ವಿಶಾಲ ಪಥದಲಿ ಜೀವನ ರಥದಲಿ
ನಿನ್ನಯ ಕರುಣೆಯ ಸಾರಥ್ಯದಲಿ
ನೀಲವಿತಾನದ ಹಂದರದಡಿಯಲಿ
ಮರ್ತ್ಯದ ಮಣ್ಣಿನ ಧೂಳಿನಲಿ
ಹಗಲು ಇರುಳುಗಳ ಬೆಳಕಿನಲಿ
ನಡೆಯುತ್ತಿದೆ ಈ ಜೀವರಥ
ವಿಶಾಲವಾಗಿದೆ ನನ್ನ ಪಥ-

ನೋವು ನಲಿವುಗಳ ಸವಿದು ನೋಡಿದೆ
ಬಾಳಿನ ಸುಮಧುರ ಒಲವನು ಹೀರಿದೆ
ಸೃಷ್ಟಿಯ ಚೆಲುವಿಗೆ ಎದೆಯನು ನೀಡಿದೆ
ಹಕ್ಕಿಯ ತೆರೆದಲಿ ಹಾರುತ ಹಾಡಿದೆ
ಮುಂದೆ ಕಾಣ್ ಅದೋ ಬೆಳಕು ಮೂಡಿದೆ !
ನಡೆಯುತ್ತಿದೆ ಈ ಜೀವರಥ
ವಿಶಾಲವಾಗಿದೆ ನನ್ನ ಪಥ.

ಗರ್ಗರ ನಾದದ ಗಾಲಿಯ ವೇಗ
ಅನಂತಯಾತ್ರೆಗೆ ಬಂಧುರ ರಾಗ ;
ಸಾಕ್ಷಿಯಾಗುತಿದೆ ಗಗನಾಭೋಗ
ಅನಂತ ಶಕ್ತಿಯೆ ನಡೆಸಿರುವಾಗ
ಬಿಡು ನನಗೇತಕೆ ವ್ಯರ್ಥಾವೇಗ !
ನಡೆಯುತ್ತಿದೆ ಈ ಜೀವರಥ
ವಿಶಾಲವಾಗಿದೆ ನನ್ನ ಪಥ.