ಭಾಗವತ: ಅಯ್ಯ ಕರ್ಣಭೂಪತಿ, ಇಲ್ಲಿಗೆ ಸ್ವಲ್ಪದೂರದಲ್ಲಿ ಅಲ್ಲಿ ನೋಡಿ ವಂದು ವನ ಕಾಣುತ್ತಾ ಯಿರುವುದು. ಅಲ್ಲಿ ಬ್ರಹ್ಮ ವಂಶದವರಿಗೆ ಗುರುಗಳಾದ ಪರುಶುರಾಮ ದೇವರು ಇರುತ್ತಾರೆ. ಅವರಲ್ಲಿ ಹೋದರೆ ನಿಮಗೆ ಬೇಕಾದ ವಿದ್ಯವನ್ನು ಕಲಿಸುವರು॥

ಕರ್ಣ: ಆಹಾ ಇಲ್ಲಿ ಯಾರೋ ಮಹಾತ್ಮರು ಬರುವಂತೆ ತೋರುವುದು. ಅವರನ್ನು ವಿಚಾರಿಸುವೆನು. ನಮೋ ನಮೋ ನಾರದ ಮುನಿಗಳೇ ॥ಸ್ವಾಮಿ ನಾರದ ಮುನಿಗಳೇ ನನಗೆ ವಿದ್ಯೆಯನ್ನು ಕಲಿಸುವಂಥ ಗುರುಗಳು ಎಲ್ಲಿದ್ದಾರೆ ಹೇಳಬೇಕೈ ಸ್ವಾಮಿ ॥

ಪದ

ಯಾವ ರಾಜನ ಸುತನೋ ಎಲ್ಲಿಗೆ ಹೋಗುವೆ
ಮಾಜದೆ ಯನ್ನೊಡನೆ ಪೇಳಯ್ಯ ಬಾಲಾ ॥
ಕಂದ ಕೇಳೆಲೊ ನಿನಗೆ ಪೇಳುವೆ ಹದನವ
ಮುಂದೆ ಕಾಣುವ ವನದಿ ಪರುಶುರಾಮನೂ ॥

ಅಯ್ಯ ಮಗು ಕ್ಷತ್ರಿಯವನೆಂದು ಪೇಳಬೇಡ ನೀನು
ಬ್ರಾಹ್ಮಣನೆಂದು ಮತವೇಳಯ್ಯ ಮಗುವೆ ॥

ನಾರದ: ಅಯ್ಯ ಮಗು ಕ್ಷತ್ರಿಯ ರೂಪಿನಿಂದ ಹೋದರೆ ಪರಶುರಾಮದೇವರು ವಿದ್ಯವನ್ನು ಕಲಿಸುವುದಿಲ್ಲ. ಯಾತಕ್ಕೆಂದರೆ ಕ್ಷತ್ರಿಯರಿಗೂ ಅವರಿಗೂ ಸ್ವಲ್ಪ ಮತ್ಸರವುಂಟು. ಆದ್ದರಿಂದ ಈ ಕ್ಷತ್ರಿಯ ರೂಪನ್ನು ಮರೆಸಿ ಬ್ರಾಹ್ಮಣ ರೂಪಿನಿಂದ ಹೋಗುವನಾಗಯ್ಯ ಮಗೂ ಹೋಗಿ ಬರುತ್ತೇನೆ॥

ಪದ

ಕರುಣಾನಿಧಿ ನೀನೆಂಬುವ ರಾಮನೆ
ಕಾಣಲಿಲ್ಲ ವೆನಗೆ ಕರುಣಾನಿಧಿ ನೀನೆಂಬುವದಾದರೆ
ರಾಮನೇ ಯನ್ನನ್ನು ಕಾಯೈ ನಿರುತರ ನಿಮ್ಮಡಿ
ಸೇವಕರನ್ನು ಅನುದಿನ ಸಲಹುವ ನೀನಂತೆ
ಬರಿದೆ ಪುರಾಣದ ವಾಚನಗಳೆಲ್ಲವು ಪರಿಕಿಸಿ
ನೋಡುವ ಪರಶುರಾಮ ನೀನಂತೆ ॥

ಕರ್ಣ: ನಮೋ ನಮೋ ಸ್ವಾಮಿ ಪರುಶುರಾಮ ದೇವರೇ ॥

ಪರುಶುರಾಮ: ನಿನಗೆ ಮಂಗಳವಾಗಲಪ್ಪಾ ಪುತ್ರ ಸುಂದರ ಗಾತ್ರ ॥

ಪದ

ಯಾವ ದೇಶವೊ ಮಗುವೆ ಯಾವ
ಸೀಮೆಯೊ ವೋರ್ವನೇ ನೀನಿಲ್ಲಿ ಬರಲು
ನಿಮ್ಮ ಜನನಿ ಜನಕರಾರು ಮಾಜದೆನ್ನೊಡನೆ ಪೇಳೈ ॥

ಪರಶುರಾಮ: ಕೋಟಿ ಸೂರ‌್ಯ ಪ್ರಕಾಶವಾದ ಹೇ ಮಗುವೆ, ನೀನು ಯಾರು ನಿನ್ನ ದೇಶ ಯಾವುದು ನಿನ್ನ ಜನನಿ ಜನಕರು ಯಾರು, ನೀನೋರ್ವನೆ ಯೀ ವನಕ್ಕೆ ಬಂದ ಕಾರ‌್ಯವೇನು, ಸಾಂಗವಾಗಿ ಪೇಳೈ ಪುತ್ರ ಸುಂದರ ಗಾತ್ರ ॥

ಪದ

ಗುರುವರರೆ ನೀವು ಲಾಲಿಸಿ ಪೇಳುವೆ ಮುನಿಯೇ
ಬ್ರಾಹ್ಮಣ ಜಾತಿಯು ನಮ್ಮದು ಕೇಳೈ ಗುರು
ಯನ್ನಾ ಪೂರ್ವ ಫಲ ನಮ್ಮ ಮಾತಾಪಿತರು
ಮರಣ ಹೊಂದಿದರೂ ಮುಂದೆ ದಿಕ್ಕಾರು ಯಿಲ್ಲಾ ॥

ಕರ್ಣ: ಸ್ವಾಮಿ ಪರಶುರಾಮ ದೇವರೆ ನಾನು ಬ್ರಾಹ್ಮಣ ಜಾತಿಯವನು. ನಮ್ಮ ತಂದೆ ತಾಯಿಗಳು ಸ್ವರ್ಗಸ್ಥರಾದರು. ನನಗೆ ಪೋಷಿಸಿ ಸಲಹುವಂಥವರು ಯಾರೂ ದಿಕ್ಕಿಲ್ಲದ್ದರಿಂದ ತಮ್ಮಲ್ಲಿ ಬಂದಿರುತ್ತೇನೆ. ಮತ್ತೂ ಹೇಳುವೆ ॥

ಪದ

ಜನಕಾರಿಲ್ಲಾದ ಸುತಗೇ ಕಲಿಸಿರಿ ವಿದ್ಯಗಳನೂ, ತಮ್ಮಾ
ಸೇವೆಯೊಳು ನಾನು ಕಿನ್ನನಾಗಿರುವೆನೂ
ಕರುಣಾದಿ ದಯವಿಟ್ಟು ಸಲಹಿ ರಾಮಾ  ಗುರುವರಾ ॥

ಕರ್ಣ: ಸ್ವಾಮಿ ನಾನು ಸಕಲದೇಶವನ್ನು ತಿರುಗಿದಾಗ್ಯೂ ನನಗೆ ವಿದ್ಯೆ ಹೇಳುವ ಗುರುಗಳೇ ಸಿಕ್ಕಲಿಲ್ಲ. ನನ್ನ ಪೂರ್ವ ಪುಣ್ಯದ ಫಲದಿಂದ ತಮ್ಮ ದರುಶನವಾಯಿತು. ತಾಯಿ ತಂದೆಗಳಿಲ್ಲದ ಯೀ ಬಾಲಕನ ಮೇಲೆ ಕರುಣವಿಟ್ಟು ಕಾಪಾಡಬೇಕೆಂದು ಬೇಡುತ್ತೇನೆ ॥

ಪದ

ಮುದ್ದೂ ಬಾಲಕ ನಿನಗೆ ವಿದ್ಯಾ ಕಲಿಸುವೆ ನಾನು
ತಂದೆ ತಾಯಿಗಳ ನೆನಿಸಿ ಕಡು ದುಃಖಪಡದೆ
ನೀನಾಶ್ರಮದೊಳು ಯಿರೂ ॥

ಪರಶುರಾಮ: ಅಯ್ಯ ಬಾಲಕ, ನನ್ನಲ್ಲಿ ವಿದ್ಯವನ್ನು ಕಲಿಯಬೇಕೆಂದು ಇಲ್ಲಿನವರೆವಿಗೂ ಯಾರೂ ಬಂದಿರಲಿಲ್ಲ. ಯೀಗ ನಾನು ನಿನಗೆ ಅಸ್ತ್ರ ಶಸ್ತ್ರಗಳನ್ನು ಚೆನ್ನಾಗಿ ಕಲಿಸುತ್ತೇನೆ. ನನ್ನಲ್ಲಿಯೇ ಇರು ನಡಿ ಆಶ್ರಮಕ್ಕೆ ಹೋಗೋಣ ॥

ಕರ್ಣ: ಅಪ್ಪಣೆಯಂತೆ ಬರುವೆನೂ ॥

ಭಾಮಿನಿ

ಯೀ ಪರಿಯೊಳು ಬಾಲಕನ ಮೇಲೆ
ಪರುಶುರಾಮದೇವರು ಕರುಣ
ಭಾವವನ್ನಿಟ್ಟು ಅವರಲ್ಲಿರುವ ಸಕಲ
ವಿದ್ಯವನು ಮಾಜದೆ ಕರ್ಣನಿಗೆ ಕಲಿಸಿ
ಮಹಾರಾಮರು ಬಾಲಕನೊಳು
ಯೇನೆಂದು ಹೇಳುತಿರ್ದರೂ ॥

ಪರಶುರಾಮ: ಮಗುವೆ, ಹರಿಹರ ಬ್ರಹ್ಮಾದಿಗಳಿಗೂ ಕೂಡ ಅಸದಳವಾಗಿರುವ ವಿದ್ಯವನ್ನು ನಿನಗೆ ಕಲಿಸಿರುತ್ತೇನೆ. ಯೀ ದಿವಸ ಸಂತೋಷಭರಿತನಾಗಿ ನಿನ್ನ ತೊಡೆಯ ಮೇಲೆ ಮಲಗಿ ನಿದ್ರೆಯನ್ನು ಮಾಡಬೇಕು. ಯೀ ಚನ್ನಂಗಿ ವೃಕ್ಷದ ನೆರಳಲ್ಲಿ ಕುಳಿತುಕೋ ॥

ಕರ್ಣ: ಅಪ್ಪಣೆಯಂತೆ ಕುಳಿತು ಇರುವೆನೂ ಅನುಮಾನವಿಲ್ಲದೆ ಮಲಗಿರಿ ॥

ಭಾಮಿನಿ

ಅರಸ ಕೇಳ್ ವಿದ್ಯವನು ಕಲಿಯುತಿರಲು ಕರ್ಣನು
ಈ ಕಂದ ಫಲುಗುಣನ ಗೆಲ್ಲುವನೆನುತ
ಇತ್ತ ಸುರಪತಿಯು ಚಿಂತಿಸಿದನೂ ॥

 

 

(ದೇವೇಂದ್ರನ ಸಭೆ)

ದೇವೇಂದ್ರ: ಎಲೈ ಸಾರಥಿ ನಮ್ಮನ್ನು ಕೇಳುವುದಕ್ಕೆ ನೀನು ಧಾರು ನಿನ್ನ ಜನನೀ ಜನಕರು ನಿನ್ನ ಹೆಸರೇನೆಂದು ಕರೆವರು ಹೇಳು ॥ಎಲೈ ಸಾರಥಿ, ವೈಕುಂಠ ಸತ್ಯಲೋಕ ಕೈಲಾಸ ಯೀ ಮೂರು ಲೋಕಕ್ಕೂ ಸಾಂದ್ರವೈಭವದಿಂದ ಮೆರೆಯುವ ಅಮರಾವತಿ ಪಟ್ಟಣವನ್ನು ಚಂದದಿಂದ ಆಳುವ ದೇವೇಂದ್ರ ಭೂಪತಿಯೆಂದು ತಿಳಿಯುವಂಥವನಾಗು ॥

ದೇವೇಂದ್ರ: ಯಾರಲ್ಲಿ ॥

ಚಾರ: ಏನಪ್ಪಣೆ

ದೇವೇಂದ್ರ: ಯನ್ನ ಮಂತ್ರಿಯಾದ ಚಿತ್ರಸೇನನನ್ನು ಕರೆಸೂ ॥

ಚಿತ್ರಸೇನ: ಎಲೈ ಸಾರಥಿ, ಯೀ ಅಮರಾವತಿಯನ್ನು ಚಂದದಿಂದ ಆಳುವ ದೇವೇಂದ್ರ ಭೂಪತಿಯ ಆಜ್ಞೆಯಂತೆ ನಡೆಯುವ ಚಿತ್ರಸೇನ ಮಂತ್ರಿಯೆಂದು ತಿಳಿಯುವಂಥವನಾಗು. ನಮ್ಮ ರಾಜರು ಕರೆಸಿದ ಕಾರಣ ಬಾಹೋಣವಾಯಿತು.

ಚಿತ್ರಸೇನ: ನಮೋ ನಮೋ ರಾಜರೆ ॥

ದೇವೇಂದ್ರ: ನಿನಗೆ ಮಂಗಳವಾಗಲೈ ಮಂತ್ರಿವರ‌್ಯನೆ ॥

ಚಿತ್ರಸೇನ: ರಾಜರೆ ನನ್ನನ್ನು ಇಷ್ಟು ತ್ವರಿತದಿಂದ ಕರೆಸಿದ ಕಾರಣವೇನು ಹೇಳಬೇಕೈ ದೇವ॥

ಪದ

ಕ್ಷೇಮವೇನೈ ಸಕಲ ಪ್ರಜೆಗಳೂ ಸಮಚಿತ್ತದಿಂದಲಿ
ಕ್ಷೇಮವೇನೈ ಸಕಲ ಪ್ರಜೆಗಳೂ ಕಾಲಕಾಲಕ್ಕೆ
ಮಳೆಯು ಬೀಳುತೆ ಬೆಳೆದ ಬೆಳೆಗಳಿಂದ
ಜನರು ಕ್ಷೇಮವೇನೈ ಸಕಲ ಪ್ರಜೆಗಳೂ ॥

ದೇವೇಂದ್ರ: ಹೇ ಮಂತ್ರೀಶನೆ, ನಮ್ಮ ದೇಶದ ಪ್ರಜೆಗಳು ಮಳೆ ಬೆಳೆಗಳಿಂದ ಸುಖವಾಗಿರುವರೆ ಅಲ್ಲದೆ ಕಾಲಕಾಲಕ್ಕೆ ಮಳೆ ಬೆಳೆಗಳಿಂದ ಕೂಡಿ ಸುಖದಿಂದ ಇರುವರೊ ಕಷ್ಟದಲ್ಲಿ ಇರುವರೊ ವಿವರಿಸುವಂಥವನಾಗು ಪ್ರಧಾನಿಯೆ ॥

ಪದ

ಲಾಲಿಸು ರಾಜನೆ ತಮ್ಮಯ ಚರಿತ್ರ
ಮೂಜಗದ ಪರಿ ಮಾಜದೆ ಪೇಳುವೆ
ಚಪ್ಪನ್ನ ದೇಶವನೊಪ್ಪಾದ ನೃಪರೆಲ್ಲ
ತಪ್ಪಾದೆ ಕಪ್ಪವನ್ನು ವಪ್ಪಿಸುತಿಹರೈಯ್ಯಿ.

ಚಿತ್ರಸೇನ: ಮಹಾರಾಜರೆ ನಮ್ಮ ದೇಶದ ಪ್ರಜೆ ಪಾಲಕರು ಸುಖದಿಂದ ಇರುವರಲ್ಲದೆ ಚಪ್ಪನ್ನದೇಶದ ರಾಜಾಧಿರಾಜರೆಲ್ಲರೂ ಕಪ್ಪವನ್ನು ತಂದು ವೊಪ್ಪಿಸಿ ಶರಣಾಗತರಾಗಿ ಹೋಗುವರೈ ದೊರೆಯೆ ॥

ಪದ

ಮಂತ್ರಿ ಪೇಳುವೆ ಕೇಳು ಸಂತಸದೊಳೀಗ
ತಂತ್ರ ವಂದಿರುವುದು ಲಾಲಿಸೈ ನೀನೂ ನಿನ್ನ ಕಂದ
ಫಲುಗುಣನನ್ನು ಗೆಲ್ಲುವನು ರವಿಜಾತ ಗೆಲ್ಲದ
ತೆರದಿ ನೀ ತಂತ್ರವ ನಡೆಸೂ ॥

ಪದ

ಕೇಳು ಸುರೇಂದ್ರನೆ ನಾನು ಬರುತ
ಕಂಡೆ ಕರ್ಣನೆಂಬುವನು ಪರಶುರಾಮರೊಳು
ವಿದ್ಯ ಕಲಿಯಲೂ ॥

ನಾರದ: ಅಯ್ಯ ದೇವೇಂದ್ರ, ನಾನು ಬರುವಾಗ್ಗೆ ಯಾರೋ ಒಬ್ಬ ಕರ್ಣನೆಂಬುವ ಹುಡುಗನು ಪರಶುರಾಮದೇವರಲ್ಲಿ ವಿದ್ಯೆಯನ್ನು ಕಲಿಯುತ್ತಿದ್ದನು. ಇದನ್ನು ಮಾತ್ರ ನೋಡಿ ಬಂದೆನೈಯ್ಯ ದೇವೇಂದ್ರ ಭೂಪತಿ ಇಷ್ಟೇ ಹೊರತು ಮತ್ತೇನೂ ಇಲ್ಲವೂ ॥ನಾನಾದರೂ ಹೋಗಿ ಬರುತ್ತೇನೆ ॥

ದೇವೇಂದ್ರ: ಅಯ್ಯ ಮಂತ್ರಿ, ಆ ರವಿಜಾತನಾದ ಕರ್ಣನು ಪರಶುರಾಮರಲ್ಲಿ ಸಕಲ ವಿದ್ಯವನ್ನೂ ಕಲಿಯುತ್ತಲಿರುವನು. ಅವನು ವಿದ್ಯವನ್ನು ಕಲಿತಿದ್ದೇಯಾದರೆ ನನ್ನ ಕಂದನಾದ ಫಲುಗುಣನನ್ನು ಜೈಸದೆ ಬಿಡುವನಲ್ಲಾ. ಇವನಿಗೆ ವಿದ್ಯೆಯನ್ನು ಕಲಿಸದಂತೆ ಇದಕ್ಕೆ ವಂದು ಮಂತ್ರವನ್ನು ಮಾಡೈ ಸಚಿವ ನನಗೆ ಹಿತವ॥

ಪದ

ದೇವೇಂದ್ರ ಭೂಪತಿ ತರುವೆನಾ ಕೀರ್ತಿ ಚಿಂತೆ
ಯಾತಕೆ ನಾ ಕ್ಷಣದಿ ಪೋಗುವೆ ಖೂಳ
ಕರ್ಣನು ಕಲಿತ ವಿದ್ಯಾವ ಹಾಳು ಮಾಡುವೆ ॥

ಚಿತ್ರಸೇನ: ಅಯ್ಯ ದೇವೇಂದ್ರ ಭೂಪತಿಯೆ. ನೀನು ಯಾತಕ್ಕೆ ಚಿಂತೆಯನ್ನು ಮಾಡುತ್ತೀಯ ನಾನು ಯೀ ಕ್ಷಣದಲ್ಲಿಯೇ ಭೂಲೋಕಕ್ಕೆ ಗುಂಗೆಯ ರೂಪಿನಿಂದ ಹೋಗಿ ಆ ಖೂಳನ ತೊಡೆಯನ್ನು ಕೊರೆದು ಅವನ ತೊಡೆಯ ಮೇಲೆ ಮಲಗಿರುವ ಪರುಶುರಾಮ ದೇವರ ನಿದ್ರೆ ಭಂಗ ಮಾಡುವೆನು. ಅವರು ಶಾಪವನ್ನು ಕೊಡುವರು ತಿಳಿಯದೆ. ಚಿಂತೆಯಂ ಬಿಡಿರಿ ಯೀಗಲೆ ಗುಂಗೆ ರೂಪಿನಿಂದ ಹೋಗುತ್ತೇನೆ ॥

ಭಾಮಿನಿ

ಅರಸ ಕೇಳಾಶ್ಚರ‌್ಯವನು ಸುರಪತಿಯು ಕರೆದು ಗಂಧರ್ವನನು
ಕಳುಹೆ. ಮುನಿಯು ಆಶ್ರಮಕೆ ಗುಂಗೆಯ ರೂಪಿನಿಂದ ಬಂದು
ಆ ಕುಮಾರನ ತೊಡೆಯ ಮೇಲೆ ಕುಳಿತು ತೊಡೆಯಂ
ಕೊರೆಯಲು ಕುವರನು ಭಾದೆಯಂ ತಡೆದು ಗುರುನಿದ್ರೆಗೆ
ಭಂಗ ಬರ್ಪುದು ಯೆಂದು ಸುಮ್ಮನೆ ಕುಳಿತಿರಲು
ಬಾಲಕನ ತೊಡೆಯೋಳ್ ಸುರಿದ ರಕ್ತವು ನದಿಯಂದದಿ ಹರಿಯೆ
ಪವಡಿಸಿದ್ದ ಮುನಿಗಳ ಶರೀರವ ತಣ್ಣಗಾಗಿ ಇದು ಯೇನು
ಚೋದ್ಯವು ಯೆಂದು ಬಾಲಕನೊಳಿಂತೆಂದರೂ ॥

ಪರಶುರಾಮ: ಎಲೋ ಪಾಪಿಯಾದ ಹುಡುಗನೆ, ನಾನು ನಿದ್ರೆಯಲ್ಲಿ ಇರುವಾಗ ನನ್ನ ಶರೀರದ ಕೆಳಗೆ ಶ್ರೋಣಿತವು ಸಮುದ್ರದೋಪಾದಿಯಲ್ಲಿ ಹರಿಯುವುದಕ್ಕೆ ಕಾರಣವೇನು. ನಿನ್ನ ತೊಡೆಯಲ್ಲಿ ರಂಧ್ರವಾಗಿರಲು ನನಗೆ ಅನುಮಾನವಾಗಿದೆ. ಜಾಗ್ರತೆ ಹೇಳು ತಡಮಾಡಿದರೆ ಶಾಪವನ್ನು ಕೊಡುತ್ತೇನೆ॥

ಪದ

ಬೇಡ ಬೇಡ ಮುನಿಪಾಲ ಬೇಡಿಕೊಂಬುವೆ
ಮೂಢನಾದ ಯನ್ನೊಳಿಂತು ಕೋಪವ್ಯಾತಕೆ
ಮಾಯಾದಿಂದ ಗುಂಗೆ ಬಂದು ಕಾಯವನ್ನು
ಕೊರೆದು ಹೋದುದು॥ಬೇಡ ಬೇಡ ಮುನಿಪಾಲ ॥

ಕರ್ಣ: ಸ್ವಾಮಿ ಗುರುವರ‌್ಯರೆ, ತಾವು ನನ್ನ ತೊಡೆಯ ಮೇಲೆ ಮಲಗಿರುವಾಗ್ಗೆ ಘೋರರೂಪಿನಿಂದ ವಂದು ಗುಂಗೆಯು ತೊಡೆಯನ್ನು ಕೊರೆಯುವಂಥದ್ದಾಯಿತು. ಆ ಕಾಲದಲ್ಲಿ ತಮಗೆ ನಿದ್ರೆ ಭಂಗವಾಗುವುದೆಂಬುದಾಗಿ ಸುಮ್ಮನೆ ಇದ್ದೆನು ಸ್ವಾಮಿ ಯತಿವರ‌್ಯರೆ ॥

ಪದ

ಯೇನ ಬಗುಳುವೆ ಪಾಪಿಕುವರಾ ॥
ನೀತಿ ತಪ್ಪಿ ಕ್ಷಾತ್ರಿ ಧರ್ಮವ ಯನ್ನೊಳು ತೋರುವ
ನೀ ಕಲಿತ ವಿದ್ಯೆ ನಾಶವಾಗಲೀ ॥ಯು ॥

ಪರಶುರಾಮ: ಎಲೋ ಕ್ಷಾತ್ರಿಯ ಕುವರನಾದ ಹುಡುಗನೆ ಈವಾಗ ನಿನ್ನ ಮರ್ಮವೆಲ್ಲ ಗೊತ್ತಾಯಿತು. ನೀನು ಬ್ರಾಹ್ಮಣನಾಗಿದ್ದರೆ ಗುಂಗೆಯ ರೂಪಿನಿಂದ ಬಂದು ನಿನ್ನ ತೊಡೆಯನ್ನು ಕಚ್ಚಿದಾಗಲೆ ನನ್ನನ್ನು ಎಚ್ಚರಗೊಳಿಸುತ್ತಾ ಇದ್ದೆ. ನೀನು ಕ್ಷಾತ್ರಿಯನಾಗಿದ್ದರಿಂದ ನನ್ನನ್ನು ಎಚ್ಚರಗೊಳಿಸಲಿಲ್ಲ. ಆದರೂ ಚಿಂತೆಯಿಲ್ಲ. ನೀನು ಮಾಡಿದ ಅಪರಾಧಕ್ಕೆ ನಿನ್ನನ್ನು ಸಂಹಾರ ಮಾಡಬೇಕಾಗಿತ್ತು. ನೀನು ನನಗೆ ಶಿಷ್ಯನಾದ್ದರಿಂದ ನಿನಗೆ ಪ್ರಾಣದಾನ ಕೊಟ್ಟಿದ್ದೇನೆ. ನೀನು ನನ್ನಲ್ಲಿ ಕಲಿತ ವಿದ್ಯವೂ ಲಭಿಸದೆ ಹೋಗಲಿ ಹೊರಟು ಹೋಗು ॥

ಪದ

ತಂದೆ ಭಾರ್ಗವ ಮುನಿಯೆ ತರಳನಪರಾಧವ
ಮನ್ನಿಸಿ ಸಲಹಯ್ಯ ಯತಿಗಳೆ ಯನ್ನಾತಂ
ನೀವೂ ಪೇಳಿದ ವಿದ್ಯಾ ಲಭಿಸದಿದ್ದರೆನಗೆ
ಮುಂದೆನಗೆ ಗತಿಯೇನೂ॥

ಕರ್ಣ: ಸ್ವಾಮಿ ಪರುಶುರಾಮ ದೇವರೆ, ನಾನು ತಮ್ಮಲ್ಲಿ ಬಂದು ತಂದೆಯೋಪಾದಿಯಲ್ಲಿ ನಂಬಿಕೊಂಡಿದ್ದು ತಾವು ಯೀ ರೀತಿಯಾಗಿ ಶಾಪವನ್ನು ಕೊಟ್ಟರೆ ನನ್ನ ಗತಿಯೇನು. ಸರ್ವಥಾ ಯನ್ನ ಅಪರಾಧವನ್ನು ಮನ್ನಿಸಿ ಶಾಪವನ್ನು ಕೊಡಬೇಡವೋ ತಂದೆ ನೋಡಿನ್ನು ಮುಂದೆ ॥

ಕಂದ

ಯೆಲೆ ತರಳ ನಿನ್ನ ಅಪರಾಧವನು
ಮನ್ನಿಸದೆ ಮುಂದೆ ರಣದೊಳು
ಹರಿಯ ಗೆಲುವದೆ ನಿನಗೆ
ಮರಣವೆಂದನಾ ಮುನಿಪಾ ॥

ಪರಶುರಾಮ: ಯೆಲವೊ ಬಾಲಕನೆ ನಿನ್ನ ಅಪರಾಧವನ್ನು ಮನ್ನಿಸಿದೆ. ಮುಂದೆ ಭಾರತ ಯುದ್ದದೋಳ್ ಆ ಶ್ರೀಹರಿಯ ಮೇಲೆ ನೀನು ಯುದ್ಧಕ್ಕೆ ಹೋಗಿದ್ದೆಯಾದರೆ ನಿನಗೆ ಮರಣ ಸಂಭವಿಸುವುದೆ ದಿಟ ತಿಳಿಯಿತೋ ಮತ್ತೂ ಹೇಳುತ್ತೇನೆ ॥

ಭಾಮಿನಿ

ಹರಿನೃಪರು ನಿನ್ನೊಳು ಕಲಹಕೆ ಬರಲು ನೀನಾಕ್ಷಣದಿ
ಜಮದಗ್ನಿಯ ನೆನೆಯೋ ಜಯವು ನಿನಗೇ ರಣಕೆ
ಪೋಗು ನೀನಿರಲು ಕಂಡ್ರಿಸುವೆನೆಂದು ಗರ್ಜಿಸಿದಾ ॥

ಪರಶುರಾಮ: ಎಲವೊ ಬಾಲಕನೇ ನಿನ್ನ ಮೇಲೆ ಆ ಕೃಷ್ಣಾರ್ಜುನರು ಏನಾದರೂ ರಣಕೆ ಬಂದಿದ್ದೆಯಾದರೆ ನೀನು ಆ ಕ್ಷಣದಲ್ಲಿಯೇ ನಮ್ಮ ತಂದೆ ಜಮದಗ್ನಿಯನ್ನು ನೆನೆಯುವಂಥವನಾಗು॥

ಭಾಗವತ: ಅರಸಕೇಳ್ ಪರುಶುರಾಮರ ಬಳಿಯಿಂದ ಕಳುಹಿಸಿಕೊಂಡು ಬರುತಿರೆ ಕರ್ಣಬರುವ ಮಾರ್ಗದಿ ಮಗಧೇಶ ನುಡಿದನು ನೀನು ಯಾರು ಖಳನೆಂದು ಗರ್ಜಿಸಿದನಾಕ್ಷಣದಿ ॥

 

(ಜರಾಸಂಧನ ಬರುವಿಕೆ)

ಪೀಠಿಕೆ: ಭಲೈ ಮಾನುಷ್ಯನೆ ನಮ್ಮನ್ನು ಧಾರೆಂದು ಪರಿಪರಿ ವಿಧದಿಂದ ಮಾತನಾಡಿಸುವ ಮಾನುಷ್ಯ ನೀ ಧಾರೋ ನಿನ್ನ ಹೆಸರೇನು ಹೇಳು ॥

ಜರಾಸಂಧ: ಎಲೈ ಸಾರಥಿ ಮೃಢನಡಿ ಚರಣಾರವಿಂದದೋಳ್ ಧೀರನೆಂದೆನಿಸಿ ಮೆರೆಯುವ ಜರಾಸಂಧ ಭೂಪತಿಯೆಂದು ತಿಳಿಯುವಂಥವನಾಗು ॥

ಯೀ ಸಭೆಗೆ ಬಂದ ಕಾರಣವೇನೆಂದರೆ ನಮ್ಮ ಪಟ್ಟಣದ ದಕ್ಷಿಣ ಭಾಗದಲ್ಲಿರುವ ವನಕ್ಕೆ ವೊಬ್ಬ ನರ ಮಾನವ ಬಂದಿರುತ್ತಾನಂತೆ. ಅವನನ್ನು ನೋಡಬೇಕಾದ ಪ್ರಯುಕ್ತ ಬಂದಿರುತ್ತೇನೆ. ಆಹಾ ಇಲ್ಲಿಯೇ ಇರುವನೂ ಮಾತನಾಡಿಸುವೆ॥

ಪದ

ಯಾರೆಲಾ ತರಳ ನೀನು ಎಲ್ಲಿಗೆ
ಪೋಗುವೆಯೋ ಕಾಳಗದೊಳೆಂನ್ನನು
ಜೈಸಿ ಮುಂದೆ ಪೋಗೆಲೋ ಮೂಳ ॥

ಜರಾಸಂಧ: ಯಲಾ ಪೋರನೆ, ನೀನು ಯಾರು ನಿನಗೆ ಮರಣದ ಆಸೆಯಿರುವಾದ್ದರಿಂದ ಇಲ್ಲಿಗೆ ಬಂದೆಯಾ. ಕಾಳಗದಲ್ಲಿ ಯನ್ನನ್ನು ಗೆದ್ದು ಹೋಗಲೊ ಭಂಡ ಈಡಾಡುವೆನೊ ನಿನ್ನ ಚೆಂಡಾ॥

ಪದಆಟತಾಳ

ತರವಲ್ಲೋ ಸಮರವು ಮಗಧೀಶ
ಯನ್ನಾಯ ಮಾರ್ಗದಿ ಯನ್ನಾನು
ತಡಿಯಾಬೇಡ ಸಣ್ಣ ಬಾಲಕನೆಂದು ಸಮರಾಕೆ
ತಡದೇಯಾ ತರವಲ್ಲಾ ತೆರಳು ನೀ ಬೇಗಾ ॥

ಕರ್ಣ: ಮಗಧ ದೇಶಕ್ಕೆ ದೊರೆಯಾದ ಜರಾಸಂಧನೆ ಸಣ್ಣ ಬಾಲಕನೆಂದು ಪರಿಹಾಸ್ಯದಿಂದ ಯನ್ನ ಮೇಲೆ ಯುದ್ಧಕ್ಕೆ ಬರುವುದು ಸರಸದ ಸಮರವಲ್ಲ ವಳ್ಳೇ ಮಾತಿನಿಂದ ಮಾರ್ಗವನ್ನು ಬಿಟ್ಟು ನಿನ್ನ ಅರಮನೆಗೆ ತೆರಳೋ ರಕ್ಕಸ ॥

ಜರಾಸಂಧ: ರವಿಪುತ್ರನಾದ ಕರ್ಣನೇ ಕೇಳು, ಘೋರ ಶರೀರವುಳ್ಳ ಹುಲಿಯು ಹುಲ್ಲೆಮರಿಗೇನಾದರೂ ಅಂಜುವದುಂಟೆ. ನೀನು ಚಿಕ್ಕ ಹುಡುಗನು ನಿನಗೇನಾದರೂ ನಾನು ಅಂಜಬಲ್ಲನೆ. ನನ್ನ ಕೈಯಲ್ಲಿ ಇರುವ ಗದೋರ್ದಂಡದಿಂದ ವಂದು ಪೆಟ್ಟು ಹೊಡೆದಿರುತ್ತೇನೆ. ತರಹರಿಸಿ ಕೊಳ್ಳುವಂಥವನಾಗೂ ॥

ಪದಅಟತಾಳ

ದುರುಳ ದೈತ್ಯನೆ ಕೇಳೋ
ಘುಡುಘುಡಿಸಿ ಬಾಣವ ಭಂಡರಕ್ಕಸ
ನಿನ್ನ ಕಂಡು ಮಾಡುವೆನೆಂದೂ ॥

ಕರ್ಣ: ಎಲೋ ಜರಾಸಂಧನೆ ನಿನ್ನ ವುಬ್ಬಿನ ಮಾತುಗಳಿಗೆ ನಾನು ಹೆದರುವೆನೆ. ನೀನು ಹೊಡೆದ ಪೆಟ್ಟಿಗೆ ನಾನು ಅಂಜುವ ಕರ್ಣನೇ. ವಳ್ಳೇ ಮಾತಿನಿಂದ ಮಾರ್ಗವನ್ನು ಬಿಡು ಎಂದರೆ ಹಮ್ಮಿನ ಮಾತುಗಳನ್ನು ಬೆಳಸುವೆಯಾ. ಇಕ್ಕೋ ನೋಡು ಉರುಗಾಸ್ತ್ರವನ್ನು ಬಿಡುತ್ತೇನೆ ಪರಿಹರಿಸಿಕೊಳ್ಳು ವಂಥವನಾಗು ॥

ಪದ

ಸಣ್ಣ ಹುಡುಗ ಸಾಯಬೇಡ
ಸುಮ್ಮನೋಗೆಲಾ ಯನ್ನ ಕೂಡಿ
ಕಾಳಗವನು ಮಾಡುವೆನೆಲಾ ॥

ಜರಾಸಂಧ: ಎಲಾ ಹುಡುಗನೇ ನೀನು ಸಣ್ಣವನೆಂದು ಸುಮ್ಮನಿದ್ದರೆ ಹೆಮ್ಮೆ ಮಾತುಗಳನ್ನು ಬೆಳಸುವೆಯಾ. ಸುಮ್ಮನೆ ನನ್ನ ಕೈಯಲ್ಲಿ ಸಿಕ್ಕಿ ಸಾಯಬೇಡ ತಿಳಿಯಿತೋ ಮತ್ತೂ ಹೇಳುತ್ತೇನೆ.

ಪದ

ಪೇಳುವೆ ಕೇಳೆಲೆ ಪೋರ ಹರಿಹರಾದಿಗಳೆನ್ನಯ
ಕೂಡೆ ಜೈಸಲು ಸಮರದಿ ಯನ್ನ
ಕದ್ದೋಡಿದರೂ ಕೇಳೋ ಇದ್ದು ಬದ್ದಾ ॥

ಜರಾಸಂಧ: ಎಲಾ ಹುಡುಗನೆ, ಹರಿಹರ ಬ್ರಹ್ಮಾದಿಗಳೂ ಕೂಡ ನನ್ನಲ್ಲಿ ಯುದ್ಧವನ್ನು ಮಾಡಲಾರದೆ ಹೆದರಿ ಕದ್ದು ವೋಡಿದರು. ಇಂತಾದ್ದರಲ್ಲಿ ಸುಮ್ಮನೆ ನನ್ನ ಕೈಯಲ್ಲಿ ಮರಣ ಹೊಂದಬೇಡ. ನೀನು ಬಿಟ್ಟು ಇರುವಂಥ ಉರುಗಾಸ್ತ್ರವನ್ನು ಗರುಡಬಾಣದಿಂದ ಮಧ್ಯಮಾರ್ಗದಲ್ಲಿ ಛಿದ್ರಗೈದಿರುತ್ತೇನೆ ಕಂಡೆಯೋ. ಅಂಥ ಪರಾಕ್ರಮಿಯಾದರೆ ಯುದ್ಧಕ್ಕೆ ಎದುರಾಗು

(ಯುದ್ಧ ಕರ್ಣನ ಮೂರ್ಛೆ)

ಭಾಮಿನಿ

ಧರಣಿಪತಿ ಕೇಳಿತ್ತ ಕರ್ಣನು ಮೂರ್ಛೆಯೊಳು
ತಿಳಿದೆದ್ದು ಭಾರ್ಗವನ ಧ್ಯಾನಿಸುತ
ಸಮರಕೆ ಎದುರಾದನೂ ॥

ಕರ್ಣ: ಎಲಾ ದೈತ್ಯ ನನ್ನನ್ನು ಮೂರ್ಛೆಗೊಳಿಸಿದೆನೆಂದು ಅಹಂಕಾರ ಬಂದಿತೋ ಯುದ್ಧಕ್ಕೆ ಎದುರಾಗೂ ॥

(ಜರಾಸಂಧನ ಮೂರ್ಛೆ)

ಭಾಮಿನಿ

ಕರ್ಣ ಕೋಪದೋಳ್ ಕಾಳಗದಿ ರಕ್ಕಸನ
ಮೂರ್ಛಿಸಲು ದುರುಳ ದೈತ್ಯನು
ಮೂರ್ಛೆಯನು ತಿಳಿದೆದ್ದು ಕಡುಪರಾಕ್ರಮಿ
ಇವನೆನುತ ರವಿಕುಮಾರನೋಳ್ ಇಂತೆಂದಾ ॥

ಜರಾಸಂಧ: ಅಯ್ಯೋ ಶಂಕರ, ಬಾಲಕನೆಂದು ಪರಿಹಾಸ್ಯದಿಂದ ಯುದ್ಧವನ್ನು ಮಾಡಲು ನನಗೆ ಮರ‌್ಯಾದೆ ಬಂದ ಹಾಗಾಯಿತು. ವಳ್ಳೇದು ಯೀ ತ್ರಿಲೋಕದಲ್ಲಿ ಹುಡುಕಿ ನೋಡಿದಾಗ್ಯೂ ಈತನ ಸರಿಸಮಾನವಾದ ಶೂರರು ಕಾಣಲಿಲ್ಲ. ಇವನ ಪರಾಕ್ರಮಕ್ಕೆ ನಾನು ಮೆಚ್ಚುವಂಥವನಾದೆ. ಯೀ ಸುಕುಮಾರನಿಗೆ ತಕ್ಕ ಮರ‌್ಯಾದೆಯನ್ನು ಮಾಡಿ ಕಳುಹಿಸಿಕೊಡುತ್ತೇನೆ ॥