ಅಣ್ಣ, ಒಂದು ಕಥೆ ಹೇಳಣ್ಣ!”

“ಯಾವ ಕಥೆ ಬೇಕಮ್ಮ?”

“ಮಗೂನ ಕಥೆ – ರಾಜ, ರಾಣಿ ಕಥೆ ಬೇಡ!”

“ಹೀಗೋ, ಸರಿ. ಒಂದು ಮಗು ಇತ್ತು. ಬಲ ತುಂಟ ಮಗು – ಆದರೆ ಬಲು ಚೂಟಿ….”

“ನನ್ನ ಹಾಗೆ?”

“ಹೂ, ನಿನ್ನ ಹಾಗೇ! ಒಮ್ಮೆ ಆ ಮಗೂಗೆ ಕೂಡಲೇ ದೊಡ್ಡವನಾಗಬೇಕೆಂದು ಆಶೆ ಆಯಿತು…. ಈಗ ನಾನು ಚಿಕ್ಕವ. ಏಕೆಂದ್ರೆ ನಾನು ಇನ್ನೂ ಮಗು. ಈಗಲೇ ಅಪ್ಪನಷ್ಟಾಗುತ್ತೇನೆ – ಅಂದರೆ ದೊಡ್ಡವನೆನೆಸಿಕೊಳ್ಳುತ್ತೇನೆ…. ಆಗ, ಮೇಷ್ಟ್ರು ಪಾಠ ಹೇಳಲು ಬರುತ್ತಾರೆ. “ಹೊತ್ತಾಗಿ ಹೋಯಿತು. ಬೇಗ ಪುಸ್ತಕ, ಕಾಪಿ ತೆಗೆದುಕೊಂಡು ಬಾ” ಅನ್ನುತ್ತಾರೆ. “ಸರ್, ನಿಮಗೆ ಗೊತ್ತಿಲ್ಲ – ನಾ ಅಪ್ಪನಷ್ಟು ದೊಡ್ಡವ ಈಗ – ಇನ್ನು ಪಾಠಗೀಠ ಓದಬೇಕಾಗಿಲ್ಲ” ಎಂದು ಹೇಳಿಬಿಡುತ್ತೇನೆ. ಮೇಷ್ಟ್ರೀಗೆ ಆಶ್ಚರ್ಯ!” ದೊಡ್ಡವನಾದ ಮೇಲೆ ಇನ್ನು ತನ್ನ ಈ ಪಾಠಗಳನ್ನು ಓದಬೇಕಾಗಿಲ್ಲ” ಎಂದು ಹೊರಟು ಹೋಗುತ್ತಾರೆ. ಆಮೇಲೆ ದೊಡ್ಡವರಂತೆ ನಾನೇ ಬಟ್ಟೆ ಹಾಕಿಕೊಂಡು ಒಬ್ಬನೇ ಪೇಟೆಗೆ ಹೋಗುತ್ತೇನೆ. ಅಲ್ಲಿ ಜನಗಳ ಗದ್ದಲವೋ ಗದ್ದಲ. ಚಿಕ್ಕಪ್ಪ ಅಲ್ಲಿ ನನ್ನನ್ನು ಕಂಡು ಗಾಬರಿಯಿಂದ ಧಾವಿಸಿ ಬಂದು, “ಮಗು ಈ ಗಲಾಟೆಯಲ್ಲಿ ತಪ್ಪಿಸಿಕೊಳ್ಳುತ್ತೀ. ಬಾ, ಮನೆಗೆ ಕರೆದೊಯ್ಯುತ್ತೇನೆ” ಎಂದು ಹೇಳೂತ್ತಾನೆ. “ಚಿಕ್ಕಪ್ಪ! ಕಾಣುವುದಿಲ್ಲವೇ – ನಾನು ಅಪ್ಪನಂತೆ ಈಗ ದೊಡ್ಡವನಾಗಿದ್ದೇನೆ. ಒಬ್ಬನೇ ನಾನು ಜಾತ್ರೆಗೆ ಹೋಗಿಬರಬಲ್ಲೆ”. “ಅರೆ, ಇವನು ದೊಡ್ಡವನಾಗಿದ್ದಾನೆ. ಎಂದ ಮೇಲೆ ಒಬ್ಬನೇ ಎಲ್ಲಿ ಬೇಕಾದರಲ್ಲಿ ಹೋಗಿ ಬರಬಲ್ಲ!” ಎಂದು ಚಿಕ್ಕಪ್ಪ ಹೇಳಿಕೊಡುತ್ತಾನೆ.

“ಮತ್ತೆ, ಅಮ್ಮ ಸ್ನಾನ ಮುಗಿಸಿ ಬಚ್ಚಲಲ ಮನೆಯಿಂದ ಈಚೆ ಬಂದಾಗ, ನಾನು ಮನೆಯ ಆಳಿಗೆ ಸಂಗಳ ಕೊಡುತ್ತಿರುತ್ತೇನೆ. ನನ್ನ ಬಳಿ ಇರುವ ಬೀಗದ ಕೈಯಿಂದ ಹಣದ ಪೆಟ್ಟಿಗೆ ತೆರೆಯಲು ನನಗೆ ಗೊತ್ತು – ಏಕೆಂದರೆ ನಾನು ದೊಡ್ಡವನಾಗಿಲ್ಲವೇ? ಅಮ್ಮ ರೇಗಿ “ಎಂಥಾ ಕಿಡಿಗೇಡಿಯೋ ನೀನು!” ಎಂದು ಬಯ್ಯುತ್ತಾಳೆ. “ಅಲ್ಲಮ್ಮ! ಅಪ್ಪನಷ್ಟು ಈಗ ನಾನು ದೊಡ್ಡವನಾಗಿದ್ದೇನೆ ಎಂಬುದು ನಿನಗೆ ತಿಳಿಯದೇ? ಕೊಡುವವರಿಗೆಲ್ಲ ನಾನೇ ಹಣ ಕೊಡಬೇಕು” ಎಂದು ಗದರುತ್ತೇನೆ. “ದೊಡ್ಡವನಾಗಿದ್ದಾನೆ ಎಂದ ಮೇಲೆ ತನಗೆ ಬೇಕಾದವರಿಗೆ ಇವನು ಹಣ ಕೊಡಬಲ್ಲ” ಎಂದು ಅಮ್ಮ ಗೊಣಗಿಕೊಳ್ಳುತ್ತಾಳೆ.

“ದಸರೆಯ ಹಬ್ಬಕ್ಕೆ ಅಪ್ಪ ಪಟ್ಟಣದಿಂದ ಬರುತ್ತಾನೆ. ನಾನಿನ್ನೂ ಹಿಂದಿನ ಎಳೆಯ ಮಗು ಎಂದು ತಿಳಿದು ಪುಟ್ಟ ಪುಟ್ಟ ಬೂಟ್ಸು, ರೇಶಿಮೆ ಶರ್ಟು ನನಗೆ ತಂದಿರುತ್ತಾನೆ. ಅವನ್ನು ನೋಡಿ ಅಪ್ಪನಿಗೆ ಹೇಳೂತ್ತೇನೆ, “ಇವನ್ನು ಅಣ್ಣನಿಗೆ ಕೊಟ್ಟು ಬಿಡು. ನನಗೆ ಸಾಲವು. ಏಕೆಂದರೆ ನಾನೂ ನಿನ್ನಂತೆ ದೊಡ್ಡವನಾಗಿದ್ದೇನೆ” ಅಪ್ಪ ಮೂಗಿನ ಮೇಲೆ ಬೆರಳಿಟ್ಟುಕೊಂಡು, “ದೊಡ್ಡವನೆಂದ ಮೇಲೆ ತನ್ನ ಬಟ್ಟೆ ತಾನೇ ತರಬಲ್ಲ” ಎಂದು ನಕ್ಕುಬಿಡುತ್ತಾನೆ….”

ಆಮೇಲೆ?”

“ಇಲ್ಲಿಗೆ ಕಥೆ ಮುಗೀತಮ್ಮ”

ಇನ್ನೂ ಇದ್ದರೆ ಎಷ್ಟು ಚೆನ್ನಾಗಿತ್ತು! ಕೇಳುತ್ತಲೇ ಇರಬೇಕು, ಕಥೆ ಮುಗಿಯಲೇಬಾರದಿತ್ತು. ಇದನ್ನು ಬರೆದವರು ಯಾರು, ಅಣ್ಣ”?

“ರವೀಂದ್ರನಾಥ ಠಾಕೂರ್ ಅಂತ. ಗಾಂಧೀ ತಾತ ಗೊತ್ತಲ್ಲ. ಅವರು ಈ ಠಾಕೂರರನ್ನು “ಗುರುದೇವ” ಎಂದು ಕರೆಯುತ್ತಿದ್ದರು. ಇವರು ನಮ್ಮ ದೇಶದ ಬಹು ದೊಡ್ಡ ಕವಿ. “ಕವೀಂದ್ರ” ಎಂದೆನಿಸಿಕೊಂಡರು. ಪ್ರಪಂಚದಲ್ಲಿಯೇ ಅತಿ ದೊಡ್ಡ ಬಹುಮಾನ ಅಂದರೆ ನೊಬೆಲ್ ಪಾರಿತೋಷಕ. ಇವರ “ಗೀತಾಂಜಲಿ” ಎಂಬ ಕವನ ಸಂಗ್ರಹಕ್ಕೆ ಆ ಬಹುಮಾನ ಸಿಕ್ಕಿತು. ಅಂದಿನಿಂದ ಇವರು ವಿಶ್ವಕವಿ. ರವೀಂದ್ರರ ಕಥೆ ಬಹು ದೊಡ್ಡ ಜೀವನದ ಕತೆ”.

“ಅದನ್ನು ಹೇಳಣ್ಣ”

“ಆಗಲಮ್ಮ!”

ಬೆರಗುಗೊಳಿಸುವ ಮನೆತನ

ರವೀಂದ್ರರು ಠಾಕೂರ್ ರ ಮನೆತನದ ಹದಿನೇಳನೆಯ ಶತಮಾನದಿಂದಲೂ ಭಾರಿ ಶ್ರೀಮಂತರು ಎಂದು ಪ್ರಸಿದ್ಧಿ ಪಡೆದ ಮನೆತನ. ರವೀಂದ್ರರ ಅಜ್ಜ (ತಂದೆಯ ತಂದೆ) ದ್ವಾರಕಾನಾಥ ಠಾಕೂರ್ ಎಂಬುವರ ಕಾಲಕ್ಕಂತೂ ಈ ಮನೆತನ ಶ್ರೀಮಂತಕೆಯ ಶಿಖರಕ್ಕೇರಿತು. ಇವರ ರೂಪ, ಔದಾರ್ಯ ಮತ್ತು ಗಾಂಭೀರ್ಯ – ಇವನ್ನು ಕಂಡು ಜನ ಇವರನ್ನು ರಾಜರೆಂದೇ ಗೌರವಿಸುತ್ತಿದ್ದರು. ಇವರು ಯಾವಾಗಲೂ ರಾಜಠೀವಿಗೆ ತಕ್ಕಂತೆ ವರ್ತಿಸುತ್ತಿದ್ದರು. ಕೊಡುಗೈ ದೊರೆಯಾಗಿ ಸಾರ್ವಜನಿಕ ಸಂಘ, ಸಂಸ್ಥೆಗಳಿಗೆ ದಾನ ನೀಡುತ್ತಿದ್ದರು. ನ್ಯಾಷನಲ್ ಲೈಬ್ರರಿ, ಹಿಂದು ಕಾಲೇಜು (ಮುಂದೆ ಇದು ಪ್ರೆಸಿಡೆನ್ಸಿ ಕಾಲೇಜು ಎಂದು ಪ್ರಸಿದ್ಧಿಕ ಪಡೆಯಿತು), ಮೆಡಿಕಲ್ ಕಾಲೇಜು ಆಸ್ಪತ್ರೆ ಮುಂತಾದವುಗಳಿಗೆಲ್ಲ ಇವರ ದತ್ತಿ ಕಾಣಿಕೆ ಸಂದಿವೆ. ಇವರು ಬಹು ವ್ಯವಹಾರ ಚತುರರೂ ಕೂಡ. ಹಲವು ಬಗೆಯ ವ್ಯವಹಾರಗಳಲ್ಲಿ ಬಹು ದೊಡ್ಡ ಶ್ರೀಮಂತರಾದರು.

ಆಧುನಿಕ ಭಾರತದ ಜನಕ ಎಂದು ರಾಜಾ ರಾಮ ಮೋಹನರಾಯರು ಚರಿತ್ರೆಯಲ್ಲಿ ಪ್ರಸಿದ್ಧರಾಗಿದ್ದಾರೆ. ಹಿಂದೂ ಸಮಾಜದ ಸುಧಾರಣೆಗಾಗಿ ರಾಮಮೋಹನ ಅವರು ೧೮೨೮ ರಲ್ಲಿ ಸ್ಥಾಪಿಸಿದ “ಬ್ರಹ್ಮ ಸಮಾಜಕ್ಕೆ” ಠಾಕೂರರು ಬಲವಾದ ಬೆಂಬಲ ನೀಡಿದರು. ಬ್ರಹ್ಮ ಸಮಾಜವೆಂಬುದು ಒಂದು ಪಂಥ. ಇಲ್ಲಿ ಜಾತಿ, ಮತ ಎಂಬ ತಾರತಮ್ಮ ಇರಲಿಲ್ಲ. ದ್ವಾರಕಾನಾಥರ ಬೆಂಬಲದಿಂದಾಗಿ ಈ ಸಮಾಜ ಭಾರತದಲ್ಲೆಲ್ಲ ಹರಡಿತು.

ದ್ವಾರಕಾನಾಥರು ಘನವಂತರು ಹಾಗೂ ಪುಣ್ಯವಂತರು. ಇಂಗ್ಲೆಂಡಿಗೂ ಹೋಗಿ ಬಂದವರು. ಹಿಂದೂ ಧರ್ಮದಲ್ಲಿ ನುಗ್ಗಿ ಬಂದ ಕುರುಡು ರೂಢಿ – ನಂಬಿಕೆಗಳ ನಿಮೂಲನಕ್ಕೆ ಇವರು ಹೆಣಗಾಡಿದರು. ಇವರಿಗೆ ೧೮೧೭ ರಲ್ಲಿ ಒಬ್ಬ ಮಗ ಜನಿಸಿದ. ಈ ಮಗನೇ ರವೀಂದ್ರನಾಥರ ತಂದೆ – ದೇವೇಂದ್ರನಾಥ ಠಾಕೂರರು. ಅವರೂ ಕೂಡ ತಮ್ಮ ತಂದೆಯಂತೆ ಬ್ರಹ್ಮ ಸಮಾಜದ ಶ್ರದ್ಧಾವಂತ ಕಾರ್ಯಕರ್ತರು. ಹೆಚ್ಚಾಗಿ ಅವರ ಒಲವು ವೈರಾಗ್ಯದ ಕಡೆಗೆ. ಸದಾ ಧ್ಯಾನ, ಚಿಂತನೆಗಳಲ್ಲಿ ಕಾಲ ಕಳೆಯುವುದು ಅವರ ಹವ್ಯಾಸವಾಗಿತ್ತು. ಅವರಿಗೆ ಸಂಸ್ಕೃತದಲ್ಲಿ, ಹಿಂದೂ ಧರ್ಮಶಾಸ್ತ್ರಗಳಲ್ಲಿ ಅಪಾರವಾದ ಜ್ಞಾನವಿತ್ತು. ಇಂಗ್ಲೆಂಡಿಗೆ ಹೋದ ದ್ವಾರಕಾನಾಥರು ಅಲ್ಲಿಯೇ ಮರಣ ಹೊಂದಿದರು. ಅವರು ಬಹಳ ಹಣ ಸಂಪಾದಿಸಿದರೂ ಖರ್ಚಿನ ಮೇಲೆ ಹಿಡಿತವಿರಲಿಲ್ಲ. ಅವರು ಸತ್ತಾಗ ಅವರ ಸಾಲ ಸುಮಾರು ಒಂದು ಕೋಟಿ ರಾಪಾಯಿಗಳಂತೆ! ಆಸ್ತಿ ನೂರು ಆನೆಗಳ ತಲೆಯಷ್ಟಾಗಿದ್ದರೆ, ಸಾಲ ಸಾವಿರಾನೆಯ ತಲೆಯಷ್ಟಾಗಿತ್ತು. ಹೀಗಾಗಿ ಮಗ ದೇವೇಂದ್ರನಾಥರು ಅನೇಕ ಕಷ್ಟಗಳಿಗೆ ತಲೆ ಕೊಡಬೇಕಾಯಿತು. ತಮ್ಮ ಬುದ್ಧಿವಂತಿಕೆ ಹಾಗೂ ಪ್ರಾಮಾಣಿಕತೆಗಳಿಂದ ಬೇಗ ಋಣಮುಕ್ರರಾದರು. ಅವರ ಸಾತ್ವಿಕ ವರ್ತನೆ, ವೈರಾಗ್ಯ ಬುದ್ಧಿ, ಧ್ಯಾನ, – ಚಿಂತನೆ, ತೀರ್ಥಕ್ಷೇತ್ರ ಯಾತ್ರೆ, ಹಿಮಾಲು ಯಾತ್ರೆಗಳಿಂದ ಗಳಿಸಿಕೊಂಡ ನಿರ್ಲಿಪ್ತ ಭಾವ – ಇವುಗಳನ್ನು ನೋಡಿ ಜನ ಅವರನ್ನು “ಮಹರ್ಷಿ” ಎಂದು ಗೌರವಿಸುತ್ತಿದ್ದರು. ಇವರ ಪತ್ನಿ ಶಾರದಾದೇವಿ. ಅವರ ಹದಿನಾಲ್ಕನೆಯ ಮಗು (ಎಂಟನೆಯ ಮಗ) ರವಿಂದ್ರನಾಥ ಠಾಕೂರರು ಕಲ್ಕತ್ತೆಯ ಸ್ವಗೃಹವಾದ “ಜೋರಾಸಾಂಕೊ” ದಲ್ಲಿ, ೧೮೬೧ ರ ಮೇ ೬ ನೇಯ ದಿನಾಂಕದಂದು ಜನ್ಮ ತಾಳಿದರು.

ಬಾಲರವಿ

ರವೀಂದ್ರರ ಮನೆ ಅರಮನೆಯಂಥ ಮನೆ. ಠೀವಿ – ರೀತಿಗಳೂ ಹಾಗೆಯೇ. ರವಿ ಹುಟ್ಟುವಾಗಲೇ ಅಣ್ಣಂದಿರು ದೊಡ್ಡವರಾಗಿ ಸಂಸಾರಿಗಳಾಗಿದ್ದರು. ಒಬ್ಬ ಅಣ್ಣ ಇಂಡಿಯನ್ ಸಿವಿಲ್ ಸರ್ವೀಸಿಗೆ ಸೇರಿದ ಮೊದಲ ಭಾರತೀಯ; ಇನ್ನೊಬ್ಬ ಅಣ್ಣ ಪ್ರಸಿದ್ಧ ದರ್ಶನ ಶಾಸ್ತ್ರಜ್ಞ; ಮತ್ತೊಬ್ಬ ಅಣ್ಣ ಪ್ರತಿಭಾವಂತ ಕಲಾವಿದ. ಶ್ರೀಮಂತಿಕೆಯ ಆಢ್ಯತೆ ಸಹಜವಾಗಿಯೇ ಈ ಮನೆಯಲ್ಲಿ ತಾಂಡವವಾಡುತ್ತಿತ್ತು. ಆಳು – ಕಾಳು, ಕಾರಕೂನರ ಕಾರಭಾರ ಇಲ್ಲಿ ತಾನೇತಾನಾಗಿತ್ತು. ಮನೆಯ ಯಜಮಾನರಲ್ಲಿ ಭಾರತದ ಪುನರುಜ್ಜೀವನದ ವಿದ್ಯುತ್ ಸಂಚಾರ ವಾಗತೊಡಗಿದ್ದರೆ, ಮನೆಯಲ್ಲಿ ಒಬ್ಬರಿಗೊಬ್ಬರ ಸಂಪರ್ಕ ಇಲ್ಲದಂತೆ ಇತ್ತು. ಇದರಿಂದಲೇ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ರವಿ ಬಹಳಷ್ಟು ಏಕಾಕಿತನವನ್ನು ಅನುಭವಿಸಬೇಕಾಯಿತು.

ದೊಡ್ಡವರ ಮನೆಯಲ್ಲಿ ಸಾಮಾನ್ಯವಾಗಿ ಮಕ್ಕಳನ್ನು ಸೇವಕರೇ ನೋಡಿಕೊಳ್ಳಬೇಕು. ರವಿಯನ್ನು ಶ್ಯಾಮ ಎಂಬ ಸೇವಕ ನೋಡಿಕೊಳ್ಳುತ್ತಿದ್ದ. ಮನೆಯವರಿಗೆ ಸೇವಕರ ಕೆಲಸದ ಕಡೆಗೆ ಗಮನ ಹರಿಸುವಷ್ಟು ಸಮಯವೆಲ್ಲಿ? ಹೀಗಾಗಿ ಶ್ಯಾಮ ಒಂದು ಬಗೆಯ ಸ್ವೇಚ್ಛೆಯಿಂದ ವರ್ತಿಸುತ್ತಿದ್ದ. ಈತ ರವಿಯನ್ನು ಒಂದು ಸ್ಥಳದಲ್ಲಿ ಕುಳ್ಳಿರಿಸಿ, ಸುತ್ತ ಗೆರೆ ಹಾಕಿ, ಈ ಗೆರೆ ದಾಡಿದರೆ ಅಪಾಯ ಎಂದು ಹೆದರಿಸಿ, ತನ್ನ ಮನ ಬಂದತ್ತ ಹೋಗಿ ಬಿಡುತ್ತಿದ್ದ. ಬಾಲ ರವಿಗೆ ಈ ಗೆರೆ ದಾಡಲು ಹೆದರಿಕೆ. “ಏನಾದರೂ ಅಪಾಯ ಸಂಭವಿಸಿದರೆ….?” ಅಲ್ಲಿಯೇ ಕುಳಿತು, ನೆಟ್ಟ ದೃಷ್ಟಿಯಿಂದ ಕಿಟಕಿಯ ಹೊರಗೆ ನೋಡುತ್ತಿದ್ದ – ಕಿಟಕಿಯಾಚೆ ಒಂದು ಹೊಲ, ಅಲ್ಲಿ ಒಂದು ಕೊಳ, ಒಂದು ಆಲದ ಮರ. ಜನ ಬರುತ್ತಿದ್ದರು. ಸ್ನಾನ ಮಾಡುತ್ತಿದ್ದರು; ಒಂದು ಮುಳುಗು ಹಾಕುವವರು; ಪಾಚಿ ತಳ್ಳಿ ಈಜುವವರು – ಆಮೇಲೆ ಎಲ್ಲರೂ ಹೊರಟು ಹೋಗುವರು. ಇದನ್ನೆಲ್ಲ ನೋಡುತ್ತ ನೋಡುತ್ತ ಏಕಾಕಿತನದ ಬಂದಿಯಾದ ರವಿ ಸಹಜವಾಗಿ ಅಂತರ್ಮುಖಿಯಾಗತೊಡಗಿದ. ಕನಸುಗಳಲ್ಲಿ ವಿಹರಿಸಿದ. ಹೀಗೆ ಈತ ಪ್ರಕೃತಿಯ ಶಿಶು ಆಗಿ ಬೆಳೆಯತೊಡಗಿದ ಮತ್ತು ಮಾನವ ಸಹಜ ಚಟುವಟಿಕೆಗಳನ್ನು ಗಮನಿಸತೊಡಗಿದ. ರವೀಂದ್ರರ ವ್ಯಕ್ತಿತ್ವ ನಿರ್ಮಾಣದಲ್ಲಿ ಇದು ಮುಖ್ಯ ಅಂಶ.

ಬಾಲರವಿ ಕಿಟಕಿಯಾಚೆಯ ಜಗತ್ತನ್ನು ನೋಡುತ್ತಿದ್ದ

“ಜೋರಾಸಾಂಕೊ” ದೊಡ್ಡ ಮನೆ. ಹೆಬ್ಬಾಗಿಲಿಗೆ ಬರಬೇಕಾದರೆ, ಅನೇಕ ಬಾಗಿಲುಗಳನ್ನು ದಾಡಿ ಬರಬೇಕು. – ಏಳು ಸುತ್ತಿನ ಕೋಟೆಯ ಹಾಗೆ. ಮನೆ ತುಂಬ ಸೇವಕರು, ಕಾರಕೂನರು, ಖಜಾಂಚಿ ಮತ್ತಿತರರು. ಕೈಲಾಸ ಎಂಗ ಖಜಾಂಚಿ ಸ್ವಲ್ಪ ರಸಿಕ, ಋಷಿ ಮನದವ, ಅವನು ನಾಯಕ. ನಾಯಕಿ ಒಬ್ಬಳನ್ನು ಹುಡುಕಿಕೊಂಡು ಹೋಗುತ್ತಾನೆ. ರವಿಯ ಮುಂದೆ ಕೈಲಾಸ ಈ ಪದ್ಯವನ್ನು ರಾಗಬದ್ಧವಾಗಿ ಹೇಳಿದ್ದೇ ಹೇಳಿದ್ದು. ರವಿಗೆ ಕೌತುಕ – ಪ್ರಾಸಬದ್ಧವಾಗಿ ಬಂದ ಮಾತುಗಳನ್ನು ಕೇಳಿ. ಈ ಪದ್ಯದಲ್ಲಿಯ ಪ್ರಾಸ ಅವನ ಮನಸ್ಸಿನಲ್ಲಿ ನೆಟ್ಟು ನಿಂತಿತು.

ಈಶ್ವರ ಎಂಬ ಸೇವಕ ರವಿಗೆ ರಾಮಾಯಣ, ಮಹಾಭಾರತಗಳ ಅನೇಕ ಕಥೆಗಳನ್ನು ಹೇಳುತ್ತಿದ್ದ. ಕಿಶೋರಿ ಚಟರ್ಜಿ ಎಂಬ ಇನ್ನೊಬ್ಬನಿದ್ದ. ನಮ್ಮಲ್ಲಿ ಯಕ್ಷಗಾನಗಳಿಲ್ಲವೇ, ಹಾಗೆ ಬಂಗಾಲಿಯಲ್ಲಿರುವ “ಪಾಂಚಾಲಿ” ಯನ್ನು ವೇಗವಾಗಿ, ರಾಗಬದ್ಧವಾಗಿ ಹೇಳುತ್ತಿದ್ದ. ಅದರಲ್ಲಿ ಬರುವ ಪ್ರಾಸಂಗಳಿಂದ ರವಿ ಮುಗ್ಧನಾಗಿಬಿಡುತ್ತಿದ್ದ. ಆಳುಗಳ ಆಡಳಿತದಲ್ಲಿ ಬೆಳೆಯುತ್ತಿದ್ದ ರವಿಯ ಒಡನಾಡಿಯೆಂದರೆ ಅವನ ಅಕ್ಕನ ಮಗಳಾದ ಇರಾವತಿ. ಒಮ್ಮೆ ಈಗೆ “ಈನಮ್ಮ ಮನೆಯಲ್ಲಿ ರಾಜನ ಮನೆ ಒಂದಿದೆ” ಎಂದು ಹೇಳಿ, ರವಿಯ ಕೌತುಕವನ್ನು ಬಹಳ ಕೆರಳಿಸಿದ್ದಳು. ಹೀಗೆ ಬಾಲ ರವಿಯ ಮನಸ್ಸು ಕೌತುಕಗಳ ಕಣಜವಾಗಿತ್ತು.

ವಿದ್ಯಾಭ್ಯಾಸ

ಬಾಲರವಿ ಬೆಳೆಯುತ್ತಿದ್ದಂತೆ, ಅಣ್ಣ ಸೋಮೇಂದ್ರನಾಥ ಹಾಗೂ ಅಕ್ಕನ ಮಗ ಸತ್ಯೇಂದ್ರನಾಥರಂತೆ ತಾನೂ ಶಾಲೆಗೆ ಹೋಗಲು ಹಠ ಹಿಡಿಯತೊಡಗಿದ. ಅವರೊಂದಿಗೆ ಈತನನ್ನೂ “ಓರಿಯಂಟಲ್ ಸೆಮಿನರಿ”ಗೆ ಕಳಿಸತೊಡಗಿದರು. ಅಲ್ಲಿ ತರಗತಿ ಪ್ರಾರಂಭ ಆಗುವ ಮೊದಲು ಎಲ್ಲರೂ ಗ್ಯಾಲರಿಯಲ್ಲಿ ನಿಂತು ಇಂಗ್ಲಿಷ್ ಹಾಡು ಹೇಳಬೇಕು. “ಕಲ್ಲೋಕೀ ಪುಲ್ಲೋಕೀ ಸಿಂಗಲ್ ಮೆಲಾಲಿಂಗ್ ಮೆಲಾಲಿಂಗ್ ಮೆಲಾಲಿಂಗ್” ಎಂದು ರವೀಂದ್ರನೂ ಅವನ ಗೆಳೆಯರೂ ಹಾಡಿದ್ದೊ ಹಾಡಿದ್ದೆ.

ಎಷ್ಟೋ ವರ್ಷಗಳಾದ ಮೇಲೆ ಈ ಹಾಡನ್ನು ಕವಿ ಜ್ಞಾಪಿಸಿಕೊಂಡರು. ಅವರಿಗೆ ಆಶ್ಚರ್ಯವಾಯಿತು. ತಾವು ಆ ಶಾಲೆಯಲ್ಲಿ ಓದುತ್ತಿದ್ದಾಗ ಹೇಳಿಕೊಡುತ್ತಿದ್ದುದು ಇಂಗ್ಲೀಷ್ ಭಾಷೆಯ ಹಾಡಲ್ಲವೇ? “ಕಲ್ಲೋಕೀ ಪುಲ್ಲೋಕೀ ಸಿಂಗಲ್ ಮೆಲಾಲಿಂಗ್” ಯಾವುದೋ ಇಂಗ್ಲೀಷ್ ಪದ ಅಲ್ಲವಲ್ಲ!.

ಎಷ್ಟೋ ಕಷ್ಟಪಟ್ಟು ತಮಗೆ ಹೇಳಿಕೊಡುತ್ತಿದ್ದ ಹಾಡು ಯಾವುದು ಎಂದು ಕಂಡುಹಿಡಿದರು – “ಪುಲ್ ಆಫ್ ಗ್ಲೀ, ಫುಲ್ ಆಫ್ ಗ್ಲೀ, ಸಿಂಗಿಂಗ್ ಮೆರಿಲಿ ಮೆರಿಲಿ” (ಉಲ್ಲಾಸವಾಗಿ, ಖುಷಿಯಾಗಿ ನಾವು ಹಾಡುತ್ತೇವೆ)! ಹೇಳಿಕೊಡುವ ಉಪಾಧ್ಯಾಯರೂ ಹುಡುಗರಿಗೆ ಅರ್ಥ ಹೇಳಲಿಲ್ಲ. ಹುಡುಗರು ತಮ್ಮ ಕಿವಿಗೆ ಕೇಳಿದ ಹಾಗೆ ಕಂಠಪಾಠ ಮಾಡಿದರು.

ನಮ್ಮ ದೇಸ ಎಷ್ಟು ಶಾಲೆಗಳಲ್ಲಿ ಪಾಠ ಹೇಗೆ ಹೇಳಿಕೊಡುತ್ತಾರೆ ಎಂಬುದಕ್ಕೆ ರವೀಂದ್ರರು ಎಷ್ಟೋ ಬಾರಿ ತಮ್ಮ ಈ ಅನುಭವವನ್ನೆ ವರ್ಣಿಸುತ್ತಿದ್ದರು.

ಶಾಲೆಯಲ್ಲಿ ಕೊಡುತ್ತಿದ್ದ ಶಿಕ್ಷೆ ಹುಡುಗನಲ್ಲಿ ಬಲವಾದ ಭೀತಿ ಮೂಡಿಸಿರಬೇಕು. ಮನೆಗೆ ಬಂದು ತಾನು ಮೇಷ್ಟ್ರಾಗಿ ಕೈಯಲ್ಲಿ ಬೆತ್ತ ಹಿಡಿದುಕೊಂಡು, ಕಟೆಕಟೆಗಳಿಗೆ ರಪರಪ ಹೊಡೆಯುತ್ತ, ಶಾಲೆಯಲ್ಲಿ ಪಾಠ ಹೇಳುವಂತೆ ಹೇಳಿಕೊಡುತ್ತಿದ್ದ ಹಾಗೂ ಹೀಗೊ ಒಂದು ವರ್ಷ ಈ ಶಾಲೆಯಲ್ಲಿ ಓದಿ, ಮುಂದೆ ನಾರ್ಮಲ್ ಸ್ಕೂಲ್ ಸೇರಿದ. ಮನೆಯ ಆಳುಗಳು ತಮ್ಮ ತಮ್ಮೊಳಗೆ ಚರ್ಚಿಸುತ್ತಿದ್ದ, ಹೇಳಿಕೊಳ್ಳುತ್ತಿದ್ದ “ಚಾಣಕ್ಯ ತಂತ್ರ” ದ ಬಂಗಾಳಿ ಅನುವಾದ ಶ್ಲೋಕಗಳ ಹಾಗೂ “ಕೃತ್ತಿವಾಸ ರಾಮಾಯಣ”ದ ಪರಿಚಯದಿಂದ ರವಿಯಲ್ಲಿ ಸಾಹಿತ್ಯದ ಅಭಿರುಚಿ ಮೊಳೆಯಿತು. ಆ ಸಲ, ನಾರ್ಮಲ್ ಸ್ಕೂಲಿನ ಬಂಗಾಳಿ ವಾರ್ಷಿಕ ಪರೀಕ್ಷೆಯಲ್ಲಿ ರವಿ ಮೊದಲ ಸ್ಥಾನ ಗಿಟ್ಟಿಸಿದ.

ಬಾಲಕವಿ

ರವಿ ಕಾವ್ಯ ಪ್ರಪಂಚದಲ್ಲಿ ಕಾಲಿಡಲು ಪ್ರೇರೇಪಿಸಿದ ಶ್ರೇಯಸ್ಸು. ಅವರ ಸೋದರತ್ತೆಯ ಮಗ ಜ್ಯೋತಿ ಪ್ರಕಾಶರದು. ಆಗ ರವಿ ಎಂಟು ವರ್ಷದ ಬಾಲಕ. ಈತ ಒಮ್ಮೆ ರವಿಯನ್ನು ಕರೆದು, “ನೀನು ಪದ್ಯ ಬರೆ” ಎಂದ. ಪದ್ಯ ಹೇಗೆ ಬರೆಯುವುದು? ರವಿ ತಬ್ಬೊಬ್ಬಾದ. ಆತ ರವಿಗೆ ಪಯಾರಾ (೧೪ ಮಾತ್ರೆಗಳ ಛಂದ) ವೃತ್ತ ತಿಳಿಸಿಕೊಟ್ಟು, ಈಗ ಬರೆ ಎಂದು ಹುರಿದುಂಬಿಸಿದ. ಕೆಲ ಮಾತುಗಳನ್ನು ಹಾಗೂ ಹೀಗೊ ಸೇರಿಸಿದ್ದಾಯಿತು –  ಅದು ಪದ್ಯವಾಗಿತ್ತು. ಆಮೇಲೆ ಒಂದು ಖಾಲಿ ಪುಸ್ತಕ ಸಂಪಾದಿಸಿ ಅದರಲ್ಲಿ, ಬರೆದ ಪದ್ಯಗಳನ್ನು ಸಂಗ್ರಹಿಸತೊಡಗಿದ.

ಶಾಲೆಯಲ್ಲಿ ರವಿಯ ಅಭ್ಯಾಸ ಅಷ್ಟು ಚೆನ್ನಾಗಿ ಸಾಗಲಿಲ್ಲ. ಶಾಲೆ ಬಿಡಿಸಿ ಮನೆಯಲ್ಲಿಯೇ ಪಾಠ ಹೇಳಿಸುವ ಏರ್ಪಾಡು ಮಾಡಲಾಯಿತು. ಸತ್ಕಾರ ಬಾಬು ಎಂಬ ಗುರುಗಳು ಪಾಠಕ್ಕೆ ಬರತೊಡಗಿದರು. ಹುಡುಗ ಕವನ ರಚನೆಯ ಸಾಮರ್ಥ್ಯವುಳ್ಳವ ಎಂದು ತಿಳಿದು ಅವರು ತಾವು ಎರಡು ಚರಣ ರಚಿಸಿ, ರವಿಗೆ ಪೂರ್ಣಗೊಳಿಸಲು ಹೇಳುವರು. ಈತ ಅನಾಯಾಸವಾಗಿ ಅದನ್ನು ಪೂರೈಸುವನು. ಸತ್ಕಾರ ಬಾಬು ರವಿಯ ಕಾವ್ಯೋದ್ಯೋಗದಲ್ಲಿ ಎರಡನೆಯ ಗುರು ಎಂದು ಹೇಳಬಹುದು. ಇವರ ಮನೆಯ ಆಶ್ರಿತರಾಗಿದ್ದ ಶ್ರೀಕಂಠ ಬಾಬು ರವಿಯ ಎಳೆಯ ಮಾರ್ದವ ದನಿಯನ್ನು ಗುರುತಿಸಿ, ಹಾಡುವುದನ್ನು ಹೇಳಿಕೊಡತೊಡಗಿದರು. ಧ್ವನಿ ಮಾಧುರ್ಯದ ಅಭ್ಯಾಸ ಆರಂಬವಾಯಿತು. ಬರೆದ ಪದ್ಯಗಳನ್ನು ಧ್ವನಿಯೆತ್ತಿ ಹಾಡುವುದನ್ನು ರವಿ ಪಳಗಿಸಿಕೊಂಡ.

ಮೊದಲಿನಿಂದಲೂ ರವಿಗೆ ತಂದೆಯೆಂದರೆ ಭಕ್ತಿಗಿಂತ ಭಯ ಜಾಸ್ತಿ. ಒಮ್ಮೆ ದೇವೇಂದ್ರನಾಥರು ಹಿಮಾಲಯ ಪ್ರದೇಶದಲ್ಲಿ ಇದ್ದಾಗ, ರಷ್ಯನರು ದಂಡೆತ್ತಿ ಬರುತ್ತಾರೆ. ಎಂಗ ಸುದ್ದಿ ಹಬ್ಬಿಬಿಟ್ಟಿತು. ರವಿಯ ತಾಯಿಗೆ ಗಾಬರಿಯಾಯಿತು. ದೂರ ಪ್ರದೇಶದಲ್ಲಿ ಇರುವ ಗಂಡನ ಬಗ್ಗೆ ಚಿಂತೆ ಆಯಿತು. ರವಿಗೆ ಕಾಗದ ಬರೆಯಲು ಹೇಳಿದರು. ಈತ ಬರೆದ. ತಂದೆ, ಭಯಕ್ಕೆ ಕಾರಣವಿಲ್ಲ ಎಂದು ಉತ್ತರಿಸಿದರು. ತನ್ನ ಪತ್ರಕ್ಕೆ ತಂದೆಯಿಂದ ಉತ್ತರ ದೊರೆತುದರಿಂದ ರವಿಗೆ ಭಯ ತಗ್ಗಿತು. ಭಕ್ತಿ ಹೆಚ್ಚಿತು. ತಂದೆಯ ಸಾಮೀಪ್ಯ ಇನ್ನೂ ಪಡೆಯಲು ಇದು ಕಾರಣವಾಯಿತು.

ಇಷ್ಟರಲ್ಲಿ ರವಿಯ ಉಪನಯನ ಜರುಗಿತು. ಆಮೇಲೆ ತಂದೆಯೊಂದಿಗೆ ಹಿಮಾಲಯಕ್ಕೆ ತೆರಳಿದ. ಈ ಯಾತ್ರಯಲ್ಲಿ ರವಿ, ತಂದೆಯವರಿಂದ ಸಂಸ್ಕೃತ ಪಾಠ ಕಲಿತ. ಭಗವದ್ಗೀತೆಯ, ರಾಮಾಯಣದ ಶ್ಲೋಕಗಳನ್ನು ಕಲಿತ. ಕುಮಾರ ಸಂಭವವನ್ನು ಓದಿದ. ಮ್ಯಾಕ್ ಬೆತ್ ನಾಟಕವನ್ನು ಓದಿಸಿಕೊಂಡು, ಅದನ್ನು ಬಂಗಾಳಿಯಲ್ಲಿ ಬರೆದ. ಆಗ ಜನಪ್ರಿಯ ಪತ್ರಿಕೆಗಳಾಗಿದ್ದ ಅಬೋಧ ಬಂಧು, ವಂಗದರ್ಶನ ಪತ್ರಿಕೆಗಳನ್ನು ತುಂಬ ಆಸೆಯಿಂದ ಓದುತ್ತಿದ್ದ.

ಮನೆಯಲ್ಲಿಯೇ ಪಾಠ ಸಾಗಿತಲ್ಲವೆ? ನೀಲಕಮಲ ಘೋಷಾಲರು ಪದಾರ್ಥ ವಿಜ್ಞಾನ, ಗಣಿತ, ಚರಿತ್ರೆ ಹಾಗೂ ಮೇಘನಾದವಧ ಕಾವ್ಯ, ಭೂಗೋಳ ಹೇಳಿ ಕೊಡುತ್ತಿದ್ದರು. ಅಘೋರ ಬಾಬು ಎಂಬುವರು ಪ್ರತಿ ಭಾನುವಾರ ಸಂಗೀತ ಹೇಳಿಕೊಡುತ್ತಿದ್ದರು. ನಾರ್ಮಲ್ ಸ್ಕೂಲಿನ ಸಾತಕಡಿದತ್ತ ಎಂಬ ಹೆಡ್ ಮಾಸ್ತರರು ಒಮ್ಮೆ ರವಿಗೆ ಒಂದು ಪದ್ಯದ ಎರಡು ಚರಣ ಕೊಟ್ಟು ಪೂರ್ತಿಗೊಳಿಸಲು ಹೇಳಿದರು.

ರವಿ ಕರೇ ಜ್ವಾಲಾ ತನು ಅಛಿಲಸ ಬಾಯಿ
ವರಷಾ ಭರಸಾ ದಿಲ್ ಆರ್ ಭಯ ಸಾಯಿ
(ಸೂರ್ಯನ ಝಳದಿಂದ ಬೇಯುತ್ತಿದ್ದರು,
ಮಳೆ ಬಂದು ಭರವಸಿ ನೀಡಿದೆ, ಇನ್ನು ಭಯವಿಲ್ಲ)

ಇದನ್ನು ರವಿ ಪೂರ್ತಿಗೊಳಿಸಿದ. ಅದರ ಎರಡು ಚರಣಗಳು ಹೀಗಿದ್ದವು –

ಮೀನ್ ಗಣ್ ಹೀನಹಯೆ ಛಿಲ ಸರೋವರೆ
ಏಖತ್ ತಾ ಹಾರಾ ಸುಖೇ ಜಲಕ್ರೀಡಾ ಕರೆ
(ಮೀನುಗಳ ಗುಂಪು ಬಡವಾಗಿದ್ದವು,
ಈಗ ಸರೋವರಗಳಲ್ಲಿ ಜಲಕ್ರೀಡೆ ಆಡುತ್ತಿರುವವು.)

ಇದರಿಂದ ಸುಪ್ರೀತರಾದ ಗೋವಿಂದ ಬಾಬು ಎಂಬ ಮೇಷ್ಟ್ರು, ರವಿಯನ್ನು ಕರೆದು, “ಸುನೀತೆಯ ಕವನ ಒಂದನ್ನು ಬರೆದು ತಾ” ಎಂದು ಹೇಳಿದರು. ಮರುದಿನ ಬರೆದುಕೊಂಡು ಹೋದ ರವಿಯನ್ನು ಲೋಯರ್ ಸೆಕಂಡರಿ ತರಗತಿಗೆ ಕರೆದೊಯ್ದು, “ಇವರೆಗೆಲ್ಲ ಓದಿ ಹೇಳು” ಎಂದರು. ರವಿ ಉಚ್ಛ ಕಂಠದಿಂದ ಓದಿದ. ಹುಡುಗರೆಲ್ಲ “ಇದನ್ನು ಇವನು ಬರೆದೇ ಇಲ್ಲ, ಎಲ್ಲಿಯೋ ಕದ್ದು ತಂದಿದ್ದಾನೆ” ಎಂದು ಗುಸುಗುಸು ಆರಂಭಿಸಿದರು. ಆದರೆ ನಿಜವಾಗಿ ಅದು ರವಿಯ ಸ್ವಂತ ರಚನೆಯೇ.

ತರುಣ ಕವಿ

ರವೀಂದ್ರನ ಕಾವ್ಯ ಪ್ರತಿಭೆಯನ್ನು ಗುರುತಿಸಿದ ಅವನಣ್ಣ ಜ್ಯೋತಿರಿಂದ್ರರು ಅವನಿಗೆ ಸಾಕಷ್ಟು ಪ್ರೋತ್ಸಾಹ ನೀಡದರು. ಅವರ ಮನೆಯೆಂದರೆ ಸಾಹಿತ್ಯ – ಸಂಗೀತ ಚಟುವಟಿಕೆಗಳ ಜೇನುಗೂಡು. ಅಲ್ಲಿ ನಡೆಯುತ್ತಿದ್ದ “ಮಜ್ಲಿಸ್” ನಾಡಕ – ಪ್ರಹಸನಗಳ ತಾಲೀಮು. ಸಂಗೀತ ಮಟ್ಟುಗಳಿಗೆ ಪದ ಜೋಡಿಸುವ ಕ್ರಮ, ಕಾವ್ಯ ವಾಚನ – ಚರ್ಚೆ ಇವುಗಳಿಂದ ಬಾಲರವಿಗೆ ಬಹಳ ಪ್ರಯೋಜನ ಆಯಿತು. ಇದೇ ವೇಳೆಗೆ “ಜ್ಞಾನಾಂಕುರ” ಎಂಬ ಪತ್ರಿಕೆ ಪ್ರಾರಂಭವಾಯಿತು. ಇದರಲ್ಲಿ ರವೀಂದ್ರನ ಪದ್ಯಗಳೆಲ್ಲ ಪ್ರಕಟವಾದವು. ರವೀಂದ್ರನದು ಅಸಾಧಾರಣ ಪ್ರತಿಭೆ. ಒಮ್ಮೆ ಇವನು ಪದ್ಯಗಳ ಕಟ್ಟೊಂದನ್ನು ತೆಗೆದುಕೊಂಡು ಒಬ್ಬ ಸಾಹಿತ್ಯ ವಿಮರ್ಶಕರ ಬಳಿ ಹೋದನು. ಅವರು ಅವುಗಳನ್ನು ನೋಡುತ್ತ ಕೇಳಿದರು:

ಶಾಂತಿನಿಕೇತನದಲ್ಲಿ ರವೀಂದ್ರರು

“ರವಿ, ಇವು ಯಾರ ರಚನೆಳ ನಿನಗೆಲ್ಲಿ ಸಿಕ್ಕಿದವು?”

“ಯಾರ ರಚನೆಯೋ ಗೊತ್ತಿಲ್ಲ, ಹಳೆಯ ಪುಸ್ತಕದಲ್ಲಿ ಸಿಕ್ಕವು”.

“ಅಬ್ಬಾ! ಎಷ್ಟು ಸುಂದರ ರಚನೆಗಳು! ಈ ಗೀತೆಗಳು ಚಂಡೀದಾಸ, ವಿದ್ಯಾಪತಿಗಳ ಗೀತೆಗಳಿಗಿಂತ ಸುಂದರ ರಚನೆಗಳು ಇವನ್ನು ಬರೆದವರು ಯಾರೋ….” (ಚಂಡೀದಾಸ, ವಿದ್ಯಾಪತಿ ಹಿಂದಿನ ಪ್ರಸಿದ್ಧ ಕವಿಗಳು)

“ನಿಜ ಹೇಳಬೇಕೆಂದರೆ, ಇವುಗಳನ್ನು ನಾನೇ ಬರೆದಿದ್ದೇನೆ. ಹಿಂದಿನವರು ಬರೆದಂತೆ ಬರೆದರೆ ಹೇಗಿರುತ್ತದೆ. ನೋಡೋಣ ಎಂದು ಬರೆದೆ” – ರವಿ ಹೇಳಿದ. ಆ ವಿಮರ್ಶಕರು ಝರನೆ ಇಳಿದು ಹೋದರು.

ಮುಂದೆ ರವೀಂದ್ರರು, ಅವನ್ನು “ಭಾರತಿ” ಎಂಬ ಪತ್ರಿಕೆಯಲ್ಲಿ ಭಾನುಸಿಂಹನ ಗೀತೆಗಳು ಎಂದು ಪ್ರಕಟಿಸಿದರು. ಇವುಗಳ ಖ್ಯಾತಿ ಎಷ್ಟು ಬೆಳೆಯಿತೆಂದರೆ ನಿಶೀಕಾಂತ ಎಂಬುವರು ಈ ಮಾಯಾಕವಿಯ ಮೇಲೆ ನಿಬಂಧ ಬರೆದು ಡಾಕ್ಟರೇಟ್ ಪದವಿ ಗಳಿಸಿಕೊಂಡರು.

ಈ “ಭಾರತಿ” ಪತ್ರಿಕೆ ಇವರ ಅಣ್ಣ ಆರಂಭಿಸಿದ್ದರು, ರವೀಂದ್ರನೂ ಅದರ ಸಂಪಾದಕ ಮಂಡಲಿಯಲ್ಲಿ ಒಬ್ಬನಾಗಿ, ವಿಮರ್ಶಾ ಲೇಕನಗಳನ್ನು ಬರೆಯತೊಡಗಿದ. ಆಗ ಇವನ ವಯಸ್ಸು ಕೇವಲ ಹದಿನಾರು ವರ್ಷ!

ಇಂಗ್ಲೆಂಡಿನಲ್ಲಿ – ಮತ್ತೆ ಭಾರತಕ್ಕೆ

ಇವನ ಅಣ್ಣ ಸತ್ಯೇಂದ್ರನಾಥರು ಇಂಗ್ಲೆಂಡಿಗೆ ತೆರಳುವಾಗ ರವೀಂದ್ರನನ್ನು ಜೊತೆಗೆ ಕರೆದುಕೊಂಡು ಹೊರಟರು. ಪ್ರಯಾನದುದ್ದಕ್ಕೂ ಟತ್ತಿಗೆಯ ಸಾನ್ನಿಧ್ಯ ರವೀಂದ್ರನಿಗೆ ಬಹು ಅಪ್ಯಾಯಮಾನವಾಗಿತ್ತು. ಇಂಗ್ಲೆಂಡ್ ತಲುಪಿದ ಮೇಲೆ ಬೈಟನ್ ಎಂಬಲ್ಲಿ ರವಿಯನ್ನು ಶಾಲೆಗೆ ಹಾಕಿದರು. ಶಾಲೆಯ ಮುಖ್ಯೋಪಾಧ್ಯಾಯರು ರವಿಯ ಮೇಧಾಶಕ್ತಿಗೆ ಬೆರಗಾಗಿ, “ಎಂಥ ಪ್ರಚಂಡ ಬುದ್ಧಿಮತ್ತೆ!” ಎಂದು ಉದ್ಗಾರ ತೆಗೆದರಂತೆ. ಇಲ್ಲಿಯ ಓದು ಏಕೋ ಸರಿಹೋಗಲಿಲ್ಲ. ರವಿಯನ್ನು ಲಂಡನಿಗೆ ಕಳಿಸಿ, ಅಲ್ಲಿ ವಿಶ್ವವಿದ್ಯಾಲಯದ ಶಾಲೆಗೆ ಸೇರಿಸಿದರು. ಇಂಗ್ಲಿಷ್ ಮತ್ತು ಲ್ಯಾಟಿನ್ ಭಾಷೆಗಳ ಅಭ್ಯಾಸ ನಡೆಯಿತು. ಅಲ್ಲಿದ್ದಾಗ “ಭಾರತದಲ್ಲಿ ಬ್ರೀಟಿಷರು” ಎಂಬ ಪ್ರಬಂಧ ಬರೆದರು. ಇವರ ಪ್ರೊಫೆಸರರು ಆ ಪ್ರಬಂಧವನ್ನು ಎಲ್ಲರಿಗೂ ಓದಿ ಹೇಲಿ, ಅದರಲ್ಲಿಯ ಆಲೋಚನೆಗಳನ್ನು ಗಮನಿಸಲು ಸೂಚಿಸಿದರಂತೆ. ಎರಡು ವರ್ಸ ಅಭ್ಯಸಿಸಿದ ನಂತರ ೧೮೮೦ ರಲ್ಲಿ ರವೀಂದ್ರರು ಭಾರತಕ್ಕೆ ಮರಳಿ, ಇನ್ನೊಬ್ಬ ಅಣ್ಣ ಜ್ಯೋತಿರಿಂದ್ರರ ಬಳಿ ಚಂದ್ರನಗರದಲ್ಲಿ ಇರತೊಡಗಿದರು. ಇಲ್ಲಿ ಅತ್ತಿಗೆಯಂತೂ ರವೀಂದ್ರರಿಗೆ ತಾಯಿಯ ವಾತ್ಸಲ್ಯ ತೋರಿದರು. ಅಷ್ಟೇ ಅಲ್ಲ, ಇವರ ಸಾಹಿತ್ಯ ಸಾಧನೆಯಲ್ಲಿ ತುಂಬ ನೆರವಾದರು. ರವೀಂದ್ರರ ಮೇಲೆ ಈಕೆಯದು ಹೆಚ್ಚಿನ ಪ್ರಭಾವ.

ಕವಿಯ ಬರವಣಿಗೆ ನಿರಂತರ ಸಾಗಿತ್ತು. ಇಂಗ್ಲೆಂಡಿನಲ್ಲಿದ್ದಾಗ ಬರೆದ ಪ್ರವಾಸ ಪತ್ರ, “ಭಗ್ನ ಹೃದಯ” ಎಂಬ ಖಂಡ ಕಾವ್ಯ, ಅಲ್ಲಿಂದ ಬಂದ ಮೇಲೆ ಬರೆದ “ವಾಲ್ಮೀಕಿ ಪ್ರತಿಭಾ”, “ಕಾಲಮೃಗಯಾ”, “ಮಾಯಾರಖೇಲಾ”, “ಸ್ವಪ್ನ ಭಂಗ”, “ಪ್ರತಿಧ್ವನಿ” – ಹೀಗೆಯೇ ಹಲವಾರು. ಇವುಗಳು ತರುವಾಯ ಬರೆದ “ಸಂಧ್ಯಾ ಸಂಗೀತ”, “ಪ್ರಭಾತ ಸಂಗೀತ” ಕವನಗುಚ್ಛಗಳು ಕವಿಯ ಕೀರ್ತಿಯನ್ನು ಹೆಚ್ಚಿಸಿದುವು. ರಮೇಶಚಂದ್ರ ದತ್ತ ಎಂಬುವರ ಮಗಳ ಮದುವೆಯ ಸಂದರ್ಭ. ರವೀಂದ್ರರು ಅಲ್ಲಿಗೆ ಹೋಗಿದ್ದರು. ಬಂಕಿಮಚಂದ್ರರೂ ಬಂದಿದ್ದರು. ಬಂಕಿಮಚಂದ್ರರೆಂದರೆ ಬಂಗಾಳಿ ಕಾದಂಬರಿ ಸಾರ್ವಭೌಮರು. ರವೀಂದ್ರರು ಬರುತ್ತಲೇ ಬಂಕಿಮರು ಎದ್ದು ಇವರಿಗೆ ಪುಷ್ಪ ಮಾಲೆಯನ್ನು ಅರ್ಪಿಸುತ್ತಾ:

“ರಮೇಶ, ಇದು ಏಕೆ ಗೊತ್ತೆ?” ಎಂದರು. “ಏಕೆ”? ಎಂದರು ರಮೇಶ. ಕೂಡಿದ ಜನಕ್ಕೆ ಸಂತೋಷ, ಆಶ್ಚರ್ಯ ಏಕೆ ಎಂದು. ಬಂಕಿಮರು ಬಹು ಹೆಮ್ಮೆಯಿಂದ “ಪ್ರಭಾತ ಸಂಗೀತ” ರಚನೆಗಾಗಿ. ನೀವೆಲ್ಲ ಅವನ್ನು ಓದಬೇಕು, ಅವುಗಳ ಮಾಧುರ್ಯ ಸವಿಯಬೇಕು” ಎಂದು ಹೇಳಿದರು. ರವೀಂದ್ರರು – ಬಂಕಿಮರು ಬಂಗಾಳಿ ಭಾಷೆಯ ಎರಡು ಕಣ್ಣುಗಳಿದ್ದಂತೆ.

೧೮೮೩ ರಲ್ಲಿ ರವೀಂದ್ರ ವಿವಾಹ ಜರುಗಿತು. ಸರಳ ಮನಸ್ಸಿನ ತರಳೆ ಮೃಣಾಲಿನೀ ದೇವಿ ಇವರ ಕೈಹಿಡಿದು, ಇವರಿಗೆ ಸ್ಫೂರ್ತಿಯಾಗಿ, ಕಾವ್ಯಸಾಧನೆಯಲ್ಲಿ ದೊಡ್ಡ ನೆರವಾಗಿ ನಿಂತಳು. ದುರ್ದೈವ, ಈಕೆ ಬಹು ಕಾಲ ಬಾಳಲಿಲ್ಲ.

೧೮೮೭ ರಿಂದ ಕೆಲವು ಕಾಲ ರವೀಂದ್ರರು ಉತ್ತರ ಪ್ರದೇಶದ ಗಾಜೀಪುರ ಜಿಲ್ಲೆಯಲ್ಲಿದ್ದರು. ಗಾಜೀಪುರ ಎಂದರೆ ಗುಲಾಬಿ ಹೂಗಳ ಉಪವನ. ಇವರಿಗೆ ಈ ಪ್ರದೇಶ ಬಹು ಹಿಡಿಸಿತ್ತು. ಕನ್ನಡನಾಡಿನ ಕಾರವಾರದಲ್ಲಿ ಕೆಲಕಾಲ ಇದ್ದರು. ಕಾರವಾರ ತೀರ ಕವಿಯನ್ನು ಬಹುವಾಗಿ ಆಕರ್ಷಿಸಿತ್ತು. ಗಾಜೀಪುರದಲ್ಲಿ ಇದ್ದಾಗ ಇವರು ಎತ್ತಿನ ಬಂಡಿಯಲ್ಲಿ ಪೆಷಾವರ್ ವರೆಗೆ ಪ್ರಯಾಣ ಮಾಡುವ ಸಾಹಸ ಕೈಕೊಂಡರು. ಅಷ್ಟರಲ್ಲಿಯೇ ಇವರ ತಂದೆ ಇವರನ್ನು ಕರೆಸಿಕೊಂಡು, ತಮ್ಮ ಜಾಗೀರಿಯ ಆಡಳಿತ ವಹಿಸಿಕೊಳ್ಳಲು ಹೇಳಿದರು.

ಈವರೆಗೆ ಹಕ್ಕಿಯಂತೆ ಸ್ವೇಚ್ಛೆಯಾಗಿ ಹಾಡುತ್ತ ಹಾರಾಡಿದ ಕವಿಗೆ ಇದೊಂದು ಬಂಧನ ಎನ್ನಿಸಿತು. ಆದರೆ ತಂದೆಯ ಆದೇಶ. ನಾಲ್ಕು ವರ್ಷ ಜಾಗೀರಿ ನೋಡಿಕೊಂಡರು. ನಿಸರ್ಗದ ಮಡಿಲಿನಲ್ಲಿ, ಊಹಾ ಪ್ರಪಂಚದಲ್ಲಿ ವಾಸಿಸುತ್ತಿದ್ದ ಕವಿಗೆ ಹಳ್ಳಿಯ ಜೀವನದ ದಾರುಣತೆಯ ನಿಷ್ಠುರ ಸತ್ಯ ಗೋಚರವಾಗತೊಡಗಿತು. ಈ ಅನುಭವ ಮುಂದೆ ಇವರನ್ನು ಶಾಂತಿನಿಕೇತನದಲ್ಲಿ ಶ್ರೀನಿಕೇತನ ಸ್ಥಾಪಿಸಲು ಪ್ರೇರೇಪಿಸಿತು. ಆಗಲೇ ಇವರು “ಚಿತ್ರಾಂಗದ” “ಬಲಿದಾನ” ನಾಡಕಗಳನ್ನು ಬರೆದಿದ್ದು. ರವೀಂದ್ರರ ಅತ್ಯುತ್ತಮ ಕೃತಿಗಳಲ್ಲಿ ಇವು ಸೇರಿವೆ.

ರವೀಂದ್ರರ ಮುಂದಿನ ಜೀವನ ದೇಶಾಭಿಮಾನ, ರಾಷ್ಟ್ರಜಾಗರಣ ಮುಂತಾದ ಚಟುವಟಿಕೆಗಳಿಂದ ತುಂಬಿದೆ. ಇವರ ದೇಶಾಭಿಮಾನ, ಮಾನವಧರ್ಮದಷ್ಟೇ ವಿಶಾಲವಾಗಿತ್ತು. ೧೯೦೫ ರಲ್ಲಿ ಬಂಗಾಳವನ್ನು ಇಬ್ಬಾಗವಾಗಿಸಬೇಕೆಂದು ಸರ್ಕಾರ ಯತ್ನಿಸಿತು. ಎಚ್ಚೆತ್ತ ಜನತಾಶಕ್ತಿಯನ್ನು ಅದು ಮಿಡಬೇಕೆನ್ನುವುದೇ ಅದರ ಉದ್ದೇಶ. ಬಂಗಾಳಿಯರು ಈ ವಿಭಜನೆಯನ್ನು ಬಲವಾಗಿ ವಿರೋಧಿಸಿದರು. ಈ ಚಳೂವಳಿಯ ಕಾಲಕ್ಕೆ ರವೀಂದ್ರರು ಬರೆದ ಲೇಖನ, ಮಾಡಿದ ಭಾಷಣಗಳಿಂದ ಸುಶಿಕ್ಷಿತ ಬಂಗಾಳಿ ಜನರಲ್ಲಿ ಅದ್ಭುತವಾದ ಜಾಗೃತಿ ಮೂಡಿತು. “ಬಂಗಾಳ ಇಂದು ಆಲೋಚಿಸಿದ್ದನ್ನು ಭಾರತ ನಾಳೆ ಆಲೋಚಿಸುತ್ತದೆ” ಎಂಬ ಖ್ಯಾತಿ ಬಂಗಾಳಕ್ಕೆ ಬಂದುದು ಇಂಥ ಮಹನೀಯರುಗಳಿಂದ

ವಿಶ್ವಭಾರತಿ

ಈ ವಿಶಾಲ ಭೂಮಿಯ ಮೇಲೆ ನಿಂತರೆ
ನನಗೆ ಭಯವಿಲ್ಲ, ಸಂಕೋಚವಿಲ್ಲ

ಈ ವಿಶಾಲ ಪ್ರಪಂಚದಲ್ಲಿ, ನನ್ನೆದುರೆ
ನನ್ನ ಕಾರ್ಯವಿದೆ – ಮಾಡಿ ಮುಗಿಸಬೇಕಲ್ಲ

ಓ ತಾಯ್ನಾಡ ನೆಲವೆ, ಇದೊ ನಿನಗೆ ವಂದಿಸುವೆ
ಕೈ ಮುಗಿದು ಅರ್ಚಿಸುವೆ

ಓ ತಾಯೆ, ನನ್ನ ಜೀವನವೆಲ್ಲ ನಿನಗೆ ಮುಡಿಪಾಗಿದೆ.
ಒಪ್ಪಿಸಿಕೋ – ಇದೊ ಅರ್ಪಿಸುವೆ.

ಹೀಗೆಂದು ಹಾಡಿದ ರವೀಂದ್ರರು ಅದರಂತೆ ನಡೆದು ದುಡಿದರು. ಹಾಡಿ ಹಣ್ಣಾದರು ಅಂತೆಯೇ ಜಗದ ಕಣ್ಣಾದರು.

ಕಾಗ್ವಾ ಎನ್ನುವ ಜಪಾನೀ ಮಹನೀಯರು ಗಾಂಧೀಜಿ ಬಳಿ ಬಂದು “ಭಾರತ ನೋಡಬೇಕೆನ್ನುತ್ತೇನೆ” ಎಂದರು. “ಹಾಗಾದರೆ ಶಾಂತಿನಿಕೇತನಕ್ಕೆ ಹೋಗಿ ಬನ್ನಿ” ಎಂದರು ಗಾಂಧೀಜಿ.

ರವೀಂದ್ರರ ಒಂದು ಮಹತ್ಸಾಧನೆಯೆಂದರೆ ಶಾಂತಿ ನಿಕೇತನ, ವಿಶ್ವಭಾರತಿ, ಶ್ರೀನಿಕೇತನಗಳನ್ನು ಸ್ಥಾಪಿಸಿ ಬೆಳೆಸಿದ್ದು.

ರವೀಂದ್ರರ ತಂದೆ ಧ್ಯಾನ – ಚಿಂತನ ಪ್ರಿಯರು. ತಮ್ಮ ಧ್ಯಾನಕ್ಕೆ ಶಾಂತಮಯ ವಾತಾವರಣ ಅವಶ್ಯ ಎಂದು ಬಗೆದು ೧೮೬೩ ರಲ್ಲಿ ಕಲ್ಕತ್ತದಿಂದ ಸುಮಾರು ೯೦ ಮೈಲು ದೂರ ಬೋಲ್ಪುರದ ಬಳಿ ಬಯಲು ನಿವೇಶನವನ್ನು ಕೊಂಡು ಅದಕ್ಕೆ “ಶಾಂತಿನಿಕೇತನ” ಎಂದು ಕರೆದರು. ಧ್ಯಾನ, ತಪಸ್ಸಾಧನೆಗೆ ಇದನ್ನು ಬಳಸಿದರು. ೧೯೦೧ ರಲ್ಲಿ ರವೀಂದ್ರರು ತಂದೆಯವರ ಅಪ್ಪಣೆ ಪಡೆದು ಒಂದು ವಿದ್ಯಾಲಯ ಸ್ಥಾಪಿಸಿದರು. ಇದಕ್ಕಾಗಿ ಇವರ ಪತ್ನಿ ಮೃಣಾಲಿನಿದೇವಿ ತಮ್ಮ ಎಲ್ಲ ವಸ್ತು – ಒಡವೆಗಳನ್ನು ಅರ್ಪಿಸಿದರು. ಗುರುಕುಲದ ರೀತಿಯ ವಿಸಜಘನೆಯೆ ನಮಗೆ ತಕ್ಕುದು ಎಂದು ಮೊದಲಿನಿಂದಲೂ ರವೀಂದ್ರರ ಭಾವನೆ. ಇದನ್ನು ಕಾರ್ಯರೂಪಕ್ಕಿಳಿಸಲು ತೊಡಗಿದರು. ತಾವು ಮಕ್ಕಳಿಗೆ ಕಲಿಸುವುದರ ಜೊತೆ ಅವರೊಂದಿಗೆ ಆಟಪಾಠಗಳಲ್ಲಿ ಬೆರೆಯತೊಡಗಿದರು. ಇಲ್ಲಿ ಮಕ್ಕಳಿಗೆ ಸದಾ ಸಂತೋಷ, ಚಟುವಟಿಕೆ, ಸ್ವಾತಂತ್ಯ್ರ. ಆಡುತ್ತ ಕುಣಿಯುತ್ತ ಪಾಠ ಕಲಿಯುವರು. ಮಕ್ಕಳಿಗೆ ನೇರವಾಗಿ ಜೀವನದ ಹಾಗೂ ನಿಸರ್ಗದ ಸಂಪರ್ಕ ಬಂದರೆ ಮಾತ್ರ ಅವರು ಕಲಿಪ ವಿದ್ಯೆ ಸಾರ್ಥಕ ಎಂದು ಇವರ ನಂಬಿಕೆ. ವಿರಾಮಕಾಲದಲ್ಲಿ ನೆಲ ಅಗಿಯುವುದು, ಗಿಡ ನೆಡುವುದು, ಹೂಬಳ್ಳಿಗಳನ್ನು ಬೆಳೆಸುವುದು – ಇವೆಲ್ಲ ನಡೆಯ ತೊಡಗಿದವು. ಪರಸ್ಪರ ಸಹಕಾರ ಇಲ್ಲಿಯ ಮೂಲ ಮಂತ್ರ. ಶಾಂತಮಯ ವಾತಾವರಣದಲ್ಲಿ ಈ ಜೀವನಪಾಠ ನಡೆಯಬೇಕು. ಆಗ ಒಂದೊಂದು ಮನೆಯೂ ಶಾಂತಿನಿಕೇತನ ಆದೀತು – ಎಂಬ ಕನಸು ಇವರದು. ಆರಂಭದಲ್ಲಿ ಶಾಂತಿನಿಕೇತನದಲ್ಲಿ ಕೇವಲ ಐದೇ ವಿದ್ಯಾರ್ಥಿಗಳು. ಅವರಲ್ಲಿ ಇಬ್ಬರು ಇವರ ಮಕ್ಕಳು. ಧೈರ್ಯಗೆಡದೆ ಶಾಲೆಯನ್ನು ಮುಂದುವರಿಸಲು, ವಿದ್ಯಾರ್ಥಿಗಳ ಸಂಖ್ಯೆ ಭರದಿಂದ ಹೆಚ್ಚುತ್ತಾ ನಡೆಯಿತು. ಇಂದು ಶಾಂತಿನಿಕೇತನ ಪೂರ್ವ ಹಾಗೂ ಪಶ್ಚಿಮ ಸಂಸ್ಕೃತಿಗಳ ಸಂಗಮ. ವಿಶ್ವದಲ್ಲಿಯೆ ಗಣನೀಯ ಸಂಸ್ಥೆ. ವಿದ್ಯಾಲಯ ಈಗ “ವಿಶ್ವಭಾರತಿ” ಎಂಬ ವಿಶ್ವವಿದ್ಯಾನಿಲಯ. ಭಾರತೀಯತೆಯನ್ನು ಉಳಿಸಿಕೊಂಡು ಘೋಷಿಡಿ ಬೆಳೆಸುತ್ತಿರುವ ಮಹಾಸಂಸ್ಥೆ. ಪಾಢಭವನ, ವಿದ್ಯಾಭವನ, ಕಲಾಭವನ, ಸಂಗೀತಭವನ – ಇವು ಈ ಸಂಸ್ಥೆಯ ಕೆಲ ಅಂಗಗಳು. ಆಮೇಲೆ ೧೯೦೫ ರಲ್ಲಿ ರವೀಂದ್ರರು ಸುರುಲ್ ಎಂಬ ಗ್ರಾಮದ ಹತ್ತಿರ ಜಮೀನು ಕೊಂಡುಕೊಂಡು ಆದರ್ಶ ಗ್ರಾಮ “ಶ್ರೀನಿಕೇತನ” ಸ್ಥಾಪಿಸಿದರು. ಇದು ಗ್ರಾಮೋದ್ಧಾರಕ್ಕಾಗಿ ಇವರು ಮಾಡಿದ ಸಾಹಸಪ್ರಯೋಗ. “ವಿಶ್ವಭಾರತಿ” ಎಂಬ ಪತ್ರಿಕೆಯನ್ನು ಆರಂಭಿಸಲಾಯಿತು. ಇದರಲ್ಲಿ ಸಾಹಿತ್ಯ, ಸಂಸ್ಕೃತಿ, ಮಾನವಧರ್ಮ ಮುಂತಾದ ಬಗ್ಗೆ ರವೀಂದ್ರರ ಅಪ್ರತಿಮ ಲೇಖನಗಳು ಪ್ರಕಟವಾದವು.

ವಿಶ್ವಮಾನ್ಯ ಕವಿ

ನಿನ್ನ ಸಮ್ಮುಖದಲ್ಲಿ ಕವಿಯೆಂಬ ಹಮ್ಮು
ಅಳಿಸಿಹೋಗುವುದು

ಓ ಅನಾದಿ ಕವಿಯೇ, ನಿನ್ನ ಪದತಲದಿ ಕುಳಿತು –
ಬೇಡುವೆನು ಇನಿತು:

ನನ್ನ ಬದುಕು ಸರಳವಾಗಿರಲಿ, ನೇರವಾಗಿರಲಿ –
ಬಿದಿರು ಕೊಳಲಿನ ಹಾಗೆ –

ನಿನ್ನ ಗಾನ ತುಂಬಿರಲಿ!

-ಹೀಗೆಂದು ಹಾಡಿದ್ದಾರೆ ನೊಬೆಲ್ ವಿಜೇತ ವಿಶ್ವಮಾನ್ಯ ಕವಿ ರವೀಂದ್ರರು.

ಶಾಂತಿನಿಕೇತನದಲ್ಲಿ ವಿದ್ಯಾಲಯ ಸ್ಥಾಪಿಸಿದ ಮರು ವರ್ಷವೇ, ೧೯೧೨ ರಲ್ಲಿ ಪತ್ನಿ ತೀರಿದರು. ಮುಂದೆ ಮೂರು ಮಕ್ಕಳನ್ನು ಸಾವಿನೊಡಲಿಗೆ ತುಂಬಿದ್ದಾಯಿತು. ಈ ಮೃತ್ಯು ಪರಂಪರೆಯಿಂದ ರವೀಂದ್ರರು ಬಹಳಷ್ಟು ಗಾಸಿಗೊಂಡಿರಬೇಕು. ಪತ್ನಿವಿಯೋಗ ನೆನೆದು ಸ್ಮರಣ ಸಂಕಲನ ಪ್ರಕಟಿಸಿದರು. “ಓ ದೇವ, ಅವಳು ಇದ್ದಾಗ ನನಗೆ ಏನೆಲ್ಲ ನೀಡಿದಳು! ನಾನು ಬೇಕಾದ್ದನ್ನೆಲ್ಲ ಅವಳಿಗೆ ಮರಳಿಸಿದೆ. ಈಗ …. ಪ್ರತಿಯಾಗಿ ನಾನವಳಿಗೆ ನೀಡು ಪ್ರೇಮ – ಉಪಕಾರ ಸ್ಮರಣೆಗಳನ್ನು ಅವಳು ಸ್ರೀಕರಿಸುವಂತಿಲ್ಲ. ಆದ್ದರಿಂದ ಇದೋ, ನಿನಗೆ ಅದನ್ನು ಸಮರ್ಪಿಸುತ್ತಿದ್ದೇನೆ” ಎಂದು ಭಿನ್ನವಿಸಿಕೊಂಡಿದ್ದಾರೆ.

೧೯೧೨ ರಲ್ಲಿ ರವಿಂದ್ರರ ಐವತ್ತನೆಯ ಹುಟ್ಟು ಹಬ್ಬವನ್ನು ಕಲ್ಕತ್ತಾದಲ್ಲಿ ವೈಭವದಿಂದ ಆಚರಿಸಲಾಯಿತು. ಭಾರತೀಯ ಕವಿಯೊಬ್ಬನ ವರ್ಧಂತಿಯನ್ನು ಹೀಗೆ ಸಾರ್ವಜನಿಕವಾಗಿ ಆಚರಿಸಿದ್ದು ಇದೇ ಮೊದಲ ಸಲ. ಇದೇ ವರ್ಷ ಅವರು ಇಂಗ್ಲೆಂಡಿಗೆ ತೆರಳಿದರು. ಆಗ ಇವರಿಗೆ ಯೇಟ್ಸ್, ವೆಲ್ಸ್, ರಸೆಲ್ ಮುಂತಾದ ವಿದ್ವನ್ಮಣಿಗಳ ಸಖ್ಯ ಲಭಿಸಿತು.

ಡಬ್ಲ್ಯೂ.ಬಿ. ಯೇಟ್ಸ್ ಇಂಗ್ಲೀಷಿನ ದೊಡ್ಡ ಕವಿ. ಇವರು ರವೀಂದ್ರರ “ಗೀತಾಂಜಲಿ” ಯ ಇಂಗ್ಲೀಷ್ ಅನುವಾದಗಳನ್ನು ಓದಿ ಮುಗ್ಧರಾಗಿ ಹೋದರು. “ನನ್ನ ಜೀವದುದ್ದಕ್ಕೂ ಕಂಡ ಕನಸಿನ ಲೋಕವನ್ನು ತೆರೆದಿವೆ – ಈ ಅನುವಾದಗಳು. ಈ ದೈವಿಕ ಪ್ರೇಮಗೀತೆಗಳಲ್ಲಿ ಮಿಂದು ಸದಾ ಮನಸ್ಸು ಅರಳಿರುತ್ತದೆ” ಎಂದು ಹಾಡಿ ಹೊಗಳಿದರು. ಹೀಗೆ ಯುರೋಪಿನ ಕಣ್ಣು ತೆರೆಸಿದ “ಗೀತಾಂಜಲಿ” ಗೆ ೧೯೧೩ ರಲ್ಲಿ ನೊಬೆಲ್ ಪಾರಿತೋಷಕ ನೀಡಿ ಗೌರವಿಸಲಾಯಿತು.

ನೊಬೆಲ್ ಬಹುಮಾನ ವಿಶ್ವದಲ್ಲಿಯೇ ಅತ್ಯಂತ ಘನವಾದ ಪುರಸ್ಕಾರ. ಆಲ್ ಫ್ರೆಡ್ ನೊಬೆಲ್ ಎಂಬುವನು ತಾನು ಸಂಪಾದಿಸಿದ ವಿಪುಲ ಸಂಪತ್ತಿನ ಸದ್ವಿನಿಯೋಗಕ್ಕಾಗಿ ಈ ಬಹುಮಾನ ಏರ್ಪಡಿಸಿದನು. ಪ್ರತಿ ವರ್ಷ ಐದು ಬಹುಮಾನಗಳನ್ನು ಕೊಡಲಾಗುವುದು – ಸಾಹಿತ್ಯಕ್ಕೆ, ಭೌತಶಾಸ್ತ್ರಕ್ಕೆ, ರಸಾಯನ ಶಾಸ್ತ್ರಕ್ಕೆ, ವೈದ್ಯ ಶಾಸ್ತ್ರಕ್ಕೆ ಹಾಗೂ ಶಾಂತಿ ಸಾಧನೆಗೆ. (ಈಚೆಗೆ ಅರ್ಥ ಶಾಸ್ತ್ರಕ್ಕೂ ಬಹುಮಾನ ಸಲ್ಲುತ್ತಿದೆ) ಇಂಥ ಅತಿ ಶ್ರೇಷ್ಠ ಗೌರವ “ಗೀತಾಂಜಲಿ” ಗೆ ಒದಗಿದ್ದು ಭಾರತದ ಹೆಮ್ಮೆ. ಈ ಬಹುಮಾನದಿಂದ ರವೀಂದ್ರರು ವಿಶ್ವಮಾನ್ಯ ಕವಿ ಆದರು.

ವಿಶ್ವಮಾನವನ ಸಂದೇಶ – ವಿಶಾಲ ಮನಸ್ಸಿನ ರಾಷ್ಟ್ರ ಭಕ್ತಿ

ನೊಬೆಲ್ ಬಹುಮಾನ ಪಡೆದ ತರುವಾಯ ರವೀಂದ್ರರ ಕೀರ್ತಿ ಎಲ್ಲೆಡೆಗೆ ಪಸರಿಸಿತು. ಜಗತ್ತಿನ ಮೂಲೆಮೂಲೆಗಳಿಂದ ಅವರಿಗೆ ಆಮಂತ್ರಣ ಬರತೊಡಗಿದವು. ಇಂಗ್ಲೆಂಡಿನಿಂದ ಅವರು ಅಮೇರಿಕಕ್ಕೆ ತೆರಳಿ, ಅಲ್ಲಿ ಭಾರತದ ಸಂದೇಶ ಬೀರಿದರು. ವಿಶ್ವ ಮಾನವನ ಬಗ್ಗೆ ಉಚ್ಛ ಸ್ವರದಲ್ಲಿ ಹಾಡಿದರು. ೧೯೧೪ ರಲ್ಲಿ, ಬ್ರಿಟಿಷ್ ಸರ್ಕಾರ ಇವರಿಗೆ “ನೈಟ್ ಹುಡ್” ಗೌರವವನ್ನು ನೀಡಿತು. ಜಪಾನಿಗೆ ಹೋಗಿ ಉಪನ್ಯಾಸ ವಿತ್ತರು. ಈಜಿಪ್ಟ್, ರಷ್ಯ, ಜರ್ಮನಿ, ಚೀನ, ನಾರ್ವೆ, ಸ್ವೀಡನ್, ಫ್ರಾನ್ಸ್ – ಹಲವು ದೇಶಗಳನ್ನು ರವೀಂದ್ರರು ಸುತ್ತಿದರು. ೧೯೩೨ ರಲ್ಲಿ ಇರಾನಿನ ಚಕ್ರವರ್ತಿ ಅವರಿಗೆ ವಿಶೇಷ ಆಮಂತ್ರಣ ಕೊಟ್ಟು ಕರೆಸಿಕೊಂಡ. ರವೀಂದ್ರರ ಎಪ್ಪತ್ತನೆಯ ಹುಟ್ಟು ಹಬ್ಬದಲ್ಲಿ ಅಲ್ಲಿ ವೈಭವದಿಂದ ನಡೆಯಿತು. ಎಲ್ಲ ಕಡೆ ರವೀಂದ್ರರ ಮಾತಿನ ಕೇಂದ್ರ ತತ್ವ ಒಂದೇ – ಮನುಷ್ಯರೆಲ್ಲ ಒಂದು, ದೇಶ, ವರ್ಣ ಯಾವ ದೃಷ್ಟಿಯಿಂದಲೂ ಮೇಲು – ಕೀಳು ಭಾವನೆ ಸಲ್ಲದು.

ಉದಾರಚರಿತರಿಗೆ ಲೋಕವೆ ಮನೆ ಅಲ್ಲವೆ?

ವಿಶ್ವ ದೃಷ್ಟಿಯ ಠಾಕೂರರು ರಾಷ್ಟ್ರ ಭಕ್ತಿಯಲ್ಲಿ ಯಾರಿಗೂ ಕಡಿಮೆ ಇರಲಿಲ್ಲ. ವಂಗಭಂಗ ಚಳುವಳಿಯ ಕಾಲಕ್ಕ ಎಬಂಗಾಳಕ್ಕೆ ನವಚೇತನ ನೀಡಿದ ಚಾತುರ್ಯ ಇವರದು. ೧೯೧೯ ರಲ್ಲಿ ಅಮೃತಸರದ ಜಲಿಯನ್ ವಾಲಾಬಾಗ್ ನಲ್ಲಿ ನಿಸ್ಸಹಾಯಕ ಸಭಿಕರನ್ನು ಪೋಲಿಸರು, ಸೈನಿಕರು ಗುಂಡು ಹೊಡೆದು ಕೊಂದರು. ಇದು ಬ್ರಟಿಷ್ ಆಳರಸರ ರಾಕ್ಷಸೀ ಕ್ರೌರ್ಯಕ್ಕೆ ದೃಷ್ಟಾಂತ. ಇಂಥ ಅಮಾನುಷ ಅತ್ಯಾಚಾರ, ಜಗತ್ತಿನ ಇತಿಹಾಸದಲ್ಲಿ ಸಿಕ್ಕುವುದು ವಿರಳ. ಇದರಿಂದ ಖತಿಗೊಂಡ ರವೀಂದ್ರರು ಕೂಡಲೇ ವೈಸರಾಯರಿಗೆ ತಮ್ಮ ತೀವ್ರ ಅಸಮಾಧಾನದ ಪತ್ರ ಬರೆದು, ಬ್ರಿಟಿಷ್ ಸಾಮ್ರಾಟರು ನೀಡಿದ್ದ ನೈಟ್ ಹುಡ್ ಪದವಿಯನ್ನು ತ್ಯಜಿಸಿಬಿಟ್ಟರು. ಮುಂದೆ ೧೯೩೦ ರಲ್ಲಿ ಗಾಂಧೀಜಿ ಸತ್ಯಾಗ್ರಹ ಸಮರಕ್ಕೆ ಕರೆ ಕೊಟ್ಟಾಗ, ಭಾರತ ರಾಷ್ಟ್ರೀಯ ಕಾಂಗ್ರೆಸ್ಸನ್ನು ಸರ್ಕಾರ ತುಳಿಯಲು ಯತ್ನಿಸಿತು. ಆಗ ಇಂಗ್ಲೆಂಡಿನಲ್ಲಿ ಇದ್ದ ಠಾಕೂರರು “ಎದು ದಬ್ಬಾಳಿಕೆಯ ಬೇಜವಾಬ್ದಾರಿ ಆಡಳಿತದ ಅಸಹ್ಯ ವರ್ತನೆ” ಎಂದು ಖಂಡಿಸಿದರು ಅಷ್ಟೇ ಅಲ್ಲ, ೧೯೪೧ ರಲ್ಲಿ ಜೂನ್ ತಿಂಗಳಲ್ಲಿ, ಅವರು ಇಹಲೋಕ ತ್ಯಜಿಸಲು ಕೆಲವೇ ತಿಂಗಳ ಮೊದಲು, ಮಿಸ್ ರಾತ್ ಬೋನ್ ಎಂಬ ಮಹಿಳೆ, ತಿಳಿಗೇಡಿತನದಿಂದ ಭಾರತೀಯರನ್ನು ಹಳಿದಳು. ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ರವೀಂದ್ರರು ಆಕೆಯ ಅವಿಚಾರದ ಹೇಳಿಕೆಗೆ ತಕ್ಕ ಉತ್ತರ ನೀಡಿದರು. “ನೆಹರೂರಂಥ ಸಭ್ಯ ಉದಾರಚೇತರನ್ನು ಹಳಿಯುವ ಈ ಮಹಿಳೆ, ಬ್ರಟಿಷ್ ಧಾರ್ಷ್ಟ್ಯವನ್ನು ಪ್ರತಿನಿಧಿಸುತ್ತಾಳೆ. ಬ್ರಿಟಿಷರಿಂದ ಭಾರತಕ್ಕಾದ ಪರಿಣಾಮ, ಭಾರತದಿಂದ ಬ್ರಿಟಿಷರು ಪಡೆದ ಲಾಭ, ಎಲ್ಲವನ್ನೂ ವಿವೇಚಿಸಿ ನೋಡಿದರೆ, ಇಂಥ ಉದ್ಧಟವೃತ್ತಿ ಅನಾಗರಿಕತೆಯ ಗುರುತು” ಎಂದು ಗುಡುಗಿದರು. ಇವರ ರಾಷ್ಟ್ರ ಭಕ್ತಿಗೆ ಶಿಖರದಂತಿವೆ, ಈ ಪದ್ಯದ ಸಾಲುಗಳು:

ಎಲ್ಲಿ ಅಂಜಿಕೆ ಇರದೆ ತಲೆಯೆತ್ತಿ ನಡೆಯುವೆವೊ
ಎಲ್ಲಿ ಜ್ಞಾನಕ್ಕೆ ಅಡೆತಡೆಯಿಲ್ಲವೊ
ಎಲ್ಲಿ ಮಾತು, ಸತ್ಯದೊಡಲಿನ ಮುತ್ತುಗಳೊ
ಅಲ್ಲಿ – ಆ ಸ್ವಾತಂತ್ಯ್ರ ಸ್ವರ್ಗದಲ್ಲಿ
ಹೇ ತಂದೆ, ನನ್ನ ದೇಶ ಜಾಗರಿಸಿ ಎದ್ದು ನಿಲ್ಲಲಿ!

ರವೀಂದ್ರರು ಮತ್ತು ಗಾಂಧೀಜಿ

ಗಾಂಧೀಜಿ ಎಂದರೆ ದೇಶಕ್ಕೆ ದೇಶವೇ ತಲೆಬಾಗುತ್ತಿದ್ದ ಕಾಲ ಅದು. ಗಾಂಧೀಜಿಗೆ ರವೀಂದ್ರರೆಂದರೆ ಬಹು ಗೌರವ. ಗಾಂಧೀಜಿಯ ತೀರ್ಮಾನ ತಮಗೆ ಒಪ್ಪಿಗೆ ಆಗದಿದ್ದಾಗ ರವೀಂದ್ರರು ಸ್ಪಷ್ಟವಾಗಿ ಹಾಗೆಂದು ಹೇಳಿದರು. ಗಾಂಧೀಜಿಗೆ ರವೀಂದ್ರರಲ್ಲಿ ಎಷ್ಟು ಗೌರವ ಎಂದರೆ, ೧೯೩೨ ರಲ್ಲಿ ಅವರು ಉಪವಾಸ ಪ್ರಾರಂಭಿಸುವಾಗ ಹೀಗೆ ಕಾಗದ ಬರೆದರು: “ಈಗ ಮಂಗಳವಾರ ಬೆಳಗಿನ ಜಾವ ಮೂರು ಗಂಟೆ. ೧೨ ಗಂಟೆಗೆ ನಾನು ಬೆಂಕಿಯ ಬಾಗಿಲನ್ನು ಹೋಗುತ್ತೇನೆ. ನೀವು ನನ್ನನ್ನು ಆಶೀರ್ವದಿಸಲು ಸಾಧ್ಯವಿದ್ದರೆ, ನನಗೆ ಆ ಆಶೀರ್ವಾದ ತುಂಬ ಬೆಲೆ ಬಾಳುವುದು, ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿ, ಆನಂತರವೂ ಸ್ನೇಹಿತರಾಗಿಯೆ ನಡೆದುಕೊಂಡಿದ್ದೇರಿ…..ನಾನು ತಪ್ಪು ಮಾಡಿದ್ದರೆ ತಪ್ಪೊಪ್ಪಿಗೆಯ ಫಲ ಏನೇ ಆಗಲಿ, ಸಾರ್ವಜನಿಕವಾಗಿ ತಪ್ಪನ್ನು ಒಪ್ಪಿಕೊಳ್ಳಲು ನಾನು ಸಿದ್ಧ. ನನ್ನ ಕಾರ್ಯ ನಿಮ್ಮ ಹೃದಯಕ್ಕೆ ಒಪ್ಪಿಗೆಯಾದರೆ ನಿಮ್ಮ ಆಶೀರ್ವಾದ ನನಗೆ ಬೇಕು. ಅದು ನನಗೆ ಚೈತನ್ಯ ನೀಡುತ್ತದೆ”.
ರವೀಂದ್ರ ಸೃಷ್ಟಿ – ದರ್ಶನ

ರವೀಂದ್ರರು ಮುಖ್ಯತಃ ಕವಿಗಳು. ಕವಿಯ ಧರ್ಮವೇ ತನ್ನ ಧರ್ಮ ಎಂದು ಸಾರಿದವರು. ಕವಿಯ ಧರ್ಮ ಎಂದರೆ ಏನು? ವೈರವನ್ನು ತೊಡೆದು ಪ್ರೇಮವನ್ನು ಸ್ಥಾಪಿಸುವುದು; ಮನೆ ಜಗತ್ತುಗಳನ್ನು ಒಂದಾಗಿಸುವುದು; ಮೃದು ಭಾವವನ್ನು ಬೆಳೆಸುವುದು. ಪರಸ್ಪರ ಗೌರವ ಮೂಡಿಸುವುದು. ಮಾರ್ದವತೆ ಈ ಕವಿವಾಣಿಯ ವೈಶಿಷ್ಟ್ಯ. ಇವರು ಕಾವ್ಯ, ಸಂಗೀತ, ಕಲೆ, ರಂಗಭೂಮಿ, ಉಪನ್ಯಾಸ, ಶಿಕ್ಷಣ – ಈ ಎಲ್ಲದರ ಮೂಲಕ ಎಂಬತ್ತು ವರ್ಷಗಳ ಪರ್ಯಂತ ಸಾಧನೆ ನಡೆಸಿದರು. ರವೀಂದ್ರ ಸಂಗೀತ ಒಂದು ಪದ್ಧತಿಯಾಗಿ ಬಿಟ್ಟಿದೆ. ಇವರ ಚಿತ್ರಕಲೆ ಅಂತರರಾಷ್ಟ್ರೀಯ ಮಾನ್ಯತೆ ಗಳಿಸಿದೆ. ಎಪ್ಪತ್ತು ವರ್ಷದವರಾದ ಮೇಲೆ ಚಿತ್ರಕಲೆಯ ಸೃಷ್ಟಿಗೆ ತೊಡಗಿದರು. ಸುಮಾರು ಮೂರು ಸಾವಿರ ಚಿತ್ರ ಚಿತ್ರಿಸಿದ್ದಾರೆ. ನಾಟಕ ತಾವೇ ಬರೆದು, ಅದಕ್ಕೆ ತಕ್ಕ ರಂಗಭೂಮಿಯ ಸಜ್ಜಿಕೆಯನ್ನು ತಾವೇ ಸೃಜಿಸಿ, ನಿರ್ದೇಶಕರಾಗಿ, ನಟರಾಗಿ, ರಂಗಭೂಮಿಯನ್ನೂ ಬೆಳಗಿಸಿದರು. ವಿಶ್ವ ಭಾರತಿ ಇವರ ಶಿಕ್ಷಣ ಸೇವೆಗೆ ಅದ್ಭುತ ಸಾಕ್ಷಿ. ಇವರ ಸಾಹಿತ್ಯ ಸೇವೆಯಂತೂ ಲೆಕ್ಕಕ್ಕೆ ಸಿಗದಷ್ಟು. ಗೀತಾಂಜಲಿ, ಸಂಧ್ಯಾ ಸಂಗೀತ, ಪ್ರಭಾತ ಸಂಗೀತ, ಮಾನಸಿ, ಸೋನಾರ್ ತರಿ (ಸ್ವರ್ಣ ನೌಕೆ) ತೋಟಗಾರ, ಬಿದಿಗೆ ಚಂದ್ರ, ಕಾದಲೆಯ ಕಾಣಿಕೆ, ಫಲಸಂಚಯ, ಸ್ಮರಣ, ಊರ್ವಶಿ – ಒಂದೇ ಎರಡೇ! ಕಥೆ ಕಾದಂಬರಿಗಳೂ ಅಷ್ಟೆ – ಗೋರಾ, ನೌಕಾಘಾತ, ಮನೆಯೊಳಗೆ – ಹೊರಗೆ, ಹರಿದ ಅನುಬಂಧಗಳು ಇಂತಹ ಜನಪ್ರಿಯ ಕಾದಂಬರಿಗಳನ್ನು ಬರೆದರು. ಕಾಬೂಲಿವಾಲಾ ಕಥೆಯಂತೂ ಸುಪ್ರಸಿದ್ಧ. ನಾಟಕಗಳು – ಪ್ರಕೃತಿಯ ಪ್ರತಿಶೋಧ (ಕಾರವಾರದಲ್ಲಿದ್ದಾಗ ಬರೆದ ನಾಟಕ ಇದು), ರಾಜಾರಾಣಿ, ಬಲಿ, ಅಂಚೆಮನೆ, ರಕ್ತಕರವೀರ, ಚಿತ್ರಾಂಗದಾ, ಮಾಲಿನಿ, ವಾಲ್ಮೀಕಿ ಪ್ರತಿಭಾ, ಫಾಲ್ಗುಣಿ, ಮುಕ್ತಧಾರಾ ಮುಂತಾದುವು.

ಉಪನ್ಯಾಸ ಗ್ರಂಥಗಳು – ರಾಷ್ಟ್ರತತ್ವ, ವ್ಯಕ್ತಿ ಮತ್ತೆ, ಸಾಧನಾ, ಸೃಷ್ಟ್ಯಾತ್ಮಕ ಐಕ್ಯ ಇತ್ಯಾದಿ. ಆತ್ಮ ಕಥೆ – ಬಾಳ ನೆನಹು, ನನ್ನ ಬಾಲ್ಯದ ದಿನಗಳು, ರಾಶಿ ರಾಶಿ ಪತ್ರಗಳು, ಸಂಭಾಷಣೆಗಳು, ಸಂದರ್ಶನಗಳು. ಮಕ್ಕಳಿಂದ ಮುದುಕರವರೆಗೆ, ಎಲ್ಲರಿಗೂ ಹಿತಕಾರಿಯಾದ ಕಲಾಸೃಷ್ಟಿ ಇವರದು.

ರವೀಂದ್ರರು ನಿಜವಾಗಿಯೂ ಆಧುನಿಕ ಭಾರತದ ಋಷಿಗಳು. ಋಷಿ ಅಲ್ಲದವ ಕವಿಯಾಗಲಾರ ಎಂಬ ಒಂದು ಆರ್ಯೋಕ್ತಿ ಇದೆ. ಅಂತೆಯೇ ಇವರು ಋಷಿ ಕವಿಗಳು, ನಮ್ಮ ನಿಮ್ಮೆಲ್ಲರ ಗುರುದೇವರು.

ಎರಡು ರಾಷ್ಟ್ರಗೀತೆ : ಒಬ್ಬ ಕವಿ

“ನಮ್ಮ ರಾಷ್ಟ್ರ – ಭಾರತ”
“ನಮ್ಮ ರಾಷ್ಟ್ರ – ಬಾಂಗ್ಲಾ”
“ನಮ್ಮ ರಾಷ್ಟ್ರಗೀತೆ – ಜನಗಣಮನ”
“ನಮ್ಮ ರಾಷ್ಟ್ರಗೀತೆ – ಸೋನಾರ್ ಬಾಂಗ್ಲಾ….”
“ನಮ್ಮ ರಾಷ್ಟ್ರಗೀತೆ ಬರೆದವರು -ನೊಬೆಲ್ ವಿಜೇತ ರವೀಂದ್ರನಾಥ ಠಾಕೂರ್”
“ನಮ್ಮ ರಾಷ್ಟ್ರಗೀತೆ ಬರೆದವರು – ವಿಶ್ವಕವಿ ರವಿಂದ್ರನಾಥ ಠಾಕೂರ್”

ಭಾರತ – ಬಾಂಗ್ಲಾ ದೇಶ ಎರಡು ರಾಷ್ಟ್ರಗಳು. ಜತ್ಯಾತೀತ, ಸಮಾಜವಾದೀ, ಪ್ರಜಾತಂತ್ರ ಉಳ್ಳವು. ಎರಡು ರಾಷ್ಟ್ರಗಳ ರಾಷ್ಟ್ರಗೀತೆಗಳ ಕವಿ ಒಬ್ಬರೇ.

ಭಾರತ “ಜನಗಣಮನ ಅಧಿನಾಯಕ ಜಯ ಹೇ” ಎಂದು ಹಾಡಿದರೆ ಬಾಂಗ್ಲಾ ದೇಶ “ಸೋನಾರ ಬಾಂಗ್ಲಾ….” (ಬಂಗಾರದ ಬಾಂಗ್ಲಾ) ಎಂದು ಹೆಮ್ಮೆಯಿಂದ ಹಾಡುತ್ತದೆ. ಈ ಅಪೂರ್ವ ಗೌರವ ಜಗತ್ತಿನ ಯಾವಕವಿಗೂ ಒದಗಿಲ್ಲ. ಇದು ರವೀಂದ್ರರಿಗೇ ಮೀಸಲು. ಇದು ಸಹಜವೇ. ೧೯೪೧ ರಲ್ಲಿ ಮರಣ ಹೊಂದಿದ ಈ ಕವಿ ತನ್ನ ಕೊನೆಕೊನೆಯ ಕವನದಲ್ಲಿ “ಬೀಳ್ಕೊಡಿ – ಇಗೊ ಕೊಳ್ಳಿ ಬೀಗದ ಕೈ ಗೊಂಚಲು. ಮನೆ, ಆಸ್ತಿ ಪಾಸ್ತಿ ಎಲ್ಲ ಇಲ್ಲದೆ. ನೋಡಿಕೊಳ್ಳಿ – ನನ್ನನ್ನು ಕಳಿಸಿಕೊಡಿ” ಎಂದು ಕೇಳುವಾಗಲೂ ಇಡಿಯ ಮಾನವ ಜಾತಿಯನ್ನು ಕುರಿತು ಹೇಳಿದ ಹಾಗೆ ಮಾತುಗಳು ಇವೆ. ಜೀವನದುದ್ದಕ್ಕೂ  ರಾಷ್ಟ್ರ ರಾಷ್ಟ್ರಗಳ ಭೇದ ಅಳಿಸಲು ಹೆಣಗಾಡಿದ ಈ ಕವಿಯ ಕೃತಿಗಳಿಗೆ ಈ ಮಾನ್ಯತೆ ದೊರೆತದ್ದು ಸಮಂಜಸವೇ.

ರವಿಂದ್ರ ಸ್ಮರಣೆ

೧೯೬೧ ರಲ್ಲಿ ರವೀಂದ್ರರ ಜನ್ಮ ಶತಾಬ್ದಿಯನ್ನು ಜಗತ್ತಿನಲ್ಲೆಲ್ಲ ಆಚರಿಸಲಾಯಿತು. ಆಗ ಭಾರತದ ತುಂಬ ದೊಡ್ಡ ದೊಡ್ಡ ನಗರಗಳಲ್ಲಿ ಅವರ ಹೆಸರಿನ ರಂಗಭವನಗಳನ್ನು ನಿರ್ಮಿಸಲಾಯಿತು. ರವೀಂದ್ರರ ಹೆಸರಿನಲ್ಲಿ ಕಲಾಭವನಗಳು ನಿರ್ಮಾಣಗೊಂಡಿಗೆ – ರವೀಂಧ್ರ ಕಲಾಕ್ಷೇತ್ರ, ರವೀಂದ್ರ ಭವನ, ರವೀಂದ್ರ ಭಾರತಿ, ಟ್ಯಾಗೋರ್ ಹಾಲ್, ಟ್ಯಾಗೋರ್ ಮೆಮೊರಿಯಲ್ ಥಿಯೇಟರ ಇತ್ಯಾದಿ ಇತ್ಯಾದಿ.

ರವೀಂದ್ರರು ಒಂದುವರೆ ಲಕ್ಷ ಪಂಕ್ತಿಗಳಷ್ಟು ಕಾವ್ಯಗಳನ್ನೂ, ನಾಟಕಗಳನ್ನೂ ಬರೆದರು. ಅದಕ್ಕೆ ಎರಡರಷ್ಟು ಗದ್ಯ ಬರೆದರು. ಇದರಲ್ಲಿ ಕಾದಂಬರಿ, ಕಥೆ, ವಿಮರ್ಶೆ, ತತ್ನಜ್ಞಾನ – ಇವರು ಮುಟ್ಟದ ಸಾಹಿತ್ಯ ಪ್ರಕಾರವಿಲ್ಲ. ನಾಟಕಗಳನ್ನು ಆಡಿಸಿದರು, ತಾವೇ ಸೊಗಸಾಗಿ ಅಭಿನಯ ಮಾಡಿದರು. ಮೂರುವರೆ ಸಾವಿರ ಚಿತ್ರಗಳನ್ನು ಬರೆದ ಚಿತ್ರಗಾರ. ಮಕ್ಕಳಿಗಾಗಿ ಹೊಸ ಬಗೆಯ ಮಾದರಿ ಶಾಲೆಗಳನ್ನು ನಡೆಸಿದರು, ಹೆಚ್ಚು ಓದುವವರಿಗೆ ಹೊಸ ಬಗೆಯ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿದರು.

ಒಬ್ಬ ಮನುಷ್ಯ ಐದು ಜನ್ಮಗಳಲ್ಲಿ ಮಾಡುವುದು ಕಷ್ಟ ಎಂದು ತೋರುವಷ್ಟು ಪ್ರಮಾಣದ ಕೆಲಸವನ್ನು ಒಂದು ಜನ್ಮದಲ್ಲಿ ಮಾಡಿದರು.

ಭಾರತ, ಬಾಂಗ್ಲಾ ದೇಶಗಳಿಗೆ ರಾಷ್ಟ್ರಗೀತೆಗಳನ್ನು ಕೊಟ್ಟರು ರವೀಂದ್ರರು, ಎಲ್ಲ ಮಾನವರೂ ದೇವರಿಗೆ ಮಾಡಬಹುದಾದ ಪ್ರಾರ್ಥನೆಗಳು “ಗೀತಾಂಜಲಿ” ಯಲ್ಲಿ ತುಂಬಿವೆ. ಒಂದು ಇದು:

ಪ್ರಭೂ, ನಿನ್ನಲ್ಲಿ ನನ್ನ ಪ್ರಾರ್ಥನೆ ಇದೇ – ನನ್ನ ಹೃದಯದಲ್ಲಿನ ಬಡತನದ ಬೇರಿಗೇ ಪೆಟ್ಟು ಹಾಕು.

ನನ್ನ ಸಂತೋಷ, ದುಃಖಗಳನ್ನು ಹಗುರವಾಗಿ ಅನುಭವಿಸುವಂತೆ ಶಕ್ತಿನೀಡು.

ನನ್ನ ಪ್ರೀತೆಯ ಸೇವೆಯಲ್ಲಿ ಫಲಿಸುವಂತೆ ಶಕ್ತಿ ನೀಡು.

ನನ್ನ ಮನಸ್ಸು ನಿತ್ಯದ ಸಣ್ಣ ಪುಟ್ಟ ವಿಷಯಗಳಿಗಿಂತ ಬಹು ಎತ್ತರಕ್ಕೇರುವಂತೆ ಶಕ್ತಿ ನೀಡು.

ನನ್ನ ಶಕ್ತಿಯನ್ನು ಪ್ರೀತಿಯಿಂದ ನಿನಗೆ ಸಮರ್ಪಿಸಲು ಶಕ್ತಿ ನೀಡು.