ಕರ್ಣ: ಹೇ ಸ್ತ್ರೀಯಳೆ ನಿಮ್ಮ ಪಟ್ಟಣ ಯಾವುದು ಮೊದಲು ಹೇಳು ನೋಡುವ ॥

ಪದ

ಧರಣೀಶ ಕೇಳು ಯನ್ನ ಪುರವ
ಪೇಳುವೆ ಭರದಿ ನಿಮ್ಮಯ ಪುರದ
ಹೆಸರ ತ್ವರಿತದಿಂದ ಪೇಳಿ ॥

ರತ್ನಾವತಿ: ಹೇ ರಾಜರೆ, ನಮ್ಮ ಪಟ್ಟಣದ ಹೆಸರನ್ನು ಸಂಶಯವಿಲ್ಲದೆ ಹೇಳುತ್ತೇನೆ. ನಿಮ್ಮ ಪಟ್ಟಣದ ಹೆಸರನ್ನು ಹೇಳುವರಾಗಿ ॥

ಪದ

ಸರಸಗಂಧಿನಿ ಕೇಳೆ ಪೇಳುವೆ
ಹರುಷದಲಿ ವಂಗದೇಶವು ಕಾಣೆ
ಸುಂದರೀ ನಮ್ಮ ದೇಶವೂ ॥

ಕರ್ಣ: ಹೇ ನಾರಿಯಳೆ ನಮ್ಮ ದೇಶವು ವಂಗದೇಶವು ತಿಳಿಯಿತೋ, ನಿನ್ನ ದೇಶ ಯಾವುದು ಹೇಳು ನೋಡುವಾ ಮಾಜಬೇಡ ॥

ಪದ

ವಂಗದೇಶದ ಅರಸೆ ಯಿಂಗದೆಲ್ಲವ
ಪೇಳ್ವೆ ರತ್ನಾನಗರವೆಂಬುವದು
ಯಮ್ಮಯ ದೇಶ ॥

ರತ್ನಾವತಿ: ಹೇ ದೊರೆಯೆ, ನಮ್ಮ ಪಟ್ಟಣದ ಹೆಸರನ್ನು ಕೇಳಿದ್ದೀರಷ್ಟೆ. ರತ್ನಾವತಿ ಪಟ್ಟಣವೆಂದು ಕರೆಯುವರೂ ॥

ಪದ

ರತ್ನಾ ನಗರವಾದರೆ ನೀನೂ ಪೇಳುವೆ
ಕೇಳೂ ದಿಟ್ಟತನದಿ ಪಟ್ಟಣವಾಳುವ
ರಾಜರ ಪೆಸರ ಹೇಳೂ ॥ರತ್ನಾ ॥

ಕರ್ಣ: ಹೇ ಸ್ತ್ರೀಯಳೆ ವಳ್ಳೇದು, ನಿಮ್ಮ ಪಟ್ಟಣವೇನೋ ಗೊತ್ತಾಯಿತು. ಆ ಪಟ್ಟಣವಾಳುವರು ಯಾರು, ನಿಮ್ಮ ತಂದೆ ಯಾರು ಅವರ ಪೆಸರನ್ನು ಹೇಳೂ॥

ಪದಅಟತಾಳ

ಪೆತ್ತಾತನ ಪೆಸರ ಮತ್ತೆ ಪೇಳುವೆ
ನಾನೂ ಮೊದಲು ನಿಮ್ಮಯ ಪಿತರ
ಪೆಸರೇನು ಪೇಳಿ ಕೇಳುವೆ ನಾನೂ ॥

ರತ್ನಾವತಿ: ಹೇ ರಾಜರೆ ನಮ್ಮ ಮನಸ್ಸನ್ನು ತಲ್ಲಣಗೊಳಿಸಬೇಡಿರಿ. ನಿಮ್ಮ ತಂದೆಯವರ ಹೆಸರನ್ನು ಹೇಳಿದರೆ ಅನಂತರ ನಮ್ಮ ಜನಕನ ಹೆಸರನ್ನು ಹೇಳುತ್ತೇನೆ॥

ಪದರೂಪಕ

ವುತ್ತರವನ್ನು ಪೇಳ್ವೆ ಲಾಲಿಸು ತರುಣಿಯೆ
ಪೆತ್ತಾತನ ಪೆಸರಪೇಳ್ವೆ ॥ಸುತ್ತುತಾ
ಲೋಕವನೆಲ್ಲ ಏಕದಿ ಬೆಳಕು
ತೋರುವ॥ಸೂರ‌್ಯಾನು ಕಾಣೆ॥

ಕರ್ಣ: ಹೇ ನಾರಿಯಳೆ ನಮ್ಮ ತಂದೆಯವರನ್ನು ಕೇಳುವೆ, ಯೀ ಹದಿನಾಲ್ಕು ಲೋಕವನ್ನು ಸುತ್ತಿ ಬೆಳಕು ತೋರಿಸುವಂಥ ಸೂರ‌್ಯಮಹದೇವನೆಂದು ತಿಳಿದುಕೊಳ್ಳುವಂಥವಳಾಗು ॥

ಪದಅಟತಾಳ

ರವಿಜಾತ ಲಾಲಿಸು ತಲ್ಲಣ ಪಡಬೇಡಿ
ಪೆತ್ತ ಜಾತನ ಪೆಸರ ಮುದದಿ ಪೇಳುವೆನೂ
ರತ್ನಾಪುರಿಯನಾಳುವ ಚಂದ್ರೇಶ ನಮ್ಮ ತಂದೆ
ಮರ್ಮವಿಲ್ಲದೆ ನಾನು ಪೇಳುವೆ ರಾಜಾ॥

ರತ್ನಾವತಿ: ಹೇ ರವಿಪುತ್ರನೆ, ರತ್ನಾವತಿ ನಗರವನ್ನು ಪ್ರೀತಿಯಿಂದ ಆಳುವ ಚಂದ್ರೇಶ ಮಹರಾಜರು ನಮ್ಮ ಜನಕರು ತಿಳಿಯಿತೊ ಮತ್ತೇನು ಹೇಳಿರಿ ॥

ಪದ

ಚಂದ್ರವದನೆ ಕೇಳು ಚಂದ್ರೇಶನಾದರೆ
ನಿನ್ನ ಪೆಸರೇಳೆ ಪೇಳೆ ವಿಧ ವಿಧದಿ ನೀ
ತಡವಗೈಯ್ಯದೆ ಅರುಹು ಬೇಗದಿ ಲಲನೇ ॥

ಕರ್ಣ: ಆಹ ವಳ್ಳೇದು, ನಿನ್ನ ತಂದೆಯವರ ನಾಮಧೇಯ ಗೊತ್ತಾಯಿತು. ಅದು ಹಾಗಿರಲಿ ನಿನ್ನ ಪೆಸರೇನು ಹೇಳೂ ॥

ಪದ

ರವಿಸುತನೆ ಕೇಳೈ ನಾನು ಅಂದದಿಂದ
ನಿಮ್ಮ ಪೆಸರಾ ಚಂದದಿಂದ ಪೇಳಿರಿ
ತಿಳಿದು ನಾನು ಪೇಳುವೆನೂ ॥

ರತ್ನಾವತಿ: ಹೇ ರಾಜನೆ, ನಿಮ್ಮನ್ನು ಯೀ ಇಳೆಯ ಮೇಲಿನ ಜನರು ಏನೆಂದು ಕರೆಯುವರು. ನಿಮ್ಮ ಹೆಸರನ್ನು ಹೇಳಿದರೆ ಅನಂತರ ನನ್ನ ಪೆಸರನ್ನು ಹೇಳುತ್ತೇನೆ॥

ಕರ್ಣ: ಹೇ ನಾರಿಯಳೆ, ಸುವರ್ಣದಂತೊಪ್ಪುವ ಯನ್ನ ಕರ್ಣಂಗಳಂ ನೋಡಿ ಕರ್ಣನೆಂದು ವರ್ಣಿಸಿ ಜನರೆಲ್ಲ ಕರ್ಣನೆಂದು ಕರೆಯುವರೂ ॥

ರತ್ನಾವತಿ: ಹಾಗಾದರೆ ನನ್ನ ಹೆಸರನ್ನು ಹೇಳಬೇಕೂ. ರತ್ನದಂತಿರುವ ನನ್ನ ಮುಖವನ್ನು ನೋಡಿದ ಜನರೆಲ್ಲ ರತ್ನಾವತಿ ಎಂದು ಕರೆಯುವರೈ ರಾಜರೆ॥

ಪದ

ಮನಸಾಯಿತೆ ಮಾನಿನಿ ಮೋಹದ
ವದನೆ ಮನಸಾ॥ಧಾರುಣಿಯೊಳು
ಕೇಳು ರವಿಸುತನಂಥ ಧೀರರಿಲ್ಲವೆ
ನಾರಿ ಮೂಜಗದೊಳೂ॥ಮನಸಾ॥

ಕರ್ಣ: ಹೇ ನಾರೀಮಣಿ, ಯೀ ಲೋಕದೊಳು ವೀರನೆಂದು ಹೆಸರಂ ಪಡೆದ ಶೂರನಾದ ನನ್ನ ಮೇಲೆ ದಯವಿಟ್ಟು ವಿವಾಹವಾಗುವುದಕ್ಕೆ ವದಗಿ ಬಾರೇ ನಲ್ಲೇ.

ಪದ

ತರುಣಿ ಕನ್ನೆಯೆ ಕೇಳು ನಿನಗೆ
ಹರಣದಾಸೆಯು ಅರಿಯಾದೆ ಅಂಚೆ ಗಮನೆ
ಕಂಚುಕಿಯೊಳ ವಂಚಿಸಿ ಕರಿಯುವೆ॥

ರತ್ನಾವತಿ: ಹೇ ರಾಜ ನೀವು ಪರಸತಿಯನ್ನು ನಿನ್ನ ಶರೀರದ ಮೇಲಣ ಆಸೆಯಂ ತೊರೆದು ಕರೆಯುವುದು ನ್ಯಾಯವೆ? ಸುಮ್ಮನೆ ನಿಮ್ಮ ಪಟ್ಟಣಕ್ಕೆ ಹೋದರೆ ಮರ‌್ಯಾದೆಯಾಗಿರುತ್ತೆ॥

ಪದ

ತೆರಳುವ ನಾನಲ್ಲ. ಹರಣದಾಸೆಯು
ಇಲ್ಲ ಕರುಣವಿಲ್ಲವೆ ನಿನಗೆ ನಾರೀ ಜನನ
ಮರಣವು ಧಾರಿಗೂ ತಪ್ಪದು
ಕೋಮಲಾಂಗಿಯೆ ಕೇಳೇ ॥

ಕರ್ಣ: ಹೇ ಮೋಹನಾಂಗಿ, ಯಿಷ್ಟು ಬ್ಯಾಸರವಾದ ಮಾತುಗಳನ್ನು ಯನ್ನೊಳಗೆ ಆಡಬೇಡ. ಮನುಷ್ಯ ಜನ್ಮ ಎತ್ತಿದ ಮೇಲೆ ಮರಣವಾಗದೆ ಎಂದಿಗೂ ಇರುವುದಿಲ್ಲ ತಿಳಿಯಿತೋ. ನಿನ್ನನ್ನು ಲಗ್ನವಾಗಬೇಕೆಂದು ಬಹಳ ಆಯಾಸಪಟ್ಟು ಬಂದು ಇರುತ್ತೇನೆ, ಗಂಭೀರದಿಂದ ಬಾರೆ ನೀರೆ ಗುಣಗಂಭೀರೆ॥

ಪದ

ನಿಷ್ಠೂರದ ನುಡಿಯೊಳು ಭ್ರಷ್ಟ
ಮಾತನಾಡ್ವರೇನೋ ಸೃಷ್ಟಿಗೀಶಗೆ
ಪೇಳಿ ನಾನು ಕಷ್ಟಗೊಳಿಸೂವೆ॥

ರತ್ನಾವತಿ: ಅಯ್ಯ ರವಿಸುತನೆ, ತರಳೆಯೆಂದು ತರ ತರವಾದ ಮಾತನಾಡುವದು ನಿನಗೆ ಯೋಗ್ಯವಲ್ಲ. ಸೃಷ್ಟೀಶನಾದ ನಮ್ಮ ತಂದೆಯೊಡನೆ ಪೇಳಿ ನಿನಗೆ ತಕ್ಕ ಶಿಕ್ಷೆಯನ್ನು ಮಾಡುತ್ತೇನೆ. ಸುಮ್ಮನೆ ನಿಮ್ಮ ಪಟ್ಟಣದ ದಾರಿಯನ್ನು ಹಿಡಿದು ತೆರಳಿರಿ॥

ಪದ

ಕಷ್ಟಕಂಜುವನಲ್ಲ ಶ್ರೇಷ್ಟೆ ಕೇಳೆನ್ನಾ
ನಿಷ್ಟೂರವ್ಯಾತಕೆ ನಾರೀ ಗುಟ್ಟಿನ
ವಿಷಯವ ಸೃಷ್ಟಿಯೋಳ್ ಬೆಳೆಸಿದರೆ
ಸಿಟ್ಟು ಬರುವದೆ ನಾರೀ ॥

ಕರ್ಣ: ಹೇ ನಾರೀಮಣಿಯಳೆ, ಗುಟ್ಟಿನ ಮಾತುಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ತಂದೆಯೊಡನೆ ಪೇಳಿದರೆ ಯನಗೆ ಬರತಕ್ಕ ಭಯ ಯಾವುದೂ ನಿನ್ನನ್ನು ಖಂಡಿತ ಬಿಡುವುದಿಲ್ಲ.

ರತ್ನಾವತಿ: ಬಿಡದೆ ಏನು ಮಾಡುವೆ ॥

ಪದ

ಥರವೇನೇ ರಜನೇತ್ರಿ ತರವೆ ಪರಿಪರಿ
ವಿಧದಲ್ಲಿ ಸುರತ ಸುಖವನಿತ್ತು
ನಾರಿವಂದಿಹೆ ಬಾರೆ ಮೀರಿ
ಪೋಗುವಗಿದು ತರವೆ ನೀರಜನೇತ್ರಿ ॥

ಕರ್ಣ: ಹೇ ನಾರೀಮಣಿ, ಕಾಮಿನಿಯಾದ ನಿನ್ನನ್ನು ವಿವಾಹವಾಗಬೇಕೆಂಬ ಮಮಕಾರವು ಪುಟ್ಟಿರುವುದರಿಂದ ನನ್ನ ಯಿಷ್ಟವಂ ಸಲಿಸದೆ ಹೋಗುವೆನೆಂದರೆ ಬಿಡುವೆನೆ. ರಟ್ಟೆ ಹಿಡಿದು ಎಳೆದುಕೊಂಡು ಹೋಗುತ್ತೇನೆ ನೋಡೂ ॥

ರತ್ನಾವತಿ: ಅಮ್ಮಾ ಸಖಿ, ಯೀ ರಾಜರು ನನ್ನನ್ನು ಎಷ್ಟು ವ್ಯಥೆಪಡಿಸುವರು. ಇದಕ್ಕೆ ಏನು ಮಾಡಲಿ ನನಗೆ ದಾರಿ ತೋರುವದಿಲ್ಲವಮ್ಮಾ ಸಖೀಮಣಿ ॥

ಸಖಿ: ಅಮ್ಮಯ್ಯ ನಿಮ್ಮ ತಂದೆಯವರು ನಿನ್ನನ್ನು ಬಿಟ್ಟು ನಾನು ವೋರ್ವಳೆ ಹೋದರೆ ಸುಮ್ಮನೆ ಬಿಡುವರೆ. ಇದಕ್ಕೆ ವಂದು ಯೋಚನೆಯನ್ನು ಮಾಡಿ ನೋಡುತ್ತೇನೆ॥

ಪದ

ರಾಜಾಧಿ ರಾಜನೆ ಸೋಜಿಗವನು ಮರೆಮಾಜದೆ
ಪೇಳುವೆನೂ ಸುಂದರ ಧೀರನೆ ಸುಂದರ
ನಾರೀಮಣಿಯಳಿಗೆ ತಾವರೆ ಕಮಲವ
ಬೇಗಾದಿಂ ಕೊಯ್ದು ತನ್ನಿ॥ರಾಜಾ ॥

ಸಖಿ: ಹೇ ರಾಜೇಂದ್ರ, ನಮ್ಮ ಅಮ್ಮಯ್ಯನವರನ್ನು ನಿರ್ಬಂಧಪಡಿಸುವುದು ಧರ್ಮವಲ್ಲಾ. ನೀತಿ ಇಲ್ಲದ ವಿಚಾರವನ್ನು ನಡೆಸಬಾರದು, ತಿಳಿಯಿತೆ. ನಮ್ಮ ಅಮ್ಮಯ್ಯನವರನ್ನು ನಿಮ್ಮ ಲಗ್ನವಾಗು ವಂತೆ ಮನ ವುಟ್ಟಿಸುತ್ತೇನೆ. ಆ ಕೊಳದಲ್ಲಿ ಇರುವ ತಾವರೆ ಕಮಲವನ್ನು ತಂದು ಕೊಡಿರಿ ॥

ಕರ್ಣ: ಹೇ ಸಖಿ, ಸಂತೋಷದಿಂದ ಆ ಕೊಳದಲ್ಲಿ ಇರುವ ತಾವರೆ ಕಮಲವನ್ನು ತಂದು ಕೊಡುತ್ತೇನೆ. ಆ ನಾರಿಯನ್ನು ನನ್ನ ವಿವಾಹವಾಗುವಂತೆ ಮಾಡುವಂಥವಳಾಗಮ್ಮ ಸಖೀಮಣಿ॥

ಸಖಿ: ಅಪ್ಪಣೆಯಂತೆ ಮಾಡುವೆನು ಬೇಗ ತಂದುಕೊಡಿ ॥

ಸಖಿ: ಅಮ್ಮಯ್ಯ ದೊರೆಸಾನಿ, ಆ ರಾಜರು ಕೊಳಕ್ಕೆ ತಾವರೆ ಕಮಲವನ್ನು ಕೊಯ್ಯಲು ಹೋಗಿರುತ್ತಾರೆ. ಜಾಗ್ರತೆ ನಮ್ಮ ಪಟ್ಟಣಕ್ಕೆ ಹೊರಡೋಣ ನಡಿ ॥

ರತ್ನಾವತಿ: ಅಮ್ಮಯ್ಯ ಸಖಿಯೆ, ನಿನ್ನ ಬುದ್ಧಿಗೆ ನಾನು ಮೆಚ್ಚಿದೆ. ಯೀ ವುಪಾಯವನ್ನು ನಡೆಸದಿದ್ದರೆ ನನ್ನನ್ನು ಬಿಡುತ್ತಾ ಇರಲಿಲ್ಲ ನಡಿ ಹೋಗೋಣ ॥

ಕರ್ಣ: ಆಹ ಆ ನಾರಿಯರು ಎಲ್ಲಿಯೋ ಹೋಗಿರುವರಲ್ಲ. ಆಹ ಆ ಸಖಿಯು ಯಂಥ ಮರ್ಮದಿಂದ ಮನ್ನಿಸಿ ಕಳುಹಿದಳು. ಯೇನು ಮಾಡಲಿ ಯೀ ನಾರಿಯನ್ನು ನಾನು ತಂದು ಲಗ್ನವಾಗದಿರ್ದೊಡೆ ರವಿಜಾತನೆಂಬುವ ಪೆಸರೇತಕ್ಕೆ ವಳ್ಳೇದು ಎಲೈ ಚಾರನೆ ನಮ್ಮ ಪಟ್ಟಣಕ್ಕೆ ಜಾಗ್ರತೆ ರಥವನ್ನು ಹೊಡೆ॥

ಭಾಮಿನಿ

ಇತ್ತ ತರುಣಿ ಜನುಮನದಿ ಮರುಗುತ
ಕಂಡು ವನದ ತಿಳಿಯಂತೆಸೆವ. ಕಾಂತೆಯ
ಇನ್ನೆಂತು ವರಿಸಲಿ ಹರಹರ ಎನುತ
ಚಿಂತೆಯೊಳು ಅಂತರಂಗದಿ ಗ್ರಹಿಸಿದಂತೆ
ಪುರದ ಅರಸನೋಳ್ ಪೇಳವನಂತರಂಗವ
ತಿಳಿಯುವೆನೆನುತ ಚರರ ಕರೆದು ಪೇಳಿದನು ಬೇಗಾ ॥

ಕರ್ಣ: ಎಲೈ ಚಾರನೆ, ನೀನು ಜಾಗ್ರತೆ ಹಸ್ತಿನಾವತಿಗೆ ಹೋಗಿ ನಮ್ಮ ಅಗ್ರಜರಾದ ಕೌರವೇಶ್ವರನಲ್ಲಿ ಆ ಸುಂದರಾಂಗಿಯ ವರ್ತಮಾನವನ್ನು ಹೇಳಿ ತಡ ಮಾಡದೆ ಕರದುಕೊಂಡು ಬರುವಂಥವರಾಗಿರಿ ॥

ಭಾಮಿನಿ

ಅರಸ ಕೇಳಿಂತೆಂದು ಕರ್ಣನು
ಚರರೊಡನೆ ಅರುಹಲಾಕ್ಷಣ ಭರದೊಳೈ
ತಂದರು ಕುರುಪತಿಯ ಬಳಿಗೆ ॥

ಚಾರ: ನಮೋ ನಮೋ ಕೌರವೇಶ್ವರ ॥

ಕೌರವ: ನಿಮಗೆ ಮಂಗಳವಾಗಲಿ ಅಲ್ಲದೆ ಅನುಜ ಕರ್ಣನು ಕ್ಷೇಮದಲ್ಲಿ ಇರುವನೋ ಹ್ಯಾಗೆ ಹೇಳಿರಿ॥

ಪದಅಟತಾಳ

ಕ್ಷೇಮವು ಕುರುಕುಲಧೀಶ
ನೀವ್ ಕೇಳಿರಿ ಕಾಮಿನಿಯೊಳ ಕಂಡು
ಕರಗಿಯಿರುವರೂ॥ಕ್ಷೇಮವು ॥

ಚಾರರು: ಮಹಾರಾಜರೆ ಕರ್ಣಭೂಪತಿಯವರು ತಮ್ಮ ಕರುಣ ಕಟಾಕ್ಷದಿಂದ ಕ್ಷೇಮದಿಂದಿರುವರು. ಅಲ್ಲದೆ ಕಾನನದಲ್ಲಿ ಸಂಚರಿಸುತ್ತಿದ್ದ ರತ್ನಾವತಿ ನಗರದ ಚಂದ್ರೇಶನ ಮಗಳನ್ನು ಕಂಡು ಮನಸ್ಸಿಟ್ಟು ನಿಮ್ಮನ್ನು ಬರಹೇಳಿ ಕಳುಹಿದರೈ ರಾಜ ಭಾನು ಸಮತೇಜಾ ॥

ಕೌರವ: ಆಹ ಇದೇನು ಸೋಜಿಗವು, ವಳ್ಳೇದು ಹೋಗಿ ತಿಳಿಯುವಲ್ಲಿ ಸಕಲ ಅಭಿಪ್ರಾಯವು ಗೊತ್ತಾಗುವದು. ಅಯ್ಯ ಚಾರರೆ ನಿಮ್ಮ ರಾಜರು ಬರುತ್ತಾರೆಂಬುದಾಗಿ ಹೇಳುವಂಥವರಾಗಿರಿ ॥

ಕೌರವ: ಎಲೈ ಸಾರಥಿ, ನನ್ನ ಅನುಜನಾದ ಕರ್ಣನ ಪಟ್ಟಣಕ್ಕೆ ಹೋಗಬೇಕಾದ ಕಾರಣ ರಥವನ್ನು ಶೃಂಗರಿಸಿ ಹೊಡಿಯುವಂಥವನಾಗೂ ॥

ಕೌರವ: ಆಹ ವಂಗ ನಗರಕ್ಕೆ ಬಂದಂತಾಯಿತು. ಯಾರಲ್ಲಿ ಅನುಜನಾದ ಕರ್ಣನನ್ನು ಆಸ್ಥಾನಕ್ಕೆ ಬರಮಾಡೂ ॥

ಕರ್ಣ: ನಮೋ ನಮೋ ಅಗ್ರಜಾ ॥

ಕೌರವ: ನಿನಗೆ ಮಂಗಳವಾಗಲೈಯ್ಯ ಕರ್ಣಭೂಪತಿ ॥

ಕರ್ಣ: ಅಗ್ರಜಾ ಯೀ ಸಿಂಹಾಸನದ ಮೇಲೆ ವಿಶ್ರಮಿಸಿಕೊಳ್ಳುವಂಥವರಾಗಿರಿ ॥

ಪದ

ದೊರೆರಾಯ ಕೇಳೈಯ್ಯ ಧರೆಯೊಳು
ನಿನ್ನಿಂಥ ಸಿರಿವಂತರ ಕಾಣೆ ನಾನೂ
ಯನ್ನ ಮನದಿಷ್ಟವ ಸಲಿಸಬೇಕೆನುತಲಿ
ಕರೆಸಿದೆ ನಿಮ್ಮ ಬೇಗಾ ॥

ಕರ್ಣ: ಅಯ್ಯ ಕೌರವ ಭೂಪತಿ, ಯೀ ಮೂರುಲೋಕದಲ್ಲಿಯೂ ಹುಡುಕಿದಾಗ್ಯೂ ನಿನ್ನಂಥ ವೀರಾಧಿವೀರರಾದ ದೊರೆಗಳು ವುಂಟೆ, ಅಲ್ಲದೆ ನನ್ನಲ್ಲಿ ವಂದು ಸಂಕಲ್ಪವಿರುವುದರಿಂದ ತಮ್ಮನ್ನು ಕರೆಸಿದೆನೈ ಕೌರವ ಭೂಪತಿ॥

ಪದ

ರವಿಸುತನು ಪೇಳ್ದ ನುಡಿಯ
ಮನದಿಕೇಳಿ ಅನುಮಾನವಿಲ್ಲದೆ
ಕರೆಸಿದ ಪರಿಯನು ಪೇಳೈ ॥

ಕೌರವ: ಅಯ್ಯ ಕರ್ಣ ಭೂಪತಿ, ನಿನ್ನ ಮಾತಿಗೆ ನಾನು ಸಂತೋಷ ಸಾಗರದಲ್ಲಿ॥ಮುಳುಗಿದ್ದೇನೆ. ಇದು ಹಾಗಿರಲಿ ನಿನ್ನ ಮನಸ್ಸಿನ ಸಂಕಲ್ಪವೇನು. ಆದರೆ ಇಷ್ಟು ತ್ವರಿತದಿಂದ ಯನ್ನನ್ನು ಕರೆಸಲು ಕಾರಣವೇನಿರುವದು ಮಾಜದೆ ಹೇಳುವಂಥವನಾಗಪ್ಪ ರವಿಜಾತ ॥

ಪದ

ಯಿಷ್ಟು ಪೇಳಿದ ಮೇಲೆ ಅನುಮಾನವೇತಕ್ಕೆ
ದೊರೆರಾಯ ಪೇಳ್ವೆ ನಾನೂ
ಚಂದ್ರೇಶರಾಜನ ಕುವರಿಯನ್ನು
ತಂದು ರಚಿಸಯ್ಯ ಯನಗೆ ವಿವಾಹ ॥

ಕರ್ಣ: ಅಯ್ಯ ಕೌರವ ಭೂಪತಿ, ತಾವು ಇಷ್ಟು ಧೈರ‌್ಯ ಯನಗೆ ಕೊಟ್ಟ ಮೇಲೆ ಮನಸ್ಸಿನಲ್ಲಿರುವ ಮರ್ಮವನ್ನು ಮಾಜದೆ ಹೇಳುತ್ತೇನೆ. ಅದು ಏನೆಂದರೆ ರತ್ನಾವತಿ ನಗರವನ್ನಾಳುವ ಚಂದ್ರೇಶನೆಂಬ ರಾಜನ ಕುವರಿ ಇರುವಳು ತಿಳಿಯಿತೋ ಮತ್ತೂ ಹೇಳುತ್ತೇನೆ ॥

ಪದ

ರತಿಗೆ ಇಮ್ಮಡಿಯಾಗಿ ತರುಣಿ
ಇರುತಿರ್ಪಳೂ ಸ್ಮರನ ಕೇಳಿಗೆ
ಯನ್ನ ಗುರಿಮಾಡಿ ಪೋದಳು ॥

ಕರ್ಣ: ಅಯ್ಯ ಕೌರವೇಶ್ವರ, ಆ ರಾಜನ ಕುವರಿಯು ಕಾಮನ ಕೈಯೊಳಗಿನ ಅರಗಿಣಿಯಂತೆ ಇರುವಳು. ಅವಳನ್ನು ನೋಡಿ ನನ್ನ ಮನವು ಸ್ಮರನ ಕೇಳಿಯೊಳಗೆ ಸೂರೆ ಹೋಗುವುದೈ ದೇವಾ ಮತ್ತೂ ಹೇಳುತ್ತೇನೆ॥

ಪದ

ತವಕದಿ ಅವಳನ್ನು ಮದುವೆಯ ಮಾಡೈಯ್ಯ
ಕುರುರಾಯ ನೀನು ಈಗ॥

ಕರ್ಣ: ಹೇ ಕುರುಕುಲಧೀರನೆ, ನೀವು ಏನಾದರೂ ಪ್ರಯತ್ನ ಮಾಡಿ ಆ ನಾರಿಯನ್ನು ತಂದು ಯನಗೆ ವಿವಾಹ ಮಾಡಿದರೆ ಯನ್ನ ಮನವು ಸಮಾಧಾನವಾಗುವುದು. ಯಿಲ್ಲದೆ ಇದ್ದರೆ ಯೀ ಪ್ರಾಣವನ್ನು ಯೀ ಧಾತ್ರಿಯ ಮೇಲೆ ಇಡುವದಿಲ್ಲವೈ ರಾಜ ದಿನಕರ ತೇಜ ॥

ಪದಜಂಪೆ

ಯಿದಕೆ ಯೋಚನೆ ಯಾಕೆ ತರುಣಿಯಳ
ತರುವೆನು ಚಿಂತೆ ಯಾತಕೆ ನಿನಗೆ
ಅನುಜಾ ನಾ ತೆರಳುವೆನೂ ॥

ಕೌರವ: ಹೇ ರವಿನಂದನ, ಈ ಸ್ವಲ್ಪ ಕಾರ‌್ಯಕ್ಕೆ ಯಾತಕ್ಕೆ ಯೋಚನೆಯನ್ನು ಮಾಡುತ್ತೀಯ. ಯೀ ಕ್ಷಣದಲ್ಲಿಯೇ ಹೋಗಿ ಸುಂದರಾಂಗಿಯನ್ನು ತಂದು ನಿನಗೆ ವಿವಾಹ ರಚಿಸದೆ ಎಷ್ಟು ಮಾತ್ರಕ್ನೂ ಬಿಡುವುದಿಲ್ಲವೈ ತಮ್ಮಾ ರವಿನಂದನ ಮತ್ತೂ ಹೇಳುತ್ತೇನೆ ॥

ಪದ

ಮನ್ನಿಸಿ ಅರಸನ ತರುವೆನು
ತರುಣಿಯಳ ಕಲಹಾವ ಬೆಳೆಸಿದರೆ
ಧುರದೊಳು ಜೈಸಿ ತರುವೆ ಇದಕ್ಯಾಕೆ
ಯೋಚನೆಯು ಅನುಜನೇ ಕೇಳೋ ॥

ಕೌರವ: ಹೇ ತಮ್ಮನೇ, ಆ ರಾಜನು ವಳ್ಳೇ ಮಾತಿನಿಂದ ಕೊಟ್ಟರೆ ಸರಿ ಹಾಗೇನಾದರೂ ಕೊಡದೆ ಹೋದರೆ ಕಾಳಗವನ್ನಾದರೂ ಮಾಡಿ ಜೈಸಿ ತಂದು ಲಗ್ನ ಮಾಡುತ್ತೇನೆ. ಚಿಂತೆಯನ್ನು ಮಾಡಬೇಡ. ನಮ್ಮ ಪಟ್ಟಣಕ್ಕೆ ಹೋಗಿ ನಮ್ಮ ಸೇನೆ ದಳ ಸಹಿತ ಹೊರಡುತ್ತೇನೆ ॥

ಕರ್ಣ: ಹಾಗಾದರೆ ಹೋಗಿ ಬನ್ನಿರಿ ॥

ಭಾಮಿನಿ

ಎನುತ ಕರ್ಣಗೆ ಪೇಳಿ ದುರ್ಯೋಧನನು
ಮುದದೋಳ್ ಪಟ್ಟಣಕ್ಕೆ ಬಂದು ನಿಂದು
ಅನುಜನೋಳ್ ಮಾವನೋಳ್ ಏನನ್ನುತಿರ್ದನೂ ॥

ಕೌರವ: ಯಾರಲ್ಲಿ ನಮ್ಮ ಮಾವನಾದ ಶಲ್ಯಭೂಪತಿ ಮತ್ತು ಅನುಜನಾದ ದುಶ್ಯಾಸನನನ್ನೂ ಆಸ್ಥಾನಕ್ಕೆ ಬರಮಾಡೂ ॥

ಕೌರವ: ನಮೋ ನಮೋ ಮಾವೈಯ್ಯ ॥

ಶಲ್ಯ: ನಿನಗೆ ಮಂಗಳವಾಗಲೈಯ್ಯ ಕೌರವ ಭೂಪತಿ ॥

ದುಶ್ಯಾಸನ : ನಮೋ ನಮೋ ಅಗ್ರಜಾ॥

ಕೌರವ: ನಿನಗೆ ಮಂಗಳವಾಗಲಪ್ಪ ಅನುಜನೇ ॥

ಪದ

ಯೇನು ಕಾರಣ ನಮ್ಮ ಕರೆಸಿದೆ ಕೌರವ
ಮಾಜದೆಮ್ಮೊಳು ಪೇಳೈಯ್ಯ ॥

ಶಲ್ಯ: ಅಯ್ಯ ಕೌರವ ಭೂಪತಿ, ನಮ್ಮನ್ನು ಯಿಷ್ಟು ತ್ವರಿತದಿಂದ ಬರಹೇಳಲು ಯೇನು ಕಾರಣವಿರುವದು. ಮಾಜದೆ ತ್ವರಿತದಿಂದ ಹೇಳು ಮನದಲ್ಲಿ ಗ್ರಹಿಸಿ ನೋಡುತ್ತೇನೈ ಕೌರವ ಭೂಪತಿ॥

ಕೌರವ: ಮಾವಯ್ಯ ಶಲ್ಯಭೂಪತಿ, ನಿಮ್ಮನ್ನು ಕರೆಸಿದ ಕಾರಣವೇನೆಂದರೆ ರವಿಕುಮಾರನಾದ ಕರ್ಣನಿಗೆ ರತ್ನಾವತಿ ಅರಸನಾದ ಚಂದ್ರೇಶನ ಮಗಳನ್ನು ತಂದು ವಿವಾಹವನ್ನು ನಡೆಸಬೇಕಾದ ಕಾರಣ ಸರ್ವರೂ ಹೊರಡುವಂಥವರಾಗಿ ॥

ಶಲ್ಯ: ಅಪ್ಪಣೆ.

ಕೌರವ: ಭಲೈ ಸಾರಥಿ ನಮ್ಮ ಮಾರ್ಬಲವೆಲ್ಲ ಬೆಂಬಲದಲ್ಲಿ ಹೊರಡುವಂತೆ ಹೇಳಿ ರಥವನ್ನು ರತ್ನನಗರಿಗೆ ಹಾರಿಸೂ ॥

ಕೌರವ: ಎಲೈ ಸಾರಥಿ ರಥವು ಎಲ್ಲಿಗೆ ಬರುವಂಥದ್ದಾಯಿತು ॥

ಕೌರವ: ಎಲೈ ಸಾರಥಿ ಸಂತೋಷವಾಯಿತು. ಚಂದ್ರೇಶನ ಚಾರರನ್ನು ಕರೆ. ಆಹ ಎಲೈ ಚಾರರೆ ನಿಮ್ಮ ದೊರೆಯಾದ ಚಂದ್ರೇಶ ರಾಜನಿಗೆ ಹಸ್ತಿನಾವತಿ ಇಂದ ಕೌರವೇಶ್ವರರು ಅವರ ಸೇನೆಯು ಬಂದಿರುವುದೆಂಬುದಾಗಿ ತಿಳಿಸೂ ॥

ಚಾರ: ನಿನಗೆ ಮಂಗಳವಾಗಲಿ ನೀನು ಬಂದ ಕಾರ‌್ಯವೇನು ಹೇಳು ॥

ಚಾರ: ಸ್ವಾಮಿ ಮಹಾರಾಜರೆ, ಹಸ್ತಿನಾವತಿ ನಗರದ ದೊರೆಯಾದ ಕೌರವೇಶ್ವರರು ಹನ್ನೊಂದಕ್ಷೋಣಿ ಮಾರ್ಬಲ ಸಹಿತ ಬಂದಿರುವರು ಎಂದು ತಮಗೆ ಹೇಳಿ ಕಳುಹಿಸಿರುವರು ॥