥

ರಾಧೆ: ಅಮ್ಮಾ ತಂಗಿ ರುಕ್ಮಿಣಿ ನಿನ್ನನ್ನು ಯಾರು ದೂರುವಂಥವರಾದರು. ಪ್ರಾಣಕಾಂತರಾದ ಶ್ರೀಕೃಷ್ಣ ದೇವರು ನಿನ್ನಲ್ಲಿ ಚೆನ್ನಾಗಿ ಮಾತನಾಡಲಿಲ್ಲವೆ. ನಿನ್ನ ಮನಸ್ಸಿನ ದುಗುಡವನ್ನು ಬಿಟ್ಟು ಹೇಳುವಂಥ ವಳಾಗಮ್ಮಾ ತಂಗಿ ರುಕ್ಮಿಣಿ॥

ಪದ
ಸವತಿಯರ ಮೇಲಣ, ಮತ್ಸರವಿರುವದೆ
ನಿನ್ನಯ ಪರಿಯನು ಪೇಳಮ್ಮಾ ತಂಗೀ ॥

ರಾಧೆ: ತಂಗಿ ರುಕ್ಮಿಣಿ, ನಿನಗೂ ನಿನ್ನ ಸವತಿಯರಿಗೂ ಕಲಹ ಬಂದಿರುವುದೇನಮ್ಮಾ ತಂಗಿ. ಇದರ ವಿಚಾರವನ್ನು ಮರೆಮಾಜದೆ ಹೇಳುವಂಥವಳಾಗಮ್ಮ ತಂಗಿ ರುಕ್ಮಿಣೀ ॥

ಪದ
ಅಂಜಬೇಡವೆ ತಂಗಿ, ಕುಂಜರಗಮನೆಯೇ
ಕಂಜನಾಭನು ಕಾಯ್ವ ಹೇ ಮಂಜುಳಾಂಗೀ ॥

ರಾಧೆ: ತಂಗಿ ರುಕ್ಮಿಣೀ, ನೀನು ಎಷ್ಟು ಮಾತ್ರಕ್ಕೂ ಅಂಜಬೇಡ. ನಿನ್ನ ಮನಸ್ಸಿನ ಅಭಿಪ್ರಾಯವನ್ನು ಮರಮಾಚದೆ ಹೇಳಿದ್ದೇಯಾದರೆ, ನಾನು ನಿನ್ನ ಇಷ್ಟಾರ್ಥವನ್ನು ನಡೆಸಿಕೊಡುತ್ತೇನೆ. ಹೇಳುವಂಥವಳಾಗಮ್ಮಾ ತಂಗೀ ರುಕ್ಮಿಣೀ॥

ಪದ
ಅಕ್ಕ ಕೇಳೆ ಚಿಕ್ಕ ಮಗನ ಗಕ್ಕನೆ ಲಗ್ನವ ಗೈಯಲ್ ॥
ತಕ್ಕ ಕನ್ಯೆ ದೊರೆಯಲಿಲ್ಲಾ  ಅಕ್ಕಯ್ಯ ಕೇಳೇ ॥

ರುಕ್ಮಿಣಿ: ಹೇ ಅಕ್ಕಯ್ಯ ನನ್ನ ಚಿಕ್ಕಮಗನಾದ ಮನ್ಮಥನಿಗೆ ತಕ್ಕ ಕನ್ನೆಯನ್ನು ತಂದು, ಆನಂದದಿಂದ ಲಗ್ನವನ್ನು ಮಾಡಿ ನೋಡಲಿಲ್ಲವಾದ ಕಾರಣ  ನಾನು ದುಕ್ಕಿಸುತ್ತಿರುವೆನು ಅಕ್ಕಯ್ಯ ॥

ಪದ
ಪುರುಷ ಕೃಷ್ಣದೇವರಿಂಗೆ ಅರಿತು
ನಾವು ಪೇಳಿದರೆ ತ್ವರಿತದಿಂದ
ನಡೆಸುವರು ನಿಜವಮ್ಮ ತಂಗೀ ॥

ರಾಧೆ: ಅಮ್ಮಾ ತಂಗಿ, ನಮ್ಮ ಪುರುಷರಾದ ಕೃಷ್ಣ ದೇವರಿಗೆ ನಾವಿಬ್ಬರೂ ಜೊತೆಯಾಗಿ ಹೋಗಿ ಪೇಳಿದ್ದೇಯಾದರೆ ನಡೆಸುವುದರಲ್ಲಿ ಸಂದೇಹವಿಲ್ಲ. ನೀನು ಹೋಗಿ ಪ್ರಾಣಕಾಂತರಲ್ಲಿ ಹೇಳಿ ಕೊಳ್ಳುವಂಥವಳಾಗಮ್ಮ ತಂಗಿ ॥

ರುಕ್ಮಿಣಿ: ಅಕ್ಕಯ್ಯ ಹಾಗಾದರೆ ನಾವಿಬ್ಬರೂ ಜೊತೆಯಾಗಿ ಹೋಗೋಣ ನಡಿಯೇ ಅಕ್ಕಯ್ಯ ॥

ರಾಧೆರುಕ್ಮಿಣಿ: ನಮೋ ನಮೋ ಪ್ರಾಣಕಾಂತರೆ ॥

ಕೃಷ್ಣ: ಧೀರ್ಘಾಯುಷ್ಯಮಸ್ತು ನಿಮಗೆ ಮಂಗಳವಾಗಲಿ. ಮೇಲಕ್ಕೇಳುವಂಥವರಾಗಿರೈ ಪ್ರಾಣಕಾಂತೆಯರೆ॥

ಪದ
ಕೋಮಲಾಂಗಿ ಕೇಳು ಮನದ ದುಗುಡವೇತಕೆ
ಭೂಮಿಯೊಳಗೆ ಬಂದ ಕೊರತೆ ಪೇಳು ಯನ್ನೊಳು ॥

ಕೃಷ್ಣ: ಹೇ ಪ್ರಾಣಕಾಂತೆಯರೆ, ಚಂದ್ರನನ್ನು ಧಿಕ್ಕರಿಪ ನಿಮ್ಮ ಮುಖವು ಯಿಂದಿನ ದಿವಸ ಕಂದಿ ಕುಂದಿರುವುದಕ್ಕೆ ಕಾರಣವೇನು, ಹೇಳುವಂಥವರಾಗಿರೈ ಪ್ರಾಣಕಾಂತೆಯರೆ ॥

ಪದ
ಮುದ್ದು ಮೋಹನ ಕೇಳೆನ್ನ ಬಿನ್ನಪವಾ
ತರಳ ಮನ್ಮಥನಿಗೆ ಪರಿಣಯವಿಲ್ಲಾ
ಕರುಣವಾಂತು ನೀವು, ಪೇಳಬೇಕೆನಗೇ ॥

ರುಕ್ಮಿಣಿ: ಸ್ವಾಮಿ ಪ್ರಾಣಕಾಂತರೆ, ಕಂದನಾದ ಮನ್ಮಥನಿಗೆ ಕನ್ನಿಕೆಯನ್ನು ತಂದು ಆನಂದದಿಂದ॥ ವಿವಾಹವನ್ನು ಮಾಡಿ ನೋಡಲಿಲ್ಲವಾದ ಕಾರಣ, ನಾನು ಚಿಂತಿಸುತ್ತಿರುವೆನು, ಇದಕ್ಕೆ ಹೇಗೆ ಮಾಡುತ್ತೀರ, ಹೇಳುವಂಥವರಾಗಿ, ಪ್ರಾಣಕಾಂತರೇ ॥

ಪದ
ಮಾನುನಿ ರುಕ್ಮಿಣಿ ಯಾಕೆ ಚಿಂತೆ ಮನದೊಳು ॥
ನಡೆಸುವೆನು ಕಾರ‌್ಯವನ್ನು ಸಡಗರದಿಂದಾ ॥

ಕೃಷ್ಣ: ಹೇ ರುಕ್ಮಿಣಿ ಯಾತಕ್ಕೆ ಚಿಂತೆಯನ್ನು ಮಾಡುವೆ ಕಂದನಾದ ಮನ್ಮಥಂಗೆ, ತಕ್ಕ ಕನ್ನಿಕೆಯನ್ನು ತಂದು ಲಗ್ನವನ್ನು ಮಾಡುತ್ತೇನೆ ನೀನು ಚಿಂತಿಸಲಾಗದೆ ಪ್ರಾಣಕಾಂತೆ ॥

ಪದ
ಕಮಲನಯನ, ಕೇಳು ವಿಮಲ,
ವಿಶ್ವಕೃತಿಯ, ಹರುಷದಿಂದ ಪರಿಣಯವನು,
ನಡೆಸುವದು ನಿಜವೆ ಕಾಂತರೆ ॥

ರುಕ್ಮಿಣಿ: ಪ್ರಾಣಕಾಂತರೆ, ಪಂಚಬಾಣನಿಗೆ ತಕ್ಕ ಸುಂದರಿಯನ್ನು ತಂದು, ಲಗ್ನ ಮಾಡುತ್ತೇನೆಂಬುವ ಮಾತೂ, ನನಗೆ ನಂಬಿಕೆ ಸಾಲದೂ ಪ್ರಾಣಕಾಂತರೆ ॥

ವಾರ್ಧಕ
ಎಂಟು ದಿವಸದೋಳ್ ತಾನೆ,
ಮನ್ಮಥನಿಗೆ ನಂಟುಸ್ತನವ ಮಾಡುವೆನು.
ಕುಟಿಲವಾದರೆ ಅಗ್ನಿಯ ಪೋಗುವೆನು ನಾನು.
ಶ್ರೀಕಂಠನ ಪಾದದಾಣೆ ಎಂದನಾ ಹರಿಯೂ ॥

ಕೃಷ್ಣ: ಹೇ ಪ್ರಾಣಕಾಂತೆ, ಕಂದನಾದ ಮನ್ಮಥನಿಗೆ ಎಂಟು ದಿವಸದಲ್ಲಿ ಕನ್ನಿಕೆಯನ್ನು ತಂದು ವಿವಾಹವನ್ನು ಮಾಡದಿದ್ದರೆ – ಈ ಶರೀರವನ್ನು ಅಗ್ನಿಗೆ ವೊಪ್ಪಿಸುತ್ತೇನೆ. ಅಲ್ಲದೆ ಹದಿನಾರು ಸಾವಿರ ಗೋಪಿಕಾ ಸ್ತ್ರೀಯರನ್ನು ಬಿಟ್ಟು ಬಿಡುತ್ತೇನೆ. ಈ ಮಾತು ನಿಜವೆಂದು ತಿಳಿಯಿರೆ ಪ್ರಾಣಕಾಂತೆಯರೆ ॥

ಪದ
ನಾನೊಪ್ಪೆ ಮಾತುಗಳ – ಕಾತುರದಿ
ನೀವಿರುವೇ ನಾನೂ ತಿಳಿಸಲು ಈಗ
ಬಂದೇನು ಕಾಂತಾ ॥

ರುಕ್ಮಿಣಿ: ಸ್ವಾಮಿ ಪ್ರಾಣಕಾಂತರೆ, ನೀವು ಆಡುವ ಮಾತುಗಳನ್ನು ನಾನು ವಪ್ಪುವಳಲ್ಲ, ನೀವು ಕಾತುರತೆಗಳಿಂದಲೇ ಇರುತ್ತೀರ, ನಾನು ಹೇಳುವ ಮಾತುಗಳನ್ನು ತಮ್ಮ ಚಿತ್ತಕ್ಕೆ ತರುವುದಿಲ್ಲವೈ ಪ್ರಾಣಕಾಂತರೆ ॥

ಭಾಮಿನಿ
ವುದರದೊಳ್ ಯೀರೇಳು, ಲೋಕವನು ಸಲಹುವೆನು.
ಮುದದಿ ಯಿದುವೊಂದು ದೊಡ್ಡದೇ,
ನೀನು ಬಿಡು ಚಿಂತೆಯನು ಎಂದನಾ ಹರಿಯೂ ॥

ಕೃಷ್ಣ: ಹೇ ಪ್ರಾಣಕಾಂತೆ, ಯೀರೇಳು ಹದಿನಾಲ್ಕು ಲೋಕವನ್ನು  ನನ್ನ ಹೃದಯದಲ್ಲಿದ್ದುಕೊಂಡು  ಸಲಹುವಂಥವನಿಗೆ ಈ ಕೆಲಸವು ಅಗಾಧವಾಗಿರುವುದೆ. ಎಂತಾ ಮಾತುಗಳನ್ನಾಡುತ್ತೀರೆ ಪ್ರಾಣಕಾಂತೆಯರೆ॥

ಪದ
ನಿಮ್ಮ ಮಾತಿದು, ಸುಳ್ಳನಾದರೆ
ನಿಮ್ಮ ಬಿಟ್ಟು ಪೋಗುವೆವು, ನೀವು
ಯೆಂದು ತಿಳಿಯಿರೀಗ ಪ್ರಾಣಕಾಂತರೆ ॥

ರಾಧರುಕ್ಮಿಣಿ: ಹೇ ರಮಣ, ನೀವು ಆಡುವ ಮಾತೂ, ಸುಳ್ಳಾದರೆ ನಿಮ್ಮ ರಾಣಿಯರಾದ ನಾವುಗಳೆಲ್ಲರೂ ನಿಮ್ಮನ್ನು ಬಿಟ್ಟು, ಬೇರೆ ತೆರಳುತ್ತೇವೆ – ಈ ಮಾತು ನಿಜವೆಂದು ತಿಳಿಯುವಂಥವರಾಗಿ ಸ್ವಾಮಿ ॥

ಪದ
ಸುಂದರಾಂಗಿ ಸುಮ್ಮನಿರಿ ಪೋಗಿ ಮನೆಯೊಳು
ಕಂದನಿಗೆ ಸುಂದರಿಯ ನಾನು ತರುವೆನು ॥

ಕೃಷ್ಣ: ಹೇ ಮಂದಗಮನೆಯೆ. ಸಂದೇಹವನ್ನು ಬಿಟ್ಟು ವಂದೇ ಮನಸ್ಸಿನಲ್ಲಿ – ಇರುವಂಥವರಾಗಿ. ಪರಂತು ಅಂದ ಚಂದದ ಬಾಲಕಿಯನ್ನು ತಂದು ಮನ್ಮಥನಿಗೆ ಲಗ್ನವನ್ನು ಮಾಡುತ್ತೇನೆ. ನೀವು ಅರಮನೆಗೆ ತೆರಳುವಂಥವರಾಗಿರೈ ಪ್ರಾಣಕಾಂತೆ ॥

ಪದ
ಭೂಮಿಪಾಲ ಕೃಷ್ಣ ಅರಸುತ್ತ ಹೊರಟನು ॥
ದೇಶ ದೇಶಂಗಳನ್ನು ತಿರುಗಿದಾ ಹರೀ ॥

ಕೃಷ್ಣ: ಅಯ್ಯೋ ಶಿವ ಶಿವ, ಸತಿಯರಿಗೆ  ನಂಬಿಗೆಯನ್ನು ಕೊಡುವಂಥವನಾದೆ, ನನ್ನ ಕಾರ‌್ಯವು ಯೆಂದಿಗಾಗುವುದೋ ಕಾಣೆನಲ್ಲಾ. ಶಿವ ಶಿವ ಮುಂದೇನು ಮಾಡಲಿ ॥

ಪದ
ಅಂಗವಂಗ ಕಳಿಂಗ ಕರ್ನಾಟ ತಿರುಗಿದೆ
ತುಂಡ ಭಂಗಾಳವನ್ನು ಅರಸಿ ನೋಡಿದೆ ॥

ಕೃಷ್ಣ: ಶಿವ ಶಿವ, ಅಂಗ ವಂಗ ಕಾಳಿಂಗ, ಕಾಂಭೋಜ, ಕರ್ನಾಟ, ಇಂಥಾ ದೇಶವನ್ನು ಅರಸಿ ನೋಡಿದಾಗ್ಯೂ, ತಕ್ಕ ಕನ್ಯೆಯು ದೊರೆಯಲಿಲ್ಲವಲ್ಲಾ ಶಿವಶಿವ ಮುಂದೇನು ಮಾಡಲಿ ॥

ಪದ
ಮಾಳವ ದೇಶಕ್ಕೆ ನಾನು ಹೋಗಿ ಬರುವೆನೂ
ಯೆಂದು ನಿಶ್ಚೈಸಿ ರಂಗನಾಥ ಹೊರಟನೂ ॥

ಕೃಷ್ಣ: ಶಿವಶಿವ, ನಾನು ಮಾಳವ ದೇಶವನ್ನು, ಹೊಕ್ಕು ನೋಡಿದಾಗ್ಯೂ ತಕ್ಕ ಕನ್ಯೆಯು ದೊರೆಯಲಿಲ್ಲವಲ್ಲಾ॥ಶಿವ ಶಿವ ನಾನು ಮಾಡಿದ ಪಂಥಕ್ಕೆ, ವಿಘ್ನವು ಬಂದ ಮೇಲೆ, ಸುಜನರು ಆಡಿಕೊಳ್ಳುವುದಕ್ಕೆ ಕಾರಣವಾಯಿತಲ್ಲಾ, ಶಿವ ಶಿವ, ಮುಂದೇನು ಮಾಡಲಿ ॥

ಭಾಮಿನಿ:
ದೇಶ ದೇಶಂಗಳ ಹರಸಿ  ಆಯಾಸದಿ ಶ್ರೀಕ್ರಿಷ್ಣನು ಬೇಸರ ಪಡುತ,
ದಿನವಾರು ಮುಗಿಯಲು- ಯೇನ ಮಾಡಲಿ ಎಂದು ಚಿಂತಿಸಿದಾ ॥

ಕೃಷ್ಣ: ಅಯ್ಯೋ ಶಿವ ಶಿವ, ಸಕಲ ದೇಶವನ್ನು ನೋಡಿದಾಗ್ಯೂ ಪಂಚ ಬಾಣನಿಗೆ, ಅಂಗನೆಯು ದೊರೆಯಲಿಲ್ಲವಲ್ಲಾ – ಯಿಲ್ಲಿಗೆ ಆರು ದಿವಸವು ಮುಗಿಯುತ್ತಾ ಬಂದಿರುವುದು – ಯಿದೂ ಅಲ್ಲದೆ, ಅಂಬುಜಾಕ್ಷಿಯರಿಗೆ, ಕೊಟ್ಟಂಥ ಭಾಷೆಗೆ ತಪ್ಪಿ  ಹಂಬಲಿಸುವಂತಾಯಿತಲ್ಲ, ಶಿವ ಶಿವ ಮುಂದೇನು ಮಾಡಲಿ॥

ಪದ
ಜ್ಞಾನಹೀನನು ನಾಂ  ಬಳಲುವೆ ಮನದಿ
ವನಚರರಂತೆ ಪರಿಯಾ ॥ದುರ್ದೈವವೆ
ಮಾನಿಸನಾದೆ, ಬರಿದೇ ಧರಣಿಯ ಜನರೆಲ್ಲ
ಹಗರಣವ ನುಡಿಯುವರು ॥

ಕೃಷ್ಣ: ಅಯ್ಯೋ ಶಿವ ಶಿವ  ಈ ಲೋಕದಲ್ಲಿ ಸಕಲ ಜನರು ನನ್ನನ್ನು ಆಡಿಕೊಳ್ಳುವುದಕ್ಕೆ ಪ್ರಾಪ್ತವಾಯಿತಲ್ಲ ಇದಕ್ಕೆ ಏನು ಮಾಡಲೋ ಸಾಂಬ ಸದಾಶಿವ ॥

ಪದ
ಯೀ ಕಾರ‌್ಯ ಯಾರಿಂದಾಗುವುದೋ ನಾಂ ಕಾಣೆನೂ
ಮುಂದೆನಗೇನು ತೋರದು ವಿಧಿಯೇ ॥

ಕೃಷ್ಣ: ಅಯ್ಯೋ ಹರಹರ ನಾನು ಮಾಡಿರುವ ಶಪಥವು ಆಗುವುದೋ ಕಾಣೆನಲ್ಲಾ. ಶಿವಶಿವ ॥

ಪದ
ಹರಿಹರಿ ಶ್ರೀಪತೆ, ಮುರಹರ ಕಾಂತಕ
ಸರಸಿಜ ಕಾಯೋ ನಾರಾಯಣ ॥

ನಾರದ: ನಾರಾಯಣ ನಾರಾಯಣ ವೇದ ಪಾರಾಯಣ ಸೇವಕ ನಾರದ ಮಹಾತ್ಮರು ಬಂದಿರುವರೆಂದು ಶ್ರೀಕೃಷ್ಣ ಪರಮಾತ್ಮನಿಗೆ ತಿಳುಹಿಸೂ ॥

ಪದ
ನಾರದ ಮುನಿಗಳೆ ನಿಮಗೆ ಮಂಗಳವಾಗಲಿ ॥
ತ್ರಿಲೋಕವನು ಚರಿಪ  ನಾರದ ಮುನಿಗಳೇ
ನೀವು ಬಂದು ಮನಕೆ ಹರುಷವಾಯಿತು ಎಂದಾ ॥

ಕೃಷ್ಣ: ಸ್ವಾಮಿ ನಾರದ ಮುನಿಗಳೆ. ನೀವುಗಳು ದಯಮಾಡಿಸಿ ನನಗೆ ಬಹಳ ಸಂತೋಷವಾಯಿತು. ಈ ವುಚಿತಾಸನದಲಿ ವಿಶ್ರಮಿಸಿಕೊಳ್ಳಬಹುದೂ ಸ್ವಾಮಿ॥

ಪದ
ಹರಿಯೇ ಲಾಲಿಸಿ ಕೇಳೂ
ನಿನ್ನಯ ಮುಖ ಕಮಲ ಇಂದಿನ ದಿನದೊಳು
ಕಂದಿರಲು ಕಾರಣವಾ ॥

ನಾರದ: ಕೃಷ್ಣ ಪರಮಾತ್ಮ ತಾವರೆ ಕಮಲದೋಪಾದಿಯಲ್ಲಿ ಇದ್ದಂಥ ನಿನ್ನ ಮುಖವು. ಈ ದಿವಸ ಕಂದಿ ಕುಂದಿರಲು ಕಾರಣವೇನು ಹೇಳುವಂಥವನಾಗೈ ಕಮಲನಾಭ॥

ಪದ
ಯೇನ ಹೇಳಲಿ ನಾನು. ನಾರದ ಮುನಿಗಳೇ,
ಕಂದ ಮನ್ಮಥನಿಗೆ  ಕನ್ನಿಕೆಯು ದೊರೆಯದೇ ॥

ಕೃಷ್ಣ: ಸ್ವಾಮಿ ನಾರದ ಮುನಿಗಳೆ, ಯನ್ನ ಕಂದನಾದ ಮನ್ಮಥನಿಗೆ ತಕ್ಕ ಕನ್ನಿಕೆಯನ್ನು ತಂದು ಎಂಟು ದಿವಸದೊಳಗಾಗಿ  ವಿವಾಹವನ್ನು ಮಾಡುತ್ತೇನೆಂದು  ನನ್ನ ಮಡದಿಯರಾದ ರಾಧಾ ರುಕ್ಮಿಣಿಯರಿಗೆ ಭಾಷೆಯನ್ನು ಮಾಡಿ ಇಲ್ಲಿಗೆ ಆರು ದಿವಸಗಳಿಂದಲೂ ಚಪ್ಪನ್ನೈವತ್ತಾರು ದೇಶವನ್ನು ತಿರುಗಿದಾಗ್ಯೂ ಪಂಚ ಬಾಣನಿಗೆ ಅಂಗನೆಯು ದೊರೆಯಲಿಲ್ಲ  ಈ ಕಾರ‌್ಯವು ಯಾರಿಂದಾಗುವುದು ಹೇಳಬೇಕೈ ನಾರದ ಮುನಿಗಳೇ ॥

ಪದ
ಹದಿನಾಲ್ಕು ಲೋಕವನು ಕುಕ್ಷಿಯೊಳಗೆ
ಇರಿಸಿ ನಿನ್ನಿಂದಲಾಗದ, ಕಾರ‌್ಯವು ಇನ್ನುಂಟೇ ॥

ನಾರದ: ಅಯ್ಯ ಕೃಷ್ಣ ಪರಮಾತ್ಮ, ಅತಳ ವಿತಳ ರಸಾತಳ ತಳಾತಳ ಪಾತಾಳವೆಂಬ ಏಳು ಏಳು ಹದಿನಾಲ್ಕು ಲೋಕವನ್ನು ನಿನ್ನ ಹೃದಯದಲ್ಲಿ ಇಟ್ಟುಕೊಂಡಿರುವ ನಿನಗೆ ಆಗದ ಕಾರ‌್ಯವು ಮತ್ಯಾರಿಂದಾಗುವದಯ್ಯಾ ಪರಮಾತ್ಮ ॥

ಕೃಷ್ಣ: ಸ್ವಾಮಿ ನಾರದ ಮುನಿಗಳೆ, ಹಾಗನ್ನಕೂಡದು. ಈ ಕಾರ‌್ಯವು ಯಾರಿಂದಾಗುವದು ನೀವೇ ಹೇಳಬೇಕೂ ॥

ಪದ
ದೃಪದ ನಂದನೆಯನ್ನು, ದ್ರೌಪದಿಯನ್ನು
ನೀನು ಸ್ಮರಿಸಲು ನಿನ್ನಯ ಕಾರ‌್ಯವಾಗುವುದೆಂದಾ ॥

ನಾರದ: ಅಯ್ಯ ಕೃಷ್ಣ ಪರಮಾತ್ಮ, ದೃಪದಾತ್ಮಜೆಯಳಾದ ದ್ರೌಪದಿಯನ್ನು, ನೀನು ನೆನವರಿಕೆ ಮಾಡಿದ್ದೇಯಾದರೆ ನಿನ್ನ ಕಾರ‌್ಯವು ನೆರವೇರುವುದು. ನಿನ್ನ ತಂಗಿಯಾದ ದ್ರೌಪದಿಯನ್ನು ನೆನವರಿಕೆ ಮಾಡುವಂಥವನಾಗೂ, ನಾನಾದರೂ ಹೋಗಿ ಬರುತ್ತೇನೆ ॥

ಕೃಷ್ಣ: ಹರಹರ ನಾನು ಮಾಡಿದ ಶಪಥವು – ನನ್ನ ತಂಗಿಯಾದ ದ್ರೌಪತಿಯಿಂದ ನೆರವೇರುವುದೆಂದು ನಾರದರು ಹೇಳಿದಂತೆ ನನ್ನ ತಂಗಿಯಾದ ದ್ರೌಪದಿಯನ್ನು ಸ್ಮರಿಸುತ್ತೇನೆ ॥

ಭಾಮಿನಿ
ಯಿತ್ತ ಶ್ರೀಹರಿಯು ದುಕ್ಕಿಸುತ್ತಿರಲು
ಯಿಂದ್ರಪ್ರಸ್ತದೋಳ್, ಚಿತ್ತಜನಯ್ಯನನು
ಸ್ಮರಿಸುತ ಪಾಂಡವರು ವಡ್ಡೋಲಗಸ್ಥರಾದರದೆಂತನೇ ॥

 

(ಪಾಂಡವರ ಸಭೆ)

ಪದ
ಎಷ್ಟೂ ಶೃಂಗಾರವಮ್ಮ ನಗರ ಪಾಂಡವರ ನಗರ ॥ಎಷ್ಟು ॥
ಧರ್ಮರಾಯರ ನಗರ ॥ಎಷ್ಟು ॥
ರತ್ನದಿ ಕೆತ್ತಿದ ಮುತ್ತಿನ ಬೋದಿಗೆ ಮುತ್ತುಗಳೆಳೆದಿವೆ ಸಾಲಾಗಿ ॥
ಎಷ್ಟೂ ಶೃಂಗಾರ ॥

ಸ್ತ್ರೀಯರು: ಅಮ್ಮಾ, ಈ ಪಾಂಡವರ ನಗರವನ್ನು ನೋಡು, ಎಷ್ಟು ರಮ್ಯವಾಗಿರುವುದಮ್ಮಾ॥

1ನೆ ಸ್ತ್ರೀ: ಅಮ್ಮಯ್ಯ, ಇತ್ತನೋಡು, ಮುತ್ತು ರತ್ನ, ವಜ್ರ, ವೈಡೂರ‌್ಯ, ಗೋಮೇಧಿಕ, ಪುಷ್ಪರಾಗ ಇಂತಾದ್ದರಲ್ಲಿ ಕೆತ್ತಿಸಲ್ಪಟ್ಟ ಈ ಬೋದಿಗೆಯನ್ನು ನೋಡಮ್ಮಾ. ಎಷ್ಟು ಮನೋಹರವಾಗಿರುವುದೂ ॥

2ನೆ ಸ್ತ್ರೀ: ಅಮ್ಮಾ ಅದೆಲ್ಲಾ ಹಾಗಿರಲಿ, ಧರ್ಮರಾಯರಲ್ಲಿಗೆ ಹೊಗೋಣ ನಡೆಯಮ್ಮಾ ॥

ಸ್ತ್ರೀಯರು: ಧರ್ಮರಾಯರಿಗೆ ನಮಸ್ಕರಿಸುವೆವೂ ॥

ಧರ್ಮಜ: ನಿಮಗೆ ಮಂಗಳವಾಗಲಿ. ಮೇಲಕ್ಕೇಳಿರೈ ಸ್ತ್ರೀಯರೆ ॥ಎಲೈ ಸ್ತ್ರೀಯರೆ, ಈ ಸಭಿಕರ ಮನಸ್ಸು ಸಂತೋಷಪಡುವಂತೆ ಗಾನವನ್ನು ಪಾಡುವಂಥವರಾಗಿ.

ಪದ
ಕೋಕಿಲ ವಾಣಿಯರೆ, ವಾಣಿಯರೆ,
ವರಗುಣ ಮಣಿಯರೆ, ವರಗುಣ ಮಣಿಯರೆ
ನಿರುಕಿಸಿ ಈ ಪುರ ಮದನನ ಮೀರಿ ಮುದದೊಳು
ಸಾರಿ ಅಂದ ಚಂದದಿಂದ ಬಂದೆವು. ಅಂಗನೆಯರೆಲ್ಲ ॥
ಸುಳಿಯಲು ದಾರ ತೊಳಲ ವಿಚಾರ.
ನಳಿನೀಂ ತಳಿ ನೀಂ  ಪಳಿನೀಂ ॥ಕೋಕಿಲ ॥

ಧರ್ಮಜ: ಯಾರಲ್ಲಿ ಅನುಜರಾದ ಭೀಮಾರ್ಜುನರನ್ನು ಬರಮಾಡುವಂಥವನಾಗೂ॥

ಭೀಮ ಅರ್ಜುನ: ನಮೋ ನಮೋ ಅಗ್ರಜಾ ॥

ಧರ್ಮಜ: ಅಯ್ಯ ತಮ್ಮಂದಿರಾದ ಭೀಮಾ ಅರ್ಜುನರೆ ವನಜನಾಭನಾದ ಶ್ರೀ ಕೃಷ್ಣದೇವರ ಭಜನೆಯನ್ನು, ಸುಜನರೆಲ್ಲರೂ ಭಕ್ತಿಯಿಂದ ಮಾಡುತ್ತಿರುವರೋ ಇಲ್ಲವೋ ಅಲ್ಲದೆ ನಮ್ಮ ಪಟ್ಟಣದ ಪ್ರಜೆಗಳೆಲ್ಲರೂ ಸೌಖ್ಯದಿಂದಿರುವರೊ ಹೇಗೆ ಹೇಳುವಂಥವರಾಗಿರೈ ತಂಮಂದಿರಾ ॥

ಪದ
ಅಂಣ ಲಾಲಿಸೂ, ಧರ್ಮನಂದನಾ,
ಚಪ್ಪನ್ನದೇಶದ ಅರಸರೆಲ್ಲರೂ,
ತಂದು ಕಪ್ಪವ ವೊಪ್ಪಿಸುವರು ॥

ಭೀಮ: ಅಂಣಾ ಧರ್ಮನಂದನ  ವನಜನಾಭನಾದಂಥ, ನಮ್ಮ ಭಾವಯ್ಯನವರ ಧ್ಯಾನವನ್ನು ನಮ್ಮ ಪಟ್ಟಣದಲ್ಲಿ ಸುಜನರೆಲ್ಲರೂ ಮಾಡುತ್ತಿರುವರೊ ಅಗ್ರಜ.

ಅರ್ಜುನ: ಅಗ್ರಜಾ, ಇದೂ ಅಲ್ಲದೆ, ದೇಶ ದೇಶದ ಅರಸರೆಲ್ಲರೂ ಸದಾ ಕಪ್ಪ ಕಾಣಿಕೆಯನ್ನು ತಂದು ವೊಪ್ಪಿಸುತ್ತಿರುವರೋ ಅಗ್ರಜಾ ॥

ಧರ್ಮಜ: ಶಹಬ್ಬಾಸ್ ತಮ್ಮಂದಿರಾ, ಸಂತೋಷವಾಯಿತು, ಅಯ್ಯ ತಮ್ಮ ಪಾರ್ಥ, ನೀನು ಸಜ್ಜಾಗೃಹಕ್ಕೆ ಹೊರಡುವಂಥವನಾಗೂ. ಭೀಮಸೇನ, ಸರ್ವರು ಅರಮನೆಗೆ ಹೊರಡುವಂಥವರಾಗಿ ॥

ಕೃಷ್ಣ: ಶಿವಶಿವ ಯೇನು ಮಾಡಲಿ. ನಾನು ಮಾಡಿದ ಶಪಥವು ಎಂದಿಗಾಗುವುದೋ ಕಾಣೆನಲ್ಲಾ. ಇರಲಿ ನನ್ನ ತಂಗಿಯಾದ ದ್ರೌಪದಿಯನ್ನು ನೆನವರಿಕೆ ಮಾಡುತ್ತೇನೆ॥

ಪದ
ಹಿಂದೆ ಪಾಂಡವರಿಗೂ, ಕುರುಕುಲಾಗ್ರಣಿಗೂ,
ಜೂಜಿನಲಿ ದುಶ್ಯಾಸನ, ದ್ರೌಪದಿಯ ಸೀರೆಯನು ಸೆಳೆದಾ ॥

ಕೃಷ್ಣ: ಅಮ್ಮಾ ತಂಗಿ ದ್ರೌಪದ (ಹಿಂದೆ ಪಾಂಡವರೂ ಕೌರವರೂ ದ್ಯೂತವನ್ನಾಡಿ, ಪಾಂಡವರು ಸೋತು, ಪಟ್ಟಣ ಹಸ್ತಿ ಹಯಾ ಗಜತುರುಗ ಮುಂತಾದುವನ್ನು ಸೋತು ಇರುವ ಸಮಯದಲ್ಲಿ, ಆ ದುರುಳನಾದ ದುಶ್ಯಾಸನ ಬಂದು ದ್ರೌಪದಿಯ ಸೀರೆಯನ್ನು ಸೆಳೆಯುವ ಸಮಯದಲ್ಲಿ ನನ್ನನ್ನು ಸ್ಮರಿಸಲು, ಆಗ ನಾನು ಆಕೆಗೆ ಅಕ್ಷಯವನ್ನಿತ್ತು ಕಾಪಾಡಲಿಲ್ಲವೇ, ಈಗ ನನ್ನನ್ನು ಕಾಪಾಡಲಿ ನನ್ನ ತಂಗೀ ದ್ರೌಪದಿ ॥