ಭಾರತ ಅನೇಕ ಮಹಾಪುರುಷರಿಗೆ ಜನ್ಮವಿತ್ತ ಪುಣ್ಯಭೂಮಿ. ವೇದಕಾಲದಿಂದ ಹಿಡಿದು ಇಂದಿನ ತನಕ ಈ ದೇಶದಲ್ಲಿ ಅನೇಕ ಮಂದಿ ಋಷಿಗಳೂ ಸಾಧುಸಂತರೂ ಆಗಿಹೋಗಿದ್ದಾರೆ. ಇವರಲ್ಲಿ ಕೆಲವರು ಕಾಡುಗುಡ್ಡಗಳಲ್ಲಿ ಕಷ್ಟಪಟ್ಟು ತಪಸ್ಸು ಮಾಡಿ, ಸತ್ಯವನ್ನು ಹುಡುಕಿ, ಜ್ಞಾನವನ್ನು ಸಂಪಾದಿಸಿ, ಜಗತ್ತಿನ ಆಧ್ಯಾತ್ಮಿಕ ಪ್ರಗತಿಗೆ ಕಾರಣರಾದರೆ, ಇನ್ನು ಕೆಲವರು ಜನಸೇವೆ, ದೇಶಸೇವೆಗಳಿಗೆ ತಮ್ಮ ಬದುಕನ್ನೇ ಮೀಸಲಾಗಿಟ್ಟು, ಜನರ ಜೊತೆಯಲ್ಲಿಯೇ ಇದ್ದು, ಅವರೊಂದಿಗೇ ಬದುಕಿ, ಸಾಮಾಜಿಕ ಪ್ರಗತಿಗೆ ಕಾರಣರಾಗಿದ್ದಾರೆ. ಈ ಎರಡನೆಯ ಗುಂಪಿನಲ್ಲಿ ಸೇರುವ ಮಹಾಪುರುಷರ ಶ್ರೀ ರಮಣ ಮಹರ್ಷಿ.

‘ಕುಂಭಕರ್ಣ’

ರಮಣ ಮಹರ್ಷಿಗಳು ಹುಟ್ಟಿದ್ದು ೧೮೭೯ನೆ ಇಸವಿಯಲ್ಲಿ, ತಮಿಳುನಾಡಿನ ಮಧುರೆಯಿಂದ ಮೂವತ್ತು ಮೈಲಿ ದೂರದಲ್ಲಿ ಒಂದು ಚಿಕ್ಕ ಹಳ್ಳಿಯಿದೆ. ಅದರ ಹೆಸರು ತಿರುಚ್ಚಳಿ. ಅಲ್ಲೊಂದು ಚಿಕ್ಕ ದೇವಾಲಯವಿದೆ. ಅದರ ಸಮೀಪವಿರುವ ಒಂದು ಮನೆಯಲ್ಲಿ ಸುಂದರಮ್ ಅಯ್ಯರ್ ಮತ್ತು ಅಳಗಮ್ಮಾಳ್ ಎಂಬ ದಂಪತಿಗಳಿದ್ದರು. ಅವರದು ಆದರ್ಶ ದಾಂಪತ್ಯ. ಗಂಡ ಹೆಂಡಿರಿಬ್ಬರೂ ದೈವಭಕ್ತರೂ ದಯಾಳುಗಳೂ ಆಗಿದ್ದರು.

ಆ ದಂಪತಿಗಳ ಮೂವರು ಗಂಡು ಮಕ್ಕಳಲ್ಲಿ ವೆಂಕಟರಮಣ ಎರಡನೆಯವನು. ವೆಂಕಟರಮಣ ಹುಟ್ಟಿದ ದಿವಸ ಆ ಊರ ಜಾತ್ರೆ. ಅಂದು ಡಿಸೆಂಬರ್ ಮೂವತ್ತನೆಯ ದಿನಾಂಕ. ಅವನ ಬಾಲ್ಯದಲ್ಲಿ ಏನೂ ವಿಶೇಷವಿರಲಿಲ್ಲ. ಇತರ ಎಲ್ಲ ಹುಡುಗರಂತೆಯೇ ಅವನೂ ಬೆಳೆದ. ಹಳ್ಳಿಯಲ್ಲಿಯೇ ಅವನ ಪ್ರಾಥಮಿಕ ಶಿಕ್ಷಣ ಮುಗಿಯಿತು. ಅವನಿಗೆ ಹನ್ನೆರಡು ವರ್ಷವಾಗಿದ್ದಾಗ. ಸುಂದರಮ್ ಅಯ್ಯರ್ ದೈವಾಧೀನರಾದರು. ಅಳಗಮ್ಮಾಳ್ ತನ್ನ ಮಕ್ಕಳೊಂದಿಗೆ ಮಧುರೆಗೆ ತೆರಳಿದರು. ಅಲ್ಲಿ ಸುಂದರಮ್ ಅಯ್ಯರ್, ಅವರ ತಮ್ಮ ಇದ್ದರು. ಅವರ ಹೆಸರು ಸುಬ್ಬಯ್ಯರ್, ವೆಂಕಟರಮಣನ ಅಭ್ಯಾಸ ಮಧುರೆಯ ಮಿಷನ್ ಹೈಸ್ಕೂಲ್‌ನಲ್ಲಿ ಮುಂದುವರಿಯಿತು.

ವೆಂಕಟರಮಣನಿಗೆ ಶಾಲೆಯ ಅಭ್ಯಾಸದಲ್ಲಿ ಸ್ವಲ್ಪವೂ ಆಸಕ್ತಿಯಿರಲಿಲ್ಲ. ಅತ ತುಂಬ ಸೋಮಾರಿ. ಆತನನ್ನು ಪ್ರತಿದಿನ ಶಾಲೆಗೆ ಕಳುಹಿಸುವುದೆಂದರೆ ತಾಯಿಗೆ ಸಾಕೋ ಸಾಕಾಗಿ ಹೋಗುತ್ತಿತ್ತು. ಆದರೆ ಹುಡುಗ ಆರೋಗ್ಯಶಾಲಿ. ಅವನು ಬಲಿಷ್ಠನಾದ್ದರಿಂದ ಅವನ ಸಹಪಾಠಿಗಳೆಲ್ಲ ಅವನಿಗೆ ಹೆದರುತ್ತಿದ್ದರು. ಆದರೆ ಒಂದು ಸ್ವಾರಸ್ಯವೆಂದರೆ ಅವನಿಗೆ ತುಂಬ ನಿದ್ರೆ ಬರುತ್ತಿತ್ತು. ಎಂಥ ನಿದ್ರೆ ಎಂದರೆ ಅವನು ನಿದ್ರಿಸಿರುವಾಗ ಅವನ ಸ್ನೇಹಿತರು ಏನೇ ಮಾಡಿದರೂ – ಹೊಡೆದರೂ ಅಥವಾ ಹಾಗೆಯೇ ಅವನನ್ನು ನಾಲ್ಕು ಜನ ಹೊತ್ತುಕೊಂಡು ಬೇರೆ ಯಾವ ಸ್ಥಳದಲ್ಲಿ ಇಳಿಸಿ ಬಂದರೂ ಅವನಿಗೆ ಎಚ್ಚರ ಆಗುತ್ತಲೇ ಇರಲಿಲ್ಲ. ಈ ರೀತಿ ಅವನಿಗೆ ‘ಕುಂಭಕರ್ಣ’ ಎಂಬ ಹೆಸರು ಚೆನ್ನಾಗಿ ಒಪ್ಪುತ್ತಿತ್ತು.

‘ಅರುಣಾಚಲ’

ಈ ಹುಡುಗ ಸಂತನಾಗುತ್ತಾನೆ ಎಂದು ಯಾರು ತಾನೇ ತಿಳಿದಿದ್ದರು? ಆದರೆ ಮಹತ್ವದ ಘಟನೆಗಳಲ್ಲಿ ಹೆಚ್ಚಿನವು ನಡೆಯುವುದೇ ಆಕಸ್ಮಿಕವಾಗಿ. ವೆಂಕಟರಮಣ ರಮಣ ಮಹರ್ಷಿ ಆದ. ಅದು ಹೀಗೆ:

ಆಗ ಅವನಿಗೆ ಹದಿನಾರು ವರ್ಷ. ಒಂದು ದಿನ ಸುಬ್ಬಯ್ಯರ್ ಮನೆಗೆ ಅತಿಥಿಗಳೊಬ್ಬರು ಬಂದಿದ್ದರು. “ಎಲ್ಲಿಂದ ಬಂದಿರಿ?” ಎಂದು ಕೇಳಿದ ಪ್ರಶ್ನೆಗೆ ಆ ಅತಿಥಿಗಳು “ಅರುಣಾಚಲದಿಂದ” ಎಂದು ಉತ್ತರಿಸಿದರು. “ಅರುಣಾಚಲ” ಎಂಬ ಆ ಶಬ್ದವೇ ಬಾಲಕ ವೆಂಕಟರಮಣನನ್ನು ಆಕರ್ಷಿಸಿತು. ಆತ ಕುತೂಹಲದಿಂದ, “ಅರುಣಾಚಲದಿಂದ ಬಂದಿರಾ? ಎಲ್ಲಿದೆ ಅದು?” ಎಂದು ಪ್ರಶ್ನಿಸಿದ. ಅವರು “ತಿರುವಣ್ಣಾಮಲೆಯೇ ಅರಣಾಚಲ” ಎಂದರು.

ಹುಡುಗನನ್ನು ಏನೋ ಸೆಳೆಯಿತು. ತಾನೂ ಒಮ್ಮೆ ಅಲ್ಲಿಗೆ ಹೋಗಬೇಕೆಂದು ವೆಂಕಟರಮಣ ಅಂದೇ ನಿರ್ಧರಿಸಿದ. ತಾನು ಓದಿದ ತಮಿಳು ಕಾವ್ಯಗಳಲ್ಲಿ ಒಂದಾದ, ಕುಲೋತ್ತುಂಗನ “ಪೆರಿಯ ಪುರಾಣ”ದಲ್ಲಿನ ಶೈವ ಸಾಧುಸಂತರಿಗೆ ಸಂಬಂಧಿಸಿದ ಕಥೆಗಳೂ ಅವನ ಮೇಲೆ ಪ್ರಭಾವ ಬೀರಿದವು. ಆ ಸಾಧುಗಳ ಉದಾಹರಣೆ ಅವನ ಹೃದಯದಲ್ಲಿ, ಮನಸ್ಸಿನಲ್ಲಿ ಒಂದು ವಿಚಿತ್ರ ಪರಿಣಾಮವನ್ನು ಉಂಟು ಮಾಡಿತು. “ನಾನೂ ಹಾಗೆ ಆಗಲು ಸಾಧ್ಯವಾದರೆ!” ಎಂದು ಆತ ಹಂಬಲಿಸಿದ. ಒಂಟಿಯಾಗಿ, ಮೌನವಾಗಿ ದೇವರ ಧ್ಯಾನ ಮಾಡುವುದನ್ನು ಆತ ಅಂದಿನಿಂದಲೇ ಪ್ರಾರಂಭಿಸಿದ.

‘ದೇಹವೇ ನಾನಲ್ಲ’

೧೮೯೬ನೇ ಇಸವಿಯ ಮಧ್ಯಭಾಗ. ಆಗ ವೆಂಕಟರಮಣನಿಗೆ ಕೇವಲ ಹದಿನೇಳು ವರ್ಷ. ಆತ ಎಂದಿನಂತೆ ಚಿಕ್ಕಪ್ಪನ ಮನೆಯ ಮಹಡಿಯ ಮೇಲೆ ಆಲೋಚಿಸುತ್ತಾ ಕುಳಿತಿದ್ದ. ಅವನ ಆರೋಗ್ಯ ಚೆನ್ನಾಗಿಯ ಇದ್ದಿತ್ತು. ಆದರೂ ಇದ್ದಕ್ಕಿದ್ದಂತೆ ಅವನಿಗೆ ಸಾವಿನ ಭಯ ಉಂಟಾಯಿತು. ತಾನು ಸಾಯುತ್ತಾ ಇದ್ದೇನೆ ಎಂದೇ ಆತ ಭಾವಿಸಿದ. ಈ ಭಾವನೆ ತನ್ನನ್ನು ದುರ್ಬಲಗೊಳಿಸದಂತೆ ತಡೆಯಲು ಪ್ರಯತ್ನಿಸುತ್ತಾ, ಆತ ತಾನು ಏನು ಮಾಡಬೇಕೆಂದು ಆಲೋಚಿಸಲು ಪ್ರಾರಂಭಿಸಿದ. ಆತ ತನ್ನಲ್ಲಿಯೇ ಹೀಗೆ ಹೇಳಿಕೊಂಡ:

“ಈಗ ಸಾವು ಬರುತ್ತಾ ಇದೆ. ನಾನು ಸಾಯುತ್ತಾ ಇದ್ದೇನೆ. ಸಾವು ಎಂದರೆ ಏನು? ಈ ದೇಹ ಹೊರಟು ಹೋಗುತ್ತದೆ.”

ಆಗ ಕೂಡಲೇ ಉಸಿರು ಬಿಗಿಹಿಡಿದುಕೊಂಡು, ತುಟಿಗಳನ್ನೂ ಕಣ್ಣುಗಳನ್ನೂ ಮುಚ್ಚಿಕೊಂಡು, ನಿಶ್ಚಲನಾಗಿ, ಸತ್ತಂತೆ ಮಲಗಿಕೊಂಡು ಹೀಗೆ ಆಲೋಚಿಸಿದ:

“ಈಗ ನನ್ನ ದೇಹ ಸತ್ತಿದೆ. ನಿಶ್ಚಲವಾಗಿ ಬಿದ್ದ ಈ ದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಸುಡುತ್ತಾರೆ. ಆದರೆ ಈ ದೇಹದೊಂದಿಗೆ ನಾನು ನಿಜವಾಗಿ ಸಾಯುತ್ತೇನೆಯೇ? ಈ ದೇಹವಷ್ಟೇ ನಾನೇ? ನನ್ನ ದೇಹ ಈಗ ನಿಶ್ಚಲವಾಗಿದೆ. ಆದರೂ ನನಗೆ ನನ್ನ ಹೆಸರು ತಿಳಿದಿದೆ. ನನ್ನ ತಾಯಿ ತಂದೆ, ಚಿಕ್ಕಪ್ಪ, ಅಣ್ಣ, ತಮ್ಮ, ಸ್ನೇಹಿತರು ಎಲ್ಲರ ನೆನಪೂ ಇದೆ. ಎಂದರೆ ನನಗೆ ನನ್ನ ಪೂರ್ಣ ವ್ಯಕ್ತಿತ್ವದ ತಿಳಿವಳಿಕೆ ಇದೆ. ಹಾಗಿದ್ದರೆ “ನಾನು” ಎಂಬುದು ಕೇವಲ ನನ್ನ ದೇಹವಲ್ಲ; ಸಾವಿಲ್ಲದ ಒಂದು ಚೈತನ್ಯ.”

ಹೀಗೆ ವೆಂಕಟರಮಣನಿಗೆ ಮಿಂಚಿನಂತೆ ಒಂದು ಹೊಸ ಅರಿವು ಮೂಡಿತು. ಅವನ ಆಲೋಚನೆ ಹುಡುಗಾಟಿಕೆಯ ಆಲೋಚನೆಯಾಗಿ ಕಾಣಬಹುದು. ಆದರೆ ಆತ ಆಹಾರ ನಿದ್ರೆಗಳನ್ನು ಬಿಟ್ಟು ದೇಹವನ್ನು ದಣಿಸಿ ಅನೇಕ ವರ್ಷ ತಪಸ್ಸು ಮಾಡಿ ದೇವರನ್ನು ಸಾಕ್ಷಾತ್ಕರಿಸಿಕೊಳ್ಳದೆ ಸಿದ್ಧಿಯನ್ನು ಪಡೆದ ಮಹಾನುಭಾವ. ಸಾವಿನ ಭಯ ಅವನಿಂದ ದೂರವಾಯಿತು. ವೆಂಕಟರಮಣ “ರಮಣ ಮಹರ್ಷಿ” ಆದ.

ಶಾಲೆಯ ಅಭ್ಯಾಸ, ಬಂಧುಗಳು, ಸ್ನೇಹಿತರು ಯಾವುದಕ್ಕೂ ಅವನ ದೃಷ್ಟಿಯಲ್ಲಿ ಮಹತ್ವ ಉಳಿಯಲಿಲ್ಲ. ಯಾವಾಗಲೂ ಅವನಿಗೆ ಅರುಣಾಚಲದ ಕನಸು. ದಿನದ ಬಹುಭಾಗ ಒಂಟಿಯಾಗಿ ಧ್ಯಾನ ಮಾಡುತ್ತಾ ಕುಳಿತಿರುವುದು ಅವನ ದಿನಚರಿಯಾಯಿತು. ತನ್ನ ಪರಿಸರದ ಹೊರಗೆ ಅವನು ಬೆಳೆಯತೊಡಗಿದ. ಸಂಗಾತಿಗಳಿಂದ ತಪ್ಪಿಸಿಕೊಂಡು ಆತ ಒಂಟಿಯಾಗಿ ಎಲ್ಲಾದರೂ ಕುಳಿತಿರುತ್ತಿದ್ದ. ಅವನನ್ನು ಹುಡುಕಿ ಊಟಕ್ಕೆ ಕರೆದುಕೊಂಡು ಬರುವುದು ಅವನ ತಾಯಿಗೆ ಕಷ್ಟವಾಗುತ್ತಿತ್ತು. ವೆಂಕಟರಮಣ ಪ್ರತಿದಿನ ತಪ್ಪದೆ ಮೀನಾಕ್ಷಿ ದೇವಾಲಯಕ್ಕೆ ಹೋಗಿ ಬರುತ್ತಿದ್ದ. ದೇವರು ಮತ್ತು ಸಾಧುಸಂತರ ಬಗ್ಗೆ ಅವನಿಗೆ ಆಸಕ್ತಿ ಹೆಚ್ಚಾಗತೊಡಗಿತು.

ಅವನ ನಡತೆಯಲ್ಲಿ ಆಗುತ್ತಿದ್ದ ಈ ಎಲ್ಲ ಬದಲಾವಣೆಗಳನ್ನು ಅವನ ಅಣ್ಣ ಗಮನಿಸಿದ.

ಹುಡುಗ ಮನೆ ಬಿಟ್ಟ

ಆರು ವಾರಗಳ ತರುವಾಯ ಒಂದು ದಿನ, ೧೮೯೬ರ ಆಗಸ್ಟ್ ೨೯ನೆ ದಿನಾಂಕ.

ಪ್ರಶ್ನೆಗೆ ಸರಿಯಾಗಿ ಉತ್ತರಿಸದೆ ತಪ್ಪಿಗೆ ವೆಂಕಟರಮಣನಿಗೆ ಅವನ ಇಂಗ್ಲಿಷ್ ಶಿಕ್ಷಕ ನಕಲು ತೆಗೆಯುವ ಶಿಕ್ಷೆ ಕೊಟ್ಟ. ವ್ಯಾಕರಣದ ಕೆಲವು ಭಾಗಗಳನ್ನು ಮೂರು ಬಾರಿ ಬರೆಯಬೇಕಿತ್ತು. ವೆಂಕಟರಮಣ ಎರಡು ಬಾರಿ ನಕಲು ತೆಗೆದ. ಅನಂತರ ನಿಲ್ಲಿಸಿದ. ನಕಲು ತೆಗೆಯುವುದರ ನಿರರ್ಥಕತೆಯನ್ನು ಅರಿತ ಆತ ಪುಸ್ತಕವನ್ನೂ ಲೇಖನಿಯನ್ನೂ ಬಿಸುಟು ತರಗತಿಯ ಕೋಣೆಯಲ್ಲಿಯೇ ಧ್ಯಾನಮಗ್ನನಾಗಿ ಕುಳಿತುಬಿಟ್ಟ. ಶಿಕ್ಷಕನೂ ನೋಡಿದ. ಇಂಥ ವಿಚಿತ್ರ ಹುಡುಗನನ್ನು ಏನು ಮಾಡಬೇಕು? ಶಿಕ್ಷಕನೂ ಪೆಚ್ಚಾಗಿ ಕುಳಿತುಬಿಟ್ಟ.

ವೆಂಕಟರಮಣ ಅರುಣಾಚಲಕ್ಕೆ ಹೋಗಬೇಕೆಂದು ನಿರ್ಧರಿಸಿದ. ಈ ನಿರ್ಧಾರವನ್ನು ಮನೆಯವರಿಗೆ ತಿಳಿಸಿದ್ದರೆ ಅವರು ಖಂಡಿತ ಅನುಮತಿ ನೀಡುತ್ತಿರಲಿಲ್ಲ. ಆದ್ದರಿಂದ ಯಾರಿಗೂ ತಿಳಿಸದೆ ಓಡಿಹೋಗುವುದೊಂದೇ ಅವನಿಗುಳಿದ ದಾರಿಯಾಗಿತ್ತು.

ಆತ ಆ ದಿನ ಭೂಪಠದಲ್ಲಿ ನೋಡಿ ತಿರುವಣ್ಣಾಮಲೆಯ ಸಮೀಪವಿರುವ ರೈಲು ನಿಲ್ದಾಣ ಯಾವುದೆಂದು ತಿಳಿದ. ಅಲ್ಲಿಗೆ ಹೋಗಲು ಮೂರು ರೂಪಾಯಿ ಸಾಕಾಗಿತ್ತು. ಆ ದಿನವೇ ಅವನ ಅಣ್ಣ ತಾಯಿಯಿಂದ ಐದು ರೂಪಾಯಿ ಪಡೆದು ತನ್ನ ಕಾಲೇಜ್ ಶುಲ್ಕ ಕಟ್ಟಿ ಬಾ ಎಂದು ವೆಂಕಟರಮಣನ ಹತ್ತಿರ ಕೊಟ್ಟಿದ್ದ. ವೆಂಕಟರಮಣ ತನಗೆ ಆ ಮಧ್ಯಾಹ್ನ ವಿಶೇಷ ತರಗತಿ ಇದೆ ಎಂದು ತಿಳಿಸಿ ಹೊರಟ. ಹೋಗುವ ಮೊದಲು ಅಣ್ಣನಿಗೆ ಒಂದು ಪತ್ರವನ್ನೂ ಬರೆದಿಟ್ಟ. ಅದರಲ್ಲಿ ಆತ ಹೀಗೆ ಬರೆದಿದ್ದ:

” “ತಂದೆ”ಯನ್ನು ಹುಡುಕಲು ಹೊರಟಿದ್ದೇನೆ. ನನ್ನ ಬಗ್ಗೆ ಯಾರೂ ಚಿಂತಿಸಬೇಕಾಗಿಲ್ಲ. ನನ್ನನ್ನು ಹುಡುಕಲಿಕ್ಕೆಂದು ಯಾರೂ ಹಣ ಖರ್ಚು ಮಾಡಬಾರದು; ಪ್ರಯತ್ನಿಸಬಾರದು. ನಿನ್ನ ಕಾಲೇಜ್ ಶುಲ್ಕ ಕಟ್ಟಿಲ್ಲ. ಮೂರು ರೂಪಾಯಿ ತೆಗೆದುಕೊಂಡು ಉಳಿದ ಎರಡು ರೂಪಾಯಿ ಈ ಪತ್ರದ ಜೊತೆಗೆ ಇರಿಸಿದ್ದೇನೆ.”

ವೆಂಕಟರಮಣ ಮನೆ ಬಿಟ್ಟು ಹೊರಟಿದ್ದು ಮಧ್ಯಾಹ್ನದ ಹೊತ್ತು. ಆತ ನೇರವಾಗಿ ರೈಲು ನಿಲ್ದಾಣಕ್ಕೆ ಹೋದ. ಭಾಗ್ಯವಶಾತ್ ಆ ದಿನ ರೈಲು ತಡವಾಗಿ ಬಂದಿತ್ತು. ಇಲ್ಲದಿದ್ದರೆ ಅಂದು ಪ್ರಯಾಣ ಆರಂಭಿಸಲು ಅವನಿಗೆ ಸಾಧ್ಯವಾಗುತ್ತಿರಲಿಲ್ಲ. ಅವನು ಟಿಕೆಟ್ ಕೊಂಡುಕೊಂಡ. ಟಿಕೆಟ್‌ಗೆ ಖರ್ಚು ಕೇವಲ ಎರಡು ರೂಪಾಯಿ ಹದಿಮೂರು ಆಣೆ (ಹಿಂದಿನ ಒಂದು ಆಣೆ ಈಗಿನ ಸುಮಾರು ಅರು ಪೈಸೆಗೆ ಸಮ). ಮತ್ತೂ ಮೂರು ಅಣೆ ಅವನ ಕೈಯಲ್ಲಿ ಉಳಿಯಿತು.

ಪ್ರಯಾಣ

ವೆಂಕಟರಮಣ ರೈಲನ್ನೆರಿ ಒಂದು ಮೂಲೆಯಲ್ಲಿ ಕುಳಿತ. ಯಾರೊಂದಿಗೂ ಮಾತನಾಡುವ ಇಚ್ಛೆಯೇ ಅವನಿಗೆ ಇರಲಿಲ್ಲ. ಆದರೆ ಅವನ ಪಕ್ಕದಲ್ಲಿ ಕುಳಿತ ಒಬ್ಬ ಮೌಲ್ವಿ ಸಾಹೇಬ ತಾನಾಗಿ ಮಾತನ್ನು ಪ್ರಾರಂಭಿಸಿದ. ತಿರುವಣ್ಣಾಮಲೆಯವರೆಗೂ ರೈಲು ಸೌಕರ್ಯವಿದ್ದುದು ಅವನಿಂದಲೇ ವೆಂಕಟರಮಣನಿಗೆ ತಿಳಿಯಿತು. ಆದರೆ ವೆಂಕಟರಮಣ ಆಗಲೇ ಟಿಕೆಟ್ ಪಡೆದಿದ್ದರಿಂದ ಈ ಸಮಾಚಾರದಿಂದ ಅವನಿಗೆ ಯಾವ ಪ್ರಯೋಜನವೂ ಇರಲಿಲ್ಲ. ಹಸಿವಾದುದರಿಂದ ಆತ ಅರ್ಧ ಆಣೆ ಖರ್ಚು ಮಾಡಿ ಕೆಲವು ಹಣ್ಣುಗಳನ್ನು ಕೊಂಡು ತಿಂದ.

ತರಗತಿಯ ಕೋಣೆಯಲ್ಲಿಯೇ ಧ್ಯಾನಮಗ್ನನಾಗಿ ಕುಳಿತುಬಿಟ್ಟ.

ಆತ ವಿಳುಪ್ಪುರಂ ರೈಲು ನಿಲ್ದಾಣಕ್ಕೆ ಮರುದಿನ ಬೆಳಗಿನ ಜಾವ ಬಂದ. ಮುಂದೆ ತಿರುವಣ್ಣಾಮಲೆಯವರೆಗೆ ನಡೆದೇ ಹೋಗುವುದೆಂದು ಆತ ನಿರ್ಧರಿಸಿದ್ದ. ಆತ ತುಂಬ ದಣಿದಿದ್ದ. ಹಸಿವೂ ಆಗಿತ್ತು. ದಾರಿಯಲ್ಲಿ ಸಿಕ್ಕ ಹೋಟೆಲೊಂದಕ್ಕೆ ನುಗ್ಗಿ ಊಟವಿದೆಯೇ ಎಂದು ವಿಚಾರಿಸಿದ. ಊಟ ತಯಾರಾಗಲು ಬಹಳ ಸಮಯವಿದ್ದುದರಿಂದ ಆತ ಸ್ವಲ್ಪ ಹೊತ್ತು ಕಾಯಬೇಕಾಯಿತು. ಊಟ ಮಾಡಿದ ಅನಂತರ ತನ್ನ ಕೈಯಲ್ಲಿದ್ದ ಹಣದಲ್ಲಿ ಆತ ಎರಡಾಣೆ ತೆಗೆದು ಹೋಟೆಲ್ ಮಾಲಿಕನಿಗೆ ಕೊಟ್ಟ. ಹಣವೆಷ್ಟಿದೆ ಎಂದು ಹೋಟೆಲಿನವ ಹುಡುಗನನ್ನು ವಿಚಾರಿಸಿದಾಗ “ಎರಡೂವರೆ ಆಣೆ” ಎಂಬ ಉತ್ತ ಬಂತು. ಅವನಿಗೆ ಈ ಚಿಕ್ಕ ಹುಡುಗನ ಬಗ್ಗೆ ಮರುಕವೆನಿಸಿತೇನೋ. ಹಣವನ್ನು ತೆಗೆದುಕೊಳ್ಳಲೇ ಇಲ್ಲ. ಅಲ್ಲದೆ ಹುಡುಗನ ಕಥೆಯನ್ನು ತಿಳಿದು ತಿರುವಣ್ಣಾಮಲೆಗೆ ರೈಲಿನಲ್ಲೇ ಹೋಗುವುದು ಒಳ್ಳೆಯದೆಂದೂ ಸೂಚಿಸಿದ. ಆದ್ದರಿಂದ ವೆಂಕಟರಮಣ ವಿಳುಪ್ಪುರಂ ನಿಲ್ದಾಣಕ್ಕೆ ಮತ್ತೆ ಹೋದ. ಕೈಯಲ್ಲಿದ್ದ ಹಣ ಮಾಂಬಲಪಟ್ಟು ಎಂಬ ಊರಿನವರೆಗೆ ಪ್ರಯಾಣ ಮಾಡಬಹುದಾಗಿತ್ತು. ಅಲ್ಲಿಗೆ ಟಿಕೆಟ್ ಪಡೆದು ರೈಲನ್ನೇರಿ ಕುಳಿತುಕೊಂಡ. ಮಾಂಬಲಪಟ್ಟು ಬಂದೊಡನೆ ಇಳಿದ. ಕೈಯಲ್ಲಿ ಹಣ ಇಲ್ಲದ್ದರಿಂದ ಮುಂದೆ ಆತ ನಡೆದೇ ಹೋಗಬೇಕಾಗಿತ್ತು. ಆ ದಿನ ಸಂಜೆಯವರೆಗೆ ನಡೆದೇ ನಡೆದ. ಹತ್ತು ಮೈಲಿ ನಡೆದ.

ನಡೆದು, ನಡೆದು, ಹುಡುಗನಿಗೆ ತುಂಬ ಆಯಾಸವಾಗಿತ್ತು ಪಾಪ, ಸಾಯಂಕಾಲದ ಹೊತ್ತಿಗೆ ಆತ ಅರಯಿಣಿಯನಲ್ಲೂರಿಗೆ ಬಂದ. ಅಲ್ಲೊಂದು ಶಿಲಾದೇವಾಲಯ. ಅದರೊಳಗೆ ಹೋಗಿ ಒಂದೆಡೆ ಧ್ಯಾನ ಮಾಡಲು ಕುಳಿತ. ದಿವ್ಯ ಪ್ರಭೆಯೊಂದು ಅವನಿಗೆ ಗೋಚರಿಸಿತು.

ಆತ ಧ್ಯಾನದಲ್ಲಿರುವಾಗ ದೇವಾಲಯದ ಅರ್ಚಕ ಅವನನ್ನು ನೋಡಿದ. ದೇವಾಲಯದ ಬಾಗಿಲಿಗೆ ಬೀಗ ಹಾಕಿ ಹೋಗಬೇಕಾಗಿದ್ದುದರಿಂದ ಆತ ಹುಡುಗನನ್ನು ಧ್ಯಾನ ಸಮಾಧಿಯಿಂದ ಎಚ್ಚರಿಸಿದ. ಆತ ಬೀಗ ಹಾಕಿ ಅಲ್ಲಿಂದ ಮೂರುಮೈಲಿ ದೂರದ ಕೀಳೂರು ಎಂಬಲ್ಲಿರುವ ಮತ್ತೊಂದು ದೇವಾಲಯಕ್ಕೆ ಪೂಜೆ ಮಾಡಲು ಹೋಗಬೇಕಾಗಿತ್ತು. ಅವನ ಜೊತೆ ವೆಂಕಟರಮಣನೂ ಕೀಳೂರಿಗೆ ಹೊರಟ. ಆ ದೇವಾಲಯದಲ್ಲೂ ಮತ್ತೆ ವೆಂಕಟರಮಣ ಧ್ಯಾನಮಗ್ನನಾಗಿ ಕುಳಿತ. ಪೂಜೆ ಮುಗಿದ ತರುವಾಯ ಅರ್ಚಕ ಅವನನ್ನು ಎಚ್ಚಿರಿಸಿ ಆತನನ್ನು ಅಲ್ಲಿನ ಶಾಸ್ತ್ರಿಗಳೊಬ್ಬರ ಮನೆಗೆ ಕರೆದುಕೊಂಡು ಹೋಗಿಬಿಟ್ಟ.

ಆ ಮನೆಗೆ ಹೋಗುತ್ತಲೇ ವೆಂಕಟರಮಣ ಪ್ರಜ್ಞೆತಪ್ಪಿ ಬಿದ್ದುಬಿಟ್ಟ. ಕೆಲವು ಕ್ಷಣಗಳ ಅನಂತರ ಅವನಿಗೆ ಮರಳಿ ಪ್ರಜ್ಞೆ ಬರುವಾಗ ಅವನ ಸುತ್ತ ಜನರ ದೊಡ್ಡ ಗುಂಪೇ ಸೇರಿತ್ತು. ಎಲ್ಲರೂ ಕುತೂಹಲದಿಂದ ಬಾಲಕ ವೆಂಕಟರಮಣನತ್ತ ನೋಡುತ್ತಿದ್ದರು. ವೆಂಕಟರಮಣ ಸ್ವಲ್ಪ ನೀರನ್ನು ಕುಡಿದು ಚೇತರಿಸಿಕೊಂಡ. ಶಾಸ್ತ್ರಿಗಳು ಅವನಿಗೆ ಆಹಾರ ನೀಡಿದರು. ಊಟವಾದ ಆನಂತರ ಆತ ಮಲಗಿ ನಿದ್ರಿಸಿದ.

ಮರುದಿನ ಬೆಳಗ್ಗೆ ಆತ ಎದ್ದ. ಅಂದು ಶ್ರೀಕೃಷ್ಣಾಷ್ಟಮಿಯ ಪರ್ವದಿನ. ವೆಂಕಟರಮಣನಿಗೆ ಪ್ರಯಾಣವನ್ನು ಮುಂದುವರಿಸಬೇಕು ಎಂಬ ತವಕ. ಆದರೆ ಆತನ ಕೈಯಲ್ಲಿ ಹಣವಿರಲಿಲ್ಲ. ಅಲ್ಲದೆ ತುಂಬ ಆಯಾಸವೂ ಆಗಿತ್ತು. ಆದ್ದರಿಂದ ದಾರಿಯಲ್ಲಿ ಸಿಕ್ಕಿದ ಒಂದು ಮನೆಯ ಮುಂದೆ ಆತ ಬಂದು ನಿಂತ.

ಆ ಮನೆಯ ಯಜಮಾನನ ಹೆಸರು ಮುತ್ತುಕೃಷ್ಣ ಭಾಗವತಾರ್ ಎಂದು. ಹಸಿವಾಗಿದ್ದುದರಿಂದ “ಅನ್ನ ನೀಡಿ” ಎಂದು ವೆಂಕಟರಮಣ ಅವರನ್ನು ಕೇಳಿಕೊಂಡ. ಮನೆಯ ಗೃಹಿಣಿ ತುಂಬ ಒಳ್ಳೆಯವಳಾಗಿದ್ದಳು. ಬಾಲಕ ಸನ್ಯಾಸಿಯನ್ನು – ಅದೂ ಕೃಷ್ಣಾಷ್ಟಮಿಯ ಪುಣ್ಯದಿನ ಸತ್ಕರಿಸುವುದು ಅವಳಿಗೆ ತುಂಬ ಸಂತೋಷವನ್ನು ಉಂಟುಮಾಡಿತು. ಮಧ್ಯಾಹ್ನ ವೆಂಕಟರಮಣ ಭಾಗವತರ ಮನೆಯಲ್ಲಿಯೇ ಹಬ್ಬದೂಟವನ್ನು ಮಾಡಿದ.

ಪ್ರಯಾಣವನ್ನು ಮುಂದುವರಿಸಬೇಕು. ವೆಂಕಟರಮಣನ ಕೈಯಲ್ಲಿ ಕಾಸಿಲ್ಲ. ತನ್ನ ಕಿವಿಯಲ್ಲಿದ್ದ ಕುಂಡಲಗಳನ್ನು ತೆಗೆದು ಭಾಗವತರಿಗೆ ಕೊಟ್ಟು ನಾಲ್ಕು ರೂಪಾಯಿ ಕೊಡಬೇಕೆಂದು ಪ್ರಾರ್ಥಿಸಿದ. ಭಾಗವತರು ಅವುಗಳನ್ನು ಪರೀಕ್ಷಿಸಿದರು. ಆ ಆಭರಣಗಳು ಕಡಮೆಯೆಂದರೂ ಇಪ್ಪತ್ತು ರೂಪಾಯಿಗಳಷ್ಟು ಬೆಲೆಬಾಳುತ್ತಿದ್ದವು. ಆದ್ದರಿಂದ ನಾಲ್ಕು ರೂಪಾಯಿಗಳನ್ನು ಅವನಿಗೆ ಕೊಟ್ಟು, ಒಂದು ಕಾಗದದಲ್ಲಿ ತಮ್ಮ ವಿಳಾಸವನ್ನು ಬರೆದುಕೊಟ್ಟು “ಯಾವಾಗ ಬೇಕಾದರೂ ಇಲ್ಲಿಗೆ ಬಾ. ನಿನ್ನ ಕುಂಡಲಗಳನ್ನು ತೆಗೆದುಕೊಂಡು ಹೋಗು” ಎಂದು ಹೇಳಿದರು. ಹುಡುಗ ಹೊರಡುವಾಗ ಮನೆಯ ಗೃಹಿಣಿ ಹಬ್ಬಕ್ಕೆ ಮಾಡಿದ ಸಿಹಿತಿಂಡಿಗಳನ್ನು ಅವನಿಗೆ ಕಟ್ಟಿಕೊಟ್ಟಳು.

ವೆಂಕಟರಮಣ ಅಲ್ಲಿಂದ ಮುಂದೆ ಸಾಗಿದ. ಮನೆಯ ಯಜಮಾನರ ವಿಳಾಸ ಬರೆದಿದ್ದ ಕಾಗದವನ್ನು ಹರಿದು ಗಾಳಿಯಲ್ಲಿ ಎಸೆದ. ಏಕೆಂದರೆ ಅವನಿಗೆ ತನ್ನ ಕಿವಿಯ ಕುಂಡಲಗಳನ್ನು ಮರಳಿ ಪಡೆಯುವ ಆಲೋಚನೆಯೇ ಇರಲಿಲ್ಲ.

ಹಡಗು ಬಂದರನ್ನು ಸೇರಿತು

ಮರುದಿನ ಆತ ತಿರುವಣ್ಣಾಮಲೆಯನ್ನು ಸೇರಿದ. ಅವನಿಗೆ ಆಗ ಬಹಳ ಸಂತೋಷವಾಗಿತ್ತು. ಆಗ ಉತ್ಸಾಹದಿಂದ ಅರುಣಾಚಲೇಶ್ವರ ದೇವಾಲಯದತ್ತ ಓಡಿದ. ಎಲ್ಲ ಬಾಗಿಲುಗಳೂ ತೆರೆದಿದ್ದವು. ದೇವಾಲಯದಲ್ಲಿ ಯಾರೂ ಇರಲಿಲ್ಲ. ಆತ ತುಂಬ ಸಂತೋಷದಿಂದ ತಂದೆ ಅರುಣಾಚಲೇಶ್ವರ ಮುಂದೆ ಬಂದು ನಿಂತ.

ಹೀಗೆ ಅವನ ದೀರ್ಘ ಪ್ರಯಾಣ ಕೊನೆಗೊಂಡಿತು. ಹಡಗು ಸುರಕ್ಷಿತವಾಗಿ ಬಂದರನ್ನು ಸೇರಿದಂತಾಯಿತು. ವೆಂಕಟರಮಣ ಸನ್ಯಾಸಿಯಾದ. ತನ್ನ ಕೈಯಲ್ಲಿ ಉಳಿದ ಹಣವನ್ನೂ ಭಾಗವತರ ಹೆಂಡತಿ ಕಟ್ಟಿಕೊಟ್ಟ ಸಿಹಿತಿಂಡಿಗಳನ್ನೂ ಆತ ದೇವಾಲಯದ ಸರೋವರಕ್ಕೆ ಎಸೆದುಬಿಟ್ಟ. ಸತ್ತುಹೋಗುವ ತನ್ನ ದೇಹಕ್ಕೆ ಸ್ನಾನದ ಆಡಂಬರವೇಕೆ ಎಂದು ಅನಿಸಿದ್ದರಿಂದ ಆತ ಸ್ನಾನವನ್ನೂ ಮಾಡಲಿಲ್ಲ. ದೇವಾಲಯದಲ್ಲಿಯೇ ನೆಲೆಯೂರಿದ.

ಆದರೆ ಆತನಿಗೆ ಯಾವಾಗಲೂ ತುಂಟ ಹುಡುಗರು ಉಪಟಳ ಕೊಡುತ್ತಿದ್ದರು. ಆತ ಧ್ಯಾನ ಮಾಡುತ್ತಾ ಇರುವಾಗ ಅವನತ್ತ ಕಲ್ಲುಗಳನ್ನು ಹೊಡೆಯುತ್ತಿದ್ದರು. ಆದ್ದರಿಂದ ವೆಂಕಟರಮಣ ದೇವಾಲಯದ ನೆಲಮಾಳಿಗೆಗೆ ತನ್ನ ಸ್ಥಳವನ್ನು ಬದಲಾಯಿಸಿದ. ಆ ನೆಲಮಾಳಿಗೆಗೆ ಪಾತಾಳಲಿಂಗವೆಂಬ ಹೆಸರಿತ್ತು. ಅಲ್ಲಿ ತುಂಟ ಹುಡುಗರ ತಂಟೆಯಿಲ್ಲದೆ ಕೆಲವು ದಿನ ವೆಂಕಟರಮಣ ಧ್ಯಾನ ಮಾಡಿದ. ಆದರೆ ತುಂಟ ಹುಡುಗರು ಆ ಸ್ಥಳವನ್ನೂ ಪತ್ತೆ ಮಾಡಿಬಿಟ್ಟರು.

ಅರುಣಾಚಲೇಶ್ವರ ದೇವಾಲಯದಲ್ಲಿ ಶೇಷಾದ್ರಿ ಎಂಬ ಹಿರಿಯ ಸನ್ಯಾಸಿಯೊಬ್ಬ ಇದ್ದ. ಆತ ಹುಚ್ಚ ಎಂದೇ ಹಲವರು ಭಾವಿಸಿದ್ದರು. ಶೇಷಾದ್ರಿ ಹುಡುಗರು ವೆಂಕಟರಮಣನಿಗೆ ತೊಂದರೆ ಕೊಡದಂತೆ ನೋಡಿಕೊಂಡನಲ್ಲದೆ ತರುಣ ಸನ್ಯಾಸಿಯ ಆಹಾರದ ಹೊಣೆಯನ್ನೂ ಹೊತ್ತ.

ತರುಣ ಸನ್ಯಾಸಿಯ ತಪಸ್ಸು ಜನರನ್ನು ಆಕರ್ಷಿಸತೊಡಗಿತು. ಊರ ಜನರೇ ಅವನ ಯೋಗಕ್ಷೇಮದ ಹೊಣೆಯನ್ನು ಹೊತ್ತುಕೊಂಡರು. ಆದರೆ ಆತ ಸಾಮಾನ್ಯವಾಗಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಹಾಗೆಂದು ಆತ ಮೌನವ್ರತದ ಪ್ರತಿಜ್ಞೆಯನ್ನೂ ಮಾಡಿರಲಿಲ್ಲ. ಆತನಿಗೆ ಮಾತನಾಡುವ ಇಚ್ಛೆಯೇ ಇರಲಿಲ್ಲ ಅಷ್ಟೇ. ಆದ್ದರಿಂದ ಮಾತನಾಡಬೇಕಾಗಿ ಬಂದಾಗ ಮಾತ್ರ ಬೇಕಾದಷ್ಟೇ ಮಾತನಾಡುತ್ತಿದ್ದ.

"ಕ್ಷಮಿಸುವುದೇ ನಿಜವಾದ ಮಾನವೀಯತೆ"

ಬೃಂದಾವನ

ಆರು ತಿಂಗಳು ಕಳೆದಿರಬಹುದು. ತಂಬಿರಂಗಸ್ವಾಮಿ ಎಂಬ ಸಭ್ಯ ಗೃಹಸ್ಥರೊಬ್ಬರು ತಮ್ಮ ಮನೆಗೆ ಬರುವಂತೆ ತರುಣ ಸನ್ಯಾಸಿಯನ್ನು ಕೇಳಿಕೊಂಡರು. ವೆಂಕಟರಮಣ ಒಪ್ಪಿದ. ಅವರು ತಮ್ಮ ಮನೆಯ ತೋಟವಾದ “ಬೃಂದಾವನ”ದಲ್ಲಿ ಅವನ ಧ್ಯಾನಕ್ಕೆ ಅವಶ್ಯಕವಾದ ವ್ಯವಸ್ಥೆ ಮಾಡಿಕೊಟ್ಟರು. ಅಲ್ಲಿ ಅವನ ತಪಸ್ಸು ನಿರ್ವಿಘ್ನವಾಗಿ ಮುಂದುವರಿಯಿತು. ಏಕಾಂತ ಧ್ಯಾನ, ತಪಸ್ಸುಗಳಿಂದ ಅವನಲ್ಲಿ ಹೊಸ ಜ್ಞಾನ ಉದಯಿಸಿತು. ದೇವರು ಎಂದರೆ ಯಾರು? ಮನುಷ್ಯನ ಆತ್ಮ ಎಂದರೆ ಏನು? ಆತ್ಮನಿಗೂ ಪರಮಾತ್ಮನಿಗೂ ಏನು ಸಂಬಂಧ? ಮನುಷ್ಯ ಸತ್ತ ಮೇಲೆ ಅವನ ಆತ್ಮ ಏನಾಗುತ್ತದೆ? ದೇಹದಂತೆ ಆತ್ಮಕ್ಕೂ ಸಾವು ಉಂಟೇ ಅಥವಾ ಅದು ಶಾಶ್ವತವೇ? ಹೀಗೆ ಪ್ರಶ್ನೆಗಳು ಅವನನ್ನು ಕಾಡುತ್ತಿದ್ದವು. ಈಗ ಪ್ರಶ್ನೆಗಳಿಗೆ ಉತ್ತರಗಳು ಹೊಳೆದವು.

ಈ ತಿಳಿವಳಿಕೆಯನ್ನು ಪಡೆದ ಅನಂತರ ವೆಂಕಟರಮಣರು ತಮ್ಮ ಧ್ಯಾನಸಮಾಧಿಯಿಂದ ಎಚ್ಚೆತ್ತರು. ಅವರು ಜನರ ಕಷ್ಟಗಳಿಗೆ, ಸಮಸ್ಯೆಗಳಿಗೆ ಸಮಾಧಾನದಿಂದ ಪರಿಹಾರ ಸೂಚಿಸಿ, ಅವರ ಸಂಕಟಗಳನ್ನು ದೂರಮಾಡುವುದಕ್ಕೆ ತಮ್ಮ ಗಮನವನ್ನು ಹರಿಸಲು ನಿರ್ಧರಿಸಿದರು. ಅವನ ಖ್ಯಾತಿ ಹಬ್ಬಿತು. ಅವರನ್ನು ನೋಡಲು ಬರುವ ಸಂದರ್ಶಕರ ಸಂಖ್ಯೆ ಹೆಚ್ಚಾಯಿತು. ಅರುಣಾಚಲ ಕ್ಷೇತ್ರಕ್ಕೆ ಬಂದ ಎಲ್ಲ ಯಾತ್ರಿಕರೂ ಅವರನ್ನು ತಪ್ಪದೆ ಸಂದರ್ಶಿಸತೊಡಗಿದರು.

ತಂಬಿರಂಗಸ್ವಾಮಿಗಳ ಮನೆಯ ಸಮೀಪದಲ್ಲಿಯೇ ಒಂದು ದೊಡ್ಡ ಮಾವಿನ ತೋಪು ಇತ್ತು. ವೆಂಕಟರಮಣರು ಅಲ್ಲಿ ತಮ್ಮ ವಸತಿಯನ್ನು ಸ್ಥಾಪಿಸುವ ನಿರ್ಧಾರ ಮಾಡಿದರು.

ಮತ್ತೆ ತಾಯಿಯ ಭೇಟಿ

ವೆಂಕಟರಮಣ ಅರುಣಾಚಲದಲ್ಲಿ ತಪಸ್ಸು ಮಾಡಿ ಸನ್ಯಾಸಿಯಾಗಿದ್ದಾನೆ ಎಂಬ ವಿಚಾರ ಅವರ ಚಿಕ್ಕಪ್ಪಂದಿರಲ್ಲಿ ಒಬ್ಬರಾದ ನೆಲ್ಲಿಯಪ್ಪ ಅಯ್ಯರ್‌ಗೆ ಹೇಗೋ ತಿಳಿಯಿತು. ಮಗನು ಎಲ್ಲಿದ್ದಾನೆ ಎಂದು ತಿಳಿದ ಅಳಗಮ್ಮಾಳ್ ಅವನನ್ನು ಮನೆಗೆ ಕರೆದುತರುವಂತೆ ಅಯ್ಯರ‍್ಗೆ ತಿಳಿಸಿದಳು. ಆತ ಅರುಣಾಚಲಕ್ಕೆ ಬಂದ. ಆದರೇನು? ಹುಡುಗನನ್ನು ಮನೆಗೆ ಹಿಂದಕ್ಕೆ ಕರೆದುಕೊಂಡು ಹೋಗಬೇಕೆಂದು ಆತ ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾದವು. ನಿರಾಶೆಯಿಂದ ಊರಿಗೆ ಮರಳಿದ ಆತ ಅಳಗಮ್ಮಾಳ್‌ಗೆ ವಿಷಯವನ್ನು ತಿಳಿಸಿದ.

ಆಗ ಅಳಗಮ್ಮಾಳ್‌ತಿರುವಣ್ಣಾಮಲೆಗೆ ಧಾವಿಸಿದಳು. ಅವಳ ಜೊತೆಯಲ್ಲಿ ಅವಳ ಹಿರಿಯ ಮಗನೂ ಬಂದ. ತಾಯಿಯನ್ನು ಗುರುತಿಸಿದರೂ ವೆಂಕಟರಮಣರು ಮಾತನಾಡಲೇ ಇಲ್ಲ. ತಾಯಿ ಅತ್ತಳು. ಗೋಳಾಡಿದಳು. ಆದರೂ ವೆಂಕಟರಮಣರು ಮೌನವಾಗಿಯೇ ಇದ್ದರು. ತಾಯಿಯ ಪ್ರಲಾಪ ಮತ್ತು ಮಗನ ದೃಢಮನಸ್ಸು ಇವುಗಳನ್ನು ಬಹಳ ಸಮಯದಿಂದ ಯಾತ್ರಿಕರೊಬ್ಬರು ಗಮನಿಸುತ್ತಿದ್ದರು. ಅವರಿಗೆ ತಾಯಿಯ ವಿಷಯ ಮರುಕವಾಯಿತು. ಹೇಳಬೇಕಾದುದನ್ನು ಕನಿಷ್ಠ ಪಕ್ಷ ಒಂದು ಕಾಗದದ ಮೇಲೆ ಬರೆದಾದರೂ ತಿಳಿಸಬೇಕೆಂದು ತಾಯಿಯ ಪರವಾಗಿ ಮಗನನ್ನು ಪ್ರಾರ್ಥಿಸಿದರು. ಆಗ ವೆಂಕಟರಮಣರು ಹೀಗೆ ಬರೆದರು:

“ತಮ್ಮ ತಮ್ಮ ಪೂರ್ವಜನ್ಮದ ಪ್ರಾರಬ್ಧ ಕರ್ಮಗಳಿಗೆ ಅನುಸಾರವಾಗಿ ಪ್ರತಿಯೊಬ್ಬನೂ ಕೆಲಸ ಮಾಡಲೇ ಬೇಕಾಗುತ್ತದೆ. ಏನು ನಡೆಯಲಾರದೋ ಅದು, ಯಾರು ಎಷ್ಟೇ ಪ್ರಯತ್ನಿಸಿದರೂ ನಡೆಯುವುದೇ ಇಲ್ಲ. ಹಾಗೆಯೇ ಏನು ನಡೆಯಬೇಕೋ ಅದು, ಯಾರು ಎಷ್ಟೇ ವಿರೋಧಿಸಿದರೂ ನಡೆದೇ ನಡೆಯುತ್ತದೆ. ಆದ್ದರಿಂದ ಯಾವ ಆಸೆಯೂ ಇಲ್ಲದೆ ತಮ್ಮ ತಮ್ಮ ಕರ್ತವ್ಯ ನಡೆಸುವುದಷ್ಟೇ ಇರುವ ಏಕೈಕ ಮಾರ್ಗ.”

ನಿರಾಶಳಾಗಿ, ಭಾರವಾದ ಹೃದಯದಿಂದ ಅಳಗಮ್ಮಾಳ್ ಹಿಂದಿರುಗಬೇಕಾಯಿತು.

ಬೆಳೆದ ಪರಿವಾರ

ಅನಂತರ ವೆಂಕಟರಮಣರು ಮಾವಿನ ತೋಪನ್ನು ಬಿಟ್ಟು ಅರುಣಾಚಲ ಬೆಟ್ಟಕ್ಕೆ ತೆರಳಿ ಅಲ್ಲಿ ತಮ್ಮ ಧ್ಯಾನವನ್ನು ಅರಂಭಿಸಿದರು. ಅಲ್ಲಿರುವ ವಿರೂಪಾಕ್ಷ ಗುಡಿಯಲ್ಲಿ ಅವರು ನೆಲೆಸಿದರು. ಸಂದರ್ಶಕರು ಅಲ್ಲಿಗು ಗುಂಪು ಗುಂಪಾಗಿ ಬರತೊಡಗಿದರು. ಅವರಲ್ಲಿ ಬಹು ಮಂದಿ ಈ ಲೋಕದ ಕಷ್ಟಸಂಕಟಗಳಿಂದ ನೊಂದು ಶಾಂತಿಯನ್ನು ಹುಡುಕುತ್ತಿರುವವರು. ಇನ್ನು ಕೆಲವರು ಆತ್ಮ ಪರಮಾತ್ಮನನ್ನು ಕುರಿತು ಹೆಚ್ಚು ಜ್ಞಾನವನ್ನು ಸಂಪಾದಿಸುವ ಆಕಾಂಕ್ಷೆಯುಳ್ಳವರು. ಹೀಗೆ ಒಬ್ಬೊಬ್ಬರಿಗೂ ಒಂದೊಂದು ಸಮಸ್ಯೆ ಇರುತ್ತಿತ್ತು. ಎಲ್ಲರ ಎಲ್ಲ ಸಮಸ್ಯೆಗಳಿಗೂ ವೆಂಕಟರಮಣರಿಂದ ಸೂಕ್ತವಾದ ಪರಿಹಾರ ದೊರೆಯುತ್ತಿತ್ತು. ಹೀಗಾಗಿ ಅವರ ಸಂದರ್ಶಕರ ಸಂಖ್ಯೆ ದಿನೇ ದಿನೇ ಹೆಚ್ಚತೊಡಗಿತು.

ಪ್ರತಿದಿನ ರಮಣರನ್ನು ಸಂದರ್ಶಿಸುವವರಲ್ಲಿ ಎಚ್ಚಮ್ಮಾಳ್ ಎಂಬವಳೂ ಒಬ್ಬಳು. ಆಕೆ ತನ್ನ ಗಂಡ, ಮಕ್ಕಳು ಎಲ್ಲರನ್ನೂ ಕಳೆದುಕೊಂಡು ದುಃಖಿಯಾಗಿದ್ದಳು. ಯಾರೋ ಒಬ್ಬರು ಆಕೆಗೆ ರಮಣರನ್ನು ಕಾಣುವಂತೆ ಸೂಚಿಸಿದ್ದರು. ರಮಣರ ಸಮಕ್ಷಮದಲ್ಲಿ ಆಕೆಗೆ ತನ್ನೆಲ್ಲ ದುಃಖ ಮರೆತುಹೋಗಿ ನೆಮ್ಮದಿ ಸಿಗುತ್ತಾ ಇತ್ತು. ಆಕೆ ರಮಣರಿಗೆ ಕಾಲಕಾಲಕ್ಕೆ ಅಹಾರ ನೀಡುವ ಹೊಣೆಯನ್ನು ತಾನೇ ಹೊತ್ತುಕೊಂಡಳು. ನಿದ್ರೆ, ಆಹಾರ ಯಾವುದರ ಪರಿವೆಯೂ ಇಲ್ಲದೆ ರಮಣರ ಯೋಗಕ್ಷೇಮದ ಸಂಪೂರ್ಣ ಹೊಣೆಯನ್ನೂ ಎಚ್ಚಮ್ಮಾಳ್ ವಹಿಸಿಕೊಂಡಳು.

೧೯೦೭ರಲ್ಲಿ ಒಬ್ಬ ಸಂಸ್ಕೃತ ವಿದ್ವಾಂಸರು ತಿರುವಣ್ಣಾಮಲೆಗೆ ಬಂದರು. ಅವರ ಹೆಸರು ಗಣಪತಿ ಶಾಸ್ತ್ರಿ. ಆತ ಗಣಪತಿ ಮುನಿ ಎಂಬ ಹೆಸರಿನಿಂದ ಪ್ರಖ್ಯಾತರಾಗಿದ್ದರು. ಆತ ದೇವಿಯ ಆರಾಧಕರಾಗಿದ್ದರು. ತರುಣ ಸನ್ಯಾಸಿಯ ವ್ಯಕ್ತಿತ್ವದಿಂದ ಆಕರ್ಷಿತರಾದ ಆತ ಅವರನ್ನು ನೋಡಲು ಬಂದರು. ಮೊದಲ ಬಾರಿ ಆತ ರಮಣರನ್ನು ಕಂಡಾಗ, ರಮಣರು ಸೂರ್ಯನನ್ನೇ ದೃಷ್ಟಿಸುತ್ತ ಕುಳಿತಿದ್ದರಂತೆ. ಮಧ್ಯಾಹ್ನದ ಉರಿಬಿಸಿಲಿನಲ್ಲಿ ಸೂರ್ಯ ಮುಳುಗುವವರೆಗೆ ದಿಟ್ಟಿಸಿ ನೋಡುವುದು ರಮಣರಿಗೆ ಸಾಮಾನ್ಯವಾದ ಸಂಗತಿ. ಗಣಪತಿ ಮುನಿ ಬಹಳ ದಿನ ಅಲ್ಲಿಯೇ ಉಳಿದು ಅವರೊಂದಿಗೆ ವಿಚಾರ ವಿನಿಮಯ ನಡೆಸಿ ತಮ್ಮ ಅನೇಕ ಸಂದೇಹಗಳಿಗೆ ಸಮಾಧಾನ ಪಡೆದರು. ಎಲ್ಲ ವೇದಾಂತ, ಉಪನಿಷತ್ತುಗಳನ್ನು ಕುರಿತು ಅಭ್ಯಾಸ ಮಾಡಿದ್ದರೂ ಅವರಿಗೆ ಆವರೆಗೆ ತಪ್ಪಸ್ಸುಎಂದರೆ ಏನು ಎಂದು ಸ್ಪಷ್ಟವಾಗಿ ತಿಳಿದಿರಲಿಲ್ಲ. ತಪಸ್ಸು ಎಂದರೆ ಏನು ಎಂದು ರಮಣರು ಕೊಟ್ಟ ಸರಳ ವಿವರಣೆಯಿಂದ ಗಣಪತಿ ಮುನಿಗೆ ತಮ್ಮ ದೊಡ್ಡ ಸಂದೇಹವೊಂದು ಪರಿಹಾರವಾದಂತಾಯಿತು. ಅವರೇ ತರುಣ ಸನ್ಯಾಸಿಗೆ “ಮಹರ್ಷಿ” ಅಥವಾ “ಭಗವಾನ್” ಎಂಬ ಹಸರನ್ನು ಕೊಟ್ಟರು. ಇಷ್ಟೇ ಅಲ್ಲ, ಆತ ರಮಣ ಮಹರ್ಷಿಗಳನ್ನು ಸ್ತುತಿಸಿ ಸಂಸ್ಕೃತದಲ್ಲಿ ಅನೇಕ ಸ್ತಿತಿಗೀತೆಗಳನ್ನೂ, ಅವರ ಉಪದೇಶಗಳಿಗೆ ಸಂಬಂಧಿಸಿದಂತೆ “ರಮಣಗೀತಾ” ಎಂಬ ಒಂದು ಗ್ರಂಥವನ್ನೂ ಬರೆದರು.

ತಾಯಿ – ತಮ್ಮ

ತನ್ನ ಹಿರಿಯ ಮಗನನ್ನು ಕಳೆದುಕೊಂಡ ಆನಂತರ ಅಳಗಮ್ಮಾಳ್ ಕಿರಿಯ ಮಗನಾದ ನಾಗಸುಂದರಮ್ ಜೊತೆ ತಿರುವಣ್ಣಾಮಲೆಗೆ ಬಂದಳು. ಅಲ್ಲಿ ಆಕೆ ಕಾಯಿಲೆ ಬಿದ್ದಳು. ಅನೇಕ ವಾರಗಳ ಕಾಲ ವಿಷಮ ಶೀತಜ್ವರದಿಂದ ಆಕೆ ನರಳಿದಳು. ರಮಣ ಮಹರ್ಷಿಗಳು ತಮ್ಮ ಧ್ಯಾನವನ್ನೆಲ್ಲ ಬದಿಗೆ ಸರಿಸಿ, ಶ್ರದ್ಧೆಯಿಂದ ತಾಯಿಯ ಆರೈಕೆಯನ್ನು ಮಾಡಿದರು. ತಮ್ಮ ತಾಯಿಯು ಗುಣಮುಖಳಾಗುವಂತೆ ಅರುಣಾಚಲೇಶ್ವರನನ್ನು ಪ್ರಾರ್ಥಿಸಿ ಅವರು ಅನೇಕ ಪ್ರಾರ್ಥನಾ ಗೀತೆಗಳನ್ನು ರಚಿಸಿದರು. ಆ ಗೀತೆಗಳಲ್ಲಿ ಒಂದರ ಭಾವಾರ್ಥ ಹೀಗಿದೆ:

“ಓ ತಂದೆಯೇ, ತನಗೆ ನಿನ್ನ ಪಾದವೇ ಗತಿ ಎಂದು ದೃಢವಾಗಿ ನಂಬಿದ ನನ್ನ ತಾಯಿಯನ್ನು ಕಾಪಾಡುವುದು ನಿನ್ನ ಕರ್ತವ್ಯವಾಗಿದೆ.”

ಗುಣಮುಖಳಾದ ಅನಂತರ ಅಳಗಮ್ಮಾಳ್ ಮತ್ತು ನಾಗಸುಂದರಮ್‌ತಿರುವಣ್ಣಾಮಲೆಯಲ್ಲಿ ರಮಣ ಮಹರ್ಷಿಗಳ ಜೊತೆಯಲ್ಲಿಯೇ ನೆಲೆಸಿದರು. ಅಳಗಮ್ಮಾಳ್ ಆಶ್ರಮದ ಅಡುಗೆಮನೆಯ ಹೊಣೆ ವಹಿಸಿಕೊಂಡಳು. ನಾಗಸುಂದರಮ್‌ಸಹ ಸನ್ಯಾಸ ಸ್ವೀಕರಿಸಿ, ನಿರಂಜನಾನಂದ ಎಂಬ ಹೆಸರನ್ನು ಇಟ್ಟುಕೊಂಡ. ಆಶ್ರಮವಾಸಿಗಳು ಅವನನ್ನು ‘ಚಿನ್ನಸ್ವಾಮಿ’ (ಚಿಕ್ಕಸ್ವಾಮಿ) ಎಂದು ಕರೆಯ ತೊಡಗಿದರು. ೧೯೨೨ರ ಮೇ ತಿಂಗಳಲ್ಲಿ ರಮಣ ಮಹರ್ಷಿಗಳ ತಾಯಿ ಕಾಲವಾದಳು.

ಆಶ್ರಮ

ರಮಣ ಮಹರ್ಷಿಗಳ ಆಶ್ರಮ ಆ ಗುಡ್ಡದ ಮೇಲೆ ನಿರ್ಮಾಣಗೊಂಡಿತು. ಅವರಲ್ಲಿ ಶ್ರದ್ಧೆ ಹಾಗೂ ಭಕ್ತಿಯನ್ನಿಟ್ಟು ಅವರೊಂದಿಗೆ ಇರಲು ಬಂದ ಶಿಷ್ಯರ ಪರಿಶ್ರಮದ ಫಲವೇ ರಮಣಾಶ್ರಮ. ನಿರಂಜನಾನಂದರು ಆಶ್ರಮವಾಸಿಗಳಿಗೆಲ್ಲ ತುಂಬ ಮೆಚ್ಚಿನವರಾಗಿದ್ದರು. ಬರಬರುತ್ತಾ ಆಶ್ರಮವಾಸಿಗಳ ಸಂಖ್ಯೆ ಹೆಚ್ಚಾಗತೊಡಗಿತು. ಆ ಗುಡ್ಡದಲ್ಲಿ ಒಂದು ದೇವಾಲಯವೂ ಸ್ಥಾಪನೆಯಾಯಿತು. ಆಶ್ರಮ ವೇಗವಾಗಿ ಪ್ರಗತಿ ಸಾಧಿಸಿತು. ಭಾರತದ ಜನ ಮಾತ್ರವೇ ಅಲ್ಲ, ಎಲ್ಲ ದೇಶಗಳ ಜನರೂ ರಮಣಾಶ್ರಮಕ್ಕೆ ಬಂದು ಹೋಗತೊಡಗಿದರು. ತಮ್ಮ ಆಧ್ಯಾತ್ಮಿಕ ಜೀವನದಲ್ಲಿ ರಮಣ ಮಹರ್ಷಿಗಳ ಉಪದೇಶವನ್ನೂ ನೆರವನ್ನೂ ಬಯಸುವ ಶಿಷ್ಯರ ಸಂಖ್ಯೆ ದಿನದಿನಕ್ಕೆ ಬೆಳೆಯಿತು.

ರಮಣ ಮಹರ್ಷಿಗಳ ಪ್ರಥಮ ಪಾಶ್ಚಾತ್ಯ ಶಿಷ್ಯ ಎಫ್‌.ಎಚ್‌.ಹಂಫ್ರಿ. ಆತ ೧೯೧೧ರಲ್ಲಿ ಭಾರತಕ್ಕೆ ಭೇಟಿ ನೀಡಿದ. ಮದರಾಸಿನ ವೆಲ್ಲೂರಿನ ಪೋಲೀಸ್ ವಿಭಾಗದ ಉಚ್ಚ ಹುದ್ದೆಯೊಂದನ್ನು ವಹಿಸಿಕೊಳ್ಳಲು ಆತ ಭಾರತಕ್ಕೆ ಬಂದಿದ್ದ. ಹಂಫ್ರಿಗೆ ಹಿಂದು ಧರ್ಮದ ತತ್ವಗಳನ್ನು ತಿಳಿಯುವ ಆಸೆಯಿದ್ದಿತು. ಅವನನ್ನು ರಮಣ ಮಹರ್ಷಿಗಳಲ್ಲಿಗೆ ಹೋಗುವಂತೆ ಗಣಪತಿ ಮುನಿ ನಿರ್ದೇಶಿಸಿದರು. ರಮಣ ಮಹರ್ಷಿಗಳ ಸಂದರ್ಶನ ಮತ್ತು ಅವರೊಂದಿಗೆ ನಡೆಸಿದ ಮಾತುಕತೆಗಳಿಂದ ಹಂಫ್ರಿಯ ಸಮಸ್ಯೆಗಳೆಲ್ಲ ದೂರವಾಗಿ ಅವನ ಮನಸ್ಸಿಗೆ ಸಮಾಧಾನ ದೊರಕಿತು. ಆತ ಭಾರತದಲ್ಲಿ ಇರುವಷ್ಟು ಕಾಲವೂ ರಮಣ ಮಹರ್ಷಿಗಳನ್ನು ಆಗಾಗ ಭೇಟಿಯಾಗುತ್ತಿದ್ದ. ಅವರೊಂದಿಗೆ ವಿಚಾರ ವಿನಿಮಯ ನಡೆಸುತ್ತಿದ್ದ. ಆತ ರಮಣ ಮಹರ್ಷಿಗಳನ್ನೂ ರಮಣಾಶ್ರಮವನ್ನೂ ಆಶ್ರಮದಲ್ಲಿ ತಾನು ಪಡೆದ ಅನುಭವಗಳನ್ನೂ ಕುರಿತು ಅನೇಕ ಲೇಖನಗಳನ್ನು ಇಂಗ್ಲಿಷ್‌ನಲ್ಲಿ ಬರೆದು, “ಇಂಟರ್ ನ್ಯಾಷನಲ್ ಸೈಕಿಕ್‌ಗೆಜೆಟ್” ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ. ಇದರಿಂದ ರಮಣ ಮಹರ್ಷಿಗಳ ಖ್ಯಾತಿ ಬೇಗನೆ ಜಗತ್ತಿನಲ್ಲೆಲ್ಲ ಹರಡಿತು.

ಒಮ್ಮೆ ಆತ ರಮಣ ಮಹರ್ಷಿಗಳ ವಿಚಾರವಾಗಿ ಹೀಗೆ ಬರೆದಿದ್ದ:

“ರಮಣ ಮಹರ್ಷಿಗಳ ಒಂದು ಮುಗುಳ್ನಗು ಎಷ್ಟು ಸುಂದರವಾಗಿದೆಯೆಂದರೆ ಅದಕ್ಕಿಂತ ಹೆಚ್ಚು ಸುಂದರವಾದುದನ್ನು ಯಾರೂ ಊಹಿಸಲಾರರು. ಅವರ ಸಮಕ್ಷಮದಲ್ಲಿ ಇರುವುದೇ ಒಂದು ಹಿತಕರವಾದ ಸಂತೋಷದಾಯಕವಾದ ಅನುಭವ.”

ಅಲ್ಲಿಯೂ ಕಳ್ಳರು

ರಮಣಾಶ್ರಮಕ್ಕೆ ಜನರು ಹೆಚ್ಚು ಸಂಖ್ಯೆಯಲ್ಲಿ ಬರತೊಡಗಿದರು. ಆದರೆ ಹಾಗೆ ಬರುವವರೆಲ್ಲ ಒಳ್ಳೆಯವರಾಗಿರುತ್ತಿರಲಿಲ್ಲ. ೧೯೨೪ರಲ್ಲಿ ಒಮ್ಮೆ ಒಂದು ಕಳ್ಳರ ಕೂಟವೇ ಶಿಷ್ಯರ ಸೋಗು ಹಾಕಿಕೊಂಡು ರಮಣಾಶ್ರಮಕ್ಕೆ ಬಂದಿತ್ತು. ಆಶ್ರಮದ ಬೆಲೆಬಾಳುವ ವಸ್ತುಗಳೆಲ್ಲ ಲೂಟಿಯಾಗಿದ್ದವು. ಅವರಲ್ಲಿ ಒಬ್ಬ ರಮಣ ಮಹರ್ಷಿಗಳಿಗೇ ಏಟು ಕೊಟ್ಟುಬಿಟ್ಟಿದ್ದ. ಆದರೆ ಆ ಕಳ್ಳ ರಮಣ ಮಹರ್ಷಿಗಳ ಶಿಷ್ಯರ ಕೈಗೆ ಸಿಕ್ಕಿಬಿದ್ದ. ಆತನಿಗೆ ಶಿಕ್ಷೆ ಕೊಡಲು ಶಿಷ್ಯರು ಅವರ ಅನುಮತಿ ಕೇಳಿದಾಗ ರಮಣ ಮಹರ್ಷಿಗಳು ಒಪ್ಪಲೇ ಇಲ್ಲ. ಅವರು, “ಸರ್ಪ ಕಚ್ಚುತ್ತದೆ, ಚೇಳು ಕುಟುಕುತ್ತದೆ ಅಥವಾ ಗೂಳಿ ಹಾಯುತ್ತದೆ ಎಂದು ನಾವು ಅವುಗಳನ್ನು ಸದೆಬಡಿಯುವುದು ನ್ಯಾಯವೇ? ಅವುಗಳಿಂದ ಕಳ್ಳರು ಕದಿಯುವುದು ತಮ್ಮ ಸ್ವಭಾವವೆಂದು ತಿಳಿದುಕೊಂಡಿರುತ್ತಾರೆ. ಆದರೆ ಅವರನ್ನು ಕ್ಷಮಿಸುವುದು ನಮ್ಮ ಧರ್ಮ. ಹಿಂಸೆ ಮಾಡಿದವರಿಗೆ ಪ್ರತಿಹಿಂಸೆ ಮಾಡದೆ ಅವರನ್ನು ಕ್ಷಮಿಸುವುದೇ ನಿಜವಾದ ಮಾನವೀಯತೆ. ನಾವು ಅವನನ್ನು ಬಿಟ್ಟುಬಿಡೋಣ” ಎಂದು ಹೇಳಿದರು. ಅಷ್ಟೇ ಅಲ್ಲ, ಅವರಿಗೆ ಏಟು ಕೊಟ್ಟ ಕಳ್ಳನತ್ತ ತಿರುಗಿ, “ನಿನಗೆ ತೃಪ್ತಿಯಾಗದಿದ್ದರೆ ಇನ್ನೊಂದು ಏಟು ಕೊಡು” ಎಂದು ಹೇಳಿದರು. ಈಗ ಕಳ್ಳನ ಕಣ್ಣುಗಳಲ್ಲಿ ನೀರು ಹನಿದಿತ್ತು. ರಮಣ ಮಹರ್ಷಿಗಳು ಬುದ್ಧಿ ಹೇಳಿ ಅವನನ್ನು ಕಳುಹಿಸಿದರು. ತಪ್ಪು ಮಾಡಿದಾಗ ಕ್ಷಮೆ ಕೇಳುವುದು ಮತ್ತು ತಪ್ಪು ಮಾಡಿದವರಿಗೆ ಕ್ಷಮೆ ನೀಡುವುದು-ಇವೆರಡೂ ರಮಣ ಮಹರ್ಷಿಗಳ ದೃಷ್ಟಿಯಲ್ಲಿ ಹೆಚ್ಚು ಮೌಲ್ಯವುಳ್ಳ ಸದ್ಗುಣಗಳಾಗಿದ್ದವು.

ಕಳ್ಳರು ಹೋದೊಡನೆ ರಮಣ ಮಹರ್ಷಿಗಳು “ನನಗೂ ಅವರು ಪೂಜೆ ಮಾಡಿಯೇ ಬಿಟ್ಟರು” ಎಂದು ಹೇಳಿದರು ತಮಾಷೆಯಾಗಿ.

ಎಲ್ಲ ಜೀವಿಗಳಲ್ಲಿ ಪ್ರೇಮ

ಹೀಗೆ ರಮಣ ಮಹರ್ಷಿಗಳು ತುಂಬ ದಯಾಳುಗಳಾಗಿದ್ದರು. ಇತರರ ಕಷ್ಟಕ್ಕೆ ಅವರು ತುಂಬ ಮರುಗುತ್ತಿದ್ದರು. ಅವರು ದುಃಖಿಗಳಿಗೆ ಸಹಾನುಭೂತಿ ತೋರಿಸುತ್ತಿದ್ದುದರಿಂದ ಪ್ರಥಮ ಭೇಟಿಯಲ್ಲಿಯೇ ಎಲ್ಲರಿಗೂ ಅವರು ಆತ್ಮೀಯರಾಗಿಬಿಡುತ್ತಿದ್ದರು. ಕೇವಲ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಪಕ್ಷಿಗಳೊಂದಿಗೂ ಅವರು ಸ್ನೇಹದಿಂದ ಆತ್ಮೀಯರಾಗಿ ವರ್ತಿಸುತ್ತಿದ್ದರು. ಅವರ ಆಶ್ರಮ ಪುರಾಣಕಾಲದ ಋಷ್ಯಾಶ್ರಮಗಳನ್ನು ನೆನಪಿಗೆ ತರುತ್ತಿತ್ತು. ಅನೇಕ ಹಸುಗಳೂ ಪಕ್ಷಿಗಳೂ ಕೋತಿಗಳೂ ಅಳಿಲುಗಳೂ ಅವರ ಆಶ್ರಮದಲ್ಲಿದ್ದವು. ಅವುಗಳನ್ನು ಉದ್ದೇಶಿಸುವಾಗಲೂ ಅವರು “ಅವನು”, “ಅವಳು” ಎಂದೇ ಹೇಳುತ್ತಿದ್ದರಲ್ಲದೆ “ಅದು” ಎಂದು ಒಮ್ಮೆಯೂ ಹೇಳುತ್ತಿರಲಿಲ್ಲ. ಆಶ್ರಮದ ನಾಯಿಗಳೂ ದನಗಳೂ ಅಳಿಲಿಗಳೂ ಮಂಗಗಳೂ ತುಂಬ ಚೂಟಿಯಾಗಿದ್ದವು. “ಲಕ್ಷ್ಮೀ” ಎಂಬ ಹಸು ಆಶ್ರಮವಾಸಿಗಳೆಲ್ಲರ ಹೆಚ್ಚಿನ ಮೆಚ್ಚುಗೆಗೆ ಪಾತ್ರವಾಗಿತ್ತು. ಮೃಗಪಕ್ಷಿಗಳಿಗೂ ಆಶ್ರಮದಲ್ಲಿ ನಿಯಮಿತ ಸಮಯದಲ್ಲಿ ಆಹಾರ ಸಿಗುತ್ತಿತ್ತು. ಅಷ್ಟೇ ಅಲ್ಲ, ಯಾವುದಾದರೂ ಪಕ್ಷಿ ಅಥವಾ ಪ್ರಾಣಿ ಸತ್ತು ಹೋದಾಗಲೂ ಅತ್ಯಂತ ಶ್ರದ್ಧೆಯಿಂದ ವಿಧಿ ಪೂರ್ವಕವಾಗಿ ಅವುಗಳ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತಿತ್ತು. ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಪಕ್ಷಿಗಳಿಗೂ ಜೀವವಿದೆ. ಅವುಗಳಿಗೂ ಕಷ್ಟಸುಖಗಳಿವೆ. ಆದ್ದರಿಂದ ಅವುಗಳಿಗೂ ಸಹಾನುಭೂತಿ ತೋರಿಸಬೇಕು ಎಂದು ರಮಣ ಮಹರ್ಷಿಗಳು ನಂಬಿದ್ದರು. ಇದು ಅವರ ಶ್ರೇಷ್ಠ ಮಾನವೀಯತೆಗೆ ಒಂದು ಉತ್ತಮ ನಿದರ್ಶನವಾಗಿದೆ.

ರಮಣ ಮಹರ್ಷಿಗಳು ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸುವತನಕ ಅರುಣಾಚಲದ ತಪ್ಪಲನ್ನು ಬಿಟ್ಟು ಬೇರೆಲ್ಲಿಗೂ ಹೋಗಲಿಲ್ಲ. ಅವರ ದಿನಚರಿ ತುಂಬ ಸರಳವಾಗಿತ್ತು. ಅವರ ಆಶ್ರಮಜೀವನ ಶಾಂತವಾಗಿತ್ತು. ಅರುಣಾಚಲಕ್ಕೆ ಬರುವ ಸಂದರ್ಶಕರಲ್ಲಿ ಕೆಲವರು ಸ್ವಲ್ಪ ಸಮಯ ಅಲ್ಲಿ ಉಳಿದು ಹಿಂದಿರುಗುತ್ತಿದ್ದರೆ ಇನ್ನು ಕೆಲವರು ಅಲ್ಲಿಯೇ ಉಳಿಯುತ್ತಿದ್ದರು. ಹೀಗಾಗಿ ಆಶ್ರಮ ವಿಸ್ತಾರವಾಗಿ ಬೆಳೆಯಿತು. ಆಶ್ರಮದ ನೈರ್ಮಲ್ಯ, ಭಕ್ತರ ಊಟ ವಸತಿಗಳ ವ್ಯವಸ್ಥೆ ಇವೆಲ್ಲವನ್ನೂ ಶಿಷ್ಯರೇ ನೋಡಿಕೊಳ್ಳುತ್ತಿದ್ದರು.

ಆಶ್ರಮದ ವ್ಯವಸ್ಥೆ, ಜೀವನ ವಿಧಾನ

ಆಶ್ರಮದಲ್ಲಿ ಬೇರೆಬೇರೆ ವಿಭಾಗಗಳನ್ನೂ ತೆರೆಯಲಾಯಿತು. ಇವುಗಳಲ್ಲಿ ಜಾನುವಾರುಗಳಿಗಾಗಿ ಪ್ರತ್ಯೇಕ ವಸತಿ ವಿಭಾಗ, ವೇದಗಳ ಅಧ್ಯಯನಕ್ಕಾಗಿ ಪಾಠಶಾಲೆ, ಪುಸ್ತಕಗಳನ್ನು ಪ್ರಕಟಿಸುವ ಶಾಖೆ, ಶ್ರೀದೇವಿಯ ಮಂದಿರ ಇವು ಮುಖ್ಯವಾದವು. ರಮಣ ಮಹರ್ಷಿಗಳು ಒಂದು ಕ್ಷಣವೂ ಸುಮ್ಮನೆ ಕುಳಿತಿರುತ್ತಿರಲಿಲ್ಲ. ಸದಾ ಚಟುವಟಿಕೆಯಿಂದ ಇರುತ್ತಿದ್ದರು. ಮುದ್ರಣಾಲಯದಿಂದ ಬರುವ ಪುಸ್ತಕಗಳ ಕರಡಚ್ಚು ತಿದ್ದುವುದರಿಂದ ಹಿಡಿದು ಆಶ್ರಮದ ಪತ್ರವ್ಯವಹಾರದವರೆಗೆ ಎಲ್ಲ ಕೆಲಸಗಳನ್ನೂ ತಾವೆ ಮಾಡುತ್ತಿದ್ದರು. ಆಶ್ರಮದ ಎಲ್ಲ ಚಟುವಟಿಕೆಗಳ ಬಗ್ಗೆಯೂ ಮುತುವರ್ಜಿ ವಹಿಸುತ್ತಿದ್ದರು.

‘ಈ ಕೈ ಸಹಜ ರೀತಿಯಲ್ಲಿಯೇ ಸಾಯಲಿ.’

ಪ್ರತಿದಿನ ಅರುಣಗಿರಿಯನ್ನು ಪ್ರದಕ್ಷಿಣೆ ಮಾಡುವುದು, ಗಿರಿಯ ಎಲ್ಲ ಭಾಗಗಳಲ್ಲಿ ಸಂಚರಿಸುವುದು ರಮಣ ಮಹರ್ಷಿಗಳ ಮೆಚ್ಚಿನ ಹವ್ಯಾಸವಾಗಿತ್ತು. ಆಶ್ರಮದ ಒಂದು ಭಾಗದಲ್ಲಿ ಅವರು ಹೂ ಹಣ್ಣು ತರಕಾರಿಗಳ ತೋಟವನ್ನು ಬೆಳೆಸಿದ್ದರು. ಆಶ್ರಮದ ಯಾವುದೇ ವಸ್ತುವೂ ಹಾಳಾಗಲು ಅವರು ಅವಕಾಶ ಕೊಡುತ್ತಿರಲಿಲ್ಲ. ಹಣ್ಣು ತರಕಾರಿಗಳ ಸಿಪ್ಪೆಯನ್ನು ಸೇರಿಸಿ ಅವರು ಅದನ್ನು ಹಸುಗಳಿಗೆ ಆಹಾರವಾಗಿ ಕೊಡುತ್ತಿದ್ದರು. ಆಶ್ರಮದಲ್ಲಿ ಎಲ್ಲರೂ ಸಮಾನರು ಎಂಬ ಭಾವನೆಯಿತ್ತು. ಎಲ್ಲರಿಗೂ ಒಂದೇ ರೀತಿಯ ಆಹಾರ. ಮಹರ್ಷಿ ರಮಣರೂ ಎಲ್ಲರೊಂದಿಗೂ ಕುಳಿತು ಊಟ ಮಾಡುತ್ತಿದ್ದರು. ತಮಗೆ ಉಳಿದವರು ವಿಶೇಷ ಗೌರವ ತೋರಿಸಬೇಕೆಂದು ಅವರು ಎಂದೂ ಬಯಸಿರಲಿಲ್ಲ.

ಅವರು ಅಹಿಂಸೆಯ ಮೂರ್ತಿಯಾಗಿದ್ದರು. ಇದಕ್ಕೆ ಆಶ್ರಮಕ್ಕೆ ನುಗ್ಗಿದ ಕಳ್ಳರೊಡನೆ ಅವರು ವರ್ತಿಸಿದ ವಿಧಾನವೇ ಸಾಕ್ಷಿ. ಇತರರಿಗೆ ಕೆಡುಕನ್ನು ಉಂಟು ಮಾಡುವ ದುಷ್ಟರನ್ನು ನೋಡಿ ಅವರು ಮರುಗುತ್ತಿದ್ದರು. “ಹಲ್ಲು ತಿಳಿಯದೆ ನಾಲಗೆಯನ್ನು ಕಚ್ಚಿತು ಎಂದು ಹಲ್ಲನ್ನೇ ಮುರಿದುಹಾಕುವುದು ವಿವೇಕವಲ್ಲ” ಎಂದು ಅವರು ಆಗಾಗ ಹೇಳುತ್ತಿದ್ದರು. ದುಷ್ಟರನ್ನು ಶಿಕ್ಷಿಸುವ ಬದಲು ಸಮಾಧಾನದಿಂದ ಅವರಿಗೆ ವಿವೇಕ ಹೇಳಿ ಅವರನ್ನು ತಿದ್ದಲು ಪ್ರಯತ್ನಿಸಬೇಕು ಎಂಬುದು ರಮಣ ಮಹರ್ಷಿಗಳ ಅಭಿಪ್ರಾಯವಾಗಿತ್ತು.

ಪಕ್ಷಿ ಪ್ರಾಣಿಗಳಿಗೂ ಆಶ್ರಮದಲ್ಲಿ ಹಿಂಸೆ ಉಂಟಾಗಲು ಅವರು ಬಿಡುತ್ತಿರಲಿಲ್ಲ. ಒಮ್ಮೆ ಸಾಯುತ್ತಿದ್ದ ಮಂಗವೊಂದಕ್ಕೆ ಅವರು ಆರೈಕೆ ಮಾಡುತ್ತಿದ್ದಾಗ ಅದು ಅವರ ಕಾಲನ್ನು ಕಚ್ಚಿ ಗಾಯ ಮಾಡಿತು. ಆದರೆ ಆಗ ಅವರಿಗೆ ಸಿಟ್ಟು ಬರಲಿಲ್ಲ. ದುಃಖವೂ ಆಗಲಿಲ್ಲ. ಪ್ರಾಣಿಗಳ ಮೇಲೆ ಅವರಿಗಿದ್ದ ಅಪಾರ ಪ್ರೇಮ ಅವರಿಗಾದ ನೋವನ್ನು ಮರೆಸಿತ್ತು.

ಹಸು ಲಕ್ಷ್ಮೀ ಸಾಯುವಾಗ ರಮಣ ಮಹರ್ಷಿಗಳು ಅದನ್ನು ತಾಯಿಯೆಂದೇ ತಿಳಿದು ಅದರ ಸಮೀಪದಲ್ಲಿ ಅಳುತ್ತ ಕುಳಿತ್ತಿದ್ದರಂತೆ!

ಒಮ್ಮೆ ಅವರು ಅರುಣಾಚಲ ಬಂಡೆಯ ಮೇಲೆ ಕುಳಿತುಕೊಂಡಿದ್ದಾಗ ಸರ್ಪವೊಂದು ಅವರ ತೊಡೆಯನ್ನೇರಿ ಹರಿದುಹೋಯಿತಂತೆ. ಆಗ ಆ ದೃಶ್ಯವನ್ನು ದೂರದಿಂದ ನೋಡಿದ ಒಬ್ಬರು “ಹಾವು ಮೈಮೇಲೆ ಹರಿದುಕೊಂಡು ಹೋಗುತ್ತಿದ್ದಾಗ ನಿಮಗೆ ಭಯವಾಗಲಿಲ್ಲವೇ?” ಎಂದು ಕೇಳಿದರಂತೆ. ಆಗ ರಮಣ ಮಹಿರ್ಷಿಗಳು ಮುಗುಳ್ನಗುತ್ತಾ, “ಇಲ್ಲ ಅದು ಮೈಮೇಲೆ ಇರುವಾಗ ತಣ್ಣಗೆ ಮೃದುವಾದ ಅನುಭವವಾಯಿತು” ಎಂದರಂತೆ. ಎಂಥ ಧೈರ್ಯ!

ರಮಣ ಮಹರ್ಷಿಗಳ ಸಂದರ್ಶನಕ್ಕೆ ಬೆಳಗ್ಗೆ ಐದು ಗಂಟೆಯಿಂದಲೇ ಭಕ್ತರು ಬರಲು ಪ್ರಾರಂಭಿಸುತ್ತಿದ್ದರು. ಅನಂತರ ಸ್ವಲ್ಪ ಕಾಲ ಆಶ್ರಮದಲ್ಲಿ ವೇದಘೋಷ ನಡೆಯುತ್ತಿತ್ತು. ಏಳು ಗಂಟೆಗೆ ಬೆಳಗಿನ ಉಪಹಾರ ಪೂರೈಸಿಕೊಂಡು ಅವರು ಸುಮಾರು ಒಂದು ಗಂಟೆ ಕಾಲ ಗಿರಿಯಲ್ಲಿ ಸಂಚರಿಸಿ ಹಿಂದಿರುಗುತ್ತಿದ್ದರು. ಎಂಟು ಗಂಟೆಗೆ ಅವರು ಭಕ್ತರೊಂದಿಗೆ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರು. ಆ ಸಮಯ ರಮಣ ಮಹರ್ಷಿಗಳು ಸಾಮಾನ್ಯವಾಗಿ ಮಾತನಾಡುತ್ತಿರಲಿಲ್ಲ. ಆದರೆ ಭಕ್ತರು ಏನಾದರೂ ಸಂದೇಹ ವ್ಯಕ್ತಪಡಿಸಿದರೆ ಅವರು ಸೂಕ್ತ ಸಮಾಧಾನ ಹೇಳುತ್ತಿದ್ದರು.

ಹನ್ನೊಂದು ಗಂಟೆಗೆ ಊಟವಾಗುತ್ತಿತ್ತು. ಆಮೇಲೆ ಮಧ್ಯಾಹ್ನ ಎರಡು ಗಂಟೆಯವರೆಗೆ ಆಶ್ರಮದಲ್ಲಿ ಯಾವುದೇ ರೀತಿಯ ಚಟುವಟಿಕೆಗಳಿರುತ್ತಿರಲಿಲ್ಲ. ಅನಂತರ ಪುನಃ ಸಂದರ್ಶಕರೊಂದಿಗೆ ರಮಣ ಮಹರ್ಷಿಗಳು ವಿಚಾರವಿನಿಮಯ ನಡೆಸುತ್ತಿದ್ದರು. ಬಳಿಕ ಸ್ವಲ್ಪ ಸಮಯ ಅವರು ಅರುಣಗಿರಿಯಲ್ಲಿ ಸಂಚರಿಸಿ ಬರುತ್ತಿದ್ದರು. ಮತ್ತೆ ವೇದ ಘೋಷ, ಧ್ಯಾನ ಹಾಗೂ ಏಳೂವರೆ ಗಂಟೆಗೆ ರಾತ್ರಿಯೂಟ. ಇದು ಆಶ್ರಮದ ಸಾಮಾನ್ಯ ದಿನಚರಿಯಾಗಿತ್ತು.

ಶ್ರೀ ರಮಣ ಮಹರ್ಷಿಗಳು ಭಾಷಣಗಳಿಂದಾಗಲಿ, ಗ್ರಂಥಗಳನ್ನು ಬರೆದಾಗಲಿ ತಮ್ಮ ಉಪದೇಶವನ್ನು ಸಾರಲಿಲ್ಲ. ಭಕ್ತರು ಕೇಳಿದ ಪ್ರಶ್ನೆಗಳಿಗೆ ಅವರು ಕೆಲವೇ ಮಾತುಗಳಲ್ಲಿ ಉತ್ತರಿಸುತ್ತಿದ್ದರು. ಅವರು ಪ್ರಶ್ನೆಗಳಿಗೆ ಕೊಡುತ್ತಿದ್ದ ಉತ್ತರ ನೇರವಾಗಿಯೂ ಸಂಕ್ಷಿಪ್ತವಾಗಿಯೂ ಸ್ಪಷ್ಟವಾಗಿಯೂ ಇರುತ್ತಿತ್ತು. ಅವರು ಭಕ್ತರನ್ನು ಯಾವಾಗಲೂ ವಿಚಾರ ಮಾರ್ಗದಲ್ಲಿಯೇ ಕೊಂಡೊಯ್ಯುತ್ತಿದ್ದರು. ಮನಸ್ಸಿನಲ್ಲಿರುವ ಕೊಳೆಯನ್ನು ಕಳೆಯಲು ಧ್ಯಾನವೊಂದೇ ಮಾರ್ಗ ಎಂದು ಅವರು ತಮ್ಮ ಶಿಷ್ಯರಿಗೆ ಹೇಳುತ್ತಿದ್ದರು. ಮತ್ತೆ ಮತ್ತೆ ಕೆಟ್ಟ ವಿಚಾರಗಳು ಎಲ್ಲಿಂದ ಬರುತ್ತವೆ ಎಂದು ಆಲೋಚಿಸುವುದರಿಂದ ಮನಸ್ಸು ಶುಚಿಯಾಗುತ್ತದೆ ಎಂದು ಅವರು ಹೇಳುತ್ತಿದ್ದರು.

ಜಾತಿ-ಮತ ಭೇದವಿಲ್ಲದೆ ಎಲ್ಲರಿಗೂ ಆಶ್ರಮದಲ್ಲಿ ಸದಾ ಸ್ವಾಗತ ಸಿಕ್ಕುತ್ತಿತ್ತು. ಸಂದರ್ಶಕ ಯಾವ ಜಾತಿಯವನೇ ಇರಲಿ. ರೋಗಿಯೇ ಇರಲಿ ಯಾರೂ ತಡೆಯುವಂತಿರಲಿಲ್ಲ. ಎಂದರೆ, ರಮಣ ಮಹರ್ಷಿಗಳ ದೃಷ್ಟಿಯಲ್ಲಿ ಎಲ್ಲರೂ ದೇವರ ಮಕ್ಕಳೇ ಆಗಿದ್ದರು.

ಕಡೆಯ ದಿನಗಳು

೧೯೪೭ರಲ್ಲಿ ರಮಣ ಮಹರ್ಷಿಗಳ ಆರೋಗ್ಯ ಕುಂದತೊಡಗಿತು. ಪುಷ್ಟಿಕರ ಆಹಾರ ತೆಗೆದುಕೊಳ್ಳುವಂತೆ ಅವರಿಗೆ ವೈದ್ಯರು ಸಲಹೆ ನೀಡಿದರೂ ಅವರು ಯಾವುದರಲ್ಲಿಯೂ ಆಸಕ್ತಿ ತೆಗೆದುಕೊಳ್ಳುತ್ತಿರಲಿಲ್ಲ. ಉಳಿದವರು ತೆಗೆದುಕೊಳ್ಳುತ್ತಿದ್ದ ಆಹಾರವನ್ನೇ ಅವರು ತೆಗೆದುಕೊಳ್ಳುತ್ತಿದ್ದರು. ಅವರ ಆರೋಗ್ಯ ದಿನೇದಿನೇ ಕೆಡುತ್ತಾ ಹೋಯಿತು. ಅವರ ಎಡ ಮುಂಗೈ ಚಿಕ್ಕ ಗಡ್ಡೆಯೊಂದು ಕಾಣಿಸಿಕೊಂಡಿತು. ಅದು ಬೆಳೆಯತೊಡಗಿದಾಗ, ಆಶ್ರಮದ ವೈದ್ಯರು ಪರೀಕ್ಷಿಸಿ ಮಹರ್ಷಿಗಳಿಗೆ ಸಾರ್ಕೊಮಾ ಎಂಬ ವ್ಯಾಧಿ ಅಂಟಿಕೊಂಡಿರುವುದನ್ನು ಕಂಡು ಹಿಡಿದರು. ಅವರು ಗಡ್ಡೆಯನ್ನು ಕತ್ತರಿಸಿ ತೆಗೆದರು. ಆದರೆ ಪುನಃ ಅದು ಬೆಳೆಯಿತು. ಮದರಾಸಿನಿಂದ ತಜ್ಞ ಡಾಕ್ಟರನ್ನು ಕರೆಸಲಾಯಿತು. ಅವರು ರಮಣ ಮಹರ್ಷಿಗಳು ಉಳಿಯಬೇಕಾದರೆ ಎಡಗೈಯನ್ನೇ ಕತ್ತರಿಸಬೇಕು ಎಂದು ಸೂಚಿಸಿದರು. ಆದರೆ ರಮಣ ಮಹರ್ಷಿಗಳು ಅದಕ್ಕೆ ಸರ್ವಥಾ ಒಪ್ಪಲಿಲ್ಲ.

ಅವರು, “ಅಗತ್ಯವಿಲ್ಲ. ಈ ದೇಹವೇ ಒಂದು ದೊಡ್ಡ ರೋಗ. ಹೀಗಿರುವಾಗ ಕೈಯನ್ನು ಕತ್ತರಿಸುವುದೇಕೆ? ಏನಾಗುತ್ತದೋ ಆಗಲಿ. ಈ ಕೈ ಸಹಜ ರೀತಿಯಲ್ಲಿಯೇ ಸಾಯಲಿ” ಎಂದರು. ಯಾರ ಒತ್ತಾಯಕ್ಕೂ ಅವರು ಮಣಿಯಲಿಲ್ಲ. ಡಾಕ್ಟರರು ಶಸ್ತ್ರಚಿಕಿತ್ಸೆ ಮಾಡಿದರು. ಆದರೂ ರಮಣ ಮಹರ್ಷಿಗಳು ಗುಣಮುಖರಾಗಲಿಲ್ಲ. ರೋಗ ಉಲ್ಬಣಗೊಂಡಿತು. ದುರ್ಮಾಂಸ ಬೆಳೆಯುತ್ತಲೆ ಹೋಯಿತು. ವ್ರಣ ವಾಸಿಯಾಗಲೇ ಇಲ್ಲ. ಆದರೆ ರಮಣ ಮಹರ್ಷಿಗಳು ನಿರ್ಲಿಪ್ತರಾಗಿದ್ದರು. ಅವರಿಗೆ ನೋವಿನ ಅರಿವೇ ಇದ್ದಂತಿರಲಿಲ್ಲವೆಂಬುದು ಆಶ್ರಮವಾಸಿಗಳೆಲ್ಲರಿಗೂ ಆಶ್ಚರ್ಯದ ವಿಷಯವಾಗಿತ್ತು.

ದೇಶದ ಮೂಲೆ ಮೂಲೆಯಿಂದ ರಮಣ ಮಹರ್ಷಿಗಳನ್ನು ನೋಡಲು ಸಂದರ್ಶಕರು ಗುಂಪುಗುಂಪಾಗಿ ಬರತೊಡಗಿದರು. ರಮಣ ಮಹರ್ಷಿಗಳೇ ಅವರೆಲ್ಲರ ದುಃಖಕ್ಕೆ ಸಮಾಧಾನ ಹೇಳಬೇಕಾಯಿತು. ಅವರು “ಹುಟ್ಟಿದವನಿಗೆ ಸಾವು ತಪ್ಪಿದ್ದಲ್ಲ” ಎಂದು ಭಕ್ತರಿಗೆ ತಿಳಿಸಿದರು. “ದೇಹವೇ ಆತ್ಮವಲ್ಲ. ಆದ್ದರಿಂದ ತಮ್ಮ ದೇಹ ಸತ್ತರೆ ಅದಕ್ಕಾಗಿ ಯಾರೂ ನೋಯಬೇಕಾಗಿಲ್ಲ” ಎಂದೂ ಅವರು ತಿಳಿಸಿದರು.

೧೯೫೦ ನೆಯ ಏಪ್ರಿಲ್ ೧೪ನೆ ದಿನಾಂಕ ರಾತ್ರಿ ಎರಡು ಗಂಟೆಯ ಸುಮಾರಿಗೆ ರಮಣ ಮಹರ್ಷಿಗಳು ತಮ್ಮ ಕೊನೆಯ ಉಸಿರನ್ನು ಎಳೆದರು.

ಶ್ರೀ ರಮಣ ಮಹರ್ಷಿಗಳು ಹೆಚ್ಚುಗ್ರಂಥಗಳನ್ನು ಬರೆದಿಲ್ಲ. ಅವರು ಬರೆದದ್ದೆಲ್ಲ ಕೇವಲ ಭಕ್ತರಿಗಾಗಿ, ಅವರ ಬೇಡಿಕೆಗಾಗಿ. ಅವರು ಪದ್ಯವನ್ನೂ ಗದ್ಯವನ್ನೂ ಬರೆದಿದ್ದಾರೆ. ಅವರ ಕವನಗಳೆಲ್ಲ ಯಾವುದೋ ವಿಶೇಷ ಸಂದರ್ಭದಲ್ಲಿ ಯಾರೋ ಒಬ್ಬರ ಕೇಳಿಕೆಗಾಗಿ ರಚಿತವಾದವು. ಅವರ ಪದ್ಯಗಳು “ಜೀವನವನ್ನು ಕುರಿತ ೪೦ ಪದ್ಯಗಳು”  ಎಂಬ ಹೆಸರಿನಲ್ಲಿ ಸಂಕಲನಗೊಂಡಿವೆ. ಇದು ಅವರ ಶ್ರೇಷ್ಠ ಕೃತಿ. “ಉಪದೇಶಸಾರ” ಎಂಬ ಒಂದು ಗ್ರಂಥವನ್ನೂ ಅವರು ಬರೆದಿದ್ದಾರೆ. ಅವರು ಶ್ರೀ ಶಂಕರಾಚಾರ್ಯರ “ವಿವೇಕ ಚೂಡಾಮಣಿ”ಯನ್ನು ತಮಿಳಿಗೆ ಅನುವಾದಿಸಿದ್ದಾರೆ. ಅವರು ಹೆಚ್ಚಿಗೆ ಬರೆದದ್ದೇ ತಮಿಳಿನಲ್ಲಿ. ಆದರೂ ಅವರಿಗೆ ಸಂಸ್ಕೃತ, ತೆಲುಗು, ಮಲೆಯಾಳಂ ಭಾಷೆಗಳಲ್ಲಿಯೂ ಬರೆಯುವ ಸಾಮರ್ಥ್ಯವಿತ್ತು.

“ಪ್ರಪಂಚದ ವ್ಯವಹಾರದಲ್ಲಿದ್ದೂ ಸ್ವಾರ್ಥ ಬಿಡುವುದು ಸಾಧ್ಯವೆ?” ಪಾಲ್‌ಬ್ರಂಟನ್ ಎಂಬಾತ ಒಮ್ಮೆ ಕೇಳಿದ.

“ಕೆಲಸಕ್ಕೂ ಜ್ಞಾನಕ್ಕೂ ವಿರೋಧವಿಲ್ಲ” ರಮಣರು ಉತ್ತರ ಹೇಳಿದರು.

ಮನುಷ್ಯ ತನ್ನ ಕೆಲಸ, ತನ್ನ ವೃತ್ತಿಯ ಕೆಲಸ ಮಾಡುತ್ತಿರಬಹುದು. ನಾನು-ನನ್ನ ಸುಖ-ನನ್ನ ಕೀರ್ತಿ ಈ ಯೋಚನೆಗಳನ್ನು ಬಿಟ್ಟು, ಇವುಗಳಲ್ಲಿ ಸುಖ ಇಲ್ಲ ಎಂದು ಕಂಡುಕೊಳ್ಳಬೇಕು. “ನಾನು ದುರ್ಬಲ” ಎಂದುಕೊಳ್ಳಬಾರದು. ಪ್ರತಿಯೊಬ್ಬನಲ್ಲಿ ಶಕ್ತಿ ಇದೆ. ಪ್ರತಿಯೊಬ್ಬನೂ ಶಾಂತಿ -ಸುಖಗಳನ್ನು ಕಂಡುಕೊಳ್ಳಬಹುದು.

ಹೀಗೆ ಜನಸಾಮಾನ್ಯರಿಗೂ ದಾರಿ ತೋರಿದರು ಶ್ರೀ ರಮಣ ಮಹರ್ಷಿಗಳು.