ರಮಾನಂದ ಚಟರ್ಜಿ —ಭಾರತದ ಪತ್ರಿಕೆಗಳ ಇತಿಹಾಸದಲ್ಲಿ ರಮಾನಂದ ಚಟರ್ಜಿಯವರದು  ಬಹು ದೊಡ್ಡ ಹೆಸರು. ಪತ್ರಿಕೆಗಳ ಸ್ವಾತಂತ್ರ್ಯಕ್ಕಾಗಿ ದಿಟ್ಟತನದಿಂದ ಬ್ರಿಟಿಷ್ ಸರ್ಕಾರವನ್ನೇ ಎದುರಿಸಿದರು. ಸಮಾಜ ಸುಧಾರಣೆಗಾಗಿ ದುಡಿದರು.

 

ರಮಾನಂದ ಚಟರ್ಜಿ

ರಮಾನಂದ ಚಟರ್ಜಿಯವರನ್ನು  ಮಹಾತ್ಮಾ ಗಾಂಧಿಯವರು ‘ಋಷಿ’ ಎಂದು ಕರೆದಿದ್ದರು. ಅವರು ಭಾರತದ ಪತ್ರಿಕೋದ್ಯೋಗಕ್ಕಂತೂ ಮಹರ್ಷಿಯೇ ಆಗಿದ್ದರು. ಇಂಗ್ಲಿಷಿನಲ್ಲಿ ‘ಮಾಡರ್ನ್ ರಿವ್ಯೂ’, ಬಂಗಾಳಿಯಲ್ಲಿ ‘ಪ್ರವಾಸಿ’ ಮತ್ತು ಹಿಂದಿಯಲ್ಲಿ ‘ವಿಶಾಲ ಭಾರತ’ ಮಾಸಪತ್ರಿಕೆಗಳನ್ನು ಸ್ಥಾಪಿಸಿ, ನಡೆಸಿದರು. ಪತ್ರಿಕೆಗಳು ಹೇಗಿರಬೇಕು ಎಂಬುದಕ್ಕೆ ಅವು ಮೇಲ್ಪಂಕ್ತಿಯಂತಿದ್ದವು. ಭಾರತದಲ್ಲಿ ಮಾತ್ರವಲ್ಲ, ಇಂಗ್ಲೆಂಡ್, ಫ್ರಾನ್ಸ್, ಅಮೆರಿಕ, ರಷ್ಯಗಳಲ್ಲಿಯೂ ಅವರ ಕೀರ್ತಿ ಹಬ್ಬಿತ್ತು. ಅವರ ಪತ್ರಿಕೆಗಳಿಗೆ ಗೌರವವಿತ್ತು. ಸ್ವಾರ್ಥತ್ಯಾಗಕ್ಕೆ, ಕಾರ್ಯ ನಿಷ್ಠೆಗೆ, ಸತ್ಯ ಸಂಧತೆಗೆ ಕೂಡ ಅವರು ಮಾದರಿಯಾಗಿದ್ದರು.

ಮನೆತನ

ರಮಾನಂದ ಬಾಬುಗಳ ಪೂರ್ವಿಕರು ನವದ್ವೀಪದ ಭಟ್ಟಾಚಾರ‍್ಯರು. ಬಂಗಾಲದಲ್ಲಿ ನವದ್ವೀಪ ಸಂಸ್ಕೃತ ವಿದ್ಯೆಗೆ ತರ್ಕಶಾಸ್ತ್ರಕ್ಕೆ ಹೆಸರಾದದ್ದು. ಭಟ್ಟಾ ಚಾರ್ಯರ ಮನೆತನವೂ ಸಂಸ್ಕೃತದಲ್ಲಿ  ಪ್ರವೀಣವಾದದ್ದು. ಅದರದೇ ಒಂದು ಕವಲು ಬಾಂಕುರಾಕ್ಕೆ ವಲಸೆ ಬಂತು. ಅಲ್ಲಿಯ ಶ್ರೀಮಂತ ಜಮೀನ್ದಾರರಾದ ಕೃಷ್ಣಪ್ರಸಾದ ಪಾಠಕರ ‘ಆಸ್ಥಾನ’ದಲ್ಲಿ ರಮಾನಂದರ ಮುತ್ತಜ್ಜ ಆಸ್ಥಾನ ಪಂಡಿತರಾದರು. ಮುಂದೆ ಈ ಮನೆತನ ಚಟ್ಟೋ ಪಾಧ್ಯಾಯ ಅಥವಾ ಚಟರ್ಜಿಯೆಂದು ಹೆಸರು ಬದಲಿಸಿ ಕೊಂಡಿತು.

ರಮಾನಂದರ ಅಜ್ಜ ರಾಮಲೋಚನರ ಬಗ್ಗೆ ಒಂದು ಕಥೆ ಉಂಟು. ಜಮೀನ್ದಾರ ಕೃಷ್ಣಪ್ರಸಾದರಿಗೆ ಮಕ್ಕಳಿಲ್ಲದ್ದರಿಂದ ರಾಮಲೋಚನರನ್ನು ದತ್ತು ಕೇಳಿದರಂತೆ. ಆಸ್ಥಾನ ಪಂಡಿತ ಶರ್ವಾನಂದರು ಸಂಪತ್ತು ಬರುವುದೆಂಬ ಆಶೆಯಿಂದ ಮಗನನ್ನು ಕೊಡಲು ಒಪ್ಪಿದರು. ಆದರೆ ಹುಡುಗ ರಾಮಲೋಚನರು ಅದಕ್ಕೆ ಒಪ್ಪದೆ, ಮನೆಯನ್ನು ಬಿಟ್ಟು ತಾವೇ ಸ್ವಹಸ್ತದಿಂದ ಗುಡಿಸಲು ಕಟ್ಟಿಕೊಂಡು ವಾಸಿಸತೊಡಗಿದರು. ಈ ದೃಢ ನಿಶ್ಚಯ, ಹಣದ ಬಗ್ಗೆ ಅನಾಸಕ್ತಿ, ರಮಾನಂದರಿಗೂ ಇಳಿದು ಬಂದಂತೆ ಕಾಣುತ್ತದೆ.

ರಾಮಲೋಚನರ ಮೂವರು ಹಿರಿಯ ಮಕ್ಕಳು ಕುಲಕ್ರಮದಂತೆ ಸಂಸ್ಕೃತ ಓದಿ ಟೋಲ(ಪಾಠಶಾಲೆ)ಗಳನ್ನು ನಡೆಸುತ್ತಿದ್ದರು. ಕಿರಿಯ ಶ್ರೀನಾಥನಿಗೆ ಮಾತ್ರ ವಿದ್ಯೆ ಹತ್ತಲಿಲ್ಲ. ಆತ ವ್ಯಾಯಾಮ ಮಾಡಿ ಬಲಿಷ್ಠ ಯುವಕನಾದ. ಒಮ್ಮೆ ಅಕಸ್ಮಾತ್ತಾಗಿ ಅವನು ಬಾಂಕುರಾದ ಜಿಲ್ಲಾ ಮ್ಯಾಜಿಸ್ಟ್ರೇಟನ ದೃಷ್ಟಿಗೆ ಬಿದ್ದ. ಅವನ ರೂಪಕ್ಕೆ, ಮೈಕಟ್ಟಿಗೆ  ಮೆಚ್ಚಿ ಆ ಯುರೋಪಿಯನ್ ದೊರೆ ಆತನನ್ನು ಜೈಲಾಧಿಕಾರಿಯಾಗಿ ನೇಮಿಸಿಕೊಂಡರು.ಶ್ರೀನಾಥನ ನಾಲ್ಕು ಗಂಡು ಮಕ್ಕಳಲ್ಲಿ ರಮಾನಂದರು ಮೂರನೆಯವರು.

ವಿದ್ಯಾಭ್ಯಾಸ

ರಮಾನಂದರು ಹುಟ್ಟಿದ್ದು ೧೮೬೫ ರ ಮೇ ೨೯. ಮೊದಲು ದೊಡ್ಡಪ್ಪ ಶಂಭುನಾಥರ ಪಾಠಶಾಲೆಯಲ್ಲಿ ಅಕ್ಷರಾಭ್ಯಾಸ. ಪಾಠಶಾಲೆಯ ವಾತಾವರಣವನ್ನು ಮೆಚ್ಚದೆ ಬಾಲಕ ರಮಾನಂದ ಬಾಂಕುರಾದ ಸರ್ಕಾರಿ ಶಾಲೆ ಸೇರಿದ.

ನೀರಿಗೆ ಮೀನು ಒಗ್ಗಿಕೊಂಡಂತೆ ರಮಾನಂದ ವಿದ್ಯೆಗೆ ಒಗ್ಗಿಕೊಂಡ. ೧೮೭೫ ರಲ್ಲಿ ನಡೆದ ಕಿರಿಯರ ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅವನು ತಿಂಗಳಿಗೆ ನಾಲ್ಕು ರೂಪಾಯಿಯ ಛಾತ್ರವೃತ್ತಿ ಪಡೆದು ಹೈಸ್ಕೂಲು ಸೇರಿದ.

ಹುಡುಗನ ಜ್ಞಾನ ಪಿಪಾಸೆಗೆ ಪಾರವೇ ಇರಲಿಲ್ಲ. ಗಣಿತ, ಇತಿಹಾಸ, ಸಸ್ಯಶಾಸ್ತ್ರ, ಭೂಗರ್ಭಶಾಸ್ತ್ರ, ಭೌತಶಾಸ್ತ್ರ, ಭೂಗೋಳ ಎಲ್ಲದರಲ್ಲಿಯೂ ಆಸಕ್ತಿ, ವಿರಾಮ ವೇಳೆಯಲ್ಲಿ ಬಾಂಕುರಾದ ವನಪ್ರದೇಶಗಳಲ್ಲಿ ಅಲೆಯುತ್ತಿದ್ದ. ಹೂ ಬಿಟ್ಟ ಮುತ್ತುಗ ಮತ್ತು ಮಹುವಾ ಮರಗಳ ವನಶ್ರೀಗೆ ಮುಗ್ಧನಾಗುತ್ತಿದ್ದ, ಅವನಿಗೆ ಕವಿತೆಗಳೆಂದರೆ ಜೀವ. ದೇಶಭಕ್ತಿ ಗೀತೆಗಳನ್ನು ಹಾಡುವುದರಲ್ಲಿ ಆತ ಎತ್ತಿದ ಕೈ.

ಹುಟ್ಟಿದ್ದು ಆಚಾರವಂತ ಮನೆತನ. ಆದರೆ ಹಿಂದೂ ಆಚಾರ ವಿಚಾರಗಳಲ್ಲಿ ಆಗಲೇ ಅವನಿಗೆ ಕೊರತೆ ಕಾಣಿಸುತ್ತಿತ್ತು. ಇದಕ್ಕೆ ಹೈಸ್ಕೂಲಿನ ಗಣಿತ ಶಿಕ್ಷಕ ಕೇದಾರನಾಠ ಕುಲಭಿಯವರಿಂದ ಪ್ರಚೋದನೆ ಸಿಕ್ಕಿತು. ಕುಲಭಿಯವರು ಸುಧಾರಣಾವಾದಿಗಳು. ಬ್ರಾಹ್ಮ ಸಮಾಜದ ಅನುಯಾಯಿ. ಮನುಷ್ಯ ಮನುಷ್ಯರ ನಡುವೆ ಉಚ್ಚ ನೀಚ ಭೇದಭಾವ ಮಾಡುವುದು ಅನ್ಯಾಯವೆಂಬ ತಿಳುವಳಿಕೆ ಯನ್ನು ರಮಾನಂದನ ಮನಸ್ಸಿನಲ್ಲಿ ಅವರು ಮೂಡಿಸಿದರು. ದೀನ ದುಃಖಿಗಳ ಸೇವೆಯ ಆದರ್ಶದ ಬೀಜಗಳನ್ನು ಬಿತ್ತಿದರು.

ಬಾಲ ಸಮಾಜ ಸೇವಕ

ಓದಿನಲ್ಲಿ ಹಿಂದೆ ಬೀಳದೆಯೆ ರಮಾನಂದ ಸಮಾಜ ಸೇವೆಯಲ್ಲಿ ಧುಮುಕಿದ. ತನ್ನ ನಾಲ್ಕು ರೂಪಾಯಿಯ ಛಾತ್ರ ವೇತನದಲ್ಲಿಯೇ ಅಷ್ಟಿಷ್ಟು ಉಳಿಸಿ, ತನಗಿಂತ ಬಡವರಾದ ವಿದ್ಯಾರ್ಥಿಗಳಿಗೆ ಪುಸ್ತಕ ಕೊಡಿಸುತ್ತಿದ್ದ. ಗೆಳೆಯರ ಸಹಾಯದಿಂದ ನಿರಕ್ಷರಿ ವಯಸ್ಕರಿಗಾಗಿ ರಾತ್ರಿ ಶಾಲೆಯೊಂದನ್ನು ನಡೆಸುತ್ತಿದ್ದ. ಶಾಲಾ ಹುಡುಗರ ಅಗ್ನಿಶಾಮಕದಳ ಸಂಘಟಿಸಿ ನೆರೆಹೊರೆಯಲ್ಲಿ ಬೆಂಕಿ ಅನಾಹುತಗಳಾದಾಗ ಸಹಾಯಕ್ಕೆ ಧಾವಿಸುತ್ತಿದ್ದ. ಕಿರಾಣಿ ಅಂಗಡಿಗಳಿಗೆ ಬೇಕಾದ ಕಾಗದದ  ಚೀಲಗಳನ್ನು ತಯಾರಿಸಿ ಮಾರಿ, ಆ ಹಣದಿಂದ ನಿರ್ಗತಿಕ ಸಂಸಾರಿಗಳಿಗೆ ಸಹಾಯ ಮಾಡುತ್ತಿದ್ದ.

ಕಷ್ಟದಿಂದ ಶಿಕ್ಷಣ

ಈ ನಡುವೆ ತಂದೆಯ ಕೆಲಸ ಹೋಗಿ ಸಂಸಾರಕ್ಕೆ ಕಷ್ಟ ಬಂತು. ೧೮೮೨ ರಲ್ಲಿ ತಂದೆ ತೀರಿಕೊಂಡದ್ದೂ, ಆಯಿತು. ಬಡತನ ಅತಿಯಾಯಿತು. ಎಷ್ಟೋ ದಿನ ಬರೇ ಅನ್ನ ಮತ್ತು ಹುರಿದ ಗಸಗಸೆ ಬೀಜ  ತಿಂದು ಶಾಲೆಗೆ ಹೋಗುವ ಅವಸ್ಥೆ. ಆದರೂ ಹುಡುಗ ಧೈರ‍್ಯ ಗೆಡಲಿಲ್ಲ. ೧೮೮೩ರಲ್ಲಿ ನಡೆದ ಎಂಟ್ರೇನ್ಸ್ ಪರೀಕ್ಷೆಯಲ್ಲಿ ಕಲ್ಕತ್ತ ವಿಶ್ವವಿದ್ಯಾಲಯಕ್ಕೆ ನಾಲ್ಕನೆಯವನಾಗಿ ತೇರ್ಗಡೆ ಹೊಂದಿ ರಮಾನಂದ ಇಪ್ಪತ್ತು ರೂಪಾಯಿಯ ಮಾಸಿಕ ಛಾತ್ರ ವೇತನಕ್ಕೆ ಅರ್ಹನಾದ. ಅದೇ ವರ್ಷ ಆತ ಕಲ್ಕತ್ತೆಯಲ್ಲಿ ಪ್ರೆಸಿಡೆನ್ಸಿ ಕಾಲೇಜು ಸೇರಿದ.

ಮಧ್ಯ ಕಲ್ಕತ್ತೆಯ ಒಂದು ಹಾಸ್ಟೆಲಿನಲ್ಲಿ ಉಳಿದು ಕೊಂಡು ರಮಾನಂದ ಶಿಸ್ತಿನಿಂದಲೂ, ನಿಷ್ಠೆಯಿಂದಲೂ ಅಭ್ಯಾಸ ಮಾಡುತ್ತಿದ್ದ. ಆದರೆ ಆರ್ಟ್ಸ್  ಎರಡನೇ ವರ್ಷದಲ್ಲಿ ತೀವ್ರ ಅಸ್ವಸ್ಥದಿಂದ ಅನೇಕ ದಿನ ಕಾಲೇಜಿನಿಂದ ಗೈರುಹಾಜರಿ ಉಳಿದಿದ್ದಕ್ಕೆ ಕಾಲೇಜಿನವರು ಶಿಷ್ಯ ವೇತನ ದಲ್ಲಿ ಹದಿಮೂರು ರೂಪಾಯಿ ಕಡಿತ ಮಾಡಿದರು. ಆ ಕಾಲೇಜನ್ನೇ ಬಿಟ್ಟು ಚಟರ್ಜಿಯವರು ಕಡಿಮೆ ಫೀ ಉಳ್ಳ ಸೇಂಟ್ ಜೇವಿಯರ್ ಕಾಲೇಜು ಸೇರಿದರು. ಆದರೆ ಅಲ್ಲಿ ಲ್ಯಾಟಿನ್ ಭಾಷೆ ಕಡ್ಡಾಯ. ರಮಾನಂದರಿಗೆ ಅದರ ಗಂಧವೇ ಇಲ್ಲ. ಅವರು ಅಂಜಲಿಲ್ಲ;  ಕೆಲವೇ ವಾರಗಳಲ್ಲಿ ಆ ಪ್ರಾಚೀನ ಭಾಷೆಯನ್ನು ಒಗ್ಗಿಸಿಕೊಂಡು ಪ್ರಥಮ ಆರ್ಟ್ಸ್ ಪರೀಕ್ಷೆಯಲ್ಲಿ ಮತ್ತೇ ವಿಶ್ವವಿದ್ಯಾನಿಲಯಕ್ಕೆ ನಾಲ್ಕನೆಯ ವರಾಗಿ ಉತ್ತೀರ್ಣರಾದರು. ಇಪ್ಪತ್ತೈದು ರೂಪಾಯಿ ಛಾತ್ರವೇತನದೊಂದಿಗೆ ಮತ್ತೇ ಪ್ರಸಿಡೆನ್ಸಿ ಕಾಲೇಜಿಗೆ ಮರಳಿದರು.

ಅಲ್ಲಿ ಜಗತ್ಪ್ರಸಿದ್ಧ ವಿಜ್ಞಾನಿಗಳಾದ ಆಚಾರ‍್ಯ ಜಗದೀಶ ಚಂದ್ರಬೋಸ್, ಪ್ರಪುಲ್ಲ ಚಂದ್ರರಾಯ್ ಮೊದಲಾದವರ ಶಿಷ್ಯರಾಗುವ ಭಾಗ್ಯ ದೊರಕಿತು. ಆದರೆ ಮತ್ತೆ ಅಸ್ವಸ್ಥದಿಂದ ೧೮೮೭ ರ ಬಿ. ಎ. ಪರೀಕ್ಷೆ ತಪ್ಪಿಸಿ ಕೊಂಡು ಕಾಲೇಜು ಬದಲಾಯಿಸಬೇಕಾಯಿತು. ಸಿಟಿ ಕಾಲೇಜು ಸೇರಿ ೧೮೮೮ ರಲ್ಲಿ ರಮಾನಂದರು ಇಂಗ್ಲಿಷ್ ಆನರ್ಸ್‌ನಲ್ಲಿ ಪ್ರಥಮ ಶ್ರೇಣಿಯಲ್ಲಿ ಪ್ರಥಮ ಸ್ಥಾನ ಪಡೆದು ಪಾಸಾದರು.

ದೇಶಾಭಿಮಾನ

ಒಡನೆಯೆ ಅವರಿಗೆ ಇಂಗ್ಲೆಂಡಿನಲ್ಲಿ ಓದು ಮುಂದುವರಿಸುವುದಕ್ಕೆ ವಿದ್ಯಾರ್ಥಿವೇತನ ಕೊಡಲು ಬ್ರಿಟಿಷ್ ಸರ್ಕಾರ ಮುಂದೆ ಬಂತು.  ಆದರೆ ರಮಾನಂದ ಬಾಬುಗಳು ಅದನ್ನು ತಿರಸ್ಕರಿಸಿದರು. ಅವರಿಗೆ ಸರ್ಕಾರದ ಹಂಗಿನರಮನೆ ಬೇಕಾಗಿರಲಿಲ್ಲ. ಹೈಸ್ಕೂಲಿನಲ್ಲಿರುವಾಗಲೇ ರಮೇಶಚಂದ್ರದತ್ತರ ಐತಿಹಾಸಿಕ ಕಾದಂಬರಿಗಳನ್ನೋದಿ ದೇಶಾಭಿಮಾನ ಅವರಲ್ಲಿ ಕುದುರಿತ್ತು. ಕಲಕತ್ತೆಗೆ ಬಂದ ಮೇಲೆ ರಾಷ್ಟ್ರನಾಯಕ ಸುರೇಂದ್ರನಾಥ ಬ್ಯಾನರ್ಜಿಯವರ ಪ್ರಭಾವಕ್ಕೊಳಗಾಗಿ ಕಡುದೇಶಭಕ್ತರೂ ಬ್ರಿಟಿಷ್ ವಿರೋಧಿಗಳೂ ಆಗಿದ್ದರು. ಸುರೇಂದ್ರ ನಾಥರನ್ನು ಬ್ರಿಟಿಷ್ ಸರ್ಕಾರ  ಸೆರೆಮನೆಗೆ ಕಳಿಸಿದ ಮೇಲಂತೂ ಎಂದಿಗೂ ಬ್ರಿಟಿಷ್ ಸರ್ಕಾರದ ಹಂಗಿಗೆ ಬೀಳಲಿಕ್ಕಿಲ್ಲವೆಂದು ಶಪಥವನ್ನೇ ತೊಟ್ಟರು. ೧೮೮೩ರಲ್ಲಿ ಸುರೇಂದ್ರನಾಥರ ಬಿಡುಗಡೆಯಾಯಿತು. ಆಗ ಅವರನ್ನೆದುರುಗೊಳ್ಳಲು ಜೈಲಿನ ಹೆಬ್ಬಾಗಿಲಿಗೆ ರಮಾನಂದರೂ ಹೋಗಿದ್ದರು. ಅವರು ಪ್ರಾಂತ ಸರ್ಕಾರದ ವಿದ್ಯಾರ್ಥಿ ವೇತನ ಪಡೆಯುತ್ತಿದ್ದರೂ ಸುರೇಂದ್ರನಾಥರಿಗೆ ಬೆಂಬಲಿಗ ರಾಗಿದ್ದುದು ಸಣ್ಣ ಧೈರ್ಯದ ಮಾತಲ್ಲ.

ವಿದೇಶಿ ಶಿಕ್ಷಣ ಕೈ ಬಿಟ್ಟು ಅವರು ಸಿಟಿ ಕಾಲೇಜಿನಲ್ಲಿ ನಲವತ್ತು ರೂಪಾಯಿಯ ಶಿಷ್ಯವೃತ್ತಿಯನ್ನು ಸ್ವೀಕರಿಸಿ ಎಂ.ಎ.ಗೆ ಓದತೊಡಗಿದರು. ಓದಿನೊಡನೆ ಅವರು ಕಾಲೇಜಿನಲ್ಲಿ ಗೌರವ ಲೆಕ್ಚರರ್ ಕೆಲಸವನ್ನೂ ಮಾಡಬೇಕಾಗಿತ್ತು. ೧೮೮೯ ರಲ್ಲಿ ಎಂ.ಎ.ಯಲ್ಲಿ ಪುನಃ ವಿಶ್ವವಿದ್ಯಾಲಯಕ್ಕೆ ನಾಲ್ಕನೆಯವರಾಗಿ ಪಾಸಾದರು.

ಪ್ರತಿಜ್ಞೆ

ಸಿಟಿ ಕಾಲೇಜನ್ನು ಬ್ರಾಹ್ಮ ಸಮಾಜದವರು ನಡೆಸುತ್ತಿದ್ದರು. ಅಲ್ಲಿ ರಮಾನಂದರಿಗೆ ಈಶ್ವರಚಂದ್ರ ವಿದ್ಯಾಸಾಗರ, ಅಕ್ಷಯ ಕುಮಾರ ಮೈತ್ರ, ಪಂಡಿತ ಶಿವನಾಥ ಶಾಸ್ತ್ರೀ ಮೊದಲಾದ ಹಿರಿಯರ ಪರಿಚಯವಾಯಿತು,  ಬ್ರಾಹ್ಮಸಮಾಜದವರ ಸಮಾಜ ಸುಧಾರಣೆ, ಸಮಾಜ ಸೇವೆ, ದೇಶಸೇವೆಗಳ ಆದರ್ಶಗಳನ್ನು ರಮಾನಂದರು ತಮ್ಮದಾಗಿ ಮಾಡಿಕೊಂಡರು. ಶಿವನಾಥ ಶಾಸ್ತ್ರಿಗಳ ಸಾತ್ವಿಕ ಪ್ರಭಾವದಿಂದ ಚಟರ್ಜಿಯವರು ಅವರಂತೆ ಕೆಲವು ಶಪಥಗಳನ್ನು ಕೈಗೊಂಡರು.

೧. ವಿದೇಶಿ ಸರ್ಕಾರವನ್ನು ನ್ಯಾಯಬದ್ಧವೆಂದು ಎಂದೂ ಒಪ್ಪಲಾರೆ;

೨. ವಿದೇಶಿ ಸರ್ಕಾರದಲ್ಲಿ ಯಾವ ಲಾಭದಾಯಕ ಹುದ್ದೆಯನ್ನೂ ಸ್ವೀಕರಿಸಲಾರೆ;

೩. ಜಾತಿಭೇದವನ್ನು ತಿರಸ್ಕರಿಸುತ್ತೇನೆ;

೪. ಸ್ತ್ರೀಪುರುಷರ ಸಮಾನತೆಗಾಗಿ ಹೋರಾಡುತ್ತೇನೆ;

೫. ವಿಧವಾ ವಿವಾಹವನ್ನು ಬೆಂಬಲಿಸುತ್ತೇನೆ.

ರಮಾನಂದರ ಜೀವಮಾನವೆಲ್ಲ ಈ ವ್ರತಗಳ ಪಾಲನೆಯ ಕಥೆಯೇ ಆಗಿತ್ತು.

ಬ್ರಾಹ್ಮ ಸಮಾಜದ ತತ್ವಗಳಲ್ಲಿ ಪೂರ್ಣ ನಂಬಿಕೆ ಹುಟ್ಟಿದ್ದರಿಂದ ೧೮೮೯ ರಲ್ಲಿ ಅವರು ವೈದಿಕ ಮತವನ್ನು ತ್ಯಜಿಸಿದರು. ಜನಿವಾರವನ್ನು ತೆಗೆದುಹಾಕಿ ಬ್ರಾಹ್ಮ ಸಮಾಜಕ್ಕೆ ಸೇರಿದರು.

ಶಿಕ್ಷಕರಾಗಿ

ಸೇವಾದೀಕ್ಷೆಯನ್ನು ಸ್ವೀಕರಿಸಿದ್ದರಿಂದ ದ್ರವ್ಯ ಲಾಭದ ಮಬ್ಬಿಗೆ ಬೀಳದೆ ಅವರು ಸಿಟಿ ಕಾಲೇಜಿನಲ್ಲೇ ಲೆಕ್ಚರರ್ ಆದರು. ಸಂಬಳ ಬರೇ ಒಂದುನೂರು ರೂಪಾಯಿ. ೧೮೮೬ ರಲ್ಲೇ ಅವರಿಗೆ ಮದುವೆಯಾಗಿತ್ತು. ಲೆಕ್ಚರರ್ ಆದ ಮೇಲೆ ಪತ್ನಿ ಮನೋರಮಾ ದೇವಿಯವರನ್ನು ಕರೆತಂದು ಕಲಕತ್ತೆಯಲ್ಲಿ ಸಂಸಾರ ಹೂಡಿದರು. ಮನೋರಮಾ ದೇವಿ ಆದರ್ಶ ಗೃಹಿಣಿ. ಗಂಡನ ಧ್ಯೇಯವನ್ನು ಮನಸಾ ಅಂಗೀಕರಿಸಿ ಚಿರಕಾಲ ಅವರ ಹೆಗಲಿಗೆ ಹೆಗಲು ಕೊಟ್ಟು ಸಂಸಾರ ನಡೆಸಿದರು.

ಹುಟ್ಟಾ ಶಿಕ್ಷಕರಾದ ರಮಾನಂದ ಬಾಬುಗಳು ಸಿಟಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಅತ್ಯಂತ ಜನಪ್ರಿಯರಾಗಿದ್ದರು. ಅವರು ಕಲಿಸಬೇಕಾದದ್ದು ಇಂಗ್ಲಿಷ್, ಆದರೂ ವಿದ್ಯಾರ್ಥಿ ಗಳನ್ನು ಎಲ್ಲ ತರದಲ್ಲಿ  ಸುಶಿಕ್ಷಿತರಾಗಿ ಮಾಡುವುದು  ಅವರ ಧ್ಯೇಯವಾಗಿತ್ತು. ದೇಶದ ಅಭಿಮಾನವನ್ನು ಜಾಗರಿಸಲು ಅವರು ವಿದ್ಯಾರ್ಥಿಗಳನ್ನು ಭಾರತದ ಮುಖ್ಯ ಐತಿಹಾಸಿಕ ಸ್ಥಳಗಳಿಗೆ, ಶಿಲ್ಪಕಲಾ ಸಾಧನೆಗಳಿಗೆ ಯಾತ್ರೆ ಮಾಡಿಸುತ್ತಿದ್ದರು. ವಿದ್ಯಾರ್ಥಿಗಳ ಸಾಹಿತ್ಯ ಸಂಘದ ಉಪಾಧ್ಯಕ್ಷರಾಗಿ ಅವರಲ್ಲಿ ಬಂಗಾಲಿ ಸಾಹಿತ್ಯ ಪ್ರೇಮವನ್ನು ಕುದುರಿಸಿದರು.

ಸಮಾಜಸೇವಕ

ಕಾಲೇಜಿನ ಕೆಲಸದೊಡನೆ ಸಮಾಜಸೇವಾ ಕಾರ್ಯಗಳು ಬೇರೆ. ದೇವಗಡದಲ್ಲಿದ್ದ ಕುಷ್ಠರೋಗಿಗಳ ಆಶ್ರಮದಲ್ಲಿ ಅವರು ಸೇವೆ ಮಾಡುತ್ತಿದ್ದರು. ಕಿಶೋರಚಂದ್ರ ದಾಸ ಮತ್ತು ಮೃಗಾಂಕಧರ ಚೌಧುರಿಯವರು ಸ್ಥಾಪಿಸಿದ ‘ದಾಸಾಶ್ರಮ’ ಎಂಬ ಸೇವಾಸಂಸ್ಥೆಯ ಕಾರ್ಯ ಸಮಿತಿಯ ಅಧ್ಯಕ್ಷರಾಗಿ ಅವರು ಸಮಾಜಸೇವೆಗೆ ಒಂದು ತರುಣರ ತಂಡವನ್ನೇ ಅಣಿಗೊಳಿಸಿದರು. ಅವರು ಅಧ್ಯಕ್ಷರಾದ ಮೇಲೆ ಅದರ ಚಟುವಟಿಕೆಗಳು ಬಂಗಾರ ಅಸ್ಸಾಮಗಳಲ್ಲಿ ವಿಸ್ತರಿಸಿ ಏಳು ಅಲೋಪಥಿ ಹೋಮಿಯೋ ಪಥಿ ಔಷಧಾಲಯಗಳು ಪ್ರಾರಂಭವಾದವು. ಕಲ್ಕತ್ತೆಯಲ್ಲಿ ಒಂದು ಕಿವುಡ ಮೂಕರ ಶಾಲೆಯನ್ನು ಅವರು ಸ್ಥಾಪಿಸಿದಲ್ಲದೆ, ಕುರುಡರ ಶಿಕ್ಷಣಕ್ಕಾಗಿ ಬ್ರೇಲ್ ಲಿಪಿ ಮಾದರಿಯಲ್ಲಿ ಒಂದು ಬಂಗಾಲಿ ಉಬ್ಬು ಲಿಪಿಯನ್ನು ಕಂಡು ಹಿಡಿದರು.

ಪತ್ರಿಕೋದ್ಯಮಿ

ಇದೆಲ್ಲದರ ನಡುವೆ ಅವರು ತಮ್ಮ ಭಾವಿ ಪತ್ರಿಕೋದ್ಯೋಗೀ ಜೀವನಕ್ಕೆ ನೆಲಗಟ್ಟನ್ನೂ ಹಾಕಿದರು. ದಾಸಾಶ್ರಮದ ಪರವಾಗಿ ‘ದಾಸಿ’ ಎಂಬ ಪತ್ರಿಕೆಯ ಸಂಪಾದಕರಾಗಿ ಅವರು ಆರ್ತರ ಹಿತಕ್ಕೆ ಬರೆದ ಲೇಖನಗಳು ಎಲ್ಲರ ಗಮನ ಸೆಳೆಯುತ್ತಿದ್ದವು. ಕುರುಡರ, ಕಿವುಡ-ಮೂಕರ ವಿದ್ಯಾಭ್ಯಾಸ, ವೇಶ್ಯಾವೃತ್ತಿಯ ಅಹಿತ ಪರಿಣಾಮ, ಅಫೀಮಿನ ವ್ಯಸನದ ಪರಿಣಾಮ, ಪ್ರಾಣಿದಯೆ- ಇಂಥ ಅನೇಕ ವಿಷಯಗಳ ಮೇಲೆ ಅವರು ಬರೆಯುತ್ತಿದ್ದರು.

ಬ್ರಾಹ್ಮ ಸಮಾಜದವರು ನಡೆಸುತ್ತಿದ್ದ ‘ಧರ್ಮಬಂಧು’ ಪತ್ರಿಕೆಗೆ ಅವರು ಬರೆಯುತ್ತಿಜಜಿಜ ಲೇಖನಗಳು ಜನಪ್ರಿಯವಾದದ್ದನ್ನು ಕಂಡು ಅವರನ್ನೇ ಅದಕ್ಕೆ ಸಂಪಾದಕರನ್ನಾಗಿ ಮಾಡಲಾಯಿತು. ಸಮಾಜ ಸೇವೆ, ಮಹಿಳೆಯರ ಉದ್ಧಾರ, ದಲಿತರ ಉದ್ಧಾರ, ಕುಷ್ಠರೋಗ ನಿವಾರಣೆ, ವಿದೇಶಗಳಲ್ಲಿ ದುಡಿಯುವ ಭಾರತೀಯ ಕೂಲಿಯಾಳುಗಳ ದುರವಸ್ಥೆ, ಮಹಾ ಪುರುಷರ ಜೀವನ ಯಾವ ವಿಷಯವನ್ನು ಕುರಿತು ಬರೆದರೂ ಸರಳ, ಸುಂದರ, ಆಕರ್ಷಕ, ತಿಳಿ.

ದೇಶದಲ್ಲಿ ವಿಜ್ಞಾನ ಪ್ರೇಮವನ್ನು ಬೆಳೆಸುವುದಕ್ಕಾಗಿ ಆಚಾರ‍್ಯ ಪ್ರಫುಲ್ಲ ಚಂದ್ರ, ಜಗದೀಶಚಂದ್ರ, ನೀಲರತನ ಸರ್ಕಾರ ಮೊದಲಾದವರು ಪ್ರಾರಂಭಿಸಿದ ‘ನೇಚರ್ ಸೊಸೈಟಿ’ಯಲ್ಲಿಯೂ ರಮಾನಂದ ಬಾಬುಗಳು ಕ್ರಿಯಾಶೀಲ ಸದಸ್ಯರಾಗಿದ್ದರು. ಅಲ್ಲದೆ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನಗಳಲ್ಲಿ ೧೮೮೬ ರಿಂದಲೂ ಭಾಗವಹಿಸುತ್ತ ಬಂದಿದ್ದ ಅವರು ಭಾರತದಲ್ಲಿ ಪ್ರಜಾ ಪ್ರತಿನಿಧಿ ಸಭೆಗಳ ಸ್ಥಾಪನೆಯಾಗಬೇಕೆಂದು ಚಳುವಳಿ ಯನ್ನೂ ನಡೆಸಿದರು.

ಅಲಹಾಬಾದಿಗೆ

ಆದರೆ ಕಾಲೇಜಿನಲ್ಲಿ ಅವರ ಸಂಬಳ ೧೪೦ ರೂಪಾಯಿಗೆ ನಿಂತಿದ್ದು, ಆಗಲೇ ಇಬ್ಬರು ಮಕ್ಕಳ ತಂದೆಯಾಗಿದ್ದ ಅವರ ಸಂಸಾರ ನಿರ್ವಹಣೆಗೆ  ಏನೂ ಸಾಲುತ್ತಿರಲಿಲ್ಲ. ಸಂಬಳ ಏರುವ ಲಕ್ಷಣವೂ ಇರಲಿಲ್ಲ. ಹೀಗಿರುವಾಗ ಅಲಹಾಬಾದಿನ ಕಾಯಸ್ಥ ಪಾಠ ಶಾಲೆಯವರು ಸ್ಥಾಪಿಸಿದ್ದ ಸೆಕೆಂಡ್ ಗ್ರೇಡ್ ಕಾಲೇಜಿಗೆ ಪ್ರಿನ್ಸಿಪಾಲರಾಗಿ ಬರಬೇಕೆಂದು ಅವರಿಗೆ ಕರೆ ಬಂತು. ಸಂಬಳ ೨೫೦ ರೂಪಾಯಿ.

೧೮೯೫ ಸೆಪ್ಟೆಂಬರ್‌ದಲ್ಲಿ ಭಾರತದ ಮಹಾಕ್ಷೇತ್ರ ವಾದ ಪ್ರಯಾಗಕ್ಕೆ (ಅಲಹಾಬಾದ್) ಬಂದರು. ಮುಂದಿನ ಹನ್ನೊಂದು ವರ್ಷ ಅದೇ ಅವರ ಕಾರ್ಯಕ್ಷೇತ್ರ ವಾಯಿತು.

ತಾವೆಷ್ಟು ಒಳ್ಳೇ ಅಧ್ಯಾಪಕರೋ ಅಷ್ಟೇ ದಕ್ಷ ಪ್ರಿನ್ಸಿಪಾಲರೂ ಹೌದೆಂದು ರಮಾನಂದ ಬಾಬುಗಳು ತೋರಿಸಿ ಕೊಟ್ಟರು. ಕಾಯಸ್ಥ ಸಮಾಜ ಶ್ರೀಮಂತ ಸಮಾಜ. ಹಣದ ಕೊರತೆ ಇರಲಿಲ್ಲ. ಆದರೆ ಅಲಹಾಬಾದ್, ಕಲ್ಕತ್ತೆಯಷ್ಟು ಮುಂದುವರಿದದ್ದಲ್ಲ; ಜನ ಹಳೇ ಕಾಲದ ವಿಚಾರದವರು. ಇಂಥಲ್ಲಿ ರಮಾನಂದರು ತಮ್ಮ ಸಂಘಟನಾಚಾತುರ‍್ಯದಿಂದ ಒಂದೇ ವರ್ಷದಲ್ಲಿ ಶಿಕ್ಷಣ ಮಟ್ಟ ಏರಿಸಿದರು. ಉತ್ತಮ ಪರೀಕ್ಷಾ ಫಲಿತಾಂಶ ಬರತೊಡಗಿತು. ಒಳ್ಳೇ ಪ್ರೊಫೆಸರರೂ ಬುದ್ಧಿವಂತ ವಿದ್ಯಾರ್ಥಿಗಳೂ ಆಕರ್ಷಿತರಾದರು.

ಶಿಕ್ಷಣ ಎಂದರೆ ಪರೀಕ್ಷೆಗಳಲ್ಲಿ ತೇರ್ಗಡೆ ಯಾಗುವುದೊಂದೇ ಅಲ್ಲ. ಇದು ಚಟರ್ಜಿಯವರ ಪದ ವಾಕ್ಯವಾಗಿತ್ತು. ವಿದ್ಯಾರ್ಥಿಗಳು ದೇಶಪ್ರೇಮಿಗಳಾಗಬೇಕು, ಸಮಾಜ ಸೇವೆ ಮಾಡಲು  ಅಣಿಯಾಗಬೇಕು. ಇಂಥ ಆದರ್ಶಗಳನ್ನು ಪ್ರಿನ್ಸಿಪಾಲರು ತಮ್ಮ ನಡೆ ನುಡಿಗಳೆರಡ ರಿಂದ ಪ್ರತಿಪಾದಿಸಿದರು ಆಗ ಕಾಯಸ್ಥ ಪಾಠಶಾಲೆಯಲ್ಲಿ ಓದಿದ ಅನೇಕರು ಮುಂದೆ ದೇಶದಲ್ಲಿ ಹೆಸರಾದರು. ಅರವಿಂದ ಯೋಗಿಗಳೊಡನೆ ಸೇರಿ ಕ್ರಾಂತಿಕಾರರಾದ ಜತೀಂದ್ರನಾಥ ಬ್ಯಾನರ್ಜಿ (ಸ್ವಾಮಿ ನಿರಾಲಂಬ), ರಾಜರ್ಷಿಗಳೆಂದು ಮನ್ನಣೆ ಹೊಂದಿ ಮುಂದೆ ಕಾಂಗ್ರೆಸ್ ಅಧ್ಯಕ್ಷರಾದ ಪುರುಷೋತ್ತಮದಾಸ ಟಂಡನ್ ಮೊದಲಾದವರು ರಮಾನಂದ ಶಿಷ್ಯಕೋಟಿಯವರು.

ಸ್ವತಃ ರಮಾನಂದರ ತರಗತಿಗಳೆಂದರೆ ರಸಝರಿಗಳಾಗಿದ್ದವು. ಅವರು ಇಂಗ್ಲಿಷ್ ಸಾಹಿತ್ಯ ಪಾಠ ಹೇಳುತ್ತಿದ್ದರೆ ತರಗತಿ ಸ್ತಬ್ಧವಾಗಿ ಆಲಿಸುತ್ತಿತ್ತು. ಅಂಥಾ ಪಾಂಡಿತ್ಯ, ಅಂಥ ವಾಗ್ವೈಖರಿ.

ಕಾಲೇಜು ಆಟಪಾಠ, ವಾಕ್ ಸ್ಪರ್ಧೆ, ಶಿಕ್ಷಣ ಪ್ರವಾಸ ಮೊದಲಾದ ಹೊರ ಚಟುವಟಿಕೆಗಳಲ್ಲಿಯೂ ನಿರತ ವಾಗಿರುತ್ತಿತ್ತು. ಒಟ್ಟಿನಲ್ಲಿ ಅದು ಆದರ್ಶ ಕಾಲೇಜಾಗಿ ರೂಪುಗೊಂಡಿತ್ತು.

ಸೇವೆಯ ಉತ್ಸಾಹ

ಚಟರ್ಜಿಯವರ  ಕಾರ್ಯ್ಯೋತ್ಸಾಹ ಕಾಲೇಜಿನ ಸೀಮೆ ದಾಟಿ ಬಹುರಂಗಗಳನ್ನು ವ್ಯಾಪಿಸಿತ್ತು. ಮಧ್ಯಪಾನ ವನ್ನು ತಡೆಗಟ್ಟುವುದರಲ್ಲಿ ಅವರು ವಹಿಸಿದ ಆಸಕ್ತಿಯ ಫಲವಾಗಿ ಸಂಯುಕ್ತಪ್ರಾಂತ (ಈಗ ಉತ್ತರ ಪ್ರದೇಶ) ಪಾನ ನಿರೋಧ (ಟೆಂಪರೆನ್ಸ್) ಸಮಿತಿಗೆ ಅವರನ್ನು ಉಪಾಧ್ಯಕ್ಷ ರಾಗಿ ಮಾಡಲಾಯಿತು. ಮಧ್ಯಪಾನದ ದುಷ್ಟರಿಣಾಮಗಳ ಬಗ್ಗೆ ಆಗ ಅವರು ತಯಾರಿಸಿದ ವ್ಯಾಪಕವಾದ ವರದಿಗೆ ವಿದೇಶಗಳಲ್ಲಿಯೂ ಮೆಚ್ಚಿಕೆ ದೊರೆಯಿತು.

೧೮೯೬ ರಲ್ಲಿ ಉತ್ತರ ಭಾರತದಲ್ಲಿ ಬರಗಾಲ ಬಿದ್ದಾಗ ಅದರಲ್ಲಿ ಅನಾಥರಾದ ಮಕ್ಕಳ ರಕ್ಷಣೆಗೆ ಸ್ಥಾಪಿತವಾದ ಆಶ್ರಮಕ್ಕೆ ಅವರು ಕಾರ್ಯದರ್ಶಿಗಳಾಗಿದ್ದರು. ಅನಂತರದ ಎರಡು ಪ್ಲೇಗ್ ಹಾವಳಿಗಳ ಕಾಲದಲ್ಲಿ ಹಿತೈಷಿಗಳು ಊರು ಬಿಡುವಂತೆ ಎಷ್ಟು ಉಪದೇಶಿಸಿದರೂ ಕೇಳದೆ, ಜೀವವನ್ನು ಗಂಡಾಂತರಕ್ಕೊಳಗುಮಾಡಿ ರೋಗಿಗಳ ಶುಶ್ರೂಷೆ ಮಾಡುತ್ತಾ ಅಲಹಾಬಾದಿನಲ್ಲೇ ಉಳಿದರು.

ಬ್ರಾಹ್ಮ ಸಮಾಜದ ಕಾರ್ಯವನ್ನೂ ಅವರು ಬಿಡಲಿಲ್ಲ.

ಅದರ ಪರವಾಗಿ ಸೇವಾಕಾರ್ಯವನ್ನು ಸಂಘಟಿಸಿದರು. ಅಂತರ್ಜಾತೀಯ ವಿವಾಹಗಳಿಗೆ ಪ್ರೋತ್ಸಾಹ ಕೊಟ್ಟರು.

ರಮಾನಂದ ಬಾಬುಗಳು ನಿಷ್ಠಾವಂತ ಬ್ರಾಹ್ಮ ಸಮಾಜಿಯಾದರೂ ಎಲ್ಲ ಮತಗಳ ಜನರ ಸಂಗಡ ಸ್ನೇಹ ಇರಿಸಿಕೊಂಡಿದ್ದರು. ಅವರ ಮನೆಯಲ್ಲಿ ವೈದಿಕ ಪಂಡಿತರೂ, ಮುಸ್ಲಿಂ ಮೌಲವಿಗಳೂ, ಕ್ರೈಸ್ತ ಪಾದ್ರಿಗಳೂ ಸೇರಿ ಧರ್ಮಚರ್ಚೆ ನಡೆಸುತ್ತಿದ್ದುದುಂಟು. ಹಿಂದೂ ಮೇಳ, ಜಾತ್ರೆಗಳಲ್ಲಿಯೂ ಅವರ ಸಹಕಾರ ಇತ್ತು.

ಹೋರಾಟ

ಅಲಹಾಬಾದಿನಲ್ಲಿ ರಮಾನಂದರಿದ್ದಾಗ ಮಾಡಿದ ಅತಿ ದೊಡ್ಡ ಕೆಲಸವೆಂದರೆ ಅಲ್ಲಿನ ಶಿಕ್ಷಣಪದ್ಧತಿಯಲ್ಲಿದ್ದ ದೊಡ್ಡ ಅನ್ಯಾಯವನ್ನು ತೊಡೆದು ಹಾಕಲು ಸರ್ಕಾರ ದೊಡನೆ ದೀರ್ಘ ಹೋರಾಟ ಹೂಡಿ ಗೆದ್ದದ್ದು. ೧೮೫೭ ರ ಸ್ವಾತಂತ್ರ್ಯ ಸಮರದಲ್ಲಿ ಸಂಯುಕ್ತ ಪ್ರಾಂತ ಮುಂಚೂಣಿ ಯಲ್ಲಿತ್ತೆಂಬ ಅನುಮಾನ ಸರ್ಕಾರದ ಮನಸ್ಸಿನಲ್ಲಿತ್ತು. ಆದ್ದರಿಂದ ಆ ಪ್ರದೇಶದ ಜನರು ಉಚ್ಛ ಶಿಕ್ಷಣ ಪಡೆಯುವುದಕ್ಕೆ ಸಾಧ್ಯವಿದ್ದ ಎಲ್ಲ ಅಡ್ಡಿಗಳನ್ನು ತರುವುದು ಅದರ ಆಶಯ. ಒಂದು ಮೆಟ್ರಿಕ್ ಮುಗಿಸಬೇಕಾದರೆ ಮೂರು ಮೂರು ಬಿಗಿಯಾದ ಸರಕಾರಿ ಪರೀಕ್ಷೆಗಳನ್ನು ದಾಟಿಬರಬೇಕು. ಇದರಿಂದ ಅಸಂಖ್ಯ ವಿದ್ಯಾರ್ಥಿಗಳಿಗೆ ಕಾಲೇಜು ಸೇರುವುದೇ ಅಸಾಧ್ಯವಾಗಿತ್ತು. ಇದರ ವಿರುದ್ಧ ರಮಾನಂದರು ಬಂಡಾಯ ಹೂಡಿದರು. ಅಲಹಾಬಾದಿನ ಅಡ್ವೋಕೇಟ್’ ಪತ್ರಿಕೆಯಲ್ಲಿ ‘ನಿರಪರಾಧಿಗಳ ಕೊಲೆ’ ಎಂಬ ಹೆಸರಿನಲ್ಲಿ ಅವರು ಈ ಅನ್ಯಾಯವನ್ನು ಬೆಳಕಿಗೆ ಒಡ್ಡಿ ಬರೆದ ಉಗ್ರಲೇಖನಗಳನ್ನು ನೋಡಿ ಸರ್ಕಾರ ಉರಿದೆದ್ದಿತು. ಆದರೆ ಅದೆಷ್ಟು ಪರಿಣಾಮಕಾರಿಯಾಗಿ ತ್ತೆಂದರೆ ಸಾರ್ವಜನಿಕ ಅಭಿಪ್ರಾಯಕ್ಕೆ ಮಣಿದು ರಮಾನಂದರ ಸೂಚನೆಯಂತೆ ಮೆಟ್ರಿಕ್ಕಿಗೆ ಒಂದೇ ಸರ್ಕಾರಿ ಪರೀಕ್ಷೆಯನ್ನು ಏರ್ಪಡಿಸಲು ಸರ್ಕಾರ ಒಪ್ಪಲೇ ಬೇಕಾಯಿತು. ಆಗಲೇ ಪಂಡಿತ ಮದನಮೋಹನ ಮಾಲವೀಯರು ರಮಾನಂದರನ್ನು ‘ಪ್ರಚಂಡ ಹೋರಾಟಗಾರ’ ಎಂದು ಮೆಚ್ಚಿ ಕರೆದದ್ದು.

ಇಂಥ ವ್ಯಕ್ತಿಗೆ ಉತ್ತರ ಪ್ರದೇಶದ ಮಹಾ ಮಹಾ ಮುಂದಾಳುಗಳ ಸ್ನೇಹವಾದದ್ದು ಸ್ವಾಭಾವಿಕ. ಅಲಹಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪಂಡಿತ ಸುಂದರಲಾಲ, ಮದನಮೋಹನ ಮಾಲವೀಯ, ಪಂಡಿತ ಮೋತಿಲಾಲ ನೆಹರು, ನ್ಯಾಯವಾದಿ ತೇಜಬಹಾದೂರ್ ಸಪ್ರು ಮೊದಲಾದವರು ಅವರ ಮಿತ್ರವರ್ಗಕ್ಕೆ ಸೇರಿದವರು. ಸಮಾಜ ಸೇವಾ ಕಾರ್ಯಕ್ಕಾಗಿ ಭಾರತಕ್ಕೆ ಬಂದಿದ್ದ ಬ್ರಿಟಿಷ್ ಮಿಷನರಿ ಜೆ. ಟಿ. ಸಂಡರ್ ಲ್ಯೆಂಡರು ಕೂಡ ಅವರ ಆಜೀವ ಸ್ನೇಹಿತರಾದರು.

ಪ್ರಿನ್ಸಿಪಾಲ್ ಹುದ್ದೆಗೆ ವಿದಾಯ

ಕಾಯಸ್ಥ ಕಾಲೇಜು ಉಚ್ಛ್ರಾಯಕ್ಕೆ ಬಂತೇನೋ ಸೈ. ಆದರೆ ಆಡಳಿತ ಮಂಡಳಿಗೂ ಪ್ರಿನ್ಸಿಪಾಲರಿಗೂ ಮತಭೇದ ಹೆಚ್ಚುತ್ತಿತ್ತು. ಪ್ರಗತಿಪರ, ಸಮಾಜ ಸುಧಾರಕ, ಹೋರಾಟಗಾರ ರಮಾನಂದರ ಅನೇಕ ರೀತಿಗಳು ಹಳೆಗಾಲದ ವಿಚಾರ ಇಟ್ಟುಕೊಂಡ ಆಡಳಿತ ಮಂಡಳಿ ಸದಸ್ಯರಿಗೆ ಒಪ್ಪುತ್ತಿರಲಿಲ್ಲ. ಕಾಲೇಜಿಗೆ ಉತ್ತಮ ಪುಸ್ತಕಾಲಯ ಬೇಕು, ಹಾಸ್ಟೆಲ್ ಬೇಕು ಇತ್ಯಾದಿ ಯೋಜನೆ ಗಳು ಆಡಳಿತ ಮಂಡಳಿಯ ಮಂಜೂರಿ ಪಡೆಯಲಿಲ್ಲ. ಪಂಡಿತ ಮಾಲವೀಯರು ಮಧ್ಯಸ್ಥಿಕೆ ಮಾಡಿದರೂ ಮತಭೇದ ಬಗೆಹರಿಯಲಿಲ್ಲ. ೧೯೦೬ ರ ಸಪ್ಟೆಂಬರ್‌ದಲ್ಲಿ ರಮಾನಂದ ಬಾಬುಗಳು ರಾಜೀನಾಮೆ ಕೊಟ್ಟರು.

ಸುದ್ದಿ ಹರಡುತ್ತಲೇ ರಮಾನಂದರಿಗೆ ನಾಗಪುರದ ಒಂದು ಕಾಲೇಜಿನಿಂದ, ಕಲಕತ್ತೆಯ ರಿಪ್ಪನ್ ಕಾಲೇಜಿನಿಂದ ಮತ್ತು ಲಾಲಾಲಜಪತರಾಯರು ಲಾಹೋರಿನಲ್ಲಿ ನಡೆಸುತ್ತಿದ್ದ ದಯಾಲಸಿಂಹ ಕಾಲೇಜಿನಿಂದ ಪ್ರಿನ್ಸಿಪಾಲ ರಾಗಲು ಕರೆಗಳು ಬಂದವು. ಅಲಹಾಬಾದಿನ ಇಂಡಿಯನ್ ಪ್ರೆಸ್ಸಿನ ಒಡೆಯರಾದ ಚಿಂತಾಮಣಿ ಘೋಷರು ಚಟರ್ಜಿಯವರ ಅಂತರಂಗ ಮಿತ್ರರು. ಅವರು ತಮ್ಮ ಪ್ರಕಟಣ ವಿಭಾಗದ ಮೇನೇಜರ್ ಪದವನ್ನೂ ಸಾವಿರ ರೂಪಾಯಿಗಳಿಗೆ ಮೇಲ್ಪಟ್ಟು ಸಂಬಳವನ್ನೂ ಕೊಡುತ್ತೇನೆಂದರು. ಪಂಡಿತ ಮೋತಿಲಾಲ ನೆಹರು ಹೊರಡಿಸಬೇಕೆಂದಿದ್ದ ‘ಇಂಡಿಪೆಂಡೆಂಟ್’ ಪತ್ರಿಕೆU’ ಸಂಪಾದಕರಾಗುವುದಾದರೆ ಕೇಳಿದಷ್ಟು’ ಸಂಬಳ ಕೊಡು ವುದಾಗಿ ಹೇಳಿದರು. ಎಲ್ಲ ಕೊಡುಗೆಗಳನ್ನೂ ನಿರಾಕರಿಸಿ ರಮಾನಂದ ಬಾಬುಗಳು ಸ್ವತಂತ್ರ್ಯವಾಗಿ ಪತ್ರಿಕೋದ್ಯೋಗ ವನ್ನು ಬೆಂಬತ್ತಲು ನಿರ್ಧರಿಸಿದರು.

ಪ್ರವಾಸಿ

ಪತ್ರಿಕೋದ್ಯೋಗಕ್ಕೆ ರಮಾನಂದರೇನೂ ಹೊಸಬರಲ್ಲವಷ್ಟೇ.‘ದಾಸಿ’ ‘ಧರ್ಮಬಂಧು’ ಪತ್ರಿಕೆಗಳಿಗೆ ಅವರು ಸಂಪಾದಕರಾಗಿದ್ದುದನ್ನು ಹಿಂದೆ ಹೇಳಿದೆ. ಅಲಹಾಬಾದಿಗೆ ಬಂದ ಮೇಲೆ, ೧೮೯೭ ರಲ್ಲಿ ವೈ ಕುಂಠ ನಾಥದಾಸರೆಂಬುವರು ಕಲಕತ್ತೆಯಿಂದ ಹೊರಡಿಸುತ್ತಿದ್ದ ‘ಪ್ರದೀಪ’ ಎಂಬ ಮಾಸಪತ್ರಿಕೆಗೂ ಅವರು ಕೆಲಕಾಲ ಸಂಪಾದಕರಾಗಿದ್ದರು.

‘ಪ್ರದೀಪ’ ದ ಸಂಪಾದಕತ್ವ ಬಿಟ್ಟ ಮೇಲೆ ೧೯೦೧ರಲ್ಲಿ ಬಂಗಾಲಿ ಭಾಷೆಯಲ್ಲಿ ಅವರು ‘ಪ್ರವಾಸಿ’ ಎಂಬ ಮಾಸಿಕವನ್ನು ಸ್ವಂತ ಜವಾಬ್ದಾರಿಯಿಂದ ಪ್ರಾರಂಭಿಸಿದ್ದರು. ಆ ವರ್ಷ ಏಪ್ರಿಲ್‌ನಲ್ಲಿ ಹೊರಬಂದ ಅದರ ಪ್ರಥಮ ಸಂಚಿಕೆಯನ್ನು ನೋಡಿ ಬಂಗಾಲದಲ್ಲಿ ಒಂದು ಆಶ್ಚರ್ಯಲಹರಿಯೇ ಎದ್ದಿತೆನ್ನಬಹುದು. ಸಾವಿರ ಮೈಲಿ ದೂರದ ಅಲಹಾಬಾದಿನಲ್ಲಿ ಕೂತು ಒಂದು ಪತ್ರಿಕೆ ಸಂಪಾದಿಸಿ, ಅಲ್ಲೇ ಮುದ್ರಿಸಿ, ಬಂಗಾಲದಲ್ಲಿ ಪ್ರಸಾರಕ್ಕೆ ತರುವ ಧೈರ್ಯವೇ ದೊಡ್ಡದು. ಪತ್ರಿಕೆಯ ಒಳಹೊರಗಿನ ಚೆಲುವು, ತೂಕ ಅದಕ್ಕಿಂತ ದೊಡ್ಡ ಆಶ್ಚರ್ಯವಾಗಿತ್ತು.  ಈ ಹಿಂದೆ ಶ್ರೇಷ್ಠ ಸಾಹಿತಿಗಳಾದ ಬಂಕಿಂಚಂದ್ರರ ‘ಭಾರತಿ’ ರವೀಂದ್ರನಾಥರ ‘ಸಾಧನಾ’ ಮುಂತಾದ ಉಚ್ಚಮಟ್ಟದ ಸಾಹಿತ್ಯ ಪತ್ರಿಕೆಗಳು ಇದ್ದುವು. ಆದರೆ ಅವು ನಷ್ಟಹೊಂದಿ ನಿಂತು ಹೋಗಿದ್ದವು. ಇದು ಅವೆಲ್ಲವುಗಳಿಗಿಂತ ಬೇರೆಯೇ ತರಹದ ವೈಖರಿಯನ್ನು ತೋರಿಸುವಂಥ ಪತ್ರಿಕೆಯಾಗಿತ್ತು. ಹೊರ ಹೊದಿಕೆಯಲ್ಲೇ ಮೋಹಕ ವೈಶಿಷ್ಟ್ಯವಿತ್ತು. ಅಖಿಲ ಭಾರತದ ಪ್ರಾಚೀನ, ಮಧ್ಯಯುಗೀನ, ಹಿಂದು, ಮುಸ್ಮೀಂ ಶಿಲ್ಪಗಳ ರೇಖಾಚಿತ್ರಗಳನ್ನು ಕಲಾಪೂರ್ಣವಾಗಿ ಜೋಡಿಸಿದ ಈ ಹೊದಿಕೆಯೇ ಭಾರತೀಯ ಸಂಸ್ಕೃತಿಯ ಪ್ರತಿಬಿಂಬದಂತಿತ್ತು. ಒಳಗೆ ಹೆಸರಾಂತ ರವೀಂದ್ರನಾಥ ರಂಥ  ಸಾಹಿತಿಗಳ ಕವಿತೆ, ಲೇಖನಗಳು, ಸ್ವತಃ ರಮಾನಂದ ಬಾಬುಗಳೇ ಬರೆದ ಸಂಪಾದಕೀಯ ಟಿಪ್ಪಣಿ ಗಳು, ಅವು ರಾಜಕೀಯ, ಸಾಮಾಜಿಕ, ಸ್ವದೇಶ, ವಿದೇಶಗಳ ಆಗುಹೋಗುಗಳ ದಿಗ್ದರ್ಶನದಂತಿದ್ದವು. ಪ್ರಥಮ ಸಂಚಿಕೆಯ ೪೦ ಪುಟಗಳಲ್ಲಿ ೧೬ ಚಿತ್ರಗಳು ಅಜಂತ ಗುಹಾಲಯಗಳ ಬಗ್ಗೆ ತ್ರಿವರ್ಣ ಚಿತ್ರ ಸಮೇತ ಆಕರ್ಷಕ ಲೇಖನ. ಬರವಣಿಗೆ ತೂಕದ್ದಾದರೂ ಎಲ್ಲರಿಗೂ ಅರ್ಥವಾಗುವಂಥಾದ್ದು. ಇಲ್ಲ ಇಂಥಾದ್ದು ಬಂಗಾಲಿ ಯಲ್ಲೇ ಏಕೆ, ಭಾರತದ ಯಾವ ಭಾಷೆಯಲ್ಲಿ ಇಂಗ್ಲಿಷಿನಲ್ಲಿ ಕೂಡ ಬೇರೆ ಇರಲಿಲ್ಲ.

ಮೊದಲ ಸಂಚಿಕೆ ಕೆಲವೇ ದಿನಗಳಲ್ಲಿ ಮುಗಿದು ಹೋಗಿ ಅದನ್ನು ಪುನರ್ಮುದ್ರಿಸಿ ಕಳಿಸಬೇಕಾಯಿತು. ರಮಾನಂದರ ಸಂಪಾದಕತ್ವದಲ್ಲಿ ನಲವತ್ತು ವರ್ಷ ಮೇಲ್ಪಟ್ಟು ನಡೆದ ‘ಪ್ರವಾಸಿ’ಗೆ ಸರಿದೂಗುವಂಥ ವಿಶ್ವತೋಮುಖ ಮಾಸಿಕ ಕಡೆವರೆಗೂ ಬರಲಿಲ್ಲ. ಅದಕ್ಕೆ ಲೇಖನ ಬರೆದು ಕೊಡುವುದೇ ಒಂದು ಭೂಷಣ ಎನಿಸಿತು. ಕವಿ ರವೀಂದ್ರರ ಅನೇಕ ಕವಿತೆಗಳೂ ಕಾದಂಬರಿಗಳೂ ಅದರಲ್ಲೇ ಮೊದಲು ಬೆಳಕು ಕಂಡವು. ವಿಶ್ವವಿಖ್ಯಾತ ವಿಜ್ಞಾನಿ ಜಗದೀಶಚಂದ್ರ ಬೋಸರು ಅದಕ್ಕಾಗಿ ಬಂಗಾಲಿ ಯಲ್ಲೇ ವಿಜ್ಞಾನ ಲೇಖನಗಳನ್ನು ಬರೆದರು.

ಪ್ರಾಚೀನ ಭಾರತೀಯ ಚಿತ್ರಕಲೆ ಶಿಲ್ಪಕಲೆಗಳನ್ನು ವಿದ್ಯಾವಂತರ ಗಮನಕ್ಕೆ ತಂದು ಅಭಿಮಾನ ಹುಟ್ಟಿಸುವ ಕೆಲಸವನ್ನು ಅದು ಉದ್ದಕ್ಕೂ ಮಾಡಿತು. ಆಧುನಿಕ ಭಾರತದಲ್ಲಿ ಮುಂದೆ ಹೆಸರಾದ ಚಿತ್ರ-ಶಿಲ್ಪ ಕಲಾವಿದರನ್ನು ಬೆಳಕಿಗೆ ತಂದದ್ದೂ ಅದೇ. ರಾಜಾ ರವಿವರ್ಮ, ಅವನೀಂದ್ರನಾಥ ಠಾಕೂರ್, ಅನಂತರದವರಾದ ನಂದಲಾಲ ಬಸು, ಓ. ಸಿ. ಗಾಂಗುಲಿ, ಎಂ. ವಿ. ದುರಂಧರ ಮೊದಲಾದವರ ವರ್ಣಚಿತ್ರಗಳೂ ಪರಿಚಯಗಳೂ ‘ಪ್ರವಾಸಿ’ಯ ಮೂಲಕ ತಿಂಗಳು ತಿಂಗಳು ಪ್ರಕಟವಾದವು.

ಅದರಲ್ಲಿ ಸಾಹಿತ್ಯವಿತ್ತು, ಕಲೆಯಿತ್ತು, ರಾಜಕೀಯ ವಿತ್ತು, ಸಾಮಾಜಿಕ ಆರ್ಥಿಕ ಚರ್ಚೆಯಿತ್ತು, ಭಾರತದ ಗುಡ್ಡಗಾಡಿನ ಜನಾಂಗಗಳ ಜೀವನ ಪರಿಚಯವಿತ್ತು ಒಟ್ಟಿನಲ್ಲಿ ಅದು ಭಾರತದ ಗತಕಾಲದ ಹಿರಿಮೆಗೆ ಕನ್ನಡಿಯಾಗಿತ್ತು, ದೇಶದ ಇಂದಿನ ನಾಳಿನ ಆಶೋತ್ತರಗಳ ಧ್ವನಿಯಾಗಿತ್ತು.

ದಿಟ್ಟತನ

‘ಪ್ರವಾಸಿ’ಯ ಯಶಸ್ಸು ರಮಾನಂದ ಬಾಬುಗಳಲ್ಲಿ ಒಂದು ಆತ್ಮವಿಶ್ವಾಸವನ್ನು ತಂದಿರಬೇಕು. ಆದ್ದರಿಂದ ಕಾಯಸ್ಥ ಕಾಲೇಜಿನಿಂದ ಹೊರಬೀಳುವ ಏಣಿಕೆ ಬಂದಾಗ ಅವರು ಇಂಗ್ಲಿಷಿನಲ್ಲಿ ಒಂದು ಮಾಸಪತ್ರಿಕೆ ಆರಂಭಿಸ ಬೇಕೆಂದು ನಿರ್ಧರಿಸಿಕೊಂಡರು. ಅವರ ಈ ಸಂಕಲ್ಪವನ್ನು ಕೇಳಿ ಅವರ ಹಿತೈಷಿಗಳು ಇದು ತೀರ ಆಳದ ನೀರಿ ಗಿಳಿ ಯುವ ವ್ಯಾಪಾರವಲ್ಲವೇ ಎಂದರಂತೆ. ಚಟರ್ಜಿ ಯವರ ಹತ್ತಿರ ಬಂಡವಾಳ ಇರಲಿಲ್ಲ; ಸ್ವಂತ ಮುದ್ರಣಾಲಯ ಇರಲಿಲ್ಲ. ಅವರ ‘ಪ್ರವಾಸಿ’ ಲಾಭ ದಾಯಕವಾಗಿರಲಿಲ್ಲ, ಅವರಲ್ಲಿದ್ದುದು ಅಪಾರ ಪಾಂಡಿತ್ಯ, ಅಸಂಖ್ಯ ದೇಶೀ ವಿದೇಶಿ ಸ್ನೇಹಿತರ ಆಸರೆ, ಮಾಡಿ ಗೆಲ್ಲುವೆನೆಂಬ ಉತ್ಸಾಹ ಮಾತ್ರ; ಸಂಗಡ ದೇಶದ ಬಗ್ಗೆ ಕಳಕಳಿ.

ದೇಶ ದುಃಸ್ಥಿತಿಯಲ್ಲಿತ್ತು. ಆಗಿನ ವೈಸರಾಯ್ ಲಾರ್ಡ್ ಕರ್ಜನ್ ಭಾರತದ ದೇಶಾಭಿಮಾನವನ್ನು ಮುರಿಯುವುದಕ್ಕಾಗಿ ಬಂಗಾಲವನ್ನು ಇಬ್ಭಾಗ ಮಾಡಿದ್ದ. ಇದರ ವಿರುದ್ಧ ಎದ್ದ ಪ್ರತಿಭಟನೆಯನ್ನು ಬಡಿಗೆ, ದಸ್ತಗಿರಿ, ದಬ್ಬಾಳಿಕೆಗಳಿಂದ ಎದುರಿಸಿದ್ದ. ಈ ಅತ್ಯಾಚಾರವನ್ನು ಖಂಡಿಸಿ ದೇಶಕ್ಕೆ ಧೈರ್ಯ ಮತ್ತು ಮಾರ್ಗದರ್ಶನ ಕೊಡುವುದಕ್ಕೆ ಇಡೀ ದೇಶದಲ್ಲಿ ಪ್ರಸಾರವುಳ್ಳ ಒಂದು ಪತ್ರಿಕೆ ಬೇಕೆಂದು ಅವರಿಗೆ ತೋರಿತ್ತು.

ಮಾಡರ್ನ್ ರಿವ್ಯೂ

ಹೀಗೆ ೧೯೦೭ ಜನವರಿಯಲ್ಲಿ ‘ಮಾಡರ್ನ್ ರಿವ್ಯೂ’ ವಿನ ಮೊದಲ ಸಂಚಿಕೆ ಅಲಹಾಬಾದಿನಿಂದಲೇ ಹೊರಬಿತ್ತು. ಅದರ ಕೆಲ ಮುಂಗಡ ಪ್ರತಿಗಳನ್ನು ಚಟರ್ಜಿಯವರು ಕಲಕತ್ತ ಕಾಂಗ್ರೆಸ್ ಅಧಿವೇಶನಕ್ಕೆ ಒಯ್ದಿದ್ದರು. ಅಲ್ಲಿ ರಾಷ್ಟ್ರನಾಯಕರ ಮೇಲೆ ಅದು ತುಂಬಾ ಪ್ರಭಾವಬೀರಿತು. ಇತಿಹಾಸಜ್ಞ ಯದುನಾಥ ಸರ್ಕಾರ್, ಬ್ರಿಟಿಷ್ ಯುನಿಟರಿ ಮಿಷನ್ನಿನ ಜೆ.ಟಿ. ಸಂಡರ್‌ಲೆಂಡ್, ಸಿ.ಎಫ್. ಆಂಡ್ರೂಸ್, ಜಿ.ವಿ.ಜೋಶಿ, ಕರ್ನಲ್ ಕೀರ್ತಿಕರ್ ಮೊದಲಾದವರ ಲೇಖನಗಳಿದ್ದವು. ರಮಾನಂದರೇ ಕಾಂಗ್ರೆಸ್ ಅಧ್ಯಕ್ಷರಾದ ದಾದಾಭಾಯಿ ನೌರೋಜಿಯವರ ವ್ಯಕ್ತಿ ಪರಿಚಯ ಬರೆದಿದ್ದರು. ಅವರೇ ಬರೆದ ಸಂಪಾದಕೀಯ ಟಿಪ್ಪಣಿಗಳಂತೂ ವಿಷಯ ವೈವಿಧ್ಯ, ವಿಷಯಜ್ಞಾನ, ನಿರ್ಭಯತೆ ಮತ್ತು ವಿವೇಕದ ಘಟ್ಟಿಯಂತಿದ್ದವು.

ದೇಶ ವಿದೇಶಗಳಲ್ಲಿ ‘ಮಾಡರ್ನ್‌ರಿವ್ಯೂ’ಗೆ ಒಮ್ಮತದ ಸ್ವಾಗತ ದೊರೆಯಿತು. ಶ್ರೀ ಅರವಿಂದರು ಇದು ನಮ್ಮ ಮೆಗಜಿನ್ ಸಾಹಿತ್ಯದಲ್ಲಿ ನಿಸ್ಸಂಶಯವಾಗಿ ಹೊಸತರದ್ದು ಎಂದು ‘ವಂದೇ ಮಾತರಂ’ ಪತ್ರಿಕೆಯಲ್ಲಿ ಬರೆದರು. ‘ಇವುಗಳನ್ನು (ಮೊದಲ ಎರಡು ಸಂಚಿಕೆ ಗಳನ್ನು) ನೋಡಿ ನಮಗೆ ಆಶ್ಚರ್ಯವಾಯಿತು. ಇಂಗ್ಲೇಂಡಿನಲ್ಲಿ ಇದಕ್ಕಿಂತ ಮಹತ್ವದ, ಸಾಹಸ, ಗಾಂಭಿರ‍್ಯದ ಪತ್ರಿಕೆ ಇಲ್ಲ,’ ಎಂದು ‘ಲೈಟ್ ಆಫ್ ಲಂಡನ್’ ಪತ್ರಿಕೆ ಬರೆಯಿತು.

ಅದರ ಯೋಜನೆಯು ‘ಪ್ರವಾಸಿ’ಯಂತೆಯೇ ಇತ್ತು. ಸಾಹಿತ್ಯ, ಸಂಸ್ಕೃತಿ, ಕಲೆ, ರಾಜಕೀಯ ಟಿಪ್ಪಣಿ, ವಿದೇಶಗಳಲ್ಲಿರುವ  ಭಾರತೀಯರ ಕಷ್ಟಗಳು ಇತ್ಯಾದಿ, ಆದರೆ ಲೇಖನಗಳ ಹರವು ಇನ್ನೂ ಹೆಚ್ಚು. “ರಿವ್ಯೂ” ತತ್‌ಕ್ಷಣ ದೇಶದ ನೇತಾರರ ಮನ್ನಣೆಯನ್ನೂ ಅಖಿಲ ಭಾರತದಲ್ಲಿ ವಿದ್ಯಾವಂತರ ಮನಸ್ಸನ್ನೂ ಗೆದ್ದುಕೊಂಡಿತು.

ಜೊತೆಗೆ ಪತ್ರಿಕೆ ಬ್ರಿಟಿಷ್ ಸರ್ಕಾರದ ಕ್ರೋಧವನ್ನೂ ಸಂಪಾದಿಸಿತು. ಅದರಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ನಿಷ್ಠುರ ಟೀಕೆಗಳಿದ್ದವು. ಮೊದಲು ರಮಾನಂದ ಬಾಬುಗಳನ್ನೂ ಅಂತರ ಸಹಕಾರಿ ಪ್ರೊಫೆಸರ್ ನೇಪಾಲ ಚಂದ್ರರಾಯರನ್ನೂ ಅಪಾಯಕರ ವ್ಯಕ್ತಿಗಳೆಂದು ಸಂಯುಕ್ತ ಪ್ರಾಂತದಿಂದ ಗಡೀಪಾರು ಮಾಡಲಾಯಿತು. ಅನಂತರ ಪತ್ರಿಕೆಯನ್ನೇ ಆ ಪ್ರಾಂತದಲ್ಲಿ ಪ್ರಕಟಿಸಬಾರದೆಂದು ಆಜ್ಞೆ ಬಂತು.

ಸರಿ, ರಮಾನಂದರು ಅಲಹಾಬಾದ್ ಬಿಡಲೇ ಬೇಕಾಯಿತು. ೧೯೦೮ ರ ಪ್ರಾರಂಭದಲ್ಲಿ ಅವರು ಸಂಸಾರ ಸಮೇತ ಕಲಕತ್ತೆಗೆ ಬಂದು, ಚಿಕ್ಕ ಬಾಡಿಕೆ ಮನೆ ಹಿಡಿದು ಮೇಲಂತಸ್ತಿನಲ್ಲಿ ಸಂಸಾರ, ಕೆಳಗೆ ಪತ್ರಿಕಾ ಕಛೇರಿ ಸ್ಥಾಪಿಸಿ ತಮ್ಮ ಪತ್ರಿಕೆಗಳನ್ನು ಅಲ್ಲಿಂದಲೇ ಹೊರಡಿಸತೊಡಗಿದರು.

‘ರಿವ್ಯೂ’ ಕೀರ್ತಿ ಹಬ್ಬುತ್ತಿತ್ತು. ಅರವಿಂದ ಘೋಷ, ಗೋಪಾಲಕೃಷ್ಣ ಗೋಖಲೆ, ಚಿತ್ತರಂಜನದಾಸ, ಮೋತೀಲಾಲ ನೆಹರು, ಮದನ ಮೋಹನ ಮಾಲವೀಯ ರಂಥ ಮಹಾ ಪ್ರಭೃತಿಗಳು ಅದನ್ನು ತಪ್ಪದೇ ಓದುತ್ತಿದ್ದರು.

ಅದು ವಿದೇಶಿ ಆಳರಸರಿಗೆ ಯಾವಾಗಲೂ ಪಕ್ಕೆಯ ಮುಳ್ಳಾಗಿತ್ತು. ಆದರೆ ಬಹುತರವಾಗಿ ಚಟರ್ಜಿ ಯವರು ತಾವು ಹೇಳುವ ವಿಷಯ ಸತ್ಯವೆಂದು ಖಚಿತಪಡಿಸಿ ಕೊಂಡಿರುತ್ತಿದ್ದರು; ಕಾನೂನಿನ ಮಿತಿಗಳನ್ನು ಮೀರುತ್ತಿರಲಿಲ್ಲ. ‘ಅಯ್ಯೋ! ಈತನ ಹೇಳಿಕೆಗಳಲ್ಲಿ ಏನಾದರೂ ಸುಳ್ಳು ಸಿಕ್ಕಿದ್ದರೆ ಇವನನ್ನು ಮಾನಹಾನಿ ಮೊಕದ್ದಮೆಗಳಲ್ಲಿ ಸಿಕ್ಕಿಸುತ್ತಿದ್ದೆವು. ಆದರೆ ಈತ ಇಷ್ಟು ಜಾಗ್ರತೆಯಲ್ಲಿರುತ್ತಾನಲ್ಲ’ ಎಂದೊಬ್ಬ ಅಧಿಕಾರಿ ಕೈ ಕೈ ಹಿಸುಕಿಕೊಂಡನಂತೆ. ಆದರೆ ಅಧಿಕಾರಿಗಳು ಒಂದಲ್ಲ ಒಂದು ನೆವದಿಂದ  ಕಿರುಕುಳ ಕೊಡುತ್ತಲೇ ಇದ್ದರು. ರವೀಂದ್ರನಾಥರು ರಷ್ಯನ್ ಸಂಚಾರದ ನಂತರ ಬರೆದ ‘ರಷ್ಯದ ಪತ್ರಗಳು’ ಎಂಬ ಗ್ರಂಥದ ಇಂಗ್ಲೀಷ್ ಅನುವಾದವನ್ನು ‘ರಿವ್ಯೂ’ ನಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದ್ದಕ್ಕೆ ಅವರಿಗೆ ಎಚ್ಚರಿಕೆ ನೀಡಲಾಯಿತು. ಜೆ.ಟಿ. ಸಂಡರ್‌ಲೆಂಡರ ‘ಇಂಡಿಯ ಇನ್ ಬಾಂಡೇಜ್’ ಗ್ರಂಥವನ್ನು ಚಟರ್ಜಿಯವರು ಭಾರತದಲ್ಲಿ ಪ್ರಕಟಿಸಿದಾಗ ಅವರಿಗೆ ಎರಡು ಸಾವಿರ ದಂಡ ಹಾಕಿ ಪುಸ್ತಕದ ಪ್ರತಿ ಗಳನ್ನು ಮುಟ್ಟುಗೋಲು ಹಾಕಿದರು. ‘ಮಾಡರ್ನ್ ರಿವ್ಯೂ’ತುಂಬಾ ಪ್ರಭಾವಶಾಲಿ ಪತ್ರಿಕೆ, ಅದು ಅಪಾಯಕಾರಿ ಎಂದು ಪಾರ್ಲಿಮೆಂಟಿನಲ್ಲಿ ಭಾರತಮಂತ್ರಿ ಒಮ್ಮೆ ಬಹಿರಂಗವಾಗಿ ಒಪ್ಪಿಕೊಂಡದ್ದುಂಟು.

ವಿಶಾಲ ಭಾರತ

ಇಂಗ್ಲಿಷ್ ಬಂಗಾಲಿ ಪತ್ರಿಕೆಗಳಿಂದ ತೃಪ್ತರಾಗದೆ ‘ವಿಶಾಲ ಭಾರತ’ ಎಂಬ ಹಿಂದೀ ಮಾಸ ಪತ್ರಿಕೆಯನ್ನೂ ರಮಾನಂದರು ಪ್ರಾರಂಭಿಸಿದರು. ಗಾಂಧಿ ಶಿಷ್ಯರೂ ಸಿ.ಎಫ್. ಆಂಡ್ರೂಸರೊಡನೆ ದುಡಿದವರೂ ಆದ ಪಂಡಿತ ಬನಾರಸೀದಾಸ ಚತುರ್ವೇದಿಯವರನ್ನು ಅದಕ್ಕೆ ಸಂಪಾದಕರಾಗಿ ನೇಮಿಸಿದ್ದರು. ಅದರ ಧ್ಯೇಯ ಮಾರಿಶಸ್, ಫಿಜಿ, ದಕ್ಷಿಣ ಆಫ್ರಿಕ ಮೊದಲಾದೆಡೆಗಳಲ್ಲಿದ್ದ ಭಾರತದ ಬಡ ಕೂಲಿಗಳ ಸಂಕಷ್ಟಗಳನ್ನು ದೇಶದ ಗಮನಕ್ಕೆ ತರುವುದಾಗಿತ್ತು. ಆ ಪತ್ರಿಕೆ ಹಿಂದೀ ಭಾಷೆಯ ನಾಲ್ಕು ಶ್ರೇಷ್ಠ ಸಾಹಿತ್ಯ ಪತ್ರಿಕೆಗಳಲ್ಲಿ ಒಂದು ಎಂದು ಕೂಡ ಹೆಸರು ಪಡೆಯಿತು.

ರವೀಂದ್ರಾಯಣ

ರಮಾನಂದರ ಚಟರ್ಜಿಯವರ ಸಾಧನೆಗಳಲ್ಲಿ ಕವಿ ರವೀಂದ್ರರನ್ನು ಇಂಗ್ಲಿಷ್ ಓದುಗರ ಮುಂದೆ ತಂದದ್ದು ಒಂದು. ಅವರ ಬಂಗಾಲಿ ಕವಿತೆಗಳನ್ನು ಅವರೇ ಇಂಗ್ಲಿಷಿಗೆ ಅನುವಾದಿಸಬೇಕೆಂದು ಒತ್ತಾಯಿಸಿ ೧೯೧೧ ರಿಂದಲೇ ಆ ಅನುವಾದಗಳನ್ನು ರಮಾನಂದರು ‘ರಿವ್ಯೂ’ನಲ್ಲಿ ಪ್ರಕಟಿಸಿದ್ದ ರಿಂದ ರವೀಂದ್ರರ ಕೀರ್ತಿ ವಿಶ್ವವ್ಯಾಪಿಯಾಗ ತೊಡಗಿತು. ಅವರಿಗೆ ನೊಬೆಲ್ ಪಾರಿತೋಷಕ ೧೯೧೩ ರಲ್ಲಿ ಬಂತಲ್ಲವೇ! ರವೀಂದ್ರರಿಗೂ ರಮಾನಂದರಿಗೂ ಗಾಢ ಮೈತ್ರಿ ಇತ್ತು. ೧೯೧೯ ರಲ್ಲಿ ಜನರಲ್ ಡಾಯರನ ಜಲಿಯಾನ್ ವಾಲಬಾಗ್ ಹತ್ಯಕಾಂಡದ ನಂತರ ಅದರ ಪ್ರತಿಭಟನೆಗಾಗಿ ರವೀಂದ್ರರು  ತಮ್ಮ ನೈಟ್ ಹುಡ್ (ಸರ್) ಪದವಿಯನ್ನು ವೈಸರಾಯರಿಗೆ ವಾಪಾಸು ಕಳಿಸಿದರಲ್ಲ, ಅದರ ಮುಂಚೆ ಅವರು ರಮಾನಂದರ ಸಲಹೆ ತೆಗೆದು ಕೊಂಡಿದ್ದರಂತೆ. ೧೯೨೫-೨೬ರಲ್ಲಿ ಕೆಲಕಾಲ ಚಟರ್ಜಿ ಯವರು ರವೀಂದ್ರ ಶಾಂತಿನಿಕೇತನ ಕಾಲೇಜಿನ ಪ್ರಿನ್ಸಿಪಾಲರೂ ಆಗಿದ್ದರು. ರವೀಂದ್ರರ ಎಪ್ಪತ್ತನೇ ಜನ ದಿನೋತ್ಸವ ಸಂದರ್ಭದಲ್ಲಿ ಅವರೊಂದು ಅಭಿನಂದನ ಗ್ರಂಥವನ್ನು ಸಂಪಾದಿಸಿ ಪ್ರಕಟಿಸಿದರು, ಅದರ ಹೆಸರು ‘ಗೋಲ್ಡನ್ ಬುಕ್ ಆಫ್ ಟ್ಯಾಗೂರ್’ ಅದಕ್ಕೆ ನಾನಾ ದೇಶಗಳ ಮೂವತ್ತು ಮಹನೀಯರು ಲೇಖನ ಬರೆದಿದ್ದರು, ಮಹಾತ್ಮ ಗಾಂಧಿ, ರೊಮೆ ರೋಲಾ (ಪ್ರೆಂಚ್ ಸಾಹಿತಿ) ಮೊದಲಾದವರಿಂದ ಆ ಪುಸ್ತಕ ಮೆಚ್ಚುಗೆ ಪಡೆಯಿತು.

ಗಾಂಧೀಜಿಯ ಮಿತ್ರ

ಮಹಾತ್ಮ ಗಾಂದಿಜಿಯವರೂ ರಮಾನಂದ ರನ್ನು ಗೌರವಿಸುತ್ತಿದ್ದರು. ಗಾಂಧಿಜಿ ದಕ್ಷಿಣ ಆಫ್ರಿಕದಲ್ಲಿ ದ್ದಾಗಲೇ ಚಟರ್ಜಿಯವರು ‘ರಿವ್ಯೂ’ ವಿನಲ್ಲಿ ಅವರ ಸತ್ಯಾಗ್ರಹವನ್ನು ಬೆಂಬಲಿಸಿದ್ದರು; ಅವರ ಕಾರ್ಯಗಳ ಬಗ್ಗೆ ಲೇಖನವನ್ನು ಬರೆಸಿ ಪ್ರಕಟಿಸಿದ್ದರು. ೧೯೦೮ರ ಲಾಹೋರ್ ಕಾಂಗ್ರೆಸ್ ಅಧಿವೇಶನಕ್ಕೆ ಅವರನ್ನು ಅಧ್ಯಕ್ಷರಾಗಿಸಬೇಕೆಂದೂ ಸೂಚಿಸಿದ್ದರು.

ಕಾಂಗ್ರೆಸ್ಸಿನ ಅನೇಕ ಧೋರಣೆಗಳನ್ನು ರಮಾ ನಂದರು ೧೯೨೦ರ ನಂತರ ಟೀಕಿಸಿದರೂ ಮಹಾತ್ಮರ ಸತ್ಯಾಗ್ರಹ ಆಂದೋಲನಗಳಿಗೆ ಯಾವಾಗಲೂ ಬೆಂಬಲ ಕೊಡುತ್ತಿದ್ದರು.

ರಾಜಕೀಯ

ರಮಾನಂದ ಬಾಬುಗಳು ಅಪ್ಪಟ ರಾಷ್ಟ್ರಭಕ್ತರು. ಕಾಂಗ್ರೆಸ್ಸಿನೊಡನೆ ವಿದ್ಯಾರ್ಥಿದೆಶೆಯಿಂದಲೇ ಅವರು ಸಂಬಂಧ ಇಟ್ಟುಕೊಂಡಿದ್ದದನ್ನು ಹಿಂದೆ ಹೇಳಿದೆ.  ಅಹಿಂಸೆಯನ್ನು ಅವರು ಬೆಂಬಲಿಸುತ್ತಿದ್ದರು. ಆದರೆ  ಹಿಂಸೆಯಿಂದ ಕ್ರಾಂತಿ ಮಾಡುವೆವೆಂಬ ಕ್ರಾಂತಿಕಾರರನ್ನು ಅವರು ನಿಂದಿಸುತ್ತಿರಲಿಲ್ಲ. ಬ್ರಿಟಿಷ್ ಸರ್ಕಾರ ಭಾರತೀಯರ ಸ್ವಾತಂತ್ರ್ಯಾಕಾಂಕ್ಷೆಯನ್ನು ಮೆಟ್ಟಿ ಹಾಕುತ್ತಿರುವುದರಿಂದಲೇ ತರುಣರು ಹಿಂಸಾ ಮಾರ್ಗವನ್ನು ತುಳಿಯುತ್ತಿದ್ದಾರೆಂದು ಅವರು ಬರೆದಿದ್ದರು.

ಕಾಂಗ್ರೆಸ್ಸಿನೊಡನೆ ದೀರ್ಘ ಸಂಬಂಧ, ಗಾಂಧೀಜಿ ಯೊಡನೆ ಸ್ನೇಹ ಇದ್ದರೂ ೧೯೨೦ರ ನಂತರ ಸಾವಕಾಶವಾಗಿ ಅವರ ಒಲವು ಹಿಂದೂಮಹಾಸಭೆಯ ಕಡೆ ತಿರುಗಿತು. ಹಿಂದೂ ಮುಸ್ಲಿಂರಲ್ಲಿ ಮಧುರ ಸಂಬಂಧ ಬೇಕೆಂದು ಜೀವಮಾನವೆಲ್ಲ ಪ್ರತಿಪಾದಿಸಿದವರು ಅವರು. ಆದರೂ ಕಾಂಗ್ರೆಸ್ಸು ಮುಸ್ಲಿಂ ಹಠವಾದಿಗಳಿಗೆ ಮಣಿಯುತ್ತ ಹೊರಟಿರುವುದು ಅವರಿಗೆ ಸರಿದೋರಲಿಲ್ಲ.

ದಿಟ್ಟ ವಿಚಾರ ಸ್ವಾತಂತ್ರ್ಯ

ಇದೇ ಚಟರ್ಜಿಯವರ ಹೆಚ್ಚುಗಾರಿಕೆ. ಅವರು ಸ್ವತಂತ್ರ ವಿಚಾರದವರು.  ದೇಶಹಿತ ವಿಷಯದಲ್ಲಿ ಭಿನ್ನಾಭಿ ಪ್ರಾಯ ಬಂದಾಗ ಅವರು ಗಾಂಧಿ-ಠಾಕೂರರಿಗೂ ದಾಕ್ಷಿಣ್ಯ ತೋರಿಸಲಿಲ್ಲ. ೧೯೧೭ರಲ್ಲಿ ಅನಿಬೆಸೆಂಟ್‌ರನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ಮಾಡುವ ವಿಷಯದಲ್ಲಿ ಠಾಕೂರರ ಅಭಿಪ್ರಾಯವನ್ನು ಬಹಿರಂಗವಾಗಿಯೇ ವಿರೋಧಿಸಿದರು. ಇನ್ನೊಮ್ಮೆ ಪ್ರಜೆಗಳೆಲ್ಲ ಅಕ್ಷರಸ್ಥರಾಗದ ಹೊರತು ಭಾರತಕ್ಕೆ ಪೂರ್ಣ ಸ್ವಾತಂತ್ರ್ಯದ ಅರ್ಹತೆ ಬಾರದೆಂದು ಠಾಕೂರರು ಹೇಳಿದ್ದನ್ನೂ ಖಂಡಿಸಿದರು. ಗಾಂಧೀಜಿ ಶಾಲೆ ಕಾಲೇಜು ಬಹಿಷ್ಕಾರದ ಕರೆ ಕೊಟ್ಟಾಗ ಅದು ತಪ್ಪೆಂದರು.

ವಿಚಾರ ಸ್ವಾತಂತ್ರ್ಯ ತಮ್ಮ ವಿರುದ್ಧವೂ

ಅಭಿಪ್ರಾಯದ ಸ್ವಾತಂತ್ರ್ಯ ತಮಗೆ ಮಾತ್ರ ಸಾಕೆಂದು ಅವರು ಅನ್ನಲಿಲ್ಲ. ಇತರರಿಗೂ ಕೊಟ್ಟರು. ಅವರು ‘ವಿಶಾಲಭಾರತ’ ನಡೆಸುತ್ತಿದ್ದರಷ್ಟೇ. ಅದರ ಸಂಪಾದಕರಾದ ಪಂಡಿತ ಚತುರ್ವೇದಿಯವರಿಗೆ ರಮಾನಂದರು ಹಿಂದೂ ಮಹಾಸಭೆಗೆ ಬೆಂಬಲ ಕೊಟ್ಟದ್ದು, ಅದರ ಅಧ್ಯಕ್ಷರಾದದ್ದು ಸರಿದೋರಲಿಲ್ಲ. ಅವರು “ವಿಶಾಲಭಾರತ” ದ ಒಂದು ಸಂಪಾದಕೀಯ ಬರಹದಲ್ಲಿ ರಮಾನಂದರನ್ನು ಟೀಕಿಸಿದರು. ಅವರದೇ ಒಡೆತನದ ಪತ್ರಿಕೆಯಲ್ಲಿ ಅವರ ಮೇಲೆ ಆಕ್ಷೇಪ! ಆದರೆ ಹೀಗೆ ಬರೆಯಬಾರದಿತ್ತು ಎಂದು ಅವರು ಚತುರ್ವೇದಿಯವರಿಗೆ ಹೇಳಲಿಲ್ಲ.

ತುಂಬು ಬದುಕು

ರಮಾನಂದ ಬಾಬುಗಳು ೭೮ ವರ್ಷಗಳ ತುಂಬು ಜೀವನವನ್ನು ಬಾಳಿದರು. ಅವರ ಹಿರಿಮೆಗೆ ಆದಿಯಿಂದಲೂ ಮನ್ನಣೆ ಸಿಕ್ಕಿತ್ತಲ್ಲವೇ? ೧೯೨೬ರಲ್ಲಿ ಜಿನೀವದಲ್ಲಿ ‘ಲೀಗ್ ಆಫ್ ನೇಷನ್ಸ್’ ಚಟುವಟಿಕೆಗಳನ್ನು ಪ್ರತ್ಯಕ್ಷ  ವೀಕ್ಷಿಸಲು ಅವರಿಗೆ ಆಮಂತ್ರಣ ಬಂತು. ತಮ್ಮ ಸ್ವಂತ ಖರ್ಚಿನಿಂದ ಬರುವುದಾಗಿ ಚಟರ್ಜಿ ತಿಳಿಸಿದರು. ಅವರಿಂದ ಖರ್ಚಿಗೆ ಹಣ ತೆಗೆದುಕೊಂಡರೆ ಅದೊಂದು ಹಂಗಾಗುತ್ತದೆ ಅದು ಬೇಡ ಎಂದು. ಅವರು ಹೋದರು; ಲೀಗಿನ ಕಾರ್ಯ ವಿಧಾನವನ್ನು ಸೂಕ್ಷ್ಮವಾಗಿ ನೋಡಿದರು. ಅದು ಸಾಮ್ರಾಜ್ಯವಾದಿಗಳ ಕೈಗೊಂಬೆಯಾಗಿದ್ದದ್ದು ಕಂಡರು. ಅದು ರಾಷ್ಟ್ರಗಳ ಸಮಸ್ಯೆಗಳನ್ನು ಬಗೆ ಹರಿಸಲಾರದು ಎಂದು ಭವಿಷ್ಯ ಬರೆದರು. ಅದು ಸತ್ಯವೇ ಆಗಿ ಪರಿಣಮಿಸಿತು.

ಆ ಸಂದರ್ಭದಲ್ಲಿ ಚಟರ್ಜಿಯವರು ಸ್ವಿಟ್ಜರ್ ಲೆಂಡ್, ಚೆಕೋಸ್ಲೋವಾಕಿಯ, ಆಸ್ಟ್ರೀಯ, ಜರ್ಮನಿ ಮೊದಲಾದ ದೇಶಗಳನ್ನು ಸುತ್ತಿದರು. ಆಗ ಅವರನ್ನು ಕಂಡ ರೋಮೆ ರೋಲಾ, ‘ಅವರ ನಿಲವು ಋಷಿ ಸದೃಶವಾಗಿತ್ತು’ ಎಂದು ಬರೆದಿದ್ದಾರೆ.

೧೯೩೫ ರಲ್ಲಿ ಶಾಂತಿನಿಕೇತನದಲ್ಲಿ ರವೀಂದ್ರ ನಾಥರ ಸಾನ್ನಿಧ್ಯದಲ್ಲಿ ರಮಾನಂದರ ಎಪ್ಪತ್ತನೆಯ ಹುಟ್ಟು ಹಬ್ಬ ಆಚರಿಸಲಾಯಿತು. ಆಗ ಜೆ.ಟಿ.ಸಂಡರ್‌ಲೆಂಡ್ ಹೀಗೆ ಹೇಳಿದ್ದರು. ‘ಕಳೆದ ಐವತ್ತು ವರ್ಷಗಳಲ್ಲಿ ಭಾರತದ ಶೈಕ್ಷಣಿಕ, ಸಾಮಾಜಿಕ, ನೈತಿಕ ಮತ್ತು, ರಾಜಕೀಯ ಮುನ್ನಡೆಗಾಗಿ ರಮಾನಂದರಿಗಿಂತ ಹೆಚ್ಚು ದುಡಿದವರು ಯಾರಿದ್ದಾರೆ?’

ದುಡಿತವೆ ಉಸಿರು

ಹೌದು ರಮಾನಂದಬಾಬುಗಳದು ‘ದೈತ್ಯ ದುಡಿತ’ ಎನ್ನಬೇಕು.‘ಪ್ರವಾಸಿ’ ಮತ್ತು ‘ಮಾಡರ್ನ್‌ರಿವ್ಯೂ’ ವನ್ನು ಅವರು ಹಲವು ವರ್ಷ ಯಾವ ಸಹಾಯಕನೂ ಇಲ್ಲದೆ ನಡೆಸಿದರು. ಅದಕ್ಕಾಗಿ ಅಗಾಧವಾಗಿ ಪುಸ್ತಕ, ಪತ್ರಿಕೆ ಓದಬೇಕಾಗುತ್ತಿತ್ತು. ಲೆಕ್ಕ ಬರೆಯುವುದರಿಂದಾರಂಭಿಸಿ ಕರಡು ತಿದ್ದುವವರೆಗೆ ಎಲ್ಲವನ್ನೂ ಒಬ್ಬರೇ ನಿರ್ವಹಿಸುತ್ತಿದ್ದರು. ಸಹಾಯಕರನ್ನು ತೆಗೆದುಕೊಂಡ ಮೇಲೂ ಅವರ ದುಡಿತ ಕಡಿಮೆಯಾಗಲಿಲ್ಲ.

ಅವರಿಗಿದ್ದದ್ದು ದುಡಿತದ್ದೊಂದೇ ಚಟ. ಕಡೆಕಡೆಗೆ ದಿನಕ್ಕೊಂದು ಕಪ್ ಚಹ ಕುಡಿಯುತ್ತಿದ್ದರಷ್ಟೇ. ಊಟ ದಲ್ಲಿಯೂ ಬಹಳ ಸರಳ. ಸಿಗರೇಟು, ಎಲೆ ಅಡಿಕೆ ಮುಟ್ಟಿದ ವರಲ್ಲ. ಮನೆಯಲ್ಲಿ  ಏನೊಂದು ಆಡಂಬರವಿಲ್ಲ. ೧೮೯೫ ರಲ್ಲಿ ಅವರು ಸ್ವದೇಶಿವ್ರತ ಹಿಡಿದಿದ್ದರು. ಕಡೆಯ ತನಕ ಅದನ್ನು ಬಿಡಲಿಲ್ಲ.

ಬಾಳಿನಲ್ಲಿ ಕಷ್ಟಗಳು

ಅವರ ಪತ್ನಿ ಮನೋರಮಾ ದೇವಿ ಅತ್ಯಂತ ಸರಳ ಜೀವಿ, ಕರ್ತವ್ಯಪರಾಯಣೆ, ನಿರಾಡಂಬರ ಮಹಿಳೆ ಯಾಗಿದ್ದುದು ರಮಾನಂದರ ಪುಣ್ಯ. ಎಷ್ಟೋ ಕಾಲ ಅವರೇ ರಮಾನಂದರ ಪತ್ರಿಕೆಗಳ ಹಣಕಾಸಿನ ಲೆಕ್ಕಾಚಾರ ನೋಡುತ್ತಿದ್ದರು. ಅವರಿಗೆ ಮೂರು ಗಂಡು, ಎರಡು ಹೆಣ್ಣು ಮಕ್ಕಳು, ಎರಡು ಗಂಡು ಮಕ್ಕಳು ಅಕಾಲದಲ್ಲಿ ತೀರಿ ಕೊಂಡರು. ಈ ಆಘಾತಗಳಿಂದ ರಮಾನಂದರ ಮನಸ್ಸು ತುಂಬಾ ನೊಂದಿತು. ಅವರ ಬದುಕು ಬರವಣಿಗೆ ಎರಡೂ ಮೊದಲಿಗಿಂತಲೂ ಸರಳ, ವಿಶುದ್ಧವಾದವು. ಕೆಲಸ ಮಾತ್ರ ಕಡಿಮೆ ಮಾಡಿಕೊಳ್ಳಲಿಲ್ಲ. ಎರಡನೇ ಮಗನ ಮರಣದ ನಂತರ ಮನೋರಮಾ ದೇವಿ ತೀರ ಹಣ್ಣಾದರು. ೧೯೩೫ರಲ್ಲಿ ಮನೋರಮಾ ದೇವಿ ಮೃತ್ಯುವಶರಾದರು. ಅನಂತರ ಚಟರ್ಜಿಯವರು ಸಂನ್ಯಾಸಿಯಂತೆಯೇ ಬದುಕಿದರು. ಇಬ್ಬರು ಹೆಣ್ಣು  ಮಕ್ಕಳು ಸೀತಾ ಮತ್ತು ಶಾಂತಾ ಬಂಗಾಳಿಯಲ್ಲಿ ಉತ್ತಮ ಸಾಹಿತಿಗಳಾದರು. ಮಗ ಅಶೋಕ ಚಟ್ಟೋಪಾಧ್ಯಾಯರು ರಮಾನಂದರ ನಂತರ ಸಂಪಾದಕರಾದರು.

ಜೀವನದ ಕೊನೆಯ ವರ್ಷದಲ್ಲಿ ರಮಾನಂದರ ಆರೋಗ್ಯ ತೀರ ಹದಗೆಟ್ಟಿತು. ವಂಗೀಯ ಸಾಹಿತ್ಯ ಪರಿಷತ್ತಿನಿಂದ ಹಿಡಿದು ಅಖಿಲ ಭಾರತ ಸಂಪಾದಕ ಪರಿಷತ್ತಿನವರೆಗೆ, ವಿದ್ಯಾರ್ಥಿ ಸಂಘಗಳಿಂದ ಹಿಡಿದು ಅಖಿಲ ಭಾರತ ಕುರುಡರ ಸಂಘದವರೆಗೆ ಅಸಂಖ್ಯ ಸಂಘಸಂಸ್ಥೆಗಳು ಅವರನ್ನು ರುಗ್ಣಶಯ್ಯೆಯ ಪಕ್ಕಕ್ಕೇ ಬಂದು ಸನ್ಮಾನಿಸಿದವು.

೧೯೪೩ ಸೆಪ್ಟೆಂಬರ್ ೩೦ರಂದು ರಮಾನಂದ ಚಟರ್ಜಿಯವರು ತಮ್ಮ ಕಿರಿಮಗಳು ಸೀತೆಯ ಕಲಕತ್ತೆಯ ಮನೆಯಲ್ಲಿ ಕಣ್ಮುಚ್ಚಿದರು.

ಮಹಾಪುರುಷ

ರಮಾನಂದ ಚಟರ್ಜಿಯವರು ಮೇಲೆ ಹೇಳಿದ ಪತ್ರಿಕೆಗಳನ್ನಲ್ಲದೆ ಬಂಗಾಲಿಯಲ್ಲಿ ಒಂದು ಮಕ್ಕಳ ಪತ್ರಿಕೆ ಯನ್ನೂ ನಡೆಸಿದರು. ಅನೇಕ ಗ್ರಂಥಗಳನ್ನೂ ಪ್ರಕಟಿಸಿದರು. ಮಕ್ಕಳಿಗೆ ಪಠ್ಯಪುಸ್ತಕಗಳನ್ನು ಬರೆದರು. ಮಹಿಳೆಯರ, ಅಸ್ಪೃಶ್ಯರ ಹಕ್ಕುಗಳಿಗೆ ಹೋರಾಡಿದರು. ಅಂಗಹೀನರಿಗಾಗಿ, ರೋಗಿಗಳಿಗಾಗಿ ಕಷ್ಟ ಪಟ್ಟರು. ಎಲ್ಲಕ್ಕೂ ಹೆಚ್ಚಾಗಿ ಲೋಕದ ಮನಸ್ಸು ತಿದ್ದಿದರು.

ಎಣಿಸಿದಂತೆ ಮಾತಾಡಿದ, ಆಡಿದಂತೆ ಬದುಕಿತೋರಿದ ಈ ಧೀಮಂತ ಹೇಗೆ ನೋಡಿದರೂ ಮಹಾಪುರುಷ.