ರವಿವರ್ಮಪ್ರಸಿದ್ಧ ಭಾರತೀಯ ಚಿತ್ರಕಾರರು. ಭಾರತೀಯರ ದೇವತೆಗಳ, ಕಾವ್ಯಗಳ ನಾಯಕ ನಾಯಕಿಯರ, ವೀರರ ಮತ್ತು ದೇಶಭಕ್ತರ ಚಿತ್ರಗಳನ್ನು ರಾಜಮಹಾರಾಜರಿಂದ ಬಡವರವರೆಗೆ ಎಲ್ಲರಿಗೆ ಲಭ್ಯ ಮಾಡಿಕೊಟ್ಟರು. ಜಗತ್ತಿನಲ್ಲೆಲ್ಲ ಮನ್ನಣೆ ಪಡೆದ ಪ್ರತಿಭಾವಂತರು. ಸರಳ ಸ್ವಭಾವದ, ಪರಿಶುದ್ಧ ಜೀವನದ ಹಿರಿಯ ವ್ಯಕ್ತಿ.

ರವಿವರ್ಮ

ಕಿಳಿಮಾನೂರು ಒಂದು ಗ್ರಾಮ. ದಕ್ಷಿಣ ಭಾರತದಲ್ಲಿನ ತಿರುವನಂತಪುರದಿಂದ ಇಪ್ಪತ್ತನಾಲ್ಕು ಮೈಲಿ ಉತ್ತರದಲ್ಲಿದೆ. ಹಚ್ಚಹಸುರಿನ ಗದ್ದೆಗಳಿಂದ, ತಲೆದೂಗುವ ತೆಂಗಿನ ಮರಗಳಿಂದ, ಅರಳಿದ ತಾವರೆಯ ಕೊಳಗಳಿಂದ ತುಂಬಿದ ಸುಂದರ ಪ್ರದೇಶ. ತಿರುವಾಂಕೂರು ರಾಜರಿಂದ ಉಂಬಳಿ ಪಡೆದು ಸ್ವತಂತ್ರರಾದ ರಾಜಮನೆತನ ಒಂದರ ರಾಜಧಾನಿಯೂ ಆಗಿತ್ತು.

ಬುದ್ಧಿವಂತ ಹುಡುಗ

ಕಿಳಿಮಾನೂರು ರಾಜವಂಶದಲ್ಲಿ, ೧೮೪೮ ಏಪ್ರಿಲ್ ೨೯ ರಂದು ರವಿವರ್ಮನ ಜನನ. ತಂದೆ ಕಂಡನೂರು ದೇಶತ್ತ್ ಏಳುಕಾವಿಲ್ ನೀಲಕಂಠನ್ ಭಟ್ಟತ್ತಿರಿ, ತಾಯಿ ಉಮಾ ಅಂಬಾಬಾಯಿ. ಅಂಬಾಬಾಯಿ ಸುಸಂಸ್ಕೃತಳು, ಸ್ವತಃ ಕವಯಿತ್ರಿ ಕೂಡ ಆಗಿದ್ದಳು. ನೀಲಕಂಠನ್ ಸಂಸ್ಕೃತ ಸಾಹಿತ್ಯದಲ್ಲಿ ಚೆನ್ನಾಗಿ ಅಭ್ಯಾಸ ಮಾಡಿದ್ದ.

ಕುಶಾಗ್ರ ಬುದ್ಧಿಯ ಬಾಲಕ ರವಿಗೆ ತಂದೆಯಿಂದ ಸಾಹಿತ್ಯ- ವ್ಯಾಕರಣಗಳಲ್ಲಿ ಶಿಕ್ಷಣ, ತಾಯಿಯಿಂದ ಸಂಗೀತ ಶಿಕ್ಷಣ. ಮಾವ ರಾಜರಾಜವರ್ಮನಿಂದ ಚಿತ್ರರಚನೆಯಲ್ಲಿ ಮಾರ್ಗದರ್ಶನ. ರಾಮಾಯಣ- ಮಹಾಭಾರತ ಇತ್ಯಾದಿ ಪುರಾಣಗಳ ಕಥೆ ಎಷ್ಟು ಕೇಳಿದರೂ ಆತನಿಗೆ ಸಾಕೆನಿಸುತ್ತಿರಲಿಲ್ಲ. ಐದರ ಹರೆಯದಲ್ಲೆ ’ಅಮರಕೋಶ’ ಹಾಗೂ ’ಸಿದ್ಧರೂಪ’ಗಳನ್ನು ರವಿ ಕಲಿತುಬಿಟ್ಟ. ’ರಘುವಂಶ’, ’ಶಾಕುಂತಳ’ ಇತ್ಯಾದಿ ಕಾಳಿದಾಸ ಕೃತಿಗಳ ಅಧ್ಯಯನವೂ ಸಾಗಿತು. ರಾಮ- ಲಕ್ಷ್ಮಣರ ಸೋದರವಾತ್ಸಲ್ಯ, ಪರಶುರಾಮನ ಗಾಂಭೀರ‍್ಯ, ಸುಗ್ರೀವನ ಆಜ್ಞಾಪಾಲನೆ, ಹನುಮಂತನ ಧೈರ್ಯ- ಪರಾಕ್ರಮ, ಪಾಂಡವರ ಧರ್ಮನಿಷ್ಠೆ, ಕರ್ಣನ ದಾನಶೂರತೆ ಇವೆಲ್ಲವೂ ಬಾಲಕ ರವಿಯ ಮನಸ್ಸಿನಲ್ಲಿ ಗಟ್ಟಿಯಾಗಿ ಅಚ್ಚೊತ್ತಿ, ಹೃದಯದಲ್ಲೂ ಅಂಕುರಿಸಿದವು.

ಬಾಲ ಚಿತ್ರಕಾರ

ಕಥಕಳಿ ಕಾರ್ಯಕ್ರಮವಿದ್ದಲ್ಲೆಲ್ಲ ರವಿಯು ತಪ್ಪದೇ ಧಾವಿಸುತ್ತಿದ್ದ. ಪ್ರದರ್ಶನದಲ್ಲಿ ದೇವರುಗಳು, ದೇವತೆಯರು ಹಾಗೂ ಪೌರಾಣಿಕ ವ್ಯಕ್ತಿಗಳು ಎಂತಹ ಉಡುಪನ್ನು ಧರಿಸುತ್ತಾರೆ, ಎಂತಹ ಒಡವೆಗಳನ್ನು ತೊಡುತ್ತಾರೆ, ಹೇಗೆ ನಿಲ್ಲುತ್ತಾರೆ, ಹೇಗೆ ಭಾವಗಳನ್ನು ತೋರಿಸುತ್ತಾರೆ ಎಲ್ಲವನ್ನೂ ನೋಡಬೇಕೆಂದು ಅವನಿಗೆ ಕುತೂಹಲ. ಮುಂದಿನ ಪಂಕ್ತಿಯಲ್ಲೆ ಕುಳಿತುಬಿಡುತ್ತಿದ್ದ. ರವಿವರ್ಮನು ರಚಿಸಿದ ಪೌರಾಣಿಕ ಚಿತ್ರಗಳು ಮೊದಲಿಗೆಲ್ಲ ರೂಪುಗೊಂಡಿದ್ದು ಈ ಜಾನಪದ ನೃತ್ಯ ರಂಗಮಂಟಪಗಳಲ್ಲೆ. ಪ್ರದರ್ಶನ ನೋಡಿ ಮನೆಗೆ ಹಿಂದಿರುಗಿ ಬಂದವನೆ, ರವಿ ಮಸಿಯ ಚೂರನ್ನು ಕೈಗೆತ್ತಿಕೊಂಡು ತನ್ನ ಕಲ್ಪನೆಗೆ ಮೂರ್ತರೂಪ ನೀಡುತ್ತಿದ್ದ. ದಾರಿಯಲ್ಲಿ ಸಾಗುವ ಮಂದಿಯನ್ನು ಕರೆದು ಅವರ ಅಣಕು ರೂಪವನ್ನು ಗೋಡೆಯಲ್ಲಿ ಚಿತ್ರಿಸುತ್ತಿದ್ದ. ಹೀಗೆ ಅರಮನೆಯ ಗೋಡೆಯಲ್ಲೆಲ್ಲ ಚಿತ್ರಗಳ ಗೀಚು ತುಂಬಿ ಆಳು- ಕಾಳುಗಳಿಗೆ ಗೋಡೆಯನ್ನು ಉಜ್ಜಿ, ಸ್ವಚ್ಛ ಮಾಡುವುದೇ ಕೆಲಸ. ಅದೆಷ್ಟೋ ಬಾರಿ ಬಾಲಕನನ್ನು ದಂಡಿಸಿದರೂ ಮತ್ತೆಮತ್ತೆ ಗೋಡೆಯಲ್ಲಿ ಮಸಿಯಿಂದ ಆತ ಚಿತ್ರ ಮೂಡಿಸುತ್ತಿದ್ದ. ’ಎಷ್ಟು ಬಾರಿ ಪೆಟ್ಟು ಬಿದ್ದರೂ ಸರಿ. ನಾನು ಚಿತ್ರ ಬರೆಯುತ್ತೇನೆ ಎಂದು ರವಿಯ ಹಠ.

ಅರಳುವ ಮೊಗ್ಗು

ರವಿವರ್ಮನ ಪ್ರತಿಭೆಯನ್ನು ಗುರುತಿಸಿದ್ದ ಸೋದರ ಮಾವ ರಾಜರಾಜವರ್ಮ ಸ್ವತಃ ಪ್ರತಿಭಾವಂತ ಕಲಾವಿದ.

ತಿರುವನಂತಪುರದಲ್ಲಿ ಬಾಲಕ ರವಿವರ್ಮನ ಚಿತ್ರ ಕಲಾಪ್ರತಿಭೆ ಅರಳಲು ಸಾಕಷ್ಟು ಅವಕಾಶವಾಯಿತು.

ತಿರುವನಂತಪುರ ಅರಮನೆಯಲ್ಲಿ ಆಧುನಿಕ ಶೈಲಿಯ ತೈಲಚಿತ್ರಗಳಿಗಿಂತಲೂ ಹೆಚ್ಚಾಗಿ ಹಳೆಯ ಶೈಲಿಯ ಚಿತ್ರಗಳು ಇದ್ದವು. ಸ್ವಾತಿ ತಿರುನಾಳ್ ಮಹಾರಾಜರ ಕಾಲದಲ್ಲಿ ತಂಜಾವೂರು ಶೈಲಿಯಲ್ಲಿ ನಿರ್ಮಿಸಿದ ಚಿತ್ರಗಳೊಂದಿಗೆ ಐರೋಪ್ಯ ಕಲಾವಿದರು ರಚಿಸಿದ ಕೆಲವು ಚಿತ್ರಗಳು, ಪದ್ಮನಾಭಸ್ವಾಮಿ ಕ್ಷೇತ್ರದ ಸುಂದರ ಭಿತ್ತಿಚಿತ್ರಗಳು- ಇವೆಲ್ಲ ಬಾಲಕ ರವಿವರ್ಮನ ಕಣ್ಣಿಗೆ ಹಬ್ಬವಾದವು.

ಆಯಿಲ್ಯಂ ತಿರುನಾಳ್ ಮಹಾರಾಜರಿಗೆ ರಾಜರಾಜವರ್ಮನು ಬಾಲಕ ರವಿವರ್ಮನ ಪರಿಚಯ ಮಾಡಿಕೊಟ್ಟರು. ಆ ಬಳಿಕ ರವಿವರ್ಮನಲ್ಲಿ ಸುಪ್ತವಾಗಿದ್ದ ಕಲಾಶಕ್ತಿಯನ್ನು ಪ್ರಕಾಶಕ್ಕೆ ತರಲು ಬಹಳ ಶ್ರಮಿಸಿದರು. ಪಾಶ್ಚಾತ್ಯ ಶೈಲಿಯ ಚಿತ್ರಗಳನ್ನೊಳಗೊಂಡ ಪುಸ್ತಕಗಳನ್ನು ರವಿವರ್ಮನಿಗೆ ಒದಗಿಸಿಕೊಟ್ಟರು. ಕ್ರಮೇಣ ರವಿಗೆ ಆ ಚಿತ್ರಗಳ ಪ್ರತಿಕೃತಿಯನ್ನು ರಚಿಸುವುದರಲ್ಲಿ ಶ್ರದ್ಧೆ ಬೆಳೆಯಿತು.

ಆ ಕಾಲದಲ್ಲಿ ಅಳಗಿರಿ ನಾಯ್ಡು ಎಂಬ ಕಲಾವಿದನು ತಿರುವನಂತಪುರ ಆಸ್ಥಾನದಲ್ಲಿದ್ದು ತಂಜಾವೂರು ಶೈಲಿಯ ಜಲವರ್ಣ ಚಿತ್ರಗಳನ್ನು ರಚಿಸುತ್ತಿದ್ದನು. ಬಾಲಕ ರವಿಯು ಆತನ ಕೈಚಳಕವನ್ನು ಸಮೀಪದಿಂದಲೇ ನೋಡಿ ತಾನೂ ಕಲಿತುಕೊಂಡನು.

ಕಿಳಿಮಾನೂರು ಅರಮನೆಯಲ್ಲಿ ಚಿತ್ರರಚನೆಗೆಂದೇ ಪ್ರತ್ಯೇಕ ಕೋಣೆಯನ್ನು ಮೀಸಲಿರಿಸಿದ್ದರು. ಮಾವ ರಾಜರಾಜವರ್ಮನೊಂದಿಗೆ ರವಿವರ್ಮನು ತನ್ನ ಕುಂಚವನ್ನು ಚಲಾಯಿಸುತ್ತಿದ್ದ ದಿನಗಳವು. ಮಹಾವಿಷ್ಣುವಿನ ಚಿತ್ರವನ್ನು ಚಿತ್ರಿಸಿದ ಬಳಿಕ ಅದಕ್ಕೆ ಜಲವರ್ಣದ ಲೇಪ ಆಗುತ್ತಿತ್ತು. ರವಿವರ್ಮನು ಕೈಕಟ್ಟಿ ಕುಳಿತು ಮಾವನ ಕುಂಚದ ಚಲನೆಯನ್ನೇ ನೋಡುತ್ತಿದ್ದ.

ಚಿತ್ರ ರಚಿಸುತ್ತಿದ್ದ ರಾಜರಾಜವರ್ಮನು ಕೋಣೆಯಿಂದ ಸ್ವಲ್ಪ ಹೊತ್ತು ಹೊರಕ್ಕೆ ಹೋದ.

ಈಗ ರವಿಯ ಕೈ ಚುರುಕಾಯಿತು. ಅತ್ತಿತ್ತ ನೋಡಿ, ಯಾರೂ ಇಲ್ಲವೆಂದು ಖಚಿತವಾಗುತ್ತಲೆ, ಕುಂಚವನ್ನು ಕೈಗೆತ್ತಿಕೊಂಡ. ಬಳಿಕ ಜಲವರ್ಣವನ್ನು ಲೇಪಿಸತೊಡಗಿದ. ಅದೂ ಸಾಲದೆಂಬಂತೆ ಮಹಾವಿಷ್ಣುವಿನ ವಾಹನವಾದ ಗರುಡನನ್ನೂ ಚಿತ್ರಿಸಿದ. ಅಷ್ಟರಲ್ಲೆ ರಾಜರಾಜವರ್ಮನು ಹಿಂದಿರುಗಿ ಬಂದ. ಸದ್ದಿಲ್ಲದೇ, ಅಳಿಯನ ಕೈಚಳಕವನ್ನು ಕಂಡು ಮನಸ್ಸಿನಲ್ಲೆ ’ಶಹಭಾಷ್’ ಎಂದುಕೊಂಡ. ಚಿತ್ರ ಪೂರ್ತಿಗೊಂಡ ಬಳಿಕ ರವಿಯು ಹಿಂದಿರುಗಿ ನೋಡಿದಾಗ ಮಾವ ಪ್ರತ್ಯಕ್ಷವಾಗಿದ್ದಾನೆ ! ರಾಜರಾಜವರ್ಮನು ಹುಡುಗನನ್ನು ಬಿಗಿದಪ್ಪಿ, ಮುದ್ದಿಸಿ, ಬೆನ್ನು ಚಪ್ಪರಿಸಿದ. ರವಿಯ ಭವಿಷ್ಯ ಉಜ್ವಲವೆಂದು ಆತ ಅವನ ತಂದೆ ತಾಯಿಯರಲ್ಲಿ ತಿಳಿಸಿದ.

ತಿರುವನಂತಪುರದ ಅರಮನೆಯಲ್ಲಿ ಚಿತ್ರಕಲಾವಿದ ರಾಗಿದ್ದ ರಾಮಸ್ವಾಮಿ ನಾಕರ್ ಹಾಗೂ ಆರ‍್ಮುಗಂ ಪಿಳಯವರ ಶಿಷ್ಯನಾಗಿರಲು ಮಹಾರಾಜರು ರವಿವರ್ಮನಿಗೆ ಅನುಮತಿ ನೀಡಿದರು. ತೈಲವರ್ಣಗಳ ಬಳಕೆಯಲ್ಲಿ ಕ್ರಮೇಣ ರವಿವರ್ಮನು ತರಬೇತಿಗೊಂಡನು.

೧೮೬೬ರಲ್ಲಿ ಮಾವೇಲಿಕ್ಕರ ರಾಜ ಕುಟುಂಬಕ್ಕೆ ಸೇರಿದ ಪುರೂರುಟ್ಟಾತಿನಾಳ್ ರಾಣಿಯೊಂದಿಗೆ ರವಿಯ ವಿವಾಹವಾಯಿತು.

ಪಾಶ್ಚಾತ್ಯ ರೀತಿ

೧೮೬೮ರಲ್ಲಿ ಥಿಯೋಡೊರ್ ಜೆನ್‌ಸನ್ ಎಂಬ ಪಾಶ್ಚಾತ್ಯ ಕಲಾವಿದನು ತಿರುವನಂತಪುರ ಆಸ್ಥಾನಕ್ಕೆ ಬಂದ.

ಭಾರತದಲ್ಲಿ ಆಂಗ್ಲರ ಆಗಮನದೊಂದಿಗೆ ಐರೋಪ್ಯ ಚಿತ್ರಕಲೆಗೂ ರಾಜ- ಮಹಾರಾಜರುಗಳಿಂದ ಬೇಡಿಕೆ- ಮನ್ನಣೆ ದೊರಕಿತು. ರಜಪೂತ ಶೈಲಿಯ ಹಾಗೂ ಮೊಗಲ ಶೈಲಿಯ ಚಿತ್ರಕಲಾ ಶೈಲಿಯು ಔರಂಗಜೇಬನ ಕಾಲದಿಂದ ಮೂಲೆಗುಂಪಾಗಿತ್ತು. ಈ ಸಂದರ್ಭವನ್ನು ಬಳಸಿಕೊಂಡ ಅನೇಕ ಐರೋಪ್ಯ ಕಲಾವಿದರು ರಾಜ- ಮಹಾರಾಜರ ತೈಲಚಿತ್ರಗಳನ್ನು ಪಾಶ್ಚಾತ್ಯ ಶೈಲಿಯಲ್ಲಿ ರಚಿಸಿ ಸಾಕಷ್ಟು ಹಣ ಸಂಪಾದಿಸುತ್ತಿದ್ದರು. ಜೆನ್‌ಸನ್‌ನ ಉದ್ದೇಶ ಕೂಡ ಇದೇ.

ಈ ಕಾರಣದಿಂದಾಗಿಯೇ ಭಾರತೀಯ ಕಲಾಸಕ್ತರಿಗೆ ಪಾಶ್ಚಾತ್ಯ ಶೈಲಿಯ ತೈಲವರ್ಣದ ಬಳಕೆ ಕಲಿಸಿಕೊಡಲು ಅವರು ಹಿಂಜರಿಯುತ್ತಿದ್ದರು. ಜೆನ್‌ಸನ್ ಅವರ ಶಿಷ್ಯತ್ವ ಸ್ವೀಕರಿಸಲು ರವಿ ಉತ್ಸುಕನಾಗಿದ್ದರೂ ಜೆನ್‌ಸನ್ ಒಪ್ಪಲಿಲ್ಲ. ಆದರೆ ರವಿಯ ಉತ್ಸಾಹ ಕುಂದಲಿಲ್ಲ. ಆಸಕ್ತಿ ಹಾಗೂ ದುಡಿಮೆಯಿಂದ ತಾನು ಸ್ವತಃ ಚಿತ್ರಕಲೆಯನ್ನು ಒಲಿಸಿಕೊಳ್ಳಬಲ್ಲೆ ಎಂದು ರವಿವರ್ಮನ ಪ್ರಾಮಾಣಿಕ ಮನಸ್ಸು ಪ್ರತಿಧ್ವನಿಸಿತು.

ಕೊನೆಗೂ ಜೆನ್‌ಸನ್ ತನ್ನ ಚಿತ್ರರಚನೆಯನ್ನು ಸಮೀಪದಿಂದ ಕಾಣಲು ರವಿವರ್ಮನಿಗೆ ಅನುಮತಿ ನೀಡಿದ. ಸೂಕ್ಷ್ಮ ಗ್ರಹಣಶಕ್ತಿಯುಳ್ಳ ರವಿವರ್ಮನಿಗೆ ಅಷ್ಟೇ ಸಾಕಾಗಿತ್ತು. ಸ್ವಲ್ಪ ಕಾಲದೊಳಗಾಗಿ ರವಿವರ್ಮನು ತೈಲಚಿತ್ರ ರಚನೆಯ ತಂತ್ರಗಳನ್ನು ತಾನಾಗಿಯೇ ನೋಡಿ, ಕಲಿತುಕೊಂಡ. ಆಗಿನ ಮದರಾಸಿನ ಗವರ್ನರರ ಪೂರ್ಣ ಆಕಾರದ ಚಿತ್ರವೊಂದನ್ನು ತೈಲವರ್ಣದಲ್ಲಿ ತೃಪ್ತಿಕರವಾಗಿ ರವಿವರ್ಮ ಮಾಡಿ ಮುಗಿಸಿದ. ಈ ಚಿತ್ರವನ್ನು ಸ್ವೀಕರಿಸಿದ ಗವರ್ನರ್ ರವಿವರ್ಮನ ಕಲಾನೈಪುಣ್ಯವನ್ನು ಆಶ್ಚರ್ಯದಿಂದ ಹೊಗಳಿದರು.”ಒಮ್ಮೆ ನನ್ನ ಚಿತ್ರಕ್ಕಾಗಿ ಪ್ರಸಿದ್ಧ ಐರೋಪ್ಯ ಕಲಾವಿದನ ಮುಂದೆ ಹದಿನೆಂಟು ಬಾರಿ ರೂಪದರ್ಶಿಯಾಗಿ ಕುಳಿತಿದ್ದೆ. ಅಷ್ಟೊಂದು ಸಮಯಾವಕಾಶ ಒದಗಿಸದಿದ್ದರೂ ಭಾರತೀಯ ಕಲಾವಿದನಾದ ರವಿವರ್ಮ ಆತನಿಗಿಂತಲೂ ಚೆನ್ನಾಗಿ ಪಾಶ್ಚಾತ್ಯ ಶೈಲಿಯಲ್ಲಿ ನನ್ನ ಚಿತ್ರ ಮಾಡಿ ಮುಗಿಸಿದ್ದು ಆಶ್ಚರ್ಯವೇ ಸರಿ” ಎಂದರು.

ತಿರುವಾಂಕೂರು ಮಹಾರಾಜರು ರವಿವರ್ಮನ ಪ್ರತಿಭೆಗೆ ಮೆಚ್ಚಿ ಆತನಿಗೆ ’ವೀರ ಶೃಂಖಲೆ’ಯನ್ನು ನೀಡಿ ಗೌರವಿಸಿದರು. ತಿಂಗಳಿಗೆ ಐವತ್ತು ರೂಪಾಯಿ ಸಂಬಳದ ಮೇಲೆ ಆಸ್ಥಾನ ಕಲಾವಿದನಾಗಿಯೂ ನೇಮಿಸಿದರು.

ಮೂಕಾಂಬಿಕೆಯ ವರದಹಸ್ತ

ಯುವಕ ರವಿವರ್ಮನು ಆಚಾರನಿಷ್ಠನಾಗಿದ್ದ. ಪ್ರಾತಃಕಾಲ ನಾಲ್ಕು ಗಂಟೆಗೆ ಎದ್ದು, ಶುಚಿರ್ಭೂತನಾಗಿ ’ಸ್ವಯಂವರ ಮಂತ್ರ’ ಹಾಗೂ ’ಸೌಂದರ್ಯಲಹರಿ’ ಸ್ತೋತ್ರಗಳನ್ನು ಪಠಿಸುವುದು ಆತನ ರೂಢಿಯಾಗಿತ್ತು. ಪ್ರಾರ್ಥನೆಯ ಬಳಿಕ ಬೆಳಗು ಹರಿಯುವ ತನಕ ಪೌರಾಣಿಕ, ಸಂಸ್ಕೃತ ಸಾಹಿತ್ಯ ಸಂಬಂಧ ಗ್ರಂಥಗಳನ್ನು ಆತ ಓದುತ್ತಿದ್ದನು. ಬೆಳಗ್ಗಿನ ಉಪಾಹಾರ ಮುಗಿಸು ತನಕ ಚಿತ್ರರಚನೆ.

೧೮೭೦ರಲ್ಲಿ ದಕ್ಷಿಣ ಕನ್ನಡದ ಪ್ರಸಿದ್ಧ ತೀರ್ಥಕ್ಷೇತ್ರವಾದ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ರವಿವರ್ಮನು ಯಾತ್ರೆ ಹೊರಟನು. ಇಲ್ಲಿ ನಲವತ್ತೊಂದು ದಿನಗಳ ಪರ್ಯಂತ, ಏಕಾಗ್ರತೆಯಿಂದ ಸರಸ್ವತೀ ಭಜನೆಯಲ್ಲಿ ಆತ ಪಾಲ್ಗೊಂಡ. ದೇಹದಂತೆ ಮನಸ್ಸನ್ನು ಕೂಡಾ ಶುದ್ಧವಾಗಿರಿಸಲು ನಿಷ್ಠೆಯಿಂದ ಪ್ರಯತ್ನಿಸಿದ.

ಇಲ್ಲಿ ಅವನಿಗೆ ಮೂಕಾಂಬಿಕೆಯ ಅನುಗ್ರಹ ಆಯಿತು ಎಂದು ಹೇಳುತ್ತಾರೆ.

ಭಜನೆಯಮಂಗಳದ ಮೂರುದಿನಗಳಿಗೆ ಮೊದಲು, ದೇವಸ್ಥಾನದ ಚಾವಡಿಯಲ್ಲಿ ನಿದ್ರಿಸುತ್ತಿದ್ದ ರವಿವರ್ಮನಿಗೆ ಅಪೂರ್ವ ಕನಸೊಂದು ಕಂಡಿತು. ದಿವ್ಯವಾದ ರೂಪವುಳ್ಳ, ಸುಂದರ ಯುವತಿಯು ಸರ್ವಾಲಂಕಾರಭೂಷಿತೆಯಾಗಿ ಆತನ ಹಾಸಿಗೆಯ ಬಳಿ ಕುಳಿತು ಆತನನ್ನು ಸ್ಪರ್ಶಿಸಿದಳು. ಎಚ್ಚರವಾದಾಗ, ತನ್ನ ವ್ರತಕ್ಕೆ ಭಂಗ ಬಂದಿತೋ ಎಂದು ರವಿವರ್ಮನಿಗೆ ಆತಂಕ. ದೇವಸ್ಥಾನದ ಅಚರ್ಕನನ್ನು ಕಂಡು ಕನಸನ್ನೂ ತನ್ನ ಆತಂಕವನ್ನೂ ವಿವರಿಸಿದ.

ಆಗ ಅಚರ್ಕನು ರವಿವರ್ಮನನ್ನು ಸಂತೈಸುತ್ತಾ, “ನೀನು ನಿಜವಾಗಿಯೂ ಭಾಗ್ಯಶಾಲಿ. ಸಾಕ್ಷಾತ್ ಮೂಕಾಂಬಿಕಾದೇವಿಯೇ ನಿನಗೆ ಕನಸಿನಲ್ಲಿ ಬಂದು ಹರಸಿದ್ದಾಳೆ” ಎಂದು ಹೇಳಿದ.

ರವಿವರ್ಮನಿಗೆ ಅರ್ಚಕನ ಮಾತಿನಿಂದ ಸಮಾಧಾನ ವಾಯಿತು. ಅನಂತರ ಅವನ ಚಿತ್ರಗಳಿಗೆಲ್ಲ ಕನಸಿನಲ್ಲಿ ಕಂಡ ಆ ದೇವಸುಂದರಿಯೇ ರೂಪದರ್ಶಿಯಾದಳು.

ದೇಶವಿದೇಶಗಳಲ್ಲಿ ಖ್ಯಾತಿ

ಮದರಾಸಿನ ಚಿತ್ರಕಲಾ ಮಂದಿರದ ಅಧಿಕಾರಿ ಚೆಶಾಮ್ ಅವರು ತಿರುವನಂತಪುರಕ್ಕೆ ಬಂದಾಗ ತರುಣ ರವಿವರ್ಮನ ಚಿತ್ರಗಳನ್ನು ನೋಡಿ ತುಂಬ ಸಂತೋಷಪಟ್ಟರು. ಮದರಾಸಿನಲ್ಲಿ ನಡೆಯಲಿದ್ದ ಚಿತ್ರಕಲಾ ಪ್ರದರ್ಶನಕ್ಕೆ ಚಿತ್ರಗಳನ್ನು ಕಳುಹಿಸಲು ಸೂಚಿಸಿದರು.

೧೮೭೬ರಲ್ಲಿ ನಡೆದ ಆ ಚಿತ್ರಕಲಾ ಪ್ರದರ್ಶನಕ್ಕೆ ’ಮಲೆಯಾಳಿ ವನಿತೆ’ ಎಂಬ ತೈಲ ವರ್ಣಚಿತ್ರವನ್ನು ಅದೇ ಪ್ರಥಮವಾಗಿ ರವಿವರ್ಮನು ಕಳುಹಿಸಿದನು. ಈ ಪ್ರದರ್ಶನಕ್ಕೆ ಭಾರತೀಯ ಕಲಾವಿದರೇ ಅಲ್ಲದೇ, ಪಾಶ್ಚಾತ್ಯ ಕಲಾವಿದರೂ ಚಿತ್ರಗಳನ್ನು ಕಳುಹಿಸಿದರು. ಆದರೆ ಗವರ್ನರ್ ಸ್ವರ್ಣ ಪದಕ ಪಡೆಯುವ ಭಾಗ್ಯ ರವಿವರ್ಮನ ಪಾಲಿಗೆ ಬಂತು. ಮಾತ್ರವಲ್ಲ, ರವಿವರ್ಮನು ಚಿತ್ರಿಸಿದ ಬಕ್ಕಿಂಗ್‌ಹಮ್‌ನ ಡ್ಯೂಕರ ಒಂದು ತೈಲಚಿತ್ರವನ್ನು ಮದರಾಸು ಸರ್ಕಾರಿ ಭವನದಲ್ಲಿ ಇರಿಸಲಾಯಿತು.

ಅದೇ ವರ್ಷ ಯೂರೋಪಿನ ವಿಯೆನ್ನಾದಲ್ಲಿ ನಡೆದ ವಿಶ್ವ ಕಲಾಪ್ರದರ್ಶನದಲ್ಲೂ ರವಿವರ್ಮನ ’ಮಲೆಯಾಳಿ ವನಿತೆ’ಗೆ ಪ್ರಶಸ್ತಿ ಬಂದಿತು.  ರವಿವರ್ಮನ ಹೆಸರು ಭಾರತದ ಗಡಿಯನ್ನು ಮೀರಿ ಪ್ರಸಿದ್ಧವಾಯಿತು.

ಮುಂದಿನ ವರ್ಷ ಮದರಾಸಿನಲ್ಲಿ ನಡೆದ ’ಲಲಿತ ಕಲಾ ಪ್ರದರ್ಶನ’ದಲ್ಲಿ ರವಿವರ್ಮನ ಕೃತಿ ’ವೀಣೆ ನುಡಿಸುವ ತಮಿಳು ವನಿತೆ’ಯೂ ೧೮೭೬ರಲ್ಲಿ ನಡೆದ ಇನ್ನೊಂದು ಕಲಾಪ್ರದರ್ಶನದಲ್ಲಿ ರವಿವರ್ಮನ ಪ್ರಪ್ರಥಮ ಪೌರಾಣಿಕ ಚಿತ್ರ ’ದುಷ್ಯಂತನಿಗೆ ಶಕುಂತಳೆಯ ಪ್ರೇಮಪತ್ರ’ವೂ ಪ್ರಶಸ್ತಿಗಳನ್ನು ಪಡೆದವು. ಆಂಗ್ಲ ಸಂಸ್ಕೃತ ವಿದ್ವಾಂಸನೊಬ್ಬನು ಇಂಗ್ಲಿಷಿಗೆ ಅನುವಾದಿಸಿದ ’ಶಾಕುಂತಳ’ ಮಹಾಕಾವ್ಯವು ಪುಸ್ತಕ ರೂಪದಲ್ಲಿ ಪ್ರಕಟವಾದಾಗ, ರವಿವರ್ಮನು ರಚಿಸಿದ ಈ  ಚಿತ್ರವು ಮುಖಪುಟದಲ್ಲಿ ಶೋಭಿಸಿತು. ಮೊತ್ತಮೊದಲಬಾರಿಗೆ ರವಿವರ್ಮನ ತೈಲಚಿತ್ರವು ಅಚ್ಚಾಗಿ ಆತನ ಕೀರ್ತಿ ನಾಲ್ದೆಸೆಗೂ ಹರಡಿತು.

ತಿರುವನಂತಪುರ ಬಿಟ್ಟು ಹೋಗು

ಆದರೆ ರವಿವರ್ಮನಿಗೆ ಬೇಸರವಾಗುವಂತಹ ಅನುಭವ ಕಾದಿತ್ತು.  ೧೮೮೦ರಲ್ಲಿ ತಿರುವಾಂಕೂರಿನ ಮಹಾರಾಜರಾಗಿದ್ದ ಆಯಿಲ್ಯಂ ತಿರುನಾಳ್ ನಿಧನರಾದರು. ಇದು ರವಿವರ್ಮನ ಪಾಲಿಗೆ ಅಪಾರ ನಷ್ಟವೇ ಆಗಿತ್ತು. ತನ್ನ ಹಿತಚಿಂತಕನೊಬ್ಬನನ್ನು ಕಳಕೊಂಡ ಅನುಭವ ರವಿವರ್ಮನಿಗೆ. ಆ ಬಳಿಕ ವಿಶಾಖಂ ತಿರುನಾಳ್ ತಿರುವಾಂಕೂರಿನ ಸಿಂಹಾಸನವನ್ನೇರಿದರು. ಆ ಸಂದರ್ಭದಲ್ಲಿ ಮದರಾಸಿನ ಗವರ್ನರ್ ತಿರುವನಂತಪುರಕ್ಕೆ ಬಂದಿದ್ದರು. ರಾಜನ ಆಸ್ತಾನಕ್ಕೆ ಬರುತ್ತಲೆ ರವಿವರ್ಮನ ಕಲಾಶಾಲೆಯನ್ನು ಕಾಣಲು ಮುಂದಾದರು. ತನ್ನನ್ನು ಕಡೆಗಣಿಸಿ, ರವಿವರ್ಮನನ್ನು ಕಾಣಲು ತವಕ ಪಡುವ ಗವರ್ನರರ ರೀತಿ ಮಹಾರಾಜರ ಮನಸ್ಸಿಗೆ ನೋವನ್ನುಂಟು ಮಾಡಿತು. ಅಂದಿನಿಂದ ರವಿವರ್ಮನೆಂದರೆ ವಿಶಾಖಂ ತಿರುನಾಳರಿಗೆ ತಾತ್ಸಾರ- ಅಸೂಯೆ ಉಂಟಾಯಿತು. ರಾಜಧಾನಿಯನ್ನು ತ್ಯಜಿಸಿ ಹೋಗಬೇಕೆಂದು ಅವರು ರವಿವರ್ಮನಿಗೆ ಆಜ್ಞಾಪಿಸಿದರು. ರವಿವರ್ಮನು ಮಾವೇಲಿಕ್ಕರಕ್ಕೆ ಹಿಂದಿರುಗಿದ.

ಬೆಳೆದ ಕೀರ್ತಿ

ಮಾವೇಲಿಕ್ಕರದಲ್ಲಿದ್ದು ಪೌರಾಣಿಕ ಗ್ರಂಥಗಳ ಆಳವಾದ ಅಧ್ಯಯನದೊಂದಿಗೆ ತನ್ನ ಕುಂಚ ಪ್ರಯೋಗವನ್ನು ಮುಂದುವರೆಸಿದನು. ರಾಮಾಯಣದಲ್ಲಿ ಚಿತ್ರಿಸಿದ ಸನ್ನಿವೇಶಗಳು, ಮಹಾಭಾರತದ ವೀರರು, ’ಶಾಕುಂತಳ’, ’ರಘುವಂಶ’ಗಳ ಅವಿಸ್ಮರಣೀಯ ವೃತ್ತಾಂತಗಳು ಇವೆಲ್ಲ ರವಿವರ್ಮನ ಸ್ಮೃತಿಪಟಲದಿಂದ ಚಿತ್ರಗಳಾಗಿ ಮೂಡಿಬರತೊಡಗಿದವು. ಪೌರಾಣಿಕ ವ್ಯಕ್ತಿಗಳನ್ನು ಸಮರ್ಥವಾಗಿ ಮೊತ್ತಮೊದಲಿಗೆ ಚಿತ್ರದಲ್ಲಿ ಮೂಡಿಸಿದ ಶ್ರೇಯಸ್ಸು ರವಿವರ್ಮನಿಗೆ ಸಲ್ಲುತ್ತದೆ.

ರವಿವರ್ಮನ ’ಸೀತಾ ಪರಿತ್ಯಾಗ’ ಚಿತ್ರ ಬರೋಡದ ಅರಮನೆಯಲ್ಲಿ ಪ್ರದರ್ಶಿತವಾಯಿತು. ಹಲವಾರು ಪ್ರದರ್ಶನಗಳಲ್ಲಿ ರವಿವರ್ಮನ ಕೃತಿಗಳಿಗೆ ಬಹುಮಾನಗಳು ಬಂದವು. ಪಾಶ್ಚಾತ್ಯರು ಅವನ ಕೃತಿಗಳನ್ನು ಕೊಳ್ಳಲು ಪ್ರಾರಂಭಿಸಿದರು.

ಬರೋಡಾದಲ್ಲಿ

ಇಷ್ಟರಲ್ಲೆ ರವಿವರ್ಮನ ಹೆಸರು ಭಾರತದಲ್ಲೆಲ್ಲ ಮನೆಮಾತಾಗಿತ್ತು. ರಾಜಮಹಾರಾಜರುಗಳು ತಮ್ಮ ಆಸ್ಥಾಕೆ ಆತನನ್ನು ಆಮಂತ್ರಿಸಿ ಆತನ ಕುಂಚದಿಂದ ಚಿತ್ರ ಮೂಡಿಸಲು ಪೈಪೋಟಿ ನಡೆಸುತ್ತಿದ್ದರು. ಪುದುಕೋಟೆ, ಮೈಸೂರು, ಬರೋಡಾ, ಆಳ್‌ವಾರ್, ಗ್ವಾಲಿಯರ್, ಜಯಪುರ, ಇಂದೂರು, ಉದಯಪುರ ಮೊದಲಾದೆಡೆಗಳಿಂದ ರವಿವರ್ಮನಿಗೆ ಆಹ್ವಾನ ಬರತೊಡಗಿತು.

ಬರೋಡಾಕ್ಕೆ ೧೮೮೧ರಲ್ಲಿ ಹೋದಾಗ ದಮಯಂತಿ, ಸೈರಂಧ್ರಿ, ಸರಸ್ವತಿ, ಲಕ್ಷ್ಮಿ ಇತ್ಯಾದಿಯಾಗಿ ಪೌರಾಣಿಕ ಚಿತ್ರಗಳೂ ಆತನ ಕುಂಚದಿಂದ ಮೂಡಿಬಂದವು. ಬರೋಡಾದಲ್ಲಿದ್ದಾಗಲೆ ಮೊಗಲ ಹಾಗೂ ರಜಪೂತ ಶೈಲಿಯ ಚಿತ್ರಗಳ ಅಧ್ಯಯನ ನಡೆಸುವ ಅವಕಾಶವೂ ರವಿವರ್ಮನಿಗೆ ಒದಗಿ ಬಂತು.

ವಿಶಾಖಂ ತಿರುನಾಳ್ ಮಹಾರಾಜರು ತಿರುವಾಂಕೂರಿ ನಿಂದ ಬರುತ್ತಿದ್ದ ೫೦ ರೂಪಾಯಿ ಮಾಸಿಕ ವೇತನವನ್ನೂ ನಿಲ್ಲಿಸಿಬಿಟ್ಟಿದ್ದರು.

ಬರೋಡಾದಿಂದ ಕಿಳಿಮಾನೂರಿಗೆ ರವಿವರ್ಮನು ಹಿಂದಿರುಗಿ ಬಂದನು ’ಮುಂದೆ ನೀನು ಹೆಸರಾಂತ ಕಲಾವಿದನಾಗುವಿ’ ಎಂದು ತನ್ನನ್ನು ಹಿಂದೆ ಆಶೀರ್ವದಿಸಿದ್ದ ಮಾವ ರಾಜರಾಜವರ್ಮನ ಪಾದಗಳಲ್ಲಿ ಐದು ಸಾವಿರ ರೂಪಾಯಿಗಳ ಕಾಣಿಕೆ ಇರಿಸಿ ನಮಸ್ಕರಿಸಿದನು.

ಉತ್ತರ ಭಾರತ ಸಂಚಾರದ ವೇಳೆ ರವಿವರ್ಮನು ವಿವಿಧ ಭಾಗದ ಜನರ ವೇಷ- ಭೂಷಣ, ಕ್ರಮ- ಸ್ವಭಾವ, ಆಚಾರ- ಮರ್ಯಾದೆಗಳನ್ನು ಕೂಲಂಕಷವಾಗಿ ಗಮನಿಸಿ ಬರೆದಿಡುತ್ತಿದ್ದ. ಮರಾಠಾ ವೀರ ಶಿವಾಜಿಯ ಚಿತ್ರವೊಂದನ್ನು ಚಿತ್ರಿಸಲು ಆತ ಬಹಳ ವಿವರಣೆಗಳನ್ನು ಸಂಗ್ರಹಿಸಿದ. ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ, ಶಿವಾಜಿಯ ದೇಶಪ್ರೇಮ- ಪರಾಕ್ರಮಗಳನ್ನು ಹೇಳಿ ಮರಾಠಾ ಜನತೆಯನ್ನು ಬಡಿದೆಬ್ಬಿಸುತ್ತಿದ್ದ ಕಾಲದಲ್ಲೆ ರವಿವರ್ಮ ವಿರಚಿತ ಶಿವಾಜಿಯ ಅನುಪಮ ಚಿತ್ರವೂ ಹೊರಬಂದಿತು. ತನ್ನ ಮೂವರು ನಂಬಿಕೆಯ ಅನುಚರರೊಂದಿಗೆ ಅಶ್ವಾರೋಹಿಯಾಗಿ ಕೈಯಲ್ಲಿ ’ಭವಾನಿ’ಯನ್ನು ಝಳಪಿಸುತ್ತಾ ಶಿವನದುರ್ಗದಿಂದ ಅರಿಭಯಂಕರನಾಗಿ ಬರುವ ವೀರ ಶಿವಾಜಿಯ ಚಿತ್ರವು ಇಂದು ಭಾರತಾದ್ಯಂತ ಮನೆಮನೆಗಳಲ್ಲಿ ಮೆರೆಯುತ್ತಿದೆ.

ಬರೋಡಾದಿಂದ ಹಿಂದಿರುಗಿದ ಬಳಿಕ ಮೂರುವರ್ಷ ಪರ್ಯಂತ ರವಿವರ್ಮ ಕಿಳಿಮಾನೂರು, ಮಾವಲಿಕ್ಕರಗಳಲ್ಲಿದ್ದು ಸಂಸ್ಕೃತ ಮಹಾಕಾವ್ಯ ಪಾರಾಯಣದಲ್ಲಿ ಕಾಲ ಕಳೆದ. ಪೌರಾಣಿಕ ಚಿತ್ರಗಳಿಗೆ ಸಾಕಷ್ಟು ಸಾಮಗ್ರಿ ಇದರಿಂದ ಲಭ್ಯವಾಯಿತು.

ಮೈಸೂರು ಸಂಸ್ಥಾನದಲ್ಲಿ

ಬರೋಡಾ ಅರಮನೆಯಲ್ಲಿದ್ದು ಸುಂದರ ಚಿತ್ರಗಳನ್ನು ರಚಿಸಿದ ರವಿವರ್ಮನ ವಿಷಯ ಮೈಸೂರು ಮಹಾರಾಜರಿಗೂ ಸುದ್ದಿ ತಲುಪಿತು. ೧೮೮೫ರಲ್ಲಿ ಮಹಾರಾಜರಾಗಿದ್ದ ಚಾಮರಾಜೇಂದ್ರ ಒಡೆಯರ್ ರವಿವರ್ಮನನ್ನು ತಮ್ಮ ಆಸ್ಥಾನಕ್ಕೆ ಆಮಂತ್ರಿಸಿದರು. ರವಿವರ್ಮನು ತನ್ನ ಸಹೋದರನೊಂದಿಗೆ ಮೈಸುರು ಅರಮನೆಗೆ ತೆರಳಿದನು. ಅಲ್ಲಿ ಕಲಾವಿದನನ್ನು ಸಕಲ ರಾಜ ಮರ್ಯಾದೆ ಯೊಂದಿಗೆ ಸ್ವಾಗತಿಸಿ, ವೈಭವದ ಆತಿಥ್ಯ ನೀಡಲಾಯಿತು. ಮಹಾಜನ ಹಾಗೂ ರಾಜ ಪರಿವಾರದ ಇತರ ಸದಸ್ಯರ ಪೂರ್ಣ ಆಕಾರದ ತೈಲಚಿತ್ರವನ್ನು ರವಿವರ್ಮನು ಸಹೋದರ ರಾಜರಾಜವರ್ಮನೊಂದಿಗೆ ಸೇರಿ ಮಾಡಿ ಮುಗಿಸಿದನು. ಪ್ರತಿಫಲವಾಗಿ ಮಹಾರಾಜರು ಧನ- ಕನಕಗಳೊಂದಿಗೆ ಒಂದು ಆನೆಯನ್ನೂ ಉಡುಗೊರೆಯಾಗಿ ನೀಡಿದರು.

೧೮೮೭ರಲ್ಲಿ ರವಿವರ್ಮನ ತಾಯಿ ನಿಧನರಾದರು. ಆ ವರ್ಷ ಆತ ಎಲ್ಲಿಯೂ ಪ್ರವಾಸ ಮಾಡಲಿಲ್ಲ. ಸಂಸ್ಕೃತ ಗ್ರಂಥಗಳನ್ನು ಓದುತ್ತಾ ಅವುಗಳಲ್ಲಿ ಚಿತ್ರಿತರಾದ ನಾಯಿಕೆಯರನ್ನು ರವಿವರ್ಮ ಕುಂಚದಿಂದ ಚಿತ್ರಿಸತೊಡಗಿದ. ಹೀಗೆ ಮಹಾಶ್ವೇತೆ, ಕಾದಂಬರಿ ಮೊದಲಾದವರು ಕಣ್ಸೆಳೆಯುವ ರೂಪ ತಳೆದರು.

ಭಾರತದರ್ಶನ

ತನ್ನ ಚಿತ್ರಗಳನ್ನು ರಾಜ- ಮಹಾರಾಜರುಗಳು ಮಾತ್ರವೇ ನೋಡಿ ಸಂತೋಷಿಸಿದರೆ ಸಾಲದು, ಜನಸಾಮಾನ್ಯರ ಕೈಗೂ ಪೌರಾಣಿಕ ಚಿತ್ರಗಳು ಎಟಕುವಂತಾಗಬೇಕು ಎಂಬುದು ರವಿವರ್ಮನ ಚಿರಕಾಲದ ಬಯಕೆಯಾಗಿತ್ತು. ಇದಕ್ಕೆ ಉಪಾಯವೆಂದರೆ ಚಿತ್ರಗಳಿಗೆ ಅಚ್ಚುಹಾಕುವುದು. ಆದರೆ ಚಿತ್ರಗಳನ್ನು ಮುದ್ರಿಸುವುದು ಸುಲಭವಲ್ಲ, ಬಣ್ಣದ ಚಿತ್ರಗಳ ಮುದ್ರಣವಂತೂ ಇನ್ನೂ ಕಷ್ಟ. ವಿದೇಶಕ್ಕೆ ಕಳಿಸಿ ಚಿತ್ರಗಳನ್ನು ಮುದ್ರಿಸುವುದು ಕಷ್ಟವೂ ಹೌದು; ನಷ್ಟವೂ ಹೌದು. ಆದರೆ ಮುದ್ರಾಣಾಲಯದ ಸ್ಥಾಪನೆಗೆ ಸಾಕಷ್ಟು ಧನ ಸಂಚಯವಾಗಬೇಕಿತ್ತು. ರಾಜ- ಮಹಾರಾಜರ ಬೆಂಬಲವಿದ್ದರೆ ಅದೆಲ್ಲ ಸುಲಭದಲ್ಲೆ ಕೈಗೂಡಬಹುದು. ರವಿವರ್ಮ ಆ ದಿಶೆಯಲ್ಲಿ ಯೋಚನೆಗೆ ತೊಡಗಿದ.

ಬರೋಡಾದ ಗಾಯಕವಾಡ ಮಹಾರಾಜರು ನೀಲಗಿರಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ, ರವಿವರ್ಮನನ್ನು ಆಹ್ವಾನಿಸಿದರು. ಅವರು ಹೊಸದಾಗಿ ’ಲಕ್ಷ್ಮಿನಿವಾಸ’ ಎಂಬ ಅರಮನೆಯನ್ನು ಕಟ್ಟಿಸಿದ್ದರು. ರಾಮಾಯಣ ಹಾಗೂ ಮಹಾಭಾರತಗಳನ್ನು ಆಧಾರವಾಗಿರಿಸಿ ಹದಿನಾಲ್ಕು ಸುಂದರ ತೈಲಚಿತ್ರಗಳನ್ನು, ಅರಮನೆಯನ್ನು ಅಲಂಕರಿಸಲು, ರಚಿಸಿ ಕೊಡಬೇಕೆಂದು ಮಹಾರಾಜರು ಕಲಾವಿದನನ್ನು ಕೇಳಿಕೊಂಡರು. ರವಿವರ್ಮನು ಈ ಸಾಹಸದ ಕೆಲಸಕ್ಕೆ ಒಪ್ಪಿದನು.

ಈ ಬೃಹತ್ ಯೋಜನೆಯನ್ನು ಕೈಗೂಡಿಸುವ ಮೊದಲು ಭಾರತಾದ್ಯಂತ ಸಂಚರಿಸಿ ಪುರಾತನ ಭಾರತದ ದೇಹಾಲಂಕಾರ ವೇಷವಿಧಾನ ಇತ್ಯಾದಿಗಳನ್ನು ಅರಿತುಕೊಳ್ಳಬೇಕು ಎನ್ನಿಸಿತು ರವಿವರ್ಮನಿಗೆ. ಹೀಗೆ ಆತ ಭಾರತದ ಪುರಾಣ ಪ್ರಸಿದ್ಧ ನಗರಗಳನ್ನು ಸುತ್ತಾಡಲು ಸಹೋದರನೊಂದಿಗೆ ಹೊರಟ. ಇಡೀ ಭಾರತದಲ್ಲಿ ಪ್ರಸಿದ್ಧ ಪುಣ್ಯತೀರ್ಥಗಳನ್ನೂ ಚಾರಿತ್ರಿಕ ಕೇಂದ್ರಗಳನ್ನೂ ಅವರು ಸಂದರ್ಶಿಸಿದರು. ಇದರಿಂದ ಕಲಾವಿದನಿಗೆ ತನ್ನ ಚಿತ್ರಗಳಿಗೆ ಬೇಕಾದ ಸಾಮಗ್ರಿ ಲಭಿಸದಿದ್ದರೂ ಭಾರತದ ಜನಜೀವನದ ವಿವಿಧ ಮಾದರಿಯನ್ನು ಸಮೀಪದಿಂದ ಅರಿಯಲು ಸಾಧ್ಯವಾಯಿತು. ಆತ ಮುಂದೆ ಪುರಾಣಗಳಿಗೆ ಸಂಬಂಧವಿಲ್ಲದ ಅನೇಕ ಚಿತ್ರಗಳನ್ನು ಬರೆದ; ಅವುಗಳಿಗೆ ಈ ಪ್ರವಾಸದಿಂದ ಬಹಳ ಪ್ರಯೋಜನ ವಾಯಿತು. ಭಾರತದ ವಿವಿಧ ಭಾಗಗಳವರ ವೇಷಭೂಷಣಗಳನ್ನು ಅವನು ಬಹು ಸೂಕ್ಷ್ಮವಾಗಿ ಗಮನಿಸಿದ.

ಭಾರತದ ಪರ್ಯಟನೆಯ ಬಳಿಕ ಕಿಳಿಮಾನೂರಿಗೆ ಹಿಂದಿರುಗಿದಾಗ ಹದಿನಾಲ್ಕು ಚಿತ್ರಗಳ ರೂಪು- ರೇಷೆ ಹೆಚ್ಚು ಕಡಿಮೆ ಸಿದ್ಧವಾಗಿತ್ತು. ಒಂದೊಂದು ಚಿತ್ರದ ಉದ್ದ ಐದು ಅಡಿ ಮೂರು ಅಂಗುಲ, ಅಗಲ ಮೂರು ಅಡಿ ಎಂಟು ಅಂಗುಲ. ಅವು : ೧) ನಳ ದಮಯಂತಿ, ೨) ಶಂತನು ಮತ್ತು ಮತ್ಸ್ಯಗಂಧಿ ೩) ರಾಧಾ- ಮಾಧವ ೪)ಶ್ರೀಕೃಷ್ಣ ದೇವಕಿ ೫) ಅರ್ಜುನ ಸುಭದ್ರೆ ೬) ದ್ರೌಪದಿ ವಸ್ತ್ರಾಪಹರಣ ೭) ವಿಶ್ವಾಮಿತ್ರಮೇನಕೆ ೮) ಹರಿಶ್ಚಂದ್ರ ತಾರಾಮತಿ ೯) ಸೀತಾ ಸ್ವಯಂವರ ೧೦) ಭರತ ಮತ್ತು ಸಿಂಹದ ಮರಿ ೧೧) ಶ್ರೀಕೃಷ್ಣ ಜನನ ೧೨) ಕೀಚಕ ಸೈರಂಧ್ರಿ ೧೩) ಕಂಸಮಾಯೆ ೧೪) ಶಂತನು ಮತ್ತು ಗಂಗೆ.

೧೮೯೧ ರಲ್ಲಿ ರವಿವರ್ಮನು ಈ ಹದಿನಾಲ್ಕು ಚಿತ್ರಗಳೊಂದಿಗೆ ಬರೋಡಾಕ್ಕೆ ಹೊರಟ. ಮುಂಬಯಿ ತಲುಪಿದಾಗ ಪತ್ನಿಯ ಅನಿರೀಕ್ಷಿತ ಮರಣದ ವಾರ್ತೆ ತಿಳಿದು ಆತ ಮತ್ತೆ ಹಿಂದಿರುಗೆ ಕಿಳಿಮಾನೂರಿಗೆ ಬಂದ. ಒಂದು ತಿಂಗಳು ಪರ್ಯಂತ ದುಃಖದಲ್ಲೆ ಕಳೆದು, ಮತ್ತೆ ಬರೋಡಾಕ್ಕೆ ಹೋದ. ಕೊನೆಗೂ ಆ ಹದಿನಾಲ್ಕು ಚಿತ್ರಗಳು ’ಲಕ್ಷ್ಮಿನಿವಾಸ’ ಅರಮನೆಯ ಗೋಡೆಯನ್ನು ಅಲಂಕರಿಸಿದವು. ಸಾಮಾನ್ಯ ಜನರು, ಚಿತ್ರಕಲಾ ನಿಪುಣರೂ ಅವನ್ನು ಕಂಡು ತುಂಬ ಸಂತೋಷಪಟ್ಟರು. ಮಹಾರಾಜರು ಐವತ್ತು ಸಹಸ್ರ ರೂಪಾಯಿಗಳ ಸಂಭಾವನೆ ನೀಡಿ ರವಿವರ್ಮನನ್ನು ಗೌರವಿಸಿದರು.

ಮುದ್ರಣಾಲಯ

ಮುದ್ರಣಾಲಯದ ಸ್ಥಾಪನೆಗೆ ಹೂಡಲು ಬೇಕಾದ ಬಂಡವಾಳಕ್ಕೆ ಈ ಹಣವನ್ನು ವಿನಿಯೋಗಿಸಲು ರವಿವರ್ಮ ನಿಶ್ಚಯಿಸಿದ. ಆದರೆ ಯಂತ್ರಸಾಮಗ್ರಿಗಳನ್ನು ವಿದೇಶದಿಂದ ತರಿಸಿಕೊಳ್ಳಲು ಹಣದ ಕೊರತೆ ಇದರಿಂದ ನೀಗಲಾರದೆಂದು ಆತ ಮನಗಂಡನು. ಸ್ನೇಹಿತರ ನೆರವಿನಿಂದ ಮುಂಬಯಿಯ ಉದ್ಯಮಿಯೊಬ್ಬನನ್ನು ಪಾಲುಗಾರನನ್ನಾಗಿ ಮಾಡಿಕೊಂಡನು.

೧೮೯೧ ರಲ್ಲಿ ಅಮೆರಿಕಾದ ಷಿಕಾಗೊದಲ್ಲಿ ಏರ್ಪಡಿಸಿದ ಅಂತಾರಾಷ್ಟ್ರೀಯ ಚಿತ್ರಪ್ರದರ್ಶನಕ್ಕಾಗಿ ರವಿವರ್ಮನು ಹತ್ತು ಚಿತ್ರಗಳನ್ನು ಕಳುಹಿಸಿಕೊಟ್ಟನು. ಇದರ ವೆಚ್ಚವನ್ನು ಬರೋಡಾದ ಮಹಾರಾಜರೇ ವಹಿಸಿದರು.

ಈ ಪ್ರದರ್ಶನದಲ್ಲಿ ರವಿವರ್ಮನ ಕೃತಿಗಳಿಗೆ ಎರಡು ಬಹುಮಾನಗಳೂ ಪ್ರಶಸ್ತಿ ಪತ್ರಗಳೂ ದೊರೆತವು. ಅದೇ ವರ್ಷ ಷಿಕಾಗೊದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಹಿಂದು ಧರ್ಮದ ಗೌರವವನ್ನು ಎತ್ತಿಹಿಡಿದು ವಿಶ್ವಮಾನ್ಯರಾದರು. ಭಾರತೀಯ ಧರ್ಮ ಹಾಗೂ ಚಿತ್ರಕಲೆ ಏಕಕಾಲದಲ್ಲಿ ವಿಶ್ವಮಾನ್ಯತೆ ಪಡೆದವು. ಸ್ವಾಮಿ ವಿವೇಕಾನಂದರು ರವಿವರ್ಮನ ಪ್ರದರ್ಶನ ಕೃತಿಗಳನ್ನು ಷಿಕಾಗೋದಲ್ಲಿ ಅದೇ ಮೊದಲ ಬಾರಿಗೆ ಕಂಡರು. ಅವರು ಭಾರತಕ್ಕೆ ಹಿಂದಿರುಗಿ ಬಂದು ರವಿವರ್ಮನನ್ನು ಅಭಿನಂದಿಸಿದರು. ಮುಂಬಯಿಯಲ್ಲಿ ರವಿವರ್ಮನ ಮನೆಯಲ್ಲಿ ಸ್ವಾಮೀಜಿಯವರು ಒಂದು ದಿನ ಅತಿಥಿಯಾಗಿಯೂ ಇದ್ದರು. ಸ್ವಾಮೀಜಿಯವರು ಒಮ್ಮೆ ಹೇಳಿದರು         : “ಬರೋಡಾದಲ್ಲಿ ನೋಡಲು ಯೋಗ್ಯವಾಗಿರುವುದು- ಪುಸ್ತಕಾಲಯ ಹಾಗೂ ರವಿವರ್ಮನ ಚಿತ್ರಗಳು ಮಾತ್ರ.”

೧೮೯೪ರಲ್ಲಿ ರವಿವರ್ಮ ಚಿತ್ರ ಮುದ್ರಣಾಲಯದ ಕಾರ್ಯಾರಂಭವಾಯಿತು. ರವಿವರ್ಮ ಈ ಮುದ್ರಾಣಾಲಯವನ್ನು ಆರಂಭಿಸಲು ಇನ್ನೊಂದು ಕಾರಣವೂ ಇತ್ತು. ಆಗ ಅಗ್ಗದ ಮೂರನೆ ದರ್ಜೆಯ ಚಿತ್ರಗಳು ಅಚ್ಚಾಗಿ ಮಾರಾಟವಾಗುತ್ತಿದ್ದವು. ಯಾವುದೇ ಕಲಾತ್ಮಕತೆ ಇಲ್ಲದ ಈ ಚಿತ್ರಗಳಿಂದಾಗಿ ನೈಜಕಲೆ ಮೂಲೆಗುಂಪಾಗುವ ಭಯವಿದೆ ಎಂದು ತಿಳಿದ ರವಿವರ್ಮ ಭಾರತೀಯ ಚಿತ್ರಕಲೆಯ ನೈಜ ಶ್ರೇಷ್ಠತೆಯನ್ನು ಎತ್ತಿಹಿಡಿಯುವುದು ಅಗತ್ಯ ಎಂದು ಯೋಚಿಸಿದರು. ರವಿವರ್ಮ ಮುದ್ರಣಾಲಯದಿಂದ ’ಶಾಕುಂತಳಜನನ’ದಿಂದ ಆರಂಭಿಸಿ ಸರಸ್ವತಿ, ಮಹಾಲಕ್ಷ್ಮಿ ಇತ್ಯಾದಿ ದೇವ- ದೇವತೆಯರ ಚಿತ್ರಗಳು ಅಚ್ಚಾಗಿ ಬಂದವು. ರಾಜ- ಮಹಾರಾಜರುಗಳ ಅರಮನೆಯ ಭಿತ್ತಿಯಲ್ಲಿ ಮಾತ್ರ ಕಂಗೊಳಿಸುತ್ತಿದ್ದ ಚಿತ್ರಗಳು ಜನಸಾಮಾನ್ಯರ ಕೈಗೂ ಎಟಕುವಂತಾಯಿತು.

ಚಿತ್ರಗಳು ಒಂದೊಂದಾಗಿಯೇ ಸಹಸ್ರಗಟ್ಟಲೆ ಪ್ರತಿಗಳು ಅಚ್ಚಾಗಿ ಬರುತ್ತಿದಂತೆ ಭಾರತದ ಎಲ್ಲ ಭಾಗಗಳಿಂದ ಬೇಡಿಕೆ ಬರತೊಡಗಿತು. ರವಿವರ್ಮನ ದೇವ- ದೇವತೆಯರು ಪೂಜಾಗೃಹವನ್ನು ಸೇರಿದರು.

ರವಿವರ್ಮನ ಹೆಸರು ಭಾರತದ ಮೂಲೆಮೂಲೆಯಲ್ಲಿ ಮನೆಮಾತಾಯಿತು. ಅವರು ಪ್ರವಾಸ ಹೋದಾಗ ರಾಜ- ಮಹಾರಾಜರಿಂದ ಮತ್ತು ಜನಸಾಮಾನ್ಯರಿಂದ ಗೌರವ ದೊರೆಯಿತು.

ರವಿವರ್ಮರ ಕುಂಚದಿಂದ ಮುಖ್ಯವಾಗಿ ಪೌರಾಣಿಕ ವ್ಯಕ್ತಿಗಳೆ ರೂಪು ತಳೆದರೂ ಊರ್ವಶಿ, ರಂಭೆ, ತಿಲೋತ್ತಮೆ, ಉಷೆ ಎಂಬೀ ನಾಯಿಕೆಯರನ್ನೂ ಆತ ಚಿತ್ರಿಸಿದರು. ಬಳಿಕ ಶೂದ್ರಕ, ಕಾಳಿದಾಸ, ಭವಭೂತಿಯರ ಕಲ್ಪಿತ ನಾಯಿಕೆಯರು, ಮರಾಠಾ- ಗುಜರಾತಿ- ಮಲಬಾರಿ ಸುಂದರಿಯರು, ರಾಷ್ಟ್ರನಾಯಕರುಗಳಾದ ತಿಲಕ್- ರಾನಡೆ ಮೊದಲಾದವರು ರವಿವರ್ಮರ ಕುಂಚದಿಂದ ಮೈತಳೆದರು. ರಜಪೂತ ವನಿತೆಯ ಸತಿ ಪ್ರವೇಶ, ಹಿಮಾಲಯದ ಪ್ರಕೃತಿ ಸಿರಿ ಹೀಗೆ ಅನೇಕ ಅಪೂರ್ವ- ಸುಂದರ ದೃಶ್ಯಗಳೂ ಅಚ್ಚಾದವು.

ಭಾರತಕ್ಕೆ ಸಂದರ್ಶನವೀಯಲು ಬರುತ್ತಿದ್ದ ಯಾವನೇ ಪಾಶ್ಚಾತ್ಯ ಕಲಾವಿದನಾದರೂ ರವಿವರ್ಮರನ್ನು ಭೇಟಿಯಾಗದೇ ಹಿಂದಿರುಗುತ್ತಿರಲಿಲ್ಲ. ಹೀಗೆ ರವಿವರ್ಮ ಅವರೊಂದಿಗೆ ಚಿತ್ರಕಲೆಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಕುರಿತು ಚರ್ಚಿಸಿ, ತಾವೂ ಸಾಕಷ್ಟು ಆಧುನಿಕ ಚಿತ್ರಕಲಾಜ್ಞಾನವನ್ನು ಪಡೆಯುತ್ತಿದ್ದರು. ಮುಂಬಯಿಯಲ್ಲಿದ್ದು ರವಿವರ್ಮ ಅನೇಕ ಚಿತ್ರಕಲಾಸಕ್ತರಿಗೂ ಮಾರ್ಗದರ್ಶನ ಮಾಡಿದರು. ಹಿರಿಯ- ಕಿರಿಯ ಭೇದವಿಲ್ಲದೇ ಯಾವನಿಗಾದರೂ ಆತ ಜ್ಞಾನದಾನ ಮಾಡುತ್ತಿದ್ದರು.

೧೮೯೭ರಲ್ಲಿ ಪುಣೆಯಲ್ಲಿ ಪ್ಲೇಗು ಬಾಧೆ ತೊಡಗಿ ಅದು ಮುಂಬಯಿಗೂ ಹಬ್ಬಿತು. ಪಾಲುದಾರನೂ ಹಣ ಹಿಂದಕ್ಕೆ ಕೇಳುತ್ತಿದ್ದ. ಇಂತಹ ಹಲವು ಕಾರಣಗಳಿಂದ ಮುದ್ರಣಾಲಯವನ್ನು ಕಾರ್ಲಿ ಎಂಬ ಸ್ಥಳಕ್ಕೆ ಬದಲಾಯಿಸಿದ್ದಾಯಿತು. ರವಿವರ್ಮರು ತುಂಬ ಉದಾರಿಗಳು. ಯಾಚಕರಿಗೆ, ಕಷ್ಟದಲ್ಲಿರುವ ಮಂದಿಗೆ ಉದಾರವಾಗಿ ದಾನ ನೀಡುತ್ತಿದ್ದರು. ತಮ್ಮ ಬಳಿ ಹಣವಿಲ್ಲದಿದ್ದರೆ ಇತರರಿಂದ ಸಾಲ ಪಡೆದಾದರೂ ಅರ್ಹ ಯಾಚಕರಿಗೆ ನೀಡುತ್ತಿದ್ದರು.

೧೯೦೦ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ ರವಿವರ್ಮರ ಚಿತ್ರಗಳಿಗೆ ಪ್ರಶಸ್ತಿ ಬಂದು ರವಿವರ್ಮರ ಕಲಾನೈಪುಣ್ಯಕ್ಕೆ ಅಲ್ಲಿನ ಪತ್ರಿಕೆಗಳ ಮತ್ತು ಚಿತ್ರಕಲಾ ವಿಮರ್ಶಕರ ಪ್ರಶಂಸೆ ದೊರೆಯಿತು.

ರವಿವರ್ಮರಿಂದ ತಮ್ಮ ಚಿತ್ರ ಬರೆಸಿಕೊಳ್ಳಬೇಕೆಂದು ಭಾರತದ ರಾಜರುಗಳಿಗೆ ಮಾತ್ರವಲ್ಲ, ಇಂಗ್ಲೆಂಡಿನಿಂದ ಬಂದ ಗವರ್ನರುಗಳಿಗೆ ಮತ್ತು ವೈಸರಾಯರುಗಳಿಗೆ ಹಂಬಲ. ವೈಸರಾಯ್ ಆಗಿದ್ದ ಲಾರ್ಡ್ ಕರ್ಜನ್‌ನ ಚಿತ್ರವನ್ನು ಅವರು ಬರೆದುಕೊಟ್ಟರು.

ತಿರುವಾಂಕೂರಿನಿಂದ  ಮತ್ತೆ ಮನ್ನಣೆ

ಒಂದೊಮ್ಮೆ ರವಿವರ್ಮರ ಪ್ರತಿಭೆಗೆ ಅಸೂಯೆಪಟ್ಟು ಆತನನ್ನು ರಾಜಧಾನಿಯಿಂದ ಗಡೀಪಾರು ಮಾಡಿದ್ದರೂ ಆತನ ಪ್ರತಿಭೆ ವಿಶ್ವಮಾನ್ಯತೆ ಪಡೆದಾಗ ಮೂಲಂ ತಿರುನಾಳ್ ಮಹಾರಾಜರು ಆತನನ್ನು ಮತ್ತೆ ಬರಮಾಡಿಕೊಂಡರು. ವರ್ಷಂಪ್ರತಿ ಎರಡು ತೈಲಚಿತ್ರಗಳನ್ನು ಚಿತ್ರಿಸಲು ರವಿವರ್ಮರು ಒಪ್ಪಿದರು. ಅವರು ತಿರುವನಂತಪುರದಲ್ಲಿ ಒಂದು ಚಿತ್ರಕಲಾ ಶಾಲೆಯನ್ನು ತೆರೆಯುವ ಹಂಚಿಕೆಯಲ್ಲಿದ್ದರು. ಆತ ತಮ್ಮ ಈ ಬಯಕೆಯನ್ನು ಮಹಾರಾಜರಲ್ಲಿ ನಿವೇದಿಸಿಕೊಂಡಾಗ ಬರಿಯ ಜಾರಿಕೆಯ ಆಶ್ವಾಸನೆಯಷ್ಟೇ ದೊರಕಿತು. ತಿರುವಾಂಕೂರು ಆಸ್ಥಾನ ಕಲಾವಿದರಾಗಿ ರವಿವರ್ಮರು ವಿರಾಟನ ಆಸ್ಥಾನ, ಶಕುಂತಳೆ, ಹಂಸ ದಮಯಂತಿ, ರುಕ್ಮಾಂಗದ- ಮೋಹಿನಿ ಮೊದಲಾದ ಹಲವು ಪ್ರಸಿದ್ಧ ತೈಲಚಿತ್ರಗಳನ್ನು ರಚಿಸಿಕೊಟ್ಟರು. ಇವಕ್ಕೆಲ್ಲ ತಲಾ ೩,೦೦೦ ರೂಪಾಯಿಗಳಂತೆ ಪುರಸ್ಕಾರವೂ ಸಿಕ್ಕಿತು. ಇಷ್ಟೆಲ್ಲ ಆಗಿಯೂ ಮಹಾರಾಜರು ಚಿತ್ರ ಕಲಾಲಯ ಪ್ರಾರಂಭಿಸುವ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಇದರಿಂದ ರೋಸಿ ಹೋದ ರವಿವರ್ಮ ಇನ್ನು ಮುಂದೆ ತಾನು ತಿರುವಾಂಕೂರು ಮಹಾರಾಜರಿಗಾಗಿ ಚಿತ್ರ ರಚಿಸಲಾರೆನೆಂದು ಖಡಾಖಂಡಿತವಾಗಿ ಹೇಳಿಬಿಟ್ಟರು.

ಅನಾರೋಗ್ಯ

ಐವತ್ತರ ಹರೆಯ ದಾಟಿದ ರವಿವರ್ಮರಿಗೆ ಹಠಾತ್ ಆಗಿ ಪ್ರಮೇಹ ರೋಗದ ಬಾಧೆ ಕಾಣಿಸಿಕೊಂಡಿತು. ಮುಂಬಯಿ ಹಾಗೂ ಲೋನಾವಳದಲ್ಲಿದ್ದು ಪಟ್ಟ ಪರಿಶ್ರಮ ಅವರ ಆರೋಗ್ಯಕ್ಕೆ ಮಾರಕವಾಗಿತ್ತು. ಅಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುವುದು ಅವರಿಗೆ ಸರಿಯೆನಿಸಲಿಲ್ಲ. ಮುದ್ರಣಾಲಯವನ್ನು ಮಾರುವುದು ಮತ್ತು ಊರಿಗೆ ಹಿಂದಿರುಗುವುದೇ ಇದಕ್ಕೆ ಪರಿಹಾರ. ಅಷ್ಟರಲ್ಲೆ ಸುಮಾರು ೮೭ ತೈಲಚಿತ್ರಗಳು ಮುದ್ರಣಾಲಯದಿಂದ ಸಹಸ್ರ ಸಂಖ್ಯೆಯಲ್ಲಿ ಅಚ್ಚಾಗಿ ಭಾರತದಲ್ಲೆಲ್ಲ ಪ್ರಸಾರಗೊಂಡಿದ್ದವು. ಆದರೂ ರವಿವರ್ಮ ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಗೊಳ್ಳಲಿಲ್ಲ. ಮುದ್ರಣಾಲಯವನ್ನು ತಮ್ಮ ಕೃತಿಗಳ ಹಕ್ಕು- ಸ್ವಾಮ್ಯದೊಂದಿಗೆ ಮಾರಲು ಆತ ನಿಶ್ಚಯಿಸಿದರು. ಒಬ್ಬ ಜರ್ಮನ್ ಸಂಸ್ಕೃತ ವಿದ್ವಾಂಸ ಮುದ್ರಣಾಲಯವನ್ನು ೨೫,೦೦೦ ರೂಪಾಯಿಗಳಿಗೆ ಕೊಳ್ಳಲು ಮುಂದೆ ಬಂದರು. ಮುದ್ರಣಾಲಯವನ್ನು ಮಾರಿ ತಮ್ಮ ಋಣವನ್ನು ತೀರಿಸಿ, ರವಿವರ್ಮ ಕಿಳಿಮಾನೂರಿಗೆ ಹಿಂದಿರುಗಿದರು.

ಕೊನೆಯ ದಿನಗಳು

ಮುಂಬಯಿಯ ಜಂಜಾಟದಿಂದ ಕಿಳಿಮಾನೂರನ್ನು ಸೇರಿದ ರವಿವರ್ಮರು ಆರೋಗ್ಯ ಸುಧಾರಿಸಿಕೊಳ್ಳಲು ಆಯುರ್ವೇದ ಚಿಕಿತ್ಸೆ ಪಡೆಯತೊಡಗಿದರು. ದೂರದೂರಕ್ಕೆ ಸಂಚಾರ ಹೋಗಬಾರದೆಂದೂ ವೈದ್ಯರು ನಿರ್ದೇಶಿಸಿದರು. ಹೈದರಾಬಾದು ಸಂಸ್ಥಾನದ ರಾಜಾ ದೀನ ದಯಾಲರ ಒತ್ತಾಯದ ಆಮಂತ್ರಣವನ್ನು ಅವರು ಕೊನೆಗೂ ಸ್ವೀಕರಿಸಿ ಅಲ್ಲಿಗೆ ಹೋದರು. ಎರಡು ತಿಂಗಳ ಪರ್ಯಂತ ಅಲ್ಲಿದ್ದು ಅನೇಕ ತೈಲಚಿತ್ರಗಳನ್ನು ಪೂರೈಸಿಕೊಟ್ಟರು.

ರೋಗ ಉಲ್ಬಣಗೊಂಡು ಕಿಳಿಮಾನೂರಿಗೆ ರವಿವರ್ಮ ಹಿಂದಿರುಗಿದಾಗ ಭಾರತದ ಮೂಲೆಮೂಲೆಯಿಂದ ಅವರ ಚಿತ್ರಗಳಿಗಾಗಿ ಬೇಡಿಕೆ, ಸಂದರ್ಶನಕ್ಕಾಗಿ ಆಮಂತ್ರಣ ಬಂದಿರುವುದು ತಿಳಿಯಿತು. ಆದರೆ ದಿನೇ ದಿನೇ ಕೆಡುತ್ತಿದ್ದ ದೇಹಾರೋಗ್ಯವು ಅವರ ಉತ್ಸಾಹಕ್ಕೆ ತಣ್ಣೀರೆರಚುತ್ತಿತ್ತು.

೧೯೦೪ರಲ್ಲಿ ಬ್ರಿಟಿಷ್ ಸರ್ಕಾರ ’ಕೈಸರ್- ಎ- ಹಿಂದ್’ ಎಂಬ ಪ್ರಶಸ್ತಿಯನ್ನು ಕೊಟ್ಟಿತು. ಒಬ್ಬ ಕಲಾವಿದನಿಗೆ ಈ ಪ್ರಶಸ್ತಿ ಲಭಿಸಿದ್ದು ಮೊದಲ ಬಾರಿ.

ಅದೇ ವರ್ಷ, ಜುಲೈ ತಿಂಗಳಲ್ಲಿ ಮೈಸೂರಿನಿಂದ ಅವರಿಗೆ ಆಮಂತ್ರಣ ಬಂತು. ಆಗ ಮೈಸೂರು ಸಿಂಹಾಸನವನ್ನು ಯುವಕ ಮಹಾರಾಜ ಕೃಷ್ಣರಾಜ ಒಡೆಯರ್ ಆರೋಹಣ ಮಾಡಿದ್ದರು. ಹೊಸದಾಗಿ ನಿರ್ಮಿಸಲಾಗುತ್ತಿದ್ದ ಜಗನ್ಮೋಹನ ಅರಮನೆಯನ್ನು ಅಲಂಕರಿಸಲು ರವಿವರ್ಮರ ಕೃತಿಗಳೇ ಯೋಗ್ಯವೆಂದು ಮಹಾರಾಜರು ಬಗೆದಿದ್ದರು. ಮಾತ್ರವಲ್ಲ ಹೊಸ ಅರಮನೆಗೆ ಕಲಾನಿರ್ದೇಶಕರಾಗಿಯೂ ರವಿವರ್ಮರ ಸಹಕಾರವನ್ನು ಕೋರಲಾಯಿತು. ರವಿವರ್ಮ ಮೈಸೂರಿನಲ್ಲಿದ್ದು ಒಂಬತ್ತು ತೈಲಚಿತ್ರಗಳನ್ನು ರಚಿಸಿದರು. ಅರಮನೆಯ ಅಲಂಕಾರ ಗೃಹಗಳಿಗೆ ವರ್ಣ ಸಂಯೋಜನೆಯೂ ಅವರ ನಿರ್ದೇಶನದಂತೆ ನಡೆಯಿತು. ಮಹಾರಾಜರ ಪೂರ್ಣ ಆಕಾರ ತೈಲಚಿತ್ರವೊಂದನ್ನು ರವಿವರ್ಮ ರಚಿಸಿದ್ದರು. ಮೈಸೂರು ಮಹಾರಾಜರ ಆಸ್ಥಾನದಲ್ಲಿದ್ದ ಬಿಡಾರಂ ಕೃಷ್ಣಪ್ಪ, ವಾಸುದೇವಾಚಾರ್ಯ, ವೀಣೆ ಸುಬ್ಬಣ್ಣ ಮೊದಲಾದವರ ಸಂಗೀತವನ್ನು ಸವಿಯುವ ಅವಕಾಶವೂ ರವಿವರ್ಮರಿಗೆ ದೊರಕಿತು. ಶಾಸ್ತ್ರೀಯ ಸಂಗೀತದಲ್ಲಿ ಬಹಳ ಅಭಿರುಚಿ ಇದ್ದ ರವಿವರ್ಮರು ಬಿಡಾರಂ ಕೃಷ್ಣಪ್ಪನವರಿಂದ ಕೀರ್ತನೆಗಳನ್ನು ಅಭ್ಯಾಸ ಮಾಡಿದರು. ಚಾಮುಂಡಿ ಬೆಟ್ಟದಲ್ಲಿ ವಾಯುವಿಹಾರ ಮಾಡುತ್ತಿದ್ದಾಗ ತಾವು ಗಮನಿಸಿದ, ನೀರು ಸೇದುವ ಹೆಣ್ಣೊಬ್ಬಳ ಚಿತ್ರವನ್ನೂ ಆತ ಕುಂಚದಿಂದ ಸೆರೆಹಿಡಿದರು. ಅದೇ ’ಕೊಳದ ಬಳಿಯಲ್ಲಿ’ ಎಂಬ ಸುಂದರ ತೈಲಚಿತ್ರ.

ರವಿವರ್ಮರ ಬಲಗೈ ಬಂಟನಾಗಿ, ಆತ ತೆರಳಿದೆಡೆಯೆಲ್ಲ ಅನುಸರಿಸುತ್ತಿದ್ದ ಸಹೋದರ ರಾಜರಾಜವರ್ಮ ತೀರಿಕೊಂಡ. ರವಿವರ್ಮರಿಗೆ ಇದೊಂದು ಆಘಾತ.

ರವಿವರ್ಮರ ಸಾಧನೆಯಲ್ಲಿ ರಾಜವರ್ಮನ ಅಪಾರ ಪರಿಶ್ರಮವೂ ಒಳಗೊಂಡಿತು. ಚಿತ್ರರಚನೆಗೆ ಮೊದಲು ಇಬ್ಬರೂ ಕೂಡಿ ಚರ್ಚಿಸಿ, ವರ್ಣಸಂಯೋಜನೆಯನ್ನು ನಿರೂಪಿಸುತ್ತಿದ್ದರು. ದೃಶ್ಯಗಳ ಆಯ್ಕೆಯನ್ನು ಇಬ್ಬರೂ ಸೇರಿಯೇ ನಿರ್ಧರಿಸುತ್ತಿದ್ದರು.

೧೯೦೫ರಲ್ಲಿ ರವಿವರ್ಮರ ೫೭ನೇ ಜನ್ಮದಿನವನ್ನು ಬಹಳಷ್ಟು ವಿಜೃಂಭಣೆಯಿಂದ ಹುಟ್ಟೂರಿನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಇನ್ನೇನು, ಮೂರು ವರ್ಷ ಸಂದರೆ ಷಷ್ಠಿಪೂರ್ತಿ. ಆ ಬಳಿಕ ವಾನಪ್ರಸ್ಥಾಶ್ರಮ ಸ್ವೀಕರಿಸಲು ರವಿವರ್ಮ ನಿರ್ಧಾರ ಕೈಗೊಂಡಿದ್ದ. ತಮ್ಮ ಯಶಸ್ಸನ್ನು ಕುರಿತು ಯಾರಾದರೂ ಪ್ರಶಂಸೆ ಮಾಡಿದರೆ ಆತ ಹೇಳುತ್ತಿದ್ದರು : “ನನ್ನ ಸಾಧನೆ ಏತರದು ? ನನಗಾಗಲೇ ಐವತ್ತಕ್ಕೂ ಮೀರಿದೆ. ಕೇರಳದ ಮಣ್ಣಿನಲ್ಲಿ ಜನಿಸಿ, ಜಗದ್ವಂದ್ಯರಾದ ಶಂಕರಾಚಾರ್ಯರ ಜೀವನವನ್ನು ಗಮನಿಸಿ. ಬರಿಯ ಮೂವತ್ತೆರಡರ ಹರೆಯದಲ್ಲೆ ಸ್ವರ್ಗವಾಸಿಯಾದರು ಅವರು. ಆದರೆ ಅಷ್ಟರಲ್ಲೆ ಕನ್ಯಾಕುಮಾರಿಯಿಂದ ಹಿಮಾಲಯದ ತನಕ, ಬರಿಯ ಕಾಲ್ನಡಿಗೆಯಲ್ಲೆ ಸಂಚರಿಸಿ ಎಷ್ಟು ಸಾಧಿಸಿದರು !”

ಕೊನೆಯುಸಿರಿರುವವರೆಗೂ ಚಿತ್ರಕಲೆ

ಸಹೋದರನ ಮರಣ, ಅನಾರೋಗ್ಯ ಇತ್ಯಾದಿಗಳಿಂದಾಗಿ ರವಿವರ್ಮ ಮಾನಸಿಕವಾಗಿ, ದೈಹಿಕವಾಗಿ ಬಹಳಷ್ಟು ಬಳಲತೊಡಗಿದ್ದರು. ಕುಂಚವೇನೋ ಚಲಿಸುತ್ತಲೇ ಇತ್ತು. ಆದರೆ ಹಿಂದಿನಷ್ಟು ಸುಲಭವಾಗಿ ಬೆರಳುಗಳು ಕೆಲಸ ಮಾಡುತ್ತಿರಲಿಲ್ಲ. ಇಷ್ಟಾದರೂ ರವಿವರ್ಮರ ಕಲ್ಪನೆಗೆ ಮುಪ್ಪು ಬಂದಿರಲಿಲ್ಲ. ಮೈಸೂರು ಮಹಾರಾಜರ ಬೇಡಿಕೆಯಂತೆ ಕೆಲವು ಪೌರಾಣಿಕ ಚಿತ್ರಗಳನ್ನೂ ಆತ ರಚಿಸಿದರು. ಪಾಂಡವರ ದೂತನಾಗಿ ಕೌರವರ ಆಸ್ಥಾನ ಪ್ರವೇಶಿಸುವ ಶ್ರೀಕೃಷ್ಣ, ಸೇತು ಬಂಧನಕ್ಕಾಗಿ ಸಾಗರದ ಮುಂದೆ ಬಿಲ್ಲು ಹೂಡುವ ಶ್ರೀರಾಮಚಂದ್ರ ಅವುಗಳಲ್ಲೆಲ್ಲ ಶ್ರೇಷ್ಠ ಚಿತ್ರಗಳು.

ಇಂಗ್ಲೆಂಡಿನ ರಾಜಕುಮಾರನು ಮೈಸೂರಿಗೆ ಬೇಟೆಯಾಡಲು ತೆರಳಿದಾಗ ರವಿವರ್ಮನನ್ನೂ ಅಲ್ಲಿಗೆ ಆಹ್ವಾನಿಸಲಾಯಿತು. ಮೈಸೂರು ಮಹಾರಾಜರು ಆ ಸಂದರ್ಭದಲ್ಲಿ ’ಖೆಡ್ಡಾ’ (ಕಾಡಾನೆಗಳನ್ನು ಪಳಗಿದ ಆನೆಗಳಿಂದ ಸೆರೆಹಿಡಿಯುವುದು) ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ರವಿವರ್ಮರೂ ಅವರೊಂದಿಗೆ ಅರಣ್ಯಕ್ಕೆ ಸಾಗಿದರು- ಕುಂಚದೊಂದಿಗೆ. ಖೆಡ್ಡಾ ಕಾರ್ಯಾಚರಣೆಯನ್ನೂ ಅರಣ್ಯದಲ್ಲಿ ಠಾಣ್ಯದ ಜೀವನವನ್ನೂ ಬೇಟೆಯಾಡು ದೃಶ್ಯಾವಳಿಗಳನ್ನೂ ರವಿವರ್ಮ ರಂಗದಲ್ಲಿದ್ದೆ ಚಿತ್ರಿಸಿಕೊಂಡರು. ಮಿಂಚಿನಂತೆ ಕುಂಚ ಚಲಾಯಿಸುವ ರವಿವರ್ಮರ ಪ್ರತಿಭೆಗೆ ಯುವರಾಜ ಜಾರ್ಜ್‌ನೂ ಅವನೊಂದಿಗೆ ಆಗಮಿಸಿದ ಐರೋಪ್ಯ ಕಲಾವಿದರೂ ಆಶ್ಚರ್ಯಚಕಿತರಾದರು.

ಮೈಸೂರು ಮಹಾರಾಜರಿಂದ ಸಾಕಷ್ಟು ಪುರಸ್ಕಾರ ಪ್ರಶಸ್ತಿ ಪಡೆದು, ರವಿವರ್ಮ ೧೯೦೬ರ ಫೆಬ್ರವರಿಯಲ್ಲಿ ಹುಟ್ಟೂರಿಗೆ ಹಿಂದಿರುಗಿದರು. ಕಠಿಣ ಪರಿಶ್ರಮ, ಪ್ರವಾಸಗಳು ಆತನ ಕುಸಿಯುತ್ತಿದ್ದ ಆರೋಗ್ಯವನ್ನು ಇನ್ನೂ ಹದಗೆಡಿಸಿದವು. ತಿರುವಾಂಕೂರಿನ ಮಹಾರಾಜರೇ ವಿಶೇಷ ತಜ್ಞರಿಂದ ಆತನ ಚಿಕಿತ್ಸೆಯ ವ್ಯವಸ್ಥೆ ಮಾಡಿದರು. ಭಾರತಾದ್ಯಂತದಿಂದ ತಜ್ಞರು, ಔಷಧಗಳು ಕಿಳಿಮಾನೂರಿನ ಕಲಾವಿದನ ರಕ್ಷಣಗೆ ಬಂದರೂ ಫಲವಾಗದೆ ೧೯೦೬ರ ಅಕ್ಟೋಬರ್ ೨ ರಂದು ರವಿವರ್ಮರು ನಿಧನರಾದರು. ಇಡೀ ಭಾರತ ಮಾತ್ರವಲ್ಲ, ದೇಶವಿದೇಶಗಳ ಚಿತ್ರ ಪ್ರೇಮಿಗಳು ದುಃಖಿಸಿದರು.

ನಮ್ರ ವ್ಯಕ್ತಿ, ಅದ್ಭುತ ಸಾಧಕ

ಜಲವರ್ಣದಿಂದ ಪ್ರಾರಂಭಿಸಿ ತೈಲವರ್ಣವನ್ನು ಸ್ವಯಂ ಕಲಿಕೆಯಿಂದ ಕೈಗೂಡಿಸಿಕೊಂಡ ರವಿವರ್ಮ ‘ತಂಜಾವೂರು ಶೈಲಿ’ ಯಿಂದ ತೊಡಗಿ ಅತ್ಯಾಧುನಿಕ ಪಾಶ್ಚಾತ್ಯ ಶೈಲಿಯನ್ನೂ ಒಲಿಸಿಕೊಂಡ ಪ್ರತಿಭಾ ಸಂಪನ್ನರು. ಪ್ರಕೃತಿ ಹಾಗೂ ಮಾನವನಲ್ಲಿ ಆಸಕ್ತರಾಗಿದ್ದರೂ ಪೌರಾಣಿಕ ವ್ಯಕ್ತಿದೃಶ್ಯಗಳನ್ನೂ ಕುಂಚದಲ್ಲಿ ಸೆರೆ ಹಿಡಿದದ್ದು ಅವರ ವಿಶೇಷತೆ. ಅವರು ರಚಿಸಿದ ಚಿತ್ರಗಳ ಸಂಖ್ಯೆ ಎಷ್ಟೆಂದು ಸ್ವತಃ ಅವರೇ ಅರಿಯರು. ಅದೆಷ್ಟೋ ಚಿತ್ರಗಳನ್ನು ರಚಿಸಿ ಇಷ್ಟ-ಮಿತ್ರರಿಗೆ ಉಚಿತವಾಗಿ ಕೊಡುತ್ತಿದ್ದರು. ತಮ್ಮ ಕೃತಿಗಳನ್ನೆಂದೂ ಆತ ತಮ್ಮ ಮನೆಯಲ್ಲಿ ಪ್ರದರ್ಶನಕ್ಕಾಗಿ-ಅಲಂಕಾರ ವಸ್ತುವಾಗಿ-ಇರಿಸುತ್ತಿರಲಿಲ್ಲ. ಬದಲಾಗಿ ಸಮಕಾಲೀನ ಕಲಾವಿದರ ಅನೇಕ ಕೃತಿಗಳನ್ನು ಆತ ಬೆಲೆಕೊಟ್ಟು ಪಡೆದು ಇಟ್ಟುಕೊಳ್ಳುತ್ತಿದ್ದರು. ಚಿತ್ರ ಕಲೆಯಲ್ಲಿ ಮಗ್ನರಾಗುವುದರಲ್ಲೆ ಆತ ಆನಂದ ಕಾಣುತ್ತಿದ್ದರು.

ರವಿವರ್ಮರ ಜೀವನ ಬಹು ನಿರ್ಮಲವಾದದ್ದು. ರಾಜಮನೆತನದಲ್ಲಿ ಜನಿಸಿದರೂ ಸರಳ, ನಿರಾಡಂಬರ ವ್ಯಕ್ತಿಯಾಗಿದ್ದ ರವಿವರ್ಮರಿಗೆ ತಮ್ಮ ರಾಷ್ಟ್ರದ ಸಂಸ್ಕೃತಿ-ಪರಂಪರೆಯಲ್ಲಿ ಅಪಾರ ಅಭಿಮಾನ. ಆತ ಪೌರಾಣಿಕ ವ್ಯಕ್ತಿಗಳ ಸದ್ಗುಣಗಳನ್ನು ಸ್ವಾಭಾವಿಕವಾಗಿಯೇ ಮೈಗೂಡಿಸಿಕೊಂಡಿದ್ದರು. ಹೆಸರಿಗಾಗಿ, ಹಣದ ಆಸೆಗಾಗಿ ಎಂದೂ ಆತ ತಮ್ಮ ನಂಬಿಕೆಗಳಿಗೆ ತಿಲಾಂಜಲಿಯನ್ನು ನೀಡಿದವರಲ್ಲ. ಅಚ್ಚ ಭಾರತೀಯ ವೇಷಭೂಷಣವನ್ನೆ ಧರಿಸುತ್ತಿದ್ದರು. ಉತ್ತರದ ಅನೇಕ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲೂ ಆತ ಕಲಿತಿದ್ದರು.

ಹೇಗಿದೆ ಚಿತ್ರ ?

ರವಿವರ್ಮರ ಚಿತ್ರಗಳು ಪಂಡಿತರಿಗೂ ಪಾಮರರಿಗೂ ಸಂತೋಷವನ್ನು ಕೊಡಬಲ್ಲವು. ಒಮ್ಮೆ ರವಿವರ್ಮ ತಮ್ಮ ‘ಕಲಾ ಶಾಲೆ’ಯಲ್ಲಿ ಪೌರಾಣಿಕ ಚಿತ್ರವೊಂದನ್ನು ಚಿತ್ರಿಸುತ್ತಿದ್ದರು. ಆ ಕೋಣೆಯಲ್ಲಿ ಒಬ್ಬ ನಂಬೂದಿರಿ ಪಂಡಿತ ಹಾಗೂ ಮನೆ ಕೆಲಸದ ಆಳು ಇದನ್ನು ವೀಕ್ಷಿಸುತ್ತಾ ಇದ್ದರು. ಚಿತ್ರವೂ ಪೂರ್ಣಗೊಳ್ಳುತ್ತಲೇ ರವಿವರ್ಮರು ಕೆಲಸದಾಳನ್ನು “ಹೇಗಿದೆ ಚಿತ್ರ ?” ಎಂದು ಪ್ರಶ್ನಿಸಿದರು.

ಚೆನ್ನಾಗಿದೆ…… ಎಂದ ಆತ.

ಅಲ್ಲೆ ಇದ್ದ ನಂಬೂದಿರಿ ಪಂಡಿತನಿಗೆ, ರವಿವರ್ಮರು ತಮ್ಮನ್ನು ಅವಗಣಿಸಿ ಆ ಅಕ್ಷರ ಜ್ಞಾನವಿಲ್ಲದ ಆಳಿನೊಡನೆ ಚಿತ್ರದ ಸೌಂದರ್ಯದ ಕುರಿತಾಗಿ ಅಭಿಪ್ರಾಯ ಕೇಳಿದ್ಧೇಕೆ ಎಂದು ಹೊಳೆಯಲಿಲ್ಲ. ಆತ ರವಿವರ್ಮರನ್ನು ಈ ಕುರಿತು ಕೇಳಿದಾಗ ರವಿವರ್ಮ ನುಡಿದರು: “ ಇಂತಹ ಪ್ರಶ್ನೆಗಳಿಗೆಲ್ಲ ಉತ್ತರ ಹೇಳಲು ಪಂಡಿತರಿಗಿಂತಲೂ ಪಾಮರರೇ ಯೋಗ್ಯರು. ಈ ಮಂದಿಯ ದೃಷ್ಟಿಗೆ ಹುಳುಕು ಚೆನ್ನಾಗಿ ಗೋಚರಿಸುತ್ತದೆ. ಅವರ ದೃಷ್ಟಿಗೆ ಚೆನ್ನಾಯಿತೆಂದರೆ ಮತ್ತೆ ಪಂಡಿತರಿಗೂ ಅದು ಒಪ್ಪಿಗೆಯಾಗುತ್ತದೆ. ಅವರು ನೀಡುವ ‘ಪ್ರಶಸ್ತಿ ಪತ್ರ’ ಕ್ಕೆ ಇರುವ ಬೆಲೆ ಇನ್ನು ಯಾರೇ ನೀಡುವ ‘ಪ್ರಶಸ್ತಿ ಪತ್ರ’ ಕ್ಕೆ ಇಲ್ಲ.”

ನಂಬೂದಿರಿ ಪಂಡಿತ ಮೌನವಾಗಿ, ತಲೆ ತಗ್ಗಿಸಿ ಕೋಣೆಯಿಂದ ಹೊರಬಿದ್ದ.

ತನ್ನತನ

ಭಾರತೀಯ ಚಿತ್ರಕಲಾ ಪ್ರೇಮಿಗಳಿಗೆ ಪುರಾಣ ಪ್ರಸಿದ್ಧ ಘಟನಾವಳಿಗಳ ಪುನರ್‌ದರ್ಶನ ಮಾಡಿಕೊಟ್ಟ ಶ್ರೇಯಸ್ಸು ರವಿವರ್ಮರಿಗೆ ಸಲ್ಲುತ್ತದೆ. ಪೌರಾಣಿಕ ಕಥಾ ಪಾತ್ರಗಳಿಗೆ ಸಾಕಾರ ರೂಪ ನೀಡಿದ್ದೂ ಆತನೆ. ಇಡೀ ಭಾರತದಲ್ಲಿ ಸಂಚಾರ ಮಾಡಿ ಹೊರ ವೇಷ, ಭಾಷೆಗಳಲ್ಲಿ ಬೇರೆಯಾಗಿ ಕಂಡರೂ ಭಾರತೀಯರೆಲ್ಲರ ಸಂಸ್ಕೃತಿ ಒಂದೇ ಎಂದು ಕಂಡು ಚಿತ್ರಿಸಿದ ಪ್ರಥಮ ಭಾರತೀಯ ಕಲಾವಿದ ರವಿವರ್ಮ. ಪರಂಪರಾಗತ ಭಾರತೀಯ ಚಿತ್ರಕಲಾ ಶೈಲಿಯಿಂದ ವ್ಯವಸ್ಥಿತವಾಗಿದ್ದರೂ ಪಾಶ್ಚಾತ್ಯ ಆಧುನಿಕ ಶೈಲಿಯಿಂದ ಪ್ರಭಾವಿತವಾಗಿದ್ದರೂ ರವಿವರ್ಮರ ಚಿತ್ರಗಳಲ್ಲಿ ‘ತನ್ನತನ’ದ ಅಚ್ಚೊತ್ತು ಇದ್ದೇ ಇತ್ತು.

ತಿರುವನಂತಪುರದಲ್ಲಿ ‘ಚಿತ್ರಾ ಆರ್ಟ್ ಗ್ಯಾಲರಿ’ ಎಂದು ಹೆಸರಾಗಿರುವ ಪ್ರದರ್ಶನ ಶಾಲೆಯಲ್ಲಿ ರವಿವರ್ಮರು ರಚಿಸಿದ ೧೪ ದೊಡ್ಡ ಗಾತ್ರದ ತೈಲಚಿತ್ರಗಳೂ ೧೦ ಕಿರಿಯ ಗಾತ್ರದ ತೈಲಚಿತ್ರಗಳೂ ಪ್ರದರ್ಶಿತವಾಗಿವೆ. ಇವುಗಳಲ್ಲಿ ಎರಡು ಅಪೂರ್ಣ ಚಿತ್ರಗಳು ಕಲಾವಿದನ ಕೊನೆಯ ದಿನಗಳ ನೆನಪು ಕೊಡುತ್ತವೆ. ಬರೋಡಾದ ಲಕ್ಷ್ಮಿವಿಲಾಸ ಅರಮನೆ ಹಾಗೂ ಮೈಸೂರು ಮಹಾರಾಜರ ಚಿತ್ರಕಲಾ ಸಂಗ್ರಹ, ಉದಯಪುರದ ಅರಮನೆ, ಹೈದರಾಬಾದಿನ ಸಾಲಾರ್‌ಜಂಗ್ ವಸ್ತು ಸಂಗ್ರಹಾಲಯ, ನವದೆಹಲಿಯ ರಾಷ್ಟ್ರೀಯ ‘ಆರ್ಟ್ ಗ್ಯಾಲರಿ’ ಇವುಗಳಲ್ಲಿ ರವಿವರ್ಮರು ರಚಿಸಿದ ತೈಲಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ರವಿವರ್ಮರ ಹುಟ್ಟೂರಾದ ಕಿಳಿಮಾನೂರಿನ ಅರಮನೆಯಲ್ಲಿ ಕಲಾವಿದ ಉಪಯೋಗಿಸುತ್ತಿದ್ದ ಕುಂಚಗಳು, ಓದುತ್ತಿದ್ದ ಪುಸ್ತಕಗಳು, ಸಂಗ್ರಹಿಸಿದ ಕಲಾಕೃತಿಗಳೆಲ್ಲ ಅಸ್ತವ್ಯಸ್ತವಾಗಿದ್ದರೂ ಸುರಕ್ಷಿತವಾಗಿವೆ. ಅನೇಕ ಚಿತ್ರ ಕಲಾಕೃತಿಗಳು ಹುಳುತಿಂದು ಬಿದ್ದಿವೆ ಎನ್ನುವುದು ಖೇದಕರ.

ಭಾರತ ಸರ್ಕಾರವು ಸ್ಮರಣಾರ್ಥ ಅಂಚೆ ಚೀಟಿಯನ್ನು ಹೊರಡಿಸಿ ರವಿವರ್ಮರನ್ನು ಗೌರವಿಸಿದೆ.