ಕರ್ನಾಟಕ ಶಾಸ್ತ್ರೀಯ ಸಂಗೀತ ಮಾಧ್ಯಮದಲ್ಲಿ ಗಾಯಕಿಯಾಗಿ ಮತ್ತು ಸಂಗೀತ ತಜ್ಞೆಯಾಗಿ ಡಾ. ರತ್ನಾ ಶಿವಶಂಕರ್ ಅವರದು ಬಹಳ ಜನಪ್ರಿಯ ಹೆಸರು. ಹಿರಿಯ ವಿದ್ವಾಂಸರುಗಳಾದ ಬೆಳಕವಾಡಿ ವರದರಾಜ ಅಯ್ಯಂಗಾರ್, ಸಂಗೀತ ಕಲಾನಿಧಿ ಡಾ.ಆರ್.ಕೆ. ಶ್ರೀಕಂಠನ್‌, ಚೆನ್ನೈನ ಡಾ.ಎಸ್‌. ರಾಮನಾಥನ್‌ ಮುಂತಾದ ಅತಿರಥರಲ್ಲಿ ಶಿಷ್ಯವೃತ್ತಿ ನಡೆಸಿ ಪ್ರಬುದ್ಧ ಸಂಗೀತ ವಿದುಷಿಯಾಗಿ ರೂಪುಗೊಂಡ ರತ್ನಾ ಶಿವಶಂಕರ್ ಅವರು, ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಹಾಗೂ ವಿಭಾಗದ ಮುಖ್ಯಸ್ಥರಾಗಿ ಸುಮಾರು ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸುತ್ತಾ ಹಲವಾರು ಕಲಾವಿದರನ್ನು ತಯಾರು ಮಾಡಿದ್ದಾರೆ.

ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಪ್ರತಿಷ್ಠಿತ ಸಂಗೀತ ಸಭೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುವುದಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ಗಾನಕಲಾ ಪರಿಷತ್ತು, ಹಂಪಿ ಕನ್ನಡ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಏರ್ಪಾಡಾಗಿದ್ದ ವಿಚಾರ ಕಮ್ಮಟಗಳಲ್ಲಿ ಭಾಗವಹಿಸಿ, ಸೋದಾಹರಣ ಉಪನ್ಯಾಸಗಳನ್ನು ನೀಡಿದ್ದಾರೆ, ಪ್ರಬಂಧಗಳನ್ನು ಮಂಡಿಸಿದ್ದಾರೆ. ಜೊತೆಗೆ ಸಂಗೀತ ಶಾಸ್ತ್ರ ಮತ್ತು ಸಂಗೀತ ವಿಜ್ಞಾನ ಕುರಿತಂತೆ ನೂರಾರು ಲೇಖನಗಳನ್ನು ನಾಡಿನ ಪ್ರಬುದ್ಧ ಪತ್ರಿಕೆಗಳು ಪ್ರಕಟಿಸಿವೆ. ಬೆಂಗಲೂರು ವಿಶ್ವವಿದ್ಯಾಲಯ ಡಾ. ರತ್ನಾ ಶಿವಶಂಕರ್ ಅವರ ಸಂಗೀತ ಕ್ಷೇತ್ರಕ್ಕೆ ಪ್ರಬಂಧಪಟ್ಟ ೫ ಕೃತಿಗಳನ್ನು ಪ್ರಕಟಿಸಿದೆ. ಒಂದು ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಜೊತೆಗೆ ರತ್ನಾ ಅವರು ಕರ್ನಾಟಕ ರಾಜ್ಯ ಸರ್ಕಾರ ಪ್ರಕಟಿಸಿದೆ ಪುರಂದರ ಸಾಹಿತ್ಯ ದರ್ಶನದ ನಾಲ್ಕು ಸಂಪುಟಗಳಿಗೆ ಉಪಸಂಪಾದಕಿಯಾಗಿ ಕೆಲಸ ಮಾಡಿದ್ದಾರೆ.

ಇವರ ‘ಸಂಗೀತ ಚಿಕಿತ್ಸೆ’ ಸಂಶೋಧನಾತ್ಮಕ ಲೇಖನಕ್ಕೆ ಅಮೆರಿಕಾದ ಡಿ. ಪಾಲ್‌ ವಿಶ್ವವಿದ್ಯಾನಿಲಯ ವಿಶೇಷ ಪ್ರಶಸ್ತಿಯನ್ನು ನೀಡುವುದರ ಜೊತೆಗೆ ‘ಡಿ.ಲಿಟ್‌’ ಪದವಿಯನ್ನು ನೀಡಿ ಗೌರವಿಸಿದೆ. ಇವರ ‘ನಾದೋಲ್ಲಾಸ’ ಕೃತಿಗೆ ಭಾರತ ಸರ್ಕಾರದ ಮಾನ್ಯತೆ ದೊರೆತಿದ್ದು, ರಾಜ್ಯದ ಎಲ್ಲ ಗ್ರಂಥಾಲಯಗಳಿಗೂ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಗಾಯನ ಸಮಾಜ ೨೦೦೭ ರ ಸಾಲಿನಲ್ಲಿ ಇವರನ್ನು ವರ್ಷದ ಕಾಲವಿದೆಯಾಗಿ ಗುರುತಿಸಿ ಗೌರವಿಸಿದೆ. ಡಾ. ರತ್ನಾ ಶಿವಶಂಕರ್ ಅವರ ಸಂಗೀತ ಸಾಧನೆಯನ್ನು ಗುರುತಿಸಿ ೨೦೦೭-೦೮ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನಿತ್ತು ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.