ಪದ

ಭಳಿರೆ ಭಾಸ್ಕರ ತರಳ ನಿನ್ನಯ ಶೌರ‌್ಯಕೆ ನಾನು
ಮೆಚ್ಚಿದೆನು ಕೇಳೋ ಮೇದಿನಿಯೊಳೆನ್ನನು
ಕಾಳಗದಿ ಜೈಸುವ ಭಟರ ನಾ ಕಾಣೆನೋ ॥

ಜರಾಸಂಧ: ಅಯ್ಯ ಕರ್ಣಜನೆ, ನಿನ್ನ ಪರಾಕ್ರಮಕ್ಕೆ ನಾನು ಮೆಚ್ಚುವಂಥವನಾದೆ. ಅಲ್ಲದೆ ಯೀ ಲೋಕದಲ್ಲಿ ನನ್ನನ್ನು ಸಮರದಲ್ಲಿ ಸೋಲಿಸುವಂಥ ವೀರಾಧಿವೀರರನ್ನು ಕಾಣಲಿಲ್ಲ. ನಿನ್ನ ಸಾಹಸಕ್ಕೆ ಮೆಚ್ಚಿದೆನು. ಮತ್ತೂ ಹೇಳುತ್ತೇನೆ ॥

ಪದ

ಹರಿಹರ ಬ್ರಹ್ಮಾದಿ ಸುರದಿಕ್ಪಾಲಕರೆನ್ನ ಕಂಡರೆ
ಕದ್ದೋಡುವರೂ ಕಳ್ಳಕೃಷ್ಣನು ಕಾದಲಾರದೆ
ಯನ್ನೊಳು ಮೊರೆತಪ್ಪಿ ಕದ್ದೋಡಿದನು ॥

ಜರಾಸಂಧ: ಅಯ್ಯ ರವಿ ಪುತ್ರನೆ, ನನ್ನಲ್ಲಿ ಹರಿಹರ ಅಷ್ಟದಿಕ್ಪಾಲಕರೂ ಕೂಡ ಯುದ್ಧದಲ್ಲಿ ಜೈಸಲಾರದೆ ಕದ್ದು ವೋಡಿ ಹೋದರು. ಮತ್ತೂ ಆ ಕೃಷ್ಣನೂ ಕೂಡ ಜೈಸಲಾರದೆ ಮೊರೆ ತಪ್ಪಿಸಿಕೊಂಡು ಹೋಗಿ ಸಮುದ್ರ ಮಧ್ಯದಲ್ಲಿ ಮನೆಯನ್ನು ಮಾಡಿಕೊಂಡು ಇರುತ್ತಾನೆ ತಿಳಿಯಿತೋ ಮತ್ತೂ ಹೇಳುವೆ॥

ಪದ

ಚಿಕ್ಕ ಬಾಲಕನಾಗಿ ಯನ್ನೊಳು
ಕಾಳಗದಿ ಸೋಲಿಸಿದೆ ನೀನೀ
ಪರಿ ಯನ್ನಾಯ ಮನದೊಳು ॥
ಮಮಕಾರ ಪುಟ್ಟಿತು ಬಾಲಕ ನಿನ್ನ ಮೇಲೆ ॥

ಜರಾಸಂಧ: ಅಯ್ಯ ಮಗೂ ಬಾಲಕನಾಗಿಯೇ ವೀರಾಧಿವೀರನಾದ ಯನ್ನಲ್ಲಿ ಕಾಳಗದಿ ಜೈಸುವಂಥವನಾದೆ. ಯನ್ನ ಮನಕ್ಕೆ ಬಹಳ ಆನಂದಕರವಾಯಿತಾದ ಕಾರಣ ಅರಮನೆಗೆ ಹೋಗೋಣ ನಡೆ ॥

ಭಾಮಿನಿ

ಮೆಚ್ಚಿದನು ನಿನ್ನಯ ಸಾಹಸಕೆ
ಬಾಲಕನೆ ಎನುತ ಜರಾಸಂಧನು
ಕರಗಳಂ ಪಿಡಿದು ಲಗ್ನ ನಿಶ್ಚಯ
ಮಾಡಿ ವಂಗ ದೇಶವ ಕುಂದದೆ
ಧಾರೆಯನೆರೆದು ಮಂಗಳೋತ್ಸವದೊಳಗೆ
ಕಳುಹಿದನು ಕುಂಡಲಪುರಕೇ॥

ಜರಾಸಂಧ: ರವಿ ಪುತ್ರನಾದ ಕರ್ಣನೆ ಲಾಲಿಸು. ನಿನ್ನ ಪರಾಕ್ರಮಕ್ಕೆ ಮೆಚ್ಚಿದೆ. ನನ್ನ ವಂಗದೇಶವನ್ನು ಪಟ್ಟಾಭಿಷೇಕ ಮಾಡಿ ಇರಿಸುತ್ತೇನೆ. ಇದನ್ನು ಕೈಗೊಂಡು ಹಸ್ತಿನಾವತಿಗೆ ಹೋಗಿ ಬರುವಂಥವನಾಗಪ್ಪ ಮಗೂ ॥

ಕರ್ಣ: ಎಲೈ ಚಾರಕ, ಹಸ್ತಿನಾಪುರಕ್ಕೆ ಅರಸನಾದ ಕೌರವೇಶ್ವರನನ್ನು ಕಾಣಬೇಕಾದ ಪ್ರಯುಕ್ತ ಬೆಂಬಲದಲ್ಲಿ ಹೊರಡುವಂಥವನಾಗೂ ॥

 

 

(ಕೌರವರ ಸಭೆ)

ಕೌರವ: ಭಲೈ ಮಾನುಷ್ಯನೆ ಹೀಗೆ ಬಾ ಮತ್ತೂ ಹೀಗೆ ಬಾ ಯನ್ನ ಯದುರಿನೋಳ್ ನಿಂತು ಘಟಿತ ಭಯವಿಲ್ಲದೆ ಕರಗಳಂ ಮುಗಿದು ನೀವು ಧಾರೆಂದು ಕೇಳುವನು ನೀನು ಧಾರೋ ನಿನ್ನ ಹೆಸರೇನೂ॥

ಭಲೈ ಸಾರಥಿ ಯೀರೇಳು ಲೋಕಕ್ಕೆ ಅಧಿಕವಾಗಿ ಮೆರೆಯುವ ಹಸ್ತಿನಾಪುರ ಪಟ್ಟಣವನ್ನು ಸಾಂದ್ರ ವೈಭವದಿಂದ ಪಾಲಿಸುವ ಕೌರವೇಶ್ವರನೆಂದು ಯೀ ಸಭೆಯೋಳ್ ಕಿತಾಪ್ ಮಾಡೋ ಚಾರ ಚಾಕರತ ಧೀರ॥

ಭಲೈ ಸಾರಥಿ ಯೀ ಸಭೆಗೆ ಬಂದ ಕಾರಣವೇನೆಂದರೆ ಆ ಕುನ್ನಿಗಳಾದ ಪಾಂಡವರನ್ನು ನಾಶಪಡಿಸಿ ಬಾಕಿ ಆಲೋಚನೆಯನ್ನು ಮಾಡಬೇಕಾದ ಕಾರಣ ಯನ್ನ ತಮ್ಮನಾದ ದುಶ್ಯಾಸನರಾಜ ಮಾವಯ್ಯನವರಾದ ಶಲ್ಯ ಭೂಪತಿಯನ್ನು ಆಸ್ಥಾನಕ್ಕೆ ಬರಮಾಡು ॥

ಶಲ್ಯ: ಭಲೈ ಮಾನುಷ್ಯನೆ ಹೀಗೆ ಬಾ ಮತ್ತೂ ಹೀಗೆ ಬಾ ಭಲೈ ಮಾನುಷ್ಯನೆ ನಮ್ಮನ್ನು ಎಡಬಿಡದೆ ಧಾರೆಂದು ಕೇಳಲು ನೀನು ಧಾರು ನಿನ್ನ ಪೆಸರೇನು ಹೇಳು ॥

ಭಲೈ ಸಾರಥಿ ಹಾಗಾದರೆ ಹೇಳುತ್ತೇನೆ ಚಿತ್ತವಿಟ್ಟು ಕೇಳು. ಯೀ ಚಪ್ಪನ್ನೈವತ್ತಾರು ದೇಶದ ರಾಜರುಗಳಿಂದ ತಪ್ಪದೆ ಕಪ್ಪಕಾಣಿಕೆಯನ್ನು ಕೈಗೊಂಡು ಮದ್ರ ದೇಶವನ್ನು ಸಾಂದ್ರ ವೈಭವದಿಂದ ಆಳುವ ಶಲ್ಯಭೂಪತಿ ಯೆಂದು ಯೀ ಸಭೆಯೋಳ್ ಕಿತಾಪ್ ಮಾಡುವಂಥವನಾಗು ॥ಎಲೈ ಸಾರಥಿ ಯೀ ವರಸಭೆಗೆ ಬಂದ ಕಾರಣವೇನೆಂದರೆ ಕೌರವೇಶ್ವರರು ಕರೆಸಿದ ಕಾರಣ ಬಾಹೋಣವಾಯಿತು. ಧಾವಲ್ಲಿರುವರು ತೋರಿಸು ॥

ದುಶ್ಯಾಸನ: ಭಲೈ ಮಾನುಷ್ಯನೆ ಹೀಗೆ ಬಾ ಮತ್ತೂ ಹೀಗೆ ಬಾ. ನನ್ನೆದುರಿನೋಳ್ ನಿಂತು ಘಟಿಕ ಭಯವಿಲ್ಲದೆ ಕೇಳುವ ಮಾನುಷ್ಯ ನೀ ಧಾರು ಹೀಗೆ ಸಾರು ॥ಎಲೈ ಸಾರಥಿ ಹಾಗಾದರೆ ಹೇಳುತ್ತೇನೆ ಅಂಗವಂಗ ಕಳಿಂಗ, ಮೊದಲಾದ ಕಾಶ್ಮೀರ ದೇಶದಲ್ಲಿ ತಪ್ಪದೆ ಕಪ್ಪ ಕಾಣಿಕೆಯನ್ನು ಕೈಗೊಂಡು ಹಸ್ತಿನಾವತಿ ಪಟ್ಟಣವನ್ನು ಸಾಂದ್ರವೈಭವದಿಂದ ಪಾಲಿಸುವ ಚಂಡ ಪ್ರಚಂಡ ಗಂಡುಗಲಿಗಳ ಮಿಂಡ ಭುಜಬಲೋರ್ಧಂಡ ಕೌರವೇಶ್ವರನಿಗೆ ಅನುಜನಾದ ದುಶ್ಯಾಸನ ರಾಜನೆಂದು ತಿಳಿಯಲೋ ಚಾರ ನೀ ಚಮತ್ಯಾರ ॥ಯೀ ಸಭೆಗೆ ಬಂದ ಕಾರಣವೇನೆಂದರೆ ನಮ್ಮ ಅಣ್ಣನವರಾದ ಕೌರವೇಶ್ವರರು ಕರೆಸಿದ ಕಾರಣ ಬಾಹೋಣವಾಯಿತು ಧಾವಲ್ಲಿರುವರು ॥

ಕೌರವ: ನಮೋ ನಮೋ ಮಾವಯ್ಯ ॥

ಶಲ್ಯ: ನಿನಗೆ ಮಂಗಳವಾಗಲಪ್ಪಾ ಕೌರವೇಶ್ವರಾ ॥

ದುಶ್ಯಾಸನ: ನಮೊ ನಮೋ ಅಗ್ರಜಾ ॥

ಕೌರವ: ಧೀರ್ಘಾಯುಷ್ಯಮಸ್ತು ಮೇಲಕ್ಕೇಳೈ ಅನುಜನೇ ॥

ಪದ

ಅನುಜ ಲಾಲಿಸಿ ಕೇಳು ವನಜನಾಭನ
ಕರುಣವಾ ಘನವಾಯಿತು ಪಾಂಡವರಿಗೇ
ಮುಂದೇನು ಗತಿ ಇದಕೆ ಪೇಳಿರಿ
ಅನುಜರೇ ಮರ್ಮದ ಮಾತಲ್ಲವೋ ॥

ಕೌರವ: ಅನುಜನೆ ಆ ಪಾಂಡವರನ್ನು ಯಾವ ವಿಧದಿಂದಲಾದರೂ ಸಂಹರಿಸಬೇಕಲ್ಲದೆ ಬಿಡಲಾಗದು. ವಂದು ವೇಳೆ ಅವರನ್ನು ಬಿಟ್ಟರೆ ಆ ಖೂಳನಾದ ಭೀಮನಿಂದ ಪ್ರತಿನಿತ್ಯದಲ್ಲೂ ಕಲಹ ತಪ್ಪಲಿಕ್ಕಿಲ್ಲ. ಯಾವ ವಿಧದಿಂದಲಾದರೂ ಸಂಹಾರ ಮಾಡಬೇಕೈಯ್ಯ ಅನುಜಾ ॥

ಪದ

ಬಿಡು ಬಿಡು ಅವನಿಪಾಲ ಅವರ
ಮಾತುಗಳ್ಯಾಕೆ ಸಡಗರದಿ ಸಂಹರಿಸಿ
ಬರುವೆ ಅವನಿಪ ಅಪ್ಪಣೆ ದಯಪಾಲಿಸಿದರೆ
ಅಂತ ಭೀಮನ ತುಂಡುಗೈಯ್ಯೂವೆ॥

ದುಶ್ಶಾಸನ: ಅಣ್ಣಾ ಕೌರವೇಶ್ವರ. ಆ ಕುನ್ನಿಗಳಾದ ಪಾಂಡವರನ್ನು ಸಂಹಾರ ಮಾಡಬೇಕಾದರೆ ಅಗಾಧವಲ್ಲ. ನೂರು ಹೆಣ್ಣಾನೆಗಳಲ್ಲಿರುವ ಶಕ್ತಿ ಇರುವ ಆ ಭಂಡಭೀಮನೆತ್ತ ನೂರುಗಂಡಾನೆ ಶಕ್ತಿ ಇರುವ ನನ್ನ ಸಮರವೆತ್ತ. ಇಂಥ ಸ್ವಲ್ಪ ಕಾರ‌್ಯಕ್ಕೆ ಚಿಂತೆಯನ್ನು ಮಾಡುವರೇ ಅಗ್ರಜನೇ ॥

ಕೌರವ: ಅನುಜನೇ, ನಿನ್ನ ಪರಾಕ್ರಮಕ್ಕೆ ಮೆಚ್ಚುವಂಥವನಾದೆ. ಸೂರ‌್ಯದೇವರು ಪಶ್ಚಿಮಾಂಬುಧಿಯಲ್ಲಿ ಗತರಾದರು. ನಿಮ್ಮ ನಿಮ್ಮ ಅರಮನೆಗೆ ತೆರಳಿರಿ ॥

ಕೌರವೇಶ್ವರ: ಎಲೈ ಚಾರಕ. ಕೋಟಿಸೂರ್ಯ ಪ್ರಕಾಶಮಾನವಾದ ಯಾರೋ ಬಾಲಕನು ಅರಮನೆ ಬಾಗಿಲಲ್ಲಿ ನಿಂತಿರುವಂತೆ ಕಾಣುತ್ತೆ. ಆಸ್ಥಾನಕ್ಕೆ ಕರೆದುಕೊಂಡು ಬಾ॥

ಕರ್ಣ: ನಮೋ ನಮೋ ಕೌರವೇಶ್ವರಾ ॥

ಕೌರವ: ನಿನಗೆ ಮಂಗಳವಾಗಲಪ್ಪ ಪುತ್ರ ಸುಂದರಗಾತ್ರ. ಅಯ್ಯ ಬಾಲಕ ನೀನು ಯಾರು ನಿನ್ನ ನಾಮಾಂಕಿತವೇನು. ನಮ್ಮಲ್ಲಿ ಬಂದ ಕಾರಣವೇನು ಸಂಶಯವಿಲ್ಲದೆ ಹೇಳುವಂಥವನಾಗಪ್ಪಾ ಬಾಲಕ॥

ಪದ

ಕೇಳೈಯ್ಯ ಕುರುಪತಿ ಕುರುಹ
ಪೇಳುವೆ ನಾನೂ ಅನುಮಾನಿಸದೆ
ನಾವು ಕೇಳಿ ಪೇಳುವೆ ನಾನು ॥

ಕರ್ಣ: ಸ್ವಾಮಿ ಕೌರವೇಶ್ವರ ನಾನು ತಮ್ಮ ಅಪ್ಪಣೆಯಂತೆ ಅರಿಕೆ ಮಾಡುತ್ತೇನೆ. ಬಾಲಕನ ಮಾತನ್ನು ಲಾಲಿಸಬೇಕೂ ॥

ಪದ

ಸುತ್ತೇಳು ಲೋಕವನು
ಸುತ್ತೂತಲಿರುವಂಥ ಸೂರ್ಯನ
ವರದಿಂದ ಜನಿಸಿದ ಕರ್ಣ ನಾನೂ ॥

ಕರ್ಣ: ಹೇ ರಾಜರೇ, ಯೀ ಜಗವನ್ನೇ ಸುತ್ತಿ ಬೆಳಕು ತೋರುವಂಥ ಸೂರ್ಯ ಮಹಾದೇವರ ವರದಿಂದ ಪುಟ್ಟಿದಂಥ ಬಾಲಕ ನಾನು. ನನ್ನ ಪೆಸರು ಕರ್ಣನು ಮತ್ತೂ ಹೇಳುತ್ತೇನೆ ॥

ಪದ

ಭೂಲೋಕವನು ಸುತ್ತಿ
ನಿಮ್ಮ ವಾರ್ತೆಯ ಕೇಳಿ ಸಾಗಿ ಬಂದೆನು
ನಿಮ್ಮ ಸನ್ನಿಧಿಗೆ ದೊರೆಯೇ ॥

ಕರ್ಣ: ಹೇ ಭೂಪತಿ ಯೀ ಭೂಲೋಕವನ್ನು ಸುತ್ತಿ ನೋಡಿದಾಗ್ಯೂ ಯನ್ನ ಪೋಷಿಸತಕ್ಕವರು ಕಾಣಲಿಲ್ಲ. ಆದ ಪ್ರಯುಕ್ತ ನಿಮ್ಮ ನಾಮಧೇಯವನ್ನು ತಿಳಿದು ಇಲ್ಲಿಗೆ ಬಂದೆನೈ ದೊರೆಯೆ ಮತ್ತೂ ಹೇಳುತ್ತೇನೆ ॥

ಭಾಮಿನಿ
ಜಾತ ಕೇಳ್ ಪರುಶುರಾಮರೋಳ್ ಕರುಣದಿಂ ನಾನು
ಶಸ್ತ್ರವಿದ್ಯವನು ಪ್ರೀತಿಯಿಂ ಕಲಿತೇ ॥

ಕರ್ಣ: ಅಯ್ಯ ಕೌರವೇಶ್ವರ, ನಾನು ಸಕಲ ದೇಶವನ್ನು ಸುತ್ತಿ ಎಲ್ಲಿಯೂ ಯನಗೆ ವಿದ್ಯಾ ಗುರುವು ದೊರೆಯದೆ ಪರುಶುರಾಮ ದೇವರಲ್ಲಿ ಹೋಗಿ ಸಕಲ ವಿದ್ಯೆಯನ್ನೂ ಕಲಿಯುತ್ತಾ ಇದ್ದೆನೂ ತಿಳಿಯಿತೆ ಮತ್ತೂ ಹೇಳುತ್ತೇನೆ॥

ಪದ

ವಿದ್ಯಾ ಕಲಿಯುತಿರಲು ಕಂಟಕವು
ಬಂದಿತೆಮಗೆ ಯನ್ನಾ ತೊಡೆಯ ಮೇಲೆ
ಗುರು ನಿದ್ರೆ ಮಾಡುತಿರಲೂ ಮಾಯಾದ
ಕಂಟಕವೂ ಬಂದೀತು ಕೇಳೈಯ್ಯ

ಕರ್ಣ: ಅಯ್ಯ ರಾಜರೆ ನಾನು ವಿದ್ಯೆಯನ್ನು ಕಲಿಯುತ್ತಾ ಇರಲು ನಾನು ಕಲಿಯುವ ವಿದ್ಯೆಯನ್ನು ನೋಡಿ ಪರುಶುರಾಮ ದೇವರೂ ಸಂತೋಷಪಟ್ಟು ಯನ್ನ ತೊಡೆಯ ಮೇಲೆ ನಿದ್ರೆ ಮಾಡುವಂಥವರಾದರು. ರಾಜರೆ ಮತ್ತೂ ಹೇಳುತ್ತೇನೆ

ಪದ

ಮಾಯಾದ ಗುಂಗೆಯು ಮೋಸದಿಂದಲಿ
ಬಂದು ಗುರು ನಿದ್ರೆಗೈಯುತ್ತಿರುವ ಯನ್ನ
ತೊಡೆಯ ಕೊರೆಯೆ ಸ್ರೋಣಿತವು
ಸುರಿದುದು ಭೂಪಾ ಕೇಳೈಯ್ಯ ॥

ಕರ್ಣ: ಅಯ್ಯ ಕೌರವ ಭೂಪರೆ, ಗುರುಗಳು ನಿದ್ರೆಯಿಂದ ಯನ್ನ ತೊಡೆಯ ಮೇಲೆ ನಿದ್ರೆಗೈಯುತ್ತಾ ಇರಲು ಮಾಯದಿಂದ ಗುಂಗೆಯು ಬಂದು ತೊಡೆಯನ್ನು ಕೊರೆಯಲೂ ರಕ್ತವೂ ಹರಿಯುವಂಥದ್ದಾಯಿತು. ನಾನು ಇದನ್ನು ನೋಡಿ ಗುರುಗಳನ್ನು ಎಚ್ಚರಗೊಳಿಸಿದರೆ ನಿದ್ರೆ ಭಂಗವಾಗುವದೆಂದು ನೋವನ್ನು ಸಹ ತಡೆದುಕೊಂಡು ಕುಳಿತುಕೊಳ್ಳುವಂಥವನಾದೆ ಮತ್ತೂ ಹೇಳುತ್ತೇನೆ ॥

ಪದ

ಗುರುವರನ ಅಂಗಕ್ಕೆ ರಕ್ತಾತಾಗುತ
ಹರಿಯೇ ದಿಗ್ಗನೆ ಯೆದ್ದು
ಮುನಿಪ ಕೋಪಾದಿಂ ನುಡಿದಾ ॥

ಕರ್ಣ: ಅಯ್ಯ ಕೌರವ ಭೂಪತಿ, ನನ್ನ ತೊಡೆಯಲ್ಲಿ ಗುಂಗೆ ಕೊರೆದ ದ್ವಾರದಿಂದ ರಕ್ತವು ಹರಿಯಲು ಆ ರಕ್ತವೂ ಗುರುಗಳ ಶರೀರಕ್ಕೆ ತಾಕಿದಾಕ್ಷಣವೆ ಎಚ್ಚರಗೊಂಡು ನೀನು ಕ್ಷಾತ್ರಿಯ ಕುವರನು ನನ್ನಲ್ಲಿ ಕಲಿತ ವಿದ್ಯೆ ನಾಶವಾಗಲಿ ಎಂದು ಶಾಪವನ್ನು ಕೊಡುವಂಥವರಾದರು ಮತ್ತೂ ಹೇಳುತ್ತೇನೆ

ಭಾಮಿನಿ

ಅಂತು ನಾನಾ ವಿಧದಿ ವಂದಿಸುವ ಪರಿಯನು
ಕಂಡು ವರವನಿತ್ತನು ವೈರಿ ನಿನ್ನೊಳು
ಬಂದರೆ ನೀ ಜೈಸು ನೀನು ಗರ್ವದಿ ಪೋದರೆ
ಅಪಜಯ ತೋರುವುದೆಂದು ವರವಿತ್ತರೂ ॥

ಕರ್ಣ: ಅಯ್ಯ ಕೌರವೇಶ್ವರ, ಆ ಪರುಶುರಾಮ ದೇವರು ನನಗೆ ಶಾಪವನ್ನು ಕೊಟ್ಟ ಕಾಲದಲ್ಲಿ ಬಹುವಿಧದಿಂದ ನಾನು ಬೇಡಿಕೊಂಡೆನು. ನನ್ನ ದುಃಖವನ್ನು ನೋಡಿ ನೀನು ವೈರಿಯ ಮೇಲೆ ರಣಾಗ್ರಕ್ಕೆ ಪೋದದ್ದೇ ಆದರೆ ನಿನಗೆ ಮರಣವೂ ನಿನ್ನ ಮೇಲೆ ವೈರಿಗಳು ಯುದ್ಧಕ್ಕೆ ಬಂದರೆ ಜಯವಾಗುವುದೆಂದು ವರವನ್ನು ಕೊಟ್ಟು ಕಳುಹಿಸುವಂಥವರಾದರು ಮತ್ತೂ ಹೇಳುತ್ತೇನೆ॥

ಪದ

ಅಪ್ಪಣೆ ಪಡೆದು ನಾನು ಬರುತಿರಲು
ಮಾರ್ಗದಲಿ ಮಗಧ ಭೂಪಾಲನು
ಯನ್ನಾ ತಡೆದು ಸಮರಕ್ಕೆ ನಿಂತಾನೂ ॥

ಕರ್ಣ: ಅಯ್ಯ ಕೌರವೇಶ್ವರ, ನಾನು ಗುರುಗಳಿಂದ ಅಪ್ಪಣೆಯನ್ನು ಪಡೆದು ಬರುತ್ತಿರಲು ಮಾರ್ಗದಲ್ಲಿ ಮಗಧ ದೇಶಕ್ಕೆ ಅಧಿಪತಿಯಾದ ಜರಾಸಂಧನು ತಡೆಯಲು ಆತನನ್ನು ಯುದ್ಧದಲ್ಲಿ ಸೋಲಿಸಿ ವಂಗದೇಶವನ್ನು ಪಟ್ಟಾಭಿಷೇಕವನ್ನು ಮಾಡಿಕೊಂಡು ತಮ್ಮಲ್ಲಿ ಬಂದು ಇರುತ್ತೇನೆ. ಬಾಲಕನಾದ ಯನ್ನನ್ನು ಸಲಹಿದ್ದೆಯಾದರೆ ಮುಂದೆ ಆ ಕುನ್ನಿಗಳಾದ ಪಾಂಡವರನ್ನು ಸಂಹರಿಸುವ ಭಾರ ನನಗಿರಲೈ ಅಗ್ರಜ ಮಮರಾಜಾ॥

ಭಾಮಿನಿ

ಯೆಂದೀನುಡಿಯನು ಕೇಳಿ ಕೌರವನು
ಮನದಿ ಸಂತೋಷವನು ತಾಳಿ
ಮುಂದೆ ಪಾಂಡವರನ್ನು ದಿಂಡುಗೆಡಹುವೆನೆಂಬ
ಗರ್ವದೊಳು ಬಂದ ಕರ್ಣ ॥

ಕೌರವ: ಶಹಭಾಸ್ ಎಲೈ ರವಿನಂದನ, ನಿನ್ನಾ ಪರಾಕ್ರಮಕ್ಕೆ ನಾನು ಮನ ಮೆಚ್ಚುವಂಥವನಾದೆ ಹೇಳುತ್ತೇನೆ॥

ಪದ

ಅನುಜ ಕರ್ಣನೆ ಕೇಳೊ ನಿನ್ನ ವಾಕ್ಯಕೆ ಯನ್ನಾ ಮನಮೆಚ್ಚಿ
ಮಮತೆಯು ಪುಟ್ಟಿತು ಯನಗೆ ಪಾಪಿ ಪಾಂಡವರನ್ನು
ಸವರೂವೆನೆಂಬ ಶೌರ‌್ಯ ಕಂಣ್ಣಾರೆ ಯನ್ನ ಮುಂದೆ
ತೋರಿಸೈ ಅನುಜಾ ॥

ಕೌರವ: ತಮ್ಮಾ ರವಿಜಾತನೆ ನಿನ್ನ ಸಾಹಸಕ್ಕೆ ನಾನು ಮೆಚ್ಚುವಂಥವನಾದೆ. ಮುಂದೆ ಆ ಪಾಂಡವರನ್ನು ಸಂಹಾರ ಮಾಡುತ್ತೇನೆಂಬ ಪರಾಕ್ರಮವನ್ನು ಯನ್ನ ಮುಂದೆ ತೋರಿಸುವಂಥವನಾಗೈ ರವಿನಂದನಾ ॥

ಜಂಪೆ

ನೋಡು ಕುರುಪತಿ ಬಿಡುವೆ ಬಾಣವ ಅಸ್ತ್ರ-ಶಸ್ತ್ರ
ವಿದ್ಯೆಗಳನು ನಾನು ತೋರುವೆ ಕಂದನಾ ಚಾಪಕೆ
ಬಂದನಾಗ ಕಾರ‌್ಯಭುಜಗಳವ ಹರಿತವನೂ
ತನ್ನಾ ಶೌರ‌್ಯವ ತೋರಿದನು ಭರದಿ ಬೇಗಾ ॥
ಅಸ್ತ್ರ ಶಸ್ತ್ರದ ವಿದ್ಯವನ್ನೂ ಕೌರವೇಶ್ವರನೆದುರಿನೋಳ್
ತಾನು ಇಳೆಯು ನಡುಗುವಂತೆ ॥

ಕರ್ಣ: ಹೇ ಅಗ್ರಜ ಯೀ ಮೂರು ಲೋಕಕ್ಕೂ ವೀರಾಧಿ ವೀರನಾದ ನಾನು ಮಾಡಿದ ಅಂಬು ವಿದ್ಯವನ್ನು ನೋಡಿದಿರೊ. ಇಂಥಾ ವೀರಾಧಿವೀರನಾದ ನಾನು ತಮ್ಮಲ್ಲಿ ಬಂದು ಸೇರಿರುವಲ್ಲಿ ಆ ಕುನ್ನಿಗಳಾದ ಪಾಂಡವರ ಭಯವನ್ನು ಸ್ವಲ್ಪವಾದರೂ ಮನದಲ್ಲಿ ಭ್ರಮಿಸಬೇಡವೊ ಅಗ್ರಜಾ ॥

ಭಾಮಿನಿ

ಯೆಂದ ನುಡಿಯನು ಕೇಳಿ
ಕುರುಪತಿಯು ಮನ ಮೆಚ್ಚಿ ಕರ್ಣಗೆ
ಬಂದು ಆವಂತಿನಗರವನು ಮಂಗಳೋತ್ಸವ
ದೊಡನೆ ಕಲ್ಪಿಸಿದ ಪಟ್ಟವನೂ ॥

ಕೌರವ: ಹೇ ತಮ್ಮಾ ರವಿನಂದನ. ನನಗೆ ಇರುವ ನೂರು ಮಂದಿ ತಮ್ಮಂದಿರಲ್ಲಿ ನೀನೇ ಜ್ಯೇಷ್ಠ ತಮ್ಮನೆಂದು ಭಾವಿಸಿ ಇರುತ್ತೇನೆ. ಮತ್ತೂ ಆವಂತಿ ನಗರವನ್ನು ನಿನಗೆ ಪಟ್ಟಾಭಿಷೇಕ ಮಾಡುತ್ತೇನೆ. ಸಿಂಹಾಸನದ ಮೇಲೆ ಕೂರುವಂಥವನಾಗು॥

ಕೌರವ: ಆಹ ಪಟ್ಟಾಭಿಷೇಕ ಮಾಡಿದ್ದಾಯಿತು, ಸುಖದಿಂದ ರಾಜ್ಯವನ್ನು ಆಳುವಂಥವನಾಗಪ್ಪ ಅನುಜಾ॥

ಭಾಮಿನಿ

ಇತ್ತಲಾ ಕುರುಪತಿಯ ಸ್ನೇಹದಿ
ಆವಂತೀ ನಗರಕ್ಕೂ ವಂಗದೇಶಕ್ಕೂ
ಅರಸನೆಂದೆನಿಸಿ ಕರ್ಣಭೂಪತಿ ಇರುತಿರಲೂ
ರತ್ನಾವತಿಯನ್ನಾಳುವ ಚಂದ್ರಸೇನನೆಂಬ
ಭೂಪಾಲನು ತನ್ನ ಮಂತ್ರಿಯೋಳ್
ಪೇಳಿದನು ಮುಂದಿನ ಹದನಾ ॥

(ಚಂದ್ರೇಶನ ಪೀಠಿಕೆ)

ಚಂದ್ರೇಶ: ಭಲೈ ಮಾನುಷ್ಯನೆ ಹೀಗೆ ಬಾ ಮತ್ತೂ ಹೀಗೆ ಬಾ. ಭಲೈ ಮಾನವ ವಜ್ರವೈಡೂರ‌್ಯ ಗೋಮೇಧಿಕ ಪುಷ್ಯರಾಗಗಳಿಂದ ಕೆತ್ತಿಸಿ ಇರುವಂಥ ಕಿರೀಟಂಗಳಂ ಧರಿಸಿ ಬಂದು ನಿಂತಿರುವರು. ನೀವು ಧಾರೆಂದು ಕೇಳುವ ಮಾನುಷ್ಯಾ ನೀ ಧಾರು ನಿನ್ನ ಹೆಸರೇನು ಹೇಳುವಂಥವನಾಗೂ ॥

ಎಲೈ ಮಾನುಷ್ಯನೆ ತತ್ತರಪಡದೆ ಇತ್ತ ನಿಲ್ಲುವಂಥವನಾಗು. ಅತಿಹಿತದೋಳ್ ಕಪ್ಪವಂ ತರಿಸಿ ಏಕಪತ್ನೀ ವ್ರತಸ್ತನಾದ ಸತ್ಯಸ್ಯ ಪಥದಲ್ಲಿ ಸೂರ್ಯೋತ್ತಮನೆಂದೆನಿಸಿ ಯೀ ರತ್ನಾವತಿ ಪಟ್ಟಣವನ್ನು ದಿಟ್ಟತನದಿಂದ ಪರಿಪಾಲಿಸುವಂಥ ಚಂದ್ರೇಶ ಮಹರಾಜನೆಂದು ಯೀ ಸಭೆಯೋಳ್ ಕಿತಾಪ್ ಮಾಡೋ ಚಾರ ವರ ಪಣಿಹಾರ॥

ಎಲೈ ಸಾರಥಿ ಯೀ ವರಸಭೆಗೆ ಬಂದ ಕಾರಣವೇನೆಂದರೆ ನನ್ನಾ ಆಜ್ಞೆಯಂತೆ ಅನುಸರಿಸಿ ನಡೆಯುವ ಸತ್ಯಶೀಲ ಮಂತ್ರಿಯನ್ನು ಆಸ್ಥಾನಕ್ಕೆ ಬರಮಾಡು॥

ಸತ್ಯಶೀಲ: ಭಲೈ ಮಾನುಷ್ಯಾನೆ ಹೀಗೆ ಬಾ ಮತ್ತೂ ಹೀಗೆ ಬಾ ಅಂದದಿಂದ ಚಂದ್ರೇಶ್ವರ ಹೃದಯಾರವಿಂದದೋಳ್ ಸದಾ ಭಜಿಸುತ್ತ ಬಂದವರು ಧಾರೆಂದು ಕೇಳುವ ಮಾನುಷ್ಯಾ ನೀ ಧಾರು ನಿನ್ನ ಹೆಸರೇನು ಹೇಳು ॥

ಭಲೈ ಸಾರಥಿ ಶತ್ರು ಜನರಕ್ಷ ಗಜಸುರರ ಭಸ್ಮಾಭಸ್ಮೀಕೃತ ತ್ರಿಪುರಾರಿಯ ನಾಮವನ್ನು ತ್ರಿಕಾಲದಲ್ಲಿಯೂ ಸದಾ ಭಜಿಸುತ್ತ ರತ್ನಪುರ ಪಟ್ಟಣವನ್ನು ದಿಟ್ಟತನದಿಂದ ಪರಿಪಾಲಿಸುವ ಚಂದ್ರೇಶ ಭೂಪತಿಗೆ ಕಾರ‌್ಯಕುಶಲನಾದ ಸತ್ಯಶೀಲನೆಂಬ ಮಂತ್ರಿ ನಾನೇ ಅಲ್ಲವೇ ಸಾರಥಿ ॥

ಎಲೈ ಸಾರಥಿ ಯೀ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ನಮ್ಮ ರಾಜರು ಕರೆಸಿದ ಕಾರಣ ಬಾಹೋಣವಾಯಿತು. ಧಾವಲ್ಲಿರುವರು ಭೇಟಿ ಮಾಡಿಸೂ॥

ಸತ್ಯಶೀಲ: ನಮೋ ನಮೋ ರಾಜ ರವಿಸಮತೇಜ ॥

ಚಂದ್ರೇಶ: ನಿನಗೆ ಮಂಗಳವಾಗಲೈ ಮಂತ್ರಿ ಕಾರ‌್ಯದಲ್ಲಿ ನೀನೇ ಸ್ವತಂತ್ರಿ ॥

ಪದಅಟತಾಳ

ರಾಜರೆ ಯನ್ನನು ಮಾಜದೆ ಕರೆಸಿದ
ಮರ್ಮವೇನಿರುವುದು ಮುದದಿಂದ ಪೇಳಿರಿ ॥

ಸತ್ಯಶೀಲ: ರಾಜರೆ ನನ್ನನು ಇಷ್ಟು ಶೀಘ್ರವಾಗಿ ಯೀ ರಾಜಾಸ್ಥಾನಕ್ಕೆ ಕರೆಸಲು ಕಾರ‌್ಯವೇನಿರುವುದು ತ್ವರಿತದಿಂದ ಪೇಳಬೇಕೈ ದೇವಾ ಮಹಾನುಭಾವ ॥

ಪದ

ಮಂತ್ರಿ ಬಾರೈಯ್ಯ ಕಾರ‌್ಯ ಸ್ವತಂತ್ರ
ಪೇಳೈಯ್ಯ ಸಂತಸದಿಂದಲು ಬರುವ
ಕಾಣಿಕೆ ಮುಂದೆ ಬರುವದ್ಯಾವದೈ ॥

ಚಂದ್ರೇಶ: ಮಂತ್ರಿ ಯೀ ಲೋಕದ ಅರಸರೆಲ್ಲರೂ ತಪ್ಪದೆ ಕಪ್ಪಕಾಣಿಕೆಯನ್ನು ತಂದು ವೊಪ್ಪಿಸಿರುವರೇನೈಯ್ಯಿ ಮಂತ್ರಿ ವಿವರಿಸುವನಾಗು ॥

ಪದ

ಕೇಳು ಕೇಳು ಪೇಳುವೆ ರಾಜ ಲಾಲಿಸು
ನಮ್ಮಯ ದೇಶದ ರಾಜಾಧಿರಾಜರು ತಪ್ಪಾದೆ
ಕಪ್ಪವ ತಂದೊಪ್ಪಿಸಿಹರು ಕೇಳೂ ॥

ಮಂತ್ರಿ: ಮಹಾರಾಜರೆ ಯೀ ಚಪ್ಪನೈವತ್ತಾರು ದೇಶದ ರಾಜರುಗಳು ತಪ್ಪದೆ ಕಪ್ಪವನ್ನು ಕೊಟ್ಟು ಶರಣಾಗತರಾಗಿ ಹೋದರಲ್ಲದೆ ನಮ್ಮ ಮೇಲೆ ವೈರತ್ವವನ್ನೂ ಬೆಳೆಸುವಂಥ ವೀರರನ್ನು ನೋಡಲಿಲ್ಲವೈ ಭೂಪ ಬಿಡು ಮನದ ತಾಪ ॥

ಪದರೂಪಕ ತಾಳ
ವಂದು ಮಲ್ಲಿಗೆ ಹರಳು ತೂಕದ
ಕೇಳೈ ಸಚಿವ ಚಲ್ವೆಗಂಗಳೆ ಮಗಳಿಗೀಗ
ಯೆಲ್ಲಿ ನೋಡಲಿ ತಕ್ಕ ರಮಣನ ಕೇಳೈಯ್ಯ ಸಚಿವನೆ ॥

ಚಂದ್ರೇಶ: ಅಯ್ಯ ಮಂತ್ರೀಶನೆ ನಾನು ಏನೆಂದು ಹೇಳಲಿ. ನನ್ನಾ ಕುವರಿಗೆ ಯವ್ವನ ಕಾಲ ವದಗಿರುವುದರಿಂದ ಮುತ್ತಿನಂಥ ರತ್ನಕ್ಕೆ ಸರಿಯಾದ ವರನು ಸಿಕ್ಕಲಿಲ್ಲ ಯೇನು ಮಾಡಲಿ ॥

ಪದ
ಅರಸ ಚಿಂತಿಪುದೇಕೆ ಕರೆಸೈಯ್ಯ
ದೊರೆಗಳನೂ ಮಗಳ ಲಗ್ನವ ಎಂದು ಬರೆಸು
ಲೇಖನವಾ, ರಾಜರೇ ಕೇಳಿ ಬರೆಸಿರಿ ಲೇಖನವಾ ॥

ಮಂತ್ರಿ: ಆಹಾ ರಾಜರೆ ಯೀ ಸ್ವಲ್ಪ ಕಾರ‌್ಯಕ್ಕೆ ಚಿಂತೆಮಾಡಬಹುದೆ. ಯೀಗಲೇ ನೀವು ಸಕಲದೇಶಕ್ಕೂ ತಮ್ಮ ಕುವರಿಯ ಲಗ್ನ ಮಾಡುತ್ತೇನೆಂದು ಲೇಖನವನ್ನು ಬರೆಸಿ ಕಳುಹಿಸಿದ್ದೇಯಾದರೆ ಸಕಲ ದೇಶದ ರಾಜರೂ ಬರುವರು. ಆ ರಾಜರಲ್ಲಿ ನಿಮ್ಮ ಕುವರಿಗೆ ತಕ್ಕಂಥ ವರನನ್ನು ನೋಡಿ ಮುಂದಿನ ಕಾರ‌್ಯ ನಡೆಸಬಹುದೈ ದೇವಾ ಪ್ರಾಣಸಂಜೀವ ॥