ಸನ್ ವಂದು ಸಾವಿರದ ವಂಬೈನೂರ ಮೂವತ್ತೆಂಟನೆ ಇಸ್ವಿ ಏಪ್ರಿಲ್ ತಾರೀಖು ಹನ್ನೆರಡರಲ್ಲು ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿ ಬಾಗೇಶಪುರ ಗ್ರಾಮದಭಾಗವತ ಹೆಚ್. ಲಿಂಗಣ್ಣಯ್ಯನವರ ಮಕ್ಕಳು,ಪ್ರವೀಟ್ ಸ್ಕೂಲ್ ಮಾಸ್ಟರ್ ಬಿ.ಎಲ್. ಚಿಕ್ಕೇಗೌಡ ಪುಸ್ತಕಕ್ಕೆ ದಕ್ಷಿಣಾದಿಯಲ್ಲಿ ರತ್ನಾವತಿ ಕಲ್ಯಾಣ ಬರೆಯುವುದಕ್ಕೆ ಶುಭಮಸ್ತು ಶ್ರೀರಸ್ತು ॥
ಗಣಸ್ತುತಿ
ಅಗಜಾನನಂ ಪದ್ಮಾರ್ಕಂ ಗಜಾನನಂ ಮಹರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತಮುಪಾಸ್ಮಯೇ ॥
ಶಾರದಾ ಸ್ತುತಿ
ನಮಸ್ತೇ ಶಾರದಾ ದೇವಿ ಕಾಶ್ಮೀರ ಪುರವಾಸಿನಿ ತ್ವಾವಹಂ
ಪ್ರಾರ್ಥಯೇ ದೇವಿ ವಿದ್ಯಾ ದಾನಂ ಚ ದೇಹಿಮೇ ॥
ಅಷ್ಟ ದಿಕ್ಪಾಲಕರ ಸ್ತುತಿ
ಇಂದ್ರಾ ಅಗ್ನೀ ಯಮನಶ್ಚೈವ ನೈರುತೋ ವರುಣ
ಸ್ತಥ ವಾಯವ್ಯಂ ಚ ಕುಭೇರಂಚ ಈಶಾನ್ಯಗಭಿವಂದನ ॥
ಭೂದೇವಿ ಸ್ತುತಿ
ವಿಷ್ಣುಶಕ್ತಿ ಸಮರ್ಭೂತೇಶ ಶಂಭವರ್ನಂ ಮಹೀತ
ಳ ಅನೇಕತ್ನ ಸಂಭೂತೆ ಶ್ರೀ ಭೂಮಿದೇವಿ ನಮಸ್ತೇ ॥
ಕಥಾ ಪ್ರಾರಂಭ
ವಾರ್ಧಿಕ್ಯ
ಧಾರುಣೀ ಪತಿ ಚಿತ್ತವಿಸು ಕುಂತಿ ಭೋಜನೆಂಬ
ನೃಪನ ಭವನದಲಿ ಮುರಹರನಂತೆ
ಬೆಳಗುತಿರ್ದಯೆನು ದೇವ ನೃಪನು
ವಂದುದಿನ ದೂರ್ವಾಸಮುನಿ ನೃಪನ
ಮಂದಿರಕೆ ಬರಲಾಗಿ ಮಹೀಪತಿ ಮಂದಗರ್ವದಿ
ಮರೆತು ನಿಂದನು ರಾಜಕಾರ್ಯದಲಿ ॥
ಭಾಮಿನಿ
ತಂದೆ ಗರ್ವಿಸಿದುದನು ಅರಮನೆಯೊಳಂದು
ಕಂಡಳು ಕುಂತಿದೇವಿಯು ಮೆಲ್ಲನೆ
ಮಹಮುನಿಯು ದೂರ್ವಾಸರಿಗೆ ವಂದಿಸಿದಳು ಭವದಿ ॥
ಕುಂತಿದೇವಿ: ಅಪ್ಪಾ ಸಾರಥಿ ನಮ್ಮನ್ನು ಧಾರೆಂದು ಕೇಳುವದಕ್ಕೆ ನೀನು ಧಾರು ನಿನ್ನ ಅಭಿಪ್ರಾಯವೇನು॥
ಅಣ್ಣಯ್ಯ ಸಾರಥಿ ನಾವು ಧಾರೆಂದರೆ ಅಲಕಾವತಿ ಪಟ್ಟಣಕ್ಕೆ ಅರಸರಾದ ಭೋಜರಾಜನಿಗೆ ಮಗಳಾಗಿಯೂ ಕುಂತಿದೇವಿಯೆಂದು ತಿಳಿಯಪ್ಪಾ ಸಾರಥಿ॥ಯೀ ಸಭೆಗೆ ಬಂದ ಕಾರಣವೇನೆಂದರೆ ನಮ್ಮ ತಂದೆಯವರೊಡನೆ ದೂರ್ವಾಸ ಮುನಿಗಳು ಕೋಪಿಸಿಕೊಂಡಿರುವರಂತೆ. ಅವರನ್ನು ಸಂತೈಸುವುದಕ್ಕೆ ಬಂದಿರುತ್ತೇನೆ.
ಪದ
ಹರಿ ನಾರಾಯಣ ಗೋವಿಂದಾ ಮುನಿ ಭಜನ
ಸೇವೆಯ ಮಾಡುವೇ ಭಜಗೋವಿಂದಾ
ಮುನಿಸ್ಮರಣ ಸೇವೆಯ ಮಾಡುವೆ ॥
ದೂರ್ವಾಸ: ನಾವು ಧಾರೆಂದರೆ ॥ಆ ಶ್ರೀಮನ್ನಾರಾಯಣ ಧ್ಯಾನವನ್ನು ಎಡೆಬಿಡದೆ ಧ್ಯಾನಿಸುತ್ತಿರುವ ದೂರ್ವಾಸ ಮುನಿಗಳೆಂದು ತಿಳಿಯುವಂಥವನಾಗು. ನಾನು ಬಂದ ಕಾರಣವೇನೆಂದರೆ ಭೋಜರಾಜನ ಮಗಳಾದ ಕುಂತಿದೇವಿಯು ನೆನೆಸಿದ ಕಾರಣ ಬಾಹೋಣವಾಯಿತು. ಮುಂದೆ ಹೋಗಿ ನೋಡುತ್ತೇನೆ॥
ಕುಂತಿ: ಆಹ ಮಹಾ ಮುನಿಗಳು ಕಾಣಿಸುವುದಿಲ್ಲವಲ್ಲ, ಯೇನು ಮಾಡಲಿ. ಆಹ ಇಲ್ಲಿಯೇ ಇರುವರು. ನಮೋ ನಮೋ ದೂರ್ವಾಸ ಮುನಿಗಳೆ ॥
ದೂರ್ವಾಸ: ನಿನಗೆ ಮಂಗಳವಾಗಲಿ ಸುಖವಾಗಿ ಬಾಳಮ್ಮ ಕುಂತಿದೇವಿಯೇ ॥
ಕಂದ
ಪಾದ ಪದ್ಮಂಗಳಿಗೆ ವಂದಿಸಿ ನಾಂ
ಬೇಡುವೆ ಮುನಿಯೇ ॥
ನೀ ಯನ್ನ ಕರುಣಿಸಿ ಕಾಯೈ॥
ಮುನಿಯೆ ಎಂದು ಬಿದ್ದಳಂಘ್ರಿಯಲೀ
ಕುಂತಿ: ಆಹಾ ಮುನಿಯೆ ನನ್ನನ್ನು ಕಾಪಾಡು ಕಾಪಾಡು ॥
ದೂರ್ವಾಸ: ಅಮ್ಮಾ ಕುಂತಿದೇವಿ ಯೀ ದಿವಸ ನೀನು ನಮ್ಮ ಆಶ್ರಮಕ್ಕೆ ಬಂದ ಕಾರ್ಯವೇನು. ಅಲ್ಲದೆ ಸೂರ್ಯಪ್ರಕಾಶವಾದ ನಿನ್ನ ಮುಖವು ಕಂದಿ ಕುಂದಿರಲು ಕಾರಣವೇನು ನಿನ್ನ ಮನಸ್ಸಿನಲ್ಲಿ ಸ್ವಲ್ಪವಾದರೂ ಸಂಶಯವಿಡದೆ ಹೇಳುವಂಥವಳಾಗಮ್ಮಾ ಕುಂತಿದೇವಿಯೆ ॥
ಪದ
ಮುನಿಪಾ ಬೇಡುವೆ ನಮ್ಮ ತಂದೆ ಮಾಡಿದ
ತಪ್ಪ ಮನ್ನಿಸಿ ಸಲಹೈಯ್ಯ ವಂದಿಸುವೆನು
ನಿಮ್ಮ ಚರಣಕ್ಕೆ ಮುನಿಪಾ ಮುನಿಪಾ ॥
ಕುಂತಿ: ಸ್ವಾಮಿ ಯತಿವರರೇ, ನಮ್ಮ ತಂದೆಯವರು ಮಾಡಿದ ಅಪರಾಧವನ್ನು ಮನಸ್ಸಿನಲ್ಲಿ ಎಣಿಸದೆ ನಮ್ಮ ವಂಶವನ್ನು ಉದ್ಧಾರ ಮಾಡಬೇಕೈ ದೇವ ಮಹಾನುಭಾವ.
ದೂರ್ವಾಸ: ಅಮ್ಮಾ ಕುಂತಿದೇವಿಯೆ, ನೀನು ಹೇಳುವ ವಾಕ್ಯದಂತೆ ನಿಮ್ಮ ತಂದೆಯವರ ಮೇಲಣ ದ್ವೇಷವನ್ನು ಖಂಡಿತ ಬಿಟ್ಟೆನು. ಅಲ್ಲದೆ ನಿನ್ನ ವಂಶವು ವೃದ್ಧಿಸಬೇಕೆಂದು ಹೇಳಿದೆಯಲ್ಲ. ಇದು ನನಗೆ ಕೊಂಚ ಅನುಮಾನವಾಗುತ್ತದೆ. ಆದರೂ ಚಿಂತೆಯಿಲ್ಲ. ಸ್ವಲ್ಪ ಅಂಜದೆ ಹೇಳಮ್ಮಾ ಕುಂತಿದೇವಿ ॥
ಕುಂತಿ: ಸ್ವಾಮಿ ಹಾಗಾದರೆ ಅರಿಕೆ ಮಾಡಿಕೊಳ್ಳುತ್ತೇನೆ ॥
ಪದ
ಬೇಡುವೆನೈಯ್ಯ ಜೋಡಿಸಿ ಕೈಯ್ಯ
ಧಾರುಣಿಯೊಳೆಮ್ಮ ಬಿಡದೆ ಕಾಪಾಡಿ॥
ಕುಂತಿ: ಮಹಾಮುನಿಗಳೆ ತಮ್ಮ ಚರಣಕ್ಕೆರಗಿ ನಾನು ಬೇಡಿಕೊಳ್ಳುವುದೇನೆಂದರೆ ನಮ್ಮ ತಂದೆಯವರ ಮೇಲಿನ ದ್ವೇಷ ಬಿಡಬೇಕೆಂಬುದೇ ನನ್ನ ಪ್ರಾರ್ಥನೆ ॥
ಭಾಮಿನಿ
ಹರಹರಾ ಮಹದೇವಿ ಮಗಳೆ ನಿನ್ನಯ ಆದರಣೆಗೆ
ಹಿರಿದು ಮೆಚ್ಚಿದೆನೆಂದು ತಲೆದೂಗಿದರು
ದೂರ್ವಾಸ ಮುನಿಯೂ ॥
ದೂರ್ವಾಸ: ಅಮ್ಮಾ ಮಗಳೆ ನಿನ್ನ ಪತಿವ್ರತಕ್ಕೆ ಮೆಚ್ಚುವಂಥವನಾದೆ. ನಾನೊಂದು ರಹಸ್ಯವಾದ ಮಾತನ್ನು ಹೇಳುತ್ತೇನೆ ಕೇಳಮ್ಮಾ ಸುಂದರಗಾತ್ರಿ ॥
ಕುಂತಿ: ಮುನಿಗಳೇ ಅನುಮಾನವಿಲ್ಲದೆ ಹೇಳಿ ಕೇಳುತ್ತೇನೆ ॥
ಭಾಮಿನಿ
ಬಾ ಮಗಳೆ ಬಾ ಕೊಳ್ಳು ಯೀ ಮಂತ್ರವ
ಇವುಸಿದ್ಧ ಮಂತ್ರ ಸೊಗಸು ದಿವಿಜರೊಳು
ಆರು ಮೂರುಂಟು ಅವರ ನೀನೆನ
ಸಿದರೆ ಮಕ್ಕಳು ಜನಿಸುವರೆಂದು
ಕುಂತಿಗೆ ಪರಿಹಾಸ್ಯದೊಳರುಹಿ
ಮುನಿ ನಡೆದನು ತನ್ನ ನಿಜಾಶ್ರಮಕೆ ॥
ದೂರ್ವಾಸ: ಅಮ್ಮಯ್ಯ, ನಿನ್ನ ವಂಶವು ಅಭಿವೃದ್ಧಿಯಾಗುವಂತೆ ಪಂಚಮಂತ್ರಗಳನ್ನು ವುಪದೇಶ ಮಾಡಿರುತ್ತೇನೆ. ಯೀ ಮಂತ್ರಗಳನ್ನು ಜಪಿಸಿದ್ದೇಯಾದರೆ ಐದು ಮಕ್ಕಳನ್ನು ಪಡೆಯುವೆ. ಇಂದ್ರಾದಿ ದೇವತೆಗಳಲ್ಲಿ ಹೋಗಿ ನಿನ್ನ ಮನಸ್ಸಿಗೆ ಬಂದ ಮಂತ್ರವನ್ನು ಕುರಿತು ಅವರನ್ನು ಜಪಸಿದ್ದೇಯಾದರೆ ಅಂಥ ದೇವತೆಗಳನ್ನು ಹೋಲುವ ಸುಪುತ್ರರು ಜನಿಸುವರು. ಆಗ್ಯೆ ನಿನ್ನ ವಂಶವು ವೃದ್ದಿಯಾಗುವುದು ತಿಳಿಯಿತೋ. ನಾನು ಹೋಗಿ ಬರುತ್ತೇನೆ. ಅಂದರೆ ನಿನ್ನ ಕಾಂತರಿಂದ ಅಪ್ಪಣೆ ಪಡೆದು ಮಂತ್ರವನ್ನು ಜಪಿಸುವುದು. ಹಾಗೆ ಯೇನಾದರೂ ಅಪ್ಪಣೆ ಪಡೆಯದೆ ಜಪಿಸಿದ್ದೇಯಾದರೆ ಹುಟ್ಟಿದ ಪುತ್ರರು ಅನರ್ಥವಾಗಿ ನಿನ್ನ ಕೈಸೇರುವುದಿಲ್ಲ ತಿಳಿಯಿತೋ ನಾನು ಹೋಗಿ ಬರುತ್ತೇನೆ ॥
ಕುಂತಿ: ಮಹಾಸ್ವಾಮಿ ತಮ್ಮ ಅಪ್ಪಣೆಯಂತೆ ಅನುಸರಿಸಿ ನಡೆಯುವೆನು ತಾವು ಹೋಗಿ ಬನ್ನಿರಿ ॥
ಪದ
ಮಗುವು ಆಟದಲ್ಲಿ ಬೊಂಬೆಯ ಆಟಕ್ಕೆ
ಕುಂತಿ ಮಗುವಿನ ನೆವದಿಂದ ಬಂದಳಾದೇವಿ
ಶ್ರೀಗಳಾಡಿದ ವಚನಾ ॥ಮುನಿಯು ಪೇಳಿದ ಯನಗೆ
ಮಂತ್ರಗಳನು ಶೋಧಿಸಿ ನೋಡುವೆ ಯೀ ಮಂತ್ರದ ಪರಿಗಳ
ಕುಂತಿ: ಆಹ ಮಹಾಮುನಿಗಳು ನನಗೆ ಮಂತ್ರವುಪದೇಶ ಮಾಡಿ ಮಕ್ಕಳು ಹುಟ್ಟುವರೆಂದು ಹೇಳಿದರಲ್ಲಾ ಇದು ನನಗೆ ತುಂಬಾ ಅನುಮಾನವಾಗಿದೆ. ಒಳ್ಳೆಯದು ಯೀ ಮಂತ್ರವು ಸುಳ್ಳು ನಿಜವೆಂಬುದನ್ನು ಪರೀಕ್ಷೆ ಮಾಡಿ ನೋಡಲೆ ಹಾಗೆ ಮಾಡಿದರೆ ರುಷಿ ಮಾತು ನಿಜವಾದರೆ ಮುಂದೆ ಅನರ್ಥಕ್ಕೆ ಗುರಿಯಾಗುವೆನಲ್ಲಾ ಏನುಮಾಡಲಿ ॥
ಪದ
ಸಾರಿ ಭಜಿಸಿದರೆನ್ನಾ ಯೀ ಮಂತ್ರದ ಆಗಮ
ತಿಳಿದು ನೋಡುವೆನೂ ಆಗಮ ತಿಳಿಯುತ
ಮಂತ್ರದ ಬೇಧವ ಶೋಧಿಸಿ ಪರಿಪರಿ
ವಿಧದೊಳು ನೋಡುವೆ ಸಾರಿ ಭಜಿಸಿದಾರೆ ॥
ಕುಂತಿ: ಆಹಾ ನಾನು ಯೀ ಮಂತ್ರವನ್ನು ನದಿ ಬಳಿಗೆ ಹೋಗಿ ಜಪಿಸಿ ನೋಡಿದರೆ ಇದರ ನಿಜಾರ್ಥವು ಗೊತ್ತಾಗುತ್ತೆ ಅದುವರೆಗೂ ಎಂದಿಗೂ ಗೊತ್ತಾಗುವುದಿಲ್ಲ. ನದಿ ಬಳಿಗೆ ಹೋಗಿ ಶೋಧಿಸಿ ನೋಡುವೆನು.
ಪದ
ಗಂಗಾ ನದಿಯಲ್ಲಿ ನಾನು ಮಿಂದು ಸ್ನಾನವ
ಮಾಡಿ ಪೀತಾಂಬರವನ್ನು ಧರಿಸಿ
ಮುನಿಯುಪದೇಶದ ಮಂತ್ರವ ಜಪಿಸುವೆ ॥
ಕುಂತಿ: ಆಹಾ, ಯೀ ಗಂಗಾನದಿಯಲ್ಲಿ ಸ್ನಾನವನ್ನು ಮಾಡಿರುತ್ತೇನೆ. ಇನ್ನಾದರೆ ಋಷಿವಾಕ್ಯದಂತೆ ಮೊದಲನೆಯ ಮಂತ್ರದ ಅಧಿಪತಿಯಾದ ಸೂರ್ಯ ಮಹಾದೇವನನ್ನು ಸ್ತೋತ್ರ ಮಾಡಿರುತ್ತೇನೆ ॥
ಪದ
ದೇವ ಜಗದೋದ್ಧಾರ ಅಪಾರ ಕರುಣಾಕರ
ದೇವ ಜಗದೋದ್ದಾರ ದೇವದೇವೇಶ್ವರ ದಿವ್ಯಸಾರ
ಸದಮಲ ಹೃದಯ ಸಂನುತ ವಿಜಯ
ಯತಿ ಹರವಿ ಮಿತವಾಸುದೇವನೆ ॥ದೇವ ॥
(ಸೂರ್ಯ ಪ್ರತ್ಯಕ್ಷನಾಗುವುದು)
ಪದ
ಭಜರೆ ಗುರು ಶರಣಂ ದುಸ್ತರ ಭವಸಾಗರ ತರಣಂ
ಭಯತಿ ರಾಮಾನುಜ ನಿಕರ ಚರಣಂ ಸತತ
ಹಾ ಪತಿವರ ಸೂರ್ಯಕಿರಣಂ ಯತಿ ರಾಮಾನುಜ
ಗುರುದಾತಿ ಭೋದಂ ಜಲಜರಾಭಜಿತ ಕಲುಷನಿರೋದಂ ॥
ಸೂರ್ಯ: ಭೋಜರಾಜನ ಮಗಳಾದ ಕುಂತಿದೇವಿಯು ನನ್ನನ್ನು ಕುರಿತು ತಪಸ್ಸು ಮಾಡಿರುವಳು. ಆಕೆಗೆ ವರವನ್ನು ಕೊಡುವುದಕ್ಕೆ ಬಂದಿರುತ್ತೇನೆ. ಯೀಗಲೆ ಹೊರಡುತ್ತೇನೆ.
ಕುಂತಿ: ನಮೋ ನಮೋ ಸೂರ್ಯ ಮಹಾದೇವ ॥
ಪದ
ಚಿಂತೆ ಯಾತಕೆ ನಿನಗಿಂತು ತರುಣಿ
ತಪಸಿಮನದ ಚಿಂತೆ ಯಾತಕೆ ನಿನ್ನ ಹೃದಯದಿ
ಯನ್ನ ಕೂಡಿದ ಮಗನು ಜನಿಸುವ
ಸಂಭ್ರಮದೋಳ್ ಚಿಂತೆ ಯಾತಕೆ॥
ಸೂರ್ಯ: ಅಮ್ಮಾ ಕುಂತೀದೇವಿ ನಿನ್ನ ತಪಸ್ಸಿಗೆ ನಾನು ಮೆಚ್ಚುವಂಥವನಾದೆ. ನಿನ್ನ ಇಷ್ಟದಂತೆ ನನ್ನ ರೂಪಂ ಪೋಲ್ವ ಸುಕುಮಾರನು ಪುಟ್ಟುವಂತೆ ವರವನ್ನು ಕೊಟ್ಟು ಇರುತ್ತೇನೆ. ಮುಂದೆ ಸುಖದಿಂದ ಇರುವಂಥವಳಾಗಮ್ಮ ಕುಂತೀದೇವಿ ನಾನು ಹೋಗಿ ಬರುತ್ತೇನೆ ॥
ಭಾಮಿನಿ
ಅರಸ ಕೇಳಾಶ್ಚರ್ಯವ ತಾವರೆಯ
ಮಿತ್ರನೋರ್ವ ಕುರುಳಾದೆಲೆಯಿಂದ
ಧರಿಸಿದಳು ಕುಂತಿ ಗರ್ಭವನೂ ॥
ಪದ
ಹರಹರ ಅರಿಯಾದೆ ತಪವನ್ನು ನಾ ಮಾಡಿ ಯೀ
ಪರಿಪದ ಗೀತೆಯನ್ನು ಹೃದಯದೊಳೂ
ಮೋಸವಾದೆನು ನಾನು ಯೀಶ ಜಗದೀಶ
ಮಂದ ಬುದ್ಧಿಯಿಂದ ಮುಂದರಿಯದೆ ಹೋದೆ ॥
ಕುಂತಿ: ಹೇ ಮುಕುಂದ ಮುರವರ್ಧನ ಪಕ್ಷಿವಾಹನ ಗರುಡಧ್ವಜ ಯಂಥಾ ಮೋಸವಾಯಿತು. ಮಂದ ಬುದ್ದಿಯಿಂದ ಮುಂದರಿಯದೆ ಆ ಸೂರ್ಯನನ್ನು ಕುರಿತು ತಪಸ್ಸು ಮಾಡಿ ಕೆಟ್ಟನಲ್ಲೈ ಮತ್ತು ಯೀ ಪ್ರಾಣವನ್ನು ಯೀ ಧರೆಯ ಮೇಲೆ ಇಟ್ಟು ಬಾಳುವುದು ಹ್ಯಾಗೆ ಶಂಕರ ॥
ಪದ
ಅಕಟಕಟ ಕುಂತಿಯು ಕಾಂತರಿಲ್ಲದೆ
ಗರ್ಭಧರಿಸಿದಳೆಂದು ಯೀ
ವಸುಧೆಯೊಳು ಪೆಸರಾಯ್ತು
ಹರಹರಾ ಅರಿಯಾದೆ ತಪವನ್ನು ನಾ ಮಾಡಿ॥
ಕುಂತಿ: ಹೇ ಮುಕುಂದ ನಾನು ಅವಿವಾಹಿತಳಾಗಿ ಗರ್ಭಧರಿಸಿದಳೆಂದು ಯೀ ಧಾರುಣಿಯ ಜನರೆಲ್ಲರೂ ಪರಿಹಾಸ್ಯ ಮಾಡುವಂಥ ಕಾಲ ವದಗಿತಲಾ, ವಿಧಿಯೆ ಯೀ ಪ್ರಾಣವನ್ನು ಇಡುವುದಕ್ಕಿಂತ ಕಳೆದುಕೊಳ್ಳುವೆನೂ
ದೂರ್ವಾಸ: ಅಮ್ಮ ಕುಂತಿದೇವಿ ನಿಧಾನ ಮಾಡು. ಇಂಥ ಮತಿಹೀನವಾದ ಕೆಲಸವನ್ನು ಮಾಡಿದೆ. ಬುಡವಿಲ್ಲದ ಕೆಲಸವನ್ನು ಮಾಡಿದೆ. ದಡ ಸಿಕ್ಕದೆ ಹೋದೀತು. ಆದರೂ ಚಿಂತೆಯಿಲ್ಲ ಹೇಳುವೆ ಕೇಳು॥
ಪದ–ಅಟತಾಳ
ಕುಂತೀದೇವಿಯೆ ನೀನು
ಧೈರ್ಯಾದಿಂದಿರು ನೀನೂ
ಸತ್ಯಾವುಳಿಸುವೆ ನಾನೂ ॥ಕುಂತಿ ॥
ಸತ್ಯಾವುಳಿಸುವೆ ನಾನೂ ಸತ್ಯಾವುಳಿಸುವೆ
ನಾನೂ ಕರ್ಣಯೆಂದೆನುತಾಲಿ ಕರೆವುದು
ನೀ ಬೇಗಾ ವುಳಿವಾದು ಧರ್ಮವೂ ॥
ದೂರ್ವಾಸ: ಪತಿವ್ರತೆಯಾದ ಕುಂತೀದೇವಿಯೇ ಕೇಳು. ನೀನು ಯಾತಕ್ಕೆ ಇಂಥ ಸಂತಾಪ ಪಡುತ್ತೀಯ. ನಿನ್ನ ಧರ್ಮವು ವುಳಿಯಬೇಕಾದರೆ ಕರ್ಣನೆಂದು ಕೂಗಿ ನಾನು ಕೂಗಿದ ಸ್ಥಳದಲ್ಲಿ ಬಂದು ಧರ್ಮವನ್ನು ಕಾಪಾಡಬೇಕು ಎಂದು ಕೂಗಿದ್ದೇ ಆದರೆ ಕರ್ಣದಿಂದ ಪ್ರತ್ಯಕ್ಷನಾಗಿ ಬಂದು ಕಾಣುವನು. ಅನಂತರ ನಿನಗೆ ಅಪಮಾನವು ತಪ್ಪುವುದಮ್ಮಾ ಪುತ್ರಿ ಸುಂದರಗಾತ್ರಿ ॥
ಕುಂತಿ: ಹಾಗೆ ಮಾಡುವೆನು ಹೋಗಿ ಬನ್ನಿರಿ ॥
ಪದ
ಮುನಿಯುಪದೇಶವ ಮಾಡಿ ಪೋದ ತೆರದಿ
ಕರ್ಣನೆಂದು ಕರೆಯುವೆ ಅನುಮಾನವಿಡದೆ ॥
ಕುಂತಿ: ಆಹಾ ನಾನು ಮುನಿಗಳು ಹೇಳಿದ ತೆರದಿ ಕರ್ಣನೆಂದು ಕರೆದು ನನಗುಂಟಾಗಿರುವ ಬಾಧೆಯನ್ನು ಪರಿಹಾರ ಮಾಡಿಕೊಳ್ಳುತ್ತೇನೆ.
ಭಾಮಿನಿ
ಮುನಿಯು ಪೇಳಿದ ತೆರದಿ ಕುಂತಿಯು ಕರಿಯೆ
ಕರ್ನದಿಂ ಪುಟ್ಟಿದ ಕುಮಾರನಂ ನೋಡಿ
ಬೆದರಿ ಬಿದ್ದಳೂ ಮೂರ್ಚಿತಳಾಗಿ ಕುಂತಿಯೂ ॥
ಕುಂತಿ: ಅಮ್ಮಾ ಗಿರಿಜೆ ಯಂಥಾ ಮೋಸವಾಯಿತು. ಸುಕುಮಾರನನ್ನೂ ನೋಡಿದ್ದೇಯಾದರೆ ಕೋಟಿಸೂರ್ಯ ಪ್ರಕಾಶಮಾನವಾಗಿರುತ್ತಾನೆ. ಯೀ ಮಗುವನ್ನು ನಾನು ಪಟ್ಟಣಕ್ಕೆ ತೆಗೆದುಕೊಂಡು ಹೋದರೆ ಕುಂತಿದೇವಿಯು ಲಗ್ನವಿಲ್ಲದೆ ಮಕ್ಕಳನ್ನು ಹಡೆದಳೆಂದು ಅಪಹಾಸ್ಯ ಮಾಡುತ್ತಾರೆ. ಒಂದು ವೇಳೆ ಇಲ್ಲಿಯೇ ಬಿಟ್ಟು ಹೋದರೆ ಹದ್ದು ಕಾಗೆಗಳು ಅಪಹರಿಸಿಕೊಳ್ಳುವುವು. ಹೇಗಾದರೂ ಆಗಲಿ ಯೀ ಮಗುವನ್ನು ತೆಗೆದು ಯೀ ಗಂಗಾನದಿಯಲ್ಲಿ ಶಿಶುವಿಗೆ ತೊಂದರೆ ಇಲ್ಲದಂತೆ ಗಂಗಾ ಮಾತೆಯನ್ನು ಬೇಡಿಕೊಂಡು ಯೀ ದಡದಲ್ಲಿ ಬಿಟ್ಟು ಹೋಗುತ್ತೇನೆ ॥
ಪದ
ಗಂಗಾಂಬಿಕೆ ಯನ್ನ ಭಂಗವ ನೀ ನೋಡಿ
ಕಂದಾನ ಕಾಯಬೇಕು ಗಂಗಾಂಬಿಕೆ
ಕಾಯುವೆನೆಂಬ ಭಾವದಿ ನಾನು ಧೈರ್ಯಾದಿಂ
ಪೋಗುವೆನು ಅಮ್ಮಯ್ಯ॥
ಕುಂತಿ: ಅಮ್ಮಯ್ಯ ಯೀ ಸುಕುಮಾರನನ್ನು ಕಾಯುವ ಭಾರ ನಿನ್ನದಾಗಿದೆ. ನನ್ನ ಮೇಲೆ ಕರುಣವಿಟ್ಟು ಕಾಪಾಡಬೇಕು. ನಾನು ಗಂಗಾಂಬಿಕೆಯನ್ನು ಬೇಡಿದ್ದಾಯಿತು. ಶಿಶುವನ್ನು ನದಿಯಲ್ಲಿ ಬಿಡುತ್ತೇನೆ. ಅಮ್ಮಯ್ಯ ಕಾಪಾಡುವುದೇ ನಿನ್ನ ಭಾರವು ನಾನು ಹೋಗಿ ಬರುತ್ತೇನೆ ॥
(ಅಂಬಿಗರ ಆಗಮನ)
ಪದ
ಬನ್ನಿರೈಯ್ಯಿ ಬನ್ನಿರಿ ಬನ್ನಿರೈಯ್ಯಿ
ಬನ್ನಿರಿ ಮಡುವಿನೊಳಗೆ ಇರುವ ನೀರ
ಕಲಕದಂತೆ ಪಿಡಿಯುವಾ॥
ಬಾಳೆ ಮೀನುಗಳನ್ನು ನೋಡಿ
ಬಲೆಯ ಬೀಸಿ ಕೊಲ್ಲುವಾ
ಬಲೆಯ ಬೀಸಿ ಕೊಲ್ಲುವಾ
ಭಾರಿ ಮೀನುಗಳಿಡಿಯುವಾ॥
ಅಂಬಿಗರು: ಯಲೋ ಯೀ ಹೊತ್ತು ಮೀನು ಬ್ಯಾಟೆಗೆ ಹೋಗೋಣ ನಡಿಯಿರಿ. ದಿನವೂ ಹುಡುಕುತ್ತಿದ್ದ ಹಾಗೆ ಹುಡುಕ ಕೂಡದು ಜಾಗ್ರತೆ. ಭಾರಿ ಭಾರಿ ಬಾಳೇ ಮೀನು ಹಿಡಿಯೋಣ ನಡಿಯಿರಿ॥
ಭಾಮಿನಿ
ರಾಯ ಕೇಳ್ ಸಕಲ ಲೋಕಮಾತೆ
ಗಂಗಾ ಭವಾನಿಯು ತರಳನ ನೋಯಿಸದೆ
ಮುಳುಗಿಸದೆ ಚಾಚಿದಳು ತಡಿಗಿಕ್ಕದರಿ
ಕಾಲಿನಲಿ ಮರಳುರಾಶಿಯ ನೋಡಿ
ಕೈಗಳಾಡಿಸುವ ಶಿಶುವನ್ನು ಕಂಡನೊಬ್ಬನು
ಶಿವಶಿವಾ ಯೆನುತದೆ ಕಂದಾ ॥
ಅಂಬಿಗ: ಯೆಲ್ಲಿರ್ಲ ಬಲೆ ಬೀಸಿರಿ ಬ್ಯಾಟೆಯಾಡೋಣ. ನಾನು ಅತ್ತ ಕಡೆ ನೀರು ಹಾಕಿಕೊಂಡು ಬತ್ತೀನಿ. ಅಯ್ಯೋ ಇದೇನು ಇದೇನು ಶಿವ ಶಿವ ಇವಳು ಯಾರೋ ನಾಚಿಕೆ ಇಲ್ಲದ ಮುಂಡೆ ಮಗುವನ್ನು ಹೆತ್ತು ಇಲ್ಲಿ ಬಿಸಾಕಿ ಹೋಗಿದ್ದಾಳೆ ನೋಡ್ರಿಲಾ ॥
2ನೆಯವನು: ಎಲಾ ಯಿವತ್ತು ಮೀನು ಇಲ್ಲದೇ ಇದ್ದರೂ ಆಕೀತು ಯೀ ಮಗುವನ್ನು ಎತ್ತಿಕೊಂಡು ಹೋಗಿ ನಮ್ಮ ರಾಧೇಯನಲ್ಲಿ ಕೊಟ್ಟು ಸಾಕಿಸೋಣ ನಡಿರೀ ॥
ಭಾಮಿನಿ
ಶಿಶುವನು ತೆಗೆದು ರಾಧೆಯೊಳು ತಂದು ತೋರಲು
ದಿವಿಜರನ್ನು ಕರೆಸಿ ದಾನ ಧರ್ಮಂಗಳು ಮಾಡಿದಳು
ಸಂವತ್ಸರವು ಸಾಕುತ ಇರಲು ವಂದುದಿನ
ಸಾಕಿದ ಮಾತೆಯೊಳು ನಾನು ವಿದ್ಯವನ್ನು ಕಲಿತು
ಬರುವೆನು ಯೆಂದು ಅಪ್ಪಣೆ ತೆಗೆದು ಹೊರಟನು
ವಿದ್ಯವನು ಕಲಿಸುವ ಗುರುಗಳನು ಹುಡುಕುತ ಕುವರಾ ॥
ಕರ್ಣ: ಆಹಾ ನನಗೆ ಹತ್ತು ವರುಷ ತುಂಬಿದರೂ ಕೂಡ ಅಸ್ತ್ರ ಶಸ್ತ್ರ ವಿದ್ಯೆಯನ್ನು ಕಲಿಯಲಿಲ್ಲ. ಆದ್ದರಿಂದ ಕಲಿಸುವಂಥ ಗುರುಗಳನ್ನು ಹುಡುಕಿಕೊಂಡು ಹೋಗುವೆನು ॥
ಪದ
ದೇಶದೇಶಾವ ಸುತ್ತಿ ದಾಸನಾಗಿರುವೆನು
ವಿದ್ಯಾಬುದ್ದಿಯ ಕಲಿಸುವರು ದೊರಕಲಿಲ್ಲಾ ಯೀಶ ॥
ಕರ್ಣ: ಆಹಾ ನಾನು ಅಂಗ, ವಂಗ, ಕಳಿಂಗ, ಕಾಶ್ಮೀರ, ಕರ್ನಾಟಕ ಇಂಥಾ ಚಪ್ಪನ್ನೈವತ್ತಾರು ದೇಶವನ್ನು ತಿರುಗಿದಾಗ್ಯೂ ನನಗೆ ತಕ್ಕಂಥ ವಿದ್ಯೆ ಕಲಿಸುವಂಥ ಗುರುಗಳು ಸಿಕ್ಕಲಿಲ್ಲ ಯೇನು ಮಾಡಲಿ॥
ನಾರದ: ಆಹಾ ಯಾರೊ ಒಬ್ಬ ಬಾಲಕನು ಸೂರ್ಯನಂತೆ ಹೊಳೆಯುತ್ತಿರುವನು. ಆಹಾ ಯೀ ಬಾಲಕನು ಯಾರಾಗಿರಬಹುದು.
Leave A Comment