ಭಾಮಿನಿ

ಚರರ ನುಡಿಯನು ಕೇಳಿ
ಚಂದ್ರೇಶನು ಮಂತ್ರಿಯೋಳ್
ಕ್ಷತ್ರಿಯರ ಕುಲಧೀರನೇನೆಂದನೂ ॥

ಚಂದ್ರೇಶ: ಹಸ್ತಿನಾವತಿ ಅರಸನಾದ ಕೌರವೇಶ್ವರನು ಹನ್ನೊಂದಕ್ಷೋಹಿಣಿ ಮಾರ್ಬಲ ಸಹಿತ ಬಂದಿರುವನಂತೆ ತಿಳಿಯಿತೋ ಹೇಳುತ್ತೇನೆ ಕೇಳೂ ॥

ಪದ

ಧುರಕೆ ಬಂದಾತನ ಧೈರ‌್ಯಕೆ
ಪುಸಿಯಿಲ್ಲ ಕ್ಷತ್ರಿಯ ಕುಲಧೀರನವನೂ
ಆತನ ಜೈಸಲು ರಣದೊಳಗೆನುತ
ತವಕದಿ ಹೊರಡೆಂದನೂ ॥

ಚಂದ್ರೇಶ: ಅಯ್ಯ ಮಂತ್ರಿಯೆ, ನನ್ನ ಮೇಲೆ ಯುದ್ಧಕ್ಕೆ ಬರಬೇಕಾದರೆ ಅವನ ಪರಾಕ್ರಮವೆಷ್ಟು ನೋಡೋಣ ನಮ್ಮ ಮಂದಿ ಮಾರ್ಬಲವೆಲ್ಲ ಹೊರಡುವಂಥವರಾಗಿರಿ ॥

ಪದ

ಹೊರಡುವೆ ನಾ ನಿಮಿಷದಲಿ
ರಣಕೆಂ ಬೇಗದಲಿ ನಾನೂ ಧುರದಿ
ಜೈಸಲು ಬೇಗ ವೈರಿಗಳ ನಾನೂ ॥

ಮಂತ್ರಿ: ಮಹಾರಾಜರೆ ರಣಕ್ಕೆ ಹಿಂದುಳಿಯುವುದುಂಟೆ. ಮರೆ ಬಿದ್ದವರನ್ನು ಕಾಯುವುದು ತಮ್ಮ ಭಾರವು. ಹೀಗಿರುವಲ್ಲಿ ವೈರಿಗಳನ್ನು ಜೈಸಲು ನಿಮಿಷ ಮಾತ್ರ ತಡವಿಲ್ಲದೆ ಹೊರಡುವೆನೈ ರಾಜಾ ಭಾನುಸಮತೇಜ॥

ಭಾಮಿನಿ

ಅರಸ ಕೇಳೈ ದಶಲಕ್ಷ ಸೇನೆ ಶತಕೋಟಿ
ಕಾಲಾಳು ರಥ ಕೇವಿದರು ಬಂದು
ಕುರುಪತಿಯ ಕಂಡು ಇಂತೆಂದನಾಗ

ಪದ

ಜನನಾಥ ಕೇಳೈಯ್ಯ ಜನವ ಕೂಡಿಸಿ ಬಂದು
ಮಾಜದೆ ಮರ್ಮವನು ಅರುಹೈಯ್ಯ ಬೇಗಾ ॥

ಚಂದ್ರೇಶ: ಹಸ್ತಿನಾವತಿಗೆ ಅರಸನಾದ ಕೌರವೇಶ್ವರನೇ, ಎಂದೂ ಇಲ್ಲದವರು ಈ ದಿವಸ ಹನ್ನೊಂದಕ್ಷೋಹಿಣಿ ಮಾರ್ಬಲವು ಸಮೇತ ಯಮ್ಮ ಪಟ್ಟಣಕ್ಕೆ ಪ್ರವೇಶ ಮಾಡಲು ನನಗೆ ಅನುಮಾನವಾಗಿರುತ್ತೆ. ಮಾಜದೆ ನೀವು ಬಂದ ಸಂಗತಿಯನ್ನು ಹೇಳಿರಿ ॥

ಪದ

ನಿನ್ನಾಯ ತನುಜೆಯ ವನದ ಮಧ್ಯದಿ
ಕಂಡೂ ಭ್ರಮಿಸಲು ರವಿಜಾತ ನಿಮ್ಮ
ಕೇಳಲು ಬಂದೆ ಕನ್ಯಾ ರತ್ನವನೂ ॥

ಕೌರವ: ಹೇ ಚಂದ್ರೇಶ ಭೂಪತಿಯೆ ರವಿಸುತನಾದಂಥ ಕರ್ಣನು ನಿಮ್ಮ ವನಕ್ಕೆ ಬಂದು ನಿಮ್ಮ ಕುವರಿಯು ವನದಲ್ಲಿ ಸಖಿಯೊಡನೆ ಇದ್ದುದನ್ನು ನೋಡಿ ಕಾಮವಿಹಿತನಾಗಿ ನನ್ನಲ್ಲಿ ಬಂದು ಆಕೆಯನ್ನು ತಂದು ಲಗ್ನ ಮಾಡಬೇಕೆಂದು ಕೇಳಿಕೊಂಡನಾದ ಕಾರಣ ತಮ್ಮ ಕುವರಿಯನ್ನು ಕೇಳುವವುದಕ್ಕೆ ಬಾಹೋಣವಾಯಿತೈ ಚಂದ್ರೇಶ ದೊರಿಯೆ ॥

ಪದಅಷ್ಟತಾಳ

ಥರವಲ್ಲ ತರುಣಿಯ ಕೇಳುವುದು
ಕುಲಹೀನನಾದಂಥ ಭ್ರಷ್ಟ ಕರ್ಣನಿಗೆ ಅಂಬಿಗ
ಕುಲಜಾತನಾದ ಕುಲಹೀನನಿಗೆ ಕೊಡು ಎಂಬುದೂ
ಕ್ಷಾತ್ರಿಯರಾಗಿ ನೀವಾಡಬಹುದೇ ಕೌರವೇಶಾ ॥

ಚಂದ್ರೇಶ: ಅಯ್ಯ ಕೌರವೇಶ್ವರ, ಎಂಥಾ ಮಾತನ್ನಾಡುವಿರಿ, ಅಂಬಿಗರ ಕುಲಹೀನನಾದ ಭ್ರಷ್ಟ ಕರ್ಣನಿಗೆ ಕ್ಷಾತ್ರಿಯ ವಂಶದವರಾದ ನಾವುಗಳು ಯಮ್ಮ ಕುವರಿಯನ್ನು ಕೊಡಬಹುದೆ. ನೀವು ತಿಳಿದಂಥವರಾಗಿಯು ಕ್ಷಾತ್ರಿಯರಾಗಿಯೂ ಕುಲಹೀನನ ಸಂಗವನ್ನು ಬೆರೆಸಿಕೊಂಡು ಬಂದು ಕೇಳುವುದು. ಯಂಥವರಾದಿರಿ ಸಾಕು ಇಷ್ಟಕ್ಕೆ ಬಾಯಿ ಮುಚ್ಚಿರಿ ॥

ಪದಅದಿತಾಳ

ಹೀನನೆನುತಲಿ ನುಡಿಯಲು ಬೇಡ
ಭಾನುನಂದನ ಧೀರ ಲೋಕದಿ॥
ಧಾರುಣಿಯೊಳು ಸರಿಯುಂಟೆ ಯಿಂತು
ಜರಿಯಾಲು ನೀನು ಸಾರ್ಥಕವಾಗುವದುಂಟೇ॥

ಕೌರವ: ಅಯ್ಯ ಚಂದ್ರೇಶನೆ, ಆ ರವಿಕುಮಾರನನ್ನು ಚಂದ್ರೇಶನೆಂದು ತಿಳಿಯಬೇಡ. ಕಂಡೆಯೋ ಅವನ ಶೌರ‌್ಯಕ್ಕೂ, ರೂಪಿಗೂ ಯೀ ಮೂರುಲೋಕದಲ್ಲಿ ಹುಡುಕಿ ನೋಡಿದರೂ ಕೂಡ ಸಿಕ್ಕವುದಿಲ್ಲ. ಸುಮ್ಮನೆ ಜರಿಯದೆ ಕರ್ಣನಿಗೆ ನಿನ್ನ ಕುವರಿಯನ್ನು ಕೊಟ್ಟು ಲಗ್ನ ಮಾಡುವಂಥವನಾಗು ॥

ಪದಅಟತಾಳ

ಧೀರನಾದೆಡೆಯೊಳು ಕೌರವ ನಾರಿಯನ್ನು
ಕೊಡೆನು ಮೂರುಲೋಕದ ಗಂಡ ಪಾರ್ಥಗೆ
ಕೊಡುವೆನು ಯನ್ನ ಕುವರಿಯ ॥

ಚಂದ್ರೇಶ: ಹೇ ಕೌರವ ನೀನು ಎಷ್ಟು ಬಗುಳಿದರೂ ಕೂಡ ಆ ಕುಲಹೀನನಿಗೆ ಮಗಳನ್ನು ಕೊಡುವುದಿಲ್ಲ. ಪಾಂಡು ಕುಮಾರನಾದಂಥ ಧನಂಜಯಗೆ ಕೊಟ್ಟು ಸಂತೊಷದಿಂದ ಲಗ್ನ ಮಾಡುತ್ತೇನಲ್ಲದೆ ಬಿಡುವುದಿಲ್ಲ. ನೀವು ಬಂದ ಮಾರ್ಗವನ್ನು ಹಿಡಿದು ಕರ್ಣನ ಮಾತು ಬಿಟ್ಟು ಹೊರಡಿರಿ ॥

ಪದ

ಪೊಡೆ ಪೊಡೆಲವೊ ಕುಲಧನಂಜಯ ಅಡವಿಯಲಿ
ಸಂಚರಿಸುವ ಪಾರ್ಥಗೆ ಹುಡುಗಿಯನ್ನು ಕೊಟ್ಟು
ನೀನು ವ್ಯರ್ಥವಾಗಿ ಕೆಡಲು ಬೇಡಾ ॥

ಕೌರವ: ಹೇ ಚಂದ್ರೇಶನೆ ಅಡವಿಯಲ್ಲಿ ಪುಡಿ ಎಲೆಗಳನ್ನು ತಿಂದು ಪುಡಿಹಿಟ್ಟಿನ ದಾಸನಾದ ಆ ಕಳ್ಳಕೃಷ್ಣನ ಸಂಗದಲ್ಲಿ ಇರುವ ಅರ್ಜುನನಿಗೆ ಹುಡುಗಿಯನ್ನು ಕೊಟ್ಟು ವ್ಯರ್ಥವಾಗಿ ಕೆಡಬೇಡ. ವಳ್ಳೇ ಮಾತಿನಿಂದ ಕರ್ಣನಿಗೆ ಮಗಳನ್ನು ಕೊಟ್ಟು ಲಗ್ನ ಮಾಡುವಂಥವನಾಗು ॥

ಪದಜಂಪೆ

ನರನ ಜರಿಪರೆ ನಿನ್ನ ಪೌರುಷ ನೋಡುವೆ
ನಾನೂ ನಿಮಿಷದಿ ಕುವರಿಯನ್ನು
ಕೊಡುವುದಿಲ್ಲವೋ ಸುಮ್ಮನೋಗೆಲವೋ ॥

ಚಂದ್ರೇಶ: ಎಲಾ ಭ್ರಷ್ಟ ಕೌರವ, ಪರಾಕ್ರಮಿಯಾದ ಧನಂಜಯನನ್ನು ಜರಿಯುತ್ತೀಯ. ಯನ್ನ ಮುಂದೆ ಹಾಗೆ ಜರಿದಿದ್ದೇಯಾದರೆ ನಿನ್ನ ತಲೆಯನ್ನು ತೆಗೆಯದೆ ಬಿಡೆನು. ಹೆಚ್ಚಿಗೆ ಹೇಳದೆ ಸುಮ್ಮನೆ ನಿನ್ನ ಪಟ್ಟಣಕ್ಕೆ ತೆರಳಿದರೆ ಮರ‌್ಯಾದೆಯಾಗಿದೆ. ಸುಮ್ಮನೆ ಹೊರಡು ॥

ಪದಆದಿತಾಳ

ಬಿಡುವೆನೇನೆಲೋ ಹುಡುಗಿ ಕೊಡದಿರೆ
ಖಡ್ಗದಿ ಕಡಿವೆ ನಿನ್ನ ಶಿರವನು ಹೊಡೆದು
ಗೆಲ್ಲದಿರ್ದೊಡೆ ಪೊಡವಿಪತಿ ತಾನೆಂದಾ ॥

ಕೌರವ: ಎಲಾ ಚಂದ್ರೇಶ, ನಿನ್ನ ಮಗಳಿಗೋಸ್ಕರ ಹರಿಹರ ಬ್ರಹ್ಮಾದಿಗಳು ಬಂದಾಗ್ಯೂ ಕೂಡ ನಿನ್ನ ಶಿರವನ್ನು ಯೀ ಭೂಮಿಯಲ್ಲಿ ಚೆಂಡಾಡದೆ ಬಿಟ್ಟರೆ ಪೊಡವಿಪತಿಯಾದ ಕೌರವೇಶ್ವರನೆಂದು ತಿಳಿಯಬೇಡವೋ ಕುಲ ಹೇಡಿ ॥

ಪದಜಂಪೆ

ಭ್ರಷ್ಟ ಕೌರವ ಕೆಡಲಿ ಬ್ಯಾಡವೋ
ಸಿಟ್ಟು ಬಂದರೆ ಯನಗೆ ನಿನ್ನನು
ಕುಟ್ಟಿ ಶಿರವನು ಮಾರಿ ಭೂತಗೆ
ಕೊಟ್ಟು ನಲಿವೆನು ಭ್ರಷ್ಟ ಕೌರವಾ ॥

ಚಂದ್ರೇಶ: ಎಲಾ ಭ್ರಷ್ಟಾ ಕೌರವ, ಯಾತಕ್ಕೆ ಸುಮ್ಮನೆ ಬಾಯಿಗೆ ಬಂದ ಹಾಗೆ ಬಗಳುತ್ತೀಯ. ನಿನ್ನ ಶಿರವನ್ನು ವಂದೇ ಬಾಣದಿಂದ ಸಂಹಾರ ಮಾಡಿ ಹಿಂಡು ಭೂತಗಳಿಗೆ ಈಡು ಮಾಡುತ್ತೇನೆ ತಿಳಿಯಿತೊ ಹೆಮ್ಮೆಯನ್ನು ಬಿಟ್ಟು ಸುಮ್ಮನೆ ಹೋಗು॥

ಪದ

ಫಡ ಫಡೆಲವೊ ಚಂದ್ರೇಶ
ನಿನ್ನನು ವದೆದು ಶಿರವನು ಕಡಿವೆನೆನುತ
ನಿಂತನು ಸಮರಕ್ಕೆ ಬೇಗಾ ॥

ಕೌರವ: ಎಲಾ ಭ್ರಷ್ಟ ನಿನ್ನ ಪೌರುಷ ಯಾಕೆ ವದರುವೆ. ಇಲ್ಲಿಯೇ ನಿನ್ನನ್ನು ಮರ್ದಿಸಿ ಮಲಗಿಸಿ ನಿನ್ನ ಕುವರಿಯನ್ನು ತೆಗೆದುಕೊಂಡು ಹೋಗಿ ಲಗ್ನ ಮಾಡದೆ ಬಿಡುವುದಿಲ್ಲವೋ ಭ್ರಷ್ಟ ಪರಮ ಪಾಪಿಷ್ಟ॥

ಪದ

ಕ್ಷಿತಿಪತಿ ನಿನ್ನಯಾ ಶೌರ‌್ಯವಿರ್ದಡೆ
ಕ್ಷಿತಿಯೊಳು ತೋರಿಸಲಾ ಎನುತ
ಅತಿಶಯದ ಧನುವನ್ನು ಪಿಡಿದು
ಧುರಕೆ ನೀನೆದುರಾಗೆಲಾ ॥

ಚಂದ್ರೇಶ: ಎಲೋ ಭ್ರಷ್ಟ ಕೌರವ, ನಿನ್ನಾ ಶೌರ‌್ಯ ಸಾಹಸವನ್ನು ನೋಡುತ್ತೇನೆ. ಇಕೋ ನೋಡು ಸೂರ‌್ಯಾಸ್ತ್ರವನ್ನು ಬಿಟ್ಟು ಇರುತ್ತೇನೆ. ಇದನ್ನು ತರಹರಿಸಿಕೋ ॥

ಕೌರವ: ಯೆಲಾ ಪಾಮರ ಹಾಗಾದರೆ ಯುದ್ಧಕ್ಕೆ ಯದುರಾಗು ॥

(ಯುದ್ಧಕೌರವನ ಮೂರ್ಛೆ)

ಚಂದ್ರೇಶ: ಯೆಲಾ ಕೌರವ, ಹೆಮ್ಮೆ ಮಾತನ್ನು ಸುಮ್ಮನೆ ಬೆಳೆಸಿದೆ. ನಿನ್ನ ಪಾಡೇನಾಯಿತು ನೋಡಿಕೋ॥

ಭಾಮಿನಿ

ಅರಸರೀರ್ವರು ವೈರತ್ವದಿಂ ಕಾದಲು
ಕುರುಪತಿಯು ಮೂರ್ಛಿತನಾಗಲು
ಧೀರ ದುಶ್ಯಾಸನನು ಘುಡುಘುಡಿಸಿ
ಕಿಡಿಯನ್ನುಗುಳುತ ಸಮರಕೆದುರಾದನೂ॥

ಪದ

ಭಂಡ ಬಾರೆಲೊ  ತುಂಡು ಮಾಡುವೆ
ಪ್ರಚಂಡ ನಿನ್ನಯ ಶೌರ‌್ಯ ತೋರುವೆ॥

ದುಶ್ಯಾಸನ: ಎಲಾ ಪ್ರಚಂಡ, ನಮ್ಮಣ್ಣನನ್ನು ಮೂರ್ಛೆಗೊಳಿಸಿದೆನೆಂದು ಅಹಂಕಾರ ಬಂದಿದೆ. ಯೀಗಲೆ ನಿನ್ನನ್ನು ತುಂಡು ತುಂಡಾಗಿ ಛಿದ್ರಗೈವೆನೆಲಾ ಭಂಡ ಕಡಿಯುವೆನು ನಿನ್ನಾ ಚಂಡಾ ॥

ಪದ

ಯನ್ನಾ ಕೈಗೆ ಸಿಕ್ಕಿ ನೀನು ಹೆಮ್ಮೆ
ಬೆಳೆಸುವೆಯ ದುರುಳ ದೈತ್ಯ ನೋಡು
ನಿಮ್ಮ ಅಣ್ಣನ ಪಾಡನ್ನು ಭರದೊಳು
ಭಂಡನಾ ತುಂಡು ಮಾಡಿ ಖಂಡ್ರಿಸಿರುವೆನೂ॥

ಚಂದ್ರೇಶ: ಎಲೋ ದೈತ್ಯಾ ನಿಮ್ಮಣ್ಣಗಾಗಿರುವಂಥ ಪಾಡನ್ನು ಕಂಣ್ಣಿನಲ್ಲಿ ಕಂಡು ಹೆಮ್ಮೆ ಇಂದ ನನ್ನ ಸಂಗಡ ಕಾದುವುದಕ್ಕೆ ಬಂದು ಇರುತ್ತೀಯ. ಸುಮ್ಮನೆ ಹೋಗಿ ನಿನ್ನ ಪ್ರಾಣವನ್ನು ವುಳಿಸಿಕೊಳ್ಳೆಲೊ ಭಂಡ ಕಡಿವೆನು ನಿನ್ನ ಚೆಂಡಾ ॥

ಪದ

ಅಣ್ಣನ ಗೆಲಿದ ಹೆಮ್ಮೆಯೋಳ್ ಇರುವೆ
ನಿನ್ನ ಅಣಕವನಿಳಿಸುವೆ ನಾನೂ
ರಣದೊಳು ನಿಲ್ಲೆಲಾ ಕೋಣ ॥

ದುಶ್ಶಾಸನ: ಎಲಾ ಕಳ್ಳ ಚಂದ್ರಸೇನ, ಇಂಥಾ ಪುಂಡು ಮಾತುಗಳನ್ನು ಯನ್ನಲ್ಲಿ ಬೆಳೆಸಬೇಡ. ಇಗೋ ನೋಡು. ನನ್ನ ಕಠಾಗ್ರದಲ್ಲಿ ಇರುವ ಗದಾದಂಡದಿಂದ ಹೊಡೆದು ಯೀ ರಣ ಭೂತಗಳಿಗೆ ಹಬ್ಬವನ್ನು ಮಡುತ್ತೇನೆ. ನೋಡು ಕಳ್ಳ ಈ ಮಾತು ಬದ್ದ॥

ಪದ

ವೀರಶ್ರೀಯರ ಮುಂದೆ ಸಟೆಯನ್ನಾಡಲಿಕೆ
ಬೇಡ ಪೋಪೆಲೋ ಧುರದಿಂದ
ಜೈಸುವೆ ನಿನ್ನಾ ಕಡಿಸುವೆನು ನಿನ್ನ ಚಂಡಾ ॥

ಚಂದ್ರೇಶ: ಯೆಲಾ ದಡಿಗ ರಕ್ಕಸನೆ, ಇಲ್ಲಿ ಇರುವ ಸ್ತ್ರೀಯರ ಮುಂದೆ ನಿನ್ನ ಪರಾಕ್ರಮವನ್ನು ತೋರಿಕೊಂಡರೆ ಶೂರರೆಲ್ಲಾ ನಗುವರು. ಅಂಥ ವೀರಾಧಿವೀರನಾದರೆ ಯದುರು ನಿಂತು ಮಾಡೆಲೋ ಯುದ್ಧ ಯೀ ಮಾತು ಬದ್ಧ ॥

ಪದಅಷ್ಟತಾಳ

ಕರ್ಣಗೆ ಮಗಳನ್ನು ಕೊಡದಿರೆ ನಿನ್ನಯಾ ಗರ್ವವ
ಅಣಕವ ಮುರಿಯುವೆ ಕೇಳೆಲೋ ನೀಚಾ ॥
ಹರಸಿ ನೀ ಬೇಗದಿ ನಡೆಸು ಕಲ್ಯಾಣವನೂ॥

ದುಶ್ಶಾಸನ: ಎಲಾ ಭಂಡನಾದ ಚಂದ್ರೇಶ, ರವಿಕುಮಾರನಾದ ಕರ್ಣನಿಗೆ ನಿನ್ನ ಮಗಳನ್ನು ಕೊಟ್ಟರೆ ಸರಿ ಇಲ್ಲವಾದರೆ ಈ ರಣಭೂಮಿಗೆ ನಿನ್ನನ್ನು ದಿಗ್ಭಲಿಯನ್ನು ಕೊಟ್ಟು ನಾನೇ ತೆಗೆದುಕೊಂಡು ಹೋಗುತ್ತೇನೆಲ ಅಧಮಾ ॥

(ಅಪೂರ್ಣ)