ರವಿದಾಸ್ಹದಿನೈದನೆಯ ಶತಮಾನದ ಸಂತರು. ವೃತ್ತಿ ಪಾದರಕ್ಷೆಗಳನ್ನು ಹೊಲಿಯುವು ದಾದರೂ ಜ್ಞಾನಿಗಳೆಂದು, ದೈವಭಕ್ತರೆಂದು ಎಲ್ಲ ಗೌರವವನ್ನು ಪಡೆದರು. ಐಶ್ವರ್ಯ, ಸುಖ ಎಲ್ಲವನ್ನೂ ದೂರವಿಟ್ಟು ಸರಳ ಜೀವನ ನಡೆಸಿದರು. ಸಮಾಜ ಸುಧಾರಕರು

 ರವಿದಾಸ್

ವೃತ್ತಿ ಪಾದರಕ್ಷೆ ಹೊಲಿಯುವುದು. ವಿದ್ಯಾಭ್ಯಾಸ ಇಲ್ಲವೇ ಲ್ಲ. ವಾಸ ಒಂದು ಸಣ್ಣ ಗುಡಿಸಿಲಿನಲ್ಲಿ. ಆದರೆ ಕಾಶಿಯ ರಾಜ ಅವರನ್ನು ಗೌರವಿಸಿದ. ಸಂತ ಕಬೀರರು ಅವರನ್ನು ಗೌರವಿಸಿದರು.ಸಂತ ಮೀರ ಅವರನ್ನು ತನ್ನ ಗುರುವೆಂದು ಸ್ವೀಕರಿಸಿದಳು. ವಿದ್ವಾಂಸರು, ಜ್ಞಾನಿಗಳು ಅವರ ಬಳಿಗೆ ಬಂದು, ಅವರ ಮಾತುಗಳನ್ನು ಕೇಳಿ ಮಾರ್ಗದರ್ಶನ ವಾಯಿತೆಂದು ಸಂತೋಷಪಟ್ಟರು.

ಇಂತಹ ವ್ಯಕ್ತಿ ರವಿದಾಸರು.

ಮನುಷ್ಯನ ಜಾತಿ, ಪದವಿ, ಶ್ರೀಮಂತಿಕೆ ಮುಖ್ಯವಲ್ಲ, ಅವನ ಶುಭ್ರ ಜೀವನ, ಜ್ಞಾನ ಇವು ಮುಖ್ಯ ಎಂಬುದನ್ನು ರವಿದಾಸರ ಜೀವನ ಸಾರಿ ಹೇಳುತ್ತದೆ.

ಗುರು ರವಿದಾಸರು ಅತ್ಯಂತ ಶಾಂತಸ್ವಭಾವದ ಭಕ್ತರು. ಒಬ್ಬ ಶ್ರೇಷ್ಠ ಸಮಾಜ ಸುಧಾರಕರೂ ಹೌದು. ಅವರ ಬಾಯಿಂದ ಹೊರಟ ಪದಗಳು ಭಕ್ತಿಸಾಹಿತ್ಯದ ಅಣಿಮುತ್ತುಗಳು, ಪ್ರೇಮ, ವೈರಾಗ್ಯ, ಭಕ್ತಿಗಳ ಸಾಕಾರ ಮೂರ್ತಿ ರವಿದಾಸರು.

ರವಿದಾಸರು ಒಬ್ಬ ಶ್ರೇಷ್ಠ ಸಂತಕವಿ. ಕಾಶಿಯ ನಿವಾಸಿ. ಒಬ್ಬ ಸರಳ ಭಕ್ತರು. ಸಂಸಾರದಲ್ಲಿದ್ದರೂ ಯಾವುದಕ್ಕೂ ಆಸೆಪಟ್ಟವರಲ್ಲ. ದೇವರನ್ನು ಪ್ರಾರ್ಥಿಸುವಾಗ ವಾಣಿಯಲ್ಲಿ ಸಂಪೂರ್ಣ ದೈನ್ಯ, ಕಾತರ, ಕಳಕಳಿ, ಶಿಶುಸಹಜಕುತೂಹಲ ಕಂಡುಬರುವುದು.

ರವಿದಾಸರ ಜೀವನದ ವಿಷಯ ಖಚಿತವಾಗಿ ತಿಳಿದಿರುವುದು ಸ್ವಲ್ಪವೇ. ಅವರು ಯಾವ ವರ್ಷ ಹುಟ್ಟಿದರು, ಅವರ ತಂದೆತಾಯಿಯರ ಹೆಸರೇನು, ಯಾವ ವರ್ಷ ತೀರಿಕೊಂಡರು ಯಾವುದೂ ನಿಷ್ಕೃಷ್ಟವಾಗಿ ತಿಳಿದಿಲ್ಲ. ಅವರು ೧೫೧ ವರ್ಷ ಬದುಕಿದ್ದರು ಎಂದು ಹೇಳುವ ಚರಿತ್ರಕಾರರೂ ಇದ್ದಾರೆ.

ಕಾಶಿಯ ಹತ್ತಿರ ಭಾಂಡೂರ್ ಅಥವಾ ಮಂಡೂರ ಗ್ರಾಮದಲ್ಲಿ ರವಿದಾಸರು ಹುಟ್ಟಿದರು. ಪ್ರಾಯಶಃ ತಂದೆಯ ಹೆಸರು ರಘು, ತಾಯಿ ಕರಮಾದೇವಿ, ರವಿದಾಸರ ಜನ್ಮದ ವಿಚಾರವಾಗಿ ಹಲವು ಅಭಿಪ್ರಾಯಗಳುಂಟು. ೧೪೩೩ ನೇ ಮಾಘ ಪೂರ್ಣಿಮೆ. ರವಿವಾರದ ದಿನ ಅವರ ಜನ್ಮವಾಯಿತೆಂದು ಕೆಲವರ ಅಭಿಪ್ರಾಯ. ಇದೂ ಖಚಿತವಲ್ಲ. ೧೪೧೪ರಲ್ಲಿ ಹುಟ್ಟಿದರು ಎಂದು ಕೆಲವರು ಹೇಳುತ್ತಾರೆ.ರವಿವಾರದ ದಿನ ಹುಟ್ಟಿದ್ದರಿಂದ ಈತನನ್ನು ರವಿದಾಸ ಎಂದು ಕರೆದರು.

ಬಾಲ್ಯ

ರವಿದಾಸರ ಮನೆತನ, ಬಾಲ್ಯ ಇವನ್ನು ಕುರಿತು ಕೆಲವರು ಹೀಗೆ ಹೇಳುತ್ತಾರೆ. ರವಿದಾಸರ ತಂದೆ ಬಹು ದೊಡ್ಡ ವ್ಯಾಪಾರಿ. ತಂದೆಯ ವ್ಯವಹಾರದಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ. ಇದರಿಂದ ತಂದೆಗೆ ಅಸಮಾಧಾನವಾಯಿತು. ಮಗ ಮನೆಯನ್ನು ಬಿಟ್ಟು ಹೊರಟ. ಅವನಿಗೆ ಹಣ, ಪದವಿ ಬೇಕಿರಲಿಲ್ಲ. ತುಂಬಾ ಸರಳವಾದ ಜೀವನವನ್ನು ಅವನು ಆರಿಸಿಕೊಂಡ. ಜೀವನೋಪಾಯಕ್ಕೆ ಪಾದರಕ್ಷೆಗಳನ್ನು ಹೊಲೆಯಲು ಕಲಿತ.

ಆದರೆ ಈ ಅಭಿಪ್ರಾಯವನ್ನು ಒಪ್ಪುವುದು ಕಷ್ಟ. ರವಿದಾಸರ ತಂದೆಯ ಚಮ್ಮಾರರು ಎಂದು ಭಾವಿಸಬಹುದು.

ಅನೇಕರ ಕಣ್ಣಿನಲ್ಲಿ ರವಿದಾಸರು ಕೆಳಜಾತಿಯವರು. ಆದರೂ ಅವರ ಕುಟುಂಬದವರಿಗೆ ದೇವರಲ್ಲಿ ಬಹಳವಾದ ಭಕ್ತಿ ಮತ್ತು ಶ್ರದ್ಧೆಯಿತ್ತು. ಅವರ ತಂದೆತಾಯಿ ಮತ್ತು ಇತರ ಸಂಬಂಧಿಕರು ಒಳ್ಳೆಯ ಆಚಾರ, ವ್ಯವಹಾರ ಮತ್ತು ಧಾಮಿ೪ಕತೆವುಳ್ಳವರಾಗಿದ್ದರು. ಇಂತಹ ವಾತಾವರಣದಲ್ಲಿ ಬೆಳೆದ ರವಿದಾಸರಿಗೆ ದೇವರಲ್ಲಿ ಭಕ್ತಿ ಉಂಟಾಗುವುದು ಸ್ವಾಭಾವಿಕ.

ಹುಡುಗ ರವಿದಾಸ ಬೆಳೆಯುತ್ತಿದ್ದಂತೆ ತಂದೆತಾಯಿಯರಿಗೆ ಅವನು ವೃತ್ತಿಯನ್ನು ಕಲಿತು, ದುಡಿದು, ಹಣ ಸಂಪಾದಿಸಿ ತಮಗೆ ನೆರವಾಗಬಹುದು ಎಂಬ ಆಸೆ.

ಬಾಲಕ ರವಿದಾಸ ಭಜನೆ, ಕೀರ್ತನೆ, ಪೂಜೆ ಮತ್ತು ಸಾಧುಸಂತರ ಸೇವೆಯಲ್ಲೇ ಹಗಲಿರುಳೆಲ್ಲ ಕಳೆಯುತ್ತಿದ್ದ. ದಿನಗಳು ಕಳೆದಂತೆಲ್ಲ ದೇವರಲ್ಲಿ ಭಕ್ತಿ ಮತ್ತು ಶ್ರದ್ಧೆ ಜಾಸ್ತಿಯಾಯಿತು. ಇವನಿಗೆ ಸಂಸಾರದ ವಿಚಾರಗಳಲ್ಲಿ ಗಮನವೇ ಇರಲಿಲ್ಲ. ಮಗ ಈ ರೀತಿ ವಿರಕ್ತನಾಗಿರುವುದನ್ನು ನೋಡಿ ತಂದೆತಾಯಿಗಳಿಗೆ ಚಿಂತೆಯಾಯಿತು. ಸಂಸಾರದ ಬಂಧನದಲ್ಲಿಡಲು ಆದಷ್ಟು ಜಾಗ್ರತೆ ರವಿದಾಸನಿಗೆ ಮದುವೆ ಮಾಡಬೇಕೆಂದು ಯೋಚಿಸಿದರು. ಲೋನಾದೇವಿ ಎಂಬ ಕನ್ಯೆಯೊಡನೆ ರವಿದಾಸರ ವಿವಾಹವಾಯಿತು. ಲೋನಾ ರವಿದಾಸರ ಜಾತಿಯ ದೇವಿಯ ಹೆಸರು. ತಮ್ಮ ಪರಿವಾರದವರಿಗೆಲ್ಲಾ ಸುಖ, ಶಾಂತಿಗಾಗಿ, ಚಮ್ಮಾರರು ಲೋನಾದೇವಿಯ ಪೂಜೆ ಮಾಡುತ್ತಾರೆ. ‘‘ರವಿದಾಸ ಪುರಾಣ’’ ದ ಆಧಾರದ ಮೇಲೆ ರವಿದಾಸರಿಗೆ ಒಬ್ಬ ಮಗ ಇದ್ದನೆಂದು ಕೆಲವರು ಹೇಳುತ್ತಾರೆ.

ವಿದ್ಯಾಭ್ಯಾಸವಿಲ್ಲ, ಜ್ಞಾನ ಉಂಟು

ರವಿದಾಸರಿಗೆ ಮದುವೆಯಾಯಿತು. ಪ್ರಾಯಶಃ ಒಬ್ಬ ಮಗನಿದ್ದ. ಆದರೆ ಹಣ ಸಂಪಾದಿಸಬೇಕು, ಸುಖಪಡಬೇಕು ಇಂತಹ ಆಸೆಗಳು ಅವರ ಹತ್ತಿರ ಸುಳಿಯಲಿಲ್ಲ. ಭಕ್ತ ಕಬೀರ‍್ಹಾಗೆ ರವಿದಾಸರೂ ಸಹ ಶಾಲೆಗೆ ಹೋಗಿ ವಿದ್ಯೆ ಕಲಿತವರಲ್ಲ. ಆಗಿನ ಸಾಮಾಜಿಕ ಸ್ಥಿತಿಯಲ್ಲಿ ಚಮ್ಮಾರರು ಕೆಳಗಿನ ಜಾತಿಯರು ಎನಿಸಿಕೊಂಡಿದ್ದರು.ರವಿದಾಸರಿಗೆ ಪಾಠಶಾಲೆಯಲ್ಲಿ ಕುಳಿತು ವೇದಶಾಸ್ತ್ರಾಭ್ಯಾಸವನ್ನು ಗುರುಗಳಿಂದ ಪಡೆಯುವ ಅವಕಾಶ ಇರಲಿಲ್ಲ. ಆದರೂ ಸಹ ವೇದ, ಉಪನಿಷತ್, ಗೀತೆ, ಭಾಗವತ, ಪುರಾಣ ಮುಂತಾದ ವಿಷಯಗಳಲ್ಲಿ ಇವರಿಗೆ ಸಂಪೂರ್ಣ ಜ್ಞಾನವಿತ್ತು. ಇದು ಅವರ ರಚನೆಗಳು ಮತ್ತು ಅವರ ಜೀವನದ ಘಟನೆಗಳಿಂದ ತಿಳಿಯುತ್ತದೆ.

ಅವರು ರಮಾನಂದರೆಂಬ ಜ್ಞಾನಿಗಳ ಶಿಷ್ಯರಾಗಿದ್ದಂತೆ ತೋರುತ್ತದೆ. ಅವರಿಂದ ಈ ಜ್ಞಾನ ರವಿದಾಸರಿಗೆ ಬಂದಂತೆ ಕಾಣುತ್ತದೆ. ಅಲ್ಲದೆ ಪ್ರಾಯಶಃ ಅವರಿಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದ ಕಬೀರರಂತಹ ಜ್ಞಾನಿಗಳ ಸಹವಾಸ, ಅವರ ಮಾತುಗಳ ಮನನ ಇವುಗಳಿಂದಲೂ ಅವರಿಗೆ ಜ್ಞಾನಸಂಪತ್ತು ದೊರಕಿರಬೇಕು.

ತಂದೆಯಿಂದ ದೂರವಾದರು

ರವಿದಾಸರು ಜನ್ಮದಿಂದಲೇ ಭಕ್ತರಾಗಿದ್ದರು. ವಿವಾಹ ವಾದ ಮೇಲೂ ಸಹ ಅವರು ದಿನಚರಿ ಮೊದಲಿನಂತೆಯೇ ಇತ್ತು. ಸಾಧುಸಂತರ ಸೇವೆ, ಸತ್ಸಂಗದಲ್ಲಿ ಯಾವ ವ್ಯತ್ಯಾಸವೂ ಆಗಲಿಲ್ಲ. ಭಕ್ತಿಯ ಕಡೆಗೇ ಅವರುಗಮನ ಜಾಸ್ತಿಯಾಗುತ್ತಿತ್ತು. ಹೆಂಡತಿ ಸಾಧ್ವಿ, ಪತಿಪರಾಯಣೆ, ಗಂಡನ ಧರ್ಮಕೆಲಸಗಳಿಗೆ ಅಡ್ಡಿಮಾಡದೆ ಸಹಾಯಕಳಾಗುತ್ತಿದ್ದಳು. ರವಿದಾಸರು ತಂದೆಯ ಜೊತೆ ಪಾದರಕ್ಷೆಗಳನ್ನು ಮಾಡುತ್ತಿದ್ದರು. ಅದರಿಂದ ಬಂದ ಹಣವನ್ನು ಸಾಧು ಸಂತರ ಸೇವೆಗೆ ಖರ್ಚು ಮಾಡುತ್ತಿದ್ದರು. ಮಗನು ದುಡಿದು ಸಂಪಾದಿಸಿ ಸಂಸಾರದ ನಿರ್ವಹಣೆಗೆ ನೆರವಾಗುತ್ತಾನೆ ಎಂದು ತಂದೆಯ ಹಂಬಲ. ಮಗನು ಹಣವನ್ನು ಖರ್ಚುಮಾಡುವ ರೀತಿಯಿಂದ ಅವರಿಗೆ ಅಸಮಾಧಾನವಾಯಿತು. ಮಗನನ್ನು ಎಷ್ಟೇ ಹೆದರಿಸಿದರೂ ಸಹ ರವಿದಾಸರು ತನ್ನ ಸ್ವಭಾವ ಬಿಡಲಿಲ್ಲ. ತಮ್ಮ ಸಂಸಾದನೆಯನ್ನೆಲ್ಲ ಸಂತರ ಸೇವೆಗಾಗಿ ಖರ್ಚು ಮಾಡುತ್ತಿದ್ದರು. ರವಿದಾಸರ ಈ ವ್ಯವಹಾರದ ಕಾರಣದಿಂದ ಮನೆಯವರೆಲ್ಲ ಅವರ ವಿರೋಧಿಗಳಾದರು.

ರವಿದಾಸರಿಗೆ ಇದರಿಂದ ಮನಸ್ಸಿಗೆ ಬೇಸರ. ಇಂತಹ ಸ್ಥಿತಿಯಲ್ಲಿ ರವಿದಾಸರು ತೀವ್ರ ಕಳಕಳಿಯಿಂದ ದೇವರಲ್ಲಿ ಮೊರೆ ಇಡುತ್ತಾರೆ.

‘‘ಹೇ ದಯಾಮಯನಾದ ಭಗವಂತನೆ, ಪರಿವಾರದವರಿಂದೆಲ್ಲಾ ನಾನು ದೂರವಾಗಿದ್ದೇನೆ. ನನ್ನ ಮೇಲೆ ಕೃಪೆ ಇಟ್ಟು ನೀನು ಸಹಾಯಕನಾಗು. ನನಗೆ ಏನು ಮಾಡಬೇಕೆಂದು ಹೊಳೆಯುತ್ತಿಲ್ಲ.’

ರವಿದಾಸರ ವ್ಯವಹಾರದಲ್ಲಿ ಯಾವ ವಿಧವಾದ ಬದ ಲಾವಣೆಗಳಾಗದಿದ್ದುದನ್ನು ನೋಡಿ ತಂದೆ ಕೋಪಗೊಂಡು ಮಗನನ್ನು ಮನೆಯಿಂದಾಚೆ ಹೋಗು ಎಂದು ಹೇಳಿದರು. ರವಿದಾಸರು ‘ಸರಿ’ ಎಂದರು.

ಬಡತನದಲ್ಲೆ ವೃತ್ತಿ

ತಂದೆಯಿಂದ ಬೇರೆಯಾದ ಮೇಲೆ ರವಿದಾಸರು ಒಂದು  ಗುಡಿಸಲು ಕಟ್ಟಿಕೊಂಡು ಹೆಂಡತಿಯೊಡನೆ ವಾಸಮಾಡಲಾರಂಭಿಸಿದರು. ಒಬ್ಬ ಸಾತ್ವಿಕ ವೈಷ್ಣವ ಭಕ್ತರಾಗಿ ಜೀವನ ನಡೆಸಲು ಪ್ರಾರಂಭಿಸಿದರು. ತಂದೆ ಒಂದು ಬಿಡಿಕಾಸೂ ಕೊಟ್ಟಿರಲಿಲ್ಲ. ರವಿದಾಸರು ಕಡುಬಡವರಾದರು. ಸಂಪಾದನೆಯಿಂದ ಹೊಟ್ಟೆ ಹೊರೆದುಕೊಳ್ಳುವುದೇ ಕಷ್ಟವಾಗಿತ್ತು. ಅವರ ದರಿದ್ರಾವಸ್ಥೆಯನ್ನು ನೋಡಿ ಜನರು ಹಾಸ್ಯಮಾಡುತ್ತಿದ್ದರು. ಆದರೆ ರವಿದಾಸರಿಗೆ ನಿಂದನೆ, ಹೊಗಳಿಕೆ ಎಲ್ಲ ಒಂದೇ. ಬಡತನಕ್ಕಾಗಿ ದುಃಖಿಸಲಿಲ್ಲ, ಹಣಬೇಕೆಂಬ ಆಸೆಯೂ ಇರಲಿಲ್ಲ. ಸರಳವ್ಯಕ್ತಿ. ಅಲ್ಪದರಲ್ಲೇ ತೃಪ್ತಿಪಡುವ ಸ್ವಭಾವ. ‘‘ರಾಮನಾಮವೆಂಬ ಐಶ್ವರ್ಯದ ಮುಂದೆ ಬೇರೆ ಯಾವ ಧನ ಅಥವಾ ಸುಖವೆಲ್ಲ ಸಾರಹೀನವಾದದ್ದು’’ ಎಂದು ರವಿದಾಸರು ಹೇಳುತ್ತಿದ್ದರು. ಅವರು ಸಂತೃಪ್ತಿಯ ಜೀವನವನ್ನು ನಡೆಸುತ್ತಿದ್ದರು.

ಶ್ರೀ ರಾಮನೆ ನನ್ನ ಐಶ್ವರ್ಯ

ಈ ವಿಷಯದಲ್ಲಿ ಒಂದು ಕಥೆಯೂ ಸಹ ಪ್ರಸಿದ್ಧವಾಗಿದೆ.

ಒಂದು ಸಲ ಒಬ್ಬ ಸಾಧು ರವಿದಾಸರ ಹತ್ತಿರ ಬಂದ. ರವಿದಾಸರು ಅವನನ್ನು ಬಹು ಭಕ್ತಿಯಿಂದ ನೋಡಿ ಕೊಂಡರು.ಸಾಧುವಿಗೆ ಬಹಳ ಸಂತೋಷವಾಯಿತಂತೆ. ಇಂತಹ ಸಜ್ಜನರು ಬಡತನದಲ್ಲಿರುವುದೇ, ಇವರಿಗೆ ಸಹಾಯ ಮಾಡಬೇಕು ಎನ್ನಿಸಿತು ಸಾಧುವಿಗೆ. ಅವನ ಬಳಿ ಒಂದು ಸ್ಪರ್ಶಮಣಿ ಇತ್ತು. ಅದನ್ನು ಯಾವ ವಸ್ತುವಿಗಾದರೂ ಮುಟ್ಟಿಸಿದರೆ ಆ ವಸ್ತು ಬಂಗಾರವಾಗುತ್ತಿತ್ತು.

ಸಾಧು ಅದನ್ನು ರವಿದಾಸರಿಗೆ ಕೊಟ್ಟು ‘‘ಇದನ್ನು ಜೋಪಾನವಾಗಿಟ್ಟುಕೋ, ಇದರಿಂದ ಕಬ್ಬಿಣವನ್ನು ಮುಟ್ಟಿದರೆ ಚಿನ್ನವಾಗುವುದು’’ ಎಂದು ಹೇಳಿದನಂತೆ.

ಆದರೆ ರವಿದಾಸರು ಅದನ್ನು ಸ್ವೀಕರಿಸಲಿಲ್ಲ. ‘‘ಶ್ರೀರಾಮನೇ ನನ್ನ ಐಶ್ವರ್ಯ. ನನಗೆ ಯಾವ ಧನವೂ ಬೇಡ’’ ಎಂದು ಹೇಳಿದರು.

ಸಾಧು ಎಂದುಕೊಂಡ, ‘‘ನನ್ನ ಮಾತಿನಲ್ಲಿ ಇವರಿಗೆ ನಂಬಿಕೆ ಇಲ್ಲ, ಅದರಿಂದಲೇ ಬೇಡ ಎನ್ನುತ್ತಿದ್ದಾರೆ.’ ಅವನು ಒಂದು ಕಬ್ಬಿಣದ ಚೂರಿಗೆ ಆ ಮಣಿಯನ್ನು ಉಜ್ಜಿದ. ಆಶ್ಚರ್ಯ! ಅದು ಚಿನ್ನವಾಯಿತು!

ಆದರೂ ಸಹ ರವಿದಾಸರು ಸ್ಪರ್ಶಮಣಿಯನ್ನು ಸ್ವೀಕರಿಸಲಿಲ್ಲ. ‘‘ನನಗೆ ಚಿನ್ನದ ಮೋಹವೇ ಇಲ್ಲದಿರುವಾಗ ಸ್ಪರ್ಶಮಣಿಯನ್ನು ತೆಗೆದುಕೊಂಡು ಏನು ಮಾಡಲೀ?’’ ಎಂದು ಹೇಳಿದರು.

ಸಾಧುವಿಗೋ ರವಿದಾಸರಿಗೆ ಸಹಾಯ ಮಾಡಬೇಕು, ಅವರ ಬಡತನವನ್ನು ಹೋಗಿಸಬೇಕು ಎಂಬ ಹಂಬಲ. ‘‘ನಿನಗೆ ಯಾವಾಗ ಇಷ್ಟವಾಗುತ್ತದೋ ಆಗ ಇದನ್ನು ಪ್ರಯೋಗಿಸು’’ ಎಂದು ಹೇಳಿ ಸ್ಪರ್ಶಮಣಿಯನ್ನು ಅಲ್ಲೇ ಜೋಪಾನವಾಗಿಟ್ಟು ಸಾಧು ಹೊರಟು ಹೋದನಂತೆ.

ಹದಿಮೂರು ತಿಂಗಳು ಕಳೆದವು. ಅಲೆದಾಡುತ್ತಿದ್ದ ಸಾಧು ಮತ್ತೆ ಕಾಶಿಯ ಕಡೆ ಬಂದ. ರವಿದಾಸರ ಸಜ್ಜನಿಕೆ, ದೈವಭಕ್ತಿ, ಸರಳಜೀವನದ ಬಯಕೆ ಯಾವುದನ್ನೂ ಅವನು ಮರೆತಿರಲಿಲ್ಲ. ಅವರಲ್ಲಿ ಅವನಿಗೆ ತುಂಬ ಅಭಿಮಾನ. ಈಗಲಾದರೂ ರವಿದಾಸರು ಸ್ಪರ್ಶಮಣಿಯನ್ನು ಉಪಯೋಗಿಸಿಕೊಂಡಿರುತ್ತಾರೆ, ಅವರ ಬಡತನ ಕಳೆದಿರುತ್ತದೆ ಎಂದು ಅವನ ನಿರೀಕ್ಷೆ. ಅವರ ಮನೆಗೆ ಬಂದ.

ರವಿದಾಸರ ಗುಡಿಸಲು ಇದ್ದಂತೆಯೇ ಇತ್ತು. ಅವರೂ ಮೊದಲಿನಂತೆಯೇ ಇದ್ದರು. ಅವರ ಬಡತನವೂ ಹಾಗೆಯೇ ಇತ್ತು.

ಸಾಧು ಬೆರಗಾದ.

‘‘ಸ್ಪರ್ಶಮಣಿಯನ್ನು ಕೊಟ್ಟಿದ್ದೇನಲ್ಲ, ಇನ್ನೂ ಹೀಗೆಯೇ ಇದ್ದೀರಿ?’’ ಎಂದ.

‘‘ಹೌದು, ಸ್ಪರ್ಶಮಣಿ ನನಗೆ ಬೇಡ ಎಂದು ಹೇಳಿದ್ದೆ ಆಗಲೇ,’’ ರವಿದಾಸರು ಉತ್ತರಿಸಿದರು.

‘‘ಹೊಗಲಿ, ಸ್ಪರ್ಶಮಣಿ ಹಿಂದಕ್ಕೆ ಕೊಡಿ.’’

‘‘ಅದು ನೀವು ಇಟ್ಟ ಸ್ಥಳದಲ್ಲಿಯೇ ಇರಬೇಕು ನೋಡಿ.’’

ಸಾಧು ತಾನು ಸ್ಪರ್ಶಮಣಿಯನ್ನು ಇಟ್ಟಿದ್ದ ಕಡೆ ಹೋಗಿ ನೋಡಿದ. ಅದು ಅಲ್ಲಿಯೇ ಇತ್ತು. ಧೂಳು ಕುಡಿಯುತ್ತ. ಸಾಧುವಿಗೆ ಬೆರಗೋ ಬೆರಗು. ಐಶ್ವರ್ಯದ ವಿಷಯದಲ್ಲಿ ಎಂತಹ ಪ್ರಾಮಾಣಿಕವಾದ ಔದಾಸೀನ್ಯ ಇವರಿಗೆ ಎಂದು ಅವರನ್ನು ಮೆಚ್ಚಿದ.

ದೇವರೇ ಸಾಧುವಿನ ವೇಷದಲ್ಲಿ ಭಕ್ತನಿಗೆ ಸಹಾಯ ಮಾಡುವುದಕ್ಕಾಗಿ ಬಂದನೆಂದು ಕೆಲವರು ಹೇಳುತ್ತಾರೆ. ಈ ಕತೆ ನಿಜ ಹೌದೋ ಅಲ್ಲವೋ ಹೇಳುವಂತಿಲ್ಲ. ಆದರೆ ಜನರು ಈ ಕತೆ ಹೇಳುತ್ತಿದ್ದರೆಂದರೆ, ಜನರಿಗೆಲ್ಲ ಅವರ ವಿಷಯದಲ್ಲಿ ಯಾವ ಪೂಜ್ಯಭಾವವಿತ್ತು ಎಂಬುದು ಗೊತ್ತಾಗುತ್ತದೆ.

ಕಾಯಕ ಪವಿತ್ರ

ರವಿದಾಸರು ಶ್ರಮಪಟ್ಟು ಕೆಲಸ ಮಾಡುವುದಕ್ಕೆ ಬಹಳ ಮಹತ್ವಕೊಡುತ್ತಿದ್ದರು. ‘ಕಾಯಕವೆ ಕೈಲಾಸ’ ಎಂಬುವುದು ಅವರ ತತ್ವ. ನಮ್ಮ ಕರ್ತವ್ಯವೇ ದೇವರನ್ನು ಕಾಣುವ ಸಾಧನೆ ಎಂದು ಹೇಳುತ್ತಿದ್ದರು. ‘‘ನಾಲಿಗೆಯಿಂದ ಜಪಮಾಡುತ್ತಾ ಕೈಯಿಂದ ಕೆಲಸ ಮಾಡುತ್ತಿದ್ದರೆ ರಾಮ ತಾನಾಗಿಯೇ ನಮ್ಮ ಮನೆಗೆ ಬರುತ್ತಾನೆ’’ ಎಂದು ಹೇಳುತ್ತಿದ್ದರು. ಈ ನಂಬಿಕೆಯಿಂದಲೇ ರವಿದಾಸರು ಪಾದರಕ್ಷೆಗಳನ್ನು ಹೊಲೆಯುತ್ತಲೇ ಹರಿಕೀರ್ತನೆ ಮಾಡುತ್ತಿದ್ದರು.

ರವಿದಾಸರು ಸಾತ್ವಿಕರು ಮತ್ತು ಉದಾರಿಗಳಾಗಿದ್ದರು. ಅಲ್ಪದರಲ್ಲೇ ತೃಪ್ತಿಪಡುವ ಸ್ವಭಾವ ಮತ್ತು ಶಾಂತಸ್ವಭಾವದ ಕಾರಣವಾಗಿ ಒಬ್ಬ ಪ್ರಸಿದ್ಧ ಭಕ್ತರು. ಅವರು ವಿರಕ್ತ ಸಂತರೂ ಆಗಿದ್ದರು.

ಮಾರ್ಗದರ್ಶಕರು

ರವಿದಾಸರು ಜನ್ಮದಿಂದಲೇ ಬ್ರಹ್ಮಜ್ಞಾನಿಯಾದ ಭಕ್ತರಾಗಿದ್ದರು. ಗುರುಗಳ ಜೊತೆಯಲೇ ಇದ್ದು ಸತ್ಸಂಗದಲ್ಲಿ ಇದ್ದುದರ ಫಲವಾಗಿ ಅವರು ಶಾಸ್ತ್ರಗಳಲ್ಲಿಯೂ ಸಹ ಒಳ್ಳೆಯ ಪಂಡಿತರಾಗಿದ್ದರು.

ಸತ್ಸಂಗ ಮತ್ತು ಸ್ವತಃ ಅಧ್ಯಯನದ ಫಲವಾಗಿ ರವಿದಾಸರು ಪ್ರವಚನಗಳನ್ನು ಮಾಡಲಾರಂಭಿಸಿದರು. ಅವರ ಪ್ರವಚನಗಳಲ್ಲಿ ವೇಗ, ಉಪನಿಷತ್ತು ಮತ್ತು ದರ್ಶನಶಾಸ್ತ್ರದ ವ್ಯಾಖ್ಯಾನಗಳಿರುತ್ತಿದ್ದವು. ಕೆಲವು ಸಲ ಆಧ್ಯಾತ್ಮಿಕ ವಿಚಾರಗಳಲ್ಲಿ ಇತರ ಪಂಡಿತರುಗಳಿಗೂ ರವಿದಾಸರಿಗೂ ವಾದವಿವಾದಗಳಾಗುತ್ತಿದ್ದವು. ವಿದ್ವಾಂಸರು ಸಹ ಇವರ ತರ್ಕಪೂರ್ಣವಾದ ವ್ಯಾಖ್ಯಾನಗಳನ್ನು ಕೇಳಿ ಆಶ್ಚರ್ಯಪಡುತ್ತಿದ್ದರು. ಅವರ ವ್ಯಾಖ್ಯಾನದಿಂದ ಎಲ್ಲರೂ ಪ್ರಭಾವಿತರಾಗುತ್ತಿದ್ದರು.

ಗುರುಗಳು ಸ್ವರ್ಗವಾಸಿಗಳಾದ ಮೇಲೆ ಅವರ ಆದೇಶದ ಪ್ರಕಾರ ರವಿದಾಸರು ಉತ್ತರಭಾರತದಲ್ಲೆಲ್ಲ ಪ್ರವಾಸಮಾಡಿ ಧರ್ಮಪ್ರಚಾರ ಮಾಡಿದರು. ಕಾಶಿಯಲ್ಲೇ ಹೆಚ್ಚು ಕಾಲವಿದ್ದು ಈ ಕಾರ್ಯವನ್ನು ಕೈಗೊಂಡರು. ಆದರೆ ಅವರು ಆರ್ಥಿಕಸ್ಥಿತಿ ಒಂದೇ ರೀತಿಯಲ್ಲಿ ಇತ್ತು. ಪಾದರಕ್ಷೆಗಳನ್ನು ಹೊಲೆದು ಅದರಿಂದ ಬಂದ ದುಡ್ಡಿನಲ್ಲೇ ತಮ್ಮ ಜೀವನವನ್ನು ಸಾಗಿಸುತ್ತಾ ಸಾಧುಸಂತರ ಸೇವೆಯನ್ನು ಸಹ ಮಾಡುತ್ತಿದ್ದರು.

ರವಿದಾಸರು ಸತ್ಸಂಗ ಭವನದಲ್ಲಿ ಆಧ್ಯಾತ್ಮಿಕ ಪ್ರವಚನ ಗಳ ಜೊತೆಗೆ ಸಮಾಜ ಸುಧಾರಣೆಯ ವಿಚಾರಗಳನ್ನು ಸಹ ಉಪದೇಶಿಸುತ್ತಿದ್ದರು. ‘‘ಜನ್ಮದಿಂದ ಯಾರೂ ಸಹ ಮೇಲು ಅಥವಾ ಕೀಳು ಆಗಲಾರರು, ಮನುಷ್ಯನು ಮಾಡುವ ಕರ್ಮದ ಫಲವಾಗಿ ಭೇದಬಾವ ಉಂಟಾಗುತ್ತದೆ’’ ಎನ್ನುತ್ತಿದ್ದರು.

ವಿರೋಧಿಗಳ ತೇಜೋಭಂಗ

ರವಿದಾಸರ ಕೀರ್ತಿಯನ್ನು ಕಂಡು ಅನೇಕ ಜನ ಪಂಡಿತರು ಹೊಟ್ಟೆಕಿಚ್ಚುಪಟ್ಟರು. ಮೇಲು ಜಾತಿ, ಕೀಳು ಜಾತಿ ಎಂಬ ಭಾವನೆಗಳನ್ನು ಅನೇಕರು ಇಟ್ಟುಕೊಂಡಿದ್ದ ಕಾಲ ಅದು. ‘‘ಒಬ್ಬ ಚಮ್ಮಾರನು ಬ್ರಾಹ್ಮಣರಿಗೆ ಅವಮಾನ ಮಾಡುತ್ತಿದ್ದಾನೆ’’ ಎಂಬುದಾಗಿ ಬಹಳ ಜನ ಬ್ರಾಹ್ಮಣರು ರವಿದಾಸರನ್ನು ಆಕ್ಷೇಪಿಸಿದರು. ‘‘ಒಬ್ಬ ಚಮ್ಮಾರನು ವೇದಿಕೆಯ ಮೇಲೆ ಕುಳಿತುಕೊಂಡು ಧರ್ಮೋಪದೇಶ ಮಾಡುವುದು ಧರ್ಮಕ್ಕೆ ವಿರುದ್ಧವಾದದ್ದು’’ ಎಂಬುದಾಗಿ ಕಾಶಿಯ ರಾಜನಾದ ವೀರಸಿಂಹದೇವನಿಗೆ ದೂರುಕೊಟ್ಟರು.

ರಾಜನು ರವಿದಾಸರನ್ನು ಮತ್ತು ಅವರ ವಿರೋಧಿಗಳನ್ನು ಆಸ್ಥಾನಕ್ಕೆ ಕರೆಸಿಕೊಂಡನು. ಕೆಳಜಾತಿಯವನು ಎನ್ನಿಸಿ ಕೊಂಡವನು ಇತರರಿಗೆ ಧರ್ಮೋಪದೇಶ ಮಾಡಬಹುದೆ ಎಂದು ಬಹಳ ಚರ್ಚೆಯಾಯಿತು. ಬ್ರಾಹ್ಮಣರು ತಮ್ಮ ವಾದವನ್ನು ಮುಂದಿಟ್ಟರು. ರವಿದಾಸರು, ಮನುಷ್ಯನು ಹುಟ್ಟಿನಿಂದ ದೊಡ್ಡವನೂ ಆಗುವುದಿಲ್ಲ, ಕೀಳೂ ಆಗುವುದಿಲ್ಲ, ಅವನು ಹೇಗೆ ಬಾಳುತ್ತಾನೆ ಎನ್ನುವುದು ಮುಖ್ಯ. ಒಳ್ಳೆಯ ಮಾತುಗಳನ್ನು ಯಾರು ಬೇಕಾದರೂ ಹೇಳಬಹುದು. ಒಳ್ಳೆಯತನಕ್ಕೆ ಜಾತಿ ಎಂಬುದಿಲ್ಲ ಎಂದು ತಾಳ್ಮೆಯಿಂದ ವಿವರಿಸಿದರು. ಧಮವೆಂದರೇನು ಎಂದು ವಿವರಿಸಿದರು.

ರವಿದಾಸರ ವಿಚಾರಗಳನ್ನು ಕೇಳಿ ರಾಜನು ಬಹಳ ಪ್ರಭಾವಿತನಾದ. ಅವನು ಚಾಡಿ ಹೇಳಿದವರನ್ನು ಬಹಳವಾಗಿ ಆಕ್ಷೇಪಿಸಿದ. ಅವರ ಹೊಟ್ಟೆಕಿಚ್ಚಿನ ವ್ಯವಹಾರವೇ ಧರ್ಮ ವಿರುದ್ಧ ಎಂದು ಹೇಳಿದ. ರವಿದಾಸರನ್ನು ಗುರುವಿನ ಸ್ಥಾನದಲ್ಲಿ ಸನ್ಮಾನಿಸಿ, ಗೌರವದಿಂದ ಬೀಳ್ಕೊಟ್ಟ.

ಬೆಳೆದ ಭಕ್ತವರ್ಗ

ಈ ಘಟನೆಯಾದ ಮೇಲೆ ರವಿದಾಸರ ಕೀರ್ತಿ ಮತ್ತು ಗೌರವ ಇನ್ನೂ ಬೆಳೆಯಿತು. ವಿದ್ವಾಂಸರೂ ಅವರ ಘನತೆಯನ್ನು ಒಪ್ಪಿಕೊಂಡು ಗೌರವಿಸುವಂತಾಯಿತು. ರವಿದಾಸರು ಭಗವಂತನ ಭಕ್ತಿಗೆ ಬಹಳ ಗೌರವ ಮತ್ತು ಮಹತ್ವ ಕೊಡುತ್ತಿದ್ದರು. ಅವರು ತಮ್ಮ ರಚನೆಗಳಲ್ಲಿ ಹೇ ‘‘ಭಗವಾನ್, ನಿನ್ನ ದಾಸಾನುದಾಸ ನಾನು, ‘ಪತಿತ ಪಾವನ’ನೆಂಬ ಹೆಸರುಳ್ಳವನು ನೀನು. ಆ ಹೆಸರಿನಿಂದ ನೀನು ಗೋಚರವಾಗಿ ನನ್ನನ್ನು ಉದ್ಧಾರಮಾಡು’’ ಎಂದು ಅನನ್ಯ ಭಕ್ತಿಯಿಂದ ದೇವರಲ್ಲಿ ಮೊರೆಯಿಡುತ್ತಿದ್ದರು.ತಮಗೆ ಯಾವ ತೊಂದರೆಗಳು ಬಂದರೂ ಸಹ ಶ್ರದ್ಧೆ ಮತ್ತು ಭಕ್ತಿಯಿಂದ ದೇವರ ಪ್ರಾರ್ಥನೆ ಮಾಡುತ್ತಿದ್ದರು.

ಚಿತ್ತೂರಿನ ಮಹಾರಾಣಿ ಕಾಶಿಗೆ ಬಂದಳು. ಅಲ್ಲಿ ರವಿದಾಸರ ಕೀರ್ತಿಯನ್ನು ಕೇಳಿದಳು. ಅವರ ಪ್ರವಚನ ಮತ್ತು ಕೀರ್ತನೆಗಳನ್ನು ಆಲಿಸಿದಳು. ಅವು ಆಕೆಯಮೇಲೆ ತುಂಬಾ ಪ್ರಭಾವವನ್ನು ಮಾಡಿದವು. ರವಿದಾಸರನ್ನು ತನ್ನ ಗುರುಗಳೆಂದು ಭಾವಿಸಿ ಅವರ ಶಿಷ್ಯೆಳಾದಳು.

ಗುರು ರವಿದಾಸರ ಉಪದೇಶಗಳನ್ನು ಕಾಶಿಯ ಎಲ್ಲಾ ವರ್ಗದವರು ಬಂದು ಕೇಳುತ್ತಿದ್ದರು. ಕೇವಲ ಸಾಮಾನ್ಯ ವ್ಯಕ್ತಿಗಳೇ ಅಲ್ಲ, ಶ್ರೀಮಂತರು ಮತ್ತು ಪಂಡಿತರೆಲ್ಲಾ ಬರುತ್ತಿದ್ದರು. ಅವರೆಲ್ಲ ಶ್ರದ್ಧೆ ಮತ್ತು ಭಕ್ತಿಯಿಂದ ಕುಳಿತು ರವಿದಾಸರ ವಾಣಿಯ ಅಮೃತಪಾನ ಮಾಡುತ್ತಿದ್ದರು. ರವಿದಾಸರ ಕ್ರಾಂತಿಕಾರಕ ವಿಚಾರಗಳು ಮತ್ತು ಜಾತಿಮತ ವ್ಯತ್ಯಾಸಗಳ ವಿರೋಧಿ ವಿಚಾರಗಳನ್ನು ಕೇಳಿ ಪ್ರಭಾವಿತರಾಗುತ್ತಿದ್ದರು.

ಗುರು ರವಿದಾಸರು ಯಾವರೀತಿ ಉಪದೇಶ ಮಾಡು ತ್ತಿದ್ದರೋ ಅದನ್ನೇ ಸ್ವತಃ ಮಾಡಿ ತೋರಿಸುತ್ತಿದ್ದರು. ಶ್ರಮಸಾಧನೆಗೆ ಬಹಳ ಮಹತ್ವ ಕೊಡುತ್ತಿದ್ದರು. ‘‘ಪರಿಶ್ರಮವೇ ಭಗವಂತನ ಪೂಜೆ, ಆ ಪೂಜೆಯೇ ಸುಖಕ್ಕೆ ಮತ್ತು ಮೋಕ್ಷಕ್ಕೆ ದಾರಿ’’ ಎಂದು ಹೇಳುತ್ತಿದ್ದರು. ಜೋಡು ಹೊಲಿಯುತ್ತಲೇ ಪ್ರಭುಕೀರ್ತನೆ ಮಾಡುತ್ತಿದ್ದರು. ಯಾವ ಸ್ಥಿತಿಯಲ್ಲೂಸಹ ತಮ್ಮ ಕರ್ತವ್ಯಧರ್ಮವನ್ನು ಬಿಡುತ್ತಿರಲಿಲ್ಲ. ‘ಎಲ್ಲಿಯವರೆವಿಗೆ ನಮ್ಮಲ್ಲಿ ಶಕ್ತಿಸಾಮರ್ಥ್ಯವಿರುತ್ತದೆಯೋ ಅಲ್ಲಿಯವರೆವಿಗೆ ಪರಿಶ್ರಮದಿಂದ ಸಂಪಾದನೆ ಮಾಡಿ ಜೀವನ ಮಾಡಬೇಕು. ಪರಾಧೀನತೆ ಪಾಪ’ ಎಂದು ಹೇಳುತ್ತಿದ್ದರು. ರವಿದಾಸರ ಉಪದೇಶ ಮತ್ತು ಮಾರ್ಗದರ್ಶನದಿಂದ ಶ್ರಮಸಾಧನೆಗೆ ಗೌರವ ಇನ್ನೂ ಹೆಚ್ಚಾಯಿತು. ಸತ್ಸಂಗದ ಪದ್ಧತಿ ಜನರನ್ನೆಲ್ಲಾ ಸತ್ಸಂಗದೆಡೆಗೆ ಎಳೆಯಿತು.

ರವಿದಾಸರ ಕೀರ್ತಿ ದೇಶದ ನಾಲ್ಕುದಿಕ್ಕುಗಳಲ್ಲೂ ಹರಡಿತು. ಅವರ ದರ್ಶನಭಾಗ್ಯ ಪಡೆಯಲು ಎಲ್ಲಾ ಪ್ರದೇಶಗಳಿಂದ ಸಾಧುಸಂತರು, ಭಕ್ತರು, ಗೃಹಸ್ಥರು ಬರುತ್ತಿದ್ದರು. ಅವರೆಲ್ಲರೂ ರವಿದಾಸರನ್ನು ತಮ್ಮ ಪ್ರದೇಶಗಳಿಗೆ ಬರಬೇಕೆಂದು ಆಹ್ವಾನಿಸುತ್ತಿದ್ದರು. ಗುರುಗಳು ಅವರ ಪ್ರಾರ್ಥನೆ ಮೇರೆಗೆ ಆಗಾಗ್ಗೆ ಧರ್ಮಪ್ರಚಾರಕ್ಕಾಗಿ ಬೇರೆ ಬೇರೆ ಪ್ರದೇಶಗಳಿಗೆ ಹೋಗುತ್ತಿದ್ದರು. ಅವರ ಶಿಷ್ಯೆಯಾದ ಚಿತ್ತೂರಿನ ರಾಣಿಯ ಆಹ್ವಾನವನ್ನು ಮನ್ನಿಸಿ ಚಿತ್ತೂರಿಗೂ ಸಹ ಹೋಗಿಬಂದರು.

ಗುರು ರವಿದಾಸರ ಮಹಾನ್ ವ್ಯಕ್ತಿತ್ವ, ಉದಾತ್ತವಾದ ವಿಚಾರ ಮತ್ತು ಭಕ್ತಿ ಸಾಧನೆಯಿಂದ ಕೇವಲ ಆ ಕಾಲದ ಸಾಮಾನ್ಯ ಜನರೇ ಅಲ್ಲ ಕಬೀರ್, ಸೇನ್, ಧನ್ನಾ, ನಾನಕ್ ಮುಂತಾದ ಸಾಧುಸಂತರೂ ಅವರನ್ನು ಗೌರವಿಸುತ್ತಿದ್ದರು. ಇವರೆಲ್ಲರೂ ರವಿದಾಸರ ಸತ್ಸಂಗ ಸಭೆಗೆ ಆಗಾಗ್ಗ ಬರುತ್ತಿದ್ದರು. ಭಕ್ತಳಾದ ಮೀರಾಬಾಯಿ ರವಿದಾಸರ ಶಿಷ್ಯೆಳಾದಳು. ಅವಳು ತನ್ನ ಭಕ್ತಿಗೀತೆಗಳನ್ನು ರವಿದಾಸರನ್ನು ‘ತನ್ನ ಗುರು’ ಎಂಬುದಾಗಿ ಅನೇಕ ಸಲ ಸ್ಮರಿಸಿದ್ದಾಳೆ.

ರವಿದಾಸರು ಜೀವನ ಆರಂಭದಿಂದ ಕೊನೆಯ ವರೆವಿಗೆ ಸಂಘರ್ಷಮಯವಾಯಿತು. ಅವರು ಒಬ್ಬ ಸಂತರು ಮತ್ತು ಕರ್ಮನಿಷ್ಠ ವ್ಯಕ್ತಿಯಾಗಿದ್ದರಿಂದ ಕಷ್ಟದಲ್ಲಿ ದಿಕ್ಕುಗಾಣದೆ ಇದ್ದವರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಬಾದಷಾಹ ನಾದ ಸಿಕಂದರೆ ಲೂದಿ ಆರಂಭದಲ್ಲಿ ರವಿದಾಸರನ್ನು ಅನೇಕ ಪರೀಕ್ಷಿಗಳಿಗೆ ಗುರಿಮಾಡಿ ನಂತರ ಅವರು ಭಕ್ತಿಭಾವದಿಂದ ಪ್ರಭಾವಿತನಾಗಿ ಶಿಷ್ಯನಾದದೆಂಬ ವದಂತಿ.

ಜೀವನಯಾತ್ರೆ ಮುಗಿಯಿತು

ಕೊನೆಯ ದಿನಗಳಲ್ಲಿ ಭಕ್ತ ಮೀರಳ ಪ್ರಾರ್ಥನೆಯ ಮೇರೆಗೆ ರವಿದಾಸರು ಚಿತ್ತೂರಿನಲ್ಲಿ ಇರಲಾರಂಭಿಸಿದರು. ಪ್ರತಿದಿನ ಕೀರ್ತನೆ ಮತ್ತು ಭಜನೆ ಮಾಡುತ್ತಿದ್ದರು. ಸಮಾಜ ಸುಧಾರಣೆಯ ವಿಚಾರಗಳನ್ನೂ ಸಹ ಉಪದೇಶ ಮಾಡುತ್ತಿದ್ದರು.

ರವಿದಾಸರನ್ನು ಸಂಪ್ರದಾಯವಂತರು ಅನೇಕ ಬಾರಿ ನಿಂದಿಸಿದ್ದರು, ವಿರೋಧಿಸಿದ್ದರು ಮತ್ತೆ ಮತ್ತೆ ರವಿದಾಸರು ತಮ್ಮ ಹಿರಿಮೆಯನ್ನು ತೋರಿಸಿದ್ದರು. ಇಷ್ಟಾದರೂ ಅವರಿಗೆವಿರೋಧ ತಪ್ಪಲಿಲ್ಲ. ಚಿತ್ತೂರಿನಲ್ಲಿ ಸಂಪ್ರದಾಯ ವಂತರು ಅವರ ಸಭೆಗಳಲ್ಲಿ ಮತ್ತೆ ಮತ್ತೆ ಸವಾಲು ಹಾಕುತ್ತಿದ್ದರು. ಇಂತಹ ಒಂದು ಸಮಯದಲ್ಲಿ ರವಿದಾಸರು ಇದ್ದಕ್ಕಿದ್ದಂತೆ ಅಂತರ್ಧಾನರಾದರೆಂದು ಭಕ್ತರು ಹೇಳುತ್ತಾರೆ.

ಈ ಸಮಾಚಾರವನ್ನು ತಿಳಿಸುವುದಕ್ಕಾಗಿ ಶಿಷ್ಯರೆಲ್ಲ ರವಿದಾಸರ ಪತ್ನಿ ಲೋನಾದೇವಿಯವರ ಕುಟೀರಕ್ಕೆ ಬಂದರು. ಆ ವೇಳೆಗೆ ಲೋನಾದೇವಿಯವರು ಸಹ ಅಂತರ್ಧಾನರಾಗಿ ದ್ದರಂತೆ.

ಹಿಂದೆ ಹೇಳಿದಂತೆ ರವಿದಾಸರು ಯಾವ ವರ್ಷ ತೀರಿಕೊಂಡರು ಎಂಬುದು ಖಚಿತವಾಗಿ ತಿಳಿದಿಲ್ಲ. ೧೫೨೫, ೧೫೮೫ ಹೀಗೆ ಹಲವು ವರ್ಷಗಳನ್ನು ಹೇಳುತ್ತಾರೆ. ಅವರು ಈ ಪ್ರಪಂಚವನ್ನು ಬಿಟ್ಟಾಗ ಅವರ ವಯಸ್ಸು ೧೦೪ ವರ್ಷ, ೧೫೧ ವರ್ಷ ಹೀಗೆಲ್ಲ ಹೇಳುತ್ತಾರೆ. ಖಚಿತವಾಗಿ ಹೇಳಬಹುದಾದದ್ದು ಅವರು ಸಂತ ಕಬೀರ್, ಸಂತ ಮೀರಾ ಇಂತಹ ಹಿರಿಯರ ಸಮಕಾಲೀನರು, ದೀರ್ಘಾಯುಗಳು ಎಂದು ಮಾತ್ರ.

ಮೀರಾಬಾಯಿ ತನ್ನ ಗುರುವಿನ ನೆನಪಿಗಾಗಿ ಚಿತ್ತೂರಿನಲ್ಲಿ ‘ರವಿದಾಸ ಛತ್ರ’ ಎಂಬ ಹೆಸರಿನಲ್ಲಿ ಕಟ್ಟಡವನ್ನು ಕಟ್ಟಿಸಿದ್ದಾಳೆ. ಈಗಲೂ ಸಹ ಚಿತ್ತೂರು ರವಿದಾಸರ ಭಕ್ತರಿಗೆಲ್ಲಾ ಯಾತ್ರಾಸ್ಥಳವಾಗಿದೆ. ತಿರುಪತಿಯಲ್ಲಿ ಬಾಲಾಜಿ ಪರ್ವತದ ಕೆಳಗಡೆ ವೈಕುಂಠ ಕೋಲ್ ತೀರ್ಥಸ್ಥಾನದ ಮೇಲೆ ರವಿದಾಸರ ಸಮಾಧಿಯ ಅವಶೇಷಗಳು ಕಾಣುತ್ತವೆ.

ಗುರು ರವಿದಾಸರು ಸ್ವತಃ ಯಾವ ಮತವನ್ನೂ ಸ್ಥಾಪಿಸಿಲ್ಲ. ಆದರೆ ಅವರ ಅನುಯಾಯಿಗಳು ಸಹಸ್ರಾರು ಮಂದಿ. ಈಗಲೂ ಸಹ ಅವರ ಅನುಯಾಯಿಗಳು ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್, ಉತ್ತರಪ್ರದೇಶ್, ದೆಹಲಿ ಮುಂತಾದ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಪ್ರತಿಯೊಂದು ಪ್ರದೇಶದಲ್ಲೂ ಸಹ ಅವರ ಅನುಯಾಯಿಗಳು ಗುರುಗಳ ಸ್ಮರಣೆಗಾಗಿ ಮಂದಿರಗಳನ್ನು ಕಟ್ಟಿಸಿದ್ದಾರೆ. ಬೇರೆ ಬೇರೆ ಪ್ರಾಂತಗಳಲ್ಲಿ ರವಿದಾಸ ಶಿಷ್ಯರನ್ನು ಬೇರೆಬೇರೆ ಹೆಸರಿನಿಂದ ಕರೆಯುತ್ತಾರೆ. ಬಂಗಾಳದಲ್ಲಿ ರೂಈದಾಸ್, ಮಹಾರಾಷ್ಟ್ರದಲ್ಲಿ ರೋಹೀದಾಸ್ ಅಥವಾ ರೋಹಿತಾಶ್ವ, ಉತ್ತರ ಪ್ರದೇಶದಲ್ಲಿ ರವಿದಾಸ, ರಾಜಸ್ಥಾನ ಮತ್ತು ಪಂಜಾಬ್‌ನಲ್ಲಿ ರೈದಾಸ. ‘ಗುರು ಗ್ರಂಥಸಾಹೇಬ್’ ನಲ್ಲಿ ರವಿದಾಸ ಎನ್ನುವ ಹೆಸರೇ ಉಪಯೋಗಿಸಿದೆ. ರವಿದಾಸರ ಮೂವತ್ತೊಂಬತ್ತು ಪದಗಳು ಈ ಗ್ರಂಥದಲ್ಲಿ  ಸಂಗ್ರಹಿತ ವಾಗಿದೆ.

ರಾಮನಾವಮೇ ವಜ್ರಕವಚ

ರವಿದಾಸರು ಕಳಂಕಗಳಿಲ್ಲದ ಅತ್ಯಂತ ವಿನಯಪೂರ್ಣ ಸಂತರು. ದ್ವೇಷದ ಸೋಂಕಿಲ್ಲದ ಕವಿಗಳು. ಅವರ ವಾಣಿಯೂ ಸಹ ಅವರ ಹಾಗೆಯೇ ಸರಳವಾಗಿದೆ. ಆದರೆ ಉದಾತ್ತವಿಚಾರಗಳು ಮತ್ತು ಭಕ್ತಿಭಾವನೆಯಿಂದ ಪರಿಪೂರ್ಣವಾಗಿದೆ. ಇವರದು ನಿರಾಡಂಬರ ಸಹಜ ಶೈಲಿ. ಹೃದಯವನ್ನು ಮುಟ್ಟುತ್ತವೆ. ಗುರು ರವಿದಾಸರ ಪದ್ಯವನ್ನು ‘‘ಸಾಖೀ’’ ಎಂದು ಕರೆಯುತ್ತಾರೆ. ಈ ಸಾಖೀಗಳು ಅವರ ಉಪದೇಶಗಳ ಪ್ರತ್ಯಕ್ಷರೂಪ. ಅನುಭವಗಳ ಸಾರವಚನ ಗಳು.ಸಂತಕಬೀರರು ಈ ಸಾಖೀಗಳನ್ನು ಜ್ಞಾನದ ಕಣ್ಣುಗಳೆಂದು ಹೇಳಿದ್ದಾರೆ. ಈ ಸಾಖೀಗಳು ಸಂಸಾರದ ಜಂಜಾಟದಿಂದ ಮುಕ್ತಿ ಪಡೆಯುವ ಮಾರ್ಗವನ್ನು ತೋರಿಸುತ್ತವೆ ಎಂದು ಹೇಳಿದ್ದಾರೆ, ರವಿದಾಸರು ರಾಮನಾಮದ ಮಹಿಮೆಯನ್ನು ತಮ್ಮ ಸಾಖೀಗಳಲ್ಲಿ ಒತ್ತಿಹೇಳಿದ್ದಾರೆ. ಈ ಪ್ರಪಂಚವನ್ನು ಪ್ರಭುವಿನ ಲೀಲೆಯೆಂದು ಕರೆದಿದ್ದಾರೆ,ದುಃಖದ ಮನೆಯೆಂದು ಕರೆದಿದ್ದಾರೆ. ಈ ಪ್ರಪಂಚವೆಂಬ ಮಾಯೆಯಿಂದ ಪಾರಾಗಲು ರಾಮನಾಮವೊಂದೇ ಉಪಾಯ ಎಂದು ಹೇಳಿದ್ದಾರೆ.

ರವಿದಾಸರು ಬಾಲ್ಯದಿಂದಲೇ ಬಹು ದೊಡ್ಡ ಭಕ್ತರು. ಆದರೆ ಅವರು ಸಮಾಜದಲ್ಲಿನ ಅನ್ಯಾಯ, ಕಷ್ಟ ಇವುಗಳನ್ನು ಗಮನಿಸದೆ ಇದ್ದವರಲ್ಲ, ಎಲ್ಲರಿಂದ ದೂರವಾಗಿ ಉಳಿದು ಧ್ಯಾನದಲ್ಲಿ ಜೀವನವನ್ನು ಕಳೆದವರಲ್ಲ. ಜಾತಿ-ಮತಗಳ ವಿಷಯದಲ್ಲಿ ಜನರಿಗಿದ್ದ ತಪ್ಪು ನಂಬಿಕೆಗಳನ್ನು ಎತ್ತಿ ತೋರಿಸಿದರು. ಅವರು ಬಹಳ ಕೋಮಲ ಹೃದಯವುಳ್ಳವರಾಗಿದ್ದರು. ಕಷ್ಟದಲ್ಲಿರುವವನ್ನು ನೋಡಿದಾಗ ಬಹಳವಾಗಿ ಮರುಗುತ್ತಿದ್ದರು. ಧರ್ಮದ ಕ್ಷೇತ್ರದಲ್ಲಿ ಆಡಂಬರದ ಭಕ್ತಿಯನ್ನು ಖಂಡಿಸಿದ್ದಾರೆ. ಧರ್ಮ ಮತ್ತು ಕರ್ಮ ಒಂದೇ ಎಂದು ಹೇಳಿದರು. ಅವರ ಪ್ರಕಾರ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವುದೇ ಧರ್ಮ ಮತ್ತು ಇದುವೇ ಭಕ್ತಿ.

ಮಾನವತಾವಾದಿ

ಪರಮ ಭಕ್ತನಾದರೂ ಸಹ ರವಿದಾಸರು ಮಾನವತಾವಾದಿಗಳು. ಅವರು ಮನುಷ್ಯರನ್ನು ಮನುಷ್ಯತ್ವಕ್ಕಾಗಿ ಗೌರವಿಸುತ್ತಿದ್ದರೆ ವಿನಹ ಅವರ ಜಾತಿ,ಕುಲ, ಐಶ್ವರ್ಯ ಮತ್ತು ಪದವಿಗಳಿಗೆಲ್ಲ. ಅವರು ಜಾತಿಭೇದ ವರ್ಣಭೇದವನ್ನು ಟೀಕಿಸುತ್ತಿದ್ದರು. ಒಬ್ಬ ಕುಂಬಾರ ಹೇಗೆ ಒಂದೇ ಮಣ್ಣಿನಿಂದ ಅನೇಕ ಮಡಿಕೆಗಳನ್ನು ತಯಾರು ಮಾಡುವನೋ ಅದೇ ರೀತಿ ಈ ಪ್ರಪಂಚದ ಮನುಷ್ಯರು ಒಂದೇ ಮಣ್ಣಿನಿಂದ ಮಾಡಲ್ಪಟ್ಟವರು. ಅವರನ್ನು ಮಾಡುವವನು ದೇವರು ಒಬ್ಬನೇ. ಆ ದೇವರು ಎಲ್ಲರನ್ನೂ ಇದ್ದಾನೆ. ಹೀಗಿರುವಾಗ ಒಬ್ಬರಿಂದ ಮತ್ತೊಬ್ಬರನ್ನು ಭೇದ ಮಾಡುವುದು ಮೂರ್ಖತನ ಎಂದು ಉಪದೇಶಿಸುತ್ತಿದ್ದರು. ಮನುಷ್ಯರು ಸದಾಚಾರದಿಂದ ಜೀವನ ನಡೆಸಬೇಕು. ಇಂದ್ರಿಯಗಳನ್ನು ನಿಗ್ರಹಿಸಬೇಕು. ಲೌಕಿಕ ಸುಖ ಮತ್ತು ಭೋಗಗಳಿಂದ ದೂರವಿರಬೇಕು. ಹೀಗೆ ನಡೆಯುವ ವ್ಯಕ್ತಿಯೇ ಮೋಕ್ಷವನ್ನು ಪಡೆಯುತ್ತಾನೆ. ಮನುಷ್ಯನಿಗೆ ಜೀವನ ದಲ್ಲಿ ಸುಖವನ್ನು ಅನುಭವಿಸುವ ಅಪೇಕ್ಷೆ ಇದ್ದರೆ ಅದನ್ನೂ ನ್ಯಾಯವಾಗಿ ಪಡೆಯಬೇಕು. ಕೆಟ್ಟ ಕೆಲಸಗಳನ್ನು ಮಾಡಬಾರದು ಮತ್ತು ಕೆಟ್ಟಜನರ ಸಹವಾಸದಲ್ಲಿರಬಾರದು ಎಂದು ಉಪದೇಶಿಸುತ್ತಿದ್ದರು.

ರವಿದಾಸರು ಮನುಷ್ನು ಸ್ವತಂತ್ರವಾಗಬೇಕೆಂದು ಹೇಳುತ್ತಿದ್ದರು. ‘‘ಪರಾಧೀನತೆ ಪಾಪ’’ ಎಂದು ಹೇಳಿದ್ದಾರೆ. ‘‘ಪರಾಧೀನ ವ್ಯಕ್ತಿ ಒಬ್ಬ ದಾಸನ ಹಾಗೆ ಜೀವನ ನಡೆಸುತ್ತಾನೆ. ಅವನನ್ನು ಯಾರೂ ಪ್ರೀತಿಸುವುದಿಲ್ಲ. ತಿರಸ್ಕಾರದಿಂದ ನೋಡುತ್ತಾರೆ. ಆದ್ದರಿಂದ ಮನುಷ್ಯರು ಸ್ವತಂತ್ರವಾಗಿರಬೇಕೆಂದು’’ ಹೇಳುತ್ತಿದ್ದರು. ಅವರ ಪ್ರಕಾರ ಮನುಷ್ಯ ಜೀವನದ ಮುಖ್ಯಗುರಿ ದೇವರನ್ನು ಪಡೆಯುವುದು, ಅದಕ್ಕೆ ಮಾನವಸೇವೆಯೇ ತಪಸ್ಸು. ಇದೇ ನಿಜವಾದ ದೇವರಭಕ್ತಿ ಮತ್ತು ಆತನನ್ನು ಪಡೆಯುವ ಸಾಧನೆ.

ನಿಜವಾದ ಭಕ್ತಿ

‘‘ಭಕ್ತಿ ಎಂಬುವುದು ತಮಾಷೆಯಲ್ಲ. ಮನೆಯನ್ನೆಲ್ಲ ತೊರೆದು ಕಾಡಿನಲ್ಲಿ ಹೋಗಿ ಕುಳಿತುಕೊಳ್ಳುವುದು ಭಕ್ತಿಯಲ್ಲ. ಇದು ಕೇವಲ ಭಕ್ತಿಯ ಭ್ರಮೆ. ಈ ಜಗತ್ತಿನಲ್ಲಿಯೇ ಇದ್ದೂ, ತನ್ನ ಕೆಲಸವನ್ನು ಮಾಡುತ್ತ, ದೇವರ ಧ್ಯಾನದಲ್ಲೇ ಮಗ್ನವಾಗಿರುವುದು ನಿಜವಾದ ಭಕ್ತಿ’’ ಎಂದು ರವಿದಾಸರು ಹೇಳುತ್ತಿದ್ದರು. ಭಕ್ತಿಯನ್ನು ಪಡೆಯಲು ಮೊದಲನೆಯದಾಗಿ ಅಹಂಕಾರವನ್ನು ತ್ಯಜಿಸಬೇಕು. ಧೂಳಿನಲ್ಲಿ ಬಿದ್ದಿರುವ ಸಕ್ಕರೆಯ ಕಾಳುಗಳನ್ನು ಇರುವೆಗಳು ಆರಿಸಿ ತಿನ್ನುತ್ತವೆ. ಆದರೆ  ಆನೆ ಈ ರೀತಿ ಆರಿಸಿ ತಿನ್ನಲಾರದು. ಅದೇ ರೀತಿ ಅಹಂಕಾರವಿಲ್ಲದ ವ್ಯಕ್ತಿ ಪ್ರಪಂಚದ ಒಂದೊಂದು ಕಣದಲ್ಲೂ ಪರಮಾನಂದವನ್ನು ಪಡೆಯುತ್ತಾನೆ. ಆದರೆ ಒಬ್ಬ ಅಹಂಕಾರಿ ಆ ರೀತಿ ಆಗಲಾರ’’ ಎಂದು ಹೇಳುತ್ತಿದ್ದರು.

ರವಿದಾಸರು ಪ್ರೇಮಭಕ್ತಿಗೆ ಮಹತ್ವಕೊಡುತ್ತಿದ್ದರು. ಪ್ರೇಮಭಕ್ತಿಯಲ್ಲೇ ವಿಲೀನರಾಗುತ್ತಿದ್ದರು. ಒಮ್ಮೊಮ್ಮೆ ದೇವರನ್ನು ಒಬ್ಬ ಸ್ನೇಹಿತನ ಹಾಗೆ ತಮಾಷೆ ಮಾಡುತ್ತಿದ್ದರು. ಅವರ ಒಂದು ಪದ್ಯದಲ್ಲಿ ಹೀಗೆ ಹೇಳಿದ್ದಾರೆ.

‘‘ಪ್ರಭು ನಿನಗೆ ‘ಪತಿತಪಾವನ’ ನೆಂಬ ಬಿರುದಿದೆ. ಇದು ನಿಜ. ಆದರೆ ಇದರಲ್ಲಿ ವಿಶೇಷತೆ ಏನು? ನಿನಗೆ ಈ ಹೆಸರು ಉಂಟಾಗಲು ನಾವೇ ಕಾರಣರು. ಹೇ ಭಗವಾನ್! ನಾವು ಪಾಪಗಳನ್ನು ಮಾಡದೇ ಹೋದರೆ ನೀನು ಯಾರನ್ನು ಪವಿತ್ರಗೊಳಿಸುತ್ತಿಯೆ? ನಾವು ಬೆಟ್ಟದಷ್ಟು ದೊಡ್ಡ ಪಾಪಗಳನ್ನು ಮಾಡಿದೆವು, ಮತ್ತು ಅವುಗಳನ್ನು ನಿವಾರಿಸುವ ಅವಕಾಶ ನಿನಗೆ ಒದಗಿತು. ಅದರ ಫಲವಾಗಿ ‘ಪತಿತ ಪಾವನ’ ನೆಂಬ ಬಿರುದು ನಿನಗೆ ಲಭಿಸಿತು. ಈಗ ನೀನೇ ಹೇಳು, ಇದಕ್ಕೆ ಕಾರಣರು ನಾವೋ ಅಥವಾ ನೀನೋ?

ಹೀಗೆ ಅವರು ದೇವರನ್ನು ಸಲಿಗೆಯಿಂದ ಹಾಸ್ಯ ಮಾಡುತ್ತಾರೆ. ಆದರೆ ಇಲ್ಲಿಯೂ ಅವರು ಗಮನವನ್ನೂ ಸೆಳೆಯುವುದು ದೇವರು ಪತಿತಪಾವನ, ಪಾಪ ಮಾಡಿದವರನ್ನು ಕ್ಷಮಿಸುವವನು ಎಂಬ ನಂಬಿಕೆಯ ಕಡೆಗೆ.

ರವಿದಾಸರ ಪ್ರೇಮದ ಹಗ್ಗ ಬಹಳ ಬಲವಾದದ್ದು. ದೇವರು ನಮಗೆ ಜನ್ಮಕೊಟ್ಟು ಪ್ರಾಪಂಚಿಕ ಮೋಹಜಾಲದಲ್ಲಿ ಸಿಲುಕಿಸಿದ್ದಾನೆ. ಅದೇ ರೀತಿ ರವಿದಾಸರು ತಮ್ಮ ಪ್ರೇಮವೆಂಬ ಹಗ್ಗದಲ್ಲಿ ದೇವರನ್ನು ಕಟ್ಟಿದ್ದಾರೆ. ಅವರು ಒಂದು ಪದ್ಯದಲ್ಲಿ ‘ಹೇ ಪ್ರಭು, ನಾವು ನಿನ್ನನ್ನು ಪೂಜಿಸಿ ಮೋಹಪಾಶದಿಂದ ಮುಕ್ತಿಯನ್ನು ಪಡೆಯುತ್ತೇವೆ. ಆದರೆ ನೀನು ನಮ್ಮ ಪ್ರೇಮಪಾತದಿಂದ ಹೇಗೆ ಮುಕ್ತಿಯನ್ನು ಪಡೆಯುತ್ತೀಯೆ? ಹೇ ಪ್ರಭು! ನೀನು ನನ್ನನ್ನು ಬಿಟ್ಟು ಎಲ್ಲಿ ಹೋಗುವೆ? ನಾನು ನಿನ್ನಲ್ಲೇ ವಿಲೀನವಾಗುತ್ತೇನೆ’’ ಎನ್ನುತ್ತಾರೆ. ಪ್ರೇಮಭಕ್ತಿಯ ಸಾರ್ಥಕತೆಯನ್ನು ರವಿದಾಸರು ಬಹಳ ಸುಂದರವಾಗಿ ತಮ್ಮ ಸಾಖೀಗಳಲ್ಲಿ ವರ್ಣಿಸಿದ್ದಾರೆ. ರಾಮನಾಮದ ಧ್ಯಾನದಲ್ಲಿ ಸಂಪೂರ್ಣವಾಗಿ ತಲ್ಲೀನರಾದರೆ ಪ್ರೇಮಭಕ್ತಿಯು ತಾನಾಗಿ ಹುಟ್ಟುತ್ತದೆ. ಪ್ರೇಮಭಕ್ತಿಗೆ ಯಾವ ವಿಧವಾದ ಪೂಜಾವಿಧಾನ ಮತ್ತು ಪೂಜಾಸಾಮಾಗ್ರಿಗಳು ಬೇಕಾಗಿಲ್ಲ. ತನುಮನಗಳನ್ನು ಸಂಪೂರ್ಣವಾಗಿ ಅರ್ಪಿಸಿ ಭಗವಂತನ ಪೂಜೆಮಾಡಬೇಕು. ಇದೇ ನಿಜವಾದ ಭಕ್ತಿ ಮತ್ತು ಸರಳಭಕ್ತಿ ಎಂದು ರವಿದಾಸರು ಉಪದೇಶಿಸುತ್ತಿದ್ದರು.

ಭಾರತದ ಇತಿಹಾಸದಲ್ಲಿ ಕೆಲವು ಶತಮಾನಗಳ ಹಿಂದೆ ನಮ್ಮ ಸಮಾಜ ಅಜ್ಞಾನವೆಂಬ ಅಂಧಕಾರದಲ್ಲಿ ಮುಳುಗಿತ್ತು. ಜನರಲ್ಲಿ ಬಹಳವಾದ ಮೂಢನಂಬಿಕೆಗಳು ಬೇರೂರಿದ್ದವು. ಅಂಥಹ ಸಮಯದಲ್ಲಿ ನಿರಾಶೆಯಿಂದ ಪೀಡಿತವಾದ ನಮ್ಮ ಭಾರತೀಯ ಸಮಾಜಕ್ಕೆ ಅನೇಕ ಜನ ಸಂತರು ಮತ್ತು ಭಕ್ತರು ನವಜೀವನದ ಆಸೆಯ ಸಂದೇಶವನ್ನು ಕೊಟ್ಟರು. ಅಂಥವರಲ್ಲಿ ಗುರು ರವಿದಾಸರು ಅಗ್ರಗಣ್ಯರು. ಗುರುಗಳ ಕಣ್ಮರೆಯಾಗಿ ನೂರಾರು ವರ್ಷಗಳಾಗಿದ್ದರೂ ಸಹ ಅವರ ಪವಿತ್ರಜೀವನ ಮತ್ತು ಸಂದೇಶಗಳು ಸಮಾಜಕ್ಕೆ ನವಶಕ್ತಿ ಮತ್ತು ಪ್ರೇರಣೆಯನ್ನು ನೀಡುತ್ತಿವೆ.

ಕೆಲವು ಅಮೂಲ್ಯ ವಿಚಾರಗಳು

ಸಮಾಜಕ್ಕೆ ರವಿದಾಸರ ಅತಿ ಮುಖ್ಯವಾದ ಕೊಡುಗೆ ಸರ್ವ ಸಮಾನತೆ ಎಂಬ ವಿಚಾರ ಇದು ಕೇವಲ ಮನುಷ್ಯರಿಗೇ ಅಲ್ಲ, ಪ್ರಾಣಿಗಳಿಗೂ ಸಂಬಂಧಿಸಿದ್ದು. ಪರಮಾತ್ಮ ಎಲ್ಲರಲ್ಲೂ ಮತ್ತು ಎಲ್ಲದರಲ್ಲೂ ಇದ್ದಾನೆ. ಆದ್ದರಿಂದ ಭೇದಮಾಡುವುದು ಮೂರ್ಖತನ.

ಎರಡನೆಯ ಅತಿಮುಖ್ಯವಾದ ಕೊಡುಗೆ ಎಂದರೆ ನೀತಿ ಮತ್ತು ಒಳ್ಳೆಯ ವ್ಯವಹಾರಗಳಿಂದ ಕೂಡಿರುವ ಜೀವನದ ಸಂದೇಶ. ಸದಾಚಾರ ಜೀವನಕ್ಕೆ ಮೊದಲು ಇಂದ್ರಿಯನಿಗ್ರಹಣ ಮಾಡಬೇಕು. ಭೋಗ, ಮತ್ತು ಸುಖಗಳನ್ನು ತ್ಯಾಗಮಾಡ ಬೇಕು. ಮನುಷ್ಯನು ಇಂದ್ರಿಯ ಸುಖಕ್ಕಾಗಿ ಆಸೆಪಡುತ್ತಾನೆ. ಆದರೆ ಕೊನೆಯಲ್ಲಿ ಅದರಿಂದ ಅಶಾಂತಿ ಮತ್ತು ದುಃಖ ಉಂಟಾಗುತ್ತದೆ. ಆದ್ದರಿಂದ ರವಿದಾಸರು ಈ ರೀತಿ ಉಪದೇಶಿಸುತ್ತಾರೆ.

‘‘ಮನುಷ್ಯನು ಆಸೆ ಮತ್ತು ಸುಖಗಳನ್ನು ದೂರವಿಡಬೇಕು. ತನ್ನ ಇಂದ್ರಿಯಗಳನ್ನು ಭೋಗಗಳಲ್ಲಿರಲು ಬಿಡಬಾರದು. ಇದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಹೃದಯ ಉಲ್ಲಾಸಿತವಾಗುತ್ತದೆ. ಇಂದ್ರಿಯಗಳನ್ನು ಸಂಯಮದಲ್ಲಿಡು ವುದರಿಂದ ಆತ್ಮಸಾಂತಿ ಸಿಗುತ್ತದೆ ಮತ್ತು ಮನುಷ್ಯನ ಆತ್ಮವಿಶ್ವಾಸವೂ ಬೆಳೆಯುತ್ತದೆ.’’

ಭೋಗಸುಖಗಳಿಂದ ದೂರವಿರಬೇಕೆಂದು ರವಿದಾಸರು ತಮ್ಮ ರಚನೆಗಳಲ್ಲಿ ಈ ರೀತಿಯೂ ವಿವರಿಸಿದ್ದಾರೆ. ಸುಖಗಳಿಂದ ಮನುಷ್ಯನಿಗೆ ತೃಪ್ತಿ ಎಂಬುದೇ ಇರುವುದಿಲ್ಲ. ಸುಖ ಇದ್ದರೂ ಸಹ ಇನ್ನೂ ಹೆಚ್ಚು ಹೆಚ್ಚು ಸುಖಪಡೆಯಬೇಕೆಂಬ ಆಸೆ ಹುಟ್ಟುತ್ತದೆ. ಸುಖವನ್ನು ಪಡೆಯುವುದಕ್ಕಾಗಿ ಮನುಷ್ಯ ವಿವೇಕವನ್ನೇ ಕಳೆದುಕೊಳ್ಳುತ್ತಾನೆ. ಇದರಿಂದ ಅವರ ನಾಶವಾಗುತ್ತದೆಯೇ ವಿನಾ ಯಾವ ವಿಧವಾದ ಲಾಭವೂ ಇಲ್ಲ. ಭಗವದ್ಗೀತೆಯ ಒಂದು ಶ್ಲೋಕದ ಅರ್ಥವನ್ನು ವಿವರಿಸುತ್ತಾರೆ ರವಿದಾಸರು ತಮ್ಮ ಒಂದು ಪದ್ಯದಲ್ಲಿ.

‘‘ಸುಖದಲ್ಲಿರುವ ಮನುಷ್ಯನಿಗೆ ಸುಖಗಳಲ್ಲೇ ಗಮನ ಹೆಚ್ಚಾಗಿರುತ್ತದೆ. ಇದರಿಂದ ಅವನಿಗೆ ಸುಖಗಳ ಆಸೆಯೂ ಹೆಚ್ಚಾಗುತ್ತದೆ. ಸುಖವನ್ನು ಪಡೆಯುವುದರಲ್ಲಿ ಏನಾದರೂ ತೊಂದರೆ ಉಂಟಾದರೆ ಕೋಪ ಬರುತ್ತದೆ. ಕೋಪದಿಂದ ವಿವೇಕ ಹೋಗುತ್ತದೆ. ವಿವೇಕ ಹೀನವಾಗುವುದರಿಂದ ಮನುಷ್ಯನ ಬುದ್ಧಿಯು ಮಂದವಾಗುತ್ತದೆ. ಜ್ಞಾನ ಶಕ್ತಿಯು ಹೋಗುತ್ತದೆ. ಬುದ್ದಿಯು ನಾಶವಾಗುವುದರಿಂದ ಮನುಷ್ಯನ ಧ್ಯೇಯವೇ ನಾಶವಾಗುತ್ತದೆ.’’

ಆದ್ದರಿಂದ ರವಿದಾಸರು ಇಂದ್ರಿಯ ನಿಗ್ರಹಣ ಮಾಡಲು ಉಪದೇಶಿಸುತ್ತಾರೆ. ಆತ್ಮಶಾಂತಿ ಮತ್ತು ನೆಮ್ಮದಿ ಪಡೆಬೇಕಾದರೆ ಲೌಕಿಕ ಸುಖಗಳನ್ನು ಅತಿಯಾಗಿ ಆಸೆಪಡಬಾರದು. ಇದೇ ರವಿದಾಸರ ಉಪದೇಶ.

‘‘ಹಣದಾಸೆಯೇ ಮನುಷ್ಯನ ನಾಶಕ್ಕೆ ಮೂಲ’’ ಎಂದು ರವಿದಾಸರು ಹೇಳಿದ್ದಾರೆ. ಹಣದಾಸೆಯು ಮನುಷ್ಯನ ಕೆಟ್ಟ ಪ್ರವೃತ್ತಿಗಳಲ್ಲಿ ಒಂದು. ಹಣವನ್ನು ಸಂಪಾದಿಸುವುದೇ ತಪ್ಪಲ್ಲ. ಆದರೆ ಹಣವನ್ನು ಪರೋಪಕಾರಕ್ಕಾಗಿ ಮತ್ತು ಜನಸೇವೆಗಾಗಿ ಖರ್ಚುಮಾಡಬೇಕು. ಅದರಲ್ಲೆ ನಿಜವಾದ ಸುಖ ಸಿಗುತ್ತದೆ.

ರವಿದಾಸರ ಎಷ್ಟೇ ಕಷ್ಟಗಳು ಬಂದರೂ ಸಹ ಸಂತೋಷದಿಂದಿರುತ್ತಿದ್ದರು. ಮನಸನ್ನು ಯಾವಾಗಲೂ ಸಂತೋಷದಿಂದಿಡಬೇಕು. ಎಲ್ಲಿ ನಿಜವಾದ ಸಂತೋಷವಿರುತ್ತದೆಯೋ ಅಲ್ಲಿ ದೋಷಗಳು ಇರುವುದಿಲ್ಲ. ಮನಸ್ಸು ನಿರ್ಮಲವಾಗಿದ್ದರೆ ಸಂತೋಷವಿರುತ್ತದೆ. ಮನಸ್ಸು ಕೆಟ್ಟ ಯೋಚನೆಗಳಿಂದ ಕೊಳಕಾಗಿದ್ದರೆ ಸಂತೋಷವು ಒಂದು ಗಳಿಗೆಯೂ ಇರುವುದಿಲ್ಲ. ಸಂತೋಷದಿಂದಿರಲು ಸದಾಚಾರ ಜೀವನವೇ ಆಧಾರ ಎಂದು ಹೇಳಿದ್ದಾರೆ.

ವಚನಪಾಲನೆಗೆ ಅವರು ಬಹಳ ಮಹತ್ವ ಕೊಡುತ್ತಿದ್ದರು. ‘ತಲೆ ಕೊಟ್ಟರೂ ಚಿಂತೆಯಿಲ್ಲ. ಕೊಟ್ಟ ವಚನವನ್ನು ಪರಿಪಾಲಿಸಬೇಕು’  ಇದೇ ರವಿದಾಸರ ತತ್ವ. ಕೊಟ್ಟ ವಚನವನ್ನು ಪಾಲಿಸದೇ ಇರುವವನು ಜೀವನದಲ್ಲಿ ಏನನ್ನೂ ಸಾಧಿಸಲಾರ.

ರವಿದಾಸರ ಭಕ್ತಿವಿಧಾನದಲ್ಲಿ ಯಾವ ವಿಧವಾದ ಆಡಂಬರವೂ ಇಲ್ಲ. ಅವರದು ಸರಳಭಕ್ತಿ. ಯಾವ ವಿಧವಾದ ಕಷ್ಟಗಳೂ ಇಲ್ಲ. ಹೆಚ್ಚು ಪ್ರಯತ್ನಗಳನ್ನು ಮಾಡಬೇಕಾಗಿಲ್ಲ, ಮನೆ ಸಂಸಾರವನ್ನು ತೊರೆದು ಕಾಡಿಗೆ ಹೋಗಬೇಕಾಗಿಲ್ಲ. ‘‘ದೇವರು ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಮನುಷ್ಯಪ್ರೇಮದಲ್ಲಿ ಪ್ರಭು ವಾಸವಾಗಿದ್ದಾನೆ’’ ಎಂದು ಹೇಳುತ್ತಿದ್ದರು. ಮಾನವ ಸೇವೆಯೇ ಒಂದು ತಪಸ್ಸು ಎಂದು ಹೇಳಿದ್ದಾರೆ. ಬಡವರ ಮತ್ತು ದೀನದಲಿತರ ಸೇವೆಯೇ ಒಂದು ತಪಸ್ಸು. ಆ ತಪಸ್ಸಿನಿಂದಲೇ ದೇವರು ಸುಪ್ರೀತನಾಗಿ ಒಲಿಯುತ್ತಾನೆ.

ರವಿದಾಸರು ಮಾನವಜನ್ಮದ ಮಹಿಮೆಯನ್ನು ಒಂದು ಪದ್ಯದಲ್ಲಿ ಈ ರೀತಿ ಹೇಳಿದ್ದಾರೆ.

‘‘ಮಾನವಜನ್ಮವೆಂಬುವುದು ದುರ್ಲಭವಾದದ್ದು. ಇದನ್ನು ಸಾರ್ಥಕ ಪಡಿಸಿಕೊಳ್ಳುವುದು ನಮ್ಮ ಉದ್ದೇಶವಾಗಬೇಕು.’’

ಅವರು ದೊಡ್ಡವರು ಅವರನ್ನು ಕೇಳು

ರವಿದಾಸರು ಭಕ್ತಕಬೀರರಿಗಿಂತ ವಯಸ್ಸಿನಲ್ಲಿ ದೊಡ್ಡವರು ಎಂದು ಕಾಣುತ್ತದೆ. ಕಬೀರರಿಗೆ ರವಿದಾಸರಲ್ಲಿ ಯಾವ ಭಾವನೆ ಇದ್ದಿತು ಎನ್ನುವುದನ್ನು ತೋರಿಸುವ ಒಂದು ಪ್ರಸಂಗ ಇದು.

ಒಮ್ಮೆ ಯಾರೋ ಕಬೀರರನ್ನು ಕೇಳಿದರಂತೆ ‘ಬ್ರಹ್ಮ ಜ್ಞಾನವನ್ನು ಸಾಧಿಸುವ ದಾರಿ ಯಾವುದು?’

ಕಬೀರರು ಉತ್ತರ ಹೇಳಿದರಂತೆ:

‘‘ನಾನು ಚಿಕ್ಕವನಾಗಿದ್ದಾಗ, ತಾಯಿಯ ಸೊಂಟವನ್ನು ಹತ್ತಿ ರಸ್ತೆಯನ್ನು ದಾಟಿ ಬಂದಿದ್ದೇನೆ. ರವಿದಾಸರಲ್ಲಿ ಕೇಳು. ಅವರು ದೊಡ್ಡವರಾಗಿದ್ದರಿಂದ ತಾಯಿ ಅವರ ತಲೆಯಮೇಲೆ ಗಂಟನ್ನು ಇಟ್ಟು ನಡೆಸಿದ್ದಾಳೆ. ಆದ್ದರಿಂದ ಅವರಿಗೇ ರಸ್ತೆಯ ವಿಚಾರ ಗೊತ್ತು.’’

ಇದರ ಅರ್ಥವೇನೆಂದರೆ ತಾಯಿಯು ಎಲ್ಲಿಗಾದರೂ  ಹೋಗಬೇಕಾದರೆ ಎಲ್ಲಾ ಮಕ್ಕಳಿಗಿಂತ ಚಿಕ್ಕ ಮಗುವನ್ನು ಸೊಂಟದಲ್ಲಿ ಎತ್ತುಕೊಂಡು ನಡೆಯುತ್ತಾಳೆ. ದೊಡ್ಡವನಿಗಾದರೆ ಸಣ್ಣಪುಟ್ಟ ಗಂಟುಗಳನ್ನು ಹೊರಲು ಕೊಡುತ್ತಾಳೆ. ಅವನು ತಾಯಿಯ ಹಿಂದೆ ಹೋಗುತ್ತಾನೆ. ಗಂಟನ್ನು ಹೊತ್ತಿರುವುದರಿಂದ ಅವನು ಶ್ರಮ ಪಡಬೇಕಾಗುತ್ತದೆ. ಆದ್ದರಿಂದ ರಸ್ತೆಯ ಒಂದೊಂದು ಹೆಜ್ಜೆಯೂ ಕೂಡ ಅವನ ಅನುಭವಕ್ಕೆ ಬರುತ್ತದೆ. ರವಿದಾಸರು ಶ್ರಮದಿಂದ ಕೆಲಸಮಾಡಿ ದಿನಗೂಲಿಯನ್ನು ಸಂಪಾದಿಸು ತ್ತಿದ್ದರು. ಅದರಿಂದಲೇ ತಮ್ಮ ಜೀವನವನ್ನು ನಡೆಸುತ್ತಿದ್ದರು. ಇದರ ಜೊತೆಗೆ ‘‘ಭಗವದ್ಭಕ್ತಿ’’  ಎಂಬ ಕಷ್ಟ ದಿಂದ ಕೂಡಿದ ರಸ್ತೆಯಲ್ಲೂ ನಡೆದು ಬಂದರು. ತಮಗಿಂತ ರವಿದಾಸರು ದೊಡ್ಡವರು ಎಂದು ಕಬೀರರು ತಮ್ಮನ್ನು ಚಿಕ್ಕ ಮಗುವಿಗೂ ರವಿದಾಸರನ್ನು ದೊಡ್ಡ ಮಗನಿಗೂ ಹೋಲಿಸಿ ಸೂಚಿಸಿದ್ದಾರೆ.

ರವಿದಾಸರ ಪದ್ಯಗಳಲ್ಲಿ ದೈನ್ಯ ಮತ್ತು ದೇವರನ್ನು ಕಾಣುವ ಕಾತರ ಕಂಡು ಬರುತ್ತವೆ.

ಒಂದು ಉದಾಹರಣೆ:

ಪ್ರಭುವೆ ನೀನು ಚಂದನ ನಾನು ನೀರು, ಅಂಗಅಂಗದಲಿಹುದು ಪರಿಮಳ.
ಪ್ರಭುವೆ ನೀನು ದೀಪ ನಾನು ಬತ್ತಿ, ಉರಿಯುತಿಹುದು ನಿಶಿದಿನವನೆ.
ಪ್ರಭುವೆ ನೀನು ಮೋಡ ನಾನು ನವಿಲು, ದೃಷ್ಟಿ ಚಂದ್ರ ಚಕೋರದಂತೆ.
ಪ್ರಭುವೆ ನೀನು ಮುತ್ತು ನಾನು ದಾರ, ಚಿನ್ನಕೆ ಕಂಪು ದೊರೆತಂತೆ.
ಪ್ರಭುವೆ ನೀನು ಒಡೆಯ ನಾನು ಆಳು, ಮಾಹುತಿಹ ರವಿದಾಸ ನಿಂಥಾ

ಸಂಸ್ಕೃತಿಯನ್ನು ಬೆಳಗಿದರು.

ರವಿದಾಸರು ಧಾರ್ಮಿಕ, ಸಾಮಾಜಿಕ ಮತ್ತು ರಾಜ ನೈತಿಕ ಇತಿಹಾಸಕ್ಕೆ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರು ಪುರಾತನ ಸಂಸ್ಕೃತಿಯ ನಿಜವಾದ ಸ್ವರೂಪದ ಜ್ಯೋತಿಯನ್ನು ಬೆಳಗಿಸಿದರು. ಭಕ್ತಿರಸದ ಪವಿತ್ರ ಗಂಗೆಯನ್ನೇ ಹರಿಸಿದರು. ಅಂಧವಿಶ್ವಾಸದಲ್ಲಿ ಮುಳುಗಿದ್ದ ಲಕ್ಷಾಂತರ ಜನರಿಗೆ ಜ್ಞಾನ ಜ್ಯೋತಿಯನ್ನು ಕೊಟ್ಟರು. ರವಿದಾಸರು ಭಿನ್ನ ಭಿನ್ನ ಮತಗಳ ತತ್ವ ಮತ್ತು ಸಂಪ್ರದಾಯಗಳನ್ನು ಒಟ್ಟುಗೂಡಿಸಿ ಧರ್ಮಪ್ರಚಾರ ಮಾಡಿದರು. ಅವರದು ವಿಶ್ವಧರ್ಮ. ಅವರ ಉಪದೇಶಗಳಲ್ಲಿ ಯಾವ ಧರ್ಮವನ್ನೂ ಖಂಡಿಸಿಲ್ಲ. ಅವರ ತತ್ವಗಳು ಯಾವ ಜಾತಿ, ವರ್ಣದ ಮೇಲೆ ಆಧಾರಿತವಾಗಿಲ್ಲ. ಅವರ ಲೋಕಕಲ್ಯಾಣ ವಿಚಾರಧಾರೆಯಿಂದ ಅವರು ಲೋಕ ಹಿತಚಿಂತಕರಾದರು, ಸಂತರಾದರು.

ನಡೆನುಡಿಗಳ ಸಾಂಗತ್ಯ

ರವಿದಾಸರು ನಮ್ಮ ಗೌರವಕ್ಕೆ ಪಾತ್ರರಾಗುವುದು ಅವರ ನುಡಿ-ನಡೆಗಳಲ್ಲಿ ವ್ಯತ್ಯಾಸವಿರಲಿಲ್ಲ, ಉಪದೇಶಿಸಿದಂತೆ ನಡೆದರು ಎಂಬುದರಿಂದ ಹಣಕ್ಕೆ ಆಸೆ ಪಡಬಾರದು, ದೇಹದ ಸುಖಕ್ಕೆ ಆಸೆಪಡಬಾರದು ಎಂದು ಉಪದೇಶಿಸುತ್ತಿದ್ದರು. ರಾಜರು, ಶ್ರೀಮಂತರು ತಮ್ಮ ಶಿಷ್ಯರಾದರೂ ಅವರು ತಮಗಾಗಿ ಏನನ್ನೂ ಬಯಸಲಿಲ್ಲ. ಸುಖದ ಜೀವನವನ್ನು ನಡೆಸಲು ಏನನ್ನೂ ಬೇಡಲಿಲ್ಲ. ಜಗತ್ತನ್ನು ಬಿಟ್ಟು ದೂರ ಓಡಿಹೋಗಿ ತನ್ನೊಬ್ಬನ ಮುಕ್ತಿಗಾಗಿ ಏಕಾಂತಧ್ಯಾನದಲ್ಲಿ ಮುಳುಗುವುದು ನಿಜವಾದ ಭಕ್ತಿಯಲ್ಲ. ತನ್ನ ಕರ್ತವ್ಯವನ್ನು ನಿರ್ವಹಿಸಿ ಹತ್ತು ಜನರೊಡನೆ ಹಂಚಿಕೊಳ್ಳಬೇಕು, ಅವರ ಅನುಭವದಲ್ಲಿ ತಿಳಿವಳಿಕೆಯಲ್ಲಿ ಪಾಲುಪಡೆಯಬೇಕು ಎಂದರು. ಹಾಗೆಯೇ ನಡೆದುಕೊಂಡರು. ಪಾದರಕ್ಷೆ ಹೊಲಿದು ಜೀವನ ನಡೆಸುತ್ತಲೇ ರಮಾನಂದರಿಂದ ಉಪದೇಶ ಪಡೆದರು. ಕಬೀರರು, ಗುರುನನಕರು, ಮೀರಬಾಯಿ ಇಂತಹವರೊಡನೆ ವಿಚಾರ ವಿನಿಮಯ ಮಾಡಿಕೊಂಡರು, ಸಹಸ್ರಾರು ಮಂದಿಗೆ ಮಾರ್ಗದರ್ಶನ ಮಾಡಿದರು. ಅವರನ್ನು ವಿರೋಧಿಸಿದವರು, ನಿಂದಿಸಿದವರು, ಅಪಮಾನ ಮಾಡಿದವರು ಎಷ್ಟೋ ಮಂದಿ. ಆದರೆ ಅವರು ಎಂದೂ ತಮ್ಮ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳಲಿಲ್ಲ. ಕೋಪ ಮಾಡಿಕೊಳ್ಳಲಿಲ್ಲ, ದ್ವೇಷಿಸಲಿಲ್ಲ ಸತ್ಯ, ಪ್ರೇಮ, ರಾಮನಾಮ-ಇವೇ ಅವರನ್ನು ನಡೆಸಿದವು. ಕಾಪಾಡಿದವು. ಭಗವಂತನಲ್ಲಿ ಪ್ರೀತಿ, ಮಾನವಸೇವೆ ಇವೇ ಅವರ ಬಾಳಿನ ಎರಡು ಕಣ್ಣುಗಳಾಗಿದ್ದವು. ಯಾವ ಧರ್ಮವನ್ನೂ ಅವರು ನಿಂದಿಸಲಿಲ್ಲ. ಅವರು ಉಪದೇಶಿಸಿದ್ದು ಎಲ್ಲ ಧರ್ಮಗಳ ಸಾರ, ಅವರು ಎಲ್ಲ ಧರ್ಮಗಳವರಿಗೂ ಪೂಜ್ಯರು.