Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಹಕಾರ

ರಮೇಶ್ ವೈದ್ಯ

ರಾಜ್ಯದ ಕೃಷಿ ಸಹಕಾರ ಕ್ಷೇತ್ರದಲ್ಲಿ ಅನನ್ಯ ಸೇವೆಗೈದ ರಮೇಶ್ ವೈದ್ಯ ಪ್ರಮುಖ ಸಾಧಕರು. ಹಳ್ಳಿಗಾಡಿನ ಕೃಷಿ ಸಹಕಾರ ಸಂಸ್ಥೆಗಳ ಬಲವರ್ಧನೆಗೆ ಪರಿಶ್ರಮಿಸಿದ ಸಹಕಾರ ಧುರೀಣರು.
ಕೊಪ್ಪಳ ಜಿಲ್ಲೆಯ ಹಿಟ್ನಾಳದವರಾದ ರಮೇಶ್ ವೈದ್ಯ ಕೃಷಿ ಮನೆತನದ ಕುಡಿ. ೧೯೫೦ರ ಜುಲೈ ೮ರಂದು ಜನಿಸಿದ ರಮೇಶ್ ವಿಜ್ಞಾನ ಪದವೀಧರರು, ವಿದ್ಯಾರ್ಥಿ ದೆಸೆಯಿಂದಲೂ ಕೃಷಿ ಚಟುವಟಿಕೆಗಳಲ್ಲಿ ಆಸಕ್ತರು. ಬೇಸಾಯದ ಒಳಸುಳಿ-ನೋವು ನಲಿವುಗಳ ಅರಿತಾಕ್ಷಣ ಸಹಕಾರ ಕ್ಷೇತ್ರದಲ್ಲಿ ಹೆಚ್ಚು ತಲ್ಲೀನ, ರಾಜ್ಯದ ಉದ್ದಗಲಕ್ಕೂ ಹಾಗೂ ಹೊರದೇಶಗಳಿಗೂ ಗ್ರಾಮೀಣ ಸಹಕಾರ ಸಂಸ್ಥೆಗಳ ಶ್ರೇಯೋಭಿವೃದ್ಧಿಗೆ ಸಂಚಾರ-ಪರಿಶ್ರಮ. ಕೊಪ್ಪಳ ಜಿಲ್ಲಾ ಕೃಷಿ ಮಾರಾಟ ಸೊಸೈಟಿಯ ಕಾರ್ಯಾಕಾರಿ ಮಂಡಳಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ರಾಯಚೂರು ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕ್, ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟ ಮತ್ತಿತರ ಸಂಸ್ಥೆಗಳಲ್ಲಿ ಸಾರ್ಥಕ ಸೇವೆ. ಸದ್ಯ ಕರ್ನಾಟಕ ರಾಜ್ಯ ಹೈನುಗಾರಿಕಾ ಒಕ್ಕೂಟದ ನಿರ್ದೇಶಕರು ಹಾಗೂ ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ರಮೇಶ್ ವೈದ್ಯ ಸಹಕಾರ ರತ್ನ, ಶ್ರೇಷ್ಠ ಸಹಕಾರಿ ಮುಂತಾದ ಪ್ರಶಸ್ತಿಗಳಿಂದ ಭೂಷಿತರು.