ಚಂದ್ರೇಶ: ಅಯ್ಯ ಸಚಿವನೆ, ನಿನ್ನಾ ವಚನಾಮೃತಕ್ಕೆ ಸಂತೋಷ ಸಾಗರದಲ್ಲಿ ಮುಳುಗಿದೆನೂ, ನೀನು ಹೇಳಿದಂತೆ ಮುಂದಿನ ಕಾರ‌್ಯ ನಡೆಸಬೇಕಾದ ಪ್ರಯುಕ್ತ ಯನ್ನಾ ಸತಿಯಳಲ್ಲಿ ಸ್ವಲ್ಪ ಆಲೋಚನೆ ಮಾಡಿ ನೋಡುತ್ತೇನೆ.

ದ್ವಿಪದೆ

ಮುದದಿಂದ ಸುಸಿಲೆಯು ಮದನನ ವೋಲುವಂತೆ
ಪದುಮುಖಿ ಸುದಾಂಸು ಮಾಣಿಕ್ಯ ಮಾಲೆಯಂ ಧರಿಸಿ
ಮುದದಿಂದ ಮುಂಗೈಯೊಳು ನೀಲದ ಬಳೆಯಂ ತೊಟ್ಟು
ಚದುರೆ ವಿರಾಜಿಸುತಿರ್ಪ ಮುಖದಿಂದಳಿರು ಸೋಗೆಯಂ ಧರಿಸಿ
ಚಂದ್ರಗಾವಿಯ ಸೀರೆಯ ಚಂದದಿಂದುಟ್ಟು
ಬಂದು ನಿಂದಳು ತೆರೆಯ ಮರೆಯಲಿ ಸುನೀತಿ ॥

ಸುನೀತಿ: ಅಯ್ಯ ಸೂತ್ರಧಾರಿ ಹೀಗೆ ಬರುವಂಥವನಾಗು. ಈ ಅತಿ ರಮ್ಯತರವಾದ ಸಪ್ತಾಂಗ ಸಭಾ ಮಂಟಪಕ್ಕೆ ಬಂದವರು ಧಾರೆಂದು ಕೇಳುವ ಮಾನುಷ್ಯಾ ನೀ ಧಾರು ನಿನ್ನ ಹೆಸರೇನು ಹಸನಾಗಿ ವುಸುರಸಪ್ಪ. ಅಪ್ಪಾ ಸಾರಥಿ ನಮ್ಮನ್ನು ಧಾರೆಂದು ಕೇಳುತ್ತೀಯ. ಹಾಗಾದರೆ ನಮ್ಮ ನಾಮಾಂಕಿತವನ್ನು ಹೇಳುತ್ತೀನಿ ಕೇಳುವಂಥವನಾಗು. ತ್ರಿಭುವನ ಮಧ್ಯದಲ್ಲಿ ಶೋಭಿಸುವಂಥ ಅಂಗ-ವಂಗ-ಕಳಿಂಗ ಕಾಶ್ಮೀರ ಮಗಧ ಮಾಳವ ಮೊದಲಾದ ಈ ಚಪ್ಪನ್ನ ದೇಶಕ್ಕೆ ಮಿಗಿಲಾದ ರತ್ನಾವತಿ ಪಟ್ಟಣವನ್ನು ಸಾಂದ್ರ ವೈಭವದಿಂದ ಪಾಲಿಸುವ ಚಂದ್ರಶೇಖರ ಭೂಪಾಲರಿಗೆ ಪಟ್ಟದ ಅರಸಿಯಾದ ಸುನೀತಿ ಅಮ್ಮನವರು ನಾನೇ ಅಲ್ಲವೇನಪ್ಪಾ ಸಾರಥಿ. ಅಪ್ಪಾ ಸಾರಥಿ ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಯನ್ನ ಪ್ರಾಣಕಾಂತರು ಕರೆಸಿದ ಕಾರಣ ಬಾಹೋಣವಾಯಿತು. ಧಾವಲ್ಲಿರುವರು ತೋರಿಸುವಂಥವನಾಗು

ನಮೋ ನಮೋ ಕಾಂತರೆ

ಚಂದ್ರೇಶ: ನಿನಗೆ ಮಂಗಳವಾಗಲಿ ಮೇಲಕ್ಕೆಳೆ ರಮಣಿ ಸದ್ಗುಣಾಭರಣಿ ॥

ಸುನೀತಿ: ರಮಣರೆ ನನ್ನನ್ನು ಕರೆಸಿದ ಪರಿಯಾಯವೇನೇಳಿರಿ

ಪದ

ವಲ್ಲಭೆ ಲಾಲಿಸು ಹರುಷವ ಪೇಳುವೆ
ತ್ವರಿತದಿಂ ಕರೆಸಿದ ಪರಿಯನ್ನು ಪೇಳುವೆ
ಯಮ್ಮಯ ಮಗಳಿಗೆ ಮದುವೆ ಮಾಡಲುಬೇಕು
ಸಮ್ಮತವೇನಿದು ಹರುಷದಿಂ ಪೇಳೆ ॥

ಚಂದ್ರೇಶ: ಹೇ ರಮಣಿಯೆ, ರತಿಯ ರೂಪಿಗಿಂ ಮಿಗಿಲಾಗಿ ಇರುವ ನಮ್ಮ ಕುವರಿಯಾದ ರತ್ನಾವತಿಗೆ ತಕ್ಕ ವರನನ್ನು ತಂದು ವಿವಾಹ ಮಾಡಬೇಕೆಂಬ ಮನಸ್ಸು ಪುಟ್ಟಿ ಯಿರುವುದರಿಂದಾ ನಿನ್ನನ್ನು ಕರೆಸಿರುತ್ತೇನೆ. ನಿನ್ನ ಮನಸ್ಸಿನ ಅಭಿಪ್ರಾಯವನ್ನು ಹೇಳೆ ರಮಣಿ ಸದ್ಗುಣಾ ಭರಣಿ ॥

ಸುನೀತಿ: ಹೇ ಕಾಂತ, ಪತಿಯೇ ದೈವವೆಂದು ಪೂಜಿಸಿ ಯಿರುವ ತಮ್ಮ ಮಾತಿಗೆ ಪ್ರತಿಮಾತು ಆಡಬಹುದೇ ರಮಣ ಸದ್ಗುಣಾಭರಣ ॥

ಚಂದ್ರೇಶ: ಹೇ ರಮಣಿಯೆ, ಯಮ್ಮ ಮಂತ್ರಿಯಾದ ಸತ್ಯಶೀಲನು ದೇಶ ದೇಶದ ರಾಜರನ್ನು ಕರೆಸಿ ನಮ್ಮ ಮಗಳಿಗೆ ಸ್ವಯಂವರವನ್ನು ನಡೆಸಬಹುದೆಂದು ಹೇಳಿರುತ್ತಾನೆ. ಧರ‌್ಮಪತ್ನಿಯೆಂದು ಭಾವಿಸಿ ನಿನ್ನಲ್ಲಿ ಆಲೋಚನೆ ಮಾಡಿದೆನು. ಯಿದಕ್ಕೆ ನಿನ್ನ ಇಷ್ಟವೇನಿರುವುದು ಹೇಳು ॥

ಪದಅಷ್ಟತಾಳ

ಅಂತರಂಗವು ಯಾಕೆ ಮಂತ್ರಿ ಪೇಳಿದ ಮೇಲೆ
ಚಿಂತೆಯಿಲ್ಲ ಯನಗೆ ಕರೆಸು ಭೂಮಿಪರಾ ॥

ಸುನೀತಿ: ಹೇ ಪ್ರಾಣದೊಲ್ಲಭರೆ, ನಮ್ಮ ಪ್ರೀತಿಭಾವದಿಂದ ನಡೆಸುವ ಸತ್ಯಶೀಲ ಮಂತ್ರಿ ಹೇಳಿದ ಮಾತಿನಂತೆ ನಮ್ಮ ಮಗಳ ಲಗ್ನವನ್ನು ಮಾಡಲು ನನಗೆ ಸಂತೋಷವೈ ಕಾಂತ ಮತಿಗುಣವಂತಾ॥

ಚಂದ್ರೇಶ: ಅಯ್ಯ ಮಂತ್ರಿವರ‌್ಯನೆ ನನ್ನ ಸತಿಯಳಾದ ಸುನೀತಿಯು ನಿನ್ನ ಮಾತಿನಂತೆ ವಪ್ಪುವಂಥವಳಾದಳೂ. ಆದರೆ ನನ್ನ ಕುವರಿಯಾದ ರತ್ನಾವತಿಯನ್ನು ಆಸ್ಥಾನಕ್ಕೆ ಬರಮಾಡು ॥[ಮುರಹರಿ ಮಾದವ]

ರತ್ನಾವತಿ: ಆಹಾ ನಾನು ಚಂದ್ರೇಶ ಮಹಾರಾಜನ ಕುವರಿಯಾದ ರತ್ನಾವತಿಯು. ಇದು ಹಾಗಿರಲಿ ನನ್ನ ಜೊತೆಯಲ್ಲಿ ಇರುವ ನನ್ನ ಸಖಿಯು ನನ್ನ ಬೆಂಬಲದಲ್ಲಿಯೇ ಬರುತ್ತಿದ್ದವಳೂ ಎಲ್ಲಿ ಹೋದಳು ಕಾಣೆನಲ್ಲಾ ॥ಯಾರಲ್ಲಿ ನನ್ನ ಸಖಿಯನ್ನು ಕರೆಸಿಕೊಡೂ ॥

ಸಖಿ: ನಮ್ಮ ರತ್ನಾವತಿ ಅಂಮೈಯನವರು ಸಖಿಯನ್ನು ಬರಮಾಡು ಎಂದು ಹೇಳಿದ ಕಾರಣ ನಾನು ಬಂದೆನು. ಯೀಗಲೆ ಹೋಗಿ ಅಮ್ಮಯ್ಯನವರನ್ನು ಕಾಣುತ್ತೇನೆ ॥ನಮೋ ನಮೋ ದೊರೆಸಾನಿ॥

ರತ್ನಾವತಿ: ನಿನಗೆ ಮಂಗಳವಾಗಲಮ್ಮಾ ಸಖೀಮಣಿ, ಅಮ್ಮಯ್ಯ ಸಖಿಯೆ ನನ್ನ ಜೊತೆಯಲ್ಲಿ ಬರುತ್ತಿದ್ದವಳೂ ಕಣ್ಣಿಗೆ ಕಾಣದಂತೆ ಎಲ್ಲಿ ಪೋದೆಯಮ್ಮಾ॥

ಸಖಿ: ಅಮೈಯ ಇದೇನು ಹೀಗೆ ಕೇಳುವೆ ನೀನು ರಾತ್ರಿಯೆಲ್ಲಾ ನಿದ್ರೆ ಮಾಡದೆ ಯಾಕೆ ಗಾಬರಿಪಡುವೆ॥

ರತ್ನಾವತಿ: ಸರಿ ಸರಿ ನಮ್ಮ ತಂದೆಯವರು ನನ್ನ ಲಗ್ನ ಮಾಡಿಕೊಡದೆ ಇರುವುದರಿಂದಲೂ ಯೌವನಕಾಲ ಕೂಡಿರುವುದರಿಂದಲೂ ಆ ರೀತಿ ಸಂತಾಪ ಪಡುವೆನೂ ॥

ಸಖಿ: ಅದರಂತೆ ನನಗೂ ಕಾಲಕೂಡಿರುವದರಿಂದಾ ನನ್ನ ಗೆಳೆಯನು ಕೈಸನ್ನೆಯಿಂದ ಕರೆದ ಕಾರಣ ಸ್ವಲ್ಪ ಮಾತನಾಡಿ ಬರುವೆನೆಂದು ಹೋದೆನು. ಹೀಗಿರಲೂ ಸ್ವಲ್ಪ ಸಾವಕಾಶವಾಯಿತು ಏನು ಮಾಡೋದು ಹೇಳು॥

ರತ್ನಾವತಿ: ನಿನ್ನ ಸಂಗಡ ಸರಸವಾಡುವ ಕಾಲವಲ್ಲ. ತಂದೆಯವರು ಯಾತಕ್ಕೋಸ್ಕರ ಕರೆಯಿಸಿರುವ ಕಾರಣ ಹೋಗಿ ಬರೋಣ ಬಾ. ನಮೋ ನಮೋ ತಂದೆ ಹೇಳುವೆನು ಮುಂದೆ ॥

ಚಂದ್ರೇಶ: ನಿನಗೆ ಮಂಗಳವಾಗಲಮ್ಮ ಪುತ್ರಿ ಸುಂದರಗಾತ್ರಿ ॥

ಪದ

ಬಯಸುತಾಲಿದೆ ಯನಗೆ ಜನಕಾ ಆಹಾ ಜನಕ
ಮರ‌್ಮಾದ ಸಂಕಟವ ಪೇಳಲಾರೆನೋ
ಮಂದಹಾಸಧಿ ನಾನು ನರಳುವೆ ಜನಕಾ ॥

ರತ್ನಾವತಿ: ಹೇ ಜನಕರೆ, ನನ್ನ ಮನದ ಸಂಶಯವನ್ನು ತಮ್ಮಲ್ಲಿ ಏನೆಂದು ಹೇಳಲಿ, ಹಾಗೆ ಹೇಳದಿದ್ದರೆ ಮನ್ಮಥನು ನನ್ನ ಪ್ರಾಣವನ್ನು ಕುಂದಿಸುವನು. ಏನು ಮಾಡಲಿ ಜನಕನೆ

ಪದ

ತನುಜೆಯೆ ಲಾಲಿಸು ಸಂಶಯಪಡುತಾ
ಮುದ್ದಿನ ಮುಖವ ನೋಡಿ ಮಾಜದೆ ಮರ‌್ಮವ
ಅಕಳಂಕವಿಡದೆ ನೀನು ಕಂದಾ ಪೇಳು ॥

ಚಂದ್ರೇಶ: ಅಮ್ಮ ಕೋಮಲಾಂಗಿಯಾದ ಕುಮಾರಿಯೆ. ನಿನ್ನ ಮನಸ್ಸಿನಲ್ಲಿ ಯಿರುವ ವಿಷಯವನ್ನು ಸಂಶಯವಿಲ್ಲದೆ ಪೇಳಮ್ಮ ಮಗಳೆ ಮಲ್ಲಿಗೆ ಹರಳೆ ॥

ಪದ

ಮನ್ಮಥಬಾಧೆ ತಲ್ಲಣಗೊಳಿಸುತ್ತಿದೆ
ನಿಲ್ಲಲಾರೆನು ನಾನು ವನಕೆ ಪೋಗುವೆನು ॥

ರತ್ನಾವಳಿ: ಹೇ ತಂದೆಯವರೆ, ನಿಮ್ಮ ಸುತೆಯಳಾದ ಯನ್ನ ಮಾತನ್ನು ಲಾಲಿಸಿರಿ. ಮನ್ಮಥನೆಂಬುವನು ಯನ್ನಾ ಕಾಯಕ್ಕೆ ಸೇರಿ ಕರಗಿಸುವದರಿಂದಾ ಈ ಸಂಕಟವನ್ನು ತಾಳಲಾರೆನು॥

ಪದ

ಮೋಹಾನಾಂಗಿಯೆ ನಿನ್ನ ಮನ
ಕುಂದಿದೆ ಮೊಗ ಬಾಡಿದೆ ಬಾಲೆ
ತಕ್ಕ ಸುಂದರನನ್ನು ನೋಡುವೆ
ಕೋಮಲಾಂಗಿ ಕರಗಬೇಡವೆ ॥

ಚಂದ್ರೇಶ: ಅಮ್ಮಯ್ಯ ನೀನು ಈ ಪರಿ ಸಂಕಟವನ್ನು ಪಡುವದು ನೋಡುತ್ತಾ ನನ್ನ ದೇಹವು ಕುಂದುವದು. ಕಾಲವೊದಗಿದ ಮೇಲೆ ಯಾರು ತಾನೆ ಏನು ಮಾಡುವರು. ಅಮ್ಮಯ್ಯ ನೀನು ಚಿಂತೆಯನ್ನು ಮಾಡಬೇಡ. ನಿನಗೆ ತಕ್ಕ ಶೂರನಾದ ಪುರುಷನನ್ನು ತಂದು ವಿವಾಹ ಮಾಡುತ್ತೇನೆ ಸೈರಿಸಮ್ಮಾ ಪುತ್ರಿ ಸುಂದರಗಾತ್ರಿ ॥

ರತ್ನಾವತಿ: ತಂದೆಯವರೆ, ತಮ್ಮ ಅಪ್ಪಣೆಯಂತೆ ಯಿರುತ್ತೇನೆ. ಈ ದಿವಸ ನನಗೆ ಬಹಳ ಬ್ಯಾಸರವಾಗಿರುವ ಕಾರಣ ಸಖಿಯರೊಡನೆ ನಮ್ಮ ವನಾಂತರಕ್ಕೆ ಹೋಗಿ ಬರಲು ಅಪ್ಪಣೆಯನ್ನು ಕೊಡಿರಿ ॥

ಚಂದ್ರೇಶ: ಅಂಮೈಯಾ ಹಾಗಾದರೆ ಹೋಗಿ ಬಾರಂಮ್ಮಾ ಪುತ್ರಿ.

ರತ್ನಾವತಿ: ಅಮ್ಮಾ ಸಖೀಮಣಿ ವನ ವಿಹಾರಕ್ಕೆ ಹೋಗಿ ಬರೋಣ ನಡಿಯಮ್ಮ ಸಖೀಮಣಿ ॥

ಸಖಿ: ತಮ್ಮ ಅಪ್ಪಣೆಯಂತೆ ಆಗಬಹುದಮ್ಮಾ ದೊರೆಸಾನಿ.

ರತ್ನಾವತಿ: ಅಂಮೈಯಾ ಯೀ ವನಾಂತರವು ಎಷ್ಟು ಚೆನ್ನಾಗಿ ಕಾಣುವದು ॥ಈ ವನಾಂತರದಲ್ಲಿ ಯಿರುವ ಪಕ್ಷಿಗಳು ಮನೋಹರವಾದ ವೃಕ್ಷಗಳೂ ಎಷ್ಟು ಆನಂದಪಡುತ್ತಿರುವವು ನೋಡು

ಸಖಿ: ಅಂಮೈಯಾ ಯಿತ್ತ ನೋಡು. ಪಾರಿವಾಳದ ಎರಡು ಪಕ್ಷಿಗಳೂ ಹ್ಯಾಗೆ ವೊಂದರ ಬಾಯಿನಿಂದಾ ವಂದೂ ಕೋರುತ್ತಿವೆ ನೋಡು ॥

ರತ್ನಾವತಿ: ಅಂಮೈಯ ಸಖಿಯೆ ಅಹುದು ಅವುಗಳು ಯಾತಕ್ಕೆ ಹಾಗೆ ಕುಳಿತಿರುವು

ಸಖಿ: ಅಂಮೈಯ ಅತ್ತಕಡೆ ಕುಳಿತುಕೊಂಡು ಯಿರುವ ಪಕ್ಷಿ ಯೆಂಣ್ಣು ಪಕ್ಷಿಯು. ಯಿತ್ತ ಕುಳಿತಿರುವುದೂ ಗಂಡು ಪಕ್ಷಿಯು ಹೆಣ್ಣು ಪಕ್ಷಿಗೆ ಗಂಡು ಪಕ್ಷಿಯು. ದೇಶ ದೇಶವನ್ನು ತಿರುಗಿ ತಂದು ಅದಕ್ಕೆ ಹಸಿವು ಇಲ್ಲದಂತೆ ಆಹಾರ ತಂದು ಕೊಡುವುದು ನಿನಗೂ ಒಬ್ಬ ಪುರುಷನಿದ್ದರೆ ಈ ಕಷ್ಟವ್ಯಾತಕ್ಕೆ ಬರುತ್ತಾ ಯಿತ್ತು ಹೇಳು ॥

ರತ್ನಾವತಿ: ಸಖಿ ವಳ್ಳೆಯ ಮಾತನ್ನು ಆಡಿದೆ. ನನ್ನ ಅದೃಷ್ಟ ಫಲಕ್ಕೆ ಯಾರು ತಾನೆ ಏನು ಮಾಡುವರು

ಸಖಿ: ಯಿದು ವಳ್ಳೆ ಅದೃಷ್ಟ. ಅತ್ತ ನೋಡೆ ಆ ಪಕ್ಷಿಗಳು ಹ್ಯಾಗೆ ಆನಂದಪಡುತ್ತಾ ಇವೆ.

ರತ್ನಾವತಿ: ಅಯ್ಯೋ ಏನು ಮಾಡಲಿ ನನಗೂ ಬಹಳ ಸಂಕಟ ತೋರುವುದಲ್ಲಾ

ಪದರೂಪಕ ತಾಳ

ತಾಳಲಾರೆ ತಾಳಲಾರೆ ತಾಳಲಾರೆ
ತಾಪವ ವಿರಹತಾಪದಿಂದ ನಾನು
ಕಂದಿಕುಂದಿ ಬಳಲುವೆನೂ॥

ರತ್ನಾವತಿ: ಅಮ್ಮಾ ಸಖೀಮಣಿ, ನಮ್ಮ ತಂದೆಯವರು ನನಗೆ ಲಗ್ನಮಾಡುತ್ತೇನೆಂದು ಯನ್ನ ಮನಕ್ಕೆ ಭ್ರಾಂತಿ ಪುಟ್ಟಿಸಿದರು. ಕಾಯವೆಲ್ಲ ಸುಟ್ಟುಸೂರೆ ಹೋಗುತ್ತಲಿರುವದು. ಏನು ಮಾಡಲಿ ಹೇಳಮ್ಮಾ ಸಖಿ ॥

ಪದಅದಿತಾಳ

ಪುರುಷರಿಲ್ಲದ ನಾರಿ ಮೋರೆಯ
ನೋಡುವಾರೆ ಮನಸಿಜನಾಟದಿ
ಮನವು ಕುಂದಿಪುದೂ ॥

ಸಖಿ: ಅಮ್ಮಯ್ಯ ನೀನು ಲಗ್ನವಿಲ್ಲದೆ ಇದುವರೆವಿಗೂ ಹ್ಯಾಗೆ ಇದ್ದೆಯೋ ನಾನು ಕಾಣೆನವ್ವ. ಯಾಕೆಂದರೆ ಈ ಲೋಕದೊಳು ಪ್ರಾಯಸ್ಥರಾದ ಕನ್ನೆಯರಿಗೆ ತಕ್ಕ ವರನಿಲ್ಲದೆ ಕಾಮವಿರಹದಲ್ಲಿ ಕಂದಿಕುಂದಿ ಬಿಸಲಿಲ್ಲದೆ ಬಾಡುವಂಥ ತಾವರೆಯೋಪಾದಿಯಲ್ಲಿ ಕರಗುವಂತೆ ಅವರ ಮನಸ್ಸಿನ ಕಷ್ಟವನ್ನು ಜಗದೀಶನೊಬ್ಬನೇ ಬಲ್ಲನಮ್ಮಾ ದೊರೆಸಾನಿ ॥

ಭಾಮಿನಿ

ಯೀ ಪರಿಯಲಿ ಸಖಿವಾಕ್ಯಮಂ ಕೇಳಿ ವಿರಹತಾಪದಿಂ
ನಾರಿಯು ಮೂರ್ಛಿತಳಾಗಲು ಸಖಿಯು
ನಾನಾ ಪರಿಯಿಂದ ವುಪಚರಿಸುತ್ತಿದ್ದಳೂ ॥

ಸಖಿ: ಆಹ ಯೀಗ ಚನ್ನಾಯಿತು. ನಾನು ಏಕರೀತಿ ಮಾತನಾಡಿದ್ದಕ್ಕೆ ಯೀ ಯಂಮ್ಮಗೆ ಇಂಥ ಕಷ್ಟ ಬಂತು. ಇದನ್ನು ನಾನೇ ನೋಡಬೇಕು. ಈಕೆಯನ್ನು ಮೆಲ್ಲನೆ ಎಬ್ಬಿಸಿ ಆ ಕೊಳದ ಬಳಿಗೆ ಕರೆದುಕೊಂಡು ಹೋಗಿ ಗಂಗಾ ಉದಕವನ್ನು ಕುಡಿಸುತ್ತೇನೆ॥ಅಮ್ಮಯ್ಯ ಏಳು ಸರಿಸರಿ ಚೆನ್ನಾಯಿತು. ಆ ಕೊಳದ ಬಳಿ ಹೋಗಿಬಂದು ವನದೇವತೆ ಪೂಜೆಮಾಡಿ ಅರಮನೆಗೆ ಹೋಗೋಣ ನಡಿ ॥

 

(ಚಾರರು ಬರುವಿಕೆ)

ಚಾರರು: ಯೆಲೋ ಬಲ್ಲೀರ‌್ಲ ಯಿವತ್ತಿನ ದಿವಸ ಬಾಯಿ ಸಪ್ಪಗೆ ಆಗೈತೆ ಶಿಕಾರಿ ಮಾಡಿಕೊಂಡು ಬರೋಣ. ಯೇನಾದರೂ ನಮ್ಮ ಕರ್ಣರಾಜರು ಕರೆದಾರೆ ತೊಂದ್ರೆಯಾಗುತ್ತೆ ಬನ್ನಿರ‌್ಲ ॥

ಪದ

ಸಾರಿರಿ ಸಾರಿರಿ ಬೇಂಟೆಗೆ ನೀವ್
ಧೀರರೆ ಪಿಡಿಯುತ ಖಡ್ಗಗಳ ತೋರುತೆ
ಶೌರ‌್ಯವ ನಾವ್ ಮೃಗಗಳ
ಎದುರು ನೋಡುತಲಿ ॥

ಚಾರರು: ಎಲೋ ಶಿಕಾರಿ ಮಾಡೋಣ ಸುತ್ತಲೂ ನಿಂತುಕೊಳ್ಳರ‌್ಲ ॥

ಸಖಿ: ಅಮ್ಮಯ್ಯ ಮುಖಮಜ್ಜನವನ್ನು ಮಾಡಿಕೋ ನಡಿ ಹೋಗೋಣ ವನದೇವತೆ ಪೂಜೆ ಮಾಡೋಣ ॥

ರತ್ನಾವತಿ: ಸಖಿ ಪುಷ್ಪವನ್ನು ಕೊಯ್ದುಕೊಂಡು ಹೋಗೋಣ ॥

ಚಾರರು: ಯೆಲಿರ‌್ಲ ಯಾರೋ ಹೆಂಗಸರು ಮಾತಾಡುತ್ತಾರೆ. ಮರೇಲಿ ನಿಂತುಕೊಳ್ಳಿ. ಯಿದರ ಸಂಗತಿಯೇನು ನೋಡೋಣ ॥

ಸಖಿ: ಅಮ್ಮ ದೊರೆಸಾನಿ ಪೂಜೆಮಾಡು. ಸಕಲ ಸಾಮಗ್ರಿಗಳನ್ನು ತಂದು ಇಟ್ಟು ಇರುತ್ತೇನೆ ॥

ಪದ

ಮಂದರಗಿರಿಧರನೆ ಶ್ರೀವರನೆ ಬಾ. ಲೋಕಾನೇ
ಸಾಕುವ ದೇವಾ, ನೀ ಕೃಪೆ ತೋರೆನಗೆ ಶ್ರೀವರನೆ
ಬಾ ಲೀಲಾಜಾಲಾ ಜಾಲಸುನೀಲ ಪಾಲಿಸು
ಶ್ರೀಲೋಲ ಶ್ರೀವರನೆ ಬಾ ಭಕ್ತರಧಾರಿ ಬಾರೈ ಶೌರಿ
ಭಕ್ತಿಗೆ ಮೈತೋರಿ ಶ್ರೀವರನೆ ಬಾ ಕಾಯೊ ದೇವಾ
ಕಾಯೋ ಮುರಾರಿ ಕಾಯೈ ಕೃಪೆ ತೋರೈ ಶ್ರೀವರನೆ ಬಾ॥

ಭಾಮಿನಿ

ಇತ್ತಲಾ ವನದೇವರ ಪೂಜೆಯಂ ಮಾಡುತ್ತಾ
ಇರುತಿರಲು ಕಾಡಿನೋಳ್ ಬ್ಯಾಟೆಯಾಡುವ
ಚರರು ಕಂಡು ಅವರವರೋಳ್ ಯೇನನ್ನುತಿರ್ದರೂ॥

ಚಾರ: ಎಲ್ಲಿರ‌್ಲಾ, ಅಲ್ಲಿ ನೋಡಿ ಅತ್ತ ಕಡೆ ಇರುವ ಅಮ್ಮ ನಮ್ಮ ದೊರೆಗೆ ವಾರಿಗೆ ಚನ್ನಾಗಿ ಆಗುತ್ತೆ. ಯೀಗಲೆ ಶಿಕಾರಿ ಬ್ಯಾಡ್ರಿ ಯೇನು ಬ್ಯಾಡ್ರಿ ನಡಿರಿ ಹೇಳೋಣ ನಮ್ಮ ದೊರೆ ಇನಾಮು ಕೊಡುತಾರೆ

ಚಾರರು: ನಮೋ ನಮೋ ದೊರೆಯೇ ॥

ಕರ್ಣ: ಅಯ್ಯ ಬೇಂಟೆಗಾರರೆ ಇಷ್ಟು ಗಾಬರಿಯಿಂದ ಬರಲು ಕಾರಣವೇನು ಜಾಗ್ರತೆ ಹೇಳಿರಿ ॥

ಪದ

ರಾಜಾಧಿರಾಜನೆ ಸೋಜಿಗವನು
ನಾವು ಮಾಜದೆ ಪೇಳ್ವೆವೂ ॥ರಾಜಾ ॥
ಯಾರೋ ನಾರಿಯರು ಕಾಡಿನೋಳ್
ಇರುವರು. ನಲ್ಲೆಯು ನಿಮಗೆ
ನವರತ್ನದಂದದಿ ಇರ್ಪ ನಾರಿಯ
ನೀವುಗಳು ಸಾರದೆ ತನ್ನಿ ಬೇಗಾ ॥

ಚಾರರು: ಹೇ ಸ್ವಾಮಿ, ನಾವು ಏನೆಂದು ಹೇಳಲಿ. ಯಾರೋ ದೊರೆಯ ಮಗಳು ಸಖಿಯೊಡನೆ ವನದಲ್ಲಿ ದೇವರ ಪೂಜೆ ಮಾಡುತ್ತಾ ಇದ್ದರು. ನಿಮಗೆ ವಾರಿಗೇನು ಚನ್ನಾಗೈತೆ ಏನಾರ ಸಂದರ್ಭ ಮಾಡಿ ಮದುವೆ ಆಗಬೇಕು ಬುದ್ದಿ ॥

ಪದಅದಿತಾಳ

ದೂತರೆಂದುದ ಕೇಳಿ ಹರುಷಾದಿ
ರವಿಜಾತ ಮನದಿ ಹರುಷವ
ತಾಳಿದನೂ ವಾರ್ತೆ ಕೇಳಿದನೂ ॥

ಕರ್ಣ: ಎಲೈ ಚಾರರೆ, ನೀವುಗಳು ಹೇಳಿದ ವಾರ್ತೆಯನ್ನು ಕೇಳಿ ನನ್ನ ಮನಸ್ಸಿಗೆ ಬಹಳ ಸಂತೋಷವಾಯಿತು. ಆ ಕೋಮಲಾಂಗಿಯು ಲಗ್ನವಾಗಿರುವಳೋ ಇಲ್ಲವೋ ಹೇಳಿರಿ ॥

ಚಾರರು: ಲಗ್ನವಾಗಿಲ್ಲ ಸ್ವಾಮಿ ॥

ಪದ

ಕಲ್ಯಾಣವಿಲ್ಲದ ಕಾಮಿನೀಮಣಿ ತಂದು
ಕಡುಹರುಷದಿಂದಲಿ ಕೂಡುವೆನೂ
ಕಲ್ಯಾಣವಾಗುವೆನೂ ॥

ಕರ್ಣ: ಆಹ ನಾನು ಜಾಗ್ರತೆಯಿಂದ, ಕಲ್ಯಾಣವಿಲ್ಲದೆ ಇರುವ ಆ ನಾರೀಮಣಿಯನ್ನು ಕಂಡು ಲಗ್ನವಾಗದಿರ್ದೊಡೆ ಹಿಂದೆ ಭಾರ್ಗವರಲ್ಲಿ ಕಲಿತಂಥ ವಿದ್ಯೆ ಯಾತಕ್ಕೆ, ವಳ್ಳೇದು ಮತ್ತೂ ಹೇಳುವೆನೂ॥

ಪದ

ಮೂರು ಲೋಕವು ಮುನಿದು ಬರಲು
ಗೆಲ್ಲುವೆ ನಾನು ಘೋರ ಕಾನನಕೀಗ
ಪೋಗುವೆನೂ ಬೇಗ ತೆರಳುವೆನೂ ॥

ಕರ್ಣ: ಆಹ ನಾರೀಮಣಿ ದೆಸೆಯಿಂದ ಮೂರು ಲೋಕದ ರಾಜರುಗಳು ಮುನಿದು ನನ್ನ ಮೇಲೆ ಬಂದಾಗ್ಯೂ ಕೂಡ ನಾನು ಗೆಲ್ಲದೇ ಬಿಡುವೆನೆ ವಳ್ಳೇದು ಎಲೈ ಚಾರರೆ ಆ ನಾರೀಮಣಿ ಇರುವ ಸ್ಥಳವನ್ನು ತೋರಿಸಲು ನಡೆಯಿರಿ॥

ರತ್ನಾವತಿ: ಅಮ್ಮಾ ಸಖಿಮಣಿ ವನದೇವರ ಪೂಜೆ ಮಾಡಿದ್ದಾಯಿತು. ಹೇಳುತ್ತೇನೆ ಕೇಳೂ॥

ಪದರೂಪಕ

ಬಾರೆ ಪೋಗುವ ಪುರಕೆ ಬೇಗದಿಂದಲಿ॥
ತಂದೆ ಯನ್ನನು ಕರೆಸಿ ಪೇಳಿದ
ಹರುಷದಿ ಕಲ್ಯಾಣವಿತ್ತು ॥ಬಾರೆ ॥

ರತ್ನಾವತಿ: ಅಮ್ಮಯ್ಯ ನಾನು ಬರುವಾಗಲೇ ನಮ್ಮ ತಂದೆಯವರು ನಿನಗೆ ತಕ್ಕ ವರನನ್ನು ತಂದು ಲಗ್ನ ಮಾಡುತ್ತೇನೆಂದು ಹೇಳಿದ್ದರಷ್ಟೆ. ಆದ್ದರಿಂದ ತಡಮಾಡದೆ ಹೋಗೋಣ ನಡೆ ॥

ಚಾರ: ಅಗೋಡಿ ಇಲ್ಲಿಯೆ ಇರುವರು.

ಪದ

ಆಹ ಸಂತೋಷ ಹೊಂದಿದೆನು ಹರಿಯು
ಮುನಿಯಲಿ ಹರನು ಕಾದಲಿ ಹರಿಣಾಕ್ಷಿಯ
ಬಿಡೆನು ನಾನು ಎನುತ ಮನದೊಳು
ಹರುಷ ತಾಳಿದ ರವಿಯ ಸುತನು ॥

ಕರ್ಣ: ಎಲೈ ಚಾರಕರೇ, ಯೀ ನಾರೀಮಣಿಯನ್ನು ನೋಡಿ ನನ್ನ ಮನವು ಬಹಳ ಆನಂದವಾಯಿತು. ಯೀ ನಾರಿ ದೆಸೆಯಿಂದ ಹರಿಹರ ಬ್ರಹ್ಮಾದಿಗಳು ಕೂಡ ಬಂದಾಗ್ಯೂ ಈ ಧೀರನಾದ ಕರ್ಣನು ಹೆದರುವನಲ್ಲ ತಿಳಿಯಿತೆ. ಒಳ್ಳೆಯದು ಈ ನಾರಿಯನ್ನು ಮಾತನಾಡಿಸಿ ನೋಡುವೆನು ನೀವು ವಾರಿಗೆ ನಿಲ್ಲಿರಿ ॥

ಪದಅಟತಾಳ

ಆರೆಲೆ ಸುಂದರಿಯೆ ಮಾರ ಸನ್ನಿಭ
ವೇಣಿ ಘೋರ ಕಾನನದೊಳು ನೀನು
ಸಂಚರಿಸಲು ಏನು ಕಾರಣ ಬಂದೆ
ಕೋಮಲಾಂಗಿಯೆ ಕೇಳೆ ಆರೆಲೆ ॥

ಕರ್ಣ: ಹೇ ನಾರೀಮಣಿಯೇ, ಈ ಕಾನನದಲ್ಲಿ ಸಖಿಯೊಡನೆ ನೀನು ಸಂಚರಿಸಲು ಏನು ಕಾರಣ ಮಾಜದೆ ಯನ್ನೊಡನೆ ಹೇಳೆ ಬಾಲೆ ಕಾಮನ ಲೀಲೆ ಮತ್ತೂ ಹೇಳುತ್ತೇನೆ

ಪದ

ದೇವತಾ ಸ್ತ್ರೀಯೊಳು ಭಾವದಿಂದಿರುತಿರುವೆ
ಭಾವಿಸಿ ನೋಡಲು ಭವನದೊಳಿಲ್ಲವೆ॥
ಆರೆಲೆ ಸುಂದರಿ ॥

ಕರ್ಣ: ಹೇ ಸುಂದರಾಂಗಿ, ದೇವತೆಗಳು ಸಂಚಾರ ಮಾಡುವಂಥ ಈ ವನದಲ್ಲಿ ಸಖಿಯೊಡನೆ ಸಂಚಾರ ಮಾಡಲು ನೀನು ದೇವತಾ ಸ್ತ್ರೀಯಳೋ ನರಮಾನವಳೋ ಯನ್ನೊಡನೆ ಪೇಳೆ ನಾರೀಮಣಿ॥

ಪದ

ನೋಡು ನೋಡೆ ನೋಡೆ ಸಖಿಯೆ
ನೋಡೆ ಯೀತನ ಗಾಢದಿಂದ ಪೋಗಿ
ನಾನು ಕೇಳಿ ನೋಡುವೆ ನೋಡೆ ॥

ರತ್ನಾವತಿ: ಆಹ ಸಖೀಮಣಿ, ಗಾಂಧರ್ವರಂತೊಪ್ಪುವ ಯೀ ರಾಜಕುಮಾರನು ಯಾರಾಗಿರಬಹುದು ಕೇಳಿ ನೋಡುವೆನು ಸ್ವಲ್ಪ ವಾರಿಗೆ ಇರೂ ॥

ರತ್ನಾವತಿ: ಹೇ ರಾಜಕುಮಾರರೆ, ನಮ್ಮನ್ನು ನೀವು ಮಾತನಾಡಿಸಲು ನಿಮ್ಮ ಪಟ್ಟಣ ಯಾವುದು ನಿಮ್ಮ ಪೆಸರೇನು ಹೇಳಿರಿ ॥